ಒಂದು ರೀತಿಯಲ್ಲಿ ನೋಡುವುದಾದರೆ, ಈ ಶಿಕ್ಷಣ ಸಾಲವನ್ನು ನೇರವಾಗಿ ವಿದ್ಯಾರ್ಥಿಯೇ ಮುಂದೆ ಉದ್ಯೋಗಸ್ಥನಾದ ಮೇಲೆ ಕಟ್ಟುವುದರಿಂದ ಪೋಷಕರಿಗೆ ಅವನ ಶಿಕ್ಷಣದ ಶುಲ್ಕದ ಹೊರೆ ತಗುಲುವುದಿಲ್ಲ. ಇನ್ನೊಂದು ರೀತಿಯಲ್ಲಿ ನೋಡಿದರೆ, ಅಯ್ಯೋ ಪಾಪ ಕೇವಲ 18 ವರ್ಷ ವಯಸ್ಸಿನಿಂದಲೇ ಈ ಕಿರಿಯರು ಸಾಲಕ್ಕೆ ಸಿಲುಕುತ್ತಾರಲ್ಲಾ ಎಂದು ಬೇಸರವಾಗುತ್ತದೆ. ಹಾಗೆ ವ್ಯಥೆ ಪಡದೆ ಪೋಷಕರೇ ತಮ್ಮ ವಿದ್ಯಾರ್ಥಿಗಳ ಶಿಕ್ಷಣಶುಲ್ಕವನ್ನು ಕಟ್ಟಬಹುದು, ಆದರೆ ಸರಾಸರಿ ತಿಂಗಳ ಸಂಬಳಕ್ಕೆ ಹೋಲಿಸಿದರೆ ಶಿಕ್ಷಣದ ಫೀಸ್ ಬಲು ದುಬಾರಿ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

ಶಿಕ್ಷಣ ಸಾಲದ ಮರುಪಾವತಿ ದರವು ಹೆಚ್ಚಿದೆ. ವಿದ್ಯಾರ್ಥಿಗಳ ಹಣೆಯ ಮೇಲೆ ಗೆರೆಗಳು ಮೂಡುತ್ತಿವೆ. ಶಿಕ್ಷಣವು ಬಲು ದೊಡ್ಡ ವ್ಯಾಪಾರ, ಅದರಲ್ಲಿ ಯಾವ ವೇದಾಂತವೂ ಇಲ್ಲ, ಎನ್ನುವ ಮಾತು ಎಲ್ಲಾ ಕಾಲಕ್ಕೂ ಸಲ್ಲುತ್ತಿದೆ.

ಆಸ್ಟ್ರೇಲಿಯಾದಲ್ಲಿ ಸದ್ಯಕ್ಕೆ ಶೇಕಡಾ 7 ರಷ್ಟು ಹಣದುಬ್ಬರವಿದೆ ಎನ್ನುವ ವಿಷಯ ಸದಾ ಚರ್ಚೆಯಾಗುತ್ತಿದೆ. ರಾಷ್ಟ್ರೀಯ ಗ್ರಾಹಕ ಬೆಲೆ ಸೂಚಕವು ತೋರಿಸಿರುವಂತೆ 2022 ರಲ್ಲಿ ಶೇಕಡಾ 7.8 ಇದ್ದ ಸ್ಥಿತಿಯಿಂದ 2023 ರ ಮಾರ್ಚ್ ತಿಂಗಳಿನಲ್ಲಿ ಅದು ಇಳಿದಿದೆ. ಹಣದುಬ್ಬರವೆಂದರೆ ನಿತ್ಯಜೀವನಕ್ಕೆ ಕೊಡಲಿಪೆಟ್ಟು. ಎಲ್ಲದರ ಬೆಲೆಗಳೂ ಏರುತ್ತವೆ, ಆದರೆ ತಿಂಗಳ ವರಮಾನವು ಮಾತ್ರ ಹಾಗೇಯೇ ಇರುತ್ತದೆ!

ಏರುತ್ತಿರುವ ಬೆಲೆಗಳ ಬಗ್ಗೆ, ಮುಖ್ಯವಾಗಿ ಮನೆಸಾಲಕ್ಕೆ ಕಟ್ಟುವ ಬಡ್ಡಿದರ ಏರಿದಂತೆಲ್ಲಾ, ಗೊಣಗಾಡಿ ಪೇಚಾಡುವುದು ಇದ್ದೇಯಿದೆ. ನನ್ನ ಪೇಚಾಟಕ್ಕೆ ಏನೇನೂ ಸಂಬಂಧವಿಲ್ಲದೆ, ಇದ್ದಕ್ಕಿದ್ದಂತೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾದ ಮಗರಾಯ ಹಣದುಬ್ಬರವು ಅವನ ನಿದ್ದೆ ಕೆಡಿಸಿದೆ ಎಂದು ಸಂಕಟ ತೋಡಿಕೊಂಡಾಗ ವಿದ್ಯಾರ್ಥಿಗಳ ಭವಿಷ್ಯದ ಕಥೆಗಳು ಒಂದಷ್ಟು ಬಿಚ್ಚಿಕೊಂಡವು. ಮಗನ ಪೇಚಾಟಕ್ಕೆ ಇಂಬು ಕೊಡುವಂತೆ ಯೂನಿವರ್ಸಿಟಿಯಲ್ಲಿ ನನ್ನ ತರಗತಿಯಲ್ಲೂ ಕೂಡ ಅದರದ್ದೇ ಪ್ರತಿಧ್ವನಿ.

ವಿಷಯ ಏನೆಂದರೆ, ಆಸ್ಟ್ರೇಲಿಯಾದ ಕೇಂದ್ರ ಸರಕಾರದ ಒಪ್ಪಂದವಿರುವಂತೆ, ಆಸ್ಟ್ರೇಲಿಯನ್ ಪ್ರಜೆಯಾಗಿದ್ದರೆ, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಓದಿಗೆ ಸಾಲದ ವ್ಯವಸ್ಥೆಯಿದೆ. ಅದರಂತೆ ಈ ವಿದ್ಯಾರ್ಥಿಗಳು ಕಾಮನ್ವೆಲ್ತ್-ಆಧರಿತ ಗುಂಪಿಗೆ ಸೇರುತ್ತಾರೋ ಇಲ್ಲವೋ ಎಂದು ನಿರ್ಧರಿತವಾದರೆ, ಅರ್ಹತೆಯಿರುವ ಪ್ರತಿಯೊಂದು ವಿದ್ಯಾರ್ಥಿಯೂ ತಾನು ಯಾವುದೇ ಡಿಗ್ರಿ ಪದವಿಗಾಗಿ ಓದುವಾಗ ಓದಿನ ಟ್ಯೂಷನ್ ಫೀಸ್ ತಕ್ಷಣಕ್ಕೆ ಕಟ್ಟಬೇಕಿಲ್ಲ. ಅವರಿಗೆ ಶಿಕ್ಷಣ ಸಾಲ ಸಿಗುತ್ತದೆ. ಇದನ್ನು ಶಿಕ್ಷಣ ಸಹಾಯ (Higher Education Loan Program ಅಥವಾ HELP) ಎಂದು ಕರೆದರೂ ಅದು ಸಾಲವೇ ಹೌದು. ಇದನ್ನು HECS ಎಂದೂ ಗುರುತಿಸುತ್ತಾರೆ. ವಿಶ್ವವಿದ್ಯಾನಿಲಯದ ಡಿಗ್ರಿ ಶಿಕ್ಷಣಕ್ಕೆಂದು ಸೇರಿಕೊಂಡಾಗ ಆ ವಿದ್ಯಾರ್ಥಿಯು ತಾನು ತುಂಬುವ ಫಾರಮ್ಮುಗಳಲ್ಲಿ ತನ್ನ ಓದಿಗೆ ಸರಕಾರದಿಂದ ಶಿಕ್ಷಣ ಸಾಲ ಬೇಕಿದೆ, ತಾನು ಆಸ್ಟ್ರೇಲಿಯನ್ ಪ್ರಜೆ ಮತ್ತು ಸಾಲಕ್ಕೆ ಅರ್ಹನು/ಳು ಎಂದು ಹೇಳಿ, ಬೇಕಾದ ಕಾಗದಪತ್ರಗಳನ್ನು ಕೊಡಬೇಕು. ತನ್ನ ಕೋರ್ಸ್ ಫೀಸನ್ನು ತನ್ನ ಶಿಕ್ಷಣ ಸಾಲದ ಖಾತೆಯಲ್ಲಿ ಜಮಾ ಮಾಡಿ, ಆ ನಂತರ, ಸರಕಾರವು ಶೈಕ್ಷಣಿಕ ವರ್ಷದ ಪ್ರತಿ ಸೆಮಿಸ್ಟರ್‌ನಲ್ಲಿಯೂ ಆ ವಿದ್ಯಾರ್ಥಿಯು ಓದುವ ವಿಷಯಗಳಿಗೆ ಇಂತಿಷ್ಟು ಎಂದು ನಿಗದಿಪಡಿಸಿರುವ ಕಾಮನ್ವೆಲ್ತ್-ಆಧರಿತ ಟ್ಯೂಷನ್ ಫೀಸನ್ನು ನೇರವಾಗಿ ವಿಶ್ವವಿದ್ಯಾನಿಲಯಕ್ಕೆ ಕೊಡುತ್ತದೆ. ಈ ಲೆಕ್ಕಾಚಾರವೆಲ್ಲ ವಿದ್ಯಾರ್ಥಿಯ ಸಾಲದ ಖಾತೆಯಲ್ಲಿ ನಮೂದಾಗುತ್ತದೆ. ಡಿಗ್ರಿ ಓದು ಮುಗಿದ ಮೇಲೆ ಉದ್ಯೋಗಕ್ಕೆ ಸೇರಿಕೊಂಡು, ವಾರ್ಷಿಕ ಸಂಬಳವು 48,000 ಡಾಲರ್ ದಾಟಿದರೆ ಆಗ ತನ್ನ ಶಿಕ್ಷಣದ ಸಾಲವನ್ನು ಕಂತುಗಳಲ್ಲಿ ಸರಕಾರಕ್ಕೆ ಪಾವತಿಸಬೇಕು. ಹೇಗೆಂದರೆ, ನೇರವಾಗಿ ಕೇಂದ್ರ ತೆರಿಗೆ ವಿಭಾಗವು ಉದ್ಯೋಗಸ್ಥನ ಸಂಬಳದಲ್ಲಿಯೇ ಅದನ್ನು ಮುರಿದುಕೊಳ್ಳುತ್ತದೆ. ಹೀಗೆ ಶಿಕ್ಷಣ ಸಾಲದ ಮರುಪಾವತಿ ಕ್ರಮ ಆರಂಭವಾಗುವುದು ಅವರ ವಾರ್ಷಿಕ ಸಂಬಳವು 48,000 ಡಾಲರ್ ದಾಟಿದಾಗ.

ಒಂದು ರೀತಿಯಲ್ಲಿ ನೋಡುವುದಾದರೆ, ಈ ಶಿಕ್ಷಣ ಸಾಲವನ್ನು ನೇರವಾಗಿ ವಿದ್ಯಾರ್ಥಿಯೇ ಮುಂದೆ ಉದ್ಯೋಗಸ್ಥನಾದ ಮೇಲೆ ಕಟ್ಟುವುದರಿಂದ ಪೋಷಕರಿಗೆ ಅವನ ಶಿಕ್ಷಣದ ಶುಲ್ಕದ ಹೊರೆ ತಗುಲುವುದಿಲ್ಲ. ಇನ್ನೊಂದು ರೀತಿಯಲ್ಲಿ ನೋಡಿದರೆ, ಅಯ್ಯೋ ಪಾಪ ಕೇವಲ 18 ವರ್ಷ ವಯಸ್ಸಿನಿಂದಲೇ ಈ ಕಿರಿಯರು ಸಾಲಕ್ಕೆ ಸಿಲುಕುತ್ತಾರಲ್ಲಾ ಎಂದು ಬೇಸರವಾಗುತ್ತದೆ. ಹಾಗೆ ವ್ಯಥೆ ಪಡದೆ ಪೋಷಕರೇ ತಮ್ಮ ವಿದ್ಯಾರ್ಥಿಗಳ ಶಿಕ್ಷಣಶುಲ್ಕವನ್ನು ಕಟ್ಟಬಹುದು, ಆದರೆ ಸರಾಸರಿ ತಿಂಗಳ ಸಂಬಳಕ್ಕೆ ಹೋಲಿಸಿದರೆ ಶಿಕ್ಷಣದ ಫೀಸ್ ಬಲು ದುಬಾರಿ.

ಹೀಗೊಂದು ಉದಾಹರಣೆಯನ್ನು ನೋಡೋಣ. ಅತೀ ಸಾಮಾನ್ಯವೆನಿಸಿಕೊಂಡ ನಾಲ್ಕು ವರ್ಷಗಳ ಬಿ.ಎಡ್. ಡಿಗ್ರಿ ಮಾಡಲು ಹೊರಟರೆ ಒಬ್ಬ ಪೂರ್ಣಾವಧಿ ಓದಿಗೆ ದಾಖಲಾದ ವಿದ್ಯಾರ್ಥಿನಿಯೊಬ್ಬಳು ಪ್ರತಿ ಸೆಮಿಸ್ಟರಿನಲ್ಲೂ ಕನಿಷ್ಠ ಮತ್ತು ಕಡ್ಡಾಯವಾಗಿ ನಾಲ್ಕು ವಿಷಯಗಳನ್ನು ತೆಗೆದುಕೊಳ್ಳಬೇಕು. ಪ್ರತಿಯೊಂದು ವಿಷಯಕ್ಕೆ ತಗಲುವ ಶಿಕ್ಷಣ ಶುಲ್ಕ ಸುಮಾರು ಒಂದು ಸಾವಿರ ಡಾಲರ್ ಎಂದಾದರೆ ವರ್ಷಕ್ಕೆ ಇರುವ ಎರಡು ಸೆಮಿಸ್ಟರ್ ಓದಿಗೆ ತಗುಲುವ ಶುಲ್ಕ ಎಂಟು ಸಾವಿರ ಡಾಲರ್. ಆಗ, ನಾಲ್ಕು ವರ್ಷಗಳ ಡಿಗ್ರಿ ಓದಿಗೆ 32 ಸಾವಿರ ಡಾಲರ್! ಡಿಗ್ರಿಯಾದ ನಂತರ ಶಿಕ್ಷಕಿಯಾಗಿ ಕೆಲಸ ಸಿಕ್ಕರೆ ಆರಂಭದ ವಾರ್ಷಿಕ ಸಂಬಳ ಸುಮಾರು 70 – 75 ಸಾವಿರ ಡಾಲರ್ (ತೆರಿಗೆಗೆ ಮುನ್ನ). ಇದು ಸರ್ಕಾರವು ನಿಗದಿಪಡಿಸಿದ 48,000 ಕ್ಕೂ ಹೆಚ್ಚಿರುವುದರಿಂದ ಆ ಹೊಸ ಶಿಕ್ಷಕಿ ತನ್ನ ಶಿಕ್ಷಣ ಸಾಲವನ್ನು ಕಂತುಗಳಲ್ಲಿ ಪಾವತಿ ಮಾಡಬೇಕಾಗುತ್ತದೆ. ತನ್ನ ಸಂಬಳವನ್ನು ಆಧರಿಸಿ ಅವಳು ಅದರ ಶೇಕಡಾ 4 ರಷ್ಟು ಭಾಗವನ್ನು ಪಾವತಿಸಬೇಕು. ಸಂಬಳ ಹೆಚ್ಚಿದಂತೆ ಅದಕ್ಕೆ ಅನುಗುಣವಾಗಿ ಈ ಸಾಲ ಮರುಪಾವತಿ ಶೇಕಡಾ ದರವೂ ಹೆಚ್ಚುತ್ತದೆ. ಆಗ ಸಂಕಟವೂ ತಾನೇತಾನಾಗಿ ಶುರುವಾಗುತ್ತಾ ಹೋಗುತ್ತದೆ!

ಅಂತಹ ಸಂಕಟವನ್ನು ಕುರಿತೇ ನನ್ನ ಮಗರಾಯ ನಮ್ಮಲ್ಲಿ ತೋಡಿಕೊಂಡಿದ್ದು. 2023 ಮೇ ತಿಂಗಳಲ್ಲಿ ಹಣದುಬ್ಬರವನ್ನು ಆಧರಿಸಿ ಕೇಂದ್ರ ಸರ್ಕಾರವು ಶಿಕ್ಷಣ ಸಾಲಕ್ಕೆ ಹೊಸ ಮರುಪಾವತಿ ದರವನ್ನು ವಿಧಿಸಿದೆ. ಅವನು ಮತ್ತವನ ಸ್ನೇಹಿತರು ತಮ್ಮಗಳ ಸಾಲವನ್ನು ಅದರ ಮೇಲೆ ಇರಬಹುದಾದ ಬಡ್ಡಿದರವನ್ನೂ ಲೆಕ್ಕಹಾಕುತ್ತಾ ಒಟ್ಟು ಸಾಲ ಪಾವತಿಯ ಮೊತ್ತ ನೂರು ಸಾವಿರ (100,000) ಡಾಲರುಗಳಿಗೂ ಹೆಚ್ಚಾಗುತ್ತದೆ ಎಂದು ಅಂದಾಜಿಸಿ ಕಡು ಕಂಗಾಲಾಗಿದ್ದರು. ಮೇ ತಿಂಗಳಲ್ಲಿ ಘೋಷಿಸಿದ ದರವು ಮೂರು ಮಿಲಿಯನ್ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತದೆ ಎಂದು ಕೇಳಿ, ನಂತರ ಯೂನಿವರ್ಸಿಟಿ ಕ್ಯಾಂಪಸ್ಸಿಗೆ ಕಾಲಿಟ್ಟರೆ ಎಲ್ಲೆಲ್ಲೂ ಆತಂಕದ ಮುಖಗಳೇ, ಪಾಪ.

ವರ್ಷದಿಂದ ವರ್ಷಕ್ಕೆ ಶಿಕ್ಷಣ ಶುಲ್ಕವು ಹೆಚ್ಚುತ್ತಿದೆ ಎನ್ನುವುದು ಆತಂಕದ ವಿಷಯ. ಇದಲ್ಲದೇ, ಕ್ಯಾಪಿಟಲಿಸ್ಟ್ ವ್ಯವಸ್ಥೆಯಲ್ಲಿ, ನವಉದಾರ ನೀತಿಗೆ ಪುಷ್ಟಿಕೊಟ್ಟು ಶಿಕ್ಷಣವನ್ನು ತೂಗಿ ನೋಡಲಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನಾಧರಿಸಿ ಮತ್ತು ದೇಶೀಯ ಅಗತ್ಯಗಳಿಗೆ ತಕ್ಕಂತೆ ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆಗಳಾಗುತ್ತವೆ. ಆಸ್ಟ್ರೇಲಿಯಾದಲ್ಲಿ ಆರೋಗ್ಯ ಕ್ಷೇತ್ರದ ವಿಷಯಗಳಿಗೆ ಬಹಳ ಮಹತ್ವ ಕೊಟ್ಟು ಬಂಡವಾಳ ಹೂಡುವುದರಿಂದ ಈ ಕ್ಷೇತ್ರದಲ್ಲಿ ಸೇರಿಕೊಳ್ಳಲು ಶಿಕ್ಷಣದ ವಿಷಯಗಳ ವಿಭಾಗಗಳಲ್ಲಿ ಪೈಪೋಟಿಯುಂಟಾಗುತ್ತದೆ. ಅವುಗಳಿಗೆ ಅನುಮೋದನೆ ನೀಡುವಂತೆ ಒತ್ತಡವುಂಟಾಗುತ್ತದೆ. ಇದ್ದಕ್ಕಿದ್ದಂತೆ, ವಿಶ್ವವಿದ್ಯಾನಿಲಯಗಳಲ್ಲಿ ಲಭ್ಯವಿರುವ ಕೆಲವು ಡಿಗ್ರಿಗಳಿಗೆ ಮಹತ್ವ ಬಂದುಬಿಡುತ್ತದೆ. ಇನ್ನೂ ಕೆಲವು ಮೂಲೆಗುಂಪಾಗುತ್ತವೆ. ಇವನ್ನೆಲ್ಲಾ ನೋಡಿಕೊಂಡು ಅನೇಕ ವಿದ್ಯಾರ್ಥಿಗಳು ತಮ್ಮ ಯೂನಿವರ್ಸಿಟಿ ಶಿಕ್ಷಣವನ್ನು ಆರಂಭಿಸುತ್ತಾರೆ.

ವಿಶ್ವವಿದ್ಯಾನಿಲಯಗಳಲ್ಲಿ ಓದುವುದೆಂದರೆ ಅದೊಂದು ದೊಡ್ಡ ಮತ್ತು ವಿಶೇಷ ಅನುಭವದ ವಿಷಯವಾಗಿತ್ತು. ಹಾಗೆಂದು ನಾನು ವಿದ್ಯಾರ್ಥಿಗಳಿಗೆ ಹೇಳಿದರೆ ಅವರು ನಗುತ್ತಾರೆ. ಈಗಿರುವ ಕಾಲ ಏನೆಂದರೆ ‘ಓದಿ ಡಿಗ್ರಿ ಪಡೆದು ಸಾಲ ತೀರಿಸು’ ಎನ್ನುವುದು, ಎಂದವರು ನಗಾಡುತ್ತಾರೆ.