ಅಷ್ಟೆಲ್ಲ ನಡೆದಿದ್ದರೂ ಇಷ್ಟು ದಿನ ಕಷ್ಟವೋ ಸುಖವೋ ಅವನನ್ನೇ ಮದುವೆಯಾಗೋದು ಅನಿಸುತ್ತಿತ್ತು, ಆದರೆ ಕ್ಷಣ ಯಾಕೋ ಇನ್ನೊಮ್ಮೆ ನನ್ನೊಳಗನ್ನೇ ನಾನು ಕೆದಕಿಕೊಂಡಾಗ ಏನಿದು ಅರ್ಥವಾಗದ ಮಿಸುಗಾಟ? ನೆನಪುಗಳಿಗೆಲ್ಲ ಯಾಕೆ ಮುಳ್ಳುಗಳೇ ಏಳುತ್ತಿವೆ? ಅಂದು ನಡೆದದ್ದೆಲ್ಲ ಇಂದೇ ಕ್ಷಣವೇ ಪುನರಾವರ್ತನೆಗೊಂಡಂತೆ ಯಾಕೆ ಹಿಂಸಿಸುತ್ತಿವೆ? ಬೆಟ್ಟ, ಗಾಡಾಂಧಕರ, ಪ್ರೀತಿಸುವವಳು, ತಂದೆಯನ್ನು ಬಿಟ್ಟು ತನ್ನಜೊತೆ ಬದುಕುವ ಹಂಬಲದಿಂದ ಬಂದವಳು, ಆದರೆ ಅಂಥವಳ ದೇಹವನ್ನು ಅವಳ ಒಪ್ಪಿಗೆಯಿಲ್ಲದೇ ನೋಯಿಸಬಾರದು ಎಂಬ ಸಣ್ಣ ತಿಳಿವಳಿಕೆಯೂ ಬೇಡವೇ? ಅತ್ಯಾಚಾರದ ಬದಲಿಗೆ ಇದಕ್ಕೆ ಬೇರೆ ಯಾವ ಹೆಸರಿದೆ?
ಕತೆಗಾರ್ತಿ ಸುನಂದಾ ಕಡಮೆ ಬರೆದ ಹೊಸ ಕಾದಂಬರಿ “ಹೈವೇ63” ಯ ಒಂದು ಭಾಗ ನಿಮ್ಮ ಓದಿಗೆ

 

‘ಇದು ಅನಿವಾರ್ಯ ನಂದೂ, ಇಲ್ಲದಿದ್ರೆ ನಿಮ್ಮ ಅಪ್ಪಯ್ಯನ್ನ ಹ್ಯಂಗೆ ಒಪ್ಸೋದು? ಒಂದು ರಾತ್ರೆ ಅಷ್ಟೇ, ನಿನ್ನನ್ನ ಹೂವಿನ ಹಂಗೆ ಕಾಯೋ ಜವಾಬ್ದಾರಿ ನಂದು’ ವೆಂಕಟಕರಂಜಿ ಕ್ರಾಸಿನಲ್ಲಿ ನಿಂತು ಕರೆದದ್ದು ನನಗೂ ಯಾವುದೋ ಸಿನೆಮಾದ ದೃಶ್ಯದಂತೆ ಮೈ ನವಿರೇಳಿಸಿತ್ತು. ಹಾಗೆ ಎಲ್ಲಬಿಟ್ಟು ಉಟ್ಟಬಟ್ಟೆಯಲ್ಲೇ ಎದ್ದುಹೋಗಿದ್ದೆ. ಯಾಕೆ ಹಿಂದುಮುಂದಿನದೆಲ್ಲ ಯೋಚಿಸದೇ ಹೋದೆ? ಆ ಕ್ಷಣ ಅಪ್ಪ ಅಕ್ಕನ ಸಂಗತಿ ಯಾಕೆ ನನ್ನ ಕಾಡದೇ ಹೋಯಿತು?

ಮಧ್ಯಾಹ್ನ ಹನ್ನೆರಡರ ಸಮಯ ಅದು, ನಾನು ವೆಂಕಟ ಇಬ್ಬರೂ ಬೆಟ್ಟ ಹೊಕ್ಕುವಾಗ ಎದುರು ಕಂಡ ವ್ಯಕ್ತಿಯೊಬ್ಬರು ವೆಂಕಟನ ಹತ್ತಿರ ಮಾತಾಡಿದ್ದರಲ್ಲ, ಅವರು ಯಾರು ಏನೆಂದರು ನನ್ನ ಅರಿವಿಗೇ ಬರಲಿಲ್ಲ. ಅವರ ಕಣ್ಣು ಮಾತ್ರ ಎಲ್ಲವನ್ನೂ ಹೇಳಿದಂತಿತ್ತು. ನಡೆಯುವ ಅವಸರದಲ್ಲಿ ದೊರಗು ಮುಳ್ಳೊಂದು ನನ್ನ ಚಪ್ಪಲಿಗೆ ನೆಟ್ಟುಕೊಂಡಿತ್ತು. ನಿಂತು ಅದನ್ನು ಕಿತ್ತುಕೊಳ್ಳಲಾಗದ ನಿರ್ಲಕ್ಷ್ಯವೊಂದು ಮನಸ್ಸು ತುಂಬಿತ್ತು.

ಕಾಲ್ದಾರಿ ಬಿಟ್ಟು ಇಡಿಕಿರಿದ ದಟ್ಟ ಗಿಡಮರಗಳ ಮಧ್ಯೆ ಹೆಜ್ಜೆಇಟ್ಟ ವೆಂಕಟ. ಹೆಗಲ ಬ್ಯಾಗಿನಿಂದ ಹರಿತ ಕೊಡಲಿಯೊಂದನ್ನು ತೆಗೆದ. ಮರದ ಟೊಂಗೆಗಳ ಸವರುತ್ತ ಲಂಟಾಣ ಬಳ್ಳಿಗಳನ್ನು ಅತ್ಯಂತ ನಿಪುಣನಂತೆ ಬಿಡಿಸುತ್ತಿದ್ದ. ಅದನ್ನು ಕಂಡು ‘ಈ ಮೊದಲು ಇಲ್ಲಿ ಬಂದಿದ್ದೆಯೋ? ಕಾಡಿನ ಒಳದಾರಿ ನಿನಗೆ ಹೇಗೆ ಗೊತ್ತು?’ ಎಂದೆಲ್ಲ ಕೇಳಬೇಕೆಂದಿದ್ದೆ, ಯಾಕೋ ಗಂಟಲಲ್ಲೇ ಉಳಿದುಹೋಯಿತು, ನಿಧಾನಿಸಿ ಅವನ ಹೆಗಲ ದೊಡ್ಡ ಬ್ಯಾಗನ್ನು ಹಿಡಿದು ‘ಮತ್ತೇನುಂಟು ಇದರಲ್ಲಿ?’ ಅಂತ ಸಣ್ಣ ಪ್ರಶ್ನೆ ಮಾಡಿದ್ದೆ, ‘ಸೇಬು ಬಾಳೆಹಣ್ಣು ಉಂಟು, ತಿಂತೀಯೋ?’ ಅಂತ ಕೇಳಿದ. ‘ಈಗ ಬೇಡ’ಅಂದೆ. ‘ಹಿಡೀ ನೀರಾದ್ರೂ ಕುಡಿ’ ಅನ್ನುತ್ತ ಅದೇ ಬ್ಯಾಗಿಂದ ಬಿಸ್ಲೆರಿ ನೀರು ತೆಗೆದುಕೊಟ್ಟಿದ್ದ. ಜೀವಕ್ಕೆ ಯಾವುದೂ ಬೇಕೆನ್ನಿಸಲಿಲ್ಲ. ಹಕ್ಕಿಗಳ ದಟ್ಟ ಚಿಲಿಪಿಲಿಯನ್ನು ಆಲಿಸುತ್ತ ವೆಂಕಟ ‘ನೋಡು ಸಂಗೀತ ಕೇಳಿದ ಹಾಗೆನಿಸ್ತದೆ’ ಅಂದ, ನನಗೆ ಅದನ್ನು ಸವಿಯುವ ನಿರಾಳ ಮನಸ್ಥಿತಿಯೂ ಇರಲಿಲ್ಲ.

ಮಧ್ಯಾಹ್ನ ಎರಡುಗಂಟೆ ಸುಮಾರಿಗೆ ವೆಂಕಟ ‘ಇಲ್ಲಿಗೆ ಕೊಂಡದಗಲ್ಲಿ ಬೆಟ್ಟ ಮುಗೀತು, ಮುಂದೆ ತಾರಗಾರಕಾಡು, ಈಗ ಯಾರ ಭಯವೂಇಲ್ಲ’ ಅಂದ ವೆಂಕಟನ ದನಿಗೆ ಎಂಥದೋ ಹುಮ್ಮಸ್ಸಿತ್ತು. ಆದರೆ ನನ್ನ ಮನಸ್ಸು ಎತ್ತೆತ್ತಲೋ ತಿರುಗಿ ಅತಂತ್ರದ ಭಾವದಲ್ಲಿ ತೇಲುತ್ತಿತ್ತು. ‘ಅಪ್ಪಯ್ಯ, ಅಕ್ಕ, ಎಲ್ಲ ಈಗ ಏನು ಮಾಡ್ತಿರಬಹುದು? ನಾನು ತಪ್ಪು ಮಾಡುತ್ತಿದ್ದೇನೆಯೇ?’ ಎಂಬೆಲ್ಲ ಪ್ರಶ್ನೆಗಳು ನನಗೆ ಸ್ಪಷ್ಟವಾಗದೇ ಹೆಜ್ಜೆಹೆಜ್ಜೆಗೂ ಅವ್ಯಕ್ತ ವೇದನೆ ಕೊಡುತ್ತಿದ್ದವು.

(ಸುನಂದಾ ಕಡಮೆ)

ಹೆಬ್ಬಾವೊಂದು ಮರದ ದಪ್ಪರೆಂಬೆಗೆ ಸುತ್ತಿಕೊಂಡು ಬಿಸಿಲು ಕಾಸಿಕೊಳ್ಳುತ್ತಿರುವುದನ್ನು ವೆಂಕಟ ಅಚ್ಚರಿಯೇ ಇಲ್ಲವೆಂಬಂತೆ ತೋರಿಸಿದ. ಇದೇ ಕಾಡಲ್ಲಿ ಇಂಥದೇ ಹೆಬ್ಬಾವೊಂದು ಮುನಿಯಪ್ಪಎಂಬುವವನನ್ನು ನುಂಗಿದ್ದು, ಅವನ ಕೈಲಿದ್ದ ಕೊಡಲಿಯಿಂದಲೇ ಅದರ ಹೊಟ್ಟೆ ಸೀಳಿಕೊಂಡು ಅವ ಹೊರಬಂದದ್ದು, ಹೆಬ್ಬಾವು ಅಲ್ಲೇ ಸತ್ತು ಬಿದ್ದದ್ದು.. ಕತೆ ಹೇಳುತ್ತ ಸಾಗಿದ ವೆಂಕಟ. ನನ್ನ ಕಾಲು ಇನ್ನು ಹೆಜ್ಜೆ ಕಿತ್ತಿಡಲಾರೆ ಅನ್ನುವಷ್ಟು ಸೋತು ಹೋದವು.

ಸಂಜೆ ನಾಲ್ಕರ ಹೊತ್ತಿಗೆ ನಾಲ್ಕೈದು ಕೀಮಿ ದಾರಿ ಸವೆಸಿದ್ದೆವು. ಬೆಟ್ಟದಲ್ಲಿ ‘ಯಾರು ಎಲ್ಲಿ ಹುಡುಕಿದರೂ ಕೈಗೆ ಸಿಗದಿದ್ದಷ್ಟು ಒಳಭಾಗಕ್ಕೆ ಬಂದು ಬಿಟ್ಟೆವು’ ಅನ್ನುತ್ತ ಒಮ್ಮೆ ನನ್ನ ಕೈ ಹಿಡಿದೆಳೆದು ತಬ್ಬಿಕೊಂಡಿದ್ದ ವೆಂಕಟ. ಆಗ ಸ್ವಲ್ಪ ಸಲಿಗೆ ತೊಗೊಂಡು ‘ಕಾಡಿನದಾರಿ ನಿಂಗೆ ಹ್ಯಾಂಗೆ ಗೊತ್ತು?’ ಅಂತ ಯಾವುದೋ ಧ್ಯಾನದಲ್ಲಿ ಕೇಳಿದ್ದೆ, ವೆಂಕಟನ ಮುಖ ಚಹರೆ ಚೂರು ಬದಲಾಗಿತ್ತು. ನನ್ನ ಮಾತಿಗೆ ಉತ್ತರಿಸಲೋ ಬೇಡವೋ ಎಂದು ಅನುಮಾನಿಸುತ್ತ ‘ಮಂಜಣ್ಣನ ಸಂಗ್ತಿ ಆಗಾಗ ಪಿಕ್ನಿಕ್ ಗೆ ಬರ್ತೇನೆ ಇಲ್ಲೆಲ್ಲ’ ಅನ್ನುತ್ತ ಒಮ್ಮೆಲೇ ತಬ್ಬಿದ ಕೈಯನ್ನು ಬಿಟ್ಟು ನಡೆಯತೊಡಗಿದ. ‘ಈಗ ಎಲ್ಲಿ ಹೋಗ್ತಿರೋದು ನಾವು?’ ತಲೆಕೆಟ್ಟಂತಾಗಿ ಆಗ ಕೇಳಲೇ ಬೇಕಾಗಿದ್ದ ಪ್ರಶ್ನೆ ಕೇಳಿದ್ದೆ. ‘ಮೊದ್ಲು ಕೊಂಡದಗಲ್ಲಿ ವಿಶ್ವನಾಥನ ಮನೇಲಿ ಉಳ್ಕೊಳ್ಳೂದು ಅಂತಾಗಿತ್ತು, ಅವ್ನ ಹೆಂಡತಿ ಶಾಲಿನಿ ನಳಿನಕ್ಕನ ಗೆಳತಿ, ಸುದ್ದಿ ಮುಟ್ಟಿಸಿಬಿಟ್ಟಾಳು, ನೀವು ತಾರಗಾರ ಬೆಟ್ಟಕ್ಕೇ ಹೋಗಿರೋದು ಚೊಲೋ ಅಂದ ಮಂಜಣ್ಣ’ ವೆಂಕಟ ತಡೆತಡೆದು ಹೇಳಿದ್ದ.

‘ಅಯ್ಯೊ ಹುಲಿ ಚಿರತೆ ಉಂಟು ಅಂತಾರೆ ಇಲ್ಲಿ, ರಾತ್ರಿ ಹೊತ್ತು ಹೆದ್ರಿಕೆ ಅಲ್ಲ?’ ತೀರಾ ಮುಗ್ಧವಾಗಿ ಕೇಳಿದ್ದೆ. ಅಷ್ಟು ಹೇಳಿದ್ದಕ್ಕೆ ವೆಂಕಟ ‘ಬ್ಯಾಗು ತಡಕಿ ವೆಂಕಟ ಅದರೊಳಗಿನ ಒಂದು ಪಿಸ್ತೂಲು ತೆಗೆದು ತೋರುತ್ತ ‘ಇದೇನು ಗೊತ್ತೋ?’ ಕೇಳಿದ್ದೇ ನನ್ನ ಕೈಕಾಲು ನಡುಗತೊಡಗಿತು. ‘ಅಯ್ಯೋ ಹುಚ್ಚಿ, ಕಾಡು ಪ್ರಾಣಿ ಬಂದರೆ ಇದನ್ನು ಬಳಸೋದು, ಮಂಜಣ್ಣಂದಿದು’ ಅನ್ನುತ್ತ ಒಮ್ಮೆ ಪಿಸ್ತೂಲಿನ ಬಾಯಿ ಊದಿ ಒಳಗಿಟ್ಟುಕೊಂಡ.

‘ತಾರ್ಗಾರ ಬೆಟ್ಟದಲ್ಲೊಂದು ಜಾಗೆ ಉಂಟು, ನಾಲ್ಕು ದೊಡ್ಡ ಮರಗಳ ದಪ್ಪ ಕೊಂಬೆಗಳು ಸೇರಿ, ಗದ್ದೇಲಿ ಮಾಳ ಹಾಕ್ತಾರಲ್ಲ, ಹಾಗೆ ಮಂಚದ ತರಹ ಆಗಿದೆ, ಮಂಜಣ್ಣ ಅದಕ್ಕೆ ಹೂಗಣೆ ಮಾಳ ಅಂತ ಕರೀತಾನೆ. ಅಲ್ಲೇ ಉಳ್ಕೋಳ್ಳೋಣ’ ಅಂದಿದ್ದ ವೆಂಕಟ. ಸುತ್ತ ಕತ್ತಲು ಮುತ್ತಿಕೊಳ್ಳುತ್ತಿತ್ತು. ಜೊತೆಯಲ್ಲಿ ಜೀರುಂಡೆ ಸ್ವರ ಭಯಾನಕವಾಗಿತ್ತು.

‘ಮಂಜಣ್ಣ ಬರ್ತಾನ್ಯೆಇಲ್ಲಿ?’ ಅಂತ ಅಚ್ಚರಿಯಿಂದಲೇ ಕೇಳಿದ್ದೆ, ‘ಹ್ಞು, ಆಗಾಗ ಬರ್ತಾ, ಇದರ ಬಗ್ಗೆ ಅರಣ್ಯ ಇಲಾಖೆಗೂ ಗೊತ್ತಿಲ್ಲ, ಮಂಜಣ್ಣ ಶಿಕಾರಿ ಮಾಡ್ತಾ ಇಲ್ಲೀತಂಕ ಬಂದು ಈ ಜಾಗೆ ಶೋಧ ಮಾಡಿದ್ದು’ ಅಂದ. ನನಗೆ ಏನನ್ನಿಸಿತೋ ‘ಮಂಜಣ್ಣ ಅವ್ನ ಹೆಂಡ್ತೀ ಜೊತೆ ಬರ್ತಾನ್ಯೇ?’ ಅಂತ ಕೇಳಿಬಿಟ್ಟಿದ್ದೆ, ವೆಂಕಟ ನಗುತ್ತ ‘ಅರೆ, ಅವೆಲ್ಲ ಕೇಳಬಾರ್ದು, ಹೊಟ್ಟೆಗೆ ಅನ್ನಕೊಡೋ ದಣಿ ಅವ್ನು’ ಸ್ವಲ್ಪ ಜೋರಿನಲ್ಲೇ ಅಂದಿದ್ದ. ನಾನು ಯಾಕಾದ್ರೂ ಕೇಳಿದೆನೋ ಅಂದುಕೊಳ್ಳುತ್ತ ಸುಮ್ಮನಾದೆ.

ಇಬ್ಬರೂ ಹೈರಾಣಗಿದ್ದೆವು. ದಾರಿಯಲ್ಲಿ ಒಂದು ಸಣ್ಣಝರಿ ಸಿಕ್ಕಿತು, ಅದರ ದಂಡೆಗೆ ಕೂತೆವು. ಅಲ್ಲೇ ನೀರುಕುಡಿಯಲು ಬಂದ ಜಿಂಕೆಯೊಂದು ನಮ್ಮನ್ನು ಬಿಟ್ಟಕಣ್ಣಿನಿಂದ ನೋಡುತ್ತ ನೆಗೆದು ಹಾರಿ ಮಾಯವಾಯಿತು. ಹಸಿವೂ ಆಗಿತ್ತು. ವೆಂಕಟ ಬ್ಯಾಗಿನಿಂದ ಸೇಬುಹಣ್ಣುಗಳೆರಡನ್ನು ಹೊರತೆಗೆದ. ಅದರ ಹಿಂದೆ ಫಳಫಳ ಹೊಳೆವ ಸ್ಟೀಲಿನ ಚಾಕುವೂ ಹೊರಬಂತು, ಅದನ್ನು ಕಂಡೇ ನಾನು ಇನ್ನೊಮ್ಮೆ ನಡುಗಿದೆ. ಜೀವ ತೆಗೆವ ಹತಾರು ಕಂಡರೇನೇ ಭಯಬೀಳುವ ಸ್ಥಿತಿಯನ್ನು ಯಾಕೆ ತಂದುಕೊಂಡೆ ಎಂಬ ಕುರಿತ ಯೋಚನೆಯೇ ನನ್ನನ್ನು ಹಣ್ಣು ಮಾಡುತ್ತಿತ್ತು. ಸೇಬು ತುಂಡುಗಳು ಹೇಗೆ ಹೊಟ್ಟೆ ಸೇರಿದವೋ ಗೊತ್ತೇ ಆಗಲಿಲ್ಲ.

ಪುನಃ ಎದ್ದು ನಡೆಯತೊಡಗಿದವು. ದಟ್ಟಡವಿಯಲ್ಲೆಲ್ಲೋ ಹುಲಿ ಗರ್ಜಿಸಿದ, ನರಿಗಳು ಊಳಿಟ್ಟ ಸದ್ದು ಕಾಡಿನಲ್ಲಿಡೀ ಒಂದುರೀತಿಯ ಭಯಾನಕ ವಾತಾವರಣ ಸೃಷ್ಟಿಸಿತ್ತು. ಗಾಳಿ ಸುಂಯನೆ ಸದ್ದು ಮಾಡುತ್ತಿತ್ತು. ನಿಧಾನ ಕಾರ್ಗತ್ತಲು ವ್ಯಾಪಿಸತೊಡಗಿತು. ಅರ್ಥವಾಗದ ಭೀತಿಯೊಂದು ಒಳಗೆಲ್ಲೋ ನನ್ನನ್ನು ಅಧೀರಗೊಳಿಸುತ್ತಿತ್ತು. ನಾನು ಜೋಲಿ ಹೊಡೆಯುವಂತಾದ ನಿತ್ರಾಣ ಸ್ಥಿತಿ ತಲುಪಿದಾಗ ಆ ಸ್ಥಳ ತಲುಪಿದೆವು.

ಹೂಗಣೆ ಮಾಳ ನಿಜಕ್ಕೂ ವಿಚಿತ್ರವಾಗಿತ್ತು, ನಾಲ್ಕು ಮರಗಳ ದಪ್ಪ ಕಾಂಡಗಳು ಒಂದಕ್ಕೊಂದು ಬೆಸೆದು ಮೇಲಕ್ಕೆ ಮಾಳದ ತರಹ ಸೇರಿದ್ದವು, ಕೆಳಗಡೆಯಿಂದ ಅದು ಮರದ ಕೊಂಬೆಗಳ ಹಸಿರು ತೊಟ್ಟಿಲಂತೆ ಕಾಣುತ್ತಿತ್ತು. ಒಂದು ಮೂಲೆಯ ಮರದ ಕೊಂಬೆ ಹಿಡಿದು ಇಬ್ಬರೂ ಮೇಲೆ ಹತ್ತಿಕೊಂಡು ಕೂತೆವು, ‘ಯಾವಕಾಡು ಪ್ರಾಣಿಯೂ ಹತ್ತಿ ಬರಲು ಅವಕಾಶ ಇಲ್ಲಇಲ್ಲಿ, ಬಂದರೆ ಅದು ಹೆಬ್ಬಾವು ಮಾತ್ರ’ ಅಂತ ಸೇರಿಸಿ ನಕ್ಕ. ಅವನ ಮಾತಿಗೆ ನಗುವ ಅಳುವ ತಲೆಯೆತ್ತುವ ಯಾವ ಅವಸ್ಥೆಯಲ್ಲೂ ನಾನಿರಲಿಲ್ಲ. ಮಾಳ ಹತ್ತಿದ್ದೇ ತಲೆಹಿಡಿದು ಅಲ್ಲೇ ಬಿದ್ದುಕೊಂಡೆ.

ಮಾಳದ ಅಡಿಯಲ್ಲಿ ಮರದ ಕಾಂಡಗಳೇ ಅಣಿಯುತ್ತಿದ್ದುದರಿಂದ ವೆಂಕಟ ಅದೇ ಮರದ ಅಕ್ಕಪಕ್ಕದ ಹಸಿ ಎಲೆಗಳನ್ನು ಹರಿದು ಮಾಳದಲ್ಲಿ ಹರಡಿದ. ಮೆತ್ತನೆ ಎಲೆಹಾಸು ತಯಾರಾಯ್ತು. ಚಂದ್ರನ ಮಂದ ಬೆಳಕು ಹರಡಿತ್ತು. ಮರದ ಪೊಟರೆಗಳಿಂದ ಆಗಾಗ ಹಕ್ಕಿ ಪಕ್ಕಿಗಳ ಗುಟುರು ಮೆಲ್ಲಗೆ ಕೇಳುತ್ತಿತ್ತು. ‘ಹಣ್ಣು ತಿನ್ನು’ ಅನ್ನುತ್ತ ಇನ್ನೊಂದು ಸೇಬು ಕತ್ತರಿಸಿ ತೆಗೆದುಕೊಟ್ಟಿದ್ದ ವೆಂಕಟ, ನಾನು ಬೇಡವೆಂದೆ. ಬಾಳೆಹಣ್ಣು ಕೊಟ್ಟ, ಅದನ್ನೂ ನಿರಾಕರಿಸಿದೆ. ಆಗ ರಮಿಸುವಂತೆ ತಬ್ಬಿಕೊಂಡು ‘ನಾನೆ ತಿನ್ನಿಸಲೇ?’ ಕೇಳಿದ, ಆ ಸಲಿಗೆಯಲ್ಲೇ ನಾನು ‘ನಿನ್ನ ಹಟ್ಟಿಕೇರಿ ಮನೆಯಲ್ಲಿ ಯಾರಿದ್ದಾರೆ?’ ಅಂತ ಕೆದಕುತ್ತ ಎದ್ದುಕೂತೆ. ‘ಅಮ್ಮ ತೀರಿಕೊಂಡ ಮೇಲೆ ಆ ಮನೆಗೆ ಹೋಗೋದು ನಿಲ್ಲಿಸಿಬಿಟ್ಟೆ, ಹುಲ್ಲಿನ ಮನೆ, ಮಳೆಯ ರಭಸಕ್ಕೆ ಕಳೆದ ವರ್ಷ ಮನೆಯ ಒಂದುಬದಿ ಬಿದ್ದು ಹೋಗಿದೆ’ಅಂದ.

‘ಕುಡೀತೀಯ ನೀನೂ?’ ಕೇಳಿದೆ. ಅವ ನನ್ನಗಲ್ಲ ಸವರಿ ನಸುನಗುತ್ತ ‘ಸ್ವಲ್ಪ ಯಾವಾಗಾದ್ರೂ, ಅದೂ ಮಂಜಣ್ಣ ಕುಡಿಸಿದ್ರೆ ಮಾತ್ರ’ ಹಣ್ಣು ತಿನ್ನುತ್ತಲೇ ಹೇಳಿದ. ‘ಅಪ್ಪಯ್ಯಗೆ ಕುಡಕರಂದ್ರೆ ಆಗೂದಿಲ್ಲ’ ಅಂತ ಹೇಳಿದೆ. ವೆಂಕಟ ಒಮ್ಮೆಲೇ ಸದ್ದು ಮಾಡಿ ನಕ್ಕುಬಿಟ್ಟ. ‘ಅಯ್ಯೋ ನನ್ನ ಬಂಗಾರ, ಕುಡಕರಂದ್ರೆ ಇಡೀ ದಿನ ಕುಡ್ದು ಗಟಾರದಲ್ಲಿ ಬೀಳೋರು, ಇದು ಫ್ಯಾಷನ್ನಿಗೆ ಒಂದಿಷ್ಟು ಕುಡಿಯೂದು, ಅವೆಲ್ಲ ನಿನಗೆ ಗೊತ್ತಾಗೂದಿಲ್ಲ’ಎಂದವನೇ ಕೂತಿದ್ದವಳನ್ನು ಒಮ್ಮೆಲೇ ಎಂಥದೋ ಆವೇಶದಲ್ಲಿ ಮೈಮೇಲೆ ಎಳೆದುಕೊಂಡು ಮುದ್ದಿಸಿದ.

ಮಧ್ಯಾಹ್ನ ಹನ್ನೆರಡರ ಸಮಯ ಅದು, ನಾನು ವೆಂಕಟ ಇಬ್ಬರೂ ಬೆಟ್ಟ ಹೊಕ್ಕುವಾಗ ಎದುರು ಕಂಡ ವ್ಯಕ್ತಿಯೊಬ್ಬರು ವೆಂಕಟನ ಹತ್ತಿರ ಮಾತಾಡಿದ್ದರಲ್ಲ, ಅವರು ಯಾರು ಏನೆಂದರು ನನ್ನ ಅರಿವಿಗೇ ಬರಲಿಲ್ಲ. ಅವರ ಕಣ್ಣು ಮಾತ್ರ ಎಲ್ಲವನ್ನೂ ಹೇಳಿದಂತಿತ್ತು. ನಡೆಯುವ ಅವಸರದಲ್ಲಿ ದೊರಗು ಮುಳ್ಳೊಂದು ನನ್ನ ಚಪ್ಪಲಿಗೆ ನೆಟ್ಟುಕೊಂಡಿತ್ತು.

ವೆಂಕಟನ ಕೈಗಳು ಎಲ್ಲೆಲ್ಲೋ ಆಡುವಾಗ ಅದೇ ಸರೀ ಸಮಯವೆಂಬಂತೆ ‘ನಿನ್ನ ಹೆಂಡತಿಗೂ ಹೀಗೆಲ್ಲ ಮಾಡಿದ್ದಿಯೋ?’ ಅಂತ ಕೇಳಿಯೇ ಬಿಟ್ಟೆ, ಅಷ್ಟೇ ಅವಸರದಲ್ಲಿ ವೆಂಕಟ ‘ಇಲ್ಲ ಅವಳನ್ನು ಒಮ್ಮೆಯೂ ಮುಟ್ಟೇಇಲ್ಲ’ಅಂದ. ನಂಬಿದೆ, ‘ಎಲ್ಲಿದ್ದಾಳೆ ಅವಳೀಗ?’ ಕೇಳಿದ್ದಕ್ಕೆ ‘ಬೇಲೇಕೇರಿಯಲ್ಲಿ ಅಂಗನವಾಡಿ ಟೀಚರ್ ಆಗಿದ್ದಾಳೆ’ ಅವನ ಉತ್ತರ ಪ್ರಾಮಾಣಿಕವಾಗಿತ್ತು, ಅಲ್ಲಿಯವರೆಗೆ ಸರಿಯಾಗೇ ಇದ್ದ, ಆದರೆ ಅದರ ನಂತರ ಅವನ ವರ್ತನೆ ಬದಲಾದಂತೆನಿಸಿತು.

ವೆಂಕಟನಿಗೆ ನನ್ನಿಂದ ಈ ಪ್ರಶ್ನೆ ಎದುರಾಗಬಹುದು ಅಂತ ಅನ್ನಿಸಿರಲಿಲ್ಲವೇನೋ, ಒಳಗೆಲ್ಲೋ ಕಸಿವಿಸಿ ಕಾಡಿ ಸ್ವಲ್ಪ ಹೊತ್ತು ಸುಮ್ಮನೇ ಇದ್ದ. ಮುಖದಲ್ಲಿ ಬೇಸರಕಂಡಿತು. ಒಮ್ಮೆಲೇ ಮೈಮೇಲೆ ಏರಿ ಬಂದ. ಹೆಂಡತಿಯ ಸುದ್ದಿ ತೆಗೆದಿದ್ದಕ್ಕೆ ಸಿಟ್ಟು ಏರಿ ಹೀಗೆ ನನ್ನನ್ನು ಎಳೆದಾಡುತ್ತಾನೆ ಅಂತ ತಿಳಿದೆ. ಆದರೆ ಅದೇ ಮುಂದುವರೆಯಿತು.

ಏನು ನಡೆಯಿತು ಆ ದಿನ? ಒಮ್ಮೆಯೂ ನಾನು ಇಷ್ಟು ವ್ಯವಧಾನದಲ್ಲಿ ನಿಂತು ಯೋಚಿಸಲೇ ಇಲ್ಲವಲ್ಲ?

ನಾನು ಬೇಡವೆಂದು ತಲೆಯಲ್ಲಾಡಿಸುತ್ತಿರುವಾಗಲೇ ಒತ್ತಾಯಿಸಿದನೇ? ತಪ್ಪಿಸಿಕೊಳ್ಳದ ಹಾಗೆ ನನ್ನನ್ನು ಹೆಡೆಮುರಿಗೆಕಟ್ಟಿ ಹಿಡಿದಿದ್ದನೇ? ನೋವಿನಿಂದ ಅರಚಿ ಆ ಬದಿ ತಿರುಗಿದವಳನ್ನು ರಭಸದಲ್ಲಿ ಎಳೆದು ತನ್ನೆಡೆ ಹೊರಳಿಸಿಕೊಂಡನೇ? ಕೆನ್ನೆ ತುಟಿ ಎದೆ ಕತ್ತು ರಟ್ಟೆಗಳಲ್ಲೆಲ್ಲ ಎಷ್ಟು ಹೊತ್ತಿಗೆ ಕಚ್ಚಿದ ನೋವು ಎದ್ದಿತು? ಯಾವಾಗ ತೊಟ್ಟ ಬಟ್ಟೆಗಳು ಚಲ್ಲಾಪಿಲ್ಲಿಯಾದವು? ಆ ಹತ್ತರಿಂದ ಹದಿನೈದು ನಿಮಿಷದ ಅವಧಿಯಲ್ಲಿ ಸತ್ತೇ ಹೋಗುತ್ತೇನೇನೋ ಅನ್ನುವಷ್ಟು ಉಸಿರುಗಟ್ಟಿತ್ತಲ್ಲ? ಒಂದು ದೊಡ್ಡ ಆಕ್ರಮಣ ಆದಂತೆ ಅಷ್ಟು ದೊಡ್ಡದಾಗಿ ನಾನು ಯಾಕೆ ಕೂಗಿಕೊಂಡಿದ್ದೆ ? ನಂತರ ಒಬ್ಬಳೇ ಕೂತು ಮುಸುಮುಸು ಅತ್ತೆ.

ವೆಂಕಟ ಆ ಬದಿ ತಿರುಗಿ ಸಣ್ಣಗೊರಕೆ ಹೊಡೆಯಲಾರಂಭಿಸಿದ. ಕಾರ್ಗತ್ತಲಲ್ಲಿ ಎಲ್ಲಿ ನೋಡಿದರಲ್ಲಿ ಮಿಂಚುಹುಳುವಿನ ಬೆಳಕು ಕಣ್ಣಿಗೆ ರಾಚುತ್ತಿತ್ತು. ಎಲ್ಲ ಒಮ್ಮೆಲೇ ಬಯಲಾದಂತೆ ಅನಿಸುತ್ತ ನನಗೆ ಒಂದು ರೀತಿಯ ಭಯ ಶುರುವಾಯ್ತು. ಯಾಕೋ ಮುಖ ಮೈಯೆಲ್ಲ ಗಾಯವಾದಂತೆ ಉರಿ ಎದ್ದಿತ್ತು. ಮಾಳ ಇಳಿದು ಒಬ್ಬಳೇ ಹೋಗಿಬಿಡುವ ತಾಣವೂ ಅಲ್ಲ.

ಆಗಸ ದಿಟ್ಟಿಸುತ್ತ ನಾನು ಸುಮ್ಮನೆ ಕಣ್ಣುತೆರೆದೇ ಮಲಗಿದೆ, ಒಂದು ಬೆಳ್ಳಿನಕ್ಷತ್ರ ಮಾತ್ರ ಆಕಾಶದಲ್ಲಿ ಅಷ್ಟೊತ್ತಿಂದ ತೋರುತ್ತಿತ್ತು. ಅದೀಗ ಒಮ್ಮೆಲೇ ಬೆಟ್ಟದಲ್ಲಿ ಇಳಿದಂತೆ ಭಾಸವಾಯಿತು. ನೀಲಿ ಬಣ್ಣದ ಹಾವಿನಂತಹ ಬೆಳಕು ಜಗ್ಗನೆ ಕಾಡಿಗೆ ಹೊತ್ತಿಕೊಂಡಂತೆ ಕಂಡು ದಡಗ್ಗನೆ ಎದ್ದುಕೂತೆ. ಅನಾಥೆಯ ಭಾವಕಾಡಿತು, ಅದನ್ನು ಹೋಗಲಾಡಿಸಿಕೊಳ್ಳಲೋಸುಗ ನಾನು ವೆಂಕಟನನ್ನು ಕ್ಷಮಿಸಿದೆ.

ವೆಂಕಟನನ್ನು ಅಲುಗಿಸಿ ಎಬ್ಬಿಸುತ್ತ ‘ಅಲ್ಲಿ ಸಣ್ಣ ಹಳ್ಳ ಉಂಟಲ್ಲ, ಆಕಾಶದಿಂದ ನಕ್ಷತ್ರ ರಿಫ್ಲೆಕ್ಟ್ ಆಗ್ತದೆ, ಮತ್ತೆಂಥ ಅಲ್ಲದು ಸುಮ್ನೇ ಮಲ್ಕೊ’ ಎನ್ನುತ್ತ ಗದರಿದ. ಸಣ್ಣ ನುಶಿಯಂಥದೇನೋ ಕೈ ಕಾಲುಗಳಿಗೆ ಕಚ್ಚಿಕಚ್ಚಿ ನನಗೆ ನಿದ್ದೆಯೇ ಬರಲಿಲ್ಲ. ಸ್ವಲ್ಪ ನಿದ್ದೆ ಎಚ್ಚರ ತುರಿಕೆ ಚಳಿ ಎಂಥೆಂಥದೋ ಚಿತ್ರವಿಚಿತ್ರ ಸ್ವರಗಳಲ್ಲೇ ರಾತ್ರಿ ಸರಿದು ಹೋಗುತ್ತಿತ್ತು.

ನನಗೆ ಏನೇನೋ ನೆನಪಾಗಿ ಬಿಕ್ಕಳಿಸಿ ಅತ್ತುಬಿಟ್ಟಿದ್ದೆ. ‘ತೀಡಲು ಎಂಥಾಯ್ತು? ನಾಳೆಯೇ ಮನೆಗೆ ಹೋಗ್ವ, ನಿಮ್ಮಪ್ಪ ಮನೆಯೊಳಗೆ ತೆಗೋಳ್ದಿದ್ರೆ ನಂ ಮನೆಗೇ ಕರೊಂಡು ಹೋಗ್ತೆ. ಅಥ್ವ, ಮಂಜಣ್ಣನ ಮನೆಗೆ ಹೋಗ್ವ, ಅವ್ನು ಹೇಳ್ದಂಗೆ ಹೊನ್ನಾರಾಕ ದೇವಸ್ಥಾನ್ದಲ್ಲಿ ಮದ್ವೆ ಆಗ್ವ, ನೀ ಏನೂ ಚಿಂತೆ ಮಾಡ್ಬೇಡ, ಇನ್ನು ಸ್ವಲ್ಪ ದಿನ ಅಷ್ಟೇ, ಎಲ್ಲ ಇದ್ದಲ್ಲೇ ಸರಿಹೋಗ್ತದೆ’ ಅಂತೆಲ್ಲ ರಮಿಸುತ್ತ ವೆಂಕಟ ಮೊಬೈಲ್ ಬೆಳಕಲ್ಲಿ ಸಮಯ ನೋಡಿದ್ದ, ರಾತ್ರೆ ಎರಡುಗಂಟೆ ತೋರಿಸುತ್ತಿತ್ತು.

ಚಿತ್ರ ವಿಚಿತ್ರ ಸ್ವರಗಳು, ಯಾರೋ ಕೂಗಿಕೊಂಡ ಹಾಗೆ. ಹೆದರಿ ವೆಂಕಟನನ್ನು ಇನ್ನೊಮ್ಮೆ ಅಪ್ಪಿಕೊಂಡಿದ್ದೆ. ‘ಇಲ್ಲಿ ನಮ್ಮನ್ನ ಬಿಟ್ಟರೆ ಯಾವ ನರಮನುಷ್ಯರೂ ಇಲ್ಲ, ಯಾವುದೋ ಹಕ್ಕಿ ಕೂಗದು’ ನಿದ್ದೆಗಣ್ಣಲ್ಲೇ ಅಂದಿದ್ದ ವೆಂಕಟ. ನಂತರ ದೂರದಲ್ಲೆಲ್ಲೋ ಮಗು ಅಳುತ್ತಿರುವ ಸ್ವರ ಕೇಳಿತು. ‘ಬೇರೆ ಬೇರೆದೇಶದ ಪಕ್ಷಿಗಳು ಬರ್ತವೆ ಇಲ್ಲಿ, ಅವು ಯಾವ್ಯಾವುದೋ ಸ್ವರ ಹೊರಡಿಸಿ ಕೂಗ್ತವೆ, ಹೆದ್ರಬೇಡ ಮಲಗು’ ಅಂದ. ಸುಮ್ಮನೇ ಅತ್ತಿದ್ದೆ, ‘ನನ್ನ ಹೀಗೆ ಇಲ್ಲೇ ಬಿಟ್ಟು ಹೋಗ್ತೀಯಾ ಅಂತ ಭಯವಾಗ್ತಿದೆ’ ಅಂದಿದ್ದೆ. ಉತ್ತರ ಕೊಡದೇ ನಿದ್ದೆ ಬಿದ್ದವರಂತೆ ಸುಮ್ಮನುಳಿದ. ನನಗೆ ಅವನ ಬ್ಯಾಗಿನಲ್ಲಿದ್ದ ಪಿಸ್ತೂಲು ಮತ್ತು ಚಾಕುವಿನದೇ ಬಿಂಬ ಕಣ್ಣಲ್ಲಿ ಕೂತು ಒಂದೇ ಸಮನೇ ಹೆದರಿಸುತ್ತಿತ್ತು.

ಇದ್ದಕ್ಕಿದ್ದಂತೆ ಮಲ್ಲಿ ಹೇಳಿದ ಕತೆ ನೆನಪಾಗಿ ಇನ್ನಷ್ಟು ನಡುಗಿಹೋದೆ. ‘ಹೀಗೇ ಬೆಟ್ಟದಲ್ಲಿ ಒಂದು ಹುಡುಗಿಯ ಹೆಣ ಅನಾಥವಾಗಿ ಬಿದ್ದಿತ್ತಂತೆ,ಅರಣ್ಯದಲ್ಲಿ ಯಾರೋ ಅವಳನ್ನು ಅತ್ಯಾಚಾರ ಮಾಡಿ ಕೊಂದು ಒಗೆದಿದ್ದರಂತೆ, ಕೊಳೆತ ಅವಸ್ಥೆಯಲ್ಲಿರೋ ಅವಳ ಶವ ಮೂರ್ನಾಲ್ಕು ದಿನಗಳ ನಂತರ ಕಂಡಿತಂತೆ’ ಆ ಕ್ಷಣ ನನಗೆ ಗೊತ್ತಿದ್ದ ಎಲ್ಲ ದೇವರನ್ನೂ ನೆನಪಿಸಿಕೊಂಡೆ. ಅಪ್ಪಯ್ಯನ ಕಾಲು ಹಿಡಿದು ತಪ್ಪಾಯ್ತು ಅಂತ ಕೇಳಿ, ಮೊದ್ಲು ಮನೆ ಸೇರಿಕೊಳ್ಬೇಕು ಅಂತೆಲ್ಲ ಒಮ್ಮೆ ತೀವ್ರವಾಗಿ ಅನಿಸಿಹೋಯಿತು.

ಇವನ ಜೊತೆ ಬಂದದ್ದು ಯಾರಿಗೂ ಗೊತ್ತಿಲ್ಲ, ನನಗೆ ನಿದ್ದೆ ಹತ್ತಿದಾಗ ಈ ವೆಂಕಟನೇ ತನ್ನನ್ನು ಇಲ್ಲೇ ಪ್ರಾಣಿಗಳಿಗೆ ಆಹಾರ ಮಾಡಿ ಹೋಗಬಾರದೇಕೆ ಎಂಬ ಸಂಶಯ ಕಾಡುತ್ತ ಮುದ್ದಾಂ ನಿದ್ದೆ ಮಾಡದೇ ಹೊರಳಾಡಿದೆ, ಅಪ್ಪ ದಿನಾ ಹೇಳುತ್ತಿದ್ದ ವಕ್ರತುಂಡ ಮಹಾಕಾಯ ಗಣೇಶನ ಸ್ತೋತ್ರವನ್ನು ನೂರಾರು ಬಾರಿ ಮನಸ್ಸಿನಲ್ಲೇ ಹೇಳಿಕೊಂಡೆ. ಅಪ್ಪ ಅಕ್ಕ ಅಡುಗೆ ಖೋಲಿ ಬಾವಿಯ ಹಗ್ಗ ಕಸಬರಿಗೆ ಚಹಾ ಪಾತ್ರೆ ಎಲ್ಲವೂ ಸ್ಮೃತಿಯಲ್ಲಿ ಮೂಡಿ ನನ್ನನ್ನು ಅಲುಗಾಡಿಸಿಬಿಟ್ಟಿತು.

ಅಂತೂ ಚಿಲಿಪಿಲಿ ಸದ್ದು ಬೆಳಗಾಗುವ ಸೂಚನೆ ಕೊಟ್ಟಿತ್ತು. ನಸುಕಿನ ಐದು ಆಗಿದ್ದೀತು, ಹೂಗಣೆಯ ಮಾಳ ಇಳಿದೆವು. ನಾನು ಚರ್ಮ ಹರಿದ ಗೊಂಬೆಯಂಥಾಗಿದ್ದೆ. ಬಾಳ ಹೊತ್ತು ಮಾತಾಡದೇ ನಡೆದೆ. ಇವನ ಜೊತೆ ಬಂದಿದ್ದೇನೆ ಅಂದಮೇಲೆ ಇವನ ಜೊತೆ ಬದುಕುವುದು ಅನಿವಾರ್ಯ ಅನಿಸಿಹೋಯಿತು. ದುಃಖ ಒತ್ತರಿಸಿ ಬಂತು.

ಆಗ ವೆಂಕಟ ನನ್ನ ಹಸ್ತ ಹಿಡಿದು ‘ನಾ ಕೆಟ್ಟವ ಖರೆ, ಆದ್ರೆ ಅಷ್ಟು ಕೆಟ್ಟವ ಅಲ್ಲ, ಮದ್ವೆ ಆಗ್ತೀನಿ, ನಂಗಾದ್ರೂ ಯಾರಿದಾರೆ ಹೇಳು, ಸಂಗಡ ಇರೂವ, ಆದ್ರೆ ಮತ್ತೆ ಮತ್ತೆ ಅವಳ ಸುದ್ದಿ ತೆಗೆದು ನನ್ನ ಕುಕ್ಕಬೇಡ, ನೀನೂ ಸ್ವಲ್ಪ ಹೊಂದಿಕೊಂಡು ಹೋಗ್ಬೇಕು, ಯಾಕಂದ್ರೆ ಮಂಜಣ್ಣನ ಸುಪರ್ದಿನಲ್ಲಿರೋನು ನಾನು, ಅಂವ ಹೇಳಿದ ಕೆಲ್ಸ ತಲೇಮೇಲೆ ಹೊತ್ತು ಮಾಡ್ಬೇಕಾಗ್ತದೆ, ನೀನು ನನ್ನ ಕೆಲಸಕ್ಕೆ ತಕರಾರು ಮಾಡದಿದ್ರೆ ಆಯ್ತು ಅಷ್ಟೇ’ ಅಂದದ್ದಕ್ಕೆ ‘ಏನು ಅಂಥ ಕೆಲಸ?’ ಅಂತ ಕೇಳಿದ್ದೆ, ‘ಅದೇ ಆಫೀಸ್ನಲ್ಲಿ, ಹೋಗಿ ಬರುವ ಲಾರಿಗಳ ಲೆಕ್ಕ ಇಡೋದು, ಡ್ರೈವರ್ ಕ್ಲೀನರ್ ಗಳ ಪಗಾರ ಮಾಡೋದು, ರಿಪೇರಿಗೆ ಬಂದ ಲಾರಿಗಳ ಗ್ಯಾರೇಜಿಗೆ ಕಳ್ಸೋದು’ ಅಷ್ಟೇ ಅಂದವ ಸ್ವಲ್ಪ ಹೊತ್ತು ಬಿಟ್ಟು‘ಒಂದು ಲಾರಿ ನನ್ನ ಹೆಸರಿಗೇ ಮಾಡ್ಸಿದ್ದಾನೆ ಮಂಜಣ್ಣ’ಅಂದ.

ಮನಸ್ಸಿಗೆ ಸ್ವಲ್ಪ ಸಮಾಧಾನವೆನಿಸಿತ್ತು. ಬಂಗಾರ ಬಣ್ಣದ ಬಿಸಿಲು ಕೋಲುಗಳು ಪೂರ್ವ ದಿಕ್ಕಿನಿಂದ ಮೂಡಲಾರಂಭಿಸಿದವು. ಇಬ್ಬರೂ ಅಲ್ಲಿಂದ ಮೊದಲ ದಿನ ಬಂದದಾರಿಯಲ್ಲೇ ನಡೆಯತೊಡಗಿದೆವು, ಮೈಕೈ ನೋವು ನಿರಂತರವಾಗಿತ್ತು.

ನಡೆಯುತ್ತ ನಡೆಯುತ್ತ ದಾರಿಯಲ್ಲಿ ‘ಇಲ್ಲೇ ಇರು ಸ್ವಲ್ಪ ಬಂದೆ’ ಅನ್ನುತ್ತ ಅಲ್ಲೇ ಕೊಂಚ ಬದಿಗೆ ಹೋಗಿ ಮೂತ್ರ ವಿಸರ್ಜನೆ ಕೆಲಸ ಮುಗಿಸಿ ಬಂದ. ಕ್ಷಣಕ್ಷಣಕ್ಕೂ ಏನು ಸಂಭವಿಸಲಿದೆಯೋ ಗೊತ್ತಾಗದೇ ಭಯ ಮುತ್ತಿಕೊಳ್ಳುತ್ತಿತ್ತು. ಎದುರು ಝರಿಯೊಂದು ಸಣ್ಣಗೆ ಜುಳುಜುಳು ಹರಿಯುತ್ತಿತ್ತು. ಗುಡ್ಡದಿಂದ ನೀರು ಬೀಳುವ ಜಾಗೆಯಲ್ಲಿ ಸಣ್ಣ ಕೊಳದ ಹಾಗೆ ನೀರು ನಿಂತಿತ್ತು.

‘ನೀರಿದೆ ನೋಡಿಲ್ಲಿ, ನೀನೂ ಬೇಕಾದರೆ ಇದಕ್ಕೆ ಇದಕ್ಕೆ ಹೋಗಿ ಬಾ’ ಎನ್ನುತ್ತ ಕೈ ಬೆರಳಲ್ಲೇ ಸನ್ನೆ ಮಾಡಿದ್ದ ವೆಂಕಟ, ಅವನು ಹಾಗೆಂದು ತೋರುವ ಪುರುಸೊತ್ತಿಲ್ಲದೇ ನಾನು ಝರಿಯ ಬಳಿ ಓಡಿ ಒಂದು ಪೊದೆಯ ಮರೆಯಲ್ಲಿ ಕೂತೆ, ಆ ಸಮಯದಲ್ಲೇ ನನಗೆ ಎಂಥದೋ ಅರ್ಥವಾಗದ ತಳಮಳ ಉಂಟಾಯಿತು. ಎಲ್ಲವೂ ಒಂದು ಘಳಿಗೆ ಸುಳ್ಳೆನಿಸಿಬಿಟ್ಟಿತು. ಅದನ್ನೂ ಮೀರಿ ಮೂತ್ರ ಮಾಡುವಾಗ ಕತ್ತರಿಸಿಟ್ಟಂತಹ ಅನುಭವವೊಂದು ಹಸಿಗಾಯದಂತೆ ಉರಿದಿತ್ತು. ಮುಂದೆ ನಡೆಯುತ್ತ ನಡೆಯುತ್ತ ಏನೇನೋ ಹೇಳಿದ. ನನಗೆ ಅದೊಂದೂ ಧ್ಯಾನಕ್ಕೆ ಹೋಗಲಿಲ್ಲ.

‘ಅಂಕೋಲೆ ರಸ್ತೆಯಲ್ಲಿ ನೀಲಂಪುರದ ಮಂಜಣ್ಣನ ಆಫೀಸಲ್ಲೇ ಉಳಕೊಂಡಿದ್ದೇನೆ. ಕಾಮತರ ಹಳೇ ಹೆಂಚಿನ ಮನೆ ಅದು, ಮಂಜಣ್ಣ ಆಫೀಸಿಗೆ ಬಾಡಿಗೆ ಹಿಡಿದಿದ್ದಾನೆ. ಕಾಯ್ಲಿಕ್ಕೆ ಒಬ್ರು ಬೇಕಲ್ಲ, ಹಾಗಾಗಿ ಅಲ್ಲಿದ್ದೇನೆ, ನೀನೂ ಅಲ್ಲೇ ಇರಬಹುದು, ಗ್ಯಾಸು ಮಿಕ್ಸರು ಫ್ರಿಡ್ಜು, ಅಡುಗೆ ಸಾಮಾನು, ಟೀವಿ ಎಲ್ಲಇದೆ’ಅಂದ. ಹ್ಞೂ ಅಂತ ಸುಮ್ಮನಾದೆ.

‘ಅಥ್ವಾ ಮಂಜಣ್ಣನ ಔಟ್ ಹೌಸ್ ಖಾಲಿ ಇದೆ, ಆರ್ ಸಿಸಿ ಬಿಲ್ಡಿಂಗದು, ಸ್ವಚ್ಛ ಚಂದಉಂಟು, ಮದ್ವೆಆದ್ರೆ ಮಾತ್ರ ಕೊಡ್ತೇನೆ, ಒಬ್ಬನೇ ಉಳಿಯೋದಾದ್ರೆ ಕೊಡೂದಿಲ್ಲ ಅಂತಾನೆ ಮಂಜಣ್ಣ’ಅಂದ. ನಾನು ಮಾತೇಆಡಲಿಲ್ಲ.

ಹಾಗೇ ಕಾಲು ಸೋಲುವವರೆಗೆ ನಡೆದು ವಿಶ್ವನಾಥನ ಮನೆ ಸೇರಿಕೊಳ್ಳುವಾಗ, ಬೆಳಗಿನ ಹನ್ನೊಂದರ ಬಿಸಿಲು ಕಾಡನ್ನು ಬೆಚ್ಚಗಾಗಿಸಿತ್ತು. ವಿಶ್ವನಾಥ ಎಲ್ಲ ಗೊತ್ತಿದ್ದವರಂತೆ ಇಬ್ಬರನ್ನೂ ಬರಮಾಡಿಕೊಂಡಿದ್ದ.

******

ಅಷ್ಟೆಲ್ಲ ನಡೆದಿದ್ದರೂ ಇಷ್ಟು ದಿನ ಕಷ್ಟವೋ ಸುಖವೋ ಅವನನ್ನೇ ಮದುವೆಯಾಗೋದು ಅನಿಸುತ್ತಿತ್ತು, ಆದರೆ ಈ ಕ್ಷಣ ಯಾಕೋ ಇನ್ನೊಮ್ಮೆ ನನ್ನೊಳಗನ್ನೇ ನಾನು ಕೆದಕಿಕೊಂಡಾಗ ಏನಿದು ಅರ್ಥವಾಗದ ಮಿಸುಗಾಟ?

ನೆನಪುಗಳಿಗೆಲ್ಲ ಯಾಕೆ ಮುಳ್ಳುಗಳೇ ಏಳುತ್ತಿವೆ? ಅಂದು ನಡೆದದ್ದೆಲ್ಲ ಇಂದೇ ಈ ಕ್ಷಣವೇ ಪುನರಾವರ್ತನೆಗೊಂಡಂತೆ ಯಾಕೆ ಹಿಂಸಿಸುತ್ತಿವೆ? ಬೆಟ್ಟ, ಗಾಡಾಂಧಕರ, ಪ್ರೀತಿಸುವವಳು, ತಂದೆಯನ್ನು ಬಿಟ್ಟು ತನ್ನಜೊತೆ ಬದುಕುವ ಹಂಬಲದಿಂದ ಬಂದವಳು, ಆದರೆ ಅಂಥವಳ ದೇಹವನ್ನು ಅವಳ ಒಪ್ಪಿಗೆಯಿಲ್ಲದೇ ನೋಯಿಸಬಾರದು ಎಂಬ ಸಣ್ಣ ತಿಳಿವಳಿಕೆಯೂ ಬೇಡವೇ? ಅತ್ಯಾಚಾರದ ಬದಲಿಗೆ ಇದಕ್ಕೆ ಬೇರೆ ಯಾವ ಹೆಸರಿದೆ?

ಇಷ್ಟು ದಿನ ಆ ಸಂಗತಿಯ ಕುರಿತು ಮಾತ್ರ ಯೋಚಿಸಲೇ ಭಯವಾಗಿ ನಾನು ಮುದ್ದಾಂ ಅದನ್ನು ಮರೆಯಲು ಯತ್ನಿಸಿ, ಒಳಗೊಳಗೇ ನವೆಯುತ್ತಿದ್ದೆನೇ? ಇಷ್ಟು ದಿನ ಮದುವೆಯೆಂಬ ಒಂದೇ ಧ್ಯಾನದಲ್ಲಿ ಹುದುಗಿ ಹೋಗಿದ್ದೆನೇ? ಸದ್ದಿಲ್ಲದೇ ಕಣ್ಣೀರು ಯಾಕೆ ಹೀಗೆ ಧಾರಾಕಾರ ಸುರಿದುಹೋಗುತ್ತಿದೆ?

ಮನಸ್ಸುಕಲ್ಲಾಯಿತು. ಕಟ್ಟಕಡೆಯಲ್ಲಿ ನನಗೆ ವೆಂಕಟ ಬೇಡ ಎಂಬ ಒಂದೇ ನಿರ್ಧಾರ ನಂದಿನಿಯ ಮನಸ್ಸಿನಲ್ಲಿ ಗಟ್ಟಿಗೊಳ್ಳತೊಡಗಿತು. ಮದುವೆಯೊಂದೇ ಪರಮಗುರಿ ಅಲ್ಲ, ಅಂತೆಲ್ಲ ಅನಿಸುತ್ತಿದ್ದಂತೆ ನಂದಿನಿಯ ಮನಸ್ಸು ಇದ್ದಕ್ಕಿದ್ದಂತೆ ತಿಳಿಯಾಗಿತ್ತು. ಕಣ್ಣೊರೆಸಿಕೊಂಡು ಹಿತ್ತಿಲಿನ ಕಿಟಕಿಯಿಂದ ಈಚೆ ತಿರುಗಿದಳು. ನಿಧಾನ ಎಲ್ಲ ಬದಲಾದಂತೆನಿಸಿತು. ಈ ಕ್ಷಣದಿಂದ ಜಗತ್ತೆಲ್ಲ ಸುಂದರವಾಗಿ ಕಾಣತೊಡಗಿತು.

 

(ಪುಸ್ತಕ: ಹೈವೇ63 (ಕಾದಂಬರಿ), ಪ್ರಕಾಶಕರು: ಆಕೃತಿ ಪ್ರಕಾಶನ, ಪುಟಗಳು: 200)