ಇದೆಲ್ಲ ಆಗಿದ್ದು ಶಂಕರನಿಗಂತೂ ಲಾಭವಾಯ್ತು. ಇಷ್ಟು ದಿನ ಯಾರೆಂದೇ ಗೊತ್ತಿಲ್ಲದವನ ಕಡೆ ಕಣ್ಣರಳಿಸಿ ನೋಡತೊಡಗಿದಳು ಪಾರ್ವತಿ. ಕೊನೆಗೆ ಅದ್ಯಾವ ಮಾಯದಲ್ಲಿ ಕಣ್ಣೋಟ ಮಾತಾಯ್ತೋ. ಮಾತು ಪ್ರೀತಿಯಾಯ್ತೋ ಯಾರಿಗೂ ಗೊತ್ತಾಗಲಿಲ್ಲ. ಮುಂದಿನ ವರ್ಷ ಹತ್ತನೇ ಕ್ಲಾಸಿನಲ್ಲಿ ಫೇಲಾಗಿ ಶಂಕರ ಮೀನು ಹಿಡಿಯಲು ಹೋದರೆ, ಪಾರ್ವತಿಯೂ ಶಾಲೆ ಬಿಟ್ಟು ಅವ್ವಿಯೊಡನೆ ಮೀನು ಮಾರಲು ಹೊರಟಳು. ಗಜನಿಯ ಹಣ್ಣಿ ಹುಲ್ಲಿನ ಮರೆಯಲ್ಲಿ ಕಾಣದಂತೆ ಮಾತನಾಡುತ್ತ ಕುಳಿತ ಜೋಡಿ ಎರಡೇ ವರ್ಷದಲ್ಲಿ ಎರಡೂ ಮನೆಯವರ ಅಲ್ಪಸ್ವಲ್ಪ ವಿರೋಧದ ನಡುವೆಯೂ ಮದುವೆ ಮಾಡಿಕೊಂಡರು.
ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಶ್ರೀದೇವಿ ಕೆರೆಮನೆಯವರ ‘ಬಿಕ್ಕೆಹಣ್ಣು’ ಕಥಾ ಸಂಕಲನದ ಒಂದು ಕತೆ “ಶಂಕರ-ಪಾರ್ವತಿ”

 

ಕೈಗೆ ಸಿಕ್ಕ ದೊಡ್ಡ ದೊಡ್ಡ ನಾಲ್ಕಾರು ಶೆಟ್ಲೆಗಳು ಬಲೆಯಿಂದ ತಪ್ಪಿಸಿಕೊಂಡರೂ ಸುಮ್ಮನೆ ಕುಳಿತೇ ಇದ್ದ ಶಂಕರ. ಅವನಿಗೆ ಈ ಕಡೆ ಬಲೆಯ ಮೇಲೆ ದ್ಯಾಸವೇ ಇರಲಿಲ್ಲ. ಶೆಟ್ಲಿ ನೋಡಲು ಬಂದಾಗ ಗಂಡ ಯಾವತ್ತೂ ಹೀಗೆ ಪರಧ್ಯಾನದಲ್ಲಿರುವಂತೆ ಕುಳಿತವನಲ್ಲ ಎಂದು ಯೋಚಿಸುತ್ತ “ಏನಾಗಿದೂ ನಿಮ್ಗೆ? ಹಿಂಗೆ ಎಲ್ಲಾ ಶೆಟ್ಲೆನು ಬಿಟ್ರೆ ಇಂದೆ ಉಂಬುದು ಬ್ಯಾಡಾಬಲಾ…” ಪಾರ್ವತಿ ರೇಗಿದಂತೆ ನಟಿಸಿದಾಗ ಶಂಕರ ನಿಟ್ಟುಸಿರಿಟ್ಟು “ಯೇನಾಗ್ಲೆಲ್ಲ” ಎನ್ನುತ್ತ ತನ್ನ ಕೆಲಸದೆಡೆಗೆ ಗಮನ ಕೊಟ್ಟ.

ಕಳೆದ ಎಂಟು ಹತ್ತು ದಿನಗಳಿಂದ ಪಾರ್ವತಿ ಗಮನಿಸುತ್ತಲೇ ಇದ್ದಾಳೆ. ಗಂಡ ಶಂಕರ ಮುಂಚಿನಂತಿಲ್ಲ. ಬೆಳ್ಳಂಬೆಳಗಿಗೇ ತಣ್ಣಿ ಅನ್ನ ಉಂಡು ಗಜನಿಗೆ ಶೆಟ್ಟಿ ಆರಿಸಲು ಬಂದರೆ ಹೆಂಡತಿಗೆ ಒಂದು ಬುಟ್ಟಿ ಶೆಟ್ಲಿ ತುಂಬಿಸಿ ಮತ್ತೆ ತಾನೊಂದಿಷ್ಟನ್ನು ತಂದು ಶೆಡ್ಡಿಗೆ ಮಾರುತ್ತಿದ್ದ. ಅದೂ ನುಸಿಕೋಟೆಯ, ಹಿರೇಗುತ್ತಿಯ ಗಜನಿ ಎಂದರೆ ಶಂಕರ-ಪಾರ್ವತಿ ಇಬ್ಬರಿಗೂ ಪಂಚಪ್ರಾಣ. ಮದುವೆಯಾಗಿ ಆರು ವರ್ಷವಾದರೂ ಮದುವೆಯ ಹೊಸದರಲ್ಲಿದ್ದ ಪ್ರೀತಿಯೇ ಇಬ್ಬರಲ್ಲೂ ಇನ್ನೂ ಉಳಿದಿರುವುದಕ್ಕೆ ಗಜನಿಯೇ ಕಾರಣ. ಹಾಗೆಂದು ಮದುವೆಗೆ ಮೊದಲು ಅವರಿಗೆ ಗಜನಿ ಏನೊ ಗೊತ್ತಿರದ ಸ್ಥಳವಲ್ಲ. ಹಾಗೆ ಅವರಿಬ್ಬರೂ ಒಬ್ಬರಿಗೊಬ್ಬರು ಸಹ.

ನುಸಿಕೋಟೆಯಿಂದ ಹಿರೇಗುತ್ತಿ ಸ್ಕೂಲಿಗೆ ಬರುತ್ತಿದ್ದ ಪಾರ್ವತಿ ಎಂದರೆ ಅವಳಿಗಿಂತ ಒಂದು ಕ್ಲಾಸು ಮುಂದಿದ್ದ ಶಂಕರ ಮತ್ತವರ ಸ್ನೇಹಿತರಿಗೆಲ್ಲ ಏನೋ ಆಕರ್ಷಣೆ. ಎಳೆಗಪ್ಪಿನ ಪಾರ್ವತಿ ಬಿಗಿಯಾಗಿ ಎರಡು ಜಡೆಕಟ್ಟಿ, ನೀಲಿ-ಬಿಳಿ ಯೂನಿಫಾರ್ಮ ಹಾಕಿಕೊಂಡು ಬರುವುದನ್ನು ಕಾಣುವುದೇ ಒಂದು ಸ್ವರ್ಗ ಎಂದು ಭಾವಿಸಿದವರು ಅವರು. ಅದೂ ಬುಧವಾರ ಒಂದು ದಿನ ಹಾಕಬಹುದಾಗಿದ್ದ ಕಲರ್ ಡ್ರೆಸ್ನಲ್ಲಿದ್ದಾಗ ಇದ್ದ ಕೆಲವೇ ಅಂಗಿಗಳನ್ನು ಚಂದಕ್ಕೆ ತೊಳೆದು ನೀಟಾಗಿ ಧರಿಸಿ ಪೌಡರ್ ಲೇಪಿಸಿ ಬರುವ ಪಾರ್ವತಿ ಎಂದರೆ ಉಳಿದವರಿಗಿಂತ ಶಂಕರನಿಗೆ ಹೆಚ್ಚಿನ ಕಕ್ಕುಲಾತಿ. ತನ್ನ ದೂರದ ಸಂಬಂಧಿಕಳು ಎನ್ನುವ ಹಕ್ಕಿನೊಟ್ಟಿಗೆ, ತನಗೆಂದೇ ಆಕೆಗೆ ತನ್ನ ಹೆಸರಿಗೆ ಮ್ಯಾಚ್ ಆಗುವ ಹಾಗೆ ‘ಪಾರ್ವತಿ’ ಎಂದು ಇಟ್ಟಿದ್ದಾರೆ ಎನ್ನುವ ಉತ್ಸಾಹ. ಎಲ್ಲೋ ತನಗೆ ದೂರದ ಸಂಬಂಧ ಎನ್ನುವುದೂ, ಶಂಕರನ ಅಪ್ಪ ಹೊಲಿಯಪ್ಪನಿಗೆ ಪಾರ್ವತಿಯ ಅವ್ವಿ ಮಂಕಾಳಿ ದೂರದ ಸಂಬಂಧದಲ್ಲಿ ತಂಗಿಯಾಗಬೇಕು ಅನ್ನೋದು ಅದೊಂದು ದಿನ ಶಂಕರನಿಗೆ ಆಕಸ್ಮಾತ್ತಾಗಿ ಗೊತ್ತಾಗಿಬಿಟ್ಟಿತು.

ಒಂದು ದಿನ ಸಂಜೆ ಮೊರ್ಬಾದ ದೇವಸ್ಥಾನದಲ್ಲಿ ಕುಳಿತು ಶಂಕರ, ಶಿವು, ಮಂಜು, ಕೃಷ್ಣ, ನಾಗೇಶ ಎಲ್ಲರೂ ಪಾರ್ವತಿಯ ಅಂದ ಚಂದ, ಬಡವಳಾದರೂ ಅವಳಮ್ಮ ತಂದುಕೊಡುವ ಅಂಗಿ, ಬಳೆ, ರಿಬ್ಬನ್ನು; ಕಪ್ಪನೆಯ ಕಣ್ಣಿಗೆ ಕಾಡಿಗೆ ಹಚ್ಚುತ್ತಾಳೋ ಇಲ್ಲವೋ ಎನ್ನುವ ಹಾಗೆ ತಲೆ ಬುಡ ಇಲ್ಲದೆ ಚರ್ಚಿಸುತ್ತಿದ್ದಾಗ ಅಲ್ಲಿಗೆ ಬಂದ ಹೊಲಿಯಪ್ಪ, “ಯಾರ್ಲಾ ಅದು ಪಾರ್ವತಿ ಅಂದ್ರೆ? ನಮ್ಮ ಮಂಕಾಳಿ ಮಗಳೇನ್ರೋ…? ಅದಕೇನಾದ್ರೂ ಚಾಳ್ಸಿ ಬಿಟ್ಟಿರಿ. ನಂಗೆ ತಂಗಿ ಮಗೂ ಆತೀದು… ನಡೀರಿ… ನಡಿರಿ… ಓದ್ಕಾಣಿ.” ಎಂದು ಗದರಿಸಿ ಹೋಗಿದ್ದ.

ಅಪ್ಪನ ಮಾತಿನಿಂದ ರೋಮಾಂಚಿತನಾದ ಶಂಕರ ಮನೆಗೆ ಬಂದವನೇ ಅವ್ವಿಯ ಹತ್ತಿರ ಹೋಗಿ “ಅವ್ವಾ… ಆ ನುಸಿಕೋಟೆ ಮಂಕಾಳಕ್ಕ ನಮ್ಗೆ ಹೆಂಗ್ ಸಂಬಂಧಾ? ಅಪ್ಪಂಗೆ ಅದು ತಂಗಿ ಅತೀದ್ ಕಡಾ… ಹ್ಯಾಂಗದು?” ಕುತೂಹಲ ತೋರಿಸಿದ್ದ. ಮಗ ಒಂಬತ್ತನೇ ಕ್ಲಾಸಿಗೆ ಬಂದ್ರೂ ಇನ್ನೂ ಏನೂ ಅರಿಯದ ಮಗು ಅಂದುಕೊಂಡಿದ್ದ ಬೀರಮ್ಮ ಅಂದು ಮಾತ್ರ ಜಿಗುಪ್ಸೆಯಿಂದ “ನಿಂಗ್ಯಾಕೋ ಅದೆಲ್ಲಾ? ಅವ್ರೆಂಥಾ ಸಂಬಂಧ ನಮ್ಗೆ…? ಇದ್ರೂ ಹೇಳ್ಕಣಾಕೆ ನಾಚ್ಕೆ…” ಎಂದು ಬಿಟ್ಟಿದ್ದಳು. ಸ್ವಲ್ಪ ತಡೆದು ‘ಅಂದ್ರದೊಂದು ಮೊಗ ಇತ್ ಕಂಡಾ… ಇಸ್ಕೂಲ್ಗೆ ಬತ್ತಿದಾ? ಮತ್ತೆ ಮಾತಾಡ್ಸುಕೆ ಹೋಗ್ಬೇಡಾ…’ ಅಂದಳು. ಏನೇನೋ ಯೋಚಿಸಿದಂತೆ ಮಾಡಿ “ಸಾಯ್ಲೆ ಬಿಡು, ಅದೇನ್ ಮಾಡೋದ್ ಅಪ್ಪ ಇಲ್ದೆದ್ ಮೊಗೂ… ಈ ಮಂಕಾಳೀ ಮಾಡ್ಕೋಂಡ ಕೆಲ್ಸಕ್ಕೆ ಪಾಪದವಳು ಏನ್ ಮಾಡುಮೆ?” ಎಂದು ಮಾತು ಮುಗಿದಾಗ ಶಂಕರ ಅಸಹನೆಯಿಂದ “ಅವ್ರು ನಮ್ಗೆ ಹಾಂಗೆ ಸಂಬಂಧ” ಎಂದು ಅವ್ವಿಯನ್ನು ಅಲಗಿಸುತ್ತ ಕೇಳಿದ. “ಹೌದು ಮಾರಾಯ ನಿಮ್ಮಜ್ಜಿಗೆ ಅದು ಏನೋ ಸಂಬಂಧ ಕಂಡಾ… ಒಟ್ಗೆ ನಿಮ್ಮಪ್ಪನಿಗೆ ತಂಗಿಯಾತೀದು.. ಆ ಮಂಕಾಳಿ” ಎಂದು ನಿಟ್ಟುಸಿರಿಟ್ಟು ಒಳನಡೆದಿದ್ದಳು.

ಅವ್ವಿಯ ಜಿಗುಪ್ಸೆ, ಅನುಕಂಪ, ಅಂತಃಕರುಣೆ, ನಿಟ್ಟುಸಿರು, ಯಾವುದೂ ಶಂಕರನನ್ನು ತಟ್ಟಲಿಲ್ಲ. ಪಾರ್ವತಿ ತನಗೆ ಸಂಬಂಧ, ಅದೂ ಅತ್ತೆಯ ಮಗಳು ಎನ್ನುವುದೇ ಅವನಿಗೆ ಹೆಚ್ಚಿನ ಥ್ರಿಲ್ಲಿಂಗ್ ಎನಿಸಿತ್ತು. ಮಾರನೆ ದಿನ ಶಾಲೆಗೆ ಹೋದವನೇ ಅದನ್ನು ಎಲ್ಲರಿಗೂ ಹೇಳಬೇಕು ಅನಿಸಿದರೂ, ಮೊದಲನೇ ಪೀರಿಯಡ್ ಸಮಾಜ, ಅದೂ ಮೋಹನ ಮಾಸ್ತರ್ದು, ಕ್ಲಾಸಿನಲ್ಲಿ ಮಧ್ಯೆ ಮಾತನಾಡಿದರೆ ಬಡಿದರೂ ಬಡಿದರೇ. ಕವಳ ತುಂಬಿಕೊಂಡು ಬಾಯಿಂದ ಉಗುಳಿ ಬಂದು ಹೊಡೆದರೆ ಮಾತ್ರ ಬೆನ್ನು ಮುರಿಯುವ ಹಾಗಿರುತ್ತಿದ್ದುದರಿಂದ ಈ ಕೆರೆಮನೆ ಮಾಸ್ತರ ಸಹವಾಸನೇ ಬೇಡ ಎಂದು ಕ್ಲಾಸು ಮುಗಿಯುವವರೆಗೆ ಕಾಯತೊಡಗಿದ. ಅಂತೂ ಇಂತೂ ಎರಡು ಕ್ಲಾಸ್ ಮುಗಿಸಿ ರೀಸಸ್ ಅವಧಿಯಲ್ಲಿ ಎಲ್ಲರಿಗೂ ಆ ಸುದ್ದಿ ಬಿತ್ತರಿಸುವವರೆಗೆ ಶಂಕರ, ಶಂಕರನಾಗಿರಲಿಲ್ಲ.

ಅದಾಗಿ ನಾಲ್ಕು ದಿನ ಮಂಜು, ಕೃಷ್ಣ, ನಾಗೇಶ, ಶಿವು ಎಲ್ಲರ ಕಣ್ಣಲ್ಲಿಯೂ ತಾನು ಹೀರೋ ಆದ ಹಾಗೆ ಮೆರೆಯತೊಡಗಿದ. ಮೊದಮೊದಲು ಎಲ್ಲರೂ ಸೇರಿ ಪಾರ್ವತಿಯ ಕುರಿತು ಚರ್ಚಿಸುತ್ತಿದ್ದವರು ಈಗ ಶಂಕರ ಜೊತೆಯಲ್ಲಿದ್ದಾಗ ಚರ್ಚಿಸಲು ಹಿಂದೆ-ಮುಂದೆ ನೋಡತೊಡಗಿದರು. ಅದು ಗೊತ್ತಾಗಿ ಶಂಕರ ತನಗೆ ಒಂದು ಪ್ರೆಸ್ಟೀಜು ಬಂದಂತೆನಿಸಿ ಹಿಗ್ಗತೊಡಗಿದ. ಇದರೊಟ್ಟಿಗೆ ಒಂದು ದಿನ ಮಂಜ ದಾರಿಯಲ್ಲಿ ಹೋಗುವಾಗ ಶಂಕರ ಇದ್ದುದನ್ನು ಮರೆತು “ನೋಡ್ರೋ.. ಪಾರ್ವತಿ ಹೋಗ್ತಾವ್ಳೆ ನೋಡ್ರೋ, ಒಳ್ಳೆ ನೇರ್ಲಹಣ್ಣು ಇದ್ದಾಂಗೆ…”ಎಂದು ಲೊಟ್ಟೆ ಹೊಡೆದಂತೆ ನಟಿಸಿದಾಗ ಶಂಕರನಿಗೆ ಆತ ತನ್ನ ಸ್ವಂತ ಆಸ್ತಿಯನ್ನೇ ಕದಿಯುತ್ತಿದ್ದಾನೆ ಎನ್ನುವಷ್ಟು ಕೋಪ ಬಂದು, ಮಂಜನ ಕಾಲರ್ ಹಿಡಿದು ಆತನಿಗೆರಡು ತದುಕಿಯೇಬಿಟ್ಟ. ಹೊಡೆಸಿಕೊಂಡ ಮಂಜನೇನು ಸುಮ್ಮನಾಗಲಿಲ್ಲ. ಹಿರೇಗುತ್ತಿಯ ಬ್ರಹ್ಮಜಟಕನ ದೇವಸ್ಥಾನದ ಪಕ್ಕದಲ್ಲಿ ರಸ್ತೆಯು ಒಂದು ರಣರಂಗವಾಗಿ ಹೋಯ್ತು. ಅಲ್ಲಿ ಸಿಮೆಂಟ್ ಬೆಂಚಿನ ಮೇಲೆ ಕುಳಿತವರು, ಇಲ್ಲಿ ಬಸ್ ಸ್ಟಾಂಡಿನ ಒಳಗೆ ಕಾಡು ಹರಟೆಯಲ್ಲಿದ್ದವರು ಕೆ.ಡಿ.ಸಿ.ಸಿ. ಬ್ಯಾಂಕಿನ ಪಕ್ಕದ ಅರಳಿಕಟ್ಟೆಯಲ್ಲಿ ಕುಳಿತ ವಯಸ್ಸಾದವರು, ದೇವಸ್ಥಾನದ ಪಕ್ಕದ ಕಟ್ಟೆಯಲ್ಲಿ ಕುಳಿತ ರಿಟ್ಟೆಯರ್ ಉದ್ಯೋಗಿಗಳು, ಗೂಡಂಗಡಿಯಲ್ಲಿ ನಿಂತುಕೊಂಡು ಹೋಗುವವರನ್ನು-ಬರುವವರನ್ನು ಮಾತನಾಡಿಸುತ್ತಿದ್ದವರು, ನಾಯಕ ಕೋಲ್ಡ್ ಡ್ರಿಂಕ್ಸ್ ನಲ್ಲಿ ಟೈಂಪಾಸ್ ಮಾಡುತ್ತಿದ್ದವರು ಎಲ್ಲರೂ ಒಮ್ಮಲೇ ನುಗ್ಗಿ ಬಂದು ಇಬ್ಬರನ್ನು ಬೇರೆ ಬೇರೆ ಮಾಡಿ ಇಬ್ಬರಿಗೂ ಎರಡೆರಡು ಬಿಗಿದು “ಶಾಲೆಗೆ ಹೋಗೋ ಬೋ… ಮಕ್ಕಳು ಹೊಡ್ದಾಡ್ಕಂತರ” ಎಂದು ಬೈದು ಕಳುಹಿಸಿದ್ದರು.

ಮಾರನೆ ದಿನ ಶಾಲೆಗೆ ಹೋದರೆ ಗೋಡೆಯ ತುಂಬೆಲ್ಲ “ಶಂಕರ-ಪಾರ್ವತಿ” ಎನ್ನುವ ಹೆಸರು ರಾರಾಜಿಸುತ್ತಿತ್ತು. ಮೊದಲನೆ ಪಿರಿಯಡ್ ನಲ್ಲೇ ಇಬ್ಬರನ್ನೂ ಕರೆಸಿ “ಏನಾ ಶಂಕ್ರಾ ಇದು! ಓದೂದು ಬಿಟ್ಕಂಡು ಏನ್ ಬಾನ್ಗಡಿಯೋ? ನಿಂದೇನೇ ಪಾರ್ವತಿ… ಎಂಟನೇ ಕ್ಲಾಸಿಗೇ ಹಿಂಗಾದ್ರೆ ಮುಂದೆ ಹ್ಯಾಂಗೆ…?” ಎಂದು ಕೆರೆಮನೆ ಮಾಸ್ತರು ಕಣ್ಣು ಕೆಂಪಗೆ ಮಾಡಿ ಅಷ್ಟೇ ಕೆಂಪಾದ ಕವಳದ ಬಾಯಲ್ಲಿ ಕೇಳಿದಾಗ ಶಂಕರನಿಗೆ ಚಡ್ಡಿಯಲ್ಲೇ ಒಂದಾ ಬಂದಂತಾಗಿದ್ದು ಸುಳ್ಳಲ್ಲ. ಆದರೂ ‘ತನಗೇ ಹೀಗೆ ಹೆದ್ರಿಕೆ ಆಗಿರುವಾಗ ಪಾಪ ಪಾರೋತಿಗೆ ಹ್ಯಾಂಗಾಗಿರಬ್ಯಾಡ’ ಎಂದು ಯೋಚಿಸತೊಡಗಿದ.

ಮಗ ಒಂಬತ್ತನೇ ಕ್ಲಾಸಿಗೆ ಬಂದ್ರೂ ಇನ್ನೂ ಏನೂ ಅರಿಯದ ಮಗು ಅಂದುಕೊಂಡಿದ್ದ ಬೀರಮ್ಮ ಅಂದು ಮಾತ್ರ ಜಿಗುಪ್ಸೆಯಿಂದ “ನಿಂಗ್ಯಾಕೋ ಅದೆಲ್ಲಾ? ಅವ್ರೆಂಥಾ ಸಂಬಂಧ ನಮ್ಗೆ…? ಇದ್ರೂ ಹೇಳ್ಕಣಾಕೆ ನಾಚ್ಕೆ…” ಎಂದು ಬಿಟ್ಟಿದ್ದಳು. ಸ್ವಲ್ಪ ತಡೆದು ‘ಅಂದ್ರದೊಂದು ಮೊಗ ಇತ್ ಕಂಡಾ… ಇಸ್ಕೂಲ್ಗೆ ಬತ್ತಿದಾ? ಮತ್ತೆ ಮಾತಾಡ್ಸುಕೆ ಹೋಗ್ಬೇಡಾ…’ ಅಂದಳು.

ಆದರೆ ಅಷ್ಟರಲ್ಲಾಗಲೇ ಅಳತೊಡಗಿದ್ದ ಪಾರ್ವತಿ “ಗೊತ್ತಿಲ್ಲಾ ಸರ್, ಇಂವಾ ಯಾರೆಂದೇ ನಂಗೊತ್ತಿಲ್ಲ” ಎಂದು ಧ್ವನಿ ತೆಗೆದು ರಾಗ ಮಾಡಿದಾಗ “ಹೋಗ್, ಹೋಗ್.. ಕಡೆಗೆ ಹೇಳೋದೇ ಹೀಗೆ… ಮತ್ತೆ ಹಿಂಗೆ ಮಾಡಬ್ಯಾಡ.” ಎಂದು ಅವಳನ್ನು ಹೊರಕಳುಹಿಸಿ “ಏನಾ ಶಂಕರಾ? ನಿಂದೇನೋ ಕತೆ’ ಎಂದು ಗಟ್ಟಿಯಾಗಿ ಕೇಳಿದಾಗ, ‘ಮೋಹನ ಮಾಸ್ತರಿಗೆ ಸಿಟ್ಟ ಬಂದ್ರೆ ಸತ್ತಾಂಗೆ’ ಎಂದು ತನ್ನ ಹಿರಿಯ ಸಹಪಾಟಿಗಳಿಂದ ಕೇಳಿದ್ದ ಶಂಕರ ನಡುಗುತ್ತ ‘ನಂಗೊತ್ತಿಲ್ಲ ಸರ್, ಅದ್ರವ್ವಿ ನಮ್ಮಪ್ಪಂಗೆ ತಂಗಿಯಾತೀದ ಅಂಡಾ… ಹಾಂಗದ್ಕುಂಡೆ ಆ ಮಂಜ, ಶಿವು, ಕೃಷ್ಣೋರಿಗೆ ಹೇಳಿದ್ದೆ. ನಿನ್ನೆ ಮಂಜಾ ಅದ್ಕೆ ಹಲ್ಕಟ್ ಮಾತಾಡ್ದಾ ಅದ್ಕೂಂಡೆ ಬೈದ್ರೆ ನಂಗೇ ಹೊಡಿಯೋಕೆ ಬಂದ… ಇದು ಅವಂದೇ ಅಕ್ಷರ. ಅಂವನೆ ಹಿಂಗೆ ಬರ್ದೋನು..” ಎಂದು ತೊದಲತೊಡಗಿದ.

“ಓಹೋ! ಹಂಗಾರೆ ನಿನ್ನೆ ಬಸ್ ಸ್ಟ್ಯಾಂಡ್ ಹತ್ರ ಜಗ್ಳಾ ಮಾಡ್ದೋರು ನೀನು ಮಂಜಾನಾ?” ಎಂದು ದೀರ್ಘವಾಗಿ ನೋಡಿ ಮಂಜನನ್ನು ಬರಲು ಹೇಳಿ ಕಳುಹಿಸಿದ್ದರು. ಆತನ ಪಟ್ಟಿಯಲ್ಲಿನ ಅಕ್ಷರ, ಗೋಡೆಯ ಅಕ್ಷರಗಳನ್ನು ಒಂದಕ್ಕೊಂದು ತಾಳೆಯಾಗಿ ಆತನ ಬೆಂಡೆತ್ತಿ ವಾರ್ನಿಂಗ್ ಮಾಡಿ ಕಳುಹಿಸಿದ್ದರು. ಅಂದಿನಿಂದ ಮಂಜ-ಶಂಕರ ಹಾವು ಮುಂಗುಸಿಯಂತಾದದ್ದಲ್ಲದೇ ಮೊರ್ಬಾದಿಂದ ಬರುವ ಹುಡುಗರ ಗುಂಪು ಎರಡಾಗಿ ವಿಭಜನೆ ಆಗಿಹೋಯ್ತು.

ಆದರೆ ಇದೆಲ್ಲ ಆಗಿದ್ದು ಶಂಕರನಿಗಂತೂ ಲಾಭವಾಯ್ತು. ಇಷ್ಟು ದಿನ ಯಾರೆಂದೇ ಗೊತ್ತಿಲ್ಲದವನ ಕಡೆ ಕಣ್ಣರಳಿಸಿ ನೋಡತೊಡಗಿದಳು ಪಾರ್ವತಿ. ಕೊನೆಗೆ ಅದ್ಯಾವ ಮಾಯದಲ್ಲಿ ಕಣ್ಣೋಟ ಮಾತಾಯ್ತೋ. ಮಾತು ಪ್ರೀತಿಯಾಯ್ತೋ ಯಾರಿಗೂ ಗೊತ್ತಾಗಲಿಲ್ಲ. ಮುಂದಿನ ವರ್ಷ ಹತ್ತನೇ ಕ್ಲಾಸಿನಲ್ಲಿ ಫೇಲಾಗಿ ಶಂಕರ ಮೀನು ಹಿಡಿಯಲು ಹೋದರೆ, ಪಾರ್ವತಿಯೂ ಶಾಲೆ ಬಿಟ್ಟು ಅವ್ವಿಯೊಡನೆ ಮೀನು ಮಾರಲು ಹೊರಟಳು. ಗಜನಿಯ ಹಣ್ಣಿ ಹುಲ್ಲಿನ ಮರೆಯಲ್ಲಿ ಕಾಣದಂತೆ ಮಾತನಾಡುತ್ತ ಕುಳಿತ ಜೋಡಿ ಎರಡೇ ವರ್ಷದಲ್ಲಿ ಎರಡೂ ಮನೆಯವರ ಅಲ್ಪಸ್ವಲ್ಪ ವಿರೋಧದ ನಡುವೆಯೂ ಮದುವೆ ಮಾಡಿಕೊಂಡರು. ಹೆಸರು ಕೆಡಿಸಿಕೊಂಡವಳ ಮಗಳೆಂದು ಮದುವೆಗೆ ಮೊದಲು ವಿರೋಧಿಸಿದರೂ ಮದುವೆಯಾದ ಮೇಲೆ ‘ಒಬ್ನೇ ಮಗ, ಪಿರುತಿ ಮಾಡಿ ಮದ್ವೆ ಆಗಾನೆ’ ಎಂದು ಅತ್ತೆ ಬೀರಮ್ಮ ಸೊಸೆಯನ್ನು ಪ್ರೀತಿಯಿಂದಲೇ ಕಂಡಳು.

ಇಷ್ಟಾಗಿ ಇದು ಆರನೇ ವರ್ಷ. ನಾಲ್ಕು ವರ್ಷದ ಪುಟ್ಟ ಮಗನೊಬ್ಬನಿದ್ದಾನೆ. ಅಂದು ಜಗಳವಾಡಿದ್ದ ಮಂಜ ಮತ್ತೆ ಗೆಳೆಯನಾಗಿದ್ದಾನೆ. ಹಳೆಯ ಪ್ರೇಮಕಥೆಯನ್ನು ನೆನಪಿಸಲು ಗಜನಿಯಿದೆ, ಹಣ್ಣಿ ಹುಲ್ಲು ಎತ್ತರವಾಗಿ ಬೆಳೆದು ನಿಂತಿದೆ. ಆಗೀಗ ಕೆರೆಮನೆ ಮಾಸ್ತರ್ರೂ ಮೀನು ಮಾರಲು ಹೋದಾಗ ಎದುರಿಗೆ ಸಿಗುತ್ತಾರೆ. “ಏನೆ ಪಾರ್ವತಿ? ಇವ ಯಾರಂದೇ ಗೊತ್ತಿಲ್ಲ ಎಂದಿದ್ಯಲ್ಲೇ. ಈಗ ಅಂವನ್ನೇ ಕಟ್ಟಿಕೊಡ್ಯಲ್ಲೇ…”ಎಂದು ನಗುತ್ತ ಒಂದೋ ಎರಡು ಪಾಲು ಶಟ್ಲೆ ಕೊಂಡುಕೊಳ್ಳುತ್ತಾರೆ. ಹೊಟ್ಟೆಗೆ ಬಟ್ಟೆಗೆ ಬರಗಾಲ ಬೀಳದ ಚಂದ ಬದುಕು.

ಇಂತಹ ಸುಂದರವಾದ ಬದುಕಿದ್ದೂ ಗಂಡ ಅದೇಕೆ ಇತ್ತೀಚೆಗೆ ಇಡೀ ದಿನ ಯೋಚಿಸುತ್ತ ಕುಳಿತುಕೊಳ್ಳುತ್ತಾನೆ ಎಂಬುದೇ ಪಾರ್ವತಿಗೆ ಅರ್ಥ ಆಗಿರಲಿಲ್ಲ. ಕೇಳಿದರೆ “ತದಡಿ ಉಷ್ಣಸ್ಥಾವರ ಆದ್ರೆ ನಾವು ಹಾಳಾದಂತೆ… ಏನಾದ್ರೂ ಮಾಡ್ಬೇಕು” ಎಂದು ಆಕ್ರೋಶದಿಂದ ಹೇಳುತ್ತಾನೆ. ‘ತದಡೀಲಿ ಕರೆಂಟ ತಯಾರಿಸಲು ಉಷ್ಣ ವಿದ್ಯುತ್ ಘಟಕ ಶುರುವಾಗ್ತದಂತೆ, ಹಂಗಾದ್ರೆ ನಮ್ಮ ಅಘನಾಶಿನಿ ನದಿ ಪೂರ್ತಿ ಬೂದಿ ತುಂಬಿಕೊಳ್ತದಂತೆ. ನದಿ ದಂಡೇಲಿರೋರೆಲ್ಲ ಬೇರೆ ಕಡೆ ಗೂಳೆ ಎದ್ದು ಹೋಗ್ಬೇಕಾಗ್ತದಂತೆ. ಗಜನಿಲಿ ಕಲ್ಲಿದ್ದಲು ತುಂಬ್ತಾರಂತೆ, ಊರಲ್ಲಿ ಎಲ್ಲರ ಮನೇಲು ಹಾರೂಬೂದಿ ತುಂಬಿಕೊಳ್ಳದಂತೆ. ಶೆಟ್ಲಿ ಹೋಗಲಿ, ಚಪ್ಪಿಕಲ್ಲೂ ಸಿಗೋದಿಲ್ಲಂತೆ’ ಎಂದು ಗಂಡ ಹೇಳಿದ್ದನ್ನು ಕೇಳಿದ್ದು ಬಿಟ್ಟರೆ ಬೇರೇನೂ ಗೊತ್ತಿಲ್ಲ ಪಾರ್ವತಿಗೆ. ಈ ಬಗ್ಗೆ ಸುಮಾರು ವರ್ಷಗಳ ಹಿಂದೆ ಬಂದ ಕಾಸ್ಟಿಕ್ ಸೋಡಾ ಯೋಜನೆಲಿ ಕೂಡ ಹಿಂಗೇ ಗಲಾಟೆ ಆಗಿದ್ದು. ಎಲ್ಲ ಒಡೀದೀರ ಗಜನಿಯನ್ನು ಸರ್ಕಾರ ವಶಪಡಿಸಿಕೊಂಡದ್ದು, ಹಾಗೆ ವಶಪಡಿಸಿಕೊಂಡ ಗಜನಿಯಲ್ಲಿ ಇನ್ನೂ ಯಾವ ಯೋಜನೆಯೂ ಆಗದಿದ್ದರೂ ಗಜನಿ ಸರ್ಕಾರದ ವಶದಲ್ಲೇ ಉಳಿದು, ಹಾಳು ಬಿದ್ದುದ್ದು ಗಜನಿಯಲ್ಲಿ ಬೆಳೆಯುತ್ತಿದ್ದ “ಕಗ್ಗ”ದ ಬತ್ತ ಹಾಗೂ ಅದರ ಕರಿ ಅಕ್ಕಿಯ ರುಚಿಯಾದ ಅನ್ನ ಈಗ ಕನಸೇ ಆಗಿ ಹೋಗಿದ್ದ ಪಾರ್ವತಿಗೆ ಸ್ವಲ್ಪ ಸ್ವಲ್ಪ ನೆನಪಿದ್ದರೂ ಮಾವ- ಅತ್ತೆ ಪದೇ ಪದೇ ನೆನಪು ಮಾಡಿಕೊಳ್ಳುತ್ತಿದ್ದರು.

‘ಇಷ್ಟಾದರೂ ಅದು ದೊಡ್ಡವರು ನೋಡಿಕೊಳ್ಳಬೇಕಾದ ಉಸಾಬರಿ, ತಮಗೇಕೆ?’ ಎಂಬುದೇ ಪಾರ್ವತಿಯ ಯೋಜನೆ. ‘ಇವೊತ್ತು ಹಿರೇಗುತ್ತಿಲಿ ಸ್ಟ್ರೈಕ್ ಉಂಟು. ರಸ್ತೆ ಬಂದ್ ಮಾಡಿ, ಬಸ್ ಎಲ್ಲಾ ನಿಲ್ಸಿ ಘೋಷಣೆ ಕೂಗಬೇಕು’ ಎಂದು ಶಂಕರ ಹೊರಟಾಗ “ದುಡ್ಕಂಡ್ ತಿಂಬೋರಿಗೆಲ್ಲ ಎಂಥಾ ಬಂದ್? ಅದೆಲ್ಲ ಅವ್ರು ದುಡ್ಡಿರೋರು ಮಾಡ್ಕಳ್ಳಿ… ನಮ್ಗೆಂತಕ್ಕೆ?” ಪಾರ್ವತಿ ಗೊಣಗಿದರೂ ಕಿವಿ ಮೇಲೆ ಹಾಕಿಕೊಳ್ಳದ ಶಂಕರ ಹೊರಟೇ ಬಿಟ್ಟಾಗ ಇವಳು ತಲೆ ಮೇಲೆ ಕೈಯಿಟ್ಟು ಕುಳಿತಳು. “ಆ ಶ್ರೀಮಂತ್ರು ಸುಮ್ನೆ ಕೂತ್ಕಂಡ್ರೂ ಹೊಟ್ಟೆ ತುಂಬೂದು. ಹೊಟ್ಟೆಗೆ ಯಾವುದೇ ತಾಪತ್ರಯ ಇಲ್ದೋರು ಕುನಿತರಂದ್ಕಂಡೆ ಇವ್ರೂ ಹೆಜ್ಜೆ ಹಾಕೂದೇ…” ಪಾರ್ವತಿ ಅಸಹಾಯಕಳಾದಳು.

ಆದರೂ ಇದು ಒಂದೆರಡು ದಿನಗಳಲ್ಲಿ ಮುಗಿಯಲಿಲ್ಲ. ತಿಂಗಳು ಮೂರ್ನಾಲ್ಕು ಬಿಟ್ಟೂ ಬಿಟ್ಟೂ ಸ್ಟ್ರೆಕು, ಬಂದು ನಡೆದವು. ಕೆಲವೊಮ್ಮೆ ಶಂಕರ ರಾತ್ರಿ ಕೂಡ ಮನೆಗೆ ಬರದೇ ಹೊರಗೇ ಕಳೆಯತೊಡಗಿದ. ಹೆಂಡತಿ ಕೇಳಿದರೆ ‘ನಿಮಗ್ಯಾಕೆ ಇದೆಲ್ಲ’ ಎಂದು ಮಾತು ತೇಲಿಸಿದ. ನಿಯತ್ತಿನಿಂದಿದ್ದ ಗಂಡ ಈಗ ರಾತ್ರಿಯೆಲ್ಲ ಹೊರಗುಳಿಯುವುದು ಎಂದರೇನು ಎಂಬುದೇ ಪಾರ್ವತಿಗೆ ಅರ್ಥ ಆಗಿರಲಿಲ್ಲ. ‘ಹೊರಚಾಳಿಗೆ ಬಿದ್ದೀರೇನೋ’ ಎಂದು ಅನುಮಾನಿಸಿದವಳೇ ಮಗನನ್ನೂ ಎತ್ತಿಕೊಂಡು ಅವ್ವಿಯ ಮನೆಗೆ ನಡೆದೇ ಬಿಟ್ಟಳು.

ಶಂಕರ ಕರೆಯಲು ಬಂದರೆ ಕೇಳುವ ಸ್ಥಿತಿಯಲ್ಲಿ ಪಾರ್ವತಿ ಇರಲಿಲ್ಲ. ಶಂಕರ ಸ್ಟ್ರೆಕು, ಊರ ಹೊರಗೆ ಹೋಗಬೇಕಾಗಿರುವುದನ್ನು ವಿವರಿಸಿದರೂ ಪಾರ್ವತಿಗೆ ಅರ್ಥವಾಗಲಿಲ್ಲ. ಬಿರು ಮಾತನಾಡಿ ಕದವಿಕ್ಕಿ ಕೊಂಡಾಗ ಶಂಕರನಿಗೂ ಏನು ಮಾಡುವುದೆಂದೇ ತೋಚಲಿಲ್ಲ. ಹಾಗೆಂದು ಹೋರಾಟವನ್ನು ಅರ್ಧದಲ್ಲಿ ನಿಲ್ಲಿಸುವಂತೆಯೂ ಇರಲಿಲ್ಲ. ಹೋರಾಟ ನಿಲ್ಲಿಸಿದರೆ ಅದು ಮುಂದಿನ ಬದುಕಿನ ಪ್ರಶ್ನೆ. ಮಕ್ಕಳು, ಮೊಮ್ಮಕ್ಕಳ ಬದುಕಿನ ಪ್ರಶ್ನೆ… ಶಂಕರ ಪೂರ್ತಿಯಾಗಿ ಹೋರಾಟದಲ್ಲಿ ತೊಡಗಿಕೊಂಡ. ಬೆಂಗಳೂರಿಗೆ, ದೆಹಲಿಗೆ ಹೊರಟ ನಿಯೋಗದೊಂದಿಗೆ ಹೋಗಿ ಬಂದ. ಇತ್ತ ಮತ್ತೆ ಬಂದು ಕರೆದು ಅನುನಯಿಸಲಿ ಎಂದು ಕಾದು ಕುಳಿತ ಪಾರ್ವತಿ ಇದ್ದಲ್ಲಿ ಬರಲು ಆತನಿಗೆ ಸಾಧ್ಯವೇ ಆಗಲಿಲ್ಲ. ‘ಅವ್ವಿ ಹಂಗೇ ನಂದೂ ಒಂಟಿ ಜೀವ್ನ ಆಗೋಯ್ತು’ ಎಂದು ಪಾರ್ವತಿ ಕೊರಗತೊಡಗಿದಳು.

ಯೋಚಿಸುತ್ತ ಕುಳಿತ ಪಾರ್ವತಿಗೆ ಪಕ್ಕದ ಮನೆಯ ಸವಿತಾ ಬಂದು “ಪಾರೋತಕ್ಕ ನೋಡಿಲ್ಲಿ… ಶಂಕ್ರುಣ್ಣನ ಪೋಟೋ ಬಂದೀತು ಪೇಪರ್ನಾಗೆ” ಎಂದು ಪ್ರಜಾವಾಣಿ ಕರಾವಳಿ ಮುಂಜಾವು ಹಿಂಗೆ ಎರಡೆರಡು ಪತ್ರಿಕೆ ಹಿಡಿದು ಓಡೋಡಿ ಬಂದಾಗ ಎದೆ ಬಡಿತವೇ ನಿಂತಂತಾಯ್ತು. “ಅಯ್ಯೋ ಹಿರೇಗುತ್ತಿ ಹಿರೇಹೊಸಬಾ.. ಏನ್ ಮಾಡ್ಕಂಡಿರೋ… ಎಂಥಕ್ಕೆ ಪೋಟೋ ಬಂದಿದೇ ಸವಿ…” ಉಕ್ಕತೊಡಗಿದ್ದ ಕಣ್ಣೀರನ್ನು ಹತೋಟಿಯಲ್ಲಿಡಲು ಪ್ರಯತ್ನಿಸುತ್ತ ಕೇಳಿದಳು.

“ತದಡಿ ಉಷ್ಣಸ್ಥಾವರ ಅಗೂಲಾ ಕಂಡಾ. ಅದ್ಕಾಗೆ ಹೋರಾಟ ಮಾಡ್ದೋರಿಗೆಲ್ಲ ಹಿರೇಗುತ್ತಿ ಬ್ರಹ್ಮಜಟಕ ಯುವಕ ಸಂಘದವರು ಸನ್ಮಾನ ಮಾಡ್ತೀರ ಕಂಡಾ, ಶಂಕ್ರಣ್ಣಂಗೂ ಸನ್ಮಾನ ಈದ ಕಂಡಾ…” ಖುಷಿಯಿಂದ ಸವಿತಾ ಹೇಳಿದಾಗ ಪಾರ್ವತಿಗೆ ಮಾತೇ ಹೊರಡಲಿಲ್ಲ. ಸರಸರನೆ ಒಳಗೆ ಹೋದವಳೇ ತನ್ನ ಹಾಗೂ ಮಗನ ಬಟ್ಟೆಯನ್ನು ಚೀಲದಲ್ಲಿ ತುಂಬ ತೊಡಗಿದಳು. ಅವ್ವ “ಎಲ್ಲಿಗೆ ಹೋತ್ಯೇ? ಈ ಮೂರ್ ಸಂಜೆ ಹೊತ್ನಾಗೆ” ಎಂದರೂ ಕೇಳದೇ ಮೆಟ್ಟಲಿಳಿಯುತ್ತಿದ್ದವಳಿಗೆ ಖುಷಿಯಿಂದ ನಗುತ್ತ ಅಂಗಳದ ದಣಪೆ ದಾಟುತ್ತಿದ್ದ ಶಂಕರ ಕಾಣಿಸಿ “ನಡೀರಿ ಹೋಗ್ವ ನಂ ಮನಿಗೆ” ಎಂದು ಅವನನ್ನು ಒಳಗೂ ಕರೆಯದೇ ಹೊರಡಿಸಿಯೇ ಬಿಟ್ಟಳು.. ಅವ್ವಿಗೆ ಉತ್ತರವನ್ನೇ ಕೊಡದೇ.