‘ಎಲ್ಲಾ ಕ್ಯಾಲ್ಕುಲೆಟ್ ಮಾಡಿ ಪ್ರೀತ್ಸಕೆ ಇದು ಅರೆಂಜ್ ಮ್ಯಾರೇಜ್ ಅಲ್ಲ. ಅವನನ್ನು ನೋಡಿದ್ರೆ ನನ್ನ ಎದೆಬಡಿತ ಹೆಚ್ಚಾಗತ್ತೆ. ಅವನ ಸಮುದ್ರದಂತಹ ಕಣ್ಣುಗಳ ಸೆಳೆತದಿಂದ ಪಾರಾಗೋದಿಕ್ಕೆ ಆಗದೆ ಇಲ್ಲ…’ ಎಂದು ಹೇಳುತ್ತಿದ್ದವನನ್ನು ತಡೆದು ‘ಇವೆಲ್ಲಾ ಮೊದಲ ನೋಟದಲ್ಲೇ ಆಯ್ತೆನೋ ಸಾಹೇಬ್ರಿಗೆ?!’ ಎಂದು ಕೇಳಿದಾಗ ಅವನು ಕೊಟ್ಟ ಉತ್ತರ ಅದೆಷ್ಟು ಸಮಂಜಸ ಅನಿಸುತ್ತದೆ… ಅವನು ಹೇಳಿದ; ‘ನೀ ಏನೇ ಅನ್ನು, ಮೊದಲ ನೋಟ, ಮೊದಲ ಗುರುತುಗಳೇ ನಮ್ಮನ್ನು ಸಾಹಸಿಗಳನ್ನಾಗಿ ಮಾಡದು. ಇದೊಂದಕ್ಕೆ ಏನಾದ್ರೂ ಮಾಡಿಬಿಡ್ತೀನಿ ಅನ್ನೋದೆಲ್ಲ ಈ ಮೊದಲ ಸಲಗಳಿಂದಲೇ!’
ದಾದಾಪೀರ್‌ ಜೈಮನ್‌ ಬರೆಯುವ ‘ಜಂಕ್ಷನ್‌ ಪಾಯಿಂಟ್‌’ ಅಂಕಣ

ಭಾನುವಾರ ಹೀಗೆ ಆಶ್ರಮದಲ್ಲೊಂದು ಸುತ್ತು ಹಾಕಿ ಬರೋಣ ಎಂದು ಕರೆದ. ಹೊಸ ಪರಿಚಯ. ಸಹಜ ಕುತೂಹಲವಿತ್ತು. ತಯಾರಾಗಿ ಹೊರಟೆ. ಸುಮಾರು ನೂರೈವತ್ತು ಎಕರೆಯ ತುಂಬಾ ವಿಶಾಲವಾಗಿ ಹರಡಿಕೊಂಡಿದ್ದ ಆಶ್ರಮ. ನಗರದ ವೇಗದ ಸೆಳವಿನಿಂದ ತಪ್ಪಿಸಿಕೊಂಡು ಬಂದ ಸಮಾಧಾನ! ತಣ್ಣನೆ ಗಾಳಿ ಅಲೆಯಂತೆ ಬೀಸುತ್ತಿತ್ತು. ಧಾವಂತಗಳ ಮರೆತು ಕಾಡಿನ ಹಸಿರಿನಲ್ಲಿ ಪಡೆದುಕೊಳ್ಳುತ್ತಿದ್ದ ನಿರಾಳತೆಯು ನಡಿಗೆಯನ್ನ ಸಹಜವಾಗಿ ನಿಧಾನವಾಗಿಸಿತ್ತು… ‘ಸ್ವಾಮೀಜಿ ಬರ್ತಾರೆ ಬಾ’ ಎಂದು ನಡಿಗೆಯನ್ನು ಧ್ಯಾನ ಮಂದಿರದ ಕವಲಿನ ಕಡೆ ತಿರುಗಿಸಿದ. ಮಂದಿರ ಭವ್ಯವಾದ ಅರಮನೆಯ ರೀತಿ ಹಿಗ್ಗಿತ್ತು. ನಮ್ಮ ಎದೆಯ ಏರಿಳಿತಗಳೇ ಪ್ರತಿಧ್ವನಿಸುತ್ತವೇನೋ ಎನ್ನುವಷ್ಟು ನಿಶಬ್ಧ! ಅಲ್ಲಿ ವಿದೇಶಿಗರ ದಂಡೆ ಒಂದು ತೂಕ ಹೆಚ್ಚು ಎನ್ನುವ ಹಾಗೆ. ಅಲ್ಲೆಲ್ಲಾ ಹಂಸ ಬಿಳಿ ಬಣ್ಣದ ಉಡುಗೆಗಳನ್ನು ತೊಟ್ಟ ಶಾಲೆಯ ವಿಧೇಯ ವಿದ್ಯಾರ್ಥಿಗಳಂತೆ ಕಾಯುತ್ತಿದ್ದರು. ಸ್ವಾಮೀಜಿ ಬಂದರು. ಧ್ಯಾನ ಶುರುವಾಯಿತು. ಧ್ಯಾನ ಮಂದಿರದಲ್ಲಿ ಅರ್ಧ ಘಂಟೆ ಕಳೆದಿದ್ದಾಯಿತು(ನನಗೆ ಅವು ಮೂರು ಮುಕ್ಕಾಲು ತಾಸು ಅನ್ನಿಸಿದ್ದು ಬೇರೆ ಮಾತು). ಧ್ಯಾನದ ಮಧ್ಯೆ ಪಕ್ಕದಲ್ಲಿ ಕುಳಿತ ನಾನು ಅವನ ಕಡೆ ನೋಡಿದೆ. ಆಶ್ರಮದ ಸ್ವಾಮೀಜಿಯ ಜೊತೆ ಸ್ಪರ್ಧೆಗಿಳಿದವನಂತೆ ಧ್ಯಾನ ಮಾಡುತ್ತಿದ್ದ. ಸುತ್ತಲೂ ಕಣ್ಣು ಹಾಯಿಸಿದೆ. ನನ್ನಂತೆಯೇ ಕಣ್ಣು ಬಿಟ್ಟು ಆಕಳಿಸುವವರನ್ನು ಕಂಡು ನಿಜಕ್ಕೂ ಖುಷಿಯಾಯಿತು… ಹೊರಬಂದ ಕೂಡಲೇ;
‘ಇಲ್ಲಿ ಚಹಾ-ಗಿಹಾದ ಅಂಗಡಿ ಇರಲ್ವೇನೋ ಮಾರಾಯ’ ಎಂದು ಕೇಳಿದೆ.

‘ಇಲ್ಲಿ ಕಷಾಯ, ಹರ್ಬಲ್ ಟೀ, ತುಳಸಿ ಟೀ ಎಲ್ಲ ಸಿಗತ್ತೆ. ಆಗ್ಬಹುದಾ?’ ಎಂದು ಮರುಕೇಳ್ವಿ ಇಟ್ಟ.
ಸರಕ್ಕನೆ ಅಲ್ಲಿಗೆ ಎಳೆದುಕೊಂಡು ಹೋದೆ… ಕೌಂಟರಿಗೆ ಹೋಗಿ ಬಂದು ನನ್ನ ಕೈಯಲ್ಲಿ ತುಳಸಿ ಚಹಾ ಇತ್ತ. ಕೆಣಕುವ ಮನಸ್ಸಾಗಿ ‘ಸಾಹೇಬ್ರದ್ದು ಜೋರು ಧ್ಯಾನ ನಡೀತಿತ್ತು?’

‘ಹಳೆಯದರಿಂದ ಹೊರಗೆ ಬರಬೇಕು ಅಂತ ನಿರ್ಧಾರ ಮಾಡಿದೀನಿ’ ಅಂದ.

ನನ್ನ ಮಟ್ಟಿಗೆ ಇಂತಹ ನಿರ್ಧಾರಗಳು ಬಹಳ ಗಟ್ಟಿ ನಿರ್ಧಾರಗಳು. ಎಷ್ಟೋ ಜನರು ತಾವಿದ್ದ ಸಮಸ್ಯೆಗಳ ಸುಳಿವಲ್ಲೇ ಸಿಕ್ಕಿ ಗಿರಕಿ ಹೊಡೆಯುತ್ತಾ ಹೊಡೆಯುತ್ತಾ ಅಲ್ಲಿಯೇ ನೆಮ್ಮದಿ ಕಂಡುಕೊಳ್ಳುವ ಸ್ಥಿತಿಗೆ ತಲುಪಿಬಿಡುತ್ತಾರೆ. ಅದು ನಿಜಕ್ಕೂ ಸ್ವ ಮರುಕದ ಸುಳಿ. ಅವರು ಅದಕ್ಕೆ ಹೊಂದಿಕೊಂಡರೂ ಅವರ ಕಥೆ ಕೇಳಿಸಿಕೊಳ್ಳುವವರಿಗೆ ನಿಜಕ್ಕೂ ಹಿಂಸೆ ಅನಿಸುತ್ತದೆ. ಇವನು ನಿಜಕ್ಕೂ ಆಶಾದಾಯಕನಾಗಿದ್ದಾನೆ ಅನ್ನಿಸಿತು. ಒಳಮನಸ್ಸು ಕೆದಕಬಾರದೆಂದು ಎಚ್ಚರಿಕೆ ಕೊಡುತ್ತಿದ್ದರೂ ಕೆಟ್ಟ ಕುತೂಹಲವನ್ನೇ ಗೆಲ್ಲಿಸಿ ‘ಏನಾಗಿತ್ತು?’ ಅಂತ ಕೇಳಿಬಿಟ್ಟೆ.

‘ಐ ವಾಸ್ ಇನ್ ಹಾಸ್ಪಿಟಲ್… ಅಟ್ಟೆಂಪ್ಟ್ ಟು ಸುಯಿಸೈಡ್’

‘ಏನು?’

‘ಹು… ಅರವತ್ತು ನಿದ್ದೆ ಮಾತ್ರೆ ನುಂಗಿದ್ದೆ. ನನ್ನ ಆರನೆಯ ಪ್ರೀತಿ… ಮೊದಲ ಕೆಲವನ್ನ ಉಳಿಸಿಕೊಳ್ಳಲಾಗಲಿಲ್ಲ. ಇನ್ನು ಕೆಲವರು ಬಂದಷ್ಟೇ ವೇಗವಾಗಿ ಕಾರಣ ಹೇಳದೆ ಹೊರಟು ಹೋದರು. ಆರನೆದಂತೂ ನನ್ನನ್ನ ಅದರ ಸ್ನೇಹಿತರ ಭೇಟಿ ಮಾಡಿಸಲಿಕ್ಕೆ ಅಂತ ಕರೆಯಿತು. ಹೋಗಿ ಬಂದೆ. ರಾತ್ರಿ ಒಂದು ಮೆಸೇಜು ಬಂದಿತ್ತು. ಸ್ಸಾರಿ… ಯು ಆರ್ ನಾಟ್ ಅಪ್ ಟು ಮೈ ಸ್ಟ್ಯಾಂಡರ್ಡ್ಸ್ ಅಂತ.’ ಅವನ ಕಣ್ಣುಗಳಲ್ಲಿ ನೀರಿದ್ದವು.

‘ದಟ್ ಸೊ ರೂಡ್’

‘ಏನೋ ಗೊತ್ತಿಲ್ಲ…ಎಲ್ಲ ಪ್ರೀತಿಗಳಲ್ಲೂ ಸೋಲಾಗಿತ್ತು. ಮತ್ತೆ ಮತ್ತೆ ಸೋಲು. ಅದಕ್ಕೆ ಇದೆಲ್ಲಾ ಸಾಕು ಅಂತ ಹೊರಗೆ ಬಂದುಬಿಡೋಣ ಅಂತ ಅಂದುಕೊಂಡಿದೀನಿʼ ಅಂದ.

ಅಂದಿನಿಂದ ಇಬ್ಬರೂ ಗೆಳೆಯರಾದೆವು. ಹೀಗೆ ಒಂದು ಆರು ತಿಂಗಳು ಕಳೆದಿತ್ತೋ ಇಲ್ಲವೋ
‘ಟಿಂಡರಲ್ಲಿ ಮ್ಯಾಚ್ ಆದ ಹುಡುಗನೊಬ್ಬನ ಜೊತೆ ಡೇಟ್ ಮಾಡಲು ಹೊರಟಿದೀನಿ’ ಅಂದ. ಈ ಹುಡುಗನಿಗೆ ಪ್ರೀತಿಸುವುದು ಒಂದು ಖಯಾಲಿ ಎಂದು ನಗುಬಂದಿತು. ನಾನು ‘ಗುಡ್ ಲಕ್’ ಎಂದು ಬರೆದು ನಗುವ ಇಮೊಜಿಯನ್ನು ಕಳಿಸಿದೆ. ಈ ಸಲ ಇದಾದರೂ ಹೆಚ್ಚು ಕಾಲ ಉಳಿಯಲಿ ಎನ್ನಿಸಿತು. ‘ಪ್ರೇಮ ಶುರುವಾದ ಹೊತ್ತಿನಲ್ಲೆ ಅದನ್ನು ಏಳು ಜನುಮಗಳವರೆಗೂ ತಳುಕು ಹಾಕಿ ಕೂರುತ್ತೇವೆ. ಕೆಲವು ವರ್ಷಗಳಲ್ಲಿ ಅದು ವಿಫಲವಾದಾಗ ಕೊರಗುತ್ತೇವೆ. ಒಂದು ಪ್ರೇಮ ಕೇವಲ ಮೂರೇ ಮೂರು ತಿಂಗಳಿದ್ದರೂ ಅದು ಪವಿತ್ರದ್ದೆ ಆಗಿರುತ್ತದೆ. ನಾವು ವಿದಾಯಗಳನ್ನು ಸಂಭ್ರಮಿಸಬೇಕು… ಆಗ ಮಾತ್ರ ಬೇರೊಬ್ಬ ವ್ಯಕ್ತಿಗೆ ಪುಟ್ಟ ಹೃದಯದಲ್ಲಿ ಜಾಗ ದೊರೆಯುತ್ತದೆ.’ ಎಂದು ಮಾನಸಿಕ ತಜ್ಞನಾದ ಗೆಳೆಯ ಹೇಳಿದ್ದು ನೆನಪಾಗುತ್ತದೆ. ಪ್ರೀತಿಸುವುದು ಖಯಾಲಿಯಾಗಿರುವವರೆಗೂ ನಾವು ಮನುಷ್ಯರಾಗಿರುತ್ತೇವೆ.

ಅಂದು ಸಂಜೆ ಏಳು ಗಂಟೆಯ ಸುಮಾರಿಗೆ ವಾಟ್ಸಾಪ್ ಸ್ಟೇಟಸ್ಸುಗಳನ್ನು ಚೆಕ್ ಮಾಡುವಾಗ ಅವನು ಅವನ ಟಿಂಡರ್ ಡೇಟಿನ ಜೊತೆ ಉಂಗುರ ಬದಲಿಸಿಕೊಂಡ ಪಟಗಳನ್ನು ಹಂಚಿಕೊಂಡಿದ್ದ. ನನಗೆ ನಗು, ಕೋಪ ಒಟ್ಟಿಗೆ ಉಕ್ಕಿ ‘ನಿಂಗೆ ಹುಚ್ಚು ಗಿಚ್ಚೆನಾದ್ರೂ ಹಿಡಿದಿದ್ಯ?’ ಕೇಳ್ದೆ. ‘ಹಾ, ಪ್ರೀತಿಯ ಹುಚ್ಚು!’ ಎಂದು ನಾಟಕೀಯವಾದ ಉತ್ತರ ಕಳಿಸಿದ. ಮತ್ತೆ ನಗು.

‘ಹ್ಮ್ಮ್ಮ್ಮ್ಮ್….’ ಎಂದಷ್ಟೇ ಹೇಳಲು ಸಾಧ್ಯವಾಯಿತು.

‘ಇನ್ನೊಂದ್ ವಿಷಯ ಹೇಳಿದ್ರೆ ನಿನಗೂ ಹುಚ್ಚು ಹಿಡಿಯತ್ತೆ.’ ಅಂದ

‘ಗೊ ಆನ್’

‘ಹಿ ಈಸ್ ಹೆಚ್. ಐ. ವಿ ಪಾಸಿಟಿವ್.’

‘ವಾಟ್?!’

‘ಯೆಸ್.’

ಆರನೆದಂತೂ ನನ್ನನ್ನ ಅದರ ಸ್ನೇಹಿತರ ಭೇಟಿ ಮಾಡಿಸಲಿಕ್ಕೆ ಅಂತ ಕರೆಯಿತು. ಹೋಗಿ ಬಂದೆ. ರಾತ್ರಿ ಒಂದು ಮೆಸೇಜು ಬಂದಿತ್ತು. ಸ್ಸಾರಿ… ಯು ಆರ್ ನಾಟ್ ಅಪ್ ಟು ಮೈ ಸ್ಟ್ಯಾಂಡರ್ಡ್ಸ್ ಅಂತ.’ ಅವನ ಕಣ್ಣುಗಳಲ್ಲಿ ನೀರಿದ್ದವು.

‘ನಿಂಗೆ ಇವನಿಗಿಂತ ಚೆನ್ನಾಗಿರೋರು ಸಿಕ್ತಾರೋ.’
‘ಎಲ್ಲಾ ಕ್ಯಾಲ್ಕುಲೆಟ್ ಮಾಡಿ ಪ್ರೀತ್ಸಕೆ ಇದು ಅರೆಂಜ್ ಮ್ಯಾರೇಜ್ ಅಲ್ಲ. ಅವನನ್ನು ನೋಡಿದ್ರೆ ನನ್ನ ಎದೆಬಡಿತ ಹೆಚ್ಚಾಗತ್ತೆ. ಅವನ ಸಮುದ್ರದಂತಹ ಕಣ್ಣುಗಳ ಸೆಳೆತದಿಂದ ಪಾರಾಗೋದಿಕ್ಕೆ ಆಗದೆ ಇಲ್ಲ…’ ಎಂದು ಹೇಳುತ್ತಿದ್ದವನನ್ನು ತಡೆದು ‘ಇವೆಲ್ಲಾ ಮೊದಲ ನೋಟದಲ್ಲೇ ಆಯ್ತೆನೋ ಸಾಹೇಬ್ರಿಗೆ?!’ ಎಂದು ಕೇಳಿದಾಗ ಅವನು ಕೊಟ್ಟ ಉತ್ತರ ಅದೆಷ್ಟು ಸಮಂಜಸ ಅನಿಸುತ್ತದೆ… ಅವನು ಹೇಳಿದ; ‘ನೀ ಏನೇ ಅನ್ನು, ಮೊದಲ ನೋಟ, ಮೊದಲ ಗುರುತುಗಳೇ ನಮ್ಮನ್ನು ಸಾಹಸಿಗಳನ್ನಾಗಿ ಮಾಡದು. ಇದೊಂದಕ್ಕೆ ಏನಾದ್ರೂ ಮಾಡಿಬಿಡ್ತೀನಿ ಅನ್ನೋದೆಲ್ಲ ಈ ಮೊದಲ ಸಲಗಳಿಂದಲೇ!’

‘ಏನೋ ಒಂದು. ಖುಷಿಯಾಗಿರು. ಗುಡ್ ಲಕ್’ ಎಂದಷ್ಟೇ ಹೇಳಿದೆನಾದರೂ ಯಾಕೋ ಅವನ ಆಯ್ಕೆಯ ಬಗ್ಗೆ ಸಮಾಧಾನ ಅನಿಸಿರಲಿಲ್ಲ.

ಆವತ್ತು ರಾತ್ರಿಯೆಲ್ಲಾ ಗೂಗಲಿಸಿ ಗೂಗಲಿಸಿ ಹೈವ್ ರೋಗದ ಬಗ್ಗೆ ಮಾಹಿತಿ ಕಲೆ ಹಾಕುವಾಗ ಮತ್ತೆ ಅವನು ಕಾಲ್ ಮಾಡಿದ. ಮಧ್ಯರಾತ್ರಿಯಾಗಿತ್ತು…

‘ಯೋಚ್ನೆ ಮಾಡ್ಬೇಡ. ಈಗೀಗ ಹೈವ್ ಅನ್ನೋದು ಕ್ಯೂರ್ ಮಾಡಕ್ಕೆ ಆಗದಿದ್ರೂ ಬಂದಿರೋ ART ಮಾತ್ರೆಗಳಿಂದ ಸಾಮಾನ್ಯ ಮನುಷ್ಯರ ಜೀವಿತಾವಧಿಗಿಂತ ಕೇವಲ ಎರಡು ಮೂರು ವರ್ಷ ಕಡಿಮೆ ಆಯಸ್ಸು ಅನ್ನುವಷ್ಟು ಪರಿಣಾಮಕಾರಿ. ಈಗ ದಿನಾ ಮಾತ್ರೆಗಳನ್ನು ನುಂಗಿ ‘TND(Target not detected)’ ಹಂತ ಮುಟ್ಟಿದ್ರೆ ಆಯ್ತು. ಈಗ ಹೈವ್ ಅಂತಹ ಮಾರಾಣಾoತಿಕ ರೋಗ ಅಲ್ಲವೇ ಅಲ್ಲ. ಅದು ಬೇರೆ ಇವನಿಗೆ ಇತ್ತೀಚಿಗೆ ಗೊತ್ತಾಗಿರೋದು. ಸೋ ಐ ವಿಲ್ ಬಿ ವಿಥ್ ಹಿಮ್.’ ಎಂದ.

‘ಸರಿ. ಯು ಟೂ ಟೇಕ್ ಕೇರ್.’ ಎಂದಷ್ಟೇ ಹೇಳಲು ಸಾಧ್ಯವಾಯಿತು.

ಮಲಗುವ ಮುಂಚೆ ಆ ಹೈವ್ ಹುಡುಗನ ಇನ್ಸ್ಟಾ ಪ್ರೊಫೈಲ್ ಜಾಲಾಡಿದೆ. ಇವನು ಹೇಳಿದಂತೆ ಅವನಿಗೆ ಸಮುದ್ರದಂತಹ ಕಣ್ಣುಗಳು… ಅದರದ್ದೇ ಸೆಳೆತ. ಯಾರೂ ಅವನ ಪ್ರೇಮ ಪಾಷದಲ್ಲಿ ಬೀಳದೆ ಇರಲಾರರು ಎನ್ನುವಷ್ಟು!

ಪ್ರೀತಿ ಜವಾಬ್ದಾರಿಗಳನ್ನೂ ಕೂಡ ಜೊತೆಗೆ ತರುತ್ತದೆ. ಸಮುದ್ರಗಣ್ಣಿನ ಹುಡುಗನ ಭಾಷೆ ಬೇರೆ. ಇವನು ಕನ್ನಡದವನು. ಅವರಿಬ್ಬರ ಎರಡು ಮೂರು ಭೇಟಿಗಳಾಗಿರಬೇಕು. ಕೋವಿಡ್ ವಕ್ಕರಿಸಿಕೊಂಡಿತು. ಇವನ ಹುಡುಗ ವರ್ಕ್ ಫ್ರಮ್ ಹೋಂ ಅಂತ ಕೇರಳದಲ್ಲಿ ಹೋಗಿ ಕೂತ. CD4 ಕೌಂಟ್ ಐದು ನೂರಕ್ಕಿಂತ ಕಡಿಮೆ ಅಂತ ART ಥೆರಪಿ ಶುರು ಆಗಿತ್ತು. ಪ್ರತಿ ತಿಂಗಳು ಇವನು ಬೌರಿಂಗ್ ಆಸ್ಪತ್ರೆಗೆ ಪುಸ್ತಕ ಹಿಡಿದುಕೊಂಡು ಹೋಗಿ ಮಾತ್ರೆ ತಂದು ಅವರ ಮನೆಯವರಿಗೆ ಗೊತ್ತಾಗದಂತೆ ಸುತ್ತಿ ಕೊರಿಯರ್ ಮಾಡಿ, ದಿನಾಲು ಫೋನ್ ಮಾಡಿ ವಿಚಾರಿಸಿಕೊಂಡು, ನಿತ್ಯ ಅವನ ಇವನ ಫೋಟೋಗಳನ್ನು ಕೊಲಾಜ್ ಮಾಡಿ ಹಾಕಿ ಖುಷಿಪಟ್ಟುಕೊಂಡು ಕಳೆಕಳೆಯಾಗಿದ್ದ. ಇಲ್ಲಿವನು ಇಷ್ಟೊಂದು ಸಂಭ್ರಮದಲ್ಲಿರುವಾಗ ಅಲ್ಲಿಂದ ಒಂದೂ ಫೋಟೋ ಹಾಕಿಕೊಂಡಿದ್ದನ್ನು ನಾನು ನೋಡಲಿಲ್ಲ. ನನಗೇಕೋ ನನ್ನ ಸ್ನೇಹಿತ ಉದಾರಿಯಾಗುವ ಕರುಣಿಯಾಗುವ ಹುಂಬತನದಲ್ಲಿದ್ದಾನೆ ಎನಿಸತೊಡಗಿತ್ತು. ಪ್ರೀತಿಸುವುದು ತಪ್ಪಲ್ಲ. ಕೇವಲ ಪ್ರೀತಿ ಎಂಬ ವಿಚಾರದ ಹಿಂದೆ ಓಡುವುದು ತಪ್ಪು. ನನಗೂ ಇವನು ಪ್ರೀತಿ ಎನ್ನುವ ಐಡಿಯಾದ ಹಿಂದೆ ಓಡುತ್ತಿದ್ದಾನೆ ಎನಿಸಿತು. ಸ್ನೇಹಿತನಾಗಿ ಎಚ್ಚರಿಸುವುದು ನನ್ನ ಕರ್ತವ್ಯ ಎಂದು ಹೇಳಿನೋಡಿದೆ.

‘ನೋಡಣ ಇರು ನೋಡಣ ಇರು. ಪ್ರೀತಿ ಅಂದರೆನೆ ಕದ್ದು ಮುಚ್ಚಿ ಮಾಡದಲ್ವಾ?!’ ಎಂದ.

‘ಹ್ಮ್ಮ್ಮ್ಮ್…’ ಎಂದಷ್ಟೇ ಹೇಳಲು ನನಗೆ ಸಾಧ್ಯವಾಗಿತ್ತು.

*****

ಒಮ್ಮೆ ಅವನೇ ಕರೆ ಮಾಡಿದ.

ಕರೆ 1 ;
‘ಇದ್ಯಾಕೋ ಸರಿ ಹೋಗ್ತಿದೆ ಅನಿಸ್ತಿಲ್ಲ. ಮೊದಲಿಗೆ ಅವನ ಸಂಬಳ ಕಡಿಮೆ ಇತ್ತು. ಈಗ ಜಾಸ್ತಿ ಆಗಿದೆ. ನಾನು ಬೇಡ ಅಂದ್ರು ಅವನ ಬದಲಾದ ವರ್ತನೆಗೆ ಅದೇ ಕಾರಣ ಅನಿಸೋಕೆ ಶುರುವಾಗಿದೆ.’

ಕರೆ 2;
‘ಮೊನ್ನೆ ಭೇಟಿಯಾಗಿದ್ದೆ. ನಾನ್ಯಾರು ನಿನಗೆ ಅಂತ ಕೇಳ್ದೆ. ನೀನು ನನ್ನ ಹಾಸ್ಪಿಟಲ್ ಗಯ್ ಅಂದ…’

ಕರೆ 3;
‘ಇವತ್ತು ಬಂದ. ಹೊಸ ಫೋನ್ ಗಿಫ್ಟ್ ಆಗಿ ಕೊಟ್ಟ. ಕೊನೆ ಸಲ ಎಂಬಂತೆ ಮುದ್ದುಗರೆದ. ಆಮೇಲೆ ಹೇಳಿದ. ಅಯಾಮ್ ಬ್ರೇಕಿಂಗಪ್ ವಿಥ್ ಯು. ಸಾರಿ. ನನಗೆ ಹೈವ್ ಪಾಸಿಟಿವ್ ಅಂತ ಗೊತ್ತಾದ ಮೇಲೆ ಎಲ್ಲಾ ಮುಗಿದುಹೋಯ್ತು ಅನಿಸಿತು. ಹೇಗಾದ್ರು ಮಾಡಿ ಬದುಕನ್ನ ಕಟ್ಟಿಕೊಳ್ಳಬೇಕು ಅನಿಸ್ತಾ ಇತ್ತು. ಐ ಯೂಸ್ಡ್ ಯು… ಈಗ ನನ್ನಿಂದ ಆಗ್ತಿಲ್ಲ…’ ಅವನು ಅಲ್ಲಿಂದ ಇದೆಲ್ಲಾ ಹೇಳ್ತಾ ಇರಬೇಕಾದ್ರೆ ಅವನ ದನಿ ನಡುಗ್ತಾ ಇತ್ತು. ‘ನಾನಲ್ಲಿಗೆ ಬರ್ತಾ ಇದೀನಿ. ಡೋಂಟ್ ಡು ಎನಿಥಿಂಗ್ ಸ್ಟುಪಿಡ್.’ ಎಂದು ಹೇಳಿದವನೇ ಕ್ಯಾಬ್ ಬುಕ್ ಮಾಡಿ ಅದಕ್ಕಾಗಿ ತಯಾರಾಗಿ ದಡಬಡಿಸಿ ಕೆಳಗಿಳಿದೆ.

*****

ಅವನ ಏಳನೇಯ ಪ್ರೀತಿ ಕೂಡ ಇಲ್ಲವಾದ ಮೇಲೆ ಸಮುದ್ರಗಣ್ಣಿನ ಹುಡುನಿಗೆ ಫೋನ್ ಮಾಡಿ ‘ಮತ್ತೆ ಇನ್ನೆಂದು ಯಾವ ಕಾರಣಕ್ಕೂ ಅವನ ಜೀವನದಲ್ಲಿ ಬರ್ಬೇಡ.’ ಎಂದು ಬೈದಿದ್ದೆ. ಆಗಿಂದ ಈಗ ಹಲವು ದಿನಗಳು ಹರಿದುಹೋಗಿವೆ. ಈಗ ಯೋಚಿಸಿದರೆ ಸಮುದ್ರಗಣ್ಣಿನ ಹುಡುಗ ಮಾಡಿದ್ದರಲ್ಲಿ ಯಾವ ತಪ್ಪು ಕಾಣಿಸುತ್ತಿಲ್ಲ. ರೋಗವೊಂದೇ ಅವನನ್ನು ಅವನಿಗಿಷ್ಟವಿಲ್ಲದ ಸಂಬಂಧದಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು ಎನ್ನುವುದೇ ನಮ್ಮ ಯೋಚನೆಯ ಸೀಮಿತತೆಯನ್ನು ಹೇಳುತ್ತದೆ. ಆ ಹುಡುಗ ಕೂಡ ಅವನಿಗಿಷ್ಟದ ಹುಡುಗನನ್ನು ಆರಿಸಿಕೊಳ್ಳುವಾಗ ಯಾವುದೇ ಐಬು ಕೂಡ ಐಬಿನ ಕಾರಣಕ್ಕಾಗಿ ಅಡ್ಡಿಯಾಗದಿರಲಿ ಅನಿಸುತ್ತದೆ.

ಈ ಪುಟ್ಟ ಬದುಕಿನಲ್ಲಿ ಸಿಕ್ಕ ಅವನು ಮತ್ತು ಸಮುದ್ರಗಣ್ಣಿನಂತಹ ಹುಡುಗರು ಪ್ರೀತಿಯ ಹಲವು ಅಡ್ಡಿಗಳನ್ನು ಮೀರುತ್ತಲೇ ಇರುತ್ತಾರೆ. ಆ ಮೂಲಕ ಪ್ರೀತಿಯ ಬಗೆಗಿನ ವೈಶಾಲ್ಯತೆಯನ್ನು ವಿಸ್ತರಿಸುತ್ತಲೇ ಇರುತ್ತಾರೆ. ಮುಖ್ಯವಾಗಿ ಇವರು ನನ್ನನ್ನು ಒಂದು ಜಂಕ್ಷನ್ನಿನಲ್ಲಿ ಸಿಕ್ಕರು ಎಂಬುದಕ್ಕೆ ನಾನು ಋಣಿ. ಅವರಿಗೆ ರಾಶಿ ರಾಶಿ ಪ್ರೀತಿ ಸಿಕ್ಕಲಿ ಎನ್ನುವುದೇ ಪ್ರಾರ್ಥನೆ…