ಚರಕ ನಿಲ್ಲದು, ನೂಲು ಮುಗಿಯದು

ಕಪ್ಪು ಮಣ್ಣಿಂದ ಮೂಡಿದ್ದು ಬಿಳಿ
ಮೈಗಳ ಅಳೆಯಲಿಲ್ಲ ಒಪ್ಪಿಕೊಂಡಿತು
ಹತ್ತಿ ಹತ್ತಿಕೂತಿತು
ಬಾಪೂ ನೂಲಿಗೆ ಸವರಿದ್ದು ಸಹನೆ
ಬೆರಳುಗಳು ದಣಿಯಲಿಲ್ಲ
ತಗ್ಗಿಸಿದ ಕೊರಳು ಸುಕ್ಕ ಎಣಿಸಲಿಲ್ಲ
ನೆಲದಿಂದ ಎದ್ದ ಎಳೆಗಳ ನೆಲಕ್ಕೆ
ಬಿಗಿವ ಬಂಧ
ಬಣ್ಣ ಬಳಿದುಕೊಂಡು ಮೆರೆದರೂ
ಹೊಮ್ಮಿದ ನೂಲುಗಳಿಗೆ
ಕಪ್ಪು ಬಿಳಿಯ ನಡುವೆ ದೇಶ ಹೆಣಿಗೆ
ಚರಕ ತಿರುಗುತ್ತಿದೆ

ಮತ್ತದೆ ತುಟಿ ಶ್ರುತಿಪೆಟ್ಟಿಗೆ
ರಾಘವ ಅಲ್ಲಾಹ್ ಶಿವ ನೂಲಿನೆಳೆ
ಹರಿದು ಹೋದ ಜನವ ನೇಯ್ಗೆ ಕನಸು
ಹೊದೆದದ್ದೂ ಸೈರಣೆ ಹಾಸಿದ್ದೂ ಕರುಣೆ
ತಿರುಗಿ ತಿರುಗಿಸಿದ್ದೆಲ್ಲ ನೆಲದ ಚಿಂತೆ
ನೂಲ ಕಲಿಸಿದ,ಉಡಲಿಲ್ಲ
ಶಾಂತಿ ಪಠಿಸಿದ, ಮಲಗಲಿಲ್ಲ
ಅನ್ನ ಬಿತ್ತಿಸಿದ, ಉಣಲಿಲ್ಲ
ಮುಳ್ಳ ಸವರಿದ, ಹೂ ಕಾಣಲಿಲ್ಲ
ಸುಳ್ಳುಗಳ ಹೇಷಾರವದ ಕೋಣೆಯಲಿ
ಮುಗುಳ್ನಗೆಯ ಪಟಕೆ ಬಿಗಿ ಚೌಕಟ್ಟು
ಚರಕ ತಿರುಗುತ್ತಿದೆ

ಬಿರಿದ ಭೂಮಿ ಬಿಂಬ ಹಿಮ್ಮಡಿ
ಸವೆದ ದಾರಿಯ ಗೆರೆ ಬೆನ್ನಲಿ
ಇರುಳ ಅರಿಯದ ಕಣ್ಣೊಳಗೆ
ನಾಡಿನ ಕ್ಷುಬ್ಧ ಕಡಲು
ಒಡಲು ಕನಲುವ ನಕ್ಷೆ
ಸಂತೆ ಜನರ ಕಾಲ್ತುಳಿತ ಎದೆ
ಒಂದು ಎಲ್ಲರ ನೂಲಲಿ ಪೋಣಿಸಲಾಗದ ನೋವು
ತನ್ನ ಮೋಹಕೆ ದಾಸನಾಗದ
ನೆಲದ ಹಾಡು
ಹೆಣೆದದ್ದು ಸರ್ವಸುಖದ ಬೀಸಣಿಕೆ
ಕಂಡದ್ದು ಕೊಡಲಿ
ಚರಕ ತಿರುಗುತ್ತಿದೆ

ಬಾಪೂ ನಿನ್ನ ಚರಕ ತಿರುಗುತ್ತಿದೆ
ಚರಿತ್ರೆ ಯೊಂದರ ಪರಿವಿಡಿಯಾಗಿ
ವರ್ತಮಾನದ ಕುಹಕಕ್ಕೆ ಸಾಕ್ಷಿಯಾಗಿ

ಒಂದು ನೂಲಲಿ ಎಲ್ಲರ
ಪೋಣಿಸಲಾಗದ ನೋವು
ತನ್ನ ಮೋಹಕೆ ದಾಸನಾಗದ
ನೆಲದ ಹಾಡು
ಹೆಣೆದದ್ದು ಸರ್ವಸುಖದ ಬೀಸಣಿಕೆ
ಕಂಡದ್ದು ಕೊಡಲಿ
ಚರಕ ತಿರುಗುತ್ತಿದೆ

ಬಾಪೂ ನಿನ್ನ ಚರಕ ತಿರುಗುತ್ತಿದೆ
ಚರಿತ್ರೆ ಯೊಂದರ ಪರಿವಿಡಿಯಾಗಿ
ವರ್ತಮಾನದ ಕುಹಕಕ್ಕೆ ಸಾಕ್ಷಿಯಾಗಿ