ಇದಕ್ಕೂ ಮುಂಚೆ ಹತ್ತಾರು ಚಾರಣ ಮಾಡಿದ ಅನುಭವವಿದ್ದ ನನಗೆ ಈಗ ರಕ್ತ ಒಸರಿದ್ದು ಹೇಗೆಂದು ಹೊಳೆದು ಕೊಂಚ ಸಮಾಧಾನವಾಯಿತು. ನಾನು ಗಣೇಶನ ಬಳಿಗೆ ಓಡಿ ಗಾಯವನ್ನು ಸೂಕ್ಷ್ಮವಾಗಿ ಪರಿಶೀಲಿಸಿದೆ. ಒಂದು ದೊಡ್ಡ ಗಾಯ ಮಾತ್ರವಿತ್ತು. ಇನ್ನೊಂದು ಗಾಯ ಸುಮಾರು 5 ಸೆ.ಮೀ. ಆಚೆಗಿತ್ತು. ಹಾಗಾಗಿ ಆತ ಇದು ಹಾವು ಕಡಿದದ್ದಲ್ಲಾ ಎಂದು ತೀರ್ಪಿತ್ತೆ. ಹಾವಾಗಿದ್ದರೆ ಗಾಯಗಳೆರಡು ಹತ್ತಿರ ಹತ್ತಿರವಿರಬೇಕಿತ್ತು. ಹಾಗಾದರೆ ರಕ್ತ?! ಎಂದು ಉಳಿದವರೆಲ್ಲಾ ಕಿರುಚಿದರು. ಅದು ಇಂಬಳ ಎಂಬ ಜೀವಿಯ ಕೆಲಸ.
ಶ್ರೀಧರ್ ಎಸ್. ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಹೊಸ ಬರಹ
ಮಾಗಿ ಚಳಿ ಇನ್ನೂ ಪ್ರಾರಂಭವಾಗಿರಲಿಲ್ಲ. ಪ್ರಚಂಡ ಚಂಡಮಾರುತ ಬೀಸಿ ಹೋಗಿತ್ತು. ಬದುಕಿನಲ್ಲಿ ವಯಸ್ಸಿನ ಚಂಡಮಾರುತ! ಚಾರಣ, ಪ್ರವಾಸದ ಚುಬುಕು. ನಾಲ್ಕಾರು ಸ್ಥಳಗಳ ಕಾಕ್‌ಟೈಲ್ ತಯಾರಿಸಿದ್ದಾಯಿತು. ಡಬ್ಬಿ ಕ್ಯಾಮರಕ್ಕೆ ರೀಲು ತುಂಬಿಸಿದ್ದಾಯಿತು.
ಎರಡು ಜಲಪಾತ, ಒಂದು ಸಣ್ಣ ಚಾರಣ. ಒಂದೆರಡು ದೇವಾಲಯ. ಸಿರಸಿ ಮಾರಿಕಾಂಬ ಬನವಾಸಿಯ ಮಧುಕೇಶ್ವರ, ಜೋಗ, ವರದಾನದಿ ಸಹ ಕಾಕ್‌ಟೈಲ್‌ನ ಭಾಗ! ಅಪ್ಪಟ ಅನಾಸ್ತಿಕ ಗೆಳೆಯರು ಮೂಗು ಮುರಿದಿದ್ದರು!
ಓಮ್ನಿ ಕಾರನ್ನು ಬಾಡಿಗೆಗೆ ಪಡೆದು, ಒಂದೇ ದಿನದಲ್ಲಿ ವಾಪಾಸು ಬರುವೆವು ಎಂದು ಕಾಗೆ ಹಾರಿಸಿ ಗೆಳೆಯನೊಬ್ಬನನ್ನು ನಂಬಿಸಿ ಕಿಡ್ನಾಪ್ ಶೈಲಿಯಲ್ಲಿ ಓಮ್ನಿಗೆ ತುಂಬಿಕೊಂಡು ಹೊರಟೆವು! ಆತನೇ ಇಂದಿನ ಕಥನದ ಕೇಂದ್ರ ಬಿಂದು. ಅಸಲಿಗೆ ಅದು ನಮ್ಮ ಮೂರು ದಿನಗಳ ಪ್ರವಾಸ! ಆತನಿಗೆ ಬೇಕಾದ ವಸನಗಳ ವ್ಯವಸ್ಥೆ ಮಾಡಿದ್ದಾಯಿತು. ಊರ ಗಲ್ಲಿಗಳಲ್ಲಿ ಕಾರಿನ ಬೆಳಕು ಚೆಲ್ಲಿ ಮೂಕಾಂಬಿಕಾ ಅಭಯಾರಣ್ಯದ ಮಗ್ಗುಲಿಗೆ ಹಾದು ಮರಕುಟಿಕವೆಂಬ ಸಣ್ಣ ಮೂರ್‌ಕೈಯಲ್ಲಿ ದಾರಿಕಾಣದೇ ಸ್ಥಗಿತವಾಯಿತು ನಮ್ಮ ಕಾರು.
ಜಲಪಾತದ ಜಿ.ಪಿ.ಎಸ್ ಕಳೆದು
ಬೀಸಿ ಹೋದ ಮುಂಗಾರು ಮಳೆ, ಹರಡಿದ ತರಗಲೆ ದಾರಿಯುದ್ದಕ್ಕೂ. ಎಡಕ್ಕೊ ಬಲಕ್ಕೊ ನೇರವೊ ತಿಳಿಯದೆ ನಿಂತಾಗ ದಿನೇಶ ಹೊಳ್ಳ ಬರೆದ ಲೇಖನವೊಂದು ದಾರಿದೀಪವಾಗಿ ಬಲಕ್ಕೆ ಹೊರಳಿಸಿದೆವು. ನಾಲ್ಕೈದು ಎಮ್ಮೆ ಹೊಡೆದುಕೊಂಡು ಕಂಬಳಿ ಕೊಪ್ಪೆ ಹೊದ್ದವನಲ್ಲಿ ಎಮ್ಮೆ ಹೊಂಡದ ದಾರಿ ಕೇಳಿದೆ. ನೇರ ದಾರಿ ಎಂಬಂತೆ ಸನ್ನೆ ಮಾಡಿದ ಮೂಕನಿರಬೇಕು ಎಂದುಕೊಂಡೆ ನೇರದಾರಿಯಲಿ ಮುಂದುವರಿದು ಕವಲಿನ ಹಾದಿಯ ನಡುವೆ ಎಲ್ಲೋ ಹಾದಿ ತಪ್ಪಿದೆವು. ಇನ್ನು ಮುಂದುವರಿಯದಂತೆ ತೊರೆಯೊಂದು ತನ್ನ ಇರುವನ್ನು ಅರುಹಿತ್ತು. ಮುಂದುವರಿದರೆ ಸೈಲೆನ್ಸರ್ ಒಳಗೆ ಹಾದು ಪ್ರವಾಸ ಮೊದಲ ದಿನಕ್ಕೆ ಮೊಟಕಾಗಬಹುದೆಂದು ಮತ್ತಿನ್ನೆರಡು ಘಳಿಗೆಯಲ್ಲೇ ಮಳೆ ಸುರಿದು ನೀರೇರಬಹುದೆಂಬ ಆತಂಕ ಮುಂಬರಿಯದಂತೆ ತಡೆದಿತ್ತು. ಸುತ್ತಲೂ ಮುಗಿಲ ಚುಂಬಿಸೋ ಮರಗಳು ನಡು ಹಗಲಿಗೇ ಕಡುಗತ್ತಲು! ಅಲ್ಲಲ್ಲಿ ಕೃಷಿ , ತೋಟಗಾರಿಕೆ. ಲಿಂಬೆ ಹುಲ್ಲಿನ `ವಾಹ್’ ಪರಿಮಳ ಹೊತ್ತ ತುಂಟ ಗಾಳಿ. ಕಡಿದಾದ ಕೆಂಪು ಮಣ್ಣಿನ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಕನಸ ಬೆನ್ನತ್ತಿದೆವು. ಕನಸು ಅಬ್ಬೇಪಾರಿಯಾಗುವ ಕ್ಷಣ. ದಾರಿ ತಪ್ಪಿ ಯಾರದೋ ತೋಟದೊಳಗೆ ಕಾಲಿಟ್ಟೆವು. ಮನೆ ಮನಗಳಲ್ಲಿ ಹಸಿರುಟ್ಟ ಗದ್ದೆ ಕೋಗು. ಊರ ಮಂದಿ ಊರ ಬಿಟ್ಟಂತೆ ಮನೆಗಳೆಲ್ಲಾ ಖಾಲಿ ಖಾಲಿ. ಕನಸು ಅಬ್ಬೇಪಾರಿಯಾಗುವ ಪಾಳಿ. ಆತಂಕದಲ್ಲೇ ಕಳೆವ ಕ್ಷಣ. ಗೆಳೆಯರಿಗೆಲ್ಲಾ ಜಲಪಾತ ತೋರಿಸುತ್ತೇನೆಂದು ರೈಲು ಹತ್ತಿಸಿ ಎಲ್ಲೆಲ್ಲೋ ಅಲೆಸಿದ್ದದಾಯಿತು. ಜಲಪಾತ ಬಿಡಿ ಅದರ ಶಬ್ದವೂ ಎಲ್ಲೂ ಕೇಳಿಸಲೇ ಇಲ್ಲ! ಅಂತು ಇಂತು ದಾರಿ ಸಿಕ್ಕದೇ ಬಂದ ದಾರಿಗೆ ಸುಂಕವಿಲ್ಲವೆಂದುಕೊಳ್ಳುತ್ತಾ ನಿರಾಶೆಯಲ್ಲಿ ಹಿಂದಿರುಗುವ ಹುನ್ನಾರದಲ್ಲಿದ್ದೆವು. ಯಾವ ನರಪಿಳ್ಳೆಯ ಸುಳಿವೂ ಸಿಗದೇ ಜಲಪಾತದ `ಜಿ.ಪಿ.ಎಸ್’ ಕಳೆದುಕೊಂಡಿದ್ದೆವು!
ಕದಡಿದ ಕೂಗು
ಇನ್ನೇನು ಸ್ವಲ್ಪ ಹೊತ್ತಿನಲ್ಲೇ ತಂದ ಬುತ್ತಿಗಂಟು ಬಿಚ್ಚಿ ಉಂಡು ಹೊರಡೋಣವೆಂದುಕೊಂಡಿರುವಾಗಲೇ ಆರ್ತನಾದವೊಂದು ಕೇಳಿ ಎಲ್ಲರೂ ದಂಗಾದೆವು. ನಾನು ನನ್ನ ಜೊತೆಗಾರರಲ್ಲಿ ಇಬ್ಬರು ಮುಂದೆ ಮುಂದೆ ಹಳ್ಳಿಯ ದಾರಿಯಲ್ಲಿ ಮನುಷ್ಯ ಆವಾಸಕ್ಕಾಗಿ ಹುಡುಕುತ್ತಾ ಹೊರಟಿದ್ದೆವು. ಇಬ್ಬರು ಮಧ್ಯ. ಇನ್ನಿಬ್ಬರು ತೀರಾ ಹಿಂದೆ ಬಿದ್ದು ನಮ್ಮನ್ನು ಅನುಸರಿಸಿದ್ದರು.
ದೂರದಲ್ಲಿದ್ದ ಇಬ್ಬರಲ್ಲಿ ಒಬ್ಬನಿಗೆ ಏನೋ ಆಗಿರಬೇಕು. ದೂರದಲ್ಲಿ ಆತನಿದ್ದಿದ್ದರಿಂದ ಆ ಕೂಡಲೇ ಸ್ಪಂದಿಸಲಾಗಲಿಲ್ಲ. ಏನೋ ಒಂದು ಈ ಕಗ್ಗಾಡಿನ ಮೂಲೆಯಲ್ಲಿ ಜರುಗಿತ್ತು! ಇಲ್ಲಿನ ಮೂಲ ಸೌಕರ್ಯ ಅಷ್ಟಕಷ್ಟೆ. ಓಮ್ನಿ ದೂರದಲ್ಲಿ ನಿಲ್ಲಿಸಿ ಬಂದಿದ್ದೆವು. ದಾರಿತಪ್ಪಿದ ಮಕ್ಕಳಾಗಿದ್ದೆವು. ಸದಾ ಉಲ್ಲಾಸದ ಬುಗ್ಗೆಗೆ ಕಾರಣವಾಗಿದ್ದ ಕಾಡು, ಈ ಪರಿಸರ ನಮ್ಮ ಬದ್ಧ ವೈರಿಯಾಗಿ ಪ್ರತಿಸ್ಪರ್ಧಿಯಾಗಿ ಜೀವೋತ್ಕರ್ಷಕ್ಕೆ ಅಡ್ಡಿಯಾಗಿ ನಿಂತಂತೆ ಭಾಸವಾಯಿತು. ಈ ಕಠಿಣ ಕಾಲದಲ್ಲಿ ಸ್ಪಂದಿಸುವುದು ನಮ್ಮ ಆದ್ಯ ಕರ್ತವ್ಯವಾಗಿತ್ತು. ಇಂತಹ ಸುಮಧುರ ಕ್ಷಣವನ್ನು ನುಂಗಿ ಹಾಕುವಂತೆ ಏನೋ ಒಂದು ಘಟಿಸಿತ್ತೆಂದು ನನಗೆ ಭಾಸವಾಯಿತು. ಹಾಗಾಗಿ ಆತನಿದ್ದಲ್ಲಿಗೆ ದೌಡಾಯಿಸಿದೆ.
ಕನ್ನಡಿ ಹಾವು ಕಚ್ಚಿ
ಹೀಗೆ ದಾರಿ ಹುಡುಕುತ್ತಾ ಮುಂದೆ ಸಾಗಿದ ನನಗೆ ಹಿಂದಿನಿಂದ ನಮ್ಮ ತಂಡದ ಸದಸ್ಯ ಗಣೇಶನ ಬೊಬ್ಬೆ ಕೇಳಿ, ನಾನು ಒಂದೇ ಜಿಗಿತಕ್ಕೆ ಅಲ್ಲಿಗೆ ತಲುಪಿದೆ. ಆತನ ಕಾಲಿನಿಂದ ರಕ್ತ ಒಸರುತಿತ್ತು. ನಾವು ಗಾಬರಿ ಬಿದ್ದೆವು. ಏನಾಯಿತೆಂದು ವಿಚಾರಿಸಿದಾಗ ನಾನು ಸತ್ತೆ!. ನಾನು ಸತ್ತೆ ಎಂಬ ಗಣೇಶನ ಬೊಬ್ಬೆ ಮುಂದುವರೆದಿತ್ತು. ಆತನನ್ನು ಸಮಾಧಾನ ಪಡಿಸಿ ಕೇಳಿದಾಗ ರಕ್ತ ಕನ್ನಡಿ ಹಾವು ಕಡಿಯಿತು! ಎಂದು ಹೇಳಿ ನಮ್ಮನ್ನು ಗಾಬರಿಪಡಿಸಿದ! ಮೊದಲೇ ಅಂಜಿಕೆ ಸ್ವಭಾವದ ಆತನನ್ನು ಚಾರಣಕ್ಕೆ ಕರೆತಂದಿದ್ದು ನನ್ನ ತಪ್ಪೆಂದು ತಿಳಿಯಿತು. ಆತನ ಕಾಲಿಗೆ ಸಣ್ಣ ಟವೆಲ್ ಕಟ್ಟಿ ರಕ್ತ ಮೇಲೆ ಹರಡದಂತೆ ಜಾಗೃತೆ ಮಾಡಿದೆವು. ಅದಾಗಲೇ ನಮ್ಮ ತಂಡದವರಲ್ಲಿ ಗಡಿಬಿಡಿ ಮನೆ ಮಾಡಿತ್ತು. ಎಲ್ಲರ ಕೋಪಕ್ಕೆ ತುತ್ತಾಗುವ ಸರದಿ ನನ್ನದಾಗಿತ್ತು. ಹಾದಿ ತಪ್ಪಿಸಿದ್ದರ ಜೊತೆಗೆ ಈ ದುರ್ಗಮ ಹಾದಿಯಲಿ ಹಾವಿನ ಕಾಟಕ್ಕೆ ಗೆಳೆಯನನ್ನೇ ಬಲಿ ಕೊಡಬೇಕಾದ ಪರಿಸ್ಥಿತಿ ಬಂತೆಂದು ಹಿಡಿ ಶಾಪ ಹಾಕತೊಡಗಿದರು. ಕನ್ನಡಿ ಹಾವು ಕಡಿದರೆ ಸಾಯೋದಿಲ್ಲವೆಂದು ನಿರ್ದಿಷ್ಟವಾಗಿ ಹೇಳಿದೆ. ಎಲ್ಲರೂ ನನ್ನ ಮೇಲೆ ದಾಳಿ ಮಾಡಿದರು!
ಗಣೇಶನ ತುರ್ತು ಅಗತ್ಯಕ್ಕೆ ಸ್ಪಂದಿಸುವ ಜವಬ್ದಾರಿ ನನ್ನ ಮೇಲಿದ್ದುದರಿಂದ ಆತನನ್ನು ಸಮಾಧಾನ ಪಡಿಸಿ ಏನಾಯಿತೆಂದು ವಿಚಾರಿಸಿದಾಗ ನಾನೊಂದು ದೊಡ್ಡ ರಕ್ತ ಕನ್ನಡಿ ಹಾವನ್ನು ತುಳಿದೆ, ಅದು ನನ್ನನ್ನು ಕಚ್ಚಿತು ಎಂಬುದು ಆತನ ವಿವರಣೆ, ಹಾವಿದ್ದ ಸ್ಥಳ ನೋಡಲು ಹೋದೆವು. ಗದ್ದೆ ಕಂಠದ ಬದಿಯಲ್ಲೊಂದು ತಗ್ಗಿನ ಸ್ಥಳವನ್ನು ಆತ ತೋರಿದ. ಅಲ್ಲಿ ಹುಡುಕಿದರೆ ರಕ್ತಕನ್ನಡಿ ಹಾವೊಂದು ನಿಶ್ಚಿಂತೆಯಿಂದ ಮಲಗಿತ್ತು.
ಈಗ ನಮ್ಮ ತಂಡ ಸಂದಿಗ್ದಕ್ಕೆ ಬಿದ್ದೆವು ಹಾವು ಕಚ್ಚಿದರೆ ಅದು ಅಲ್ಲಿರುತ್ತಲೇ ಇರಲಿಲ್ಲ, ಆದರೆ ಕಚ್ಚದೆ ಕಾಲಿನಿಂದ ರಕ್ತ ಒಸರುವುದು ಹೇಗೆ? ತೀವ್ರ ಗೊಂದಲಕ್ಕೆ ಬಿದ್ದೆವು. ನಮ್ಮ ಸ್ನೇಹಿತರೆಲ್ಲಾ ಗರ ಬಡಿದವರಂತೆ ನಿಂತರು.
ಇದಕ್ಕೂ ಮುಂಚೆ ಹತ್ತಾರು ಚಾರಣ ಮಾಡಿದ ಅನುಭವವಿದ್ದ ನನಗೆ ಈಗ ರಕ್ತ ಒಸರಿದ್ದು ಹೇಗೆಂದು ಹೊಳೆದು ಕೊಂಚ ಸಮಾಧಾನವಾಯಿತು. ನಾನು ಗಣೇಶನ ಬಳಿಗೆ ಓಡಿ ಗಾಯವನ್ನು ಸೂಕ್ಷ್ಮವಾಗಿ ಪರಿಶೀಲಿಸಿದೆ. ಒಂದು ದೊಡ್ಡ ಗಾಯ ಮಾತ್ರವಿತ್ತು. ಇನ್ನೊಂದು ಗಾಯ ಸುಮಾರು 5 ಸೆ.ಮೀ. ಆಚೆಗಿತ್ತು. ಹಾಗಾಗಿ ಆತ ಇದು ಹಾವು ಕಡಿದದ್ದಲ್ಲಾ ಎಂದು ತೀರ್ಪಿತ್ತೆ. ಹಾವಾಗಿದ್ದರೆ ಗಾಯಗಳೆರಡು ಹತ್ತಿರ ಹತ್ತಿರವಿರಬೇಕಿತ್ತು. ಹಾಗಾದರೆ ರಕ್ತ?! ಎಂದು ಉಳಿದವರೆಲ್ಲಾ ಕಿರುಚಿದರು. ಅದು ಇಂಬಳ ಎಂಬ ಜೀವಿಯ ಕೆಲಸ. ಅದು ಕಚ್ಚಿ ರಕ್ತ ಹೀರಿ ಹೋದುದರಿಂದ ಉಂಟಾದ ಗಾಯದಿಂದ ಬರುತ್ತಿರುವುದು ಎಂದಾಗ ಎಲ್ಲರು ಸಮಧಾನದ ನಿಟ್ಟುಸಿರು ಬಿಟ್ಟೆವು. ಹಾವನ್ನು ಕಂಡ ಗಣೇಶ ಗಾಬರಿ ಬಿದ್ದು ಭಯದಿಂದ ಸತ್ತೇ ಬಿಡುತ್ತೇನೆಂದು ಗಲಾಟೆ ಎಬ್ಬಿಸಿದ್ದ!
ದೊಡ್ಡ ಗಂಡಾಂತರದಿಂದ ಪಾರಾದ ಎಲ್ಲರೂ ಒಮ್ಮೆ ನಿರುಮ್ಮಳರಾದೆವು. ಗಣೇಶ ನಾಚಿಕೆಯಿಂದ ಮಾತೆ ಹೊರಡದಂತಾಯಿತು. ಮುಂದಿನ ಪಯಣದುದ್ದಕ್ಕೂ ಆತನನ್ನು ಗೋಳು ಹೊಯ್ದುಕೊಂಡೆವು. ಸುಮಾರು ಒಂದು ಗಂಟೆ ಕಾನನದಿ ಗಗನ ಸ್ಪರ್ಶಿ ಮರಗಳ ನಡುವೆ ಕೊಡಚಾದ್ರಿಯ ನೋಡುತ್ತಾ ಒಬ್ಬರಿಗೊಬ್ಬರು ಕಾಲೆಳೆಯುತ್ತಾ ಸಾಗಿದೆವು.

ಹಿಂಡ್ಲು ಮನೆಯತ್ತ
ಹಿಂಡ್ಲು ಮನೆಯೊಂದು ವಿಶಿಷ್ಟ ಜಲಧಾರೆ. ಕೊಡಚಾದ್ರಿ ಕುಡಿದ ನೀರೆಲ್ಲಾ ಇಲ್ಲಿ ಇಳಿದು ಹರಿಯುತ್ತದೆ. ಕೊಡಚಾದ್ರಿ ಚಾರಣದ ಚಿಮ್ಮು ಹಲಗೆಯೂ ಹೌದು! ಜಲಪಾತದ ಸನಿಹದ ಏರುದಾರಿಯಲಿ ಏರಿದರೆ `ಒಂಟಿ ಮರ’ ವೆಂಬ ವಿಶಿಷ್ಟ ಜಾಗಕ್ಕೆ ಬಂದು ತಲುಪುತ್ತೇವೆ.
ಕೆಳಗಿನಿಂದ ಮೇಲೇರುವುದು ಬಲು ಕಠಿಣವೆಂದು ಒಮ್ಮೆ ಮೇಲಿನಿಂದ ಕೆಳಗಿಳಿದು ಬಂದಿದ್ದೆ! ಜಲಪಾತದ ಬುಡದ ಮನೆಯಲ್ಲಿ ಮಲೆನಾಡಿನ ಮನೆಯ ವಿಶಿಷ್ಟ ತಂಬಳಿಯೂಟ ಸವಿದಿದ್ದೆ! ಇಂತಹ ಮಲೆನಾಡ ಮನೆಗಳು ಪೇಟೆ ಪಟ್ಟಣಗಳ ಮನೆಗಳಿಗಿಂತ ವಿಶಿಷ್ಟವಾಗಿ ನಿಲ್ಲುತ್ತವೆ! ತನ್ನ ಕಾಲಮೇಲೆ ನಿಂತ ಮನೆ. ಹತ್ತಲಿನಲಿ ತರಹೇವಾರಿ ತರಕಾರಿ, ಹೂ ಗಿಡ, ಸಂಪಿಗೆ, ಜಾಜಿ ಬಳ್ಳಿಗಳು. ನೀರ ಹನಿಗಳನ್ನು ನಿರಾಯಸವಾಗಿ ತಮ್ಮ ತಮ್ಮ ಮನೆಗಳತ್ತ ತಿರುಗಿಸಿಕೊಂಡು ನೆಮ್ಮದಿಯ ಬದುಕ ಕಂಡವರು ಆಗಷ್ಟೇ ವಿದ್ಯುತ್ ಎಂಬ ಅನಿಷ್ಟ ಅವರ ಅಂಗಳಕ್ಕೂ ಕಾಲಿಟ್ಟಿತ್ತು. ಬಂದು ಹೋಗೋರಿಗೆ ಅವರ ತೋಟದ ಲಿಂಬೆ ಪಾನಕ ಅತಿ ಕಡಿಮೆ ದರದಲ್ಲಿ ವ್ಯವಸ್ಥೆ ಮಾಡಿದ್ದರು. ಈಗಂತೂ ಆರ್ಥಿಕತೆ ಮಗ್ಗಲು ಬದಲಿಸಿದ್ದರಿಂದ ಅಲ್ಲೊಂದು ಪುಟಾಣಿ ಅಂಗಡಿ ತಲೆ ಎತ್ತಿತ್ತು! ತರಹೇವಾರಿ ಬಾಟಲಿ ಪೇಯ ಮಾರಾಟಕ್ಕಿಟ್ಟಿದ್ದರು. ಪಟ್ಟಣದ ಎಲ್ಲಾ ವಸ್ತುಗಳು ಈಗಲ್ಲಿ ಲಭ್ಯ. ಪಯಣಿಗರು ಬಿಟ್ಟ ಕೊಟ್ಟೆ, ತಾಟು, ಪ್ಲೇಟುಗಳು ಈಗವರ ಅಂಗಳದಲಿ ತಬ್ಬಲಿಯಾಗಿ ಬಿದ್ದಿರುತ್ತವೆ.

ನೀರೂಡುವ ಬೃಹತ್ ಮರಗಳು
ಶೋಲಾ ಕಾಡುಗಳ ವಿಶಿಷ್ಟತೆ ಇರುವುದೇ ಇಲ್ಲಿ. ಎರಡು ಎರಿನ ನಡುವಿನ ಕಣಿವೆಯಲ್ಲಿ ಬೆಳೆವ ಮರಗಳು ಬಯಲಿನ ಜನರಿಗೆ ನೀರೂಡುವ ಬೃಹತ್ ಮೂಲಗಳು! ಪ್ರತೀ ಹುಲ್ಲು ಕುಡಿದ ನೀರನ್ನು ನಿಧ ನಿಧಾನವಾಗಿ ಕಣಿವೆಗೆ ತಳ್ಳುವ ಶೋಲಾ ಕಾಡುಗಳು ಬಯಲ ನೀರಿನ ತಾಯಿ ಬೇರು. ಹಾಗಾಗಿ ಶೋಲಾ ಅರಣ್ಯಗಳು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಪರಿಗಣಿತವಾಗಿದೆ. ಆದರೆ ಮಾನವನ ಅಪರಿಮಿತವಾದ ಆಸೆಗೆ ಬಲಿಯಾಗುತ್ತಲಿದೆ.
ಜಲಾಪಾತವಂತೂ ಅದ್ಭುತವಾಗಿತ್ತು. ಹಂತ ಹಂತವಾಗಿ ಹಲವು ಬಾರಿ ಧುಮುಕುವುದೆಂದು ಕೇಳಿದ್ದೆವು. ಆದರೆ ದಾರಿ ತಪ್ಪಿದ್ದರಿಂದ ಕೇವಲ 3 ಹಂತ ವೀಕ್ಷಿಸಿದೆವು. ನಮ್ಮ ತಂಡದಲ್ಲಿ ಹಲವರು ಜಲಪಾತವನ್ನು ಮೊದಲಬಾರಿಗೆ ಭೇಟಿಕೊಟ್ಟಿದ್ದರಿಂದ ರೋಮಾಂಚನಗೊಂಡು ನನ್ನನ್ನು ಆಲಂಗಿಸಿಕೊಂಡರು! ನೀರಲ್ಲಿ ಸ್ವಲ್ಪ ಹೊತ್ತು ಆಟವಾಡಿ ತಿಂಡಿ ತಿಂದೆವು. ಕಾನನದ ಏಕಾಂತದಲ್ಲಿ ಕುಳಿತು ಸ್ನೇಹಿತರೊಂದಿಗೆ ಭೋಜನಗೈಯುವುದು ವಿಶಿಷ್ಟ ಅನುಭವ ನೀಡಿತ್ತು. ಏಕಾಂತಕ್ಕೆ ಭಂಗ ತರುವಂತೆ ಆಗಾಗ ಹಕ್ಕಿಯೊಂದು ತನ್ನ ಇರುವಿಕೆ ತೋರಿಸುತಿತ್ತು.

ಅಂತೂ ಹಿಂಡ್ಲುಮನೆ ಜಲಪಾತದ ಚಾರಣ ಒಂದು ವಿಶಿಷ್ಟ ಘಟನೆಯಿಂದ ಜೀವನದಲ್ಲಿ ಮರೆಯಲಾಗದ ನೆನಪಾಗಿ ಉಳಿದು ಸದಾ ನೆನಪಿನಲ್ಲಿ ಉಳಿಯಿತು. ತಮ್ಮ ತಮ್ಮ ಕೆಲಸಗಳಲ್ಲಿ ಮುಳುಗಿದ ಗೆಳೆಯರು ಮತ್ತೆಂದೂ ಚಾರಣ ದಾರಿಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ!

ಶ್ರೀಧರ್ ಎಸ್. ಸಿದ್ದಾಪುರ ವೃತ್ತಿಯಲ್ಲಿ ಶಿಕ್ಷಕರು. ತಿರುಗಾಟ, ಅನ್ವೇಷಣೆ ಒಂದು ಹುಚ್ಚು. ಬರಹ, ಓದು ಅಚ್ಚುಮೆಚ್ಚು. ಹಕ್ಕಿ, ಜೇಡಗಳಲ್ಲಿ ವಿಶೇಷ ಆಸಕ್ತಿ. “ಅಲೆಮಾರಿಯ ಅಂತರಂಗ” ಇಪ್ಪತ್ತು ವರ್ಷದ ಅಲೆದಾಟ, ಅನುಭವಗಳ ಪ್ರವಾಸ ಕಥನ.
