ಅಮ್ಮ ತನ್ನ ಭಾವಿ ವರನನ್ನು ಭೇಟಿಯಾದಾಗ ಪೂರ್ಣ ಕೆಂಪು ಗಡ್ಡದ ಈ ಮನುಷ್ಯನನ್ನು ನೋಡಿ ಮುಜುಗರವಾಗಿತ್ತಂತೆ. ಆದರೆ ಅವನು ಅವಳ ತಂದೆಯ ಜೊತೆಗಿನ ಧಾರ್ಮಿಕ ಪ್ರಶ್ನೆಗಳ ಚರ್ಚೆಯಿಂದಾಗಿ ಗೌರವದ ಜೊತೆಗೆ ಅವನನ್ನು ಮೆಚ್ಚಿಕೊಂಡಳಂತೆ. ನನಗೆ ಹೇಳಿದ್ದಳು ಅವಳಿಗಿಂತ ಐದು ವರ್ಷಕ್ಕೆ ದೊಡ್ಡವನಿದ್ದ ವರ ಸಿಕ್ಕಿದ್ದು ಸಂತಸವಾಗಿತ್ತು ಎಂದು. ಟೆಮರ್ಲ್ ಅಜ್ಜಿ ಅಮ್ಮನಿಗೆ ಧರಿಸಲು ಆಗದಂತಹ ತೂಕದ ಚಿನ್ನದ ಸರವೊಂದನ್ನು ಉಡುಗೊರೆಯಾಗಿ ನೀಡಿದ್ದಳು. ಅದು ಕನಿಷ್ಠ ಇನ್ನೂರು ವರ್ಷಗಳ ಹಳೆಯದಿದ್ದಿರಬೇಕು.
ಸ್ಮಿತಾ ಮಾಕಳ್ಳಿ ಅನುವಾದಿಸುತ್ತಿರುವ ಐಸಾಕ್ ಬಾಶೆವಿಸ್ ಸಿಂಗರನ ‘ಇನ್ ಮೈ ಫಾದರ್ಸ್ ಕೋರ್ಟ್‌ʼ ಆತ್ಮಕಥನದ ಸರಣಿಯ ಆರನೆಯ ಕಂತು

 

ಅಪ್ಪನ ಮನೆತನ ಅಮ್ಮನ ಮನೆತನಕ್ಕಿಂತ ತುಂಬಾ ಪ್ರಸಿದ್ಧವಾಗಿತ್ತು, ಆದರೆ ಅಪ್ಪ ಅವರುಗಳ ಬಗ್ಗೆ ಮಾತನಾಡುತ್ತಿದ್ದದ್ದೇ ಬಹಳ ವಿರಳವಾಗಿತ್ತು. ನಮ್ಮಪ್ಪನ ಅಪ್ಪ ತೋಮಸ್ಜೋವ್‌ನಲ್ಲಿ ಸಹಾಯಕ ರಬ್ಬಿಯಾಗಿದ್ದ ರೆಬ್ ಸ್ಯಾಮುಯೆಲ್‌; ಅವನ ಅಪ್ಪ ರೆಬ್ ಇಸಯಾ ಕೊನ್ಸ್ಕರ್, ಅನುಭಾವಿ ಪಂಥಗಳೊಂದರವನು (ಹಸಿದ್) ಜೊತೆಗೆ ಯಾವುದೇ ಕಚೇರಿಯಿಲ್ಲದ ವಿದ್ವಾಂಸ ಭೋದಕನಾಗಿದ್ದ; ರೆಬ್ ಇಸಯಾನ ತಂದೆ ರೆಬ್ ಮೋಶೆ, ದಿ ಸೇಕ್ರೆಡ್ ಲೆಟರ್ ನ ಕರ್ತೃ ಮತ್ತು ವಾರ್ಸಾದ ಪ್ರಾಜ್ಞ ಎಂದೇ ಪ್ರಸಿದ್ಧನಾಗಿದ್ದ. ರೆಬ್ ಮೋಶೆಯ ಅಪ್ಪ ರೆಬ್ ಟೋಬಿಯಾಸ್, ಸ್ಜೆಟೆಕ್ಟ್ಯಿನ್ ರಬ್ಬಿ, ಅವನ ತಂದೆ ರೆಬ್ ಮೋಶೆ, ನ್ಯೂಫೆಲ್ಡ್ ರಬ್ಬಿ. ಈ ರೆಬ್ ಮೋಶೆ ಹೆಸರಾಂತ ಬಾಲ್ ಶೆಮ್ ರ ಅನುಯಾಯಿ ಆಗಿದ್ದ. ರೆಬ್ ಮೋಶೆಯ ಅಪ್ಪ ರೆಬ್ ಜ್ವಿಹಿರ್ಷ್, ಜೋರ್ಕರ್ ರಬ್ಬಿಯಾಗಿದ್ದ.

ನನ್ನ ಅಪ್ಪನ ತಾಯಿ ಟೆಮರ್ಲ್‌ನ ಮೂಲ ಇದಕ್ಕಿಂತಲೂ ಹಿಂದಕ್ಕೆ ಹೋಗುತ್ತದೆ.

ನಮ್ಮಪ್ಪನ ಅಪ್ಪ, ರೆಬ್ ಸ್ಯಾಮುಯೆಲ್‌ ಸುಮಾರು ವರ್ಷಗಳು ರಬ್ಬಿಯಾಗಲು ಒಪ್ಪಿರಲಿಲ್ಲವಂತೆ. ಅದರ ಬದಲಾಗಿ ಅವನು ತನ್ನನ್ನು ಕಬಾಲ ಓದಿಗೆ ಅರ್ಪಿಸಿಕೊಂಡಿದ್ದರಂತೆ. ಆಗ್ಗಾಗೆ ಉಪವಾಸ ಮಾಡುತ್ತಿದ್ದರಂತೆ ಮತ್ತು ಯಥೇಚ್ಛವಾಗಿ ಬೆವರುತ್ತಿದ್ದ ಕಾರಣ ಪ್ರತಿ ಬೆಳಗ್ಗಿನ ಪ್ರಾರ್ಥನೆಗೆ ಅವರ ಹೆಂಡತಿ ಹೊಸ ಶರ್ಟನ್ನು ಕೊಡಬೇಕಿತ್ತಂತೆ, ಆ ದಿನಗಳಲ್ಲಿ ಇದು ಕೇಳರಿಯದ ಐಷಾರಾಮಿಯಾಗಿತ್ತು. ಅಜ್ಜಿ ಟೆಮರ್ಲ್ ಳ ಅಮ್ಮ ರತ್ನ ವ್ಯಾಪಾರಿಯಾಗಿ ಗಂಡನನ್ನ ಪೋಷಿಸಿದ್ದಳು. ನನ್ನಜ್ಜಿ ಕೂಡ ಅದನ್ನೇ ಮಾಡಿದ್ದಳು. ಆ ಕಾಲದಲ್ಲಿ ಹೆಂಗಸು ಬಹಳಷ್ಟು ಮಕ್ಕಳನ್ನು ಹೆರುವುದು, ಅಡುಗೆ ಮಾಡುವುದು, ಮನೆ ನಡೆಸುವುದು ಮತ್ತು ಸಂಪಾದಿಸುವುದು -ಆಗ ಗಂಡಸು ಟೋರಾ ಅಧ್ಯಯನದಲ್ಲಿ ತೊಡಗಿಕೊಳ್ಳುವುದು ಒಪ್ಪಿತವಾಗಿತ್ತು. ನಮ್ಮ ಅಜ್ಜಿಯರು ಯಾವುದೇ ಗೊಣಗಾಟವಿಲ್ಲದೇ, ಇಂತಹ ವಿದ್ವಾಂಸರನ್ನು ಗಂಡನನ್ನಾಗಿ ಕೊಟ್ಟ ದೇವರನ್ನು ಕೊಂಡಾಡುತ್ತಿದ್ದರು. ನಂತರದ ವರ್ಷಗಳಲ್ಲಿ, ಅಜ್ಜಿಗೆ ಇನ್ನು ಸಂಪಾದಿಸಲು ಸಾಧ್ಯವಿಲ್ಲ ಎಂದಾದಾಗ ತಾತ ರಬ್ಬಿಯಾಗಲು ಒಪ್ಪಿದ್ದ.

ಸುಮಾರು ವರ್ಷಗಳು ರೆಬ್ ಸಾಮ್ಯುಯೆಲ್ ಮೌನವ್ರತ ಮಾಡಿಕೊಂಡು ತನ್ನಷ್ಟಕ್ಕೆ ತಾನು ಇದ್ದುಬಿಟ್ಟಿದ್ದನು, ಇತ್ತ ಅಜ್ಜಿ ಟೆಮರ್ಲ್, ಜನರ ಜೊತೆ ಬೆರೆಯುತ್ತಿದ್ದ ಕಾರಣ ಎಲ್ಲರೂ ಅವಳನ್ನ ಇಷ್ಟಪಡೋರು. ಅವಳು ಹಿಂಡೆ ಎಸ್ತರ್ ಮಗಳು. ಹೆಸರಾಂತ ರಬ್ಬಿ ಶಾಲೋಮ್ ಬೆಲ್ಜರ್ನ್ ಭೇಟಿ ಮಾಡಲು ಹೋಗಿದ್ದಾಗ ಎಸ್ತಾರ್ ಗೆ ಕುಳಿತುಕೊಳ್ಳಲು ಕುರ್ಚಿಯನ್ನು ನೀಡಿದ್ದರು. ನಮ್ಮ ಅಜ್ಜಿಗೆ ಅವಳ ಮಕ್ಕಳೆಲ್ಲಾ ಟೋರಾ ಕಲಿತವರಾಗಿರಬೇಕೆಂಬುದು ಬಹಳ ತೀವ್ರದ ಆಸೆಯಾಗಿತ್ತು.

ಅವಳ ಹಿರಿ ಮಗ, ಇಸಯ್ಯ ಮದುವೆಯಾಗಿ ಗಲಿಷಿಯಾದ ರೋಹಟಿನ್ನಲ್ಲಿ ನೆಲೆಸಿದ್ದ. ತುಂಬಾ ಸಿರಿವಂತನಾಗಿದ್ದ ಹಾಗೇ ಅರ್ಪಿತ ಬೆಲ್ಜ್ ಹಸಿದ್ ಆಗಿದ್ದ. ಅವಳ ಇಬ್ಬರು ಹೆಣ್ಣು ಮಕ್ಕಳು ಮದುವೆಯಾಗಿ ಹಂಗೇರಿಯಲ್ಲಿದ್ದರು, ಒಬ್ಬ ಮಗ ತೀರಿ ಹೋಗಿದ್ದನು. ಕಡೆ ಮಗನಾಗಿದ್ದ ನಮ್ಮ ತಂದೆಗೆ ಅಜ್ಜಿಯ ಎಲ್ಲಾ ಪ್ರೀತಿ ಮತ್ತು ಗಮನ ಸಿಕ್ಕಿತ್ತು. ಅವಳಿಗೆ ಅವನ ಬಗ್ಗೆ ತೃಪ್ತಿ ಇತ್ತು ಏಕೆಂದರೆ ಅವನು ಪಾಂಡಿತ್ಯ ಮತ್ತು ಯಹೂದಿ ಮಾರ್ಗಗಳ ಬದ್ದ ಅನುಸಾರಿಯಾಗಿದ್ದ. ಆವಾಗೆಲ್ಲಾ ಬೇರೆ ಯುವಕರು ಲೌಕಿಕವಾಗಿ ಬೆಳೆಯುಲು ಶುರುವಿಟ್ಟಿದ್ದರು, ಹೊಸ ನಮೂನಿಯಲ್ಲಿ ಸಿಂಗರಿಸಿಕೊಳ್ಳುತ್ತಿದ್ದರು, ಮತ್ತು ಕೆಲವು ಸಲ ತೋಮಸ್ಜೋವ್ ಗೆ ಬರುತ್ತಿದ್ದ ಹೀಬ್ರೂ ಸುದ್ದಿಪತ್ರಿಕೆ ಮತ್ತು ಮ್ಯಾಗಜೀನ್ ಗಳನ್ನ ಓದುತ್ತಿದ್ದರು. ಆದರೆ ಇದ್ಯಾವುದೂ ನಮ್ಮಪ್ಪನ ಮೇಲೆ ಪ್ರಭಾವ ಬೀರಲಿಲ್ಲ.

ಅವನು ತನ್ನ ಸಾಂಪ್ರದಾಯಿಕ ಉದ್ದ ಕಾಲುಚೀಲ, ಅರ್ಧ ಬೂಟುಗಳು, ಕತ್ತಿನ ಸುತ್ತ ಕರವಸ್ತ್ರ ಮತ್ತು ಕಿವಿಯ ಪಕ್ಕಕ್ಕೆ ಇಳಿಬಿಟ್ಟ ಉದ್ದನೆಯ ಕೂದಲುಗಳ ಜೊತೆ ಮುಂದುವರೆದೇ ಇದ್ದ. ಒಬ್ಬ ಸಂತನಾಗುವುದೇ ಅವನ ಬಾಲ್ಯದ ಕನಸಾಗಿತ್ತು. ಹದಿನೈದರ ಹೊತ್ತಿಗೆ ವ್ಯಾಖ್ಯಾನಗಳನ್ನ ಬರೆಯಲು ಶುರುವಿಟ್ಟಿದ್ದ ಮತ್ತು ಇನ್ನಿತರ ಹುಡುಗರು ಅವನ ಬಗ್ಗೆ, ಅವನ ಸ್ವಪ್ನದ ದಾರಿಯ ಬಗ್ಗೆ ಜಾಗರೂಕರಾಗಿ ಇದ್ದರು. ಅವನಿಗೆ ಮೇಕೆ ಅಥವಾ ತೋಳ ಆಟದ ಮೇಲಿನ ಶೂನ್ಯ ಆಸಕ್ತಿ (ಅಥವಾ ಹನುಕ್ಕಾದಲ್ಲಿನ ಇಸ್ಪೀಟೆಲೆಗಳ), ಅವನ ಹೆಚ್ಚುಗಾರಿಕೆ ಮತ್ತು ದೂರುವಿರುವಿಕೆಯ ಮೇಲೆ ಅವರಿಗೊಂದು ಅಸಮಾಧಾನ ಇತ್ತು.

ಹದಿನಾರರ ವಯಸ್ಸಿಗಾಗಲೇ ಕೆಂಪು ಗಡ್ಡ ಬೆಳೆದಿದ್ದ ಅಪ್ಪನಿಗೆ ಬೇಗನೇ ಮದುವೆ ಮಾಡಬೇಕೆಂದಿದ್ದಳು ಅಜ್ಜಿ. ಆದರೆ ಹಳೇ ಶೈಲಿಯ ಯುವಕರು ಶ್ರೀಮಂತ ಭಾವೀ ಮಾವಂದಿರಿಗೆ ಆಕರ್ಷಕವಾಗಿರುತ್ತಿರಲಿಲ್ಲ. ಇದರ ಜೊತೆಗೆ ವಿಷಯವನ್ನು ಇನ್ನೂ ಹೆಚ್ಚು ಕಷ್ಟ ಮಾಡಲು ಅಜ್ಜಿ ವಧು ವ್ಯಾಪಾರಸ್ಥ ಕುಟುಂಬದವಳಾಗಿರದೇ, ರಬ್ಬಿಗಳ ಮನೆತನದವಳಾಗಿರಬೇಕೆಂದು ಆಗ್ರಹ ಮಾಡಿದ್ದಳು. ಕೊನೆಗೂ, ನಮ್ಮಪ್ಪನಿಗೆ ನಿಶ್ಚಿತಾರ್ಥವಾಯಿತು. ಅವನ ವಧು ಸತ್ತು ಹೋದಳು. ಮತ್ತು ಅವನಿಗೆ ಕಡ್ಡಾಯ ಸೈನ್ಯ ಭರ್ತಿಗೆ ಕರೆ ಬಂದಿತು.

ಯುವಕನಾಗಿದ್ದ ನನ್ನಪ್ಪನಿಗೆ ತ್ಸಾರ್ ದೊರೆಯ ಸೇವೆ ಮಾಡುವುದಕ್ಕಿಂತಲೂ ಅತಿಕೆಟ್ಟದ್ದು ಮತ್ತೊಂದಿರಲಿಲ್ಲ. ಆದರೆ ಅಜ್ಜಿ ಅವನಷ್ಟಕ್ಕೇ ಅವನು ದುರ್ಬಲನಾಗಲು ಬಿಡುತ್ತಿರಲಿಲ್ಲ ಮತ್ತು ಅವನ ಏಕೈಕ ಆಸರೆ ಎಂದರೆ ದೇವರಿಗೆ ಪ್ರಾರ್ಥಿಸುವುದು ಮಾತ್ರವೇ.

ಆಗಿನ ದಿನಗಳಲ್ಲಿನ ನೇಮಕಾತಿಯಲ್ಲಿ ಅತಿ ಹೆಚ್ಚು ಅಂಕಗಳಿದ್ದವರನ್ನು ಮಾಫುಮಾಡಲಾಗುತಿತ್ತು. ಅಪ್ಪ ಹೆಚ್ಚಿನ ಅಂಕ ತೆಗೆದಿದ್ದ, ಹೀಗೆ ತನ್ನನ್ನ ತಾನು ಪ್ರಾಥಮಿಕವಾಗಿ ವೈದ್ಯರ ಎದುರು ಬೆತ್ತಲಾಗುವ ಮುಜುಗರವನ್ನ ತಪ್ಪಿಸಿಕೊಂಡಿದ್ದ. ಸುಮಾರು ವರ್ಷಗಳ ಕಾಲ ದೇವರು ಅವನಿಗೆ ತೋರಿಸಿದ್ದ ಕರುಣೆಯ ಬಗ್ಗೆ ಉಲ್ಲೇಖಿಸುತ್ತಲಿರುತ್ತಿದ್ದ.

ಅಪ್ಪನ ಕುಟುಂಬಕ್ಕೆ ಅವನು ಸೈನ್ಯದ ಸೇವೆಯಿಂದ ಬಿಡುಗಡೆಯಾದ ಬಳಿಕವಷ್ಟೇ ಅರಿವಾಗತೊಡಗಿದ್ದದ್ದು, ಅವನು ಆಗಲೇ ೨೧ ವರ್ಷದ ಹಳೆಯ ಬ್ರಹ್ಮಚಾರಿ ಎಂದು! ಅವನ ಉದ್ದ ಕಾಲುಚೀಲ, ಅರ್ಧ ಶೂಗಳು, ಸೊಂಟದ ಮೇಲಿನ ಪಟ್ಟಿ, ವೆಲ್ವೆಟ್ ಟೋಪಿ ಒಳಗಿನ ಬುರುಡೆ ಟೋಪಿ, ಪೂರ್ಣ ಗಡ್ಡ ಮತ್ತು ಕಿವಿಯ ಪಕ್ಕ ಇಳಿಬಿದ್ದ ಉದ್ದನೆಯ ಕೂದಲಿನಿಂದಾಗಿ ನೋಡಲು ವಯಸ್ಸಾದ ಹಸಿದ್ ನಂತೆ ಕಾಣುತ್ತಿದ್ದ. ಯಹೂದಿಯಾಗಿ ಬದುಕಬೇಕೆಂಬ ಒಂದೇ ಒಂದು ಬಯಕೆಯಿಂದ ಸಂಪೂರ್ಣವಾಗಿ ಧರ್ಮ ನಿಷ್ಠೆಯಲ್ಲಿ ಮುಳುಗಿದ್ದ ಅವನಿಗೆ ಯಾರಿಗಾದರೂ ಏನಾದರೂ ಹೇಳಲು ಬಹಳ‌ ಕಡಿಮೆ ಇತ್ತು.

ಅವನ ರೂಢಿಗೆ ತಪ್ಪಿದ ಒಂದೇ ಒಂದು ವಸ್ತುವೆಂದರೆ ಅದು ಮದುವೆಯಾದವರು ಹಾಕಿಕೊಳ್ಳುವ ಪ್ರಾರ್ಥನೆಯ ಹೊದಿಕೆಯಾಗಿತ್ತು. ನಯಗೊಳಿಸಿದ ಬೂಟುಗಳು ಮತ್ತು ಚಿನ್ನದ ಚೌಕಟ್ಟಿನ ಕನ್ನಡಕ ತೊಟ್ಟ ಇತರ ಯುವಕರು, ಪಿನ್ಹೋಸ್ -ಮೆಂಡೆಲ್ ಅಲೆಮಾರಿ ರಬ್ಬಿಯಾಗಲು ಹಾತೊರೆಯುತ್ತಿದ್ದಾನೆ ಎಂದು ತಮಾಷೆ ಮಾಡೋರು, ಅದು ನಿಜವೇ ಆಗಿತ್ತು. ಅಪ್ಪನಿಗೆ ತನ್ನ ಆತ್ಮವನ್ನ ಎಷ್ಟರ ಮಟ್ಟಿಗೆ ಪರಿಶುದ್ಧವಾಗಿರಿಸಬೇಕೆಂದಿತ್ತು ಎಂದರೆ ಅವನು ಅದ್ಭುತಗಳನ್ನು ಮಾಡಲು ಅರ್ಹನಾಗುವಷ್ಟು. ಅವನು, ಗೆಮೆರಾ ಜೊತೆಗೆ ಧರ್ಮಗ್ರಂಥಗಳು, ಹಸಿದಿಕ್ ಪುಸ್ತಕಗಳು ಮತ್ತು ಕಬಾಲದ ಸಾಂರ್ಧಬಿಕ ಪುಸ್ತಕಗಳನ್ನು ಓದುತ್ತಿದ್ದ.

ಆ ಕಾಲದಲ್ಲಿ ಹೆಂಗಸು ಬಹಳಷ್ಟು ಮಕ್ಕಳನ್ನು ಹೆರುವುದು, ಅಡುಗೆ ಮಾಡುವುದು, ಮನೆ ನಡೆಸುವುದು ಮತ್ತು ಸಂಪಾದಿಸುವುದು -ಆಗ ಗಂಡಸು ಟೋರಾ ಅಧ್ಯಯನದಲ್ಲಿ ತೊಡಗಿಕೊಳ್ಳುವುದು ಒಪ್ಪಿತವಾಗಿತ್ತು. 

ಅದಾಗ್ಯೂ ಅವನ ನಡತೆ ಅವನ ತಾಯಿಗೆ ತೃಪ್ತಿಕರವಾಗಿತ್ತು, ಆದರೆ ಅದು ಇತರರಿಗೆ ಹಳೆಯ ಮಾದರಿಯಾಗಿತ್ತು. ರಬ್ಬಿನಿಕಲ್ ಕುಟುಂಬದ ಹೆಣ್ಣುಮಕ್ಕಳು ಸಹ ಆಧುನಿಕ ಪುಸ್ತಕಗಳನ್ನು ಓದುತ್ತಿದ್ದರು, ಸೊಗಸಾಗಿ ಉಡುಪು ಧರಿಸುತ್ತಿದ್ದರು, ಆರೋಗ್ಯ ಚಿಲುಮೆಗಳಿಗೆ ಭೇಟಿ ನೀಡುತ್ತಿದ್ದರು, ಸಂರಕ್ಷಕರಿಲ್ಲದೆ ಓಡಾಡುತ್ತಿದ್ದರು, “ಜರ್ಮನ್” ಮಾತನಾಡುತ್ತಿದ್ದರು ಮತ್ತು ಅಪರೂಪಕ್ಕೆ ಆಧುನಿಕ ಹ್ಯಾಟ್‌ಗಳನ್ನು ಧರಿಸುತ್ತಿದ್ದರು.

ಯುವ ರಬ್ಬಿಗಳು ಲೌಕಿಕ ವಿಷಯಗಳ, ವಾಣಿಜ್ಯ ಮತ್ತು ಪ್ರಪಂಚದ ವ್ಯವಹಾರಗಳ ಬಗ್ಗೆ ತಿಳಿದಿರೋದು ಅನಿವಾರ್ಯವಾಗಿತ್ತು. ಆದರೆ ಅಪ್ಪ ಈ ಮಾದರಿಯೊಳಗೆ ಸೇರುವ ಅಳಿಯನಾಗಿರಲಿಲ್ಲ.

ಬಿಲ್ಗೋರೆಯ ಪ್ರಾಂತ್ಯದಲ್ಲಿ ಬಹಳ ಪ್ರಸಿದ್ಧವಾಗಿದ್ದ ರಬ್ಬಿಯ ಮಗಳ ಜೊತೆಗೆ ಮದುವೆಯ ಪ್ರಸ್ತಾಪಿಸಲಾಯಿತು. ಹಿಂದೆ ಕೋವೆಲ್ ಗೆ ಸಮೀಪವಿದ್ದ ಮ್ಯಾಕಿಜೆವ್ ನ ರಬ್ಬಿಯಾಗಿದ್ದರು ಮತ್ತು ಅದಕ್ಕೂ ಮೊದಲು ಸ್ಜೆಡ್ಲ್ಸ್ ಪ್ರಾಂತ್ಯದ ಪ್ಯೂರಿಕ್‌ನಲ್ಲಿ. ಅವರೊಬ್ಬ ಗತಕಾಲದಲ್ಲಿ ಬದುಕುತ್ತಿದ್ದ ರಬ್ಬಿಯಾಗಿದ್ದರು. ಒಂದು ಸಲ ನಾಟಕದ ತಂಡವೊಂದು ಬಿಲ್ಗೋರೆಯಲ್ಲಿ ಕಾಣಿಸಿಕೊಂಡಿತ್ತು, ತನ್ನ ಮೇಲಂಗಿಯನ್ನು ಹಾಕಿಕೊಂಡು ನಾಟಕ ನಡೆಯುತ್ತಿದ್ದ ಕೊಟ್ಟಿಗೆಗೆ ಹೋಗಿ ಪ್ರೇಕ್ಷಕರ ಸಮೇತವಾಗಿ ಎಲ್ಲರನ್ನೂ ಓಡಿಸಿದ್ದರು. ಅದಾಗ್ಯೂ ಬಿಲ್ಗೋರೆ ಪ್ರಬುದ್ಧತೆಯಲ್ಲಿ ಜ಼ಮೊಸ್ಕ್ಜ್ ಮತ್ತು ಶೆಬ್ರೆಶಿನ್ ಗೆ ಹತ್ತಿರದಲ್ಲೇ ಇತ್ತು, ಅಲ್ಲಿ “ಧರ್ಮದ್ರೋಹಿ” ಜಾಕೋಬ್ ರೀಫ್ಮನ್ ವಾಸಿಸುತ್ತಿದ್ದ. ಪಟ್ಟಣದ ಹಿರೀಕರು ಮತ್ತು ಹಸಿದಿಮ್ ಸಹಾಯದಿಂದ ತಾತ ಬಿಲ್ಗೋರೆಯನ್ನ ಸ್ವತಃ ಹಿಡಿದಿಟ್ಟುಕೊಂಡಿದ್ದ. ಕೆಲವು ಅತ್ಯಾಧುನಿಕರಿಗೆ ತಾತ ಒಬ್ಬ ಮತಾಂಧ, ಅಜ್ಞಾನದ ಸರಬರಾಜು ಆಗಿದ್ದ. ಇದರ ಹೊರತಾಗಿಯೂ ಅವರೆಂದರೆ ಗೌರವ ಮತ್ತು ಭಯವಿತ್ತು.

ಎತ್ತರ, ವಿಶಾಲ ಮತ್ತು ಶಕ್ತಿಯುತವಾಗಿ ಇದ್ದ ಇವರು ವೃದ್ಧಾಪ್ಯದಲ್ಲೂ ಎಲ್ಲಾ ಹಲ್ಲುಗಳನ್ನು ಮತ್ತು ಕೂದಲಗಳನ್ನು ಉಳಿಸಿಕೊಂಡಿದ್ದರು. ಜೊತೆಗೆ ಅವರು ಗಣಿತಶಾಸ್ತ್ರಜ್ಞ ಮತ್ತು ಹೀಬ್ರೂ ವ್ಯಾಕರಣದ ನಿಪುಣ ಎಂದೆ ಪ್ರಸಿದ್ಧರಾಗಿದ್ದರು. ಅವರ ಆಜ್ಞೆ ಪುರಾತನ ನಾಯಕರುಗಳ ಹಾಗೇ ಇತ್ತು, ಅವರು ಬಿಲ್ಗೋರೆಯಲ್ಲಿ ವಾಸಿಸುತ್ತಿದ್ದಷ್ಟು ಕಾಲ‌ ಅಲ್ಲಿ ಧರ್ಮ ಶ್ರದ್ಧೆ ಉಳಿದಿತ್ತು.

ಯೋಜಿಸಲಾಗಿದ್ದ ಪ್ರಸ್ತಾಪ ಅಪ್ಪನಿಗೆ ಚೂರು ಆತಂಕ ಹುಟ್ಟಿಸಿತ್ತು . ಕಾರಣ ಧರ್ಮನಿಷ್ಠೆಯ ಹೊರತಾಗಿ ಬಿಲ್ಗೋರೆಯ ರಬ್ಬಿ ಎಷ್ಟು ಪೂರ್ವಚಾರದಲ್ಲಿ ಮುಳುಗಿದ್ದರೆಂದರೆ ಹಸಿದಿಮ್ ನ ಸನ್ನೆಗಳು, ಪಠಣಗಳು, ರಬ್ಬಿನಿಕ್ ನ್ಯಾಯಾಲಯದ ಭೇಟಿಗಳು ಮತ್ತು ಅತೀಂದ್ರಿಯ ಕಾರ್ಯಾಚರಣೆಗಳಿಂದ ಅಶುದ್ಧವಾಗಿವೆ ಎಂದು ಅವರಿಗೆ ಅನ್ನಿಸಿತ್ತು. ಅವರು ಅವರ ಪಟ್ಟಣವನ್ನು ನಿರಂಕುಶಾಧಿಕಾರಿಯಂತೆ ಆಳ್ವಿಕೆ ಮಾಡಿದ್ದರು, ಅವರ ಇಬ್ಬರು ಗಂಡು ಮಕ್ಕಳು ತೀಕ್ಷ್ಣ ಬುದ್ಧಿಗೆ ಹೆಸರುವಾಸಿಯಾಗಿದ್ದರು. ಅಪ್ಪನಿಗೆ ತಾನು ಅಲ್ಲಿಗೆ ಸರಿಹೊಂದುವುದಿಲ್ಲ ಎಂಬ ಭಯವಿತ್ತು.

ಆದರೆ ಈ ಅವಕಾಶವನ್ನು ತಿರಸ್ಕರಿಸುವುದು ಅಷ್ಟು ಸುಲಭವೂ ಆಗಿರಲಿಲ್ಲ. ಅಮ್ಮನಿಗೆ ಆಗ ೧೬, ಅವಳು ವಿವೇಕ‌ ಮತ್ತು ಪಾಂಡಿತ್ಯಕ್ಕೆ ಹೆಸರಾಗಿದ್ದವಳು. ಅವಳಿಗೆ ಒಂದೇ ದಿನಕ್ಕೆ ಎರಡು ಸಂಬಂಧಗಳನ್ನು ಪ್ರಸ್ತಾಪಿಸಲಾಗಿತ್ತು. ಒಂದು ನಮ್ಮಪ್ಪನದು. ಇನ್ನೊಂದು ಲುಬ್ಲಿನ್ನ ಸಿರಿವಂತ ಕುಟುಂಬದ ಮಗನೊಬ್ಬನದು. ತಾತ ಅಮ್ಮನಿಗೆ ನೀನು ಯಾವುದಕ್ಕೆ ಆದ್ಯತೆ ನೀಡುತ್ತೀಯ? ಎಂದು ಕೇಳಿದಾಗ

“ಇಬ್ಬರಲ್ಲಿ ಯಾರು ಉತ್ತಮ ವಿದ್ವಾಂಸ?” ಕೇಳಿದಳು.

“ತೋಮಸ್ಜೋವ್ನಲ್ಲಿ ಇರುವವನು.”

ಅಲ್ಲಿಗೆ ಅವಳಿಗೆ ದೃಢವಾಯಿತು. ಆದರೆ ಕಟ್ಟಳೆಗಳಿಗೆ ಸಹಿ ಮಾಡುವಾಗ ಅಪ್ಪನ ಮನೆಯವರ ವೇಷ ಅವಳ ಕುಟುಂಬಕ್ಕೆ ಒಂದು ರೀತಿಯ ಅಪಮಾನದಂತಿತ್ತು. ಅಜ್ಜಿ ಟೆಮರ್ಲ್ ತೊಟ್ಟಿದ್ದ ಸ್ಯಾಟಿನ್ ಉಡುಪು ಸುಮಾರು ನೂರು ವರ್ಷಗಳ ಹಳೆಯ ಮಾದರಿಯದಾಗಿತ್ತು ಮತ್ತು ಅವಳ ಬಾನೆಟ್ ಇದುವರೆಗೂ ಯಾರು ನೋಡಿರದಿದ್ದಂತಹ ಗಂಟುಗಳ, ಹವಳಗಳ ಮತ್ತು ಪಟ್ಟೆಗಳಿಂದ ಕೂಡಿದ್ದ ಸಮೂಹವಾಗಿತ್ತು. ಜೊತೆಗೆ ಅವಳ ಮಾತಿನ ರೀತಿಯೂ ಪುರಾತನವಾಗಿತ್ತು. ಇನ್ನೂ ನಮ್ಮಪ್ಪ ಮದುಮಗನಿಗಿಂತ ಹೆಣ್ಣು ಕೊಟ್ಟ ಮಾವನ ರೀತಿ ಕಾಣುತ್ತಿದ್ದ. ಅವನ ತಂದೆ ರೆಬ್ ಸ್ಯಾಮುಯೆಲ್‌ ಮೌನವಾಗಿದ್ದ. ನಿಶ್ಚಿತಾರ್ಥವಾಗಿದ್ದ ಮಿಕ್ಕ ಗಂಡುಗಳು ಅಪ್ಪನ ಜೋಡಿ ಅಂಗಡಿಗಳ, ಮನೆ, ಗಡಿಯಾರ, ತಿರುಗಾಟ ಮತ್ತು ರಾಜಕೀಯಗಳ ಬಗ್ಗೆ ಮಾತನಾಡಲು ಪ್ರಯತ್ನಿಸಿದರು, ಅವನು ಏನೊಂದೂ ಮಾತನಾಡಲಿಲ್ಲ. ಅವನಿಗೆ ದೇವರ ಸೇವೆಯ ಹೊರತಾಗಿ ಇವ್ಯಾವು ಗೊತ್ತಿರಲಿಲ್ಲ. ಪೋಲೀಶ್ ಅಥವಾ ರಷ್ಯನ್ ಭಾಷೆಗಳು ಸಹ ಮಾತನಾಡಲು ಬರುತ್ತಿರಲಿಲ್ಲ. ಅಲ್ಲದೆ ಯೆಹೂದ್ಯೇತರ ಲಿಪಿಗಳಲ್ಲಿ ತನ್ನ ವಿಳಾಸವನ್ನು ಬರೆಯಲು ಬರುತ್ತಿರಲಿಲ್ಲ. ಟೋರಾ ಮತ್ತು ಪ್ರಾರ್ಥನೆಯ ಆಚೆಗೆ ಅವನಿಗೆ ಪ್ರಪಂಚದ ತುಂಬಾ ದುಷ್ಟ ಶಕ್ತಿ, ದೆವ್ವಗಳು ಮತ್ತು ರಾಕ್ಷಸರಿಂದ ತುಂಬಿತ್ತು.

ಅಮ್ಮ ತನ್ನ ಭಾವಿ ವರನನ್ನು ಭೇಟಿಯಾದಾಗ ಪೂರ್ಣ ಕೆಂಪು ಗಡ್ಡದ ಈ ಮನುಷ್ಯನನ್ನು ನೋಡಿ ಮುಜುಗರವಾಗಿತ್ತಂತೆ. ಆದರೆ ಅವನು ಅವಳ ತಂದೆಯ ಜೊತೆಗಿನ ಧಾರ್ಮಿಕ ಪ್ರಶ್ನೆಗಳ ಚರ್ಚೆಯಿಂದಾಗಿ ಗೌರವದ ಜೊತೆಗೆ ಅವನನ್ನು ಮೆಚ್ಚಿಕೊಂಡಳಂತೆ. ನನಗೆ ಹೇಳಿದ್ದಳು ಅವಳಿಗಿಂತ ಐದು ವರ್ಷಕ್ಕೆ ದೊಡ್ಡವನಿದ್ದ ವರ ಸಿಕ್ಕಿದ್ದು ಸಂತಸವಾಗಿತ್ತು ಎಂದು. ಟೆಮರ್ಲ್ ಅಜ್ಜಿ ಅಮ್ಮನಿಗೆ ಧರಿಸಲು ಆಗದಂತಹ ತೂಕದ ಚಿನ್ನದ ಸರವೊಂದನ್ನು ಉಡುಗೊರೆಯಾಗಿ ನೀಡಿದ್ದಳು. ಅದು ಕನಿಷ್ಠ ಇನ್ನೂರು ವರ್ಷಗಳ ಹಳೆಯದಿದ್ದಿರಬೇಕು. ಕೆಲವು ತಿಂಗಳುಗಳ ನಂತರ ಅಮ್ಮ ತನ್ನ ಸ್ನೇಹಿತೆಯರಿಗೆ ತೋರಿಸಿದ್ದಳು. ಅದರ ಮೇಲಿದ್ದಂತಹ ಕೊಂಡಿಯನ್ನು ಈಗಿನ ಅಕ್ಕಸಾಲಿಗರಿಗೆ ಮಾಡಲು ಸಾಧ್ಯವಿರಲಿಲ್ಲ.

ನನ್ನ‌ ತಾಯಿಯ ತಾಯಿ, ಹನ್ನಾ, ಸಂಶಯ ಮನೋವೃತ್ತಿಯ, ಕಟು ಹೆಂಗಸಾಗಿದ್ದಳು. ತನ್ನ ಧಾರ್ಮಿಕತೆಯ ಬೇರ್ಪಡಿಸದೆಯೇ, ಆಳವಾಗಿ ಗಾಯ ಮಾಡಬಲ್ಲವಳಾಗಿದ್ದಳು. ಇನ್ನೊಂದು ಕಡೆಯಲ್ಲಿ ಅಜ್ಜಿ ಟೆಮರ್ಲ್ ಮಾಧುರ್ಯ ಮತ್ತು ಬೈಬಲ್ಲಿನ ಉಲ್ಲೇಖದಂತಿದ್ದಳು. ಹನ್ನಾ ವಿಷಣ್ಣತೆಯಾದರೆ, ಟೆಮರ್ಲ್ ಸಂತೋಷದಾಯಕ ಮತ್ತು ಹನ್ನಾ ಎಲ್ಲವನ್ನು ವಿಮರ್ಶಿಸಿದರೆ, ಟೆಮರ್ಲ್ ಸದಾ ದೇವರ ಅಚ್ಚರಿಗಳ ಬಗ್ಗೆ ಉದ್ಗರಿಸುತ್ತಿದ್ದಳು. ಅಜ್ಜಿ ಹನ್ನಾಳಿಗೆ ಅಪ್ಪ ಅವನ ಎಂಟು ವರ್ಷಗಳ ಓದಿನ ನಂತರ ಹೇಗೆ ಸಂಸಾರಕ್ಕೆ ಆಧಾರವಾಗುತ್ತಾನೆ ಎಂಬ ಅಪಕ್ವ ಕುತೂಹಲ. ಅಜ್ಜಿ ಟೆಮರ್ಲ್ ಹಗುರ ಹೃದಯದಿಂದ ದೇವರು ಯಾವಾಗಲೂ ಕೊಟ್ಟಿರುವಂತೆ ಮುಂದೆಯೂ ಕೊಡುತ್ತಾನೆ ಎಂದು ಒತ್ತಿ ಹೇಳುವಳು. ಅವನು ಯಹೂದಿಗಳಿಗೆ ಮರಳುಗಾಡಿನಲ್ಲಿ ಮನ್ನಾ (ಆಧ್ಯಾತ್ಮಿಕ ಆಹಾರ) ಕೊಟ್ಟಿಲ್ಲವೆ?

ಹನ್ನಾ “ಅದು ತುಂಬಾ ಹಿಂದೆ.” ನಿಸ್ಸಾರವಾಗಿ ಹೇಳಿದಳು.

“ದೇವರು ಬದಲಾಗುವುದಿಲ್ಲ,” ಟೆಮರ್ಲ್ ಅಂದಳು.

“ನಾವುಗಳು ಮತ್ತಿನ್ಯಾವ ಪವಾಡಗಳಿಗೆ ಅರ್ಹರಿಲ್ಲ,” ಹನ್ನಾ ಪ್ರತಿಯಾಡಿದಳು.

“ಯಾಕಿಲ್ಲಾ?” ಟೆಮರ್ಲ್ ಉತ್ತರಿಸಿದಳು. “ನಾವು ನಮ್ಮ ಪೂರ್ವಜರಂತೆ ಧರ್ಮನಿಷ್ಠೆ ಮತ್ತು ಒಳ್ಳೆಯತನದಲ್ಲಿ ಇರಬಹುದು.”

ಹೆಚ್ಚು ಕಡಿಮೆ ಅವರು ಮಾತನಾಡುತ್ತಿದ್ದದ್ದೇ ಹೀಗೆ. ಟೆಮರ್ಲ್ ಅವಳ ಮಗ ಒಳ್ಳೆಯ ಕೈಗಳಲ್ಲಿ ಇದ್ದಾನೆಂಬುದು ಖಾತ್ರಿಯಾದ ಮೇಲೆ ಖುಷಿಯಿಂದ ಮನೆಗೆ ಹೋದಳು. ರೆಬ್ ಸ್ಯಾಮುಯೆಲ್‌ ಮೌನವಾಗಿರುವುದನ್ನೇ ಮುಂದುವರೆಸಿದ, ಬಿಲ್ಗೋರೆಯ ತಾತ ತನ್ನ ಪುಸ್ತಕಗಳಿಗೆ ಮರಳಿದ, ಮತ್ತು ಹನ್ನಾಳಿಗೆ ಒಂಟಿತನದ ಭಾವನೆ ಹೆಚ್ಚುತ್ತಾ ಹೋಯಿತು. ಕಡೆಯಲ್ಲಿ ಅವಳಿಗೆ ತನ್ನ ಕೊನೆಯ ಮಗಳು ನಿರ್ಗತಿಕಳಾಗುತ್ತಾಳೆ ಎನ್ನುವುದು ಮನದಟ್ಟಾಗಿ ಹೋಗಿತ್ತು.