‘ನಾಯಿನೆರಳು’ ವಿನ ಮೂರನೆಯ ಭಾಗದಲ್ಲಿ ಪ್ರಭುತ್ವ ಹೆಚ್ಚು ಹೆಚ್ಚು ಮೂಗು ತೂರಿಸೋದನ್ನ ತೋರಿಸೋದಕ್ಕೆ ಪ್ರಯತ್ನಪಟ್ಟಿದೀನಿ. ಪೋಲೀಸು, ಕೋರ್ಟು, ಕೇಸು… ಅವು ಮಂದಿಯ ವೈಯುಕ್ತಿಕ ಜೀವನದ ನಿರ್ಧಾರಗಳು ಅನ್ನೋ ಅಂಶವನ್ನ ಗಣನೆಗೇ ತಗೊಳಲ್ಲ. ವೆಂಕಟಲಕ್ಷ್ಮಿಗೆ ವ್ಯವಸ್ಥೆಯ ಆಯಾಮಗಳ ಪರಿಚಯ ಇದೆ. ಜೊತೆಗೆ, ಸಮುದಾಯದ ಒಂದು ಪಾತ್ರ ‘ಸ್ವಲ್ಪ ದಿನ ಹಿಟ್ಲರ್ ಕಾಟ ಕೊಟ್ಟ. ಈಗ ಗಾಂಧಿ ಕಾಟ,’ ಅಂತ ಹೇಳುತ್ತೆ. ಅವರಿಬ್ಬರ ನಡುವಿನ ವ್ಯತ್ಯಾಸವೂ ಅವರಿಗೆ ಗೊತ್ತಿಲ್ಲ. ಆದರೆ ಅಚ್ಚಣ್ಣಯ್ಯ ಮತ್ತು ಪುಟ್ರಾಂಭಟ್ಟರಿಗೆ ತುಂಬ ಸೀಮಿತವಾಗಿಯಾದರೂ ಅದರ ಅರಿವಿದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತೈದನೆಯ ಬರಹ
ಕನಾರಳ್ಳಿ: ಗಿರೀಶ್, ನಮಸ್ಕಾರ. ನನ್ನ ಡಾಕ್ಟೋರಲ್ ಅಧ್ಯಯನಕ್ಕೆ ನಿಮ್ಮ ಸಿನಿಮಾದಲ್ಲಿ ರಾಷ್ಟ್ರ-ಜೆಂಡರ್ ಅನ್ನೋ ವಿಷಯವನ್ನ ಆರಿಸಿಕೊಂಡಿದ್ದೆ. ನಿಮ್ಮ ಮೊದಲನೆಯ ಬಿಡುಗಡೆಯಾದ ಚಿತ್ರ 1977ರಲ್ಲಿ ಬಂದ ‘ಘಟಶ್ರಾದ್ಧ’ ಆಗಿತ್ತು. ಅದಕ್ಕೆ ಪೂರ್ವಭಾವಿಯಾಗಿ ಮೂವತ್ತರಿಂದ ಎಪ್ಪತ್ತರ ದಶಕವೂ ಸೇರಿದಂತೆ ಸುಮಾರು ಅರೆ ಶತಮಾನದ ಕನ್ನಡ ಸಿನಿಮಾವನ್ನ ರಾಷ್ಟ್ರ-ಜೆಂಡರ್ ಅನ್ನೋ ನೆಲೆಯಿಂದ ನೋಡೋದಕ್ಕೆ ಪ್ರಯತ್ನ ಪಟ್ಟಿದೀನಿ. ಅದು ಮೊದಲನೆಯ ಪುಸ್ತಕ.
ಎರಡನೆಯದು ನಿಮ್ಮ ಸಿನಿಮಾಗೆ ಸಂಬಂಧಪಟ್ಟಿದ್ದು. ಅದಕ್ಕೆ ಪೂರಕವಾಗಿ ಈ ಸಂದರ್ಶನ. ಪ್ರಾರಂಭ ಮಾಡೋದಕ್ಕೆ ಮುಂಚೆ ನನ್ನ ಅಧ್ಯಯನಕ್ಕೆ ಎಲ್ಲ ಬಗೆಯ ಸಹಾಯವನ್ನ, ಅದು ಪುಸ್ತಕಗಳು ಇರಬಹುದು, ನಿಮ್ಮ ಚಿತ್ರಗಳ ಪ್ರತಿಗಳು ಇರಬಹುದು, ಲೇಖನಗಳು ಇರಬಹುದು, ಇತ್ಯಾದಿ ಎಲ್ಲ ಕೋರಿಕೆಗಳಿಗೆ ಬೇಷರತ್ತಾಗಿ ತಕ್ಷಣ ಸ್ಪಂದಿಸುತ್ತಿದ್ದವರು ನೀವು. ನನ್ನ ಡಾಕ್ಟೋರಲ್ ಪ್ರಬಂಧವನ್ನ ಕನ್ನಡಕ್ಕೆ ಅನುವಾದಿಸಿ ಪುಸ್ತಕ ಮಾಡುತ್ತಿದ್ದಾಗ ಸಹ ಎಲ್ಲ ಬಗೆಯ ಸಹಾಯವನ್ನ ಕೊಟ್ಟಿರಿ. ನಾನು ತುಂಬ ಥ್ಯಾಂಕ್ಸ್ ಹೇಳಿದ್ರೆ ನೀವು ಸಂಕೋಚ ಪಟ್ಟುಕೊಳ್ತೀರ ಅಂತ ಗೊತ್ತು. ಹಾಗಾಗಿ ಅದನ್ನ ಇಲ್ಲಿಗೆ ನಿಲ್ಲಿಸ್ತೀನಿ.
ನಾನು ನಿಮ್ಮ ಚಿತ್ರಗಳನ್ನ ತಾತ್ವಿಕ ನೆಲೆಗಳ ಆಧಾರದ ಮೇಲೆ ಅಧ್ಯಾಯಗಳನ್ನಾಗಿ ಮಾಡಿಕೊಂಡಿದೀನಿ. ಅದು ನನ್ನ ಮಟ್ಟಿಗೆ ಸಾಹಿತ್ಯ ಅಥವಾ ಚಿತ್ರವಿಮರ್ಶೆ ಅಲ್ಲ. ಜೆಯೆನ್ಯೂನ ಆಧುನಿಕ ಐತಿಹಾಸಿಕ ಅಧ್ಯಯನಗಳ ಕೇಂದ್ರದಲ್ಲಿ ನಾನು ನನ್ನ ಡಾಕ್ಟರೇಟ್ ಅಧ್ಯಯನವನ್ನ ಮಾಡಿದೆ. ಭಾರತ ಎಂಬ ರಾಷ್ಟ್ರದ ನೆಲೆಯಲ್ಲಿ ಜೆಂಡರ್ ಕಣ್ಣಿನ ಮೂಲಕ ನಿಮ್ಮ ಚಿತ್ರಗಳನ್ನ ಅರ್ಥ ಮಾಡಿಕೊಳ್ಳೋದಿಕ್ಕೆ ಪ್ರಯತ್ನಪಟ್ಟಿದೀನಿ. ಈ ಪುಸ್ತಕಗಳಲ್ಲಿ ಇರೋ ಅಧ್ಯಾಯಗಳಿಗೆ ಸಂಬಂಧಪಟ್ಟ ಹಾಗೇನೆ ಕೆಲವು ಪ್ರಶ್ನೆಗಳು ಇರ್ತಾವೆ. ಸರಿಯಾ?
‘ವಿಧವೆ’ಯನ್ನ ಒಂದು ಪ್ರಬಲ ಸಿನಿಮಾತ್ಮಕ ಸಂಕೇತವಾಗಿ ಬಳಸಿದವರು ನೀವು. ಪ್ರಧಾನಧಾರೆ ಕನ್ನಡ ಸಿನಿಮಾದ ಕಾಳಜಿಗಳಿಗೆ ವಿಧವೆ ಒಗ್ಗಿ ಬರಲು ಸಾಧ್ಯವಿರಲಿಲ್ಲ ಅನ್ನೋದು ಸ್ಪಷ್ಟವಾಗಿಯೇ ಇದೆ. ಪೂರ್ತಿಯಾಗಿ ಪ್ರಧಾನಧಾರೆ ಅಂತ ಕರೆಯಬಲ್ಲ ಕನ್ನಡ ಸಿನಿಮಾದಲ್ಲಿ ಒಂದು ವಿಧವೆ -ಕೇಂದ್ರಿತ ಚಿತ್ರ, ಜಯಲಲಿತಾ ಅವರು ನಟಿಸಿದ್ದ ‘ನನ್ನ ಕರ್ತವ್ಯ’ (1965) ಇದೆ. ಆದರೆ ವಿಧವೆಯ ಬಗ್ಗೆ ಅಲ್ಲಿ ಯಾವ ಕಾಳಜಿಯೂ ಇಲ್ಲ ಎನ್ನುವುದು ಸಹ ಕಾಣಿಸುತ್ತದೆ. ಅಷ್ಟೇ ಅಲ್ಲ, ವಿಧವೆಯ ಲೈಂಗಿಕತೆಯ ಪ್ರಶ್ನೆಯನ್ನು ಅತ್ತ ತಳ್ಳಿ ಸಂಪ್ರದಾಯತೆಯೇ ಹೆಚ್ಚು ಮೆರೆದು ವಿಧವೆಗೆ ಇನ್ನಷ್ಟು ಅನ್ಯಾಯ ಆಗಿದ್ದು ಸಹ ಅಲ್ಲಿ ಕಣ್ಣಿಗೆ ಹೊಡೆಯುವಂತೆ ಇದೆ. ಹಾಗೇನೆ ಹೊಸ ಅಲೆ ಸಿನಿಮಾದ ಭಾಗವಾಗಿ ಬಂದ ‘ಫಣಿಯಮ್ಮ’ ಸಹ ಇನ್ನೊಂದು ಬಗೆಯಲ್ಲಿ ಸಂಪ್ರದಾಯನಿಷ್ಠೆಯನ್ನ ಬಲಪಡಿಸಿದ್ದನ್ನ ನೋಡಬಹುದು. ನನ್ನ ಮೊದಲನೆಯ ಅಧ್ಯಾಯದಲ್ಲಿ ಅದರ ಬಗ್ಗೆ ವಿವರಗಳು ಇದಾವೆ.
ಇರಲಿ, ನೀವು ನಿಮ್ಮ ಮೊದಲನೆಯ ಚಿತ್ರದಲ್ಲೇ ವಿಧವೆಯ ಲೈಂಗಿಕತೆ ಅನ್ನೋ ಬೆಂಕಿಯಂತಹ ಪ್ರಶ್ನೆಗೆ ನಮ್ಮನ್ನ ಎದುರಾಗಿಸಿದ್ರಿ. ನನ್ನ ಮಟ್ಟಿಗಂತೂ ಅದೊಂದು ಅಪೂರ್ವ ಧೈರ್ಯ ಅಂತಲೇ ಅನ್ನಿಸುತ್ತೆ. ಆಮೇಲೆ ಇಪ್ಪಂತ್ತೆಂಟು ವರ್ಷಗಳ ನಂತರ ಅಂದರೆ 2005ರಲ್ಲಿ ಮತ್ತೊಮ್ಮೆ ವಿಧವೆಯನ್ನ ತೆರೆಗೆ ತಂದಿರಿ. ಅಂದ್ರೆ ಅದು ಬರೀ ಒಂದು ಪಾತ್ರವಲ್ಲ, ಅಥವಾ ಪ್ರಶ್ನೆಯಲ್ಲ. ಬದಲಿಗೆ ಒಂದು ಪ್ರಬಲವಾದ ಸಿನಿಮಾತ್ಮಕ ಸಂಕೇತ ಅಂತ ನನ್ನ ಭಾವನೆ. ಎರಡೆರಡು ದೇಶಕಾಲಗಳ ನೆಲೆಯಲ್ಲಿ ನೀವು ಎದುರಾದ ‘ಘಟಶ್ರಾದ್ಧ’ದ ಯಮುನಕ್ಕ ಮತ್ತು ‘ನಾಯಿನೆರಳು’ ವಿನ ವೆಂಕಟಲಕ್ಷ್ಮಿ ಪರಸ್ಪರ ಹೇಗೆ ಭಿನ್ನವಾಗಿದಾರೆ? ಯಾವ ತಾತ್ವಿಕ ಕಾಳಜಿಗಳಿಗೆ ಮತ್ತೊಮ್ಮೆ ವಿಧವೆಯನ್ನ ಆರಿಸಿಕೊಂಡ್ರಿ?
ಕಾಸರವಳ್ಳಿ: ನಾನು 1977ರಲ್ಲಿ ‘ಘಟಶ್ರಾದ್ಧ’ ಮಾಡೋವಾಗ ಮುಂದೆ ಯಾವತ್ತೋ ‘ನಾಯಿನೆರಳು’ ಮಾಡ್ತೀನಿ ಅನ್ನೋ ಕಲ್ಪನೆ ಸಹ ಇರಲಿಲ್ಲ. ಅಥವಾ ವಿಧವೆಯ ಪಾತ್ರ ಮತ್ತೆ ನನ್ನ ಸಿನಿಮಾದಲ್ಲಿ ಬರುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ. ‘ಘಟಶ್ರಾದ್ಧ’ ತುಂಬ ಸಂಕೀರ್ಣವಾದ, ಮತ್ತು ಎಲ್ಲ ದೃಷ್ಟಿಯಿಂದಲೂ ತುಂಬ ಒಳ್ಳೆಯ ಕಥೆ. ಅದರ ರಚನೆ, ಅದು ನಮ್ಮಲ್ಲಿ ಹೊಮ್ಮಿಸುವ ಭಾವನೆಗಳು, ಅದು ಕಟ್ಟಿ ಕೊಡುವ ಲೋಕದೃಷ್ಟಿ, ಇವೆಲ್ಲವೂ ಅದು ಆಸಕ್ತಿಯನ್ನ ಹುಟ್ಟು ಹಾಕಬಲ್ಲ ಕಥೆ ಅಂತ ಅನ್ನಿಸಿತ್ತು. ಅದರಲ್ಲಿ ನಾನು ನನ್ನ ಸಿನಿಮಾತ್ಮಕ ಅನ್ನೋ ಅಂಶಗಳನ್ನ ಸೇರಿಸಿದ್ದೆ.
ಆವಾಗಿನ ನವ್ಯರ ಚಿಂತನೆ ನಾವು ನೋಡುವ ದೃಷ್ಟಿಯನ್ನೇ ತಿದ್ದಿದ್ದು ನಿಜ. ಮಾರ್ಕ್ಸಿಸ್ಟ್ ಚಿಂತನೆಗೆ ಭಿನ್ನವಾದ ಒಂದು ಚಿಂತನೆಯ ನೆಲೆಯಲ್ಲಿ ಹುಡುಕಾಟ ಪ್ರಾರಂಭ ಆಗಿದ್ದ ಕಾಲ ಅದು. ಅದು ಯಾವುದು ಅಂತಂದ್ರೆ ಲೋಹಿಯಾ ಅವರ ಸೋಷಿಯಲಿಸ್ಟ್ ಚಿಂತನೆ. ಅವರ ಪ್ರಕಾರ ಭಾರತದಂತಹ ದೇಶದಲ್ಲಿ ಇರೋದು ಬರಿಯ ವರ್ಗದ ಪ್ರಶ್ನೆಯಲ್ಲ. ಜಾತಿ ಸಹ ಅದಕ್ಕೆ ತಳುಕು ಹಾಕಿಕೊಂಡಿರುತ್ತೆ ಅಂತ. ಅದನ್ನ ಅನಂತಮೂರ್ತಿ, ಲಂಕೇಶ್, ಕೆ. ವಿ ಸುಬ್ಬಣ್ಣ ಅಂಥವರು ಅದಕ್ಕೆ ಒತ್ತು ಕೊಡುತ್ತಾ ಹೋದರು. ಆ ಅಂಶವನ್ನ ಒಳಗೊಳ್ಳೋದು ‘ಘಟಶ್ರಾದ್ಧ’ದ ಗಟ್ಟಿತನ ಅಂತ ಅನ್ನಿಸುತ್ತೆ. ಜಾತಿವ್ಯವಸ್ಥೆ ಹೆಣ್ಣನ್ನ ಹೇಗೆ ನಡೆಸಿಕೊಳ್ತಾ ಇದೆ ಅನ್ನೋದು ಅಲ್ಲಿ ತುಂಬ ಮಹತ್ವವನ್ನ ಪಡೆದುಕೊಳ್ಳುತ್ತೆ.

ಘಟಶ್ರಾದ್ಧದಲ್ಲಿ ಬರೋ ಮೇಲ್ಜಾತಿಯ ಮಂದಿ ಸಾಮಾಜಿಕವಾಗಿ ಎಲ್ಲ ಸವಲತ್ತುಗಳನ್ನ ಪಡೆದುಕೊಂಡಿದ್ದರೂ ಸಹ ಮನೆಯೊಳಗೆ ಯಾವ ರೀತಿಯಲ್ಲಿ ಹೆಣ್ಣನ್ನ subjugate ಮಾಡ್ತಿದ್ರು, ಅನ್ನೋ ಅಂಶಗಳ ಬಗ್ಗೆ ಚಿಂತನಿಸುತ್ತಿದ್ದಾಗ ‘ಘಟಶ್ರಾದ್ಧ’ ನನ್ನ ಯೋಚನೆಗಳಿಗೆ ಒಂದು ಬಲವಾದ ನೆಲೆಯನ್ನ ಒದಗಿಸುತ್ತೆ ಅಂತ ಅನ್ನಿಸ್ತು. ಇದನ್ನ ಯಾಕೆ ಹೇಳ್ತಾ ಇದೀನಿ ಅಂದ್ರೆ, ಘಟಶ್ರಾದ್ಧ ಅನ್ನೋ ಒಂದು ಸಂಪ್ರದಾಯ ಇದೆಯಲ್ಲ ಅದು ಒಂದು ನಂಬಿಕೆಯನ್ನ ಆಧರಿಸಿದ್ದು. ತಾವು ಸತ್ತ ಮೇಲೆ ತಮ್ಮ ಮಕ್ಕಳು ತಮ್ಮನ್ನ ಸ್ವರ್ಗಕ್ಕೆ ಕಳಿಸ್ತಾರೆ ಅನ್ನೋ ನಂಬಿಕೆ ಇದೆ. ಆದರೆ ಮಕ್ಕಳಿಲ್ಲದವರು ತಮ್ಮ ಶ್ರಾದ್ಧವನ್ನ ತಾವೇ ಮಾಡಿಕೊಳ್ಳೋ ಒಂದು ಸಂಪ್ರದಾಯ ಇತ್ತು. ಆದರೆ ಯಾವುದೇ ಸಂಪ್ರದಾಯ, ಪದ್ಧತಿಗಳು ಸಾಂಸ್ಥಿಕತೆಗೆ ಒಳಗಾದ ತಕ್ಷಣ ಅದನ್ನ ತಮ್ಮದೇ ಅದಂತ ಹಿತಾಸಕ್ತಿಗಳಿಗೆ ಬಳಸಿಕೊಳ್ಳೋ ಪ್ರವೃತ್ತಿ ಸಹ ಬೆಳೆಯುತ್ತೆ. ಈ ಘಟಶ್ರಾದ್ಧ ಅನ್ನೋದು ಹೆಂಗಸಿಗೆ ಮತ್ತಷ್ಟು ನಿರ್ಬಂಧವನ್ನ ಹೇರುವ ಪದ್ಧತಿಯಾಗಿ ಬದಲಾಗ್ತಾ ಹೋಯ್ತು.
ನನಗೆ ‘ರಾಷ್ಟ್ರ’ ಅನ್ನೋ ಹರವಾದ ಚೌಕಟ್ಟಿನ ಪರಿಕಲ್ಪನೆಗಿಂತ ಈ ಸಮುದಾಯದ ನೆಲೆ ಮುಖ್ಯ ಆಯ್ತು. ಸಂಪ್ರದಾಯ ಸಾಂಸ್ಥಿಕವಾಗ್ತಾ ಹೋದಂತೆಲ್ಲ ಅದೆಂತ ಉಸಿರು ಕಟ್ಟಿಸುವ ವಾತಾವರಣವನ್ನ ಸೃಷ್ಟಿ ಮಾಡ್ತಾ ಇದೆ ಅನ್ನೋದು. ಅದು ಬರೀ ಯಮುನಕ್ಕನಿಗೆ ಮಾತ್ರ ಅಲ್ಲ, ಆ ಚಿಕ್ಕ ಹುಡುಗ ನಾಣಿಗೂ ಸಹ ಆಗ್ತಾ ಇರುತ್ತೆ. ಹಾಗೇನೆ ಉಡುಪರಿಗೆ ಮಗಳ ವಯಸ್ಸಿನ ಹುಡುಗಿಯನ್ನ ಮದುವೆ ಮಾಡೋದಕ್ಕೆ ಪ್ರಯತ್ನ ಪಡ್ತಾ ಇದ್ರಲ್ಲ, ಅದು ಇನ್ನೊಂದು ಯಮುನಕ್ಕನನ್ನ ಸಹ ಸೃಷ್ಟಿ ಮಾಡೋಕೆ ಹೊರಟಂತ ಪ್ರಯತ್ನ. ಅಂದ್ರೆ ಈ ಸಮುದಾಯದಲ್ಲಿ, ಅಂದ್ರೆ ಬ್ರಾಹ್ಮಣ ಸಮುದಾಯದಲ್ಲಿ ಸಂಪ್ರದಾಯ ಅನ್ನೋದು ಚಕ್ರದ ತರ ಸುತ್ತುತ್ತಾ ಮತ್ತೆ ಆದದೆ ಪರಿಸ್ಥಿತಿಗಳನ್ನ, ಪಾತ್ರಗಳನ್ನ ಸೃಷ್ಟಿ ಮಾಡ್ತಾ ಇದೆ ಅನ್ನೋ ಅಂಶ. ಆಗೀಗ ಸ್ವಲ್ಪ ಮೇಲೆ ಹೋಗಬಹುದು ಅಷ್ಟೆ. ಆದ್ರೆ ಅಲ್ಲಿ ಸಹ ಇನ್ನೊಂದು ಚಕ್ರ ಸೃಷ್ಟಿ ಆಗುತ್ತೇ ಹೊರಟು radical ಆದ ಬದಲಾವಣೆ ಏನೂ ಆಗಿಲ್ಲ ಅನ್ನೋದು.
ಇದು ನನ್ನ ತುಂಬಾ ಕಾಡಿದ ಅಂಶ. ಯಾಕೆಂದ್ರೆ ನಾನು ಪ್ರೈಮರಿ ಸ್ಕೂಲಲ್ಲಿ ಓದ್ತಾ ಇದ್ದಾಗ ನಾವು ಐದು ಮಂದಿ ವಿದ್ಯಾರ್ಥಿಗಳು ಇದ್ವಿ. ನಾವು ಐದೂ ಜನ ಆಮೇಲಿನ ಬದುಕಲ್ಲಿ ಬೇರೆಬೇರೆ ದಿಕ್ಕಿಗೆ ಹೋದ್ವಿ. ಎಷ್ಟೋ ವರ್ಷಗಳ ನಂತರ ಮತ್ತೆ ಸಿಕ್ಕಾಗ ನನ್ನೊಬ್ಬನನ್ನ ಬಿಟ್ಟು, ಆ ನಾಲ್ಕೂ ಮಂದಿ ಅವರ ತಂದೆ ಏನನ್ನ ಮಾಡ್ತಾ ಇದ್ರೊ, ಅದನ್ನೇ ಮಾಡ್ತಾ ಇದಾರೆ ಅನ್ನೋದನ್ನ ಗಮನಿಸಿದೆ. ನಮ್ಮ ಮನೆಯ ಅಡಿಗೆಭಟ್ರ ಮಗ, ಈಗ ಕುಕಿಂಗ್ ಕಾಂಟ್ರಾಕ್ಟರ್ ಆಗಿದಾನೆ. ಅಷ್ಟೇ ವ್ಯತ್ಯಾಸ.

ಇನ್ನೊಬ್ಬ ಸಹಪಾಠಿಯ ಅಪ್ಪ ಜಮೀನು ಮಾಡ್ತಾ ಇದ್ರು. ಈಗ ಇವನೂ ಸಹ ಜಮೀನೇ ಮಾಡ್ತಾ ಇದಾನೆ. ಅಂದ್ರೆ ರಾಡಿಕಲ್ ಆಗಿ ಬೇರೆ ಏನಾದರೂ ಅವಕಾಶಗಳು ಇದಾವಾ ಅಂತ ಹುಡುಕಿಕೊಂಡು ಹೋಗೋದಕ್ಕೆ ಅವಕಾಶನೇ ಇಲ್ಲ! (‘ಅವರೆಲ್ಲ ಬ್ರಾಹ್ಮಣರೇನಾ?’ – ಲೇ.) ಇಲ್ಲ, ಅಡಿಗೆ ಭಟ್ಟರು ಬ್ರಾಹ್ಮಣರು. ಜಮೀನು ಮಾಡುತ್ತಿದ್ದವ ಒಕ್ಕಲಿಗೆ ಸಮುದಾಯಕ್ಕೆ ಸೇರಿದವ. ಮತ್ತೆ ಇನ್ನಿಬ್ಬರು ಸಮಾಜ ‘ಕೆಳಜಾತಿ’ ಅಂತ ಕರೆಯೋ ಜಾತಿಗಳಿಂದ ಬಂದವರು. ಅವರಲ್ಲಿ ನಾನೊಬ್ಬನೇ ಬೇರೆ ರೀತಿಯ ಅವಕಾಶ ಇದೆಯಾ ಅಂತ ಹುಡುಕೊಂಡು ಹೋಗಿದ್ದು. ಅಂದ್ರೆ ಪ್ರಾದೇಶಿಕವಾಗಿ ತೀರಾ ಹಿಂದುಳಿದ ನಮ್ಮಂತ ಮಲೆನಾಡಿನ ಹಳ್ಳಿಗಳಿಗೆ ಮತ್ತೆ ನಮ್ಮ ದೇಶದ ಇತರ ಭಾಗಗಳಲ್ಲಿ ಸಹ ಎಷ್ಟೋ ಮಂದಿಗೆ ಬೇರೆಯ ತರದ ಬದುಕಿನ ಆಯ್ಕೆ ಅವಕಾಶಗಳು ಸಿಗೋದೆ ಇಲ್ಲ, ಯಾಕೆ ಅನ್ನೋದು ನನ್ನ ತುಂಬಾ ಕಾಡ್ತಾ ಇದ್ದ ಪ್ರಶ್ನೆ. ಆಗ ಸ್ವಾತಂತ್ರ್ಯ ಬಂದು ಹತ್ತಿಪ್ಪತ್ತು ವರ್ಷಗಳು ಆಗಿದ್ವು. ನೆಹರುವಿಯನ್ ಯುಗದ ಪ್ರಾರಂಭದಲ್ಲಿ ಇದ್ವಿ. ಸ್ವಾತಂತ್ರ್ಯ ಅನ್ನೋ ಪರಿಕಲ್ಪನೆ ನಿಜವಾದ ಅರ್ಥದಲ್ಲಿ ಮೊದಲ ಹೆಜ್ಜೆಗಳನ್ನ ಊರೋದಕ್ಕೆ ಪ್ರಯತ್ನಿಸುತ್ತಿದ್ದಂತ ಕಾಲ ಅದು. ಆದರೂ ಹೊಸಹೊಸ ಸಾಧ್ಯತೆಗಳನ್ನ ಹುಡುಕಬೇಕು ಅನ್ನೋ ಯೋಚನೆ ಕೂಡಾ ಎಷ್ಟೋ ಜನಕ್ಕೆ ಬಂದಿರಲಿಲ್ಲ.
‘ಘಟಶ್ರಾದ್ಧ’ ಇಪ್ಪತ್ತು-ಮೂವತ್ತರ ದಶಕದ ಕಾಲಘಟ್ಟದಲ್ಲಿ ಇದ್ದಿರಬಹುದು. ರಾಷ್ಟ್ರ ಅನ್ನೋದರ ಒಳಗೆ ಇದ್ದ ಸಮುದಾಯಗಳು ಅರವತ್ತರ ತನಕವೂ ಹಳೆಯದರಿಂದ ಬಿಡಿಸಿಕೊಳ್ಳೋದಕ್ಕೆ ಮಾಡ್ತಾ ಇದ್ದ ಪ್ರಯತ್ನಗಳನ್ನ ನಾನು ಅನ್ವೇಷಿಸುತ್ತಿದ್ದೆ. ‘ಘಟಶ್ರಾದ್ಧ’ಮೇಲ್ಜಾತಿಯ ಸಮುದಾಯದ ಸುತ್ತ ಹೆಣೆದ ಕತೆಯಾಗಿದ್ದರೂ ಸಹ ಅಲ್ಲಿ ಬೇರೆ ಬೇರೆ ಜಾತಿ-ವರ್ಗಗಳ ಮಂದಿ ಇದಾರೆ. ಅದರ ಮೂಲಕ ಸಮಾಜ ಅನ್ನೋ ಸಂರಚನೆ ಇದೆಯಲ್ಲಾ ಅದರ ಹಲವಾರು ಪದರಗಳನ್ನ ಹಿಡಿಯೋದಕ್ಕೆ ಪ್ರಯತ್ನ ಪಟ್ಟೆ. ಅದು ಸಾಂಪ್ರದಾಯಿಕ ವ್ಯವಸ್ಥೆಗಳಲ್ಲಿ ಸಿಕ್ಕಿಬಿದ್ದು ಉಸಿರು ಕಟ್ಟಿಸುತ್ತಿರುವ ಸಮಾಜವನ್ನ ಹಿಡಿಯೋ ಪ್ರಯತ್ನ. ಅಲ್ಲಿ ಒಂದು ಮಾತು ಬರುತ್ತೆ, ‘ವೇದಾಧ್ಯಯನ, ಅವೇ ಮಂತ್ರ, ಹೊಸತು ಏನೂ ಇಲ್ಲ,’ ಅಂತ. ಆದರೆ ಅದರ ಜೊತೆಗೇನೆ ಹೊರಗೆ ಒಂದು ದಾರಿ ಇರಬಹುದು ಅನ್ನೋದನ್ನ ಸೂಚಿಸೋದಕ್ಕೆ ನನ್ನ ‘ಘಟಶ್ರಾದ್ಧ’ ದಲ್ಲಿ ಒಂದು ಸರಕಾರಿ ಶಾಲೆ ಇದೆ. ಅನಂತಮೂರ್ತಿಯವರು ತುಂಬ ಇಷ್ಟಪಟ್ಟಂತಹ ಬದಲಾವಣೆ ಅದು.
ನನ್ನ ಸ್ನೇಹಿತ, ಅದೇ ಅಡಿಗೆಭಟ್ಟರ ಮಗನ ಉದಾಹರಣೆಯನ್ನ ತೆಗೆದುಕೊಳ್ಳಿ. ನನಗಿಂತ ಬುದ್ಧಿವಂತ. ಆದರೆ ಅವನು ಸಿಕ್ಕಿಬಿದ್ದಂತಹ ವ್ಯವಸ್ಥೆಯಿಂದ ಹೊರಗೆ ಬರೋದಕ್ಕೆ ಸಾಧ್ಯ ಆಗಿಲ್ಲ. ಅಥವಾ ನಮ್ಮ ರೈತಾಪಿ ಕುಟುಂಬಗಳಿಗೂ ಸಹ ಹೊಸದರ ಸಾಧ್ಯತೆಗಳು ಇದ್ದಿರಬಹುದು. ಆದರೆ ಪ್ರಯತ್ನಗಳೇ ನಡೆಯದಂತೆ ಪರಿಸ್ಥಿತಿ ಇರಬಹುದಲ್ಲ? ಬೇರೆ ರೀತಿಯ ಕನಸುಗಳನ್ನು ಕಾಣೋದಕ್ಕೆ ಸಹ ಅದರ ಸಾಧ್ಯತೆಗಳ ಅರಿವು ಇರಬೇಕು. ಹಾಗಾಗಿ ನಾನು ಹರವಾದ ರಾಷ್ಟ್ರ ಅಂತಲ್ಲ, ಆದರೆ ಒಂದು ಸಮುದಾಯದ ಬಿಕ್ಕಟ್ಟುಗಳನ್ನ ಅರ್ಥ ಮಾಡಿಕೊಳ್ಳೋದಕ್ಕೆ ಪ್ರಯತ್ನಪಟ್ಟಿದೀನಿ. ರಾಷ್ಟ್ರ ಅಂದ್ರೆ ಸಮುದಾಯಗಳೇ ತಾನೇ?
‘ಘಟಶ್ರಾದ್ಧ’ ದಲ್ಲಿ ದೇಶ, ಸ್ವಾತಂತ್ರ್ಯ ಇತ್ಯಾದಿಗಳ ಯಾವ ರೆಫರೆನ್ಸ್ ಕೂಡ ಇಲ್ಲ. ಜೊತೆಗೆ ತಾವು ದೇಶದ ಒಂದು ಭಾಗ ಅನ್ನೋ ಪರಿಕಲ್ಪನೆ ಸಹ ಆ ಸಮುದಾಯಕ್ಕಿಲ್ಲ. ತಮ್ಮ ಜಾತಿ, ತಮ್ಮ ಊರು, ಅಬ್ಬಬ್ಬಾ ಅಂದರೆ ಮೈಸೂರು, ಮಹಾರಾಜರು ಅನ್ನೋ ಪ್ರಜ್ಞೆ ಇದ್ದಿರಬಹುದು. ಅದಕ್ಕಿಂತ ಆಚೆ ಏನೂ ಇಲ್ಲ. ಮಹಾರಾಜರ ಆಳ್ವಿಕೆಯಲ್ಲಿ ಇರೋ ಸಮುದಾಯಗಳಿಗೆ ಮಹಾರಾಜರೇ ಅಲ್ಟಿಮೇಟ್. ಮಹಾರಾಜರನ್ನ ಪ್ರಶ್ನೆ ಮಾಡಬಹುದು ಅನ್ನೋದು ಪ್ರಜಾಪ್ರಭುತ್ವದಿಂದ ಬಂದಿದ್ದು. ಆಗಿನ ಸಮುದಾಯಗಳಿಗೆ ದೇವರನ್ನ ಪ್ರಶ್ನೆ ಮಾಡೋದು ಒಂದೇ, ರಾಜರನ್ನ ಪ್ರಶ್ನೆ ಮಾಡೋದು ಒಂದೇ. ಅದನ್ನ ಕಲ್ಪಿಸಿಕೊಳ್ಳಕ್ಕೆ ಸಹ ಸಾಧ್ಯ ಆಗಲ್ಲ.
ಆದರೆ ‘ನಾಯಿನೆರಳು’ ವಿನ ವೆಂಕಟಲಕ್ಷ್ಮಿಗೆ ಇವತ್ತಿನ ಸಮಾಜದಲ್ಲಿ ಪ್ರಶ್ನೆ ಮಾಡಬಹುದು ಅನ್ನೋ ಸಾಧ್ಯತೆಗಳ ಬಗ್ಗೆ ಅರಿವಿತ್ತು. ಎರಡರ ಕಾಲಘಟ್ಟಗಳ ನಡುವಿನ ವ್ಯತ್ಯಾಸ ಬಹಳವೇನಿಲ್ಲ. ‘ಘಟಶ್ರಾದ್ಧ’ ಮೂವತ್ತರ ದಶಕದ ಸಮಾಜವನ್ನ ಬಿಂಬಿಸಿದರೆ ‘ನಾಯಿನೆರಳು’ ಚಲೇಜಾವ್ ಚಳುವಳಿಯ ಬಗ್ಗೆ ಉಲ್ಲೇಖ ಬರೋದ್ರಿಂದ ನಲವತ್ತರ ದಶಕದ ಮಧ್ಯಭಾಗದಲ್ಲಿ ಅಂತ ಹೇಳಬಹುದು. ಅಥವಾ ಸ್ವಾತಂತ್ರ್ಯ ಬಂದ ಹೊಸತರಲ್ಲಿ. ವ್ಯತ್ಯಾಸ ಏನು ಅಂತಂದ್ರೆ ‘ನಾಯಿನೆರಳು’ ರಾಷ್ಟ್ರ ಅನ್ನೋ ಪರಿಕಲ್ಪನೆಯನ್ನ ಸೀಮಿತ ಮಟ್ಟಿಗಾದರೂ ಕಟ್ಟಿಕೊಡುತ್ತೆ. ಆದ್ರೆ ‘ಘಟಶ್ರಾದ್ಧ’ದಲ್ಲಿ ಅದು ಇಲ್ಲ.
ವೆಂಕಟಲಕ್ಷ್ಮಿಗೆ ಒಬ್ಬಳು ಮಗಳಿದಾಳೆ. ಆಧುನಿಕ ವಿದ್ಯಾಭ್ಯಾಸಕ್ಕೆ ತೆರೆದುಕೊಂಡವಳು. ಮೈಸೂರಿನಲ್ಲಿ ಓದ್ತಾ ಇದಾಳೆ. ಅವಳಲ್ಲಿ ಎಲ್ಲವನ್ನೂ ಪ್ರಶ್ನೆ ಮಾಡುವ ವೈಜ್ಞಾನಿಕ ಮನೋಭಾವ ಇತ್ತು. ‘ಘಟಶ್ರಾದ್ಧ’ ದ ನಾಣಿಗೆ ಅದು ಇದ್ದಿರಬಹುದು. ಆದರೆ ಅಲ್ಲಿ ಅವನನ್ನ ವ್ಯವಸ್ಥೆ ಕುಬ್ಜಗೊಳಿಸಿಬಿಟ್ಟಿದೆ. ಅಲ್ಲಿ ಸ್ವಲ್ಪ ದೊಡ್ಡವನಾದ ಇನ್ನೊಬ್ಬ ಹುಡುಗ ಶಾಸ್ತ್ರಿ ಒಂದು ಸಲ ಹೇಳ್ತಾನಲ್ಲ? ‘ಥೂ! ಎಂಥ ದರಿದ್ರ ಊರಪ್ಪ ಇದು! ಅದೇ ಪಾಠ, ಅದೇ ಮಂತ್ರ, ಅದೇ ಗಂಜಿ ಊಟ, ಅದೇ ಬೋಡಮ್ಮಗಳ ಸಹವಾಸ! ದೇವಸ್ಥಾನದ ಬದಿಗೆ ಹೂ ಗಂಧದ ಗುಪ್ಪೆ ನಾರುತ್ತಲ್ಲಾ, ಹಂಗೆ!’
‘ನಾಯಿನೆರಳು’ ಹಾಗಿಲ್ಲ. ರಾಷ್ಟ್ರ-ಪ್ರಭುತ್ವದ ವ್ಯವಸ್ಥೆಗಳು ಅಲ್ಲಿ ಇಣಿಕಿ ನೋಡುತ್ತವೆ. ವೆಂಕಟಲಕ್ಷ್ಮಿ ಯಮುನಕ್ಕನ ತರಹ sense of agency ಇಲ್ಲದವಳಲ್ಲ. ಹಾಗಾಗಿ ಅಲ್ಲಿ ಪ್ರತಿಭಟನೆಯ ಮಾರ್ಗಗಳು ಹೊಮ್ಮುತ್ತಾ ಇದಾವೆ. ಪಕ್ಕದ ಮನೆಯವಳು ವೆಂಕುಗೆ ಹೇಳ್ತಾಳಲ್ಲ, ‘ನಿನ್ನ ಗಂಡ ಮತ್ತೆ ಹುಟ್ಟಿ ಬಂದಿದಾನೆ ಅಂತ ಒಪ್ಪಿಕೊಂಡು ಬಿಡು, ಏನೀಗ?’ ಅಂದ್ರೆ ಸಮುದಾಯದ ನೆಲೆಯಲ್ಲೇ ನಡೀತಾ ಇರೋ ಅಂತಹ ಬದಲಾವಣೆ ಅದು. ನೀವು ‘ಘಟಶ್ರಾದ್ಧ’ದಲ್ಲಿ ಅಗ್ರಹಾರದ ರಚನೆಯನ್ನೇ ನೋಡಿ, ಸುತ್ತೆಲ್ಲ ಮನೆಗಳಿದ್ದು ಮಧ್ಯದಲ್ಲಿ ಒಂದು ದೇವಸ್ಥಾನ ಇದೆ. ಅದು ಒಂದು ರೀತಿಯ closed structure. ಅದರ ಕೇಂದ್ರ ಸಂಪ್ರದಾಯವೇ. ಮಂದಿ, ಅದರಲ್ಲೂ ಯಮುನಕ್ಕನಂತಹ ಹೆಣ್ಣು ಅದರಲ್ಲಿ ಬಂಧಿ. ಇಲ್ಲಿ ಹಾಗಿಲ್ಲ. ಅವರು ಅನುಕೂಲವಾಗಿದಾರೆ. ಒಂದು ದೊಡ್ಡ ಮನೆ ಇದೆ. ಮತ್ತೆ ಅದಕ್ಕೆ ಒಂದು ಸ್ವತಂತ್ರವಾದ ಸ್ವರೂಪ ಸಹ ಇದೆ.

‘ನಾಯಿನೆರಳು’ ವಿನ ಮೂರನೆಯ ಭಾಗದಲ್ಲಿ ಪ್ರಭುತ್ವ ಹೆಚ್ಚು ಹೆಚ್ಚು ಮೂಗು ತೂರಿಸೋದನ್ನ ತೋರಿಸೋದಕ್ಕೆ ಪ್ರಯತ್ನಪಟ್ಟಿದೀನಿ. ಪೋಲೀಸು, ಕೋರ್ಟು, ಕೇಸು… ಅವು ಮಂದಿಯ ವೈಯುಕ್ತಿಕ ಜೀವನದ ನಿರ್ಧಾರಗಳು ಅನ್ನೋ ಅಂಶವನ್ನ ಗಣನೆಗೇ ತಗೊಳಲ್ಲ. ವೆಂಕಟಲಕ್ಷ್ಮಿಗೆ ವ್ಯವಸ್ಥೆಯ ಆಯಾಮಗಳ ಪರಿಚಯ ಇದೆ. ಜೊತೆಗೆ, ಸಮುದಾಯದ ಒಂದು ಪಾತ್ರ ‘ಸ್ವಲ್ಪ ದಿನ ಹಿಟ್ಲರ್ ಕಾಟ ಕೊಟ್ಟ. ಈಗ ಗಾಂಧಿ ಕಾಟ,’ ಅಂತ ಹೇಳುತ್ತೆ. ಅವರಿಬ್ಬರ ನಡುವಿನ ವ್ಯತ್ಯಾಸವೂ ಅವರಿಗೆ ಗೊತ್ತಿಲ್ಲ. ಆದರೆ ಅಚ್ಚಣ್ಣಯ್ಯ ಮತ್ತು ಪುಟ್ರಾಂಭಟ್ಟರಿಗೆ ತುಂಬ ಸೀಮಿತವಾಗಿಯಾದರೂ ಅದರ ಅರಿವಿದೆ.
ರಾಜಲಕ್ಷ್ಮಿಗೆ ಆಧುನಿಕ ವಿದ್ಯಾಭ್ಯಾಸ ಇದೆಲ್ಲದರ ಬಗೆಗಿನ ಪ್ರಜ್ಞೆಯನ್ನ ನೀಡಿದೆ. ವೆಂಕಟಲಕ್ಷ್ಮಿಗೆ ಪ್ರಭುತ್ವದ ಬಗ್ಗೆ ಒಂದು ಕಲ್ಪನೆ ಇದೆ ನಿಜ, ಅದಕ್ಕಿಂತ ಹೆಚ್ಚಾಗಿ ಆ ಕಾಲಘಟ್ಟದ ಬದುಕಿನ ಅನುಭವ ಇದೆ.
ವಿಧವೆಯನ್ನೇ ಮತ್ತೆ ತರಬೇಕು ಅನ್ನೋ ಪ್ರಜ್ಞಾಪೂರ್ವಕ ಆಯ್ಕೆ ಏನೂ ಇರಲಿಲ್ಲ. ಆದ್ರೆ ಯಾವುದೋ ಒಂದು ಕಥನ ಮತ್ತು ಅದರ ವಿವರಗಳು ಸಿನೆಮಾ ಮಾಡುವ ನನ್ನ ತಲೆಯಲ್ಲಿ ಮೂಡ್ತಾ ಹೋಗೋದು ಒಂದು ಸಾವಯವ ಪ್ರಕ್ರಿಯೆ. ಚೌಕಟ್ಟನ್ನ ಮೊದಲೇ ಸಿದ್ಧ ಪಡಿಸಿಟ್ಟುಕೊಂಡು ನಂತರ ಅದಕ್ಕೆ ವಿವರಗಳನ್ನ ಒಗ್ಗಿಸೋ ಪ್ರಯತ್ನ ಅಲ್ಲ.
ಹಾಗೇನೆ, ಒಂದು ಬದಲಾವಣೆಯನ್ನ ಆ ಸಮುದಾಯದ ಯಾವ ವ್ಯಕ್ತಿ ಅತ್ಯಂತ ದಮನಕ್ಕೆ ಒಳಗಾಗಿರುತ್ತಾನೋ, ಅಥವಾ ಒಳಗಾಗಿರುತ್ತಾಳೋ, ಅಂತವರ ಮೂಲಕ ತೋರಿಸಿದ್ರೆ ಬದಲಾವಣೆ ಅನ್ನೋದು ಹೆಚ್ಚು ಸ್ಪಷ್ಟವಾಗುತ್ತೆ. ಆ ದಮನಿತ ವ್ಯಕ್ತಿ ಹೆಚ್ಚಿನಂಶ ಹೆಣ್ಣೇ ಆಗಿರ್ತಾಳೆ. ಅದರಲ್ಲೂ ಬ್ರಾಹ್ಮಣ ಸಮುದಾಯದ ವಿಧವೆಯರನ್ನ ನಾನು ಚಿಕ್ಕಂದಿನಿಂದಲೂ ಕಂಡಿದೀನಿ. ಆಗೆಲ್ಲ ನಮ್ಮ ಮನೆಗಳಲ್ಲಿ ಒಬ್ಬರಲ್ಲ ಒಬ್ಬರು ತಲೆ ಬೋಳಿಸಿಕೊಂಡ ಹೆಂಗಸರು ಇದ್ದೇ ಇರುತ್ತಿದ್ದರು. ಅವರ ಕೆಲಸ ಏನು ಅಂತ ಅಂದ್ರೆ ಸಹಾಯ ಮಾಡೋದು. ಅಡಿಗೆ ಮಾಡೋ ಹಾಗಿಲ್ಲ. ಬದಲಿಗೆ ಕಟ್ಟೆ ಒರಸೋದು, ಪಾತ್ರೆ ತೊಳಿಯೋದು, ಇತ್ಯಾದಿ ಕೆಲಸಗಳು. ಎಲ್ಲೋ ಒಂದು ಮೂಲೆಯಲ್ಲಿ ಕೂತಿರ್ತಾರೆ. ಊಟದ ಹೊತ್ತಿನಲ್ಲಿ ಊಟ ಮಾಡಿ ಅಲ್ಲೇ ಮೂಲೇಲಿ ಮಲಗಿಕೊಳ್ತಾರೆ. ಅವರು ಒಂದು ರೀತಿಯಲ್ಲಿ ಮನೆಯ ಭಾಗವೇನೋ ಸರಿ, ಆದರೆ ನಗಣ್ಯರು. Invariably ಅವರು ತುಂಬಾ ವೀಕ್ ಆಗಿರ್ತಾರೆ. ಏನೋ ಗೊಣಗ್ತಾ ಇರ್ತಾರೆ. ಅಂದ್ರೆ ಸಹಜವಾದ ಬದುಕಿನಿಂದ ವಂಚಿತರಾಗಿರ್ತಾರೆ. ನನಗೆ ಆ ರೂಪ ಮನಸ್ಸಿನ ಮೂಲೆಯಲ್ಲಿ ಯಾವಾಗಲೂ ಕಾಡಿದ್ದಿದೆ.
ಆದರೆ ಯಮುನಕ್ಕ ಮನೆಯ ಒಳಗಡೆ ಸಣ್ಣ ಸಣ್ಣ ವಿಷಯಗಳಲ್ಲಿಯಾದ್ರೂ ಪ್ರತಿಭಟಿಸೋದನ್ನ ಕಾಣ್ತೀವಿ. ಅಪ್ಪನ ವಿರುದ್ಧ ಅಲ್ಲ, ಆದರೆ ನಾಣಿಯ ಪರ ವಹಿಸಿಕೊಂಡು ಬರುವಾಗ ಆ ದನಿಯನ್ನ ನಾವು ಕೇಳಬಹುದು. ಅವಳಿಗೆ ಹೋಲಿಸಿದ್ರೆ ವೆಂಕಟಲಕ್ಷ್ಮಿಗೆ ಜಾಸ್ತಿ ಸ್ವಾತಂತ್ರ್ಯ ಇದೆ. ಒಬ್ಬ ಮರುಕ ತುಂಬಿರೋ ಮಾವ ಸಹ ಇದಾನೆ. ನನಗೆ ಕೇವಲ ಒಳ್ಳೆಯ ಅಥವಾ ಕೆಟ್ಟ ಅಂತನ್ನೋ ಕಪ್ಪು ಬಿಳುಪು ಪಾತ್ರಗಳು ಅಸಹಜ ಅಂತಲೇ ಅನ್ನಿಸುತ್ತೆ.
ಆ ಮಾವ ಅವಳ ಪರಿಸ್ಥಿತಿಯನ್ನ ಅರ್ಥ ಮಾಡಿಕೊಂಡರೂ ಸಹ ಅವನೂ ಅಸಹಾಯಕನೇ. ಆದ್ರೆ ‘ಘಟಶ್ರಾದ್ಧ’ ದಲ್ಲಿ ಬರೋ ಯಮುನಕ್ಕನ ತಂದೆ ಉಡುಪರು ಮಗಳ ಬಗ್ಗೆ ತಳೆದಿರೋ ಭಾವನೆ ಗೊತ್ತಾಗೋದೆ ಇಲ್ಲ. ಯಾಕೆಂದ್ರೆ ಅವರು ಚಿತ್ರದ ಮೊದಲಲ್ಲಿ ಕಾಣಿಸಿಕೊಂಡು ಹೊರಟು ಹೋಗ್ತಾರೆ. ಆಮೇಲೆ ಅವರು ಬರೋದು ಚಿತ್ರದ ಕೊನೆಯಲ್ಲಿ. ಅವರಿಗೆ ಶಾಸ್ತ್ರೀಯ ಬಗ್ಗೆ ಅಸಹನೆ ಇದೆ ಅಂತ ಗೊತ್ತಾಗುತ್ತೆ. ಅಂದ್ರೆ ಅಲ್ಲಿಯ ಪಾತ್ರಗಳೆಲ್ಲ ತುಂಬ closed structure ನಲ್ಲಿ ಸಿಕ್ಕಿ ಬಿದ್ದವರು. ಆದರೆ ‘ನಾಯಿ ನೆರಳು’ವಿನ ಅಚ್ಚಣ್ಣಯ್ಯರಿಗೆ ಹೊರಗಿನ ಪ್ರಪಂಚ ಗೊತ್ತು. ತುಂಬಾ ಸಿಂಪಥೆಟಿಕ್ ಆಗಿ ಇರ್ತಾರೆ. ಏನೋ ಅನ್ಯಾಯ ಆಗಿಹೋಗಿದೆ. ಒಂದು ಸಲ ಅವರು ನಾಗಲಕ್ಷ್ಮಿಗೆ ಹೇಳ್ತಾರೆ: ವಿಶ್ವನನ್ನ ಕರೆದುಕೊಂಡೇನೋ ಬಂದೆ. ಆದ್ರೆ ಅದರಿಂದ ಪರಿಹಾರ ಹೋಗಲಿ. ಅನಾಹುತನೇ ಹೆಚ್ಚಾಯ್ತೇನೋ ಅಂತ ಅನ್ನಿಸ್ತಾ ಇದೆ.’ ಅಂದ್ರೆ ಅವರಿಗೆ ಈ ಪುನರ್ಜನ್ಮ ಅನ್ನೋದು ಸುಳ್ಳು ಅಂತ ಆಳದಲ್ಲಿ ಗೊತ್ತಿತ್ತು, ಆದರೆ ಕರ್ಕೊಂಬರಬೇಕಾಯ್ತು ಇಲ್ಲಿ ನನಗೆ ಒಂದು ಸಾಮಾಜಿಕ ಪಲ್ಲಟವನ್ನ ತೋರಿಸುವುದರ ಕಡೆಗೆ ಗಮನ ಇತ್ತು. ‘ಘಟಶ್ರಾದ್ಧ’ ಕಥನಕ್ಕೆ ವಿರುದ್ಧವಾಗಿ ‘ನಾಯಿನೆರಳು’ವಿನಲ್ಲಿ ಹೊರದಾರಿಗಳಾದರೂ ಇದ್ದವು.
ಇದನ್ನ ನನ್ನ ‘ಬಿಂಬ ಬಿಂಬನ’ ಪುಸ್ತಕದಲ್ಲಿ ಸಹ ಹೇಳಿದೀನಿ ಅಂತನ್ನಿಸುತ್ತೆ. ಮೂಢನಂಬಿಕೆಯ ಬಗ್ಗೆ ಹಲವರ ಅಭಿಪ್ರಾಯಗಳನ್ನ ಸಂಗ್ರಹಿಸ್ತಾ ಇದ್ದಾಗ, ನೀವು ಸಮಾಜದ ಸವಲತ್ತುಗಳನ್ನ ತಗೊಳೋ ಮಂದಿ ಅದನ್ನ ಮೂಢನಂಬಿಕೆ ಅಂತ ತಳ್ಳಿ ಹಾಕ್ತೀರಿ. ಆದರೆ ಸಾಮಾಜಿಕವಾಗಿ ಅಂಚಿಗೆ ಒತ್ತರಿಸಲ್ಪಟ್ಟ ಮಂದಿಗೆ ಬೇರೆಯದೇ ರೀತಿಯಲ್ಲಿ ಉಪಯೋಗಕ್ಕೆ ಬರ್ತಾ ಇರಬಹುದು ಅನ್ನೋದನ್ನ ಮರೀಬಾರದು ಅಂತ.
ಈ ಮಾತನ್ನ ಡಿ. ಆರ್ ನಾಗರಾಜ್ ಹೇಳಿದ್ರು, ಜಿ. ರಾಜಶೇಖರ್ ಹೇಳಿದ್ರು. ಆಗ ನನಗೆ ಸ್ವಲ್ಪ ಯೋಚನೆ ಶುರುವಾಯ್ತು. ನಾವು ಎಲ್ಲ ಸವಲತ್ತುಗಳನ್ನ ಪಡೆದುಕೊಂಡು ಇದು ನಂಬಿಕೆ, ಇದು ಮೂಢನಂಬಿಕೆ ಅಂತ ಷರಾ ಬರೆಯೋಕೆ ಹೋಗ್ತೀವಲ್ಲ? ಆದರೆ ಅದರಲ್ಲಿ ಒಂದು ಸಣ್ಣ ಪ್ರತಿಭಟನೆಯ ಎಳೆ ಸಹ ಇರಬಹುದಲ್ಲಾ? ಅಥವಾ ವಿದ್ರೋಹವನ್ನ ತನ್ನ ಹೊಟ್ಟೆಯಲ್ಲೆ ಹೊತ್ತಿರಬಹುದಲ್ಲಾ?
ಆಗ ಒಂದೆರಡು ರಿಚುಯಲ್ಲುಗಳನ್ನ ಗಮನಿಸಿದೆ. ಒರಿಸ್ಸಾದಲ್ಲಿ ಒಂದು ‘ಜಾನಿ ಶಿಕಾರ್’ ಅನ್ನೋ ಒಂದು ವಾರ್ಷಿಕ ಪದ್ಧತಿ ಇದೆ. ಅದರಲ್ಲಿ ಹೆಂಗಸರೆಲ್ಲ ವರ್ಷಕ್ಕೊಂದು ಸಲ ಆಯುಧಗಳನ್ನ ತಗೊಂಡು ಕಾಡಿಗೆ ಹೋಗಿ ಏನು ಬೇಕಾದ್ರೂ ಮಾಡಬಹುದು. ಹಾಗೇನೆ ಕೊಡಗಿನಲ್ಲಿ ವರ್ಷಕ್ಕೊಂದು ದಿನ ಆಳುಗಳು ಯಾರನ್ನ ಬೇಕಾದರೂ ಬೈಯ್ಯೋದಕ್ಕೆ ಸ್ವಾತಂತ್ರ್ಯ ಇರುತ್ತೆ. ಹೆಚ್ಚಿನಂಶ ಎಲ್ಲರೂ ದಣಿಗಳನ್ನ ಬೈತಾರೆ. ಅದಕ್ಕೊಂದು ರಿಚುಯಲ್ ಸ್ವರೂಪವನ್ನ ಕೊಟ್ಟಿರೋದ್ರಿಂದ ಅವರ ಹೊಟ್ಟೆ ಒಳಗೆ ಇರೋ ಕಹಿನೆಲ್ಲ ಹೊರಗೆ ಹಾಕಬಹುದು. ಅದು ಹೊರಗೆ ಹಾಕೋದಕ್ಕೆ ಅವಕಾಶ ಕೊಟ್ಟು ಅವರನ್ನ ತಣ್ಣಗಾಗಿಸೋ ಉಪಾಯ ಅಂತ.
ಇರಲಿ, ‘ನಾಯಿನೆರಳು’ನಲ್ಲಿ ಅಂತಹ ಒಂದು ನಂಬಿಕೆಯನ್ನ ಬಳಸಿಕೊಳ್ಳೋ ಸಾಧ್ಯತೆ ನನಗೆ ಕಾಣಿಸ್ತು. ಅಲ್ಲಿ ಮಂದಿ ನಂಬಿಕೆಯನ್ನೇ ಬಳಸಿಕೊಂಡು ಬದುಕುಳಿಯೋ ಪ್ರಯತ್ನ ಇದೆಯಲ್ಲ, ಅದು ನನಗೆ ಒಂದು ಸಿನಿಮಾತ್ಮಕ ಸಾಧ್ಯತೆಯನ್ನು ಹೊಳೆಸಿತು.

ರಾಜಶೇಖರ್ ಅವರಂಥಾ ಪಕ್ಕಾ ಕಮ್ಯುನಿಸ್ಟ್ ಮತ್ತು ಗಾಂಧಿವಾದಿ ಒಂದು ಮಾತು ಹೇಳಿದ್ರು. ನನಗೆ ತುಂಬಾ ಆಶ್ಚರ್ಯ ಅಂತನ್ನಿಸಿತು. ಬೆನ್ನಿ ಹಿಲ್ ಇಲ್ಲಿಗೆ ಬಂದಾಗ ಎಲ್ಲರೂ ಮುಗಿಬಿದ್ರಲ್ಲ, ಅದರ ಬಗ್ಗೆ ಮಾತಾಡ್ತಾ ‘ಏನು ತಪ್ಪು? ನೀವು ಯೋಚನೆ ಮಾಡಿ. ಇವತ್ತಿನ ಪರಿಸ್ಥಿತಿನಲ್ಲಿ ಅವರಿಗೆ ಬೇರೆಲ್ಲಾ ದಾರಿಗಳು ಮುಚ್ಚಿರಬಹುದು. ಅಥವಾ ಆಸ್ಪತ್ರೆಗೆ ಹೋಗೋದಕ್ಕೆ ದುಡ್ಡಿಲ್ಲ. ಇದಕ್ಕೆ ಹೇಗೂ ದುಡ್ಡು ಕೊಡುವ ಹಾಗಿಲ್ಲ. ಫ್ರೀ ತಾನೇ? ಹೋಗಿ ನೋಡಿಯೇ ಬಿಡೋಣ, ಆದ್ರೆ ಆಗ್ಲಿ, ಇಲ್ಲದಿದ್ರೆ ಇಲ್ಲ, ಕಳಕೊಳ್ಳೋದಕ್ಕೆ ಏನಿದೆ?
ಎರಡನೆಯದಾಗಿ, ಎಲ್ಲಾ ಔಷಧಿ ಕೊಡಿಸಿದ್ರೂ ಸಹ ಗುಣ ಆಗಿಲ್ಲದೆ ಇರಬಹುದು. ಸತ್ತೋಗಿಬಿಡಲಿ ಅಂತ ಬಿಡಕ್ಕಾಗುತ್ತಾ? ಈ ದಾರಿನೂ ಪ್ರಯತ್ನಿಸಿದರೆ ಆಯ್ತು. ಹಾಗಾಗಿ ಇದರ ಒಂದೇ ಬದಿಯನ್ನ ನೋಡಿ ಮೂಢನಂಬಿಕೆ ಅಂತ ತಳ್ಳಿ ಹಾಕೋದರ ಬದಲು ಅದನ್ನ ಬದುಕುಳಿಯುವ ಪ್ರಯತ್ನ ಅಂತಲೂ ನೋಡಬೇಕಾಗುತ್ತೆ. ಮೂಢನಂಬಿಕೆ ಅನ್ನೋದು ದಮನಿತರಾದ ವ್ಯಕ್ತಿಗಳಿಂದಲೇ ಅಥವಾ ಸಮುದಾಯದಿಂದಲೇ ಹೊಮ್ಮಿದರೆ ಅದು ಪ್ರತಿಭಟನೆಯ ರೂಪವಾಗಿರುತ್ತೆ. ಇಲ್ಲ, ಮೇಲಿನ ಶಕ್ತಿಗಳು ಅದನ್ನ ಹುಟ್ಟು ಹಾಕಿದಾಗ ಅದು ದಮನಿಸುವ ಉದ್ದೇಶವನ್ನೇ ಹೊಟ್ಟೆಯಲ್ಲಿ ಹೊತ್ತಿರುತ್ತೆ. ಆದ್ದರಿಂದ ನಾವು ನೋಡಬೇಕಾಗಿರೋದು, ಯಾರಿಂದ ಅಥವಾ ಎಲ್ಲಿಂದ ಈ ಮೂಢನಂಬಿಕೆ ಹೊಮ್ಮಿದೆ ಅನ್ನೋದು.
ಅದುಮಿಟ್ಟ ಕೋಪವನ್ನ ಹೊರಗೆ ಹಾಕೋದಕ್ಕೆ ಅದು ಒಂದು ಸಾಧನವಾ? ಎಲ್ಲಾ, ಈಗ ಒಬ್ಬ ಜಮೀನ್ದಾರ ‘ಹರಕೆ ಕಟ್ಟಿಕೊಂಡಿದೀಯ, ನಡೆಸದೇ ಇದ್ರೆ ಒಳ್ಳೆದಾಗಲ್ಲ ನೋಡು’ ಅಂತ ಹೆದರಿಸ್ತಾನಲ್ಲ? ಆ ತರಹದ ತಂತ್ರವಾ? ಅದರ ಬಗ್ಗೆ ಯೋಚಿಸ್ತಾ ಇದ್ದಾಗ ಹೆಂಗಸರು ಸಹ ಮೂಢನಂಬಿಕೆಯನ್ನ ಆ ತರಹದ ಪ್ರತಿಭಟನೆಗೆ ಅಥವಾ ವಿದ್ರೋಹಕ್ಕೆ ಬಳಸಬಹುದಲ್ಲ?
ವೆಂಕು ತನ್ನ ಬದುಕಿನಲ್ಲಿ ಯಾವ ರೀತಿಯ ಸವಲತ್ತಗಳು ಸಿಕ್ಕೋ ಸಾಧ್ಯತೆಯೇ ಇಲ್ಲ ಅಂದಾಗ ಒಂದು ಸಿಕ್ಕ ಅವಕಾಶವನ್ನ ಬಳಸಿಕೊಳ್ತಾಳಲ್ಲ, ಅದು ಮುಖ್ಯ. ನೀವು ಬೇಕಿದ್ದರೆ ಅದನ್ನ opportunism ಅಂತ ಕರೀರಿ. ನನಗೆ ಅದು ಮುಖ್ಯವಲ್ಲ. ಆದರೆ ಇದು ನಡೆಯೋ ಕಾಲಘಟ್ಟ ಇದೆಯಲ್ಲ, ಅಂದ್ರೆ ನಲವತ್ತರ ದಶಕದ ನಡುವಿನ ವರ್ಷಗಳು. ಅಲ್ಲಿ ಮಲೆನಾಡಿನ ಒಂದು ಹಳ್ಳಿಯಲ್ಲಿ ಹೊರಗೆ ಏನಾಗ್ತಾ ಇದೆ ಅನ್ನೋದನ್ನ ವಾರ್ತಾಪತ್ರಿಕೆಗಳ ಮೂಲಕ ಆದರೂ ತಿಳಿದುಕೊಳ್ಳುವ ಸಾಧ್ಯತೆ ಇತ್ತು. ಚಲೇಜಾವ್ ಚಳುವಳಿಯಿಂದ ಬ್ರಾಹ್ಮಣ ಸಮುದಾಯದಲ್ಲಿ ಯಾವುದೇ ರೀತಿಯ ಬದಲಾವಣೆ ಆಗಿತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಅಂತದ್ದೊಂದು ಚಳುವಳಿ ನಡೀತಾ ಇದೆ ಅಂತಾದ್ರೂ ಗೊತ್ತಿತ್ತು.
ಕನಾರಳ್ಳಿ: feminine subversion ಇದೆಯಲ್ಲ ಗಿರೀಶ್, ಅದರ ಎಳೆಗಳನ್ನ ನೀವು ಅದ್ಭುತವಾಗಿ ಗ್ರಹಿಸಿದೀರ ಅಂತ ಅನ್ಸುತ್ತೆ. ನಮ್ಮಮ್ಮ ಸಿಕ್ಕಾಪಟ್ಟೆ ಪೂಜೆ ಮಾಡ್ತಿದ್ರು. ಅದರಲ್ಲೂ ಮನೆದೇವರು ವೀರಭದ್ರನ ವಾರ ಅಂತ ಮಂಗಳವಾರ ಇಡೀ ದಿನ ಪೂಜೆ ಸಂಭ್ರಮ. ಅದಕ್ಕೆ ಮನೆ ಎಲ್ಲಾ ಕ್ಲೀನ್ ಮಾಡು, ಬಾವಿ ಹತ್ತಿರ ಸಹ ರಂಗೋಲೆ ಬಿಡು,ಇತ್ಯಾದಿ. ಅದರ ಹಿಂದಿನ ದಿನ ದೇವರ ಮನೆ ಇಡೀ ಪರಮಶುದ್ಧಿಗೆ ಒಳಗಾಗ್ತಾ ಇತ್ತು. ಎಲ್ಲರಿಗೂ ಕೆಲಸವೇ. ನಮ್ಮಪ್ಪಂಗೂ ಗಂಧದಪತ್ರೆ, ಬಿಲ್ವಪತ್ರೆ ಏನೇನೋ ತರೋ ಕೆಲ್ಸ. ಅದ್ಯಾಕೆ ಎಲ್ಲರ ಪ್ರಾಣ ತಿಂದು ಪೂಜೆ ಮಾಡಬೇಕೋ ಅಂತ ನಾನು ತುಂಬಾ ಸಲ ಗೊಣಗಿದ್ದಿದೆ. ಆದ್ರೆ ಬೆಳೀತಾ ಬೆಳೀತಾ ನಮ್ಮಪ್ಪನ್ನ ಎಲ್ಲಿ ಕೂರಿಸಬೇಕೋ ಅಲ್ಲಿ ಕೂರಿಸೋದಕ್ಕೆ ಅದೊಂದು ರೀತಿ ಅಂತ ನನಗೆ ಅರ್ಥ ಆಗೋಕ್ಕೆ ಶುರು ಆಯ್ತು. ಅಂದ್ರೆ ಒಂದು ರೀತಿನಲ್ಲಿ ಫ್ಯೂಡಲ್ ಶಕ್ತಿಗೆ ಎದುರಾಗಿ ಸಾತ್ವಿಕ ಶಕ್ತಿಯ ಪ್ರದರ್ಶನ.
ಹಾಗೇನೆ, ನಿಮ್ಮ ಚಿತ್ರದ ವಿಧವೆಯರಿಗೂ ಕನ್ನಡ ಪ್ರಧಾನಧಾರೆ ವಿಧವೆಗೂ ಅದೆಷ್ಟು ವ್ಯತ್ಯಾಸ ಇದೆ ನೋಡಿ. ಇದನ್ನ ಹೇಳೋವಾಗ ಜಯಲಲಿತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದ ‘ನನ್ನ ಕರ್ತವ್ಯ’ (1965) ನನ್ನ ಮನಸ್ಸಿನಲ್ಲಿ ಇದೆ. ಅಂದ್ರೆ ಐವತ್ತರ ದಶಕದ ಪ್ರಗತಿಶೀಲ ಹಂತದಲ್ಲಿ ವಿಧವೆ ಪ್ರಶ್ನೇನ ಕೈಗೆತ್ತಿಕೊಳ್ಳಬೇಕು, ಆದರೆ ಗಂಡಸು ಕಣ್ಣಿಗೆ ಹಬ್ಬ ಆಗೋ ಹಾಗೆ ಅವಳನ್ನ ಹೇಗೆ ತೋರಿಸೋದು? ಮತ್ತೆ ಅವಳು ಮರುಮದುವೆಯನ್ನ ಒಪ್ಪಿಕೊಳ್ಳಬೇಕಾ? ಹೀಗೆ ಮನಸ್ಸಿಲ್ಲದ ಮನಸ್ಸಿನಿಂದ ಮಾಡಿದ ಸಿನಿಮಾತ್ಮಕ ವಿಧವೆ ಪ್ರಯತ್ನ ಕೊನೆಗೆ ತಾತ್ವಿಕವಾಗಿ ಮಹಾ ಅನ್ಯಾಯನೇ ಮಾಡ್ತು ಅಂತನ್ನಿಸುತ್ತೆ.
ಕಾಸರವಳ್ಳಿ: ಹೌದು, ಪ್ರಧಾನಧಾರೆ ಸಿನಿಮಾ ಬದಲಾವಣೆಯನ್ನ ಒಪ್ಪಿಕೊಳ್ಳೊಲ್ಲ. ನೋಡಿ, ‘ಶೋಲೆ’ ಚಿತ್ರದ ವಿಧವೆ ಜಯಾಬಾಧುರಿಗೆ ಕೊನೆಗೂ ಮದುವೆ ಆಗಲ್ಲ. ಆಗಬಹುದಿತ್ತಲ್ಲ? ಅವಳಿಗೆ ಆಗಿದ್ರೆ ಏನೂ ಸಮಸ್ಯೆ ಇರಲಿಲ್ಲ. ಆದ್ರೆ ಮಾಡಲ್ಲ. ಅದು ಪಾತ್ರದ ನಿರ್ಧಾರವೂ ಅಲ್ಲ, ನಿರ್ದೇಶಕನ ನಿರ್ಧಾರವೂ ಅಲ್ಲ. ಸಮುದಾಯದ ಸಂಪ್ರದಾಯ, ನಂಬಿಕೆಗಳಿಗೆ ಧಕ್ಕೆ ಬರಬಾರದು ಅನ್ನೋದಷ್ಟೇ ಅದರ ಕಾಳಜಿ. ಹೀಗೆ ಪ್ರತಿಭಟನೆ, ವಿದ್ರೋಹದಂತಹ ಸಾಧ್ಯತೆಗಳನ್ನ ತೋರಿಸೋದಕ್ಕೆ ತುಂಬಾ ಹೆದರ್ತಾರೆ. ಯಾಕೆ ಅಂದ್ರೆ ಬಂಡವಾಳದ ಪ್ರಶ್ನೆ, ನೋಡಿ. ಹಾಕಿದ ದುಡ್ಡು ವಾಪಸ್ ಬರಬೇಕು. ನನ್ನ ಚಿತ್ರಗಳಿಂದ ಹೇಗೂ ದುಡ್ಡು ಬರೊಲ್ಲ. ಹಾಗಾಗಿ ಏನು ಬೇಕಾದ್ರೂ ಮಾಡಬಹುದು (ಜೋರಾದ ನಗು!)
ಕನಾರಳ್ಳಿ: ಪ್ರಧಾನಧಾರೆ ಸಿನಿಮಾ ಒಂತರಾ touch and go ಆಟ ಆಡ್ತಾ ಇರುತ್ತೆ, ಅಲ್ವಾ? ಉದಾಹರಣೆಗೆ ರೇಖಾ, ಅಮಿತಾಬ್, ಜಯಾಬಾಧುರಿ, ಸಂಜೀವ್ ಕುಮಾರ್ ನಟಿಸಿದ್ದ ‘ಸಿಲ್ಸಿಲಾ’ (1981). ಅದರಲ್ಲಿ ಮದುವೆಯ ಹೊರಗಿದ್ದ ಪ್ರೇಮಪ್ರಕರಣವನ್ನ ತೋರಿಸಿದ್ರೂ ಸಹ ಕೊನೆಗೆ ಪಾತ್ರಗಳು ಆಯಾಯ ಮದುವೆಗೆ ವಾಪಸ್ ಹೋಗ್ತಾವೆ. ಮದುವೆಯ ಸಾಂಸ್ಥಿಕ ಪಾವಿತ್ರ್ಯವನ್ನ ಉಳಿಸಬೇಕು. ಆದ್ರೆ ಮದುವೆಯ ಹೊರಗಿನ ಸಂಬಧದ ಬಗ್ಗೆ ಮಂದಿಗೆ (ಅದರಲ್ಲೂ ಗಂಡಸರಿಗೆ) ಮಹಾ ಆಕರ್ಷಣೆ ಇರೋದ್ರಿಂದ ಅದನ್ನ ಕೈಗೆತ್ತಿಕೊಳ್ಳಬೇಕು. ಇಷ್ಟೆಲ್ಲಾ ಆದರೂ ಸಹ ಕೊನೆಗೆ ಸಾಂಪ್ರದಾಯಿಕ ಮುಗಿತಾಯವೇ ಇರಬೇಕು. ಅಂದ್ರೆ ಮಹಾ status quo!
ಕಾಸರವಳ್ಳಿ: ಹೌದು, ಸ್ಟೇಟಸ್ ಕೋ. ಯಾಕೆಂದ್ರೆ ವ್ಯವಸ್ಥೆಯನ್ನ ಎದುರು ಹಾಕೊಂಡ್ರೆ ಎಲ್ಲಿ ಆರ್ಥಿಕವಾಗಿ ಪೆಟ್ಟು ಬೀಳುತ್ತೋ ಅನ್ನೋ ಭಯ. ಅಂದ್ರೆ ಇಲ್ಲಿ ಪ್ರಭುತ್ವದ ಸಮಸ್ಯೆ ಇಲ್ಲ, ನೋಡಿ. ಸಿಲ್ಸಿಲಾ ಅಂತ ಹೇಳಿದ್ರಿ. ಅದು ಬೇರೆ ರೀತಿಯಲ್ಲಿ ಕೊನೆಯಾಗಿದ್ರೂ ಸಹ ಪ್ರಭುತ್ವ ಬಂದು ಅದನ್ನ ನೆಟ್ಟಗೆ ಮಾಡು ಅಂತ ಹೇಳೊಲ್ಲ. ಸದ್ಯದಲ್ಲಿ ಕೆಲವು ಇಸ್ಲಾಮಿಕ್ ದೇಶಗಳಲ್ಲಿ ಆ ಸಮಸ್ಯೆ ಇದೆ. ಭಾರತದಲ್ಲೂ ಸಹ ಅದು ಮಾಡಂಗಿಲ್ಲ, ಇದು ಮಾಡಂಗಿಲ್ಲ ಅಂತ ಮುಂದಿನ ದಿನಗಳಲ್ಲಿ ಬಂದ್ರೂ ಬರಬಹುದು. ಆದರೆ ಆವಾಗಂತೂ ಇರಲಿಲ್ಲ. ಅದು self-censorship. ನಾವೇ ಹಾಕೊಂಡುಬಿಡೋದು.
ಕನಾರಳ್ಳಿ: ಜೊತೆಗೆ ಸಿನಿಮಾ ಟಿಕೆಟ್ ತಗೊಳೋವನು ಒಬ್ಬ ಗಂಡಸು ಆಗಿರ್ತಾನೆ. ಹಾಗಾಗಿ ಅವನಿಗೆ ನಂಬಿಕೆ ಇರುವ ಮೌಲ್ಯವ್ಯವಸ್ಥೆಯನ್ನೇ ತೋರಿಸುತ್ತಾ ಹೋಗಬೇಕು. ಈ ಆರ್ಥಿಕ ಕಾಳಜಿನೂ ಸೇರಿಕೊಂಡು ಕನ್ನಡ ಸಿನೆಮಾ ತುಂಬ ಸಂಪ್ರದಾಯಸ್ಥವಾಗಿದ್ದಂತ ಒಂದು ಪ್ರಕಾರ. ಆದರೆ ಉಳಿದ ಕಡೆ, ಉದಾಹರಣೆಗೆ ಮರಾಠಿಯಲ್ಲಿ ಒಬ್ಬ ಬೆಂಕಿಯಂತ ವಿಧವೆ ಪಾತ್ರವನ್ನ ತುಂಬಾ ಹಿಂದೆಯೇ ತರಲಾಗಿತ್ತು, ಅಲ್ವಾ?
ಕಾಸರವಳ್ಳಿ: ಹೌದು, ‘ದುನಿಯಾ ನ ಮಾನೆ’ (1937) ಒಬ್ಬ ತುಂಬ ಸ್ಟ್ರಾಂಗ್ ಆದಂತಹ ವಿಧವೆಯನ್ನ ತೆರೆ ಮೇಲೆ ತಂದಿದ್ದಿದೆ. ಇಲ್ಲಿಯ ಹಳೆಯ ಮೈಸೂರು ರಾಜಾಳ್ವಿಕೆಯಲ್ಲಿ ಸಮಾಜ ತುಂಬ ಸಂಪ್ರದಾಯಶೀಲವಾಗಿಯೇ ಇತ್ತು. ಜೊತೆಗೆ ಗಾಂಧಿ ಬಂದಿದ್ದಾಗ ಮಹಾರಾಜರ ಆಳ್ವಿಕೆಯನ್ನ ತುಂಬ ಮೆಚ್ಚಿಕೊಂಡು, ಬಾಳಾ ideal king ಅನ್ನೋ ಅರ್ಥದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನ ‘ರಾಜರ್ಷಿ’ ಅಂತ ಕರೆದದ್ದೂ ಇದೆ. ಗಾಂಧೀಜಿ ಪ್ರಕಾರ ಮೈಸೂರು ಒಂದು ಐಡಿಯಲ್ ಸ್ಟೇಟ್. ಇಲ್ಲಿ ಸ್ವಾತಂತ್ರ್ಯ ಚಳುವಳಿಯ ಅವಶ್ಯಕತೆ ಏನೂ ಇಲ್ಲ ಅಂತ ಸಹ ಅಲ್ಲಿ ಸೂಚನೆ ಇತ್ತು. ಸ್ವಾತಂತ್ರ್ಯ ಚಳುವಳಿ ಇಲ್ಲಿ ನಡೆದಿದ್ದರೆ ರಾಜರು ಅದನ್ನ ಹತ್ತಿಕ್ಕೋದಕ್ಕೆ ಪ್ರಯತ್ನಿಸ್ತಿದ್ರು ಅಂತೇನೂ ಇರಲಿಲ್ಲ. ಬ್ರಿಟಿಷರು ಸಹ ಮೈಸೂರು ರಾಜಮನೆತನವನ್ನ ತುಂಬಾ ಗೌರವದಿಂದಲೇ ಕಾಣುತಿದ್ರು. ಮಹಾರಾಜರಿರಬಹುದು, ವಿಶ್ವೇಶ್ವರಯ್ಯನರು ಇರಬಹುದು, ಮಿರ್ಜಾ ಇಸ್ಮಾಯಿಲ್ ಅವರು ಇರಬಹುದು, ಎಷ್ಟು ಒಳ್ಳೆಯ ಗವರ್ನೆನ್ಸ್ ಕೊಟ್ಟಿದ್ರು ಅಂದ್ರೆ ನಮಗೆ ಸ್ವಾತಂತ್ರ್ಯದ ಅಗತ್ಯ ಇದೆ ಅಂತೇನೂ ಅನ್ನಿಸಲಿಲ್ಲ. ಹಾಗೆ ನೋಡಿದ್ರೆ ನಮಗೆ ಸ್ವಾತಂತ್ರ್ಯ ಬಂದರೆ ನಾವು ಸಫರ್ ಆಗ್ತೀವೇನೋ ಅನ್ನೋ ಹಿಂಜರಿಕೆ ಇತ್ತು ಅಂತನ್ನಿಸುತ್ತೆ.
ಕನಾರಳ್ಳಿ: ಹಾಗೇನೆ ಹಿಂದೂ ಮಹಾಸಭಾದಂತ ಶಕ್ತಿಗಳು ಸಹ ಮೈಸೂರು ಬರೋಡಾಗಳ ರಾಜಾಳ್ವಿಕೆ ಉದಾಹರಣೆಗಳನ್ನ ತಮ್ಮ ಅಜೆಂಡಾಗೆ ಬಳಸಿಕೊಂಡಿದ್ದಿದೆ. ಅಂದ್ರೆ ಎಲ್ಲೆಲ್ಲಿ ಹಿಂದೂ ರಾಜರುಗಳು ಇದಾರೋ ಅಲ್ಲೆಲ್ಲಾ ಅಭಿವೃದ್ಧಿ ಆಗಿದೆ ಅಂತ ಸಾಧಿಸುವ ಪ್ರಯತ್ನ. ನಾನು ಗ್ರಹಿಸಿದ ಮಟ್ಟಿಗೆ ಗಾಂಧೀಜಿ ಅಂತವರು ನಮ್ಮ ರಾಜಾಳ್ವಿಕೆ ವ್ಯವಸ್ಥೆಯನ್ನ endorse ಮಾಡಿದ್ದು ಒಂದು, ಮತ್ತು ಇನ್ನೊಂದು ನಮ್ಮದೇ ಸಾಮಾಜಿಕ ಸಂಪ್ರದಾಯಸ್ಥ ಮನಸ್ಸು radical ಆಗೋದರ ಅವಶ್ಯಕತೆ ಏನೂ ಇಲ್ಲ ಅಂತ ಭಾವಿಸಿದ್ದು. ಈ ಎರಡು ಸ್ಥಿತಿಗತಿಗಳು ಕನ್ನಡದ ಮನಸ್ಸನ್ನ ರೂಪಿಸಿದವು ಅಂತನ್ನಿಸುತ್ತೆ.

ಕಾಸರವಳ್ಳಿ: ನೋಡಿ, ನಮ್ಮ ಸಾಹಿತ್ಯದಲ್ಲೂ ಅಷ್ಟೆ. ಇಪ್ಪತ್ತನೆಯ ಶತಮಾನದ ಆಧುನಿಕ ಕನ್ನಡ ಸಾಹಿತ್ಯದ ಹರವನ್ನು ಗಮನಿಸಿದರೆ ಮೊದಲ ಹಂತಗಳಲ್ಲಿ ರಾಜರನ್ನು idolize ಮಾಡೋ ಉದ್ದೇಶವೇ ಕಾಣಿಸುತ್ತೆ. ಹಾಗೆ ನೋಡಿದರೆ ಪ್ರಜಾಪ್ರಭುತ್ವ ಅನ್ನೋ ಪರಿಕಲ್ಪನೆ ನಿಜವಾದ ಅರ್ಥದಲ್ಲಿ ನಮ್ಮ ಸಮಾಜದೊಳಗೆ ಇಳಿದೇ ಇರಲಿಲ್ಲ ಅಂತಲೇ ಹೇಳಬೇಕಾಗುತ್ತೆ. ಒಳ್ಳೆಯ ರಾಜ, ಹೆಚ್ಚಿನ ಮಟ್ಟಿಗೆ ಕ್ಷೇಮ, ಇನ್ನೇನು ಬೇಕು ಅನ್ನೋ ಒಂದು ರೀತಿಯ ತೃಪ್ತ ಮನಸ್ಥಿತಿ.

