ಈ ದೃಶ್ಯಕ್ಕೆ ಅನತಿ ದೂರದಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ ನಡೆಯುತ್ತಿದೆ. ಲಚ್ಚಣ್ಣನಿಗೆ ಎರಡು ದಶಕಗಳ ಕಾಲ ಈ ಊರಿನಲ್ಲಿ ಅನ್ನದ ವ್ಯಾಪ್ತಿ ತೋರಿಸಿದ್ದ ದೇವಿ ಪ್ರಸಾದ ಹೋಟೆಲಿನ ವಸ್ತ್ರಾಪಹರಣ ಮಾಡುತ್ತಿರುವಂತೆ ನಾಲ್ವರು ಕೆಲಸಗಾರರು ಅದರ ಮಾಡಿನ ಹಂಚುಗಳನ್ನು ಕಳಚಿ ಇಳಿಸುತ್ತಿದ್ದಾರೆ. ಆ ಹೋಟೆಲನ್ನು ಮೂರು ದಶಕಗಳ ಕಾಲ ನಡೆಸಿದ್ದ ಗೋಪಾಲಕೃಷ್ಣ ಮಂಜಿತ್ತಾಯರು ಕೊನೆಯುಸಿರೆಳೆದ ತಾಯಿಯ ಶವದೆದುರು ಶತಪಥ ಹಾಕುವ ಆಘಾತಗೊಂಡ ಮಗನಂತೆ ಅತ್ತಿಂದಿತ್ತ ಹೋಗುತ್ತಿದ್ದಾರೆ. ಲಚ್ಚನ ದೃಷ್ಟಿ ತನ್ನ ಸುತ್ತ ನೆರೆದಿರುವ ಅಭಿಮಾನಿಗಳಿಗಿಂತ ಹೆಚ್ಚಾಗಿ, ಮಂಜಿತ್ತಾಯರ ಮೇಲಿದೆ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಬಿ. ಜನಾರ್ದನ ಭಟ್ ಬರೆದ ಕತೆ “ವಿದಾಯ” ನಿಮ್ಮ ಓದಿಗೆ
ತೋರಣಪದವು ಎಂಬ ಊರಿನ ರಥಬೀದಿಯ ಕಟ್ಟೆಯಲ್ಲಿ ‘ವಾರ್ತಾವಾಚನ ಚತುರ’ ಲಕ್ಷ್ಮೀನಾರಾಯಣ ಯಾನೆ ಲಚ್ಚಣ್ಣನಿಗೆ ವಿದಾಯ ಕೂಟ ಏರ್ಪಡುತ್ತಿದ್ದ ಸನ್ನಿವೇಶ ತುಂಬಾ ವಿಚಿತ್ರವಾಗಿತ್ತು. ಒಂದು ಕಡೆ ಅವನನ್ನು ರಥಬೀದಿಯ ಅಶ್ವತ್ಥಕಟ್ಟೆಯಲ್ಲಿ ಕುಳ್ಳಿರಿಸಿ, ಅವನ ಕೈಗೆ ಒಂದು ವಾರ್ತಾಪತ್ರಿಕೆಯನ್ನು ಬಲವಂತವಾಗಿ ಎಂಬಂತೆ ತುರುಕಿಸಿದ್ದ ಅವನ ಹತ್ತು-ಹನ್ನೊಂದು ಅಭಿಮಾನಿಗಳು, ಅವನು ಅದರಲ್ಲಿರುವ ವಾರ್ತೆಗಳ ಶೀರ್ಷಿಕೆಗಳನ್ನು ರಸವತ್ತಾಗಿ ತಿರುಚಿ, ಪುಂಖಾನುಪುಂಖವಾಗಿ ಅಸಂಗತ ಮತ್ತು ಸುಳ್ಳುಸುಳ್ಳು ವಾರ್ತೆಗಳನ್ನು ಓದಿ ತಮಗೆ ಕೊನೆಯ ಬಾರಿಗೆ ಮನರಂಜನೆಯನ್ನು ನೀಡಬೇಕೆಂದು ಕಾಯುತ್ತಿರುವರು. ಲಚ್ಚಣ್ಣನನ್ನು ಊರಿನಿಂದ ಕರೆದುಕೊಂಡು ಹೋಗಲಿರುವ ನಾಲ್ಕೂವರೆ ಗಂಟೆಯ ಎಸ್.ಡಿ.ಪಿ.ಎಂ.ಟಿ. ಬಸ್ಸು ಬರಲು ಇನ್ನೂ ಅರ್ಧ ಗಂಟೆ ಇದೆ.
ಇನ್ನೂರು ಮೀಟರ್ ಉದ್ದದ ರಥಬೀದಿಯ ಇನ್ನೊಂದು ತುದಿಯಿಂದ ಹಾದುಹೋಗುವ ಬ್ರಿಟಿಷರ ಕಾಲದ ಡಾಮರು ರಸ್ತೆಯಲ್ಲಿ ದಿನಕ್ಕೆ ನಾಲ್ಕು ಸಲ, ಹಾದು ಹೋಗುವ ಎಸ್.ಡಿ.ಪಿ.ಎಂ.ಟಿ. ಬಸ್ಸು, ನಾಲ್ಕು ಸಲವೂ ಸುಮ್ಮನೆ ಒಮ್ಮೆ ರಥಬೀದಿಯಲ್ಲಿ ಒಳಬಂದು, ಅದರ ತುದಿಯಲ್ಲಿರುವ ಕಟ್ಟೆಗೆ ಒಂದು ಸುತ್ತು ಹಾಕಿ, ಮಂಜಿತ್ತಾಯರ ದೇವಿ ಪ್ರಸಾದ ಹೋಟೆಲಿನ ಎದುರು ನಿಂತು, ಒಬ್ಬರೋ ಇಬ್ಬರೋ ಪ್ರಯಾಣಿಕರು ಇದ್ದರೆ ಅವರು ಹತ್ತಿ ಇಳಿಯುವುದು ಆದಮೇಲೆ ರೈಟ್ ಪೋಯಿ ಎಂದು ಹೊರಪ್ರಪಂಚಕ್ಕೆ ಹೋಗಿ ಮಾಯವಾಗುತ್ತಿತ್ತು. ಹೊರಗೆ ಒಂದು ಗಿಜಿಗುಟ್ಟುವ ಆಧುನಿಕ ಪ್ರಪಂಚ ಇದೆ ಎಂದು ನೆನಪಿಸುವಂತೆ ಆ ಬಸ್ಸು ಬಂದುಹೋಗುತ್ತಿತ್ತು.
ತೋರಣಪದವು ಊರಿನ ಪೇಟೆಯೆಂದರೆ ನಾಲ್ಕು ಹಳೆಯ ಹಂಚಿನ ಕಟ್ಟೋಣಗಳಲ್ಲಿ ನಾಲ್ಕು ಅಂಗಡಿಗಳಿದ್ದ ಆ ರಥಬೀದಿಯೇ. ಮಂಜಿತ್ತಾಯರ ಹೋಟೆಲು, ಪ್ರಭುಗಳ ದಿನಸಿ ಅಂಗಡಿ, ಸಂಜೀವಣ್ಣನ ಕಟ್ಲೆರಿ ಅಂಗಡಿ ಮತ್ತು ಚಂದಪ್ಪಣ್ಣನ ಕ್ಷೌರದ ಅಂಗಡಿ – ಇವೇ ಆ ನಾಲ್ಕು ಅಂಗಡಿಗಳು. ರಥಬೀದಿಯ ಇನ್ನೊಂದು ಬದಿಯಲ್ಲಿ ಪಂಚಾಯತ್ ಕಛೇರಿ, ಅರೆಕಾಲಿಕ ಅಂಚೆಕಛೇರಿ, ಮತ್ತು ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಗಳಿವೆ.
ನಾಲ್ಕು ಅಂಗಡಿಗಳ ಪೈಕಿ ಒಂದಾದ ಹೋಟೆಲ್ ದೇವಿಪ್ರಸಾದ್ ಎಂಬ ಸಣ್ಣ ಉಪಾಹಾರಗೃಹದ ಮಾಲಕ ಗೋಪಾಲಕೃಷ್ಣ ಮಂಜಿತ್ತಾಯರ ಸಹಾಯಕನೇ ಈ ಲಚ್ಚಣ್ಣ; ದೂರದ ಪೆರ್ಮನ್ನೂರು ಎಂಬ ಹಳ್ಳಿಯವನು. ಅನಾಥನೂ ಅವಿವಾಹಿತನೂ ಆದ ಅವನು ಇಪ್ಪತ್ತು ಇಪ್ಪತೈದು ವರ್ಷಗಳ ಕೆಳಗೆ ದೂರದ ಸಂಬಂಧಿಕರಾದ ಮಂಜಿತ್ತಾಯರನ್ನು ಹುಡುಕಿಕೊಂಡು ಬಂದು ಅವರ ಹೋಟೆಲಿಗೆ ಸೇರಿಕೊಂಡಿದ್ದನು. ಈಗ ಹೋಟೆಲ್ ಶಾಶ್ವತವಾಗಿ ಮುಚ್ಚುತ್ತಿರುವುದರಿಂದ ಮತ್ತೊಮ್ಮೆ ಅನಾಥನಾದ ಲಚ್ಚಣ್ಣನು ತನ್ನ ಹೊಟ್ಟೆಪಾಡನ್ನು ಇನ್ನೆಲ್ಲೋ ಕಳೆಯಲು ಆ ಊರಿನಿಂದ ಬೀಳ್ಕೊಂಡು ಹೋಗುವುದಕ್ಕೆ ಸಿದ್ಧನಾಗಿದ್ದಾನೆ. ಅವನ ಊರಾದ ಪೆರ್ಮನ್ನೂರಿನಲ್ಲಿ ಅವನಿಗೆ ಯಾರೂ ಇಲ್ಲ, ಇರಲು ಮನೆಯೂ ಇಲ್ಲ.
ಲಚ್ಚಣ್ಣ ತನ್ನ ಸಮಸ್ತ ಚರ ಆಸ್ತಿಯನ್ನು ಅಂದರೆ ಸಾಬೂನು, ಟೂತ್ ಪೇಸ್ಟ್, ಬೈರಾಸು, ಬಟ್ಟೆಬರೆ ಇತ್ಯಾದಿಗಳನ್ನು ಒಂದು ಹಳೆಯ ಮದ್ದಳೆಯಾಕಾರದ ಏರ್ ಬ್ಯಾಗಿನಲ್ಲಿಯೂ, ಒಂದು ಕೈಚೀಲದಲ್ಲಿಯೂ ತುಂಬಿಸಿಕೊಂಡು ಕಟ್ಟೆಯಮೇಲೆ ಕುಳಿತಿದ್ದಾನೆ. ಮಂಜಿತ್ತಾಯರು ಅವನ ಕೈಯಲ್ಲಿರಿಸಿದ ಒಂದು ಸಾವಿರ ರೂಪಾಯಿಗಳನ್ನು ಹಳೆಯ ವಾರ್ತಾಪತ್ರಿಕೆಯಲ್ಲಿ ಸುತ್ತಿ ಅದನ್ನು ಕೈಚೀಲದ ತಳಭಾಗದಲ್ಲಿ ಇಟ್ಟು ಮೇಲೆ ಒಂದು ವೇಸ್ಟಿ ಮತ್ತು ಬೈರಾಸುಗಳನ್ನು ಮಡಚಿ ತುರುಕಿಸಿಕೊಂಡು ಭದ್ರಪಡಿಸಿಕೊಂಡಿದ್ದನು. ಮಂಜಿತ್ತಾಯರು ಆ ದಿನದ ವಾರ್ತಾಪತ್ರಿಕೆಯನ್ನು ಕೂಡ ಅವನಿಗೇ ಕೊಟ್ಟಿದ್ದ ಕಾರಣ ಅದನ್ನೂ ಮಡಚಿ ಆ ಚೀಲಕ್ಕೆ ತುರುಕಿಸಿಕೊಂಡಿದ್ದನು. ಪತ್ರಿಕೆಯಲ್ಲಿ ತನಗೆ ಇಷ್ಟವಾದ ಲೇಖನ ಕಾಣಿಸಿದರೆ ಆ ಪತ್ರಿಕೆಯನ್ನು ಸಂಗ್ರಹಿಸುವ ಅಭ್ಯಾಸ ಅವನಿಗೆ ಇತ್ತು. ಅವುಗಳನ್ನೂ ಆ ಚೀಲದಲ್ಲಿಯೇ ಇಟ್ಟುಕೊಂಡಿದ್ದನು.
ಲಚ್ಚಣ್ಣ ಪ್ರತಿದಿನ ಪೇಪರನ್ನು ಹಿಡಿದುಕೊಂಡು ಅಣಕು ಗಂಭೀರ ಮುಖಭಾವ, ಹಾವಭಾವಗಳಿಂದ ಗಟ್ಟಿಯಾಗಿ ವಾರ್ತೆಗಳನ್ನು ಓದುವ ಕಾರ್ಯಕ್ರಮ ತೋರಣಪದವಿನಲ್ಲಿ ಎಷ್ಟು ಪ್ರಸಿದ್ಧವಾಗಿತ್ತೆಂದರೆ ಅದನ್ನು ಕೇಳಲೆಂದೇ ನಿತ್ಯ ಅವನು ಪೇಪರ್ ಓದುವ ಗಳಿಗೆಗಾಗಿ ಕೆಲವರು ಕಾಯುತ್ತಿದ್ದುದುಂಟು. ಊರಿನ ಶಾಲೆಯ ಹೆಡ್‌ಮಾಸ್ಟರಾದ ರಾಮಚಂದ್ರ ರಾಯರೂ ಅವನ ಪ್ರತಿಭೆಗೆ ಬೆರಗಾಗಿ ಒಮ್ಮೆ ಶಾಲೆಯ ವಾರ್ಷಿಕೋತ್ಸವದಲ್ಲಿ ಅವನನ್ನು ಸನ್ಮಾನಿಸಿ ‘ವಾರ್ತಾವಾಚನ ಚತುರ’ ಎಂಬ ಬಿರುದನ್ನು ನೀಡಿದ್ದರು.
ಆ ಪೇಟೆಯಲ್ಲಿ ಜನ ಕಾಣಸಿಗುವುದೇ ಅಪರೂಪ. ಇಂತಹ ತೋರಣಪದವು ಪೇಟೆಯನ್ನು ಜೀವಂತವಾಗಿ ಇಡಲು ಎರಡು ದಶಕಗಳ ಕಾಲ ಇನ್ನಿಲ್ಲದಂತೆ ಪ್ರಯತ್ನಿಸಿದ್ದ ಲಚ್ಚಣ್ಣನೂ ಈಗ ಅಲ್ಲಿಂದ ಹೊರಟುನಿಂತಿದ್ದಾನೆ. ಅವನ ಕಂಠಸ್ವರ, ಸ್ವರಭಾರ ಸಹಿತ ವಾರ್ತೆಗಳನ್ನು ರಂಜನೀಯವಾಗಿ ಒಪ್ಪಿಸುತ್ತಿದ್ದ ರೀತಿಯಿಂದಾಗಿ ಅವನೊಬ್ಬ ನಾಟಕ ಕಲಾವಿದನಾಗಬಹುದಿತ್ತು. ಆದರೆ ಪೋಲಿಯೋ ಪೀಡಿತ ಕಾಲು ಮತ್ತು ಸಾಧಾರಣ ರೂಪದ ಲಚ್ಚಣ್ಣನಿಗಾಗಿ ಪಾತ್ರ ಸೃಷ್ಟಿಸುವ ನಾಟಕಕಾರರು ಯಾರಿದ್ದಾರೆ? ಹಾಗಾಗಿ ತನ್ನಷ್ಟಕ್ಕೆ ತಾನೇ ತನ್ನ ಕಲೆಯನ್ನು ಅಭಿವ್ಯಕ್ತಿಗೊಳಿಸಲು ಅವನು ಕಂಡುಕೊಂಡಿದ್ದ ಮಾಧ್ಯಮವೇ ಈ ವಾರ್ತಾವಾಚನ. ಅದನ್ನು ಪ್ರತಿನಿತ್ಯ ಬೆಳಗಿನ ನಿತ್ಯದ ಗಿರಾಕಿಗಳ ಉಪಾಹಾರವೆಲ್ಲ ಆದಮೇಲೆ ಸುಮಾರು ಹತ್ತು ಗಂಟೆಯಿಂದ ಹತ್ತೂವರೆ ಹನ್ನೊಂದು ಗಂಟೆಯವರೆಗೆ ಅವನು ನಡೆಸಿಕೊಡುತ್ತಿದ್ದ. ನಡುನಡುವೆ ಅಲೆಅಲೆಯಾಗಿ ಪಸರಿಸುತ್ತಿದ್ದ ಅವನ ನಗು ಎಲ್ಲವೂ ಆ ಸಣ್ಣ ಪೇಟೆಯಲ್ಲಿ ಲವಲವಿಕೆ ಮೂಡಿಸುವಂತಿರುತ್ತಿದ್ದವು.
ಲಚ್ಚಣ್ಣನಿಂದಾಗಿ ತಮ್ಮ ಹೋಟೆಲಿಗೆ ಒಂದು ಆಕರ್ಷಣೆ ಇದೆ ಎಂದು ಮಂಜಿತ್ತಾಯರಿಗೆ ಗೊತ್ತಿತ್ತು. ಅಲ್ಲದೆ ಲಚ್ಚಣ್ಣನು ದೇವಿ ಪ್ರಸಾದ ಹೋಟೆಲಿನಲ್ಲಿ ಬೆಳಿಗ್ಗೆ ಇಡ್ಲಿ, ಅವಲಕ್ಕಿ, ಸಜ್ಜಿಗೆ ಮತ್ತು ಸಂಜೆ ದೋಸೆ ಹಾಗೂ ಗೋಳಿಬಜೆಗಳನ್ನು ತಯಾರಿಸುವ ಅಡಿಗೆಯವನೂ, ಸಪ್ಲಯರನೂ, ಕ್ಲೀನರನೂ ಆಗಿ ಏಕಾಂಗಿಯಾಗಿ ಹೋಟೆಲನ್ನು ನಡೆಸುತ್ತಿದ್ದುದರಿಂದ ಅವರು ಅವನಿಗೆ ಋಣಿಯಾಗಿದ್ದರು ಕೂಡ. ಮಂಜಿತ್ತಾಯರು ಹೋಟೆಲಿನಲ್ಲಿ ಇರುತ್ತಿದ್ದದ್ದು ಕಡಿಮೆಯೇ. ಹೋಟೆಲಿನ ಆದಾಯದಿಂದ ಸಂಸಾರ ನಡೆಸಲು ಸಾಧ್ಯವಿಲ್ಲವೆಂದು ತಿಳಿದ ಅವರು ಬರೆಗುಡ್ಡೆ ಗುಂಡಣ್ಣನ ಅಡಿಗೆ ತಂಡದಲ್ಲಿ ಖಾಯಂ ಅಡಿಗೆಯವರೂ ಆಗಿದ್ದರು. ಮನೆಯ ಸುತ್ತ ನಾಲ್ಕು ಗದ್ದೆಗಳ ಬೇಸಾಯವನ್ನೂ ಮಾಡಿಸುತ್ತಿದ್ದರು. ಇವೆಲ್ಲ ಆಗಿ ಬಿಡುವಿದ್ದಾಗ ಮಾತ್ರ ಅವರು ತಮ್ಮ ಹೋಟೆಲಿಗೆ ಬಂದು ಲಚ್ಚಣ್ಣನ ಸಹಾಯಕ್ಕೆ ನಿಲ್ಲುತ್ತಿದ್ದರು.
ಈಗ ಅಂತಹಾ ಲಚ್ಚಣ್ಣನನ್ನು ತೋರಣಪದವು ಊರಿನಿಂದ ಮನಸ್ಸಿಲ್ಲದ ಮನಸ್ಸಿನಿಂದ ಕಳುಹಿಸಿಕೊಡಲು ಕೆಲವರು ಕಟ್ಟೆಯ ಬಳಿ ಸೇರಿದ್ದಾರೆ. ಕಟ್ಟೆಯ ಮೇಲೆ ಅವನ ಇಕ್ಕೆಲಗಳಲ್ಲಿ ಕುಳಿತು ಕಾಲುಗಳನ್ನು ಕೆಳಗೆ ಚಾಚಿ, ಮುಖದಲ್ಲಿ ಮನರಂಜನೆಯ ನಿರೀಕ್ಷೆಯಲ್ಲಿ ನಗು ಅರಳಿಸಿಕೊಂಡು, ಅವನತ್ತ ಕುತೂಹಲಭರಿತ ನೋಟವನ್ನು ಬೀರುತ್ತಿರುವವರು ದಿನಸಿ ಅಂಗಡಿಯ ವೆಂಕಟರಮಣ ಪ್ರಭುಗಳು, ದೇವಸ್ಥಾನದ ಶಾಂತಿಯವರಾದ ವಿಷ್ಣುಮೂರ್ತಿ ಭಟ್ಟರು ಮತ್ತು ಪಂಚಾಯತ್ ಸೆಕ್ರೆಟರಿ ಗೋವಿಂದರು. ಲಚ್ಚಣ್ಣನ ವಾರ್ತಾವಾಚನವನ್ನು ಕೇಳಬೇಕೆಂದು ಕಟ್ಟೆಯ ಎದುರು ಪ್ರೇಕ್ಷಕರಂತೆ ನಿಂತುಕೊಂಡಿರುವವರು ದೇವಸ್ಥಾನದ ದೋಲುಗಂಟೆಯ ಪಾರು, ಚಂದಪ್ಪಣ್ಣ, ಸಂಜೀವಣ್ಣ, ಹಳ್ಳಿಯ ಕೃಷಿಕರಾದ ತೋಮಸ ಪರ್ಬುಗಳು, ಮೆಣ್ಕ ಶೆಟ್ಟರು, ದಾದು ಪೂಜಾರಿಯವರು, ಸೀನಪ್ಪ ನಾಯ್ಕರು ಮತ್ತು ದೇವರಾಯರು. ಇದೊಂದು ವಿದಾಯ ಸಮಾರಂಭದಂತೆ ಕಾಣಿಸುತ್ತಿದೆ. ಹಿಂದೊಮ್ಮೆ ಹತ್ತು ವರ್ಷಗಳ ಕೆಳಗೆ ಲಚ್ಚಣ್ಣನಿಗೆ ‘ವಾರ್ತಾವಾಚನ ಚತುರ’ ಎಂಬ ಬಿರುದನ್ನು ಸರಸ್ವತಿ ಮಂದಿರ ಶಾಲೆಯ ವಾರ್ಷಿಕೋತ್ಸವದಲ್ಲಿ ದಯಪಾಲಿಸಿದಾಗಲೂ ಅವನನ್ನು ಪ್ಲಾಸ್ಟಿಕ್ ಕುರ್ಚಿಯಲ್ಲಿ ಕುಳ್ಳಿರಿಸಿ, ಆಚೀಚೆ ನಾಲ್ಕು ಮಂದಿ ಗಣ್ಯರು ನಿಂತುಕೊಂಡು ಅವನಿಗೆ ಹಾರ ಹಾಕಿ, ಶಾಲು ಹೊದಿಸಿ, ಹಣ್ಣುಹಂಪಲು ತುಂಬಿದ ಸ್ಟೀಲ್ ತಟ್ಟೆಯನ್ನು ಅವನ ಕೈಯಲ್ಲಿರಿಸಿ, ಜನ ಚಪ್ಪಾಳೆ ತಟ್ಟಿದ್ದುಂಟು. ಅದೀಗ ಅವನಿಗೆ ನೆನಪಾಯಿತು.
ಈ ದೃಶ್ಯಕ್ಕೆ ಅನತಿ ದೂರದಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ ನಡೆಯುತ್ತಿದೆ. ಲಚ್ಚಣ್ಣನಿಗೆ ಎರಡು ದಶಕಗಳ ಕಾಲ ಈ ಊರಿನಲ್ಲಿ ಅನ್ನದ ವ್ಯಾಪ್ತಿ ತೋರಿಸಿದ್ದ ದೇವಿ ಪ್ರಸಾದ ಹೋಟೆಲಿನ ವಸ್ತ್ರಾಪಹರಣ ಮಾಡುತ್ತಿರುವಂತೆ ನಾಲ್ವರು ಕೆಲಸಗಾರರು ಅದರ ಮಾಡಿನ ಹಂಚುಗಳನ್ನು ಕಳಚಿ ಇಳಿಸುತ್ತಿದ್ದಾರೆ. ಆ ಹೋಟೆಲನ್ನು ಮೂರು ದಶಕಗಳ ಕಾಲ ನಡೆಸಿದ್ದ ಗೋಪಾಲಕೃಷ್ಣ ಮಂಜಿತ್ತಾಯರು ಕೊನೆಯುಸಿರೆಳೆದ ತಾಯಿಯ ಶವದೆದುರು ಶತಪಥ ಹಾಕುವ ಆಘಾತಗೊಂಡ ಮಗನಂತೆ ಅತ್ತಿಂದಿತ್ತ ಹೋಗುತ್ತಿದ್ದಾರೆ. ಲಚ್ಚನ ದೃಷ್ಟಿ ತನ್ನ ಸುತ್ತ ನೆರೆದಿರುವ ಅಭಿಮಾನಿಗಳಿಗಿಂತ ಹೆಚ್ಚಾಗಿ, ಮಂಜಿತ್ತಾಯರ ಮೇಲಿದೆ.
ಮಂಜಿತ್ತಾಯರು ಆಗಾಗ ಹೋಟೆಲಿನ ಒಳಗೆ ಹೋಗಿ, ತಾವು ನಿನ್ನೆ ದಿನ ಖಾಲಿ ಮಾಡುವಾಗ ಕಾಣದೆ ಬಿಟ್ಟುಹೋಗಿದ್ದ ಸಣ್ಣಪುಟ್ಟ ವಸ್ತುಗಳು ಕಣ್ಣಿಗೆ ಬಿದ್ದರೆ ಅವುಗಳನ್ನು ಎತ್ತಿಕೊಂಡು ಬಂದು ಪಕ್ಕದ ಕಟ್ಟೋಣದಲ್ಲಿರುವ ಪ್ರಭುಗಳ ದಿನಸಿ ಅಂಗಡಿಯ ಮುಂಗಟ್ಟಿನ ಮೂಲೆಯಲ್ಲಿ ಇರಿಸುತ್ತಿದ್ದರು. ಎರಡು ಎಲ್ಯೂಮಿನಿಯಮ್ ಪ್ಲೇಟುಗಳು, ಒಂದು ಬೆಂಕಿ ಪೆಟ್ಟಿಗೆ, ನಾಲ್ಕಾರು ಎಲ್ಯೂಮಿನಿಯಮ್ ಚಮಚಗಳು, ಒಂದು ಪ್ಲಾಸ್ಟಿಕ್ ಮಗ್, ಸರಿಗೆಯಿಂದ ಮಾಡಿದ್ದ ಒಂದು ಬಳ್ಳ – ಇವಿಷ್ಟು ವಸ್ತುಗಳನ್ನು ಅವರು ಹೆಕ್ಕಿ ತಂದಿದ್ದರು. ಹಡಗು ಮುಳುಗಿದಾಗ ಮುಳುಗುಗಾರರು ಒಮ್ಮೆ ಮುಳುಗಿ ಒಂದು ವಸ್ತುವನ್ನು ನೀರಮೇಲಕ್ಕೆ ತಂದುಕೊಟ್ಟು ಮತ್ತೊಮ್ಮೆ ಮುಳುಗುಹಾಕುವಂತೆ ಅವರ ಓಡಾಟವಿತ್ತು. ಹೀಗೆ ಮತ್ತೊಮ್ಮೆ ಅವರು ಹೋಟೆಲಿನ ಒಳಗೆ ಹೊರಟಾಗ ಅಲ್ಲಿಯೇ ಮೇಲಿನ ಮಾಡಿನ ಹಂಚುಗಳನ್ನು ತೆಗೆಯುತ್ತಿದ್ದ ಮಾಬಲ, “ಭಟ್ರೇ, ಈ ಕಡೆ ಬರಬೇಡಿ….. ಹಂಚೇನಾದರೂ ಕೈಜಾರಿ ತಲೆಯ ಮೇಲೆ ಬಿದ್ದರೆ?” ಎಂದು ಕೂಗಿ ಹೇಳಿದ.
ಮಂಜಿತ್ತಾಯರು, “ಹೋ! ಜಾಗ್ರತೆ ಮಾರಾಯ! ಇನ್ನೊಮ್ಮೆ ನೋಡಿ ಬರುತ್ತೇನೆ. ನಾಳೆ ಜೆಸಿಬಿ ಬರುತ್ತದಂತಲ್ಲ? ಆಮೇಲೆ ಈ ಹೋಟೆಲನ್ನು ನೋಡಲಿಕ್ಕುಂಟ?” ಎಂದು ವಿಷಾದದಿಂದ ನುಡಿದು, ಕೊನೆಯ ಬಾರಿಗೆ ಎಂಬಂತೆ ತಾನು ಮೂವತ್ತು ವರ್ಷಗಳ ಕಾಲ ತನ್ನ ಸ್ವಂತದ್ದೆಂಬಂತೆ ಸಂಭ್ರಮದಿಂದ ಓಡಾಡಿದ್ದ ಹೋಟೆಲಿನ ಮೂರು ಅಂಕಣಗಳಲ್ಲಿ ನಡೆದಾಡಿ ಭಾವಾವಿಷ್ಟರಾದರು. ಅವರು ಅಲ್ಲಿನ ಪ್ರತಿಯೊಂದು ಇಂಚು ಜಾಗವನ್ನೂ ಪರಿಶೀಲಿಸುತ್ತಾ ನಡೆದಾಡಿದ್ದು ಎಲ್ಯೂಮಿನಿಯಮ್ ತಟ್ಟೆ ಚಮಚಗಳಿಗಾಗಿ ಅಲ್ಲ, ಆ ಜಾಗದ ನೆನಪುಗಳಿಗಾಗಿ.
ಆದರೆ ಲಚ್ಚನ ಮನಸ್ಸು ಅವರ ಜತೆಗೇ ಹೋಟೆಲಿನ ಒಳಗೊಮ್ಮೆ ಹೊರಗೊಮ್ಮೆ ಓಡಾಡುತ್ತಾ ನೆನಪುಗಳನ್ನು ಹೆಕ್ಕಿ ತರುತ್ತಿತ್ತು. ತಾನು ಬಸ್ಸು ಹತ್ತಿ ಹೋಗುವ ಮುನ್ನ ಮಂಜಿತ್ತಾಯರ ಬಳಿ ಹೋಗಿ ಮತ್ತೊಮ್ಮೆ ಹೇಳಿ ಬರೋಣ ಎಂದರೆ ತನ್ನ ಕಾಲುಗಳಿಂದ ಹಾಗೆ ಓಡಿಹೋಗಿ ಬರುವುದು ಅವನಿಗೆ ಸಾಧ್ಯವಾಗದು. ಅಲ್ಲದೆ ಅವನಿಗೂ ಐವತ್ತು ವರ್ಷ ದಾಟಿತಲ್ಲವೇ!
ಆ ಪೇಟೆಯಲ್ಲಿ ಜನ ಕಾಣಸಿಗುವುದೇ ಅಪರೂಪ. ಇಂತಹ ತೋರಣಪದವು ಪೇಟೆಯನ್ನು ಜೀವಂತವಾಗಿ ಇಡಲು ಎರಡು ದಶಕಗಳ ಕಾಲ ಇನ್ನಿಲ್ಲದಂತೆ ಪ್ರಯತ್ನಿಸಿದ್ದ ಲಚ್ಚಣ್ಣನೂ ಈಗ ಅಲ್ಲಿಂದ ಹೊರಟುನಿಂತಿದ್ದಾನೆ. ಅವನ ಕಂಠಸ್ವರ, ಸ್ವರಭಾರ ಸಹಿತ ವಾರ್ತೆಗಳನ್ನು ರಂಜನೀಯವಾಗಿ ಒಪ್ಪಿಸುತ್ತಿದ್ದ ರೀತಿಯಿಂದಾಗಿ ಅವನೊಬ್ಬ ನಾಟಕ ಕಲಾವಿದನಾಗಬಹುದಿತ್ತು. ಆದರೆ ಪೋಲಿಯೋ ಪೀಡಿತ ಕಾಲು ಮತ್ತು ಸಾಧಾರಣ ರೂಪದ ಲಚ್ಚಣ್ಣನಿಗಾಗಿ ಪಾತ್ರ ಸೃಷ್ಟಿಸುವ ನಾಟಕಕಾರರು ಯಾರಿದ್ದಾರೆ?
ಅಲ್ಲಿ ನಡೆಯುತ್ತಿದ್ದ ಮೂರನೆಯ ಚಟುವಟಿಕೆ ಎಂದರೆ ಈ ಉರುಳುತ್ತಿರುವ ಕಟ್ಟೋಣದ ಹೊಸ ಮಾಲಕನಾದ ರಾಕೇಶನು ತನ್ನ ಕೂಲಿಂಗ್ ಗ್ಲಾಸ್ ಇರುವ ದೊಡ್ಡ ಕಾರನ್ನು ರಸ್ತೆಯ ಇನ್ನೊಂದು ಬದಿಯಲ್ಲಿ ನಿಲ್ಲಿಸಿ, ಅದರೊಳಗೆ ಕುಳಿತುಕೊಂಡು ಕೆಲಸಗಾರರು ಹಂಚುಗಳನ್ನು ಇಳಿಸುತ್ತಿರುವುದನ್ನು ಗಮನಿಸುತ್ತಿರುವುದು. ರಾಕೇಶ, ಸುಬ್ಬಯ್ಯ ಪಟೇಲರ ಅಳಿಯ; ಅವರ ಮಗಳು ನಿವೇದಿತಳ ಗಂಡ. ಪಟೇಲರ ಆಸ್ತಿಯನ್ನು ಪಾಲು ಮಾಡಿದಾಗ ನಿವೇದಿತಳ ಪಾಲಿಗೆ ಪೇಟೆ ಬದಿಯ ಹತ್ತೆಕರೆ ಜಾಗ ಮತ್ತು ಈ ಕಟ್ಟೋಣಗಳು ಬಂದಿದ್ದವು. ರಾಕೇಶನ ಯೋಚನೆಯ ಪ್ರಕಾರ ಇಪ್ಪತ್ತು ಮೂವತ್ತು ವರ್ಷ ಬಾಡಿಗೆಗೆ ಇದ್ದವರು ಕಟ್ಟೋಣವನ್ನು ಬಿಟ್ಟುಕೊಡದೆ ಕೇಸು ಹಾಕಿದರೆ ಸುಮ್ಮನೆ ಹತ್ತಿಪ್ಪತ್ತು ವರ್ಷಗಳ ಕಾಲ ಕೋರ್ಟು ಕಛೇರಿ ಎಂದು ಅಲೆಯ ಬೇಕಾಗುತ್ತದೆ. ಅದಕ್ಕಾಗಿ ಮಂಜಿತ್ತಾಯರಿಗೆ ಹೋಟೆಲ್ ಖಾಲಿ ಮಾಡುವಂತೆ ಆರು ತಿಂಗಳ ಹಿಂದೆಯೇ ನಿವೇದಿತಳ ಮೂಲಕ ಹೇಳಿಸಿದ್ದ.
ಅವಳು, “ಮಂಜಿತ್ತಾಯರೆ, ನಮ್ಮ ಯಜಮಾನರು ಈ ಕಟ್ಟೋಣವನ್ನು ತೆಗೆದು ಹೊಸ ಬಿಲ್ಡಿಂಗ್ ಮಾಡಬೇಕೆಂದು ಹೇಳುತ್ತಿದ್ದಾರೆ. ನನಗೆ ನಿಮ್ಮನ್ನು ಎಬ್ಬಿಸಲು ಮನಸ್ಸಿಲ್ಲ. ಆದರೆ ಅವರು ಈ ಊರು ಇಂಪ್ರೂವ್ ಮಾಡುತ್ತೇನೆ ಎಂದು ಹೇಳಿದಾಗ ನನಗೆ ಬೇಡ ಅನ್ನಲಿಕ್ಕಾಗಲಿಲ್ಲ. ಅವರು ಯಾವಾಗ ಇದಕ್ಕೆ ಕೈಹಾಕುತ್ತಾರೆ ಎಂದು ಹೇಳಲಿಕ್ಕೆ ಸಾಧ್ಯವಿಲ್ಲ. ನೀವು ಬೇರೇನಾದರೂ ವ್ಯವಸ್ಥೆ ಮಾಡಿಕೊಳ್ಳಿ ಆಯ್ತಾ?” ಎಂದು ನಯವಾಗಿ ಹೇಳಿದ್ದಳು.
ಮಂಜಿತ್ತಾಯರು ಆಘಾತಗೊಂಡು ಅವಳ ಮುಖವನ್ನೇ ನೋಡಿದ್ದರು. ಅವರು ಇಂತಹದೊಂದು ಪರಿಸ್ಥಿತಿ ಬರಬಹುದು ಎಂದು ಯೋಚಿಸಿರಲೇ ಇಲ್ಲ. ತಾನಿರುವವರೆಗೆ ಈ ಹೋಟೆಲ್ ಕೂಡ ಶಾಶ್ವತ ಎಂದು ಅವರ ಮನಸ್ಸಿನಲ್ಲಿತ್ತು.
ಅವರ ಗಾಬರಿಯನ್ನು ಕಂಡು ನಿವೇದಿತ, “ಈಗಲೇ ಅಲ್ಲ ಮಂಜಿತ್ತಾಯರೇ, ಇನ್ನೂ ಟೈಮಿದೆ. ನೀವು ತಲೆಬಿಸಿ ಮಾಡಬೇಡಿ. ಬೇರೇನಾದರೂ ವ್ಯವಸ್ಥೆ ಮಾಡಿಕೊಳ್ಳಲಿಕ್ಕೆ ನೋಡುತ್ತಾ ಇರಿ. ಬೇರೆ ಏನೂ ಆಗದಿದ್ದರೆ, ನಮ್ಮದೇ ಹೊಸ ಬಿಲ್ಡಿಂಗ್ ಆದಮೇಲೆ ನಿಮಗೆ ಹೋಟೆಲ್ ನಡೆಸಲಿಕ್ಕೆ ಕೊಡಲು ಹೇಳುತ್ತೇನೆ ಆಯ್ತಾ?” ಎಂದು ಸಮಾಧಾನ ಹೇಳಿ ಹೋಗಿದ್ದಳು.
ಮಂಜಿತ್ತಾಯರು ಮನೆಗೆ ಹೋಗಿ ಹೆಂಡತಿಯ ಬಳಿ ತಮಗೆ ಒದಗಿದ ಆಪತ್ತನ್ನು ಕುರಿತು ಹೇಳಿಕೊಂಡು ತಲೆಯ ಮೇಲೆ ಕೈಹೊತ್ತು ಕುಳಿತರು.
“ಈ ಹೋಟೆಲ್ ಕೈತಪ್ಪಿದರೆ ನನ್ನ ಅವಸ್ಥೆ ಕೂಡ ಲಚ್ಚನ ಹಾಗಾಗುತ್ತದಾ ಏನೋ!” ಎಂದರು.
ಅವರ ಪತ್ನಿ ಸೀತಮ್ಮ, “ಏನಾದರೂ ದಾರಿ ತೋರುತ್ತದೆ, ನೀವು ತಲೆಬಿಸಿ ಮಾಡಬೇಡಿ. ಅಲ್ಲದೆ ಆ ಹೋಟ್ಲಿನಲ್ಲಿ ನಿಮಗೆ ಏನು ಪ್ರಯೋಜನ ಆಗಿದೆ?” ಎಂದು ಸಮಾಧಾನ ಹೇಳಿದರು.
“ನಮ್ಮ ದಿನ ಅದರಿಂದಲೇ ಹೋಗುತ್ತಾ ಇತ್ತಲ್ಲ ಸೀತಾ? ಲಚ್ಚನೂ ಅದರಲ್ಲೇ ಬದುಕುತ್ತಾ ಇದ್ದಾನೆ?” ಎಂದು ಮಂಜಿತ್ತಾಯರ ವಾದ.
“ಲಚ್ಚನಿಗೆ ಸಂಬಳ ಕೊಟ್ಟರೆ ನಮಗೆ ಏನು ಸಿಗುತ್ತಿತ್ತು ಹೇಳಿ? ಅವನು ಹೋಟ್ಲಿನಲ್ಲಿದ್ದ ಕಾರಣ, ನಿಮಗೆ ಅಲ್ಲಿ ಇಲ್ಲಿ ಅಡಿಗೆ ಕೆಲಸಕ್ಕೆ ಹೋಗಿ ನಾಲ್ಕು ಕಾಸು ಕೈಯಲ್ಲಿ ಸಿಗುತ್ತಾ ಉಂಟು. ಲೆಕ್ಕಕ್ಕೆ ಮಾತ್ರ ನೀವು ಹೋಟೆಲಿನ ಯಜಮಾನ! ಅವಿನಾಶನ ಶಾಲೆಯ ಫೀಸಿಗೆ ದುಡ್ಡು ಕೇಳಿದರೆ ನಿಮ್ಮ ಕೈಯಲ್ಲಿ ಇರುವುದಿಲ್ಲ. ಎಲ್ಲಾದರೂ ಸಾಲ ಕೇಳಿ ತಂದುಕೊಡುತ್ತೀರಿ!” ಎಂದು ಸೀತಮ್ಮ ತಮ್ಮ ಪರಿಸ್ಥಿತಿ ಈಗಲೂ ಅಷ್ಟೇ, ಮುಂದೆಯೂ ಇದಕ್ಕಿಂದ ಕೆಟ್ಟದಾಗಲಿಕ್ಕಿಲ್ಲ ಎಂದು ಇಂಗಿತವಾಗಿ ಸೂಚಿಸಿದರು.
ಮಂಜಿತ್ತಾಯರು, “ಅಲ್ಲ, ಇನ್ನೊಬ್ಬರ ಕೈಕೆಳಗೆ ಆಳಾಗಿ ದುಡಿಯಬೇಕಾಯಿತಲ್ಲ ಮಾರಾಯಿತಿ!” ಎಂದು ಚಿಂತಿಸಿದರು.
“ನೀವು ಹಾಗೆಲ್ಲ ಬೇರೆ ಹೋಟೆಲಿಗೆ ಹೋಗಿ ಸೇರುವುದು ಬೇಡ. ಅಡಿಗೆಯನ್ನೇ ಗಟ್ಟಿ ಮಾಡಿಕೊಳ್ಳಿ. ಬೇಕಾದರೆ ಕಾವೂರಿನ ಅಡಿಗೆಯವರ ಜತೆಗೆ ಕೂಡ ಮಾತಾಡಿ ಬನ್ನಿ. ಇಲ್ಲಿ ಕೆಲಸ ಇಲ್ಲದಾಗ ಅವರ ಜತೆಗೆ ಹೋಗಿ” ಎಂದು ಸೀತಮ್ಮ ಸಲಹೆ ನೀಡಿದರು.
“ಅಲ್ಲ, ಬೆಂಗಳೂರಿಗೆ ಹೋಗಿ ಕುತ್ಯಾರು ಉಡುಪರ ಹೋಟೆಲಿಗೆ ಸೇರಿದರೆ ಹೇಗೆ ಅಂತ ಯೋಚಿಸುತ್ತಿದ್ದೇನೆ. ಅವರಾದರೆ ನನಗೆ ಸ್ವಲ್ಪ ಮರಿಯಾದೆ ಕೊಟ್ಟು ಇಟ್ಟುಕೊಂಡಾರು”, ಎಂದು ಮಂಜಿತ್ತಾಯರು ಹೇಳಿದರು.
ಅದಕ್ಕೆ ಸೀತಮ್ಮ ಒಪ್ಪಲಿಲ್ಲ. “ಇಲ್ಲಿ ಗದ್ದೆ ಬೇಸಾಯ ಮಾಡಿಸುವವರು ಯಾರು? ನನ್ನಿಂದ ಆದೀತಾ? ಇರುವುದು ನಾಲ್ಕಾದರೂ ಗದ್ದೆ ಗದ್ದೆಯೇ ಅಲ್ಲವೇ? ನಾಲ್ಕು ತಿಂಗಳು ಊಟಮಾಡುವಷ್ಟು ಅಕ್ಕಿ ಸಿಗುವುದಕ್ಕೆ ಕೂಡ ಕಲ್ಲು ಹಾಕಿಕೊಳ್ಳುವುದಾ? ಅದೆಲ್ಲಾ ಬೇಡ, ಊರಲ್ಲಿಯೇ ಇದ್ದು ಆಚೆ ಈಚೆ ತಟಪಟ ಮಾಡಿದರೆ ಹೇಗಾದರೂ ಬದುಕಬಹುದು. ಅಷ್ಟರಲ್ಲಿ ಅವಿನಾಶ ಕಲಿತು ಕೆಲಸಕ್ಕೆ ಸೇರಿದರೆ ನಾವು ಗೆದ್ದ ಹಾಗೆ” ಎಂದು ಧೈರ್ಯ ಹೇಳಿದರು. ಹಾಗೆ ಮಂಜಿತ್ತಾಯರು ಬಂದದ್ದು ಬರಲಿ, ಪಟೇಲರ ಮಗಳು ಹೋಟೆಲ್ ಬಿಡಲಿಕ್ಕೆ ಹೇಳುವವರೆಗೆ ನಡೆಸುವುದು ಎಂದು ಅಳುಕುತ್ತಲೇ ಹೋಟೆಲ್ ನಡೆಸಿಕೊಂಡಿದ್ದರು.
ಮಂಜಿತ್ತಾಯರನ್ನು ಒಕ್ಕಲೆಬ್ಬಿಸುವ ಕಾರ್ಯ ಆರು ತಿಂಗಳುಗಳ ಕಾಲ ತಡವಾಗಲು ನಿವೇದಿತಳ ಒತ್ತಾಯವೇ ಕಾರಣವಾಗಿತ್ತು. ರಾಕೇಶ ಆಗಾಗ, “ನಿನಗೆ ಅದೆಲ್ಲ ಗೊತ್ತಾಗುವುದಿಲ್ಲ ನಿವೇದಿತ…. ಹೆಂಗಸರು ಇಂಥ ವ್ಯವಹಾರದಲ್ಲೆಲ್ಲ ತಲೆಹಾಕಬಾರದು. ನಾಳೆ ಕಾನೂನೇನಾದರೂ ಚೇಂಜ್ ಆಗಿ, ಮೂವತ್ತು ವರ್ಷ ಇದ್ದವರಿಗೆ ಕಟ್ಟಡ ಸ್ವಂತಕ್ಕೆ ಎಂದು ಮಾಡಿದರೆ ಗೋವಿಂದ! ಅಲ್ಲದೆ ನಮ್ಮ ಜಾಗಕ್ಕೆ ರಸ್ತೆಯ ಕನೆಕ್ಷನ್ ಈ ಕಟ್ಟೋಣದ ಸೈಡಿನಿಂದಲೇ ಇರುವುದು. ಇದೇ ನಮ್ಮ ಕೈತಪ್ಪಿದರೆ! ಯಾಕೆ ಅದೆಲ್ಲ ಸಮಸ್ಯೆ ಹೇಳು. ಮೊದಲು ಭಟ್ಟರನ್ನು ಎಬ್ಬಿಸುವ. ಆಮೇಲೆ ಏನು ಮಾಡುವುದು ಎಂದು ಯೋಚಿಸಿದರಾಯಿತು. ಅವರು ಕೊಡುವ ಮೂವತ್ತು ರೂಪಾಯಿ ಬಾಡಿಗೆ ನಮಗೆ ಬೊಂಬಾಯಿಯಲ್ಲಿ ಒಂದು ಕಾಫಿ ಕುಡಿಯಲಿಕ್ಕೆ ಸಾಕಾ?” ಎಂದು ರೇಗತೊಡಗಿದ ಮೇಲೆ ನಿವೇದಿತ ಈ ವಿಷಯದಲ್ಲಿ ಮಾತಾಡುವುದನ್ನು ಬಿಟ್ಟಿದ್ದಳು.
ಈ ಸರ್ತಿ ಊರಿಗೆ ಬಂದ ರಾಕೇಶ ಹೋಟೆಲ್ ಬಿಡಲು ಒಂದು ವಾರದ ಗಡುವು ನೀಡಿಯೇ ಬಿಟ್ಟ. ಅವನು ಮಂಜಿತ್ತಾಯರ ಕೈಯಲ್ಲಿ ಎರಡು ಸಾವಿರ ರೂಪಾಯಿಗಳನ್ನು ಇಟ್ಟು, “ನೋಡಿ ಭಟ್ಟರೆ, ಇದು ನೀವು ಇದುವರೆಗೆ ನಿಷ್ಠೆಯಿಂದ ಇಲ್ಲಿ ವ್ಯಾಪಾರ ಮಾಡಿಕೊಂಡು ಬಂದದ್ದಕ್ಕೆ ನಾನು ಕೊಡುವ ಸಣ್ಣ ಕಾಣಿಕೆ. ನೀವು ನಮಗೆ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿ ನಮಗೆ ಹೋಟೆಲನ್ನು ಬಿಟ್ಟುಕೊಡಬೇಕು” ಎಂದು ವಿನಯದಿಂದಲೇ ಹೇಳಿದ್ದ. ಮಂಜಿತ್ತಾಯರು ಅದನ್ನು ತೆಗೆದುಕೊಳ್ಳುವುದೋ ಬೇಡವೋ ಎಂದು ಯೋಚಿಸುತ್ತಾ ತೆಗೆದುಕೊಂಡು, ರಾಕೇಶ ಹೋದ ಮೇಲೆಯೂ ಅರ್ಧ ಗಂಟೆ ಅದನ್ನು ಕೈಯಲ್ಲೇ ಹಿಡಿದುಕೊಂಡು ಸುಮ್ಮನೆ ಕುಳಿತಿದ್ದರು. ಆಮೇಲೆ ಅದರಲ್ಲಿ ನೂರರ ಇಪ್ಪತ್ತು ನೋಟುಗಳಿದ್ದುದನ್ನು ಲೆಕ್ಕ ಮಾಡಿ, ಅದರಿಂದ ಹತ್ತು ನೋಟುಗಳನ್ನು ತೆಗೆದು ಲಚ್ಚಣ್ಣನನ್ನು ಕರೆದು ಅವನ ಕೈಯಲ್ಲಿಟ್ಟರು, “ತಗೊಳ್ಳೋ ಲಚ್ಚಣ್ಣ, ನಾನು ನಿನಗೆ ಸಂಬಳ ಅಂತ ಏನೂ ಕೊಡಲಿಲ್ಲ. ಈಗ ಇಷ್ಟನ್ನು ನಿನ್ನ ಕೃತ ಎಂದು ಕೊಡುತ್ತಿದ್ದೇನೆ. ನಿನಗೆ ಒಳ್ಳೆಯದಾಗಲಿ. ನಾವು ಒಂದು ಅಂಚು ಹಿಡಿದಮೇಲೆ ನಿನ್ನನ್ನು ಎಲ್ಲಿದ್ದರೂ ಕರೆದುಕೊಂಡು ಒಟ್ಟಿಗೆ ಇರಿಸಿಕೊಳ್ಳುತ್ತೇನೆ ಆಯ್ತಾ? ಅಲ್ಲಿಯವರೆಗೆ ನಿನ್ನ ಹಣೆಯಲ್ಲಿ ಬರೆದಿರುವ ಕೆಲಸವನ್ನು ಎಲ್ಲಾದರೂ ಮಾಡಿಕೊಂಡು ಇರು” ಎಂದಿದ್ದರು.
ರಾಕೇಶ ಮಂಜಿತ್ತಾಯರಿಗೆ ಕೊಟ್ಟಿದ್ದ ಡೆಡ್‌ಲೈನ್ ನಿನ್ನೆಗೆ ಮುಗಿದು ಮಂಜಿತ್ತಾಯರು ಪಾತ್ರೆ ಪರಡಿಗಳನ್ನೂ, ಬೆಂಚು ಮೇಜುಗಳನ್ನೂ ಮನೆಗೆ ಸಾಗಿಸಿದ್ದರು. ಈದಿನ ಹಂಚನ್ನೆಲ್ಲ ತೆಗೆದು, ನಾಳೆ ಜೆಸಿಬಿ ಬಂದು ಕಟ್ಟೋಣವನ್ನು ಉರುಳಿಸುತ್ತದೆ ಎಂದು ರಾಕೇಶ ಹೇಳಿಹೋಗಿದ್ದ. ಆದರೆ ಮಂಜಿತ್ತಾಯರನ್ನು ಹೆದರಿಸಲು ಹಾಗೆ ಹೇಳಿದ್ದೇ ಹೊರತು ಅವನಿಗೆ ಕಟ್ಟಡವನ್ನು ಉರುಳಿಸುವ ಯೋಜನೆ ಇರಲಿಲ್ಲ. ಮಂಜಿತ್ತಾಯರು ಯಾವ ಪ್ರತಿರೋಧವನ್ನೂ ತೋರದೆ ಕಟ್ಟೋಣವನ್ನು ಖಾಲಿ ಮಾಡಿ ಹೋದ ಕಾರಣ ಹಂಚು ತೆಗೆಯುವ ನಾಟಕವು ಕೂಡ ಬೇಕಾಗಿರಲ್ಲಿವೇನೋ ಎಂಬ ಯೋಚನೆ ಅವನಲ್ಲಿ ಈಗ ಮೂಡಿತ್ತು.
ಹೀಗೆ ತೋರಣಪದವು ತನ್ನ ಇತಿಹಾಸದ ಒಂದು ಮಹತ್ವದ ಘಟನೆಗೆ ಸಾಕ್ಷಿಯಾಗುತ್ತಾ ಇತ್ತು. ಅದರಲ್ಲಿ ಭಾಗಿಗಳಾಗಿದ್ದ ಮೂವರು ವ್ಯಕ್ತಿಗಳು ಅದೇ ರಥಬೀದಿಯಲ್ಲಿ ಮೂರು ಕಡೆಗಳಲ್ಲಿ ಕುಳಿತು ಮೂರು ಬಗೆಯಲ್ಲಿ ವರ್ತಮಾನದ ಈ ಘಟನೆಯ ಬಗ್ಗೆಯೂ ಭವಿಷ್ಯದ ಬಗ್ಗೆಯೂ ಚಿಂತಿಸುತ್ತಿದ್ದರು.
ಇತ್ತ ಗಣ್ಯರು ತನ್ನ ವಾರ್ತಾ ವಾಚನವನ್ನು ಕೊನೆಯ ಬಾರಿಗೆ ಕೇಳಬೇಕೆಂದು ತನ್ನ ಸುತ್ತ ಕುಳಿತಿರುವಾಗ ತಾನು ನಿರಾಕರಿಸಿದರೆ ಅವರಿಗೆ ಬೇಸರವಾದೀತು ಎಂದು ಲಚ್ಚಣ್ಣ, ತನ್ನ ಕೈಯಲ್ಲಿರಿಸಿದ್ದ ಪತ್ರಿಕೆಯನ್ನು ತೆರೆದು ಓದಲು ಸಿದ್ಧನಾದ. ಆಗ ಅವನ ಸುತ್ತ ನೆರೆದಿದ್ದವರು ಉಲ್ಲಾಸದಿಂದ ಅದನ್ನು ಕೇಳಲು ಸಿದ್ಧರಾದರು.
ಲಚ್ಚಣ್ಣ, ಪತ್ರಿಕೆಯನ್ನು ಸ್ವಲ್ಪ ಹೊತ್ತು ಮೌನವಾಗಿ ಓದಿ, ಅದರಲ್ಲಿದ್ದ ಮುಖ್ಯ ಸಮಾಚಾರವನ್ನು ಗಂಭೀರವಾದ ಧ್ವನಿಯಲ್ಲಿ ಹೀಗೆಂದು ಓದಿದ: ‘ಮೆಹತ ಮತ್ತು ಬಲ್ಯಾಯ ವಾಪಸಾತಿಗೆ ನಿರ್ಧಾರ: ವಿದೇಶದ ಮಂತ್ರಿ’.
ಗಾಂಧೀಜಿಯವರ ಕರೆಗೆ ಓಗೊಟ್ಟು ಕ್ವಿಟ್ ಇಂಡಿಯಾ ಚಳುವಳಿ ನಡೆಸಿರುವ ಉದ್ಯಮಿಗಳಾದ ಜಯಂತ ಮೆಹತ ಮತ್ತು ಅಜೇಯ ಬಲ್ಯಾಯರನ್ನು ಸ್ವಾತಂತ್ರ್ಯ ಯೋಧರ ವಿನಿಮಯ ಯೋಜನೆಯಡಿಯಲ್ಲಿ ಭಾರತಕ್ಕೆ ಕಳುಹಿಸಿಕೊಡಲಾಗುವುದು ಎಂದು ವಿದೇಶದ ಮಂತ್ರಿ ಥೆರೆಸಾ ಮೇ ಅವರು ಭರವಸೆ ಕೊಟ್ಟಿದ್ದಾರೆ.
ಹೀಗೆಯೇ ಹಲವಾರು ವಾರ್ತೆಗಳನ್ನು ತಿರುಚಿ ಹಾಸ್ಯ ಹುಟ್ಟುವಂತೆಯೂ, ವಿಷಯ ತಿಳಿಯುವಂತೆಯೂ ಓದಿದ. ಹಳ್ಳಿಗರಿಗೆ ಖುಷಿ ಆಗುತ್ತದೆಂದು ತುಳುವಿನ ಶಬ್ದಗಳನ್ನೂ ನಡುನಡುವೆ ಪ್ರಾಸಕ್ಕಾಗಿ ಅವನು ಬಳಸುವುದಿತ್ತು. ಹಾಗೆ ತುಳು ಶಬ್ದಗಳನ್ನು ಬಳಸಿದಾಗ ಎದುರಿಗಿದ್ದವರಿಂದ ಜೋರಾಗಿ ಕರತಾಡನದ ಪ್ರೋತ್ಸಾಹ ಸಿಕ್ಕಿತು.
ಇದಾದ ಮೇಲೆ ಲಚ್ಚಣ್ಣ ಸುಮ್ಮನೆ ಕುಳಿತ. ಗೋವಿಂದರು ವಾಚ್ ನೋಡಿಕೊಂಡು, “ಬಸ್ಸು ಬರಲಿಕ್ಕೆ ಇನ್ನೂ ಹತ್ತು ಮಿನಿಟು ಉಂಟು ಲಚ್ಚಣ್ಣ, ಇನ್ನೊಂದು ವಾರ್ತೆ ಓದಿಬಿಡು,” ಎಂದರು.
ಲಚ್ಚಣ್ಣ, “ನನ್ನ ಹತ್ತಿರ ಬೇರೊಂದು ಪೇಪರ್ ಉಂಟು….. ಅದರದ್ದು ಒಂದು ಓದುತ್ತೇನೆ,” ಎಂದು ಹೇಳಿ ತನ್ನ ಚೀಲದಲ್ಲಿ ಹುಡುಕಿ ನಾಲ್ಕೈದು ಪೇಪರುಗಳ ಕಟ್ಟನ್ನು ಹೊರತೆಗೆದ. ಅದರಲ್ಲಿ ಹುಡುಕಿ ಒಂದು ಪತ್ರಿಕೆಯನ್ನು ಆರಿಸಿಕೊಂಡು, ಅದರಲ್ಲಿದ್ದ ಒಂದು ಲೇಖನವನ್ನು ಓದತೊಡಗಿದ.
“ಮಾಯವಾಗುತ್ತಿರುವ ಮಾನವೀಯ ಸಂಬಂಧಗಳು”
ಈ ವಾಕ್ಯ ಅವನ ಸುತ್ತ ನೆರೆದಿದ್ದ ಯಾರ ಮೇಲೂ ಯಾವ ಪ್ರಭಾವವನ್ನೂ ಬೀರಲಿಲ್ಲ. ಲಚ್ಚಣ್ಣ ಅದನ್ನು ಲೇವಡಿ ಮಾಡುವ ಅಣಕು ವಾಕ್ಯವನ್ನು ಹೇಳುತ್ತಾನೆಂದು ಕಾದರೆ ಅವನು ಅಂತಹದೇನನ್ನೂ ಹೇಳದೆ, ನೇರವಾಗಿ ಆ ಲೇಖನವನ್ನು ಓದಲಾರಂಭಿಸಿದ.
“ನಾವು ಬದುಕುತ್ತಿರುವ ಈ ಕಾಲದಲ್ಲಿ ಸಂಬಂಧಗಳು – ಅದರಲ್ಲೂ ಮಾನವೀಯ ಸಂಬಂಧಗಳು – ಅಂದರೆ ಏನು ಎಂದು ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಕಲಿಸಿಕೊಡಬೇಕಾದ ಪ್ರಮೇಯ ಬಂದಿದೆ. ರಕ್ತ ಸಂಬಂಧಗಳಿರಲಿ, ಸಮಾಜದಲ್ಲಿ ನಮ್ಮ ಕಾರ್ಯವ್ಯಾಪ್ತಿಯ ನಿಮಿತ್ತದಿಂದ ಒದಗುವ ಸಂಬಂಧಗಳಿರಲಿ, ಎದುರಿನವನ ಭಾವನೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ಬೆಲೆಕೊಟ್ಟಾಗ ಮಾತ್ರ ಆ ಸಂಬಂಧಗಳು ಮಾನವೀಯ ಸಂಬಂಧಗಳಾಗುತ್ತವೆ…..”
ಅವನು ಇಷ್ಟನ್ನು ಓದಿ ತಲೆಯೆತ್ತಿ ಉಳಿದವರ ಮುಖವನ್ನು ನೋಡಿದರೆ ಎಲ್ಲರೂ ಆಸಕ್ತಿ ಇಲ್ಲದವರಂತೆ ಅತ್ತ ಇತ್ತ ನೋಡುತ್ತಿದ್ದರು. ಇಂತಹ ಅರ್ಥಹೀನ ವಾಕ್ಯಗಳನ್ನೂ ಯಾರಾದರೂ ಬರೆಯುತ್ತಾರೆಯೇ ಎಂಬ ಭಾವವೇ ಅವರ ಮುಖಗಳಲ್ಲಿ ಎದ್ದು ಕಾಣಿಸುತ್ತಿತ್ತು. ಲೇವಡಿಯೇ ಅಭ್ಯಾಸವಾಗಿ ಹೋದ ಮನುಷ್ಯರಿಗೆ ಗಂಭೀರವಾದದ್ದು ಯಾವುದೂ ಅರ್ಥವಾಗುವುದಿಲ್ಲ. ತನಗೆ ಬಹಳವಾಗಿ ಹಿಡಿಸಿದ್ದ ಈ ಮಾತುಗಳು ಅವರ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲವಲ್ಲ ಎಂದು ಆಶ್ಚರ್ಯಪಟ್ಟುಕೊಂಡ ಲಚ್ಚಣ್ಣ, ಮುಂದೆ ಓದದೆ ಪೇಪರನ್ನು ಮಡಚಿ ತನ್ನ ಚೀಲದೊಳಗೆ ಇಟ್ಟುಕೊಂಡ.
ಪಂಚಾಯತ್ ಸೆಕ್ರೆಟರಿ ಗೋವಿಂದರು ಲಚ್ಚಣ್ಣನನ್ನು ಕೇಳಿದರು, “ಲಚ್ಚಣ್ಣನ ಮುಂದಿನ ಠಿಕಾಣಿ ಎಲ್ಲಿ?”
“ಪೆರ್ಮನ್ನೂರು” ಎಂದು ಲಚ್ಚಣ್ಣ ಹೇಳಿದ.
“ಅಲ್ಲಿಯೂ ಹೋಟೆಲ್ ಕೆಲಸವೇ ಅಲ್ಲವೇ?” ಗೋವಿಂದರು ಕೇಳಿದರು.
“ಅದೇ ಎಂದು ಕಾಣುತ್ತದೆ….. ನನಗೆ ಬೇರೇನು ಬರುತ್ತದೆ?”, ಎಂದು ಲಚ್ಚಣ್ಣ ಉತ್ತರಿಸಿದ.
“ನಾಟಕಕ್ಕೆ ಸೇರಬಹುದಲ್ಲ? ಒಳ್ಳೆಯ ಪ್ರತಿಭೆಯಿರುವ ಮನುಷ್ಯ ಮಾರಾಯ ನೀನು!” ಎಂದು ಗೋವಿಂದರು ಶ್ಲಾಘಿಸಿದರು.
ಲಚ್ಚಣ್ಣ, “ಕಾಲು ಸರಿ ಇದ್ದರೆ ಸೇರಬಹುದಿತ್ತು ನೋಡಿ”, ಎಂದು ನಿರ್ಲಿಪ್ತನಾಗಿ ಹೇಳಿ, ಕಟ್ಟೆಯಿಂದ ನಿಧಾನವಾಗಿ ಇಳಿದು ಸಾವರಿಸಿಕೊಂಡು ನಿಂತು ಒಂದು ಬದಿಗೆ ವಾಲುತ್ತಾ ಹೆಜ್ಜೆ ಮುಂದಿಟ್ಟ. ಅಷ್ಟರಲ್ಲಿ ಬಸ್ಸು ಬಂತು. ಲಚ್ಚಣ್ಣನ ಅಭಿಮಾನಿಗಳಲ್ಲಿ ಅರ್ಧದಷ್ಟು ಜನ ಇದ್ದಲ್ಲಿಂದಲೇ, “ಹೋಗಿ ಬಾ ಲಚ್ಚಣ್ಣ, ದೇವರು ಒಳ್ಳೆಯದು ಮಾಡಲಿ” ಎಂದು ಶುಭಹಾರೈಸಿದರು. ಉಳಿದವರು ಅವನ ಚೀಲಗಳನ್ನು ಎತ್ತಿಕೊಂಡು ಬಂದು, ಅವನನ್ನು ಬಸ್ಸಿಗೆ ಹತ್ತಿಸಿ, ಅವನ ಚೀಲಗಳನ್ನು ಕಂಡಕ್ಟರನ ಕೈಗೆ ಕೊಟ್ಟರು. ಲಚ್ಚಣ್ಣ ಕಂಡಕ್ಟರನ ಸಹಾಯದಿಂದ ಸೀಟಿನಲ್ಲಿ ಕುಳಿತು ಆ ಮೂವರಿಗೂ ಮುಖದಲ್ಲಿ ಕೃತಜ್ಞತೆಯನ್ನು ಸೂಸುತ್ತಾ ಕೈಬೀಸಿದ. ನಂತರ ಪ್ರಭುಗಳ ಅಂಗಡಿ ಕಟ್ಟೆಯಲ್ಲಿ ಕುಳಿತು ತನ್ನನ್ನೇ ನೋಡುತ್ತಿದ್ದ ಮಂಜಿತ್ತಾಯರನ್ನು ನೋಡಿ ಕೈಮುಗಿದ.
ಬಸ್ಸು ಹೊರಟ ಮೇಲೆ ಅವನಿಗೆ ವಿದಾಯ ಹೇಳಲು ಸೇರಿದ್ದವರೆಲ್ಲರೂ ಅವರವರ ಪಾಡಿಗೆ ಚದುರಿದರು. ಲಚ್ಚಣ್ಣನನ್ನು ಕಳುಹಿಸಿಕೊಟ್ಟಮೇಲೆ ಅವರೆಲ್ಲ ತಮ್ಮ ಬಳಿಗೆ ಬಂದು ತನ್ನ ಸುಖಕಷ್ಟವನ್ನು ವಿಚಾರಿಸುತ್ತಾರೆ ಎಂದು ನಿರೀಕ್ಷಿಸಿದ್ದ ಮಂಜಿತ್ತಾಯರು ಪೆಚ್ಚಾಗಿ, ತಾನು ಸಂಗ್ರಹಿಸಿದ್ದ ಪ್ಲೇಟು, ಚಮಚಗಳನ್ನು ತನ್ನ ಹೆಗಲಿನ ಬೈರಾಸಿನಲ್ಲಿ ಕಟ್ಟಿಕೊಂಡು, “ಪ್ರಭುಗಳೇ ಬರುತ್ತೇನೆ” ಎಂದು ಹೇಳಿ, ಅವರ ಪ್ರತಿಕ್ರಿಯೆಗೆ ಕಾಯದೆ, ಹಳ್ಳಿಯ ಒಳಗಿದ್ದ ತಮ್ಮ ಮನೆಗೆ ಹೋಗುವ ಕಾಲು ದಾರಿಯತ್ತ ಹೆಜ್ಜೆ ಹಾಕಿದರು. ತೋರಣಪದವಿನ ಒಂದು ಅಧ್ಯಾಯ ಹೀಗೆ ಇತಿಹಾಸಕ್ಕೆ ಸೇರಿಹೋಯಿತು.
(ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾದ ಕತೆ, ೨೦೨೦)
‘ವಿದಾಯ’ ಕತೆಯ ಬಗ್ಗೆ: ಈ ಕತೆ ನನಗೆ ವಿಶೇಷವಾದ ತೃಪ್ತಿ ನೀಡಿದ ಕತೆಯಾಗಿದೆ. ಈ ಕತೆಯಲ್ಲಿ ಹಳ್ಳಿಯ ಒಂದು ಪಾರ್ಶ್ವ ಚಿತ್ರಣವೂ, ಕೆಲವು ವ್ಯಕ್ತಿಗಳ ಜೀವನ ಚಿತ್ರಣವೂ ಒಂದು ಭಾವುಕ ಸನ್ನಿವೇಶವೂ ಜತೆಗೂಡಿವೆ ಎಂದು ನಾನು ಭಾವಿಸಿರುವೆ. ಈ ಕತೆಯನ್ನು ಓದಿದ ಹಲವರು ಇದೊಂದು ‘ಭಾವ ಕತೆ’ ಎಂದು ಶ್ಲಾಘಿಸಿರುವುದರಿಂದ ನನಗೆ ಈ ಕತೆಯ ಬಗ್ಗೆ ವಿಶೇಷ ಅಭಿಮಾನವಿದೆ. ‘ಭಾವಗೀತೆ’ ಇರುವ ಹಾಗೆ ‘ಭಾವ ಕತೆ’ ಎನ್ನುವ ಮಾದರಿಯೂ ಇದೆ ಎಂದು ನಂಬುವವನು ನಾನು. ಎಲ್ ತಯ್ಯಬ್ ಸಾಲಿ ಅವರ ‘ಒಂದು ಮುಷ್ಟಿ ಖರ್ಜೂರ’ ಕತೆಯನ್ನು ನಾನು ಈ ಮಾದರಿಯ ಒಂದು ಅತ್ಯುತ್ತಮ ಕತೆ ಎಂದು ಪರಿಗಣಿಸಿದ್ದೇನೆ.
‘ವಿದಾಯ’ ಕತೆಯ ಸನ್ನಿವೇಶಗಳು ನಾನು ನಿಜಜೀವನದಲ್ಲಿ ಹತ್ತಿರದಿಂದ ಕಂಡ ಸನ್ನಿವೇಶಗಳೇ ಆಗಿವೆ.
ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82.
Please publish “ಎಲ್ ತಯ್ಯಬ್ ಸಾಲಿ ಅವರ ‘ಒಂದು ಮುಷ್ಟಿ ಖರ್ಜೂರ’ ಕತೆಯನ್ನು ನಾನು ಈ ಮಾದರಿಯ ಒಂದು ಅತ್ಯುತ್ತಮ ಕತೆ ಎಂದು ಪರಿಗಣಿಸಿದ್ದೇನೆ.”
Katheya koneya bhaga innu rochakavagirabekittu. Ondu surprise endu.