ಸಬ್ಬಾತ್‌ನ ಒಂದು ದಿನ ಅಡುಗೆ ಮನೆಯಿಂದ ಅವಳ ಅಳು ಕೇಳಿ ನಾನು ಓಡಿದಾಗ ಅಲ್ಲಿ ಕಂಡಿದ್ದು ಉರಿಯುತ್ತಿರುವ ಒಲೆಯಾಗಿತ್ತು. ಅವಳು ಸಬ್ಬಾತ್ ಊಟವನ್ನು ಮುಚ್ಚಲು ಅದಕ್ಕೆ ಒಣ ಕಾಗದಗಳನ್ನ ಹರವಿದ್ದಳು, ಅದರಲ್ಲಿ ಕಿಡಿಯೊಂದರಿಂದ ಬೆಂಕಿ ಹತ್ತಿತ್ತು. ನಾವು ಎಲ್ಲವನ್ನು ಏನಾಗಿದೆ ಎಂದು ಬಿಡಿಸಿ‌ ಹೇಳಿದ ಮೇಲೆಯೇ ಅವಳು ದೆವ್ವವೊಂದು ಒಳಗೆ ಕದ್ದು ಕುಳಿತಿದೆ ಅನ್ನೋ ಕಲ್ಪನೆಯಿಂದ ಆಚೆ ಬಂದಿದ್ದು.
ಸ್ಮಿತಾ ಮಾಕಳ್ಳಿ ಅನುವಾದಿಸುತ್ತಿರುವ ಐಸಾಕ್ ಬಾಶೆವಿಸ್ ಸಿಂಗರನ ‘ಇನ್ ಮೈ ಫಾದರ್ಸ್ ಕೋರ್ಟ್‌ʼ ಆತ್ಮಕಥನದ ಸರಣಿಯ ಏಳನೆಯ ಕಂತು

 

ಆಗಿನ ದಿನಗಳಲ್ಲಿ ನಮಗೆ ಫ್ರಾಯ್ಡ್‌ ನ ಬಗ್ಗೆ ತಿಳಿದಿರದಿದ್ದರೂ ಆಗಾಗ ನಮ್ಮ ಮನೆಯಲ್ಲಿ ಫ್ರಾಯ್ಡಿಯನ್ ನಾಟಕ ನಡೆಯುತಿತ್ತು ಎಂದು ಹೇಳಬಹುದಾಗಿತ್ತು. ನನ್ನ ಅಕ್ಕನಿಗೆ ಅವಳನ್ನು ಅಮ್ಮ ಪ್ರೀತಿಸುವುದಿಲ್ಲ ಅನ್ನೋ ಅನುಮಾನ ಇತ್ತು, ಇದು ನಿಜವಾಗಿರಲಿಲ್ಲ. ಆದರೆ ವಾಸ್ತವವಾಗಿ ಅವರಿಬ್ಬರಿಗೆ ಹೊಂದಾಣಿಕೆಯಾಗುತ್ತಿರಲಿಲ್ಲ. ನನ್ನಣ್ಣ ಇಸ್ರೇಲ್ ಜೋಶುವಾ ನನ್ನ ತಾಯಿಯ ಮನೆಯ ನಂತರದವನಾಗಿದ್ದ. ಆದರೆ ಹಿಂಡೆ ಎಸ್ತರ್ ಹ್ಯಾಸಿದಿಕ್‌ ನ ಸ್ಫೂರ್ತಿ, ಮಾನವೀಯ ಪ್ರೀತಿ, ಅಪ್ಪನ ಮನೆಯ ಕಡೆಯ ವಿಲಕ್ಷಣ ಸ್ವಭಾವವನ್ನು ಅನುವಂಶಿಕವಾಗಿ ಪಡೆದಿದ್ದಳು.

ಅವಳು ಇನ್ನೊಂದು ಯುಗದಲ್ಲಿ ಹುಟ್ಟಿದ್ದೇ ಆಗಿದ್ದರೆ ಅವಳೊಬ್ಬ ಸಾಧ್ವಿಯಾಗಿರುತ್ತಿದ್ದಳು, ಅಥವಾ ಹ್ಯಾಸಿದಿಕ್ ಜೊತೆಗೆ ನರ್ತಿಸಿದ್ದ ಬಾಲ್ ಶೆಮ್ ಅವರ ಮಗಳು ಹೋಡೆಲ್ ರೀತಿಯೋ ಇರುತ್ತಿದ್ದಳು. ನನ್ನ ಮುತ್ತಜ್ಜಿ ಸ್ವನಾಮಕವಾದ ನನ್ನಕ್ಕ ಧಾರ್ಮಿಕ ಅಂಚುಳ್ಳ ಬಟ್ಟೆಯನ್ನು ತೊಡುತ್ತಿದ್ದಳು ಮತ್ತು ಗಂಡಸಿನ ಹಾಗೇ ಬೆಲ್ಜ್ ರಬ್ಬಿಯನ್ನು ಭೇಟಿ ಮಾಡುತ್ತಿದ್ದಳು. ಉಪವಾಸಗಳನ್ನು ಆಚರಿಸುತ್ತಿದ್ದ, ಪ್ರಾಚೀನ ಸಮಾಧಿಗಳಿಗೆ ಪ್ರಾರ್ಥಿಸಲು ಪ್ಯಾಲೆಸ್ಟೈನ್‌ಗೆ ತೀರ್ಥಯಾತ್ರೆ ಹೋಗುತ್ತಿದ್ದ ಎಲ್ಲಾ ಕರುಣಾಮಯಿ ಹೆಂಗಸರಾದ ರಬ್ಬಿಗಳ ಹೆಂಡತಿಯರು ಅಕ್ಕನಿಗೆ ಒಂದು ರೀತಿಯ ರಕ್ತಸಂಬಂಧಿಕರಿದ್ದಂತೆ. ಅವಳ ಜೀವನ‌ ಒಂದು ರೀತಿಯಲ್ಲಿ ರಜಾದಿನಗಳು, ಸ್ತೋತ್ರಗಳು, ನಂಬಿಕೆ, ಮತ್ತು ಸಂತೋಷದಿಂದ ಕೂಡಿದ್ದವು. ಅವಳು ಲಂಗದೊಳಗಿದ್ದ ಹ್ಯಾಸಿದ್ ಆಗಿದ್ದಳು; ಆದರೆ ಅವಳು ತೀವ್ರ ಭಾವೋದ್ರೇಕದಿಂದ ಬಳಲುತ್ತಿದ್ದಳು ಜೊತೆಗೆ ಅವಳಿಗೆ ಮೂರ್ಛೆರೋಗದ ಲಘು ಹೊಡೆತಗಳು ಇದ್ದವು. ಮತ್ತೊಂದಷ್ಟು ಬಾರಿ ಪ್ರೇತ ಹೊಕ್ಕವಳ ಹಾಗೇ ಕಾಣಿಸುತ್ತಿದ್ದಳು.

ನಮ್ಮಪ್ಪ ಅವಳನ್ನು ಹುಡುಗಿ ಅನ್ನೋ ಕಾರಣಕ್ಕೆ ನಿರ್ಲಕ್ಷ್ಯ ಮಾಡಿದ್ದ. ಮತ್ತು ನಮ್ಮಮ್ಮನಿಗೆ ಅವಳನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಅಮ್ಮ ಅವಳ ಬಿಡುವಿನ ವೇಳೆಯಲ್ಲಿ ನೈತಿಕ ಸೂಚನೆಗಳುಳ್ಳ ಪುಸ್ತಕವನ್ನು ಓದುತ್ತಾ ಇರೋಳು, ದೂರದ ಖಿನ್ನ ನೋಟವೊಂದಲ್ಲದೇ ಕಿಟಕಿಯಿಂದ ಆಚೆಗೆ ಅವಳು ಕಣ್ಣಾಡಿಸುತ್ತಿದ್ದದ್ದೇ ಬಹು ವಿರಳವಾಗಿತ್ತು. ಜನಜಂಗುಳಿ ಮತ್ತು ಗದ್ದಲ ಅವಳಿಗೆ ಯಾತನೆಯಾಗಿದ್ದವು. ಅವಳಿಗೆ ಆಲೋಚನೆಗಳಲ್ಲಿ‌ ಮಾತ್ರ ಆಸಕ್ತಿ ಇತ್ತು. ಇನ್ನೊಂದೆಡೆ ಅಕ್ಕ ಮಾತನಾಡುತ್ತಾ, ಹಾಡುತ್ತಾ ಮತ್ತು ಇಡೀ ದಿನ ನಗುತ್ತಾ, ಅವಳೊಳಗೆ ಇಟ್ಟುಕೊಳ್ಳಬಹುದಾಗಿದ್ದ ಅಭಿಪ್ರಾಯಗಳನ್ನು ಹೇಳುತ್ತಾ ಇರೋಳು.

ಅವಳಿಗೆ ಇಷ್ಟವಾಗುವವರನ್ನು ಎಲ್ಲಿಲ್ಲದ ಹಾಗೇ ಹೊಗಳೋಳು. ಜೊತೆಗೆ ಅವಳಿಗೆ ಸೇರದವರನ್ನು ದಯೆ ದಾಕ್ಷಿಣ್ಯವಿಲ್ಲದೇ ಜರಿಯೋಳು. ಅವಳು ಉತ್ಪ್ರೇಕ್ಷೆಗಳಿಗೆ ಹವಣಿಸೋಳು, ಉಲ್ಲಾಸಕ್ಕೆ ಜಿಗಿಯೋಳು, ದುಃಖಕ್ಕೆ ಅಳೋದು ಮತ್ತೇ ಕೆಲವು ಸಲ ಮೂರ್ಛೆ ಹೋಗೋಳು. ನನ್ನಣ್ಣ ಇಸ್ರೇಲ್ ಜೋಶುವಾನ ಮೇಲಿನ ಹೊಟ್ಟೆಕಿಚ್ಚಿಗೆ ಹಲವಾರು ಆರೋಪಗಳನ್ನು ಮಾಡೋಳು. ಆದರೆ ನಂತರದಲ್ಲಿ ತಾನು ಮಾಡಿದ್ದಕ್ಕೆ ಪಶ್ಚಾತ್ತಾಪ ಪಡುತ್ತಾ ಅವನಿಗೆ ಮುತ್ತು ಕೊಡೋಕೆ ಆಶಿಸೋಳು. ಉಗ್ರವಾಗಿ ಅತ್ತ ನಂತರ ಅವಳ ಚೇತನ ಇದ್ದಕ್ಕಿದ್ದ ಹಾಗೆ ಹಾರಿದಂತೆ ಅನಿಸಿ ಕುಣಿಯಲು ಶುರುವಿಡುತ್ತಿದ್ದಳು. ಚಿಕ್ಕ ಮಕ್ಕಳಾದ ನಮ್ಮನ್ನು ಯಾವಾಗಲೂ ಮುತ್ತಿಡುತ್ತಾ, ಪ್ರೀತಿಯಿಂದ ನೇವರಿಸುತ್ತಾ ಇರುತ್ತಿದ್ದಳು.

ಎಲ್ಲವೂ ಅವಳಿಗೆ ಆ ಕ್ಷಣದ್ದು ಮಾತ್ರವೇ ಆಗಿತ್ತು. ನಮ್ಮ ಆಚೆ ಬೀದಿಯಲ್ಲಿ ಕೆಲಸ ಮಾಡುತ್ತಿದ್ದ ಕ್ಷೌರಿಕನೊಬ್ಬನಿಗೆ ಅಕ್ಕನ ಮೇಲೆ ಪ್ರೀತಿಯಾಗಿ ಅವಳಿಗೊಂದು ಮರುಳುಗೊಳಿಸುವ ಟಿಪ್ಪಣಿಯೊಂದನ್ನು ಕಳುಹಿಸಿದ್ದ. ಅಕ್ಕ, ತಕ್ಷಣವೇ ಈ ವಿಷಯದ ಬಗ್ಗೆ ಎಲ್ಲರಿಗೂ ಗೊತ್ತಾಗಿ ಹೋಗಿದೆ ಮತ್ತು ಅದರ ಬಗ್ಗೆಯೇ ಮಾತನಾಡುತ್ತಾರೆ ಎಂದು ಕಲ್ಪಿಸಿಕೊಂಡು, ಬೀದಿಗೆ ಹೋಗಲು ಹೆದರಲು ಶುರು ಮಾಡಿದ್ದಳು. ಬೇರೆ ಹುಡುಗಿಯರಿಗೂ ಇಂತಹ ಬರಹಗಳು ಬಂದಿರುತ್ತವೆ ಮತ್ತು ಯಾರೂ ಅವಳನ್ನ ದೂಷಿಸುತ್ತಿಲ್ಲಾ ಎಂದು ಮನವರಿಕೆ ಮಾಡಿಕೊಡಲು ತುಂಬಾ ಕಾಲವೇ ಹಿಡಿಯಿತು.

ಸಬ್ಬಾತ್‌ನ ಒಂದು ದಿನ ಅಡುಗೆ ಮನೆಯಿಂದ ಅವಳ ಅಳು ಕೇಳಿ ನಾನು ಓಡಿದಾಗ ಅಲ್ಲಿ ಕಂಡಿದ್ದು ಉರಿಯುತ್ತಿರುವ ಒಲೆಯಾಗಿತ್ತು. ಅವಳು ಸಬ್ಬಾತ್ ಊಟವನ್ನು ಮುಚ್ಚಲು ಅದಕ್ಕೆ ಒಣ ಕಾಗದಗಳನ್ನ ಹರವಿದ್ದಳು, ಅದರಲ್ಲಿ ಕಿಡಿಯೊಂದರಿಂದ ಬೆಂಕಿ ಹತ್ತಿತ್ತು. ನಾವು ಎಲ್ಲವನ್ನು ಏನಾಗಿದೆ ಎಂದು ಬಿಡಿಸಿ‌ ಹೇಳಿದ ಮೇಲೆಯೇ ಅವಳು ದೆವ್ವವೊಂದು ಒಳಗೆ ಕದ್ದು ಕುಳಿತಿದೆ ಅನ್ನೋ ಕಲ್ಪನೆಯಿಂದ ಆಚೆ ಬಂದಿದ್ದು.

ಅವಳು ಸುಲಭವಾಗಿ ಮದುವೆ ಮಾಡಿ ಕಳುಹಿಸಬಹುದಾದ ಹುಡುಗಿಯಾಗಿರಲಿಲ್ಲ. ಆದರೆ ಅಂದವಾಗಿ ಇದ್ದಳು ಮತ್ತು ಅವಳಿಗೆ ಸಂಬಂಧವೊಂದನ್ನ ಪ್ರಸ್ತಾಪಿಸಲಾಗಿತ್ತು. ಪ್ಯಾಲೇಸ್ಟೇನಿನಲ್ಲಿ ಯೆಶಿವಾಕ್ಕಾಗಿ ಸಂಗ್ರಹವಾಗಿದ್ದ ಹಣವನ್ನು ನಿರ್ವಹಿಸಿದ್ದ ವಾರ್ಸಾದ ರೆಬ್ ಗೆಡಲಿಯಾನಿಂದ. ಅವನ ಗಂಡು ಮಕ್ಕಳು ಬೆಲ್ಜಿಯಂಗೆ ಹೋಗುವ ಮೂಲಕ ಸೇನೆಯ ಭರ್ತಿಯಿಂದ ತಪ್ಪಿಸಿಕೊಂಡಿದ್ದರು. ಅವರು ಅಲ್ಲಿ ವಜ್ರವನ್ನು ಕತ್ತರಿಸುವವರಾಗಿದ್ದರು. ಇವನಿಗೆ ಅವರ ಮೇಲೆ‌ ಎಷ್ಟು ಹತೋಟಿ ಇತ್ತು ಎಂದರೆ ದೂರದಿಂದಲೇ ಅವರ ಮದುವೆಗಳನ್ನು ಗೊತ್ತುಪಡಿಸಿದ್ದ. ನಮ್ಮಪ್ಪನಿಗೆ ಒಬ್ಬಳು ಮಗಳಿರುವ ವಿಷಯ ತಿಳಿದು ಅವನು ನಮ್ಮನ್ನು ಭೇಟಿ ಮಾಡುವ ಮೊದಲು ಜೋಡಿ ಕುದುರಿಸುವವನೊಬ್ಬನನ್ನು ಕಳುಹಿಸಿದ್ದ.

ಎತ್ತರಕ್ಕೆ ಮತ್ತು ದೈತ್ಯನಾಗಿದ್ದ ಅವನಿಗೆ ಬೀಸಣಿಗೆಯಾಕಾರದ ಗಡ್ಡವಿತ್ತು. ಮತ್ತು ಸಿಗಾರ್ ಸೇದುತ್ತಾ ಅವನು ತನ್ನ ಮಗನ ಫೋಟೋ ಒಂದನ್ನು ತೋರಿಸಿದ. ಅವನು ಆಧುನಿಕ ಶೈಲಿಯ ಬಟ್ಟೆ ಧರಿಸಿದ್ದ ದುಂಡು ಗಡ್ಡದ ಚೆಲುವ ಯುವಕನಾಗಿದ್ದ. ಆಂಟ್ವರ್ಪ್ ನಲ್ಲಿ‌ ವಾಸವಿದ್ದ ಅವನು ದಿನವೂ ಪ್ರಾರ್ಥನೆ ಮಾಡುತ್ತಾನೆ, ಕೋಶರ್ ಆಹಾರವನ್ನು ಮಾತ್ರವೇ ತಿನ್ನತ್ತಾನೆ, ತಾಲ್ಮುಡ್ ಓದಿದ್ದಾನೆ ಎಂದು ರೆಬ್ ಗೆಡಲಿಯಾ ಹೇಳಿದ. ತಂದೆಗೆ ವಧುವನ್ನು ಹುಡುಕಲು ಬಿಟ್ಟಿದ್ದೇ ಅವನ ಧಾರ್ಮಿಕತೆಗೆ ಸಾಕ್ಷಿಯಾಗಿತ್ತು. ಅಬ್ರಹಾಂನ ಆಳು ಎಲೈಜರ್ ಐಸಾಕ್‌ಗೆ ರೆಬೆಕ್ಕಾಳನ್ನ ಕೇಳಲು‌ ಹೋದಂತೆ, ರೆಬ್ ಗೆಡಲಿಯಾ ನಮ್ಮ ಬಳಿ ಬಂದಿದ್ದ.

ನಮ್ಮಪ್ಪ ಒಬ್ಬಳೇ ಮಗಳನ್ನ ಗಡಿಯನ್ನು ಮೀರಿ ಕಳುಹಿಸೋದು ಹೇಗೆ ಎಂದು ಚಿಂತೆಯಿಂದ ಗಂಟಿಕ್ಕಿಕೊಂಡಿದ್ದ. ಆದರೆ ನಮ್ಮಮ್ಮನಿಗೆ ಇದು ಇಷ್ಟವಾಗಿತ್ತು. ಹುಚ್ಚಾಬಟ್ಟೆ ಹುಡುಗಿಯ ಜೊತೆಗೆ ಇರುವುದು ಜಾಸ್ತಿಯೇ ಕಷ್ಟವಾಗಿತ್ತು. ನನ್ನಕ್ಕ ಈಗಾಗಲೇ ಕೆಲವು ಆಧುನಿಕ ವಿಚಾರಗಳನ್ನು ಸಂಪಾದಿಸಿದ್ದಳು. ಯಿದ್ದೀಶ್ ದಿನಪತ್ರಿಕೆಗಳನ್ನು, ಪುಸ್ತಕಗಳನ್ನು ಓದುತ್ತಿದ್ದಳು. ಪ್ರೇಮ ವಿವಾಹಕ್ಕೆ ಹಾತೊರೆಯೋಳು, ಒಪ್ಪ ಮಾಡಿದ ಮದುವೆಗೆ ಅಲ್ಲ. ಕೆಲವು ಬಾರಿ ಅವಳ ಗೆಳತಿಯರ ಜೊತೆಗೆ ಹ್ಯಾಟ್ ಹಾಕಿಕೊಂಡು ಸ್ಯಾಕ್ಸೋನಿ ಉದ್ಯಾನದಲ್ಲಿ ವಾಕ್ ಮಾಡೋಳು. ಆದರೆ ನನ್ನ ತಂದೆಯ ಬಳಿ ದಕ್ಷಿಣೆ ಕೊಡಲು ಹಣವಿಲ್ಲದೆ ಇದ್ದದ್ದೇ ಎಲ್ಲದ್ದನ್ನು ನಿರ್ಣಯ ಮಾಡಿತ್ತು. ರೆಬ್ ಗೆಡಲಿಯಾ ಅದಕ್ಕಾಗಿ ಬೇಡಿಕೆ ಇಡಲಿಲ್ಲ‌ ಕೂಡ.

ಅವಳ ಜೀವನ‌ ಒಂದು ರೀತಿಯಲ್ಲಿ ರಜಾದಿನಗಳು, ಸ್ತೋತ್ರಗಳು, ನಂಬಿಕೆ, ಮತ್ತು ಸಂತೋಷದಿಂದ ಕೂಡಿದ್ದವು. ಅವಳು ಲಂಗದೊಳಗಿದ್ದ ಹ್ಯಾಸಿದ್ ಆಗಿದ್ದಳು.

ಆ ಸಂಜೆ ಇನ್ನೂ ನನಗೆ ನೆನಪಿದೆ, ಪ್ರಕಾಶಮಾನವಾಗಿ ಬೆಳಗುತ್ತಿದ್ದ ನಮ್ಮ‌ ಮನೆ, ಪೂರ್ವಭಾವಿ ತಯಾರಿಗಳ ಬಗ್ಗೆ ಕರಾರುವಕ್ಕಾಗಿ ಬರೆದು ಆಂಟ್ವರ್ಪ್ ನಲ್ಲಿ ಇದ್ದ ಭಾವಿ ವರನಿಗೆ ಅವನ ಸಹಿಗಾಗಿ ಕಳುಹಿಸಲಾಗಿತ್ತು. ಅಪ್ಪನ ಓದಿನ ಮೇಜಿನ ಮೇಲೆ ಪುರಿಮ್ (ಹಬ್ಬ) ಏನೋ ಎಂಬಂತೆ ಉಪಹಾರಗಳನ್ನು ಜೋಡಿಸಲಾಗಿತ್ತು. ಶಿಲಾರಾಳ ಹಿಡಿಕೆಯಲ್ಲಿ ಸಿಗಾರ್ ಸೇದುತ್ತಾ ರೆಬ್ ಗೆಡಲಿಯಾ ಅಪ್ಪನ ಜೊತೆಗೆ ಟೋರಾದ ಬಗ್ಗೆ ಚರ್ಚಿಸುತ್ತಿದ್ದ. ನಂತರ ನನ್ನ‌ ಅಕ್ಕನಿಗೆ ಅವನ ಆಭರಣದ ಪೆಟ್ಟಿಗೆಯಿಂದ ಚಿನ್ನದ ಸರವೊಂದನ್ನು ಉಡುಗೊರೆಯಾಗಿ ನೀಡಿದ. ಅವನ ಹೆಂಡತಿ ದೊಡ್ಡ ಎದೆಯ, ದಪ್ಪ ಹೆಂಗಸಾಗಿದ್ದಳು. ಮತ್ತು ಅವನ ಹೆಣ್ಣುಮಕ್ಕಳಿಗೆ ಅಸಾಧಾರಣ ಎನ್ನೋ ಅಷ್ಟು ಉದ್ದ ಕೂದಲಿತ್ತು. ಆ ಹೆಣ್ಣುಮಕ್ಕಳು ಈ ಮಗನ ಮದುವೆ ಆಗುವವರೆಗೂ ತಮ್ಮ ಸರದಿಗಾಗಿ ಕಾಯಬೇಕಿತ್ತು. ಗೊತ್ತುಮಾಡಿದ್ದ ಮದುಮಗನ ಬಗ್ಗೆ ಎಷ್ಟು ಮಾತಿತ್ತು ಎಂದರೆ ನನಗೆ ಅವನು ಇಲ್ಲೇ ಇದ್ದಾನೇನೋ ಎನಿಸೋದು. ಆಶಾವಾದಿ ಮನಸ್ಥಿತಿಯಲ್ಲಿ ಅಕ್ಕ ನಾಚುತ್ತಾ, ನಗುತ್ತಾ, ಅಭಿನಂದನೆಗಳಿಗೆ, ಭರವಸೆಗಳಿಗೆ, ಉಡುಗೊರೆಗಳಿಗಾಗಿ ಮತ್ತು ಒಳ್ಳೆಯ ಹಾರೈಕೆಗಳಿಗಾಗಿ ಎಲ್ಲರಿಗೂ ಧನ್ಯವಾದ ಹೇಳಿದಳು.

ಅಪ್ಪ ಮದುವೆ ಎಲ್ಲಿ ನಡೆಯಬಹುದು ಎಂದು ಕೇಳಿದ್ದು ಕೇಳಿಸಿತು, ಮತ್ತು ರೆಬ್ ಗೆಡಲಿಯಾ, “ಬರ್ಲಿನ್ನಲ್ಲಿ” ಎಂದು ಉತ್ತರಿಸಿದ್ದ.

ಅಪ್ಪನಿಗೆ ನಿಬ್ಬೆರಗಾಗಿತ್ತು, ಆದರೆ ರೆಬ್ ಗೆಡಲಿಯಾ “ಯೋಚಿಸಬೇಡಿ. ಯಹೂದಿಗಳು ಈಗ ಎಲ್ಲಾ ಕಡೆ ಇದ್ದಾರೆ. ನಾನು ಬರ್ಲಿನ್ಗೆ ಸುಮಾರು ಬಾರಿ ಹೋಗಿದ್ದೇನೆ, ಮತ್ತು ಅಲ್ಲಿ ನಿಮಗೆ ಬೇಕಾದ ಎಲ್ಲವೂ ಇದೆ. ಪ್ರಾರ್ಥನಾ ಮನೆಗಳು, ಓದಿನ ಮನೆಗಳು, ಧಾರ್ಮಿಕ ಸ್ನಾನಗಳು. ಬರ್ಲಿನ್ ನವರು ಗುರ್ ರಬ್ಬಿಯವರನ್ನು ಭೇಟಿ ಮಾಡುತ್ತಿರುತ್ತಾರೆ ಮತ್ತು ಅವರು ದಾನ ಮಾಡುವುದರಲ್ಲಿ ತುಂಬಾನೇ ಧಾರಾಳಿಗಳು” ಎಂದು ಹೇಳಿದ.

“ದೇವರ ಹೆಸರನ್ನು ಕೊಂಡಾಡಬೇಕು…”

“ಆಂಟ್ವರ್ಪ್,” ರೆಬ್ ಗೆಡಲಿಯಾ ಮುಂದುವರೆಸಿದ, “ಯೆಹೂದ್ಯರ ಹಾಗೇನೆ ತುಂಬಾ ಇದೆ. ನಾನು ಪ್ಯಾರಿಸ್ ಗೆ ಕೂಡ ಹೋಗಿದ್ದೇನೆ, ಪ್ರಚಂಡ ಗೋಪುರಕ್ಕೆ ಎಲಿವೇಟರ್ ನಲ್ಲಿ‌ ಹೋಗಿದ್ದೇನೆ. ಅತಿ ಜಾಣ ಪ್ಯಾರಿಸಿನ ರಬ್ಬಿಯ ಜೊತೆಗೆ ಮಾತನಾಡಿದ್ದೇನೆ. ಅವನಿಂದ ನನಗೊಂದು‌ ಪತ್ರವಿದೆ, ಅವನು ಫ್ರೆಂಚ್ ಮಾತನಾಡುತ್ತಾನೆ.”

ನನಗೂ ಮತ್ತು ಅಪ್ಪನಿಗೂ ರಬ್ಬಿಯೊಬ್ಬ ಫ್ರೆಂಚ್ ನಲ್ಲಿ‌ ಮಾತನಾಡುತ್ತಾನೆ ಮತ್ತು ಪ್ಯಾರಿಸ್‌ನಲ್ಲಿ ವಾಸಿಸುತ್ತಾನೆ ಎನ್ನುವದೇ ಬೆರಗಾಗಿತ್ತು. ಆದರೆ ಅಪ್ಪ ಅವನ ಗಡ್ಡವನ್ನ ಸದ್ದಿಲ್ಲದೇ ಬಿಗಿ ಹಿಡಿದ. ಮತ್ತು ಅಮ್ಮ ಹೆಂಗಸರ ಮೇಜಿನ ಬಳಿ ಮೌನವಾಗಿ ಕುಳಿತಿದ್ದಳು. ಅವಳಿಗೆ ಒಡವೆ, ಬಟ್ಟೆ, ಶೂಗಳು, ಊಟ ಮತ್ತು ಚೌಕಾಸಿಗಳ ಬಗ್ಗೆಗಿನ‌ ಸಣ್ಣ ಮಾತುಗಳ ಬಗ್ಗೆ ಸಹನೆ ಇರುತ್ತಿರಲಿಲ್ಲ. ಸೊಗಸಾಗಿ ಶೃಂಗಾರಗೊಂಡ ಹೆಂಗಸರ ವಿರುದ್ಧವಾಗಿ ಎನ್ನುವಂತೆ ಅಮ್ಮ ಅವಳ ಮದುವೆಗೆ ತಯಾರಿಸಿದ್ದ ಉಡುಪನ್ನು ಧರಿಸಿದ್ದಳು.

ಪ್ರಾಥಮಿಕ ಒಪ್ಪಂದಗಳನ್ನು ಕಳುಹಿಸಿದ ಮೇಲೆ, ಭಾವಿ ವರನಿಂದ ಜರ್ಮನ್ ಯದ್ದೀಶ್‌ನಲ್ಲಿ ಪತ್ರಗಳು ಬರಲಾರಂಭಿಸಿದವು. ಪತ್ರಗಳಿಗೆ ಉತ್ತರಿಸುತ್ತಿದ್ದ ಅಕ್ಕನಲ್ಲಿ ನಮ್ಮ ಮನೆಯ ಮೊದಲ ಸಾಹಿತ್ಯದ ಕಿಡಿ ಸ್ಪಷ್ಟವಾಗಿತ್ತು. ಅವಳು ಉದ್ದುದ್ದ, ಬುದ್ದಿವಂತಿಕೆಯಿಂದ, ಜೊತೆಗೆ ಹಾಸ್ಯದಲ್ಲಿ‌ ಪತ್ರ ಬರೆಯೋಳು. ಇದು ನಮ್ಮ‌ ತಂದೆಗೆ ತಿಳಿದಿರಲಿಲ್ಲ. ಆದರೆ ನಮ್ಮ‌ ತಾಯಿಗೆ ಮಗಳ ಪದಗಳ ಮೇಲಿನ ನಿರ್ದೇಶನದ ಮೇಲೆ ಎಲ್ಲಿಲ್ಲದ ವಿಸ್ಮಯವಾಗಿತ್ತು. ಅವಳಿಗೆ ಅದು ಹೇಗೆ ಬಂತು? ಅಮ್ಮ, ಅವಳೇ ಅದ್ಭುತ ಕತೆಗಾರ್ತಿಯಾಗಿದ್ದಳು. ಆದರೆ ಬರಹಗಾರ್ತಿ ಆಗಿರಲಿಲ್ಲ. ಅವಳ ಎಲ್ಲಾ ಪತ್ರಗಳು ಸೂತ್ರವೊಂದನ್ನ ಪಾಲಿಸುತ್ತಿತ್ತು ಮತ್ತು ಸಂಕ್ಷಿಪ್ತವಾಗಿರುತ್ತಿದ್ದವು.

ಬೇರೆ ವಿಚಿತ್ರ ಮತ್ತು ಅನಿರೀಕ್ಷಿತವಾದವು ಮನೆಯಲ್ಲಿ ನಡೆಯಲು ಶುರುವಾಗಿದ್ದವು. ಇನ್ನೂ ಓದಿನ ಮನೆಗೆ ಹಾಜರಾಗುತ್ತಿದ್ದರು, ನನ್ನಣ್ಣ ಇಸ್ರೇಲ್ ಜೋಶುವಾಗೆ ಚಿತ್ರ ಬಿಡಿಸುವ ಪ್ರೇರಣೆ ಆವರಿಸಿತ್ತು. ರಹಸ್ಯವಾಗಿ, ಅವನು ಕಾಗದ, ಕರಿಬಳಪಗಳನ್ನು, ಕಲಿದ್ದಲು, ಮತ್ತು ಬಣ್ಣಗಳನ್ನು ತಂದಿಟ್ಟುಕೊಂಡಿದ್ದ. ಪ್ರಕೃತಿ, ಮರಗಳು, ಹೂಗಳು, ಹಸುಗಳು, ರೈತರು, ಹುಲ್ಲಿನ ಗುಡಿಸಲುಗಳು ಮತ್ತು ಚಿಮಣಿಗಳನ್ನು ಬರೆಯಲು ಶುರುವಿಟ್ಟ. ಅವನು ತಂದೆಯಿಂದ ರಷ್ಯನ್ ಗ್ರಾಮರ್ ಪಠ್ಯ ಪುಸ್ತಕ ಮತ್ತು ಅವನು “ಸಾಹಿತ್ಯ” ಎಂದು ಕರೆಯುತ್ತಿದ್ದ ಯಿದ್ದೀಶ್ ಪುಸ್ತಕಗಳನ್ನು ಅಡಗಿಸಿಟ್ಟಿದ್ದನು. ನಮಗೆ ಹೇಳಿದ್ದ, ಪ್ಯಾಲೆಸ್ಟೈನ್ ನ ಕೆಲವು ಕಾಲೋನಿಗಳಲ್ಲಿ ತರುಣ ಯಹೂದಿಗಳು ಭೂಮಿ ಹೂಳೂತ್ತಾ, ರಾಜ ಡೇವಿಡ್‌ನ ಕಾಲದಂತೆ ಕುರಿ ಸಾಕಾಣಿಕೆ ಮಾಡುತ್ತಾರೆ ಮತ್ತು ರಷ್ಯಾದಲ್ಲಿ ತ್ಸಾರ್ ಮತ್ತು ದುಡ್ಡನ್ನು ಉರುಳಿಸಲು ಕ್ರಾಂತಿಗಳು ಆಗುತ್ತಿವೆ ಎಂದು. ಅವನು ಹೇಳಿದ ಅಮೆರಿಕದಲ್ಲಿ, “ದಿ ಬ್ಲ್ಯಾಕ್ ಹ್ಯಾಂಡ್” ಎಂಬ ಅಪರಾಧಿಗಳಿಂದ ರಕ್ಷಿಸಿಕೊಳ್ಳಬೇಕಿದ್ದ ರೋಥ್‌ಚೈಲ್ಡ್ ಗಿಂತಲೂ ಶ್ರೀಮಂತ ಮಿಲಿಯನೇರ್‌ಗಳು ಇದ್ದಾರೆ ಎಂದು. ಅವನು ಹೇಳಿದ ಪ್ರತಿಯೊಂದನ್ನು ನನ್ನ ಮೆದುಳಿನಲ್ಲಿ ಗ್ರಹಿಸಿಕೊಂಡಿದ್ದೆ. ಕಣ್ಣು ಮುಚ್ಚಿದರೇ ನಾನು ಇದುವರೆಗೂ ನೋಡಿರದಂತಹ ವಿವಿಧ ಆಕಾರಗಳು ಮತ್ತು ಬಣ್ಣಗಳನ್ನು ನೋಡ ತೊಡಗಿದೆ.

ಅದು ಹೊಸ ವಿನ್ಯಾಸ ಮತ್ತು ಸ್ವರೂಪಗಳಿಗೆ ಬದಲಾಗುತ್ತಿತ್ತು. ಕೆಲವು ಬಾರಿ ನಾನು ವಿಚಿತ್ರ ಜನಗಳಲ್ಲಿ ಸೂರ್ಯನಿಗಿಂತ ಕೆಂಪಾಗಿದ್ದ ಉರಿವ ಕಣ್ಣುಗಳನ್ನು ನೋಡುತ್ತಿದ್ದೆ. ಇವತ್ತಿಗೂ ಕೂಡ ನಾನು ಇದನ್ನು ಮಾಡಲು ಪ್ರಯತ್ನಿಸಿದರೆ ಈಗಲೂ ನನಗೆ ಈ ಪ್ರಖರವಾದ ಕಣ್ಣು ಕಾಣಿಸುತ್ತದೆ. ನನಗೆ ಆ ದಿನದ ನೆನಪು ಎಂದರೆ ದೂರದೃಷ್ಟಿಯ ಹೂಗಳು ಮತ್ತು ರತ್ನಗಳೇ ಆಗಿವೆ. ಆದರೆ ಆ ಸಮಯಕ್ಕೆ ಎಷ್ಟೊಂದು ನೋಟಗಳು ಇದ್ದವೆಂದರೆ ಕೆಲವುಬಾರಿ ನನಗೆ ಅವುಗಳಿಂದ ಬಿಡಿಸಿಕೊಳ್ಳಲಾಗುತ್ತಿರಲಿಲ್ಲ.

ಅಕ್ಕನ ನಿಶ್ಚಿತಾರ್ಥದ ಫಲವಾಗಿ ನಮ್ಮ ಮನೆಯಲ್ಲಿ ಲೌಕಿಕ ಉತ್ಸಾಹವೊಂದು ವ್ಯಾಪಿಸಿತ್ತು. ಅವಳ ಅತ್ತೆ ಉತ್ತಮ ಬೀದಿಗಳ ದರ್ಜಿಗಳಿಂದ ಮದುವೆ ಉಡುಪನ್ನು ತಯಾರಿಸುವುದರಲ್ಲಿ ನಿರತಳಾಗಿದ್ದಳು. ಇನ್ನೂ ಅಪ್ಪ ಸಂಸ್ಥೆಯೊಂದರಿಂದ ಸಾಲವನ್ನು ತೆಗೆದುಕೊಂಡ. ನಮ್ಮ ಮನೆ ರೇಷ್ಮೆ, ವೆಲ್ವೆಟ್, ಉಡುಪಿನ ಮಡಿಕೆಗಳು, ಅಳತೆ ಟೇಪು, ಮತ್ತು ಹಾಸು ಬಟ್ಟೆಗಳಿಂದ ತುಂಬಿತ್ತು. ಆದರೂ ಒಳ್ಳೆಯ ಲಹರಿಯಲ್ಲಿ ಇರುತ್ತಿದ್ದ ಅಕ್ಕ ಕೆಲವುಸಾರಿ ಅಸಮಾಧಾನವಾಗಿ, “ನೀನು ನನ್ನನ್ನು ದ್ವೇಷಿಸುತ್ತೀಯ, ಅದಕ್ಕೆ ನನ್ನ‌ನ್ನ ದೂರ ಕಳುಹಿಸುತ್ತಾ ಇರೋದು!” ಎಂದು ಅಮ್ಮನಿಗೆ ಹೇಳೋಳು.

“ದುಃಖವೇ ನಾನು, ನೀನು ನನಗೆ ಹುಚ್ಚುಹಿಡಿಸುತ್ತಿಯಾ!”

“ಇದು ನಿಜ.”

“ನೋಡು ನಾನು ಈ ಮದುವೆಯನ್ನೇ ನಿಲ್ಲಿಸಿಬಿಡುತ್ತೇನೆ!”

“ಬೇಡ, ಅದರ ಬದಲು ನಾನೇ ಕಾಣಿಸದ ಹಾಗೇ ಎಲ್ಲಾದರು ದೇಶಾಂತರ ಹೊರಟು ಹೋಗುತ್ತೇನೆ, ನನ್ನ ಮೃತದೇಹಕ್ಕೆ ಏನಾಯಿತು ಎಂದು ಸಹ ಗೊತ್ತಾಗುವುದಿಲ್ಲ…”

ಅಮ್ಮ ಉತ್ತರಿಸುವ ಮೊದಲೇ, ಅಕ್ಕ ನಗುತ್ತಾ ಮೂರ್ಛೆ ಹೋದಳು. ಅವಳು ಪ್ರತಿಬಾರಿ ಒಂದು ಚೂರು ಪೆಟ್ಟಾಗದ ಹಾಗೇ ಬೀಳೋಳು. ಬವಳಿ ಬಂದಾಗ ಕಣ್ಣು ಮಿಟುಕ್ಕಿಸಿ ಮತ್ತೆ ನಗೋಳು. ಅವಳು ನಟಿಸುತ್ತಿದ್ದಾಳೆ ಎನಿಸಿದರೂ ಅದು ಭಯಾನಕ ನಿಜವಾಗಿತ್ತು.

ನನಗೂ ಕೂಡ ಈ ಆಧುನಿಕ ಆಲೋಚನೆಗಳು ಪರಿಣಾಮ ಬೀರಿದ್ದವು. ನಾನು ಕೂಡ ನನ್ನದೇ ಶೈಲಿಯಲ್ಲಿ ಬರೆಯಲು ತೊಡಗಿದೆ. ಅಪ್ಪನ ಮೇಜಿನ ಖಾನೆಯಿಂದ ಹಾಳೆಗಳನ್ನ ತೆಗೆದುಕೊಂಡು ಅವುಗಳ‌ ತುಂಬಾ ಗೀಚುಬರಹ ಮತ್ತು ಮನಬಂದ ಚಿತ್ರಗಳಿಂದ ತುಂಬಿಸಿದೆ. ನಾನು ಈ ಶಿಶು ಬರಹದಲ್ಲಿ ಎಷ್ಟು ಮುಳುಗಿದ್ದೆ ಎಂದರೆ ಸಬ್ಬಾತ್ ಬೇಗ ಮುಗಿದರೆ ಮತ್ತೆ ಬರೆಯಲು ಹೋಗಬಹುದೆಂದು ಕಾಯುತ್ತಿದ್ದೆ.

ಅಮ್ಮ, ನನ್ನನು ಗಮನಿಸುತ್ತಾ, “ನೀನೇನು ಮಾಡ್ತಾ ಇದ್ದೀಯಾ ಅಂತ ಯೋಚಿಸಿದ್ದೀಯಾ? ಸಾಮಾನ್ಯ ಮಕ್ಕಳು ಈ ರೀತಿ ವರ್ತಿಸುವುದಿಲ್ಲಾ.” ಎಂದು ಹೇಳೋಳು.