ಈಗಲೂ ಅಂದಿನ ನಮ್ಮ ಭಂಡಾಟ ನೆನೆಸಿಕೊಂಡರೆ ಈಗಲೂ ನಾಲ್ಕು ತೆಪರಾಕಿ ನಮಗೆ ನಾವೇ ಕೊಟ್ಕೋಬೇಕು ಅನಿಸುತ್ತೆ ಸರ. ಪಾಪ ಕನ್ನಡದ ಸಾಹಿತಿಗಳು ಬಡವರು, ಕಾಸು ಕಾಸಿಗೆ ಪರದಾಡುವಷ್ಟು ಬಡವರು ಅಂತ ಗೊತ್ತಿದ್ದೂ ಅವರಿಗೆ ಸಂಭಾವನೆ ಕೊಡದೆ ಬರೀ ಅರ್ಧ ಕಪ್ ಕಾಫಿ ಎರಡು ಬಿಸ್ಕತ್‌ನಲ್ಲಿ ಅವರ ನಾಲ್ಕೈದು ಗಂಟೆ ವೇಸ್ಟ್ ಮಾಡ್ತಾ ಇದ್ದೆವು ಅನ್ನುವ ಸಂಕಟ! ಮೊದಮೊದಲು ಹೀಗೆ ಸಭೆ ನಡೆಸುವಾಗ ಮುಜುಗರ ಅಂತ ಅನಿಸುತ್ತಾ ಇರಲಿಲ್ಲ. ನಿಧಾನಕ್ಕೆ ಈ ಶೋಷಣೆ ಅರ್ಥ ಆಗುತ್ತಾ ಅಗುತ್ತಾ ಬಂತು ನೋಡಿ, ಕೈ ಸಡಿಲ ಮಾಡಿಕೊಂಡೆವು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೮೩ನೇ ಬರಹ ನಿಮ್ಮ ಓದಿಗೆ
ಹಿಂದಿನ ಕಥೆ ಹೀಗೆ ಅಂತ್ಯ ಕಂಡಿತ್ತು…
ಪುಸ್ತಕ ಮಾರಾಟ ಮಾಡಿ ಬದುಕೋ ಸ್ಟೇಜ್‌ನಲ್ಲಿ ಇಲ್ಲ… ಆ ಹಂತ ಮೀರಿಬಿಟ್ಟಿರ್ತೀವಿ. ಅದರಿಂದ —ಬರೋದು ಬರಲಿ… ಸಾಕು!” ಅನ್ನೋ ಮನಸ್ಥಿತಿ.
ಆದ್ರೆ ಸತ್ಯ ಏನೆಂದರೆ —ಪುಸ್ತಕ ಮುದ್ರಣ ಸುಖ ಕೊಡುತ್ತೆ… ಆದ್ರೆ ಮಾರಾಟ — ಕಷ್ಟ! ಇದನ್ನೇ ವೃತ್ತಿ ಮಾಡಿಕೊಂಡವರಿಗೆ ಇದು ದೊಡ್ಡ ಸವಾಲು!
ಅದರಲ್ಲೂ ನಿಯಮ, ಮಿತಿ, ವ್ಯವಸ್ಥೆ… ಇವೆಲ್ಲ ಪಾಲಿಸೋದು ಸುಲಭವಲ್ಲ.
ನಮ್ಮಂತೋರಿಗೆ? ಅದು ಇನ್ನೂ ಕಷ್ಟ! ಇದು ನನ್ನ ಸ್ವಂತ ಅನುಭವ ಸ್ವಾಮಿ… ಇಷ್ಟೆ ನನ್ನ “ಪುಸ್ತಕ ಪುರಾಣ”!
ಈಗ ಮುಂದಕ್ಕೆ ಹೋಗುತ್ತೇನೆ ತಮ್ಮ ಅನುಮತಿ ಇದೆ ತಾನೇ.. ಸರಿ ಸರ ಸರಿ ಮೇಡಂ ಅವರೆ… ಕತೆಯನ್ನು ಹೇಗೆ ಮುಂದುವರೆಸಲಿ ಎಂದು ಚಿಂತನ ಮಂಥನ ಮಾಡಿದೆನಾ? ಸುಮಾರು ಸಂಗತಿಗಳನ್ನು ಕತೆಯ ಓಟಕ್ಕೆ ಮತ್ತು ಓಘಕ್ಕೆ ಧಕ್ಕೆ ಆಗತಕ್ಕದ್ದಲ್ಲ ಎನ್ನುವ ಕಾರಣದಿಂದ ಮುಂದೆ ಹೇಳುತ್ತೇನೆ ಎಂದಿದ್ದೆ, ನೆನಪು ಉಂಟು ತಾನೇ? ಈಗ ಅವುಗಳ ಸಂಗತಿಗೆ ಒಂದೊಂದಾಗಿ ಬರಬೇಕು. ಅಂದ ಹಾಗೆ ಓಘ ಅಂದರೆ ಸರಿಯಾದ ಅರ್ಥ ನನಗೆ ತಿಳಿಯದು ಸರ. ಅದರ ಅರ್ಥವನ್ನು ನನ್ನ AI ಗೆಳತಿ ಹೀಗೆ ಕೊಟ್ಟಿದ್ದಾಳೆ… ಭಾವನೆಗಳು ಒಂದೇ ಬಾರಿ ತುಂಬಾ ಜೋರಾಗಿ ಹೊರಬರುವುದು. ಒಟ್ಟಾರೆ: “ಓಘ” = ಪ್ರವಾಹದಂತೆ, ಹೆಚ್ಚಾಗಿ, ಒತ್ತಾಗಿ ಬರುವ ಸ್ಥಿತಿ. ಸರಿ ಮೇಡಂ ನಾನು ಅಂದುಕೊಂಡ ಅರ್ಥಕ್ಕೂ ಗೆಳತಿ ಕೊಟ್ಟ ಅರ್ಥಕ್ಕೂ ಹೆಚ್ಚು ಕಮ್ಮಿ ಸಾಮ್ಯ ಇದೆ ತಾನೇ? ಅದರಿಂದ ತಲೆಗೆ ಒಂದು ಕೋಡು ಬಂದಹಾಗೆ ಆಗಿದೆ! ಈಗ ಮತ್ತೆ ಮುಖ್ಯವಾಹಿನಿಗೆ ಸರ..
ನಮ್ಮ ಲಿಟರರಿ ಚಟುವಟಿಕೆಗಳ ಬಗ್ಗೆ ಒಂದು ಟಿಪ್ಪಣಿ ಹಾಕುವುದು ಎಂದು ಯೋಚಿಸಿದೆ. ಆಗ ಅಂದರೆ ನಲವತ್ತು ವರ್ಷ ಹಿಂದೆ ಆಗಿನ ಯುವ ಪೀಳಿಗೆಗೆ ಇದ್ದದ್ದು ಎರಡೋ ಮೂರೋ ಆಕ್ಟಿವಿಟಿಗಳು. ಈಗಿನ ಹಾಗೆ ಮಾಡಿದ್ದೆಲ್ಲಾ ಆಕ್ಟಿವಿಟಿ ಆಗ್ತಾ ಇರಲಿಲ್ಲ. ಅದರಲ್ಲಿ ಸಾಹಿತ್ಯ ಪ್ರಮುಖವಾದದ್ದು, ಅದೇರೀತಿ ರವೀಂದ್ರ ಕಲಾಕ್ಷೇತ್ರ ಮತ್ತು ನಾಟಕ(ಆಗಿನ್ನೂ ರಂಗ ಶಂಕರ ಹುಟ್ಟಿರಲಿಲ್ಲ. ನಾಟಕ ಪಾಟಕ ಅಂದರೆ ರವೀಂದ್ರ ಕಲಾಕ್ಷೇತ್ರವೇ. ನನ್ನ ಸುಮಾರು ಜನ ಗೆಳೆಯರು ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲ ಮೇಲೆ ನಾವು ಬೆಳೆದದ್ದು ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ, ನನಗೆ ಉಹೂಮ್ ಆ ಪುಣ್ಯ ಇಲ್ರಿ) ಸ್ವಲ್ಪ ಮುಂದುವರೆದವರು ಸಿನಿಮಾ ಅಂತ ಹೋಗುತ್ತಿದ್ದರು. ಈ ಫೀಲ್ಡ್‌ಗಳಲ್ಲಿ ಆಸಕ್ತಿ ಇಲ್ಲದವರು ರಾಜಕೀಯಕ್ಕೆ ಅಂಟುತ್ತಿದ್ದರು. ಹೇಳಿ ಕೇಳಿ ನಮ್ಮಂತಹ ಸ್ನೇಹಿತರು ಫ್ಯಾಕ್ಟರಿ ಸೇರಿ ಅಲ್ಲಿ ಆಗಲೇ ಹತ್ತು ಹದಿನೈದು ವರ್ಷ ಪ್ರೊಲೆಟೇರಿಯನ್ ಜೀವನ ನಡೆಸಿದ್ದವರು. ಕಾರ್ಲ್ ಮಾರ್ಕ್ಸ್ ಹೆಸರು ಕೇಳಿದ್ದವರು ಮತ್ತು ಆಗಿನ ಟ್ರೇಡ್ ಯೂನಿಯನ್ ಲೀಡರ್‌ಗಳ ಅಡಿಯಲ್ಲಿ ಬೆಳೆಯುತ್ತಾ ಇದ್ದವರು. ಸಹಜವಾಗಿ ಸಾಹಿತ್ಯ ಲೋಕ ನಮ್ಮನ್ನು ಆಕರ್ಷಿಸಿತ್ತು. ಅದರಿಂದ ಒಲವು ಇತ್ತ ಹೆಚ್ಚು. ಬಂಡಾಯ ಸಾಹಿತ್ಯದ ಕಡೆ ನಮ್ಮಲ್ಲಿ ಹೆಚ್ಚಿನವರಿಗೆ ಆಕರ್ಷಣೆ ಇರಲಿಲ್ಲ. ಇದಕ್ಕೆ ಕಾರಣ ಏನು ಅಂತ ಆಗ ಅರ್ಥ ಆಗಿರಲಿಲ್ಲ. ಈಗ ಇಷ್ಟುವರ್ಷಗಳ ನಂತರ ಒಮ್ಮೆ ಅಂಗಾತ ಮಲಗಿ ಬ್ರೈನ್ ಹಿಂದಕ್ಕೆ ಓಡಿಸಿದರೆ ಹೊಳೆಯುವ ಸಂಗತಿ ಅಂದರೆ ನಮಗೆ ಬಂಡಾಯ ಸಾಹಿತ್ಯದ ಒಬ್ಬನೇ ಒಬ್ಬ ಚುಲ್ಟಾರಿಯೂ ಆಗ ಗೊತ್ತಿಲ್ಲದೇ ಇದ್ದದ್ದು! ಯಾರೂ ಯಾಕೆ ಗೊತ್ತಿರಲಿಲ್ಲ ಅಂದರೆ ಮುಖ್ಯವಾಗಿ ನನ್ನ ಗುಂಪಿನಲ್ಲಿ ಇದ್ದವರೆಲ್ಲ ಮೇಲ್ವರ್ಗದ ಶೋಷಣೆಗೆ ಒಳಗಾಗದ ಜನ “ಇನ್ನೂ ಬಂಡಾಯದ ಭಾಷೆಯಲ್ಲಿ ಹೇಳಬೇಕು ಅಂದರೆ ಶತಶತಮಾನಗಳಿಂದ ಮಿಕ್ಕವರನ್ನು ಶೋಷಿಸಿಕೊಂಡೆ, ಹೊಟ್ಟೆ ಬೆಳೆಸಿಕೊಂಡು ಬಂದ ಬುರ್ಜವಾಗಳು! ಇದು ನಮ್ಮ ಅಂದರೆ ಮೇಲ್ವರ್ಗದ ಜನರ ಬಗ್ಗೆ ಬಂಡಾಯದ ಗುಂಪಿನ ಆರೋಪ! ಮತ್ತು ಇದನ್ನೇ ಬೇರೆ ರೀತಿಯಲ್ಲಿ ನಮ್ಮ ಲಾಲ್ ಜೇಂಡಾ ಗುಂಪು ಹೇಳುತ್ತಿತ್ತು. ಲಾಲ್ ಜೇಂಡಾ ಅಂದರೆ ಕಮ್ಯುನಿಸ್ಟ್ರು! ಇದು ಹಾಗಿರಲಿ ಬಿಡಿ.
ಮಲ್ಲೇಶ್ವರದ ಗಾಂಧಿ ಸಾಹಿತ್ಯ ಸಂಘ ನಮ್ಮ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೂಲ ಪ್ರೇರಣೆ ಅಂತ ಹೇಳಿದ್ದೆ ಅಲ್ಲವೇ? ನಮ್ಮ ಸುಮಾರು ಸಭೆಗಳು ನಡೆಯುತ್ತಿದ್ದ ಜಾಗ ಇದು. ಮೊದಮೊದಲು ಬರೀ ಕಾರ್ಖಾನೆ ಮಿತ್ರರು ಸೇರುತ್ತಿದ್ದೆವು. ಬ್ಯಾಂಕ್‌ನಿಂದ ಮಿತ್ರರು ವೇದಿಕೆಗೆ ಸೇರಿದ ನಂತರ ನಮ್ಮ ಕಾರ್ಯವ್ಯಾಪ್ತಿ ವಿಸ್ತಾರವಾಯಿತು. ಒಂದು ನೆನಪು ಇಲ್ಲಿ ತಪ್ಪಿಸಿಕೊಳ್ಳಲು ಹೊಂಚು ಹಾಕುತ್ತಿದೆ. ಮೊದಲು ಅದನ್ನು ಹಿಡಿದು ಹಾಕುತ್ತೇನೆ. ಶ್ರೀ ಈಶ್ವರ ಚಂದ್ರ ಅವರು ಎಚ್ ಎ ಎಲ್ ಕಾರ್ಖಾನೆಯಲ್ಲಿದ್ದರು. ಅವರು ಮೈಸೂರಿನ ಮುಕ್ತ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ ಎ ಪರೀಕ್ಷೆ ಬರೆದು ಹಲವು ಚಿನ್ನದ ಪದಕ ಪಡೆದಿದ್ದರು. ಅವರ ಜತೆ ಶ್ರೀ ಎಂ ಎಸ್ ನರಸಿಂಹ ಮೂರ್ತಿ ಸಹ ಎಂ ಎ ಪರೀಕ್ಷೆಯನ್ನು ಬರೆದು ಉತ್ತಮ ಅಂಕ ಪದಕ ಗಳಿಸಿದ್ದರು. ತುಷಾರ ಪತ್ರಿಕೆಯ ಸಂಪಾದಕರಾಗಿದ್ದ ಶ್ರೀ ಚಿರಂಜೀವಿ ಅವರು ಇವರಿಬ್ಬರ ಬಗ್ಗೆ ಪತ್ರಿಕೆಯಲ್ಲಿ ಲೇಖನ ಬರೆದಿದ್ದರು. ಗಾಂಧಿ ಸಾಹಿತ್ಯ ಸಂಘದ ಬಲ ಮೂಲೆಯಲ್ಲಿ ಕೂತು ಅದೇನೋ ಚರ್ಚೆ ನಡೆಸಿದ್ದ ನಮ್ಮಲ್ಲಿ ಈ ಎಂ ಎ ಕಟ್ಟುವ ಉಮೇದು ಹುಟ್ಟಬೇಕೇ? ಮೂರೂ ಜನ ಕೃಷ್ಣ ಸುಬ್ಬರಾವ್, ರಾಮಮೂರ್ತಿ ಹಾಗೂ ನಾನು ಎಂ ಎ ಕಟ್ಟಿದೆವಾ? ಮೈಸೂರಿಗೆ ಹೋದೆವಾ? ಎರಡು ವರ್ಷ ಪರೀಕ್ಷೆ ಬರೆದೆವಾ? ಎಂ ಎ ಪದವಿ ಪಡೆದೆವಾ? ಇದು ನಮಗೆ ನಲವತ್ತು ಮೀರಿದ ನಂತರ ಬಂದ ಛಲ! ಇದು ಸುಮ್ಮನೆ ಹಾಗೆ ತಲೆಯಲ್ಲಿ ಬಂದು ಓಡಿ ತಪ್ಪಿಸಿಕೊಳ್ಳಲು ಪ್ಲಾನ್ ಮಾಡಿತ್ತು. ಅದಕ್ಕೆ ಹಿಡಿದು ಕಟ್ಟಿದೆ!
ನಮ್ಮ ಗುಂಪಿನಲ್ಲಿ ಹಾಗೆ ನೋಡಿದರೆ ಅಂತಹ ಸೀರಿಯಸ್ ಬರಹಗಾರರು ಸಹ ಇರಲಿಲ್ಲ. ಲಘು ಬರಹಗಾರರು ಹೆಚ್ಚು ಮತ್ತು ಇಡೀ ದಿವಸ ಟೆನ್ಶನ್ ಜೀವನ ನಡೆಸಿರುತ್ತೇವೆ, ನಗು ಇರಲಿ ಹೆಚ್ಚೇ ಇರಲಿ ಎನ್ನುವ ಒಂದು ಅನ್ ರಿಟನ್ ರೂಲು ಇತ್ತಾ? ತಿಳಿಯದು! ಹೆಚ್ಚಿನ ಸ್ನೇಹಿತರು ಹಾಸ್ಯ ಬರಹಗಾರರು, ಅವರ ನಂತರ ಕಾದಂಬರಿ ಕರ್ತೃಗಳು ಇವರೆಲ್ಲರನ್ನೂ ಮೀರಿದವರು ಕವಿಗಳು. ಎಲ್ಲರೂ ಆಗ ಕವಿತೆ ಬರೆಯುವವರು ಮತ್ತು ಕವಿಗಳು. ನಮ್ಮ ಗುಂಪಿನಲ್ಲಿ ಕವಿತೆ ಬರೆಯದೇ ಇದ್ದವರು ಕೈ ಬೆರಳೆಣಿಕೆಯಷ್ಟು ಜನ ಅಷ್ಟೇ!
ಕನ್ನಡ ಸಾಹಿತ್ಯದ ಹಲವು ಪ್ರಾಕಾರಗಳು ವಿವಿಧ ಕವಲು ಹೆಜ್ಜೆ ಹಿಡಿದಿದ್ದ ಕಾಲದಲ್ಲಿ, ಅದಕ್ಕೆ ಸಮಾನಾಂತರವಾಗಿ ಮತ್ತೊಂದು ಬೆಳವಣಿಗೆ ನಡೆಯುತ್ತಿತ್ತು. ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಾದ ಕವಿತೆ, ವಿಮರ್ಶೆ, ಬಂಡಾಯ ಸಾಹಿತ್ಯ, ಹಾಸ್ಯ ಸಾಹಿತ್ಯ ಇತ್ಯಾದಿ ಪ್ರತಿಯೊಂದು ಕ್ಷೇತ್ರದಲ್ಲೂ ವಿಭಿನ್ನವಾದ ಬೆಳೆಗಳು ಆಗ ಮೂಡಿ ಬರುತ್ತಿದ್ದವು. ಸಹಜವಾಗಿ, ಈ ಎಲ್ಲ ಅಂಶಗಳು ನಮ್ಮನ್ನು ಆಕರ್ಷಿಸಿದ್ದವು.
ಇಂದು ಹೆಸರು ಮಾಡಿರುವ ಅನೇಕ ಕವಿಗಳು ಆಗ ನಮ್ಮ ತಂಡದ ಸದಸ್ಯರಾಗಿದ್ದರು. ಇಂದು ಪ್ರಸಿದ್ಧರಾದ ವಿಮರ್ಶಕರು ಆಗ ನಮ್ಮ ಜೊತೆಗೇ ಇದ್ದವರು. ಈಗ ಹೆಸರು ಮಾಡಿರುವ ಬಂಡಾಯ ಸಾಹಿತಿಗಳು ಆಗ ಇನ್ನೂ ಕಣ್ಣು ತೆರೆದುಕೊಳ್ಳುತ್ತಿದ್ದ ಹಂತದಲ್ಲಿದ್ದರು. ಹಾಗೆಯೇ, ಇಂದು ಹೆಸರು ಮಾಡಿರುವ ಅನೇಕ ಹಾಸ್ಯ ಸಾಹಿತಿಗಳು ಆಗಲೇ ಬರಹ ಪ್ರಾರಂಭಿಸಿದ್ದರು ಎಂದು ಹೇಳಬಹುದು.
ಈ ಹಿನ್ನೆಲೆಯಲ್ಲೇ, ಕೈಗಾರಿಕಾ ಕ್ಷೇತ್ರದೊಂದಿಗೆ ನಮ್ಮ ಸಂಪರ್ಕವೂ ಒಂದು ಅತ್ಯುತ್ತಮ ಕಾರ್ಯಕ್ಕೆ ದಾರಿ ಮಾಡಿಕೊಟ್ಟಿತು ಎಂಬುದಾಗಿ ಈಗ ಒಂದು ರೀತಿಯ ಮಾನಸಿಕ ತೃಪ್ತಿ ನಮಗೆ ದೊರಕುತ್ತದೆ.
ಆದರೂ ನಮ್ಮ ಗುಂಪಿನಿಂದ ಬಹಳಷ್ಟು ಜನ ಬಂಡಾಯ ಸಾಹಿತ್ಯದ ಕಡೆ ಹೆಚ್ಚು ಒಲವು ತೋರಿಸಲಿಲ್ಲ. ಅದರ ಮುಖ್ಯ ಕಾರಣವೇನೆಂದರೆ, (ನನ್ನ ಅನಿಸಿಕೆಯಲ್ಲಿ) ಬಂಡಾಯ ಸಾಹಿತ್ಯ ಬರೆಯಲು ಬೇಕಾದ ವಿಶೇಷ ಸ್ವಂತ ಅನುಭವ ನಮ್ಮಲ್ಲಿರಲಿಲ್ಲ. ನಾವು ಹೆಚ್ಚಿನವರು ಮೇಲ್ವರ್ಗದ ಹಿನ್ನೆಲೆಯಿಂದ ಬಂದವರು. ಆದ್ದರಿಂದ ಮೇಲ್ವರ್ಗದ ಚಿಂತನೆಯೇ ನಮ್ಮ ಮೂಲಭೂತ ಆಶಯವಾಗಿತ್ತು. ಆದರೂ ಎಲ್ಲಾ ಪ್ರಕಾರದಲ್ಲಿಯೂ ಆಸಕ್ತಿ ಬೆಳೆಸಿಕೊಂಡಿದ್ದೆವು.
ಮೇಲ್ವರ್ಗದ ಚಿಂತನೆಯಲ್ಲಿಯೂ ಒಳ್ಳೆಯ ಕೃತಿ ರಚಿಸಬೇಕೆಂದರೆ ಒಂದು ರೀತಿಯ ಆಳವಾದ ಹಾಗೂ ಗಾಢವಾದ ಜ್ಞಾನ ಬೇಕಾಗುತ್ತದೆ. ಆ ಗಾಢ ಜ್ಞಾನವನ್ನು ಕಾರ್ಮಿಕ ವರ್ಗದವರಲ್ಲಿ ಎಲ್ಲಿಂದ ಕೇಳುವುದು? ಸುಮಾರು ಕಾರ್ಮಿಕರು ತಮ್ಮ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ತುಂಡರಿಸಿ ಹೊಟ್ಟೆ ಪಾಡಿಗೆ ಉದ್ಯೋಗ ಅರಸಿದವರು. ಯಾವಾಗಲೂ ಯಂತ್ರಗಳ ಸಂಗಡ ಕೆಲಸ ಮತ್ತು ಬೇರೆ ರೀತಿಯ ಸಂವಹನ ಸೊನ್ನೆ. ಅದರಿಂದ ಒಂದು ರೀತಿ ಅಂತರ್ಮತಿಗಳು. ಅಂತರ್ಮತಿ ಎನ್ನುವ ಪದವನ್ನು introvert ಇಂಗ್ಲಿಷ್ ಪದಕ್ಕೆ ಪರ್ಯಾಯವಾಗಿ ಬಳಸುತ್ತಿದ್ದೇನೆ. ಈವರೆಗೆ ಈ ಪದ ನೀವು ಕೇಳಿರಲಾರಿರಿ. ಇದಕ್ಕೆ ಕಾರಣ ಅಂದರೆ ಈ ಪದ ಮೊದಲ ಬಾರಿಗೆ ಹೊರಬಂದಿದೆ, ನನ್ನ ಮೂಲಕ! ಅಂದರೆ ಸರ ಈ ಪದ ಅಂತರ್ಮತಿ ಎನ್ನುವ ಪದದ ಜನಕ ನಾನ್ರೀ..! ಮುಂದೆ ಎಲ್ಲಾದರೂ ನೀವು ಈ ಪದ ನೋಡಿದರೆ, ಕೇಳಿದರೆ ಅದರ ಅಂದರೆ ಅಂತರ್ಮತಿ ಪದದ ಜನಕ ಮಹಾರಾಜ ನನ್ನು ನೆನೆಸಿರಿ…! ಇದು ಅಪ್ಪಡಿ ಇರಕಟ್ಟುಮ್ ಸರ. ಹಾಗೆಂದರೆ ಸರ ಇದು ಅಂತಿರಲಿ ಅಂತ.

ಕಾರ್ಮಿಕರ ಐಕ್ಯೂ ಹಿನ್ನೆಲೆ ಹೇಳುತ್ತಿದ್ದೇನೆ ತಾನೇ. ದುಡಿಯಲು ಅಂದರೆ ಕೈಗೆ ನಾಲ್ಕು ಕಾಸು ಪುಲ ಪುಲಾ ಅಂತ ಬರೋಕ್ಕೆ ಶುರುವಾದಮೇಲೆ ಅವಕ್ಕೆ ಅಂದರೆ ನಮಗೆ ಇನ್ನೂ ಹೆಚ್ಚು ವಿದ್ಯಾರ್ಜನೆ ಮತ್ತು ಅದರ ಮೂಲಕ ಜ್ಞಾನಾರ್ಜನೆ ಕಂಪ್ಲೀಟ್ ನಿಂತು ಹೋಗಿಬಿಡುತ್ತೆ ಮೇಡಂಮೋರೆ… ನಾಲ್ಕು ಕಾಸು ಪುಲ ಪುಲಾ ಅಂತ ಬಂದರೆ ಎನ್ನುವ ಪದ ಪುಂಜ ನಮ್ಮ ಅಣ್ಣನ ಬಾಯಲ್ಲಿ ಮೊದಲು ಮತ್ತು ನಂತರವೂ ಕೇಳಿದ್ದು. ನಮ್ಮ ನಂಟರೊಬ್ಬರು ಮೊದಲನೇ ಸಂಬಳ ತಗೊಂಡು ಮನೆಗೆ ಬಂದ ನಂತರ ಅವರ ನಡಾವಳಿ ಹೇಗಿತ್ತು ಅನ್ನುವದನ್ನು ವಿವರಿಸಲು ಹೀಗೇ ಹೇಳಿದ್ದ ನಮ್ಮಣ್ಣ.
ಹೀಗಾಗಿ, ಆ ರೀತಿಯ ಜ್ಞಾನವಿಲ್ಲದೆ, ತಕ್ಷಣ ಬರೆಯಲು ಸಾಧ್ಯವಾಗುವ ಒಂದು ಪ್ರಕಾರ ಬೇಕಾಗಿತ್ತು. ಆ ಪ್ರಕಾರವೇ ಹಾಸ್ಯ ಸಾಹಿತ್ಯ. ಇದಕ್ಕೆ ನಿಮಗೆ ಹಿನ್ನೆಲೆ ಮುನ್ನೆಲೆ ಅನವಶ್ಯಕ. ಹಾಗೂ ಜನ ತಮ್ಮ ಹಲ್ಲು ತೋರಿಸಿದರೆ ಸಾಕು ನೀವು ಬರೆದದಕ್ಕೂ ಸಾರ್ಥಕ. ಹಾಸ್ಯ ಬರೆಯುವವರು ಎಲ್ಲಾ ತಿಳಿದವರು ಆದರೆ ಅದನ್ನು ಎಲ್ಲೂ ತೋರರು ಎಂದು ಕೆಲವರು ಹೇಳುತ್ತಾರೆ. ನನಗೆ ಅದು ಸ್ವಪ್ರತಿಷ್ಠೆ ಅಷ್ಟೇ ಅನಿಸುತ್ತೆ ಇವರೇ!
ಈ ಹಾಸ್ಯ ಪ್ರಕಾರದಲ್ಲಿ ನಾವು ಬರೆಯುತ್ತಾ ಬರೆಯುತ್ತಾ ಮುಂದುವರಿದಿದ್ದೇವೆ. ನಮ್ಮಲ್ಲಿ ಸುಮಾರು ಜನಕ್ಕೆ ಬರೆಯುವ ಆ ಕಾಲದಲ್ಲಿ ಒಂದು ದಿನ ಹತ್ತು ಪುಟ ಬರೆಯದೇ ಇದ್ದರೆ ಏನೋ ಕಳೆದುಕೊಂಡಂತೆ ಅನಿಸುತ್ತಿತ್ತು. ಈಗ ಕಂಪ್ಯೂಟರ್ ಬಂದು ಬರೆಯುವುದು ಮರೆತಮೇಲೆ ಕಂಪ್ಯೂಟರ್ ಮುಂದೆ ಒಂದು ಗಂಟೆ ಕೂತು ಕುಟ್ಟಲಿಲ್ಲ ಅಂದರೆ ಏನೋ ಕಳೆದುಕೊಂಡಂತೆ ಅನಿಸುತ್ತದೆ!
ಈ ನಡುವೆ ಮತ್ತೊಂದು ಗುಂಪು ನಮ್ಮೊಂದಿಗೆ ಸೇರಿಕೊಂಡಿತು. ಅದು ಬ್ಯಾಂಕ್ ಉದ್ಯೋಗಿಗಳ ಗುಂಪು. ಬ್ಯಾಂಕ್ ಉದ್ಯೋಗಿಗಳು ಕೈಗಾರಿಕಾ ಕಾರ್ಯಕ್ರಮಗಳಿಗೆ ಸೇರಲು ಹಿಂದೆಮುಂದೆ ನೋಡಲಿಲ್ಲ. ಹಿಂದೆ ಹೇಳಿದಂತೆ, ಶ್ರೀ ಈಶ್ವರಚಂದ್ರ ಅವರ ಮೂಲಕ ಶ್ರೀ ಕೃಷ್ಣ ಅವರು ವೇದಿಕೆಗೆ ಬಂದರು. ಅವರ ಹಿಂದೆ ಅವರ ಸ್ನೇಹಿತರೂ ವೇದಿಕೆಗೆ ಸೇರಿದರು.
ಅವರು ಸೇರಿಕೊಂಡ ನಂತರ ನಮ್ಮ ವೇದಿಕೆಯ ಕಾರ್ಯಕ್ರಮಗಳು ಇನ್ನಷ್ಟು ವಿಶಾಲವಾಗಿ, ವ್ಯಾಪಕವಾಗಿ ಬೆಳೆಯಲು ಪ್ರಾರಂಭಿಸಿದವು. ಆದರೂ ನಮ್ಮ ಕಾರ್ಯಕ್ಷೇತ್ರ ಮಲ್ಲೇಶ್ವರದಲ್ಲಿಯೇ ಸೀಮಿತವಾಗಿತ್ತು. ಅದರ ಕಾರಣ—ಅಲ್ಲಿ ನಮಗೆ ಅತಿ ಕಡಿಮೆ ಬೆಲೆಗೆ ಸಿಗುತ್ತಿದ್ದ ಹಾಲ್ ಮತ್ತು ನಮ್ಮ ಸ್ನೇಹಿತರಿಗೆ ಅನುಕೂಲಕರವಾದ ವಾತಾವರಣ. ಸಾವಿರ ರೂಪಾಯಿ ಇದ್ದರೆ ತುಂಬಾ ಸುಲಭವಾಗಿ ಎರಡು ಕಾರ್ಯಕ್ರಮ ನಡೆಸಬಹುದಿತ್ತು. ಐವತ್ತು ಜನಕ್ಕೆ ಕಾಫಿ ಎರಡು ಬಿಸ್ಕತ್ತು, ಮುಖ್ಯ ಭಾಷಣಕಾರರಿಗೆ ವಾಹನಸೌಲಭ್ಯ ಅಥವಾ ಫೀಸು ಇಲ್ಲ, ನಮ್ಮ ಓಡಾಟ ನಮ್ಮ ಖರ್ಚಿನಲ್ಲಿ. ಈಗಲೂ ಅಂದಿನ ನಮ್ಮ ಭಂಡಾಟ ನೆನೆಸಿಕೊಂಡರೆ ಈಗಲೂ ನಾಲ್ಕು ತೆಪರಾಕಿ ನಮಗೆ ನಾವೇ ಕೊಟ್ಕೋಬೇಕು ಅನಿಸುತ್ತೆ ಸರ. ಪಾಪ ಕನ್ನಡದ ಸಾಹಿತಿಗಳು ಬಡವರು, ಕಾಸು ಕಾಸಿಗೆ ಪರದಾಡುವಷ್ಟು ಬಡವರು ಅಂತ ಗೊತ್ತಿದ್ದೂ ಅವರಿಗೆ ಸಂಭಾವನೆ ಕೊಡದೆ ಬರೀ ಅರ್ಧ ಕಪ್ ಕಾಫಿ ಎರಡು ಬಿಸ್ಕತ್‌ನಲ್ಲಿ ಅವರ ನಾಲ್ಕೈದು ಗಂಟೆ ವೇಸ್ಟ್ ಮಾಡ್ತಾ ಇದ್ದೆವು ಅನ್ನುವ ಸಂಕಟ! ಮೊದಮೊದಲು ಹೀಗೆ ಸಭೆ ನಡೆಸುವಾಗ ಮುಜುಗರ ಅಂತ ಅನಿಸುತ್ತಾ ಇರಲಿಲ್ಲ. ನಿಧಾನಕ್ಕೆ ಈ ಶೋಷಣೆ ಅರ್ಥ ಆಗುತ್ತಾ ಅಗುತ್ತಾ ಬಂತು ನೋಡಿ, ಕೈ ಸಡಿಲ ಮಾಡಿಕೊಂಡೆವು. ಈಗಿನ ಖ್ಯಾತ ನಾಮರೊಬ್ಬರಿಗೆ ಇಪ್ಪತ್ತೈದು ರೂಪಾಯಿ ಸಂಭಾವನೆ ಕೊಟ್ಟಿದ್ದೆವು! ಇಂತಹ ಪರಿಸರ ನಾವೇ ನಿರ್ಮಿಸಿಕೊಂಡಿದ್ದೆವು ಮತ್ತು ಅದರಲ್ಲೇ ತೃಪ್ತಿ ಪಟ್ಟುಕೊಂಡಿದ್ದೆವು!
ಈ ವಾತಾವರಣದಿಂದ ಹೊರಬರಲು ನಾವು ಸಾಕಷ್ಟು ಸಮಯ ತೆಗೆದುಕೊಂಡೆವು. ಆ ಸಂದರ್ಭದಲ್ಲೊಂದು ವಿಶೇಷ ಘಟನೆ ನಡೆಯಿತು. ಅದನ್ನೂ ಹೇಳಿ ನಂತರ ಮುಂದುವರೆಯುತ್ತೇನೆ.
ವಿನೋದ ಪತ್ರಿಕೆಯ ವಿಶೇಷ ಕಾರ್ಯಕ್ರಮ ಸಾಹಿತ್ಯ ಪರಿಷತ್‌ನಲ್ಲಿ ನಡೆಯಿತು ಮತ್ತು ನಾನು ಗೆಳೆಯ ರಾಮಮೂರ್ತಿ ಹೋಗಿದ್ದೆವು ಅಂತ ಹೇಳಿದ್ದೆ ನಿಮಗೆ. ಹಾಗೇ ಅಲ್ಲಿ ಪ್ರಸಿದ್ಧ ಹಾಸ್ಯ ಬರೆಹಗಾರ ಶ್ರೀ ಅರಾಸೆ ಅವರ ಪರಿಚಯ ಆಗಿದ್ದು ಹೇಳಿದ್ದೆ. ಮುಂದೆ ಅವರ ಆಪ್ತವಲಯದಲ್ಲಿ ನನಗೆ ಗೊತ್ತಿಲ್ಲದ ಹಾಗೇ ಸೇರಿಹೋಗಿದ್ದೆ. ಮೊದಲ ಸಲ ಅರಾಸೆ ಅವರ ಭೇಟಿ ಆಯಿತು. ಕಾಫಿ ಕುಡಿಯಲು ಅವರ ಜತೆ ಹೋಟಲ್ಲಿಗೆ ಹೋದೆವು. ಕಾಫಿ ಹೀರುತ್ತಾ ಹೀರುತ್ತಾ ಅಪರಂಜಿಗೆ ಬರೀರೋ…. ಅಂತ ಹೇಳಿದರು. ಅಪರಂಜಿ ಪತ್ರಿಕೆ ಹುಟ್ಟಿದ್ದು ಹೇಳಬೇಕು ನಿಮಗೆ. ಈಗ ಅದಕ್ಕೆ ಬಂದೆ.
ಸುಪ್ರಸಿದ್ಧ ಬರಹಗಾರ ಡಾ. ಎಂ ಶಿವರಾಮ್ ಅವರು ಕೊರವಂಜಿ ಪತ್ರಿಕೆಯ ಸಂಪಾದಕರು. ಕೊರವಂಜಿ ಕನ್ನಡದ ಪ್ರಸಿದ್ಧ ಹಾಸ್ಯ ಮಾಸಪತ್ರಿಕೆ ಇಪ್ಪತ್ತೈದು ವರ್ಷ ನಿರಂತರವಾಗಿ ಪ್ರಕಟಗೊಂಡು ನಂತರ ಪ್ರಕಟಣೆ ನಿಲ್ಲಿಸಿತ್ತು. ಅದರ ಕೊನೆ ಸಂಚಿಕೆಯಲ್ಲಿ ಶ್ರೀ ಆರ್ ಕೆ ಲಕ್ಷ್ಮಣ್ ಅವರ ಒಂದು ವ್ಯಂಗ್ಯ ಚಿತ್ರ ಹೀಗಿತ್ತು. ಮನೆ ಯಜಮಾನ ಬಾಗಿಲಲ್ಲಿ ಕೂತಿದ್ದಾನೆ. ಮನೆಯಿಂದ ಆಚೆಗೆ ಹೋಗುತ್ತಿರುವ ಒಂದು ಹೆಣ್ಣು ಮಗು. ಇಷ್ಟು ದಿನ ನೀನು ಇದ್ದದ್ದೇ ಗೊತ್ತಿಲ್ವಲ್ಲ… ಎನ್ನುವ ಅರ್ಥ ಬರುವ ಮಾತನ್ನು ಹೇಳುತ್ತಿರುವ ಮನೆ ಯಜಮಾನ! ಇದು ಎಷ್ಟು ಮನಕಲಕುವ ಕಾರ್ಟುನ್ ಆಯಿತು ಅಂದರೆ ಕೊರವಂಜಿ ಪತ್ರಿಕೆ ನಿಂತು ಹೆಚ್ಚು ಕಮ್ಮಿ ಆರು ದಶಕ ಆದರೂ ಈಗಲೂ ಪ್ರಸ್ತುತ!
ಬನ್ನಿ ಮತ್ತೆ ಟ್ರ್ಯಾಕ್‌ಗೆ..
ಕೊರವಂಜಿ ಪತ್ರಿಕೆ ಪ್ರಕಟಣೆ ನಿಲ್ಲಿಸಿದ ಒಂದು ಒಂದೂವರೆ ದಶಕಗಳ ನಂತರ ಮತ್ತೆ ಅದನ್ನು ಪುನರಾರಂಭಿಸುವ ಪ್ರಯತ್ನ ನಡೆಯಿತು. ಕೊರವಂಜಿ ಹೆಸರನ್ನೇ ಮತ್ತೆ ಇಡುವ ಬದಲು ಅಪರಂಜಿ ಹೆಸರಿನ ಹಾಸ್ಯ ಪತ್ರಿಕೆಯನ್ನು ಡಾ. ಎಂ.ಶಿ ವರಾಮ್ ಅವರ ಮಗ ಶ್ರೀ ಶಿವಕುಮಾರ್ ಅವರು ಸಂಪಾದಕರಾಗಿ ನಡೆಸುತ್ತಿದ್ದರು. ಅರಾಸೆ ಅವರು ಹೇಳಿದ ನಂತರ ಅಪರಂಜಿ ಪತ್ರಿಕೆಗೆ ನಾವೂ ಸಹ ಬರೆಯಲು ಶುರು ಮಾಡಿದ್ದೆವು. ಹೀಗಾಗಿ ಶಿವಕುಮಾರ್ ಅವರ ಪರಿಚಯವಾಗಿತ್ತು ಮತ್ತು ಆಗಾಗ ಭೇಟಿ ಸಹ ಆಗುತ್ತಿತ್ತು. ಇದು ಒಂದು ಸೈಡ್‌ನಲ್ಲಿರಲಿ.
ಕೃಷ್ಣ ಸುಬ್ಬರಾವ್ (ತುಂಬಾ ಉದ್ದನೆ ಹೆಸರು. ಇನ್ನುಮುಂದೆ ಇವರು ಕೃಷ್ಣ ಮಾತ್ರ ಆಗುತ್ತಾರೆ. ಇನ್ನೊಬ್ಬ ಕೃಷ್ಣನ ಪರಿಚಯ ಆಗುವವರೆಗೆ ಕೃಷ್ಣ ಎಂದರೆ ಕೃಷ್ಣ ಸುಬ್ಬರಾವ್ ಎಂದು. ಇದು ನೆನಪಿರಲಿ ಸರ ಮೇಡಂಮೋರೆ…)ನಮ್ಮ ಗುಂಪಿಗೆ ಸೇರಿದರು ಅಂತ ಹೇಳಿದೆ ಅಲ್ಲವೇ? ನನ್ನ ಅವರ ಭೇಟಿ ವಾರಕ್ಕೆ ಒಮ್ಮೆಯಾದರೂ ಆಗುತ್ತಿತ್ತು. ಹೀಗೆ ಭೇಟಿ ಆದಾಗಲೆಲ್ಲ ಹಲವು ಹತ್ತು ವಿಷಯ ಚರ್ಚೆ ಆಗುತ್ತಿತ್ತು. ಮಾತಿನ ಹೆಚ್ಚು ಪಾಲು ಕೃಷ್ಣ ಆಡುವುದು, ನಾನು ಕೇಳುಗ! ಕೃಷ್ಣನ ತಲೆಯಲ್ಲಿ ಹೊಸಹೊಸ ಐಡಿಯಾಗಳು ಒಂದಾದ ಮೇಲೊಂದು ಬರುತ್ತಿತ್ತು. ಕೆಲವು ತುಂಬಾ ಪ್ರಾಕ್ಟಿಕಲ್ ಆದವು. ಅಂದರೆ ಪ್ರಯತ್ನಿಸಿ ಜಾರಿಗೊಳಿಸಬಹುದಾದವು.
ಹೀಗೇ ಒಮ್ಮೆ ಗಾಂಧಿ ಸಾಹಿತ್ಯ ಸಂಘದಲ್ಲಿ ಭೇಟಿ ಆದೆವು. ಹಾಗೇ ಮಾತು ಆಡುತ್ತಾ ಆಡುತ್ತಾ ಅಪರಂಜಿ ಆಫೀಸಿಗೆ ಹೋದರೆ ಹೇಗೆ ಅಂತ ಅದರತ್ತ ನಡೆದೆವು. ಆಕಾಶದಲ್ಲಿ ಕರಿ ಕರಿ ಕರಿ ಮೋಡ ಮುಸುಕಿತ್ತು. ಯಾವಾಗ ಬೇಕಾದರೂ ಮಳೆ ಸುರಿಯುವ ಮುನ್ಸೂಚನೆ ಇತ್ತು. ಅಪರಂಜಿ ಆಫೀಸು ಅಂದರೆ ಶ್ರೀ ಶಿವಕುಮಾರ್ ಅವರ ಮನೆ. ಮನೆ ಎದುರು ಕಾಂಪೌoಡಿನ ಗೇಟು ತೆರೆದು ಒಳ ಹೊಕ್ಕೆವಾ, ದಪ್ಪ ದಪ್ಪನೆಯ ಮಳೆ ಹನಿ ಶುರುವಾಯಿತು….

ಓದುಗ ಪ್ರಭುವೇ ಮುಂದೆ ನಡೆದ ಪ್ರಸಂಗ ಮತ್ತು ಅದರಿಂದ ನಮ್ಮ ಒಳಗೆ ಹೊರಗೆ ಆದ ಪರಿವರ್ತನೆ, ಸಾಹಿತ್ಯ ಲೋಕದಲ್ಲಿ ಇದರ ಪ್ರಭಾವ ಮತ್ತು ಒಂದು ವಿಶಿಷ್ಟ ನೂತನ ಹಾದಿ… ಈ ನೆನಪುಗಳು ಒಂದರ ಮೇಲೆ ಮತ್ತೊಂದು ಈಗಿನ ಅಮೇರಿಕ ಇರಾನ್ ನಡುವಿನ ಯುದ್ಧದಲ್ಲಿನ ಡ್ರೋನ್‌ಗಳಂತೆ. ಮಿಸೈಲ್‌ಗಳಂತೆ ಬರುತ್ತಿವೆ. ಅವುಗಳನ್ನು ನಿಯಂತ್ರಿಸಿ ಕಂಟ್ರೋಲಿಗೆ ತೆಗೆದುಕೊಂಡು ಒಂದರ ನಂತರ ಮತ್ತೊಂದನ್ನು ತಮ್ಮ ಮುಂದೆ ಹರವಲು ತಾವು ಕೊಂಚ ಕಾಯಲೇ ಬೇಕು ಸರ ಅಂಡ್ ಮೇಡಂಮೋರಾ… ಅಲ್ಲಿಯ ತನಕ ಗುಡ್ ಬೈ..
ಮುಂದುವರೆಯುತ್ತದೆ…

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.
