ಮಾರನ ಕನಸು ನನಸಾಗಲಿಲ್ಲ. ಮಣ್ಣು ಸೇರಿತ್ತು. ಮಾರನ ತತ್ಕಾಲದ ಜನಪ್ರಿಯತೆಯನ್ನು ಮಾತ್ರವೇ ನಂಬಿಕೊಂಡಿದ್ದ ಆ ಸಿನಿಮಾ ಚೆನ್ನಾಗಿ ಓಡಲಿಲ್ಲ. “ಸಿನಿಮಾ ಚೆನ್ನಾಗಿ ಕಲೆಕ್ಷನ್ ಮಾಡಿಯೇ ಮಾಡುತ್ತದೆ. ಸಿನಿಮಾ ಹಿಟ್ ಆದಮೇಲೆ ನಿನಗೆ ಎಂಟು ಲಕ್ಷ ಕೊಡುತ್ತೇವೆ” ಎಂದು ನಂಬಿಸಿದ್ದ ನಿರ್ದೇಶಕ- ನಿರ್ಮಾಪಕರು ಆಮೇಲೆ ಕೈ ಕೊಟ್ಟಿದ್ದರು. ಸಿನಿಮಾ ಆರಂಭದ ಸಂದರ್ಭದಲ್ಲಿ ಕೊಟ್ಟಿದ್ದ ಹನ್ನೆರಡು ಸಾವಿರ ಮಾತ್ರ ಮಾರನ ಪಾಲಿಗೆ ದಕ್ಕಿದ್ದು. ಇತ್ತ ಕಡೆ ಸ್ಟೇಜ್ ಶೋಗಳಲ್ಲಿಯೂ ಆತನ ಜನಪ್ರಿಯತೆ ಕುಸಿದಿತ್ತು.
ವಿಶ್ವನಾಥ ಎನ್‌ ನೇರಳಕಟ್ಟೆ ಬರೆದ ಕಥೆ “ಮಾರ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

“ಮಾರ ……” ನನಗಿಷ್ಟೇ ಕೇಳಿಸಿದ್ದು. ಅಂತರ್ಗಾಮಿ ನೌಕೆಯಂತೆ ಕೆಲಸದಲ್ಲಿ ಮುಳುಗಿಹೋಗಿದ್ದ ನನಗೆ ಪತ್ನಿಯ ಕರೆಯನ್ನು ಸ್ವೀಕರಿಸುವ ಮನಸ್ಸು ಇರಲಿಲ್ಲ. ಆದರೂ ಸ್ವೀಕರಿಸಿದ್ದೆ. ತಕ್ಷಣವೇ ಪತ್ನಿ ಕಿವಿಯೊಳಗೆ ಬಿತ್ತಿದ್ದು ಇದೇ ಮಾತು- “ಮಾರ ……” ಅವಳ ಮಾತಿನ್ನೂ ಮುಗಿದಿರಲಿಲ್ಲ. ನನ್ನ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಶ್ರೀಮತಿಯ ಅಪರಿಪೂರ್ಣ ಮಾತು ಅರ್ಧ ಓದಲ್ಪಟ್ಟ ಅದ್ಭುತ ಪುಸ್ತಕದಂತೆ ಅಪರಿಮಿತ ಕುತೂಹಲವನ್ನು ನನ್ನಲ್ಲಿ ಹುಟ್ಟಿಸಿತಾದರೂ ಅದನ್ನು ಆ ಕ್ಷಣಕ್ಕೆ ತಣಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಛೇಂಬರಿನಿಂದ ಹೊರಬಂದಿದ್ದ ಬಾಸ್‌ನ ನಿಖರ ದೃಷ್ಟಿ ನನ್ನ ಕಡೆಗಿತ್ತು. ಮೊಬೈಲ್ ಚಾರ್ಜಿಗಿಟ್ಟು, ಕೆಲಸದಲ್ಲಿ ತೊಡಗಿಕೊಂಡ ನನ್ನ ಪಾಲಿಗೆ ಮಾರನ ನೆನಪು ಸಂಪೂರ್ಣ ಸತ್ತುಹೋಗಿತ್ತು.

ದುಡಿಮೆ ಮುಗಿಸಿ, ಆಫೀಸಿನ ಗೇಟಿನೆದುರು ಬಂದು ನಿಂತು ನೂಕುನುಗ್ಗಲಿನ ಬಿಎಂಟಿಸಿ ಬಸ್ಸನ್ನು ಹತ್ತಿ, ಸೀಟು ಹಿಡಿದ ತಕ್ಷಣ ಮಾರ ಮತ್ತೆ ನನ್ನ ತಲೆಯೇರಿ ಕುಳಿತ. ‘ಏನಾಗಿರಬಹುದು ಅವನಿಗೆ? ಏನಾದರೂ ಹೊಸ ಅವಾಂತರ ಸೃಷ್ಟಿಸಿದ್ದಾನೋ ಏನೋ’ ಯೋಚನೆ ಅರ್ಧ ತಲೆ ಹೊಕ್ಕ ಕೂಡಲೇ ಹೆಂಡತಿಗೆ ಕರೆ ಮಾಡಿದೆ. ಎರಡೆರಡು ಸಲ ಕರೆ ಮಾಡಿದರೂ ಆಕೆ ಫೋನು ಎತ್ತುತ್ತಲೇ ಇಲ್ಲ. ಅರುವತ್ತಾರರ ಹಿರಿಜೀವ ಗಿರಿಜಮ್ಮನವರ ಜೊತೆಗೆ ಗೇಟಿನ ಪಕ್ಕ ನಿಂತು ಹರಟೆ ಹೊಡೆಯುತ್ತಿರಬಹುದು. ಹುಟ್ಟಿದ್ದೇ ಮಾತನಾಡುವುದಕ್ಕೆ ಎಂಬಷ್ಟು ಮಹಾನ್ ವಾಚಾಳಿಗಳು ಇವರಿಬ್ಬರು. ಮಾತಿಗೆ ನಿಂತರೆ ವಾರ್ತಾ ವಾಹಿನಿಗಳ ಚರ್ಚೆಯಲ್ಲಿ ಪಾಲ್ಗೊಳ್ಳುವ ಮಹನೀಯರಂತೆ ಸುತ್ತಲಿನ ಪ್ರಪಂಚವನ್ನೇ ಮರೆತುಬಿಡುತ್ತಾರೆ. ಪತ್ನಿ ಆ ಮಾತನ್ನು ಹೇಳುವಾಗ ನಗುತ್ತಿದ್ದಳೋ? ಇಲ್ಲಾ ಸಹಜವಾಗಿದ್ದಳೋ? ಅಥವಾ ಬೇಸರದಿಂದಲೋ? ಯಾವ ಬಗೆಯ ಭಾವನೆ ಅವಳದ್ದಾಗಿತ್ತು? “ಮಾರ ……” ಉಲಿದ ದನಿಯನ್ನು, ದನಿಯ ಹಿಂದಿದ್ದ ಭಾವವನ್ನು ಸ್ಮರಿಸಿಕೊಳ್ಳುವ ಪ್ರಯತ್ನ ಮಾಡಿದೆ. ಧ್ವನಿಯ ಬಗೆ ಹೇಗಿತ್ತು ಎನ್ನುವುದು ಸ್ಪಷ್ಟವಾಗಲಿಲ್ಲ. ಮನೆ ತಲುಪುವವರೆಗೂ ನನ್ನ ಕುತೂಹಲ ಅಳಿಯುವಂಥದ್ದಲ್ಲ ಎನ್ನುವುದು ನನಗೀಗ ಸ್ಪಷ್ಟವಾಗಿತ್ತು.

ಕೆ. ಆರ್. ಮಾರ್ಕೆಟ್ ಬರುತ್ತಿದ್ದಂತೆ ಬಸ್ಸಿನಿಂದಿಳಿದೆ. ಗೂಡಿನಿಂದ ಹೊರಬಂದ ಇರುವೆಗಳಂತೆ ಸುತ್ತಮುತ್ತೆಲ್ಲಾ ಓಡಾಡಿಕೊಂಡಿದ್ದ ಜನರು, ಕಾರಣವಿಲ್ಲದೆಯೂ ಹಾರ್ನ್ ಸದ್ದು ಹೊಮ್ಮಿಸುವ ವಾಹನಗಳು, ಗ್ರಾಹಕರ ಚೌಕಾಶಿ, ಬೈದಂತೆ ನಟಿಸುತ್ತಲೇ ಲಾಭದ ಲೆಕ್ಕಾಚಾರ ಹಾಕುತ್ತಿರುವ ವ್ಯಾಪಾರಿಗಳು, ಹೂಗನಸಿನ ಹದಿಹರೆಯದವರು, ಕಣ್ಣದೃಷ್ಟಿ ಬತ್ತಿಹೋಗಲಿದ್ದ ವೃದ್ಧರು ಎಲ್ಲರೂ ಅಲ್ಲಿದ್ದರು, ಎಲ್ಲವೂ ಅಲ್ಲಿದ್ದವು. ಕೋಪ, ನಿರಾಸೆ, ಸ್ವಾರ್ಥ, ಕರುಣೆ, ಅಸಮಾಧಾನ, ಅಹಂಕಾರ, ನಿರ್ಲಿಪ್ತತೆ, ಸಂತಸ, ದಿಟ್ಟತನ, ಅಶ್ಲೀಲತೆ- ಈ ಎಲ್ಲಾ ಭಿನ್ನ ಭಾವಗಳ ಅತ್ಯಪೂರ್ವ ಅಭಿವ್ಯಕ್ತಿಯಂತಿದ್ದ ಆ ಮಾರುಕಟ್ಟೆ ನವರಸಾನ್ವಿತವಾದ ನಾಟ್ಯರಂಗದಂತೆ ತೋರುತ್ತಿತ್ತು. ಬಗೆಬಗೆಯ ಧರ್ಮಗಳು, ಜಾತಿಗಳು, ಭಾಷೆಗಳು, ಆಸಕ್ತಿಗಳು, ಕೃತಕತೆ- ಸಹಜತೆಗಳಿಂದ ಒಡಮೂಡಿದ್ದ ಆ ಸ್ಥಳ ಚಣವೊತ್ತಿಗೆ ಮಿನಿ ಭಾರತವಾಗಿ ಮಾರ್ಪಟ್ಟಿತ್ತು.

ಹೂವಿನಂಗಡಿಯ ಸಮೀಪದಲ್ಲಿ ಸುಮಾರು ಐದು ಆರು ವರ್ಷದ ಮಗುವೊಂದು ನಿಂತಿತ್ತು. ಬಾಯಲ್ಲಿ ಬೆಟ್ಟನ್ನಿಟ್ಟುಕೊಂಡು ಕಾಣದಿರುವ ತನ್ನ ತಾಯಿಯನ್ನು ನೆನೆದು ಮನಸೋ ಇಚ್ಛೆ ಅಳುತ್ತಿತ್ತು. ಬಳಿಯಲ್ಲಿಯೇ ಸಾಗುತ್ತಿದ್ದ ಕೆಲವರು ಮಗುವಿನ ಮುದ್ದುಮೊಗ ಕಂಡು, ಅಳುವಿಗೆ ಕಾರಣ ವಿಚಾರಿಸಿ, ಅದರ ತಾಯಿಯನ್ನು ಹುಡುಕುವ ಪ್ರಯತ್ನ ನಡೆಸುತ್ತಿದ್ದರು. ಮಗು ತಮಿಳು ಮಾತನಾಡುತ್ತಿದ್ದುದನ್ನು ಕೇಳಿಸಿಕೊಂಡ ಹೂವಿನಂಗಡಿಯ ಹೆಂಗಸು ತನ್ನ ವ್ಯವಹಾರದ ರಗಳೆಯನ್ನೆಲ್ಲಾ ಬದಿಯಲ್ಲಿ ಗಂಟುಮೂಟೆ ಕಟ್ಟಿಟ್ಟು, ಮಗುವಿನ ಪೂರ್ವಾಪರದ ಬಗೆಗೆ ವಿಪರೀತ ಆಸ್ಥೆ ತೋರಿದಳು. ಮಗುವನ್ನು ಸಂತೈಸುವ ಉಸ್ತುವಾರಿಯನ್ನು ಸದ್ದಿಲ್ಲದಂತೆ ವಹಿಸಿಕೊಂಡಳು. ಮಗು ಅಳುತ್ತಿತ್ತು. ಅವಳು “ಯಾರಪ್ಪ ನೀ? ಉಂಗಳ್ ಪೇರೆನ್ನ?” ಎಂದು ಗಲ್ಲ ನೀವಿ, ಬರುತ್ತಿದ್ದ ಹೋಗುತ್ತಿದ್ದ ಹೆಂಗಸರ ಕಡೆಗೆಲ್ಲಾ ಕೈತೋರಿಸಿ, “ಇದ್ ಉನ್ ಅಮ್ಮವಾ?” ಎಂದು ವಿಚಾರಿಸುತ್ತಿದ್ದಳು.

*****

ಬೆಂಗಳೂರಿಗೆ ಬಂದ ಹೊಸದರಲ್ಲಿ ಮಾರ ಹೀಗೆಯೇ ಇದ್ದ, ಸಂತೆಯಲ್ಲಿ ತಾಯಿಯ ಕೈಬಂಧನವನ್ನು ಕಳಚಿಕೊಂಡ ಮಗುವಿನಂತೆ. ಊರಿಗೆಲ್ಲಾ ಹಂಚಿದ ಬಳಿಕವೂ ಉಳಿದುಕೊಳ್ಳುವಷ್ಟು ಅಧಿಕ ಮುಗ್ಧತೆ ಅವನಲ್ಲಿತ್ತು. ಸುಮ್ಮನಿದ್ದರೂ ನಕ್ಕಂತೆಯೇ ಕಾಣುತ್ತಿದ್ದ ಆತ ಶೀಘ್ರಕೋಪಿ. ಕಾರಣವಿಲ್ಲದೆಯೂ ಕೆಲವೊಮ್ಮೆ ದೂರ್ವಾಸನಂತಾಗಿಬಿಡುತ್ತಿದ್ದ ಅವನ ಕೋಪವನ್ನು ಯಾರೆಂದರೆ ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಎಡವಟ್ಟು ಮಾಡುವುದರಲ್ಲಿ ಪಿಎಚ್.ಡಿ. ಮುಗಿಸಿ ಬಂದವನಂತಿದ್ದ ಅವನನ್ನು ಗೇಲಿ ಮಾಡಲು ನಮ್ಮ ವಠಾರದ ಜನರಿಗೆ ತಿಂಗಳಿಗೊಂದಾದರೂ ಕಾರಣ ಸಿಗುತ್ತಿತ್ತು. ಜನರು ದೂರದರ್ಶನವನ್ನೇ ಮರೆತು ತನ್ನನ್ನು ಸಮೀಪದಿಂದ ದರ್ಶಿಸಲು ಹಾತೊರೆಯುವಂತಹ ವೈಪರೀತ್ಯ ಸನ್ನಿವೇಶಗಳನ್ನು ಈತ ಹಲವು ಬಾರಿ ಸೃಷ್ಟಿಸಿದ್ದ. ಅವನ ಸುಕೃತ ಆಗಾಗ ಕೈಕೊಡುತ್ತಿದ್ದುದರಿಂದಲೋ ಏನೋ, ಅವನು ಮಾಡಿದ್ದೆಲ್ಲವೂ ಎಡವಟ್ಟಾಗುತ್ತಿತ್ತು. ಎಡವಟ್ಟು ಮಾಡುವುದಕ್ಕೇ ಹುಟ್ಟಿದಂತಿದ್ದವನು ಮಾರ.

ಅವನು ಕಾರು ಡ್ರೈವ್‌ ಮಾಡಲು ಹೋಗಿ ಟ್ರಾಫಿಕ್ ಪೋಲೀಸರ ಕೈಗೆ ಸಿಕ್ಕಿಬಿದ್ದಿದ್ದ ಸುದ್ದಿಯಂತೂ ಜನಜನಿತ. ಡ್ರೈವಿಂಗ್ ಕಲಿತರೆ ಬದುಕುವುದಕ್ಕೊಂದು ದಾರಿ ಸಿಗುತ್ತದೆ ಎಂಬ ಯಾರದ್ದೋ ಸಲಹೆಯನ್ನು ನಂಬಿಕೊಂಡ ಈತ ಸ್ಟೇರಿಂಗ್ ಹಿಡಿಯುವುದಕ್ಕೆ ಸಿದ್ಧನಾದ. ಕಾರನ್ನು ಬಾಡಿಗೆಗೆ ಕೊಡುವ ರಫೀಕ್‌ನ ದುಂಬಾಲು ಬಿದ್ದು, ವಾರಕ್ಕೆರಡು ದಿನ ಡ್ರೈವಿಂಗ್ ಕಲಿಸುವಂತೆ ವಿನಂತಿಸಿಕೊಂಡ. ಮಾರನಿಗೆ ಡ್ರೈವಿಂಗ್ ಕಲಿಸಿದರೆ ನಯಾಪೈಸೆ ಹುಟ್ಟಲಾರದೆನ್ನುವುದು ರಫೀಕ್‌ನಿಗೆ ತಿಳಿದಿದ್ದ ಸರಳ ಸತ್ಯವಾಗಿತ್ತು. ತನ್ನ ಪಾಲಿಗೆ ಪರಮೋನ್ನತ ವಿದ್ಯೆಯಾಗಿದ್ದುದನ್ನು ಪುಕ್ಕಟೆಯಾಗಿ ಕಲಿಸಲು ರಫೀಕ್ ಸಿದ್ಧನಿರಲಿಲ್ಲ. ಹಾಗೆಂದು ನೇರವಾಗಿ ಹೇಳಿದರೆ ಅರ್ಥಮಾಡಿಕೊಳ್ಳಲಾರದ, ಅರ್ಥಮಾಡಿಕೊಂಡರೂ ಜೇಬು ಭರ್ತಿ ಮಾಡುವ ಸಾಮರ್ಥ್ಯ ಇಲ್ಲದ ಕ್ಷುಲ್ಲಕ ವ್ಯಕ್ತಿ ಮಾರ ಎನ್ನುವುದು ಅವನಿಗೆ ತಿಳಿದಿತ್ತು. ಅದಕ್ಕಾಗಿ, ಬೆನ್ನು ಹಿಡಿದಿದ್ದ ಬೇತಾಳನನ್ನು ಸಾಗಹಾಕುವ ಪ್ರಯತ್ನವೆಂಬಂತೆ, “ಸೈಕಲ್ ಓಡಿಸುವುದು ಕಲಿತರೆ ಕಾರು ಚಲಾಯಿಸುವುದು ಭಲೇ ಸುಲಭ. ನೀನು ಮೊದಲು ಸೈಕಲ್ ಕಲಿ. ಆಮೇಲೆ ಕಾರು ಓಡಿಸಬಹುದು” ಎಂದು ಹಸಿ ಹಸಿ ಸುಳ್ಳು ಬಿಟ್ಟ. ಅವನ ಮಾತನ್ನು ನಿಜವೆಂದೇ ನಂಬಿದ ಮಾರ ತನ್ನ ಅರ್ಧದಷ್ಟು ವಯಸ್ಸಿನ ಮಕ್ಕಳ ಕೈಕಾಲು ಹಿಡಿದು, ಸೈಕಲ್ ಓಡಿಸುವುದನ್ನು ಕಲಿತುಕೊಳ್ಳಲು ಪ್ರಯತ್ನಿಸಿದ. “ನೀನೀಗ ಕಾರು ಓಡಿಸಬಹುದು” ಎನ್ನುವ ಆ ಪೋಕರಿ ಮಕ್ಕಳ ಸುಳ್ಳು ಸುಳ್ಳೇ ಮಾತನ್ನು ನಂಬಿದ ಮಾರ ರಸ್ತೆ ಬದಿ ನಿಲ್ಲಿಸಿದ್ದ ಕಾರನ್ನು ಚೂರೇ ಚೂರು ಚಲಾಯಿಸಲು ಪ್ರಯತ್ನಿಸಿ, ಎದುರಿದ್ದ ಕಾರಿಗೆ ಢಿಕ್ಕಿ ಹೊಡೆದಿದ್ದ. “ನೀನು ಬರೀ ಸ್ಟೇರಿಂಗ್ ಹಿಡಿದುಕೊಂಡು, ಹಾರ್ನ್ ಅದುಮಿದರೆ ಸಾಕು, ನೀನು ಬಯಸಿದ ರೀತಿಯಲ್ಲಿ ಕಾರು ಹೋಗುತ್ತದೆ” ಎಂಬ ಮಿಥ್ಯಕತೆಯನ್ನೂ ಆ ಮಕ್ಕಳೇ ಹೇಳಿ, ಮಾರನನ್ನು ಕಾರಿನಲ್ಲಿ ಕೂರಿಸಿದ್ದರು. ಮಾರನ ಈ ಎಡವಟ್ಟಿನಿಂದ ಪ್ರಾಣಕ್ಕೆ ಅಪಾಯವಾಗದಿದ್ದರೂ ಪೋಲೀಸರೆದುರು ಅಮಾಯಕನಂತೆ ನಿಂತುಕೊಂಡು ಗೋಗರೆಯುವ ಸನ್ನಿವೇಶ ರೂಪುಗೊಂಡಿತ್ತು. ಒಂದು ವಾರ ಈ ಸುದ್ದಿ ನಮ್ಮ ಕೇರಿಯ ತುಂಬಾ ಗಾಳಿಯಂತೆ ಸುತ್ತಾಡಿತ್ತು.

ಸಿನಿಮಾ ನಟ ಹೃತಿಕ್ ರೋಶನ್‌ನ ಭೇಟಿಗೆಂದು ಹೋದ ಈತ ಬದುಕಿಬಂದದ್ದೇ ಒಂದು ಅಚ್ಚರಿ. ಬೆಂಗಳೂರಿಗೆ ಬಂದ ಬಳಿಕ ಬಣ್ಣದ ಜಗತ್ತು ಎನ್ನುವುದು ಅವನ ಪಾಲಿಗೆ ಕನಸಿನಲ್ಲೂ ಪದೇ ಪದೇ ಕಾಡುವ ಅತಿಮಧುರ ಸಂಗತಿಯಾಗಿತ್ತು. ಬಾಯಿ ತೆರೆದರೆ ಹೃತಿಕ್ ರೋಶನ್‌ನ ಗುಣಗಾನ ಮಾಡುತ್ತಿದ್ದ. ಹೃತಿಕ್ ರೋಶನ್‌ನಂತೆಯೇ ನೃತ್ಯ ಮಾಡಲು ಪ್ರಯತ್ನಿಸಿ, ಕೈ ಕಾಲುಗಳನ್ನು ಸೊಟ್ಟವಾಗಿಸಿ, ನಮ್ಮ ಕೇರಿಯ ತುಂಟ ಮಕ್ಕಳಿಗೆಲ್ಲಾ ಆಗಾಗ ಬಿಟ್ಟಿ ಮನರಂಜನೆ ನೀಡುತ್ತಿದ್ದ. ತನ್ನ ನೆಚ್ಚಿನ ನಟನ ಶೂಟಿಂಗ್ ಬೆಂಗಳೂರಿನಲ್ಲಿಯೇ ನಡೆಯುತ್ತಿದೆ ಎನ್ನುವುದು ಗೊತ್ತಾದ ಬಳಿಕವಂತೂ ಅವನ ಕಾಲು ಆಕಾಶ ಮುಟ್ಟಿತ್ತು. ಮನಸ್ಸಿನಲ್ಲಿ ಬಯಸುತ್ತಿದ್ದ ಅದ್ಭುತವನ್ನು ಕಣ್ಣಮುಂದೆ ತಂದುಕೊಳ್ಳಲೆತ್ನಿಸಿದ ಈತ, ಶೂಟಿಂಗ್ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿದ್ದ. ತನ್ನಂತೆಯೇ ಬಯಸಿ ಬಂದಿದ್ದವರ ಗುಂಪಿನಲ್ಲಿ ತಾನೂ ಒಬ್ಬನಾಗಿ, ಪೋಲೀಸರ ಬೂಟುಗಾಲಿನಿಂದ ಒದೆಸಿಕೊಂಡು, ಲಾಠಿ ರುಚಿ ನೋಡಿದ. ಮತ್ತೂ ಹಠ ಬಿಡದೆ ಎದುರುಗಡೆಯಿದ್ದ ಬಹುಮಹಡಿ ಕಟ್ಟಡವನ್ನೇರಿ, ಅದರ ಪಕ್ಕದ ಕಟ್ಟಡಕ್ಕೆ ಲಾಂಗ್ ಜಂಪ್ ಮಾಡಲು ಪ್ರಯತ್ನಿಸಿ, ಸಾಧ್ಯವಾಗದೆ ನಲುವತ್ತು ಅಡಿ ಆಳದಷ್ಟು ಕೆಳಕ್ಕೆ ಉರುಳಿದ್ದ. ನೆಲದಲ್ಲಿದ್ದ ಮರಳ ರಾಶಿ ಆತನನ್ನು ಉಳಿಸಿತ್ತು. ಆದರೂ ಎರಡು ವಾರ ಕಾಲು ವಕ್ರಿಸಿಕೊಂಡು ನಡೆಯುವಂತಾಗಿತ್ತು. ಇಂತಹ ಹಲವಾರು ವೈಚಿತ್ರ್ಯಗಳನ್ನು ನಮ್ಮ ವಠಾರಕ್ಕೆ ಬಂದಂದಿನಿಂದಲೂ ಸೃಷ್ಟಿಸುತ್ತಲೇ ಇದ್ದಾನೆ ಈ ಮಾರ.

*****

“ಅಯ್ಯೋ ಬನ್ನಿ ಸರ್. ನೀವು ಹೇಳಿದ್ದೇ ರೇಟು. ಎಷ್ಟು ಕೊಡ್ತೀರೋ ಹೇಳಿ” ಎಂದು ಬಾಯಿ ಹರಿತವಿಲ್ಲದಂತೆ ತೋರುತ್ತಿದ್ದ ಮಧ್ಯವಯಸ್ಕ ವ್ಯಾಪಾರಿಯೊಬ್ಬ ಏರು ಜವ್ವನಿಕೆಯ ತರುಣ ಗ್ರಾಹಕನೊಬ್ಬನಲ್ಲಿ ಅಂಗಲಾಚುತ್ತಿದ್ದ. ಈ ಸಂತೆಯೆಂಬ ಮಹಾಭಾರತದಲ್ಲಿ ನಾಲಗೆ ಚುರುಕಾಗಿದ್ದರಷ್ಟೇ ಬದುಕು. ಮಾತಿನ ವರಸೆಯನ್ನು ಕಾಪಿಟ್ಟುಕೊಳ್ಳಲಾಗದ ಬೇಹಾರಿ ತಂದಷ್ಟೇ ಸರಕುಗಳನ್ನು ಮತ್ತೆ ಕೊಂಡೊಯ್ಯುವುದು ಅನಿವಾರ್ಯವಾಗುತ್ತದೆ. ತನ್ನನ್ನೂ, ತನ್ನಲ್ಲಿರುವುದನ್ನೂ ವೈಭವೀಕರಿಸಿಕೊಳ್ಳಲಾರದ ವ್ಯಕ್ತಿ ಜಗತ್ತಿನ ಎಂಟನೇ ಅದ್ಭುತವನ್ನು ಹೊಂದಿದ್ದರೂ ಇಲ್ಲಿ ಸಲ್ಲಲಾರ. ಆ ತರುಣ ಗ್ರಾಹಕ ತಾನು ಬಯಸಿದಷ್ಟೇ ಹಣಕ್ಕೆ ತರಕಾರಿ ಖರೀದಿಸಿ ಹೊರಟ. ಮಧ್ಯವಯಸ್ಕ ವ್ಯಾಪಾರಿ ಸಂಜೆ ಕಳೆದರೂ ಕುದುರದ ಲಾಭದಿಂದಾಗಿ ಕಂಗಾಲಾಗಿದ್ದ. ಅವನಿಗೊಂದಿಷ್ಟಾದರೂ ಲಾಭವಾಗಲಿ ಎಂದುಕೊಂಡ ನಾನು ಅವನು ಹೇಳಿದಷ್ಟೇ ದರಕ್ಕೆ ತರಕಾರಿ ಖರೀದಿಸಿ, ಒಂದಿಷ್ಟು ಸಮಾಧಾನವನ್ನು ಆತನಲ್ಲಿ ಹುಟ್ಟಿಸುವ ಪ್ರಯತ್ನ ಮಾಡಿದೆ.

*****

ಮಾರ ಹಾಗೆಯೇ ಇದ್ದಾನೆ. ತನ್ನ ಮೂಲಸ್ವಭಾವವನ್ನು ಬಿಟ್ಟಿಲ್ಲ. ಮಹಾನಗರಿ ಸೇರಿ ವರುಷ ಎರಡು ಕಳೆದಿದ್ದರೂ ಅವನು ಮಹಾಮೌನಿ. ಜಾಸ್ತಿ ಮಾತನಾಡುವುದಿಲ್ಲ. ನಿಷ್ಕಲ್ಮಶ ನಗುವೊಂದೇ ಈಗ ಅವನ ಏಕೈಕ ಆಸ್ತಿ. ಇಪ್ಪತ್ನಾಲ್ಕು ತಿಂಗಳುಗಳ ಹಿಂದೆ ಚಾಮರಾಜನಗರದ ದಟ್ಟ ಕಾಡೊಂದರಿಂದ ಬೆಂಗಳೂರಿಗೆ ಬಂದವನು ಮಾರ. ಹಾಗೆ ಬರುವಾಗ ಅವನಿಗಿಂತಲೂ ಅಧಿಕ ಮುಗ್ಧತೆಯನ್ನು ಅಪ್ರಜ್ಞಾಪೂರ್ವಕವಾಗಿ ಕಾಯ್ದಿಟ್ಟುಕೊಂಡ ತಾಯಿ ಅವನ ಜೊತೆಗಿದ್ದಳು. ಮಾರ ಆದಿವಾಸಿ ಸಮುದಾಯವೊಂದಕ್ಕೆ ಸೇರಿದವನು. ಆತನ ಸಮುದಾಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಲಾಗಾಯ್ತಿನಿಂದಲೂ ಕಾಪಾಡಿಕೊಂಡು ಬಂದ ಆಸ್ತಿಕತೆಯಿದೆ. ಕಾಡಿನ ಮಡಿಲಲ್ಲಿ ಸ್ವಚ್ಛಂದವಾಗಿದ್ದುಕೊಂಡು, ಜಗದ ಸೊಗವನ್ನೆಲ್ಲಾ ಸೂರೆಗೊಂಡವನಂತೆ ಬದುಕುತ್ತಿದ್ದ ಮಾರನಿಗೆ ತನ್ನ ಜನಾಂಗದ ಹಿರಿಮೆ- ಗರಿಮೆಗಳ ಪರಿಚಯ ಇರಲಿಲ್ಲ. ಹಿರಿಯರು ಹೇಳಿಕೊಟ್ಟಂತೆ ಬದುಕುವುದೊಂದೇ ಆತನ ಜೀವನದ ಪರಮ ಗುರಿಯಾಗಿತ್ತು. ಮರ ಏರುವುದರಲ್ಲಿ ಅವನಿಗಿದ್ದ ನಿಪುಣತೆ ಅತ್ಯದ್ಭುತ. ಎಂತಹ ಗಡಸು ಕಾಡಾನೆಯೇ ಆಗಿದ್ದರೂ ಅದನ್ನು ಪಳಗಿಸುವ ಕಲೆ ಆತನಿಗೆ ಸಿದ್ಧಿಸಿತ್ತು. ಎತ್ತರದಲ್ಲಿದ್ದು ಆಕರ್ಷಣೆ ಹುಟ್ಟಿಸುವ ಜೇನುಗೂಡಿನ ಸವಿಯನ್ನು ಕೈಗೆ ಮೆತ್ತಿಸಿಕೊಳ್ಳುವ ಹಠಮಾರಿತನ ಅವನಲ್ಲಿತ್ತು. ತಾನಿದ್ದ ಬಗೆಯನ್ನೇ ಜೀವನ ಎಂದುಕೊಳ್ಳುವ, ಅಂಗೈ ವಿಸ್ತೀರ್ಣದ ಅರಣ್ಯವನ್ನೇ ಪ್ರಪಂಚದ ಸರಿಸಮಾನವಾಗಿ ಪರಿಭಾವಿಸುವ ಅಲ್ಪತೃಪ್ತಿ ಮಾರನ ಸಹಜ ಗುಣವಾಗಿತ್ತು. ಆಧುನಿಕತೆಯ ಕೈನಿಲುಕುವಿಕೆಗೆ ಸಿಗದೆ ಬದುಕುತ್ತಿದ್ದ ಮಾರ ಹಾಗೂ ಆತನ ಸಮುದಾಯದವರಿಗೆ ಬದುಕಿನಲ್ಲಿ ಕೊರತೆಯೇ ಇರಲಿಲ್ಲ.

ಹೀಗೆ ತನ್ನವರ ಜೊತೆಗೆ ಅಸೀಮ ನೆಮ್ಮದಿಯಿಂದ ಬದುಕಿನ ಹೆಜ್ಜೆ ಹಾಕುತ್ತಿದ್ದ ಮಾರ ಅದೊಂದು ದಿನ ಇದ್ದಕ್ಕಿದ್ದ ಹಾಗೆಯೇ ಸೋಷಿಯಲ್ ಮೀಡಿಯಾ ಸ್ಟಾರ್ ಎನಿಸಿಕೊಂಡ. ಅವನಿದ್ದ ಕಾಡಿಗೆ ಚಾರಣಕ್ಕೆಂದು ನಾಲ್ಕೈದು ಮಂದಿ ಗೆಳೆಯರ ಜೊತೆಗೆ ಹೋಗಿದ್ದ ಇಂಜಿನಿಯರ್ ಒಬ್ಬ ಈತ ಸಿನಿಮಾ ಗೀತೆಗೆ ತನ್ನದೇ ಶೈಲಿಯಲ್ಲಿ ಕುಣಿಯುತ್ತಿದ್ದುದನ್ನು ವೀಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ. ಆಗ ತಾನೇ ಬಿಡುಗಡೆ ಆಗಿದ್ದ ಕನ್ನಡ ಸಿನಿಮಾವೊಂದರ ‘ಚುಟು ಚುಟು ಅಂತೈತಿ ನನಗ…’ ಎನ್ನುವ ಗೀತೆಗೆ ಕೈ- ಕಾಲುಗಳನ್ನೆಲ್ಲಾ ವಕ್ರವಕ್ರವಾಗಿಸಿ ಕುಣಿದಿದ್ದ ನಮ್ಮ ಮಾರ. ಒಂದನೇ ತರಗತಿಯ ಮಗುವಿನಂತಹ ಮುಗ್ಧತೆಯಿಂದ ಆದಿವಾಸಿಯೊಬ್ಬ ತಕಪಕ ಹೆಜ್ಜೆ ಹಾಕುತ್ತಿದ್ದ ಆ ವೀಡಿಯೋ ರಾತ್ರೋ ರಾತ್ರಿ ವೈರಲ್ ಆಯಿತು. ಆತನ ಆ ವೀಡಿಯೋವನ್ನು ಆ ಸಂದರ್ಭದಲ್ಲಿ ನಾನೂ ನೋಡಿದ್ದೆ. ಆತನ ಕುಣಿತ ಏನೆಂದರೆ ಏನೂ ಆಕರ್ಷಕವಾಗಿರಲಿಲ್ಲ. ವಾಸ್ತವವಾಗಿ ಆತನ ಕುಣಿತದ ವೈಚಿತ್ರ್ಯ- ಚೋದ್ಯಗಳೇ ಆತನ ಪ್ರಸಿದ್ಧಿಗೆ ಕಾರಣಗಳಾಗಿದ್ದವು.

ಆತನ ಒಂದು ವೀಡಿಯೋ ವೈರಲ್ ಆದ ತಕ್ಷಣವೇ ಆತ ಮರ ಏರುವ, ಜೇನು ಹಿಡಿಯುವ, ಆನೆಯ ಬೆನ್ನ ಮೇಲೆ ಸವಾರಿ ಮಾಡುವ ವೀಡಿಯೋಗಳೆಲ್ಲಾ ಒಂದರ ಹಿಂದೊಂದರಂತೆ ವೈರಲ್ ಆದವು. ಮೆಟ್ಟಿಲಿದ್ದರೂ ಎಸ್ಕಲೇಟರ್ ಬಳಸುವ ಮಂದಿಗೆ ಆತ ಓತಿಕ್ಯಾತನಂತೆ ಮರ ಏರುವುದು ಸೋಜಿಗದ ಸಂಗತಿಯಾಗಿತ್ತು. ಬೊಜ್ಜು ಕರಗಿಸಲು ಬಿಸಿನೀರಿಗೆ ಬೆರೆಸಿ ಕುಡಿಯುವ ಜೇನು ಸಿಗಬೇಕಾದರೆ ಎಷ್ಟೊಂದು ಪರಿಶ್ರಮ ಬೇಕು ಎನ್ನುವುದು ಹಲವರ ಅರಿವಿಗೆ ಬಂದಿತ್ತು. ಮಾವುತನ ನಿಯಂತ್ರಣದಲ್ಲಿರುವ ಆನೆಯ ಸೊಂಡಿಲಿಗೆ ತಾಗಿ ನಿಂತು ಸೆಲ್ಫಿ ತೆಗೆದುಕೊಳ್ಳುವುದನ್ನೇ ಮಹಾನ್ ಸಾಧನೆ ಎಂದುಕೊಂಡಿದ್ದವರಿಗೆ ಆನೆಯ ಬೆನ್ನನ್ನೇರಿರುವ ಆತನ ಮುಂದೆ ನಾವು ಏನೇನೂ ಅಲ್ಲ ಎನಿಸತೊಡಗಿತು. ಹೀಗೆ ಮಾರನ ಎಲ್ಲಾ ವೀಡಿಯೋಗಳು ಲಕ್ಷಗಟ್ಟಲೆ ವೀಕ್ಷಣೆ ಪಡೆದುಕೊಳ್ಳತೊಡಗಿದವು. ಅತ್ಯಾಶ್ಚರ್ಯದ ಸಂಗತಿಯೆಂದರೆ, ಈ ವಿಚಾರವೆಲ್ಲಾ ಮಾರನಿಗೆ ಗೊತ್ತಿರಲೇ ಇಲ್ಲ. ಕ್ಯಾಮರಾ ಹಿಡಿದುಬರುವ ಮಂದಿಯ ಎದುರು ಅವರು ಹೇಳಿದಂತೆ ಮಾಡುವುದು ಮಾತ್ರವೇ ಅವನಿಗೆ ತಿಳಿದಿದ್ದ ಸಂಗತಿ.

ಹೀಗೆ ವೈರಲ್ ಆದ ಕೆಲವೇ ತಿಂಗಳುಗಳಲ್ಲಿ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯೊಂದರ ಮುಖ್ಯಸ್ಥರಾಗಿದ್ದ ಕೇಶೂರಾಮ್ ಮಾರನನ್ನು ಹುಡುಕಿಕೊಂಡು ಅವನಿದ್ದ ಕಾಡಿಗೇ ಬಂದರು. ತಮ್ಮ ಸಂಸ್ಥೆಯ ಮೂಲಕ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನಡೆಯುವ ಬೇರೆ ಬೇರೆ ಸ್ಟೇಜ್ ಶೋಗಳಲ್ಲಿ ಮಾರನ ಜನಪ್ರಿಯತೆಯನ್ನು ಬಳಸಿಕೊಳ್ಳುವುದು ಅವರ ಯೋಜನೆಯಾಗಿತ್ತು. ವೇದಿಕೆ ಮೇಲೆ ನಡೆಯುವ ಕಾರ್ಯಕ್ರಮಗಳಲ್ಲಿ ಮಾರನನ್ನು ಕರೆತಂದರೆ ಜನರಿಗೆ ಭರಪೂರ ಮನರಂಜನೆ ದೊರೆಯುತ್ತದೆ ಎಂಬ ದೂರಾಲೋಚನೆ ಅವರಲ್ಲಿತ್ತು. ಸ್ಪರ್ಧಾತ್ಮಕ ಜಗತ್ತಿನಿಂದ ದೂರವಿದ್ದುಕೊಂಡು ಬದುಕನ್ನು ಸವಿಯುತ್ತಿದ್ದ ಮಾರನಿಗೆ ಕೇಶೂರಾಮ್ ಹೇಳಿದ ಸ್ಟೇಜ್ ಶೋ, ಪರ್ಫಾರ್ಮೆನ್ಸ್, ರೆಕಗ್ನಿಶನ್- ಈ ಯಾವ ಪದಗಳೂ ಅರ್ಥವಾಗಿರಲಿಲ್ಲ. ಅವನ ಅರ್ಥಕೋಶದಿಂದ ಹೊರಗಿದ್ದ ಆ ಪದಗಳನ್ನೆಲ್ಲಾ ಕೇಶೂರಾಮ್ ಸವಿವರವಾಗಿ ತಿಳಿಸಿಕೊಡಬೇಕಾಗಿತ್ತು. ಅವರ ವರ್ಣನೆ ಹೇಗಿತ್ತೆಂದರೆ, ಅವರ ಮಾತು ಮುಗಿದ ತಕ್ಷಣವೇ ಮಾರ ತನ್ನಮ್ಮನನ್ನೂ ಜೊತೆಗೆ ಕರೆದುಕೊಂಡು ಕಾಡು ತೊರೆದು ಬರಲು ಸಿದ್ಧನಾಗಿದ್ದ. ಅಪರಿಚಿತ ಜಗತ್ತೊಂದು ಅವನಲ್ಲಿ ಅನೂಹ್ಯ ಕುತೂಹಲವನ್ನು ಹುಟ್ಟುಹಾಕಿತ್ತು.

ಮೊದಲ ಸ್ಟೇಜ್ ಶೋ ಇದ್ದ ದಿನ ಮಾರ ಬೆಲ್ಲದ ಡಬ್ಬಿಯ ಒಳಹೊಕ್ಕ ಇರುವೆಯಂತಾಗಿದ್ದ. ಆ ಝಗಮಗಿಸುವ ಲೈಟ್, ಅಬ್ಬರದ ಮ್ಯೂಸಿಕ್, ಕಾರಣವಿಲ್ಲದೆ ಚಪ್ಪಾಳೆ ತಟ್ಟುವ- ಶಿಳ್ಳೆ ಹೊಡೆಯುವ ಪ್ರೇಕ್ಷಕರು, ಕೆಲಸ ಮಾಡುವುದಕ್ಕಾಗಿಯೇ ಹುಟ್ಟಿದವರಂತೆ ಚುರುಕುತನದಿಂದ ದುಡಿಯುವ ತಂತ್ರಜ್ಞರು, ಎರಡು ನಿಮಿಷಕ್ಕೊಮ್ಮೆ ತಲೆಬಿಸಿ ಮಾಡಿಕೊಂಡು, ಜೊತೆಗಿದ್ದವರಿಗೆ ಬೈಯ್ಯುತ್ತಾ ಮರುಕ್ಷಣ ರಮಿಸುತ್ತಾ ಕೆಲಸ ತೆಗೆದುಕೊಳ್ಳುವ ಸಂಸ್ಥೆಯ ಮುಖ್ಯಸ್ಥರು- ಎಲ್ಲವೂ ಎಲ್ಲರೂ ಮಾರನ ಪಾಲಿಗೆ ಅದ್ಭುತಗಳೇ. “ನಿನ್ನ ಹೆಸರು ಕರೆದ ಕೂಡಲೇ ಸ್ಟೈಲಾಗಿ ಸ್ಟೇಜ್‌ಗೆ ಹೋಗಿ, ಕಾಣುವ ಜನರಿಗೆಲ್ಲಾ ಕೈ ಬೀಸಿ, ನಿನಗೆ ಹೇಳಿಕೊಟ್ಟದ್ದನ್ನು ಮಾತಾಡು” ಎಂದಿದ್ದರು ಶೋದ ನಿರ್ದೇಶಕರು. ಅವರು ಏನು ಹೇಳಿಕೊಟ್ಟಿದ್ದರೋ ಅಂತೆಯೇ ಮಾಡಿದ, ಮಾತಾಡಿದ ಈತ. ಈತನ ಜೊತೆಗೆ ಮಾತಿಗೆ ನಿಂತ ನಿರೂಪಕಿ ಮೊಬೈಲ್ ಫೋನನ್ನು ಈತನೆದುರು ಹಿಡಿದು ಇದೇನೆಂದು ಕೇಳಿದ್ದಳು. ಈತ ಆ ಫೋನನ್ನು ಹಿಂದುಮುಂದು ತಿರುಗಿಸಿ ನೋಡುತ್ತಿದ್ದಂತೆಯೇ ಗಹಗಹಿಸಿ ನಕ್ಕಳು. ಅದನ್ನು ತಿನ್ನಬಹುದು ಎಂದು ಹೇಳಿ, ಮಾರನ ದಿಕ್ಕುತಪ್ಪಿಸಿ, ಆತ ಅದನ್ನು ಹಲ್ಲಿನಿಂದ ಕಚ್ಚುವಂತೆ ಮಾಡಿ, ಪ್ರೇಕ್ಷಕರ ನಗುವನ್ನೂ ಗಿಟ್ಟಿಸಿದಳು.

“ಈಗ ನೀವೆಲ್ಲಾ ಕಾಯುತ್ತಿರುವ ಸಮಯ. ನಿಮ್ಮ ಪ್ರೀತಿಯ ಮಾರನಿಂದ ನೃತ್ಯ” ಎಂದು ನಿರೂಪಕಿ ಘೋಷಿಸಿದ ತಕ್ಷಣ ಪ್ರೇಕ್ಷಕರ ಬೊಬ್ಬೆ, ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ವೇದಿಕೆಯ ಗಾಂಭೀರ್ಯತೆ ಅರಿತಿರದ ಮಾರನಿಗೆ ಸಭಾಕಂಪನವಂತೂ ಇರಲಿಲ್ಲ. ಕೈ- ಕಾಲುಗಳನ್ನು ಇಷ್ಟಬಂದಂತೆ ಸೊಟ್ಟಗಾಗಿಸಿ ಕುಣಿದ. ಹಾಸ್ಯಾಸ್ಪದವಾಗಿದ್ದ ನೃತ್ಯ ಪ್ರೇಕ್ಷಕರಿಗೆ ಅದೇನು ಖುಷಿ ಕೊಟ್ಟಿತೋ ಗೊತ್ತಿಲ್ಲ, ಕ್ಷಣಕ್ಕೊಮ್ಮೆ ‘ಹೋ’ ಎಂದು ಕಿರುಚುತ್ತಿದ್ದರು. ಮಾರನ ತಾಯಿಯನ್ನೂ ವೇದಿಕೆ ಮೇಲೆ ಕರೆಸಿ, ಅವರೆಷ್ಟು ನಾಚಿಕೊಂಡರೂ ಬಿಡದೆ ನೃತ್ಯ ಮಾಡಿಸಲಾಯಿತು. ಪ್ರೇಕ್ಷಕಗಣ ಆಗಾಗ ಬೊಬ್ಬೆ ಹೊಡೆಯುವುದನ್ನಂತೂ ಮರೆತಿರಲಿಲ್ಲ.

ಸಿನಿಮಾ ನಟ ಹೃತಿಕ್ ರೋಶನ್‌ನ ಭೇಟಿಗೆಂದು ಹೋದ ಈತ ಬದುಕಿಬಂದದ್ದೇ ಒಂದು ಅಚ್ಚರಿ. ಬೆಂಗಳೂರಿಗೆ ಬಂದ ಬಳಿಕ ಬಣ್ಣದ ಜಗತ್ತು ಎನ್ನುವುದು ಅವನ ಪಾಲಿಗೆ ಕನಸಿನಲ್ಲೂ ಪದೇ ಪದೇ ಕಾಡುವ ಅತಿಮಧುರ ಸಂಗತಿಯಾಗಿತ್ತು. ಬಾಯಿ ತೆರೆದರೆ ಹೃತಿಕ್ ರೋಶನ್‌ನ ಗುಣಗಾನ ಮಾಡುತ್ತಿದ್ದ. ಹೃತಿಕ್ ರೋಶನ್‌ನಂತೆಯೇ ನೃತ್ಯ ಮಾಡಲು ಪ್ರಯತ್ನಿಸಿ, ಕೈ ಕಾಲುಗಳನ್ನು ಸೊಟ್ಟವಾಗಿಸಿ, ನಮ್ಮ ಕೇರಿಯ ತುಂಟ ಮಕ್ಕಳಿಗೆಲ್ಲಾ ಆಗಾಗ ಬಿಟ್ಟಿ ಮನರಂಜನೆ ನೀಡುತ್ತಿದ್ದ.

ಬಟ್ಟೆ ಅಂಗಡಿಯಲ್ಲಿದ್ದ ನವ ಜೋಡಿಯೊಂದು ತಮಗೆ ಸರಿಹೊಂದುವ ಧಿರಿಸಿಗಾಗಿ ತಡಕಾಡುತ್ತಿದ್ದರು. ಅವರ ನಗು- ಆತ್ಮೀಯತೆ- ವರ್ತನೆ ನೋಡಿದರೆ ಪ್ರೇಮಿಗಳಂತೆ ಇಲ್ಲಾ ಇತ್ತೀಚೆಗೆ ತಾನೇ ಮದುವೆಯಾದವರಂತೆ ಕಾಣುತ್ತಿತ್ತು. ಅರೆಬರೆ ಹರಿದಿದ್ದ ಜೀನ್ಸ್ ಪ್ಯಾಂಟೊಂದನ್ನು ಎತ್ತಿಕೊಂಡ ಯುವತಿ ಆ ಹುಡುಗನಿಗೆ ಅದನ್ನು ಧರಿಸಿ ನೋಡುವಂತೆ ಕೇಳಿಕೊಂಡಳು. “ಇದೇನು ಹರಿದಿದೆಯಲ್ಲಾ. ಇದೆಲ್ಲ ನನ್ಗೆ ಸೂಟ್ ಆಗೋದಿಲ್ಲ” ಎಂದು ಹೇಳಿದ ಅವನು ನಯವಾಗಿ ನಿರಾಕರಿಸಿದ. “ಇದು ಫ್ಯಾಶನ್ ಕಣೋ. ಹಾಕ್ಕೋ. ಚೆನ್ನಾಗಿ ಕಾಣುತ್ತೆ” ಎಂದ ಆ ಯುವತಿ ಮತ್ತೊಮ್ಮೆ ಆ ಪ್ಯಾಂಟನ್ನು ಅವನೆಡೆಗೆ ಚಾಚಿದಳು. ಟ್ರಯಲ್ ರೂಮಿನೊಳಗೆ ಹೋಗಿ ಬಂದ ಆ ಸ್ನೇಹಿತ “ಇದೆಲ್ಲಾ ನನ್ಗೆ ಸರಿ ಕಾಣಲ್ಲ. ನಾನು ಏನಿದ್ರೂ ಫಾರ್ಮಲ್ ಮಾತ್ರ ಹಾಕೋದು” ಎಂದ. ಹಠ ಹಿಡಿದವಳಂತೆ ಮುಖ ಮಾಡಿಕೊಂಡ ಆ ಯುವತಿ “ನನ್ನ ಮೇಲೆ ಪ್ರೀತಿ ಇರೋದು ನಿಜ ಆಗಿದ್ರೆ ಇದನ್ನು ಹಾಕ್ಕೋತೀಯ” ಎಂದು ಹೇಳಿ, ಪಂಥಾಹ್ವಾನಕ್ಕೆ ಸಿದ್ಧಳಾದಂತೆ ನಿಂತಳು. ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡಿದ ಆತ ಟ್ರಯಲ್ ರೂಮಿನೊಳಕ್ಕೆ ಹೋಗಿ, ಅದೇ ಪ್ಯಾಂಟನ್ನು ಧರಿಸಿಕೊಂಡು ಬಂದುನಿಂತ. ದೃಷ್ಟಿ ನಿವಾಳಿಸಿದ ಅವಳು “ರಾಜಕುಮಾರನ ಹಾಗೆ ಕಾಣಿಸ್ತಿದ್ದೀಯ” ಎಂದ ತಕ್ಷಣ ಅವನ ಮುಖದಲ್ಲಿ ರಂಗುರಂಗಾದ ನಗು ಮೂಡಿತು.

*****

ಮಾರ ಅಂದು ಹಠ ಹಿಡಿದು ಕುಳಿತಿದ್ದ. ತಾನು ಜೀನ್ಸ್ ಪ್ಯಾಂಟ್ ಧರಿಸಲಾರೆನೆಂಬ ಬಿಗಿಪಟ್ಟು ಅವನದ್ದು. ಅಂದು ಸ್ಟೇಜ್ ಶೋನಲ್ಲಿ ಮಾರ ನವೀನ ಶೈಲಿಯ ಉಡುಗೆ ತೊಟ್ಟು, ಬಿನ್ನಾಣ- ವೈಯ್ಯಾರದ ಲಲನೆಯೊಬ್ಬಳ ಜೊತೆಗೆ ರ‍್ಯಾಂಪ್ ವಾಕ್ ಮಾಡಬೇಕಿತ್ತು. ಆದರೆ ಮಾರ ಏನು ಮಾಡಿದರೂ ಇದಕ್ಕೆ ಒಪ್ಪಿಕೊಂಡಿರಲಿಲ್ಲ. ಜೊತೆಗಾತಿ ಹುಡುಗಿ ಅವನ ಗಲ್ಲವನ್ನು ಹಿಂಡಿ “ಪ್ಲೀಸ್ ನನಗೋಸ್ಕರ ಮಾಡೋ. ಇದೊಂದ್ಸಲ ಮಾತ್ರ. ಪ್ಲೀಸ್ ಪ್ಲೀಸ್” ಎಂದು ಕೇಳಿಕೊಂಡರೂ ಕ್ಯಾರೇ ಅಂದಿರಲಿಲ್ಲ ಆಸಾಮಿ.

ಕೊನೆಗೆ ಶೋ ವ್ಯವಸ್ಥಾಪಕರು ಸರಿಯಾಗಿ ರ‍್ಯಾಂಪ್ ವಾಕ್ ಮಾಡಿದರೆ ಬಂಕುವನ್ನು ಭೇಟಿ ಮಾಡಿಸುತ್ತೇನೆ ಎಂದಿದ್ದರು. ಬಂಕು ಎಂದರೆ ಆನೆ. ಕಾಡಿನಲ್ಲಿದ್ದಾಗ ಆತ ದಿನಾಲೂ ಸವಾರಿ ಮಾಡುತ್ತಿದ್ದ ಆನೆ. ಫೀನಿಕ್ಸ್ ಹಕ್ಕಿಯಂತೆ ಎದ್ದು ಕುಳಿತ ಮಾರ ಆತುರಾತುರವಾಗಿ ತಾನು ಜೀವಮಾನದಲ್ಲಿ ಯಾವತ್ತೂ ಕಂಡಿರದ ಬಟ್ಟೆ ಹಾಕಿಕೊಂಡು, ರಚನಾಳ ಜೊತೆಗೆ ರ‍್ಯಾಂಪ್ ಮೇಲೆ ನಡೆದಿದ್ದ. ಅವನ ಮುಜುಗರ, ಸಂಕೋಚ ಕಂಡ ಜನರಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಅಪಹಾಸ್ಯದ ನಗು ಮೂಡಿತ್ತು.

*****

ಮನೆಗೆ ಬೇಕಾಗಿದ್ದ ತರಕಾರಿ, ಹೂವು ತೆಗೆದುಕೊಂಡಿದ್ದ ನಾನು ಸದಾಶಿವಯ್ಯನವರ ಮನೆಗೆ ಹೋದೆ. ನನಗಿಂತ ಸುಮಾರು ಹತ್ತು ವರ್ಷ ಹಿರಿಯರಾಗಿದ್ದರೂ ನನ್ನ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು ಸದಾಶಿವಯ್ಯನವರು. ವಕೀಲರಾಗಿದ್ದವರು. ಈಗ ನಿವೃತ್ತರು. ಜಮೀನು ಖರೀದಿ ವಿಷಯವೊಂದಕ್ಕೆ ಸಂಬಂಧಿಸಿ ಅವರಲ್ಲಿ ತುರ್ತಾಗಿ ಮಾತನಾಡಬೇಕಿತ್ತು. ನಾನು ಹೋದಾಗ ಅವರು ಮನೆಯಲ್ಲಿ ಇರಲಿಲ್ಲ. “ನೀವು ಕುಳಿತಿರಿ. ಇನ್ನರ್ಧ ಗಂಟೆಯಲ್ಲಿ ಬಂದಾರು” ಎಂದ ಅವರ ಪತ್ನಿ, ನಾನು ಬೇಡವೆಂದರೂ ಕೇಳದೆ ಚಹಾ ತರುವುದಕ್ಕೆ ಮನೆಯ ಒಳಹೋದರು. ನಾನು ವರಾಂಡದಲ್ಲಿದ್ದ ಈಸೀ ಚೇರಿನ ಮೇಲೆ ಕುಳಿತು, ಕಾಲುಗಳನ್ನು ನೀಳವಾಗಿ ಚಾಚಿ, ತುಸು ಆರಾಮ ಮಾಡಿಕೊಂಡೆ. ಮನೆಯ ಅಂಗಳದಲ್ಲಿ ಸೇರಿಕೊಂಡಿದ್ದ ಸುತ್ತಲಿನ ಮನೆಗಳ ಹನ್ನೆರಡು ಮಂದಿ ಪುಟ್ಟ ಮಕ್ಕಳು, ಸುಮಾರು ಹತ್ತರಿಂದ ಹನ್ನೆರಡು ವರ್ಷ ಪ್ರಾಯದವರು, ತಮ್ಮ ನೆನಪಿನಲ್ಲಿದ್ದಷ್ಟು ಯಕ್ಷಗಾನದ ಪದ ಹೇಳುತ್ತಾ, ತಮಗೆ ತೋಚಿದಂತೆ ಕುಣಿಯುತ್ತಾ, ಮನರಂಜನೆ ಪಡೆದುಕೊಳ್ಳುತ್ತಿದ್ದರು. ಸದಾಶಿವಯ್ಯನವರ ಮೊಮ್ಮಗ ಪ್ರದ್ಯುಮ್ನ ಈ ಹನ್ನೆರಡು ಜನ ಮಕ್ಕಳ ಗುಂಪಿಗೆ ತತ್ಕಾಲದ ನಾಯಕನಾಗಿದ್ದ. ಸೇರಿರುವ ಆ ಹುಡುಗರು ಏನು ಮಾಡುತ್ತಿದ್ದಾರೆ ಎನ್ನುವುದನ್ನು ನಾನು ಸುಮ್ಮನೆ ಗಮನಿಸತೊಡಗಿದೆ.

“ಅಂಬುರುಹ ದಳನೇತ್ರೆ ಶ್ರೀ ದುರ್ಗಾಂಬಿಕೆಯ…” ಎಂದು ಪದ ಆರಂಭಿಸಿದ ಪ್ರದ್ಯುಮ್ನ ತನ್ನ ಪಕ್ಕದಲ್ಲಿ ನಿಂತಿದ್ದ ಹುಡುಗನಿಗೆ “ಹ್ಞು ಹೀಗೆ” ಎಂದು ಸೂಚನೆ ಕೊಟ್ಟು, ಕೈ ಅಗಲಿಸಿ, ಬೀಸು ಹೆಜ್ಜೆ- ತಿರುಸು ಹೆಜ್ಜೆ ಹಾಕತೊಡಗಿದ. ಹಿಂದಿದ್ದ ಹುಡುಗ ಅಂತೆಯೇ ಅನುಸರಿಸತೊಡಗಿದ. ಹೀಗೆ ಎಲ್ಲರಿಗೂ ಪ್ರದ್ಯುಮ್ನ ಹೇಳಿಕೊಡುವಷ್ಟರಲ್ಲಿ ಹದಿನೈದು ನಿಮಿಷಗಳು ಕಳೆದಿದ್ದವು. “ಈಗ ನಾನು ಹೇಳಿದ್ದನ್ನು ಒಬ್ಬೊಬ್ಬರೇ ಮಾಡುತ್ತಾ ಹೋಗಿ” ಎಂದ ಪ್ರದ್ಯುಮ್ನ ಪದ ಆರಂಭಿಸಿದ. ಅಡುಗೆ ಮನೆಯಲ್ಲಿದ್ದ ಸೌಟು, ಲಟ್ಟಣಿಗೆಗಳನ್ನೇ ಆಯುಧಗಳನ್ನಾಗಿಸಿಕೊಂಡು, ಸಾದಾ ಕುರ್ಚಿಯನ್ನೇ ಸಿಂಹಾಸನವಾಗಿಸಿಕೊಂಡಿದ್ದ ಮಕ್ಕಳು ಯಕ್ಷಲೋಕವನ್ನು ಹೊಗುವ ನೂತನ ಅನ್ವೇಷಣೆ ಆರಂಭಿಸಿದ್ದರು. ಇದ್ದಕ್ಕಿದ್ದಂತೆಯೇ ಅವರ ಗುಂಪಿನಲ್ಲಿದ್ದ ಹುಡುಗನೊಬ್ಬ ರಂಪಾಟ ಮಾಡತೊಡಗಿದ. ಇದ್ದವರಲ್ಲಿಯೇ ಸಣ್ಣ ವಯಸ್ಸಿನವನೆಂದರೆ ಅವನೇ ಇರಬಹುದು. ತೀರಾ ಸಣ್ಣವನಂತೆ ಕಾಣುತ್ತಿದ್ದ. ತನಗೆ ವಿದೂಷಕನ ಪಾತ್ರ ಬೇಡ, ರಾಜನ ಪಾತ್ರವೇ ಬೇಕು ಎಂಬ ಹಠ ಅವನದ್ದು. “ನೀನು ವಿದೂಷಕನಾಗುವುದಕ್ಕೆ ಒಪ್ಪಿಕೊಂಡಾಗಿದೆ, ಇನ್ನು ರಾಜನಾಗುವುದಕ್ಕೆ ಸಾಧ್ಯ ಇಲ್ಲ” ಎಂದು ಜೋರಾಗಿ ನುಡಿದ ಪ್ರದ್ಯುಮ್ನ ಆತನನ್ನು ತೆಪ್ಪಗಾಗಿಸಿದ. ವಿದೂಷಕನಾಗಲು ಒಪ್ಪಿಕೊಂಡವನ ಮುಖ ಸಪ್ಪಗಾಗಿತ್ತು.

*****

ನಮ್ಮ ಮನೆಯ ಪಕ್ಕದ ಗಲ್ಲಿಯಲ್ಲಿ ಹಮ್ಮಿಕೊಂಡಿದ್ದ ನ್ಯೂ ಇಯರ್ ಪಾರ್ಟಿಯಲ್ಲಿ ಮಾರನ ಸ್ಟೇಜ್ ಶೋ ನೋಡಿದ್ದ ನನಗೆ ಆತನನ್ನು ರಾಜನಾಗಿಸುವ ಆಸೆ ಹುಟ್ಟಿಸಿ ಕರೆತಂದು ವಿದೂಷಕನಾಗಿಸಿದಂತೆ ಅನಿಸಿತ್ತು. ತನ್ನ ಚಿತ್ರವಿಚಿತ್ರ ನಡವಳಿಕೆಗಳಿಂದಾಗಿ ಜನರ ಗಮನ ಸೆಳೆಯುತ್ತಿದ್ದ ಮಾರನನ್ನು ಆ ದಿನ ತಮಾಷೆಯ ವಸ್ತುವೆಂಬಂತೆ ಬಳಸಿಕೊಳ್ಳಲಾಗಿತ್ತು. ಅವನಿಗೆ ಏನನ್ನು ಚೆನ್ನಾಗಿ ಮಾಡಲು ಸಾಧ್ಯವಿಲ್ಲವೋ ಅದನ್ನೇ ಮಾಡಿಸಲಾಗಿತ್ತು. ತೀರಾ ಮಾಡರ್ನ್ ಆಗಿರುವ ಹುಡುಗಿಯೊಬ್ಬಳಿಗೆ ಪ್ರಪೋಸ್ ಮಾಡಿಸಿ ಆತನ ನಾಚಿಕೆಯನ್ನು ಅಪಹಾಸ್ಯ ಮಾಡಲಾಗಿತ್ತು. ಹಿಂದಿ ಹಾಡು ಹಾಡಿಸಿ ಆತನ ಹಾಡಿನಲ್ಲಿಲ್ಲದ ಲಯ, ರಾಗ, ಸಾಹಿತ್ಯ ಅಸ್ಪಷ್ಟತೆಯನ್ನೇ ಮುಖ್ಯವಾಗಿಸಿ ಗೇಲಿ ಮಾಡಲಾಗಿತ್ತು. ಇಂಗ್ಲಿಷ್ ಭಾಷೆಯಲ್ಲಿರುವ ನರ್ಸರಿ ರೈಮ್ ಹೇಳಿಸಿ, ಐದಾರು ವರ್ಷಗಳ ಹುಡುಗಿಯೊಬ್ಬಳಿಂದ ಆ ರೈಮನ್ನು ಸರಿಯಾಗಿ ಹಾಡಿಸಿ, ಅವನಿಗೆ ಏನೂ ಗೊತ್ತಿಲ್ಲ ಎಂಬಂತೆ ಬಿಂಬಿಸಲಾಗಿತ್ತು. ವಿಪರ್ಯಾಸವೆಂದರೆ, ನನಗೆ ಹೊಳೆದುಬಂದ ಈ ಸಂಗತಿ ಮಾರನಿಗೆ ಹೊಳೆದಿರಲಿಲ್ಲ. ಆತ ವೇದಿಕೆಯಿಳಿದು ಹೋಗುವಾಗಲೂ ನಸುನಗುತ್ತಲೇ ಇದ್ದ!

ನನಗೆ ಖುಷಿ ಕೊಟ್ಟ ವಿಷಯವೆಂದರೆ, ಅದೇ ಸ್ಟೇಜ್ ಶೋನಲ್ಲಿ ಆತ ಸಿನಿಮಾ ನಾಯಕನಾಗುವ ಅವಕಾಶ ಗಿಟ್ಟಿಸಿಕೊಂಡಿದ್ದ. ಸ್ಟೇಜ್ ಶೋ ನೋಡುವುದಕ್ಕೆ ಬಂದಿದ್ದ ಸಿನಿಮಾ ನಿರ್ದೇಶಕರೊಬ್ಬರು ಆತನೇ ತನ್ನ ಮುಂದಿನ ಸಿನಿಮಾದ ಹೀರೋ ಎಂದು ಘೋಷಿಸಿದ್ದರು. ಮಾರನಿಗೆ ವಿಪರೀತ ಸಂತಸವಾಗಿತ್ತು. ಸ್ಟೇಜ್ ಶೋನಲ್ಲಿ ಭಾಗವಹಿಸುತ್ತಲೇ ಸಿನಿಮಾ, ಅಭಿನಯ ಎಂಬೆಲ್ಲಾ ವಿಚಾರಗಳನ್ನು ಆತ ಸ್ವಲ್ಪಸ್ವಲ್ಪವೇ ಅರ್ಥೈಸಿಕೊಂಡಿದ್ದ. ಬಿಡುವಿದ್ದಾಗ ಒಂದೆರಡು ಬಾರಿ ಥಿಯೇಟರ್‌ಗೆ ಹೋಗಿ ಸಿನಿಮಾ ವೀಕ್ಷಿಸಿದ್ದ. ಹೃತಿಕ್ ರೋಶನ್ ಬಗ್ಗೆ ಅಭಿಮಾನದ ಹುಚ್ಚು ಆತನಿಗೆ ಬೆಳೆದದ್ದು ಆಗಲೇ. ಹಿಂದಿ ಭಾಷೆ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವೇ ಇರದ ಆತ ಕೇವಲ ತನ್ನ ನೆಚ್ಚಿನ ಹೀರೋನ ಅಭಿನಯ, ನೃತ್ಯಕ್ಕಾಗಿ ಸಿನಿಮಾ ನೋಡುತ್ತಿದ್ದ. ನಿರ್ದೇಶಕರ ಘೋಷಣೆ ಹೊರಬಿದ್ದ ತಕ್ಷಣವೇ ಖುಷಿಯಿಂದ ವೇದಿಕೆ ಮೇಲೆ ಕುಣಿದಾಡಿದ್ದ ಆತ ಆ ರಾತ್ರೆ ಅದೆಂತಹ ಸಿಹಿಗನಸು ಕಂಡನೋ!

*****

“ಹೋ, ಅಪರೂಪದ ಅತಿಥಿಗಳು. ಇಂದು ನಮ್ಮ ಮನೆಗೆ ಬಿಜಯಂಗೈದಿದ್ದೀರಲ್ಲಾ” ಗೇಟು ತೆರೆದು ಒಳಬರುತ್ತಿದ್ದ ಸದಾಶಿವಯ್ಯನವರು ತಮ್ಮ ಎಂದಿನ ಹಾಸ್ಯಭರಿತ ಶೈಲಿಯಲ್ಲಿಯೇ ಮಾತು ಆರಂಭಿಸಿದರು. ಅವರು ವರಾಂಡದಲ್ಲಿ ಬಂದು ನನ್ನ ಪಕ್ಕದ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ಅವರ ಶ್ರೀಮತಿಯ ಚಹಾ ಸಿದ್ಧವಾಗಿತ್ತು. ಲೋಟ ಬಾಯಿಗಿಡುತ್ತಲೇ ನಾನು ಬಂದ ಕಾರಣವನ್ನು ವಿಚಾರಿಸಿದರು. ನಾನು ಹೊಸದಾಗಿ ಖರೀದಿಸಿದ್ದ ಜಮೀನಿನ ದಾಖಲೆಪತ್ರಗಳನ್ನು ಅವರ ಎದುರಿಗಿಟ್ಟು, ಅದರಲ್ಲಿ ಉಂಟಾಗಿರುವ ಸಮಸ್ಯೆಯನ್ನು ವಿವರಿಸಿದೆ. ದಾಖಲೆಪತ್ರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ, “ಇದ್ದಾರಯ್ಯ ಕೆಲವು ಜನ ಮೋಸ ಮಾಡುವುದಕ್ಕಾಗಿಯೇ ಕಾದು ಕುಳಿತಿರುತ್ತಾರೆ. ಮೋಸ ಮಾಡುವುದೆಲ್ಲ ಈಗ ಸಮೋಸ ತಿಂದಷ್ಟೇ ಸಲೀಸಾಗಿದೆ ಕೆಲವರಿಗೆ” ಎಂದು ಹೇಳಿ, ದಾಖಲೆಪತ್ರಗಳನ್ನು ತಿರುಗಿಸತೊಡಗಿದರು…

*****

ಮಾರನ ಕನಸು ನನಸಾಗಲಿಲ್ಲ. ಮಣ್ಣು ಸೇರಿತ್ತು. ಮಾರನ ತತ್ಕಾಲದ ಜನಪ್ರಿಯತೆಯನ್ನು ಮಾತ್ರವೇ ನಂಬಿಕೊಂಡಿದ್ದ ಆ ಸಿನಿಮಾ ಚೆನ್ನಾಗಿ ಓಡಲಿಲ್ಲ. “ಸಿನಿಮಾ ಚೆನ್ನಾಗಿ ಕಲೆಕ್ಷನ್ ಮಾಡಿಯೇ ಮಾಡುತ್ತದೆ. ಸಿನಿಮಾ ಹಿಟ್ ಆದಮೇಲೆ ನಿನಗೆ ಎಂಟು ಲಕ್ಷ ಕೊಡುತ್ತೇವೆ” ಎಂದು ನಂಬಿಸಿದ್ದ ನಿರ್ದೇಶಕ- ನಿರ್ಮಾಪಕರು ಆಮೇಲೆ ಕೈ ಕೊಟ್ಟಿದ್ದರು. ಸಿನಿಮಾ ಆರಂಭದ ಸಂದರ್ಭದಲ್ಲಿ ಕೊಟ್ಟಿದ್ದ ಹನ್ನೆರಡು ಸಾವಿರ ಮಾತ್ರ ಮಾರನ ಪಾಲಿಗೆ ದಕ್ಕಿದ್ದು. ಇತ್ತ ಕಡೆ ಸ್ಟೇಜ್ ಶೋಗಳಲ್ಲಿಯೂ ಆತನ ಜನಪ್ರಿಯತೆ ಕುಸಿದಿತ್ತು. ಕತ್ತೆಗಿಂತಲೂ ಅಸಹ್ಯವಾಗಿ ಕಿರುಚುವವನ ಹಾಡು, ಕಂಠಪೂರ್ತಿ ಕುಡಿದು ರಾಜಕಾರಣಿಗಳನ್ನು ತೆಗಳುವವನ ಬೈಗುಳ, ಅಚಾನಕ್ಕಾಗಿ ಕಂಡ ಟಿಕ್‌ಟಾಕ್ ಸುಂದರಿಯ ಅರೆಬೆತ್ತಲೆ ದೇಹ- ಇವೆಲ್ಲವೂ ವೈರಲ್ ಆಗಿದ್ದವು. ಮಾರನ ಸ್ಥಾನವನ್ನು ಇಂತಹ ವೈರಲ್ ಸ್ಟಾರ್‌ಗಳು ಆಕ್ರಮಿಸಿಯಾಗಿತ್ತು.

ಅವಕಾಶಗಳೇ ಇಲ್ಲದೆ ವಿಪರೀತವಾಗಿ ನೊಂದಿದ್ದ ಮಾರ ಪೇಟೆಗೆ ದೊಡ್ಡ ನಮಸ್ಕಾರ ಹಾಕಿ, ತಾಯಿಯ ಜೊತೆಗೆ ಮರಳಿ ಕಾಡನ್ನು ಸೇರಿಕೊಳ್ಳಲು ನಿರ್ಧರಿಸಿದ್ದ. ಅಲ್ಲಿಯೂ ಅವನ ನಿರೀಕ್ಷೆ ಫಲಿಸಲಿಲ್ಲ. ಪೇಟೆ ಸೇರಿಕೊಂಡಿದ್ದ ಮಾರ ಮತ್ತು ಅವನ ತಾಯಿಯನ್ನು ತಮ್ಮವರೆಂದು ಸ್ವೀಕರಿಸಲು ಅವರ ಸಮುದಾಯದವರು ಸಿದ್ಧರಿರಲಿಲ್ಲ. ಮಂಗವೊಂದು ಮರದಿಂದ ಮರಕ್ಕೆ ಹಾರುವಾಗ ಏನಾದರೂ ಕೆಳಕ್ಕೆ ಬಿದ್ದರೆ ಉಳಿದ ಮಂಗಗಳು ಆ ಮಂಗನನ್ನು ತಮ್ಮ ಗುಂಪಿನಿಂದ ಹೊರಗುಳಿಸಿಬಿಡುತ್ತವೆ. ಮರದಿಂದ ಬಿದ್ದ ಮಂಗ ಒಂಟಿಯಾಗಿದ್ದುಕೊಂಡು ತನ್ನ ಆಹಾರ, ಬದುಕನ್ನು ಕಂಡುಕೊಳ್ಳಬೇಕಾಗುತ್ತದೆ. ಹೀಗೆಯೇ ಆಗಿತ್ತು ಮಾರನ ಪರಿಸ್ಥಿತಿ. ಪರಂಪರಾನುಗತ ವ್ಯವಸ್ಥೆಯನ್ನು ಬಲವಾಗಿ ಅಪ್ಪಿಕೊಂಡು ಬದುಕುತ್ತಿದ್ದ ಮಾರನ ಸಮುದಾಯದವರು ನಗರದ ಜನರ ಜೊತೆಗಿದ್ದು ಬಂದ ಮಾರ ಮತ್ತು ಅವನ ತಾಯಿಯನ್ನು ಅನ್ಯರೆಂದೇ ಪರಿಗಣಿಸಿದ್ದರು.

ತಮ್ಮವರ ಮಧ್ಯೆಯೇ ಇದ್ದುಕೊಂಡು ಅನಾಥಪ್ರಜ್ಞೆ ಅನುಭವಿಸುವುದಕ್ಕಿಂತ ಮತ್ತೆ ಬೆಂಗಳೂರು ಸೇರಿ ಹೊಸ ಅವಕಾಶಕ್ಕಾಗಿ ಕಾಯುವುದೇ ಮಿಗಿಲು ಎನಿಸಿತೇನೋ ಮಾರ ಮತ್ತು ಅವನ ತಾಯಿಗೆ. ಕಾಡಿನಲ್ಲಿದ್ದ ತನ್ನ ಭೂಮಿಯನ್ನು ಯಾರಿಗೋ ಮಾರಿ, ಪುಡಿಗಾಸು ಸಂಪಾದಿಸಿದ ಮಾರ ತಾಯಿಯ ಜೊತೆಗೆ ಮತ್ತೆ ಬೆಂಗಳೂರಿಗೆ ಬಂದಿದ್ದ.

ಹಾಗೆ ಬಂದವನು ಮಸುಕು ಮಸುಕಾದ ಬಟ್ಟೆಯ ಚೀಲವೊಂದನ್ನು ಹೆಗಲಿಗೇರಿಸಿಕೊಂಡು, ಬಗಲಲ್ಲಿ ನಡೆಯುತ್ತಿದ್ದ ಹೆತ್ತಮ್ಮನ ಮಾತಿಗೆ ಕಿವಿಯಾಗುತ್ತಾ ನಮ್ಮ ಕೇರಿಗೆ ಕಾಲಿಟ್ಟಿದ್ದ. ನಮ್ಮ ಮನೆಯ ಗೇಟು ತೆಗೆದ ತಕ್ಷಣ ಬಲಕ್ಕೆ ತಿರುಗಿ, ಹದಿನೈದು ಹೆಜ್ಜೆ ಸಾಗಿ, ಮತ್ತೆ ಬಲಕ್ಕೆ ತಿರುಗಿ ತುಸು ಮುಂದೆ ಹೋಗಿ ಎಡಕ್ಕೆ ತಿರುಗಿ ಎಂಟು ಹೆಜ್ಜೆ ಸಾಗುವಷ್ಟರಲ್ಲಿ ಎಡಬದಿಗೆ ಸಿಗುವ ಮೂರು ಮಹಡಿಗಳ ಬಾಡಿಗೆ ಮನೆಯ ಕೊನೆಯ ಮಹಡಿಯಲ್ಲಿ ಅವನು ಮತ್ತು ಅವನ ತಾಯಿ ವಾಸಿಸುತ್ತಿದ್ದರು. ಇದ್ದುದರಲ್ಲಿಯೇ ಕಡಿಮೆ ಬೆಲೆಯ ಬಾಡಿಗೆ ಮನೆ ಅದು.

ಮೊದಲಿನಂತೆ ಕಾರ್ಯಕ್ರಮ ಸಿಕ್ಕಿದರೆ ಬದುಕುವುದಕ್ಕೊಂದು ಮಾರ್ಗವಾಗುತ್ತದೆ ಎಂಬ ಆಶಾವಾದ ತಾಯಿ- ಮಗನಲ್ಲಿತ್ತು. ಯಾವ್ಯಾವುದೋ ಸ್ಟೇಜ್ ಶೋಗಳಲ್ಲಿ ಅಪರೂಪಕ್ಕೊಮ್ಮೆ ಇವನನ್ನು ಬಳಸಿಕೊಳ್ಳಲಾಗುತ್ತಿತ್ತು. ಸಿಗುತ್ತಿದ್ದ ಹಣ ಮನೆ ಬಾಡಿಗೆಗೂ ಸಾಕಾಗುತ್ತಿರಲಿಲ್ಲ. ಎರಡು ವಾರಗಳ ಹಿಂದೆ ನನ್ನ ಜೊತೆ ಮಾತನಾಡುವಾಗ ಮುಗ್ಧತೆಯಿಂದ ತಾನು ಇದುವರೆಗೆ ಅನುಭವಿಸಿದ್ದೆಲ್ಲವನ್ನೂ ಚಾಚೂ ತಪ್ಪದೆ ಹೇಳಿಕೊಂಡಿದ್ದ. “ಎಲ್ಲಾ ಸರಿ ಆಗುತ್ತೆ ಬಿಡಣ್ಣ. ಸರಿ ಆಗದಿರುವ ಸಮಸ್ಯೆ ಏನಲ್ಲ ನನ್ನದು. ಅಲ್ಲವೇನಣ್ಣ?” ಎಂದು ಅದೇ ಮುಗ್ಧತೆಯಿಂದ ನನ್ನನ್ನು ಪ್ರಶ್ನಿಸಿದ್ದ. ನಾನು ‘ಹೌದು’ ಎಂದರೆ ಸಾಕು ಎಂಬ ತುಡಿತ ಅವನಲ್ಲಿತ್ತು. ಆದರೆ ನಾನು ಹೇಳಿರಲಿಲ್ಲ. ‘ಅಲ್ಲ’ ಎನ್ನಲು ನನಗೆ ಸಾಧ್ಯವಾಗಿರಲಿಲ್ಲ.

*****

“ಒಂದು ಸಣ್ಣ ಸಮಸ್ಯೆ ಇರುವುದು ನಿಜ. ಅದೇನೂ ಬಗೆಹರಿಸಲಾರದಂಥದ್ದಲ್ಲ. ನನ್ನ ಜ್ಯೂನಿಯರ್ ಪಶುಪತಿ ಅಂತ ಇದ್ದಾನೆ. ನಾನು ಹೇಳಿಟ್ಟಿರುತ್ತೇನೆ. ನಾಳೆಯೇ ಅವನಲ್ಲಿಗೆ ಹೋಗಯ್ಯ. ಒಂದರ್ಧ ಗಂಟೆಯಲ್ಲಿ ಎಲ್ಲಾ ಸರಿಮಾಡುತ್ತಾನೆ” ಎಂದು ನಸುನಗುತ್ತಾ ನುಡಿದ ಸದಾಶಿವಯ್ಯನವರು ದಾಖಲೆಪತ್ರಗಳನ್ನು ನನಗೆ ಹಿಂದಿರುಗಿಸಿದರು. ಒಂದಷ್ಟು ಸಮಯ ಲೋಕಾಭಿರಾಮವಾಗಿ ಅವರೊಂದಿಗೆ ಮಾತನಾಡಿದ ನಾನು ಅವರಿಗೆ ಧನ್ಯವಾದ ಸಮರ್ಪಿಸಿ, ನನ್ನ ಮನೆಯ ಕಡೆಗೆ ಹೊರಟೆ.

ಮನೆಗೆ ತಲುಪಲು ಹತ್ತು ನಿಮಿಷಗಳಿದ್ದವೇನೋ, ಪತ್ನಿಯ ಫೋನು. “ನೀನೇನು ಎಷ್ಟು ಕಾಲ್ ಮಾಡಿದರೂ ಫೋನು ಎತ್ತುತ್ತಿಲ್ಲ? ಏನಾಗಿದೆ ನಿನಗೆ? ನಿನ್ನ ಫೋನಿಗೆ?” ಅವಸರದಿಂದ ಕೇಳಿದೆ. “ಆಗಿರುವುದು ನನಗೂ ಅಲ್ಲ, ನನ್ನ ಫೋನಿಗೂ ಅಲ್ಲ; ಮಾರನಿಗೆ. ಡಿಪ್ರೆಶನ್‌ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಗ ಅದನ್ನು ಹೇಳುವುದಕ್ಕೇ ಕಾಲ್ ಮಾಡಿದ್ದು. ನಾನೀಗ ಇಲ್ಲಿಯೇ ಇದ್ದೇನೆ. ಅವನ ತಾಯಿಯ ಅಳು ನೋಡುವುದಕ್ಕೆ ಆಗುತ್ತಿಲ್ಲ” ಎಂದಳು. “ಸರಿ. ನಾನೀಗಲೇ ಬರುತ್ತೇನೆ” ಎಂದ ನಾನು, ಅವಸರವಸರವಾಗಿ ತರಕಾರಿ- ಹೂ ಇದ್ದ ಬ್ಯಾಗನ್ನು ನಮ್ಮ ಮನೆಯ ವರಾಂಡದಲ್ಲಿಟ್ಟು, ಮಾರನ ಮನೆಯ ಕಡೆಗೆ ಹೊರಟೆ.

ಹೋಗುತ್ತಿದ್ದಾಗಲೇ ನನ್ನನ್ನು ನೋಡಿದ ನಮ್ಮ ವಠಾರದ ಹಿರೀಕರಲ್ಲಿ ಒಬ್ಬರೆನಿಸಿಕೊಂಡಿದ್ದ ಸ್ವಾಮಿನಾಥನ್, ಅವರ ಮನೆಯ ವರಾಂಡದ ಕುರ್ಚಿಯಲ್ಲಿ ಕುಳಿತಿದ್ದವರು, ನನ್ನನ್ನು ಕರೆದರು. ಸುಮಾರು ಐದು ದಶಕಗಳ ಹಿಂದೆ ನೆರೆಯ ನಾಡಿನಿಂದ ಕರುನಾಡಿಗೆ ಬಂದು ನೆಲೆನಿಂತಿದ್ದ ಸ್ವಾಮಿನಾಥನ್ ವಯೋವೃದ್ಧರು ಮಾತ್ರವಲ್ಲ, ಜ್ಞಾನವೃದ್ಧರೂ ಕೂಡಾ. ಹಲವು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಅವರ ವೈಚಾರಿಕ ಬರಹಗಳು ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದವು. ಅವರೆಂದರೆ ನನಗೆ ಅಪಾರ ಅಭಿಮಾನವಿತ್ತು. ಅವರ ಬಳಿಯಲ್ಲಿದ್ದಾಗಲೆಲ್ಲ ನಾನು ಹಿಮಾಲಯವನ್ನು ಸಮೀಪದಿಂದ ದರ್ಶಿಸಿದ ಅನುಭೂತಿ ಪಡೆಯುತ್ತಿದ್ದೆ.

ನನ್ನ ಅವಸರದ ಕಾರಣವನ್ನು ಇನ್ನೇನು ಹೇಳುವುದರಲ್ಲಿದ್ದೆ. ಅಷ್ಟರಲ್ಲಿ ಅವರೇ ನುಡಿದರು- “ಆ ಮುಗ್ಧನನ್ನು ಸಾಯಿಸಿಬಿಟ್ಟೆವಲ್ಲಯ್ಯಾ ನಾವು ಮಹಾನ್ ನಾಗರಿಕರು” ಯಾರು ನಾಗರಿಕರು?! ನನಗೆ ಅರ್ಥವಾಗಲಿಲ್ಲ. “ಅಲ್ಲಾ ಆ ಕಾಡಿನಲ್ಲಿದ್ದ ಮನುಷ್ಯನನ್ನು ನಾಡಿಗೆ ತರುವ ಅಗತ್ಯ ಏನಿತ್ತಯ್ಯ ನಮ್ಮಂತಹ ಸಭ್ಯ ಮಹಾನುಭಾವರಿಗೆ! ಅವನಿಗೆ ಜನಪ್ರಿಯತೆ ಸಿಕ್ಕಿದ್ದೇ ನಮ್ಮ ಕೀಳು ಅಭಿರುಚಿಯಿಂದಾಗಿ. ಅಂತಹ ಕೀಳು ಜನಪ್ರಿಯತೆಯನ್ನು ಹಣ ತೂಗುವ ತಕ್ಕಡಿಯ ಮುಳ್ಳಾಗಿಸಿಕೊಂಡೆವಲ್ಲ ನಾವು, ನಮಗೆ ನಾಚಿಕೆಯಿದೆಯಾ?! ನಗರಕ್ಕೆ ಬಂದ ಅವನಿಗೆ ನಾವು ಕಲಿಸಹೊರಟದ್ದೇನನ್ನು? ಆಧುನಿಕವಾದದ್ದೇ ನಿಜವಾದ ಸಂಸ್ಕೃತಿ ಎನ್ನುವುದನ್ನು. ಕಾಡಿನಲ್ಲಿ ಬದುಕುವವರದ್ದೂ ಒಂದು ಸಂಸ್ಕೃತಿ ಇದೆ ಎನ್ನುವುದನ್ನು ಮರೆತೇಬಿಟ್ಟೆವಲ್ಲ! ಅದನ್ನು ಬಿಟ್ಟು ಆಧುನಿಕವಾದದ್ದೇ ಸಂಸ್ಕೃತಿ ಎಂಬ ಹುಚ್ಚನ್ನು ಯಾಕೆ ಹರಡಬೇಕಿತ್ತು!” ಏರುದನಿಯಲ್ಲಿ ಮಾತನಾಡುತ್ತಿದ್ದ ಸ್ವಾಮಿನಾಥನ್ ಅರೆಕ್ಷಣ ಮಾತು ನಿಲ್ಲಿಸಿದವರು ಆಕಾಶದ ಕಡೆಗೆ ಕೈ ತೋರಿಸುತ್ತಾ ಮಾತು ಮುಂದುವರಿಸಿದರು- “ನೋಡಯ್ಯಾ, ಅಲ್ಲೊಂದು ಹಕ್ಕಿ ಹಾರುತ್ತಾ ಹೋಗುತ್ತಿದೆ. ಹಾರುವುದು ಅದರ ಸಾಮರ್ಥ್ಯ. ಅದುಬಿಟ್ಟು ಆ ಹಕ್ಕಿಯನ್ನು ನೀರಿಗೆಸೆದು ಈಜು ಎಂದರೆ ಆಗುತ್ತದಾ? ಒದ್ದಾಡಿ ಒದ್ದಾಡಿ ಸತ್ತು ಹೋಗುತ್ತದೆ ಅಷ್ಟೇ. ಅವ ಮರ ಹತ್ತುತ್ತಿದ್ದ. ಆನೆಯನ್ನು ಪಳಗಿಸುತ್ತಿದ್ದ. ಜೇನು ಹಿಡಿಯುತ್ತಿದ್ದ. ಅದೆಲ್ಲಾ ಅವನ ಕೌಶಲ್ಯ, ಅವನ ಶಕ್ತಿ. ಆದರೆ ಅದು ನಮಗೆ ಕಾಣಿಸಲಿಲ್ಲ. ನಮಗೆ ಕಂಡದ್ದೇನು ಅವನ ಹುಚ್ಚು ಕುಣಿತ, ಬೆಪ್ಪು ಹಾಡು. ಅದನ್ನು ನೋಡಿ ಅಪಹಾಸ್ಯ ಮಾಡಿ ನಕ್ಕೆವು. ಹೊಸ ಶೈಲಿಯ ಬಟ್ಟೆ ಹಾಕುವುದು, ಕಿವಿ ತಮಟೆ ಹರಿಯುವಂತಹ ಸಂಗೀತಕ್ಕೆ ನಶೆ ಏರಿಸಿಕೊಂಡು ಕುಣಿಯುವುದು, ಇಂಗ್ಲೀಷ್ ಮಾತನಾಡುವುದು ಇದನ್ನೇ ಬುದ್ಧಿವಂತಿಕೆ ಎಂದು ತೋರಿಸಹೊರಟ ಬುದ್ಧಿಗೇಡಿಗಳು ನಾವು. ಅವನಂತೆ ಮರ ಹತ್ತುವುದಕ್ಕೆ ಬರುತ್ತದೇನಯ್ಯ ನಮಗೆ? ಅವನಂತೆ ಜೇನು ತೆಗೆದೇವಾ? ಆನೆಯ ದಂತ ಕಿತ್ತು ಹಣ ಮಾಡಿಕೊಳ್ಳುವ ನಮ್ಮನ್ನು ಆನೆ ಪ್ರೀತಿಯಿಂದ ಬೆನ್ನಿನ ಮೇಲೆ ಕೂರಿಸಿಕೊಳ್ಳುತ್ತದಾ? ನಮ್ಮ ದೃಷ್ಟಿಯಲ್ಲಿ ಅವನು ಶೂನ್ಯನಾದರೆ ಅವನ ದೃಷ್ಟಿಯಲ್ಲಿ ನಾವೂ ಶೂನ್ಯರೇ ತಾನೇ? ಅವನನ್ನು ಅಪಹಾಸ್ಯ ಮಾಡುವುದಕ್ಕೆ ನಮಗೆ ಕಾರಣಗಳಿದ್ದಂತೆ ನಮ್ಮನ್ನು ನೋಡಿ ಅಪಹಾಸ್ಯದ ನಗು ನಗುವುದಕ್ಕೆ ಅವನಿಗೂ ಕಾರಣವಿತ್ತು ತಾನೇ?”

ಮತ್ತೆ ಅರೆಕ್ಷಣದ ಮೌನ. ಎದುರಿನ ಟೇಬಲ್‌ನಲ್ಲಿದ್ದ ಪತ್ರಿಕೆಗಳ ರಾಶಿಯಿಂದ ಒಂದು ಪತ್ರಿಕೆಯನ್ನು ಹುಡುಕಿ ಎತ್ತಿಕೊಂಡವರು, ಅದನ್ನು ನನ್ನ ಮುಖದ ಎದುರು ಹಿಡಿದು, ಮತ್ತೆ ಮಾತು ಮುಂದುವರಿಸಿದರು- “ನೋಡಯ್ಯಾ, ಈಗ ಒಂದು ವಾರದ ಹಿಂದಿನ ಪೇಪರ್ ಇದು. ಇದರಲ್ಲೊಂದು ಸುದ್ದಿ ಇದೆ. ಮಾರನ ಕಾಡಿಗೆ ಸಂಬಂಧಿಸಿದ್ದು. ಆನೆ ಸಾಕುತ್ತಿದ್ದ ಆ ಆದಿವಾಸಿಗಳನ್ನು ವನ್ಯಜೀವಿ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ. ಅರಣ್ಯ ಒತ್ತುವರಿ ಮಾಡಿದ್ದಾರೆ ಎಂಬ ನೆಪ ಹೇಳಿ ಅವರನ್ನು ಅಲ್ಲಿಂದ ಓಡಿಸಲಾಗಿದೆ. ಯಾರ‍್ಯಾರೋ ಹೊಟ್ಟೆ ತುಂಬಿದವರ ಡೊಳ್ಳು ಹೊಟ್ಟೆಯನ್ನು ಮತ್ತೂ ತುಂಬಿಸಲು ಈ ಮಾರನಂತಹ ಜನರ ಬದುಕು ಬೆಂಕಿಯಲ್ಲಿ ಸುಟ್ಟುಹೋಗುವಂತಾಗಿದೆ”

ಸ್ವಾಮಿನಾಥನ್ ಅವರಿಗೆ ವಿಪರೀತವಾದ ಕೋಪ ಬಂದಿತ್ತು. ಅವರ ಕೋಪವನ್ನು ತಣಿಸುವ ಧಾಟಿಯಲ್ಲಿ ಹೇಳಿದೆ- “ಬನ್ನಿ, ಮಾರನ ಅಂತಿಮದರ್ಶನ ಮಾಡಿ ಬರೋಣ”

ದನಿತಗ್ಗಿಸಿ ನುಡಿದರು- “ಬದುಕಿರುವಾಗ ನೆಮ್ಮದಿ ಕೊಡದ ಜನ ನಾವು. ಸತ್ತ ಮೇಲೆ ಅವನಿಗೆ ಮುಖ ತೋರಿಸುವ ಯೋಗ್ಯತೆ ನಮಗಿದೆಯಾ?”

ನಾನು ಅವರ ಪ್ರಶ್ನೆಯ ಬಗ್ಗೆ ಯೋಚಿಸುತ್ತಿದ್ದಾಗಲೇ ಪತ್ನಿಯ ಫೋನು. “ನೀವಿನ್ನು ಬರುವ ಅಗತ್ಯ ಇಲ್ಲ. ಹೆಣ ಹೊತ್ತ ವಾಹನ ಇಲ್ಲಿಂದ ಹೊರಟಾಯಿತು. ಅವನನ್ನು ಅವನಿದ್ದ ಕಾಡಿನಲ್ಲಿಯೇ ಮಣ್ಣು ಮಾಡುತ್ತಾರಂತೆ. ಅವನ ತಾಯಿಯ ಇಚ್ಛೆ ಅದು. ಹುಟ್ಟಿದ ಮಣ್ಣಲ್ಲಿಯೇ ಮಗ ಮಣ್ಣಾಗಬೇಕಂತೆ” ಎಂದಳು.

‘ಅವನ ಹೆಣಕ್ಕೊಂದು ಮುಕ್ತಿ ದೊರಕಿಸುವ ಅವನ ಸಮುದಾಯದವರು ಆ ಕಾಡಿನಲ್ಲಿದ್ದಾರಾ? ಒಂದು ವೇಳೆ ಕೆಲವರು ಉಳಿದಿದ್ದರೂ, ಬದುಕಿದ್ದಾಗ ಪರಕೀಯನೆಂದು ತಿರಸ್ಕರಿಸಿದ ಅವರು ಈಗ ಅವನ ಹೆಣವನ್ನು ಸ್ವೀಕರಿಸುತ್ತಾರಾ? ಸ್ವೀಕರಿಸದಿದ್ದರೆ ಆ ಬಡಪಾಯಿ ತಾಯಿ ಏನು ತಾನೇ ಮಾಡಿಯಾಳು? ಮತ್ತೆ ನಗರಕ್ಕೆ ಬಂದಾಳಾ?’ ಪ್ರಶ್ನೆಗಳು ನನ್ನಲ್ಲಿ ಮೂಡಿದವು.

“ಮಾರ ……” ಆಫೀಸಿಗೆ ಕರೆ ಮಾಡಿದ್ದ ಪತ್ನಿ ಹೇಳಿದ ಮಾತು ನನ್ನ ಮನದಲ್ಲಿ ಧೀಂಗಿಣ ಹೊಡೆಯತೊಡಗಿತು. ಆ ಅರ್ಧಂಬರ್ಧ ಮಾತು ಮಾರನ ಅಪೂರ್ಣ ಬದುಕಿಗೆ, ಸತ್ತ ಮೇಲೂ ಬೆನ್ನುಬಿಡದ ಅತಂತ್ರ ಸ್ಥಿತಿಗೆ ರೂಪಕವೆಂದು ಈಗ ನನಗೆ ಭಾಸವಾಗತೊಡಗಿತು.