ಮರುಳ ಸಿದ್ಧಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹಿರೇಕುಂಬಳಗುಂಟೆ ಎಂಬ ಹಳ್ಳಿಯಲ್ಲಿ ೧೯೩೧ ರ ಜುಲೈ ೨೯ ರಂದು ಹುಟ್ಟಿದರು. ಪ್ರಾರಂಭಿಕ ಶಿಕ್ಷಣ ಅಕ್ಕನ ಊರದ ಹುಲಿಕೆರೆ ಎಂಬ ಹಳ್ಳಿಯಲ್ಲಿ. ಕೊಟ್ಟೂರಿನಲ್ಲಿ ಪ್ರೌಢಶಾಲಾ ಶಿಕ್ಷಣ. ಮೈಸೂರು ಸೇಂಟ್‌ ಫಿಲೋಮಿನ ಕಾಲೇಜು ಸೇರಿ ಇಂಟರ್‌ಮೀಡಿಯೆಟ್‌ ನಲ್ಲಿ ೯ ನೇ ರ‍್ಯಾಂಕ್‌ ಪಡೆದ ವಿದ್ಯಾರ್ಥಿ, ಮಹಾರಾಜಕಾಲೇಜು ಸೇರಿದ್ದು, ಕನ್ನಡದಲ್ಲಿ ಆನರ್ಸ್ ಪದವಿ ಪಡೆಯಲು. ಆದರೆ ಓದಿದ್ದು ಸಮಾಜ ಶಾಸ್ತ್ರ. ವಿಷಬಿಂದು (ಕಥನಕಾವ್ಯ), ಸಾವಿನ ಸೆಳವಿನಲ್ಲಿ (ಜೀವನ ಕಥೆಗಳು) ಸಾಹಿತ್ಯ ಕೃತಿಗಳು. ಸಮಾಜಕಾರ್ಯ, ಮಾನವ ಸಮಾಜ ಹಾಗೂ ಸಮಾಜಶಾಸ್ತ್ರ, ಸಮುದಾಯ ಸಂಘಟನೆ, ಸಮಾಜಶಾಸ್ತ್ರದ ಕೆಲವು ಪಾಠಗಳು,ಮಾನವ ಸಂಪನ್ಮೂಲ ಸಂವರ್ಧನೆ, ಗ್ರಾಮೋನ್ನತಿ, ನಾವು ಮತ್ತು ಸಹಕಾರ, ಪಂಚಮುಖಿ ಅಭ್ಯುದಯ ಮಾರ್ಗ ಕೃತಿಗಳನ್ನು ರಚಿಸಿದರು. ಇಂಗ್ಲಿಷ್‌ನಲ್ಲಿ ಓಲ್ಡ್‌ ಪೀಪಲ್‌ ಆಫ್‌ ಮಕುಂತಿ, ದಿ ಕಾಂಟೂರ್ಸ್ ಆಫ್‌ ಸೋಷಿಯಲ್‌ ವೆಲ್‌ಫೇರ್, ಸೆಕ್ಟರಿಯನ್‌ ಅಂಡ್‌ ಸೆಕ್ಯುಲರ್ ಬೇಸಿಸ್‌ ಆಫ್‌ ವೆಲ್‌ ಫೇರ್ ಅಂಡ್‌ ಡೆವಲಪ್‌ಮೆಂಟ್‌ ಕೃತಿಗಳನ್ನು ಬರೆದಿದ್ದಾರೆ. ಹೀಗೆ ವಿಭಿನ್ನ ಹಿನ್ನೆಲೆಯ ಮರುಳ ಸಿದ್ದಯ್ಯನವರು ಬರೆದ ‘ನಾಗಕನ್ಯೆಯರು’ ಎಂಬ ಕವನ ಇಂದಿನ ‘ಕಾವ್ಯ ಮಾಲೆಯ ಕಾಣದ ಕುಸುಮಗಳು’ ಸರಣಿಯಲ್ಲಿ ನಿಮ್ಮ ಓದಿಗಾಗಿ.

ನಾಗಕನ್ಯೆಯರು

ಚಳಿಯ ಗಾಳಿಯ ನವುರಾದ ಸುಳಿವು
ಹಣ್ಣಾದ ಗೋಧಿ ಬಣ್ಣದ ಹುಲ್ಲ ಬಾಗು, ಬಳುಕು,
ಹದವಾದ ಹೂಬಿಸಿಲು
ಒಳಗೊಳಗೆ ಸುತ್ತು, ಸಾಯಿಸಿ, ಬೇಸತ್ತು
ಬಂದಿರಬೇಕು ಮೈದಾನಕೆ
ಹತ್ತಾರು ನಾಗಕನ್ಯೆಯರು
ಮಿಂಚು ಮೈ ಕಣ್ಣು ಕೈಯವರು.
ಸಳಸಳನೆ ಹರಿದಾಡಿ
ಮೈ ಮುರಿದು, ನೆಟಿಕೆ ಮುರಿದು
ತಂಗುಳನೆ ತಿರುತಿರುವಿ ಮೆಲುಕಾಡಿ
ಬಾಯಿಯಲೆ ಅವರಿವರ ಹಲ್ಲು ಮುರಿದು
ಹೆಡೆಯ ತೂಗುವ ಸೊಗಸು
(ಬಿಡುಗಡೆಯ ಹೊಚ್ಚ ಹೊಸತು)
ಕದ್ದಾದರೂ ಹತ್ತಿರವೆ ನೋಡಬೇಕು.
ನಾನತ್ತ ಸುಳಿದೆ
ಅದಕೆಂದೆ :
ಅಡಗಿಬಿಟ್ಟರು ಸರಿದು ಸರಸರನೆ
ಅಲ್ಲಲ್ಲೆ ಕಂಡ, ಕಂಡುಂಡ ಬಿಲಗಳಲೆ
ಶರಣು ಶರಣಾಗಿ ಸಂಪ್ರದಾಯಕ್ಕೆ.
ನಾನು ಬಲ್ಲೆನು ಅವರ ಕುಲವನ್ನು
ಮತ್ತವರ ವೃತ್ತಿಯನ್ನು;
ನನ್ನಂಥ ನೂರಾರು ಜನರನ್ನು
ಕಚ್ಚಿ ಹೀರಿದ ಚರಿತೆಯನ್ನು.
ಆದರೂ ಅಂಜಿದರು
ನನ್ನ ಕಣ್ಣಲಿ
ಗರುಡಗೆರೆಯನು ಕಂಡರೇನು ?