“ಸಾವು ದಿಗ್ಗೆಂದು ಎದುರಾದಾಗ ಇಂಥ ಸಮಾಧಾನಗಳನ್ನೂ ನಾವು ಕೈಬಿಡಬಹುದೆ ಎಂದು ಕೃಷ್ಣಮೂರ್ತಿ ಅನುಮಾನಿಸುವುದಕ್ಕೆ ಸಾಯುತ್ತಿದ್ದ ಅಪ್ಪ ವಿಷ್ಣುಮೂರ್ತಿ ಜೊತೆ ನಡೆದುಕೊಂಡ ರೀತಿಯೂ ಕಾರಣ. ವಿಷ್ಣುಮೂರ್ತಿಯನ್ನು ದತ್ತು ತೆಗೆದುಕೊಂಡ ಪ್ರಶ್ನೆ ಇನ್ನೂ ಬಗೆಹರಿದಿರಲಿಲ್ಲ.  ಕೇಸಿತ್ತು. ಈ ಮಧ್ಯೆ ದತ್ತಿನ ಮೂಲಕ ಬಂದ ಅವನ ಜಮೀನಿನ ಬಗ್ಗೆಯೂ ಹೊಸ ಗೇಣಿ ಶಾಸನಗಳಿಂದ ಅನೇಕ ಸಂದಿಗ್ಧಗಳು ಎದ್ದಿದ್ದುವು. .”
ಕನ್ನಡದ ಮೇರು ಕಥೆಗಾರ ಡಾ. ಯು. ಆರ್. ಅನಂತಮೂರ್ತಿ ಅವರ ಸಣ್ಣ ಕತೆ ಈ ಭಾನುವಾರದ ನಿಮ್ಮ ಓದಿಗೆ.

 

ಫೋಟೋ: ಎ.ಎನ್.ಮುಕುಂದ

ಜಯತೀರ್ಥ ಆಚಾರ್ಯರು ರಾತ್ರೆ ಒಂಬತ್ತು ಗಂಟೆಯ ತನಕ ಗೋವಿಂದನ್ ನಾಯರ್ ಆಡುವ ಮಾತುಗಳನ್ನು ಕೇಳಿಸಿಕೊಂಡು, ಆಮೇಲೆ ನಿದ್ದೆ ಹೋಗಿ, ಬೆಳಿಗ್ಗೆ ಐದು ಗಂಟೆಗೆ ಗರಗಸದಿಂದ ಕುಯ್ದಂಥ ಶಬ್ದ ಮಾಡಿ ಸತ್ತದ್ದು. ಅವರು ಹಾಸಿಗೆ ಹಿಡಿದು ಮಲಗಿದ್ದೆಂದರೆ ಕೇವಲ ಇಪ್ಪತ್ತು ದಿನಗಳು. ಸಾಯುವಾಗ ಅವರಿಗೆ ಬೇಕಾದವರೆಲ್ಲ ಅವರ ಬಳಿಯೇ ಇದ್ದರು. ದೆಹಲಿಯಿಂದ ಅಪ್ಪನ ಖಾಹಿಲೆ ಕೇಳಿ ಬಂದಿದ್ದ ಮಗ, ಅವನ ಸಂಸಾರ, ನಲವತ್ತು ವರ್ಷಗಳಿಂದ ಮುಖ ನೋಡದೇ ಇದ್ದ ಅವರ ಯೌವನದ ಗೆಳೆಯ- ಕೇರಳದ ಕಮ್ಯುನಿಸ್ಟ್ ಗೋವಿಂದನ್ ನಾಯರ್, ಹೆಂಡತಿ, ವಿಧವೆಯಾಗಿ ಮನೆ ಸೇರಿದ ಮಗಳು ಮತ್ತು ಅವಳ ಹನ್ನೆರಡು ವರ್ಷದ ಮಗ. ಮುಖ್ಯವಾಗಿ ಅವರ ಈ ಇಪ್ಪತ್ತು ವರ್ಷಗಳ ಪ್ರೇಯಸಿ, ಗಂಗೂಬಾಯಿ ಕೂಡ. ಅವಳು ಶಿವಮೊಗ್ಗದವಳು. ಆಚಾರ್ಯರಿಗೆ ಖಾಹಿಲೆಯೆಂದು ಕೇಳಿದವಳೇ ಹಿಂದು ಮುಂದು ನೋಡದೆ ಬಂದವಳು. ಅವಳೊಬ್ಬಳು ಅವರಿಗೆ ಇದ್ದಾಳೆಂಬುದು ಜನಜನಿತವಾಗಿದ್ದರೂ ಅವಳು ಹೀಗೆ ಪ್ರತ್ಯಕ್ಷವಾಗಿದ್ದು ಈಗಲೇ. ಅವಳು ಬಂದಾಗ ಆಚಾರ್ಯರು ಬೇಡವೆನ್ನಲಿಲ್ಲ. ಹೆಂಡತಿ ರುಕ್ಮಣಿಯಮ್ಮ ಒಳಗಿಂದೊಳಗೇ ಮಗಳ ಹತ್ತಿರ, ಮಡಿ- ಮೈಲಿಗೆ, ಮಾನ-ಮರ್ಯಾದೆಯೆಂದು ರಂಪಮಾಡಿದರು.

ಆದರೆ ಗಂಡನ ಪರಿಸ್ಥಿತಿಯಿಂದಾಗಿ, ‘ಯಾವ ಜನ್ಮದ ಋಣವೋ ತೀರಬೇಕಲ್ಲ’ ಎಂದು ಬಾಯಿ ಮುಚ್ಚಿಕೊಂಡಿದ್ದರು. ಎಲ್ಲರನ್ನೂ ನಗುಮುಖದಿಂದ ಮಾತಾಡಿಸುತ್ತ ಗಂಗೂಬಾಯಿ ಮೌನವಾಗಿ ಆಚಾರ್ಯರ ಶುಶ್ರೂಷೆಯನ್ನು ವಹಿಸಿಕೊಂಡಳು. ಅವರನ್ನು ಮಲಗಿಸಿದ್ದ ಹಾಸಿಗೆ ಗಂಟು ಗಂಟಾಗಿರುವುದನ್ನು ಕಂಡು ಹೊಸದಾದ ಮೆತ್ತನೆಯ ಹಾಸಿಗೆ ಮಾಡಿಸಿದಳು. ಬೆಡ್‌ಶೀಟುಗಳನ್ನು ಶುಭ್ರವಾಗಿ ಒಗೆದು ಕೆಂಡದ ಇಸ್ತ್ರಿಪಟ್ಟಿಗೆಯಲ್ಲಿ ಅವನ್ನೆಲ್ಲ ಗರಿಗರಿಯಾಗಿ ಇಸ್ತ್ರಿ ಮಾಡಿ ನಿತ್ಯ ಬದಲಾಯಿಸಿದಳು…. ‘ಹಾಲಿನ ವ್ಯಾಪಾರವನ್ನು ಯಾರು ನೋಡಿಕೊಳ್ಳುತ್ತಾರೆ?’ ಎಂದು ಆಚಾರ್ಯರು ರಗಳೆ ಮಾಡಿಕೊಂಡಾಗ ತನಗೆ ವ್ಯವಹಾರ ಗೊತ್ತಿಲ್ಲವೆ? ಅದಕ್ಕೆಲ್ಲ ತಕ್ಕ ಏರ್ಪಾಡು ಮಾಡಿ ಬಂದಿದ್ದೇನೆ ಎಂದಳು. ಸ್ಕೂಲಿಗೆ ಎಷ್ಟು ದಿನ ರಜ ಹಾಕಿದ್ದೀಯ? ಎಂದಿದ್ದಕ್ಕೆ ನಿಮಗೆ ಹುಷಾರಾಗೋ ತನಕ ಎಂದು ನಕ್ಕುಬಿಟ್ಟಿದ್ದಳು. ಅವಳು ಪ್ರೈಮರಿ ಸ್ಕೂಲಲ್ಲಿ ಮೇಡಂ ಎಂದು ಗೊತ್ತಾದ ಮೇಲೆ ಆಚಾರ್ಯರ ವಿಧವೆಯಾದ ಮಗಳು ಸಾವಿತ್ರಿಯ ಮುಜಗರ ಕಡಿಮೆಯಾದದ್ದು. ಹೆಂಡತಿಯ ಹತ್ತಿರ ಅವಳ ಇರವಿನ ಬಗ್ಗೆ ಮುಕ್ತವಾಗಿ ಯಾವತ್ತೂ ಮಾತಾಡದಿದ್ದ ಆಚಾರ್ಯರು ಈ ದಿನಗಳಲ್ಲಿ ಅವಳೂ ತನ್ನ ಮನೆಯ ಒಂದು ಭಾಗವೆಂಬಂತೆ ಸಂಕೋಚವಿಲ್ಲದೆ ನಡೆದುಕೊಂಡದ್ದು ಕಂಡರೆ ಅವರಿಗೆ ತಾನು ಸಾಯಬಹುದೆಂಬ ಅರಿವು ಮೂಡಿದ್ದಿರಬಹುದೆ ಎಂದು ಅವರ ಮಗ ಕೃಷ್ಣಮೂರ್ತಿಗೆ ಅನುಮಾನವಾಗುತ್ತದೆ.

ಇಲ್ಲದಿದ್ದಲ್ಲಿ ನಲವತ್ತು ವರ್ಷಗಳ ಹಿಂದಿನ ಗೆಳೆಯನಿಗೆ ಯಾಕೆ ಬರಲು ಕಾಗದ ಹಾಕುತ್ತಿದ್ದರು? ಖಾಯಿಲೆ ಬೀಳುವ ಮುಂಚೆ ಅವನನ್ನು ಆಗ ಈಗ ನೆನಸಿಕೊಂಡದ್ದಿದೆ. ಪೇಪರಿನಲ್ಲಿ ಅವನ ಸುದ್ದಿ ಓದಿದಾಗೆಲ್ಲ ಗೆಳೆಯನ ಹಿಂಸಾತ್ಮಕ ಚಟುವಟಿಕೆಗಳ ಬಗ್ಗೆ ಅಸಮಾಧಾನದಿಂದ ಮಗನ ಬಳಿ ಮಾತಾಡಿದ್ದಿದೆ. ಐದು ವರ್ಷಗಳ ಹಿಂದೊಂದು ನಡೆದ ಘಟನೆ ದೇಶಾದ್ಯಂತ ಸುದ್ದಿಯಾಗಿತ್ತು. ಕಾಫಿ ತೋಟದ ಕೆಲಸಗಾರರ ಬೋನಸ್ ಬಗ್ಗೆ ಮಂತ್ರಿಯೊಬ್ಬನನ್ನು ಭೇಟಿ ಮಾಡಲು ನಾಯರ್ ಹೋಗಿದ್ದನಂತೆ. ಮಂತ್ರಿಯ ಹೇಳಿಕೆ ಪ್ರಕಾರ, ಮಾತಿಗೆ ಮಾತು ಬೆಳೆದು ನಾಯರ್ ಚೀಲದಿಂದ ಒಂದು ಆಸಿಡ್ ಬಾಂಬ್ ತೆಗೆದು ಹೊಡೆಯಲು ಬಂದನಂತೆ. ನಾಯರ್ ಕೋರ್ಟ್‌ನಲ್ಲಿ ಕೊಟ್ಟ ಹೇಳಿಕೆ ಪ್ರಕಾರ, ಆಸಿಡ್ ಬಾಂಬ್ ದಾಳಿಯಲ್ಲಿ ಮಂತ್ರಿಯನ್ನವನು ಕೊಲ್ಲಬೇಕಿತ್ತು; ಆದರೆ ದುರದೃಷ್ಟವಶಾತ್ ಮಂತ್ರಿಯನ್ನು ಮೆಟ್ಟಿನಲ್ಲಿ ಹೊಡೆಯುವುದು ಮಾತ್ರ ಅವನಿಗೆ ಸಾಧ್ಯವಾದದ್ದು.

ಹೊಡೆಯಲು ಹೋದಾಗ ಟೇಬಲ್ಲಿನ ಮೇಲೆ ಮಂತ್ರಿ ಮುಗ್ಗುರಿಸಿ ಬಿದ್ದು ಹಣೆಗೆ ಗಾಯವಾಗಿತ್ತು. ನಾಯರ್ ಐದು ವರ್ಷ ಜೈಲಿಗೆ ಹೋಗಿ ಹೊರಗೆ ಬಂದವನು ಭ್ರಷ್ಟಾಚಾರದ ಜನವೈರಿಗಳನ್ನು ಕೊಲ್ಲುವುದೇ ತನ್ನ ಮುಂದಿನ ಯೋಜನೆಯೆಂದು ಹೇಳಿಕೆ ಕೊಟ್ಟಿದ್ದ. ಆಗಲೇ ಆಚಾರ್ಯರಿಗೆ ಅವನಿಗೆ ಬರೆದು ಅವನ ಚಟುವಟಿಕೆಯನ್ನು ಖಂಡಿಸಬೇಕೆನ್ನಿಸಿತ್ತು. ತನ್ನ ಜೀವನಕ್ರಮದಿಂದ ಯದ್ವಾತದ್ವ ಬೇರೆಯಾಗಿಬಿಟ್ಟಿದ್ದ. ಈ ಯೌವನದ ಗೆಳೆಯನಿಗೆ ಹೇಗೆ ಏನು ಬರೆಯಬೇಕೆಂದು ತಿಳಿಯದೆ ಆಗ ಸುಮ್ಮನಾಗಿಬಿಟ್ಟಿರಬಹುದು. ಅಥವಾ ಸುಮ್ಮನಾಗಲು ಅದೊಂದೇ ಕಾರಣವೂ ಇರಲಾರದು. ಊರಿನ ಶ್ರೀಮಂತರ ಮನೆಗಳ ಪಾಲು, ಪತ್ರದ ವ್ಯವಹಾರದಲ್ಲೆ, ಅವರಿವರಿಗಾಗಿ ಕೋರ್ಟ್‌ಗಳನ್ನು ಅಲೆಯುವುದರಲ್ಲೆ ಸದಾ ಮಗ್ನರಾಗಿರುತ್ತಿದ್ದ ತನ್ನ ತಂದೆಗೆ ತಾತ್ತ್ವಿಕ ಕಾರಣಕ್ಕಾಗಿ ಜೀವವನ್ನು ಕೊಡಲು ಕೊಲ್ಲಲು ತಯಾರಾಗಿದ್ದ ಹಿಂದಿನ ಗೆಳೆಯನ ಮನಸ್ಸನ್ನು ಅರಿಯುವ ವ್ಯವಧಾನ ಕೂಡ ಇರಲಿಲ್ಲವೇನೊ.

ಈ ಘಟನೆ ನಂತರ ನಾಯರ್ ಬಗ್ಗೆ ವಾರಪತ್ರಿಕೆಯೊಂದರಲ್ಲಿ ಒಂದು ಲೇಖನ ಬಂದಿತ್ತು. ಇವನು ಇಂತಹ ಮನುಷ್ಯನಾಗುತ್ತೇನೆಂಬುದು ದೆಹಲಿಯಲ್ಲಿ ರೈಲ್ವೆ ಸರ್ವೀಸ್‌ಗೆ ಇಬ್ಬರೂ ಒಟ್ಟಿಗೆ ಸೇರಿದಾಗ ತನ್ನ ತಂದೆಗೆ ಗೊತ್ತಾಗುವುದು ಸಾಧ್ಯವಿತ್ತೆ? ಒಂದೇ ರೂಮಲ್ಲಿ ಇಬ್ಬರ ವಾಸವಂತೆ. ತನ್ನ ಒಳಜೀವನದ ಗುಟ್ಟುಗಳನ್ನೆಲ್ಲ ನಾಯರಿಗೆ ಹೇಳಿಕೊಂಡಿದ್ದರಂತೆ. ಆಚಾರ್ಯರು ಬ್ರಾಹ್ಮಣರಾದ್ದರಿಂದ ಅವರೇ ಅಡಿಗೆ ಮಾಡುವುದು, ನಾಯರ್ ತರಕಾರಿ ಹೆಚ್ಚಿಕೊಡುವುದು, ಅಂಗಡಿಗೆ ಹೋಗಿ ವ್ಯಾಪಾರ ಮಾಡುವುದು. ಆಚಾರ್ಯರು ಒಲೆಹೊತ್ತಿಸಿ ಅಡಿಗೆ ಮಾಡುತ್ತಿರುವಾಗ ನಾಯರ್ ಬೀಡಿ ಸೇದುತ್ತ ಯಾವುದಾದರೂ ಕಥೆಯ ಪುಸ್ತಕವನ್ನು ಗಟ್ಟಿಯಾಗಿ ಓದುವುದು. ಆಗ ಇಬ್ಬರಿಗೂ ಪ್ರಿಯವಾಗಿದ್ದ ಕಥೆಗಳೆಂದರೆ ಗೋಲ್ಡ್ಸ್ಮಿತ್ ಮತ್ತು ರೇನಾಲ್ಡ್ಸ್ ಬರೆದವು. ನಾಯರ್ ಸುಖವನ್ನು ಬಯಸುತ್ತಿದ್ದವನೆಂದೇ ಆಚಾರ್ಯರ ನೆನಪು. ಸುಖಬಯಸುತ್ತಿದ್ದ ಗೆಳೆಯ ಆ ಸುಖಗಳನ್ನು ರಕ್ಷಿಸುವ ವ್ಯವಸ್ಥೆಯನ್ನೇ ಬುಡಮೇಲು ಮಾಡಬೇಕೆಂಬ ಮನುಷ್ಯ ಯಾಕಾದ?
ಆಚಾರ್ಯರು ಮೆಡಿಕಲ್ ಪರೀಕ್ಷೆಯಲ್ಲಿ ಪಾಸಾಗಲಾರದೆ ಕೆಲಸ ಕಳೆದುಕೊಂಡರು. ಮಲೆನಾಡಿನ ಮಲೇರಿಯಾದಲ್ಲಿ ಪಡೆದ ಜ್ವರಗೆಡ್ಡೆ ಡಾಕ್ಟರರ ಒತ್ತುವ ಕೈಗೆ ಗಟ್ಟಿಯಾಗಿ ಸಿಕ್ಕಿ ಕೆಲಸ ಹೋದದ್ದು. ಆಮೇಲೆ ಅಂಗಡಿಗಳಲ್ಲಿ ಲೆಕ್ಕ ಬರೆಯಲು ಆಚಾರ್ಯರು ಶುರುಮಾಡಿದರು. ಎರಡು ವರ್ಷಗಳ ನಂತರ ಇದೂ ಸಾಕಾಗಿ, ತಾನು ಕಟ್ಟಿಕೊಂಡ ಮೈನೆರೆಯದ ಎಳೆಯ ಹೆಂಡತಿ, ಅಪ್ಪ, ಅವರ ಪೂಜೆಯ ದೇವಸ್ಥಾನ- ಇವೆಲ್ಲ ನೆನಪಾಗಿ ದೆಹಲಿ ಬಿಟ್ಟು ಬಂದದ್ದು…..

ಸ್ವಾತಂತ್ರ್ಯ ಬಂದನಂತರದ ಸ್ಟ್ರೈಕ್‌ನಲ್ಲಿ ಭಾಗವಹಿಸಿ ನಾಯರನೂ ಕೆಲಸ ಕಳದುಕೊಂಡ. ಆಮೇಲೆ ಕೇರಳದ ಸ್ವಂತ ಊರಿಗೆ ಹೋಗಿ ರೈತರ ಜೊತೆ ಕೆಲಸಮಾಡಲು ಪ್ರಾರಂಭಿಸಿ ಕಮ್ಯುನಿಸ್ಟ್ ಆದ. ನಂತರ ತನ್ನ ಪಕ್ಷ ರಷ್ಯಾದ ಮಾತು ಕೇಳಿ ದೇಶದ್ರೋಹಿ ಕಾಂಗ್ರೆಸ್ ಜೊತೆ ಕೆಲಸ ಮಾಡಲು ಪ್ರಾರಂಭಿಸಿತೆಂದು ಪಕ್ಷಕ್ಕೆ ರಾಜೀನಾಮೆ ಕೊಟ್ಟು ಏಕಾಂಗಿಯಾದ. ಆದರೆ ಕಮ್ಯುನಿಸ್ಟ್ ಆಗಿಯೇ ಮುಂದುವರಿದ. ಅವನ ಜೀವನ ಕ್ರಮವನ್ನು ಪತ್ರಿಕೆ ರಸವತ್ತಾಗಿ ಬಣ್ಣಿಸಿತ್ತು. ಯಾರಾದರೊಬ್ಬರ ಚಾವಡಿಯಲ್ಲಿ ಅವನು ಮಲಗಿ, ಅವರ ಹಿತ್ತಲಿನ ಕೊಳದಲ್ಲಿ ಬಟ್ಟೆಯೊಗೆದು ಸ್ನಾನ ಮಾಡಿ ಹೊರಗೆ ಹೊರಡುವುದು. ಎಕ್ಸರ್ಸೈಸ್ ಪುಸ್ತಕದ ರಟ್ಟುಗಳನ್ನು ಮಕ್ಕಳಿಂದ ಪಡೆದು, ಅವುಗಳನ್ನು ಬೀಸಣಿಗೆ ಮಾಡಿ, ಸೀದ ಆಸ್ಪತ್ರೆಗೆ ಹೋಗಿ ಅಲ್ಲಿದ್ದ ರೋಗಿಗಳ ಕ್ಷೇಮವನ್ನು ವಿಚಾರಿಸಿ, ಅವರಿಗೆ ಗಾಳಿ ಹಾಕಿಕೊಳ್ಳಲು ಈ ಬೀಸಣಿಕೆಗಳನ್ನು ಕೊಡುವುದು. ಮಧ್ಯಾಹ್ನ ಊರಿನ ನಡುವಿದ್ದ ಹೋಟೆಲಲ್ಲಿ ಕೂತಿರುವುದು. ಅಲ್ಲಿ ಚಹಾ ಕುಡಿಯಲು ಬಂದ ಕೂಲಿಕಾರರಿಗೋ ರೈತರಿಗೋ ಅವರ ಕೆಲಸಗಳನ್ನು ಮಾಡಿಕೊಟ್ಟು ಅವರು ಕೊಡಿಸಿದ್ದನ್ನು ತಿಂದು, ಚಹಾ ಕುಡಿದು ಬೀಡಿ ಸೇದಿ ಊರಲ್ಲಿ ಓಡಾಡಿಕೊಂಡಿರುವುದು. ರೇಷನ್ ಶಾಪು, ಕಚೇರಿ, ಪೋಲೀಸ್ ಠಾಣೆಗಳಿಗೆ ಭೇಟಿ ಕೊಟ್ಟು ಅಲ್ಲಿ ಬಡಬಗ್ಗರ ಪರವಾಗಿ ಅಧಿಕಾರಿಗಳ ಜೊತೆ ಜಗಳ ಮಾಡಿ ಕೆಲಸ ಮಾಡಿಸಿಕೊಡುವುದು. ಸಂಜೆ ಮತ್ತೆ ಹೊಟೇಲಲ್ಲಿ ಕೂತು ಬರೆದು ಕೊಡುವುದನ್ನು ಮಾಡಿ, ಅವರು ಕೊಡಿಸಿದ್ದನ್ನು ತಿಂದು, ಇನ್ನೊಂದು ಚಾವಡಿ ಮೇಲೆ ಮಲಗುವುದು.

ಮಾರನೇ ದಿನದ ಖರ್ಚಿಗೆಂದು ಒಂದು ನಯಾಪೈಸೆ ಜೇಬಲ್ಲಿ ಇಟ್ಟುಕೊಂಡಿದ್ದಿಲ್ಲ. ಬಡವರಿಗೆ ಕೆಲಸ ಮಾಡಿ ಕೊಡುವಾಗ, ಶೋಷಣೆ, ಕ್ರಾಂತಿ, ಹೊಸ ಸಮಾಜ ಇತ್ಯಾದಿ ಬಗ್ಗೆ ಅವರಿಗೆ ತಿಳಿಯ ಹೇಳುವುದು- ಇದು ನಾಯರನ ದಿನಚರಿ. ಜನರ ಶತ್ರುಗಳಿಗೆ ಆತ ಮೆಟ್ಟಲ್ಲಿ ಹೊಡೆದದ್ದು ಅದು ಮೊದಲ ಸಲವಲ್ಲ. ಅವನಿಂದ ಏಟು ತಿಂದದ್ದು ಮಂತ್ರಿಯಾದ್ದರಿಂದ ಅದೊಂಡು ದೊಡ್ಡ ಸುದ್ದಿಯಾಯಿತು- ಅಷ್ಟೆ. ಕೂದಲು ಬೆಳೆದ ಕಿವಿಯಲ್ಲೊಂದು ಪೆನ್ಸಿಲ್ ಸಿಕ್ಕಿಸಿಕೊಂಡು, ಮುಂಡು ಉಟ್ಟು, ಕೈಯಲ್ಲಿ ರಟ್ಟುಗಳನ್ನು ಹಿಡಿದು ಚುರುಕಾಗಿ ಓಡಾಡುವ ಈ ಬಿಳಿ ಬಟ್ಟೆಯುಟ್ಟ ಮನುಷ್ಯನನ್ನು ಊರಿನ ಜನ ಕರೆಯೋದು ‘ಮಾಸ್ತರ್’ ಎಂದು. ತನ್ನಂತೆಯೇ ಪರರಿಗೆ ಬದುಕುವಾತ; ಆದರೆ ಎಷ್ಟು ವ್ಯತ್ಯಾಸ.

ಆಚಾರ್ಯರು ಲೇಖನ ಓದಿ ಕೈಯಲ್ಲಿ ಚಿಟಿಕೆ ನಸ್ಯ ಹಿಡಿದು ತುಂಬ ಯೋಚಿಸಿದ್ದರು. ದೆಹಲಿಯಿಂದ ಬಂದಿದ್ದ ಮಗನಿಗೆ ಲೇಖನ ಓದಿಸಿ, ಏನೋ ಹೇಳಲು ಹೋಗಿ, ಮಾತನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಇವೆಲ್ಲ ಅವರ ಮಗ ಕೃಷ್ಣಮೂರ್ತಿಗೆ ಅಪ್ಪ ಸತ್ತ ಮೇಲೆ ನಿಗೂಢವೆನ್ನಿಸಿದ್ದುವು. ಖಾಯಿಲೆ ಬಿದ್ದೊಡನೆಯೇ, ವಿಳಾಸವಿಲ್ಲದ ನಾಯರಿಗೆ- ಅದೇ ಲೇಖನದ ತಲೆಬರೆಹವಾಗಿತ್ತು- ಆಚಾರ್ಯರು ಊರಿನ ಹೆಸರು ಮಾತ್ರ ಬರೆದು ಬಾ ಎಂದು ಒಂದು ಕಾಗದ ಹಾಕಿದ್ದರು. ಗಂಗೂಬಾಯಿಗೆ ಮಾತ್ರ ಖಾಯಿಲೆಯೆಂದು ಬರೆದಿದ್ದರೇ ವಿನಹ ಮಗನಿಗೂ ನಾಯರಿಗೂ ಬರೆದಂತೆ ಬಾ ಎಂದು ಬರೆದಿರಲಿಲ್ಲ. ಆದರೆ ನಾಯರ್ ಕಾಫಿ ತೋಟದ ಕೆಲಸಗಾರರ ಮುಷ್ಕರದಲ್ಲಿ ತೊಡಗಿದ್ದರಿಂದ ಆಚಾರ್ಯರು ಸಾಯುವ ಹಿಂದಿನ ಮಧ್ಯಾಹ್ನ ಬಂದ.

ತನ್ನ ಅಪ್ಪನ ಹೆಸರನ್ನು ಮೊಟಕುಮಾಡುವುದು ಅಸಾಧ್ಯವೆಂದೇ ಕೃಷ್ಣಮೂರ್ತಿ ತಿಳಿದಿದ್ದ. ಆದರೆ ನಾಯರ್ ಅವರನ್ನು ಇಂಗ್ಲಿಷಿನಲ್ಲಿ ‘ಏನು ಜಯ’ ಎಂದು ಆಪ್ತವಾಗಿ ಸಲೀಸಾಗಿ ಕರೆದು, ಬಗಲಿಗೆ ಸಿಕ್ಕಿಸಿಕೊಂಡು ಬಂದ ಅವನ ಸರ್ವಸ್ವವನ್ನೂ ತುರುಕಿದ್ದ ಚೀಲವನ್ನು ಕೆಳಗಿಟ್ಟು, ಹಾಸಿಗೆ ಬಳಿ ಕೂತಾಗ ಅವನು ತಬ್ಬಿಬ್ಬಾದ. ನಿನ್ನೆ ತಾನೆ ಗೆಳೆಯನನ್ನು ಬಿಟ್ಟು ಹೋದದ್ದು ಎನ್ನಿಸುವಂತೆ ನಾಯರ್ ಆಚಾರ್ಯರು ತೆಗೆದುಕೊಳ್ಳುತ್ತಿದ್ದ ಔಷಧಗಳನ್ನೆಲ್ಲ ಪರೀಕ್ಷಿಸಿ, ಬಾವು ಬಂದ ಕಾಲುಗಳನ್ನು ಒತ್ತಿ ನೋಡಿದ. ಕೇರಳದವನಲ್ಲವೆ? ಅಪ್ಪನಂತೆ ಅವನೂ ಆರ್ಯುವೇದ ಪ್ರೇಮಿಯಾಗಿದ್ದ. ನಾಡಿ ಪರೀಕ್ಷೆ ಮಾಡಿ, ಬಾಯಿ ಕಳೆಸಿ ನಾಲಗೆ ನೋಡಿ, ಕಣ್ಣುಗಳನ್ನು ಬಿಡಿಸಿ, ನಿಟ್ಟಿಸಿರಿಟ್ಟು, ಚೀಲದಿಂದ ಭಸ್ಮ ತೆಗೆದು ಜೇನುತುಪ್ಪದಲ್ಲಿ ಕಲಿಸಿ ನೆಕ್ಕಿಸಿದ. ಅಲೋಪತಿ ಹೇಗೆ ದೇಶೀಯ ಪದ್ಧತಿಯನ್ನು ನಾಶಮಾಡಿತು, ಇದು ಹೇಗೆ ನಿಯೋಕಲೋನಿಯಲ್ ವ್ಯವಸ್ಥೆಯಲ್ಲಿ ಅನಿವಾರ್ಯ, ಈ ದೃಷ್ಟಿಯಿಂದ ನೆಹರೂ ಹೇಗೆ ದೇಶ ದ್ರೋಹಿ ಇತ್ಯಾದಿಗಳನ್ನು ಅವಸರ ಅವಸರವಾಗಿ ಹೇಳಿ, ಚೀಲದಿಂದ ತಾನು ಬರೆದು ಪ್ರಕಟಿಸಿದ್ದ ಒಂದು ಪ್ಯಾಂಪ್ಲೆಟ್ಟನ್ನು ಅಪ್ಪನ ಕೈಯಲ್ಲಿ ಕೊಟ್ಟ-ಅಪ್ಪನ ಖಾಯಿಲೆಗೆ ಕೂಡ ಎಲ್ಲೊ ನೆಹರೂನೇ ಕಾರಣವೆಂಬಂತೆ.

ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಕೃಷ್ಣಮೂರ್ತಿ ಕೆಲಸ ಮಾಡುತ್ತಿರುವುದೆಂದು ಕೇಳಿ ವಿಷಾದದಿಂದ ನಕ್ಕು ನೀವೆಲ್ಲ ಒಂದೋ ರಷ್ಯಾದ ದಾಸರು, ಅಥವಾ ಅಮೇರಿಕಾದ ದಾಸರು. ಈ ದೇಶದ ವಿದ್ಯಾವಂತರಲ್ಲಿ ದೇಶಪ್ರೇಮಿಗಳೇ ಉಳಿದಿಲ್ಲ ಎಂದ. ಅವನ ತತ್ಪರತೆ ಕೃಷ್ಣಮೂರ್ತಿಗೆ ಪ್ರಾರಂಭದಲ್ಲಿ ಹಾಸ್ಯಾಸ್ಪದವೆನ್ನಿಸಿ ಕ್ರಮೇಣ ಒಗಟಾಯಿತು. ಮೈ ಮುಖಗಳೆಲ್ಲ ಬಾತುಕೊಂಡಿದ್ದ ರೋಗಿಯಾದ ಸ್ನೇಹಿತನನ್ನು ಹೆಣ್ಣಿನಂತೆ ಮೃದುವಾಗಿ ಹಣೆ ಸವರಿ ಸಂತೈಸುತ್ತ, ಒರಟಾದ ಶಬ್ದಗಳಲ್ಲಿ ಇಡೀ ವ್ಯವಸ್ಥೆಯನ್ನು ಜರೆಯುತ್ತ ಕೂತ ಈ ನಾಯರನನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ತಿಳಿಯಲಿಲ್ಲ. ಈ ನಲವತ್ತು ವರ್ಷ ಏನು ಮಾಡಿಕೊಂಡಿದ್ದಿ ಇತ್ಯಾದಿ ಒಂದು ಮಾತೂ ಕೇಳಬಾರದೆ? ಅಪ್ಪನಿಗಂತೂ ಮೈಯಲ್ಲಿ ಸ್ವಸ್ಥವಿಲ್ಲದೆ ಮಾತಾಡಲಿಲ್ಲ-ಸರಿ, ಹೀಗಾಗಿ ಅಪ್ಪ ಏನನ್ನು ಕೇಳಬೇಕೆಂದು, ಅಥವಾ ಹೇಳಬೇಕೆಂದು ನಾಯರನನ್ನು ಕರೆಸಿದ್ದು ಎಂಬುದು ಬಗೆಹರಿಯಲೇ ಇಲ್ಲ. ಪಥ್ಯದಲ್ಲಿದ್ದ ಅಪ್ಪನಿಗೆ, ರಾತ್ರೆ ನಿನಗೆ ಇಷ್ಟವಾದ್ದನ್ನು ತಿನ್ನು ಎಂದು ನಾಯರ್ ಹೇಳಿದ್ದು ನೋಡಿದರೆ ಅಪ್ಪ ಸಾಯಬಹುದೆಂದು ನಾಯರಿಗೂ ಅನ್ನಿಸಿರಬಹುದೆ? ಬಾಯಿ ರುಚಿಯೇ ಇಲ್ಲ ಎಂದರು ಅಪ್ಪ. ನಲವತ್ತು ವರ್ಷಗಳ ಹಿಂದಿನದನ್ನು ನೆನಸಿಕೊಂಡು ನಾಯರ್, ದೆಹಲಿಯಲ್ಲಿ ಮಾವಿನ ಹಣ್ಣಿನ ಗೊಜ್ಜೊಂದು ಹಾತೊರೆಯುತ್ತಿದ್ದಿಯಲ್ಲ ಎಂದಾಗ ಅಪ್ಪ ನಕ್ಕರು. ಅವರು ಹಾಗೆ ಮುಗುಳ್ನಕ್ಕದ್ದನ್ನು ಕೃಷ್ಣಮೂರ್ತಿ ನೋಡಿದ್ದೇ ಕಡಿಮೆ-ಖಾಯಿಲೆ ಬಿದ್ದ ಮೇಲಂತೂ ಹಾಗೆ ನಕ್ಕಿದ್ದೇ ಇಲ್ಲ. ಬೆಪ್ಪಾಗಿ ಸೂರಿನ ಜಂತಿಯನ್ನು ನೋಡುತ್ತ ಆಗೀಗ ಪಂಚಾಂಗವನ್ನೊ, ಆರ್ಯುವೇದದ ಅಷ್ಟಾಂಗ ಹೃದಯವನ್ನೊ ಓದುತ್ತ ಮಲಗಿರುತ್ತಿದ್ದರು. ಮಾವಿನ ಗೊಜ್ಜು ಪಿತ್ಥವಲ್ಲವೆ? ಎಂದು ಅಪ್ಪ ಅನುಮಾನಿಸುತ್ತ ಹೇಳಿದ್ದಕ್ಕೆ ನಾಯರ್ ಅದಕ್ಕೆ ನನ್ನಲ್ಲಿ ಮದ್ದಿದೆ ಎಂದ.

ಆಮೇಲಿಂದ ನಾಯರ್ ಪಕ್ಕದಲ್ಲೆ ಕೂತಿದ್ದು ತಾನು ಬರೆದ ಪ್ಯಾಂಪ್ಲೆಟ್ಟನ್ನು ಓದಿದ-ಅಪ್ಪನ ಪ್ರತಿಕ್ರಿಯೆಯನ್ನೆ ಆಶಿಸದವನಂತೆ. ರಾತ್ರಿಯಾದ ಬಳಿಕ ಗಂಗೂಬಾಯಿ ಆಚಾರ್ಯರನ್ನು ಹಿಡಿದು ಕೂರಿಸಿದಳು. ಮಗಳು ಕಲಸಿಕೊಟ್ಟ ಗೊಜ್ಜಿನ ಅನ್ನವನ್ನು ಎರಡು ತುತ್ತು ತಿಂದು ‘ಸೇರುವುದಿಲ್ಲ’ ಎಂದು ಮಲಗುತ್ತ ನಾಯರನನ್ನು ಮುಂದೇನು ಎಂದರು. ಆ ಪ್ರಶ್ನೆಯನ್ನು ಅವರು ಕೇಳಿದ ಕ್ರಮ, ಅದನ್ನು ಅರ್ಥ ಮಾಡಿಕೊಂಡು ನಾಯರ್ ಕೊಟ್ಟ ಉತ್ತರಗಳು ಅವರು ಸಾಯುವ ಹಿಂದಿನ ರಾತ್ರಿಯಾಗಿದ್ದರಿಂದ ಕೃಷ್ಣಮೂರ್ತಿಗೆ ಮುಖ್ಯವೆನಿಸುತ್ತವೆ. ಬೀಡಿಗೆ ಬೆಂಕಿಕಡ್ಡಿ ಗೀರುತ್ತ ಶಾಂತವಾಗಿ ನಾಯರ್ ಹೇಳಿದ:

ನನ್ನ ಮಟ್ಟಿಗೆ ಮುಂದೇನು ಅನ್ನುತ್ತೀಯ? ನಾನೊಂದು ಬೀಜದಂತೆ ಫಲವತ್ತಾದ ಮಣ್ಣು ಹುಡುಕಿ ಬೀಳಬೇಕೆಂದಿದ್ದೇನೆ. ನನ್ನ ಡೈರಿಯಲ್ಲಿ ಬರುವ ಮುಂಚೆ ಬರೆದಿದ್ದೇನೆ- ಇಕೊ ನೋಡು ಎಂದು ಡೈರಿ ಬಿಚ್ಚಿ ಓದಿದ: ನನ್ನ ಮಾತು ಕೇಳುತ್ತಿದ್ದ ಕಾಫಿತೋಟದ ಕೆಲಸಗಾರರು ಆಸೆಬುರುಕರಾಗಿ ನನ್ನ ಕೈಬಿಟ್ಟರು. ಕೇರಳದ ರಾಜಕೀಯದ  ಅತ್ಯಂತ ದೊಡ್ಡ ಫಟಿಂಗನಾದ ಎಂ.ವಿ.ವಾರಿಯರ್ನಿಂದ ಮೋಸ ಹೋದರು. ಅವನನ್ನು ನಡುಬೀದಿಯಲ್ಲಿ ನಿಲ್ಲಿಸಿ ಚೂರಿ ಹಾಕಿ ಕೊಲ್ಲಬೇಕೆಂದಿದ್ದೇನೆ ಡೈರಿಯನ್ನು ಮುಚ್ಚಿ ಚೀಲದಲ್ಲಿಡುತ್ತ ನಾಯರ್ ಹೇಳಿದ- ಕೊನೆ ಮಾತೆಂಬಂತೆ: ಇವನ್ನೆಲ್ಲ ಇಗೋ ಬರೆದಿಟ್ಟು ಇಲ್ಲಿ ಬಂದಿದ್ದೇನೆ. ನಾಳೆ ಹೋಗುತ್ತೇನೆ…

ಅಪ್ಪ ಕೇಳಿದ ಪ್ರಶ್ನೆಗೆ ಉತ್ತರವಾಗಿ ಇಡೀ ದೇಶದ ಬಗ್ಗೆ ಮಾತಾಡಿದ ಈ ಅಸಾಮಿ ಎಂಥವನು? ಅಪ್ಪ ಮಾತಾಡಲಿಲ್ಲ. ಯಾಕೆ ಮಾತಾಡಲಿಲ್ಲ? ತಿಳಿಯದೆಯೋ? ಅಥವಾ ನಿತ್ರಾಣದಿಂದಲೋ? ಅವರ ಮನಸ್ಸಲ್ಲಿ ಏನು ನಡೆದಿರಬಹುದು ಊಹಿಸುವುದು ಕಷ್ಟ. ನಾಯರ್ ಕೃತಿಯ ಫಲ ತಿಳಿಯಲೂ ಅಪ್ಪ ಉಳಿಯಲಿಲ್ಲ. ನಾಯರ್ ಹೇಳಿದಂತೆಯೇ ಮಾಡಿದ, ನಡುಬೀದಿಯಲ್ಲಿ ಜನರ ಸಮಕ್ಷಮ ಎಂ.ವಿ.ವಾರಿಯರ್ನನ್ನು ನಿಲ್ಲಿಸಿ ತನ್ನ ಉದ್ದೇಶವನ್ನು ಗಟ್ಟಿಯಾಗಿ ಹೇಳಿ ಚೂರಿಯನ್ನು ಹೊರಗೆ ತೆಗೆದ. ಪರಿಣಾಮ ಯಾರಾದರೂ ಮೊದಲೇ ಊಹಿಸುವಂತೆ ಆಗಿತ್ತು. ಎಂ.ವಿ.ವಾರಿಯರ್ ಹಿಮ್ಮೆಟ್ಟಿ ಓಡಿದ. ಅಟ್ಟಿಸಿಕೊಂಡು ಓಡಿದ ನಾಯರ್ನನ್ನು ಜನರು ಹಿಡಿದು ಚೂರಿ ಇಸಕೊಂಡರು. ಕೊಲೆಯ ಯತ್ನದ ಆಪಾದನೆ ಮೇಲೆ ಅವನನ್ನು ಬಂಧಿಸಲಾಯಿತು.

ಅರವತ್ತು ವರ್ಷ ವಯಸ್ಸಿನ ನಾಯರ್ ನಿಜವಾಗಿಯೂ ನಲವತ್ತರ ಹರೆಯದ ವಾರಿಯರ್ನನ್ನು ಕೊಲ್ಲುತ್ತೇನೆಂದು ತಿಳಿದಿದ್ದನೊ? ಅವನ ಉದ್ದೇಶ ಎಷ್ಟು ಗಂಭೀರವಾಗಿತ್ತು. ಅದೊಂದು ನಾಟಕವಲ್ಲವೆ?-ಎಂದು ಮುಂದೆ ಕೃಷ್ಣಮೂರ್ತಿ ಯೋಚಿಸಿದ್ದಿದೆ. ಯಾಕೆಂದರೆ ನಾಯರನ ಭೆಟ್ಟಿ ಕೃಷ್ಣಮೂರ್ತಿಯ ಜೀವನಕ್ರಮಕ್ಕೂ ಸವಾಲಾಗಿ ಪರಿಣಮಿಸಿತ್ತು. ಅಪ್ಪ ಸತ್ತದ್ದೇ ಹೊರಟು ನಿಂತ. ನಾಯರ್ ಹೇಳಿದ್ದ: ನಿನ್ನ ಅಪ್ಪ ಮೂರ್ಖನಂತೆ ಬದುಕಿ ಸತ್ತ. ನೀನೂ ಅವನ ದಾರಿ ಹಿಡಿದಂತೆ ಕಾಣುತ್ತೆ ಶವಸಂಸ್ಕಾರ…. ಕೃಷ್ಣಮೂರ್ತಿ ತಡವರಿಸುತ್ತ ಹೇಳಿದ. ನಾಯರ್ ಮಾತಿನಲ್ಲಿದ್ದ ಕ್ರೌರ್ಯ ಕಣ್ಣಲ್ಲಿರಲಿಲ್ಲವೆಂಬುದು ನಿಜ. ಆದರೂ ಅವನ ಮಾತಿನ ನಿರ್ದಯ  ಕೃಷ್ಣಮೂರ್ತಿಯನ್ನು ಅಲುಗಿಸಿತ್ತು. ಉಳಿದಿರೋದು ಏನು? ಹೂತರೆ ಒಳ್ಳೆ ಗೊಬ್ಬರ. ಆದರೆ ನೀವು ಬ್ರಾಹ್ಮಣರು ಸುಡುತ್ತೀರಿ… ಗೆಳೆಯ ಕರೆದನೆಂದು ನನ್ನ ಕೆಲಸವನ್ನೆಲ್ಲ ಬಿಟ್ಟು ಬಂದೆ. ಆದರೆ ಇನ್ನು ಸಮಯ ಹಾಳು ಮಾಡಲಾರೆ. ನನ್ನ ದಾರಿ ಖರ್ಚನ್ನೀಗ ನೀನು ಕೊಡಬೇಕು. ಒಂದು ದಿವಸದ ಊಟ ಮತ್ತು ಬಸ್ಸಿನ ಖರ್ಚು ಒಟ್ಟು ಇಪ್ಪತ್ತೈದಾಗುತ್ತೆ.

ಸ್ವಲ್ಪ ಹೆಚ್ಚು ಹಣ ಕೊಡೋಣವೆ ಎನ್ನಿಸಿತ್ತು. ಆದರೆ ಭಯವಾಗಿತ್ತು. ಮೊದಲೇ ಪೊದೆ ಹುಬ್ಬು, ಕೂದಲು ಬೆಳೆದ ಕಿವಿಗಳು, ಅದಕ್ಕೆ ಸಿಕ್ಕಿಸಿದ ಪೆನ್ಸಿಲ್ ಇತ್ಯಾದಿಗಳಿಗಾಗಿ ನಾಯರನನ್ನು ದ್ವೇಷಿಸಿದ್ದ  ಕೃಷ್ಣಮೂರ್ತಿಯ ಹೆಂಡತಿ ಮೀರಾ ಅವನು ಹೋದದ್ದೆ, ‘ಅಸಭ್ಯ’ ಎಂದು ಗೊಣಗಿದಳು. ಸಾಯುವ ಮನುಷ್ಯನ ಪಕ್ಕದಲ್ಲಿ ಕೂತಿದ್ದು ಬೀದಿ ಭಾಷಣ ಮಾಡುವುದೆ? ಹೊರಟಾಗ ಹೀಗೆ ಅನ್ನುವುದೆ?  ಕೃಷ್ಣಮೂರ್ತಿಗೂ ನಾಯರನ ವರ್ತನೆಯಿಂದ ಕಷ್ಟವಾಗಿದ್ದರೂ ಹೆಂಡತಿಯನ್ನು ಗದರಿಸಿದ್ದ. ನಿನಗೆ ತಿಳಿಯದ ವಿಷಯಗಳಲ್ಲಿ ತಲೆ ಹಾಕಬೇಡ, ಯಾಕೆ ಇಂಥ ನಾಯರನನ್ನೂ ಅಪ್ಪ ನಲವತ್ತು ವರ್ಷಗಳ ನಂತರ ನೋಡಲು ಬಯಸಿದ್ದು? ತನ್ನ ಹೆಂಡತಿ, ದೆಹಲಿ, ತಾನು ಮಾಡುವ ‘ಪಂಚವಾರ್ಷಿಕ ಯೋಜನೆ ಮತ್ತು ಗೇಣಿಶಾಸನ’ ಎಂಬುವ ಮೌಲ್ಯರಹಿತ ರಿಸರ್ಚ್ ಈ ಎಲ್ಲವೂ ಬೇಸರ ತರಿಸಿದಾಗ ನಾಯರ್ ಮತ್ತು ಅಪ್ಪನ ಸಂಬಂಧ ಮತ್ತು ಕೊನೆಯ ಭೇಟಿಗಳ ಸಂದಿಗ್ಧ ಕುರಿತು ಹೀಗೆ ಕೃಷ್ಣಮೂರ್ತಿ ತಲೆಕೆಡಿಸಿಕೊಳ್ಳುವುದುಂಟು.

ಹೀಗೆ ಅವನು ಯೋಚಿಸುವುದಕ್ಕೆ ಇನ್ನೂ ಒಂದು ಘಟನೆ- ಅಪ್ಪ ಸಾಯುವ ಮಂಚಿನದು- ಕಾರಣವೆನ್ನಬಹುದು. ಗಂಗೂಬಾಯಿ ಬಂದಾಗ ಊರಲ್ಲೆಲ್ಲಾ ಮಹಾ ಮರ್ಯಾದಸ್ಥರೆನ್ನಿಸಿಕೊಂಡ ಅಪ್ಪ ಮುಜುಗರ ಪಡದೇ ಇದ್ದದ್ದು  ಕೃಷ್ಣಮೂರ್ತಿಗೆ ಆಶ್ಚರ್ಯವನ್ನುಂಟು ಮಾಡಿದಂತೆಯೇ, ಅಪ್ಪನ ದಾತಾರರಲ್ಲೊಬ್ಬನಾದ ಜಮೀಂದಾರ ವಿಷ್ಣುಮೂರ್ತಿ ಮನೆಗೆ ಬಂದಾಗ ಅಪ್ಪ ತೋರಿಸಿದ ತಿರಸ್ಕಾರವೂ ಅಪ್ಪನ ಕೊನೆಗಾಲದ ಮನಸ್ಥಿತಿಯನ್ನು ತಿಳಿಯಲು ಅಗತ್ಯವೆನ್ನಿಸಿತ್ತು. ದತ್ತಿಗೆ ಸಂಬಂಧಿಸಿದ ವಿಷ್ಣುಮೂರ್ತಿಗೆ ವ್ಯವಹಾರವನ್ನು ಈ ಹತ್ತು ವರ್ಷಗಳಿಂದ ನಡೆಸಿಕೊಡುತ್ತ ಬಂದದ್ದು ಆಚಾರ್ಯರು. ವಿಷ್ಣುಮೂರ್ತಿಯನ್ನು ದತ್ತಿಗೆ ಪಡೆದುಕೊಂಡ ನರಸಿಂಹಭಟ್ಟರು  ಸತ್ತಮೇಲೆ ಅವರ ಹೆಂಡತಿ ಸಾಕುಮಗನ ಜೊತೆಯಲ್ಲಿ ಇದ್ದು ಅವನನ್ನು ಬೆಳೆಸಿದರು. ಅವರಿಗೆ ಒಬ್ಬ ತಮ್ಮನಿದ್ದ- ಪ್ರೀತಿಯ ತಮ್ಮ. ಅವನಿಗೊಬ್ಬ ಗಂಡುಮಗುವಾದೊಡನೆ ಅವರ ಪ್ರೀತಿ ಈ ಹುಡುಗನ ಕಡೆ ಹರಿಯಿತು. ಅಷ್ಟು ಹೊತ್ತಿಗಾಗಲೇ ಮೈನರ್ ಅವಸ್ಥೆದಾಟಿದ್ದ ವಿಷ್ಣುಮೂರ್ತಿಗೆ ಅವನ ಸ್ವಂತ ತಂದೆತಾಯಿಯರು ಆಸ್ತಿಯ ಬಗ್ಗೆ ಎಚ್ಚರಿಕೆ ಹೇಳಿ ಬಂಗಾರವನ್ನಿಟ್ಟಿದ್ದ ತಿಜೋರಿಗೆ ಇನ್ನೊಂದು ಬಲವಾದ ಬೀಗ ಹಾಕಿಸಿದರು. ಅಲ್ಲಿಂದ ಶುರುವಾಯ್ತು ವ್ಯಾಜ್ಯ. ವಿಷ್ಣುಮೂರ್ತಿ ಹೊಡೆದು ಬಡಿದು ಸಾಕುತಾಯನ್ನು ಮನೆಯಿಂದ ಅಟ್ಟಿದ. ಆಕೆ ಈತ ನಿಜವಾಗಿಯೂ ತನ್ನ ದತ್ತಲ್ಲ. ಆ ಬಗ್ಗೆ ಆದ ರಿಕಾರ್ಡ್‌ಗಳು ನಿಜವಲ್ಲ, ತನ್ನ ಆಸ್ತಿ ತನಗೇ ಸೇರತಕ್ಕದ್ದೆಂದು ಕೇಸ್ ಹಾಕಿದರು. ತನ್ನ ತಮ್ಮನನ್ನೂ ಉಳಿದ ಬಳಗವನ್ನೂ ಸೇರಿಸಿಕೊಂಡು ಮನೆಗೆ ಧಾಳಿಯಿಟ್ಟರು. ಇಷ್ಟರಲ್ಲಿ ವಿಷ್ಣುಮೂರ್ತಿ ತಿಜೋರಿಗೆ ಸಾಕುತಾಯಿ ಹಾಕಿದ್ದ ಬೀಗ ಒಡೆಸಿ, ಅದರಲ್ಲಿದ್ದ ಬಂಗಾರವನ್ನೆಲ್ಲ ಒಂದು ಟ್ರಂಕಿಗೆ ತುಂಬಿ ಜಯತೀರ್ಥ ಆಚಾರ್ಯರ ಮನೆಯಲ್ಲಿ ತಂದಿಟ್ಟಿದ್ದ. ಜಯತೀರ್ಥ ಆಚಾರ್ಯರು ಲಾಯರನ್ನು ಇಡಿಸಿ ಹೆಜ್ಜೆ ಹೆಜ್ಜೆಗೂ ಏನು ಮಾಡತಕ್ಕದ್ದೆಂದು ವಿಷ್ಣುಮೂರ್ತಿಗೆ ದಾರಿ ತೋರಿಸುವವರಾಗಿದ್ದರು. ಆಚಾರ್ಯರ ಮನೆಗೆ ವರ್ಷಕ್ಕೊಮ್ಮೆ ಬೇಕಾದ ಅಕ್ಕಿ ವಿಷ್ಣುಮೂರ್ತಿಯಿಂದ ಸರಬರಾಜಾಗುತ್ತಿತ್ತು.

ವಿಷ್ಣುಮೂರ್ತಿಗೆ  ಎಲ್ಲರಿಗೂ ತಿಳಿದಂತೆ ಮಹಾ ಮಿಣ್ಣನೆಯ ಮನುಷ್ಯ. ಸಿಲ್ಕ್ ಅಂಗಿ, ಗ್ಯಾಬರ್ಡೀನ್ ಕೋಟು, ಅಡ್ಡ ಉಟ್ಟ ಮಲ್ಲಿನ ಬಿಳಿ ಪಂಚೆ, ತಲೆಮೇಲೊಂದು ಕಪ್ಪು ಟೊಪ್ಪಿ ಧರಿಸಿ ನಾಜೂಕಾಗಿ ಬರುತ್ತಿದ್ದ ವಿಷ್ಣುಮೂರ್ತಿಯನ್ನು ಆಚಾರ್ಯರ ಹೆಂಡತಿ ರುಕ್ಮಿಣಿಯಮ್ಮ ಬಹು ಗೌರವದಿಂದ ಉಪಚರಿಸುವುದು. ಎಲ್ಲರಿಗೂ ಅನ್ನ ಕಾಣಿಸುತ್ತಿದ್ದ ಮನುಷ್ಯನಲ್ಲವೆ? ಆದರೆ ವಿಷ್ಣುಮೂರ್ತಿಯ ಸ್ವಾರ್ಥ ಕ್ರೌರ್ಯಗಳು ಆಚಾರ್ಯರಿಗೆ ಗೊತ್ತಿರಲಿಲ್ಲವೆಂದಲ್ಲ. ಸಾಕುತಾಯನ್ನು ಹಿಂಸೆ ಮಾಡಿ ಅವನು ಹೊರಹಾಕಿದ್ದ ಬಗೆ ಅವರಿಗೆ ತಿಳಿದದ್ದೇ. ಆದರೆ ಅಲ್ಲೊಂದು ಕಾನೂನಿನ ಪಾಯಿಂಟನ್ನೂ ಸಾಕುತಾಯಿಯ ಮೋಸವನ್ನೂ ಕಂಡಿದ್ದ ಆಚಾರ್ಯರು ಅದನ್ನು ಕಾನೂನು ಬಾಹಿರವೆಂದು ತಿಳಿದಿರಲಿಲ್ಲ. ಎಲ್ಲ ನೈತಿಕ ಮೌಲ್ಯಗಳನ್ನೂ ಕಾನೂನಿನ ಚೌಕಟ್ಟಿನಲ್ಲಿ ಅರ್ಥ ಮಾಡಿಕೊಳ್ಳುತ್ತಿದ್ದ ಅಪ್ಪನಿಗೆ ವಿಷ್ಣುಮೂರ್ತಿಯ ಒಂದು ಕ್ರಿಯೆ ಮಾತ್ರ ಬಹಳ ಧರ್ಮಸಂಕಟವನ್ನುಂಟುಮಾಡಿತ್ತು.

ವೆಂಕಪ್ಪನಾಯಕ ಎನ್ನುವ ಹಳೇ ಪೈಕದವನ್ನೊಬ್ಬ ವಿಷ್ಣುಮೂರ್ತಿಯ ಹತ್ತಿರ ಕೆಲಸಕ್ಕಿದ್ದ. ಕಟ್ಟುಮಸ್ತಾದ ಕರಿಮೈಕಟ್ಟಿನ ಆಳು. ವಿಷ್ಣುಮೂರ್ತಿಗೆ ಆಪ್ತ ಬೇರೆಯಾದ್ದರಿಂದ ಮನೆಯ ಒಳಗುಟ್ಟೆಲ್ಲ ಬಲ್ಲವ. ಸಾಹುಕಾರರ ಕಮಾನುಗಾಡಿಯನ್ನು ಹೊಡೆಯುವ ಕೆಲಸ ಅವನದ್ದು. ಅದರ ಎತ್ತುಗಳೆಂದರೆ ವಿಷ್ಣುಮೂರ್ತಿಗೆ  ತುಂಬ ಜಂಬ. ಅಷ್ಟು ಎತ್ತರ, ಅಷ್ಟು ಲಕ್ಷಣ ಅವು. ನಂಬಿಕೆಯ ಆಳೆಂದು ಅವನಿಗೆ ವಿಷ್ಣುಮೂರ್ತಿಗೆ  ತನಗೆ ಸೇರಿದ ಗದ್ದೆಯಲ್ಲಿ ಎರಡು ಏಕರೆಯನ್ನು ಬಿಟ್ಟುಕೊಟ್ಟಿದ್ದ-ಚಾಲಗೇಣಿಗೆ.

ಈ ವೆಂಕಪ್ಪನಾಯ್ಕನಿಗೆ ವಿಷ್ಣುಮೂರ್ತಿಯ ಹೆಂಡತಿಯ ತಂಗಿಯ ಮೇಲೆ ಮನಸಾಯಿತೋ, ಅಥವಾ ವಿಧವೆಯಾಗಿ ಅಕ್ಕನ ಮನೆಗೆ ಅವಳ ಬಾಣಂತನ ಮಾಡಲು ಬಂದ ಮೈಕೈತುಂಬಿಕೊಂಡ ಈ ಹುಡುಗಿಗೇ ಅವನ ಮೇಲೆ ಮನಸಾಯಿತೋ-ಈಗ ಹೇಳುವವರು ಉಳಿದಿಲ್ಲ. ವಿಧವೆ ಬಸುರಾದಳು, ವೆಂಕಪ್ಪನಾಯಕನ ಕೊಲೆಯಾಯಿತು. ಬಸುರು ತೆಗೆಸಿಕೊಂಡ ವಿಧವೆ ಬಾಯಿ ಮುಚ್ಚಿಕೊಂಡಿದ್ದಳು. ಕೊಲೆಯಾದ್ದು ಹೀಗೆ-ವೆಂಕಪ್ಪನಾಯಕಗೆ ಚಿಕ್ಕಂದಿನಿಂದ ವೈರಿಯಾಗಿದ್ದ ಅವನ ದಾಯಾದಿಯೊಬ್ಬ ಕಾಡಿನಲ್ಲಿ ಅವನನ್ನು ಸಿಗಿದು ಹೂಳಿಬಂದ. ಕೇಸಾಯಿತು. ವಿಷ್ಣುಮೂರ್ತಿ ಬಗ್ಗೆಯೂ ಗುಮಾನಿ ಬಂತು. ವಿಷ್ಣುಮೂರ್ತಿಗೆ  ಆಚಾರ್ಯರ ಕೈಕಾಲು ಕಟ್ಟಿಕೊಂಡ. ಸುದ್ದಿ ಆಚಾರ್ಯರ ಕಿವಿಯನ್ನೂ ತಟ್ಟಿತ್ತು. ಅದರಿಂದ ಅವರಿಗೆ ಧರ್ಮಸಂಕಟವಾಗಿದ್ದರೂ ವಿಷ್ಣುಮೂರ್ತಿಯನ್ನವರು ಸತ್ಯಕ್ಕಾಗಿ ಒತ್ತಾಯಪಡಿಸಲಿಲ್ಲ. ತನಗೇನೂ ತಿಳಿಯದೆಂದೂ, ತಾನು ನಿರಪರಾಧಿಯೆಂದೂ, ಕೊಲೆ ಮಾಡಿದ ದಾಯಾದಿಯನ್ನು ವೆಂಕಪ್ಪನಾಯಕ ಮೊದಲು ಹೊಡೆಯಲು ಹೋದದ್ದೆಂದೂ, ಅವನ ಮೈಮೇಲೂ ಗಾಯಗಳಿವೆಯೆಂದೂ, ಆತ್ಮರಕ್ಷಣೆಗಾಗಿ ಈ ಕೊಲೆ ಸಂಭವಿಸಿದ್ದೆಂದೂ ವಿಷ್ಣುಮೂರ್ತಿ ಹೇಳಿದ್ದನ್ನು ಪ್ರಯತ್ನಪಟ್ಟು ನಂಬಿಯೇ ಬಿಟ್ಟರು. ಬೇರೆಯವರು ನಂಬುವಂತೆಯೂ ದಾಯಾದಿಗಳಿಗೆ ಹಿಂದಿನಿಂದಿದ್ದ ಜಗಳಗಳ ಬಗ್ಗೆ ಸಾಕಷ್ಟು ಸಾಕ್ಷ್ಯಗಳನ್ನು ತಯಾರುಮಾಡಿ, ಒಬ್ಬ ಅತ್ಯುತ್ತಮ ಕ್ರಿಮಿನಲ್ ಲಾಯರನ್ನು ಗೊತ್ತು ಮಾಡಿ ವಿಷ್ಣುಮೂರ್ತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸಿ ಅಂತೂ ಕೇಸನ್ನು ಗೆಲ್ಲಿಸಿಕೊಟ್ಟರು. ವಿಷ್ಣುಮೂರ್ತಿ ನಿರಪರಾಧಿಯೆಂದೂ, ದಾಯಾದಿ ಆತ್ಮರಕ್ಷಣೆಗೆ ಕೊಲೆ ಮಾಡಿದ್ದೆಂದೂ, ಹೆಣ ಹುಗಿದು ಮುಚ್ಚಿಟ್ಟದ್ದು ಭಯದಿಂದ ಎಂದೂ ಕೋರ್ಟಿನಲ್ಲಿ ಪ್ರೂವಾಯ್ತು. ಇಷ್ಟೆಲ್ಲ ಆದಮೇಲೆ ಮಗನ ಹತ್ತಿರ ಮಾತ್ರ ಆಚಾರ್ಯರು ಗುಟ್ಟಾಗಿ ಹೇಳಿದ್ದರು: ನರಕಾಂತ ಇದ್ದರೆ ಈ ವಿಷ್ಣು ಅದರಲ್ಲಿ ಸತ್ತಮೇಲೆ ನರಳ್ತಾನೆ ಕಣಯ್ಯ ಕಿಟ್ಟು. ಮಹಾಕ್ರೂರಿ ಮನುಷ್ಯ.

ಆದರೆ ನೀವೇ ಅವರನ್ನು ಬಚಾವು ಮಾಡಿಸಿದಿರಲ್ಲ. ಛೇ- ಅದು ಕಾನೂನಿಗೆ ಬಿಟ್ಟದ್ದು. ಕಾನೂನಿನ ಪ್ರಕಾರ ಒಬ್ಬ ಗಿಲ್ಟಿಯಾದ ಮನುಷ್ಯ ತಪ್ಪಿಸಿಕೊಂಡರೂ ಚಿಂತೆಯಿಲ್ಲ. ಆದರೆ ಒಬ್ಬ ಇನ್ನೋಸೆಂಟ್ ಸಫರ್ ಆಗಕೂಡದು.  ಪೊಲೀಸ್ ಕೇಸ್ ತುಂಬ ವೀಕಾಗಿತ್ತು. ಅದಕ್ಕೇ ವಿಷ್ಣು ಬಚಾವಾದ. ಅಪ್ಪ ಈ ಮಾತುಗಳನ್ನು ಪ್ರಾಮಾಣಿಕವಾಗಿಯೇ ಆಡಿದ್ದರು. ಇದರಿಂದ ಕೃಷ್ಣಮೂರ್ತಿ ಆಶ್ಚರ್ಯಪಟ್ಟಿದ್ದ- ಕಾನೂನಿಗೆ ಅಪ್ಪ ಕೊಟ್ಟಿದ್ದ ಪ್ರಾಶಸ್ತ್ಯ ಕಂಡು. ಯಾವ ನೈತಿಕ ಪ್ರಶ್ನೆಯೂ ಬಾಧಿಸದಂತೆ ಕಾನೂನು ಅವರಿಗೆ ವಜ್ರಕವಚವಾಗಿದ್ದರಬಹುದು- ಪ್ರಾಯಶಃ ಸಾಯುವ ತನಕ? ತಾನು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಮಾಡುತ್ತಿದ್ದ ಕೆಲಸದ ಬಗ್ಗೆಯೂ ನಾಯರ್ ಇದೇ ಬಗೆಯ ಅಭಿಪ್ರಾಯದ ಮಾತಾಡಿದ್ದ. ಇಂಥ ವಾದ ಕೂಡ- ಸೋಶಿಯಲ್ ಸೈನ್ಸ್ ರಿಸರ್ಚ್  ವ್ಯಾಲೂ ಫ್ರೀಯಾಗಲು ಸಾಧ್ಯತೆ ಇತ್ಯಾದಿ- ಕೃಷ್ಣಮೂರ್ತಿಗೇನೂ ಹೊಸದಲ್ಲ. ಆದರೆ ದಿಗಿಲಾಗುತ್ತದೆ- ಶ್ರೀಮಂತರ ಚಾಕರಿಯಲ್ಲಿ ಸತ್ತ ಅಪ್ಪನನ್ನು ನೆನೆದರೆ.

ಸಾವು ದಿಗ್ಗೆಂದು ಎದುರಾದಾಗ ಇಂಥ ಸಮಾಧಾನಗಳನ್ನೂ ನಾವು ಕೈಬಿಡಬಹುದೆ ಎಂದು ಕೃಷ್ಣಮೂರ್ತಿ ಅನುಮಾನಿಸುವುದಕ್ಕೆ ಸಾಯುತ್ತಿದ್ದ ಅಪ್ಪ ವಿಷ್ಣುಮೂರ್ತಿ ಜೊತೆ ನಡೆದುಕೊಂಡ ರೀತಿಯೂ ಕಾರಣ. ವಿಷ್ಣುಮೂರ್ತಿಯನ್ನು ದತ್ತು ತೆಗೆದುಕೊಂಡ ಪ್ರಶ್ನೆ ಇನ್ನೂ ಬಗೆಹರಿದಿರಲಿಲ್ಲ.  ಕೇಸಿತ್ತು. ಈ ಮಧ್ಯೆ ದತ್ತಿನ ಮೂಲಕ ಬಂದ ಅವನ ಜಮೀನಿನ ಬಗ್ಗೆಯೂ ಹೊಸ ಗೇಣಿ ಶಾಸನಗಳಿಂದ ಅನೇಕ ಸಂದಿಗ್ಧಗಳು ಎದ್ದಿದ್ದುವು. ಒಳ್ಳೆ ಫಲಕೊಡುವ ತೋಟವೊಂದನ್ನು ಅವನ ಸಾಕುತಾಯಿಯ ತಮ್ಮ ಗೇಣಿಗೆ ಹಿಡಿದಿದ್ದ. ಅದನ್ನು ಅವನಿಂದ ಬಿಡಿಸಿ ಕೊಳ್ಳುವುದು ಸಾಧ್ಯವಾಗಿರಲಿಲ್ಲ. ವಿಷ್ಣುಮೂರ್ತಿಯ ಪುಂಡಾಟಗಳಿಗೆ ನೂರರಷ್ಟು ಹೆಚ್ಚಿನ ಗುಂಡಾಗಿರಿ ಈ ತಮ್ಮನದು. ಈ ಮಧ್ಯೆ ವಿಷ್ಣುಮೂರ್ತಿ ಕಾಪಾಡಲೆಂದು ಸುಮಾರು ಒಂದು ಲಕ್ಷ ಬೆಲೆಬಾಳುವ ನಗನಾಣ್ಯಗಳನ್ನು ಆಚಾರ್ಯರಲ್ಲಿ ಬಚ್ಚಿಟ್ಟಿದ್ದನೆಂದು ಹೇಳಿದೆಯಷ್ಟೆ. ಅಚಾರ್ಯರಿಗೆ ಆರೋಗ್ಯವಿಲ್ಲೆಂದು ತಿಳಿದಿದ್ದೇ ವಿಷ್ಣುಮೂರ್ತಿಗೆ ಈ ನಗನಾಣ್ಯಗಳ ಬಗ್ಗೆ ಕಾತರ ಉಂಟಾಗಿರಬೇಕು. ಸಿಲ್ಕ್ ಅಂಗಿ, ಗ್ಯಾಬರ್ಡೀನ್ ಕೋಟು, ಮಲ್ ಪಂಚೆಯುಟ್ಟು ಬಂಗಾರದಿಂದ ಕಟ್ಟಿದ ಹಲ್ಲುಗಳನ್ನು ತೋರಿಸುತ್ತ, ಆರೋಗ್ಯ ವಿಚಾರಿಸಿಕೊಳ್ಳುತ್ತ ಕೂತ ವಿಷ್ಣುಮೂರ್ತಿಗೆ ಮುಖಕ್ಕೆ ಮುಖಕೊಡದೆ ಅಪ್ಪ ಹೂ ಹೂ ಎಂದಷ್ಟೆ ಉತ್ತರ ಹೇಳಿದ್ದರು. ತಾಯಿ ರುಕ್ಮಿಣಿಯಮ್ಮ ಬೆಳ್ಳಿ ಬಟ್ಟಲಲ್ಲಿ ಸ್ಪೆಶಲ್ ಆಗಿ ಮಾಡಿ ತಂದುಕೊಟ್ಟ ಬಿಸಿ ಬಿಸಿ ಕಾಫಿಯನ್ನು ಉತ್ತರೀಯದಿಂದ ಹಿಡಿದು ಹೀರುತ್ತ, ‘ಆಚಾರ್ರೆ ಶಿವಮೊಗ್ಗದಿಂದ ಡಾಕ್ಟರನ್ನು ಕರಕೊಂಡು ಬರಲ? ಮದ್ದೇನಾದರೂ ಬೇಕಿದ್ದರೆ ತಂದುಕೊಡುವೆ ಶಿವಮೊಗ್ಗದಿಂದ. ನನ್ನ ಹತ್ತಿರ ನಿಮಗೆ ದಾಕ್ಷಿಣ್ಯಬೇಡ- ಏನು?’ ಎಂದು ಪೀಠಿಕೆ ಹಾಕಿದ.
ಇವನು ಹಾಕುತ್ತಿರುವುದು ಪೀಠಿಕೆಯೆಂದು ಅಪ್ಪನಿಗೆ ಗೊತ್ತಾಗಿರಬೇಕು. ‘ಏನು ಬಂದದ್ದು ಹೇಳು. ನನಗೆ ಮೈಯಲ್ಲಿ ನಿತ್ರಾಣ. ಹೆಚ್ಚು ಮಾತಾಡಲಾರೆ’ ಎಂದು ಬಿಗಿಯಾಗಿ ಹೇಳಿದರು. ‘ಅಂಥದೇನೂ ವಿಶೇಷವಿಲ್ಲ ಆಚಾರ್ರೆ, ನಿಮ್ಮ ಆರೋಗ್ಯ ಸರಿಯಿಲ್ಲವೆಂದು ಕೇಳಿದೆನಲ್ಲ ಹಾಗೆಯೇ ಶಿವಮೊಗ್ಗದಲ್ಲಿ ಬ್ಯಾಂಕಲ್ಲಷ್ಟು ಕೆಲಸವಿತ್ತು. ನನ್ನ ಇವಳಿಗೆ ನೋಡಿ ಕತ್ತಿನ ಮೇಲೊಂದು ಬಾಕು ಎದ್ದಿದೆ. ಆಪರೇಶನ್ ಮಾಡಿಸಬೇಕು. ಖರ್ಚಿಗೆ ಈ ಕೋರ್ಟಿಗೆ ಅಲೆಯೋದರಲ್ಲಿ, ನಿಮಗೆ ಗೊತ್ತಲ್ಲ, ಕೈಯಲ್ಲಿ ನಾಲ್ಕು ಕಾಸೂ ಉಳಿದಿಲ್ಲ. ಸ್ವಲ್ಪ ನಗಾನ್ನ ತಗೊಂಡು ಹೋಗಿ ಬ್ಯಾಂಕಲ್ಲಿಟ್ಟು….’

ಇವಳೇ ಎಂದು ಆಚಾರ್ಯರು ಹೆಂಡತಿಯನ್ನು ಕೂಗಿದರು. ಮನೆಗೆ ಅಕ್ಕಿ ಸಪ್ಲೈ ಮಾಡುವ ವಿಷ್ಣುಮೂರ್ತಿಯನ್ನು ಯಾವಗಲೂ ಸಂತೋಷಪಡಿಸಲು ಪ್ರಯತ್ನಿಸುವ ಹೆಂಡತಿ ಲಗುಬಗೆಯಿಂದ ಬಂದು ಮೂಗುಬಟ್ಟನ್ನು ತಿರುವುತ್ತ ನಿಂತದ್ದು ಕಂಡು ಆಚಾರ್ಯರಿಗೆ ರೇಗಿತು. ಸಿಟ್ಟಿನ ಧ್ವನಿಯಲ್ಲಿ ‘ಆ ಟ್ರಂಕನ್ನು ತಂದುಕೊಡು’, ಎಂದರು ದೊಡ್ಡದೊಂದು ಮರದ ಫೆಟಾರಿಗೆ ಬೀಗ ಹಾಕಿ ಅದರೊಳಗೆ ಬಚ್ಚಿಟ್ಟ ಈ ಟ್ರಂಕನ್ನು ಹೊರಗೆ ತೆಗೆಯುವುದು, ಅದರ ಒಳಗಿನ ಬಂಗಾರದ ನಗನಾಣ್ಯಗಳ ಮೇಲೆ ಕಣ್ಣುಹಾಯಿಸುವುದು ರುಕ್ಮಿಣಿಯಮ್ಮನಿಗೊಂದು ಹಬ್ಬವಿದ್ದಂತೆ. ಕೈಯಲ್ಲೆರಡು ಬಳೆ ತಾಳಿಗಳ ಹೊರತಾಗಿ ಬೇರೇನೂ ಬಂಗಾರ ಉಳಿಸಿಕೊಳ್ಳಲಾರದೆ ಹೋದ ಅವಳಿಗೆ ಈ ಟ್ರಂಕು ತನ್ನ ಸುಪರ್ದಿನಲ್ಲಿದೆಯೆಂಬುದೇ ಒಂದು ಹೆಮ್ಮೆಯ ಸಂಗತಿ.

‘ಇಲ್ಲಿ ತರೋದು ಬೇಡ, ನಾನೇ ಬರ್ತೇನೆ?’ ಎಂದು ವಿಷ್ಣುಮೂರ್ತಿ ಎದ್ದು ನಿಂತ. ‘ವಿಷ್ಣು, ನನಗೆ ಖಾಯಿಲೆ ನೋಡು. ಹೇಗೋ ಏನೋ ಹೇಳಕ್ಕೆ ಆಗಲ್ಲ. ಆ ಟ್ರಂಕನ್ನ ತಗೊಂಡು ಹೋಗು. ಪ್ರತಿವರ್ಷ ಇನ್ನು ಮುಂದೆ ನೀನು ಅಕ್ಕಿ ಕಳಿಸೋದು ಬೇಡ. ಆರೋಗ್ಯವಾದ ಮೇಲೆ ನಾವೆಲ್ಲ ದೆಹಲೀಲಿ ಮಗನ ಜೊತೆ ಹೋಗಿರುತ್ತೀವಿ.’ ಆಚಾರ್ಯರ ಕಟುಧ್ವನಿ ಕೇಳಿ ವಿಷ್ಣುಮೂರ್ತಿ, ‘ಛೆ ಛೆ ಆಚಾರ್ರೆ ಹಾಗೆಲ್ಲ ನೀವು ಅನ್ನಬಾರದು. ನನ್ನ ತಂದೆಗೆ ಸಮಾನ ನೀವು…’ ಎಂದ. ‘ದುಡ್ಡಿನ ವಿಷಯಕ್ಕೆ ಬಂದಾಗ ನೋಡು ವಿಷ್ಣು. ಅಪ್ಪನೂ ಇಲ್ಲ, ಅಮ್ಮನೂ ಇಲ್ಲ, ಮಗನೂ ಇಲ್ಲ. ಹಣವಂತರಿಗಾಗಿ ನಡೆಸಿದ ಚಾಕರಿ ಜೀವನ ನನಗೆ ಸಾಕು ಸಾಕಾಗಿದೆ’. ಎಂದು ಆಚಾರ್ಯರು ಹೇಳಿ ಇನ್ನು ಹೆಚ್ಚು ಮಾತು ಬೇಕಿಲ್ಲವೆನ್ನುವಂತೆ ಕಣ್ಣು ಮುಚ್ಚಿ ಮಗ್ಗುಲಾದರು. ವಿಷ್ಣುಮೂರ್ತಿ  ಟ್ರಂಕಿನ ಸುತ್ತ ಒಂದು ಕಂಬಳಿ ಸುತ್ತಿ ಮೂಟೆಯಂತೆ ಕಟ್ಟಿಸಿಕೊಂಡು, ಇನ್ನೊಂದೂ ಮಾತಾಡದೆ ಕಾರಿನ ಬೂಟಿನಲ್ಲದನ್ನು ಇಟ್ಟುಕೊಂಡು ಕಳ್ಳನಂತೆ ಹೊರಟುಹೋದ.

ವಾರಿಯರ್ ಕೊಲೆಯತ್ನದ ಆಪಾದನೆ ಮೇಲೆ ನಾಯರ್ ವಿಚಾರಣೆ ನಡೆಯುತ್ತಿದ್ದಾಗ ಕೃಷ್ಣಮೂರ್ತಿ ಅವನಿಗೊಂದು ಕಾಗದ ಬರೆದ. ಅದರಲ್ಲಿ ಈ ಮೇಲಿನ ಘಟನೆ ವಿವರಿಸಿ.
ಆದ್ದರಿಂದ ನನ್ನ ಅಪ್ಪನನ್ನು ಮೂರ್ಖನೆನ್ನುವುದು ಸಾಧ್ಯವಿಲ್ಲ. ಅವರೂ ಈ ಧನವಂತರ ಸಂಪರ್ಕದಿಂದ ಹೇಸಿದ್ದರು. ಆದರೂ ತುಂಬುಜೀವನ ನಡೆಸಿ ಸತ್ತ ಅವರಿಗೆ ನಿಮ್ಮನ್ನು ಹೋಲಿಸಿದರೆ ನೀವೊಬ್ಬ ತೀರಾ ಸರಳ ಮನಸ್ಸಿನ ನಾಟಕೀಯ ವ್ಯಕ್ತಿ ಎನ್ನಿಸುತ್ತೆ. ಅದಕ್ಕೆ ನಾಯರ್ ಡುಂಡಗಿನ ಅಕ್ಷರದಲ್ಲಿ ಕ್ರಾಂತಿಕಾರೀ ಶುಭಾಶಯಗಳು ಎಂದು ಇಂಗ್ಲಿಷಿನಲ್ಲಿ ಪ್ರಾರಂಭಿಸಿ ಬರೆದಿದ್ದ.
ಶ್ರೀಮಂತರಿಂದ ಅವರ ಹಿತಕ್ಕಾಗಿ ಮಾತ್ರ ನಿಯಂತ್ರಿತವಾದ ಈ ಸಮಾಜವನ್ನು ನಾನು ಅತ್ಯಂತ ತೀವ್ರವಾಗಿ ದ್ವೇಷಿಸುತ್ತೇನೆ. ಒಂದು ಪ್ರಣಯ ಪ್ರಸಂಗದಿಂದ ಜಾಗೃತನಾಗಿ, ಮಾರ್ಕ್ಸ್‌ರ ಹೇಳುವ ‘ಗ್ರಾಮೀಣ ಬದುಕಿನ ಈಡಿಯಸಿ’ ಯಿಂದ ತಪ್ಪಿಸಿಕೊಳ್ಳಲೆಂದು ನಲವತ್ತು ವರ್ಷಗಳ ಹಿಂದೆ ದೆಹಲಿಗೆ ಹೋಗಿದ್ದ ನಿನ್ನ ಅಪ್ಪನ ಜೀವನದ ಸಂಭ್ರಮವನ್ನೆಲ್ಲ ನಾಶಮಾಡಿದ್ದು ಈ ಶ್ರೀಮಂತರ ಚಾಕರಿ ಅಲ್ಲವೆ? ನಮ್ಮ ಧರ್ಮ, ನಮ್ಮ ಸಂಸ್ಕೃತಿ, ನಮ್ಮ ಪ್ರೀತಿಯ ಸಂಬಂಧಗಳು- ಈ ಎಲ್ಲವನ್ನೂ ಬಂಡವಾಳಶಾಹಿ ಪದ್ಧತಿಯ ಮೂಲವಿಗ್ರಹವಾದ ಹಣ ನಾಶ ಮಾಡುತ್ತದೆ. ನನ್ನಂಥವರ ಹೋರಾಟದಿಂದ ಮಾತ್ರ ಮಾರ್ಕ್ಸ್‌ರ ಕಂಡ ಮಾರ್ಗದಲ್ಲಿ ಮನುಷ್ಯ ಮತ್ತೆ ತನ್ನ ನೈಜ ಮನುಷ್ಯತ್ವವನ್ನು ಪಡೆದಾನು. ನನ್ನ ಜೀವನವೇ ಒಂದು ವಿಚಾರವಾಗಲೆಂದ ನಾನು ಮಾಡುತ್ತಿರುವ ಕ್ರಿಯೆಗಳ ನಿನಗೆ ಬರಿಯ ನಾಟಕವಾಗಿ ಕಂಡಲ್ಲಿ ಅದಕ್ಕಿಂತ ಉತ್ತಮವಾದ್ದನ್ನು ತಿಳಿಸು. ಅದನ್ನೇ ನಾನು ಅನುಸರಿಸುತ್ತೇನೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕೊಬ್ಬಿದ ಹಂದಿಗಳನ್ನು ನನಗೆ ಕೊಲ್ಲಬೇಕೆನ್ನಿಸುವುದೇನೂ ಖಂಡಿತ ನಾಟಕವಲ್ಲ. ನಿನ್ನ ತಂದೆಯ ಜೀವನದಂತೆ ನಿನ್ನದೂ ವ್ಯರ್ಥ ಆಗಬಾರದೆಂದು ಆಶಿಸುತ್ತೇನೆ. ಸಾಯುವಾಗ ಬರುವ ಅರಿವಿಗೆ ನಾನು ಮಹತ್ವ ಕೊಡುವುದಿಲ್ಲ- ಬದುಕಿರುವಾಗಿನ ಪ್ರತಿಕ್ಷಣದ ಪರಿಣಾಮ ಸಮುದಾಯದ ಮೇಲೆ ಏನಾಗುತ್ತದೆ ನನಗೆ ಮುಖ್ಯ. ಕ್ರಾಂತಿಗೆ ಜಯವಾಗಲಿ. ನಾಯರ್ ಬರೆದ ಪ್ರಣಯ ಪ್ರಸಂಗ ಯಾವುದೆಂದು ಕೃಷ್ಣಮೂರ್ತಿಗೆ ಗೊತ್ತಿರಲಿಲ್ಲ. ಆ ಬಗ್ಗೆ ಗೊತ್ತಿದ್ದವಳೆಂದರೆ, ಆಚಾರ್ಯರ ಸಾವಿನ ದಿನಗಳಲ್ಲಿ ಅದನ್ನೇ ಕುರಿತು ಯೋಚಿಸುತ್ತಿದ್ದವಳೆಂದರೆ, ಗಂಗೂಬಾಯಿ ಮಾತ್ರ.

ಜಯತೀರ್ಥ ಆಚಾರ್ಯರ ಕಾಲು ಮಡಿಸಿ, ಖಾಲಿನೆಲದ ಮೇಲೆ ಮಲಗಿಸಿ, ಮೇಲೊಂದು ಕೆಳಗೊಂದು ತೆಂಗಿನಕಾಯಿ ಚಿಪ್ಪಲ್ಲಿ ದೀಪವನ್ನು ಹತ್ತಿಸಿಟ್ಟ ನಂತರ, ಗೋವಿಂದನ್ ನಾಯರ್ ಹೊರಟುಹೋದದ್ದು. ಗಂಡನ ಪಾದಗಳಿಗೆ, ನೆತ್ತಿಗೆ, ಕೊನೆಯ ಶುಶ್ರೂಷೆಯಾಗಿ ಎಣ್ಣೆಯನ್ನು ಹಚ್ಚುತ್ತ ಅಳುತ್ತ ಕೂತಿದ್ದ ರುಕ್ಮಿಣಿಯಮ್ಮನಿಗೆ ಈ ನಾಯರ್ ಹೋದದ್ದರಿಂದ ಸಮಾಧಾನವೇ ಆಯಿತೆನ್ನಬಹುದು. ಅವಳಿಗೆ ಈ ಸಾವಿನಿಂದಾಗಿ ತಲೆಯ ಮೇಲೆ ಆಕಾಶವೇ ಕಳಚಿಬಿದ್ದಂತಾಗಿದೆ. ಅವರು ಮಂಡಿ ಮತ್ತು ಬ್ಯಾಂಕುಗಳಲ್ಲಿ ಎಷ್ಟು ಸಾಲ ಮಾಡಿದ್ದರೋ ಏನು ಕಥೆಯೋ ಯಾರಿಗೆ ಗೊತ್ತು? ಇನ್ನು ಮಗ- ಅವನಿಗೆ ಕೊರಳಲ್ಲಿ ಜನಿವಾರ ಉಂಟೋ ಇಲ್ಲವೋ ತಿಳಿಯದು. ಪುರೋಹಿತರು ಏನೆಂದು ಕೊಂಡಾರು? ಹೆತ್ತವರ ಮಾತು ಕೇಳದೆ ಅವಳನ್ನು ಕಟ್ಟಿಕೊಂಡ- ಉತ್ತರ ದೇಶದವಳನ್ನು ಯಾವ ಜಾತಿಯೋ ಯಾವ ಭಾಷೆಯೋ. ಆ ಕೊರಗಿನಲ್ಲೇ ಅರ್ಧ ಇವರು ಸತ್ತದ್ದು. ಅವನಿಗಾಗಲೀ ಅವಳಿಗಾಗಲೀ ಮಡಿ ಮೈಲಿಗೆಯೆಂದರೆ ತಿಳಿಯದು. ಸಿಟ್ಟಿನಲ್ಲಿವರು ಹೇಳಿಬಿಟ್ಟರು- ವಿಷ್ಣುಮೂರ್ತಿಗೆ. ಆದರೆ ಮಗನ ಜೊತೆ ದೆಹಲಿಯಲ್ಲಿ ಹೋಗಿ ಇರುವುದು ಸಾಧ್ಯವಿತ್ತೆ? ಅದೂ ವಿಧವೆಯಾಗಿದ್ದ ತನ್ನ ಮಗಳು ಮತ್ತು ಮೊಮ್ಮಗನನ್ನು ಒಟ್ಟಿಗೆ ಇಟ್ಟುಕೊಂಡು? ಮಗಳು ಸಾವಿತ್ರಿ ಕೈಸನ್ನೆ ಬಾಯಿಸನ್ನೆ ಮಾಡಿ ಸೊಸೆಗೆ ಮಡಿ ಮೈಲಿಗೆ ತಿಳಿಸಬೇಕು. ‘ಹೆಂಡತಿಗೆ ಬುದ್ದಿ ಹೇಳೊ’ ಎಂದರೆ ಕೃಷ್ಣಮೂರ್ತಿ ರೇಗುವನು. ಈ ಮಧ್ಯೆ ಶನಿಯಂತೆ ಶಿವಮೊಗ್ಗದಿಂದ ಈ ವಯ್ಯಾರಿ ಗಂಗೂಬಾಯಿ ಬೇರೆ ವಕ್ಕರಿಸಿದ್ದಾಳೆ. ಸತ್ತವರ ಮುಖದರ್ಶನಕ್ಕೆ ಬಂದವರೂ ಅವಳನ್ನು ಕುತೂಹಲದಿಂದ ನೋಡುತ್ತಾರೆ.

ವಿಷ್ಣುಮೂರ್ತಿ ಕಾರಿನಿಂದಿಳಿದು ಬಂದದ್ದು ರುಕ್ಮಿಣಿಯಮ್ಮನಿಗೆ ಹಗುರೆನ್ನಿಸಿತು. ಇವರು ಸಾಯುವ ಮುಂಚೆ ಅವನ ಮೇಲೆ ರೇಗಿದ್ದರೂ ಅವನು ಈ ವಿಶೇಷ ಖರ್ಚುಗಳ  ಹೊತ್ತಲ್ಲಿ ತನ್ನ ಕೈಬಿಡಲಾರ. ಮೈಮೇಲೊಂದು ಬಿಳಿಯ ಶಲ್ಯ ಹೊದ್ದು ಬಂದ ವಿಷ್ಣುಮೂರ್ತಿ ಕೈಗಳನ್ನು ಕಟ್ಟಿಕೊಂಡು ಮೂಲೆಯಲ್ಲಿ ನಿಂತ. ಅವನ ಸರೀಕರಾರೂ ಇನ್ನೂ ಬಾರದಿದ್ದನ್ನು ಕಂಡು ಅಳುವಿನ ಧ್ವನಿಯಲ್ಲಿ ಕೃಷ್ಣಮೂರ್ತಿಗೆ ಹೇಳಿದ: ನಿಮ್ಮ ತಂದೆಗೆ ಸಮಾನರು ಈ ಪ್ರಾಂತದಲ್ಲಿ ಯಾರೂ ಇಲ್ಲ, ಮಹರಾಯರೆ. ಅವರಿಗೆ ಗೊತ್ತಿಲ್ಲದ ಕಾನೂನು ಇರಲಿಲ್ಲ. ಅವರೊಬ್ಬರಿಂದ ಈ ಪ್ರಾಂತದ ನನ್ನಂಥವರು ಈ ಕೆಟ್ಟ ಕಾಲದಲ್ಲಿ ಅಷ್ಟಿಷ್ಟು ಜಮೀನು ಮನೆ ಉಳಿಸಿಕೊಂಡು ಹೀಗೆ ಮರ್ಯಾದೆಯಿಂದ ಬದುಕೋದು ಸಾಧ್ಯವಾದದ್ದು. ಮೊನ್ನೆ ನಾನು ಬಂದಾಗ ಮಾರಾಯರೇ ಹೀಗಾಗತ್ತೆ ಅಂತ ಕನಸುಮನಸಲ್ಲಿ ನಾನು ತಿಳಿದಿರಲಿಲ್ಲ. ಆಯಿತ? ನಮ್ಮನ್ನೆಲ್ಲ ಪರದೇಶಿ ಮಾಡಿ ಹೋಗಿಬಿಟ್ಟರು- ಪುಣ್ಯಾತ್ಮರು. ಕೊನೆಯ ಮಾತಿನಿಂದಾಗಿ ರುಕ್ಮಿಣಿಯಮ್ಮನಿಗೆ ದುಃಖ ಉಮ್ಮಳಿಸಿ ಬಂತು. ಮಗಳು ಸಾವಿತ್ರಿ ಬಂದು ಅವಳನ್ನು ಎಬ್ಬಿಸಿಕೊಂಡು ಹೋದಳು. ಸಂತೈಸಲೆಂದು ವಿಷ್ಣುಮೂರ್ತಿಯೂ ಒಳಗೆ ಹೋದ. ಮುಖದರ್ಶನಕ್ಕೆ ಬಂದಿದ್ದ ಸುತ್ತಮುತ್ತಲಿನ ಹಳ್ಳಿಯವರು ಒಂದು ಚೂರೂ ಅಳದೆ ಗಂಭೀರವಾಗಿ ನಿಂತಿದ್ದ ಕೃಷ್ಣಮೂರ್ತಿಗೆ ಏನು ಸಂತೈಕೆ ಹೇಳಬೇಕು ತಿಳಿಯದೆ ನಿಂತಿದ್ದರು.

ಶಾಂತವಾಗಿ ಮಲಗಿದ್ದಂತೆ ಕಂಡ ಅಪ್ಪನಿಗೆ ಈ ಶೋಕ ಪ್ರದರ್ಶನದಿಂದ ಅವಮಾನವೆಂದೇ ಕೃಷ್ಣಮೂರ್ತಿಗೆ ಅನ್ನಿಸುತ್ತಿತ್ತು. ಅಪ್ಪ ಅತ್ತಿದ್ದನ್ನು ಅವನು ಕಂಡದ್ದಿಲ್ಲ. ಸ್ವಾಭಿಮಾನಿಯಾಗಿ ಅವರು ಬದುಕಿದ್ದು, ಸತ್ತದ್ದು. ನಾಯರ್ ಇಂಥದನ್ನು ನೋಡಲು ಇಷ್ಟಪಡದೇ ಹೋದದ್ದಿರಬೇಕು. ಅಪ್ಪನ ಪ್ರೀತಿಯ ಕ್ರಮ ಅವನಿಗೂ ಗೊತ್ತಿರಬಹುದು. ತಾನು ಮೈಸೂರಲ್ಲಿ ಓದುತ್ತಿದ್ದಾಗ ಒಮ್ಮೆ ಜೋರು ಗಂಟಲು ನೋವಾಗಿ ಮಾತೇ ನಿಂತು ಹೋಗಿ ಜ್ವರ ಬಂತು. ರೂಮಲ್ಲಿ ಒಬ್ಬನೇ ಇದ್ದಕ್ಕಿದ್ದಂತೆ ಒಂದು ಬೆಳಿಗ್ಗೆ ಅಪ್ಪ ಹಾಜರಾದರು. ಅವರ ಕಪ್ಪು ವ್ಯಾಸಕೋಟಿನ ಜೇಬಲ್ಲಿ ಹೊಸದಾಗಿ ಕೊಂಡು ತಂದ ಥರ್ಮಾಮೀಟರನ್ನು ಕೊಂಡುಕೊಂಡು ಬಂದುಬಿಟ್ಟೆ ನೋಡು ಎಂದು ಪಕ್ಕದಲ್ಲಿ ಕೂತು ಥರ್ಮಾಮೀಟರನ್ನು ಬಾಯಲ್ಲಿಟ್ಟರು. ಎರಡು ದಿನವಿದ್ದು ಶುಶ್ರೂಷೆ ಮಾಡಿದರು. ಮೂಸಂಬಿಯ ತೊಳೆ ಬಿಡಿಸಿಕೊಡುತ್ತ. ಅವರಿಗೆ ಪ್ರಿಯವಾಗಿದ್ದ ಅಸ್ಟ್ರಾನಮಿಯ ಬಗ್ಗೆ ಮಾತಾಡುತ್ತ ತನ್ನ ಆಯಾಸವನ್ನು ಹಗುರ ಮಾಡಿದ್ದರು.

ಈ ಅಸ್ಟ್ರಾನಮಿಯ ನಡುವೆ ಆಸ್ತಿಗೆ ಸಂಬಂಧಿಸಿದ ಕಾನೂನುಗಳ ಸೂಕ್ಷ್ಮರೂಪವನ್ನೂ ತನಗವರು ಹೇಳಬೇಕು. ಈ ಕಾನೂನು ಪ್ರಪಂಚವೂ ಆಕಾಶದ ನಕ್ಷತ್ರಲೋಕದಷ್ಟೇ ಅವರಿಗೆ ಸೋಜಿಗವಾಗಿ ಕಾಣುತ್ತಿದ್ದುದು ಕೃಷ್ಣಮೂರ್ತಿಗೆ ವಿಪರ್ಯಾಸವೆಂದು ಯಾವಾಗಲೂ ಅನ್ನಿಸುತ್ತಿತ್ತು. ಹಳ್ಳಿಯ ಸಾಹುಕಾರರ ದಯೆಯ ಮೇಲೆ ಬದುಕುತ್ತಿದ್ದ ಅವರಿಗೆ ಸ್ವತಃ ದುಡ್ಡಿನ ಮೇಲೇನೂ ಆಸೆಯಿದ್ದಿರಲಿಲ್ಲ. ಆದರೆ ಉಳಿದವರ ಆಸ್ತಿಯನ್ನು ಉಳಿಸುವುದೊಂದು ಜೀವನ ತನಗೊಡ್ಡಿದ ದೊಡ್ಡಸವಾಲು ಎಂಬಂತೆ ತಿಳಿದ ಅಪ್ಪ ನಾಯರ್ ಹೇಳಿದಂತೆ ಮೂರ್ಖನೇ ಇರಬೇಕು ಅನ್ನಿಸುತ್ತದೆ. ತನ್ನ ಮದುವೆ ಅವರಿಗೆ ದೊಡ್ಡ ಆಘಾತವೇ ಆಗಿರಬೇಕು. ಮದುವೆಗೆ ಮುಂಚೆ ದೇವ ಋಣ ಪಿತೃ ಋಣಗಳ ಮಾತೆತ್ತಿದರು. ಯಾವತ್ತೂ ತನ್ನ ಭಾವನೆಗಳನ್ನು ಹೇಳಿಕೊಳ್ಳದವರು ನನ್ನ ಶ್ರಾದ್ಧ ಮಾಡಲು ಇಷ್ಟವಿಲ್ಲದ್ದರಿಂದ ನೀನು ಹೀಗೆ ಜಾತಿಯ ಹೊರಗೆ ಮದುವೆಯಾಗುತ್ತಿರೋದು ಎಂದು ಗುಡುಗಿ ಬರೆದರು. ಆಮೇಲೆ ತಾನು ಕಳಿಸುತ್ತಿದ್ದ ಹಣವನ್ನವರು ಮುಟ್ಟುತ್ತಿರಲಿಲ್ಲವಾದ್ದರಿಂದ ತಾಯಿಗೆ ಮನಿಯಾರ್ಡರ್ ಕಳಿಸಲು ಪ್ರಾರಂಭಿಸಿದ. ಮೊಮ್ಮಗ ಹುಟ್ಟಿದ ಮೇಲೆ ಮಗನನ್ನೂ ಸೊಸೆಯನ್ನೂ ಕರೆಸಿಕೊಂಡು ಎಲ್ಲವನ್ನೂ ಮರೆತವರಂತೆ ವ್ಯವಹರಿಸಿದರು. ಸಾಯುವ ಮುಂಚೆ ವಿಷ್ಣುಮೂರ್ತಿ ಹತ್ತಿರ ತಾನು ದೆಹಲಿಯಲ್ಲಿ ಹೋಗಿ ಇರುತ್ತೇನೆ ಎಂದದ್ದು, ನಾಯರನನ್ನು ಕರೆಸಿಕೊಂಡದ್ದು, ಗಂಗೂಬಾಯನ್ನು ಮನೆಯವಳಂತೆಯೇ ಒಪ್ಪಿಕೊಂಡದ್ದು ನೋಡಿದರೆ ತನ್ನ ಮದುವೆಯ ಕಹಿಯನ್ನವರು ಸಂಪೂರ್ಣ ಜೀರ್ಣಿಸಿಕೊಂಡರೆಂದೇ ಕೃಷ್ಣಮೂರ್ತಿಗೆ ಅನ್ನಿಸುತ್ತದೆ. ಆದರೆ ದೆಹಲಿಯಲ್ಲಿ ತಾನು ಬಂದಿರುತ್ತೇನೆ ಎಂದು ಅಪ್ಪ ಹೇಳಿದಾಗ ಅವನಿಗೆ ಸಂತೋಷದ ಜೊತೆ ದಿಗಿಲೂ ಆಗಿತ್ತು. ಒಂದು ಸಣ್ಣ ಪ್ಲ್ಯಾಟಿನಲ್ಲಿ ಎಲ್ಲರೂ ಒಟ್ಟಿಗಿರುವುದು ಸಾಧ್ಯವೆ? ಹೆಂಡತಿ ಮೀರಾ ಇದನ್ನು ಒಪ್ಪುವವಳೆ?

ಅಪ್ಪನ ಕಾಲುಬುಡದಲ್ಲಿ ಉರಿಯುತ್ತಿದ್ದ ದೀಪವನ್ನೂ, ಅಂಗಳದಲ್ಲಿ ದೆಬ್ಬೆಗಳನ್ನು ಜೋಡಿಸಿ ಕಟ್ಟುತ್ತಿದ್ದ ಚಟ್ಟವನ್ನೂ ನೋಡುತ್ತ ನಿಂತಿದ್ದ ತನ್ನ ಗಮನ ಸೆಳೆಯಲು ಮೀರ ಪ್ರಯತ್ನಿಸುತ್ತಿರುವುದು ಕಾಣಿಸಿತು. ಕಕ್ಕಸ್ಸಿಗೆ ಕೂರಲು ಚಂಡಿಹಿಡಿದಿದ್ದ ಮಗ ಶ್ರೀನಾಥನ ಜೊತೆ ಅವಳ ಯಥಾಪ್ರಕಾರದ ನಿತ್ಯದ ಹೋರಾಟ ನಡೆದಿತ್ತು. ಅದಕ್ಕೆ ಗಂಡನ ಸಹಾಯ ಅವಳಿಗೆ ಬೇಕಿತ್ತು. ಇಂಥ ಕೆಲಸಗಳಲ್ಲಿ ಹೆಂಡತಿಗೆ ಸಹಾಯ ಮಾಡುವುದರಿಂದ ತಾನು ತಾಯಿಗೂ ಅಕ್ಕನಿಗೂ ಹೆಣ್ಣಿಗನಂತೆ ಕಾಣುತ್ತೇನೆಂದು ಅವನಿಗೆ ಮುಜುಗರ. ಈ ಹೊತ್ತಲ್ಲಿ ತಾನು ಶವದ ಬಳಿಯಿಂದ ಹೊರಟು ಹೋಗುವುದು ಸರಿಯೇ ತಪ್ಪೇ ತಿಳಿಯದೆ ನಿಂತೇ ಇದ್ದ. ಈ ಸೂಕ್ಷ್ಮಗಳಿಗೆ ಪರಕೀಯಳಾದ ಮೀರಾ ಮುನಿಸಿನಿಂದ ಗಂಡನನ್ನು ದುರುಗಟ್ಟಿ ನೋಡುತ್ತ ಮಗನ ಕೈಹಿಡಿದು ಜಗ್ಗುತ್ತಿದ್ದಳು.

ಹೊರಡುವಾಗ ನಾಯರ್ ಅಪ್ಪನ ಬಗ್ಗೆ ಹೇಳಿದ್ದನ್ನೆ ಕೃಷ್ಣಮೂರ್ತಿ ಚಿಂತಿಸುತ್ತ ಚಂಡಿ ಹಿಡಿದ ಮಗನನ್ನು ಎತ್ತಿಕೊಂಡು ಅಂಗಳಕ್ಕೆ ಹೋದ. ಅಂಗಳದಲ್ಲಿ ಕಟ್ಟಿಹಾಕಿದ ಎತ್ತುಗಳು ಹುಲ್ಲನ್ನು ನಿಧಾನವಾಗಿ ಮೇಯುತ್ತ ಬುಸುಗುಟ್ಟುತ್ತಿದ್ದವು. ನಾಯಿಯೊಂದು ಬಿಸಿಲಿಗೆ ಮೈಚಾಚಿ ಮಲಗಿತ್ತು. ಅಂಗಳದಲ್ಲಿ ಅಲ್ಲಿ ಇಲ್ಲಿ ಇನ್ನೂ ತೆಗೆಯದ ಸಗಣಿ. ಅಪ್ಪ ಸತ್ತಿದ್ದರಿಂದ ಬೆಳಗಿನ ಯಥಾಪ್ರಕಾರದ ಗುಡಿಸುವ ಸಾರಿಸುವ ಕೆಲಸಗಳು ನಡೆದಿರಲಿಲ್ಲ. ಬಲಭಾಗಕ್ಕೆ ದೂರದಲ್ಲಿ ಕೊಟ್ಟಿಗೆ. ಕೊಟ್ಟಿಗೆಯ ಪಕ್ಕದಲ್ಲಿ ಗೊಬ್ಬರ್ ಗ್ಯಾಸ್ ಸಿಲೆಂಡರ್ ಅಪ್ಪನ ಆಧುನಿಕತೆಗೆ ಸಾಕ್ಷಿಯಾಗಿ ನಿಂತಿತ್ತು. ಇವತ್ತು ಒಲೆ ಹಚ್ಚಿಲ್ಲ. ಕೊಟ್ಟಿಗೆಯಲ್ಲಿ ದನಗಳನ್ನು ಹಾಲುಕರೆಸಿ ಬಿಟ್ಟಿರಲಿಲ್ಲವಾದ್ದರಿಂದ ಅವು ಹಗ್ಗ ಜಗ್ಗುತ್ತಿದ್ದುವು. ಸಾವಿತ್ರಿಯಕ್ಕ ದನಗಳ ಕೊರಳಿನ ಕಣ್ಣಿಯನ್ನು ಕಳಚುತ್ತಿರುವುದು ಕಂಡಿತು. ಹೀಗೆ ಹಾಲು ಕರೆಸದೆ ದನಗಳನ್ನು ಅಮ್ಮ ಯಾವತ್ತೂ ಈ ಮನೆಯಲ್ಲಿ ಹೊರೆ ಬಿಟ್ಟಿದ್ದು ಇಲ್ಲ. ಸಾಮಾನ್ಯವಾಗಿ ಬೆಳಿಗ್ಗೆ ದನಗಳ ಹಾಲುಕರೆದು ಹೊರಗಟ್ಟಿಯಾದ ಮೇಲೆ, ಕಲಗಚ್ಚು ಕುಡಿದು ಹುಲ್ಲು ತಿಂದಾದ ಕರುಗಳ ಮೂತಿಗೆ ಅಮ್ಮ ಮುಳ್ಳಿನ ಬುಟ್ಟಿಯನ್ನು ಕಟ್ಟುವುದು. ಈ ಕ್ರೌರ್ಯವನ್ನು ಮಗ ಪ್ರತಿಭಟಿಸಿದಾಗ ಅಮ್ಮ ನಕ್ಕು “ನಿಂಗೇನು ಗೊತ್ತು? ಪೇಟೆಮಂಗನಾಗಿದಿ ನೀನು. ಅವು ಹಾಲನ್ನೆಲ್ಲ ಕದ್ದು ಮುಚ್ಚಿ ಕುಡಿದುಬಿಡುತ್ತವೆ. ಆ ಗೌರಿಯಂತೂ ಕಣ್ಣು ತಪ್ಪಿಸಿ ಬಂದು ಹಾಲನ್ನು ಕುಡಿಸಿಬಿಡುತ್ತೆ” ಎನ್ನುವರು. ಇವತ್ತು ಆ ಯಾವ ನಿಗವನ್ನೂ ವಹಿಸದ್ದರಿಂದ ಕರುಗಳಿಗೆ ಹಬ್ಬ.

ಪ್ಲಾಸ್ಟಿಕ್‌ನ ಪಾಟಿಯನ್ನು ಕೊಳೆಯಾಗದ ಅಂಗಳದ ಮೂಲೆಯಲ್ಲಿಟ್ಟು ಒಲ್ಲದ ಮಗನನ್ನು ಬಲತ್ಕಾರವಾಗಿ ಅದರ ಮೇಲೆ ಕೂರಿಸಲು ಕೃಷ್ಣಮೂರ್ತಿ ಪ್ರಯತ್ನಿಸಿದ. ದೆಹಲಿಯ ಸಿಮೆಂಟ್ ಲೋಕದಲ್ಲಿ ಬೆಳೆದ ಮಗು ಈ ಅಂಗಳಕ್ಕೆ ಹೇಸಿಕೊಂಡಿತ್ತು. ಮೀರಾಗೂ ಈ ಮನೆಗೆ ಬರುವುದೆಂದರೆ ಮುಜುಗರ. ಅಮ್ಮನ ಮಡಿ ಮೈಲಿಗೆಗಳ ಕಾಟ ಮತ್ತು ಬಿದಿರು ಕಟ್ಟಿದ, ಬಾಗಿಲಿಲ್ಲದ ಕಕ್ಕಸಿನಲ್ಲಿ ಕೂರುವ ಭಯಗಳೇ ಇದಕ್ಕೆ ಮುಖ್ಯ ಕಾರಣವೆನ್ನಬಹುದು. ಮಗನಿಗೆ ಏನೇನೋ ಆಸೆತೋರಿಸಿ ಗದರಿಸಿ ಪಾಟಿಯ ಮೇಲೆ ಕೂರಿಸಿದ್ದಾಯಿತು. ಆಪ್ತನಾಗಿ ಸಿಕ್ಕ ಗಂಡನಿಗೆ ಏನೋ ಹೇಳಲು ಮೀರ ಪ್ರಯತ್ನಿಸಿರುವಂತಿತ್ತು. ಬಿಸಿಲಲ್ಲಿ ಮಲಗಿದ್ದ ನಾಯಿ ಎದ್ದು ನಿಂತಿತ್ತು. ಕೊಟ್ಟಿಗೆಯಿಂದ ಮುದಿ ದನ, ಗಂಗ, ಎತ್ತುಗಳು ತಿನ್ನುತ್ತಿದ್ದ ಒಣಹುಲ್ಲಿಗೆ ಬಾಯಿಹಾಕಲು ಬಂದಾಗ, ಎತ್ತುಗಳು ಹಾಯುವಂತೆ ಮಾಡಿ ಜಗಿಯುತ್ತಲೇ ಉಸಿರಾಡುತ್ತಿದ್ದವು. ಅಂಗಳದ ಎಡಭಾಗದಲ್ಲಿ ಚಟ್ಟಕಟ್ಟುವವರು ಹಗ್ಗದಿಂದ ಬಿದಿರುಗಳನ್ನು ಬಿಗಿಯುತ್ತಿದ್ದರು. ಮುದಿದನ ಎತ್ತುಗಳ ಕಣ್ಣು ತಪ್ಪಿಸಿ, ಒಂದು ಬಾಯಿ ಹುಲ್ಲನ್ನು ಸಂಪಾದಿಸಿಕೊಂಡು ದೂರ ನಿಂತು ತಿನ್ನಲು ಶುರುಮಾಡಿತು. ಮಗ ಪಾಟಿಯಲ್ಲಿ ದಯಪಾಲಿಸುತ್ತಿದ್ದಾನೆಂಬುದನ್ನು ವಾಸನೆಯಿಂದ ಗ್ರಹಿಸಿ ಮೀರ ಒಳಗಿಂದ ಹರ್ಷಪಡುತ್ತಿರುವುದು, ಸೊಂಟದ ಮೇಲೆ ಕೈಯಿಟ್ಟು, ಬಾಬ್ ಕೂದಲನ್ನು ಟೇಪಿನಿಂದ ಬಿಗಿದು ನಿಂತ ಅವಳ ಮುಖಭಾವದಿಂದಲೇ ತಿಳಿಯುವಂತಿತ್ತು. ಕೊಟ್ಟಿಗೆಯಿಂದ ಸಾವಿತ್ರಿಯಕ್ಕ ಕೃಷ್ಣಮೂರ್ತಿಗೆ ಕೈಸನ್ನೆ ಮಾಡಿ ಕರೆಯುತ್ತಿದ್ದಾಗ ಅವನಿಗೆ ಅನ್ನಿಸಿತು: ಹೀಗೆ ಒಂದು ಯಃಕಶ್ಚಿತ್ತಾದ ಸಾಮಾನ್ಯ ಬೆಳಗ್ಗೆ ತನ್ನ ಅಪ್ಪ ಸತ್ತಿರುತ್ತಾನೆ ಎಂದು ಅವನು ಎಂದೂ ಭಾವಿಸಿರಲಿಲ್ಲ. ಸಹಸ್ರಾರು ಕಾಲಿನ ಚಕ್ಕಲಿ ಹುಳ ಮಿಣ್ಣಗೆ ಕಾಲುಬುಡದ ಕಡೆ ಹರಿದು ಬರುತ್ತಿದ್ದುದನ್ನು ಕಂಡು ಪಾಟಿಯಿಂದ ಹೆದರಿ ಎದ್ದ ಮಗನನ್ನು ಮತ್ತೆ ಕುಳ್ಳಿರಿಸಿ, ಮೀರ ಕಾಲಿನ ತುದಿಯಿಂದ ಅದನ್ನು ಮುಟ್ಟಿದಳು. ಅದು ಚಕ್ಕಲಿಯಂತೆ ಸುತ್ತಿಕೊಂಡಿತು. ಕೃಷ್ಣಮೂರ್ತಿ ಅದನ್ನು ಕಡ್ಡಿಯಿಂದ ಎತ್ತಿ ಎಸೆದಿದ್ದರಿಂದ ಮಗನಿಗೆ ಸಮಾಧಾನವಾಯಿತು.

ನಾಯರ್ ಅಪ್ಪನ ಒಟ್ಟು ಜೀವನದ ಬಗ್ಗೆ ಹೇಳಿದ್ದು ಮತ್ತೆ ನೆನಪಾಗಿ ಕೃಷ್ಣಮೂರ್ತಿ ‘ಬಂದೆ’ ಎಂದು ಅಕ್ಕ ಕರೆಯುತ್ತಿದ್ದ ಕೊಟ್ಟಿಗೆಗೆ ಹೋಗುವಾಗ ‘ಇಲ್ಲ- ಅಪ್ಪ ಮೂರ್ಖನಾಗಿ ಸಾಯಲಿಲ್ಲ. ಹಚ್ಚಿಕೊಂಡ ಉಪದ್ವ್ಯಾಪಗಳನ್ನೆಲ್ಲ ಕೈಬಿಟ್ಟು ದೆಹಲಿಗೆ ತನ್ನ ಜೊತೆ ಬರುವ ನಿರ್ಧಾರ ಮಾಡಿದ್ದರು, ಎಂದುಕೊಂಡ. ಬರಿದಾದ ಕೊಟ್ಟಿಗೆಯಲ್ಲಿ ಮುರವನ್ನೂ ಬೇಯಿಸುವ ಒಲೆಯ ಹತ್ತಿರ ಅಕ್ಕ ಅವನನ್ನು ಕರೆದುಕೊಂಡು ಹೋದಳು. ಯಾರೂ ನೋಡಲಾರದ ಜಾಗಕ್ಕೆ ಅವಳು ಯಾಕೆ ತನ್ನ ಕರೆದಿರಬಹುದೆಂದು ಕುತೂಹಲದ ಜೊತೆಗೇ ಇದ್ದಕ್ಕಿದ್ದಂತೆ ಮತ್ತೊಂದು ಅನ್ನಿಸಿತು. ಅವರ ಇಷ್ಟದಂತೆ ತಾನು ಮದುವೆಯಾಗಿದ್ದಲ್ಲಿ, ಅವರು ಆಸ್ತಿವಂತರ ಚಾಕರಿಯಿಂದ ನಿವೃತ್ತರಾಗಿ ತನ್ನ ಜೊತೆ ಬಂದು ಇರುವ ಕನಸನ್ನು ಮೊದಲಿಂದ ಕಂಡಿದ್ದರು. ಜೀವನದ ಉದ್ದಕ್ಕೂ ಅವರಿಗಿದ್ದ ಆಸೆಯಾದ ಖಗೋಳಶಾಸ್ತ್ರದ ಬಗ್ಗೆ ಪುಸ್ತಕಗಳನ್ನು ದೆಹಲಿಯಲ್ಲಿ ಕೂತು ಓದಬೇಕೆಂದಿದ್ದರು. ಅಥವಾ ತಾಯಿಯನ್ನೂ ಅಕ್ಕನನ್ನೂ ತನಗೊಪ್ಪಿಸಿ ಗಂಗೂಬಾಯಿ ಜೊತೆ ಬದುಕಬೇಕೆಂದೂ ಅವರಿಗಿದ್ದಿರಬಹುದು. ಅವರ ಖಾಯಿಲೆ ಸುದ್ದಿ ಕೇಳಿ ಅವನು ದೆಹಲಿಯಿಂದ ಬಂದ ದಿನವೇ ಎತ್ತಲಾರದ ಕಾಲುಗಳನ್ನು ಮಡಚಿ ಗಂಗೂಬಾಯಿ ತಂದಿಟ್ಟ ದಿಂಬುಗಳಿಗೆ ಒರಗಿ,

‘ಇಕೊ ನೀನು ಬಂದೆಯಲ್ಲ- ವಿಮಾನದಲ್ಲಿ ಬಂದಿರಬೇಕು- ತುಂಬ ಖರ್ಚಲ್ಲವ?, ಹೋಗಲಿ ಬಿಡು, ಅಂತೂ ಬಂದೆಯಲ್ಲ. ಎಂದು ಏನೇನೋ ಬಡಬಡಿಸಿ, ನಾಯರ್ ಗೂ ಬರಲು ಬರೆದಿದ್ದೇನೆ ಕಣಯ್ಯ. ಈಗ ಎಷ್ಟೋ ವಾಸಿ’ ಎಂದು ತಾವು ವಾರದ ಕೆಳಗೆ ಓದಿದ ವಿಷಯವೊಂದರ ಬಗ್ಗೆ ಬೆರಗಿನಿಂದ ಮಾತಾಡಿದ್ದರು.

ಆಕಾಶದಲ್ಲಿರುವ ಕಪ್ಪುರಂಧ್ರಗಳ ಬಗ್ಗೆ, ‘ಇವು ನಕ್ಷತ್ರಗಳಂತಯ್ಯ, ಅಗಾಧವಾದ ನಕ್ಷತ್ರಗಳಂತೆ. ಕುಸಿಯುತ್ತಿದ್ದಾವಂತೆ. ಕುಸಿಯುವಾಗ ಅವುಗಳ ಅಪಾರ ಗುರುತ್ವಾಕರ್ಷಣ ಶಕ್ತಿಯಿಂದಾಗಿ ಬೆಳಕಿನ ಒಂದೇ ಒಂದು ಕಿರಣವೂ ಹೊರಹೋಗದಂತೆ ಎಲ್ಲವನ್ನೂ ತಮ್ಮೊಳಗೇ ಹೀರುತ್ತ ಹೀರುತ್ತ ಇರುತ್ತವಂತೆ, ಈ ರಾಕ್ಷಸನಕ್ಷತ್ರಗಳು. ಇಲ್ಲಿ ಕಾಲ ಚಲಿಸುವುದಿಲ್ಲವಂತೆ, ಎಷ್ಟು ಅದ್ಭುತವಯ್ಯ! ನೋಡು ಕಿಟ್ಟು, ಅದಕ್ಕೇ ಹೇಳೋದು, ಶಂಕರಾಚಾರ್ಯರಂತೆ ಈ ಜಗತ್ತೇ ಸುಳ್ಳು ಎಂದವನು ಈ ಅದ್ಭುತಗಳನ್ನು ಸುಲಭವಾಗಿ ಪರಿಹರಿಸಿಕೊಂಡುಬಿಡುತ್ತಾನೆ. ಆದರೆ ನಮ್ಮ ಆನಂದತೀರ್ಥರಿಗೆ ಈ ಜಗತ್ತು ನಿಜ. ಸತ್ಯಂ ಜಗತ್, ಬೇಧಗಳೆಲ್ಲ ನಿಜ. ಆದ್ದರಿಂದಲೇ ಈ ಜಗತ್ತನ್ನು ಕಂಡು ಬೆರಗಾಗೋದು ಸಾಧ್ಯ. ಇದು ನಿಜವಾದ್ದರಿಂದ ಇದನ್ನು ತಿಳಿಯೋದರಲ್ಲೂ ಅರ್ಥವಿದೆ ಎಂದ ಹಾಗಾಗುತ್ತೆ, ಅಬೇಧ ಹೇಳಲಿಕ್ಕೆ ಹೊರಟರೆ ಆವಾಗ…’

ಅಪ್ಪ ಆ ಪಾಯಿಂಟಿಂದ ಆಸ್ತಿ ಪಾಸ್ತಿ ಸಮಾನತೆ ಇತ್ಯಾದಿಗಳ ಖಂಡನೆಗೆ, ಕಾನೂನಿನ ಪ್ರಾಮುಖ್ಯತೆಗೆ ಬಂದುಬಿಟ್ಟಿದ್ದರು. ಅಂದರೆ ಅರ್ಥ?- ಕೃಷ್ಣಮೂರ್ತಿ ಇವನ್ನೆಲ್ಲ ಯೋಚಿಸುತ್ತಿರುವಾಗ ಅಕ್ಕ ಸೀರೆಯ ಸೆರೆಗಿನ ಗಂಟಿನಿಂದ ಏನನ್ನೋ ಬಿಚ್ಚುತ್ತಿದ್ದವಳು,
‘ಅಂಗಿ ಬಿಚ್ಚು’ ಎಂದಳು.
‘ಯಾಕೆ?’ ಅಂದ ಕೃಷ್ಣಮೂರ್ತಿ,
‘ಇದನ್ನ ಹಾಕ್ಕೊಳ್ಳಕ್ಕೆ’
ಅಕ್ಕ ತನ್ನ ಮಸಿ ಕೈಗಳಲ್ಲಿ ಹೊಸ ಜನಿವಾರವನ್ನು ತಿಕ್ಕುತ್ತಿದ್ದಳು. ಅದು ತಮ್ಮನ ಕೊರಳಲ್ಲಿ ಹಳೆಯದಂತೆ ಕಾಣಲಿ ಎಂದು.
‘ನನಗೆ ಈ ನಾಟಕ ಇಷ್ಟವಿಲ್ಲ.’
‘ಇಲ್ಲಾಂದರೆ ಬ್ರಾಹ್ಮಣ ಅಲ್ವ? ಅಪ್ಪನ ದಿನಕರ್ಮ ಮಾಡೋದಿಲ್ವ?’
‘ಅಪ್ಪನಿಗೂ ಈ ನಾಟಕವೆಲ್ಲ ಇಷ್ಟವಾಗ್ತಿರ್ಲಿಲ್ಲ ಅಕ್ಕ, ನೋಡು ಆ ಗಂಗೂಬಾಯಿ ಜೊತೆ…’
‘ಅವೆಲ್ಲ ಋಣಾನುಬಂಧ. ಯಾರ ಕೈಯಿಂದಲೂ ತಪ್ಪಿಸಿಕೊಳ್ಳೋಕೆ ಆಗಲ್ಲ.’
ಅಕ್ಕ ಮರೆಯಾಗಿ ನಿಂತಿದ್ದಳು. ಕೃಷ್ಣಮೂರ್ತಿ ಅಂಗಿಯನ್ನು ಬಿಚ್ಚಿ ಜನಿವಾರವನ್ನು ಹಾಕಿಕೊಂಡ.
‘ಅಕ್ಕ, ಅಪ್ಪ ಸಾಯೋಕೆ ಮುಂಚೆ ಈ ಹಾಳು ಜಮೀಂದಾರ ಸೂಳೇಮಕ್ಕಳ ಚಾಕರಿಗೆ ಬೇಸತ್ತಿದ್ದರು. ಅದಕ್ಕೆ ನಾಯರನ್ನ ಕರೆಸಿಕೊಂಡರು. ಅವನು ಗೊತ್ತ-ಶ್ರೀಮಂತರನ್ನೆಲ್ಲ ಕೊಲ್ಲಬೇಕೂಂತ ಹೊರಟವನು. ಹಾಗೇನೇ ಅವರಿಗೆ ಈ ಮಡಿ ಮೈಲಿಗೇಂದರೆ ನಿಜವಾಗ್ಯೂ ನಂಬಿಕೆ ಇರಲಿಲ್ಲ. ಇದ್ದಿದ್ರೆ ಗಂಗೂಬಾಯಿ ಜೊತೆ…’

ಸಾವಿತ್ರಿಗೆ ಆ ವಿಷಯ ಮಾತಾಡಲು ಇಷ್ಟವಿರಲಿಲ್ಲ. ‘ಇವೆಲ್ಲ ನಮ್ಮ ಕೈಯಲ್ಲಿರೋದೂಂತ ನೀನು ಹೇಳ್ತಿರೋದ? ಋಣಾನುಬಂಧ ಬಿಡಲ್ಲಾಂತ ಅದಕ್ಕೇ ನಾನು ಹೇಳೋದು. ಈಗ ನೀನು ಮದುವೆಯಾದ್ದೇ ನೋಡು. ನಮ್ಮ ಮೇಲೆಲ್ಲ ಎಷ್ಟೊಂದು ಜೋರು ಹೊಡಕೊಂಡು ಇದ್ದ ನೀನು ಈಗ ಹೇಗಾದಿ ನೋಡು..’.

ಅಕ್ಕನಿಗೆ ಕೊಂಕು ಮಾತಾಡುವ ಉದ್ದೇಶವಿಲ್ಲದಿದ್ದರೂ ಬಾಯಿತಪ್ಪಿ ಅಂದಿದ್ದಳು. ಈ ಘಟನೆಯನ್ನು ಮುಂದೆ ಕೃಷ್ಣಮೂರ್ತಿ ದೆಹಲಿಯ ತನ್ನ ಪ್ಲ್ಯಾಟಿನಲ್ಲಿ ಒಂದು ಭಾನುವಾರ ಊಟದ ಹೊತ್ತಿಗೆ ಜ್ಞಾಪಿಸಿಕೊಳ್ಳಬೇಕಾಯಿತು. ಅಪ್ಪ ತನ್ನ ಜೊತೆ ಬಂದಿರಬೇಕೆಂದು ಯೋಚಿಸಿದ್ದರೆಂದು ಅವರು ಸಾಯುವಾಗ ಸಂತೋಷಪಟ್ಟಿದ್ದರೂ ಕ್ರಮೇಣ ಅದು ಹೇಗೆ ಅಸಾಧ್ಯವಾಗುತ್ತೆಂಬುದೂ ಅವನಿಗೆ ಮನದಟ್ಟಾಗಿತ್ತು. ಬಂದಿರುವುದು ಇರಲಿ- ಅಪ್ಪ ಬಿಟ್ಟುಹೋದ ಇಪ್ಪತ್ತೈದು ಸಾವಿರ ರೂಪಾಯಿ ಸಾಲವೇ ತನ್ನ ಜೀವನದ ಸಂತೋಷವನ್ನೆಲ್ಲ ಬತ್ತಿಸಿತ್ತು. ತಿಂಗಳಿಗೆ ಐನೂರು ರೂಪಾಯಿಗಳನ್ನು ಈ ಸಾಲ ತೀರಿಸಲು ಕಟ್ಟಬೇಕಾಗಿ ಬಂದಿದ್ದರಿಂದ ಮಗನನ್ನು ಒಳ್ಳೆಯ ಸ್ಕೂಲಿಂದ ತಪ್ಪಿಸಿ ಸಾಮಾನ್ಯ ಸ್ಕೂಲಿಗೆ ಹಾಕಬೇಕಾಯಿತು. ಸಂಸಾರದ ಜೊತೆಗೆ ವಾರಕ್ಕೆರಡು ಸಿನಿಮಾ ನೋಡಿ ಹೊರಗೆ ಊಟ ಮಾಡುತ್ತಿದ್ದುದನ್ನು ನಿಲ್ಲಿಸಬೇಕಾಯಿತು. ಈ ಮಧ್ಯೆ ಹೆಂಡತಿಗೆ ತಿಳಿಯದಂತೆ ತಿಂಗಳಿಗೆ ಇನ್ನೂರು ರೂಪಾಯಿಗಳನ್ನಾದರೂ ತಾಯಿಗೆ ಕಳಿಸಬೇಕಾಗಿತ್ತು. ‘ಅಪ್ಪ ನೋಡು, ಎಷ್ಟು ಶ್ರೀಮಂತರ ಚಾಕರಿ ಮಾಡಿದರೂ ಅವರಿಂದ ದುಡ್ಡು ತಗೊಳ್ಳುತ್ತಿರಲಿಲ್ಲ. ತುಂಬ ಮಾನವಂತ. ಆದ್ದರಿಂದಲೇ ಸಾಲವಾದ್ದು; ನನ್ನನ್ನು ಓದಿಸಲೆಂದು ತ್ಯಾಗಮಾಡಿದರು. ಅವರೊಬ್ಬ ದೊಡ್ಡ ಅಸ್ಟ್ರಾನಮರ್ ಆಗಬಹುದಿತ್ತು. ಸುಪ್ರೀಂಕೋರ್ಟ್ ವಕೀಲರಾಗಬಹುದಿತ್ತು, ಇತ್ಯಾದಿಗಳನ್ನು ಪ್ರತಿತಿಂಗಳೂ ಗಟ್ಟಿಯಾಗಿ ಹೇಳುತ್ತ, ಇದನ್ನು ಕೇಳಿಸಿಕೊಳ್ಳುವಾಗ ಹೆಂಡತಿ ಮೀರ ಮೌನವಾಗಿ ತನ್ನ ಅಸಹನೆಯನ್ನು ವ್ಯಕ್ತಪಡಿಸುವುದೂ ನ್ಯಾಯವಾದ್ದೇ ಎಂದು ತಿಳಿಯುತ್ತ ಮುಂದಿನ ದಿನಗಳಲ್ಲಿ ಕೃಷ್ಣಮೂರ್ತಿ ಅಪ್ಪನ ನೆನಪಿನ ಜೊತೆ ಗುದ್ದಾಡಬೇಕಾಗಿ ಬಂದಿತ್ತು. ಅಂಥ ಒಂದು ಭಾನುವಾರದ ಮಧ್ಯಾಹ್ನ ಊಟ ಮಾಡುತ್ತಿದ್ದಾಗ ಹೆಂಡತಿ ಕಟುವಾಗಿ ಹಾಸಿಗೆಯಿದ್ದಷ್ಟು ಕಾಲು ಚಾಚೋದು ಸರಿ ಎಂದಾಗ ಕೃಷ್ಣಮೂರ್ತಿ ಜೈಲಿನಲ್ಲಿ ಕೊಳೆಯುತ್ತಿದ್ದ ನಾಯರ್ ಮಾತ್ರ ಇವನ್ನೆಲ್ಲ ಮೀರಿದವನು, ನಮ್ಮನ್ನೂ ಮೀರಿಸಬಲ್ಲವನು, ಅವನು ನನ್ನ ತಂದೆಯ ಪ್ರಾಣಸ್ನೇಹಿತನಾಗಿದ್ದ ಎಂದು ಒಣಗಿದ ಗಂಟಲಲ್ಲಿ ವಾದಿಸಿದ್ದ. ಅವತ್ತು ಸಿನಿಮಾಕ್ಕೆ ಕರೆದುಕೊಂಡು ಹೋಗಲಿಲ್ಲೆಂದು ಬುಸುಗುಡುತ್ತ ಮೀರ ಹೇಳಿದ್ದಳು:

‘ಯಾಕೆ ಮಾತಿನಲ್ಲಿ ತೀಟೆ ತೀರಿಸ್ಕೋತೀರಿ? ನೀವೂ ಒಂದು ಚೂರಿ ಹಿಡಿದು ಹೊರಡಿರಿ ಹಾಗಾದರೆ,’ ಕೃಷ್ಣಮೂರ್ತಿ ಮಂಕಾಗಿ ಯೋಚಿಸಿದ್ದ. ಗಂಗೂಬಾಯಿ, ನಾಯರ್ ನಂತವರ ಸ್ನೇಹ, ಆಕಾಶದ ಕಾಳರಂಧ್ರಗಳು- ಈ ಎಲ್ಲವೂ ಹಣಕ್ಕಾಗಿ ಪರದಾಡುವುದರ ಆಯಾಸವನ್ನು ಕೆಲವು ಕ್ಷಣ ಮರೆಸುವ ಸಾಧನಗಳೋ ಏನೋ. ಮದುವೆಗೆ ಮುನ್ನ ಸುಂದರವೂ ಕೋಮಲವೂ ಆಗಿದ್ದ ಮೀರಳ ಮುಖದಲ್ಲಿ ಈಗ ಸಿಟ್ಟು ಸ್ಥಾಯೀಭಾವವಾಗಿ ನಿಂತು ಗೆರೆಗಳನ್ನು ಕೊರೆಯುತ್ತಿವೆ. ಈ ಗೆರೆಗಳಲ್ಲೂ ಅವನು ಅಪ್ಪನ ಜೀವನ ಕ್ರಮದ ಅರ್ಥಹೀನತೆಯನ್ನು ಅರಿಯಲು ಪ್ರಯತ್ನಿಸುತ್ತಾನೆ. ನಿರ್ದಯವಾದ ಮಾತಾಡುವಾಗಲೂ ಕರುಣೆಯಿಂದ ನಗುವ ನಾಯರ್ ನ ಮುಖವನ್ನೂ ನೆನೆಯುತ್ತಾನೆ. ಆದರೆ ಅವನೊಬ್ಬ ಹಾಸ್ಯಾಸ್ಪದನಾದ ಎಕ್ಸೆಂಟ್ರಿಕ್ ಕೂಡ ಎಂದೂ ಅವನಿಗೆ ಅನ್ನಿಸುವುದರಿಂದ- ಅವನ ಪ್ರಶ್ನೆಗಳು ಗಂಟುಗಂಟಾಗುತ್ತ ಹೋಗುತ್ತವೆ. ಅನೇಕ ಸಾಧ್ಯತೆಗಳಿದ್ದ ಅಪ್ಪನ ಜೀವನ ಬರಡಾಯಿತೆ? ಯಾಕೆ? ನಾನೂ ಅವರ ಹಾದಿಯಲ್ಲಿ ಇದ್ದೇನೆಯೆ? ತಿಳಿಯುವುದಿಲ್ಲ.

ಪಂಚಭೂತಗಳಿಂದ ಪ್ರಾಪ್ತವಾದ ಈ ನಶ್ವರ ಶರೀರವನ್ನು ಮತ್ತೆ ಪಂಚಭೂತಗಳಿಗೆ ಒಪ್ಪಿಸಲೆಂದು ನದಿಯಲ್ಲಿ ಮುಳುಗುಹಾಕಿ, ಪಾಣಿಪಂಚೆಯುಟ್ಟು, ಹೊಳೆಯ ದಡದಲ್ಲಿ ಕಟ್ಟಿಗೆಯ ಮಂಚದ ಮೇಲೆ ನೀರಲ್ಲಿ ತೊಳೆದು ಮಲಗಿಸಿದ್ದ ದೇಹಕ್ಕೆ ತೂತು ಮಡಿಕೆಯಲ್ಲಿ ನೀರು ತುಂಬಿಸಿಕೊಂಡು ಸುತ್ತು ಬಂದು ಆ ಮಡಿಕೆಯನ್ನು ಒಡೆಯುವಂತೆ ಬೆನ್ನಿಂದ ಹಿಂದಕ್ಕೆ ಬಿಸಾಕಿ, ಸೀಮೆಎಣ್ಣೆ ಸುರಿದ ದೇಹಕ್ಕೆ ಬೆಂಕಿಹೊತ್ತಿಸಿ ಬಣ್ಣಬಣ್ಣದ ನೆಗೆಯುವ ಜ್ವಾಲೆಯನ್ನು ನೋಡುತ್ತ ಕೃಷ್ಣಮೂರ್ತಿ ಕೂತ. ಬೆಂಕಿ ಕ್ರಮೇಣ ಹರಡಿ, ಕ್ರಮೇಣ ಒಟ್ಟಾಗಿ, ವಟಗುಟ್ಟುತ್ತ ಮೊಗ್ಗಿನಂತೆ, ಹೂವಿನಂತೆ ಉರಿಯಿತು. ತಲೆಯ ಬುರುಡೆಗೆ ಅದರ ಸರ್ವಶಕ್ತನಾಲಗೆಗಳು ಅಮರಿಕೊಂಡವು. ತನಗಿನ್ನಷ್ಟು ಸಮಾಧಾನವಾಗಲೆಂದು ತಾನು ಜ್ವರದಲ್ಲಿದ್ದ ಬೆಳಿಗ್ಗೆ ಅವರು ಥರ್ಮಾಮೀಟರು ತಂದಿದ್ದನ್ನು ಇಷ್ಟಪಟ್ಟು ನೆನಸಿಕೊಳ್ಳುತ್ತಿದ್ದಾಗ, ಶವದ ಸುತ್ತಲೂ ಕೂತಿದ್ದ ಅಪ್ಪನ ಅಸಂಖ್ಯ ಸ್ನೇಹಿತರೂ ಹಿತೈಷಿಗಳೂ ತಮ್ಮ ಸಮಾಧಾನಕ್ಕಾಗಿ ಗಟ್ಟಿಯಾಗಿ ಮಾತಾಡಿಕೊಳ್ಳುತ್ತಿದ್ದರು. ಶವಸಂಸ್ಕಾರ ಹೇಗೊಂದು ಪಿಕ್ನಿಕ್ ಆಗಿಬಿಡುತ್ತದೆಂಬುದು ಸೋಜಿಗದ ಸಂಗತಿ ಎಂದು ಕೃಷ್ಣಮೂರ್ತಿಗೆ ಅನ್ನಿಸಿತು. ಯಾರೋ ಗಟ್ಟಿಯಾಗಿ ಹೇಳುತ್ತಿದ್ದರು. ಉಳಿದವರನ್ನು ಆರ್ಡಿಯನ್ಸ್ ಮಾಡಿಕೊಂಡು, ‘ಆಚಾರ್ಯರು ಬಹಳ ಜಾಣರು, ನಿಜವಾದ ಲೌಕಿಕರು. ಗೇಣಿಶಾಸನ ಬರುತ್ತದೆಂದು ಮೊದಲೇ ಅವರಿಗೆ ಗೊತ್ತಿತ್ತು. ರೈತಸಂಘ ಸ್ಥಾಪನೆಯಾಯ್ತಲ್ಲ, ಆ ಪೂಜಾರಿ ಜಾತಿಯ ವೆಂಕನಾಯ್ಕ ಶುರು ಮಾಡಿದನಲ್ಲ, ಉಳುವವನೇ ಹೊಲದೊಡೆಯ ಅಂತ, ಆಗಲೇ ಆಚಾರ್ಯರು ನಮ್ಮನ್ನೆಲ್ಲ ಕರೆಸಿಹೇಳಿದರು. ಈಗಲೇ ನಿಮ್ಮ ಮನೆಯ ಪಾಲು ಪಂಚಾಯ್ತಿ ಮಾಡಿಕೊಂಡು ಬಿಡಿ. ನಿಮಗೆ ನಿಜವಾಗಿ ಸಲ್ಲತಕ್ಕಷ್ಟನ್ನು ಇಟ್ಟುಕೊಂಡು ಎಷ್ಟು ಬೆಲೆ ಬರುತ್ತೊ ಅಷ್ಟಕ್ಕೆ ಉಳಿದದ್ದನ್ನು ಮಾರಿಬಿಡಿ. ಪಾಪ ನಿಮ್ಮ ರೈತನೇ ಕೊಂಡುಕೊಳ್ಳಲು ಇಷ್ಟಪಟ್ಟ ಎನ್ನಿ, ಅವನು ಬೆವರು ಸುರಿಸಿ ಬೆಳೆದದ್ದಲ್ಲವೆ-ಅವನಿಗೇ ಮಾರಿಬಿಡಿ. ಸ್ವಲ್ಪ ಕಡಿಮೆ ಬೇಕಾದರೂ ಅವ ಕೊಡಲಿ, ಕಂತಲ್ಲಾದರೂ ಕೊಡಲಿ-ಅವನಿಗೇ ಮಾರಿಬಿಡಿ. ಅವಕ್ಕೆ ಕೃತಜ್ಞತೆ ಇಲ್ಲಬಿಡಿ-ಆ ಮಾತು ಬೇರೆ. ಇಲ್ಲವಾದರೆ ರಕ್ತಪಾತವಾಗುತ್ತೆ ಅಂದರು. ಅವರ ಮಾತು ಕೇಳಿದ ನಾವು ಬುದುಕಿದೆವು. ಉಳಿದವರು ಇದ್ದದ್ದನ್ನೆಲ್ಲ ಕಳಕೊಂಡರು. ಎಂಥೆಂಥ ಫಟಿಂಗರನ್ನೂ ಅವರು ಕಾನೂನು ಜ್ಞಾನದಿಂದ ಬದುಕಿಸಿದ್ದಾರೆಂದರೆ, ಅವರಿಲ್ಲದಿದ್ದರೆ ಈ ರೈತಸಂಘದ ಪುಂಡಾಟಿಕೇಲಿ ನಾವು ಉಳಿಯೋದು ಸಾಧ್ಯವಿತ್ತ ಹೇಳಿ…’

ಅಪ್ಪನ ತಲೆ ಬುರುಡೆ ತೆಂಗಿನಕಾಯಿಯ ಕರಟದಂತೆ ಬಣ್ಣಬಣ್ಣವಾಗಿ ಉರಿದು ಸಿಡಿಯುವುದನ್ನು ನೋಡುತಿದ್ದ ಕೃಷ್ಣಮೂರ್ತಿಗೆ ‘ಇಷ್ಟೇ ನಿಜವಲ್ಲ’ ‘ಇಷ್ಟೇ ನಿಜವಲ್ಲ’ ಎಂದು ಕಿರುಚಿಕೊಳ್ಳಬೇಕೆನ್ನಿಸುತ್ತಿತ್ತು. ಇದನ್ನೂ ದೆಹಲಿಯ ಪ್ಲ್ಯಾಟಿನಲ್ಲವನು ನೆನಸುತ್ತಾನೆ. ಈ ಅರಿವು ಇತ್ಯಾದಿ ಬಗ್ಗೆ ಅವನ ಲೆಫ್ ಟಿಸ್ಟ್ ಮಿತ್ರರ ಜೊತೆ ಚರ್ಚಿಸಿ ಚರ್ಚಿಸಿ ಅತೃಪ್ತನಾಗಿಯೇ ಉಳಿಯುತ್ತಾನೆ.

ಶವವನ್ನು ಸಂಸ್ಕಾರಕ್ಕೆ ಕೊಂಡೊಯ್ದು ನಂತರ ಕೊಟ್ಟಿಗೆಯ ಆಚೆಗಿದ್ದ ಹಲಸಿನ ಮರ ಒಂದರ ಬುಡದಲ್ಲಿ ಹೋಗಿ ಗಂಗೂಬಾಯಿ ಕೂತಳು. ತನ್ನ ತೆಳ್ಳಗೆ ಬೆಳ್ಳಗೆ ಇದ್ದ ಉದ್ದನೆಯ ಮೈಯಿ, ಹಣೆಮೇಲಿನ ಕುಂಕುಮ, ವಯಸ್ಸು ನಲವತ್ತಾದರೂ ಸುಕ್ಕುಗಟ್ಟದೇ ಇದ್ದ ಮುಖ- ಇವು ಆಚಾರ್ಯರು ತನ್ನಿಂದ ಪಡೆದ ಸುಖವನ್ನು ಉಳಿದ ಹೆಂಗಸರು ಯೋಚಿಸುವಂತೆ ಮಾಡೀತೆಂದು ಅವಳಿಗೆ ಸಂಕೋಚವಾಗಿತ್ತು. ತಾನಿಲ್ಲದಿದ್ದರೆ ಹೆಂಗಸರು ನಿರ್ಭಿಡೆಯಿಂದ ಅತ್ತಾರು, ಅಳಲಿ; ಆಚಾರ್ಯರನ್ನು ಮುಕ್ತಕಂಠದಿಂದ ಹೊಗಳುವುದು ಸಾಧ್ಯವಾಗಲಿ; ತನ್ನಿಂದ ಕಳಂಕ ತಟ್ಟುವುದು ಬೇಡ ಎಂದು ಅವಳಿಗೆ ಅನ್ನಿಸಿತ್ತು.

ಅವಳಿಗೆ ಆಚಾರ್ಯರ ಬಾಲ್ಯ ಜೀವನ ಗೊತ್ತು. ಅವರು ಆಕೆಗೆ ಹೇಳದೇ ಇದ್ದ ಸಂಗತಿಯಿಲ್ಲ. ಆಕಾಶದ ಬಗ್ಗೆ ಅವಳ ಹತ್ತಿರ ಮಾತಾಡಬೇಕು. ಕಾನೂನಿನ ಬಗ್ಗೆ ಮಾತಾಡಬೇಕು. ತನ್ನ ಪ್ರೀತಿಯ ಮಗನ ಬಗ್ಗೆ ಮಾತಾಡಬೇಕು. ನಾಯರ್ ಬಗ್ಗೆ ಮಾತಾಡಬೇಕು. ಒಂದಲ್ಲ-ಎರಡಲ್ಲ.

ಇಪ್ಪತ್ತು ವರ್ಷಗಳ ಸಹವಾಸ ಪ್ರಾರಂಭವಾದದ್ದು ಶಿವಮೊಗ್ಗದಲ್ಲಿ ತನ್ನ ತಾಯಿ ಇಟ್ಟಿದ್ದ ಹೋಟೆಲಿನ ಮಹಡಿ ಮೇಲೆ ಅವರೊಂದು ಕಚೇರಿ ಸ್ಥಾಪಿಸಿದಾಗ. ಅದರ ಹೆಸರು ‘ಭೂಮಾಲೀಕರ ಸಂಘ’. ಆಚಾರ್ಯರು ಅದರ ಕಾರ್ಯದರ್ಶಿ. ಆಮೇಲೆ ಅದರ ಹೆಸರು ‘ಮಲೆನಾಡು ಬೆಳೆಗಾರರ ಸಂಘ’ವೆಂದು ಬದಲಾಯ್ತು. ಪ್ರೈಮರಿಶಾಲೆಯ ಉಪಾಧ್ಯಾಯಿನಿಯಾಗಿ ಆಗತಾನೇ ಸೇರಿದ್ದ ತಾನು ಮನೆಯನ್ನು ದೀಡು ಮಾಡಿಕೊಡುವುದಕ್ಕೆ ಅಗತ್ಯವಾದ ಪತ್ರವನ್ನು ಬರೆಸಲೆಂದು ಮೊದಲು ಆಚಾರ್ಯರನ್ನು ಭೆಟ್ಟಿಯಾದ್ದು. ತನಗೆ ಆಗ ಮದುವೆಯಾಗಿತ್ತು. ಆದರೆ ತಾಯಿಗೆ ತನ್ನ ಮಗಳನ್ನು ಯಾವನೋ ಒಬ್ಬ ಕ್ರೂರಿಗೆ ಎರಡನೇ ಸಂಬಂಧವಾಗಿ ಮಾಡಿಕೊಡುತ್ತಿದ್ದೇನೆಂಬ ಅರಿವು ಇರಲಿಲ್ಲ. ಗಂಡನ ಮನೆಯ ಹಿಂಸೆ ತಾಳಲಾರದೆ ಓಡಿಬಂದು ಶಾಲೆಯ ಉಪಾಧ್ಯಾಯಿನಿಯಾಗಿ ಸೇರಿದ್ದು. ಆಮೇಲಿಂದ ಆಚಾರ್ಯರು ತನಗೆ ಡೈವೋರ್ಸ್ ಪಡೆಯುವ ಉಪಾಯಗಳನ್ನೂ ಹೇಳಿಕೊಟ್ಟರು. ತಂದೆಯಿಲ್ಲದ ಅನಾಥೆ ಇಲ್ಲವಾದಲ್ಲಿ ಗಂಡನ ಮನೆಯ ಕೀಳು ಕೆಲಸದವಳಾಗಿ ಗೆಯ್ದುಕೊಂಡಿರಬೇಕಾಗಿ ಬರುತ್ತಿತ್ತು.

ಆಗಲೇ ಈ ಸಂಬಂಧ ಶುರುವಾದದ್ದು. ತಾಯಿ ಸತ್ತಮೇಲೆ ಹೋಟೆಲನ್ನು ಮುಚ್ಚಬೇಕಾಯಿತು. ಆಚಾರ್ಯರ ಸಹಾಯವನ್ನು ಪಡೆದು, ಇದ್ದಬದ್ದದುದ್ದೆಲ್ಲವನ್ನೂ ಕೂಡಿಸಿಕೊಂಡು ಹಸುಗಳನ್ನು ಸಾಕಿ ಹಾಲು ಮಾರಲು ಆಮೇಲಿಂದ ಪ್ರಾರಂಭ. ಕಟ್ಟಿಕೊಂಡ ಗಂಡನಿಗಿಂತ ಹೆಚ್ಚಿನವರಾದರು ಆಚಾರ್ಯರು. ಅವರಿಗೆ ಆಗುತ್ತಿರುವುದಕ್ಕಿಂತ ಹೆಚ್ಚಿನ ಅವಮಾನ ಆಗದೇ ಇರಲೆಂದು ಗಂಗೂಬಾಯಿ ಮಗು ಬೇಡವೆಂದು ಎರಡುಸಾರಿ ಬಸಿರಿಳಿಸಿಕೊಂಡದ್ದು. ಸಾಯುವಾಗ ಸಂಕೋಚಪಡದೆ ತನ್ನನ್ನು ಒಪ್ಪಿಕೊಂಡರಲ್ಲ-ಅದರಿಂದ ಧನ್ಯಭಾವ ಬಂದಂತಾಗಿದೆ.

ಅವರದೊಂದು ಸಾಹಸದ ಜೀವನ. ಅವರ ಅಪ್ಪ ರಾಮದೇವರ ಒಂದು ದೇವಸ್ಥಾನದ ಪೂಜಾರಿ. ಮನೆಯಲ್ಲೇ ಮಗನಿಗೆ ಮಂತ್ರ ತಂತ್ರಗಳ ವಿದ್ಯಾಭ್ಯಾಸ. ಈ ದೇವಸ್ಥಾನವಿದ್ದದ್ದು ಇಪ್ಪತ್ತು ಬ್ರಾಹ್ಮಣ ಮನೆಗಳಿದ್ದ ತುಂಗಾನದೀ ತೀರದ ಒಂದು ಹಳ್ಳಿಯಲ್ಲಿ. ವರ್ಷಕ್ಕೊಮ್ಮೆ ನಡೆಯುವ ಈ ದೇವಸ್ಥಾನದ ರಥೋತ್ಸವ ಆಸುಪಾಸಿನಲ್ಲೆಲ್ಲ ಹೆಸರಾದ್ದು. ಮನೆಯಲ್ಲಿ ಮಂತ್ರ ತಂತ್ರ ಕಲಿಯುತ್ತ, ಅವರಿವರ ಮನೆಗೆ ವ್ರತಗಿತ ಮಾಡಿಸಲು ಹೋಗುತ್ತ ಆಚಾರ್ಯರ ಬಾಲ್ಯ ಕಳೆಯಿತು. ಒಟ್ಟಿನಲ್ಲಿ ಅಪ್ಪನಿಗೆ ಸಹಾಯ ಮಾಡುವುದು ಈ ಏಕಮಾತ್ರ ಪುತ್ರನ ಕೆಲಸವಾಗಿತ್ತು. ಆಚಾರ್ಯರು ಮೊದಲಿಂದಲೂ ಅತೃಪ್ತರು. ಆಕಾಶದ ನಕ್ಷತ್ರಗಳನ್ನೆಲ್ಲ ಹೆಸರು ಹಿಡಿದು ಗುರುತಿಸುತ್ತಿದ್ದ ಅವರು ಇಡೀ ರಾತ್ರಿ ಒಮ್ಮೊಮ್ಮೆ ದೇವಸ್ಥಾನದ ಅಂಗಳದಲ್ಲಿ ಚಾಪೆಹಾಸಿ ಕೆಂಡಸಂಪಿಗೆ ಮರದಡಿಯಲ್ಲಿ ಕಣ್ಣುಬಿಟ್ಟು ಮಲಗಿರುತ್ತಿದ್ದುದು ಉಂಟು. ಒಂದಾನೊಂದು ದಿನ ಸತ್ಯನಾರಾಯಣ ವ್ರತ ಮುಗಿಸಿಕೊಂಡು ಹಳ್ಳಿ ದಾರಿಯಲ್ಲಿ ನಡೆದು ಬರುತ್ತಿದ್ದ ಆಚಾರ್ಯರಿಗೆ ಸೈಕಲ್ ಮೇಲೆ ಬರುತ್ತಿದ್ದ ಪಾದ್ರಿಯೊಬ್ಬ ಇಂಗ್ಲಿಷ್ ಭಾಷೆ ಕಲಿಯಬೇಕೆನ್ನುವ ಹುಚ್ಚು ಹಿಡಿಸಿದನಂತೆ. ಆಕಾಶದ ಹುಚ್ಚಿನ ಜೊತೆ ಈ ಹುಚ್ಚೂ ಸೇರಿ ದೇವಸ್ಥಾನದ ಕಂಬವೊಂದರ ಕೆಳಗೆ ಕೂತು ಗಂಧವನ್ನು ತೇಯುತ್ತ ಆಚಾರ್ಯರು ಏನೇನೋ ಕನಸು ಕಾಣಲು ಪ್ರಾರಂಭಿಸಿದರು. ದೂರದೂರದ ಊರುಗಳಿಂದ ಪೂಜೆ ಮಾಡಿಸಲು ಬರುತ್ತಿದ್ದ ವಿದ್ಯಾವಂತ ಆಸ್ತಿಕರಿಂದ ಇಂಗ್ಲಿಷ್ ಅಕ್ಷರ ಕಲಿತರು. ಓದುವುದಕ್ಕೆ ಹೇಳಿಸಿಕೊಂಡರು. ಇಂಗ್ಲಿಷ್ ಕನ್ನಡ ಸ್ವಯಂಬೋಧಿನಿ ತರಿಸಿಕೊಂಡು ಬರೆಯುವಷ್ಟು ಕಲಿತರು. ದೂರದ ಊರುಗಳಿಗೆ ಹೋಗಬೇಕೆಂಬ ಹಂಬಲ ಬೆಳೆಸಿಕೊಂಡರು.

ಆಚಾರ್ಯರಿಗೆ ಹದಿನಾರು ವಯಸ್ಸಿದ್ದಾಗಲೇ ಎಂಟುವರ್ಷ ವಯಸ್ಸಿನ ರುಕ್ಮಿಣಿಯಮ್ಮನ ಜೊತೆ ಮದುವೆಯಾಗಿತ್ತು. ಹೆಣ್ಣು ನೋಡಲೆಂದು ಅವರ ಅಪ್ಪ ಆಕೆಯ ಊರಿಗೆ ಹೋದಾಗ ಆಕೆ ಮಾವಿನ ಮರ ಒಂದನ್ನು ಹತ್ತಿ ಕೂತಿದ್ದಳಂತೆ. ಆಕೆಯ ತಂದೆ ‘ಗೋಪಾಲಾಚಾರ್ಯರ ಮನೆ ದಾರಿ ಎಲ್ಲಿ?’ ಎಂದು ಕೇಳಿದಾಗ ಮಾವಿನ ಹಣ್ಣು ತಿನ್ನುತ್ತ ಮರದ ಮೇಲೆ ಕೂತ ಈ ಹುಡುಗಿಯೇ ‘ಅಕೋ ಅಲ್ಲಿ’ ಎಂದು ತೋರಿಸಿದ್ದಂತೆ. ಈಗ ಅಂಥ ಸಂತೋಷಗಳೇ ಇರದಿದ್ದ ಹೆಂಗಸಿನಂತೆ ಅವರು ಕಾಣುತ್ತಾರೆ. ಮೈನೆರೆಯದ ಹುಡುಗಿಯಲ್ಲವೆ? ಮದುವೆಯಾದ ಮೇಲೆ ಐದಾರು ವರ್ಷ ಆಕೆ ತೌರಲ್ಲೇ ಉಳಿದಳು. ಮದುವೆಯಾದ್ದರಿಂದ ಆಚಾರ್ಯರಿಗೆ ವಿವಾಹದ ಪೌರೋಹಿತ್ಯಗಳೂ ಸಿಗುವಂತಾಗಿ ವರಮಾನ ಹೆಚ್ಚಾಯಿತು.

ಈ ನಡುವೆ ಆಚಾರ್ಯರ ಜೀವನದಲ್ಲೊಂದು ಮಹತ್ತರವಾದ ಘಟನೆ ನಡೆಯಿತು. ಆ ಹಳ್ಳಿಯಲ್ಲೆಲ್ಲ ತುಂಬ ಶ್ರೀಮಂತ ಬ್ರಾಹ್ಮಣರ ಮನೆಯೊಂದಿತ್ತು-ದೇಶಸ್ಥ ಜಾತಿಯವರದ್ದು. ರಾಮದೇವಸ್ಥಾನದ ಯಜಮಾನರೆಂದರೆ ಅವರೇ. ಮೊದಲು ಅವರಿಗೇ ತೀರ್ಥವಾಗಬೇಕು. ಆ ಮಹಾಶಯನ ಹೆಂಡತಿ ಕುರುಡಿಯಾಗಿ ಬಿಟ್ಟಿದ್ದಳಂತೆ. ಅವರಿಗೆ ತುಂಬ ಚೆಲುವಿಯಾದ ಒಬ್ಬಳೇ ಮಗಳು-ಗಂಡುಮಕ್ಕಳಿಲ್ಲ. ಆದ್ದರಿಂದಲೇ ಏನೋ ಮಗಳು ಒಳಗೆ ಉಳಿಯಲಿ ಎಂದು ಅವಳ ಸೋದರಮಾವನಿಗೇ ಕೊಟ್ಟು ಮದುವೆ ಮಾಡಿದ್ದು.

ಹತ್ತು ವರ್ಷ ಗಂಡನ ಮನೆಯಲ್ಲಿದ್ದು ಬೇಸತ್ತು ಅವಳು ತಂದೆಯ ಮನೆಗೇ ಬಂದು ಬಿಟ್ಟಳು. ಅವಳಿಗೆ ಮಕ್ಕಳಾಗದ್ದು ನೋಡಿದರೆ ಗಂಡನೇನಾದರೂ ಷಂಡನೋ ಎಂದು ಊರಲ್ಲಿ ಎಲ್ಲರಿಗೂ ಅನುಮಾನ. ತಂದೆ ಬಹಳ ವ್ಯಥೆಪಟ್ಟು ಕೊರಗಿ ಕಣ್ಣುಮುಚ್ಚಿಯಾದ ಮೇಲೆ ಆ ದೊಡ್ಡ ಅರಮನೆಯಂಥ ಮನೆಗೆಲ್ಲ ಇಬ್ಬರೇ ಆದರು: ಕುರುಡಿಯಾದ ತಾಯಿ ಮತ್ತು ಮಗಳು. ಮತ್ತೆ ಆ ಮೂಲೆ ಈ ಮೂಲೆ ಹಿಡಿದು ಕೂತಿರುವ ಅಡುಗೆ ಮಾಡಲು ಸೇರಿಕೊಂಡ ಅನಾಥ ವಿಧವೆಯರು ಮತ್ತು ಚಾವಡಿಯಲ್ಲಿ ಮಲಗಿರುತ್ತಿದ್ದ ಉಂಡು ಹೋಗಲು ಬರುವ ಸಂಭಾವನೆಯವರು, ದೇವಸ್ಥಾನದ ಅರ್ಚನೆಗೆ ಬರುವ ಪಟ್ಟಣದ ಶ್ರೀಮಂತರು-ಹೀಗೆ ಹೊರಗಿನವರೇ ಆ ಮನೆಯಲ್ಲಿ ಇರುತ್ತಿದ್ದದ್ದು. ದೊಡ್ಡ ದೊಡ್ಡ ದೇವರ ಪಠಗಳನ್ನು ಹಾಕಿದ, ಬೆಳ್ಳಿಕಟ್ಟಿದ ಮಣೆಗಳನ್ನು ಒರಗಿಸಿಟ್ಟ, ಉಯ್ಯಾಲೆಗಳಿದ್ದ ಎತ್ತರವಾದ ಮನೆ ಅದು.

ಆಚಾರ್ಯರಿಗಿಂತ ಈ ಹುಡುಗಿ ನಾಲ್ಕು ವರ್ಷವಾದರೂ ದೊಡ್ಡವಳು. ಅಲಕಾದೇವಿ ಎಂದು ಅವಳ ಹೆಸರು. ದೇವಸ್ಥಾನದಲ್ಲಿ ಪೂಜೆಯಾದ ಮೇಲೆ ಅವರ ಮನೆ ದೇವರ ಪೂಜೆಗೆ ನೈವೇದ್ಯಕ್ಕೆ ಆಚಾರ್ಯರು ಹೋಗಬೇಕು. ಆಚಾರ್ಯರಿಗೆ ಹದಿನೆಂಟೋ ಹತ್ತೊಂಬತ್ತೋ ವಯಸ್ಸು. ಅಲಕಾದೇವಿ ಯಾವತ್ತೂ ರೇಷ್ಮೆಯ ಪತ್ತಲ ಉಟ್ಟು, ಆಗಿನ ಕಾಲಕ್ಕೆ ಫ್ಯಾಶನ್ ಆದ ವಾರೆಬೈತಲೆ ತೆಗೆದು, ಉಬ್ಬಿದ ತೋಳುಗಳ ಕುಪ್ಪಸ ತೊಟ್ಟಿರುವುದು. ಅಲಕಾದೇವಿಗೂ ಅಷ್ಟಿಷ್ಟು ಇಂಗ್ಲಿಷ್ ಓದಲು ಬರುತ್ತಿತ್ತು-ಮುದ್ದಿನ ತಂದೆ ಕಲಿಸಿಕೊಟ್ಟದ್ದು. ಆಕೆ ತಂದೆಯ ಲೈಬ್ರರಿಯಿಂದ ಡ್ಯೂಮಾ, ಸ್ಕಾಟ್, ಗೋಲ್ಡ್ ಸ್ಮಿತ್ ಇತ್ಯಾದಿ ಪುಸ್ತಕಗಳನ್ನು ಆಚಾರ್ಯರಿಗೆ ಓದಲು ಕೊಡುವುದು. ಅವನ್ನು ಆಚಾರ್ಯರು ಇಂಗ್ಲಿಷೆಂದರೆ ಮೈಲಿಗೆಯೆಂದು ತಿಳಿದ ಅಪ್ಪನಿಗೆ ಗೊತ್ತಾಗದಂತೆ ಓದುವುದು, ಓದಿದ್ದನ್ನು ಮೊದಲು ಹೆದರುತ್ತ ಆಮೇಲೆ ಉಯ್ಯಾಲೆ ಮೇಲೆ ಕೂತು ತೂಗಿಕೊಳ್ಳುವ ಅಲಕಾವತಿಗೆ ನಿರ್ಭಿಡೆಯಿಂದ ವಿವರಿಸುತ್ತ ಅವಳ ಕಣ್ಣುಗಳು ಬೆರಗಿನಲ್ಲಿ ತೆರೆಯುವಂತೆ ಮಾಡುವುದು. ಹೀಗೆ ಆ ಕಾಡಿನಿಂದ ಆವೃತವಾದ ಹಳ್ಳಿಯಲ್ಲಿ ರಾಮದೇವರ ಮೌನ ಸಾನ್ನಿಧ್ಯದಲ್ಲಿ ಅಲಕಾದೇವಿ ಅವರ ಕನಸಿನ ರಾಣಿಯಂತೆ ಬೆಳೆಯುತ್ತ ಹೋದಳು.

ತಾವಿಬ್ಬರೂ ಈ ಅದ್ಭುತ ಕಥೆಗಳ ಪಾತ್ರಗಳೆಂಬಂತೆ ಅಲಕಾವತಿ ವರ್ತಿಸುವುದು. ಕಚ್ಚೆಹಾಕಿ ಪಂಚೆಯುಟ್ಟು ಮೈಮೇಲೆ ಬಿಳಿ ಧೋತ್ರ ಹೊದ್ದು, ದೊಡ್ಡ ಜುಟ್ಟನ್ನು ಗಂಟು ಕಟ್ಟಿ ಮನೆಗೆ ಬರುತ್ತಿದ್ದ ಆಚಾರ್ಯರನ್ನು ಅವಳು ಛದ್ಮವೇಶದಲ್ಲಿದ್ದ ರಾಜಕುಮಾರನೆಂದೋ ಯೋಧನೆಂದೊ ತಿಳಿದಿದ್ದಳು. ಇಪ್ಪತ್ತೆರಡು ವರ್ಷದ ಈ ಚೆಲುವೆಯ ತಾಯಿ ಕುರುಡಿಯಲ್ಲವೆ? ಈ ಶ್ರೀಮಂತಳಿಗೆ ಹೇಳುವವರು ಯಾರು ಕೇಳುವವರು ಯಾರು? ದಿನಕ್ಕೊಂದು ಪತ್ತಲವುಟ್ಟು ಉಯ್ಯಾಲೆಯಲ್ಲಿ ತೂಗಿಕೊಳ್ಳುತ್ತ, ಪಂಜರದಲ್ಲಿಟ್ಟ ಗಿಣಿಯನ್ನು ಮಾತಾಡಿಸುತ್ತ ಅಲಕಾದೇವಿ ಆಚಾರ್ಯರು ತರುವ ತೀರ್ಥಕ್ಕೆ ಕಾಯುವುದು. ತೀರ್ಥ ಕುಡಿದು ಪ್ರಸಾದವನ್ನು ಹೆರಳಿಗೆ ಮುಡಿದಾದ ಮೇಲೆ, ಆಚಾರ್ಯರನ್ನು ಪಕ್ಕದಲ್ಲಿ ಕೂರಿಸಿಕೊಂಡು ಅವಳ ವಿಶಾಲವಾದ ಕೊಠಡಿಯಲ್ಲಿ ತೂಗಿಕೊಳ್ಳುತ್ತ ದೇಶಾಂತರದ ವಿಷಯಗಳನ್ನು ಮಾತನಾಡುವುದು.

ಈ ಘಳಿಗೆಗಾಗಿ ಆಚಾರ್ಯರು ಇಡೀ ದಿನ ಕಾದಿರುತ್ತಿದ್ದರು. ವ್ರತ ಮಾಡಿಸಲೋ ಮದುವೆ ಮಾಡಿಸಲೋ ಬೇರೆ ಊರಿಗೆ ಹೋಗಬೇಕಾಗಿ ಬಂದರೆ ಅವರಿಗೆ ತುಂಬ ಬೇಸರವಾಗಿಬಿಡುತ್ತಿತ್ತು. ಅಲಕಾವತಿಗೆ ಸಿಟ್ಟುಬಂದುಬಿಡುತ್ತಿತ್ತು. ನಿಮಗೊಂದು ಕುದುರೆ ಕೊಡಿಸುತ್ತೇನೆ ಎಂದೂ ಅವಳು ಅಂದದ್ದು ಇದೆಯಂತೆ-ಎಲ್ಲಿ ಹೋದರೂ ಬೇಗ ಹಿಂದಕ್ಕೆ ಬರುವುದು ಸಾಧ್ಯವಾಗಲಿ ಎಂದು.

ಅವರಿಬ್ಬರ ಸಂಬಂಧ ಎಲ್ಲ ನಮೂನೆಯ ಹಂತಗಳಲ್ಲೂ ಬೆಳೆಯಿತು. ಒಡತಿ ಮತ್ತು ಆಪ್ತಸೇವಕ, ರಾಣಿ ಮತ್ತು ಯೋಧ, ದೇವಿ ಮತ್ತು ಭಕ್ತ, ಕಾದಂಬರಿಯ ನಾಯಕಿ ಮತ್ತು ನಾಯಕ-ಹೀಗೆ. ಸಾಯಂಕಾಲ ಹಸುಗಳು ಕೊರಳಿನ ಗಂಟೆ ಸದ್ದು ಮಾಡುತ್ತ ಹಿಂದಕ್ಕೆ ಬರುವಾಗ, ಬೆಳದಿಂಗಳಿನ ರಾತ್ರೆ ತೇನೆ ಮೈಮರೆತು ಕೂಗುವಾಗ, ಡಿಸೆಂಬರಿನ ಚಳಿಯಲ್ಲಿ ಮಾವಿನ ಮರಗಳೆಲ್ಲ ಹೂಬಿಟ್ಟಾಗ, ಮೌನದ ನಡುರಾತ್ರೆಯಲ್ಲಿ ತುಂಗೆ ಹರಿಯುವ ಶಬ್ದ ಕೇಳಿಸುವಾಗ ಆಚಾರ್ಯರು ಒಂದು ಬಗೆಯ ಅಲೌಕಿಕ ಬೇಗೆಯಿಂದ ಒದ್ದಾಡುವರು. ಅವರ ಈ ಬೇಗೆಗೆ ಕಾರಣ: ಅಲಕಾದೇವಿ ಮತ್ತು ಆಕಾಶವನ್ನು ತಿಳಿಯುವ ಹಸಿವು ಆಗಿದ್ದವು.

ತನ್ನ ಕಿರಿ ಬೆರಳು ಅವಳಿಗೆ ತಾಕಿದರೂ ತಾನು ಉರಿದುಹೋಗಿಬಿಡುವೆ ಎಂದು ಆಚಾರ್ಯರು ಹೆದರುತ್ತಿದ್ದರಂತೆ. ಅಲಕಾದೇವಿ ಅವರಿಗೆ ಸೂಚ್ಯವಾಗಿ ಎಲ್ಲ ಹೇಳಿದ್ದಳು. ತನ್ನ ಗಂಡನಿಗೆ ಪುರುಷತ್ವ ಸಾಲದ್ದರಿಂದ ತಾನು ಅಕ್ಷತಕನ್ನೆಯಾಗಿಯೇ ಉಳಿದಿದ್ದೇನೆ ಎಂದೂ ಹೇಳಿದ್ದಳು. ಪುರುಷತ್ವ ಕಡಿಮೆ ಎಂದರೆ ಏನು ಅರ್ಥವೆಂದು ಆಚಾರ್ಯರು ತುಂಬ ದಿಗಿಲು ಪಟ್ಟಿದ್ದರಂತೆ. ಒಂದು ದಿನ ಮಧ್ಯಾಹ್ನ ಯಥಾಪ್ರಕಾರ ತೀರ್ಥ ತೆಗೆದುಕೊಂಡು ಮಹಡಿ ಹತ್ತಿ ಅಲಕಾವತಿಯ ಕೋಣೆಗೆ ಹೋದಾಗ ಅವಳು ತನ್ನ ದೊಡ್ಡ ಕಣ್ಣುಗಳನ್ನು ತೆರೆದು, ‘ನನಗೊಂದು ಉಪಕಾರ ಮಾಡುತ್ತೀರ?’ ಎಂದಳಂತೆ. ಆಚಾರ್ಯರು ಆಗಲಿ ಎನ್ನುವಂತೆ ತಟ್ಟೆಯ ತೀರ್ಥ ಹಿಡಿದು ನಿಂತಿದ್ದಾಗ ‘ನನ್ನನ್ನು ಮುಟ್ಟಿದರೆ ಈಗ ನೀವು ಮತ್ತೆ ಸ್ನಾನಮಾಡಬೇಕ?’ ಎಂದಳಂತೆ. ಮಾಡಿದರಾಯಿತು. ಹಾಗಾದರೆ ತಟ್ಟೆಯನ್ನು ಅಲ್ಲಿಟ್ಟು ಗಂಧವನ್ನು ತನ್ನಿ. ನನ್ನ ಬೆನ್ನಿನ ಮೇಲೊಂದು ಕುರ ಎದ್ದಿದೆ. ಅದಕ್ಕೆ ಗಂಧ ಹಚ್ಚುತ್ತೀರ? ಆಚಾರ್ಯರು ಕೆಂಪಾದರು. ‘ಆಗಲಿ’ ಎಂದರು. ಅವರ ಮುಖ ನೋಡಿ ಅಲಕಾವತಿ ನಗುತ್ತ.

‘ನೀವು ಒಳ್ಳೆಯವರಲ್ಲವ? ನನ್ನ ಬೆನ್ನನ್ನು ನೋಡದಂತೆ ಕಣ್ಣುಮುಚ್ಚಿಕೊಂಡು ಹಾಗಾದರೆ ಹಚ್ಚುತ್ತೀರಲ್ಲ?’ ಎಂದು ಬೆನ್ನು ತಿರುಗಿಸಿ ಸೆರಗನ್ನೂ ಇಳಿಬಿಟ್ಟು ರವುಕೆಯ ಗುಂಡಿ ಬಿಚ್ಚಿದಳು. ಹಾಲಿನ ಬಣ್ಣದ ಚರ್ಮದ ಬೆನ್ನಿನ ಬಲ ಮೂಲೆಯಲ್ಲಿ ಕೆಂಪಗಿದ್ದ ಒಂದು ಗುಳ್ಳೆಯಿತ್ತು. ಆಚಾರ್ಯರು ನಡುಗುತ್ತಿದ್ದ ಕೈಯಿಂದ ಅದಕ್ಕೆ ಗಂಧವನ್ನು ಮೃದುವಾಗಿ ಹಚ್ಚುತ್ತಿದ್ದಾಗ ಅಲಕಾವತಿ ಥಟ್ಟನೆ ತಿರುಗಿ ಅವರ ಮುಖವನ್ನು ತನ್ನ ಎರಡು ಕೈಗಳಿಂದಲೂ ಅದೊಂದು ಮಗುವಿನ ಮುಖವೆಂಬಂತೆ ಹಿಡಿದು,

‘ನಾನು ಕೆಟ್ಟವಳು ಅಲ್ಲವಾ? ‘ಎಂದಳು. ಆಗ ಅವಳ ಮುಖ ಗೆಲುವಿನಿಂದ ನಗುತ್ತಿತ್ತಂತೆ. ಆಚಾರ್ಯರಿಗೆ ಮೈಯೆಲ್ಲ ಬೆವತಂತಾಗಿ, ಅವಳ ತೋಳುಗಳನ್ನು ಹಿಡಿದು ನಿಲ್ಲಿಸಿ, ತಾವೂ ಅವಳ ಎದುರು ನಿಂತರಂತೆ. ಮುಂದೇನು ತಿಳಿಯುವುದರ ಒಳಗೆ ಅವಳನ್ನು ತಬ್ಬಿದ್ದರಂತೆ. ಆಗ ಮೃದುವಾಗಿ ತನ್ನನ್ನು ಒತ್ತಿಕೊಂಡ ಅಲಕಾವತಿಯ ದೇಹದಲ್ಲಿ ತಾನು ಕರಗಿ ಹೋಗುತ್ತಿದ್ದಂತೆ ಭಾಸವಾಗಿ, ಇಡೀ ಮೈಯೆಲ್ಲ ಕಂಪಿಸಿ ಅವರ ಮೈ ಇಳಿದುಬಿಟ್ಟಿತಂತೆ. ಪುಣ್ಯದಿಂದ ಇದು ಅಲಕಾವತಿಗೆ ತಿಳಿಯದಿರಬಹುದು ಎಂದು ಕೊಂಡು ಉಯ್ಯಾಲೆ ಮೇಲೆ ಕುಸಿದು ಕೂತರಂತೆ. ಅಲಕಾವತಿ ಅವರ ಕಾಲು ಬುಡದಲ್ಲಿ ಬಂದು ಕೂತಳಂತೆ.

ಅಲ್ಲಿಂದ ಪ್ರಾರಂಭವಾಯಿತು ಅವಳ ಬಗ್ಗೆ ಅದಮ್ಯ ಬಯಕೆ, ಜೊತೆಗೇ ಭಯ, ಮಾರನೇ ದಿನ ತೀರ್ಥಕೊಡಲು ಬಂದಾಗ ಸಂಪೂರ್ಣ ಸೆರಗು ಹೊದ್ದು ತಾನೊಬ್ಬ ಪುಟ್ಟ ಹುಡುಗಿ ಎಂದು ಭಾಸವಾಗುವಂತೆ, ಅಕ್ಕರೆ ಹುಟ್ಟಿಸುವಂತೆ ಮುದುಡಿ ಕೂತಿದ್ದಳು. ನಡುಗುವ ಕೈಯಿಂದ ಆಚಾರ್ಯರು ಅವಳಿಗೆ ತೀರ್ಥ ಮತ್ತು ಕೆಂಡಸಂಪಿಗೆ ಹೂಗಳನ್ನು ಕೊಟ್ಟು ಏನು ಮಾತಾಡಲೂ ತೋಚದೆ ಹಿಂದಕ್ಕೆ ಬಂದರು. ಇಡೀ ದಿನ ಅವಳನ್ನು ಕೂಡುವ ಬಯಕೆ ಆಚಾರ್ಯರಲ್ಲಿ ಬೆಳೆಯುತ್ತ ಹೋಯಿತು. ರಾತ್ರೆ ದೇವಸ್ಥಾನದ ಅಂಗಳದಲ್ಲಿ, ಕೆಂಡಸಂಪಿಗೆ ಮರದ ಬುಡದಲ್ಲಿ. ಚಂದ್ರನಿಲ್ಲದೆ ನಕ್ಷತ್ರಗಳಿಂದ ಉಕ್ಕುವ ಕಪ್ಪಾದ ಆಕಾಶ ನೋಡುತ್ತ ದೆವ್ವ ಬಡಿದವರಂತೆ ಮಲಗಿದ್ದಾಗ ಅಲಕಾವತಿಯನ್ನು ಕೂಡುವ ಬಯಕೆ ತಡೆಯದಾಗಿ ಎದ್ದು ಕೂತರು. ಕತ್ತಲೆಯಲ್ಲಿ ಆವೇಶದಲ್ಲಿ ಬಸುಗುಡುತ್ತ ಅವಳ ಮನೆಕಡೆ ನಡೆದರು. ಅರ್ಧರಾತ್ರೆಯಾಗಿದ್ದರಿಂದ ಒಂದು ನರಹುಳ ಹೊರಗಿರಲಿಲ್ಲ. ಅಲಕಾವತಿಯ ಮನೆ ಮುಂದೆ ನಿಂತರು. ಹೆಬ್ಬಾಗಿಲನ್ನು ತಟ್ಟಿ ತೆರೆಸುವಂತಿಲ್ಲ. ಹಿಂದಿನ ದಿನ ಸುಣ್ಣ ಹೊಡೆಯುತ್ತಿದ್ದವರು ಮನೆಯ ಹಿಂದೆ ಇಟ್ಟಿದ್ದ ಏಣಿಯನ್ನು ಹತ್ತಿ ಬಟ್ಟೆ ಒಣಗಿ ಹಾಕುವ ಅಟ್ಟದಲ್ಲಿ ಇಳಿದರು. ಅಲ್ಲಿಂದ ಮೆತ್ತನೆಯ ಹೆಜ್ಜೆಗಳನ್ನಿಡುತ್ತ, ಹೊಡೆದುಕೊಳ್ಳುತ್ತಿದ್ದ ಎದೆಯನ್ನು ಶಲ್ಯದಿಂದ ಒತ್ತಿ ಹಿಡಿದು, ಮಹಡಿಯನ್ನು ಬಳಸಿ ಅಲಕಾವತಿ ಮಲಗುವ ಕೋಣೆಗೆ ಬಂದರು.

ಅವಳು ಮಂಚದ ಮೇಲೆ ಮಲಗಿದ್ದಳು. ಪಕ್ಕದಲ್ಲಿ ಲಾಟೀನು ಉರಿಯುತ್ತಲೇ ಇತ್ತು. ಅವಳ ಎದೆಯ ಮೇಲೊಂದು ಓದುತ್ತಿದ್ದ ಪುಸ್ತಕ ಬಿಡಿಸಿಕೊಂಡಿತ್ತು. ಪಂಜರದಲ್ಲಿದ್ದ ಗಿಣಿ ರೆಕ್ಕೆಯನ್ನು ಬಡಿದು ಸದ್ದುಮಾಡಿತು. ಆಚಾರ್ಯರು ಅಲಕಾವತಿಯ ಶಾಂತವಾದ ಮುಖವನ್ನೆ ನೋಡುತ್ತ ಎಷ್ಟೋ ಹೊತ್ತು ನಿಂತೇ ಇದ್ದರು. ಮೆತ್ತಗೆ ಅಲಕಾವತಿ, ಅಲಕಾವತಿ ಎಂದು ಕರೆದರು. ಅವಳಿಗೆ ಎಚ್ಚರಿಲ್ಲದಿದ್ದಾಗ ಅವಳ ಮೈಯನ್ನು ಮುಟ್ಟಿ ಎಬ್ಬಿಸುವುದು ಸರಿಯಲ್ಲವೆನ್ನಿಸಿತು. ದೇವರ ನಾಮಸ್ಮರಣೆ ಮಾಡುವಂತೆ ನೂರುಬಾರಿಯಾದರೂ ಅವರು ಅಲಕಾವತಿ ಅಲಕಾವತಿ ಎಂದು ಕರೆದಿರಬೇಕು. ಅಲಕಾವತಿ ಮೆಲ್ಲನೆ ಕಣ್ಣುತೆರೆದು, ಎದುರಿಗಿದ್ದವರನ್ನು ಗಾಬರಿ ಪಟ್ಟುಕೊಳ್ಳದೆ ಗುರುತಿಸಿ, ಈ ಪೂಜೆ ತನಗೆ ಸಲ್ಲತಕ್ಕದ್ದು ಎಂಬಂತೆ ಆಚಾರ್ಯರ ಕೈಯನ್ನು ಹಿಡಿದು ತನ್ನ ಪಕ್ಕದಲ್ಲಿ ಕುಳ್ಳಿರಿಸಿಕೊಂಡಳು. ಆಚಾರ್ಯರು ಆಗ ಮೈಮೇಲೆ ಬಂದವರಂತೆ ಇದ್ದರೇ ವಿನಹ ಮನುಷ್ಯರಾಗಿರಲಿಲ್ಲ. ಬುಸುಗುಡುತ್ತ ನಿಸ್ಸಹಾಯಕರಂತಿದ್ದ ಅವರನ್ನು ಪಕ್ಕದಲ್ಲಿ ಮಲಗಿಸಿಕೊಂಡು ಮೈತಡವಿ ಸಂತೈಸುತ್ತ ಹೇಳಿದಳಂತೆ: ನಿಮ್ಮನ್ನು ನಾನು ಮನಸ್ಸಿನಲ್ಲಿ ವರಿಸಿದ್ದೇನೆ. ಆದರೆ ಮೈಯಲ್ಲಿ ವರಿಸಲಾರೆ ಅಂತ. ಪಕ್ಕದಲ್ಲಿ ಮಲಗಿದ್ದ ಆಚಾರ್ಯರು ಅದಕ್ಕಿಂತ ಮುಂದಿನದನ್ನು ಬಯಸಲಾರದಷ್ಟು ತೀವ್ರ ತುದಿಯನ್ನು ಮುಟ್ಟಿಬಿಟ್ಟಿದ್ದರು. ಆದರೆ ಮಾರನೇ ದಿನ ಹೀಗೆಯೇ ಅರ್ಧರಾತ್ರೆಯ ನಂತರ ಹೋದವರು ಅವಳ ಮೈಯನ್ನು ಕೂಡುವುದನ್ನೂ ಬಯಸಿದರು. ಅಲಕಾವತಿ ಮೃದುವಾಗಿ ಅವರನ್ನು ಬೇಡವೆಂದು ತಳ್ಳಿದಳು. ಅದರ ಮಾರನೇ ದಿನ ಮಧ್ಯಾಹ್ನ ತೀರ್ಥ ಕೊಡಲು ಹೋದವರೇ ಅವಳನ್ನು ಗಟ್ಟಿಯಾಗಿ ಅಪ್ಪಿ ತನ್ನನ್ನು ಕೂಡುವಂತೆ ಬೇಡಿಕೊಂಡರು. ಅವಳು ಮುಂದೆ ಏನೆಂದು ಕಾತರಳಾಗಿ ಕೇಳಿದಳು. ಆಚಾರ್ಯರು ‘ಮದುವೆಯಾಗೋಣ’ ಎಂದರು. ಅಲಕಾವತಿ ಅದೆಲ್ಲಿ ಸಾಧ್ಯ? ಎಂದು ನಿಟ್ಟುಸಿರಿಟ್ಟಳು. ಅವಳು ಹೇಳಿದಂತೆ ಅದು ಸಾಧ್ಯವಿರಲಿಲ್ಲ. ಆಚಾರ್ಯರು ದೇವಸ್ಥಾನದ ಪೂಜಾರಿ, ಮದುವೆಯಾದವರು, ಅದಕ್ಕೂ ಮಿಗಿಲಾಗಿ ಅಲಕಾವತಿ ವಿವಾಹಿತ ಹೆಣ್ಣು. ಅವರಿಗಿಂತ ವಯಸ್ಸಾದವಳು. ಆಚಾರ್ಯರು ಅಮೇಲಿಂದ ಭ್ರಾಂತರಂತೆ ಆಗಿಬಿಟ್ಟರು. ಸಮಯ ಸಿಕ್ಕಾಗಲೆಲ್ಲ ಹೋಗಿ ಅಲಕಾವತಿಯನ್ನು ಅಂಗಲಾಚಲು ಶುರು ಮಾಡಿದರು. ಅವಳು ಅವರನ್ನು ಮುದ್ದಿಸುತ್ತಿದ್ದಳಂತೆ. ಆದರೆ ಅವರು ತನ್ನಲ್ಲಿ ಪರವಶರಾಗುತ್ತ ಹೋದಂತೆ ಹಿಂದೆ ಸರಿದುಬಿಡುತ್ತಿದ್ದಳಂತೆ. ಹೀಗೇ ಎರಡು ತಿಂಗಳು ಕಳೆದ ಆಚಾರ್ಯರು ಸೊರಗುತ್ತ ಹೋದರಂತೆ. ಒಂದು ದಿನ ಅಲಕಾವತಿಯೇ ಆಚಾರ್ಯರಿಗೆ ನೀವು ಈ ಊರು ಬಿಟ್ಟುಹೋಗಿ ಎಲ್ಲಾದರೂ ಕೆಲಸಕ್ಕೆ ಸೇರಿಕೊಳ್ಳಿ. ಆಮೇಲೆ ನನ್ನನ್ನು ಕರೆಸಿಕೊಳ್ಳಿ ಎಂದಳಂತೆ.

ಆಚಾರ್ಯರಿಗೆ ಅದು ಸರಿ ಎನ್ನಿಸಿತು. ಊರುಬಿಟ್ಟು ತಾನು ಓಡಿಹೋಗುವ ದಿನವನ್ನು ನಿರ್ಧರಿಸುತ್ತಿದ್ದಂತೆಯೇ ಅಲಕಾವತಿ ಅವರನ್ನು ಪೀಡಿಸಲು ಶುರುಮಾಡುತ್ತಿದ್ದಳಂತೆ. ನನ್ನಿಂದ ದೂರವಾಗಲು ನೀವು ಹೋಗುತ್ತಿರೋದು. ಆಮೇಲೆ ಮರೆತು ಬಿಡುತ್ತೀರಿ ಎಂದು. ಆಚಾರ್ಯರು ಹೋಗಲ್ಲ-ಬೇಡ ಎಂದು ಅವಳನ್ನು ಕೂಡುವ ಬಯಕೆ ವ್ಯಕ್ತಪಡಿಸಿದಾಗ ‘ನಿಮಗೆ ಬೇಕಾಗಿರೋದು ಈ ನನ್ನ ಮೈಮಾತ್ರ ಅಲ್ಲವ?’ ಎನ್ನುತ್ತಿದ್ದಳಂತೆ.

ಒಂದು ದಿನ ಆಚಾರ್ಯರು ಹಳ್ಳಿಯನ್ನು ತೊರೆದು ಹೊರಟೇ ಹೋದರು. ಅಲಕಾವತಿ ಅವರ ಪ್ರಯಾಣದ ಖರ್ಚಿಗೆ ಬೇಕಾದ ಹಣವನ್ನು ಕೊಟ್ಟಿದ್ದಳು. ತನ್ನನ್ನು ಬೇಗ ಕರೆಸಿಕೊಳ್ಳಿರೆಂದು ಅತ್ತು ಕರೆದಿದ್ದಳು. ಹೊರಡುವ ಹಿಂದಿನ ರಾತ್ರೆ ಕೂಡುವ ಬಯಕೆಯನ್ನೂ ತೋರಿಸಿದ್ದಳು. ಆದರೆ ಅವಳನ್ನು ತಾನೆಷ್ಟು ಪ್ರೀತಿಸುತ್ತೇನೆ ಎಂಬುದು ಅವಳಿಗೆ ಗೊತ್ತಾಗಲೆಂದು ಆಚಾರ್ಯರೆ ಕೂಡುವುದು ಬೇಡವೆಂದಿದ್ದರು.

ದೆಹಲಿಯಲ್ಲಿ ನಾಯರ್ ಸಹವಾಸದಲ್ಲಿ ಎರಡುವರ್ಷವಿದ್ದು, ಕೆಲಸಗಳನ್ನು ಕಳೆದುಕೊಂಡು ಹಿಂದೆ ಬಂದು ನೋಡಿದಾಗ ಅಲಕಾವತಿ ಬದಲಾಗಿದ್ದಳು. ಸಣಕಲು ದೇಹದ ತನ್ನ ಗಂಡನನ್ನು ಕರೆಸಿಕೊಂಡಿದ್ದಳು. ಅವಳ ಗಂಡನದ್ದು ಗೋಟುತಲೆ, ಸೋಡಾಬಾಟ್ಲು ಕನ್ನಡಕ, ಒಟ್ಟಿನಲ್ಲಿ ಹ್ಯಾಪನಾದ ಮನುಷ್ಯ. ಆಚಾರ್ಯರ ಹೆಂಡತಿಯೂ ಮೈನೆರೆದು ಗಂಡನ ಮನೆಗೆ ಬಂದಿದ್ದಳು. ಮಗ ಓದಿ ವಿದ್ಯಾವಂತನಾಗಿ ಹಿಂದಕ್ಕೆ ಬಂದನೆಂದು ಅವರ ಅಪ್ಪನಿಗೂ ಖುಷಿಯಾಗಿತ್ತು. ಅಲಕಾವತಿ ಈಗ ರೇಷ್ಮೆಯ ಪತ್ತಲಗಳನ್ನುಡುವುದಿಲ್ಲ. ಕುರುಡಿಯಾಗಿದ್ದ ತಾಯಿ ಸತ್ತಿದ್ದಳು. ಸಾದಾ ಸೀರೆಯನ್ನುಟ್ಟು ತೀರ್ಥಕ್ಕಾಗಿ ದೇವಸ್ಥಾನಕ್ಕೇ ಬರುತ್ತಿದ್ದಳು. ಮನೆ ದೇವರನ್ನು ಗಂಡನೇ ಪೂಜಿಸುತ್ತಿದ್ದ. ಅದೊಂದು ಬಿಟ್ಟು ಬೇರೆ ಯಾವ ಕೆಲಸವೂ ಅವನ ಕೈಯಿಂದ ಆಗದು.

ಆಚಾರ್ಯರಿಗೆ ನಿರಾಸೆಯಾಗಿತ್ತು. ಈ ಹಳ್ಳಿಯನ್ನು ಬಿಡುವುದೆಂದು ನಿರ್ಧರಿಸಿದರು. ಅಲಕಾವತಿ ತನ್ನ ಸಾಧ್ವಿತನವನ್ನು ಮನದಟ್ಟು ಮಾಡುವವಳಂತೆ ದೇವಸ್ಥಾನಕ್ಕೆ ಬಂದಾಗ ಆಚಾರ್ಯರನ್ನು ಕಣ್ಣೆತ್ತಿ ನೋಡುತ್ತಿರಲಿಲ್ಲ. ಒಂದು ದಿನ ಅವಳು ಒಂಟಿಯಾಗಿರುವುದನ್ನು ಕಾದು ಅವಳ ಮನೆಗೆ ಹೋದರು. ಆಚಾರ್ಯರು ಆಗ ಕ್ರಾಪು ಬಿಟ್ಟಿದ್ದರು. ಅಂಗಿಯನ್ನು ಹಾಕುತ್ತಿದ್ದರು. ನಾನು ಈ ಊರು ಬಿಡುತ್ತಿದ್ದೇನೆ ಎಂದಾಗ ಅಲಕಾವತಿ ಮುಖ ಎತ್ತದೆ ಮೌನವಾಗಿ ಅಳುತ್ತಿರುವುದನ್ನು ಆಚಾರ್ಯರು ಗಮನಿಸಿ, ಅವಳ ಕೈಯನ್ನು ಹಿಡಿದು ಮೃದುವಾಗಿ ‘ಬೇರೇನು ಸಾಧ್ಯ?’ ಎಂದರು. ನಾನು ಈಗ ನಿಮಗೆ ಬೇಕಿಲ್ಲ ಅಲ್ಲವೆ?’ ಎಂದಳು. ಅಲಕಾವತಿ ಕೈಗಳನ್ನು ಬಿಡಿಸಿಕೊಂಡು. ಆಚಾರ್ಯರಿಗೆ ಅವಳನ್ನು ಕೂಡುವ ಬಯಕೆ ಈ ಮಾತಿನಿಂದ ಕುದುರಿತು. ಅವಳನ್ನು ಅಪ್ಪಿದರು. ಅಲಕಾವತಿ ಅವರ ಎದೆಯ ಮೇಲೆ ಮುಖ ಮುಚ್ಚಿಕೊಂಡು ಅತ್ತಳು.

ಆಚಾರ್ಯರು ತಮ್ಮ ಹಳ್ಳಿಯ ಹತ್ತಿರದಲ್ಲಿದ್ದ ಪೋಸ್ಟ್ ಆಫೀಸಿನಲ್ಲಿ ಪೋಸ್ಟ್ ಮಾಸ್ತರರಾದರು. ಅಲಕಾವತಿ ಎಷ್ಟು ಉಪಾಯಗಾರಳೆಂಬುದು ಅವರಿಗೆ ಕ್ರಮೇಣ ತಿಳಿಯುತ್ತ ಹೋಯಿತು. ತನ್ನ ತಂಡನಿಗೆ ವ್ಯವಹಾರ ಜ್ಞಾನ ಸಾಲದೆಂದು ಆಚಾರ್ಯರನ್ನು ತನ್ನ ಎಸ್ಟೇಟಿನ ರೈಟರ್ ಆಗಿ ನೇಮಿಸಿದಳು. ಎಸ್ಟೇಟಿನ ಮೇಲಿದ್ದ, ಕಾಡಿನಿಂದ ಆವೃತವಾದ ಒಂದು ಗುಡ್ಡದಲ್ಲಿ ಒಂದು ಆಫೀಸಿಗೆ ಹೋಗುವುದು; ಅಲ್ಲಿ ಅವರನ್ನು ಸಂಜೆ ಅಲಕಾವತಿ ಭೆಟ್ಟಿಯಾಗುವುದು. ಊರಿನ ದೊಡ್ಡ ಶ್ರೀಮಂತಳಲ್ಲವೆ-ಜನರು ಎದುರು ಆಡಿಕೊಳ್ಳಲು ಹೆದರುತ್ತಿದ್ದರು. ಪರಸ್ಪರ ಸಂಧಿಸುವ ನೂರಾರು ಉಪಾಯಗಳನ್ನು ಹುಡುಕುವುದರಲ್ಲೇ ಇಬ್ಬರ ಬುದ್ಧಿಶಕ್ತಿಯೂ ವ್ಯಯವಾಗುತ್ತ ಹೋಯಿತು. ಪ್ರಪಂಡ ಬಯಕೆಯಾಗಿ ಆಚಾರ್ಯರನ್ನು ಕಾಡಿದ್ದು ಕ್ರಮೇಣ ಮೈಮನಸ್ಸುಗಳನ್ನು ತಣಿಸುವ ದೈನಿಕ ಅಗತ್ಯವಾಯಿತು. ಆಕೆಯ ಎಸ್ಟೇಟಿನ ಸಂಬಂಧಪಟ್ಟ ವ್ಯಾಜ್ಯಗಳ ನಿರ್ವಹಣೆಯಲ್ಲಿ ಅವರ ಕಾನೂನಿನ ಚಟವೂ ಹುಟ್ಟಿಕೊಂಡದ್ದು.

ಅವರ ಹೆಂಡತಿಯ ಚಿಕ್ಕಪ್ರಾಯದ ಗುಂಡಗಿನ ಮುಖದಲ್ಲಿ ಮಾತ್ರ ಒಂದು ಬಗೆಯ ಅತೃಪ್ತಿ ಮತ್ತು ದುಗುಡ ಬೇರೂರಿತು. ಆಚಾರ್ಯರಿಗೆ ಎಲ್ಲಾದರೂ ದೇಶಾಂತರ ಹೋಗಿಬಿಡಬೇಕೆಂದು ಅನ್ನಿಸುತ್ತಿತ್ತು- ಈ ಕಪಟ ನಾಟಕದಿಂದ ಬೇಸರವಾದಾಗ. ಆದರೆ ಅಲಕಾವತಿ ತನ್ನ ಮೈಯ ರುಚಿಯನ್ನು ಹೆಚ್ಚಿಸುತ್ತ, ಅದು ಗುಪ್ತ ಲಭ್ಯವಾದ್ದರಿಂದ ಆ ಸುಖವನ್ನು ಇನ್ನಷ್ಟು ಕಟುವಾಗಿಸುತ್ತ ಆಚಾರ್ಯರನ್ನು ಇನ್ನಷ್ಟು ಬಿಗಿಯಾಗಿ ಹಿಡಿಯುತ್ತ ಹೋದಳು.

ಕ್ರಮೇಣ ಆಚಾರ್ಯರಿಗೆ ತನ್ನ ಸ್ವಮರ್ಯಾದೆ ನಷ್ಟವಾಗುತ್ತಿದೆ ಎಂಬ ಭಾವನೆ ಬೆಳೆಯಲು ಶುರುವಾಯಿತು. ಈ ಭಾವನೆ ಗಮನಿಸಿದ ಅಲಕಾವತಿ ಇನ್ನಷ್ಟು ಹೆಚ್ಚು ತನ್ನ ಸಂಗದ ಸುಖ ಅವರಿಗೆ ಬೆಳೆಯುವಂತೆ ಪ್ರಣಯದ ಕಲೆಯಲ್ಲಿ ನಿಷ್ಣಾತಳಾಗುತ್ತ ಹೋದಳು. ಪ್ರತಿದಿನ ಅವರಿಗೆ ಅವಳು ಹೊಸಬಳೆನ್ನುವಂತೆ ಮೈಯನ್ನು ಕೊಟ್ಟಳು. ಈ ಮೈಯಿ ಅಕ್ಷಯವಾಗಿ ಪರಸ್ಪರ ಸಂಗದಲ್ಲಿ ಬಿಚ್ಚಿಕೊಳ್ಳಬಹುದೆಂದು ತೋರಿಸಿ. ಅವರನ್ನು ಬೆರಗಿನಲ್ಲೇ ಉಳಿಸಿದಳು.

ಎರಡು ವರ್ಷಗಳು ಹೀಗೇ ಕಳೆದುವು. ಅಲಕಾವತಿ ಬಸುರಾದಳು. ಅವಳ ಗಂಡ ಬಾಯಿ ಮುಚ್ಚಿಕೊಂಡಿದ್ದು ಅದು ತನ್ನಿಂದಲೇ ಎಂಬುವಂತೆ ಸಂಭ್ರಮದಿಂದ ತಿರುಗಿದ. ಅವನ ದೈನ್ಯದಿಂದ ಆಚಾರ್ಯರಿಗೆ ತುಂಬ ಅಸಹ್ಯವಾಗುತ್ತಿತ್ತು. ಅಲಕಾವತಿ ಮಾತ್ರ ನೀತಿ ನಿಯಮಗಳಿಂದ ಅಬಾಧಿತಳಾಗಿದ್ದಳು. ಬಸುರಿಯಾದವಳು ಕಣ್ಣಿಗೆ ಹೊಳೆಯುವ ದೇವಿಯಂತಿದ್ದಳು. ಮತ್ತೆ ಅವಳ ರೇಷ್ಮೆಯ ಪತ್ತಲಗಳನ್ನೆಲ್ಲ ಉಟ್ಟು ವಜ್ರದ ಓಲೆಯನ್ನು ಧರಿಸಿರುತ್ತಿದ್ದಳು. ಅವರಿವರು ಕಂಡಾರೆಂಬ ಸಂಕೋಚವಿಲ್ಲದೆ ಇದು ತನಗೆ ಸಲ್ಲತಕ್ಕದ್ದೆಂಬಂತೆ ಆಚಾರ್ಯರ ಜೊತೆ ಆಪ್ತವಾಗಿರುತ್ತಿದ್ದಳು. ಅವರ ಹೆಂಡತಿಗೆ ಒಡವೆ ವಸ್ತ್ರಗಳು ಕಡಿಮೆಯಾಗದಂತೆ ಕೇಳಿದಷ್ಟು ಹಣವನ್ನು ಆಚಾರ್ಯರಿಗೆ ಕೊಡುತ್ತಿದ್ದಳು. ಬಸಿರು ಬೆಳೆದಂತೆ ಅವಳ ಮೈ ಮೊಗ್ಗಾಯಿತು. ತನ್ನಲ್ಲೆ ಅಡಕವಾಯಿತು; ಗುಪ್ತವಾಯಿತು. ಆಚಾರ್ಯರು ಇದರಿಂದ ಬಿಡುಗಡೆಯ ನಿಟ್ಟುಸಿರಿಟ್ಟು ತನ್ನ ಕಾನೂನು ಮತ್ತು ಆಕಾಶಗಳ ಅಧ್ಯಯನದಲ್ಲಿ ನಿರತರಾದರು.

ಬಸಿರಾಗಿದ್ದ ಅಲಕಾವತಿ ಹೆರುವಾಗ ಹೊಟ್ಟೆಯಲ್ಲಿ ಮಗು ಸತ್ತು ಪ್ರಾಣಬಿಟ್ಟಳು. ಆಚಾರ್ಯರು ತಬ್ಬಿಬ್ಬಾದರು. ಹೆಂಡತಿಗೆ ಹತ್ತಿರವಾಗಲು ಪ್ರಯತ್ನಿಸಿ ಸೋತರು. ಕೊನೆಗೊಂದು ದಿನ ಹಳ್ಳಿಯನ್ನು ತೊರೆದು ಈ ಗ್ರಾಮಕ್ಕೆ ಬಂದು ಬಿಟ್ಟರು.

ಅಲಕಾವತಿಯನ್ನು ಮರೆಯಲು ಆಚಾರ್ಯರು ತಮ್ಮ ಕೋರ್ಟು ವ್ಯಾಜ್ಯಗಳ ಚಟ ಬೆಳೆಸಿಕೊಂಡರೋ, ಶ್ರೀಮಂತ ಚಾಕರಿ ಅಗತ್ಯವಾಗಿ ಅದನ್ನವರು ಬೆಳೆಸಿಕೊಂಡರೋ, ಅಥವಾ ಚಟವೇ ಮೂಲವಾಗಿ ಶ್ರೀಮಂತರು ಅದಕ್ಕೆ ನೆವವಾದರೋ, ಅಂತೂ ತಾನೊಬ್ಬಳು ಈ ಇಪ್ಪತ್ತು ವರ್ಷ ಅವರಿಗೊಬ್ಬಳು ನೆಮ್ಮದಿಯ ದೀಪವಾಗಿದ್ದೆ. ಮುದ್ದಿನ ಮಗನ ಮದುವೆಯ ಅಘಾತವನ್ನವರು ಸಹಿಸುವುದು ಸಾಧ್ಯವಾದದ್ದೂ ತನ್ನಿಂದಲೇ ಪ್ರಾಯಶಃ

ಆಚಾರ್ಯರ ಭೌತಿಕ ಶರೀರವೆಲ್ಲ ಸುಟ್ಟು ಭಸ್ಮವಾದ ನಂತರ ಎಲ್ಲರೂ ಸ್ನಾನ ಮಾಡಿ ಹಿಂದೆ ಬರುತ್ತಿರುವುದನ್ನು ನೋಡಿದ ಗಂಗೂಬಾಯಿ ಮರದ ಬುಡದಿಂದ ಎದ್ದು ಮನೆಗೆ ಬಂದಳು. ತನ್ನ ಪೆಟ್ಟಿಗೆಯಿಂದ ಐದುಸಾವಿರ ರೂಪಾಯಿಗಳನ್ನು ತೆಗೆದು ಆಚಾರ್ಯರ ಹೆಂಡತಿ ರುಕ್ಮಿಣಿಯಮ್ಮನಿಗೆ ಕೊಟ್ಟಳು. ರುಕ್ಮಿಣಿಯಮ್ಮ ಇದರಿಂದ ಚಕಿತಳಾಗಿ ಬೇಡವೆಂದಳು.‘ಅವರ ಶುಶ್ರೂಷೆಗೆಂದು ಇದನ್ನು ತಂದೆ. ಇದು ಅವರಿಗೇ ಸೇರಬೇಕಾದ್ದು. ಅವರ ದಿನ ಕರ್ಮಗಳಿಗೆ ಇದನ್ನು ಖರ್ಚು ಮಾಡಿ ನನಗಷ್ಟು ಪುಣ್ಯ ಸಿಗುವಂತೆ ನೀವು ಮಾಡಬೇಕು.’

ಗಂಗೂಬಾಯಿ ಅಳುತ್ತ ಹೇಳಿದಳು. ಮನೆಯಲ್ಲಿ ಹಣವಿರಲಿಲ್ಲ; ಮಗನ ಹತ್ತಿರ ಇದೆಯೋ ಇಲ್ಲವೋ, ವಿಷ್ಣುಮೂರ್ತಿಗಳನ್ನು ಕೇಳುವುದು ಹೇಗೆ ಎಂದು ಒದ್ದಾಡುತ್ತಿದ್ದ ರುಕ್ಮಿಣಿಯಮ್ಮ ಬೇಡ ಬೇಡವೆಂದು ಕೊನೆಗೂ ಆ ಹಣವನ್ನು ತೆಗೆದುಕೊಂಡರು. ‘ನಾನೀಗ ಶಿವಮೊಗ್ಗೆಗೆ ಹೋಗುತ್ತೇನೆ. ಅವರ ವೈಕುಂಠ ಸಮಾರಾಧನೆಗೆ ಪ್ರಸಾದ ಪಡೆಯಲು ಮತ್ತೆ ಬರುತ್ತೇನೆ’ ಎಂದು ಗಂಗೂಬಾಯಿ ಹೇಳಿದಾಗ ರುಕ್ಮಿಣಿಯಮ್ಮ ಕಣ್ಣು ಒರೆಸಿಕೊಂಡು ಎಂದರು. ‘ಋಣಾನುಬಂಧ, ನೀನೂ ಇಲ್ಲೇ ಇರಬಹುದಲ್ಲ’ ಸ್ಕೂಲಿಗೆ ರಜವಿಲ್ಲೆಂದು ನೆವಹೇಳಿ ಗಂಗೂಬಾಯಿ ಸಂಜೆಯ ಬಸ್ಸು ಹಿಡಿದು ಶಿವಮೊಗ್ಗೆಗೆ ಹೊರಟು ಹೋದಳು.

ಈ ಘಟನೆಯಾದ ಎರಡು ವರ್ಷಗಳ ನಂತರ ದೆಹಲಿಯಲ್ಲಿ ಒಂದು ಬೇಸಿಗೆಯ ಸಂಜೆ ಕೃಷ್ಣಮೂರ್ತಿ ಆರಾಮಕುರ್ಚಿಯ ಮೇಲೆ ಕೂತು ಗಾಳಿ ಹಾಕಿಕೊಳ್ಳುತ್ತಿದ್ದ. ಹಗಲೆಲ್ಲ ಅಸಹನೀಯವಾದ ಬಿಸಿಲು ಕಾದಿತ್ತು. ಪಕ್ಕದಲ್ಲಿ ಹೆಂಡತಿ ಕೂತು ಮಗನ ಅಂಗಿಗೆ ಗುಂಡಿ ಹೊಲೆಯುತ್ತಿದ್ದಳು. ಬಹಳ ದಿನಗಳ ನಂತರ ಕೃಷ್ಣಮೂರ್ತಿಗೊಂದು ಬಗೆಯ ನೆಮ್ಮದಿ ಸಿಕ್ಕಿತ್ತು. ಇದಕ್ಕೆ ಮುಖ್ಯ ಕಾರಣವೆಂದರೆ ಡಿಫ್ತೀರಿಯಾದಲ್ಲಿ ಸತ್ತು ಬಿಡುತ್ತಾನೆಂದು ಹೆದರಿದ್ದ ಅವನ ಮಗ ಅಪಾಯದಿಂದ ಪಾರಾಗಿ ಬದುಕಿ ಉಳಿದದ್ದು. ಮಗನ ಹಾಸಿಗೆಯ ಬುಡದಲ್ಲಿ ನಿದ್ದೆ ಆಹಾರಗಳಿಲ್ಲದೆ ಕಾದು ಕೂತ ಗಂಡಹೆಂಡಿರು ಈಗ ಅನ್ಯೋನ್ಯವಾಗಿದ್ದರು. ಮಗನಿಂದಾಗಿ ಹತ್ತಿರವಾಗಿದ್ದರು. ಹಣಕಾಸಿನ ಜಂಜಡಗಳೆಲ್ಲ ಇಬ್ಬರಿಗೂ ಕ್ಷುಲ್ಲಕವೆನ್ನಿಸಿತು. ಜೊತೆಗೇ ಕೃಷ್ಣಮೂರ್ತಿ ಇಡೀ ಮೂರು ಪುಸ್ತಕವನ್ನು ಬೇರೆ ಹೆಸರಿಟ್ಟುಕೊಂಡು ಬರೆದು ಹದಿನೈದು ಸಾವಿರ ರೂಪಾಯಿ ಗಳಿಸಿ ತಂದೆಯಿಂದಾದ ಋಣವನ್ನೆಲ್ಲ ಪರಿಹರಿಸಿಕೊಂಡಿದ್ದ. ಇಂಥ ಒಂದು ಗೈಡನ್ನು ಬರೆಯಬೇಕಾಗಿ ಬಂತೆಂದು ಅವನು ಅವಮಾನಿತನಾಗಿದ್ದರೂ ಒಟ್ಟಾಗಿ ಸಿಕ್ಕ ಹಣದಿಂದ ಅವನ ನೂರೆಂಟು ತಾಪತ್ರಯಗಳ ನಿವಾರಣೆಯಾಗಿತ್ತು.

ಆಕಾಶ ಮತ್ತು ಬೆಕ್ಕು ಕಥಾ ಸಂಕಲನ (ಪ್ರಕಟಣೆಯ ವರ್ಷ ೧೯೮೧)

ಇದ್ದಕ್ಕಿದ್ದಂತೆ ಕೃಷ್ಣಮೂರ್ತಿಗೆ ಅನ್ನಿಸಿತು. ಅಪ್ಪ ಮೂರ್ಖನಾಗಿ ಬದುಕಿ ಸತ್ತರೋ, ಅಥವಾ ಸಾಯುವಾಗ ಅವರಿಗೆ ಅರಿವು ಮೂಡಿತ್ತೋ ಹೇಳುವುದು ಹೇಗೆ? ಅವರು ಸಾಯುವ ಮುಂಚೆ ಆಡಿದ್ದ ಒಂದು ಮಾತು ಈವರೆಗೂ ಅವನಿಗೆ ಅಷ್ಟು ಮಹತ್ವದ್ದೆಂದು ಅನ್ನಿಸಿದ್ದಿಲ್ಲ. ಈಗ ಯಾಕೋ ಅನ್ನಿಸುತ್ತದೆ. ನಾಯರ್ ಹತ್ತಿರ ಮಾತಾಡುತ್ತಿದ್ದವರು ನಿದ್ದೆಹೋದರು. ಮಧ್ಯರಾತ್ರೆಯೋ ಏನೋ, ಕೃಷ್ಣಮೂರ್ತಿ ಅರ್ಧ ನಿದ್ರೆಯಲ್ಲಿದ್ದ. ಅಪ್ಪ ಮಲಗಿರುತ್ತಿದ್ದ ಕೋಣೆಗೆ ಹೊದಿಸಿದ ಮರದ ಹಲಗೆಗಳ ಅಟ್ಟದಲ್ಲೊಂದು ಬೆಕ್ಕು ಮರಿ ಹಾಕಿತ್ತು. ಅದು ಸದ್ದು ಮಾಡುತ್ತಿದೆಯೆಂದು ಅಕ್ಕನ ಮಗ ಹರಿಕುಮಾರ ಅಟ್ಟವನ್ನು ಹತ್ತಿ ಬೆಕ್ಕಿನ ಮರಿಗಳಿದ್ದ ಬುಟ್ಟಿಯನ್ನು ಎತ್ತಲು ಹೋದ, ಆಗ ಬೆಕ್ಕು ಅವನನ್ನು ಕಚ್ಚಿ ಪರಚಲು ಎಗರಿ ಬಂದು ಕೂಗಿತು. ಮಲಗಿದ್ದ ಅಪ್ಪ ನರಳುತ್ತ ಹೇಳಿದರು:

‘ಏ ಹರಿ. ಪಾಪ ಆ ಬೆಕ್ಕನ್ನು ಯಾಕೆ ಗೋಳು ಹೊಯ್ತಿಯೊ. ಅಲ್ಲೇ ಇರಲಿ ಬಿಡು ಅದು.’ ಅದೇ ಅವರು ಆಡಿದ್ದ ಕೊನೆಯ ಮಾತು. ದಯೆಯಿಂದ ಗದ್ಗದವಾಗಿತ್ತು ಅದು. ಆದರೆ ಅಷ್ಟೇ ಸಾಲದೆಂದು ತಾನು ಯಾಕೆ ಹೀಗೆ ಪರಿತಪಿಸುತ್ತಿದ್ದೇನೆ?

(ಚಿತ್ರಗಳು: ರೂಪಶ್ರೀ ಕಲ್ಲಿಗನೂರ್)