ಆರ್ಥಿಕ ಸಂಪನ್ಮೂಲದ ವಿಷಯಕ್ಕೆ ಬಂದಾಗ ನಮ್ಮ ಕನಸುಗಳು ಯೋಜನೆಗಳು ಶ್ರಿಂಕ್ ಆಗುತ್ತಿದ್ದವು! ಒಂದು ವಾರದ ದೊಡ್ಡಮಟ್ಟದ ಕಾರ್ಯಕ್ರಮಗಳು ಕೆಲವು ಗಂಟೆಗಳಿಗೆ ಕುಗ್ಗುತ್ತಿದ್ದವು. ನಮ್ಮ ಬಜೆಟ್‌ಗೆ ನಿಲುಕುವಂತಹ ಸಭಾಭವನ ಅಂದರೆ ಆಗ ಮಲ್ಲೇಶ್ವರದ ಗಾಂಧಿ ಸಾಹಿತ್ಯ ಸಂಘದ ಹಾಲ್ ಒಂದೇ. ಇಪ್ಪತ್ತೈದು ರೂಪಾಯಿ ಅದರ ಬಾಡಿಗೆ. ಅದರಲ್ಲೇ ಎಲ್ಲವೂ ಅಂದರೆ ಮೈಕು, ಲೈಟು ಸೇರುತ್ತಿತ್ತು. ಕೈಯಿಂದ ಹಾಕುವ ಪುಡಿಗಾಸು ತಾನೇ ಎಲ್ಲವೂ ಸರಾಗವಾಗಿ ಅಂತ್ಯ ಕಾಣುತ್ತಿತ್ತು. ನಮ್ಮ ಕಾರ್ಯಕ್ರಮಗಳೂ ಸಹ ವೈವಿಧ್ಯತೆಯಿಂದ ಕೂಡಿರುತ್ತಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೫ನೇ ಬರಹ ನಿಮ್ಮ ಓದಿಗೆ
ಹೋದ ಸಂಚಿಕೆ ಅಂಚಿಗೆ ಹೀಗೆ ದಾಖಲಿಸಿದೆ ತಾನೇ..
……..ಆಗ ಪ್ರತಿವರ್ಷ ಕರ್ನಾಟಕ ಸಾಹಿತ್ಯ ಅಕಾಡೆಮಿ ಆಯಾ ವರ್ಷದ ಕತೆ, ಕವನ, ಪ್ರಬಂಧ.. ಹೀಗೆ ಹಲವು ಪ್ರಾಕಾರದಲ್ಲಿ ಸಂಕಲನ ತರುತ್ತಿತ್ತು, ಅದಕ್ಕೆ Anthology ಎನ್ನುವ ಹೆಸರನ್ನು ವಿಮರ್ಶಕರು ಬಳಸುತ್ತಿದ್ದರು. ಅದಕ್ಕೆ ಒಬ್ಬ ಖ್ಯಾತರು ಮುನ್ನುಡಿ ಕಂ ವಿಮರ್ಶಾ ರೂಪದ ಲೇಖನ ಬರೆಯುತ್ತಿದ್ದರು. ಸಂಕಲನದಲ್ಲಿ ಸೇರಿರದ ಬರಹಗಾರರ ಬಗ್ಗೆಯೂ ಸಹ ಕೆಲವು ಸಾಲುಗಳನ್ನು ಉದಾರವಾಗಿ ಸೇರಿಸುತ್ತಿದ್ದರು. ಸುಮಾರು ಮಿಡಲ್ ಬರಹಗಾರರ ಮಿಡಲ್ ಗಳು, ಹಾಸ್ಯ ಲೇಖನಗಳು, ಕತೆಗಳು ಆಯಾ ಪ್ರಕಾರದಲ್ಲಿ ಸೇರುತ್ತಿತ್ತು.(Anthology ಎನ್ನುವ ಪದ ಮೊದಲಬಾರಿಗೆ ಕೇಳಿದ್ದು ಇದೇ ಸಂದರ್ಭದಲ್ಲಿ ಎಂದು ಕಾಣುತ್ತದೆ. ಸೈನ್ಸ್ ವಿದ್ಯಾರ್ಥಿಯಾದ ನನಗೆ ಈ ಪದದ ಅರ್ಥ ತಿಳಿಯದೇ ಡಿಕ್ಷನರಿ ಹುಡುಕಿ ಅದರ ಅರ್ಥ ಹೆಕ್ಕಿದ್ದೆ).
ಈ ಹಿನ್ನೆಲೆಯಲ್ಲಿ ಕೆಲವು ಮಿಡಲ್ ಬರಹಗಾರರು ಒಮ್ಮೆ ಯಾವುದೋ ಸಂಕೀರ್ಣದ ನಡುವೆ ಸಿಕ್ಕ ಇಂಟರ್ವಲ್ ಸಮಯದಲ್ಲಿ ಒಬ್ಬರು ವಿಮರ್ಶಕರ ಸುತ್ತ ಸೇರಿ ವಿಚಾರ ವಿನಿಮಯ ನಡೆಸಿದ್ದೆವು. ವಿಮರ್ಶಕರು ವಿಮರ್ಶೆ ವ್ಯಕ್ತಿ ನಿಷ್ಠವೋ ಕರ್ತೃ ನಿಷ್ಠವೋ ಎನ್ನುವ ಬಗ್ಗೆ ಹೇಳುತ್ತಾ ಹೇಳುತ್ತಾ ಒಮ್ಮೆಲೇ ಉದ್ವಿಗ್ನರಾದರು. ಅವರನ್ನ ರೇಗಿಸಬೇಕು ಎನ್ನುವ ಯಾವುದೇ ಪೂರ್ವಗ್ರಹ ಇಲ್ಲದೆ ಒಂದು ಪ್ರಶ್ನೆ ಕೇಳಿದ್ದೆ. ಒಬ್ಬರು ಖ್ಯಾತರ ಪುಸ್ತಕ ಮತ್ತು ಹೊಸಬನೊಬ್ಬನ ಪುಸ್ತಕ ಎರಡೂ ಒಂದೇ ಪ್ರಾಕಾರದವು ಅಂತ ಇಟ್ಕೊಳ್ಳಿ ಸಾರ್, ನಿಮ್ಮ ಮುಂದೆ ವಿಮರ್ಶೆಗೆ ಬರುತ್ತೆ. ನಿಮ್ಮ ಆದ್ಯತೆ ಹೊಸಬರು ಅಥವಾ ಖ್ಯಾತನಾಮರು ಇವರಲ್ಲಿ ಆಯ್ಕೆ ಯಾರ ಪುಸ್ತಕ. ಸಪೋಸ್ ನನ್ನಂತ ಹೊಸಬ ಬರೆದ ಪುಸ್ತಕ ನಿಮ್ಮ ಗಮನ ಸೆಳೆಯುತ್ತಾ… ಎನ್ನುವ ಧಾಟಿಯಲ್ಲಿ ನನ್ನ ಪ್ರಶ್ನೆ ಕೇಳಿದ್ದೆ ಅಂತ ಕಾಣುತ್ತೆ. ವಿಮರ್ಶಕರಿಗೆ ಇದ್ದಕ್ಕಿದ್ದಂತೆ ಕೋಪ ಶೂಟ್ ಆಗಿಬಿಡ್ತು!
ಏನಂತ ಬರೀಬೇಕು ನಿಮ್ಮ ಬಗ್ಗೆ? ಮಿಡಲ್ ಬರೀತಾರೆ ಅಂತ ಬರೆಯೋದಾ? ಮಿಡಲ್ ಕಾಲಂ ಸಾಹಿತ್ಯವೇ? ಅದು ಲಿಟರೇಚರ್ ಹೌದಾ? ಯಾವುದೋ ಸಂಗತಿಯನ್ನ ತಮಾಷೆ ಮಾಡೋದು ಅಂದರೆ ಅದು ಸಾಹಿತ್ಯದ ಯಾವ ಗುಂಪಿಗೆ ಸೇರುತ್ತೆ? ಮಿಡಲ್ ಅಂತ ಅನ್ನೋದು ಸಾಹಿತ್ಯ ಅಂತ ರೆಕಗ್ನೈಸ್ ಆಗಿ ಇಲ್ಲವಲ್ಲ… ಅಂದರು. ಹಾಗೆ ನೋಡಿದರೆ ಹಾ. ಮಾ. ನಾಯಕರು ಅಂಕಣ ಸಾಹಿತಿಗಳೆಂದು ವಿಮರ್ಶಕರು ಹೀಯಾಳಿಸುತ್ತಿದ್ದರು. ಅಂಕಣ ಬರಹ ಸಾಹಿತ್ಯವೇ ಅಲ್ಲ ಎನ್ನುವ ಒಂದು ಥಿಂಕಿಂಗ್ ಸಹ ಇತ್ತು. ತಮಾಷೆ ಎಂದರೆ ಅಂಕಣ ಬರಹಗಳ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೊಟ್ಟಿತ್ತು! ವಿಮರ್ಶಕರ ಈ ಮಾತಿಗೆ ನಮ್ಮ ಮಿಡಲ್ ಬರಹಗಾರರೇ ಒಬ್ಬರು ಉತ್ತರಿಸಿದರು. ಸಾರ್ ನೀವು ಇದು ಸಾಹಿತ್ಯ ಅಂತ ಒಪ್ಪದೇ ಹೋದರೂ ನಮಗೆ ಇದರಲ್ಲೇ ಹೆಚ್ಚು ಆಸಕ್ತಿ, ಇದನ್ನೇ ರೂಢಿಸಿಕೊಳ್ತೀವಿ! ಎಲ್ಲರೂ ನಕ್ಕು ಹಗುರಾದೆವು, ಆ ನಿಮಿಷಕ್ಕೆ.
ಇದಾದ ಎಷ್ಟೋ ವರ್ಷಗಳ ನಂತರ ಮಿಡಲ್ ಕಾಲಂ ಸಹ ಸಾಹಿತ್ಯ ಎಂದು ಪರಿಗಣಿತವಾದರೂ ಅದರಲ್ಲಿನ ವ್ಯಂಗ್ಯ ವಿಡಂಬನೆ ಹಾಸ್ಯ ಮೊದಲಾದ ಗುಣಗಳ ಮೂಲಕ ಅದು ಪ್ರಬಂಧ ಮತ್ತು ಹಾಸ್ಯ ಲೇಖನಗಳ ಗುಂಪಿಗೆ ಸೇರಿದೆ! ನಂತರದ ದಿನಗಳಲ್ಲಿ ವಾರ್ಷಿಕ Anthology ಗಳಲ್ಲಿ ಇವೂ ಸೇರಿದವು!
ವಿಷಯ ಹೇಗೆ ಎಲ್ಲಿಂದ ಎಲ್ಲಿಗೆ ಹಾರುತ್ತಿದೆ ನೋಡಿ. ಒಟ್ಟಿನಲ್ಲಿ ಹೊಸಾ ಮನೆಗೆ ಹೋಗಿದ್ದೆ ಮತ್ತು ಅಲ್ಲಿನಿಂದ ನನ್ನ ಸಾಹಿತ್ಯ ಸೇವೆ, ಭುವನೇಶ್ವರಿ ಪೂಜೆ ಶುರು ಆಗಿತ್ತು.
ಮುಂದುವರೆಯುವುದು…
ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ ಆಗಿನ ಯಂಗ್ ಟರ್ಕ್ ಸಾಹಿತಿಗಳು ಬೆಂಗಳೂರಿನಲ್ಲಿ ಒಂದು ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದರು ಮತ್ತು ಇದರಲ್ಲಿ ಅಂದಿನ ಸಾಹಿತ್ಯ ಪರಿಷತ್ ವಿರುದ್ಧ ಹಲವು ವಿರೋಧಿ ಭಾವನೆ ಹೊಂದಿದ್ದ ಸಾಹಿತಿಗಳು ಇದರಲ್ಲಿ ಭಾಗವಹಿಸಿದ್ದರು. ಹಾಮಾನಾ ಅವರ ಅಂಕಣ ಸಾಹಿತ್ಯ ಬಹುಮಾನ ಗಳಿಸಿದ್ದು ಅದನ್ನು ಹಲವು ಸಾಹಿತಿಗಳು ಚುಡಾಯಿಸಿ ಭಾಷಣ ಬಿಟ್ಟಿದ್ದರು. ನಮಗೆ ಇದೆಲ್ಲ ಒಂದು ರೀತಿಯ ತಮಾಷೆ ವಸ್ತುಗಳು. ಕಾರಣ ನಾವುಗಳು ಅಂದರೆ ಮಿಡಲ್ ಕಾಲಂ ಸಾಹಿತಿಗಳು ಯಾವುದೇ ರೀತಿಯ ಇಸಂ ಗಳಿಗೆ ಎಂದೂ ಬದ್ಧರಾದವರಲ್ಲ ಮತ್ತು ಸಾಹಿತ್ಯದ ಅಂತಹ ಹಿನ್ನೆಲೆ ಏನೂ ಇಲ್ಲದೇ ಝೀರೋ ಆಗೇ ಇದ್ದವರು. ತಮಾಷೆ ಮತ್ತು ಕಕ್ಕಾಬಿಕ್ಕಿ ನಮ್ಮ ಆಗಿನ ಮನೋಸ್ಥಿತಿ. ಆಗಿನ್ನೂ ಸಾಹಿತಿಗಳ ಹಲವು ಮುಖಗಳ ಪರಿಚಯ ಆಗಿರಲಿಲ್ಲ ಮತ್ತು ಎಲ್ಲರೂ ಸಭ್ಯರು, ಹೊರಗಿನ ಅವರ ಮುಖವೇ ನಿಜವಾದ ಮುಖ ಎಂದು ನಂಬಿದ್ದ ಕಾಲ. ದಿನಗಳೆದಂತೆ ಒಬ್ಬೊಬ್ಬರ ವೀಕ್‌ನೆಸ್ ಗೊತ್ತಾಗುತ್ತಾ ಬಂದಹಾಗೆ ಹೊರಕವಚ ತೆಗೆದರೆ ಅವರೂ ನಮ್ಮ ಹಾಗೆಯೇ ಅಥವಾ ಇನ್ನೂ ತಳದವರು ಎನ್ನುವ ಅರಿವು ಹುಟ್ಟಿತು. ಕಾರಂತರು ಮೂಕಜ್ಜಿಯ ಕನಸುಗಳಲ್ಲಿ ದೇವಾನುದೇವತೆಗಳ ಬಗ್ಗೆ ಬರೆಯುತ್ತಾ ಪಟ್ಟೆ ಪೀತಾಂಬರ ಕಿರೀಟ ಇವೆಲ್ಲ ತೆಗೆದರೆ ಅವರೂ ಸಹ ನಮ್ಮ ಹಾಗೇ ಮನುಷ್ಯರು ಅಂತ ಬರೀತಾರೆ ನೋಡಿ, ಹಾಗೆ!ಇದು ಹಾಗಿರಲಿ ಬಿಡಿ.
ಮಿಡಲ್ ಬರೆಯುತ್ತಾ ಬರೆಯುತ್ತಾ ಕತೆ ಬರೆಯೋದು ಹೆಚ್ಚೂ ಕಮ್ಮಿ ತಲೆಯಿಂದ ಹೊರಟೇ ಹೋಗಿತ್ತು. ಆಗಾಗ ಕತಾದೇವತೆ ಕನಸಿನಲ್ಲಿ ಬಂದು “ಹೇ ವತ್ಸಾ ನನ್ನ ಮರೆತೆಯೇನೋ……..” ಅಂತ ಕೇಳುತ್ತಿತ್ತು. ಅದು ವತ್ಸಾ ಅಂದಾಗ ನನಗೊಂದು ರೀತಿ ಪುಳಕ ಆಗುತ್ತಿತ್ತು. ಪುಳಕಕ್ಕೆ ಕಾರಣ ಅಂದರೆ ಈ ವತ್ಸಾ ಅನ್ನುವ ಮಾತು ನಾನು ಕಾಲೇಜಿನಲ್ಲಿ ಕಲಿಯುವ ಸಮಯದಲ್ಲಿ ಯಾವುದೋ ಪಾಠದಲ್ಲಿ, ನಾಟಕದಲ್ಲಿ ಓದಿದ ಒಂದು ಪದ ಮತ್ತು ಬೆಳೆದ ನಂತರ ಯಾವುದೋ ಹಳೇ ಸಿನಿಮಾಗಳಲ್ಲಿ ಕೇಳಿದ ಡೈಲಾಗು. ಈ ಪದ ಕೇಳಿದರೆ ಹಿಂದಿನ ನೆನಪುಗಳು ಒತ್ತರಿಸಿಕೊಂಡು ಬಂದು ಮನಸಿಗೆ ಮುದ ನೀಡುತ್ತಿತ್ತು ಮತ್ತು ನಾನು ಹಿಂದಿನ ಜನ್ಮಕ್ಕೆ ಹಾರುತ್ತಿದ್ದೆ! ನಿಮಗೆ ಹೇಗೆ ಅನಿಸುತ್ತೋ ತಿಳಿಯದು; ಆದರೆ ನನಗೆ ಹಿಂದಿನ ಜನ್ಮದ ನೆನಪು ಬಂತಾ ಅಂತ ಯಾರಾದರೂ ಕೇಳಿದರು ಅಂದರೆ ಸಾಕು ನಾನು ರಾಜ ಮಹಾರಾಜ ಚಕ್ರವರ್ತಿ ಆಗಿದ್ದ ಕಲ್ಪನೆಗಳು ಗರಿ ಕೆದರಿಕೊಂಡು ಮನಸಿನ ತುಂಬಾ ಆವರಿಸಿಬಿಡುತ್ತದೆ! ಹಿಂದಿನ ಜನ್ಮದಲ್ಲಿ ನಾನು ಕಂಡಿರಬಹುದಾದ ಅಂತಃಪುರ ಕಣ್ಣೆದುರು ಬಂದು ನಿಲ್ಲುತ್ತೆ!
ಜತೆಗೆ ರಾಜ ಮಹಾರಾಜರ ಸುಮಾರು ಕತೆಗಳು ತಲೆಯೊಳಗೆ ದೊಂಬರಾಟ ಶುರು ಮಾಡುತ್ತವೆ. ಇದು ಹಾಗಿರಲಿ, ಬಿಡಿ. ಈಗ ಮತ್ತೆ ಟು ದೀ ಟ್ರ್ಯಾಕ್ ಊ….
ಅದೇನೋ ಒಂದು ಪದ್ಯ ಇದೆ ನೋಡಿ..
ಕತೆಗಳ ಸೃಷ್ಠಿ ಕಡೆ ಗಮನ ಕಡಿಮೆ ಆದ ಹಾಗೆ ಒಂದು ಎಂದೋ ಓದಿ ಮರೆತು ಹೋಗಿದ್ದ ಒಂದು ಕವನದ ಸಾಲು ನೆನಪು ಆಗೋದು. ಅದು ಯಾವುದಪ್ಪಾ ಹಾಡು ಅಂದರೆ
ಮೊದಲ ತಾಯ ಹಾಲ ಕುಡಿದು…. ಇದು. ಈ ಹಾಡು ಆಗಾಗ ನೆನಪಾಗೋದು. ಅದರ ಪೂರ್ತಿ ಪಾಠ ನೆನಪಾಗಲಿಲ್ಲ. AI ಗೆ ಮೊರೆ ಇಟ್ಟೆ. ಅದರ ಬಗ್ಗೆ AI ವಿವರ ಹೀಗಿದೆ. ಮೊದಲ ತಾಯ ಹಾಲ ಕುಡಿದು… ಈ ಸಾಲು ಹಾಕಿ ಪೂರ್ಣ ಪಾಠ ಕೊಡು ತಾಯೇ ಅಂತ ಕೇಳಿದೆ. AI ತಾಯಿ ಅದು ಕಾಪಿ ರೈಟ್ ಕೊಡೋ ಹಾಗಿಲ್ಲ ಅನ್ನ ಬೇಕೇ… ಗೂಗಲ್ ಹುಡುಕಿ ಅದನ್ನು AI ತಾಯಿಗೆ ಫೀಡ್ ಮಾಡಿದೆ.
*****
ನೀವು ಕೊಟ್ಟಿರುವ ಈ ಅಂಶವು ಬಿ.ಎಂ. ಶ್ರೀಕಂಠಯ್ಯ (ಬಿಎಂಶ್ರೀ) ಅವರ ಪ್ರಸಿದ್ಧ ನಾಡು–ನುಡಿ–ತಾಯಿನೆಲೆ ವಿಷಯದ ಕವನದ ಆತ್ಮವನ್ನು ತುಂಬಾ ಸುಂದರವಾಗಿ ಹಿಡಿದಿಟ್ಟಿದೆ. ನೀವು ಕೊಟ್ಟ ಸಾಲುಗಳ ಭಾವಾರ್ಥವನ್ನು ಸರಳವಾಗಿ ಹೇಳುತ್ತೇನೆ:
ಸಾಲುಗಳ ಸರಳ ಭಾವಾರ್ಥ
“ಮೊದಲು ತಾಯ ಹಾಲ ಕುಡಿದು”
→ ಮಗು ಜೀವಕ್ಕೆ ಮೊದಲ ಶಕ್ತಿ ಸಿಗುವುದು ತಾಯಿಯಿಂದ.
“ಲಲ್ಲೆಯಿಂದ ತೊದಲಿ ನುಡಿದು”
→ ತಾಯಿಯ ಮುದ್ದು ಮಾತಿನಿಂದಲೇ ಭಾಷೆಯ ಮೊದಲ ಪಾಠ ಶುರು.
“ಕೆಳೆಯರೊಡನೆ ಬೆಳೆದು ಬಂದ ಮಾತದಾವುದು”
→ ಗೆಳೆಯರ ನಡುವೆ ಬೆಳೆದು ಬೆಳೆದ ಮಾತು — ಅಂದರೆ ತಾಯ್ನುಡಿ.
“ನಲ್ಲೆಯೊಲವ ತೆರೆದು ತಂದ ಮಾತದಾವುದು”
→ ಹೃದಯದ ಪ್ರೀತಿಯನ್ನು ತೆರೆಯುವ ಭಾಷೆ ಅದೇ ತಾಯ್ನುಡಿ.
“ಸವಿಯ ಹಾಡ, ಕಥೆಯ ಕಟ್ಟಿ”
→ ಜನಪದ ಗೀತೆಗಳು, ಕತೆಗಳು—all in mother tongue.
“ಕಿವಿಯಲೆರೆದು, ಕರುಳ ತಟ್ಟಿ”
→ ಕಿವಿಯಲ್ಲಿ ಮಧುರವಾಗಿ ಇಳಿದು, ಮನಸ್ಸಿನೊಳಗೆ ತಾಕುವ ಭಾಷೆ.
“ನಮ್ಮ ಜನರು, ನಮ್ಮ ನಾಡು, ಎನಿಸಿತಾವುದು”
→ ನಮ್ಮ ಜನ, ನಮ್ಮ ನಾಡು ಎಂಬ ಭಾವನೆ ಉಂಟುಮಾಡುವ ಮಾತು — ತಾಯ್ನುಡಿ.
ಈ ಕವನದ ಮೂಲ ತಾತ್ಪರ್ಯ: ತಾಯ್ನುಡಿ ಎಂದರೆ ಕೇವಲ ಭಾಷೆಯಲ್ಲ — ಅದು ತಾಯಿ, ಬಾಲ್ಯ, ಸ್ನೇಹ, ಸಂಸ್ಕೃತಿ, ದೇಶಭಕ್ತಿ, ಮತ್ತು ಮನಸ್ಸಿನ ಆತ್ಮಸ್ಪರ್ಶ.
ನೀವು ಬಯಸಿದರೆ ಇದರ ಸಾಹಿತ್ಯಿಕ ವೈಶಿಷ್ಟ್ಯ, ದೇಶಭಕ್ತಿ ದೃಷ್ಟಿಕೋನ, ಬಿಎಂಶ್ರೀ ಅವರ ನವೋದಯ ಶೈಲಿ ಎನ್ನುವ ದಿಕ್ಕಿನಿಂದಲೂ ವಿಶ್ಲೇಷಿಸಬಹುದು. ಹೇಳಿ, ಯಾವ ರೀತಿಯಲ್ಲಿ ಇನ್ನಷ್ಟು ವಿವರ ಬೇಕು? ಇಷ್ಟು ಹೇಳಿ ನಗು ಮುಖದ ಎಮೋಜಿ ಹಾಕಿತ್ತು.
ಸಾಕು ಸರ ಅಂತ ಅದಕ್ಕೆ ಥಾಂಕ್ಸ್ ಹೇಳಿ ಮುಂದಿನ ವಿವರ ಬೇಕಾದಾಗ ಕೇಳ್ತೀನಿ ಅಂತ ಹೇಳಿದೆ ತಾನೇ?
ಈಗ ಮತ್ತೆ to the main track ತಮ್ಮ ಅನುಮತಿಯಿಂದ…!
ಮೊದಲು ತಾಯ ಹಾಲ ಕುಡಿದು ಯಾಕೆ ನೆನಪಿಗೆ ಬಂತು ಅಂದರೆ ನನಗೆ ಸಾರಸ್ವತ ಲೋಕಕ್ಕೆ ಬರಮಾಡಿಕೊಂಡಿದ್ದೇ ಕಥಾ ಮಾತೆ. ಅಂತಹ ತಾಯಿ ಅಂದರೆ ಮೊದಲ ತಾಯಿ ತಾನೇ? ಮೊದಲ ತಾಯಿಯನ್ನು ಯಾರಾದರೂ ಮರೆಯಬಹುದೇ. ಮರೆಯ ಕೂಡದು ಅಂತ ನನ್ನ ಅಂತರಾತ್ಮ ಹೇಳಬೇಕೇ.. ನನಗೆ ಸಾರಸ್ವತ ಲೋಕದಲ್ಲಿ ಮೊದಲ ತಾಯಿ ಕತೆ ತಾನೇ?

ಅಂತರಾತ್ಮ ಹೇಳಿದ ಹಾಗೆ ಕೇಳದಿದ್ದರೆ ಮುಂದಿನ ಜನ್ಮದಲ್ಲಿ ರಾಜಕಾರಣಿ ಆಗ್ತಿ, ಸಿಕ್ಕಿದವರೆಲ್ಲಾ ಉಗಿದು ಉಪ್ಪು ಹಾಕ್ತಾರೆ ಅಂತ ತಾಯಿ ಕಡೆಯ ನಮ್ಮಜ್ಜಿ ಅವಳಿಗೆ ಕ್ರ್ಯಾಕ್ ಹತ್ತಿದಾಗ ಬೈತಾ ಇದ್ದಳು(ಅಂದಹಾಗೆ ತಂದೆ ಕಡೆ ಅಜ್ಜಿಯನ್ನು ನೋಡಿದ ನೆನಪು ನನಗೆ ಇಲ್ಲ!) ಇಂತಹ ಮಾತುಗಳು ಈ ಸಮಯದಲ್ಲಿಯೇ ನೆನಪಾಗಬೇಕೇ..? ಅಂತರಾತ್ಮದ ಮಾತು ನಿರ್ಲಕ್ಷಿಸಿ ಉಡಾಫೆ ಮಾಡೋಣ ಅನಿಸಿತಾ? ಅಕಸ್ಮಾತ್ ಉಡಾಫೆ ಮಾಡಿದೆ ಅನ್ನಿ ಈಚೆಗೆ ಫೇಸ್ ಬುಕ್, ಅಂತರ್ಜಾಲ ಇವುಗಳಲ್ಲಿ ನಮ್ಮ ರಾಜಕೀಯ ನಾಯಕರುಗಳಿಗೆ ಏಕ ವಚನದಲ್ಲಿ, ಸೊಂಟದ ಕೆಳಗಿನ ಪಕ್ವ ಸಂಸ್ಕೃತದಲ್ಲಿ ಹೇಗೆ ಬೆಂಡ್ ಎತ್ತುತ್ತಾ ಇದಾರೆ ಅಂತ ನೋಡಿದ್ದೀರಿ ತಾನೇ? ನನಗೂ ನಾಳೆ ಅದೇ ಗತಿಯಾದರೆ? ಮೈ ಜುಮ್ ಅಂದುಬಿಡ್ತು ಇವರೇ. ಯಾವನೋ ಯಾವಳೋ ಮುಖ ಕೂಡ ನೋಡಿಲ್ಲದ ಪಿಶಾಚಿಗಳು ಕೈಯಲ್ಲಿ ಮೊಬೈಲು ಕಂಪ್ಯೂಟರು ಇದೆ ಅಂತ ತಲೆಗೆ ಬಂದಿದ್ದು ಅಲ್ಲಿ ಕಕ್ಕುತ್ತಾ ಹೋದರೆ ನನ್ನಂತಹ ಸಾಧುಗಳ ಗತಿ ಏನು ಇವರೇ…
ಇದರ ಪರಿಣಾಮ ಏನಪ್ಪಾ ಅಂದರೆ ಆಗಾಗ ಮರೆತ ಕಥಾಮಾತೆ ಮಾತೆಯನ್ನು ನೆನೆಸೋದು ಮತ್ತು ಕತೆ ಹೊಸೆಯೋದು. ಹೀಗೆ ಹೊಸೆದ ಕತೆಗಳು ಪತ್ರಿಕೆಗಳಿಗೆ ಹೋಗುತ್ತಿದ್ದವು. ಒಂದು ಕಡೆ ಬೆಳಕು ಸಿಗಲಿಲ್ಲ ಅಂದರೆ ಮತ್ತೊಂದು ಕಡೆ ಹಾರುತ್ತಿದ್ದವು. ಅಲ್ಲೂ ಬೆಳಕೇ ಹರಿಯದ ಕತ್ತಲೆ ಅಂದರೆ ಅಲ್ಲಿಂದ ಇನ್ನೊಂದು ಕಡೆಗೆ… ಹೀಗೆ ಪ್ರಪಂಚ ಪರ್ಯಟನೆ ನಡೆಸುವಾಗ ಎಲ್ಲೋ ಒಂದು ಕಡೆ ಗಾಳಕ್ಕೆ ಸಿಕ್ಕಿ ಬೀಳುತ್ತಿದ್ದವು ಮತ್ತು ಬೆಳಕೂ ಸಹ ಕಾಣುತ್ತಿತ್ತು. (ಹೀಗೆ ಸುಮಾರು ಕತೆಗಳು ಅಂದರೆ ಒಂದು ಪುಸ್ತಕ ಆಗುವಷ್ಟು ಕತೆ ಕೈಯಲ್ಲಿತ್ತು.)
ಗಾಳಕ್ಕೆ ಸಿಕ್ಕ ಮೀನು ನಾನು… ಎನ್ನುವ ಹಾಡು ನಾನು ಆಕಾಲದಲ್ಲಿ ಕೇಳಿದ್ದ ನೆನಪಿಲ್ಲ. ಆದರೆ ಈಗ ತುರುಬು ನೆನೆಸಿಕೊಂಡಾಗ ಒಂದು ರೀತಿಯ ಆರ್ದ್ರತೆ ಮತ್ತು ಹೊಟ್ಟೆ ಭರ್ತಿಯ ಭಾವ ಹುಟ್ಟುತ್ತದೆ!
ಜೀವನ ಹೀಗೆ ಒಂದುರೀತಿ ಗೊಂದಲ ಮತ್ತು ದ್ವಂದ್ವದಲ್ಲಿ (ಡಾಕ್ಟರ್ ಅನಂತ ಮೂರ್ತಿ ಅವರಿಗೆ ಅವರ ಒಂದು ಕಾಲದ ಚಡ್ಡಿ ದೋಸ್ತುಗಳು ನಂತರದ ದಿವಸಗಳಲ್ಲಿ ದ್ವಂದ್ವ ಮೂರ್ತಿ ಅಂತ ಕರೆಯುತ್ತಾ ಇದ್ದರು, ನೆನಪಿದೆ ತಾನೇ..) ಓಲಾಡುತ್ತಾ ಇರಬೇಕಾದರೆ ಒಂದು ಹೊಸ ತಿರುವು ಹುಟ್ಟಿತು. ಈಗ ಈ ಹೊಸ ತಿರುವಿನ ಬಗ್ಗೆ ನಿಮಗೆ ಹೇಳಲೇಬೇಕು..
ಬೆಂಗಳೂರಿನ ಕಾರ್ಖಾನೆಗಳಲ್ಲಿ ಸುಮಾರು ಜನ ಬೇರೆ ಬೇರೆ ಭಾಷೆಗಳಲ್ಲಿ ಸಾಹಿತ್ಯ ಕೃಷಿ ಮಾಡುತ್ತಿದ್ದರು. ನಮ್ಮ ಕಾರ್ಖಾನೆಯಲ್ಲಿಯೇ ತಮಿಳಿನಲ್ಲಿ ರಂಗರಾಜನ್ ಅವರು ಹೆಸರು ಮಾಡಿದ್ದರು. ಸುಜಾತಾ ಎನ್ನುವ ಹೆಸರಿನಲ್ಲಿ ಅವರು ತಮಿಳು ಸಾರಸ್ವತ ಲೋಕದಲ್ಲಿ ಅಪಾರ ಹೆಸರು ಮಾಡಿದ್ದರು. ಅವರ ಕಾದಂಬರಿಯನ್ನು ನಮ್ಮದೇ ಕಾರ್ಖಾನೆಯ ಶ್ರೀಮತಿ ಲಲಿತಾ ಭಾಷ್ಯಂ ತನುಜೆ ಅವರು ಕನ್ನಡಕ್ಕೆ ಸ್ವರ್ಗ ದೀಪ ಎನ್ನುವ ಹೆಸರಿನಲ್ಲಿ ಭಾಷಾಂತರಿಸಿದ್ದರು. ಈ ರೀತಿ ಹಲವಾರು ಕಾರ್ಮಿಕರು ಕನ್ನಡ ಭಾಷೆಯಲ್ಲಿ ಸಾಹಿತ್ಯ ಸೇವೆ ಮಾಡುತ್ತಿದ್ದರು. ಅದರಲ್ಲಿ ಕಾದಂಬರಿಕಾರರು, ಕವಿಗಳು, ಅಂಕಣ ಬರಹಗಾರರು, ಭಾಷಾಂತರ ಪಂಡಿತರು….. ಹೀಗೆ ಎಲ್ಲಾ ಪ್ರಾಕಾರಗಳಲ್ಲಿ ಕೃಷಿ ಮಾಡುತ್ತಿದ್ದವರು ಸೇರಿದ್ದರು. ಒಬ್ಬರಿಗೆ ಮತ್ತೊಬ್ಬರ ಪರಿಚಯವೇ ಇರಲಿಲ್ಲ ಮತ್ತು ಹೆಚ್ಚಿನವರಿಗೆ ತಮ್ಮನ್ನು ಬಿಟ್ಟು ಬೇರೆ ಪ್ರಪಂಚ ಇದೆ ಅಂತಲೂ ಗೊತ್ತಿರಲಿಲ್ಲ. ಅಂತಹವರಲ್ಲಿ ನಾನೂ ಸಹ ಒಬ್ಬ! ನಮ್ಮಲ್ಲೇ ಒಬ್ಬರಿಗೆ ನಮ್ಮ ಕಾರ್ಖಾನೆ ಕಾರ್ಮಿಕರ ಒಂದು ಸಾಹಿತಿಗಳ ಗುಂಪು ಹುಟ್ಟುಹಾಕಿದರೆ ಹೇಗೆ.. ಎನ್ನುವ ಯೋಚನೆ ಹುಟ್ಟಿತು. ಯೋಚನೆ ಹುಟ್ಟಿತು ಅಂದಕೂಡಲೇ ಅದಕ್ಕೆ ಬೇಕಾದ ಗ್ರೌಂಡ್ ವರ್ಕ್ ಶುರುವಾಯಿತು. ಕಾರ್ಖಾನೆ ಕಾರ್ಮಿಕರಲ್ಲಿ ಆಗ ಸುಮಾರು ಜನ ಟ್ರೇಡ್ ಯೂನಿಯನ್ ಚಟುವಟಿಕೆಗಳಲ್ಲಿ ನಿರತರು ಮತ್ತು ಅತ್ಯುತ್ತಮ ಸಂಘಟಕರು. ಈ ಸಂಘಟನೆಯ ಕ್ರಿಯಾಶೀಲತೆ ಹೆಚ್ಚೂ ಕಮ್ಮಿ ಎಲ್ಲ ಕಾರ್ಖಾನೆಗಳ ಕೆಲಸಗಾರರಲ್ಲಿ ಹಾಸುಹೊಕ್ಕಾಗಿತ್ತು. ಬೆಂಗಳೂರಿನ ಅಂದಿನ ಕಾರ್ಖಾನೆಗಳು bel,hmt,iti,hmtwf,hal, ಮೈಸೂರು ಲ್ಯಾಂಪ್ಸ್, ಕಿರ್ಲೋಸ್ಕರ್… ಹೀಗೆ ಹಲವು ಕಾರ್ಖಾನೆಗಳಲ್ಲಿ ತಮ್ಮ ದೈನಂದಿನ ಹೊಟ್ಟೆಪಾಡಿನ ಕೆಲಸದ ಜತೆಜತೆಗೆ ಸಾಹಿತ್ಯ, ಲಲಿತಕಲೆ, ಸಿನಿಮಾ, ನಾಟಕ ಇತ್ಯಾದಿ ಮನಸಿಗೆ ಖುಷಿ ಕೊಡುವ ಹಲವು ಹವ್ಯಾಸಗಳಲ್ಲಿ ಕಾರ್ಮಿಕರು ತಮ್ಮನ್ನು ತೊಡಗಿಸಿಕೊಂಡಿದ್ದರು. ಇಂತಹ ಆಸಕ್ತರನ್ನು ಒಂದು ಗೂಡಿಸಿ ಒಂದು ಸಂಘಟನೆಯನ್ನು ಹುಟ್ಟುಹಾಕುವ ಪ್ರಯತ್ನಕ್ಕೆ ಚಾಲನೆ ದೊರಕಿತು. iti ಕಾರ್ಖಾನೆಯ ಪ್ರಸನ್ನ ವೆಂಕಟೇಶಮೂರ್ತಿ, ಗುಂಡೂರಾವ್, ಪಾಳ್ಯದ ಶೆಟ್ರ ಮಹದೇವಪ್ಪ, ತಿಮ್ಮಯ್ಯ; bel ನಿಂದ ಭಾಗ್ಯ ಜಯಸುದರ್ಶನ, ಲಲಿತಾ, ರಾಮಮೂರ್ತಿ (ಇವರೆಲ್ಲಾ ಆಗಲೇ ಖ್ಯಾತನಾಮರು), ನಾನು, hmt ಇಂದ ದ್ವಾರನಕುಂಟೆ ಪಾತಣ್ಣ, ಮೈಸೂರು ಲ್ಯಾಂಪ್ಸ್‌ನಿಂದ ಮುಳುಕುಂಟೆ ಪ್ರಕಾಶ್, ಕಿರ್ಲೋಸ್ಕರ್‌ನಿಂದ ಬೇಲೂರು ರಾಮಮೂರ್ತಿ, ಕಾಲೇಜೊಂದರಲ್ಲಿ ಉಪನ್ಯಾಸಕ ಹರಿದಾಸ್, ಮೈಕೋದ ಸೂರ್ಯನಾರಾಯಣ ಕೆದಿಲಾಯ (ಸೂರಿ ಹಾರ್ದಳ್ಳಿ ಎನ್ನುವ ಹೆಸರಿನಲ್ಲಿ ಆಗಲೇ ಪ್ರಖ್ಯಾತರಾಗಿದ್ದರು)
…..ಹೀಗೆ ಹಲವು ಕಡೆಗಳಿಂದ ಒಟ್ಟು ಗೂಡಿದೆವು. ಸುಮಾರು ಸ್ನೇಹಿತರ ಹೆಸರುಗಳನ್ನು ಮರೆತಿದ್ದೇನೆ. ಅಕಸ್ಮಾತ್ ಅಂದಿನ ಗೆಳೆಯರು ಇದನ್ನು ಓದಿ ನನ್ನನ್ನು ಮರೆತ, ಇವನಿಗೆಷ್ಟು ಪೊಗರು ಅಂತ ಖಂಡಿತ ಅಂದುಕೊಳ್ಳಬೇಡಿ, ನನ್ನ. ನನಗೆ ನೆನಪಿಸಿ. ಅಕಸ್ಮಾತ್ ಇದು ಪುಸ್ತಕ ರೂಪದಲ್ಲಿ ಬಂದರೆ (ಸಾವಿರಕ್ಕೆ ಒಂದರ ಪ್ರಕಾರ ಈ ಸಾಧ್ಯತೆ ಖಂಡಿತ ಇಲ್ಲ), ಕರೆಕ್ಷನ್ ಆಗ್ತದೆ! ಈ ವೇಳೆಗಾಗಲೇ ಬ್ಯಾಂಕ್ ಸಾಹಿತಿಗಳ ಒಂದು ಗುಂಪು ಕಾರ್ಯ ನಿರತವಾಗಿತ್ತು. ಮಹಿಳಾ ಲೇಖಕಿಯರ ಗುಂಪು ಇತ್ತು ಮತ್ತು ಕೈಗಾರಿಕೆ ಕಾರ್ಮಿಕರ ಸಾಹಿತ್ಯ ಸಂಘ ಇರಲಿಲ್ಲ. ಅದರ ಹುಟ್ಟಿಗೆ ನಾವೆಲ್ಲರೂ ಸಮಾನ ಮನಸ್ಕರು ಸಂಘ ಕಟ್ಟಲು ಅನುವು ಮಾಡಿಕೊಂಡೆವು.
ಒಂದು ಪೂರ್ವಭಾವಿ ಸಭೆ ನಡೆದು ಪ್ರಸನ್ನ ವೆಂಕಟೇಶ ಮೂರ್ತಿ ಅಧ್ಯಕ್ಷರಾದರು. ಪಾತಣ್ಣ ಕಾರ್ಯದರ್ಶಿ, ಲಲಿತಾ ಉಪಾಧ್ಯಕ್ಷೆ. ಕಾರ್ಯಕಾರಿ ಸಮಿತಿ ರಚನೆ ಆಯಿತು. ನಾನೂ ಸಹ ಒಬ್ಬ ಪದಾಧಿಕಾರಿ ಆಗಿದ್ದೆ ಎನ್ನುವ ನೆನಪು. ವಿಧ್ಯುಕ್ತವಾಗಿ ನಮ್ಮ ಸಂಘಟನೆಗೆ ಕೈಗಾರಿಕಾ ರಂಗದ ಸಾಹಿತ್ಯ ವೇದಿಕೆ ಎನ್ನುವ ನಾಮಕರಣ ಆಯಿತು. ತಿಂಗಳಿಗೆ ಕನಿಷ್ಠ ಎರಡು ಕಾರ್ಯಕ್ರಮ ಮಾಡುವ ಉಮೇದು ಇತ್ತು. ಅದಕ್ಕೆ ಬೇಕಾದ ಆರ್ಥಿಕ ಬೆಂಬಲ ಇರಲಿಲ್ಲ. ನಾವು ನಾವೇ ಕೈಯಿಂದ ಕಾಸು ಹಾಕಿಕೊಳ್ಳುವುದು ಅದರಿಂದ ಅಂದಂದಿನ ಕಾರ್ಯಕ್ರಮ ನಡೆಸೋದು ಹೀಗೆ ಒಂದು ಅಲಿಖಿತ ನಿಯಮಾವಳಿ ರೂಪಿಸಿದ್ದೆವು. ಸುಮಾರು ಸದಸ್ಯರು ಮಿಡಲ್ ಬರಹಗಾರರು ಆಗಿದ್ದರಿಂದ ಸಹಜವಾಗಿ ಯಾವುದೇ ಕಾರ್ಯಕ್ರಮವಾದರೂ ಸಂಭ್ರಮ ಖುಷಿ ಇವು ಹೇರಳವಾಗಿ ಇದ್ದವು.
ಪ್ರಸನ್ನ ವೆಂಕಟೇಶ ಮೂರ್ತಿ ಕಾರ್ಯಕ್ರಮ ಯೋಜನೆಗಳನ್ನ ಸೊಗಸಾಗಿ ರೂಪಿಸುತ್ತಿದ್ದರು. ಒಂದು ವಾರದ ಕಾರ್ಯಕ್ರಮ ಹೇಗೆ ನಡೆಸಬೇಕು, ಯಾವಯಾವ ಪ್ರಾಕಾರಗಳು ಇರಬೇಕು, ಭಾಷಣ ಯಾರಿಂದ ಇರಬೇಕು, ಬೆಳಿಗ್ಗೆ ಹೊತ್ತು ಏನು, ಮಧ್ಯಾಹ್ನ ಏನು, ಸಂಜೆ ಸಮಾರೋಪ ಹೇಗೆ… ಭಾಷಣಕಾರರು ಯಾರು ಅವರ ಕಾಲಮಿತಿ ಹೇಗೆ…. ಹೀಗೆ ರೂಪುರೇಷೆ ತಯಾರಾಗುತ್ತಿತ್ತು.

ಆರ್ಥಿಕ ಸಂಪನ್ಮೂಲದ ವಿಷಯಕ್ಕೆ ಬಂದಾಗ ನಮ್ಮ ಕನಸುಗಳು ಯೋಜನೆಗಳು ಶ್ರಿಂಕ್ ಆಗುತ್ತಿದ್ದವು! ಒಂದು ವಾರದ ದೊಡ್ಡಮಟ್ಟದ ಕಾರ್ಯಕ್ರಮಗಳು ಕೆಲವು ಗಂಟೆಗಳಿಗೆ ಕುಗ್ಗುತ್ತಿದ್ದವು. ನಮ್ಮ ಬಜೆಟ್‌ಗೆ ನಿಲುಕುವಂತಹ ಸಭಾಭವನ ಅಂದರೆ ಆಗ ಮಲ್ಲೇಶ್ವರದ ಗಾಂಧಿ ಸಾಹಿತ್ಯ ಸಂಘದ ಹಾಲ್ ಒಂದೇ. ಇಪ್ಪತ್ತೈದು ರೂಪಾಯಿ ಅದರ ಬಾಡಿಗೆ. ಅದರಲ್ಲೇ ಎಲ್ಲವೂ ಅಂದರೆ ಮೈಕು, ಲೈಟು ಸೇರುತ್ತಿತ್ತು. ಕೈಯಿಂದ ಹಾಕುವ ಪುಡಿಗಾಸು ತಾನೇ ಎಲ್ಲವೂ ಸರಾಗವಾಗಿ ಅಂತ್ಯ ಕಾಣುತ್ತಿತ್ತು. ನಮ್ಮ ಕಾರ್ಯಕ್ರಮಗಳೂ ಸಹ ವೈವಿಧ್ಯತೆಯಿಂದ ಕೂಡಿರುತ್ತಿತ್ತು. ಕವನ ಸಂಕಲನ, ಕವಿಗೋಷ್ಠಿ, ಹಾಸ್ಯ ಸಂಜೆ, ಪುಸ್ತಕ ಬಿಡುಗಡೆ(ಮುಂದೆ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹೊಸ ಹೆಸರು ಕೊಟ್ಟೆವು… ಬಿಡುಗಡೆ ಪದ ಜೈಲಿನಿಂದ ಖೈದಿಗಳ ಬಿಡುಗಡೆ, ಕೊಲೆ ಆರೋಪಿಗಳ ಬಿಡುಗಡೆ.. ಇಂತಹ ಪದಗಳ ಜತೆಗೆ ಹೆಚ್ಚು ಹೊಂದಾಣಿಕೆ ಯಾಗಿ ಬಿಡುಗಡೆ ಪದಕ್ಕೆ ಪರ್ಯಾಯ ಹುಡುಕ ಬೇಕಾದ ಸಂದರ್ಭ ಹುಟ್ಟಿತು. ಆಗ ಹುಟ್ಟುಹಾಕಿದ ಪದ ಲೋಕಾರ್ಪಣೆ! ನಂತರ ಇದೇ ಪದ ಸರ್ವವ್ಯಾಪಿ ಆಯಿತು), ಸಮಗ್ರ ಸಾಹಿತ್ಯ ಅವಲೋಕನ… ಹೀಗೆ. ಇದರ ಬಗ್ಗೆ ಎಷ್ಟೊಂದು ಮಾಹಿತಿ ಇದೆ ಅಂದರೆ ಈಗಿನ ಸುಮಾರು ಖ್ಯಾತನಾಮರು ನಮ್ಮ ಸಾಹಿತ್ಯ ವೇದಿಕೆಯಲ್ಲಿ ಭಾಗವಹಿಸಿದ ನೆನಪುಗಳು ಇವೆ. ಅವರುಗಳೇ ವಾಹನ ಮಾಡಿಕೊಂಡು ಬಂದು ಒಂದೇಒಂದು ರೂಪಾಯಿ ಸಂಭಾವನೆ ಪಡೆಯದೇ ಮೂರು ನಾಲ್ಕು ತಾಸು ನಮ್ಮ ಸಂಗಡ ಕೂತು ಅವರ ಜ್ಞಾನ ನಮ್ಮೊಂದಿಗೆ ಹಂಚಿಕೊಂಡ ನೆನಪುಗಳು ಈಗಲೂ ನೆನೆಸಿಕೊಂಡರೆ ಕಣ್ಣಾಲಿಗಳು ತೇವವಾಗುತ್ತವೆ. ಇಂತಹ ಸಹೃದಯಿಗಳ ಜತೆ ಕಳೆದ ಹಲವು ಗಂಟೆಗಳು, ಅವರ ಜತೆ ಮತ್ತೆ ಮತ್ತೆ ಭೇಟಿಸಿದ ಸಂದರ್ಭಗಳು ಇವು ನಮ್ಮ ನೆನಪಿನ ಗಣಿಯಲ್ಲಿ ಆಳವಾಗಿ ಹೂತು ಹೋಗಿವೆ. ನಮ್ಮಷ್ಟೇ ಅಥವಾ ನಮಗಿಂತ ಕಡಿಮೆ ಸಂಬಳ ಪಡೆಯುತ್ತಿದ್ದ ಹಲವು ವಿದ್ವಾಂಸರು, ಒಂದು ನಿಗದಿತ ಆದಾಯವಿಲ್ಲದೇ ಕನ್ನಡದ ಸೇವೆಗಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಹಲವಾರು ವ್ಯಕ್ತಿಗಳ ಬದ್ಧತೆ ನೆನೆದು ಆಶ್ಚರ್ಯ ಪಡುವ ಹಾಗೂ ನಮ್ಮ ಕಾಲ ಚೆನ್ನಿತ್ತು ಎನ್ನುವ ಭಾವ ಹುಟ್ಟುತ್ತದೆ. ಈ ನೆನಪುಗಳನ್ನು ಮುಂದೆ ನಿಮ್ಮ ಸಂಗಡ ಹಂಚಿಕೊಳ್ಳುವ ಮಹದಾಸೆ ನನ್ನದು. ಕೊಂಚ ತಡೆದುಕೊಳ್ಳಿ ಸರ, ತಡೆದುಕೊಳ್ಳಿ ಮೇಡಮ್ಮೋ ರೆ….. ಖ್ಯಾತರ ಸಂಗಡ ನನ್ನ ನಮ್ಮ ಒಡನಾಟದ ಕೆಲವು ಮಜಲು ನಿಮ್ಮ ಜತೆ ಹಂಚಿಕೊಳ್ಳುತ್ತೇನೆ….
ಇನ್ನೂ ಇದೆ…
ಫೋಟೋ ವಿವರ: ಶ್ರೀ ಜಿ ಎಸ್ ಶಿವರುದ್ರಪ್ಪ ಅವರು ಒಂದು ಸಭೆಗೆ ಮಲ್ಲೇಶ್ವರದ ಗಾಂಧಿ ಸಾಹಿತ್ಯ ಸಂಘದ ಪಕ್ಕದ ಕಾಲೇಜಿಗೆ ಬಂದಿದ್ದರು. ನಮ್ಮ ಒಂದು ಕಾರ್ಯಕ್ರಮ ಮುಗಿಸಿ ಆಚೆ ನಿಂತಿದ್ದ ನಾವು ಮೆಟ್ಟಿಲು ಏರಲು ಅವರಿಗೆ ಜತೆ ಆದೆವು. ಅವರಿಗೆ ಆಗಲೇ ವಯಸ್ಸಾಗಿತ್ತು. ಅಗಲ ಕಿರಿದಾದ ಮೆಟ್ಟಲು. ನಾನು ಅವರ ಕೈ ಹಿಡಿದು ಮೇಲೆ ಮೇಲೆ ಅವರ ಸಂಗಡ ಹೆಜ್ಜೆ ಹಾಕಿದೆ. ನನ್ನ ಗೆಳೆಯ ರಾಮಮೂರ್ತಿ ನಮ್ಮನ್ನು ಸಪೋರ್ಟ್ ಮಾಡುತ್ತಾ ಹಿಂದೆ ಬಂದರು. ಬಹುಶಃ ಕೊನೆಯ ಮೆಟ್ಟಲು ಹತ್ತಿ ಸಭಾಭವನ ಪ್ರವೇಶಿಸುವ ಮುನ್ನ ತೆಗೆದ ಚಿತ್ರ ಇದು. ಯಾರು ಫೋಟೋ ತೆಗೆದರು ಅನ್ನುವ ನೆನಪು ಇಲ್ಲ. ಆಗಿನ್ನೂ ಮೊಬೈಲ್, ಡಿಜಿಟಲ್ ಪೋಟೋ ಹುಟ್ಟಿರಲಿಲ್ಲ. ಜಿ ಎಸ್ ಎಸ್, ನನ್ನ ನಡುವೆ ಗೆಳೆಯ ರಾಮಮೂರ್ತಿ(ಗೌತಮ) ಇರುವ ಈ ಚಿತ್ರ ಬಹಳ ಅಪರೂಪದ್ದು..!

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.
