Advertisement
ಸಂರಚನೆಯಲ್ಲಿ ಹೊಸತನ ಹುಡುಕುವ ಕಥೆಗಳು: ಎನ್.ಎಸ್.ಶ್ರೀಧರ ಮೂರ್ತಿ ಬರಹ

ಸಂರಚನೆಯಲ್ಲಿ ಹೊಸತನ ಹುಡುಕುವ ಕಥೆಗಳು: ಎನ್.ಎಸ್.ಶ್ರೀಧರ ಮೂರ್ತಿ ಬರಹ

‘ಅಂತರ್ಗತ’ ದಲ್ಲಿ ಕಥೆಯಲ್ಲಿದ್ದಾತ ಎದುರಿಗೂ ಬರುತ್ತಾನೆ, ಚಿತ್ತಾಲರ ಕಥೆಯಂತೆ ಸೃಜನಶೀಲತೆಯ ನೆಲೆಗಳನ್ನು ಪರಿವೀಕ್ಷಿಸುವ ಇದು ಆ ಮೂಲಕ ಬದುಕಿನ ಮೂಲ ಆತಂಕಗಳನ್ನೂ ಗುರುತಿಸುತ್ತದೆ. ‘ತಾರೆ’ಕತೆಯಲ್ಲಿ ಕೂಡ ಇಂತಹ ಸೂಕ್ಷ್ಮಗಳನ್ನು ಗಮನಿಸ ಬಹುದು. ಅಜಿತ್ ಅವರ ಕಥನದ ಹಿರಿಮೆಯೆಂದರೆ ಅವರಿಗೆ ಓದುಗರ ಗ್ರಹಿಕೆಯ ಕುರಿತು ಇರುವ ನಂಬಿಕೆ. ಕಥನದ ಹಲವು ನೆಲೆಗಳನ್ನು ಅವರು ಮುಕ್ತವಾಗಿರಿಸಿ ಅವು ಓದುಗರ ಮನೋಭೂಮಿಕೆಯಲ್ಲಿ ಬೆಳೆಯಲು ಬಿಡುತ್ತಾರೆ. ‘ತುಂಬೀತೆ ಒಲವು’ ಈ ನೆಲೆಯಲ್ಲಿ ಬಹು ಯಶಸ್ವಿಯಾದ ಕಥೆ.
ಡಾ. ಅಜಿತ್‌ ಹರೀಶಿ ಹೊಸ ಕಥಾ ಸಂಕಲನ “ಉಪರಿ”ಯ ಕುರಿತು ಎನ್.ಎಸ್.ಶ್ರೀಧರ ಮೂರ್ತಿ ಬರಹ

ಉಪರಿ ಎನ್ನುವುದು ಪಂಚಾಂಗದ ಪರಿಭಾಷೆ. ಪ್ರತಿ ತಿಥಿಯ ಅಹ:ಪ್ರಮಾಣ ಅರವತ್ತು ಘಳಿಗೆಗಳು. ಇಷ್ಟರೊಳಗೆ ಇನ್ನೊಂದು ತಿಥಿ ಶುರುವಾಗುವುದು ಸಹಜ, ಹೀಗೆ ಶುರುವಾದ ತಿಥಿ ಮುಂದಿನ ಸೂರ್ಯೋದಯದೊಳಗೆ ಮುಗಿದರೆ ಉಪರಿ ಎಂದು ಕರೆಸಿಕೊಳ್ಳುತ್ತದೆ. ಇದನ್ನು ವಿಶೇಷವಾಗಿ ಹುಣ್ಣಿಮೆಯಲ್ಲಿ ಹೆಚ್ಚಾಗಿ ಪರಿಗಣನೆಗೆ ತೆಗೆದುಕೊಳ್ಳುತ್ತಾರೆ. ಏಕೆಂದರೆ ಉಪರಿಯಾದ ಹುಣ್ಣಿಮೆ ಪೂರ್ಣ ರಾತ್ರಿ ಇರುತ್ತದೆ ಆಗ ಕಡಲಿನ ಅಬ್ಬರವೂ ಹೆಚ್ಚು.

(ಅಜಿತ್ ಹರೀಶಿ)

ಅಜಿತ್ ಹರೀಶಿಯವರ ಕಥೆಗಳು ಈ ಉಪರಿಯ ಪರಿಕಲ್ಪನೆಯನ್ನು ಸಂರಚನೆಯ ವಿಸ್ತಾರಕ್ಕೆ ಬಳಸಿಕೊಳ್ಳುತ್ತವೆ. ಇಲ್ಲಿನ ಎಲ್ಲಾ ಕಥೆಗಳೂ ಒಂದಲ್ಲ ಒಂದು ರೀತಿಯಲ್ಲಿ ಚೌಕಟ್ಟನ್ನು ಪ್ರಶ್ನಿಸುತ್ತಾ ಬೆಳೆಯುವಂತಹವು. ಅವರಿಗೆ ನೇರ ನಿರೂಪಣೆಗಿಂತಲೂ ವಿಭಿನ್ನತೆಯನ್ನು ಕಾಣುವ ಹುಡುಕಾಟ ಅವರದು. ಕೆಲವು ಕಥೆಗಳು ಪ್ರಜ್ಞಾ ಪ್ರವಾಹ ತಂತ್ರವನ್ನು ಬಳಸಿ ಕಳ್ಳುತ್ತವೆ. ನಿರೂಪಕನ ಮಧ್ಯ ಪ್ರವೇಶವಿಲ್ಲದೆ ಕಥನ ಮನೋಭೂಮಿಕೆಯಂತೆ ಬೆಳೆಯುವ ಈ ತಂತ್ರಗಾರಿಕೆಯನ್ನು ಜೇಮ್ಸ್ ಜಾಯ್ಸ್ 1922ರಲ್ಲಿ ‘ಯೂಲಿಸೆಸ್’ಕಾದಂಬರಿಯಲ್ಲಿ ಮೊದಲು ಬಳಸಿದಾಗ ಇಡೀ ಜಗತ್ತು ಬೆರಗಾಗಿತ್ತು. ಅದು ಕನ್ನಡಕ್ಕೂ ಬಂದಿತು. ತ.ರಾ.ಸು ಅವರ ‘ಬಿಡುಗಡೆಯ ಬೇಡಿ’ ಶ್ರೀರಂಗ ಅವರ ‘ಅನಾದಿ ಅನಂತ’ ಟಿ.ಜಿ.ರಾಘವ ಅವರ ‘ವಿಕೃತಿ’ ಕಾದಂಬರಿಗಳೂ, ಶಾಂತಿನಾಥ ದೇಸಾಯಿಯವರ ‘ಕ್ಷಿತಿಜ’ ಅನಂತ ಮೂರ್ತಿಗಳ ‘ಕ್ಲಿಪ್ ಜಾಯಿಂಟ್, ಬಿ.ಸಿ.ರಾಮಚಂದ್ರ ಶರ್ಮ ಅವರ ‘ಸೆರಗಿನ ಕೆಂಡ’ ಮೊದಲಾದ ಕಥೆಗಳೂ ಈ ತಂತ್ರಗಾರಿಕೆಯಲ್ಲಿ ಬಂದವು. ನವ್ಯ ಸಾಹಿತ್ಯದ ಸಂದರ್ಭದಲ್ಲಿ ಈ ಕುರಿತು ವಿಶೇಷ ಚರ್ಚೆಗಳಾದವು. ಓ.ಎಲ್.ನಾಗಭೂಷಣ ಸ್ವಾಮಿಗಳ ಇದೇ ಹೆಸರಿನ ಪುಸ್ತಕ ಕೂಡ ಇದೆ.

ಅಜಿತ್ ಅವರ ಪ್ರಯತ್ನವಿರುವುದು ಪಾತ್ರಗಳ ಮನೋಭೂಮಿಕೆಯಲ್ಲಿನ ಬಹುಮುಖಿ ಸಾಧ್ಯತೆಗಳನ್ನು ಅದರ ಸೂಕ್ಷ್ಮಗಳ ಜೊತೆಗೆ ಹಿಡಿಯುವುದು ಅದಕ್ಕಾಗಿ ಅವರು ಸಂರಚನೆಯ ಹಲವು ನೆಲೆಗಳನ್ನು ಬಳಸಿಕೊಳ್ಳುತ್ತಾರೆ. ‘ಉಪರಿ’ ಕಥೆಯಲ್ಲಿ ಮನೋಪಲ್ಲಟ ಅದರ ವಿವರಗಳೊಂದಿಗೆ ಬಂದರೆ ‘ಕಾಲ ವಟಿ’ ಕಥೆಯಲ್ಲಿ ಪ್ರತಿಮಾತ್ಮಕವಾಗಿ ಬರುತ್ತದೆ, ‘ರೆಕ್ಕೆಯಗಲ ಪದ’ದಲ್ಲಿ ಕಾವ್ಯಾತ್ಮಕವಾಗಿ ಬರುತ್ತದೆ. ಪಾತ್ರಗಳ ಸ್ವರೂಪದಲ್ಲಿ ಗಹನತೆಯನ್ನು ತರುವುದು ಅವರಿಗೆ ಈ ಕಾರಣಕ್ಕಾಗಿ ಸಾಧ್ಯವಾಗಿದೆ. ‘ನೀಲಿ ಕಮಲ’ ಕಥೆಯಲ್ಲಿ ನೇರ ನಿರೂಪಣಾ ಕ್ರಮವೇ ಇದ್ದರೂ ಅಂತ್ಯದಲ್ಲಿ ದೊರಕಿರುವ ಸೂಕ್ಷ್ಮತೆ ಅದರ ಗಹನತೆಯನ್ನು ತೀವ್ರವಾಗಿಸಿದೆ.

‘ಅಂತರ್ಗತ’ ದಲ್ಲಿ ಕಥೆಯಲ್ಲಿದ್ದಾತ ಎದುರಿಗೂ ಬರುತ್ತಾನೆ, ಚಿತ್ತಾಲರ ಕಥೆಯಂತೆ ಸೃಜನಶೀಲತೆಯ ನೆಲೆಗಳನ್ನು ಪರಿವೀಕ್ಷಿಸುವ ಇದು ಆ ಮೂಲಕ ಬದುಕಿನ ಮೂಲ ಆತಂಕಗಳನ್ನೂ ಗುರುತಿಸುತ್ತದೆ. ‘ತಾರೆ’ಕತೆಯಲ್ಲಿ ಕೂಡ ಇಂತಹ ಸೂಕ್ಷ್ಮಗಳನ್ನು ಗಮನಿಸ ಬಹುದು. ಅಜಿತ್ ಅವರ ಕಥನದ ಹಿರಿಮೆಯೆಂದರೆ ಅವರಿಗೆ ಓದುಗರ ಗ್ರಹಿಕೆಯ ಕುರಿತು ಇರುವ ನಂಬಿಕೆ. ಕಥನದ ಹಲವು ನೆಲೆಗಳನ್ನು ಅವರು ಮುಕ್ತವಾಗಿರಿಸಿ ಅವು ಓದುಗರ ಮನೋಭೂಮಿಕೆಯಲ್ಲಿ ಬೆಳೆಯಲು ಬಿಡುತ್ತಾರೆ. ‘ತುಂಬೀತೆ ಒಲವು’ ಈ ನೆಲೆಯಲ್ಲಿ ಬಹು ಯಶಸ್ವಿಯಾದ ಕಥೆ.

ಇನ್ನು ಅಜಿತರ ಕಥೆಗಳ ಮೂಲ ಸಮಸ್ಯೆಗಳ ಬಗ್ಗೆ ಹೇಳುವುದಾದರೆ ಅವರಿಗೆ ಸಂರಚನೆಯಲ್ಲಿನ ಮಹತ್ವಾಕಾಂಕ್ಷೆಯನ್ನು ವಸ್ತುವಿನ ದೃಷ್ಟಿಯಿಂದ ಎಲ್ಲಾ ಕಡೆಯಲ್ಲಿಯೂ ಉಳಿಸಿ ಕೊಳ್ಳಲಾಗಿಲ್ಲ. ಕಥನದ ಹಿರಿಮೆ ಇರುವುದು ‘ಸ್ವಂತಿಕೆ’ಯ ಅರಸುವಿಕೆಯಲ್ಲಿ. ಅದರ ಕುರುಹುಗಳೂ ಈ ಸಂಕಲನದಲ್ಲಿದೆ ಎನ್ನುವುದು ನನಗೆ ಅಜಿತ್ ಹರೀಶಿಯವರ ಭವಿಷ್ಯದ ಬಗ್ಗೆ ಇರುವ ನಿರೀಕ್ಷೆಗಳಿಗೆ ಕಾರಣ.

(ಕೃತಿ: ಉಪರಿ (ಕಥಾ ಸಂಕಲನ), ಲೇಖಕರು: ಅಜಿತ್ ಹರೀಶಿ, ಪ್ರಕಾಶಕರು: ವೀರಲೋಕ ಬುಕ್ಸ್)

About The Author

ಎನ್.ಎಸ್. ಶ್ರೀಧರಮೂರ್ತಿ

ಪತ್ರಕರ್ತ, ಅಂಕಣಕಾರ ಹಾಗೂ ಲೇಖಕ. ಮಲ್ಲಿಗೆ ಮಾಸ ಪತ್ರಿಕೆ, ಮಂಗಳ ಹಾಗೂ ವಿಜಯವಾಣಿ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ಕುರಿತ ಬರವಣಿಗೆಗಳು ಇವರ ವಿಶೇಷ.

2 Comments

  1. Ajit Harishi

    ಧನ್ಯವಾದಗಳು ಶ್ರೀಧರಮೂರ್ತಿ ಸರ್ ಮತ್ತು ಕೆಂಡಸಂಪಿಗೆ ತಂಡಕ್ಕೆ.

    Reply
  2. Vasantha kumar

    ಪ್ರಸಕ್ತ ಕಾಲಘಟ್ಟದಲ್ಲಿ ಓದುವವರ ಅದರಲ್ಲೂ ಪುಸ್ತಕ ರೂಪದಲ್ಲಿ ಓದುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಹಾಗೆಯೇ ಎಡಕ್ಕೂ ಬಲಕ್ಕೂ ವಾಲದೇ ವಿಮರ್ಶಿಸುವವರ ಸಂಖ್ಯೆಯೂ ಕಡಿಮೆಯಾಗಿದೆ. ಕೆಲವರು ವಿಮರ್ಶೆಯ ಹೆಸರಿನಲ್ಲಿ ಕಥೆಗಳ ಸಾರಾಂಶವನ್ನೇ ಹೇಳಿಬಿಡುತ್ತಾರೆ. ಇಂತಹವರ ನಡುವೆ ಶ್ರೀಧರ ಮೂರ್ತಿಗಳ ವಿಮರ್ಶೆ ಪುಸ್ತಕವನ್ನು ಕೊಂಡು ಓದುವ ಹಂಬಲ ಉಂಟುಮಾಡುತ್ತದೆ. ಕಥೆಗಾರರಿಗೂ, ವಿಮರ್ಶಕರಿಗೂ ಹೀಗೆ ಪ್ರಕಟಿಸುತ್ತಿರುವ ಕೆಂಡಸಂಪಿಗೆಗೂ ಧನ್ಯವಾದಗಳು.

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ