ಮೊದಲನೇ ಮತ್ತು ಎರಡನೆ ಪ್ರಾಪಂಚಿಕ ಮಹಾಯುದ್ಧಗಳಲ್ಲಿ ಬ್ರಿಟನ್ನಿನ ಮತ್ತು ಅವರ ಮಿತ್ರರಾಷ್ಟ್ರಗಳ ಪರವಾಗಿ ನಿಂತು ಪಾಲ್ಗೊಂಡಿದ್ದ ಆಸ್ಟ್ರೇಲಿಯದ ಸೈನಿಕ ಕುಟುಂಬಗಳಿಗೆ ದೇಶದೊಳಗೆ ಅನೇಕ ರೀತಿಗಳಲ್ಲಿ ಮನ್ನಣೆ ಸಂದಿದೆ. ಆದರೆ ಅವರಲ್ಲಿ ಬಹುತೇಕರು ಭಾಗ ಬಿಳಿಯರು. ಮಿಕ್ಕವರಿಗೆ ಅದೇ ಮಟ್ಟದಲ್ಲಿ ಮನ್ನಣೆ, ಗುರುತು, ಪರಿಗಣನೆ ಸಿಗಲಿಲ್ಲ. ಆ ಮಿಕ್ಕವರಲ್ಲಿ ಮುಖ್ಯವಾಗಿ ಸೇರಿದವರು ಆಸ್ಟ್ರೇಲಿಯನ್ ಅಬೊರಿಜಿನಲ್ ಜನರು, ಸ್ವಲ್ಪಮಟ್ಟಿಗೆ ಬ್ರಿಟಿಷರ ವಸಾಹತು ಸ್ಥಾಪನೆಯಲ್ಲಿ ಅವರೊಡನೆ ಬಂದಿದ್ದ ಇತರೆ ವಸಾಹತು ದೇಶಗಳ ಜನರು. ಅವರಲ್ಲಿ ಅನಾಮಧೇಯರಾದ ಅಗೋಚರ ಮಕ್ಕಳು ಇದ್ದರು.
ಡಾ. ವಿನತೆ ಶರ್ಮಾ ಬರೆಯುವ ‘ಆಸ್ಟ್ರೇಲಿಯಾ ಪತ್ರ’ 

 

ನವೆಂಬರ್ ೧೧, ಗಂಟೆ ೧೧ ಮತ್ತು ಒಂದು ನಿಮಿಷ ಮೌನ. ಮೊದಲ ವಿಶ್ವ ಮಹಾಯುದ್ಧದಲ್ಲಿ ಪ್ರಾಣಕೊಟ್ಟ ಸೈನಿಕರನ್ನು, ಸೈನ್ಯದ ಇತರೆ ಸಿಬ್ಬಂದಿಯನ್ನು ನೆನೆಯುತ್ತಾ ಗೌರವ ಸಲ್ಲಿಸುವ ಈ ದಿನವನ್ನು Remembrance Day ಅಥವಾ Poppy Day ಎಂದು ಹೆಸರಿಸಲಾಗಿದೆ. ಬ್ರಿಟನ್ನಿನ ರಾಜ ಐದನೇ ಜಾರ್ಜ್ ೧೯೧೯ ನೇ ವರ್ಷದಲ್ಲಿ ಈ ಆಚರಣೆಯನ್ನು ಆರಂಭಿಸಿದ್ದು. ಕಾಮನ್‌ವೆಲ್ತ್ (Commonwealth) ಒಕ್ಕೂಟಕ್ಕೆ ಸೇರಿದ ಎಲ್ಲಾ ದೇಶಗಳಲ್ಲಿ ಹೀಗೆ ಒಂದು ನಿಮಿಷದ ಮೌನವನ್ನು ಆಚರಿಸುತ್ತಾರೆಂದು ಮಾಹಿತಿಯಿದೆ. ಈ ಮೌನಾಚರಣೆಯನ್ನು ನಾನು ಮಾಡಿರುವುದು ಇಂಗ್ಲೆಂಡಿನಲ್ಲಿ ಮತ್ತು ಆಸ್ಟ್ರೇಲಿಯಾದಲ್ಲಿ.

ಇಂಗ್ಲೆಂಡಿನಲ್ಲಿ ಅನೇಕ ಜನರು ಅಕ್ಷರಶಃ ನಿಜವಾದ poppy ಹೂವನ್ನು ಧರಿಸುತ್ತಾರೆ. ಶಾಲಾ ಮಕ್ಕಳು ಕೆಂಪು ಕಾಗದದಲ್ಲಿ ಮಾಡಿದ ಹೂವನ್ನು ಧರಿಸುತ್ತಾರೆ. Poppy Day ಬರುವ ಮುನ್ನಾವಾರಗಳಲ್ಲಿ ಇಂಗ್ಲೆಂಡಿನ ಪೂರ್ತಿ ದೊಡ್ಡವರು, ಚಿಕ್ಕವರು ಎಂಬಂತೆ ಜನರು ಕಾಗದದ poppy ಹೂವನ್ನು ಮಾರುತ್ತಾ ನಿಧಿ ಸಂಗ್ರಹಿಸುತ್ತಾರೆ. ಮಹಾಯುದ್ಧದಲ್ಲಿ ಮಡಿದ ಸೈನಿಕರನ್ನು, ಅವರ ಕುಟುಂಬದವರನ್ನು ನೆನೆಯುವುದು ಅವರವರ ಮಟ್ಟದಲ್ಲಿ ಒಂದು ಭಾವನಾತ್ಮಕ ಸನ್ನಿವೇಶವಾಗಬಹುದು, ಮಾತುಕತೆಯಾಗಬಹುದು, ಕಣ್ಣೀರಾಗಬಹುದು, ಇಲ್ಲವೇ ಒಂದು ಅಚಲ ನಿಷ್ಠೆಯ ಕಟ್ಟಾ ಆಚರಣೆಯೂ ಆಗಬಹುದು. ಅದೇನೇ ಆಗಲಿ, ಜನರು ತೋರುವ ಶ್ರದ್ಧೆಯನ್ನು ಮತ್ತು ಅವರ ಕಾಳಜಿಯನ್ನು ನಾನು ಬಹುವಾಗಿ ಮೆಚ್ಚುತ್ತಿದ್ದೆ. ಮಹಾಯುದ್ಧದಲ್ಲಿ ಅವರ ಯೋಧರೊಡನೆ ತಮಗೆ ಬೇಕಿತ್ತೋ, ಬೇಡವಾಗಿತ್ತೋ ಅದು ಹೇಗೋ ಪಾಲ್ಗೊಂಡಿದ್ದ ನಮ್ಮ ಭಾರತೀಯ ಯೋಧರನ್ನು ನೆನೆಸಿಕೊಂಡು ನಾನು Remembrance Day ಆಚರಣೆಗಳಲ್ಲಿ ಭಾಗವಹಿಸುತ್ತಿದ್ದೆ.

ಈ ದಿನದ ಸಲುವಾಗಿಯೆ ಬಹುತೇಕ ನಗರಗಳ ಮತ್ತು ಪಟ್ಟಣಗಳ ಮಧ್ಯಭಾಗದಲ್ಲಿ, ಸರಕಾರಿ ಕಟ್ಟಡಗಳ ಮುಂದೆ poppy ಹೂ ತೋಟವನ್ನು ಬೆಳೆದಿರುತ್ತಾರೆ. ನವೆಂಬರ್ ೧೧ ಬಂದಾಗ ಗೌರವಾಚರಣೆಯ ಭಾಗವಾಗಿ ಹೂಗುಚ್ಛಗಳನ್ನು ಇಡಲಾಗುತ್ತದೆ. ಇಂಗ್ಲೆಂಡಿನಲ್ಲಿ ಶರತ್ಕಾಲವೆಂದರೆ ಬಹು ಸುಂದರ ಋತು. ಹೆಚ್ಚುತ್ತಿರುವ ಚಳಿಗೆ ಹೆದರಿ ಹೂಗಳೆಲ್ಲ ಮುದುಡಿ, ಎಲೆ ಉದುರುವ ಕಾಲ. ಆಗ Remembrance Day ಗೆಂದು ವಿಶೇಷವಾಗಿ ಮಾಡಿದ poppy ಹೂ ಅಲಂಕಾರವನ್ನು ನೋಡುವುದು ಬಹಳ ಮುದ ತರುತ್ತಿತ್ತು. ಆಚರಣೆಯ ಕಟ್ಟುಪಾಡುಗಳೊಡನೆ ಮಿಳಿತವಾದ ಮಾನವ ನಂಬಿಕೆಗಳನ್ನು, ವರ್ತನೆಗಳನ್ನು ಗಮನಿಸುವುದು ಇನ್ನೂ ಹೆಚ್ಚು ಆಸಕ್ತಿ ಹುಟ್ಟಿಸುತ್ತಿತ್ತು.

Remembrance Day ಆಚರಣೆಯ ಪದ್ಧತಿಯನ್ನು ಎಲ್ಲ ಕಾಮನ್‌ವೆಲ್ತ್ ದೇಶಗಳಲ್ಲಿ ಅನುಸರಿಸುತ್ತಾರೆ ಎನ್ನುವ ವಿಷಯ ನನಗೆ ನಿಚ್ಚಳವಾಗಿದ್ದು ಆಸ್ಟ್ರೇಲಿಯಾದಲ್ಲಿ. ಆದರೆ ಈ ದೇಶದಲ್ಲಿ ನಡೆಯುವ ದಿನದ ಆಚರಣೆಯ ಹಿಂದಿರುವ ಇತಿಹಾಸ ಮತ್ತು ಮನೋಭಾವನೆ ಬಹಳ ಭಿನ್ನವಾದದ್ದು. ಕಳೆದ ಕೆಲತಿಂಗಳುಗಳಲ್ಲಿ ನಾನು ಕೈಗೊಂಡಿದ್ದ ಕ್ಷೇತ್ರಕಾರ್ಯದ ದಿನಗಳಲ್ಲಿ ಈ ವಿಷಯ ನನ್ನ ಅರಿವಿಗೆ ಬಂದದ್ದು ನನ್ನಲ್ಲಿ ಒಂದಷ್ಟು ಕಸಿವಿಸಿಯನ್ನುಂಟು ಮಾಡಿದೆ. ಬಹುಶಃ ನಾನು ನಗರವಾಸಿಯಾಗಿರುವುದು, ನಗರಜೀವನದ ದಿನನಿತ್ಯದ ಜಂಜಾಟದಲ್ಲಿ ಅನಾಮಧೇಯಳಾಗಿ ಬಿಡುವ ನಾನು ಸುಲಭವಾಗಿ ಕಳೆದುಹೋಗುವುದು ಇದಕ್ಕೆ ಕಾರಣವಾಗಿರಬಹುದು. ನಗರದ ಮಧ್ಯೆ ನಡೆಯುವ Remembrance Day ಆಚರಣೆ ಮತ್ತು ಬಹುಶಃ ಸರಕಾರಿ ಕಚೇರಿಗಳಲ್ಲಿ ಆಚರಿಸುವ ಒಂದು ನಿಮಿಷದ ಮೌನಾಚರಣೆಯಲ್ಲಿ ನಾನು ಎಂದೂ ಪಾಲ್ಗೊಂಡಿರದಿದ್ದದ್ದು ಕಾರಣವೇನೋ. ಆದರೆ ಮೊನ್ನೆ ನವೆಂಬರ್ ೧೧ ರಂದು ೧೧ ಗಂಟೆಗೆ ಇತರರೊಂದಿಗೆ ನಾನು ಒಂದು ನಿಮಿಷ ಸುಮ್ಮನಾದದ್ದು ನಾನಿದ್ದ ಸ್ಥಳ ಮತ್ತು ಸಂಸ್ಥೆಯ ಸಲುವಾಗಿ ಎನ್ನುವುದು ಕೂಡ ಗಮನಕ್ಕೆ ಬಂದಿತ್ತು. ಇಂಗ್ಲೆಂಡಿನಂತೆ ಇಲ್ಲಿ ಒಂದು ಭಾವನಾತ್ಮಕ ಸನ್ನಿವೇಶವಾಗಲಿ, ಸಂಬಂಧವಾಗಲಿ ನನ್ನ ಅನುಭವಕ್ಕೆ ಬರಲಿಲ್ಲ.

ಯಾಕೆ ನನ್ನ ಮನಸ್ಸು ಭಾವನೆಗಳನ್ನು ಚಿಮ್ಮಿಸುತ್ತ ಮಿಡಿಯಲಿಲ್ಲ ಎನ್ನುವ ಪ್ರಶ್ನೆ ಹುಟ್ಟಿತ್ತು. ಆಗ ನೆನಪಿಗೆ ಬಂದದ್ದು ಇತ್ತೀಚೆಗೆ ನಾನು ನೋಡಿದ ಒಂದು ನಾಟಕದ ಕಥಾವಸ್ತು. ನಾಟಕದ ಹೆಸರು ‘Children of the Black Skirt and Hoods’. ನಾಟಕವು ಆಸ್ಟ್ರೇಲಿಯಾದ ಕರಾಳ ಇತಿಹಾಸದ ಒಂದು ತುಣುಕನ್ನು ಪ್ರತಿಬಿಂಬಿಸಿತ್ತು. ಬಿಳಿಯ ಜನಾಂಗ ಪ್ರಾಬಲ್ಯದ ಅಧಿಕಾರದ ನೆರಳಿನಲ್ಲಿ ನಡೆದುಹೋದ ಸಾಂಸ್ಕೃತಿಕ ನಾಶ, ಸ್ಥಳೀಯ ಅಬೊರಿಜಿನಲ್ ಸಮುದಾಯಗಳ ಹತ್ಯೆ ಮತ್ತು ನಿರ್ನಾಮ, ಸಾಂಸ್ಥೀಕರಣದ ದುರ್ನಡತೆಗಳು, ಬಡಜನ-ವಿರೋಧಿ ಕಾನೂನು ಮತ್ತು ಜನದನಿಯನ್ನು ಅದುಮಿಟ್ಟ ವ್ಯವ್ಯಸ್ಥೆ ಇತ್ಯಾದಿಗಳನ್ನು ನಾಟಕ ಬಿಡಿಸಿಟ್ಟಿತ್ತು. ಇವೆಲ್ಲವನ್ನೂ ಹೇಳಿದ್ದು ಒಂದೇ ಒಂದು ಎಳೆಯ ಮೂಲಕ – ಅಬೊರಿಜಿನಲ್ ಮತ್ತು ಸಮಾಜದ ಕೆಳಸ್ತರದ ಕುಟುಂಬಗಳಿಂದ ಅವರ ಮಕ್ಕಳನ್ನು ಕದಿಯುವುದು, ಬಲವಂತವಾಗಿ ಅವರನ್ನು ಎಳೆತಂದು ಅನಾಥಮಕ್ಕಳ ಕಠೋರ ಸಂಸ್ಥೆಗಳಲ್ಲಿ ಬಂಧಿಸಿಟ್ಟು ಅವರನ್ನು ‘ಸರಿದಾರಿಗೆ’ ತರುವ ಕ್ರಮಗಳು.

ಮಹಾಯುದ್ಧದಲ್ಲಿ ಮಡಿದ ಸೈನಿಕರನ್ನು, ಅವರ ಕುಟುಂಬದವರನ್ನು ನೆನೆಯುವುದು ಅವರವರ ಮಟ್ಟದಲ್ಲಿ ಒಂದು ಭಾವನಾತ್ಮಕ ಸನ್ನಿವೇಶವಾಗಬಹುದು, ಮಾತುಕತೆಯಾಗಬಹುದು, ಕಣ್ಣೀರಾಗಬಹುದು, ಇಲ್ಲವೇ ಒಂದು ಅಚಲ ನಿಷ್ಠೆಯ ಕಟ್ಟಾ ಆಚರಣೆಯೂ ಆಗಬಹುದು.

ನಾಟಕದ ವಸ್ತು ತೋರಿಸಿದ ಮತ್ತೊಂದು ವಿಷಯವು ನನ್ನಲ್ಲಿ ಚಿಂತನೆಗಳನ್ನು ಹುಟ್ಟುಹಾಕಿತು. ಮೊದಲನೇ ಮತ್ತು ಎರಡನೆ ಪ್ರಾಪಂಚಿಕ ಮಹಾಯುದ್ಧಗಳಲ್ಲಿ ಬ್ರಿಟನ್ನಿನ ಮತ್ತು ಅವರ ಮಿತ್ರರಾಷ್ಟ್ರಗಳ ಪರವಾಗಿ ನಿಂತು ಪಾಲ್ಗೊಂಡಿದ್ದ ಆಸ್ಟ್ರೇಲಿಯದ ಸೈನಿಕ ಕುಟುಂಬಗಳಿಗೆ ದೇಶದೊಳಗೆ ಅನೇಕ ರೀತಿಗಳಲ್ಲಿ ಮನ್ನಣೆ ಸಂದಿದೆ. ಆದರೆ ಅವರಲ್ಲಿ ೯೫% ಭಾಗ ಬಿಳಿಯರು. ಮಿಕ್ಕವರಿಗೆ ಅದೇ ಮಟ್ಟದಲ್ಲಿ ಮನ್ನಣೆ, ಗುರುತು, ಪರಿಗಣನೆ ಸಿಗಲಿಲ್ಲ. ಆ ಮಿಕ್ಕವರಲ್ಲಿ ಮುಖ್ಯವಾಗಿ ಸೇರಿದವರು ಆಸ್ಟ್ರೇಲಿಯನ್ ಅಬೊರಿಜಿನಲ್ ಜನರು, ಸ್ವಲ್ಪಮಟ್ಟಿಗೆ ಬ್ರಿಟಿಷರ ವಸಾಹತು ಸ್ಥಾಪನೆಯಲ್ಲಿ ಅವರೊಡನೆ ಬಂದಿದ್ದ ಇತರೆ ವಸಾಹತು ದೇಶಗಳ ಜನರು. ಬಿಳಿಯರಂತೆ ಇವರು ಕೂಡ ಯೋಧರಾಗಿದ್ದರು. ಯುದ್ಧದ ಪ್ರಕ್ರಿಯೆಗಳಲ್ಲಿ ಅವರ ಕುಟುಂಬದ ಮಂದಿ ನೇರವಾಗಿ ಅಥವಾ ಪರೋಕ್ಷವಾಗಿ ತಮ್ಮ ಸೇವೆ ಸಲ್ಲಿಸಿದ್ದರು.

ಅವರಲ್ಲಿ ಅನಾಮಧೇಯರಾದ ಅಗೋಚರ ಮಕ್ಕಳು ಇದ್ದರು. ಬಲವಂತವಾಗಿ ಅವರ ಕುಟುಂಬಗಳಿಂದ ಬೇರ್ಪಡಿಸಿದ್ದ ಮತ್ತು ಅನಾಥ ಸಂಸ್ಥೆಗಳ ಕ್ರೂರ ವ್ಯವಸ್ಥೆಯಲ್ಲಿ ಬದುಕುತ್ತಿದ್ದ ಈ ಮಕ್ಕಳನ್ನು ಗುಲಾಮಗಿರಿಗೆ ಒಡ್ಡಲಾಗಿತ್ತು. ಯುದ್ಧಕ್ಕೆಂದು, ಸೈನಿಕರಿಗೆಂದು, ಸೈನ್ಯದ ತುಕುಡಿಗಳಲ್ಲಿ ಬದುಕುತ್ತಿದ್ದ ಅವರ ದಿನನಿತ್ಯದ ಜೀವನಕ್ಕೆಂದು ಬೇಕಿದ್ದ ಸಾಮಗ್ರಿಗಳನ್ನು ತಯಾರಿಸುವುದರಿಂದ ಹಿಡಿದು ಈ ಮಕ್ಕಳು ಯುದ್ಧಸೈನಿಕರ ಉಡುಪುಗಳನ್ನು ಕೂಡ ಸಿದ್ಧಪಡಿಸುತ್ತಿದ್ದರು. ಅಂದರೆ ಈ ಅನಾಮಧೇಯ ಮಕ್ಕಳು, ಅವರಲ್ಲಿ ಬಹುತೇಕರು ಅಬೊರಿಜಿನಲ್ ಮಕ್ಕಳು, ಪರೋಕ್ಷವಾಗಿ ತಾವೂ ಕೂಡ ಯುದ್ಧಕ್ಕೆ ಸೇವೆ ಸಲ್ಲಿಸಿದ್ದರು. ಆದರೆ ಸರಕಾರದ ಲೆಕ್ಕದಲ್ಲಿ ಸೇರ್ಪಡೆಯಾಗದೆ ಅವರೆಲ್ಲ ಕಳೆದೇಹೋದರು. ಅನೇಕ ಮಕ್ಕಳು ಅನಾಥ ಸಂಸ್ಥೆಗಳ ಕ್ರೂರತೆಗಳನ್ನು, ಗುಲಾಮಗಿರಿಯ ಪರಿಣಾಮಗಳನ್ನು ತಡೆಯಲಾರದೆ ಸತ್ತೇ ಹೋದರು. ಅವರ ಲೆಕ್ಕವನ್ನು ಯಾರೂ ಇಟ್ಟಿಲ್ಲವೆಂಬುದು ಆಘಾತಕಾರಿ ಸತ್ಯ.

ಮೊದಲ ಮಹಾಯುದ್ಧದಲ್ಲಿ ಪಾಲ್ಗೊಂಡ ಅಬೊರಿಜಿನಲ್ ಗಂಡಸರು, ಯೋಧರು, ಸೈನಿಕರು, ಮತ್ತು ಪರೋಕ್ಷವಾಗಿ ಸೇವೆ ಸಲ್ಲಿಸಿದ ಹೆಂಗಸರು ಮತ್ತು ಮಕ್ಕಳ ಹೆಸರುಗಳನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಮತ್ತು ಸರಕಾರ ಮಟ್ಟದಲ್ಲಿ ಎಲ್ಲಿಯೂ ದಾಖಲಿಸಿಲ್ಲ ಎನ್ನುವುದು ಈ ದೇಶದ ಈಗಿನ ಸಮಕಾಲೀನ ದುರಂತ ಸತ್ಯ. Remembrance Day ದಿನದಂದು ಅವರನ್ನು ಯಾರು ನೆನೆಯುತ್ತಾರೆ? ತಮ್ಮನ್ನು ಕದ್ದು ಅನಾಥಸಂಸ್ಥೆಗಳಲ್ಲಿ ಇರಿಸಿದ ನಂತರ ಅಲ್ಲೇ ಬೆಳೆದು ದೊಡ್ಡವರಾದ ಅನೇಕ ಮಕ್ಕಳಿಗೆ ತಮ್ಮ ಹುಟ್ಟುಕುಟುಂಬದೊಡನೆ ಯಾವುದೇ ನಂಟಿರಲಿಲ್ಲ, ಅವರ ನೆನಪಿರಲಿಲ್ಲ. ಮುಂದೆ ಅವರು ಹುಡುಕಿದರೂ ತಂದೆತಾಯಿಯರ, ಒಡಹುಟ್ಟಿದವರ ಬಗ್ಗೆ ದಾಖಲೆಗಳು ಇರಲಿಲ್ಲ. ಸಮಾಜದಲ್ಲಿ ಅನಿಶ್ಚಿತ ಮತ್ತು ಜನಾಂಗೀಯ ದ್ವೇಷದ ವ್ಯವಸ್ಥೆಯಲ್ಲಿ ಸಾಗಿದ ಅವರುಗಳ ಕಥೆಗಳನ್ನು ಯಾರು ನೆನೆಯುತ್ತಾರೆ?

ಶಾಲೆಗಳಲ್ಲಿ ಮಕ್ಕಳಿಗೆ ಕಲಿಸುವುದು ‘ಆಂಗ್ಲೋ-ಯುರೋಪಿಯನ್’ ಪಠ್ಯವಸ್ತು. ಕಣ್ಣಿನ ಮುಂದೆ ಕುಣಿಯುತ್ತಿರುವ ಈ ಸಾಮಾಜಿಕ ಅನ್ಯಾಯಗಳ ಬಗ್ಗೆ ಮಾತನಾಡುವುದು ಬಹುಶಃ ಯೂನಿವರ್ಸಿಟಿಗಳಲ್ಲಿ ನಡೆಯುವ ಅಧ್ಯಯನಗಳಲ್ಲಿ ಮತ್ತು ಆಸ್ಟ್ರೇಲಿಯನ್ ಮೂಲನಿವಾಸಿಗಳ ಪರ ಇರುವ ಸಂಸ್ಥೆಗಳಲ್ಲಿ ಮಾತ್ರ ಎನಿಸುತ್ತದೆ. ಅವರ ಬಗ್ಗೆ ಖಚಿತತೆಯಿಂದ, ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಮಾತನಾಡುವುದು ಸರಕಾರಕ್ಕೆ ಬೇಕಿಲ್ಲ. ಯುದ್ಧ ಯೋಧರ ಪರ ಕೆಲಸ ಮಾಡುವ ಸರಕಾರೇತರ ಸಂಸ್ಥೆಗಳಿಗೆ ಧೈರ್ಯವಿಲ್ಲ. ಆದರೆ ಇಲ್ಲಿ ನಾವು ನೆನೆಪಿಸಿಕೊಳ್ಳಬೇಕಾದ ಒಂದು ಮುಖ್ಯ ನಿಜವಿದೆ. ಇದೇ ಸರಕಾರಗಳು ಮತ್ತು ಸರಕಾರೇತರ ಸೇವಾ ಸಂಸ್ಥೆಗಳು ಮೊದಲ ಮಹಾಯುದ್ಧ ನಡೆದಾದ ನಂತರ, ಕಳೆದ ಒಂದು ನೂರು ವರ್ಷಗಳಲ್ಲಿ ಮುಂದೆ ಬಿದ್ದು, ಬಹಳ ಕಾಳಜಿಯಿಂದ ಯುದ್ಧದಲ್ಲಿ ನಾನಾರೀತಿಯ ಪಾತ್ರಗಳಲ್ಲಿ ಪಾಲ್ಗೊಂಡಿದ್ದ ಸೈನಿಕರನ್ನು ಮತ್ತು ಅವರ ಕುಟುಂಬಗಳನ್ನು ಗುರುತಿಸಿ, ಅವರಿಗೆ ಬಹುರೀತಿಯ ಸವಲತ್ತು, ಸೌಲಭ್ಯಗಳನ್ನು ಮಾಡಿಕೊಟ್ಟಿವೆ. ಇವರಲ್ಲಿ ೯೯% ಭಾಗ ಬಿಳಿಯ ಆಸ್ಟ್ರೇಲಿಯನ್ನರು. ಒಂದು ಸೇವಾಸಂಸ್ಥೆಯೊಡನೆ ನಾನು ಮಾತನಾಡುವಾಗ ‘ಅದ್ಯಾಕೆ ನಿಮ್ಮಲ್ಲಿ ಆಸ್ಟ್ರೇಲಿಯನ್ ಅಬೊರಿಜಿನಲ್ ಮತ್ತು ಬಿಳಿಯರಲ್ಲದ ಇತರೆ ಭಿನ್ನ ಸಾಂಸ್ಕೃತಿಕ ಹಿನ್ನೆಲೆಯ ಸೈನಿಕ ಕುಟುಂಬಗಳ ಬಗ್ಗೆ ಮಾಹಿತಿಯಿಲ್ಲ’ ಎಂದು ಪ್ರಶ್ನಿಸಿದೆ. ‘ನಮ್ಮಲ್ಲೂ ಅಂತಹ ಕೆಲ (!) ಸೇವಾ-ಸಂಬಂಧಿತ ಗ್ರಾಹಕರಿದ್ದಾರೆ, ಆದರೆ ಅವರ ಬಗ್ಗೆ ನಾವು ಖಚಿತ ಮಾಹಿತಿ ಕಲೆ ಹಾಕಿಲ್ಲವಷ್ಟೆ,’ ಎನ್ನುವ ಉತ್ತರ ಬಂತು. ವಿಪರ್ಯಾಸವೆಂದರೆ, ಅವರ ಮುಖ್ಯ ಸೇವೆ ಸಿಗುತ್ತಿರುವುದು ಮತ್ತು ಪಡೆಯುತ್ತಿರುವವರು ಬಿಳಿಯ ಆಸ್ಟ್ರೇಲಿಯನ್ನರು, ಇವರ ಬಗ್ಗೆ ಎಲ್ಲಾ ಮಟ್ಟದಲ್ಲಿ ಖಚಿತ ಮಾಹಿತಿಯಿದೆ. ಅಷ್ಟಲ್ಲದೆ, ಸೇವೆ ಪಡೆಯುವ ಅವಕಾಶಗಳಿಂದ ದೂರ ಉಳಿದ ಬಿಳಿಯ ಆಸ್ಟ್ರೇಲಿಯನ್ನರನ್ನು ಪ್ರಯತ್ನಪಟ್ಟು ಹುಡುಕಿ ಅವರಿಗೆ ಸೇವೆ ತಲುಪಿಸುವ ನಿಟ್ಟಿನಲ್ಲಿ ಸೇವಾಸಂಸ್ಥೆಗಳಿಗೆ ಸಂಪೂರ್ಣ ಬದ್ಧತೆಯಿದೆ.


ಇದೆಲ್ಲ ಅನ್ಯಾಯಗಳ ದುರಂತ ಇತಿಹಾಸದಲ್ಲಿ ಕಳೆದುಹೋದ, ಯುದ್ಧಕ್ಕೆಂದು ಕೆಲಸ ಮಾಡಿದ ಶಾಶ್ವತ ಅನಾಮಧೇಯರು, ಹೆಸರಿಲ್ಲದವರು ಆದ ಸಾವಿರಾರು ಗಂಡಸರು, ಹೆಂಗಸರು ಮತ್ತು ಮಕ್ಕಳನ್ನು ನಾವೆಲ್ಲರೂ ನೆನೆಯಬೇಕಿದೆ. ನಾನು ನಾಟಕ ನೋಡುತ್ತಾ ಇರುವಾಗ ಇವೆಲ್ಲವೂ ನನ್ನ ಕಣ್ಣಿಗೆ ಕಟ್ಟಿದಾಗ ಕಣ್ಣಲ್ಲಿ ನೀರು ಬಂದಿತ್ತು. ಮೊನ್ನೆ ಹನ್ನೊಂದರಂದು ಹನ್ನೊಂದು ಗಂಟೆಗೆ ಸುಮ್ಮನಾದ ಆ ಒಂದು ನಿಮಿಷದಲ್ಲಿ ಕಳೆದುಹೋದ ಈ ಸಾವಿರಾರು ಆತ್ಮಗಳಿಗೆ ಶರಣು ಹೇಳಿದೆ.