ಈಗ ಗೋಡೆಯ ಮೇಲಿನ ಚಿತ್ರಗಳು ಬದಲಾಗಿ ವಿಶಾಲವಾದ ಸಮುದ್ರ ಗೋಚರಿಸತೊಡಗಿದೆ. ಸಮುದ್ರದ ನಟ್ಟನಡುವೆ ಹಡಗಿನಲ್ಲಿ ರಮೇಶ, ಶೇಖರ ಹಾಗೂ ಹೆಂಗಸೊಬ್ಬಳು ನಿಂತಿದ್ದಾರೆ! ಹೆಂಗಸಿನ ಅಣತಿಯನ್ನು ಶಿರಸಾವಹಿಸಿ ಪಾಲಿಸುವಂತೆ ರಮೇಶ, ಶೇಖರನನ್ನು ಹಡಗಿನಿಂದ ಸಮುದ್ರಕ್ಕೆ ದೂಡಿದ! ಉರವಣಿಸಿ ಬಂದ ಅಲೆಗಳು ಶೇಖರನನ್ನು ತಮ್ಮೊಳಗೆ ಕರಗಿಸಿಕೊಂಡವು. ಶೇಖರ ಇನ್ನಿಲ್ಲವಾದ! ‘ಇಲ್ಲಾ, ಇಲ್ಲಾ! ನಾನು ಮದುವೇನೇ ಆಗಲ್ಲ!’ ಎಂದು ಚೀರಿ ಕನಸಿನ ಭ್ರಮಾಲೋಕದಿಂದ ವಾಸ್ತವ ಪ್ರಪಂಚಕ್ಕೆ ಮರಳಿದ ರಮೇಶ!
ವೆಂಕಟೇಶ ಬಿ.ಎಂ. ಬರೆದ ಈ ಭಾನುವಾರದ ಕತೆ “ಸಹೋದರರ ಕನಸು” ಹೊಸ ವರ್ಷದ ಮೊದಲ ಓದಿಗೆ

ಆಕೃತಿಗಳ್ಗಾಕಾರವೇ ಇಲ್ಲ;
ಅರ್ಥಾನರ್ಥದ ಸ್ಪಷ್ಟತೆ ಇಲ್ಲ.
ಪಸುಳೆಯ ಮೊದಲನೇ ತೊದಲಂತೆಲ್ಲಾ
ಅರ್ಥದ ನೆಚ್ಚಿಲ್ಲದ ಕೆಚ್ಚು!
-ಕುವೆಂಪು

ಹೊರಗಡೆ ಮಳೆ ನಿಶ್ಚಿಂತೆಯಿಂದ ‘ಧೋ’ ಎಂದು ಸುರಿಯುತ್ತಿತ್ತು. ಕೋಣೆಯಲ್ಲಿ ಒಬ್ಬನೇ ಕುಳಿತು ಕನ್ನಡ ಪದ್ಯ ಕಂಠಪಾಠ ಮಾಡುತ್ತಿದ್ದ ಶೇಖರನಿಗೆ ಒಂದು ಬಗೆಯ ಧರ್ಮಸಂಕಟ ಪ್ರಾರಂಭವಾಗಿತ್ತು! ಮನೆಮಂದಿಯೆಲ್ಲಾ ಹೊರಗೆ ಜಗುಲಿಯ ಮೇಲೆ ಕೂತು ಹರಟುತ್ತಿರುವಾಗ, ತಾನು ಮಾತ್ರ ಕೋಣೆಯಲ್ಲಿ ಬಂಧಿಯಾಗಿರುವವನಂತೆ ಓದುವುದು ಯಾವ ನ್ಯಾಯ ಅನಿಸಿತವನಿಗೆ. ಅಲ್ಲದೆ ಮಳೆ ಸುರಿಯುತ್ತಿರುವ ಸಮಯ ಬೇರೆ! ಹೊರಗೆ ಜಗುಲಿಯ ಬಳಿ ನೂರಾರು ಮಳೆಹುಳುಗಳು ಜಮಾಯಿಸಿರುತ್ತವೆ! ಸಣ್ಣಪುಟ್ಟ ಕೀಟಗಳನ್ನು ಹಿಡಿಯಲು ಹೊಂಚು ಹಾಕುತ್ತಿರುವ ಮಳೆಹುಳುಗಳು! ಅವುಗಳನ್ನು ಕಬಳಿಸಲು ಅಖಂಡ ಮೌನದಲ್ಲಿ, ಅಸ್ಖಲಿತ ತಾಳ್ಮೆಯಿಂದ ಹೊಂಚು ಹೂಡುತ್ತಿರುವ ಹಲ್ಲಿಗಳು! ಇವೇ ನೂರಾರು ಬಗೆಯ ವಿದ್ಯಮಾನಗಳನ್ನು ನೋಡಲು ಶೇಖರನ ಮನಸ್ಸು ಕಾತರಿಸುತ್ತಿತ್ತು. ಆದರೇನು ಮಾಡುವುದು? ಪದ್ಯ ಕಂಠಪಾಠ ಮಾಡಿಕೊಂಡು ಬರದಿದ್ದರೆ ‘ಲಾತಾ ಬಿಗೀತೀನಿ’ ಎಂದು ಕಮಲಾ ಟೀಚರ್ ಹೆದರಿಸಿಬಿಟ್ಟಿದ್ದಾರೆ! ಹೀಗಾಗಿ ಅಳುಮುಖ ಮಾಡಿಕೊಂಡು, ಉಗುರು ಕಚ್ಚುತ್ತಾ ಹನ್ನೆರಡು ವರ್ಷದ ಬಾಲಕ ಶೇಖರ ಪದ್ಯ ಕಂಠಪಾಠ ಮಾಡುತ್ತಿದ್ದ.

ಆ ಪದ್ಯದಲ್ಲಿ ಯಾರೋ ಕವಿ, ಕನ್ನಡವನ್ನೂ, ಕನ್ನಡಿಗರನ್ನೂ ಯದ್ವಾತದ್ವಾ ಹೊಗಳಿದ್ದರು. ಪುಟ್ಟ ಬಾಲಕ ಯೋಚಿಸಿದ: ‘ಅಲ್ಲಾ, ಈಗ ಅನೇಕ ಜನ ಕನ್ನಡಾನೇ ಮಾತಾಡಲ್ಲ. ಕನ್ನಡ ಕ್ಲಾಸ್ ಬಿಟ್ಟು ಬೇರೆ ಟೈಮಿನಲ್ಲಿ ಕನ್ನಡ ಮಾತಾಡಿದರೆ ಫೈನ್ ಹಾಕ್ತಾರೆ; ಅಂಥಾದ್ದರಲ್ಲಿ ಕವಿ ಕನ್ನಡಾನಾ ಈ ಪಾಟಿ ಹೊಗಳಿದ್ದಾನಲ್ಲಾ’ ಎಂದು. ನಂತರ ತನಗೆ ತಾನೇ ಸಮಾಧಾನ ಮಾಡಿಕೊಳ್ಳುವವನಂತೆ, ‘ಓಹೋ! ಆ ಕವಿಯ ಕಾಲದಲ್ಲಿ ಎಲ್ಲರೂ ಕನ್ನಡದಲ್ಲಿ ಮಾತನಾಡುತ್ತಿದ್ದರು ಅನ್ನಿಸುತ್ತೆ’ ಎಂದು ಯೋಚಿಸಿದ.

ಹೊರಗಡೆ ಮನೆ ಮಂದಿ ಮಾತಾಡುತ್ತಿರುವ ಸದ್ದು ಕ್ಷೀಣವಾಗಿ ಕೇಳಿಸುತ್ತಿತ್ತು. ಪುಸ್ತಕ ಬಿಸಾಕಿ ಜಗುಲಿಯತ್ತ ಓಡಿಬಿಡಲೇ ಎಂದು ಶೇಖರ ಯೋಚಿಸಿದ. ಅದೇ ಸಮಯಕ್ಕೆ ಸರಿಯಾಗಿ ದಿನಾಲೂ ಕಪ್ಪೆಯೊಂದು ಜಗುಲಿಯ ಬಳಿ ಹುಳುಗಳ ಮಾರಣಹೋಮ ನಡೆಸಲು ಬರುತ್ತಿತ್ತು. ಹೀಗಾಗಿ ಶೇಖರನ ಮನಸ್ಸೆಲ್ಲಾ ಜಗುಲಿಯ ವಿದ್ಯಮಾನಗಳ ಕಡೆಗೇ ಕೇಂದ್ರೀಕೃತವಾಗಿತ್ತು. ಮರುಕ್ಷಣವೇ ಶೇಖರನ ತಾಯಿ, “ಏ ಶೇಖರ! ಓದುತ್ತಿದ್ದೀಯೇನೋ” ಎಂದು ವಿಚಾರಿಸಿದರು. ಓದುವುದನ್ನು ಕೈಬಿಟ್ಟು, ಎಲ್ಲಿ ತೂಕಡಿಸುತ್ತಾ ಕಾಲ ಕಳೆದಾನೋ ಎನ್ನುವ ಚಿಂತೆ ಅವರಿಗೆ! ಹೀಗಾಗಿ ಶೇಖರ, ಹೊರಗೆ ಓಡುವ ತನ್ನ ಹಂಚಿಕೆಯನ್ನು ಅಲ್ಲಿಗೇ ಕೈಬಿಡಬೇಕಾಯ್ತು.

ಮತ್ತೆ ಶೇಖರನ ಕಂಠಪಾಠ ಮುಂದುವರಿಯಿತು. “ಹಾಳಾದ್ದು! ಎಂಥಾ ಪದ್ಯಾನಪ್ಪ! ಎಷ್ಟು ಉರುಹೊಡೆದರೂ ತಲೆಗೇ ಹತ್ತುತ್ತಿಲ್ಲ” ಎಂದು ಗೊಣಗುತ್ತಾ ಓದುತ್ತಿದ್ದ. ಆಕಾಶದಲ್ಲಿ ಕಪ್ಪು ಮೋಡಗಳು ಅಕ್ಷಯವಾಗಿ ಉದ್ಭವಗೊಳ್ಳುತ್ತಿದ್ದವು. ಮಳೆಯ ಅಬ್ಬರದಲ್ಲಿ ಮನೆಮಂದಿಯ ಮಾತಿನ ಸದ್ದು ಲೀನವಾಗಿ ಬಹಳ ಹೊತ್ತೇ ಸಂದಿತ್ತು. ಎಡೆಬಿಡದೆ ಸುರಿಯುತ್ತಿದ್ದ ಮಳೆಯ ದೆಸೆಯಿಂದ ಒಂದು ವಿಧವಾದ ಜಡತ್ವದ ವಾತಾವರಣ ಏರ್ಪಟ್ಟಿತ್ತು. ಮೊದಲನೇ ಪ್ಯಾರಾ ಉರುಹೊಡೆದು, ಕಣ್ಮುಚ್ಚಿ ಹೇಳಿಕೊಂಡು ಮರಳಿ ತೆರೆದ ಶೇಖರನಿಗೆ ಬಾಗಿಲಿನಲ್ಲಿ ಅವನ ಅಣ್ಣ ರಮೇಶ ನಿಂತಿರುವುದು ಕಾಣಿಸಿತು. ರಮೇಶ ಡಿಗ್ರಿ ಓದುತ್ತಿದ್ದ. ಕಾಲೇಜಿನ ಗ್ರಂಥಾಲಯದಲ್ಲಿ ಸಿಗುವ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಂಡಿದ್ದ ಅವನಿಗೆ, ತಾನು ಓದಿದ್ದನ್ನು ಯಾರಿಗಾದರೂ ಹೇಳಬೇಕೆಂಬ ಹಂಬಲ! ಗೆಳೆಯರ ಬಳಿ ಪುಸ್ತಕದ ವಿಷಯಗಳನ್ನು ಪ್ರಸ್ತಾಪಿಸುವುದು ಅಪಾಯಕಾರಿಯಾಗಿತ್ತು! ಏಕೆಂದರೆ ಅವರು ಅತ್ಯಂತ ಉತ್ಸಾಹದಿಂದ ಪ್ರತಿಕ್ರಿಯಿಸುತ್ತಿದ್ದದ್ದು ಹುಡುಗಿಯರ ಗುಪ್ತಾಂಗಗಳ ಬಗ್ಗೆ ಮಾತನಾಡಿದಾಗ ಮಾತ್ರ! ಹೀಗಾಗಿ, ಅಂದು ತಾನು ಓದಿದ್ದನ್ನು ವಿವರಿಸುವ ಉದ್ದೇಶದಿಂದ ಶೇಖರನ ಕೋಣೆಗೆ ಬಂದಿದ್ದ. ಬಂದವನೇ “ಎಂಥ ಮಳೇನೋ ಶೇಖರ ಇದು! ಭೂಮಿ ಹುಟ್ಟಿದ ಹೊಸತರಲ್ಲಿ ಬಂದಂಗೆ ಹುಚ್ಚೆದ್ದು ಸುರೀತಿದ್ಯಲ್ಲೋ” ಎಂದು ಉದ್ಗರಿಸಿದ. ಶೇಖರನಿಗೆ ಕುತೂಹಲ ಕೆರಳಿತು. ರಮೇಶನಿಗೂ ಅದೇ ಬೇಕಿತ್ತು!

‘ಭೂಮಿ ಹುಟ್ಟಿದ್ದಾ! ಏನೋ ಅದು?’ ಎಂದು ಹುಬ್ಬೇರಿಸಿ, ಕುತೂಹಲಭರಿತನಾಗಿ ಕೇಳಿದ ಶೇಖರ.

‘ಹೂ ಕಣೋ ಶೇಖರ! ಭೂಮಿ ಹುಟ್ಟಿದ್ದು. ಭೂಮಿ ಮಾತ್ರವಲ್ಲ, ಇಡೀ ಬ್ರಹ್ಮಾಂಡ ಹುಟ್ಟಿದ್ದೇ ಧೂಳಿನ ಮೋಡದಿಂದ ಕಣೋ! ಹೇಗೆ ಅಂತ ನಾನು ಹೇಳಲ್ಲಪ್ಪ, ನೀನು ಓದಿಕೋ’ ಎಂದು ಹೇಳಿ ಶೇಖರನ ಕುತೂಹಲವನ್ನು ಉಲ್ಪಣಗೊಳಿಸಿದ ರಮೇಶ. ಶೇಖರ ತನಗೆ ಹೇಳಲೇಬೇಕೆಂದು ಪಟ್ಟು ಹಿಡಿದು ಕೂತ. ಹೀಗಾಗಿ ರಮೇಶ ಮುಂದುವರಿಸಿದ. ‘ಸುಮಾರು ೪ ಮಿಲಿಯನ್ ವರ್ಷಗಳ ಹಿಂದೆ ಕಣೋ! ‘ನೀಹಾರಿಕೆಗಳು’ ಎಂದು ಕರೆಯುವ ಧೂಳಿನ ಮೋಡಗಳೆಲ್ಲಾ ಅಲ್ಲಲ್ಲಿ ಚದುರಿದ್ದವು. ಈ ನೀಹಾರಿಕೆಗಳು ತಿರುಗುತ್ತಾ, ತಿರುಗುತ್ತಾ ಮಧ್ಯಭಾಗದಲ್ಲಿ ಸುಳಿಯೊಂದು ಏರ್ಪಟ್ಟಿತು. ಈ ದೊಡ್ಡ ಸುಳಿ ಸಿಕ್ಕಾಪಟ್ಟೆ ಶಾಖ ಪಡೆದುಕೊಂಡು ಸೂರ್ಯನಾಗಿ ರೂಪುಗೊಂಡಿತು. ಸುತ್ತಮುತ್ತ ತಿರುಗುತ್ತಿದ್ದ ಉಪಸುಳಿಗಳೇ ಗ್ರಹ, ನಕ್ಷತ್ರಗಳಾಗಿ ರೂಪುಗೊಂಡವು’ ಎಂದು ತನ್ನ ಅರಿವಿಗೆ ನಿಲುಕಿದಷ್ಟನ್ನು ಶೇಖರನಿಗೆ ವಿವರಿಸಿದ.

ಶೇಖರನಿಗೆ ಇದೊಂದು ಅತಿದೊಡ್ಡ ಪವಾಡದಂತೆ ಕಂಡು, ಇದನ್ನೆಲ್ಲಾ ತಿಳಿದಿರುವ ತನ್ನ ಅಣ್ಣ ಮಹಾ ಮೇಧಾವಿಯೆಂದು ತೀರ್ಮಾನಿಸಿದ. ರಮೇಶ ಹಾಗೂ ಶೇಖರ, ಗ್ರಹ-ತಾರೆ, ಮೋಡಗಳೆಂದು ಏನೇನೋ ಹರಟುತ್ತಿರುವುದು ಕೇಳಿ ಅವರ ತಾಯಿಗೆ ರೇಗಿಹೋಯಿತು. ‘ಓದಿಕೊಳ್ಳೋ ಅಂದರೆ ಕೆಲಸಕ್ಕೆ ಬಾರದುದನ್ನೆಲ್ಲಾ ಹರಟುತ್ತಿದ್ದೀಯಾ!’ ಎಂದು ಗದರಿಸಿ ರಮೇಶನೊಡನೆ ಹೊರನಡೆದರು. ಶೇಖರ ರಮೇಶನಿಗೆ ಕೆಲವು ಪ್ರಶ್ನೆಗಳನ್ನು ಕೇಳಬೇಕೆಂದಿದ್ದ. ಆದರೆ ಅದಕ್ಕೆ ಅವಕಾಶ ಸಿಕ್ಕದುದರಿಂದ ಮತ್ತೆ ತನ್ನ ಕಂಠಪಾಠ ವ್ರತವನ್ನು ಮುಂದುವರಿಸಿದ.

ಕೋಣೆಯಲ್ಲಿ ಒಬ್ಬನೇ ಕೂತು ಪದ್ಯ ಉರುಹೊಡೆಯುವುದಕ್ಕೆ ಬೋರು! ಹೀಗಾಗಿ ಶೇಖರ ಹತ್ತಿಪ್ಪತ್ತು ನಿಮಿಷಗಳಿಗೊಮ್ಮೆ ನೀರು ಬೇಕೆಂದು ಅಡುಗೆಮನೆಗೋ, ಉಚ್ಚೆಗೆ ಹೋಗಬೇಕೆಂದು ಬಚ್ಚಲು ಮನೆಗೋ ಹೋಗಿ ಬರುವ ನಾಟಕವಾಡುತ್ತಿದ್ದ. ಪದ್ಯ ಓದುತ್ತಿದ್ದಾಗಲೂ ಅವನ ತಲೆಯಲ್ಲಿ ರಮೇಶ ಹೇಳಿದ ಸಂಗತಿಗಳೇ ಗುಯ್ಗುಡುತ್ತಿದ್ದವು. ಯಃಕಶ್ಚಿತ್ ಧೂಳಿನ ಮೋಡಗಳು ಭೂಮಿಯನ್ನೇ ಸೃಷ್ಟಿಸಬಹುದೇ ಎಂದು ಅಸ್ಪಷ್ಟವಾಗಿ ಚಿಂತಿಸುತ್ತಿದ್ದ. ಮನೆಮಂದಿಯೆಲ್ಲಾ ಒಟ್ಟಿಗೆ ಕೂತು ನೋಡುತ್ತಿದ್ದ ಧಾರಾವಾಹಿಯೊಂದು ಪ್ರಸಾರವಾಗಲು ಇನ್ನೂ ಅರ್ಧಘಂಟೆ ಬಾಕಿ ಉಳಿದಿತ್ತು. ಯಾವಾಗಪ್ಪ ಅರ್ಧಘಂಟೆ ಆಗುತ್ತೆ ಎಂದು ಶೇಖರ ಒಳಗೊಳಗೇ ಕೊರಗುತ್ತಿದ್ದ. ಆದರೆ ಪವಾಡವೆಂಬಂತೆ ತಟಕ್ಕನೆ ವಿದ್ಯುತ್ ಹೋಗಿಬಿಟ್ಟಿತು. ಶೇಖರನಿಗಂತೂ ಪರಮಾನಂದವಾಯಿತು! ಪಂಜರದ ಬಿಗಿಮುಷ್ಟಿಯಿಂದ ಮುಕ್ತಿ ಹೊಂದಿ ವಿಶಾಲ ಗಗನಕ್ಕೆ ಹಾರುವ ಹಕ್ಕಿಯಂತೆ ಕೋಣೆಯಿಂದ ಹೊರಬಂದ. ಹಾಲಿನಲ್ಲಿ ಶೇಖರನ ತಾಯಿ ಕುಳಿತಿದ್ದರು. ‘ಅಂತೂ ರೋಗಿ ಬಯಸಿದ್ದನ್ನೇ ವೈದ್ಯ ಹೇಳಿದ ಹಾಗಾಯಿತು’ ಎಂದು ನಕ್ಕರು. ಶೇಖರ ನಗಲಿಲ್ಲ. ತನಗೆ ಏನೂ ತಿಳಿಯದೆಂಬಂತೆ ಪಿಳಿಪಿಳಿ ಕಣ್ಣುಬಿಟ್ಟು ಜಗುಲಿಯ ಕಡೆ ಹೆಜ್ಜೆ ಇಟ್ಟ. ವಿದ್ಯುತ್ ಹೋದರೆ ತಾನೇನು ಮಾಡಲಿಕ್ಕಾಗುತ್ತದೆ ಎಂಬ ಭಾವನೆಯನ್ನು ಮುಖದಲ್ಲಿ ಸ್ಫುರಿಸಲು ಹೆಣಗಾಡುತ್ತಿದ್ದ. ಜಗುಲಿಗೆ ಹೋಗುವ ಅವನ ಹಂಚಿಕೆಯನ್ನು ಸಂಪೂರ್ಣ ಗ್ರಹಿಸಿದ ಅವನ ತಾಯಿ, ‘ಕೂತುಕೊಂಡು ಮಗ್ಗಿ ಹೇಳೋ’ ಎನ್ನುವಷ್ಟರಲ್ಲಿ ಶೇಖರ ಜಗುಲಿ ತಲುಪಿದ್ದ.

ಧಾರಾಕಾರವಾಗಿ ಸುರಿದಿದ್ದ ಮಳೆಯ ದೆಸೆಯಿಂದ ಜಗುಲಿಯ ಬಳಿಯ ನೆಲವೆಲ್ಲಾ ಸಂಪೂರ್ಣ ತೇವಗೊಂಡಿತ್ತು. ಮಳೆಹುಳುಗಳು ಸೇರಿದಂತೆ ಅನೇಕ ಬಗೆಯ ಹುಳುಗಳು ಅಲ್ಲಿ ಜಮಾಯಿಸಿ, ಹುಳುಗಳ ಕಿರುಸಾಮ್ರಾಜ್ಯವೇ ರೂಪುಗೊಂಡಿತ್ತು. ಈ ಶಾಂತಿಯುತ, ಸುಭಿಕ್ಷ ಸಾಮ್ರಾಜ್ಯವನ್ನು ಕದಡಿ ನಾಶಮಾಡಲೆಂಬಂತೆ, ಅಲ್ಲಿ ಗಡವ ಕಪ್ಪೆಯೊಂದು ದಂಡೆತ್ತಿ ಬಂದಿತ್ತು. ಕಪ್ಪೆ ಮಾತ್ರವಾಗಿದ್ದರೆ ಒಂದಷ್ಟು ಹುಳುಗಳಾದರೂ ಬಚಾವಾಗುತ್ತಿದ್ದವೋ ಏನೋ! ಕಪ್ಪೆ ಬೇಟೆಯಾಡುವ ಪರಿಯನ್ನು ಕುತೂಹಲದ ಕಣ್ಣುಗಳಿಂದ ದಿಟ್ಟಿಸುತ್ತಿದ್ದ ಶೇಖರ, ದೂರದಲ್ಲೆಲ್ಲೋ ಹರಿದಾಡುತ್ತಿದ್ದ ಹುಳುಗಳನ್ನು ಬಕಾಸುರ ಕಪ್ಪೆಯೆಡೆಗೆ ತಳ್ಳಲು ತೊಡಗಿದರಿಂದ, ಅಲ್ಲಿ ಹುಳುಗಳ ಮಾರಣಹೋಮವೇ ನಡೆಯುತ್ತಿತ್ತು.

ಕಪ್ಪೆ ಬೇಟೆಯನ್ನು ತದೇಕಚಿತ್ತದಿಂದ ನೋಡುತ್ತಿದ್ದ ಶೇಖರ, ಫಕ್ಕನೆ ಏನನ್ನೋ ನೆನಪಿಸಿಕೊಂಡು ಮ್ಲಾನವದನನಾಗಿ ಕೂತ. ವಿದ್ಯುತ್ತು ಹೋಗಿದ್ದರಿಂದ ಸಮಾಧಾನವಾಗಿದ್ದೇನೋ ನಿಜ! ಆದರೆ ಹುಚ್ಚೆದ್ದು ಸುರಿಯುತ್ತಿದ್ದ ಮಳೆಯ ದೆಸೆಯಿಂದ ಯಾವುದಾದರೂ ವಿದ್ಯುತ್ ತಂತಿ ತುಂಡಾಗಿ ಹೋಗಿದ್ದರೆ, ಬೇಗನೆ ವಿದ್ಯುತ್ ಬರುವ ಸಂಭವವಿರಲಿಲ್ಲ. ವಿದ್ಯುತ್ ಇಲ್ಲದೆ ಓದಲಾಗುವುದಿಲ್ಲ! ಓದದೇ ಶಾಲೆಗೆ ಹೋದರೆ ಮೇಡಂ ಹುಡುಗಿಯರ ಮುಂದೆಲ್ಲಾ ಅವಮಾನ ಮಾಡುತ್ತಾರೆ! ಶೇಖರನಿಗೆ ಆತ್ಮಾಭಿಮಾನ ಕೆರಳಿತು. ಏನೇ ಆಗಲಿ; ಓದಿಕೊಂಡೇ ಹೋಗಬೇಕೆಂದು ತೀರ್ಮಾನಿಸಿದವನಿಗೆ, ವಿದ್ಯುತ್ ಇಲ್ಲದೆ ಓದುವುದಾದರೂ ಹೇಗೆ ಎಂಬ ಚಿಂತೆ ಕಾಡಹತ್ತಿತು. ಕೆಲ ದಿನಗಳ ತಾನು ಓದಿದ್ದ ಯಾವುದೋ ಪುಸ್ತಕದಲ್ಲಿ, ವಿಶ್ವೇಶ್ವರಯ್ಯನವರು ಬೀದಿ ದೀಪದ ಕ್ಷೀಣ ಬೆಳಕಿನಲ್ಲೇ ಓದಿ ದೊಡ್ಡ ಮನುಷ್ಯರಾದರೆಂಬ ಸಂಗತಿಯಿದ್ದದ್ದು ಶೇಖರನಿಗೆ ನೆನಪಿಗೆ ಬಂತು. ಎಲ್ಲಕ್ಕಿಂತ ಅವನ ಮುಗ್ಧ ಮನಸ್ಸಿನ ಮೇಲೆ ಪರಿಣಾಮ ಬೀರಿದ್ದೆಂದರೆ, ವಿಶ್ವೇಶ್ವರಯ್ಯನವರ ನಿಧನಾನಂತರ, ವಿದೇಶಿಯರು ಅವರ ತಲೆಬುರುಡೆಯನ್ನು ಕೇಳಿದರಂತೆ ಎನ್ನುವ ದಂತಕಥೆ. ಇದು ಶೇಖರನ ಮನಸ್ಸಿಗೆ ಒಂದು ವಿಧವಾದ ರೋಮಾಂಚಕತೆಯನ್ನು ಉಂಟು ಮಾಡಿತ್ತು. ತಟಕ್ಕನೆ ಚೈತನ್ಯ ಸಂಚಾರವಾದಂತಾಗಿ, ಕ್ಯಾಂಡಲ್ ಹಾಗೂ ಬೆಂಕಿಪೊಟ್ಟಣವನ್ನು ತನ್ನ ತಾಯಿಯಿಂದ ಕೇಳಿ ಪಡೆದು ಕೋಣೆಗೆ ಓಡಿದ. ದಿನನಿತ್ಯವೂ ಓದೋ ಓದೋ ಎಂದು ಅಲವತ್ತುಕೊಂಡರೂ ಓದದಿರುವ ಮಗನಲ್ಲಿ, ಈಗ ಪವಾಡದಂತೆ ಉದ್ಭವಿಸಿರುವ ಆಸಕ್ತಿಯನ್ನು ಕಂಡು ಶೇಖರನ ತಾಯಿಗೆ ಪರಮಾಶ್ಚರ್ಯವಾಯಿತು! ಕ್ಯಾಂಡಲಿನ ಕ್ಷೀಣ ಬೆಳಕಿನಲ್ಲಿ, ಪುಸ್ತಕವನ್ನು ತೊಡೆಯ ಮೇಲಿಟ್ಟುಕೊಂಡು ಕೂತ ಶೇಖರನಲ್ಲಿ ಉತ್ಸಾಹ ತುಂಬಿ ತುಳುಕುತ್ತಿತ್ತು.

ಕಾರ್ಮುಗಿಲ ಗರ್ಭದಿಂದ ಜನಿಸಿದ ವರ್ಷಧಾರೆ ಹನಿಹನಿಯಾಗಿ ಪ್ರಾರಂಭವಾಗಿ ನಂತರ ಧಾರೆಧಾರೆಯಾಗಿ ಸುರಿಯತೊಡಗಿತು. ಮನೆಯ ಹೆಂಚಿನ ಮೇಲೆ ಮಳೆ ಬೀಳುವ ‘ಪಟಪಟ’ ಸದ್ದು ಬಿಟ್ಟರೆ, ಇಡೀ ಪ್ರಪಂಚವೇ ಧ್ವನಿನಿರೋಧಕ ಕೋಣೆಯಾಗಿತ್ತು. ಜಲೋತ್ಪಾದನ ಕಾರ್ಖಾನೆಯಾಗಿದ್ದ ಆಕಾಶದಲ್ಲಿ ಮಿಂಚು, ಸಿಡಿಲು, ಗುಡುಗಿನ ಝೇಂಕಾರ ಮೇರೆ ಮೀರಿತ್ತು. ಅಂತೆಯೇ ಕ್ಯಾಂಡಲಿನ ಕ್ಷೀಣ ಬೆಳಕಿನಲ್ಲಿ ಶೇಖರನ ಅಧ್ಯಯನವೂ ಸಾಗಿತ್ತು! ಶೇಖರನ ಎದುರಿಗಿದ್ದ ಗೋಡೆಗೆ ಸಿಡಿಲು ಹೊಡೆದಂತಾಗಿ, ಒಂದು ಕ್ಷಣ ಅದು ಜಾಜ್ವಲ್ಯಮಾನವಾಗಿ ಬೆಳಗಿತು. ಬೆಚ್ಚಿಬಿದ್ದು ಗೋಡೆಯನ್ನೇ ದಿಟ್ಟಿಸಿದ ಶೇಖರ. ಸಿಡಿಲಿನ ಬೆಳಕು ಮರೆಯಾಗಿ, ಗೋಡೆ ಅಸ್ಪಷ್ಟವಾಗಿ, ಛಾಯಾಮಾತ್ರವಾಗಿ ಕಾಣಿಸತೊಡಗಿತು. ಗೋಡೆಯನ್ನೇ ದಿಟ್ಟಿಸುತ್ತಿದ್ದ ಶೇಖರನ ತಲೆಯಲ್ಲಿ ನೂರೆಂಟು ಆಲೋಚನೆಗಳು! ಅಲ್ಲಲ್ಲಿ ಚದುರಿದ್ದ ಕಲ್ಪನೆಗಳು, ಗುಪ್ತ ಅಭೀಪ್ಸೆಗಳು ಘನೀಕೃತಗೊಂಡು ಗೋಡೆಯ ಮೇಲೆ ಅವತರಿಸತೊಡಗಿದವು. ನೋಡನೋಡುತ್ತಿದ್ದಂತೆ ಗೋಡೆಯ ಮೇಲೆ ಚಿತ್ರಗಳು ಮೂಡತೊಡಗಿದವು! ಗುರುತು ಪರಿಚಯವಿಲ್ಲದ ಹತ್ತಾರು ವ್ಯಕ್ತಿಗಳ ಚಿತ್ರ! ಹಿನ್ನೆಲೆಯಲ್ಲಿ ಗೋಚರಿಸುತ್ತಿದ್ದ ದೊಡ್ಡದೊಂದು ಸಭೆಯಲ್ಲಿ, ಅವರೆಲ್ಲಾ ಏನೇನೋ ಮಾತನಾಡುತ್ತಿದ್ದರು. ರಭಸವಾಗಿ ವಾಗ್ವಾದ ಮಾಡುತ್ತಿದ್ದಾರೇನೋ ಎನ್ನುವಂತೆ ಅವರ ಆಂಗಿಕ ಅಭಿನಯಗಳಿದ್ದವು. ಬಿಳಿ ಮೋರೆಯ ಮನುಷ್ಯ, ಕರಿ ಮೋರೆಯ ಮನುಷ್ಯ ಮುಂತಾದ ಎಲ್ಲಾ ಜನಾಂಗದ ಮನುಷ್ಯರೂ ಅಲ್ಲಿದ್ದು, ಅದೊಂದು ಸರ್ವದೇಶ ಸಮ್ಮೇಳನದಂತಿತ್ತು. ಸಭೆ ಜರುಗುತ್ತಿದ್ದ ಕೋಣೆಯ ನಟ್ಟನಡುವೆ, ಸಾಧಾರಣ ಗಾತ್ರದ ತಲೆಬುರುಡೆಯೊಂದನ್ನು ಮೇಜಿನ ಮೇಲಿಟ್ಟಿದ್ದರು. ಸಭೆಯಲ್ಲಿ ವಾಗ್ವಾದ ಮಾಡುತ್ತಿದ್ದ ಮನುಷ್ಯರೆಲ್ಲರೂ, ಗಳಿಗೆಗೊಮ್ಮೆ ತಲೆಬುರುಡೆಯ ಕಡೆ ಕೈ ತೋರಿಸಿ, ನಂತರ ತಂತಮ್ಮ ಎದೆ ಬಡಿದುಕೊಳ್ಳುತ್ತಾ ಏನನ್ನೋ ಹೇಳುತ್ತಿದ್ದರು.

ತಲೆಬುರುಡೆಯೆದುರು ಕುರ್ಚಿಯೊಂದರ ಮೇಲೆ ಬಿಳಿ ಜುಬ್ಬಾ ಧರಿಸಿಕೊಂಡು ಕುಳಿತಿದ್ದ ವ್ಯಕ್ತಿಯೊಬ್ಬ, ಎಲ್ಲರನ್ನೂ ಸಮಾಧಾನಪಡಿಸುವವನಂತೆ, ಎಲ್ಲರಿಗೂ ಸುಮ್ಮನಿರುವಂತೆ ಅಂಗಲಾಚುತ್ತಿದ್ದ. ಆದರೆ ಬಿಳಿ ಜುಬ್ಬಾದವನ ಕೋರಿಕೆಗಳಿಗಾಗಲೀ, ಅವನ ಶಾಂತಿಪ್ರಿಯತೆಗಾಗಲೀ ಯಾರೂ ಸೊಪ್ಪು ಹಾಕುವಂತೆ ಕಾಣಲಿಲ್ಲ. ಸಭೆಯ ವಾತಾವರಣ ತಿಳಿಯಾಗುವುದರ ಬದಲು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ತಂತಮ್ಮ ಆಸನಗಳಲ್ಲೇ ಕುಳಿತು ವಾಗ್ವಾದ ಮಾಡುತ್ತಿದ್ದ ವ್ಯಕ್ತಿಗಳು, ಈಗ ಸಭಾ ಮರ್ಯಾದೆಯನ್ನು ಗಾಳಿಗೆ ತೂರುವ ಕೆಲಸಕ್ಕೆ ಕೈ ಹಚ್ಚಿದರು. ಮೇಜಿನ ಮೇಲೆ ಮುಗುಮ್ಮಾಗಿ ಕೂತು, ಎಲ್ಲರೆಡೆಗೂ ಶೂನ್ಯದೃಷ್ಟಿಯನ್ನು ಬೀರುತ್ತಿದ್ದ ತಲೆಬುರುಡೆಯ ಕಡೆ ನುಗ್ಗಲು ಹವಣಿಸತೊಡಗಿದರು. ಇನ್ನೇನು ಒಬ್ಬ ತಲೆಬುರುಡೆಯನ್ನು ತಲುಪೇಬಿಟ್ಟ ಎನ್ನುವಷ್ಟರಲ್ಲಿ, ಅವನನ್ನು ಹಿಂದೂಡಿ ಮತ್ತೊಬ್ಬ ತಲೆಬುರುಡೆಯೆಡೆಗೆ ನುಗ್ಗುತ್ತಿದ್ದ. ಕೊನೆಗೆ ತಲೆಬುರುಡೆಯನ್ನು ತಲುಪಲು ಯಾರಿಗೂ ಸಾಧ್ಯವಾಗದೆ, ಜಗಳ ತಾರಕಕ್ಕೇರಿ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಯಿತು. ಒಟ್ಟಿನಲ್ಲಿ ಮೇಜಿನ ಮೇಲಿದ್ದ ತಲೆಬುರುಡೆ ಯಾರ ಕೈಗೂ ನಿಲುಕದ ಬಿಸಿಲ್ಗುದುರೆಯಂತಾಗಿತ್ತು. ಜಗಳ ವಿಪರೀತವಾಗುತ್ತಿರುವುದನ್ನು ಕಂಡ ಬಿಳಿ ಜುಬ್ಬಾದವ, ಮಧ್ಯ ಪ್ರವೇಶಿಸಿ, ಮತ್ತೆ ಸಂಧಾನ ಪ್ರಕ್ರಿಯೆಯನ್ನು ಶುರು ಹಚ್ಚಿಕೊಂಡ. ಆತ ಮಧ್ಯಪ್ರವೇಶಿಸಿದ ಕೂಡಲೇ ಘೋರವಾಗಿ ನಡೆಯುತ್ತಿದ್ದ ಜಗಳ ನಾಟಕೀಯವಾಗಿ ನಿಂತುಬಿಟ್ಟಿತು. ಇಲ್ಲಿಯವರೆಗೂ ಎಲ್ಲರೂ ಜಗಳವನ್ನು ಅಭಿನಯಿಸುತ್ತಿದ್ದರೇನೋ ಎನ್ನುವಂತೆ, ಸಭೆಯಲ್ಲಿದ್ದ ವ್ಯಕ್ತಿಗಳೆಲ್ಲಾ ಮಹಾ ಸಂಭಾವಿತರಂತೆ ಬಿಳಿ ಜುಬ್ಬಾದವನ ಮಾತನ್ನು ಆಲಿಸಲು ಕೂತರು.

ಶೇಖರನಿಗೆ ಇದೊಂದು ಅತಿದೊಡ್ಡ ಪವಾಡದಂತೆ ಕಂಡು, ಇದನ್ನೆಲ್ಲಾ ತಿಳಿದಿರುವ ತನ್ನ ಅಣ್ಣ ಮಹಾ ಮೇಧಾವಿಯೆಂದು ತೀರ್ಮಾನಿಸಿದ. ರಮೇಶ ಹಾಗೂ ಶೇಖರ, ಗ್ರಹ-ತಾರೆ, ಮೋಡಗಳೆಂದು ಏನೇನೋ ಹರಟುತ್ತಿರುವುದು ಕೇಳಿ ಅವರ ತಾಯಿಗೆ ರೇಗಿಹೋಯಿತು. ‘ಓದಿಕೊಳ್ಳೋ ಅಂದರೆ ಕೆಲಸಕ್ಕೆ ಬಾರದುದನ್ನೆಲ್ಲಾ ಹರಟುತ್ತಿದ್ದೀಯಾ!’ ಎಂದು ಗದರಿಸಿ ರಮೇಶನೊಡನೆ ಹೊರನಡೆದರು.

ಬಿಳಿ ಜುಬ್ಬಾದ ವ್ಯಕ್ತಿ ಶಾಂತಿ ಸ್ಥಾಪಿಸಲೋಸುಗವೇ ಧರೆಗಳಿದು ಬಂದ ಅವಧೂತನಂತೆ ಸಂಧಾನ ಮಾಡಲು ಪ್ರಯತ್ನಿಸುತ್ತಿದ್ದ. ಆದರೆ ಅವನ ಸಂಧಾನವೇನೂ ಫಲಪ್ರದವಾದಂತೆ ಕಾಣಲಿಲ್ಲ. ಎಷ್ಟು ನಾಟಕೀಯವಾಗಿ ಜಗಳ ನಿಂತಿತ್ತೋ, ಅಷ್ಟೇ ನಾಟಕೀಯವಾಗಿ ಮತ್ತೆ ಆರಂಭವಾಯಿತು. ಕೋಟು, ಟೈ, ಪ್ಯಾಂಟುಗಳನ್ನೆಲ್ಲಾ ಮೈಗೇರಿಸಿಕೊಂಡಿದ್ದ ವ್ಯಕ್ತಿಗಳು ಪಶುಸದೃಶರಾಗಿ, ಶಿಲಾಯುಗದ ಮನುಷ್ಯರಂತೆ ಕಾದಾಡುತ್ತಿದ್ದರು. ನಿರ್ವಿಕಾರ ಭಾವದಿಂದ ಮೇಜಿನ ಮೇಲೆ ಕೂತಿದ್ದ ತಲೆಬುರುಡೆಯೆಡೆಗೆ ನುಗ್ಗಲು ಪೈಪೋಟಿ ತೀವ್ರವಾಗತೊಡಗಿತು. ತಲೆಬುರುಡೆಯನ್ನು ಅನರ್ಘ್ಯ ರತ್ನದಂತೆ, ತಂತಮ್ಮ ಪ್ರತಿಷ್ಠೆಯನ್ನುಳಿಸುವ ಸಾಧನದಂತೆ ಪರಿಗಣಿಸಿ, ಎಲ್ಲರೂ ಅದಕ್ಕಾಗಿ ಕಿತ್ತಾಡುತ್ತಿದ್ದರು. ಇವರ ಈ ಕಿತ್ತಾಟವನ್ನು ಮುಖ ಕಿವಿಚಿಕೊಂಡು, ಅಸಹಾಯಕನಾಗಿ ನೋಡುತ್ತಿದ್ದ ಬಿಳಿ ಜುಬ್ಬಾದ ವ್ಯಕ್ತಿ, ಸ್ವಲ್ಪ ಹೊತ್ತಿನ ಬಳಿಕ, ‘ಏನಾದರೂ ಮಾಡಿಕೊಂಡು ಸಾಯಲಿ ಅಯೋಗ್ಯರು’ ಎನ್ನುವಂತೆ ಸಭೆಯಿಂದ ಎದ್ದು ಹೊರನಡೆದ. ಸಂಧಾನಕಾರನೂ ಕೈಬಿಟ್ಟ ಕದನ, ಅಡೆತಡೆಯಿಲ್ಲದೆ ಘನಘೋರವಾಗಿ ಮುಂದುವರಿಯಿತು.

ಗೋಡೆಯ ಮೇಲೆ ಮೂಡುತ್ತಿರುವ ಚಿತ್ರಗಳ ಹಿನ್ನೆಲೆ ಈಗ ಬದಲಾಗುತ್ತಾ ಹೋಗುತ್ತಿದೆ! ಸಭೆಯ ದೃಶ್ಯ ಮರೆಯಾಗಿ, ವಿಸ್ತಾರ ಮರುಭೂಮಿಯಂತಿರುವ ಪ್ರದೇಶ, ಗೋಡೆಯನ್ನೇ ಕಣ್ಣೆವೆಯಿಕ್ಕದೆ ನೋಡುತ್ತಿದ್ದ ಶೇಖರನಿಗೆ ಗೋಚರಿಸಿತು. ದಿಗಂತದಿಂದ ದಿಗಂತದವರೆಗೂ ಸತ್ತಂತೆ ಹಬ್ಬಿದ ಮರಳಿನ ಸಮುದ್ರದಲ್ಲಿ ಬಹುತೇಕ ಎಲ್ಲಾ ದೇಶಗಳ ಧ್ವಜಗಳನ್ನೂ ಹುಗಿದು ನಿಲ್ಲಿಸಲಾಗಿತ್ತು. ಶ್ವಾಸವಿಲ್ಲದ ದೇಹದಂತೆ ನಿರ್ಜನವಾಗಿದ್ದ ಬಯಲಿನಲ್ಲಿ, ಧೂಳಿನ ಮೋಡವೊಂದು ಕವಿದಂತಾಗಿ, ಅದರಿಂದ ಸಟ್ಟನೆ ಮರೀಚಿಕೆಯಿಂದೆಂಬಂತೆ, ಸೈನಿಕರ ಹಾಗೆ ಉಡುಗೆ ತೊಟ್ಟಿದ್ದ ಹಲವಾರು ಮಂದಿ ಕತ್ತೆ ಸವಾರಿ ಮಾಡಿಕೊಂಡು ಬರುತ್ತಿರುವುದು ಶೇಖರನಿಗೆ ಕಾಣಿಸಿತು. ನಾಲ್ಕೂ ದಿಕ್ಕಿನಿಂದ ಕತ್ತೆ ಸವಾರಿ ಮಾಡಿಕೊಂಡು ಬರುತ್ತಿರುವ ಸೈನಿಕರು! ಅವರೆಲ್ಲಾ ಯಾವ ದೇಶದವರೋ ಏನೋ! ಎಲ್ಲರ ಕೈಯ್ಯಲ್ಲೂ ರೈಫಲ್ಲುಗಳು! ವೀರಾವೇಶದಿಂದ ಒಬ್ಬರಿಗೊಬ್ಬರು ಗುಂಡು ಹಾರಿಸಿಕೊಂಡು ಕಾದಾಡುತ್ತಿದ್ದಾರೆ; ಹುಳುಗಳಂತೆ ಯೋಧರು ಸಾಯುತ್ತಿದ್ದಾರೆ! ಭೀಕರವಾಗಿ ನಡೆಯುತ್ತಿದ್ದ ಕಾಳಗ, ಪ್ರಾರಂಭವಾದ ಕೊಂಚ ಹೊತ್ತಿನಲ್ಲೇ ಇಡೀ ಯುದ್ಧಭೂಮಿ ಶವಾಗಾರವಾಯಿತು. ನೆತ್ತರಿನ ಸಮುದ್ರವೇ ನಿರ್ಮಾಣಗೊಂಡು, ಯುದ್ಧದಲ್ಲಿ ಬದುಕುಳಿದು, ಇನ್ನೂ ಕಾದಾಡುತ್ತಿದ್ದ ಸೈನಿಕರೆಲ್ಲಾ ಅದರಲ್ಲಿ ಮುಳುಗತೊಡಗಿದರು. ಈ ಎಲ್ಲಾ ಅನಾಹುತಗಳ ಮಧ್ಯೆ, ತಲೆಬುರುಡೆಯೊಂದು ಆಕಾಶದಲ್ಲಿ ಪಕ್ಷಿಯಂತೆ ಹಾರುತ್ತಿರುವುದು ಶೇಖರನಿಗೆ ಕಾಣಿಸಿತು. ಉರುಳಿಬಿದ್ದಿದ್ದ ಸೈನಿಕರ ಶವಗಳನ್ನೇ ಗಟ್ಟಿ ನೆಲವೆಂದು ಭಾವಿಸಿ, ಅವುಗಳ ಮೇಲೇ ನಿಂತು ಕಾದಾಡುತ್ತಿದ್ದ ಸೈನಿಕರ ಮಧ್ಯೆ ಗಡಿಬಿಡಿಯಲ್ಲಿ ನುಸುಳಿ ಬಂದ ಸೈನಿಕನೊಬ್ಬ, ತಾನು ಕೈಯ್ಯಲ್ಲಿ ಹಿಡಿದಿದ್ದ ಬಾಂಬೊಂದನ್ನು ಮೇಲಕ್ಕೆಸೆದ. ಮರುಕ್ಷಣವೇ ಜಗತ್ತಿಗೆಲ್ಲಾ ದಟ್ಟ ಹೊಗೆ ಕವಿದಂತಾಗಿ, ಸೂರ್ಯನ ಬೆಳಕು ಕೂಡ ಭೂಮಿಯನ್ನು ತಲುಪಲು ಸೂಜಿ ಮೊನೆಯಷ್ಟೂ ಜಾಗವಿಲ್ಲದಂತಾಗಿ, ಬಿಳಿಯ ಗೋಡೆಗೆ ದಟ್ಟವಾದ ಬಿಳಿ ಹೊಗೆ ಸವಾಲೆಸೆಯುತ್ತಿತ್ತು!

ಆಗಸದ ಯಾವುದೋ ಭಾಗದಿಂದ ಸಿಡಿಲೊಂದು, ಶೇಖರ ನಿಟ್ಟಿಸುತ್ತಿದ್ದ ಗೋಡೆಗೆ ಹೊಡೆದು, ಅದು ಮತ್ತೆ ಜಾಜ್ವಲ್ಯಮಾನವಾಗಿ ಬೆಳಗಿತು. ತಟಕ್ಕನೆ ಶೇಖರ ವಾಸ್ತವ ಪ್ರಪಂಚಕ್ಕೆ ಮರಳಿದ. ಆದರೂ ಭಾಗಶಃ ನಿದ್ದೆಗಣ್ಣಿನಲ್ಲಿದ ಶೇಖರ, “ಛೇ! ಎಂಥಾ ಅನಾಹುತ ನಡೆದುಹೋಯಿತು; ನನ್ನ ತಲೆಬುರುಡೆ ಪಡೆಯಲು ಕಚ್ಚಾಡಿ ಇಡೀ ಪ್ರಪಂಚಾನೇ ನಾಶವಾಯ್ತಲ್ಲಾ! ನಾನು ಕತ್ತಲಲ್ಲಿ ಓದಿದ್ದೇ ತಪ್ಪಾಯ್ತು” ಎಂದೇನೋ ಸ್ವಗತದಲ್ಲಿ ಗೊಣಗಿಕೊಂಡು, ತನ್ನ ಕಣ್ಣನ್ನು ಆವರಿಸುತ್ತಿದ್ದ ನಿದ್ದೆಯನ್ನು ಗೆಲ್ಲಲಾಗದೆ, ಹಾಗೇ ಕಣ್ಮುಚ್ಚಿದ. ಶೇಖರನ ಕಲ್ಪನಾಶಕ್ತಿಯ ಅಣತಿಯಂತೆ ಮೂಡುತ್ತಿದ್ದ ಗೋಡೆಯ ಮೇಲಿನ ಚಿತ್ರಗಳು ಈಗೆ ಸಂಪೂರ್ಣ ಮರೆಯಾಗಿ, ಗೋಡೆ ಬೋಳುಬೋಳಾಗಿ ಕಾಣತೊಡಗಿತು.

ಶೇಖರ ಆಸಕ್ತಿ ವಹಿಸಿ ತಾನೇ ತಾನಾಗಿ ಓದಲು ತೊಡಗಿದರಿಂದ, ಒಂದು ದೊಡ್ಡ ಶಾಪ ವಿಮೋಚನೆ ಆಯಿತೆನ್ನುವಂತೆ ಅವನ ತಾಯಿ ನಿಟ್ಟುಸಿರಿಟ್ಟರು. ‘ಅಂತೂ ಇವನಿಗೆ ಬುದ್ಧಿ ಬಂತು’ ಎಂದು ನಿರಾಳರಾದರು. ಆದರೂ ಬಹಳ ಹೊತ್ತಿನಿಂದ ಕ್ಯಾಂಡಲಿನ ಅತಿಕ್ಷೀಣ ಬೆಳಕಿನಲ್ಲಿ ಓದುತ್ತಿದ್ದಾನಲ್ಲಾ ಎಂದು ಚಿಂತಿಸಿ, ರಮೇಶನನ್ನು ಕರೆದು ಶೇಖರನನ್ನು ಕರೆತರುವಂತೆ ಹೇಳಿದರು. ಹೆಚ್ಚು ಹೊತ್ತು ಮಬ್ಬು ಬೆಳಕಿನಲ್ಲಿ ಓದಿದರೆ ಕಣ್ಣು ಹೋದೀತೆಂದು ಕಳವಳ ವ್ಯಕ್ತಪಡಿಸಿದರು.

ರಮೇಶ ಶೇಖರನ ಕೋಣೆಯ ಬಳಿ ಹೋಗಿ ಕಿಟಕಿಯ ಮೂಲಕ ಒಳಗಿಣುಕಿದಾಗ ಶೇಖರ ಗೋಡೆಗೊರಗಿ ಮಲಗಿರುವಂತೆ ಕಂಡಿತು. ಅವನ ಮುಖವನ್ನು ಮಬ್ಬು ಬೆಳಕಿನಲ್ಲಿ ನೋಡಿದ ರಮೇಶನಿಗೆ, ಶೇಖರ ಅರ್ಧಗಣ್ಣು ತೆರೆದುಕೊಂಡೇ ಮಲಗಿದ್ದಾನೆ ಎಂದು ತೀವ್ರವಾಗಿ ಅನಿಸತೊಡಗಿತು! ಅಥವಾ ಇದು ಅವನ ಕಲ್ಪನೆಯಿದ್ದರೂ ಇರಬಹುದು! ಶೇಖರ ಕಣ್ಣು ತೆರೆದುಕೊಂಡು ಮಲಗಿರುವುದು ನಿಜವಾದರೆ, ಅವನು ತನ್ನನ್ನು ಗಮನಿಸಬೇಕಲ್ಲವೇ ಎಂದು ಚಿಂತಿಸಿದ. ರಮೇಶನಿಗೆ ಬಾಗಿಲು ತಟ್ಟಿ ಒಳಗೆ ಹೋಗಲು ಕೂಡ ಅಂಜಿಕೆಯಾಗಿ ಸ್ವಲ್ಪ ದೂರದಲ್ಲಿ ಮತ್ತೊಂದು ಗೋಡೆಗೊರಗಿ ಕೂತ.

ಹೊರಗಡೆ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ. ಮಬ್ಬು ಬೆಳಕಿನಲ್ಲಿ ಹುಟ್ಟಾ ಸೋಮಾರಿಯಂತೆ ಕಾಣುತ್ತಿದ್ದ ಕೋಣೆ! ವಾಸ್ತವ, ಅವಾಸ್ತವಗಳ ನಡುವಿನ ಕೊಂಡಿಯೇ ಕಳಚಿ ಬೀಳುವಂಥ ವಾತಾವರಣ! ಶೇಖರನ ಕಣ್ಣಿನ ಯೋಗಕ್ಷೇಮದ ಬಗ್ಗೆಯೇ ಚಿಂತಿಸುತ್ತಿದ್ದ ರಮೇಶನಿಗೆ ಕಣ್ಣು ಎಳೆಯತೊಡಗಿತು. ಇನ್ನೇನು ಕಣ್ಣು ಮುಚ್ಚಬೇಕು ಎನ್ನುವಷ್ಟರಲ್ಲಿ ಎದುರಿದ್ದ ಗೋಡಗೆ ಸಿಡಿಲೊಂದು ಬಡಿದು, ಅದು ದೇದೀಪ್ಯಮಾನವಾಗಿ ಬೆಳಗಿತು. ರಮೇಶ ಅರೆಗಣ್ಣಿನಲ್ಲಿ ಗೋಡೆಯನ್ನು ನೋಡಿದ. ಇದ್ದಕ್ಕಿದ್ದಂತೆ, ಗೋಡೆಯ ಮೇಲೆ ಅವನ ತಮ್ಮ ಶೇಖರನ ಛಾಯೆ ಮೂಡತೊಡಗಿತು! ಕಣ್ಣಿಗೆ ಎಂಥದೋ ಕರಿ ಕನ್ನಡಕ ಹಾಕಿಕೊಂಡಿದ್ದ ಶೇಖರನ ಹಿಂದೆ ಹೆಂಗಸೊಬ್ಬಳು ಕಿರುಚಾಡುತ್ತಾ ರಂಪ ಮಾಡುತ್ತಿರುವಂತೆ ರಮೇಶನಿಗೆ ಕಂಡಿತು.

ಈಗ ಗೋಡೆಯ ಮೇಲಿನ ಚಿತ್ರಗಳು ಬದಲಾಗಿ ವಿಶಾಲವಾದ ಸಮುದ್ರ ಗೋಚರಿಸತೊಡಗಿದೆ. ಸಮುದ್ರದ ನಟ್ಟನಡುವೆ ಹಡಗಿನಲ್ಲಿ ರಮೇಶ, ಶೇಖರ ಹಾಗೂ ಹೆಂಗಸೊಬ್ಬಳು ನಿಂತಿದ್ದಾರೆ! ಹೆಂಗಸಿನ ಅಣತಿಯನ್ನು ಶಿರಸಾವಹಿಸಿ ಪಾಲಿಸುವಂತೆ ರಮೇಶ, ಶೇಖರನನ್ನು ಹಡಗಿನಿಂದ ಸಮುದ್ರಕ್ಕೆ ದೂಡಿದ! ಉರವಣಿಸಿ ಬಂದ ಅಲೆಗಳು ಶೇಖರನನ್ನು ತಮ್ಮೊಳಗೆ ಕರಗಿಸಿಕೊಂಡವು. ಶೇಖರ ಇನ್ನಿಲ್ಲವಾದ! ‘ಇಲ್ಲಾ, ಇಲ್ಲಾ! ನಾನು ಮದುವೇನೇ ಆಗಲ್ಲ!’ ಎಂದು ಚೀರಿ ಕನಸಿನ ಭ್ರಮಾಲೋಕದಿಂದ ವಾಸ್ತವ ಪ್ರಪಂಚಕ್ಕೆ ಮರಳಿದ ರಮೇಶ!

ಶೇಖರ ಹಾಗೂ ರಮೇಶನ ತಾತ ಬಹಳ ವರ್ಷಗಳಿಂದ ಕುರುಡರಾಗಿದ್ದರು. ಅವರನ್ನು ರಮೇಶನ ಮಾವ ನೋಡಿಕೊಳ್ಳುತ್ತಿದ್ದದ್ದು. ರಮೇಶನ ತಾಯಿ ವಾರಕ್ಕೊಮ್ಮೆಯಾದರೂ ತಮ್ಮ ತಂದೆಯ ಸ್ಥಿತಿಯನ್ನು ನೆನೆದು, ‘ಏನೋ ನಿಮ್ಮತ್ತೆ ಒಳ್ಳೆಯವರಾಗಿದ್ದಕ್ಕೆ ಹೇಗೋ ನಡೆಯುತ್ತಿದ್ದೆ ಕಣೋ; ಇಲ್ಲದಿದ್ರೆ ಅಜ್ಜನ ಗತಿ ಏನಾಗ್ತಿತ್ತು’ ಎನ್ನುತ್ತಿದ್ದರು. ಬಹುಶಃ ಈ ಮಾತುಗಳನ್ನು ಪದೇ ಪದೇ ಕೇಳಿಸಿಕೊಳ್ಳುತ್ತಿದ್ದ ರಮೇಶನ ಸುಪ್ತ ಮನಸ್ಸಿಗೆ ಶೇಖರನ ದೃಷ್ಟಿಯೇ ಹೋಗಿಬಿಟ್ಟಿತೆಂದು ಗಾಬರಿಯಾಯಿತೋ ಏನೋ! ಗೋಡೆಯ ಹಿನ್ನೆಲೆಯಲ್ಲಿ, ಶೇಖರನ ಹಿಂದೆ ರಂಪ ಮಾಡುತ್ತಿದ್ದ ಹೆಂಗಸು ಶೇಖರನ ಕಾಲ್ಪನಿಕ ಹೆಂಡತಿಯಿದ್ದರೂ ಇರಬಹುದು. ಏಕೋ ಅವಳು ಬಹಳ ಘಾಟಿಯಂತೆ ರಮೇಶನಿಗೆ ಕಂಡಿತ್ತು! ಹೀಗೇ ತೂಕಡಿಸುತ್ತಾ ರಮೇಶನೂ ನಿದ್ದೆಗೆ ಜಾರಿದ.

ರಮೇಶನಿಗೆ ಮತ್ತೆ ಎಚ್ಚರವಾಗಿದ್ದು, ಅವನ ತಾಯಿ ಹಾಲಿನಿಂದ ಕೂಗಿದಾಗಲೇ. ವಿದ್ಯುತ್ ಹೋದಾಗ ಸ್ವಿಚ್ ಆರಿಸಿರಲಿಲ್ಲವಾದ ಕಾರಣ, ಕಣ್ಣು ಬಿಟ್ಟೊಡನೆ ಲೈಟಿನ ಬೆಳಕು ಕಣ್ಣಿಗೆ ಹೊಡೆಯಿತು. ಕೋಣೆಯ ಬಾಗಿಲು ತೆರೆದು ಒಳಗೆ ಹೋದ ರಮೇಶನಿಗೆ, ಶೇಖರ ಸಂಪೂರ್ಣ ಕಣ್ಣುಮುಚ್ಚೇ ಮಲಗಿರುವುದು ಕಂಡಿತು! ‘ಲೋ ಶೇಖರ ಏಳೋ’, ಎಂದು ಅವನ ಪಕ್ಕೆ ತಿವಿದ ರಮೇಶ. ಕಣ್ಣುಜ್ಜಿಕೊಂಡು ಮೇಲೆದ್ದ ಶೇಖರನೊಡನೆ, ರಮೇಶ ಹಾಲಿಗೆ ನಡೆದ. ‘ರಾಜ್ಯದ ಮಾಜಿ ಮುಖ್ಯಮಂತ್ರಿಯ ನಿಧನದ ನಿಮಿತ್ತ, ನಾಳೆ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ’ ಎಂದು ಟಿ.ವಿ. ಹೇಳುತ್ತಿತ್ತು. ಹೇಗೂ ರಜೆ ಇರುವುದರಿಂದ, ನಾಳೆ ಓದಿದರೆ ನಡೆಯಿತೆಂದುಕೊಂಡು, ಶೇಖರ ‘ಹೋ’ ಎಂದು ಕೂಗುತ್ತಾ ಜಗುಲಿಯ ಕಡೆ ಶರವೇಗದಲ್ಲಿ ಓಡಿದ! ಅಲ್ಲಿ ಎರಡು ಕಪ್ಪೆಗಳು ತಮ್ಮ ನಾಲಗೆಯನ್ನು ಅಸಾಧ್ಯ ವೇಗದಲ್ಲಿ ಝಳಪಿಸುತ್ತಾ, ನಿಲುಕುವ ಹುಳುಗಳನ್ನು ಬಾಯೊಳಗೆ ಸೆಳೆದುಕೊಳ್ಳುತ್ತಿದ್ದವು. ಮನೆಯೊಳಗೆ ರಮೇಶ ‘ಡಿಸ್ಕವರಿ’ ಚಾನೆಲ್ ಹಾಕಿಕೊಂಡು ಕುಳಿತ. ಅದರಲ್ಲಿ ಹುಲಿಯೊಂದು ಕಳ್ಳ ಹೆಜ್ಜೆಗಳನ್ನಿಡುತ್ತಾ, ಕಡವೆಗಳ ಗುಂಪಿನೆಡೆಗೆ ಹುಲ್ಲಿನ ಮರೆಯಲ್ಲಿ ನುಸುಳುತ್ತಿತ್ತು.