ಕಾರ್ಪೊರೇಟ್ ಜಗತ್ತಿನಲ್ಲಿ ನಡೆಯುವ ರಾಜಕೀಯಗಳಿಂದ ರೋಸಿ ಹೋಗಿ ಕೆಲಸ ಬಿಟ್ಟು ಬಂದು ಹಳ್ಳಿಯಲ್ಲಿ ನೆಮ್ಮದಿ ಕಾಣಬೇಕು ಅಂದರೆ ಇಲ್ಲಿ ಇನ್ನೂ ಹದಗೆಟ್ಟ ಪರಿಸ್ಥಿತಿ ಇದೆ ಅನಿಸಿತು. ಸುಳ್ಳುಗಳು, ಜಾತಿ, ಕಳುವು ಇನ್ನೂ ಏನೇನು ನೋಡೋದು ಇದೆಯೋ ಇಲ್ಲಿ ಅನಿಸಿತು. ಅತ್ತೆ ಮಾವ ನಮ್ಮ ಸಂಬಂಧಿಯೇ ಆಗಿದ್ದರೂ ಅವರು ನಮ್ಮ ಪರವಾಗಿ ನಿಲ್ಲಲಾರರು ಎಂಬ ಕಟು ಸತ್ಯದ ಅರಿವು ಆಗಿತ್ತು. ಎಷ್ಟೇ ಅಂದರೂ ಅಲ್ಲಿನ ಜನರ ಜೊತೆಗೆ ಬದುಕುವ ಅವರು, ಎಲ್ಲಿಂದಲೋ ಬಂದ ಯಾವಾಗಲೋ ಒಮ್ಮೆ ಬಂದು ಹೋಗುವ ನನ್ನ ಪರವಾಗಿ ಹೇಗೆ ತಾನೇ ನಿಂತಾರು? ಆದರೂ ಬೇರೆಯವರ ಹೊಲದಲ್ಲಿ ಕಳ್ಳತನ ಮಾಡಬಾರದು ಅಂತಲೂ ಅವನಿಗೆ ಬುದ್ಧಿ ಹೇಳಬಹುದಿತ್ತಲ್ಲ!?
ಗುರುಪ್ರಸಾದ್‌ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣದ 18ನೇ ಕಂತು

ನನ್ನ ಹೊಲದಲ್ಲಿ ಹುಲ್ಲಿನ ದೊಡ್ಡ ಹೊರೆಯನ್ನು ಹೊತ್ತಿದ್ದ ಆಸಾಮಿ ತನ್ನ ಮುಖವನ್ನು ಬೇಕಂತಲೇ ಮರೆಮಾಚಿದ್ದನಾ ಅಥವಾ ಗೋಣಿನ ಮೇಲಿದ್ದ ಪೆಂಡಿಯ ಭಾರಕ್ಕೆ ಅವನ ತಲೆ ಕೆಳಗಾಗಿತ್ತಾ, ಒಟ್ಟಿನಲ್ಲಿ ಅವನ್ಯಾರು ಅಂತ ನೋಡಿದ ಕೂಡಲೇ ನನಗೆ ಗುರುತು ಸಿಗಲಿಲ್ಲ. ಹಳ್ಳಿಯಲ್ಲಿ ನನಗೆ ಗೊತ್ತಿದ್ದವರೇ ಕೆಲವು ಜನ.

ನಾನು ಏರಿದ ದನಿಯಲ್ಲಿ “ಯಾರಪಾ ನೀನು, ಇಲ್ಯಾಕೆ ಬಂದಿದಿ” ಅಂದೆ.

ಸಾಮಾನ್ಯವಾಗಿ ಯಾರೇ ಇದ್ದರೂ ಬಹುವಚನದಲ್ಲಿ ಮಾತಾಡುವ ನಾನು ಅವನಿಗೆ ಆ ರೀತಿ ಸಂಭೋದಿಸಿದ್ದೆ. ನಾನಿಲ್ಲದಾಗ ನನ್ನ ಹೊಲದಲ್ಲಿ ಬಂದು ಹುಲ್ಲು ಕತ್ತರಿಸಿಕೊಂಡು ಹೋಗುವ ಕಳ್ಳನಿಗೆ ಮರ್ಯಾದೆ ಕೊಡುವ ಪ್ರಶ್ನೆ ಎಲ್ಲಿಂದ ಬಂತು!?

ಅವನೇನೂ ಹೇಳಲಿಲ್ಲ. “ಹೇಳದ ಕೇಳದ ಹೊಲದಾಗ ನಾವಿಲ್ಲದಾಗ ಬಂದು ಹುಲ್ಲು ಕೊಯ್ಕೊಂಡ್ ಹೋಗ್ತಿರಲ್ಲ.. ಗೊತ್ತಾಗಂಗಿಲ್ಲ?”

ಅವನು ತುಟಿ ಪಿಟಕ್ ಅನ್ನದೆ ಸುಮ್ಮನೆ ನಿಂತಿದ್ದ. ಎಡಗೈಯಲ್ಲಿ ನನ್ನ ಮೊಬೈಲ್‌ನ camera ಇದೆಲ್ಲವನ್ನೂ ರೆಕಾರ್ಡ್ ಮಾಡುತ್ತಿತ್ತು.

“ನನ್ನ ಹೊಲದಾಗಿನ ಒಂದು ಹುಲ್ಲು ಕಡ್ಡಿನೂ ಹೊರಗ ಹೋಗಂಗಿಲ್ಲ. ಇದೊಂದು ಸಲ ಬಿಡ್ತೀನಿ. ಇನ್ನೊಂದ್ ಸಲಾ ಏನರೆ ಮಾಡಿದರ ಏನ್ ಮಾಡಬೇಕೋ ಅದನ್ನ ಮಾಡತೀನಿ..” ಅಂತ ಸ್ವಲ್ಪ ಕೂಗಾಡಿಯೆ ಹೇಳಿದೆ.

“ಹೋದ ಸಲ ಭತ್ತ ಕೊಯ್ದಿದ್ದೂ ನೀನ ಹೌದಲ್ಲ..” ಅಂದೆ..

“ಇಲ್ಲರಿ ಪಾ ಅದು ನನಗ ಗೊತ್ತಿಲ್ಲ…” ಅಂದ.

“ಎಲ್ಲಾ ಹಿಂಗ ಹೇಳ್ತೀರಿ ಬಿಡು.. ಇನ್ನೊಂದು ಸಲ ನನ್ನ ಹೊಲದಾಗ ಕಾಲು ಇಡಬೇಡ…” ಅಂದೆ.

“ನಮ್ಮ ಹೊಲ ಇಲ್ಲೇ ಐತಿರಿ. ನಿಮ್ಮ ಹೆಗಡೇರ ಮನಿ ಮುಂದನ ನಮ್ಮ ಮನಿ ಐತಿ” ಅಂದ. ನನ್ನಿಂದ ತಪ್ಪಿಸಿಕೊಳ್ಳಲು ಅವನು ಸುಳ್ಳು ಹೇಳುತ್ತಿದ್ದಾನೆ ಅಂತ ಆ ಕ್ಷಣಕ್ಕೆ ಅನಿಸಿತು.

“ಏನು ನಿನ್ನ ಹೆಸರು…?” ಅಂದೆ..

“ಸಂಗಪ್ಪ ಅಂತ ರಿ…” ಅಂದ. ಹೆಸರನ್ನು ಎಲ್ಲೋ ಕೇಳಿದಂತೆ ಅನಿಸಿತು.

“ಆತು ಹೋಗು…” ಅಂತ ಕಳಿಸಿದೆ.

ಅವನು ನಮ್ಮ ಹೊಲ ದಾಟಿ ಹುಲ್ಲಿನ ಹೊರೆಯನ್ನು ಹೊತ್ತುಕೊಂಡೇ ಆಚೆಗೆ ಹೋದ. ನನ್ನ ಹೃದಯ ಉದ್ವೇಗದಿಂದ ಇನ್ನೂ ಹೊಡೆದುಕೊಳ್ಳುತ್ತಿತ್ತು. ಜೊತೆಗೆ ಕಳ್ಳನನ್ನು ಹಿಡಿದ ಖುಷಿಯೂ ಇತ್ತು. ಸಂಗಪ್ಪನ ಮನೆ ಮಾವನ ಮನೆಯ ಮುಂದೆಯೇ ಇದೆಯೇ.. ಹೋಗುವಾಗ ವಿಚಾರಿಸಬೇಕು ಅಂದುಕೊಂಡೆ.

ಶಿಷ್ಯ ನಾಗಣ್ಣರಿಗೆ ಫೋನ್ ಮಾಡಿ, ಕಳ್ಳ ಸಿಕ್ಕಿಬಿದ್ದ ವಿಷಯ ತಿಳಿಸಿದೆ. ನೀವು ಇದ್ದಿದ್ದರೆ ಇನ್ನೂ ಚೆನ್ನಾಗಿ ವೀಡಿಯೊ ಮಾಡಬಹುದಿತ್ತು ನೋಡ್ರಿ. ಅಂತ ತಮಾಷೆ ಮಾಡಿದೆ.

“ಏನ್ ಜನಾ ಸರ್.. ನಾವು ಕಷ್ಟ ಪಟ್ಟು ಬೆಳೆಸಿದ್ದನ್ನ ಕೊಯ್ಯೋಕೆ ಹೇಗೆ ತಾನೇ ಮನಸ್ಸು ಬರುತ್ತೆ ಇವರಿಗೆ” ಅಂತ ಅವರೂ ವ್ಯಥೆ ಪಟ್ಟರು. ಅವರು ಬೆಳೆದ ಪ್ರತಿಯೊಂದು ಕಾಳನ್ನೂ ತಮ್ಮ ಮಕ್ಕಳು ಅಂತ ಕರೆಯೋರು. ಸಹಜವಾಗಿ ಅವರಿಗೂ ಅವನ ಮೇಲೆ ಕೋಪ ಬಂದಿತ್ತು. ನಾವು ಯಾವುದೇ ಕೀಟ ನಾಶಕ, ಕಳೆನಾಶಕ ಹೊಡೆಯುವುದಿಲ್ಲ ಎಂಬ ಸಂಗತಿ ಅಲ್ಲಿನವರಿಗೆ ಗೊತ್ತಿತ್ತು. ಹೀಗಾಗಿ ನಮ್ಮ ಹುಲ್ಲನ್ನು ಕೊಯ್ಯಲು ಅಲ್ಲಿನ ಕಳ್ಳರಿಗೆ ಅತೀವ ಉತ್ಸಾಹ. ಬೇಕಾದರೆ ಗಡಿಯಲ್ಲಿ ಬೆಳೆದಿರುವ ಹುಲ್ಲು ತೆಗೆದುಕೊಳ್ಳಲಿ. ಆದರೆ ಒಂದು ಮಾತು ಕೇಳಬೇಕು ಅಲ್ಲವೇ? ಆದರೆ ನಾವು ಕಾಯಂ ಆಗಿ ಅಲ್ಲಿ ಇರಲಾರೆವು ಎಂದು ಗೊತ್ತಿದ್ದ ಅವರುಗಳು ತಾವು ಆಡಿದ್ದೆ ಆಟ ಎಂಬಂತೆ ವರ್ತಿಸುತ್ತಿದ್ದರು. ಅಂತೂ ಒಬ್ಬ ಕಳ್ಳ ಸಿಕ್ಕಿದ್ದ. ಇನ್ನಾದರೂ ಇವರ ಹಾವಳಿ ಕಡಿಮೆ ಆದೀತು ಅಂತ ಭಾವಿಸಿದೆ. ಅಲ್ಲೊಂದು ಗಂಟೆ ಒಂದಿಷ್ಟು ಕೆಲಸ ಮಾಡಿ, ಮಾವನ ಮನೆಗೆ ಹೋದೆ. ಅವರ ಮನೆಯ ಎದುರಿಗಿನ ಸಾಲಿನ ಒಂದು ಮನೆಯ ಮುಂದೆ ಸಂಗಪ್ಪ ತನ್ನ ಸಂಗಡಿಗರ ಜೊತೆಗೆ ಕೂತಿದ್ದು ಕಂಡಿತು. ಅವನು ಮಾವನ ಮನೆಯ ಮುಂದೆಯೇ ಇರುವುದು ನಿಜ ಅಂತ ಗೊತ್ತಾಯ್ತು.

ಅತ್ತೆ ಎಂದಿನಂತೆ ಮನೆಯ ಒಳಗೆ ಇರದೆ ಅವತ್ಯಾಕೊ ಹೊರಗಡೆಯೇ ನಿಂತಿದ್ದರು. ಸ್ವಲ್ಪ ಆತಂಕದಲ್ಲಿ ಇದ್ದಂತೆ ಕಂಡರು. ಮಾಮೂಲಿಯಾಗಿ “ಆರಾಮಾ…” ಅಂತ ನನ್ನ ಕ್ಷೇಮವನ್ನು ವಿಚಾರಿಸಿದರು.

“ಅತ್ತೆ… ಭತ್ತದ ಹುಲ್ಲಿನ ಕಳ್ಳ ಸಿಕ್ಕ ಇವತ್ತು. ಸರಿಯಾಗಿ ಕೈ ತೊಗೊಂಡೆ ನೋಡ್ರಿ. ಇನ್ನು ಬರಂಗಿಲ್ಲ ಅಂವ.” ಅಂತ ನಾನು ನನ್ನ ಪ್ರತಾಪವನ್ನು ಕೊಚ್ಚಿಕೊಂಡೆ.

“ಸಂಗಪ್ಪ, ನಮ್ಮನಿಗೆ ಬಂದಿದ್ದ ತಮ್ಮಾs.. ನನಗೆಲ್ಲಾ ವಿಷಯ ಹೇಳ್ದಾ…” ಆಂತ ಸಣ್ಣ ಪಿಸುಗುಡುವ ದನಿಯಲ್ಲಿ ಹೇಳಿದರು. ಬಪ್ಪರೆ ಮಗನೇ… ನನಗಿಂತ ಮೊದಲೇ ಬಂದು ಇಲ್ಲೇನೋ ಪಿತೂರಿ ಮಾಡಿದ್ದಾನೆ ಅಂತ ತಕ್ಷಣಕ್ಕೆ ಅನಿಸಿತು.

“ಏನಂದಾ ಅತ್ತೆ?”

“ಮಾವನ ಎದುರು ಹೇಳ್ತಾ ಇದ್ದ. ನೀನು ಅವಂಗೆ ಸಿಕ್ಕಾಪಟ್ಟೆ ಬೈದ್ಯಡಾ.. ಇನ್ನೊಮ್ಮೆ ಹೊಲಕ್ಕೆ ಕಾಲಿಟ್ಟರೆ ಅವ್ನ ಕಾಲನ್ನೇ ಮುರೀತಿ ಅಂತ ನೀ ಹೇಳಿದ್ಯಡಾ..” ಅಂತವರು ಹೇಳುತ್ತಿದ್ದಂತೆ, ನನಗ್ಯಾಕೋ ಇದು ವಿಪರೀತಕ್ಕೆ ಹೋಗುವ ಲಕ್ಷಣ ಕಂಡಿತು. ಕಡ್ಡಿ ಇದ್ದದ್ದನ್ನು ಗುಡ್ಡ ಮಾಡುತ್ತಿದ್ದಾನೆ ಬಡ್ಡಿ ಮಗ ಅನಿಸಿತು. ಕಳುವು ಮಾಡಿದ ಪಾಪಪ್ರಜ್ಞೆ ಅಂತೂ ಇಲ್ಲ. ನಾನು ಕಾಲು ಮುರಿಯುತ್ತೇನೆ ಅಂತ ಹೇಳಿಯೇ ಇಲ್ಲ. ಅದನ್ನು ಹೀಗೆಯೇ ಊರಿನಲ್ಲಿ ಎಲ್ಲರ ಮುಂದೆ ಹೇಳಿಕೊಂಡು ಅಡ್ದಾಡುತ್ತಾನೋ ಏನೋ ಅಂತ ನನಗೆ ಸ್ವಲ್ಪ ಆತಂಕ ಆದರೂ, ನಾನು ರೆಕಾರ್ಡ್ ಮಾಡಿದ್ದ ವಿಡಿಯೋ ಸಾಕ್ಷಿ ಇದೆಯಲ್ಲ ಎಂಬ ಧೈರ್ಯ ಇತ್ತು. ವಿಡಿಯೋ ಮಾಡುವಂತಹ ಬುದ್ಧಿ ಕೊಟ್ಟ ದೇವರಿಗೆ ಮನದಲ್ಲಿಯೇ ವಂದಿಸಿದೆ!

“ಅತ್ತೆ, ಅವನು ಭಾರಿ ಕಳ್ಳ.. ನೋಡಿ ಇಲ್ಲಿ ವಿಡಿಯೋ..” ಅಂತ ಅವರಿಗೂ ತೋರಿಸಿದೆ. ಅವರಿಗೆ ನಂಬಿಕೆ ಬಂತು ಆದರೂ…

“ಪ್ರಸಾದ ಅಂವ ಹಂಗೆಲ್ಲ ಮಾಡೋನು ಅಲ್ಲ ತಮ್ಮಾ… ಒಳ್ಳೆ ಪೋರ. ಅವನ ಮನೇಲಿ ದನಾನೂ ಇಲ್ಲೇ… ಅವನೆಂತಕೆ ಹುಲ್ಲು ಕೊಯ್ದಾ ಅಂತನೆ ಗೊತ್ತಾಗ್ತಿಲ್ಲೆ ನಂಗೆ…” ಅಂತ ಅವನ ಪರವಾಗಿಯೇ ವಕಾಲತ್ತು ವಹಿಸಿದರು.

ನನಗ್ಯಾಕೋ ಇದು ವಿಪರೀತಕ್ಕೆ ಹೋಗುವ ಲಕ್ಷಣ ಕಂಡಿತು. ಕಡ್ಡಿ ಇದ್ದದ್ದನ್ನು ಗುಡ್ಡ ಮಾಡುತ್ತಿದ್ದಾನೆ ಬಡ್ಡಿ ಮಗ ಅನಿಸಿತು. ಕಳುವು ಮಾಡಿದ ಪಾಪಪ್ರಜ್ಞೆ ಅಂತೂ ಇಲ್ಲ. ನಾನು ಕಾಲು ಮುರಿಯುತ್ತೇನೆ ಅಂತ ಹೇಳಿಯೇ ಇಲ್ಲ. ಅದನ್ನು ಹೀಗೆಯೇ ಊರಿನಲ್ಲಿ ಎಲ್ಲರ ಮುಂದೆ ಹೇಳಿಕೊಂಡು ಅಡ್ದಾಡುತ್ತಾನೋ ಏನೋ ಅಂತ ನನಗೆ ಸ್ವಲ್ಪ ಆತಂಕ ಆದರೂ, ನಾನು ರೆಕಾರ್ಡ್ ಮಾಡಿದ್ದ ವಿಡಿಯೋ ಸಾಕ್ಷಿ ಇದೆಯಲ್ಲ ಎಂಬ ಧೈರ್ಯ ಇತ್ತು.

“ಹೇಳದೆ ಕೇಳದೆ ಯಾಕೆ ಬರಬೇಕಿತ್ತು ನನ್ನ ಹೊಲದಲ್ಲಿ? ಅದು ತಪ್ಪಲ್ಲವೇ?” ಅಂತ ಅತ್ತೆಗೆ ಕೇಳುತ್ತಿದ್ದ ಹಾಗೆಯೇ.. ಅತ್ತೆಯ ಮನೆಯ ಅಂಗಳದಲ್ಲಿ ಸಂಗಪ್ಪ ತನ್ನಿಬ್ಬರು ಸಂಗಡಿಗರ ಜೊತೆಗೆ ಬರುವುದು ಕಂಡಿತು. ಇವನು ಇದನ್ನು ಇಷ್ಟಕ್ಕೆ ಮುಗಿಸುವುದಿಲ್ಲ ಅಂತ ನನಗೆ ಗೊತ್ತಾಯಿತು. ಆದರೂ ನೋಡೇ ಬಿಡೋಣ, ತಪ್ಪು ಮಾಡಿದವನು ಅವನು.. ನಾನ್ಯಾಕೆ ತಲೆ ಕೆಡಿಸಿಕೊಳ್ಳಬೇಕು ಅಂತ ಹೊರಗೆ ಬಂದೆ.

“ಯಾರ್ಯಾರಿಗೆ ಕಳಸೀರಿ ವಿಡಿಯೋ?” ಅಂದ.

ಅವನ ಹಾಗೆ ಕೇಳಿದ ರೀತಿ ನನಗೆ ವಿಪರೀತ ಸಿಟ್ಟು ತರಿಸಿತ್ತು. ಅದು ಹೆಂಗಿತ್ತು ಅಂದರೆ, ಅವನು ಮಾಡಿದ ತಪ್ಪಿಗಿಂತ ಅದನ್ನು ವೀಡಿಯೊ ಮಾಡಿದ್ದು ನನ್ನದೇ ತಪ್ಪು ಎಂಬಂತೆ… ಅದೇನೋ ಹೇಳ್ತಾರಲ್ಲ “ಉಲ್ಟಾ ಚೋರ್ ಕೊತವಾಲ್ ಕೊ ಡಾಂಟೆ (ಕಳ್ಳನೇ ಪೋಲಿಸನಿಗೆ ಬೈದಂಗೆ)” ಅಂತ, ಹಾಗಿತ್ತು ಅವನ ಧಾಟಿ.

ನಾನು ಏನೋ ಹೇಳುವಷ್ಟರಲ್ಲಿ.. ಅತ್ತೆ,

“ಸಂಗಪ್ಪ ಅಂವಾ ವಿಡಿಯೋ ಯಾರಿಗೂ ಕಳಿಸಿಲ್ಲ, ಅದನ್ನ ಡಿಲೀಟ್ ಮಾಡಲು ಹೇಳ್ತಿ ಅಕಾ… ಇಷ್ಟಕ್ಕೆ ಬಿಟ್ಟು ಬಿಡು” ಅಂದರು.

ನನಗೆ ಇನ್ನೂ ತಲೆ ಕೆಟ್ಟು ಹೋಯ್ತು. ನಾನೇ ಇವನ ಮೇಲೆ ಆಕ್ಷನ್ ತೋಗೊಬೇಕು, ಅಂತದರಲ್ಲಿ ಅವನಿಗೆ ನಾವು ಸಮಜಾಯಿಷಿ ಕೊಡುವ ಅಗತ್ಯ ಏನಿದೆ. ಅತ್ತೆ ಯಾಕೆ ಅವನಿಗೆ ಇಷ್ಟೊಂದು ವಹಿಸಿ ಮಾತಾಡುತ್ತಿದ್ದಾರೆ!? ಅಂತ ಅವರ ಮೇಲೂ ಕೋಪ ಬಂತು.

“ವಿಡಿಯೋ ಯಾರಿಗೆ ಕಳಸ್ತೀನಿ ಬಿಡ್ತೀನಿ ಅದು ನಿನಗ ಸಂಬಂಧ ಇಲ್ಲ. ನನ್ನ ಕೇಳದ ನನ್ನ ಹೊಲದಾಗ ಹೆಂಗ ಬಂದೆ ನೀನು? ನಾನು ನಿನ್ನ ಕಾಲು ಕತ್ತರಸ್ತೀನಿ ಅಂತ ಯಾವಾಗ ಹೇಳಿದೆ? ಸುಳ್ಳ ಏನೇನೋ ಹೇಳಿಯಂತಲ್ಲ ಮಾವರ ಎದರಿಗೆ..” ಅಂದೆ.

“ಬಲಗೈಯಾಗ ಕುಡುಗೋಲು ಹಿಡಕೊಂಡು ಕೈ ಅಲ್ಲಾಡಿಸಿ ಹೇಳಿದ್ರ್ಯಲ್ಲಾ.. ಇನ್ನೊಮ್ಮೆ ಕಾಲ್ ಇಡಬ್ಯಾಡ ಅಂತ ಏನ ಅದರ ಅರ್ಥ” ಅಂದ.

ಒಹೋ ಹೀಗೆ! ಕೈಯಲ್ಲಿ ಕತ್ತಿ ಹಿಡಿದು ಝಳಪಿಸುತ್ತಾ ಮಾತಾಡಿದ್ದನ್ನು ಹೀಗೆ ಅರ್ಥೈಸಿಕೊಂಡಿದ್ದ ಅವನು. ಒಟ್ಟಿನಲ್ಲಿ ತಾನು ಮಾಡಿದ್ದಕ್ಕೆ ಪಶ್ಚಾತಾಪ ಅಂತೂ ಇರಲಿಲ್ಲ. ನನ್ನ ಮೇಲೆಯೇ ಇಲ್ಲದ ಅರೋಪ ಮಾಡಲು ಸಜ್ಜಾಗಿದ್ದ.

“ಅಲ್ಲೋ ತಂದೆ.. ನಾನು ಹಂಗ್ ಹೇಳೆ ಇಲ್ಲ ಸುಮ್ಮ ಸುಮ್ಮನ ಏನೇನೋ ಹೇಳಬ್ಯಾಡ. ನೋಡಿಲ್ಲಿ ವಿಡಿಯೋ ಐತಿ…” ಅಂದೆ. ಅವನಿಗೆ ಈಗ ಸಿಕ್ಕಿ ಬೀಳುವ ಆತಂಕ ಎದುರಾಯಿತೇನೋ. ಕೂಡಲೇ ಮತ್ತೊಂದು topic ತೆಗೆದ..

“ಹೊಲದಾಗ ಕಾಲು ಇಡಬ್ಯಾದ ಅಂತೀರಿ… ನಾವು ಹೆಂಗ ಅಡ್ಯಾಡಬೇಕು?” ಅಂತೇನೇನೋ ಬಡಬಡಿಸತೊಡಗಿದ. ಈಗಾಗಲೇ ಅಡ್ಡಾಡಲು ನನ್ನದೇ ದಾರಿ ಬಿಟ್ಟಿದ್ದೆ. ಅವನು ಸುಮ್ಮನೆ ಜಗಳ ತೆಗೆಯಲು ಏನೇನೋ ಕಾರಣ ಹುಡುಕುತ್ತಿದ್ದಾನೆ ಅನಿಸಿತು. ಒಟ್ಟಿನಲ್ಲಿ ಅವನ ಜೊತೆ ವಾದ ಮಾಡುವುದರಲ್ಲಿ ಅರ್ಥ ಇಲ್ಲ ಅಂದುಕೊಂಡೆ. ಕೊನೆಗೆ ಅತ್ತೆ ಏನೋ ಹೇಳಿ ಸಮಾಧಾನ ಮಾಡಿ ಅವನನ್ನು ಅಲ್ಲಿಂದ ಕಳಿಸಿದರು.

“ಚಾ ಮಾಡಲಾ ಅಂದರು…” ನನಗೆ ಯಾಕೋ ಬೇಡ ಅನಿಸಿ.. “ಇಲ್ಲ ಅತ್ತೆ ಮನಿಗೆ ಹೋಗ್ತೀನಿ…” ಅಂತ ಸ್ಕೂಟರ್‌ನಲ್ಲಿ ಹೊಸಕೊಪ್ಪದ ನಮ್ಮ ಮನೆಗೆ ತೆರಳಿದೆ. ದಾರಿಗುಂಟ ಯೋಚಿಸುತ್ತಲೇ ಸಾಗಿದೆ.

ಕಾರ್ಪೊರೇಟ್ ಜಗತ್ತಿನಲ್ಲಿ ನಡೆಯುವ ರಾಜಕೀಯಗಳಿಂದ ರೋಸಿ ಹೋಗಿ ಕೆಲಸ ಬಿಟ್ಟು ಬಂದು ಹಳ್ಳಿಯಲ್ಲಿ ನೆಮ್ಮದಿ ಕಾಣಬೇಕು ಅಂದರೆ ಇಲ್ಲಿ ಇನ್ನೂ ಹದಗೆಟ್ಟ ಪರಿಸ್ಥಿತಿ ಇದೆ ಅನಿಸಿತು. ಸುಳ್ಳುಗಳು, ಜಾತಿ, ಕಳುವು ಇನ್ನೂ ಏನೇನು ನೋಡೋದು ಇದೆಯೋ ಇಲ್ಲಿ ಅನಿಸಿತು. ಅತ್ತೆ ಮಾವ ನಮ್ಮ ಸಂಬಂಧಿಯೇ ಆಗಿದ್ದರೂ ಅವರು ನಮ್ಮ ಪರವಾಗಿ ನಿಲ್ಲಲಾರರು ಎಂಬ ಕಟು ಸತ್ಯದ ಅರಿವು ಆಗಿತ್ತು. ಎಷ್ಟೇ ಅಂದರೂ ಅಲ್ಲಿನ ಜನರ ಜೊತೆಗೆ ಬದುಕುವ ಅವರು, ಎಲ್ಲಿಂದಲೋ ಬಂದ ಯಾವಾಗಲೋ ಒಮ್ಮೆ ಬಂದು ಹೋಗುವ ನನ್ನ ಪರವಾಗಿ ಹೇಗೆ ತಾನೇ ನಿಂತಾರು? ಆದರೂ ಬೇರೆಯವರ ಹೊಲದಲ್ಲಿ ಕಳ್ಳತನ ಮಾಡಬಾರದು ಅಂತಲೂ ಅವನಿಗೆ ಬುದ್ಧಿ ಹೇಳಬಹುದಿತ್ತಲ್ಲ!? ಮನಸ್ಸು ಭಾರವಾಯ್ತು.

ಮನೆ ಮುಟ್ಟಿದಾಗ ಸಂಜೆಯಾಗಿತ್ತು. ಗೌಡರ ಬಾಡಿಗೆ ಮನೆಯಲ್ಲಿ ಹಾಸಿಗೆಯ ಮೇಲೆ ಹಾಗೆಯೇ ಬಿದ್ದುಕೊಂಡೆ. ಆಶಾಳಿಗೆ ಫೋನ್ ಮಾಡಿ ಅವತ್ತು ನಡೆದ ಎಲ್ಲ ವಿಷಯ ಹೇಳಿದೆ. ಹೀಗೆಲ್ಲ ಮುಂದೆಯೂ ಕಳುವು ಆಗುತ್ತಿದ್ದರೆ ಏನು ಮಾಡೋದು ಅಂತ ಅವಳೆದುರು ಗೋಳು ತೋಡಿಕೊಂಡೆ. ಸಂಕಟವನ್ನು ಅವಳೆದುರು ಬಿಟ್ಟು ಬೇರೆ ಯಾರ ಎದುರು ಹೇಳಿಕೊಳ್ಳಬೇಕು? ಅವಳು ಮಗುವಿಗೆ ಸಮಾಧಾನ ಮಾಡುವಂತೆ ಆಯ್ತು ಬೆಂಗಳೂರಿಗೆ ಬಾ ಮಾತಾಡೋಣ ಅಂದಳು.

ಅವತ್ತು ರಾತ್ರಿ ನಿದ್ದೆ ಬರದೆ ಹೊರಳಾಡುತ್ತಿದ್ದೆ. ಲಕ್ಷಗಟ್ಟಲೆ ಸಂಪಾದನೆ ಇದ್ದ ಕೆಲಸವನ್ನು, ಅಲ್ಲಿ ನೆಮ್ಮದಿಯಿಲ್ಲ ಅಂತ ಬಿಟ್ಟು ದೊಡ್ಡದಾಗಿ ಹಳ್ಳಿಗೆ ಬಂದು ಇಲ್ಲೆಂತಹ ನೆಮ್ಮದಿ ಕಂಡುಕೊಂಡೆ ಎಂಬ ಯೋಚನೆಗಳು ಆವರಿಸಿಕೊಂಡವು. ಬೆಂಗಳೂರಿನಲ್ಲಿ ಈಗಾಗಲೇ ಕೃಷಿ ಸಂಬಂಧಿತ ಬಿಸಿನೆಸ್ ಮಾಡಿಕೊಂಡಿದ್ದ ನನಗೆ ಕೃಷಿ ಮಾಡಲು ಸಾಕಷ್ಟು ಅನುಭವ ಇದ್ದರೂ ಈ ರೀತಿಯ ಸಮಸ್ಯೆಗಳ ಸೃಷ್ಟಿಸುವ ಹಳ್ಳಿಯ ಜನಗಳ ಜೊತೆಗೆ ಬಡಿದಾಡಿಕೊಂಡು ಇದ್ದರೆ ಇಲ್ಲಿ ಎಂತಹ ಸಾಧನೆ ಮಾಡೋದು ಅಂತ ಬಲವಾಗಿ ಅನಿಸತೊಡಗಿತು. ಒಂತರಹದ ಏಕಾಂಗಿತನದ ಭಾವನೆ ಬಂದು, ಸಾಕು ಈ ಹಳ್ಳಿಯ ಸಹವಾಸ… ಹೊಲವನ್ನು ಮಾರಿ ಕೈ ತೊಳೆದುಕೊಂಡರಾಯ್ತು. ಬೆಂಗಳೂರಿನಲ್ಲೇ ನನ್ನ ಸಧ್ಯದ ಮಣ್ಣು ರಹಿತ ಕೃಷಿ ಮುಂದುವರಿಸಿದರಾಯ್ತು ಅಂತ ನಿರ್ಧರಿಸಿದೆ. ಹಳ್ಳಿಯಲ್ಲಿ ನನ್ನ ಅಮೂಲ್ಯ ಸಮಯವನ್ನು ಹಾಳು ಮಾಡುತ್ತಿದ್ದೇನೆ ಅನಿಸಿತು. ಬೆಂಗಳೂರಿಗೆ ಹೋದಮೇಲೆ ಆಶಾಳ ಜೊತೆಗೆ ಮಾತಾಡಿ ಒಂದು ನಿರ್ಧಾರ ತೆಗೆದುಕೊಂಡರಾಯ್ತು ಎಂಬ ನಿರಾಳತೆಯಲ್ಲಿ ಯಾವಾಗ ನಿದ್ದೆಯ ವಶವಾದೆನೋ ಗೊತ್ತಾಗಲಿಲ್ಲ….

(ಮುಂದುವರಿಯುವುದು…)