ಭಾಗೀರಥನ ಕಾಲನ್ನು ಬಿಡಿಸಲು ಬೇಕಾಗಿ ಸಂಕದ ಎರಡು ಹಲಗೆಗಳನ್ನು ಕಡಿದು ತೆಗೆದು ಬೇರೆ ಹಲಗೆ ಹಾಕುವಷ್ಟರಲ್ಲಿ ಡೀಮಣ್ಣ ಕಡಿಮೆಂದರೂ ಹತ್ತರ ಮೇಲೆ ಬೀಡಿ ಸೇದಿದ್ದರು. ಬೀಡಿ ಸೇದಿದ ಮೇಲೆ ಉಳಿಯುವ ಬೀಡಿಯ ತುದಿಯನ್ನು ಕೂಡಾ ಜಗಿದು ತಿನ್ನುವ ಅಭ್ಯಾಸವಿದ್ದ ಡೀಮಣ್ಣ ಆವತ್ತು ಪ್ರತೀ ಬೀಡಿ ಮುಗಿಯುತ್ತಲೂ ಬಂಗಾಳದ ಭಾಗೀರಥನಿಗೆ ಬಯ್ಯದೆ ಅವನನ್ನು ಈ ಊರಿಗೆ ಕರೆದುಕೊಂಡು ಬಂದ ಮಣಿಕಂಠನಿಗೆ ಬಾಯಿ ಬಂದಂತೆ ಬಯ್ಯುತ್ತಲೇ ಇದ್ದರು.
ಸುಜಯ್‌ ಪಿ ಬರೆದ ಕಥೆ ‘ಬಂಗಾಳದ ಕಡಲತೀರದಿಂದ ಪಡ್ಪುವಿನ ನದಿ ತೀರದವರೆಗೆ’ ನಿಮ್ಮ ಈ ಭಾನುವಾರದ ಓದಿಗೆ

 

ಭಾಗೀರಥ್ ಡೇ ಎಂಬ ಪಶ್ಚಿಮ ಬಂಗಾಳದ ಮಂದಾರಮಣಿ ಕಡಲತೀರದ ಇಪ್ಪತ್ತೆರಡು ವಯಸ್ಸಿನ ಹುಡುಗನೊಬ್ಬನ ಎಡಕಾಲು ಕರ್ನಾಟಕದ ದಕ್ಷಿಣ ಕನ್ನಡದ ಉಪ್ಪಿನಂಗಡಿಯ ಪಡ್ಪು ಎಂಬ ಊರಿನ ಸಣ್ಣ ಸಂಕವೊಂದರಲ್ಲಿ ಸಿಲುಕಿ ಮುರಿದಿತ್ತು.

*****

ಡೀಮಣ್ಣ ಮತ್ತು ಪಿತ್ರೋಡಿಯರ ಅಡಿಕೆ ತೋಟಗಳ ನಡುವಿನ ಗಡಿರೇಖೆಯಂತಿದ್ದ ಸಣ್ಣ ಹೊಳೆಯ ಮೇಲಿನ ಆ ಸಂಕ ಪಡ್ಪು ಮತ್ತು ನೆಕ್ಕರೆಯ ಜನರ ಪ್ರತಿದಿನದ ದಾರಿ. ಮೂರು ಅಡಿಕೆ ಮರಗಳನ್ನು ಮಧ್ಯದಲ್ಲಿ ಭಾಗ ಮಾಡಿ ಹಲಗೆಯಂತೆ ಜೋಡಿಸಿ ಹೊಳೆಗೆ ಅಡ್ಡಲಾಗಿ ಹಾಕಿ ಆ ಸಂಕ ಮಾಡಲಾಗಿತ್ತು. ಜೋರು ಮಳೆ ಬಂದು ಹೊಳೆಯ ತುಂಬಾ ನೀರು ತುಂಬಿದಾಗ ಒಂಚೂರು ಧೈರ್ಯ ಮತ್ತು ಒಂದಷ್ಟು ಭಯದಿಂದ ಉಯ್ಯಾಲೆಯಂತ ಆ ಸಂಕ ದಾಟಬೇಕಿತ್ತು. ಹೊಳೆಯ ಬದಿಯ ತೋಟದ ಡೀಮಣ್ಣನಿಗೆ ಹೊಳೆ ತುಂಬಿ ಹರಿಯುವಾಗ ಮಳೆಯ ನೀರಿನ ಜೊತೆಗೆ ಲಾಟರಿಯಂತೆ ತೇಲಿ ಬರುವ ಯಾರದೋ ತೋಟದ ತೆಂಗಿನಕಾಯಿಗಳನ್ನು ಬಲೆ ಹಾಕಿ ಹಿಡಿಯಲು ಕೂಡಾ ಅದೇ ಸಂಕ ಬಳಕೆಯಾಗುತ್ತಿತ್ತು. ತೆಂಗಿನಕಾಯಿಯ ಜೊತೆಗೆ ತರಹೇವಾರಿ ಕಂಪನಿಯ ಬೀಯರಿನ ಬಾಟಲಿಗಳೂ, ದಿಕ್ಕುದೆಸೆಯಿಲ್ಲದೆ ತೇಲಿಬರುತ್ತಿದ್ದ ಬ್ಯಾಗ್ಪೈಪರ್, ಮೈಸೂರು ಲಾನ್ಸರಿನಂಥ ವಿಸ್ಕಿಯ ಕುಪ್ಪಿಗಳೂ ಬಲೆಯೊಳಗೆ ಸಿಲುಕಿ ಸಂಕದ ಬದಿಯಲ್ಲಿ ರಾಶಿಬೀಳುತ್ತಿದ್ದವು. ಮಾರಿದರೆ ಅದಕ್ಕೂ ರುಪಾಯಿ ಲೆಕ್ಕದಲ್ಲಿ ಬೆಲೆಯಿತ್ತು. ಅದನ್ನೆಲ್ಲಾ ಮಾರಿ ಸಿಗುವ ದುಡ್ಡಿಗಾಗಿ ಅಲ್ಲದಿದ್ದರೂ ಬಲೆಯೊಳಗೆ ತೆಂಗಿನಕಾಯಿಯೊಂದು ಸಿಲುಕಿದಾಗ ಮನಸ್ಸೊಳಗೆ ಹುಟ್ಟುವ ಖುಷಿಗಾಗಿ ಡೀಮಣ್ಣ ಪ್ರತೀ ಮಳೆಗೂ ಸಂಕದ ಮೇಲೆ ಕೊಕ್ಕೆಯೊಂದರ ತುದಿಗೆ ಬಲೆ ಕಟ್ಟಿ ಧ್ಯಾನದಂತೆ‌ ನಿಲ್ಲುತ್ತಿದ್ದರು.

ಅವತ್ತು ಕೂಡ ಮಳೆ ಬರುವ ಲಕ್ಷಣ ಇದ್ದಿದ್ದರಿಂದ ಡೀಮಣ್ಣ ಉದ್ದದ ಕೊಕ್ಕೆಗೆ ಬಲೆ ಕಟ್ಟಿಕೊಂಡು ತೆಂಗಿನಕಾಯಿ ಹಿಡಿಯಲು ಸಿದ್ದವಾಗಿದ್ದರು. ಅದೇ ಸಮಯಕ್ಕೆ ಸರಿಯಾಗಿ ಹೊಳೆಯ ಬದಿಯ ಗುಡ್ಡದಿಂದ ಮಿಂಚಿನಂತೆ ಓಡಿ ಬಂದಿದ್ದು ಭಾಗೀರಥ.

ಹೊಳೆಯ ಬದಿ ನಿಂತಿದ್ದ ಡೀಮಣ್ಣ ಭಯ‌ಬೀಳುವಷ್ಟು ವೇಗದಿಂದ ಓಡಿ ಬಂದ ಭಾಗೀರಥ ಸೀದಾ ಓಡಿದ್ದು ಇದೇ ಸಂಕದ ಮೇಲೆ. ಮೆಲ್ಲಗೆ ನಡೆದು ಹೋಗಲಷ್ಟೇ ಲಾಯಕ್ಕಾಗಿದ್ದ ಆ ಸಂಕದಲ್ಲಿ ಅವನು ಒಂಚೂರೂ ನಿಧಾನವಾಗದೆ ಶರವೇಗದಲ್ಲಿ ಓಡುತ್ತಿದ್ದ. ಅರ್ಧ ಸಂಕ ತಲುಪುವಷ್ಟರಲ್ಲಿ ಸಂಕದ ಅಡಿಕೆಮರದ ಹಲಗೆಯೊಂದರ ಒಳಗೆ ಎಡಗಾಲು ಸಿಲುಕಿಕೊಂಡಿತು. ಇಡೀ ಪಡ್ಪುವಿಗೇ ಕೇಳಿಸುವಷ್ಟು ಜೋರಾಗಿ ಅರಚಿಕೊಂಡು ಭಾಗೀರಥ ಸ್ತಬ್ಧವಾಗಿಬಿಟ್ಟ. ಮಂಡಿಯ ಕೆಳಗಿನ ಕಾಲು ಸಂಕದಿಂದ ಕೆಳಗೆ ಜೋತಾಡುತ್ತಾ ವಿಚಿತ್ರವಾಗಿ ಕಾಣುತ್ತಿತ್ತು.

ಕೆಲ ಸೆಕೆಂಡುಗಳ ಅಂತರದಲ್ಲಿ ನಡೆದ ಇವನ್ನೆಲ್ಲಾ ನೋಡುತ್ತಲೇ ಇದ್ದ ಡೀಮಣ್ಣ ಹಿಡಿದುಕೊಂಡಿದ್ದ ಬಲೆ ಕಟ್ಟಿದ್ದ ಕೊಕ್ಕೆಯನ್ನು ಎಸೆದು ಓಡಿ ಬಂದು ಹಲಗೆಗಳ ನಡುವೆ ಸಿಲುಕಿ ಮುರಿದಿದ್ದ ಭಾಗೀರಥನ ಕಾಲನ್ನು ಬಿಡಿಸಿದರು. ಭಾಗೀರಥನ ಕಾಲನ್ನು ಬಿಡಿಸಲು ಬೇಕಾಗಿ ಸಂಕದ ಎರಡು ಹಲಗೆಗಳನ್ನು ಕಡಿದು ತೆಗೆದು ಬೇರೆ ಹಲಗೆ ಹಾಕುವಷ್ಟರಲ್ಲಿ ಡೀಮಣ್ಣ ಕಡಿಮೆಂದರೂ ಹತ್ತರ ಮೇಲೆ ಬೀಡಿ ಸೇದಿದ್ದರು. ಬೀಡಿ ಸೇದಿದ ಮೇಲೆ ಉಳಿಯುವ ಬೀಡಿಯ ತುದಿಯನ್ನು ಕೂಡಾ ಜಗಿದು ತಿನ್ನುವ ಅಭ್ಯಾಸವಿದ್ದ ಡೀಮಣ್ಣ ಆವತ್ತು ಪ್ರತೀ ಬೀಡಿ ಮುಗಿಯುತ್ತಲೂ ಬಂಗಾಳದ ಭಾಗೀರಥನಿಗೆ ಬಯ್ಯದೆ ಅವನನ್ನು ಈ ಊರಿಗೆ ಕರೆದುಕೊಂಡು ಬಂದ ಮಣಿಕಂಠನಿಗೆ ಬಾಯಿ ಬಂದಂತೆ ಬಯ್ಯುತ್ತಲೇ ಇದ್ದರು. ಭಾಗೀರಥನಿಗೆ ಬೈಯದೇ ಇರಲು ಡೀಮಣ್ಣನಿಗೆ ಬಂಗಾಳಿ ಭಾಷೆಯ ಆಆಇಈ ಕೂಡಾ ತಿಳಿಯದಿದ್ದು ದೊಡ್ಡ ಕಾರಣವಾಗಿತ್ತು. ಇನ್ನು ತುಳು ಅಥವಾ ಕನ್ನಡದಲ್ಲಿ ಏನು ಬೈದರೂ ಅರ್ಥವಾಗದ ಭಾಗೀರಥ ರಕ್ತ ಬರುತ್ತಿದ್ದ ಮುರಿದ ಎಡಕಾಲನ್ನು ಹಿಡಿದುಕೊಂಡು ಅಡಿಕೆಮರದ ಬುಡದಲ್ಲಿ ಕುಳಿತಿದ್ದ. ಅಷ್ಟಾಗಿ ಫಲ ಕೊಡದ ಸೀಳುಬಿದ್ದ ಅಡಿಕೆ ಮರವೊಂದು ಅಪ್ಪನಂತೆ ಪ್ರೀತಿಯಿಂದ ಭಾಗಿರಥನನ್ನು ಒರಗಿಸಿಕೊಂಡು ಉದ್ದಕ್ಕೆ ನಿಂತಿತ್ತು.

*****

ಮುಂಬಯಿಯಲ್ಲಿ ಕಾರು ಡ್ರೈವರ್‌ ಕೆಲಸ ಮಾಡುತ್ತಿದ್ದ ಪಡ್ಪುವಿನ ಮಣಿಕಂಠ ತಾನು ಇಪ್ಪತ್ತೊಂಬತ್ತನೇ ವಯಸ್ಸಿನಲ್ಲಿ ಮದುವೆ ಆಗಬೇಕೆಂದು ಸುಮಾರು ಹದಿನೆಂಟನೇ ವಯಸ್ಸಲ್ಲೇ ನಿರ್ಧಾರ ಮಾಡಿದ್ದ. ಹಾಗೆ ಈ ಬಾರಿ ಮನೆಯವರು ನೋಡಿದ್ದ, ತಾನು ಅವರಿಗಿಂತ ಮೊದಲೇ ನೋಡಿದ್ದ ಹುಡುಗಿಯೊಂದಿಗೆ ಮದುವೆ ನಿಶ್ಚಯವಾದ್ದರಿಂದ ಮದುವೆಗೆ ತಿಂಗಳು ಇರುವಾಗಲೇ ಮುಂಬಯಿಯಿಂದ ಊರಿಗೆ ಬಂದಿದ್ದ. ಹಾಗೆ ಬಂದ ಮಣಿಕಂಠ ಒಬ್ಬನೇ ಬಂದಿರಲಿಲ್ಲ, ತನ್ನ ಮುಂಬಯಿಯ ಗೆಳೆಯ ಭಾಗೀರಥನನ್ನು ಕರೆದುಕೊಂಡು ಬಂದಿದ್ದ.

ಕಂಡಾಗಲೇ ಈ ಊರಿನವನಲ್ಲ ಎಂದು ಕಂಡುಹಿಡಿಯಬಹುದಾದಂತಿದ್ದ ಮುಖದ ಭಾಗೀರಥ ಬಂಗಾಳದವನು. ಇನ್ನೂ ವಿಚಿತ್ರವಾಗಿ ಕಾಣಲು ತಲೆ ತುಂಬಾ ಉದ್ದದ ಗುಂಗುರು ಕೂದಲು ಬಿಟ್ಟಿದ್ದ. ಎಲ್ಲರೂ ಮೊದಲು ನಡೆಯಲು ಕಲಿತರೆ ಇವನು ಕುಣಿಯಲು ಕಲಿತನೇನೋ ಅನ್ನುವಂತೆ ಡ್ಯಾನ್ಸನ್ನು ಇಷ್ಟಪಡುತ್ತಿದ್ದ. ಅವನು ಸುಮ್ಮನೆ ನಡೆದರೂ ಡ್ಯಾನ್ಸ್ ಮಾಡಿದಂತೇ ಕಾಣುತಿತ್ತು. ಕುಣಿಯಲು ಸರಿಯಾದ ವೇದಿಕೆಗಳು ಸಿಗದ ಇವನ ಬದುಕಲ್ಲಿ ದುರಾದೃಷ್ಟ ಮಾತ್ರ ಲಂಗುಲಾಮಿಲ್ಲದೆ ಕುಣಿದುಬಿಟ್ಟಿತ್ತು.

ಬಂಗಾಳದ ಮಂದಾರಮಣಿ ಕಡಲತೀರದಲ್ಲಿ ಜೀವನ ಕಳೆಯುತಿದ್ದ ಭಾಗೀರಥನ ಕುಟುಂಬ, ಒಂದು ಕೆಟ್ಟ ದಿನ ಇಡೀ ಮನೆಯ ಜೊತೆಗೆ ಪ್ರವಾಹವೊಂದರಲ್ಲಿ ಕೊಚ್ಚಿ ಹೋಗಿತ್ತು.

ಆ ಪ್ರವಾಹದಲ್ಲಿ ಮನೆಯ ನಾಯಿ ಮತ್ತು ಭಾಗೀರಥ ಮಾತ್ರ ಉಳಿದಿದ್ದರು. ಪ್ರವಾಹ ಇಳಿದ ಮೇಲೆ ಒಂದು ದಿನ‌ ಭಾಗೀರಥ ಊರು ಬಿಡುವ ಯೋಚನೆ ಮಾಡಿದ. ಮುಂಬಯಿಗೆ ಹೋದ ಎಲ್ಲರೂ ದುಡ್ದು ಮಾಡಿಕೊಂಡು ಅಥವಾ ದುಡ್ಡು ಮಾಡಿದವರಂತೆ ಬರುವುದನ್ನು ಮೊದಲಿನಿಂದಲೂ ನೋಡಿದ್ದ ಭಾಗೀರಥ, ಕೊಚ್ಚಿ ಹೋದ ಮನೆಯ ಮುಂದೆ ಸಮುದ್ರ ನೋಡುತ್ತಾ ಕೂತಿದ್ದ ನಾಯಿಯನ್ನು ಹಾಗೇ ಬಿಟ್ಟು ಮುಂಬಯಿಯ ರೈಲು ಹತ್ತಿದ. ಆಗ ಅವನ ವಯಸ್ಸು ಇಪ್ಪತ್ತು.

 

ಜೋರು ಮಳೆ ಬಂದು ಹೊಳೆಯ ತುಂಬಾ ನೀರು ತುಂಬಿದಾಗ ಒಂಚೂರು ಧೈರ್ಯ ಮತ್ತು ಒಂದಷ್ಟು ಭಯದಿಂದ ಉಯ್ಯಾಲೆಯಂತ ಆ ಸಂಕ ದಾಟಬೇಕಿತ್ತು. ಹೊಳೆಯ ಬದಿಯ ತೋಟದ ಡೀಮಣ್ಣನಿಗೆ ಹೊಳೆ ತುಂಬಿ ಹರಿಯುವಾಗ ಮಳೆಯ ನೀರಿನ ಜೊತೆಗೆ ಲಾಟರಿಯಂತೆ ತೇಲಿ ಬರುವ ಯಾರದೋ ತೋಟದ ತೆಂಗಿನಕಾಯಿಗಳನ್ನು ಬಲೆ ಹಾಕಿ ಹಿಡಿಯಲು ಕೂಡಾ ಅದೇ ಸಂಕ ಬಳಕೆಯಾಗುತ್ತಿತ್ತು.

ಡ್ಯಾನ್ಸರ್ ಆಗಿ ದೊಡ್ಡ ದೊಡ್ಡ ವೇದಿಕೆಗಳ ನಡು ಮುರಿಯುವಂತೆ ಕುಣಿಯಬೇಕೆಂಬ ಆಸೆಯಿಂದ ಮುಂಬಯಿ ಬಂದ ಭಾಗೀರಥ ಡಾನ್ಸ್‌ ಒಂದು ಬಿಟ್ಟು ಬೇರೆಲ್ಲಾ ಕೆಲಸ ಮಾಡಿದ್ದ. ಕುಣಿಯುವ ಆಸೆಯೇ ಕಮರಿ ಹೋಗಿತ್ತು. ಯಾವುದೇ ವಿದ್ಯೆ, ಅರ್ಹತೆ ಕೇಳದೆ ಮುಂಬಯಿಗೆ ದುಡಿಯಲು ಬಂದ ಯಾರನ್ನೂ ಬೇಡ ಎನ್ನದೆ ತನ್ನೆಡೆಗೆ ಎಳೆದುಕೊಳ್ಳುವ ಬಾರು, ಹೋಟೆಲುಗಳು ಭಾಗೀರಥನನ್ನೂ ತನ್ನೆಡೆ ಎಳೆದುಕೊಂಡಿತು. ಭಾಗೀರಥ ಮುಂಬಯಿಯ ದಾದರಿನ ಬಾರೊಂದರಲ್ಲಿ ಬಾರ್ ಮ್ಯಾನ್ ಆಗಿ ಕೆಲಸಕ್ಕೆ ಸೇರಿಕೊಂಡ.

ಇನ್ನೊಂದು ಕಡೆ ಪಡ್ಪುವಿನ ಮಣಿಕಂಠ ಅದೇ ಬಾರಿನ ಕೆಲಸದವರನ್ನು ಪ್ರತೀದಿನ ರಾತ್ರಿ ತನ್ನ ಟ್ಯಾಕ್ಸಿಯಲ್ಲಿ ಅವರ ರೂಮುಗಳಿಗೆ ಡ್ರಾಪ್ ಮಾಡುವ ಕೆಲಸ ಮಾಡುತ್ತಿದ್ದ.

ಉಪ್ಪಿನಂಗಡಿಯ ನದಿ ತೀರದ ಊರಿನ ಮಣಿಕಂಠ ಮತ್ತು ಬಂಗಾಳದ ಕಡಲತೀರದ ಭಾಗೀರಥ ಪರಸ್ಪರ ಪರಿಚಯವಾಗಿದ್ದು ಹೀಗೆ. ಮುಂಬಯಿಯ ಅಸಂಖ್ಯಾತ ಜನರ ನಡುವೆ ಭಾಗೀರಥ ಮತ್ತು ಮಣಿಕಂಠ ಅದು ಹೇಗೋ ಗಟ್ಟಿಯಾದ ಗೆಳೆಯರಾಗಿಬಿಟ್ಟಿದ್ದರು. ಮುಂದಿನ ಎರಡು ವರ್ಷದಲ್ಲಿ ಮಣಿಕಂಠನಿಗೆ ಇಪ್ಪತ್ತೊಂಬತ್ತು ವರ್ಷ ವಯಸ್ಸಾಯಿತು, ಅವನಂದುಕೊಂಡಂತೆ ಮದುವೆಯೂ ನಿಶ್ಚಯವಾಯಿತು. ಈ ಮೊದಲು ಭಾಗೀರಥ ಹಲವು ಬಾರಿ ತನ್ನನ್ನು ಮಣಿಕಂಠನ ಊರಿಗೆ ಕರೆದುಕೊಂಡು ಹೋಗುವಂತೆ ಕೇಳಿದ್ದ. ಭಾಗೀರಥನ ಡ್ಯಾನ್ಸ್ ಬಗ್ಗೆ ತಿಳಿದಿದ್ದ ಮಣಿಕಂಠ ತನ್ನ ಮದುವೆ, ಮದರಂಗಿ ಕಾರ್ಯಕ್ರಮದಲ್ಲಿ ಭಾಗೀರಥನಿಂದ ಜೋರಾಗಿ ಡ್ಯಾನ್ಸ್‌ ಮಾಡಿಸುವ ಪ್ಲಾನ್ ಮಾಡಿಕೊಂಡು ಅವನನ್ನು ಪಡ್ಪುಗೆ ಕರೆದುಕೊಂಡು ಬಂದಿದ್ದ. ಬಂಗಾಳದ ಭಾಗೀರಥ ಉಪ್ಪಿನಂಗಡಿಯ ಪಡ್ಪು ತಲುಪಿದ್ದು ಹೀಗೆ.

*****

ಇದೆಲ್ಲಾ ನಡೆದು ಹತ್ತು ವರ್ಷಗಳಾಗುತ್ತಾ ಬಂತು.
ಉಪ್ಪಿನಂಗಡಿಯಲ್ಲಿ ಹಲವು ಬಾರಿ ನೇತ್ರಾವತಿ ಮತ್ತು ಕುಮಾರಧಾರ ನದಿಗಳ ಸಂಗಮ ನಡೆಯಿತು. ಆದರೆ ಆವತ್ತು ಮಣಿಕಂಠನ ಜೊತೆಗೆ ಪಡ್ಪುವಿಗೆ ಬಂದ ಬಂಗಾಳದ ಭಾಗೀರಥ ಮುಂಬಯಿಗೆ ಹಿಂತಿರುಗಲೇ ಇಲ್ಲ. ಇಂದಿಗೂ ಪಡ್ಪುವಿನಲ್ಲೇ ಇದ್ದಾನೆ. ಬಂಗಾಳಿ ಭಾಷೆ ಮರೆತೇ ಹೋಗಿದೆಯೇನೋ ಎಂಬಂತೆ ತುಳು ಭಾಷೆ ಮಾತನಾಡುತ್ತಾನೆ. ಅಥವಾ ಬಂಗಾಳಿ ಮರೆಯಲೆಂದೇ ತುಳು ಮಾತಾಡುತ್ತಾನೋ ಗೊತ್ತಿಲ್ಲ. ಭಾಗೀರಥ ಯಾಕೆ ಇಲ್ಲಿ ನಿಂತ?

*****

ಮಣಿಕಂಠನ ಮದುವೆಗೆ ಉಪ್ಪನಂಗಡಿಯ ಪಡ್ಪುವಿಗೆ ಬಂದ ಭಾಗೀರಥನಿಗೆ ಇದುವರೆಗೆ ನೋಡಿರದ ಹೊಸ ಊರು, ಹೊಸ ಜನರು ವಿಶೇಷವಾಗಿತ್ತು. ಪಡ್ಪುವಿನ ಜನರು ಕೂಡಾ ಮದುವೆಯಲ್ಲಿ ಕುಣಿಯಲು ಮಣಿಕಂಠ ಮುಂಬಯಿಯಿಂದ ಡ್ಯಾನ್ಸರನ್ನು ಕರೆದುಕೊಂಡು ಬಂದಿದ್ದಾನೆ ಎಂದೇ ಸುದ್ದಿ ಮಾಡಿದ್ದರು. ಮಣಿಕಂಠ ತನ್ನ ಮನೆಯಲ್ಲಿ ಖಾಲಿಯಿದ್ದ ರೂಮೊಂದನ್ನು ಕ್ಲೀನ್ ಮಾಡಿ ಭಾಗೀರಥನಿಗೆ ಇರಲು ವ್ಯವಸ್ಥೆ ಮಾಡಿದ್ದ. ಬಂಗಾಳದ ಭಾಗೀರಥನಿಗೆ ಮಣಿಕಂಠನ ಮನೆಯ ಅಟ್ಟದ ಮೇಲಿನ ಅಡಿಕೆ ರಾಶಿ ಹಾಕುವ ಬಾಗಿಲೇ ಇಲ್ಲದ ಕತ್ತಲಿನ ಕೋಣೆ, ಮನೆಯಲ್ಲಿದ್ದ ತೋಟೆಯ ಕೋವಿ, ಕತ್ತಿ ಕುಡುಗೋಲು ಒರಗಿಸಿದ್ದ ದೈವದ ತೂಗುಮಂಚ, ಬಾಳೆ ಅಡಿಕೆ ತೆಂಗಿನ ತೋಟಗಳು, ಹಸಿರಿನ ಮುದ್ದೆಯಂತೆ ಕಾಣುತ್ತಿದ್ದ ಗದ್ದೆಗಳು, ಸತ್ತು ಹೋದ ಹಿರಿಯರ ಬಣ್ಣ ಬಣ್ಣದ ಗೋರಿಗಳು, ಕೆರೆಗೆ ಬಾಗಿ ನಿಂತಿದ್ದ ಕಡುಹಳದಿ ಸಂಪಿಗೆ ಹೂ ಬಿಡುವ ಸಂಪಿಗೆ ಮರ ಇವನ್ನೆಲ್ಲಾ ಕಂಡು ಹೊಸದೇನೋ ಪ್ರಪಂಚಕ್ಕೆ ಕಾಲಿಟ್ಟ ಅನುಭವವಾಗಿತ್ತು.

ಮಣಿಕಂಠ ಭಾಗೀರಥನಿಗೆ ಊರನ್ನೆಲ್ಲಾ ತೋರಿಸಿದರೂ ಒಂದು ಸಂಗತಿ ಬಾಕಿಯಿತ್ತು.
ಮಣಿಕಂಠನ ಇಷ್ಟದ ಕೋಳಿಅಂಕ. ಮಣಿಕಂಠ ಮುಂಬಯಿ ಸೇರುವ ಮೊದಲು ದುಡ್ಡು ಮಾಡಿದ್ದು, ಕಳೆದುಕೊಂಡಿದ್ದೆಲ್ಲಾ ಪಡ್ಪುವಿನ ಗುಡ್ಡದ ತಪ್ಪಲೊಂದರಲ್ಲಿ ನಡೆಯುವ ಕೋಳಿಅಂಕದಲ್ಲಿ. ಎರಡು ಗಂಡುಕೋಳಿಗಳ ಕಾಲಿಗೆ ಸಣ್ಣ ಕತ್ತಿ ಕಟ್ಟಿ ಅದರಲ್ಲೊಂದು ಕೋಳಿ ಸಾಯುವವರೆಗೆ ಬಡಿದಾಡಿಕೊಳ್ಳುವಂತೆ ಮಾಡಲಾಗುತ್ತದೆ. ಗೆದ್ದ ಕೋಳಿಯ ಪರವಾಗಿ ನಿಂತಿದ್ದವನಿಗೆ ಜೂಜಿನ ದುಡ್ಡು ಸಿಗುತ್ತದೆ. ಮದುವೆಗೆ ಇನ್ನು ನಾಲ್ಕು ದಿನ ಅನ್ನುವಾಗ ಒಂದು ಮಧ್ಯಾಹ್ನ ಮಣಿಕಂಠ ಭಾಗೀರಥನನ್ನು ಕರೆದುಕೊಂಡು ಗುಡ್ಡದ ತಪ್ಪಲಿಗೆ ಹೋದ, ಕೋಳಿಅಂಕಕ್ಕೆ. ಅದು ಅಕ್ರಮವಾಗಿ ನಡೆಯುವ ಅಂಕ, ಎಲ್ಲರೂ ಪೋಲಿಸರಿಗೆ ಹೆದರಿಕೊಂಡೇ ಬಂದಿದ್ದರು. ಬಂದವರಲ್ಲಿ ಹಲವರು ಹಲವು ಬಾರಿ ಈ ರೀತಿಯ ಅಂಕಗಳಿಗೆ ಪೋಲಿಸರು ದಾಳಿಯಿಟ್ಟಾಗ ಸಿಕ್ಕಿಬಿದ್ದು ಜೈಲಲ್ಲಿ ಕೂತು ಅಥವಾ ದಾಳಿಯಾದಾಗ ತಪ್ಪಿಸಿಕೊಂಡು ಅನುಭವ ಇದ್ದವರೇ ಆಗಿದ್ದರು. ಅಂಕ ನಡೆಯಿತು. ಶುರುವಾಗಿ ಒಂದು ಗಂಟೆಯೂ ಆಗಿರಲಿಲ್ಲ, ಬೈಕೊಂದು ಸದ್ದು ಮಾಡಿಕೊಂಡು ಓಡಿ ಬಂತು‌. ಹಿಂದೆ ಕುಳಿತಿದ್ದವನ ತಲೆಯ ಮೇಲಿದ್ದ ಪೋಲಿಸ್ ಟೊಪ್ಪಿ ಕಣ್ಣಿಗೆ ಬಿದ್ದಿದ್ದೇ ತಡ, ಜನ ದಿಕ್ಕಾಪಾಲಾಗಿ ಓಡಿದರು. ಮಣಿಕಂಠ ಭಾಗೀರಥನ ಕೈಹಿಡಿದು ಓಡತೊಡಗಿದ. ಸಿಕ್ಕಿಬಿದ್ದರೆ ಇನ್ನು ನಾಲ್ಕು ದಿನದಲ್ಲಿ ನಡೆಯಲಿರುವ ತನ್ನ ಮದುವೆ ಕಣ್ಣ ಮುಂದೆ ಬಂತು. ಅದು ನೆನಪಾಗಿ ಇನ್ನಷ್ಟು ಜೋರಾಗಿ ಓಡತೊಡಗಿದ. ಈ ಬಾರಿ ಭಾಗೀರಥ ಬೇರೆಯಾಗಿಬಿಟ್ಟ. ಅಪರಿಚಿತವಾದ ಊರಲ್ಲಿ ಯಾರಿಂದಲೋ ತಪ್ಪಿಸಿಕೊಳ್ಳಬೇಕೆಂದು ಓಡುವುದನ್ನು ನೆನಪಿಸಿಕೊಳ್ಳಿ. ಸಿಕ್ಕ ದಾರಿಯಲ್ಲಿ ಮನಬಂದಂತೆ ಓಡಿದ ಭಾಗೀರಥ ಕೊನೆಗೆ ಬಂದು ಸಿಲುಕಿಕೊಂಡಿದ್ದು ಡೀಮಣ್ಣ ಮತ್ತು ಪಿತ್ರೋಡಿಯ ತೋಟದ ನಡುವಿನ ಸಂಕದಲ್ಲಿ. ಅಲ್ಲಿ ಭಾಗೀರಥನ ಕಾಲು ಮುರಿದಿತ್ತು. ಅಂಕದಲ್ಲಿ ಸೇರಿದ್ದ ಜನರೆಲ್ಲಾ ಮನೆ ಸೇರಿದ ಮೇಲೆ ತಿಳಿದದ್ದೇನೆಂದರೆ ಬೈಕಿನಲ್ಲಿ ಬಂದದ್ದು ಪೋಲಿಸಲ್ಲ, ಊರಿನವರೇ ಯಾರೋ ಪೋಲೀಸರ ಬಟ್ಟೆಯ ಕಲರಿನ ಟೊಪ್ಪಿ ಹಾಕಿಕೊಂಡು ಬಂದಿದ್ದನ್ನು ಅಲ್ಲಿದ್ದವರು ಪೋಲಿಸ್ ಬಂದಿದ್ದಾರೆಂದು ಸುದ್ದಿ ಮಾಡಿದ್ದರು. ಅಂದು ಆ ಟೊಪ್ಪಿಯ ಕಾರಣಕ್ಕೆ ಭಾಗೀರಥನ ಕಾಲು ಮುರಿದಿತ್ತು. ಮದುವೆಗೆ ಕೆಲವೇ ದಿನಗಳಿರುವಾಗ ಇದು ಸಂಭವಿಸಿದ್ದರಿಂದ ಮದುವೆಯಲ್ಲಿ ಭಾಗೀರಥನ್ನು ಕುಣಿಸುವ ಮಣಿಕಂಠನ ದೊಡ್ಡ ಆಸೆ ಹಾಗೆಯೇ ಉಳಿಯಿತು.

ಮಣಿಕಂಠನಿಗೆ ಮದುವೆಯಾಯಿತು. ಮದುವೆ ದಿನ ಭಾಗೀರಥ ಉಪ್ಪಿನಂಗಡಿಯ ಸರ್ಕಾರಿ ಆಸ್ಪತ್ರೆಯ ಬೆಡ್ಡಲ್ಲಿ ಮಲಗಿದ್ದನಂತೆ. ಡಾಕ್ಟರ್ ನಾಲ್ಕು ತಿಂಗಳ ಬೆಡ್ ರೆಸ್ಟ್ ಸೂಚಿಸಿದರು. ನಾಲ್ಕು ತಿಂಗಳೂ ಮಣಿಕಂಠನ ಮನೆಯಲ್ಲೇ ಇದ್ದುಬಿಟ್ಟ.

ಇತ್ತ ಮದುವೆಯಾದ ಮೇಲೆ ಮುಂಬಯಿಯ ನೆನಪು ಬಿಟ್ಟ ಮಣಿಕಂಠ ತೋಟ ನೋಡಿಕೊಳ್ಳುತ್ತಾ, ಊರಲ್ಲೇ ಕಾರೊಂದನ್ನು ತೆಗೆದುಕೊಂಡ ಬಾಡಿಗೆ ಮಾಡಿಕೊಂಡು ಇದ್ದ.

*****

ಈ ಕಥೆಯನ್ನು ನನಗೆ ಕನ್ನಡ ತುಳು, ಬಂಗಾಳಿ, ಕನ್ನಡ ಎಲ್ಲವೂ ಇದ್ದ ಭಾಷೆಯೊಂದರಲ್ಲಿ ಹೇಳಿದ್ದು ಸ್ವತಃ ಭಾಗೀರಥ. ಡ್ಯಾನ್ಸರ್ ಆಗುವ ಆಸೆಯಿಂದ ಬಂಗಾಳದ ಬಿಟ್ಟು ಮುಂಬಯಿ ಬಂದ ಭಾಗೀರಥ ಡೇ ಈಗ ಉಪ್ಪಿನಂಗಡಿಯ ಪಡ್ಪುವಿನಲ್ಲಿ ಮಣಿಕಂಠನ ಮನೆಯ ಹತ್ತಿರದಲ್ಲೇ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದಾನೆ. ಸುತ್ತಲಿನ ಒಂದಷ್ಟು ಮಕ್ಕಳು ಮತ್ತು ಕಲಿಯುವ ಆಸೆಯಿರುವ ದೊಡ್ಡವರಿಗೂ ಡ್ಯಾನ್ಸ್ ಕಲಿಸುತ್ತಾನೆ. ‘ಡೇ ಡ್ಯಾನ್ಸ್ ಕ್ಲಬ್’ ಎಂಬ ಚಂದದ ಹೆಸರನ್ನೂ ಇಟ್ಟುಕೊಂಡಿದ್ದಾನೆ.

ಕಾಲು ಮುರಿದ ನಾಲ್ಕು ತಿಂಗಳ ರೆಸ್ಟ್ ಬಳಿಕ ಕಾಲು ಸಂಪೂರ್ಣ ಸರಿಯಾದರೂ ನೀನ್ಯಾಕೆ ಮುಂಬಯಿಗೆ ಹಿಂತಿರುಗಲಿಲ್ಲ ಎಂದು ಕೇಳಿದರೆ ‘ಪಡ್ಪು ಚನ್ನಾಗಿದೆ’ ಅಂದುಬಿಟ್ಟ. ನಾನು ಡೀಮಣ್ಣ ಮತ್ತು ಪಿತ್ರೋಡಿಯವರ ತೋಟದ ನಡುವಿನ ಆ ತೊರೆಯ ನೀರು ಅರಬ್ಬೀ ಸಮುದ್ರ ಸೇರುವುದೋ ಅಥವಾ ಬಂಗಾಳಕೊಲ್ಲಿ ಸಾಗರ ಸೇರುವುದೋ ಎಂದ ಮನಸ್ಸಲ್ಲೇ ಲೆಕ್ಕ ಹಾಕುತ್ತಾ ನಡೆಯತೊಡಗಿದೆ.