ಕ್ರಿಕೆಟ್ನಲ್ಲಿ ಅನೇಕ ಪವಾಡಗಳನ್ನು ಪ್ರೇಕ್ಷಕರು ವೀಕ್ಷಿಸಿದ್ದಾರೆ. ಆದರೆ ಇಂತಹ ಆಟವನ್ನು ವಾಂಖೇಡೆ ಮೈದಾನದಲ್ಲಿ ಯಾರೂ ನೋಡಿರಲಿಲ್ಲ. ಲಕ್ಷಾಂತರ ಜನ ಟಿವಿಯಲ್ಲಿ ಇಂತಹ ದೃಶ್ಯವನ್ನು ವೀಕ್ಷಿಸಿರಲಿಲ್ಲ. ಪವಾಡಗಳು ಸಾಮಾನ್ಯವಾಗಿ ಕೇಳಿರುವುದು ಸಹಜ. ಯಾವುದೋ ಕಾಲದಲ್ಲಿ ಹೀಗಾಯಿತು, ಹೀಗೆ ಮಾಡಿದರು ಎನ್ನುವುದನ್ನು ಓದಿರುತ್ತೇವೆ, ಕೇಳಿರುತ್ತೇವೆ. ಅದನ್ನು ಕಣ್ಣಾರೆ ಯಾರೂ ನೋಡಿರುವುದಿಲ್ಲ. ಆದರೆ ಅಂದು ನಮ್ಮ ಕಣ್ಣೆದುರಿಗೆ ನಡೆಯುತ್ತಿರುವ ಪವಾಡವನ್ನು ಲಕ್ಷಾಂತರ ಜನ ವೀಕ್ಷಿಸಿದರು. ಮತ್ತೆ ಮತ್ತೆ ಬೀಳುತ್ತಾ, ಕುಂಟುತ್ತಾ ಒಂದೇ ಕಾಲಿನಲ್ಲಿ ಆಡಿದ ಮ್ಯಾಕ್ಸ್ವೆಲ್ ಕೇವಲ 128 ಬಾಲ್ಗಳಲ್ಲಿ 201 ರನ್ ಹೊಡೆದರು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಹೊಸ ಬರಹ ನಿಮ್ಮ ಓದಿಗೆ
ಅಕ್ಟೋಬರ್ 5ರಂದು ಶುರುವಾದ ವಿಶ್ವ ಕಪ್ ಪಂದ್ಯ ಕೊನೆಯ ಮೂರು ದಿನದ ಹಂತವನ್ನು ತಲುಪಿದೆ. ಭಾರತ ಮತ್ತು ನ್ಯೂಝಿಲೆಂಡ್ ಮೊದಲನೇಯ ಸೆಮಿ ಫೈನಲ್ ನವೆಂಬರ್ 15ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಆಡುತ್ತಾರೆ. ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕ ನವೆಂಬರ್ 16ರಂದು ಕೊಲ್ಕತ ಈಡನ್ ಗಾರ್ಡನ್ ಮೈದಾನದಲ್ಲಿ ಎರಡನೇ ಸಮಿ ಫೈನಲ್ಸ್ ಆಡುತ್ತಾರೆ. ನವೆಂಬರ್ 19ರಂದು ಅಹ್ಮದಾಬಾದಿನ ನರೇಂದ್ರ ಮೋದಿ ಮೈದಾನದಲ್ಲಿ ಫೈನಲ್ಸ್ ಹಣಾಹಣಿ ಆಟದಲ್ಲಿ ವಿಜಯಮಾಲೆ ಯಾರ ಕೊರಳಿಗೆ ಹೋಗುತ್ತೋ ಕಾದು ನೋಡಬೇಕು.
2023ರ ವಿಶ್ವ ಕಪ್ ಪಂದ್ಯಗಳು ಸಾವಿರಾರು ಪ್ರೇಕ್ಷಕರಿಗೆ ಮತ್ತು ಲಕ್ಷಾಂತರ ಟಿವಿ ಅಭಿಮಾನಿಗಳಿಗೆ ಸುಗ್ಗಿಯಾಯಿತೆಂದರೆ ಅದು ಅತಿಶಯೋಕ್ತಿಯಲ್ಲ. ಅದನ್ನು ನೋಡಲು ದೇಶ ವಿದೇಶಗಳಿಂದ ಅಭಿಮಾನಿಗಳ ಜನ ಸಾಗರವೇ ಹರಿದು ಬಂದರು. ಕ್ರಿಕೆಟ್ ಭಾರತದಲ್ಲಿ ಒಂದು ಧರ್ಮವೇ ಸರಿ ಎಂಬ ನಾಣ್ನುಡಿ ಚೆನ್ನಾಗಿ ಒಪ್ಪುತ್ತೆ. ಭಾರತದಲ್ಲಿ ಸಣ್ಣ ಹುಡುಗರಿಂದ ಹಣ್ಣು ಮುದುಕಿಯವರೆಗೆ ಎಲ್ಲಾ ಕ್ರಿಕೆಟ್ ಧರ್ಮಗುರುಗಳೇ!
ಸ್ಕೂಲಿನಲ್ಲಿ ಮೇಷ್ಟ್ರು ತಲೆ ಚಚ್ಚಿಕೊಂಡು ಘಂಟೆಗಟ್ಟಲೆ ಪಾಠ ಹೇಳಿಕೊಡುವುದು ಜ್ಞಾಪಕದಲ್ಲಿರುವುದಿಲ್ಲ. ಆದರೆ ವಿರಾಟ್ ಕೊಹ್ಲಿಯ ವಂಶಸ್ಥರ ಕುಲ ಗೋತ್ರ, ಅವನ ಬಾಲ್ಯಾವಸ್ಥೆ, ಬಾಲಾರಿಷ್ಟೆ ಅವನ ಸ್ಕೋರ್ಗಳು ಎಲ್ಲವೂ ಮಗ್ಗಿಯ ಪಾಠದಂತೆ ಕನಸಿನಲ್ಲೂ ಯಾವ ಸಂಸ್ಕೃತ ಶ್ಲೋಕಕ್ಕೂ ಕಡಿಮೆಯಿಲ್ಲ ಅನ್ನುವ ಹಾಗೆ, ಉರುಹೊಡೆದಂತೆ ಹೇಳುವ ಸಾಮರ್ಥ್ಯವಿದೆ ಈಗಿನ ಹುಡುಗರಲ್ಲಿ!
ಮನೆಯಲ್ಲಿ ಸಾರಿಗೆ ಉಪ್ಪು ಹಾಕುವುದು ಮರೆತಿರಬಹುದು ಸುಮಿತ್ರಮ್ಮ. ಆದರೆ ಶಮಿ, ಸಿರಾಜ್ ಕುಲ್ದೀಪ್ರ ಬೋಲಿಂಗ್ನ ಪ್ರತಾಪವನ್ನು ಮರೆಯದೆ ಪಕ್ಕದಮನೆ ಭಾಗೀರಥಮ್ಮನವರಿಗೆ ಹೇಳದಿದ್ದರೆ ಆಕೆಗೆ ನಿದ್ರೆ ಬರಲ್ಲ. ಭಾಗೀರಥಮ್ಮನ ಹಿಯರಿಂಗ್ ಏಡ್ ಬ್ಯಾಟರಿ ನೋಡಿ ಎಷ್ಟೋ ತಿಂಗಳಾಗಿವೆ. ಎಲ್ಲಾದಕ್ಕು ತಲೆಯಾಡಿಸಿ ಅವರ ಮುಗುಳ್ನಗೆಯನ್ನು ನೋಡಿ ಅವರಿಗೆ ಮತ್ತೆ ಮತ್ತೆ ಹೇಳಿದ್ದೇ ಹೇಳಿದ್ದು!
ಈ ಕ್ರಿಕೆಟ್ ಆಟವೇ ಅಂಥಾದ್ದು. ಫುಟ್ಬಾಲ್ ಒಂದು ಒಂದೂವರೆ ಘಂಟೆಗಳ ಕಾಲ ಬಾಲನ್ನು ಒದ್ದು ಅವರವರಲ್ಲೇ ಒದ್ದೂಕೊಂಡು ಏನಾಯಿತು ಅನ್ನುವಷ್ಟರಲ್ಲಿ ಜೋರಾಗಿ ವಿಝಲ್ ಹೊಡೆದು ಆಟ ಮುಗಿಯಿತೆಂದು ಸೂಚನೆ. ಹಾಕಿಯೂ ಹಾಗೇ.
ಕ್ರಿಕೆಟ್ ಆಟ ಹಾಗಲ್ಲ! ಮಧ್ಯಾಹ್ನ ಊಟದ ಹೊತ್ತಿಗೆ ಶುರುವಾದ ಆಟ ನಡೆಯುತ್ತಲೇ ಇರುತ್ತೆ. ಮ್ಯಾಚ್ ನೋಡುತ್ತಲೇ ಬಂದ ನಿದ್ದೆಗೆ ಜಾಗ ಕೊಟ್ಟು ಒಂದು ಘಂಟೆ ನಿದ್ರೆ ಮಾಡಿ ಬಳಿಕ ಕೋಡುಬಳೆ ಕಾಫಿ ಇಟ್ಟುಕೊಂಡು ನೋಡಬಹುದು. ಆಫೀಸಿಗೆ ಹೋದವರು ಸಂಜೆ ಮನೆಗೆ ಧಾವಿಸಿ ಬಂದು ಕುರುಕಲು ತಿಂಡಿಯ ಜೊತೆ ರೋಹಿತ್ ಶರ್ಮ ಮತ್ತು ಶುಭಮನ್ ಗಿಲ್ ಅವರ ಪ್ರಾರಂಭದ ಭರ್ಜರಿ ಆಟವನ್ನು ನೋಡಲೇಬೇಕು. ಹೀಗೆ ಒಂದೂವರೆ ತಿಂಗಳ ವಿಶ್ವ ಕಪ್ ನಮ್ಮ ದಿನಚರಿಯನ್ನೇ ಬದಲಾಯಿಸಿತು ಎಂದರೆ ಆಶ್ಚರ್ಯವೇನಿಲ್ಲ. ಯಾರ ಮನೆಯಲ್ಲೂ 1 ಘಂಟೆಗೆ ಮಲಗಲು ಯಾರೂ ತಯಾರಿಲ್ಲ.
ಯಾರೂ ಮನೆಗೆ ಫೋನ್ ಮಾಡಬಾರದು. ಕೊಹ್ಲಿ 90ಕ್ಕೆ ಬಂದಾಗ. ಹಾಗೆ ಕಾಲ್ ಬಂದರೂ ಅದನ್ನು ಮುಟ್ಟದಿದ್ದರೆ ತನಗೆ ತಾನೇ ಕೂಗಿ ಸುಸ್ತಾಗಿ ನಿಲ್ಲಿಸುತ್ತೆ. ಇದು ನಮ್ಮ ಜೀವನ. ಮುಂದಿನ ವಾರದಿಂದ ಅದು ನಿಲ್ಲುತ್ತೆ. ಒಂದೆರೆಡು ದಿನ ಕಾಲ ಹೇಗೆ ಕಳಿಯೋದೂ ಎನ್ನುವ ಚಿಂತೆ ಎಲ್ಲರಿಗೂ ಕಾಡುತ್ತೆ. ಹೀಗಿರುವಾಗ ಈ ವಿಶ್ವ ಕಪ್ನ ಕೆಲವು ಅಧ್ಭುತವಾದ ಕ್ಷಣಗಳನ್ನು ನೋಡೋಣ.
ವಿರಾಟ್ ಕೊಹ್ಲಿ ಸಚಿನ್ ಟೆಂಡೂಲ್ಕರ್ ಅವರ ಒಡಿಐ ದಾಖಲೆ – 49 ನೇ ಶತಕಗಳನ್ನು ಹೊಡೆದು ಅವರ ಜೊತೆಯಾದರು. ಮಿಕ್ಕ ಪಂದ್ಯಗಳಲ್ಲಿ ಅವರು ಶತಕ ಹೊಡೆದು ಭಾರತಕ್ಕೆ ವಿಜಯವನ್ನು ಗಳಿಸಿಕೊಡುತ್ತಾ ತಮ್ಮದೇ ಆದ ಹೊಸ ದಾಖಲೆಯನ್ನು ಮಾಡಲಿ ಎಂದು ಎಲ್ಲರ ಆಸೆ, ಹಾರೈಕೆ.
ಭಾರತವು ಕೋಚ್ ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮ ಅವರ ನೇತೃತ್ವದಲ್ಲಿ 9 ಕ್ಕೆ 9 ಮ್ಯಾಚ್ಗಳನ್ನು ಎಲ್ಲಾ ಗೆದ್ದು ಸೆಮಿ ಫೈನಲ್ ಅನ್ನು ತಲುಪಿದೆ! ನವೆಂಬರ್ 15 ಬುಧವಾರ ವಾಂಖೇಡೆ ಮೈದಾನದಲ್ಲಿ ಮ್ಯಾಚ್ ನಡೆಯಲಿದೆ. ಇದನ್ನು ಗೆದ್ದು ಫೈನಲ್ ಪ್ರವೇಶಿಸಿ ಅಲ್ಲಿ ಗೆದ್ದು ಕಪ್ಪನ್ನು 12 ವರ್ಷಗಳಾದ ಮೇಲೆ ಮತ್ತೆ ತಮ್ಮದಾಗಿಸಿಕೊಳ್ಳುತ್ತಾರೆ ಎಂದು ಎಲ್ಲರಲ್ಲೂ ನಿರೀಕ್ಷೆಯಿದೆ.
ಈ ಪಂದ್ಯಗಳಲ್ಲಿ ಎರಡು ಬ್ಯಾಟಿಂಗ್ನ ಪ್ರದರ್ಶನ ಎಲ್ಲರ ಮನಸ್ಸು ಸೆಳೆದಿತು. ಒಂದು ಪಾಕಿಸ್ತಾನದ ಫಖರ್ ಝಾಮನ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ರ ಬ್ಯಾಟಿಂಗ್.
ಫಖರ್ ಝಾಮನ್ ಪಾಕಿಸ್ಥಾನದ ಪ್ರಾರಂಭದ ಬ್ಯಾಟರ್. ಅವರು ಬಹಳ ಒಳ್ಳೆಯ ಆಟಗಾರ. ಬಿರುಸಿನ ಹೊಡೆತಕ್ಕೆ ಹೆಸರುವಾಸಿಯಾದವರು. ಒಂದೆರೆಡು ಪಂದ್ಯಗಳಲ್ಲಿ ಚೆನ್ನಾಗಿ ಆಡದಿದ್ದ ಕಾರಣಕ್ಕೆ ಅವರನ್ನು ಟೀಮಿನಿಂದ ತೆಗೆದುಹಾಕಲಾಗಿತ್ತು. ಮತ್ತೆ ಅವರನ್ನು ನ್ಯೂಝಿಲೆಂಡ್ ವಿರುದ್ಧದ ಪಂದ್ಯಕ್ಕೆ ಆಯ್ಕೆ ಮಾಡಿದ್ದರು.
ಬೆಂಗಳೂರಿನಲ್ಲಿ ನಡೆದ ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ 401 ರನ್ ಮಾಡಿದರು. ಬೆಂಗಳೂರಿನ ಚಿನ್ನ ಸ್ವಾಮಿ ಮೈದಾನದಲ್ಲಿದ್ದ ಪ್ರೇಕ್ಷಕರಿಗೆ ದೀಪಾವಳಿ ಒಂದೆರೆಡು ವಾರ ಮುಂಚೆಯೇ ಬಂದಿದಿಯೋ ಎನ್ನುವ ಶಂಕೆ. ಆರಂಭದ ಪಂದ್ಯಗಳಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನ್ಯೂಝಿಲೆಂಡಿನ ನಾಯಕ ವಿಲಿಯಂಸನ್ ಬಹಳ ದಿನಗಳಾದ ಮೇಲೆ ಈ ಪಂದ್ಯದಲ್ಲಿ ಆಡಿದರು. ಏಟು ಬಿದ್ದಿದ್ದು ತಮಗಲ್ಲವೇ ಅಲ್ಲ ಎನ್ನುವ ಹಾಗೆ ಬ್ಯಾಟ್ ಮಾಡಿದರು! ಬಿರುಸಿನ ಹೊಡೆತಗಳನ್ನು ಹೊಡೆದು 95 ರನ್ ಆಗಿದ್ದಾಗ ಅವರು ಬೌಂಡರಿ ಹತ್ತಿರ ಕ್ಯಾಚ್ ಕೊಟ್ಟು ಔಟಾದರು. ಅವರ ಬ್ಯಾಟಿಂಗ್ ಅಮೋಘವಾಗಿತ್ತು.
ಮನೆಯಲ್ಲಿ ಸಾರಿಗೆ ಉಪ್ಪು ಹಾಕುವುದು ಮರೆತಿರಬಹುದು ಸುಮಿತ್ರಮ್ಮ. ಆದರೆ ಶಮಿ, ಸಿರಾಜ್ ಕುಲ್ದೀಪ್ರ ಬೋಲಿಂಗ್ನ ಪ್ರತಾಪವನ್ನು ಮರೆಯದೆ ಪಕ್ಕದಮನೆ ಭಾಗೀರಥಮ್ಮನವರಿಗೆ ಹೇಳದಿದ್ದರೆ ಆಕೆಗೆ ನಿದ್ರೆ ಬರಲ್ಲ. ಭಾಗೀರಥಮ್ಮನ ಹಿಯರಿಂಗ್ ಏಡ್ ಬ್ಯಾಟರಿ ನೋಡಿ ಎಷ್ಟೋ ತಿಂಗಳಾಗಿವೆ. ಎಲ್ಲಾದಕ್ಕು ತಲೆಯಾಡಿಸಿ ಅವರ ಮುಗುಳ್ನಗೆಯನ್ನು ನೋಡಿ ಅವರಿಗೆ ಮತ್ತೆ ಮತ್ತೆ ಹೇಳಿದ್ದೇ ಹೇಳಿದ್ದು!
ಸಚಿನ್ ಮತ್ತು ರಾಹುಲ್ರ ಒಂದೆರೆಡು ಅಕ್ಷರಗಳನ್ನು ಜೋಡಿಸಿ ಇಟ್ಟು ‘ರಾಚಿನ್’ ರವೀಂದ್ರ ಎಂಬ ಇನ್ನು ಹುಡುಗನಾಗಿರುವ ಬ್ಯಾಟ್ಸ್ಮನ್ ಕೇವಲ 94 ಬಾಲ್ಗಳಲ್ಲಿ 108 ರನ್ ಮಾಡಿದರು. ಬೇಂಗಳೂರಿನಿಂದ ನ್ಯೂಝಿಲೆಂಡಿಗೆ ವಲಸೆ ಹೋದ ಅವರ ತಂದೆ ರವೀಂದ್ರ ಭಾರತದಲ್ಲಿದ್ದಾಗ ಸಚಿನ್ ಟೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರ ಆಟವನ್ನು ನೋಡಿ, ಮುಗ್ಧಗೊಂಡು ಹುಟ್ಟುವ ಮಗನಿಗೆ ಇವರಿಬ್ಬರ ಹೆಸರಿನಿಂದ ಬಂದ ಅಕ್ಷರ ಜೋಡಣಗಳಿಂದ ಎಂದು ಎಂದೋ ನಿಶ್ಚಯಿಸಿರಬೇಕು! ಕೊನೆಗೆ ಆತ ಕ್ರಿಕೆಟ್ನಲ್ಲಿ ಯಶಸ್ಸುಗಳಿಸಿ ಅವರ ದೇಶಕ್ಕೆ ಆಯ್ಕೆಯಾಗಿ ಭಾರತಕ್ಕೆ ವಿಶ್ವ ಕಪ್ ಆಡಲು ಬಂದಿದ್ದರು! ತಂದೆಯ ಕನಸೋ ಮಗನ ಧ್ಯೇಯವೋ ಎರಡೂ ಸೇರಿ ರಾಚಿನ್ ಇಲ್ಲಿಗೆ ಬರುವ ಹಾಗೆ ಆಯಿತು. ಬಿರುಸಿನ ಹೊಡೆತಕ್ಕೆ ಮತ್ತು ನಿಧಾನವಾದ ಸ್ಪಿನ್ ಬೋಲಿಂಗಿಗೆ ರವೀಂದ್ರ ಈಗಾಗಲೇ ಪ್ರಸಿದ್ಧಿಯಾಗಿದ್ದಾರೆ! ಅವನಿಗೆ ಯಾರ ದೃಷ್ಟಿಯೂ ತಾಕದಿರಲಿ ಎಂದು ಅವನ ಅಜ್ಜಿ ಬೆಂಗಳೂರಿನ ಅವರ ಮನೆಯಲ್ಲಿ ಅವನಿಗೆ ದೃಷ್ಟಿ ನಿವಾರಣೆ ಮಾಡಿದರು!
ನ್ಯೂಝಿಲೆಂಡ್ 401 ಮಾಡಿದಾಗಲೇ ಎಲ್ಲರಿಗೂ ಅದನ್ನು ತಲುಪಲು ಅಸಾಧ್ಯವೆಂದು ತೋರಿತು. ಜೊತೆಗೆ ಬೆಂಗಳೂರಿನಲ್ಲಿ ಹಿಂಗಾರು ಮಳೆ ಶುರುವಾಗಿತ್ತು. ರಾತ್ರಿ ದಿನ ಬಿಟ್ಟು ದಿನ ಮಳೆ ಖಾತ್ರಿ. ಹೀಗಾಗಿ ಪಂದ್ಯ ಹೇಗೆ ಮುಂದುವರಿಯುವುದೋ ಎಂಬ ಯೋಚನೆ ಕೂಡ ಎಲ್ಲರಿಗೂ ಇತ್ತು.
ಇಂತಹ ಸಂದರ್ಭದಲ್ಲಿ ಫಖರ್ ಝಾಮನ್ ಮತ್ತು ಇಮಾಮ್ ಉಲ್ ಹಕ್ ಪಾಕಿಸ್ಥಾನದ ಪಾರಂಭದ ಆಟಗಾರರಾಗಿ ಮೈದಾನಕ್ಕೆ ಇಳಿದರು. ಹಕ್ ಔಟಾದ ಮಾರೆ ನಾಯಕ ಬಾಬರ್ ಆಝಮ್ ಆಡುವುದಕ್ಕೆ ಬಂದರು.
ಝಾಮನ್ ಅವರ ಬ್ಯಾಟ್ ಅಂದು ಕತ್ತಿಗೆ ಹೋಲಿಸಬಹುದಾಗಿತ್ತು. ಪ್ರತಿ ಬಾಲಿಗೂ 4 ಅಥವ 6 ರನ್ ಹೊಡೆಯುವ ಛಲವಿತ್ತು, ದೃಢ ಮನಸ್ಸಿತ್ತು. 401 ರನ್ ಒಂದು ದೊಡ್ಡ ಬೆಟ್ಟವೇ ಸರಿ; ಅದನ್ನು ರಾತ್ರಿ ಮಳೆಯ ಮಧ್ಯೆ ಹತ್ತಬೇಕಾಗಿತ್ತು. ಇದು ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಝಮಾನ್ ಬ್ಯಾಟನ್ನು ಎಲ್ಲಾಕಡೆ ತಿರುಗಿಸುತ್ತಾ ಬೌಂಡರಿ ಮೇಲೆ ಬೌಂಡರಿ ಹೊಡೆಯುತ್ತಾ ಹೋದರು. ಅವರ ಜೊತೆಗಿದ್ದ ನಾಯಕ ಬಾಬರ್ ಅವರ ಆಟವನ್ನು ನೋಡಿ ಅವರ ಜೊತೆಗೆ ಸಹಾಯಕನಾಗಿ ನಿಂತರು. ವಾಸ್ತವವಾಗಿ ಬಾಬರ್ ಈ ಶತಮಾನದ ಸುಪ್ರಸಿದ್ಧ ಆಟಗಾರರಲ್ಲಿ ಒಬ್ಬರು. ಅವರು ಟೆಸ್ಟ್, ಒಡಿಐ ಮತ್ತು ಎಲ್ಲದರಲ್ಲೂ ಮೊದಲನೆಯವ ಎಂಬ ದಾಖಲೆಯನ್ನೂ ಮಾಡಿದ್ದಾರೆ. ಆದರೆ ಅವರು ಝಾಮನ್ರ ಅಂದಿನ ಆಟವನ್ನು ನೋಡಿ ದಂಗಾದರು. ಪ್ರೇಕ್ಷಕರು ಹುಚ್ಚೆದ್ದು ಕುಣಿಯಲಾರಂಭಿಸಿದರು. ಅಂದು ಅಂತಹ ಅಮೋಘವಾದ ಬ್ಯಾಟಿಂಗ್ ಆಡಿದರು ಫಖರ್ ಝಾಮನ್. ಕೇವಲ 82 ಬಾಲ್ಗಳಲ್ಲಿ 126 ರನ್ ಗುಡುಗು ಮಿಂಚಿನಹಾಗೆ ಹೊಡೆದು ಜನಗಳ ಮನಸ್ಸನ್ನು ತಣಿಸಿದರು. ಎರಡು ಬಾರಿ ಮಳೆ ಮಧ್ಯೆ ಬಂದು ಆಟ ನಿಲ್ಲಿಸಬೇಕಾಯಿತು. ಸಾಕ್ಷಾತ್ ವರುಣನೇ ಬಂದು ಆಟ ನೋಡುತ್ತಿದ್ದಾನೆಂದು ಅನ್ನಿಸಿತು. ಆದರೆ ಅವನು ಮಳೆಯನ್ನು ತರದೆ ಮ್ಯಾಚ್ಗೆ ಬರಬೇಕಾಗಿತ್ತು! ಕೊನೆಗೆ ಡಕ್ವರ್ತ್-ಲೂಯಿಸ್ ಅವರ ಕೋಸ್ಟಕದ ಪ್ರಕಾರ ಪಾಕಿಸ್ಥಾನದ ರನ್ ಗತಿ ನ್ಯೂಝಿಲೆಂಡಿಗಿಂತ ಹೆಚ್ಚಾಗಿದ್ದ ಕಾರಣ ಪಾಕಿಸ್ಥಾನವನ್ನು ಗೆದ್ದರೆಂದು ಘೋಷಿಸಲಾಯಿತು. ಪಾಪ! ನ್ಯೂಝಿಲೆಂಡ್ 401 ಹೊಡೆದೂ ಸೋಲನ್ನು ಅನುಭವಿಸಬೇಕಾಯಿತು. ಆದರೆ ಅಂದು ಫಕರ್ ಝಾಮನ್ರ ಆಟವನ್ನು ನೋಡಿದವರು ದಂಗಾಗಿ ಮಳೆಯಿಲ್ಲದಿದ್ದರೆ ಆ ಸ್ಕೋರನ್ನೂ ಆವತ್ತು ಪಾಕಿಸ್ಥಾನ ಹೊಡೆಯುತ್ತಿದ್ದರು.
ಒಂದು ಕಡೆ ಫಕರ್ ಝಾಮನ್ ಎಲ್ರನ್ನೂ ಮಂತ್ರಮುಗ್ಧರನ್ನಾಗಿ ಮಾಡಿದರೆ ಇನ್ನೊಂದು ಕಡೆ ದೇವರೇ ಬಂದು ನಿಂತು ಮ್ಯಾಚ್ ಆಡುತ್ತಿದ್ದಾನೋ ಅನ್ನುವ ಭ್ರಾಂತಿ ತರಿಸಿದವರು ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ವೆಲ್.
ಆಸ್ಟ್ರೇಲಿಯಾ ಆಫ್ಘಾನಿಸ್ಥಾನದ ವಿರುದ್ಧ ಹೋದವಾರ ಪಂದ್ಯ ನಡೆಯಿತು. ಆಸ್ಟ್ರೇಲಿಯಾ ಐದು ಬಾರಿ ವಿಶ್ವ ಕಪ್ ಗೆದ್ದ ದೇಶ. ಈ ಸರ್ತಿ ಅವರ ಆಟ ಅಷ್ಟು ಚೆನ್ನಾಗಿ ಶುರುವಾಗಲಿಲ್ಲ. ಭಾರತಕ್ಕೆ ಸೋತ ಆಸೀಸ್, ದಕ್ಷಿಣ ಆಫ್ರಿಕಾದ ವಿರುದ್ಧ ಹೀನಾಯವಾಗಿ ಸೋತು ಅವರು ಮುಂದೆ ಸೆಮಿ-ಫೈನಲ್ಗೆ ಬರುತ್ತಾರಾ ಎಂಬ ಶಂಕೆ ಎಲ್ಲರ ಮನಸ್ಸಿನಲ್ಲಿ ಎದ್ದಿತ್ತು. ಹೀಗಿದ್ದಾಗ ಅವರ ಆಫ್ಘಾನಿಸ್ಥಾನದ ಪಂದ್ಯ ನಿರ್ಣಾಯಕವಾಗಿತ್ತು.
ಅತ್ತ ಎಲ್ಲರಿಗಿಂತಲೂ ಕಡಿಮೆ ಅನುಭವವಿದ್ದ ಆಫ್ಘಾನಿಸ್ಥಾನಿಗಳ ಆಟದಲ್ಲಿ ಉನ್ನತ ಮಟ್ಟದ ಬ್ಯಾಟಿಂಗ್ ಮತ್ತು ಬೋಲಿಂಗ್ ಇತ್ತು. ಅವರ ಸ್ಪಿನ್ ಬೋಲಿಂಗನ್ನು ಆಡುವುದು ಅಷ್ಟು ಸುಲುಭವಲ್ಲ ಎಂದು ಎಲ್ಲರಿಗೂ ಸಾಬೀತಾಗಿತ್ತು. ಎಲ್ಲರಿಗೂ ಒಂದಲ್ಲ ಒಂದು ರೀತಿ ಚಳ್ಳೆ ಹಣ್ಣು ತಿನ್ನಿಸುವ ತಾಖತ್ತು ಅವರಿಗಿತ್ತು.
ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ಥಾನ ಅನೀರಿಕ್ಷಿತವಾಗಿ 292 ರನ್ ಮಾಡಿದರು. ಅದರಲ್ಲಿ ಇಬ್ರಾಹಿಂ ಝಡ್ರಾನ್ 129 ರನ್ ಬಾರಿಸಿದರು. ರಹಮತ್ 30 ಮತ್ತು ಕೇವಲ 18 ಬಾಲ್ಗಳಲ್ಲಿ 35 ಬಾರಿಸಿದ ರಷೀದ್ ಖಾನ್ ಅವರುಗಳ ಸ್ಕೋರಿನಿಂದ ಆಫ್ಘಾನಿಸ್ಥಾನ್ 291/5 ವಿಕೆಟ್ಗೆ ತಲುಪಿತು. ಅದು ಮುಂಬೈನ ವಾಂಖೇಡೆ ಮೈದಾನದಲ್ಲಿ ಒಳ್ಳೆಯ ಸ್ಕೋರ್ ಎಂದು ಪರಿಗಣಿಸಲಾಗಿತ್ತು.
ಗೆಲ್ಲಲು 292ರನ್ ಬೇಕಾಗಿದ್ದ ಆಸ್ಟ್ರೇಲಿಯ, ಧಡ ಧಡನೆ ವಿಕೆಟ್ ಕಳೆದುಕೊಂಡರು. 7 ವಿಕೆಟ್ಗಳು 91 ರನ್ಗೆ ಬಿದ್ದವು. 91/7.
ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ನಾಯಕ ಕಮಿಂಗ್ಸ್ ಆಡಲು ಬಂದರು. ಮ್ಯಾಕ್ಸ್ವೆಲ್ಗೆ ಶುರುವಲ್ಲೇ ಆಫ್ಘನ್ನರು ಎರಡು ಬಾರಿ ಕ್ಯಾಚ್ ಬಿಟ್ಟು ಜೀವದಾನ ಮಾಡಿದರು. ಮೂರನೇ ಬಾರಿ ಎಲ್. ಬಿ. ಔಟ್ ಆದರೆಂದು ಅವರು ಹೋಗುತ್ತಿರುವಾಗ ಡಿಆರ್ಎಸ್ ನೋಡಿ ಅಂಪೈರ್ ನೀನು ಔಟಿಲ್ಲ ಎಂದು ವಾಪಸ್ಸು ಕರೆದರು. ಎರಡು ದಿನಗಳ ಹಿಂದೆ ಮ್ಯಾಕ್ಸ್ವೆಲ್ ಗಾಲ್ಫ್ ಆಡಲು ಹೋಗಿ ಅಲ್ಲಿ ಬಿದ್ದು ಬೆನ್ನಿಗೆ ಗಾಯ ಮಾಡಿಕೊಂಡಿದ್ದರು. ಆಡಲು ಅವರಿಗೆ ಸಂಪೂರ್ಣವಾಗಿ ಗುಣವಾಗಿರಲಿಲ್ಲ.
ಇನ್ನೇನು ಆಫ್ಘಾನಿಸ್ಥಾನದ ಮುಂದೆ ಮುಗ್ಗರಿಸಿದ ಆಸ್ಟ್ರೇಲಿಯಾ ಮೇಲೆ ಗೆದ್ದೇ ಗೆಲ್ಲುತ್ತಾರೆ ಎಂದು ಕ್ರಿಕೆಟ್ನ ಪಂಡಿತರು ಮತ್ತು ಪ್ರೇಕ್ಷಕರು ಲೆಕ್ಕ ಹಾಕುತ್ತಿರುವಾಗ ಮ್ಯಾಕ್ಸ್ವೆಲ್ ಅವರು ಚಮತ್ಕಾರ ಶುರುಮಾಡಿದರು. ಸ್ವಾಭಾವಿಕವಾಗಿ ಮ್ಯಾಕ್ಸ್ವೆಲ್ ಬೌಂಡರಿ ಮತ್ತು ಸಿಕ್ಸರ್ ಹೊಡೆಯುವುದರಲ್ಲಿ ನಿಸ್ಸೀಮರಾಗಿದ್ದರು. ಎರಡು ಬಾರಿ ಜೀವದಾನ ಪಡೆದ ಮ್ಯಾಕ್ಸ್ವೆಲ್ ಬೋಲಿಂಗನ್ನು ಥಳಿಸಲಿಕ್ಕೆ ಶುರುಮಾಡಿದರು. ಹೀಗೆ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಅವರ ಬೆನ್ನಿನ ನೋವು ತೀವ್ರವಾಯಿತು. ಆದರೂ ಆಡುತ್ತಿದ್ದ ಮ್ಯಾಕ್ಸ್ವೆಲ್ಗೆ ಕಾಲಲ್ಲಿ ಸೆಳೆತ, ನೋವು ಕಾಣಿಸಿಕೊಂಡಿತು. ಬೆನ್ನು ನೋವಿನ ಜೊತೆ ಕಾಲಿನ ಸೆಳೆತದಿಂದ ಅವರಿಗೆ ಓಡುವುದು ಇರಲಿ ನಡೆಯಲೂ ಆಗಲಿಲ್ಲ. ಆದ್ದರಿಂದ ನಿಂತಲ್ಲಿಯೇ ಬಾಲನ್ನು ಬ್ಯಾಟಿನಿಂದ ಬೀಸಿ ಸಿಕ್ಕ ಕಡೆ ಹೊಡೆಯುತ್ತಿದ್ದರು. ಅವರ ಸ್ಥಿತಿ ನೋಡಲು ಕರುಣಾಜನಕವಾಗಿತ್ತು. ಅವರನ್ನು ಆಡುವುದು ಬೇಡ, ಈಗ ಸಧ್ಯಕ್ಕೆ ರಿಟೈರ್ಡ್ ಆಗಿ ಆಮೇಲೆ ಬಂದು ಆಡಿ ಎಂದರೆ ಅವರು ಅದಕ್ಕೆ ಸುತಾರಾಂ ಒಪ್ಪಲಿಲ್ಲ. ಹೀಗೆ ಕೆಳಗೆ ಬೀಳುವುದು ಮತ್ತೆ ಸುಧಾರಿಸಿಕೊಂಡು ಬಾಲನ್ನು ಬೌಂಡರಿಗೆ ರವಾನಿಸುವುದು, ಇದನ್ನೇ ಮಾಡುತ್ತಾ ಹೋದರು ಮ್ಯಾಕ್ಸ್ವೆಲ್. ಅವರನ್ನು ನೋವು ಹಿಂಡಿಹಾಕಿತ್ತು. ಹಾಗೇ ಆಡಿದ ಮ್ಯಾಕ್ಸ್ವೆಲ್ ಅವರಿಗೆ ದೇಹದಲ್ಲಿ ಉಪ್ಪಿನಾಂಶ ಕಡಿಮೆಯಾಗಿ ಅವರಿಗೆ ದೇಹದ ಸೆಳೆತ ಬಂದು ದೊಪ್ಪನೆ ಕೆಳಗೆ ಬಿದ್ದರು. ಅವರಿಗೆ ಮೇಲೆ ಏಳಲು ಆಗಲಿಲ್ಲ. ಆಸ್ಟ್ರೇಲಿಯಾದ ಫಿಸಿಯೋ ಮತ್ತೆ ಮತ್ತೆ ಓಡಿ ಬಂದು ಅವರನ್ನು ಎತ್ತಿ ಎಬ್ಬಿಸಿ, ನೋವಿಗೆ ಔಷಧವನ್ನು ಕೊಡುತ್ತಿದ್ದರು. ಕೊನೆಗೆ ಓಡುವುದನ್ನು ಬಿಟ್ಟು ಬ್ಯಾಟ್ ಬೀಸಿ ಹೇಗೋ ಬೌಂಡರಿ ಮತ್ತು ಸಿಕ್ಸರ್ ಬಾರಿಸಲು ಶುರುಮಾಡಿದರು. ಅವರು ಕುಂಟುತ್ತಲೇ ನಡೆಯ ಬೇಕಾಗಿತ್ತು.
ಕ್ರಿಕೆಟ್ನಲ್ಲಿ ಅನೇಕ ಪವಾಡಗಳನ್ನು ಪ್ರೇಕ್ಷಕರು ವೀಕ್ಷಿಸಿದ್ದಾರೆ. ಆದರೆ ಇಂತಹ ಆಟವನ್ನು ವಾಂಖೇಡೆ ಮೈದಾನದಲ್ಲಿ ಯಾರೂ ನೋಡಿರಲಿಲ್ಲ. ಲಕ್ಷಾಂತರ ಜನ ಟಿವಿಯಲ್ಲಿ ಇಂತಹ ದೃಶ್ಯವನ್ನು ವೀಕ್ಷಿಸಿರಲಿಲ್ಲ. ಪವಾಡಗಳು ಸಾಮಾನ್ಯವಾಗಿ ಕೇಳಿರುವುದು ಸಹಜ. ಯಾವುದೋ ಕಾಲದಲ್ಲಿ ಹೀಗಾಯಿತು, ಹೀಗೆ ಮಾಡಿದರು ಎನ್ನುವುದನ್ನು ಓದಿರುತ್ತೇವೆ, ಕೇಳಿರುತ್ತೇವೆ. ಅದನ್ನು ಕಣ್ಣಾರೆ ಯಾರೂ ನೋಡಿರುವುದಿಲ್ಲ. ಆದರೆ ಅಂದು ನಮ್ಮ ಕಣ್ಣೆದುರಿಗೆ ನಡೆಯುತ್ತಿರುವ ಪವಾಡವನ್ನು ಲಕ್ಷಾಂತರ ಜನ ವೀಕ್ಷಿಸಿದರು. ಮತ್ತೆ ಮತ್ತೆ ಬೀಳುತ್ತಾ, ಕುಂಟುತ್ತಾ ಒಂದೇ ಕಾಲಿನಲ್ಲಿ ಆಡಿದ ಮ್ಯಾಕ್ಸ್ವೆಲ್ ಕೇವಲ 128 ಬಾಲ್ಗಳಲ್ಲಿ 201 ರನ್ ಹೊಡೆದರು. ಅವರು ತಮ್ಮ ಟೀಮನ್ನು ಗೆಲ್ಲಿಸಲು ಹೊಡೆದ ಸಿಕ್ಸರ್ ತಮ್ಮ ವೈಯುಕ್ತಿಕ ಸ್ಕೋರ್ 201 ರನ್ ಆಯಿತು. ಆಸ್ಟ್ರೇಲಿಯದಲ್ಲಿ ಮಲಗಿದ್ದವರು ಮ್ಯಾಕ್ಸ್ವೆಲ್ ಆಟವನ್ನು ಯಾರಿಂದಲೋ ಕೇಳಿ ಎದ್ದು ನೋಡಲಾರಂಭಿಸಿದರು.
ಅಂದು ಮ್ಯಾಕ್ಸ್ವೆಲ್ ಆಡಿದ ಆಟ ಕ್ರಿಕೆಟ್ನ ಸುವರ್ಣಾಕ್ಷರದಲ್ಲಿ ಬರೆಯಬೇಕು; ಅಂತಹ ಆಟವನ್ನು ತಮ್ಮ ಟೀಮ್ ಗೆಲ್ಲಲಿ ಎಂಬ ಧ್ಯೇಯದಿಂದ ಆಡಿದ ಆಟ. ಯಾವ ಡಾಕ್ಟರ್ಗಳೂ ಅಂತಹ ಸ್ಥಿತಿಯಲ್ಲಿ ಯಾರನ್ನೂ ಆಡುವುದಕ್ಕೆ ಬಿಡುವುದಿಲ್ಲ. ತಮ್ಮ ದೇಹದ ಸ್ಥಿತಿ ಕ್ಷಣ ಕ್ಷಣಕ್ಕೂ ಉಲ್ಬಣಾಸ್ಥಿತಿಯಲ್ಲಿ ಕ್ಷೀಣಿಸುತ್ತಿರುವಾಗ ಎಲ್ಲವನ್ನೂ ಬದಿಗೆ ತಳ್ಳಿ ತಮ್ಮ ಟೀಮಿನ ಗೆಲುವಿಗೆ ಕಾರಣರಾದರು ಮ್ಯಾಕ್ಸ್ವೆಲ್ ಅಂದು.
ಮ್ಯಾಕ್ಸ್ವೆಲ್, ಆಸ್ಟ್ರೇಲಿಯದಲ್ಲಿ ನೆಲೆಸಿರುವ ಭಾರತದ ಚೆನೈ ಹುಡುಗಿ ವಿನಿ ರಾಮನ್ ಅನ್ನುವರನ್ನು 2022ರಲ್ಲಿ ಮದುವೆಯಾದರು. ಕ್ರಿಶ್ಚಿಯನ್ ಮತ್ತು ಹಿಂದು ವಿಧಿಯಂತೆ ಎರಡು ದೇಶಗಳಲ್ಲೂ ಶಾಸ್ತ್ರೀತ್ರವಾಗಿ ಮದುವೆಯಾಯಿತು.
ಅಂತಹ ಮಹಾನ್ ಇನಿಂಗ್ಸ್ ಆಡಿದ, ಒಂದು ಪವಾಡವನ್ನು ವೀಕ್ಷಿಸಲು ಕಾರಣರಾದ ಗ್ಲೆನ್ ಮ್ಯಾಕ್ಸ್ವೆಲ್ ಅವರಿಗೆ ಕ್ರಿಕೆಟಾಯಣ ನಮಃದಿಂದ ದೊಡ್ಡ ನಮಸ್ಕಾರ. ಈ ಆಟವನ್ನು ಮುಂದೆ ಅನೇಕ ಜನಾಂಗಗಳು ವೀಕ್ಷಿಸಿ ಆಶ್ಚರ್ಯಪಡುವುದರಲ್ಲಿ ಸಂದೇಹವಿಲ್ಲ. ಅದರಿಂದ ಉತ್ತೇಜಿತರಾಗಿ ತಮಗಾದ ಪೆಟ್ಟನ್ನು ಲೆಕ್ಕಿಸದೆ ತಮ್ಮ ಟೀಮಿನ ಏಳಿಗೆಗೆ ಏನು ಬೇಕಾದರೂ ಮಾಡಬೇಕೆನ್ನುವ ಹುಮ್ಮಸ್ಸು, ಕಾತುರತೆ ಮತ್ತು ಛಲ ಮ್ಯಾಕ್ವೆಲ್ಲರ ಆಟದ ಅನುಭವದಿಂದ ದೊರೆಯುತ್ತೆ. ಇದು ಮ್ಯಾಕ್ಸ್ವೆಲ್ ಕ್ರಿಕೆಟ್ಗೆ ಕೊಟ್ಟ ಮಹಾನ್ ಕೊಡುಗೆ.
ಫಿಲಿಪ್ಸ್ ಕಂಪನಿಯಿಂದ ನಿವೃತ್ತರಾದ ನಂತರ ಮೈಸೂರಿನಲ್ಲಿ ನೆಲೆಸಿದ್ದಾರೆ. ಅವರು `ಶಂಕರ್ಸ್ ವೀಕ್ಲಿ’ಯಲ್ಲಿ ಹಾಸ್ಯ ಲೇಖನವನ್ನು ಬರೆಯುತ್ತಿದ್ದರು. ಈಗ ಅಪರಂಜಿ ಮಾಸಿಕ ಪತ್ರಿಕೆಗೆ ಹಾಸ್ಯ ಲೇಖನ ಬರೆಯುತ್ತಾರೆ. ಚುರುಮುರಿ, ಹಿಂದುಸ್ತಾನ್ ಟೈಮ್ಸ್, ಸಿಎನೆನ್ ಮತ್ತು ನ್ಯೂಸ್ ೧೮ ನಲ್ಲಿಯೂ ಅವರ ಲೇಖನಗಳು ಪ್ರಕಟವಾಗಿವೆ. ‘ಅಜ್ಜಿ ಮತ್ತು ಇತರ ಕತೆಗಳು’ ಅವರ ಪ್ರಕಟಿತ ಕೃತಿ.