ನಾವು ಮಾನವೀಯತೆಯಿಂದ ಯೋಚಿಸುವುದನ್ನು ಹಳ್ಳಿಯಲ್ಲಿ ಬೇರೆಯ ತರಹವೆ ನೋಡುತ್ತಾರೆ! ನಾವು ಕೇಳದೆ ಅವರಿಗೆ ಹೀಗೆ ಬೋನಸ್‌ಗಳನ್ನು ಕೊಟ್ಟರೆ ನಾವು ಅವರಿಗೆ ತುಂಬಾ ಹಣವಂತರ ಹಾಗೆ ಕಾಣುತ್ತೇವೆ. ಅದು ನಮಗೆ ಆಮೇಲಾಮೇಲೆ ನಿಧಾನವಾಗಿ ಅರ್ಥವಾಗತೊಡಗಿತು! ಅಲ್ಲಿ ಹೇಗಿರಬೇಕು ಅಂದರೆ, ತುಂಬಾ ಚೌಕಾಶಿ ಮಾಡಬೇಕು, ಒಂದು ರೂಪಾಯಿನೂ ಕಾಡಿಸಿ ಕಾಡಿಸಿ ಕೊಡಬೇಕು, ಸಾಲವನ್ನಂತೂ ಮರಳಿ ಕೂಡಲೇ ಕೂಡದು ಇತ್ಯಾದಿಗಳು… ನನಗೆ ಇದನ್ನೆಲ್ಲ ಮಾಡಲು ಮನಸ್ಸು ಒಪ್ಪುತ್ತಿರಲಿಲ್ಲ. ಹೀಗಾಗಿ ನಮ್ಮ ಕೈಲಿ ಸಾಧ್ಯವಾಗುತ್ತಿದ್ದ ಕೆಲವು ಬದಲಾವಣೆಗಳನ್ನು ಮಾಡಿಕೊಂಡೆ.
ಗುರುಪ್ರಸಾದ್‌ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣ

ಅವತ್ತು ಹೊಲಕ್ಕೆ ಬರುವ ಮುಂಚೆ ನಾವು ಮೂವರೂ ಸೇರಿ ಶಂಭುಲಿಂಗ ಹೆಗಡೆ ಅವರ ಜೊತೆಗೆ ಒಂದು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದೆವು. ಬೆಳೆಸಿರಿ ರೈತ ಬಳಗದ ಕನಸಿಗೆ ಇದೊಂದು ನಾಂದಿ ಅಂತ ಅನ್ನಿಸಿತ್ತು. ವಿನೋದ ಮೊಟ್ಟ ಮೊದಲ ಬಾರಿ ಹೊಲಕ್ಕೆ ಇಳಿದಿದ್ದರು. ಅವರ ಹೆಸರಿನಲ್ಲಿ ಬೇವಿನ ಸಸಿಯನ್ನು ನೆಟ್ಟು ಆಗಿತ್ತು. ನಾನು ನಾಗಣ್ಣ ಸೇರಿ ಹಾಕಿದ್ದ ಎರಡೂ ಗಿಡಗಳು ಚಿಗುರಿದ್ದವು. ನಾನು ಅಂದುಕೊಂಡಿದ್ದ ಕನಸಿನ ಬಳಗದ ಎಲ್ಲರೂ ಒಟ್ಟಿಗೆ ಇದ್ದೆವು!

ಅಡಿಕೆ ಸಸಿಗಳ ನೆಟ್ಟಿದುದರ ಜೊತೆಗೆ ಒಂದು ಚಿಕ್ಕ ಭಾಗದಲ್ಲಿ ಕೆಲವು ಕಾಯಿಪಲ್ಲೆ ಬೆಳೆಯುವ ವಿಚಾರವನ್ನು ಪ್ರಸ್ತಾಪಿಸಿದ್ದೆ. ಆದರೆ ಅದಕ್ಕಾಗಿ ಆ ಸ್ಥಳದಲ್ಲಿ ಕೆಲವು ಮಾರ್ಪಾಡು ಮಾಡಬೇಕಿತ್ತು. ಅಲ್ಲಿ ಕೆಲವು ಕಾಲುವೆಗಳನ್ನು ಮಾಡಿ ಅದರ ಮಣ್ಣಿನಿಂದ ಎತ್ತರಕ್ಕೆ ಮಣ್ಣಿನ ಹಾಸಿಗೆ ಮಾಡಿ ಅದರ ಮೇಲೆ ತರಕಾರಿ ಬೆಳೆಯುವುದು ನಮ್ಮ ಯೋಜನೆ ಆಗಿತ್ತು. ಇವೆಲ್ಲವೂ ನಮ್ಮ ಮಟ್ಟಿಗೆ ಪ್ರಯೋಗಗಳೇ. ಪುಸ್ತಕಗಳಲ್ಲಿ ಓದಿದ್ದನ್ನು ಇಲ್ಲಿ ಅಳವಡಿಸುತ್ತಿದ್ದೆ. ಇದರಿಂದ ಒಂದೇ ಒಂದು ಬೀನ್ಸ್ ಬಂದರೂ ನಾವು ಖುಷಿಯಲ್ಲಿ ನಿದ್ದೆಗೆಡುತ್ತಿದ್ದೆವು. ನಾಗಣ್ಣ ಅವರ ಗೊರಕೆಯಿಂದ ನಿದ್ದೆಗೆಡುವುದಕ್ಕೂ ಇದಕ್ಕೂ ತುಂಬಾ ವ್ಯತ್ಯಾಸವಿದೆ!

IT ಯಲ್ಲಿ AC ಯ ತಂಪಿನಲ್ಲಿ ಬೆವರು ಇಂಗಿಸಿದ್ದ ನಾವುಗಳು ಕಾಲುವೆಗಳನ್ನು ಹೊಡೆಯುವಷ್ಟು ಸಧೃಡರು ಆಗಿರಲಿಲ್ಲ. ಅದಕ್ಕಾಗಿ ನಮಗೊಬ್ಬ ಗಟ್ಟಿ ಆಳು ಬೇಕಿತ್ತು. ನಾನು ಮುಂದೆ ಐವತ್ತು ಕೇಜಿ ಚೀಲ ಎತ್ತುವಷ್ಟು ಗಟ್ಟಿ ಆಗಬೇಕು ಸರ್ ಅಂತ ನಾಗಣ್ಣ ಹೇಳೋರು. ತುಂಬಾ ಉತ್ಸಾಹಿ ಅವರು. ಹಾಗೆ ಆಗುವುದಕ್ಕೆ ಪ್ರಯತ್ನವನ್ನೂ ಮಾಡುತ್ತಿದ್ದರು. ಆಯ್ತು ಆಯ್ತು ಆಗೀರಂತೆ… ಅಂತ ನಾನು ಸಮಾಧಾನ ಮಾಡುತ್ತಿದ್ದೆ.

“ನಿಮ್ಮ ಕೈಲಿ ಎಂತ ಆಗ್ತಿಲ್ಲೆ.. ನೀವೆಲ್ಲ ಪಚ್ಚ ಬಾಳೆ ಹಣ್ಣುಗಳು ..” ಅಂತ ರಾಮಚಂದ್ರ ಮಾವ ತಮ್ಮ ಬೊಚ್ಚು ಬಾಯಲ್ಲಿ ಪಕ ಪಕ ಅಂತ ನಗುತ್ತಿದ್ದರು. ಅವರ ತಮಾಷೆ ನಮಗೆ ಕುಹಕ ಅನಿಸುತ್ತಿತ್ತು. ನಿಮ್ಮ ಕೈಯಲ್ಲಿ ಆಗದು ಅಂತಲೆ ಅವರು ಯಾವಾಗಲೂ ಹೇಳೋರು. ನಾವು ಏನೇ ಮಾಡ್ತೀವಿ ಅಂದರೂ ಅದು ಸಾಧ್ಯ ಅಂತ ಅವರು ಹೇಳಿದ ಒಂದೂ ಉದಾಹರಣೆ ಇಲ್ಲ. ಅದೇ ತಮ್ಮ ವಿಷಯಕ್ಕೆ ಬಂದಾಗ, ನಾನು ತುಂಬಾ ಹಿಂದೆ ಇಲ್ಲಿ ಹೊಲ ಮಾಡುವಾಗ ಎಷ್ಟು ಕಷ್ಟ ಅನುಭವಿಸಿ ಜಿದ್ದಿಗೆ ಬಿದ್ದು ಇಂತಹ ಒಂದು ತೋಟ ಮಾಡಿದೆ ಅನ್ನುತ್ತಿದ್ದರು.

ನೀವು ಜಿದ್ದಿಗೆ ಬಿದ್ದ ಹಾಗೆ ನಾವು ಕೂಡ ಜಿದ್ದಿಗೆ ಬಿದ್ದು ತೋಟ ಮಾಡಬಾರದೇ ಅಂದರೆ ಅದಕ್ಕೊಂದು ಬೇರೆ ಸಿದ್ಧಾಂತವನ್ನು ಹೇಳುತ್ತಿದ್ದರು. ಶಂಭುಲಿಂಗ ಮಾವ ಎಷ್ಟೊಂದು ಉತ್ಸಾಹ ತುಂಬುತ್ತಿದ್ದರೋ ಇವರು ಅಷ್ಟೇ ಕಾಲೆಳೆಯುತ್ತಿದ್ದರು! ಒಟ್ಟಿನಲ್ಲಿ ಇಬ್ಬರಿಂದಲೂ ನಾವು ಇನ್ನಷ್ಟು ಉತ್ಸಾಹ ಪಡೆಯುವುದನ್ನು ರೂಢಿಸಿಕೊಂಡೆವು. ನಾನು ಅವರ ಜೊತೆ ವಾದಿಸುವುದನ್ನು ಕೂಡ ಕಡಿಮೆ ಮಾಡುತ್ತಾ ಹೋದೆ. ಅವರು ಹೇಳಿದ್ದಕ್ಕೆ ಹೂಂ ಅಂದರೆ ನಮ್ಮದೇನು ಗಂಟು ಖರ್ಚಾಗುತ್ತಿತ್ತು?!

ಆದರೆ ನಮಗೆ ಪಚ್ಚ ಬಾಳೆ ಅಂತ ಅವರು ಹೇಳಿದ್ದು ಸತ್ಯವೂ ಆಗಿತ್ತು. ಹೊಲಕ್ಕೆ ಹೋಗಿ ದುಡಿಯಲು ಶುರು ಮಾಡಿದಾಗಲೆ ನಾವು ಎಷ್ಟು ಗಟ್ಟಿ ಅಂತ ತಿಳಿಯುತ್ತದೆ. ತುಂಬಾ ಹಿಂದೆ ಅಮೇರಿಕೆಯಿಂದ ಒಂದು ತಿಂಗಳ ಮಟ್ಟಿಗೆ ಭಾರತಕ್ಕೆ ಬಂದಾಗ ಆಗ ಖಾಲಿ ಇದ್ದ ನನ್ನ ಹೊಲದಲ್ಲಿ ಒಂದಿಷ್ಟು ಮಾವಿನ ಸಸಿಗಳನ್ನು ಹಚ್ಚಿಸಿದ್ದೆ. ಸುಮಾರು ಆರು ವರ್ಷಗಳ ಹಿಂದೆ ಇರಬೇಕು. ಆಳುಗಳು ತೆಗ್ಗು ತೆಗೆದು ಗಿಡ ಹಚ್ಚುವಾಗ ನನಗೆ ಅವರ ಜೊತೆಗೆ ಅರ್ಧ ಗಂಟೆ ಕೂಡ ಬಿಸಿಲಲ್ಲಿ ನಿಲ್ಲಲು ಆಗಿರಲಿಲ್ಲ.

ಆದರೆ ಈಗ ಅದಕ್ಕಿಂತ ಹೆಚ್ಚು ಸುಧಾರಿಸಿದ್ದೆ. ಬಿಸಿಲಲ್ಲಿ ಕೆಲಸ ಮಾಡುತ್ತಾ ಇನ್ನೂ ಗಟ್ಟಿಯಾಗುವ ಪಣ ತೊಟ್ಟಿದ್ದೆ. ಆದರೂ ಸಧ್ಯಕ್ಕೆ ಸಹಾಯಕ್ಕೆ ಅಂತ ಒಬ್ಬ ಗಟ್ಟಿ ಆಳು ನಮಗೆ ಬೇಕಿತ್ತು. ಅದೂ ಅಲ್ಲದೆ ನಾನು ಹಾಗೂ ವಿನೋದ್ ಬೆಂಗಳೂರಿಗೆ ಹೋದರೆ ನಾಗಣ್ಣ ಒಬ್ಬರಿಗೆ ಕೆಲಸ ಮಾಡಲು ಕಷ್ಟ ಆಗುತ್ತಿತ್ತು. ಅವರಿಗೊಬ್ಬ ಜೊತೆಗೆ ಬೇಕಿತ್ತು.

“ಇಲ್ಲೊಬ್ಬ ಶ್ಯಾಮ ಹೇಳಿ ಇದ್ದಾ ನೋಡು.. ತುಂಬಾ ಒಳ್ಳೆ ಪೋರ. ದಿನಗೂಲಿ ಲೆಕ್ಕಕ್ಕೆ ಬರ್ತಾ.. ಕೆಳಲಾ?” ಅಂದರು ಅತ್ತೆ (ರಾಮಚಂದ್ರ ಮಾವನ ಶ್ರೀಮತಿ). ಅವರು ನಮ್ಮ ಬಗ್ಗೆ ತುಂಬಾ ಕಾಳಜಿ ವಹಿಸುತ್ತಿದ್ದರು. ನಾಗಣ್ಣನನ್ನು ತಮ್ಮ ಮಗನೇ ಏನೋ ಅನ್ನುವಷ್ಟು ಅಕ್ಕರೆ ತೋರುತ್ತಿದ್ದರು. ಅವರೂ ಕೂಡ ಗುಂಡಗೆ ಅವರ ಮಗನ ತರಹವೇ ಇದ್ದಾರಲ್ಲ!

ಆಗಲಿ ಅಂತ ಅವನನ್ನು ಕರೆಸಿದೆವು. ತೆಳ್ಳಗಿನ ಕಟ್ಟುಮಸ್ತು ಮೈಕಟ್ಟು, ಹೆಸರಿಗೆ ತಕ್ಕ ಶ್ಯಾಮಲ ವರ್ಣದ ಶ್ಯಾಮ ತನ್ನ ಹೆಂಡತಿಯೊಂದಿಗೆ ನಮ್ಮನ್ನು ಭೇಟಿಯಾಗಲು ಬಂದ. ಅದೇಕೋ ತಲೆ ತಗ್ಗಿಸಿಯೆ ಮಾತಾಡುತ್ತಿದ್ದ. ಮಾತಿನಲ್ಲಿ ತುಂಬಾ ಸೌಮ್ಯ ಅನಿಸಿದ. ಅವರು ಕಣ್ಣೆತ್ತಿ ಕೂಡ ನೋಡುವುದಿಲ್ಲ ಅಷ್ಟು ಒಳ್ಳೆಯವರು ಅಂತ ಅವನ ಹೆಂಡತಿ certificate ಕೊಟ್ಟಳು.

“ನೀವು ಎದುರಿಗೆ ಇದ್ದಾಗ ಮಾತ್ರ ಹಂಗೆನ್ರಿ?” ಅಂತ ತಮಾಷೆ ಮಾಡಿದೆ.

ದಿನಕ್ಕೆ ೩೫೦ ರ ಕೂಲಿಗೆ ಅವನು ಕೆಲಸಕ್ಕೆ ಒಪ್ಪಿಕೊಂಡ. ನಾಳೆಯಿಂದ ಬನ್ನಿ ಶ್ಯಾಮಣ್ಣ ಅಂದೆ. ನಮ್ಮ ಹೊಲದ ಕೆಲಸ ಮಾಡುವವ ಆದರೂ ನಾನು ಬಹುವಚನದಲ್ಲಿಯೇ ಸಂಬೋಧಿಸುತ್ತಿದ್ದೆ. ನನ್ನ ಶಿಷ್ಯಂದಿರು ಕೂಡ ಹಾಗೆಯೇ. ನಾವೂ ಎಂದಿಗೂ ಅವನನ್ನು ಆಳಾಗಿ ನೋಡಲೇ ಇಲ್ಲ. ನಮ್ಮ ಹೊಲದ ಹತ್ತಿರ ಹಾವುಗಳು ಜಾಸ್ತಿ ಇದ್ದವು. ಹೀಗಾಗಿ ನಾವೆಲ್ಲ ಮೊಣಕಾಲವರೆಗೆ ಮುಚ್ಚುವ ಉದ್ದನೆಯ gum shoes ಕೊಂಡಿದ್ದೆವು. ಶ್ಯಾಮನಿಗೆ ಕೂಡ ಒಂದು ಕೊಡಿಸಿದ್ದೆವು. ಅವನೂ ಮನುಷ್ಯನೇ ಅಲ್ಲವೇ!

ನಾವು ಆಗ ಅಂದುಕೊಂಡಿದ್ದು ಅವನೇ ನಮ್ಮ ಶಾಶ್ವತ employee ಅಂತ. ಬೆಂಗಳೂರಿಗರು ಅದರಲ್ಲೂ IT ಯಲ್ಲಿ ಕೆಲಸ ಮಾಡಿದವರು ಯೋಚನೆ ಮಾಡುವ ಪರಿ ಇರಬಹುದು. ಆದರೆ ಹೀಗೆ ನಾವು ಮಾನವೀಯತೆಯಿಂದ ಯೋಚಿಸುವುದನ್ನು ಹಳ್ಳಿಯಲ್ಲಿ ಬೇರೆಯ ತರಹವೆ ನೋಡುತ್ತಾರೆ! ನಾವು ಕೇಳದೆ ಅವರಿಗೆ ಹೀಗೆ ಬೋನಸ್‌ಗಳನ್ನು ಕೊಟ್ಟರೆ ನಾವು ಅವರಿಗೆ ತುಂಬಾ ಹಣವಂತರ ಹಾಗೆ ಕಾಣುತ್ತೇವೆ. ಅದು ನಮಗೆ ಆಮೇಲಾಮೇಲೆ ನಿಧಾನವಾಗಿ ಅರ್ಥವಾಗತೊಡಗಿತು! ಅಲ್ಲಿ ಹೇಗಿರಬೇಕು ಅಂದರೆ, ತುಂಬಾ ಚೌಕಾಶಿ ಮಾಡಬೇಕು, ಒಂದು ರೂಪಾಯಿನೂ ಕಾಡಿಸಿ ಕಾಡಿಸಿ ಕೊಡಬೇಕು, ಸಾಲವನ್ನಂತೂ ಮರಳಿ ಕೂಡಲೇ ಕೂಡದು ಇತ್ಯಾದಿಗಳು… ನನಗೆ ಇದನ್ನೆಲ್ಲ ಮಾಡಲು ಮನಸ್ಸು ಒಪ್ಪುತ್ತಿರಲಿಲ್ಲ. ಹೀಗಾಗಿ ನಮ್ಮ ಕೈಲಿ ಸಾಧ್ಯವಾಗುತ್ತಿದ್ದ ಕೆಲವು ಬದಲಾವಣೆಗಳನ್ನು ಮಾಡಿಕೊಂಡೆ. ಮುಂಗಡ ಕೊಡುವುದನ್ನು ನಿಲ್ಲಿಸಿ ಕೆಲಸವಾದ ಮೇಲೆ ದುಡ್ಡು ಕೊಡುವುದನ್ನು ರೂಢಿಸಿಕೊಂಡೆ. ಪುಕ್ಸಟ್ಟೆ ಏನನ್ನೂ ಕೊಡುತ್ತಿರಲಿಲ್ಲ, ಸ್ವಲ್ಪನಾದರೂ ಚೌಕಾಶಿ ಮಾಡಲು ಕಲಿತೆ… ಇತ್ಯಾದಿ.

ಹೆಂಡತಿಯ ಎದುರು ಕಣ್ಣೆತ್ತಿ ಕೂಡ ನೋಡದ ಶ್ಯಾಮ, ನಮ್ಮೊಟ್ಟಿಗೆ ಹೊಲಕ್ಕೆ ಬಂದ ದಿನದಿಂದ ನಮ್ಮನ್ನು ಸಿಕ್ಕಾಪಟ್ಟೆ ಮಾತಿಗೆ ಎಳೆಯತೊಡಗಿದ. ಅವನಿಗೆ ನಾವೆಲ್ಲ ಬಂದಿದ್ದು ಯಾಕೆ ಎಂಬ ಕುತೂಹಲ ಇತ್ತು. ಬೆಂಗಳೂರಿನಲ್ಲಿ ಏನು ಮಾಡುತ್ತಿದ್ದೇವೆ ಎಂಬ ಎಲ್ಲಾ ವಿಚಾರಗಳೂ ಅವನಿಗೆ ಬೇಕಿತ್ತು. ಒಂದೊಂದಾಗಿ ಕೇಳುತ್ತಿದ್ದ.

ಇವೆಲ್ಲವೂ ನಮ್ಮ ಮಟ್ಟಿಗೆ ಪ್ರಯೋಗಗಳೇ. ಪುಸ್ತಕಗಳಲ್ಲಿ ಓದಿದ್ದನ್ನು ಇಲ್ಲಿ ಅಳವಡಿಸುತ್ತಿದ್ದೆ. ಇದರಿಂದ ಒಂದೇ ಒಂದು ಬೀನ್ಸ್ ಬಂದರೂ ನಾವು ಖುಷಿಯಲ್ಲಿ ನಿದ್ದೆಗೆಡುತ್ತಿದ್ದೆವು. ನಾಗಣ್ಣ ಅವರ ಗೊರಕೆಯಿಂದ ನಿದ್ದೆಗೆಡುವುದಕ್ಕೂ ಇದಕ್ಕೂ ತುಂಬಾ ವ್ಯತ್ಯಾಸವಿದೆ!

“ಸರ್ ಅಲ್ಲಿ ಏನ್ ಮಾಡ್ತೀರಿ ನೀವು?”

“ಅಲ್ಲಿನೂ farming ಮಾಡ್ತೀವಿ, ಮಣ್ಣು ಇಲ್ಲದೇನೆ ಬೇಳಿತೀವಿ..”

“ಹೌದ್ರೀ!? ಅದು ಹೆಂಗ ಸರ s..” ಅಂತ ಅಚ್ಚರಿಯನ್ನು ತೋರಿಸುವವನಂತೆ ಕೇಳುತ್ತಿದ್ದನಾದರೂ ಅವನ ಮೂಲ ಉದ್ದೇಶ ನಮ್ಮ ವರಮಾನದ ಕುರಿತು ತಿಳಿಯುವುದಾಗಿತ್ತು!

“ಪಾಲಕ್ ಎಷ್ಟು ಬರುತ್ತೆ ಸರ್ ತಿಂಗಳಿಗೆ.. ಅದನ್ನ ಎಷ್ಟಕ್ಕ ಮಾರ್ತೀರಿ..” ಅಂತೆಲ್ಲ ಕೇಳುತ್ತ ಮನಸ್ಸಿನಲ್ಲೇ ಲೆಕ್ಕ ಹಾಕುತ್ತಿದ್ದ.

ನನಗೆ ಅವನು ಇಷ್ಟೆಲ್ಲ ಕೇಳುವಾಗ ಸ್ವಲ್ಪ ಕೋಪ ಬರುತ್ತಿತ್ತು. “ಅದು ಎಷ್ಟೋ ಹೆಚ್ಚು ಕಮ್ಮಿ ಬರತೈತಿ ಬಿಡ್ರಿ.. ಈ ಕೆಲಸ ಮುಗಸೋಣ..” ಅಂತ ಅವನನ್ನು divert ಮಾಡುತ್ತಿದ್ದೆ.

“ಹೂಂ ರಿ ಸರ್ರ…” ಅಂತ ಕೆಲಸಕ್ಕೆ ತೊಡಗುತ್ತಿದ್ದ, ಮತ್ತೆ ಕೆಲ ಸಮಯದಲ್ಲಿ ಇದೆ ರೀತಿಯ ಪ್ರಶ್ನೆ ಕೇಳೋನು…

ನಾನು ಇಲ್ಲದಾಗ ನಾಗಣ್ಣ ಅವರ ಬಳಿ ವಿಷಯ ಕೇಳುತ್ತಿದ್ದ.. ನನ್ನ ಬಳಿ ಅವರ ವಿಷಯ.. ಅವರ ಬಳಿ ನನ್ನ ವಿಷಯ ಹೀಗೆ.. ಆದರೂ ಕೆಲಸದ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯ ಇರಲಿಲ್ಲ. ಚೊಕ್ಕಾಗಿ ಹೇಳಿದ ಕೆಲಸವನ್ನು ಮಾಡುತ್ತಿದ್ದ. ಹೀಗಾಗಿ ಅವನನ್ನು ಸಹಿಸಿಕೊಂಡೆ. ನಾಗಣ್ಣರ ಜೊತೆಗೆ ಅವನ ಸಲಿಗೆ ಸ್ವಲ್ಪ ಹೆಚ್ಚಾಗಿತ್ತು. ಅವರು ನನ್ನಷ್ಟು ಕೂಡ ಸಂಶಯ ಪಿಶಾಚಿ ಅಲ್ಲ. ಹೀಗಾಗಿ ಹೃದಯ ಪೂರ್ತಿಯಾಗಿ ಎಲ್ಲರನ್ನೂ ಹಚ್ಚಿಕೊಳ್ಳುತ್ತಿದ್ದರು. ನನ್ನ ಹಿಂದಿನ ಕಟು ಅನುಭವಗಳಿಂದ ಹಳ್ಳಿಯಲ್ಲಿ ಎಲ್ಲರ ಮೇಲೂ ನನ್ನ ಒಂದು ಸಣ್ಣ ಸಂಶಯ ಇದ್ದೇ ಇರುತ್ತಿತ್ತು. ಯಾರನ್ನೂ ಪೂರ್ತಿಯಾಗಿ ನಂಬುತ್ತಿರಲಿಲ್ಲ. ಹಿಂದೆಲ್ಲ ನಂಬಿ ಕೆಟ್ಟಿದ್ದೆನಲ್ಲ! ಹಾಗಂತ ಎಲ್ಲರೂ ಹಾಗಲ್ಲ ಅಂತ ಗೊತ್ತಿದ್ದರೂ ಆ ಸಂದರ್ಭವೇ ಹಾಗಿತ್ತು.

ಅವನು ದಿನವೂ ಒಂಬತ್ತಕ್ಕೆ ಬರುತ್ತಿದ್ದ. ಒಂದು ಗಂಟೆಗೆ ಊಟಕ್ಕೆ ಹೋಗುತ್ತಿದ್ದ. ಮತ್ತೆ ಬಂದನೆಂದರೆ ಐದು ಗಂಟೆಯವರೆಗೆ ಇರುತ್ತಿದ್ದ. ಹೀಗೆ ಶ್ಯಾಮ ಬಂದ ಮೇಲೆ ನಮ್ಮ ಕೆಲಸಕ್ಕೆ ಒಂದಿಷ್ಟು ವೇಗ ಬಂತು. ಅದೇ ಸಮಯದಲ್ಲಿ ನಾನು ಬೆಂಗಳೂರಿಗೆ ಹೋಗುವ ಪ್ರಸಂಗ ಬಂತು. ಹಳ್ಳಿಯಲ್ಲಿ ನಾಗಣ್ಣ ಒಬ್ಬರೇ ಇದ್ದರು. ಜೊತೆಗೆ ಹೊಲದಲ್ಲಿ ಅವರಿಗೆ ಶ್ಯಾಮನೇ ಸಂಗಾತಿ.

ಎಷ್ಟೋ ವಿಷಯಗಳಲ್ಲಿ ಅವರು ನನ್ನನ್ನು ಫೋನ್ ಮಾಡಿ ವಿಚಾರಿಸುತ್ತಿದ್ದರು. ಸರ್ ಹೀಗೆ ಮಾಡಬೇಕು ಅಂತ ಶ್ಯಾಮ ಹೇಳ್ತಾ ಇದಾರೆ ಹಾಗೆ ಮಾಡಬಹುದಾ..

ಆದರೆ ಅವರು ಫೋನ್ ಮಾಡಿದಾಗ ತುಂಬಾ suspense ಇರುತ್ತಿತ್ತು. ಅವರು ಮೊಟ್ಟ ಮೊದಲು “ಸರ್ ಒಂದ್ ವಿಷಯ…….” ಅಂತ ಒಂದು ನಿಮಿಷದ pause ಕೊಡುತ್ತಿದ್ದರು ನೋಡಿ. ಅದು ನನ್ನ ಹೃದಯದ ಬಡಿತವನ್ನು ಒಂದ್ ಕ್ಷಣ ನಿಲ್ಲಿಸುತ್ತಿತ್ತು! ಆದರೆ ಯಾವಾಗಲೂ ವಿಷಯಗಳು ಗಂಭೀರ ಆಗಿರುತ್ತಿರಲಿಲ್ಲ. ಹಾಗಂತ ನಿರ್ಲಕ್ಷ್ಯ ಮಾಡುವಂತೆಯೂ ಇಲ್ಲ.

ಹೀಗೆ ಒಂದು ದಿನ ಫೋನ್ ಮಾಡಿ ಸರ್ ಒಂದು ವಿಷಯ ಅಂತ ನಿಧಾನ ದನಿಯಲ್ಲಿ ಹೇಳಿದಾಗ ನಾನು ಮೈಯೆಲ್ಲಾ ಕಿವಿಯಾಗಿಸಿ ಕೇಳಿದೆ.. ಏನು ಬೇಗ ಹೇಳಿ ನಾಗ್…

“ಪಕ್ಕದ ಹೊಲದವರು ಬಂದಿದ್ರು… ಸರ್… (ಮತ್ತೆ ದೊಡ್ಡ pause!)… ನಮ್ಮ ಬೋರಿನಲ್ಲಿ ಅವರ ಪಂಪ್ ಇದೆಯಂತೆ ಅದರ ದುಡ್ಡು ಕೊಡಬೇಕಂತೆ ನೀವು… ”

ನಮ್ಮ ಪಕ್ಕದವನಿಗೆ ತುಂಬಾ ಹಿಂದೆ ನನ್ನ ಹೊಲ ಮಾಡಲು ಕೊಟ್ಟಿದ್ದೆ. ಆಗ ನಾನು ಕೊರೆಸಿದ್ದ ಕೊಳವೆ ಬಾವಿಯಲ್ಲಿ ಅವನು ತನ್ನ ಪಂಪ್ ಇಳಿಸಿ ನೀರಿನ ಯಥೇಚ್ಚ ದುರ್ಬಳಕೆ ಮಾಡಿ, ಮುಂದೆ ನಾನು ಅದರ ಕನೆಕ್ಷನ್ ತಪ್ಪಿಸಿ ಆಗಿತ್ತು. ಅದೆಲ್ಲ ಆದರೂ ಅವನು ತನ್ನ ಪಂಪ್ ಅಲ್ಲಿಯೇ ಬಿಟ್ಟಿದ್ದ, ಯಾಕೆಂದರೆ ಅದು ಒಳಗಡೆ ಸಿಕ್ಕಿಕೊಂಡಿತ್ತು, ಮೇಲೆತ್ತಲು ಆಗದಂತೆ. ಅವನಿಗೆ ಎಲ್ಲಿಯವರೆಗೆ ನೀರು ಕೊಡುತ್ತಿದ್ದೇನೋ ಅಲ್ಲಿಯತನಕ ಅವನು ತಲೆ ಕೆಡಿಸಿಕೊಂಡಿರಲಿಲ್ಲ. ಈಗ ನೀರು ನಿಲ್ಲಿಸಿದ ಮೇಲೆ ನನ್ನ ಪಂಪ್ ದುಡ್ಡು ಕೊಡಿ ಅಂತ, ಅದೂ ನಾನಿಲ್ಲದ ಘಳಿಗೆಯಲ್ಲಿ ಬಂದು ಕೇಳಿದ್ದ. ಅವನಿಗೆ ಹೊಲ ಗುತ್ತಿಗೆ ಕೊಟ್ಟಾಗ ಇಂತಿಷ್ಟು ದುಡ್ಡು ಕೊಡಬೇಕೆಂಬ ಕರಾರು ಆಗಿತ್ತು. ಆ ದುಡ್ಡನ್ನು ಅವನು ಕೂಡಲೇ ಇಲ್ಲ. ಅದೇ ದುಡ್ಡಿಗೆ ಪಂಪ್ ನನ್ನದು ಅಂತ ಯಾವಾಗಲೋ ನಾನು ಹೇಳಿ ಅಲ್ಲಿಗೆ ಆ ಲೆಕ್ಕಾಚಾರ ಮುಗಿಸಿದ್ದೆ. ಏನಾದರೂ ಸರಿ ನೀರು ಸಿಕ್ಕೆ ಸಿಗುತ್ತದೆ ಅಂತ ಅವನು ಸುಮ್ಮನಿದ್ದ ಅನ್ಸುತ್ತೆ. ಈಗ..!

“ನನ್ನ ಜೊತೆ ಮಾತಾಡೋಕೆ ಹೇಳಿ.. ನೀವು ತಲೆ ಕೆಡಿಸಿಕೊಬೇಡಿ ಅಂತ ನಾಗಣ್ಣ ಅವರಿಗೆ ಹೇಳಿದೆ..” ಅವನು ಮತ್ತೆ ಮತ್ತೆ ಈ ವಿಷಯದಲ್ಲಿ ಕಿರುಕುಳ ಕೊಡುತ್ತಾನೆ ಅಂತ ನನಗೆ ಮನದಟ್ಟಾಗಿತ್ತು. ಅಲ್ಲಿಗೆ ಗ್ರಾಮ ಡ್ರಾಮಾಯಣ ಶುರುವಾಗಿತ್ತು!

(ಮುಂದುವರಿಯುವುದು…)