ಶಿರಹಟ್ಟಿ ತಾಲೂಕು ಬಾಲೆಹೊಸೂರಲ್ಲಿ ಸವರ್ಣೀಯರ ಗಲಬೆಯಲ್ಲಿ ಮಹಾಂತಪ್ಪ ಹನುಮಂತಪ್ಪ ಗುಡಗೇರಿ ಎನ್ನುವವರು ಕೊಲೆಯಾದರು. ಈ ಘಟನೆಯು ಇಡೀ ಗಂಟಿಚೋರ್ ಸಮುದಾಯವನ್ನು ಎಚ್ಚರಿಸಿತು. ನಾವು ಮೌನವಾಗಿದ್ದರೆ ಮೇಲುಜಾತಿಗಳ ದಬ್ಬಾಳಿಕೆ ಮತ್ತೆ ಮತ್ತೆ ನಡೆಯುತ್ತದೆ ಎಂದು ಎಲ್ಲರೂ ಒಟ್ಟಾದರು. ಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿರುವ ಎಲ್ಲಾ ಗಂಟಿಚೋರರು ಒಂದಾದರು. ಈ ಘಟನೆಯ ವಿರುದ್ಧ ಹೋರಾಟ ತೀವ್ರವಾಯಿತು. ಬಸವರಾಜ ಸೂಳಿಬಾವಿ ಮೊದಲಾದ ಹೋರಾಟಗಾರರು ಇದಕ್ಕೊಂದು ಚಳವಳಿಯ ರೂಪ ನೀಡಿದರು. ಈ ಸಂದರ್ಭದಲ್ಲಿ ಬಾಲೇಹೊಸೂರು ದಲಿತ ದೌರ್ಜನ್ಯ ವಿರೋಧಿ ಒಕ್ಕೂಟವೊಂದು ಆಯೋಜನೆಯಾಯಿತು.
ಡಾ. ಅರುಣ್ ಜೋಳದಕೂಡ್ಲಿಗಿ ಬರೆಯುವ ಗಂಟಿಚೋರರ ಕಥನ ಸರಣಿಯಲ್ಲಿ ಹೊಸ ಬರಹ

ಇತರೆ ಸಮುದಾಯಗಳಿಗೆ ಹೋಲಿಸಿದೆ ಈ ಸಮುದಾಯದಲ್ಲಿ ತುಂಬಾ ಹಿಂದೆಯೇ ಸಂಘಟನೆಯ ಮನೋಭಾವ ಬೆಳೆದಿದೆ. ಇದಕ್ಕೆ ಮುಖ್ಯ ಕಾರಣ ಈ ಸಮುದಾಯಕ್ಕೆ ಸಿಕ್ಕ ಶಿಕ್ಷಣ ಮತ್ತು ಉದ್ಯೋಗ. ಸೆಟ್ಲಮೆಂಟಿನ ವಾಸದ ಕಾರಣಕ್ಕೆ ಈ ಸಮುದಾಯದ ಮೊದಲ ತಲೆಮಾರು 20-30 ರ ದಶಕದಲ್ಲಿಯೇ ಶಿಕ್ಷಣಕ್ಕೆ ತರೆದುಕೊಂಡಿತು. ಹೀಗಾಗಿ ಸಂಘಟನೆಯ ಜಾಗೃತಿಯೂ ಕೂಡ ಬೇಗನೇ ಮೂಡಿತು. ಗಂಟಿಚೋರ ಸಂಘಟನೆಯ ರಾಷ್ಟ್ರಮಟ್ಟದ ಚಾರಿತ್ರಿಕವಾದ ಮೂರು ಸಮಾವೇಶಗಳು 1988 ರಲ್ಲಿ ಸೊಲ್ಲಾಪುರ, ಗೋಕಾಕ ಮತ್ತು ಗದಗನಲ್ಲಿ ನಡೆಯುತ್ತವೆ. ಈ ಸಮಾವೇಶಗಳು ಗಂಟಿಚೋರ್ ಸಮುದಾಯದ ಸಂಘಟನೆಗೆ ಭದ್ರ ಬುನಾದಿಯನ್ನು ಹಾಕಿದವು. ಆದರೆ ಈ ಮಟ್ಟದ ಸಮಾವೇಶಗಳು ಆ ನಂತರ ಮತ್ತೆ ಜರುಗಲಿಲ್ಲ. ಈಚೆಗೆ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನ ಸಂಸ್ಥೆಯು ಗಂಟಿಚೋರ್ ಸಮುದಾಯದ ಬಗ್ಗೆ ಬೆಂಗಳೂರಿನಲ್ಲಿ ಆಯೋಜಿಸಿದ ಕಾರ್ಯಕ್ರಮಕ್ಕೆ ಗಂಟಿಚೋರ್ ಸಮುದಾಯ ಹೆಚ್ಚಿನ ಮಟ್ಟದಲ್ಲಿ ಸೇರಿತ್ತು.

ಪುಣೆಯಲ್ಲಿ `ಭಾರತೀಯ ಗಂಟಿಚೋರ್ (ಠಕಾರಿ) ಸಮಾಜ ಮುಂಡಲಾ’ ಸಂಘಟನೆ 1988 ರಲ್ಲಿಯೇ ರಚನೆಯಾಗಿತ್ತು. ಇದರ ಅಧ್ಯಕ್ಷರಾಗಿದ್ದ ಭೀಮರಾವ ಜಾದವ್ ದೇಶಮಟ್ಟದಲ್ಲಿ ಗಂಟಿಚೋರ್ ಸಮುದಾಯವನ್ನು ಸಂಘಟಿಸುವ ಪ್ರಯತ್ನ ಮಾಡುತ್ತಿದ್ದರು. ಸೊಲ್ಲಾಪುರದಲ್ಲಿ ನಡೆದ ಮೊದಲ ವಿಮುಕ್ತ ಬುಡಕಟ್ಟುಗಳ ಅಧಿವೇಶನವನ್ನು ಈ ಸಂಘಟನೆ ಆಯೋಜಿಸಿತ್ತು. ಈ ಅಧಿವೇಶನಕ್ಕೆ ಅಖಿಲಭಾರತದ ಗಂಟಿಚೋರ್ ಸಮುದಾಯದ ಪ್ರಮುಖರು ಒಂದೆಡೆ ಸೇರುವಂತಾಯಿತು. ಇದು ರಾಷ್ಟ್ರಮಟ್ಟದಲ್ಲಿ ಗಂಟಿಚೋರ್ ಸಮುದಾಯವನ್ನು ಒಗ್ಗೂಡಿಸುವ ಪ್ರಯತ್ನದ ಭಾಗವಾಗಿಯೇ ನಡೆಯಿತು.


ಸಂಘಟನೆಯ ಆರಂಭಿಕ ಹಂತ:

ಕರ್ನಾಟಕದ ಚೌಕಟ್ಟಿನಲ್ಲಿ ನೋಡುವುದಾದರೆ, ಗಂಟಿಚೋರ ಸಮುದಾಯದ ಸಂಘಟನೆ ಆರಂಭವಾದದ್ದು ಗೋಕಾಕಿನಲ್ಲಿ. ಈ ಸಮುದಾಯದ ಆರಂಭಿಕ ಸಂಘಟನೆಯ ಕೇಂದ್ರವೇ ಗೋಕಾಕ. ಈ ಸಂಘಟಿತ ಮನೋಭಾವ ಬೆಳೆಯಲು ಕಾರಣ ಗೋಕಾಕಿನಲ್ಲಿ ಕಲ್ಲೋಳಿ ಶೆಟ್ಯಾ ಗೋವಿಂದ (ಕೆ.ಎಸ್.ಹಂದಿಗುಂದ) ಅವರು 1934 ರಲ್ಲಿ ಜನಿಸಿದ ಅವರು ಸೆಟ್ಲಮೆಂಟಿನಲ್ಲಿಯೇ ಶಿಕ್ಷಣ ಪಡೆದಿದ್ದರು. ನಂತರ ಹಾಸ್ಟೆಲುಗಳಲ್ಲಿ ಓದಿ ಕೆ.ಎಸ್. ಹಂದಿಗುಂದ ಅವರು ಇಂಗ್ಲೀಷ್ ಮೇಜರಿನಲ್ಲಿ ವಿದ್ಯಾಭ್ಯಾಸ ಮಾಡಿ ಎಂ.ಎ., ಬಿ.ಇಡಿ ಮಾಡಿ ಶಿಕ್ಷಕರಾಗಿದ್ದರು. ಹೀಗೆ ನೇಮಕಗೊಂಡ ಇವರು ತಮ್ಮ ಸಮುದಾಯವನ್ನು ಒಗ್ಗಟ್ಟಾಗಿಸಬೇಕು, ಇವರನ್ನು ಸಂಘಟಿಸಬೇಕು ಎಂಬ ಇಚ್ಚಾಶಕ್ತಿಯಿಂದ ತಮ್ಮ ಸಮುದಾಯವನ್ನು ಸಂಘಟಿಸುವ ಪ್ರಯತ್ನ ಮಾಡಿದರು. ಇದಕ್ಕಾಗಿ ನಿರಂತರವಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳ ಜತೆ ಪತ್ರವ್ಯವಹಾರಗಳನ್ನು ಮಾಡುತ್ತಾರೆ. ಅಂತೆಯೇ ಸಮುದಾಯದ ಇತರೆ ಶಿಕ್ಷಿತರನ್ನು ಉದ್ಯೋಗಸ್ತರನ್ನು ಒಂದೆಡೆ ಕಲೆಹಾಕಿದರು. ಹೀಗೆ ಸಂಘಟಿಸಿದ ಕಾರಣ ಗೋಕಾಕಿನಲ್ಲಿ ರಾಜ್ಯಮಟ್ಟದ ಸಮಾವೇಶ ಆಯೋಜನೆಗೊಳ್ಳಲು ಸಾಧ್ಯವಾಯಿತು.

ಈ ಅಧ್ಯಯನದ ಕ್ಷೇತ್ರಕಾರ್ಯದಲ್ಲಿ ಕೆ.ಎಸ್. ಹಂದಿಗುಂದ ಅವರನ್ನು ಸಂಪರ್ಕಿಸಲಾಯಿತು. ಸಮುದಾಯದ ಪರವಾದ ಅವರ ಕಾಳಜಿ ಇಳಿ ವಯಸ್ಸಿನಲ್ಲಿಯೂ ಬತ್ತದಿರುವಂತೆ ಕಂಡಿತು. ಅಗತ್ಯ ದಾಖಲೆಗಳನ್ನು ಒದಗಿಸಿದ್ದರು. ಸದ್ಯ ಈ ಅಧ್ಯಯನ ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪುಸ್ತಕ ಪ್ರಕಟವಾಗುವುದನ್ನು ಕಾಯುವುದಾಗಿ ಹೇಳಿದ್ದರು. ಆದರೆ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನ ಸಂಸ್ಥೆಯು ಗಂಟಿಚೋರ್ಸ್ ಸಮುದಾಯವನ್ನೊಳಗೊಂಡಂತೆ ಸಮಾವೇಶವನ್ನು ಆಯೋಜಿಸಿದ ಮಾರ್ಚ್ 16 2016 ರಂದು ಅವರು ನಮ್ಮನ್ನಗಲಿದರು. ಈ ಕಾರಣಕ್ಕಾಗಿ ಗೋಕಾಕ ಭಾಗದ ಸಮುದಾಯದ ಸದಸ್ಯರು ಬೆಂಗಳೂರಿನ ಸಮಾವೇಶಕ್ಕೆ ಹಾಜರಾಗಲಾಗಲಿಲ್ಲ. ಸದ್ಯಕ್ಕೆ ಕೆ.ಎಸ್. ಹಂದಿಗುಂದ ಅವರ ಮಗ ವಸಂತ ಹಂದಿಗುಂದ ಅವರೂ ಸಮುದಾಯ ಸಂಘಟನೆಯಲ್ಲಿ ಹೆಚ್ಚು ಕಾಳಜಿ ವಹಿಸಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ರಾಜ್ಯಮಟ್ಟದ ಸಮುದಾಯ ಸಂಘಟನೆಯಾದ `ಕರ್ನಾಟಕ ರಾಜ್ಯ ಗಂಟಿಚೋರ್ಸ್ ಸಮಾಜದ ಕ್ಷೇಮಾಭಿವೃದ್ಧಿ ಸಂಘ’ದ ಉಪಾಧ್ಯಕ್ಷರಾಗಿ ಸಕ್ರಿಯವಾಗಿದ್ದಾರೆ.

ಮೊದಲ ಅಧಿವೇಶನ: ಸೊಲ್ಲಾಪುರ: 18 ಜೂನ್ 1988

ಈ ಅಧಿವೇಶನದಲ್ಲಿ ಬಿಜಾಪುರ ಜಿಲ್ಲಾ ಗಿರಣಿವಡ್ಡರ್ ಸಮಾಜ ಸಂಘದ ಅಧ್ಯಕ್ಷರಾದ ಶ್ರೀಮಂತ ಗಾಯಕವಾಡ, ಕಾರ್ಯದರ್ಶಿಯಾದ ಶಿವಾಜಿ ಗಾಯಕವಾಡ, ಉಪಾಧ್ಯಕ್ಷರಾದ ಕೃಷ್ಣಾಜಿ ಮಸೂತಿ ಅವರನ್ನು ಒಳಗೊಂಡಂತೆ ಸೊಲ್ಲಾಪುರದ ಮಾಜಿ ಮಹಾಪೌರರಾಗಿದ್ದ ಭೀಮರಾಮ ಜಾದವ್, ಸೊಲ್ಲಾಪುರದ ಗುನ್ಹೆಗಾರ ಅಧಿವೇಶನದ ಆಯೋಜಿಸಿದ ಸ್ಥಳೀಯ ಸಂಘಟನೆಯ ಅಧ್ಯಕ್ಷ ಭೋದಕ ನಗರಕರ್, ಕಾರ್ಯಾಧ್ಯಕ್ಷ ಪರುಶುರಾಮ ಜಾದವ ಮೊದಲಾದವರು ಈ ಅಧಿವೇಶನವನ್ನು ಆಯೋಜಿಸಿದ್ದರು. ಈ ಅಧಿವೇಶನದಲ್ಲಿ ಕರ್ನಾಟಕದ ಬಿಜಾಪುರ ಭಾಗದ ಗಂಟಿಚೋರ ಸಮುದಾಯ ಕ್ರಿಯಾಶೀಲವಾಗಿ ಭಾಗವಹಿಸಿತ್ತು.

ಸೊಲ್ಲಾಪುರದ ಸೆಟಲಮೆಂಟ್ ನಲ್ಲಿ ನಡೆದ ಈ ಅಧಿವೇಶನ `ವಿಮುಕ್ತಿ ಜನಾಂಗ (ಮಾಜಿ ಗುನ್ಹೆಗಾರ ಜನಾಂಗ) ಅಧಿವೇಶನವಾಗಿತ್ತು. ಇಲ್ಲಿ ಗಂಟಿಚೋರ್ ಸಮುದಾಯವೂ ಸೇರಿದಂತೆ ಇತರೆ ವಿಮುಕ್ತ ಬುಡಕಟ್ಟುಗಳನ್ನೂ ಈ ಅಧಿವೇಶನ ಒಳಗೊಂಡಿತ್ತು. ಆದಾಗ್ಯೂ ಸಂಘಟನೆಯ ಹಿಂದೆ ಗಂಟಿಚೋರ್ ಸಮುದಾಯದ ನಾಯಕರೇ ಪ್ರಮುಖ ಪಾತ್ರವಹಿಸಿದ್ದರು.

ಎರಡನೇ ಅಧಿವೇಶನ: ಗೋಕಾಕ್: 21 ಆಗಸ್ಟ್‌ 1988

ಕರ್ನಾಟಕದ ಮಟ್ಟಿಗೆ ಗಂಟಿಚೋರ ಸಮಾಜದ ರಾಜ್ಯಮಟ್ಟದ ಮೊದಲ ಅಧಿವೇಶನವು 21.8.1988 ರಲ್ಲಿ ಗೋಕಾಕ ಫಾಲ್ಸ್‍ನ ಸರಕಾರಿ ಹೊಲಿಗೆ ಹಾಲ್‍ನಲ್ಲಿ ನಡೆಯಿತು. ದೇಶಮಟ್ಟದಲ್ಲಿ ಇದು ಎರಡನೇ ಅಧಿವೇಶನವಾಗಿತ್ತು. ಈ ಅಧಿವೇಶನಕ್ಕೆ ಹೊರಡಿಸಿದ ಕರಪತ್ರ ಏ-5 ಸೈಜಿನ ನಾಲ್ಕು ಪುಟಗಳಲ್ಲಿದೆ. ಅತ್ಯಂತ ಶಿಸ್ತುಬದ್ಧವಾಗಿ ಸಮುದಾಯದ ಬಿಕ್ಕಟ್ಟುಗಳನ್ನು ಈ ಕರಪತ್ರದಲ್ಲಿ ನಮೂದಿಸಲಾಗಿದೆ. ಅಂತೆಯೇ ಸಂಶೋಧನಾತ್ಮಕವಾಗಿಯೂ ವರ್ತಮಾನದ ಅಗತ್ಯದಂತೆಯೂ ಇದೆ.

ಈ ಸಮಾವೇಶದ ಕರಪತ್ರದ ಆರಂಭಕ್ಕೆ, `ಪ್ರೀತಿಯ ಕರ್ನಾಟಕದ ಘಂಟಿಚೋರ ಜಾತಿಯ ಸಮಾಜ ಬಾಂದವರೆ. ಈಗ ತಮಗೆ ಗೋಕಾಕ ಫಾಲ್ಸ್ ಸಮಾಜ ಬಾಂದವರು ತಿಳಿಯ ಬಯಸುವುದೇನೆಂದರೆ, ನಮ್ಮ ಜಾತಿಗೆ ಹಲವಾರು ಹೆಸರುಗಳಿದ್ದೂ, ಕೇವಲ ಘಂಟಿಚೋರ ಅಂತಾ ರಿರ್ಕಾಡುಗಳಲ್ಲಿ ಬರೆಯಲ್ಪಟ್ಟ ಜನರಿಗೆ ಮಾತ್ರ ಸರ್ಕಾರದಿಂದ ಎಸ್.ಸಿ.ಜನಾಂಗಕ್ಕೆ ಸಿಗುವ ಸೌಲಭ್ಯಗಳು ಸಿಗುತ್ತವೆ. ಇನ್ನುಳಿದ ಅದರ ಪರ್ಯಾಯ ಜಾತಿಗಳಿಗೆ ಸಿಗುತ್ತಿಲ್ಲದ ಕಾರಣ, ನಾವೆಲ್ಲರೂ ಕೂಡಿಕೊಂಡು ಮಾಡಬೇಕಾದ ಕರ್ತವ್ಯವೇನೆಂಬುದನ್ನು ಈ ಸಮಯದಲ್ಲಿ ತಮ್ಮೆಲ್ಲರಿಗೂ ಈ ಜಾಹಿರಾತಿನ ಮೂಲಕ ನಮ್ಮ ಘಂಟಿಚೋರ ಸಮಾಜದ ಇತಿಹಾಸವನ್ನೇ ಸಂಕ್ಷಿಪ್ತವಾಗಿ ತಮ್ಮ ಮುಂದೆ ಇಡಬಯಸುತ್ತೇವೆ’ ಎಂದು ಹೇಳಿ ಮುಂದೆ ಸಮುದಾಯದ ಚಾರಿತ್ರಿಕ ಬೆಳವಣಿಗೆಗಳ ಬಗ್ಗೆ ಗಮನ ಸೆಳೆಯಲಾಗಿದೆ.

ಈ ಅಧಿವೇಶನದ ಅಧ್ಯಕ್ಷರು ಜಿ.ಡಿ.ಜಾದವ್, ಉಪಾಧ್ಯಕ್ಷರಾಗಿ ಜಿ.ಬಿ.ಪಾತ್ರೋಟ್ ಮತ್ತು ಬಿ.ಎಸ್.ಪಾತ್ರೋಟ, ಕಾರ್ಯದರ್ಶಿಯಾಗಿ ಕೆ.ಎಸ್.ಹಂದಿಗುಂದ ಅವರು, ಸಹ ಕಾರ್ಯದರ್ಶಿಯಾಗಿ ಜೆ.ಹೆಚ್.ಜಾದವ, ಖಜಾಂಚಿಯಾಗಿ ಎಂ.ಆರ್.ಪವಾರ ಅವರು ಇದ್ದು, ಒಟ್ಟು 30 ಜನ ಕಾರ್ಯಕರ್ತರ ಪಟ್ಟಿಯಿದೆ.  ಬಸವಣ್ಣೆಪ್ಪ ಸಿದ್ದಪ್ಪ ಅಂಕಲಿ. ದತ್ತು ಭೀಮರಾವ ಜಾದವ,  ಕೃಷ್ಣಪ್ಪ ಪರಪ್ಪ ಬಡಕುಂದ್ರಿ, ಬಿ.ಆರ್.ಹುಲುಕುಂದ, ಎಂ.ಎಸ್.ಡಬ್ಲೂ ಅವರುಗಳು ಸ್ವಾಗತಸಮಿತಿಯ ಅಧ್ಯಕ್ಷರಾಗಿದ್ದರು.

ಮೂರನೆ ಅಧಿವೇಶನ: ಗದಗ: 13 ನವೆಂಬರ್ 1988

ಗಂಟಿಚೋರ ಸಮುದಾಯದ ಸಂಘಟನಾತ್ಮಕ ಮೂರನೆ ಅಧಿವೇಶನವು ಗದಗಿನಲ್ಲಿ ನಡೆಯಿತು. 13 ನವೆಂಬರ್ 1988 ರಲ್ಲಿ ಗದಗಿನ ಮಾರುತಿ ದೇವಸ್ಥಾನದಲ್ಲಿ ಈ ಅಧಿವೇಶನವನ್ನು ಆಯೋಜಿಸಲಾಗಿತ್ತು. ಅಂದಿನ ವಿಧಾನಪರಿಷತ್ ಸದಸ್ಯರಾಗಿದ್ದ ಹೆಚ್.ಕೆ. ಪಾಟೀಲ ಅವರು ಅಧ್ಯಕ್ಷತೆ ವಹಿಸಿದ್ದರು. ಗದಗ ಜಿಲ್ಲಾ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿದ್ದ ಡಿ.ಆರ್.ಪಾಟೀಲ ಅವರು ಉದ್ಘಾಟನೆಯನ್ನು ನೆರವೇರಿಸಿದ್ದರು. ಅಂದಿನ ಗಂಟಿಚೋರ ಸಮುದಾಯದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿದ್ದ ಹೆಚ್.ಬಿ.ಹಂಸನೂರ ಅವರು ಈ ಅಧಿವೇಶನದ ನಿರ್ವಹಣೆಯನ್ನು ಮಾಡಿದ್ದರು. ಈ ಅಧಿವೇಶನದಲ್ಲಿ ಗಂಟಿಚೋರ ಸಮುದಾಯಕ್ಕೆ ಸರಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ಪಡೆಯುವ ಬಗ್ಗೆ ಜಾಗೃತಿ ಮೂಡಿಸಲಾಯಿತು. ಹಾಗೆ ಇಂತಹ ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಕ್ಕೊತ್ತಾಯಗಳ ಮನವಿಯನ್ನು ಸರಕಾರಕ್ಕೆ ಸಲ್ಲಿಸಲಾಯಿತು.

ಬಾಲೆಹೊಸೂರು ಕೊಲೆ ಪ್ರಕರಣ:

ಶಿರಹಟ್ಟಿ ತಾಲೂಕು ಬಾಲೆಹೊಸೂರಲ್ಲಿ ಸವರ್ಣೀಯರ ಗಲಬೆಯಲ್ಲಿ ಮಹಾಂತಪ್ಪ ಹನುಮಂತಪ್ಪ ಗುಡಗೇರಿ ಎನ್ನುವವರು ಕೊಲೆಯಾದರು. ಈ ಘಟನೆಯು ಇಡೀ ಗಂಟಿಚೋರ್ ಸಮುದಾಯವನ್ನು ಎಚ್ಚರಿಸಿತು. ನಾವು ಮೌನವಾಗಿದ್ದರೆ ಮೇಲುಜಾತಿಗಳ ದಬ್ಬಾಳಿಕೆ ಮತ್ತೆ ಮತ್ತೆ ನಡೆಯುತ್ತದೆ ಎಂದು ಎಲ್ಲರೂ ಒಟ್ಟಾದರು. ಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿರುವ ಎಲ್ಲಾ ಗಂಟಿಚೋರರು ಒಂದಾದರು. ಈ ಘಟನೆಯ ವಿರುದ್ಧ ಹೋರಾಟ ತೀವ್ರವಾಯಿತು. ಬಸವರಾಜ ಸೂಳಿಬಾವಿ ಮೊದಲಾದ ಹೋರಾಟಗಾರರು ಇದಕ್ಕೊಂದು ಚಳವಳಿಯ ರೂಪ ನೀಡಿದರು. ಈ ಸಂದರ್ಭದಲ್ಲಿ ಬಾಲೇಹೊಸೂರು ದಲಿತ ದೌರ್ಜನ್ಯ ವಿರೋಧಿ ಒಕ್ಕೂಟವೊಂದು ಆಯೋಜನೆಯಾಯಿತು.

ಈ ಒಕ್ಕೂಟವು ಒಂದು ಕರಪತ್ರವನ್ನು ಹೊರಡಿಸಿತು. `ಬಾಲೇ ಹೊಸೂರು ಗಂಟಿಚೋರ ದಲಿತ ಸಮುದಾಯದ ಜನರ ಮೇಲೆ ಹಲ್ಲೆ ನಡೆಸಿ ಮಾರಣಾಂತಿಕ ಹಲ್ಲೆಗೊಳಗಾದ ಮಹಾಂತಪ್ಪ ಹನುಮಂತಪ್ಪ ಗುಡಗೇರಿ ಅವರ ಸಾವಿಗೆ ಕಾರಣವಾದ ದಿಂಗಾಲೇಶ್ವರ ಸ್ವಾಮಿಯನ್ನು ಬಂಧಿಸುವ ಕುರಿತು ಮತ್ತು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದು ಮತ್ತು ಗಂಟಿಚೋರ ಸಮುದಾಯಕ್ಕೆ ಸೂಕ್ತ ರಕ್ಷಣೆ ಒದಗಿಸಲು ಆಗ್ರಹಿಸಿ ಬೆಳಗಾವಿಯ ಸುವರ್ಣ ಸೌಧದ ಎದುರು ಜುಲೈ 1 , 2015 ರಂದು ಪ್ರತಿಭಟನಾ ಧರಣಿ’ ಎಂದು ಆಗ್ರಹಿಸಿತ್ತು. ಈ ಕರಪತ್ರ ಉತ್ತರ ಕರ್ನಾಟಕದ ಹಲವು ಕಡೆ ಹಂಚಲ್ಪಟ್ಟಿತು. ಬೆಳಗಾವಿಯ ಸುವರ್ಣ ಸೌಧದ ಎದುರು ದೊಡ್ಡಮಟ್ಟದ ಧರಣಿಯೂ ನಡೆಯಿತು. ಆ ದಿನ ಸಾವಿರಾರು ಗಂಟಿಚೋರರು ಒಂದೆಡೆ ಸೇರಿದ್ದರು. ಈ ಘಟನೆಯ ನಂತರ ಸಮುದಾಯದ ಸಂಘಟನೆಯು ಚುರುಕಾಗಿದೆ. ಅದು ಮತ್ತಷ್ಟು ಎಚ್ಚೆತ್ತ ಧ್ವನಿಯಲ್ಲಿ ಸಮುದಾಯದ ಪರವಾದ ಹಕ್ಕೊತ್ತಾಯಗಳನ್ನು ಮಂಡಿಸುವ ಅಗತ್ಯವಿದೆ.

ಕರ್ನಾಟಕದ ಮುಖ್ಯಮಂತ್ರಿಗೆ ಪತ್ರ

ಸಂಘಟನೆಯ ಕ್ರಿಯಾಶೀಲತೆ ಒಂದೆಡೆ ಇದ್ದರೆ, ವೈಯಕ್ತಿಕ ನಲೆಯಲ್ಲಿ ಸಮುದಾಯಕ್ಕೆ ನೆರವಾಗುವ ಕೆಲಸವನ್ನು ಕೆಲವರು ವೈಯಕ್ತಿಕ ಆಸಕ್ತಿ ಮತ್ತು ಕಾಳಜಿಯಿಂದ ಮಾಡುತ್ತಾರೆ. ಬಿಜಾಪುರದ ಕೆ.ಎಸ್. ಹಂದಿಗುಂದ ಅವರು ಸಮುದಾಯದ ಐಡೆಂಟಿಟಿಗೆ ಸಂಬಂಧಿಸಿದಂತೆ 3.5.2015 ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯನ್ನು ಒಳಗೊಂಡಂತೆ ಕೇಂದ್ರದ ಹೋಮ್ ಮಿನಿಸ್ಟರ್ ಮತ್ತು ರಾಷ್ಟ್ರೀಯ ಅಲೆಮಾರಿ ಅರೆಅಲೆಮಾರಿ ಬುಡಕಟ್ಟುಗಳ ಕಮೀಷನ್ (ಎನ್.ಸಿ.ಡಿ.ಎನ್.ಟಿ) ನ ಚೇರ್ ಮನ್ ಅವರಿಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಗಂಟಿಚೋರ್ಸ್ ಸಮುದಾಯದ ಸಮನಾಂತರ ಪದಗಳನ್ನು ಪರಿಗಣಿಸುವ ಬಗ್ಗೆ ಚಾರಿತ್ರಿಕ ದಾಖಲೆಗಳನ್ನು ಜೊತೆಗೆ ಸೇರಿಸಿದ್ದರು. ನಂತರದಲ್ಲಿ ಇದೇ ಮನವಿಯನ್ನು ಗೋಕಾಕದ ಶಿವಾಜಿ ಪಾತ್ರೋಟ ಅವರು ಮರು ಮನವಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಿಂದ 13.07.2016 ರಂದು ಪತ್ರವೊಂದು ಬಂದಿದೆ. ಗಂಟಿಚೋರ ಸಮುದಾಯದ ಸಮಾನಾಂತರ ಪದಗಳನ್ನು ಪರಿಗಣಿಸುವ ಬಗ್ಗೆ ಚರ್ಚಿಸಲು ಸಮಾಜ ಕಲ್ಯಾಣ ಇಲಾಖೆಯ ಸಚಿವಾಲಯಕ್ಕೆ ಬರೆಯಲಾಗಿದೆ.

ಪ್ರಧಾನಿ ನರೇಂದ್ರ ಮೋದಿಗೆ ಪತ್ರ

ವೈಯಕ್ತಿಕ ನೆಲೆಯಲ್ಲಿ ಸಮುದಾಯದ ಅಭಿವೃದ್ಧಿಯ ಬಗ್ಗೆ ಕಾಳಜಿವಹಿಸುವವರಲ್ಲಿ ಬಿಜಾಪುರದಲ್ಲಿ ನೆಲೆಸಿದ ಸಮುದಾಯದ ಹಿರಿಯರಾದ ನಿವೃತ್ತ ಸಹಾಯಕ ನಿರ್ದೇಶಕರಾದ ಡಿ.ಎಪ್. ಸೀತೋಳೆ ಅವರು ಒಬ್ಬರು. ಇವರು ಪಾರ್ಲಿಮೆಂಟಿನಲ್ಲಿ ಅಪರಾಧಿ ಬುಡಕಟ್ಟುಗಳ ಬಗ್ಗೆ ಚರ್ಚೆ ಮಾಡಲು, ಅವರ ಸಮಸ್ಯೆಗಳ ಬಗ್ಗೆ ಪಾರ್ಲಿಮೆಂಟು ಎಚ್ಚರಗೊಳ್ಳಲಿ ಎನ್ನುವ ಪತ್ರವನ್ನು ಬರೆದಿದ್ದಾರೆ. ಈ ಪತ್ರದಲ್ಲಿ ಸಂಕ್ಷಿಪ್ತವಾಗಿ ಅಪರಾಧಿ ಬುಡಕಟ್ಟುಗಳ ಸಂಕಷ್ಟಗಳ ಬಗ್ಗೆ ಗಮನಸೆಳೆದಿದ್ದಾರೆ. ಈ ಪತ್ರವನ್ನು ಸೀತೋಳೆ ಅವರು 20.07. 2015 ರಲ್ಲಿ ಬರೆದಿದ್ದರೆ, ಪ್ರಧಾನಿ ಮೋದಿ ಅವರಿಂದ 28.07.2015 ರಂದು ಸೀತೋಳೆಯವರಿಗೆ ಮರುಪತ್ರ ಬರೆದಿದ್ದಾರೆ. ಈ ಪತ್ರದ ಸಂಗತಿಯ ಬಗ್ಗೆ ಕ್ರಮವಹಿಸುವ ಬಗ್ಗೆ ಸೋಷಿಯಲ್ ಜಸ್ಟೀಸ್ ಅಂಡ್ ಎಂಪಾವರ್ ಮೆಂಟ್ ಸಚಿವಾಲಯಕ್ಕೆ ಕಳಿಸಿಕೊಡಲಾಗಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ ಈ ಸಚಿವಾಲಯದಿಂದ ಈ ತನಕ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.