ಏರು ಮಧ್ಯಾಹ್ನದ ಬಿಸಿಲಲ್ಲಿ ಭಾಷಾಧಾರಿತ ಭಾರತ ದೇಶದ ರಾಜ್ಯಗಳನ್ನು ಪ್ರತಿನಿಧಿಸುತ್ತಾ ಸ್ಥಳೀಯ ಸಂಸ್ಥೆಗಳು ಪೆರೇಡ್ ನಡೆಸಿದವು. ಮರಾಠಿ ಸಂಸ್ಥೆಯವರು ಹೆಗಲ ಮೇಲೆ ದೊಡ್ಡದೊಡ್ಡ ಡೋಲುಗಳನ್ನು ಇಳಿಬಿಟ್ಟುಕೊಂಡು ಲಯಬದ್ಧವಾಗಿ ಬಾರಿಸುತ್ತಿದ್ದರು. ಬಿಳಿಯುಡುಪಿಗೆ ಹೊಂದುವಂತೆ ಬಿಳಿಬಣ್ಣದ ಡೋಲುಗಳು, ಬಿಸಿಲಿನ ಝಳವನ್ನು ತಡೆಹಿಡಿಯಲು ಕಣ್ಣಿಗೆ ತಂಪು ಕನ್ನಡಕ. ಬರೇ ಗಂಡಸರು ಎನ್ನುವುದಕ್ಕೆ ಅಪವಾದವೆಂಬಂತೆ ಡೋಲು ಬಾರಿಸುತ್ತಾ ಸಾಗಿದ್ದವರಲ್ಲಿ ಒಬ್ಬ ಹೆಣ್ಣುಮಗಳೂ ಇದ್ದರು! ನಂತರ ಇದ್ದದ್ದು ಗುಜರಾತಿ, ತಮಿಳು, ತೆಲುಗು, ಕನ್ನಡ, ಮಲೆಯಾಳಂ ಸಂಸ್ಥೆಗಳು. 
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಅಂಕಣ

 

ಚಳಿಗಾಲ, ಮೈ ಕೊರೆಯುವ ಗಾಳಿ ಬ್ರಿಸ್ಬನ್ ನಗರವಾಸಿಗಳನ್ನ ಬಿಡದೆ ಇನ್ನೂ ಅಪ್ಪಿಕೊಂಡಿದೆ. ಅರ್ಧದಷ್ಟು ಆಗಸ್ಟ್ ತಿಂಗಳು ಮುಗಿದರೂ ಜನ ಬೆಳಗ್ಗೆ ಮತ್ತು ಸಂಜೆ ಹೊತ್ತು ಸ್ವೆಟರ್, ಜಂಪರ್, ಜಾಕೆಟ್, ಬ್ಲೇಝರ್ ಹಾಕಿಕೊಂಡೇ ಓಡಾಡುತ್ತಿದ್ದಾರೆ. ಬೆಳಗ್ಗೆ ಹತ್ತು ಗಂಟೆಯಾದ ನಂತರ ಸೂರ್ಯ ಆಕಳಿಸಿ ಎದ್ದು ತಲೆಮೇಲಿನ ಟೋಪಿ ಕಳಚಿ ಅಯ್ಯಯ್ಯೋ ಚಳಿಯಪ್ಪಾ ಎನ್ನುತ್ತಾ ಮೈಕೊಡವಿಕೊಂಡನೇನೋ ಅನ್ನೋ ಥರ ಬಿಸಿಲಿಗೆ ಶಾಖ ತಾಕಿ ಇದ್ದಕ್ಕಿದ್ದಂತೆ ದಿನ ಕಾವೇರುತ್ತದೆ. ಮೈಮೇಲಿರುವ ಬಟ್ಟೆಗಳ ಪದರುಗಳು ಕಡಿಮೆಯಾಗುತ್ತಾ ಹೆಂಗಸರ ಟಾಪ್ಸ್, ಗಂಡಸರ ಶರ್ಟ್, ಮಕ್ಕಳ ಯುನಿಫಾರ್ಮ್ ನ ವಿವಿಧ ವೈಖರಿಗಳು ಕಾಣಸಿಗುತ್ತದೆ. ಮಧ್ಯಾಹ್ನ ನಾಲ್ಕು ಗಂಟೆ ಆಸುಪಾಸು ಬೈಬೈ ಎನ್ನುತ್ತಾ ಬಿಸಿಲಿನ ಬಿಸುಪು ಮಲಗಲು ಹೊರಟೇಬಿಟ್ಟಾಗ ಅದರ ಕೈಹಿಡಿದು ಜಗ್ಗಿ ಹತ್ತಿರಕ್ಕೆ ಸೆಳೆದುಕೊಳ್ಳೋಣ ಎನ್ನುವಷ್ಟರಲ್ಲಿ ಚಳಿಯ ಬಳ್ಳಿ ಮೈತುಂಬಾ ಹರಡಿಕೊಳ್ಳುತ್ತದೆ. ಪಕ್ಕಕ್ಕಿಟ್ಟಿದ್ದ ಸ್ವೆಟರ್, ಶಾಲು, ಆಹಾ ನಾವು ಆಪತ್ಕಾಲದ ಬಂಧುಗಳು ಅಲ್ಲವೇ, ಅನ್ನುತ್ತಾ ನಮ್ಮನ್ನು ಕಿಚಾಯಿಸುತ್ತವೆ.

ಆಗಸ್ಟ್ ತಿಂಗಳ ಹೈಲೈಟ್ ಅಂದರೆ ಈ ಬಿಸಿಲು-ಚಳಿಯ ಕಣ್ಣಾಮುಚ್ಚಾಲೆ ಆಟಗಳು ಮತ್ತು ಇಂಡಿಯನ್ ಇಂಡಿಪೆಂಡೆನ್ಸ್ ಡೇ ಆಚರಣೆ. GOPIO ಎಂಬ ಅಂತರದೇಶಿಯ ಭಾರತೀಯರ ಒಕ್ಕೂಟ ಏರ್ಪಡಿಸುವ ಆಚರಣೆಯೇ ಬ್ರಿಸ್ಬನ್ ನಗರದಲ್ಲಿ ನಡೆಯುವ ದೊಡ್ಡಮಟ್ಟದ ಭಾರತ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ. ಆ ದಿನ ಇಡೀ Roma Street Parklands amphi theatre ವಿಶೇಷ ಕಳೆ ಕಟ್ಟಿಸಿಕೊಂಡು ಬೀಗುತ್ತದೆ. ಬೆಳಗ್ಗೆ ಹನ್ನೊಂದಕ್ಕೆ ಕಾರ್ಯಕ್ರಮಗಳ ಆರಂಭ ಎಂದು ಪ್ರಕಟಿಸಿದ್ದರೂ, ಆಯೋಜಕರು, ಪ್ರಾಯೋಜಕರು, ಅತಿಥಿಗಳು, ಗಣ್ಯರು ಬಂದು ಹಾಜರಿದ್ದರೂ, ಉದ್ಘಾಟನೆ ಮಾಡಿ ಮುಗಿಸಿದರೂ ಭಾರತೀಯ ಸಮುದಾಯಗಳ ಜನರು ಅವರವರ ಸಮಯದ ಅನುಕೂಲ ನೋಡಿಕೊಂಡು ನಿಧಾನಕ್ಕೆ ಅಂದರೆ ಮಧ್ಯಾಹ್ನದ ಆರಂಭಕ್ಕೆ ಬಂದು ಸೇರುತ್ತಾರೆ.

ವಾರದ ದಿನಗಳಲ್ಲಿ ಹೊತ್ತಾರೆ ಬೆಳಗಿನಿಂದ ದುಡಿದು ಸಂಜೆ ಮಕ್ಕಳ ಜೊತೆ ಮನೆಸೇರುವ ಸರ್ಕಸ್ ಮಾಡುವವರಿಗೆ ಶನಿವಾರ ಬಂತೆಂದರೆ ಸ್ವಲ್ಪ ಆರಾಮು. ವಾರಾಂತ್ಯದ ಹಣ್ಣುತರಕಾರಿ ಮಾರುಕಟ್ಟೆ, ಮಕ್ಕಳ ಸ್ವಿಮ್ಮಿಂಗ್ ಕ್ಲಾಸ್, ಆಟೋಟಗಳು, ಸಂಗೀತ, ನೃತ್ಯ, ಪಾಠ…. ಎಂಬಂತೆ ಉದ್ದನೆ ಪಟ್ಟಿ ಆವತ್ತೂ ಕೂಡ ಇರುತ್ತದೆ. ಆದರೆ ಉಸಿರು ಹಿಡಿದುಕೊಂಡು ಓಡುವ ಧಾವಂತ ಕಡಿಮೆ.

ಫೋಟೋಗಳನ್ನ ತೆಗೆಯುತ್ತಾ ಅಲ್ಲಲ್ಲಿ ನಾನು ಓಡಾಡಿದಾಗ ಹಿಂದಿ ಜೊತೆಗೆ ಪಂಜಾಬಿ, ಬೆಂಗಾಲಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಮಲೆಯಾಳಂ ಮತ್ತು ನಮ್ಮ ಕನ್ನಡ ಭಾಷೆಗಳು ಕಿವಿಗೆ ಬೀಳುತ್ತಿತ್ತು. ಸದಾ ಇಂಗ್ಲಿಷ್ ಭಾಷೆಯಲ್ಲೆ ಸಂವಹಿಸುವ ಅವಶ್ಯಕತೆಯಿರುವ ಈ ವಾತಾವರಣದಲ್ಲಿ ಬಹುತ್ವಗಳು ಹೇಳಲಾರದಂಥ ಉಲ್ಲಾಸವನ್ನು ಕೊಡುತ್ತವೆ. ಅಷ್ಟರಲ್ಲಿ ದಿನದ ಬಿಸಿಲಿಗೆ ಶಾಖವೇರಿ ಭಾರತೀಯ ಉಡುಪು, ಅಲಂಕಾರ, ಆಭರಣಗಳು ಝಗಮಗಿಸಲು ತೊಡಗುತ್ತವೆ. ಪಾರ್ಕಿನಲ್ಲಿ ಸುತ್ತಾಡಲು ಬರುವ ಇತರೇ ಜನಕ್ಕೆ ಈ ಅಲಂಕಾರ, ಹಣೆಯಲ್ಲಿ ಬೊಟ್ಟು, ಬಣ್ಣಬಣ್ಣದ ಭಾರತೀಯ ಉಡುಪುಗಳನ್ನು ನೋಡಿ ಮುಖ ಅಗಲವಾಗುತ್ತದೆ. ಸುತ್ತಾಡಲು ಬಂದ ಜನ ಅಲ್ಲೇ ನಿಲ್ಲುತ್ತಾರೆ. ನಿಂತವರು ಹುಲ್ಲುಹಾಸಿನ ಮೇಲೆ ಕೂರುತ್ತಾರೆ. ವೇದಿಕೆಯ ಮೇಲೆ ನಡೆಯುತ್ತಿರುವ ನೃತ್ಯಗಳು ಅವರನ್ನು ಕುಳಿತ ಜಾಗಕ್ಕೇ ಅಂಟಿಸಿಬಿಡುತ್ತವೆ.

ಎದ್ದೇನಾದರೂ ನಿಂತುಬಿಟ್ಟರೆ ಅವರ ಸುತ್ತಾ ಅಗೋಚರ ಭೂತದಂತೆ ಹರಡಿರುವ ಮಸಾಲೆ ವಾಸನೆ ಮೂಗಿಗೆ ಬಡಿಯುತ್ತದೆ. ಕಳ್ಳನೋಟದಲಿ ಭಾರತೀಯರ ಕೈಯಲ್ಲಿರುವ ಪ್ಲಾಸ್ಟಿಕ್ ತಟ್ಟೆಗಳ ಕಡೆ ಕಣ್ಣು ಹಾಯಿಸುತ್ತಾರೆ. ತಟ್ಟೆಯಲ್ಲೂ ರಂಗುರಂಗೇ! ಗಾತ್ರ, ರೂಪ, ರುಚಿಯಲ್ಲೂ ಭಾರತೀಯರಷ್ಟೇ ಭಿನ್ನತೆಗಳನ್ನು ಪ್ರದರ್ಶಿಸುವ ಸಮೋಸ, ವಡಾಪಾವ್, ಪಾವ್ ಭಾಜಿ, ಪುಲಾವ್, ತಾಲಿ ಊಟ, ವಿವಿಧ ಮಸಾಲಾ ಕರ್ರಿಗಳು, ತಂದೂರಿ ಚಿಕನ್. ಅವುಗಳ ಜೊತೆ ಪೈಪೋಟಿ ಕೊಡಲು ಭೇಲ್ ಪುರಿ, ಪಾನಿಪುರಿ ಮುಂತಾದ ಚಾಟ್ ನಮೂನೆಗಳು…. ಅವನ್ನೆಲ್ಲಾ ಮೀರಿಸಿ ಬಿಸಾಡಿದ್ದು ನಮ್ಮ ದಕ್ಷಿಣದ ದೋಸೆಗಳು; ಪ್ಲೈನ್, ಮಸಾಲೆ, ಸ್ಟಫ್ಡ್, ಚಾಕೋಲೇಟ್ ದೋಸೆಗಳ ಆಕಾರಗಾತ್ರವನ್ನು ನೋಡೇ ಜನ ಉದ್ದುದ್ದ ಕ್ಯೂ ನಿಂತಿದ್ದರು. ಜೊತೆಗೆ ದೋಸೆ ಎಂಬುದು ಈಗ ಸೂಪರ್ ಫುಡ್-ಅದರಲ್ಲಿ ಸಹಜವಾಗಿ ಬೆರೆತ ಜೀವಂತ ಮಾನವಸ್ನೇಹಿ ಬ್ಯಾಕ್ಟಿರಿಯಾಗಳಿವೆ, ಅದು gluten-ಫ್ರೀ ಮತ್ತು ವೀಗನ್ ಆದ್ದರಿಂದ ಸರ್ವರಿಗೂ ಸಲ್ಲುವ ಫುಡ್ಡು. ಅಲರ್ಜಿಗಳಿಗೆ ಸರಿಯುತ್ತರ ಕೊಡುವ ಸೂಪರ್ ಶಕ್ತಿಯಿದೆ ಅದಕ್ಕೆ ಎಂದೆಲ್ಲಾ ಪ್ರಚಾರ ಪಡೆದು ಈಗ ದೋಸೆಯೆಂದರೆ ಪರಮಶ್ರೇಷ್ಠ ತಿನಿಸು.

ಒಂದಲ್ಲ ಎರಡಲ್ಲ, ಮೂರು ಮಳಿಗೆಗಳಲ್ಲಿ ಬಿಸಿಬಿಸಿ ದೋಸೆ ತಯಾರಾಗುತ್ತಿತ್ತು. ಪ್ಲೇನ್ ದೋಸೆಗೆ ಐದು ಡಾಲರ್ರು, ಮಸಾಲೆ ದೋಸೆಗೆ ಹತ್ತು ಡಾಲರ್ರು. ತಿಂದವರ ಹೊಟ್ಟೆಗೆ ತೃಪ್ತಿ, ಕಿಸೆಯಲ್ಲಿ ಕಾಸು ಸೇರಿಸಿಕೊಂಡ ವ್ಯಾಪಾರಿಗಳಿಗೆ ಅದಕ್ಕಿಂತಲೂ ಹೆಚ್ಚಿನ ಖುಷಿ. ಮನೆಯಲ್ಲಿ ಆಗೀಗ ದೋಸೆ ಮಾಡುವ ದಕ್ಷಿಣದವರು ಬರೀ ಒಂದು ದೋಸೆಗೆ ಅಷ್ಟು ಬೆಲೆಯೇ ಎಂದು ಗೊಣಗುತ್ತಾ ಉತ್ತರದ ತಿನಿಸು ಸಮೋಸ, ಪಾವ್ ಭಾಜಿ ಕಡೆ ನಡೆಯುತ್ತಿದ್ದರು. ಒಂದು ಖಾಲಿ ದೋಸೆ, ಎರಡು ಸಮೋಸ ಪೇರಿಸಿಕೊಂಡು ಬಿಸಿಲನ್ನು ಆಸ್ವಾದಿಸುತ್ತಾ ಹುಲ್ಲಿನ ಮೇಲೆ ಕಾಲುಚಾಚಿ ಕುಳಿತು ಸವಿಯುತ್ತಾ, ವೇದಿಕೆಯ ಮೇಲೆ ನಡೆಯುತ್ತಿದ್ದ ತಂಡೋಪತಂಡ ಡ್ಯಾನ್ಸ್ ಗಳನ್ನು ನೋಡುತ್ತಾ ಕುಳಿತ ಜನಕ್ಕೆ ಈ ಶನಿವಾರ ‘ಯು ಮೇಡ್ ಮೈ ಡೇ’ ಅನ್ನುವಂತಿತ್ತು.

ಏರು ಮಧ್ಯಾಹ್ನದ ಬಿಸಿಲಲ್ಲಿ ಭಾಷಾಧಾರಿತ ಭಾರತ ದೇಶದ ರಾಜ್ಯಗಳನ್ನು ಪ್ರತಿನಿಧಿಸುತ್ತಾ ಸ್ಥಳೀಯ ಸಂಸ್ಥೆಗಳು ಪೆರೇಡ್ ನಡೆಸಿದವು. ಮರಾಠಿ ಸಂಸ್ಥೆಯವರು ಹೆಗಲ ಮೇಲೆ ದೊಡ್ಡದೊಡ್ಡ ಡೋಲುಗಳನ್ನು ಇಳಿಬಿಟ್ಟುಕೊಂಡು ಲಯಬದ್ಧವಾಗಿ ಬಾರಿಸುತ್ತಿದ್ದರು. ಬಿಳಿಯುಡುಪಿಗೆ ಹೊಂದುವಂತೆ ಬಿಳಿಬಣ್ಣದ ಡೋಲುಗಳು, ಬಿಸಿಲಿನ ಝಳವನ್ನು ತಡೆಹಿಡಿಯಲು ಕಣ್ಣಿಗೆ ತಂಪು ಕನ್ನಡಕ. ಬರೇ ಗಂಡಸರು ಎನ್ನುವುದಕ್ಕೆ ಅಪವಾದವೆಂಬಂತೆ ಡೋಲು ಬಾರಿಸುತ್ತಾ ಸಾಗಿದ್ದವರಲ್ಲಿ ಒಬ್ಬ ಹೆಣ್ಣುಮಗಳೂ ಇದ್ದರು! ನಂತರ ಇದ್ದದ್ದು ಗುಜರಾತಿ, ತಮಿಳು, ತೆಲುಗು, ಕನ್ನಡ, ಮಲೆಯಾಳಂ ಸಂಸ್ಥೆಗಳು. ಮಲೆಯಾಳಂ ತಂಡ ಚಂಡೆವಾದ್ಯ ಮೇಳವನ್ನೇ ತಂದಿದ್ದರು. ಶಿಸ್ತಾಗಿ ಪಂಚೆಯುಟ್ಟು ಒಂದಿಷ್ಟೂ ಆಯಾಸ ತೋರಿಸದೆ ಇಡೀ ಒಂದು ಗಂಟೆ ಕಾಲ ಪೆರೇಡಿನಲ್ಲಿ ಸೊಗಸಾಗಿ ಮೇಳವಾದ್ಯವನ್ನು ನಡೆಸಿದರು. ನಮ್ಮ ಕನ್ನಡ ಸಂಘ ಕ್ವೀನ್ಸ್ ಲ್ಯಾಂಡ್ ತಂಡದ ಹಿರಿಯರು, ಪುಟಾಣಿಗಳು ಉತ್ಸಾಹದಿಂದ ಕನ್ನಡ, ಕರ್ನಾಟಕಮಾತೆ ಜೈಕಾರವನ್ನು ಜೋರಾಗಿ ಮೊಳಗಿಸಿದ್ದರು. ಆಗಾಗ ‘ಹುಟ್ಟಿದರೆ ಕನ್ನಡ ನಾಡಿನಲ್ ಹುಟ್ಟಬೇಕು’ ಅನ್ನೋ ಹಾಡು ಗುನುಗುತ್ತಿದ್ದರು. ಅಲ್ಲೇನೋ ಹುಟ್ಟಿದ್ದಾಯ್ತು, ಈಗಿಲ್ಲಿ ಬದುಕ್ತಾ ಇದ್ದೀವಲ್ಲ ಅನಿವಾಸಿಗಳು, ಎಂದು ನಗಾಡುತ್ತಿದ್ದರು.

ದಿನದ ಬಿಸಿಲಿಗೆ ಶಾಖವೇರಿ ಭಾರತೀಯ ಉಡುಪು, ಅಲಂಕಾರ, ಆಭರಣಗಳು ಝಗಮಗಿಸಲು ತೊಡಗುತ್ತವೆ. ಪಾರ್ಕಿನಲ್ಲಿ ಸುತ್ತಾಡಲು ಬರುವ ಇತರೇ ಜನಕ್ಕೆ ಈ ಅಲಂಕಾರ, ಹಣೆಯಲ್ಲಿ ಬೊಟ್ಟು, ಬಣ್ಣಬಣ್ಣದ ಭಾರತೀಯ ಉಡುಪುಗಳನ್ನು ನೋಡಿ ಮುಖ ಅಗಲವಾಗುತ್ತದೆ. ಸುತ್ತಾಡಲು ಬಂದ ಜನ ಅಲ್ಲೇ ನಿಲ್ಲುತ್ತಾರೆ. ನಿಂತವರು ಹುಲ್ಲುಹಾಸಿನ ಮೇಲೆ ಕೂರುತ್ತಾರೆ. ವೇದಿಕೆಯ ಮೇಲೆ ನಡೆಯುತ್ತಿರುವ ನೃತ್ಯಗಳು ಅವರನ್ನು ಕುಳಿತ ಜಾಗಕ್ಕೇ ಅಂಟಿಸಿಬಿಡುತ್ತವೆ.

ಪುಟ್ಟ ಬ್ರಿಸ್ಬನ್ ನಗರದ ಮಟ್ಟಿಗೆ ಹೇಳುವುದಾದರೆ ಇಂತಹ ಇಡೀ ಒಂದು ದಿನದ ಕಾರ್ಯಕ್ರಮಗಳನ್ನು ಅದೂ ಹೊರಾಂಗಣ ಪರಿಸರದಲ್ಲಿ ಆಯೋಜಿಸುವುದೆಂದರೆ ದೊಡ್ಡ ಮಾತೇ ಸರಿ. ಪ್ರತಿಬಾರಿಯೂ ಹಾಜರಿರುವ ಬ್ರಿಸ್ಬನ್ ನಗರ ಮೇಯರ್, ಸ್ಥಳೀಯ ರಾಜಕಾರಣಿಗಳು, ಜಾಗರೂಕತೆಯಿಂದ ಆರಿಸಿ ಕರೆಸುವ ಗಣ್ಯವ್ಯಕ್ತಿಗಳು, ಮುಖ್ಯ ಅತಿಥಿಗಳು ಎಲ್ಲರನ್ನೂ ಒಂದೆಡೆ ಸೇರಿಸಿ ಅವರ ಬಾಯಲ್ಲಿ ಭಾರತ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಪ್ರತಿವರ್ಷವೂ ಹೊಸ ಆಣಿಮುತ್ತುಗಳನ್ನು ಹೊರಡಿಸುವುದೆಂದರೆ ಜವಾಬ್ದಾರಿಯ ಕೆಲಸ. ಸ್ವಲ್ಪ ನಾಜೂಕು, ಸೂಕ್ಷ್ಮ ಕೂಡ.

ಆಸ್ಟ್ರೇಲಿಯನ್ ನೆಲದಲ್ಲಿ ಜೀವಿಸುತ್ತಾ, ನಾವು ಭಾರತೀಯರು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿ ಪಡೆದೆವು, ಸ್ವತಂತ್ರರಾದೆವು, ನಮಗೆ ಅದೆಷ್ಟು ಹೆಮ್ಮೆ, ನಮ್ಮ ಹಿರೀಕರು ಎರಡು ಶತಮಾನಗಳುದ್ದಕ್ಕೂ ಸ್ವಾತಂತ್ರ್ಯ ಸಂಗ್ರಾಮವನ್ನು, ಚಳವಳಿಗಳನ್ನು ಹೇಗೆ ನಡೆಸಿದರು ಎಂದು ನಾವು ಪೀಳಿಗೆಯಿಂದ ಪೀಳಿಗೆಗೆ ಹೇಳುತ್ತಾ ನಮ್ಮ ಮಕ್ಕಳು ಈ ದೇಶದಲ್ಲಿ ಹುಟ್ಟಿ ಬೆಳೆಯುತ್ತಿದ್ದರೂ ಸಹ ಅವರಲ್ಲಿ ದೇಶಭಕ್ತಿಯ ದೀಪವನ್ನು ಬೆಳಗುವ ಕೆಲಸ ನಮ್ಮಿಂದ ಸದಾ ನಡೆದಿದೆ, ಎಂದು ವೇದಿಕೆಯ ಮೇಲೆ ನಿಂತು ಮೈಕು ಹಿಡಿದು ಪುನರುಚ್ಚಿಸುವುದು ನಮ್ಮ ಭಾರತೀಯ ಗಣ್ಯರಿಗೆ ಸ್ವಲ್ಪ ದೊಂಬರಾಟದ ಕೆಲಸವೇನೋ! ಪಕ್ಕದಲ್ಲಿ ಕೂತಿರುವ ಆಸ್ಟ್ರೇಲಿಯನ್ ಗಣ್ಯರಿಗೆ ಏನನ್ನಿಸತ್ತೋ! ಹೆಚ್ಚುಕಡಿಮೆ ಎಲ್ಲರೂ ಬ್ರಿಟಿಷ್, ಯುರೋಪಿಯನ್ ಮೂಲದ ಬಿಳಿ ಜನರು, ಸರ್ಕಾರ ನಡೆಸುವ ಅಧಿಕಾರ ಹಿಡಿದವರು, ಸಮಾಜದಲ್ಲಿ ಬಲಿಷ್ಠರಾದವರು. ಸಮಾಜದ ಮುಖ್ಯವಾಹಿನಿಯನ್ನು ಪ್ರತಿನಿಧಿಸುವ, ನಡೆಸುತ್ತಿರುವ ಬಲವಿರುವ ಬಿಳಿ ಬಲಿಷ್ಠ ಆಸ್ಟ್ರೇಲಿಯನ್ನರ ನಡುವೆ ಆಸ್ಟ್ರೇಲಿಯನ್ ಅಬರಿಜಿನಲ್ ಗಣ್ಯರು, ಅತಿಥಿಗಳು, ಅಧಿಕಾರಿಗಳು ಎಲ್ಲಿದ್ದಾರೆ ಎಂದು ಹುಡುಕುವಂತಾಗಿತ್ತು.

ವಲಸೆಗಾರರಾದ ಭಾರತೀಯ ಗಣ್ಯರು ನಮ್ಮ ದೇಶದ ಸ್ವಾತಂತ್ರ್ಯೋತ್ಸವವನ್ನು ಹಾಡಿ ಹೊಗಳುತ್ತಿದ್ದಾಗ ಆಸ್ಟ್ರೇಲಿಯನ್ ಬಿಳಿ ಜನಕ್ಕೆ ಮತ್ತು ಅಬರಿಜಿನಲ್ ಜನರಿಗೆ ಏನನ್ನಿಸುತ್ತಿತ್ತು? ಮನದಲ್ಲಿ ಅನ್ನಿಸುವ ಮಾತು ಒಂದು, ಒಪ್ಪಿಕೊಂಡಿರುವ ಕೆಲಸವನ್ನು ಬದ್ಧತೆಯಿಂದ ಪಾಲಿಸಿ ಜಬಾಬ್ದಾರಿಯಿಂದ ನಿರ್ವಹಿಸುವುದು ಬೇರೆ. ಪ್ರತಿಯೊಬ್ಬ ಆಹ್ವಾನಿತರೂ ಚಿಕ್ಕಚೊಕ್ಕ ಭಾಷಣವನ್ನು ಮಾಡಿ, ಪ್ರೇಕ್ಷಕರಿಗೆ ನೀಡಬೇಕಿದ್ದ ಸಂದೇಶವನ್ನು ನೀಡಿ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿ ಗೆದ್ದುಕೊಂಡರು. ಇನ್ನುಳಿದಂತೆ ವೇದಿಕೆಗೆ ತಂದ ಹಾಡುಗಳಲ್ಲಿ, ನೃತ್ಯಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಬೇಕಾದಷ್ಟು ಸಂದೇಶವಿತ್ತು.

ವಯಸ್ಸು ಮಾಗಿದ ಹಿರಿಯರು ಶಾಲು, ಸ್ವೆಟರಿನಲ್ಲಿ ದೇಹವನ್ನು ಬೆಚ್ಚಗಿರಿಸಿಕೊಂಡು ತದೇಕಚಿತ್ತದಿಂದ ಅದನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದರೆ ಮಕ್ಕಳ ಅಪ್ಪಅಮ್ಮಂದಿರು ತಿಂಡಿ-ತಿನಿಸು, ಡಾನ್ಸ್, ಸ್ನೇಹಿತರನ್ನು ಹುಡುಕುವುದು ಎಂಬಂತೆ ಅಲ್ಲಿಲ್ಲಿ ಎಡತಾಕುತ್ತಿದ್ದರು. ಸಂದೇಶವನ್ನು ಕೇಳಿಸಿಕೊಳ್ಳುತ್ತಾ ಅರೆ, ಪೂರ್ತಿ ಭಾರತೀಯ ಸೇರುಪಾವು ಪುಟಾಣಿಗಳು ತಮ್ಮ ಇಷ್ಟಾನಿಷ್ಟಗಳನ್ನು ಪೂರೈಸಿಕೊಳ್ಳುತ್ತಾ ಗಲಾಟೆಯಿಲ್ಲದೆ ದಿನ ಕಳೆದಿದ್ದು ಅವರ ಅಪ್ಪ-ಅಮ್ಮಂದಿರಿಗೆ ನೆಮ್ಮದಿ ತಂದಿತ್ತು. ಪುಟಾಣಿಗಳಿಗೆ ಬೇಸರವಾದರೆ ಸುತ್ತಲೂ ಓಡಾಡಲು, ಆಟವಾಡಲು ಬೇಕಾದಷ್ಟು ಅವಕಾಶಗಳಿದ್ದವು.

ಹುಡುಗಿಯರು ಆಗಾಗ ಎದ್ದು ಹೋಗಿ ಕೈಗೆ ಹೆನ್ನಾ ಡಿಸೈನ್ ಹಾಕಿಸಿಕೊಳ್ಳುತ್ತಿದ್ದರು. ಹುಡುಗ-ಹುಡುಗಿ ತಾರತಮ್ಯವಿಲ್ಲದೆ ಭಾರತ ಬಾವುಟವನ್ನ ಮುಖದ ಮೇಲೆ ಪೈಂಟ್ ಮಾಡಿಸಿಕೊಂಡು ಅದರ ಜೊತೆಗೆ ಪುಟ್ಟದೊಂದು ಹುಲಿಚಿತ್ರವೋ, ಮತ್ತೇನೋ ಅವರಿಗೆ ಇಷ್ಟವಾದದ್ದನ್ನ ಬಿಡಿಸಿಕೊಂಡಿದ್ದವರೂ ಇದ್ದರು. ಹಾಡುವ, ನರ್ತಿಸುವ ತಂಡಗಳು ಪಾರ್ಕಿನ ಅಲ್ಲಲ್ಲಿ ತಾಲೀಮು ನಡೆಸಿದ್ದು ಕೆಲಮಕ್ಕಳು ಕಣ್ಣುಬಾಯಿ ಬಿಟ್ಟುಕೊಂಡು ಅದನ್ನು ಗಮನಿಸುತ್ತಿದ್ದದ್ದು ನಗು ಬರಿಸಿತ್ತು. ಇನ್ನೊಂದಷ್ಟು ಮಕ್ಕಳು ಆಹಾರ ಮಳಿಗೆಗಳ ಸಾಲಿನ ಆಚೆಕಡೆ ನಿಲ್ಲಿಸಿದ್ದ ಪೊಲೀಸ್ ವಾಹನದ ಬಳಿ ಹೋಗಿ ಅವರ ವಾಕಿಟಾಕಿ ಮಾತು ಕೇಳುತ್ತಿದ್ದರು.

ಪೊಲೀಸ್ ವಾಹನವನ್ನು ನಿಲ್ಲಿಸಿದ್ದು ಪಾರ್ಕಿಗೆ ಬರಲು ಇದ್ದ ಒಂದು ಮುಖ್ಯ ಪ್ರವೇಶ ದಾರಿಯೊಳಗಡೆ. ಪ್ರವೇಶಿಸಿದ ತಕ್ಷಣಕ್ಕೆ ಬಲಗಡೆ ಇರುವುದು ಮಹಾತ್ಮ ಗಾಂಧಿಯವರ ಶಿಲ್ಪ. ನರೇಂದ್ರ ಮೋದಿ ೨೦೧೪ರಲ್ಲಿ ಪ್ರಧಾನಿಯಾದ ನಂತರ ಆಸ್ಟ್ರೇಲಿಯಾಗೆ ಕೊಟ್ಟ ಭೇಟಿಯ ಸಂದರ್ಭದಲ್ಲಿ ಗಾಂಧಿಯವರ ಶಿಲ್ಪವನ್ನು ಅನಾವರಣಗೊಳಿಸಿದ್ದು ಬ್ರಿಸ್ಬನ್ ಭಾರತೀಯರಿಗೆ ಪುಳಕ ತಂದಿತ್ತು. ಪಾರ್ಕಿಗೆ ಬರುವ ಭಾರತೀಯರು ಮರೆಯದೆ ಗಾಂಧಿ ಶಿಲ್ಪದ ಬಳಿ ನಿಂತು ಫೋಟೋ ಹೊಡೆಸಿಕೊಳ್ಳುತ್ತಾರೆ. ಶಿಲ್ಪವಿರುವ ಕಡೆಯಿಂದ amphi theatre ವೇದಿಕೆ ಚೆನ್ನಾಗಿ ಕಾಣುತ್ತದೆ.

ಆದರಂದು ಸ್ವಾತಂತ್ರ್ಯ ದಿನಾಚರಣೆ ದಿನ ಮಹಾತ್ಮಾ ಗಾಂಧಿ ಶಿಲ್ಪಕ್ಕೆ ವೇದಿಕೆಯ ಮೇಲೆ ನಡೆದ ಕಾರ್ಯಕ್ರಮಗಳನ್ನು ನೋಡಲು ಸಾಧ್ಯವಾಗಲಿಲ್ಲ. ವೇದಿಕೆಯ ಮೇಲೆ ಮಕ್ಕಳು ಜೈ ಹಿಂದ್, ಭಾರತ್ ಮಾತಾಕೀ ಜೈ, ವಂದೇ ಮಾತರಂ ಹಾಡುತ್ತಾ ಮುದ್ದಾದ ನೃತ್ಯಗಳನ್ನು ಪ್ರದರ್ಶಿಸುತ್ತಿದ್ದರೆ ಇಲ್ಲಿ ಶಿಲ್ಪದ ಮುಂದೆ ಅಡ್ಡಲಾಗಿ ಪೊಲೀಸ್ ವಾಹನ ನಿಂತಿದೆ. ಗಾಂಧಿ ತಾತ ತಮ್ಮ ನೋಟವನ್ನು ಮತ್ತೆಲ್ಲೋ ತಿರುಗಿಸಿದ್ದ ಪೊಲೀಸ್ ಪೋಷಾಕನ್ನು ನೋಡುತ್ತಾ ದಿನ ಕಳೆದರೇನೋ. ಭಾರತೀಯ ರಾಷ್ಟ್ರಗೀತೆಯನ್ನು ಎಲ್ಲರೂ ಹಾಡಿದಾಗಲೂ ಗಾಂಧೀಜಿಯವರು ಬಹುಶಃ ಪೊಲೀಸ್ ವಾಕಿಟಾಕಿಯಲ್ಲಿ ಅವರ ಮಾತುಕತೆ ಕೇಳುತ್ತ ಒಬ್ಬಂಟಿಯಾಗಿದ್ದರೇನೋ. ವರ್ಷಕ್ಕೊಮ್ಮೆ ಮಾತ್ರ ಬರುವ ಇಂಥ ಒಂದು ಮುಖ್ಯ ದಿನ, ಅಷ್ಟೆಲ್ಲಾ ಭಾರತೀಯರು ಭಾಷೆಭೇದಗಳನ್ನು ಮರೆತು ಒಂದೆಡೆ ಸೇರಿ ತಮ್ಮ ಸ್ವತಂತ್ರನಾಡನ್ನು ಕುರಿತು ಹೆಮ್ಮೆಯಿಂದ ಮಾತನಾಡುತ್ತಾ, ಹಾಡುತ್ತಾ, ನಲಿಯುತ್ತಾ ಇದ್ದಾಗ ನಮ್ಮ ಮಹಾತ್ಮರು ಪೊಲೀಸ್ ವಾಹನದ ಹಿಂದೆ ತೆರೆಮರೆಯಲ್ಲಿ ಸಿಲುಕುವ ಪರಿಸ್ಥಿತಿ ಯಾಕಾದರೂ ಬಂತೋ ಅನ್ನಿಸಿತು. ಆಯೋಜಕರು ಇದನ್ನ ಮುಂಚೆಯೇ ಗಮನಿಸಲಿಲ್ಲವೇ ಅಥವಾ ಸ್ಥಳೀಯ ಪೊಲೀಸರಿಗೆ ಇರುವ ಅಧಿಕಾರವನ್ನು ಒಪ್ಪಿಕೊಂಡು ಸುಮ್ಮನಾದರೆ?

ಇಳಿಮಧ್ಯಾಹ್ನವಾದಾಗ ಅಲ್ಲೇ ಒಂದು ದೊಡ್ಡ ಮರವಿರುವುದರಿಂದ ನೆರಳನ್ನು ಬಯಸಿ ತನ್ನ ಯೂನಿಫಾರ್ಮ್ ಜೊತೆ ಗನ್ ಧರಿಸಿದ್ದ ಒಬ್ಬ ಪೊಲೀಸಮ್ಮ ಶಿಲ್ಪದ ಪಕ್ಕ ಹೋಗಿ ನಿಂತಳು. ಜಗತ್ತಿಗೆ ಸತ್ಯಾಗ್ರಹವನ್ನು ಕೊಟ್ಟ, ಮೈಮೇಲೆ ತುಂಡು ಬಟ್ಟೆ ಧರಿಸಿ, ಬೆನ್ನು ಬಾಗಿಸಿಕೊಂಡು ಕೋಲು ಹಿಡಿದುನಿಂತ ಮಹಾತ್ಮರಿಗೆ ಪೋಲಿಸ್ ರಕ್ಷೆ!! ವಿಪರ್ಯಾಸವೋ, ಸಂದರ್ಭಕ್ಕೆ ತಕ್ಕದ್ದೋ, ಅನಿವಾರ್ಯವೋ, ಅನಿರೀಕ್ಷಿತವೋ! ಎಷ್ಟಾದರೂ ಆಮದು ಮಾಡಿಕೊಂಡ, ವಲಸೆ ಬಂದ ಶಿಲ್ಪವಲ್ಲವೇ ಅಲ್ಲಿದ್ದದ್ದು ಎಂಬ ಪರಿಸ್ಥಿತಿಯಾಯಿತೇ ಇದು? ನಮ್ಮಂತೆ ಮತ್ತು ಆ ಪೋಲಿಸಮ್ಮನಂತೆ. ನಾವೆಲ್ಲರೂ ಈ ಅನಿವಾಸಿಗಳ ನಾಡಿನಲ್ಲಿ ಆಸ್ಟ್ರೇಲಿಯನ್ ಮತ್ತು ಭಾರತ ದೇಶಗೀತೆಗಳಿಗೆ ಗೌರವ ಸೂಚಿಸುತ್ತಿದ್ದಾಗ ಅಲ್ಲಿದ್ದಿರಬಹುದಾದ ಅಸಲಿ, ಮೂಲಜನರು ಅಬರಿಜನಲ್ ಆಸ್ಟ್ರೇಲಿಯನ್ನರು ಏನು ಹೇಳುತ್ತಾರೋ. ಗೋಚರ ಅಗೋಚರವಾಗಿರುವ ನಿನ್ನೆ, ಇಂದಿನ ಚರಿತ್ರೆಯ ಅಣಕುನೋಟ ಅಲ್ಲಿತ್ತು.