Advertisement
ಸ್ವಾಮಿ ಪೊನ್ನಾಚಿ ಬರೆದ ಈ ಭಾನುವಾರದ ಕತೆ “ವೃತ್ತ”

ಸ್ವಾಮಿ ಪೊನ್ನಾಚಿ ಬರೆದ ಈ ಭಾನುವಾರದ ಕತೆ “ವೃತ್ತ”

ಭಯಗೊಂಡ ವೆಂಕಯ್ಯ ಪಂಜು ಬಿಸಾಡಿ ದೂರ ಓಡಿದ. ಪಂಜು ಕಂಡ ಮಸೀದಿಯವರು ಇದು ಮೇಲಿನ ಕೇರಿಯವರದ್ದೇ ಕಿತಾಪತಿ ಎಂದು ತಾವೂ ನಾಲ್ಕಾರು ಕೊಳ್ಳಿ ತೆಗೆದುಕೊಂಡು ಮೇಲಿನ ಕೇರಿಯತ್ತ ಧಾವಿಸಿದರು. ಹಿಂದೂ ಮುಸ್ಲಿಂ ಕೋಮುಗಲಭೆ ಎಂದು ಪ್ರಚಾರಗೊಂಡ ಅದು ಟೀವಿ ಪೇಪರಿನಲ್ಲಿ ಸುದ್ದಿಯಾಯಿತು. ಯಾವ ಯುದ್ಧಕ್ಕೆ ತಾನೆ ಕೊನೆಯಿರುವುದಿಲ್ಲ? ಮತ್ತೆ ಯಾವ ಯುದ್ಧಕ್ಕೆ ತಾನೆ ನಿರ್ಧಿಷ್ಟವಾದ ಕಾರಣ ಬೇಕಿದೆ? ಕಾರಣವಿಲ್ಲದೆ ಎಷ್ಟೋ ಯುದ್ಧಗಳಾಗಿಲ್ಲವೇ? ಮತ್ತು ಅವು ಇದ್ದಕ್ಕಿದ್ದಂತೆ ನಿಂತೂ ಹೋಗಿಲ್ಲವೇ ? ಅದರಂತೆ ಈ ಊರಿನ ಗಲಾಟೆಗೂ ಒಂದು ಕೊನೆಯಿತ್ತು.
ಸ್ವಾಮಿ ಪೊನ್ನಾಚಿ ಬರೆದ ಕತೆ “ವೃತ್ತ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಭೂಮಿ ನೆಂದು ತಣ್ಣಗಾಗಿತ್ತು. ಊರ ಕೊಳೆಯೆಲ್ಲಾ ಕೊಚ್ಚಿಹೋಗಿ ಬೀದಿಗಳು ಆಗ ತಾನೆ ಕಸಗುಡಿಸಿಕೊಂಡಂತೆ ಸ್ವಚ್ಚವಾಗಿದ್ದವು. ಚರಂಡಿಗಳು ತುಂಬಿತುಳುಕಿ ತರಕಾರಿ ಸಿಪ್ಪೆ, ಮೊಟ್ಟೆಯ ಚಿಪ್ಪುಗಳು, ಖಾಲಿ ಪ್ಲಾಸ್ಟಿಕ್ ಬಣ್ಣ ಬಣ್ಣದ ಕವರ್‌ಗಳು, ಹರಕುಬಟ್ಟೆ, ಅಲ್ಲೊಂದು ಇಲ್ಲೊಂದು ತರಹೇವಾರಿ ಸಂಬಂಧವಿರದ ಹಳೆ ಕಿತ್ತುಹೋದ ಚಪ್ಪಲಿಗಳು ಇನ್ನೂ ವಿವಿಧ ನವ ನಮೂನೆಯ ವಸ್ತುಗಳು ರಸ್ತೆಯ ಎರಡೂ ಇಕ್ಕೆಲಗಳಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಷ್ಟೊತ್ತಿಗಾಗಲೇ ಸೈಕಲ್ಲೋ ಮೋಟಾರು ಸೈಕಲ್ಲೋ ಓಡಾಡಿದ ಟೈರುಗಳ ನಾಲ್ಕೈದು ಗುರುತುಬಿಟ್ಟರೆ ಆ ರಸ್ತೆಯಂಚಿನ ಮಡುಗಟ್ಟಿದ ಮರಳಿನಲ್ಲಿ ಹಿಂದೆ ಮುಂದೆ ಓಡಾಡಿದ ಹತ್ತಾರು ಹೆಜ್ಜೆಗುರುತುಗಳು ಹಸಿಯಾಗಿರುವಾಗಲೇ ಸ್ಪಷ್ಟವಾಗಿ ಮೂಡಿಬಿಟ್ಟಿದ್ದವು. ಅವನು ಹಿಮ್ಮಡಿಯನ್ನು ಭದ್ರವಾಗಿ ನೆಲದ ಮೇಲೆ ಊರಿ ಹೆಬ್ಬೆರಳನ್ನು ನಾಚುವ ಹೆಂಗಸಿನಂತೆ ಮುಂದೆ ಮಾಡಿ ನೆಲಕ್ಕೆ ಒತ್ತಿ ಹಿಡಿದು ಭರ‍್ರನೆ ಒಂದು ರೌಂಡು ತಿರುಗಿದಂತೆ ಕೈವಾರದಲ್ಲಿ ಪೆನ್ಸಿಲ್ ಸಿಕ್ಕಿಸಿ ಬಿಳಿಹಾಳೆ ಮೇಲೆ ವೃತ್ತ ಮೂಡಿಸಿದಂತೆ ಮರಳಿನ ಮೇಲೆ ವೃತ್ತ ಮೂಡಿತು. ಒಂದು ವೃತ್ತ ಸರಿಯಾಗಿ ಮೂಡಿದುದನ್ನು ಕಂಡು ಖುಷಿಗೊಂಡ ಅವನು ಅದರ ಪಕ್ಕದಲ್ಲಿ ಮತ್ತೊಂದು ವೃತ್ತ ಮೂಡಿಸಿದ. ಇದರಿಂದ ತೃಪ್ತಿಯಾಗದವನಂತೆ ಮರಳಿನಿಂದ ಹತ್ತಾರು ವೃತ್ತಗಳನ್ನು ಮೂಡಿಸುವುದರೊಳಗೆ ತಲೆ ತಿರುಗಿದಂತಾಗಿ ಅಲ್ಲೇ ನೆಲದಮೇಲೆ ಕುಳಿತ. ಅಸ್ಪಷ್ಟವಾಗಿ ಕಾಣುತ್ತಿದ್ದವೆಲ್ಲಾ ನಿಧಾನವಾಗಿ ಅವನ ಕಣ್ಮುಂದೆ ಸ್ಪಷ್ಟರೂಪಗಳನ್ನು ತಾಳುತ್ತಿದ್ದಂತೆಯೇ ಬೆಳ್ಳಗೆ ಉದ್ದವಾದ ದಾರವೊಂದು ಅವನ ಕಣ್ಣಿಗೆ ಸಮಾನಾಂತರವಾಗಿ ಕಂಡಿತು. ಆ ದಾರವನ್ನೆತ್ತಿ ತನ್ನ ಕೊರಳಿಗೆ ಸರಸರನೆ ಸುತ್ತಿಕೊಂಡು ಸಾಕ್ಷಾತ್ ಪರಶಿವನು ಕೊರಳಿಗೆ ಹಾವು ಸುತ್ತಿಕೊಂಡಂತೆ ಭಾಸವಾಗಿ ಶಿವತಾಂಡವ ನೃತ್ಯವನ್ನೇ ಆಡಿಬಿಡುತ್ತೇನೆನ್ನುವಷ್ಟರ ಮಟ್ಟಿಗೆ ನಲಿದು ಎದ್ದು ನಿಂತ. ತನ್ನ ಅಷ್ಟುದ್ದದ ಗಡ್ಡ ನೀವಿಕೊಂಡು ಸುತ್ತ ನೋಡತೊಡಗಿದ. ಆಗತಾನೆ ಊರ ಜನರಿಗೆ ಬೆಳಕಾಗಿ ಹೊತ್ತು ಏರಿ ತಮ್ಮ ಕೆಲಸಗಳ ಗಡಿಬಿಡಿಯಲ್ಲಿ ಓಡಾಡುತ್ತಿದ್ದವರಿಗೆ ಇವನೊಂದು ಕ್ಷುದ್ರ ಜೀವಿಯಂತೆ ಕಂಡು ತಮಗೆ ಸಂಬಂಧವೇ ಇಲ್ಲವೆನ್ನುವಂತೆ ನೋಡಿ ಹೋಗುತ್ತಿದ್ದರು.

ಯಾರು ಬೆಳಿಗ್ಗೆ ಬೇಗ ಎದ್ದು ಕೆಲಸ ಶುರುಮಾಡಲಿ ಬಿಡಲಿ, ಯಾರ ಮನೆಯಲ್ಲಿ ಬೆಳ್ಳಂ ಬೆಳಗ್ಗೆ ಕುಡಿಯಲು ಕಾಫಿ ಟೀ ಸಿಗದೆ ಹೋಗಲಿ, ಮರಿಯಪ್ಪನ ಹೊಟೆಲ್ಲಿನಲ್ಲಂತೂ ಟೀ ರೆಡಿಯಾಗಿರುತ್ತಿತ್ತು. ಬೆಳಿಗ್ಗೆ ಬೇಗ ಎದ್ದು ಕೆರೆ ಕಡೆಗೆ ಬಂದವರು `ಅನ್‌ಲೋಡ್’ ಮಾಡಿ ಖಾಲಿಯಾಗಿರುತ್ತಿದ್ದ ಹೊಟ್ಟೆಗೆ `ಚಾ’ ತುಂಬಿಸಿಕೊಂಡು ಹೋಗಲು ಅಲ್ಲೇ ಬಂದು ಕೂರುತ್ತಿದ್ದರು. ಹೆಚ್ಚಿದ ಬೊಜ್ಜು ಕರಗಿಸಲು ಕೋಳಿ ಕೂಗುವ ಮೊದಲೇ ತಾವೇ ಎದ್ದು ನೆಮ್ಮದಿಯಾಗಿ ಗವುಚಿ ಮಲಗಿದ್ದ ಕೋಳಿಗಳಿಗೆಲ್ಲಾ ಡಿಸ್ಟರ್ಬ್ ಮಾಡಿ ಜಾಗಿಂಗ್‌ಗೆ ಹೋಗುತ್ತಿದ್ದ ಊರ ದೊಡ್ಡ ಮಂದಿ ದಿಣ್ಣೆ ಏರಿ ಆಯಾಸಗೊಂಡವರು `ಚಾ’ ಕುಡಿದು ವಿಶ್ರಮಿಸಿಕೊಂಡು ಹೋಗಲು ಮರಿಯಪ್ಪನ ಹೋಟೆಲ್ಲನ್ನೇ ವಿಶ್ರಾಂತಿ ಧಾಮವನ್ನಾಗಿ ಮಾಡಿಕೊಂಡಿದ್ದರು. ಒಂದು ಲೋಟವನ್ನು ಮೇಲಕ್ಕೆತ್ತಿ ಮತ್ತೊಂದನ್ನು ಕೆಳಕ್ಕೆ ಹಿಡಿದು ಜಲಪಾತದ ನೀರು ಎತ್ತರದಿಂದ ದುಮುಕುವಂತೆ ಗಿರಾಕಿಗಳೊಂದಿಗೆ ಮಾತನಾಡುತ್ತಲೇ ಈ ಲೋಟದಿಂದ ಆ ಲೋಟಕ್ಕೆ ಆ ಲೋಟದಿಂದ ಈ ಲೋಟಕ್ಕೆ ನೊರೆಯುಕ್ಕಿಸಿ ಧುಮುಕಿಸುತ್ತಾ `ಚಾ’ ಕೊಟ್ಟರೆ ಮನೆಯಲ್ಲಿ ಟೀ ಕುಡಿಯುವ ಅಭ್ಯಾಸವಿಲ್ಲದವರೂ ಕೂಡ ಮರಿಯಪ್ಪನ ಟೀ ಟೇಸ್ಟಿಗೆ ಮಾರು ಹೋಗಿ ಒಂದೊಂದು ಲೋಟವನ್ನು ಕುಡಿದು ಹೋಗುತ್ತಿದ್ದರು. ಈ ಭಾಗದಲ್ಲಿ ಯಾವತ್ತೂ ನೋಡಿರದ ದಿಡೀರ್ ಅಂಗಡಿಯ ಮುಂದೆ ಪ್ರತ್ಯಕ್ಷನಾಗಿ ಕೈ ಸನ್ನೆಯಿಂದಲೇ `ಚಾ’ ಕೊಡು ಎಂದು ಕೇಳಿದ ಇವನನ್ನು ಕಂಡು ಮರಿಯಪ್ಪ ಮೇಲಿನಿಂದ ಕೆಳಕ್ಕೆ ಒಮ್ಮೆ ನೋಡಿ “ಯಾವೂರು ತಮ್ದು” ಎಂದು ಕೇಳಿದಾಗ ಸಣ್ಣದಾಗಿದ್ದ ಕಣ್ಣ ಚೀನಿಗಳು ಅರಳಿಕೊಂಡವೇ ಹೊರತು ತುಟಿಯಿಂದ ಯಾವುದೇ ಶಬ್ದ ಹೊರಬರಲಿಲ್ಲ. “ಅರೆ ನಿನ್ನೇ ಕೇಳ್ತಾ ಇರೋದು; ಯಾವೂರು ಸ್ವಾಮಿ ನಿಮ್ದು” ಮತ್ತೆ ಮರಿಯಪ್ಪ ಕೇಳಿದ. ಕಣ್ಣುಗಳನ್ನು ಗರಗರನೆ ತಿರುಗಿಸುತ್ತಾ ಅಂಗಡಿಯನ್ನು ವೀಕ್ಷಿಸುವುದರಲ್ಲಿ ಮಗ್ನನಾದ. “ಮಾತು ಬರಲ್ವೇ” ಎಂದು ಸನ್ನೆ ಮಾಡಿದಾಗ ಆಗಲೂ ಅವನಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದುದ ಕಂಡು “ಯಾವನ್ಲಾ ಇವ್ನು ಮೆಂಟ್ಲು ಗಿರಾಕಿ” ಎಂದು ಗೊಣಗಿಕೊಂಡು ಪ್ಲಾಸ್ಟಿಕ್ ಲೋಟಕ್ಕೆ ಚಾ ಬಗ್ಗಿಸಿಕೊಟ್ಟ. ತುಟಿಯತ್ತಿರಕ್ಕೆ ತಂದು ಎರಡು ಮೂರು ಬಾರಿ ಉಪ್ ಉಪ್ ಎಂದು ಗಾಳಿಯೂದಿ ಒಂದೇ ಸಾರಿ ಬಾಯಿಗೆ ಬಗ್ಗಿಸಿಕೊಂಡು ಬರಿ ಖಾಲಿ ಲೋಟವನ್ನಷ್ಟೇ ಮುಂದೆ ಚಾಚಿದ. ಪಂಚಾಯಿತಿ ಚುನಾವಣೆ ಮತ್ತು ಊರಬ್ಬ ಮಾಡುವ ಮಾತಿನಲ್ಲಿ ಲೀನವಾಗಿ ತಮ್ಮ ಪಾಡಿಗೆ ತಾವು ಚಾ ಹೀರುತ್ತಿದ್ದ ಮಂದಿಗಳ ಗಮನ ಇತ್ತ ಹರಿದು ಅವನನ್ನು ವಿಚಿತ್ರ ಪ್ರಾಣಿ ಎಂಬಂತೆ ಕಣ್ಣಲ್ಲೇ ಗದರಿಸಿದರು. ಅವನಿಗೇನು ಇವರು ಗುರುತು ಪರಿಚಯವೇ? ಕ್ಯಾರೆ ಎನ್ನದೆ ಪ್ಲಾಸ್ಟಿಕ್ ಲೋಟವನ್ನು ಅತ್ತ ಬಿಸಾಡಿ ಸರಕ್ಕನೆ ಹಿಂದೆ ತಿರುಗಿ ಬೀದಿ ಕಡೆ ನಡೆದುಬಿಟ್ಟ. ಯಾರನ್ನೂ ಕಾಸು ಕೇಳದೆ ಬಿಟ್ಟು ಕಳುಹಿಸದ ಆಸಾಮಿ ಮರಿಯಪ್ಪ ಅವನನ್ನು ದುಡ್ಡು ಕೇಳುವ ಗೋಜಿಗೆ ಹೋಗಲಿಲ್ಲ.

ಬೀದಿಯ ಇಕ್ಕೆಲಗಳಲ್ಲಿ ಇದ್ದಂತಹ ಮನೆಗಳತ್ತ ತನ್ನ ಗಮನವನ್ನು ಹರಿಸದೆ ಗಂಭೀರವಾಗಿ ತಲೆ ನೆಟ್ಟಗೆ ಎತ್ತಿಕೊಂಡು ರಾಜ ಬೀದಿಯಲ್ಲಿ ಗತ್ತಿನಿಂದ ಮಹಾರಾಜ ಬಂದಂತೆ ಬರುತ್ತಿದ್ದ ಇವನನ್ನು ಯಾವತ್ತೂ ನೋಡಿರದ ನಾಯಿಗಳು ದೂರದಿಂದಲೇ ಗುರಾಯಿಸಿ ಖಾತ್ರಿ ಮಾಡಿಕೊಳ್ಳಲು ಹತ್ತಿರತ್ತರಕ್ಕೆ ಬರುತ್ತಿದ್ದಂತೆಯೇ ಗುರ್ ಎನ್ನುತ್ತಾ ನಿಧಾನವಾಗಿ ಸದ್ದು ಮಾಡಿದವು. ಅವನಿಗಿದು ಕೇಳಿಸಿತೋ ಇಲ್ಲವೋ ತನ್ನ ಪಾಡಿಗೆ ತಾನು ನಡೆಯುತ್ತಿದ್ದುದನ್ನು ನೋಡಿದ ನಾಯಿಗಳಿಗೆ ಈ ಸಲ ಕೋಪಬಂದು ಸೀದಾ ಅವನ ಕಾಲಿನ ಪಕ್ಕದಲ್ಲೇ ನಿಂತುಕೊಂಡು ಜೋರಾಗಿ ಬೊಗಳತೊಡಗಿದವು. ಅಲ್ಲಿ ಸುಮ್ಮನೆ ಸೋಮಾರಿಯಾಗಿ ಮಲಗಿದ್ದ ಇತರೆ ನಾಯಿಗಳಿಗೂ ಧೈರ್ಯ ಬಂದಂತಾಗಿ ತಾವೂ ಕೂಡ ಜೋರಾಗಿ ಬೊಗಳಲು ಶುರುಮಾಡಿದವು. ಆಗ ತಾನೆ ಬೆಳಗಿನ ಕಾರ್ಯಗಳಲ್ಲಿ ಮಗ್ನರಾಗಿದ್ದ ಜನಗಳಿಗೆ ಈ ದಿನ ಯಾಕೋ ವಿಚಿತ್ರವಾಗಿ ನಾಯಿಗಳು ಬೊಗಳುತ್ತಿವೆಯಲ್ಲಾ ಎಂದು ಸೋಜಿಗಗೊಂಡವರಂತೆ ಒಬ್ಬೊಬ್ಬರಾಗಿ ಮನೆಯಿಂದ ಈಚೆಗೆ ಬಂದು “ಮತ್ಯಾವನೋ ಬಿಕಾರಿ ವಕ್ಕರಿಸಿಕೊಂಡ ಊರಿಗೆ” ಎನ್ನುತ್ತಾ ಕುತೂಹಲ ಮತ್ತು ಅಸಹ್ಯಭಾವನೆಯಿಂದ ನೋಡುತ್ತಾ ಅವನು ತಮ್ಮ ಬೀದಿಯ ಕೊನೆಯಂಚಿನಲ್ಲಿ ಕಣ್ಮರೆಯಾಗುವವರೆಗೂ ಇದ್ದು; ಆತ ಅತ್ತ ಹೋಗುತ್ತಲೇ ಮತ್ತೆ ತಮ್ಮ ತಮ್ಮ ಮನೆಯೊಳಗೆ ತೂರಿಕೊಂಡರು. ಓಣಿಯ ಸಂದಿಗೊಂದಿಗಳಲ್ಲಿ ಗೋಲಿಯಾಡಲು ಶುರು ಮಾಡಿದ್ದ ಹೈಕಳು ತಾವು ಆಟವಾಡುವುದನ್ನು ನಿಲ್ಲಿಸಿ ವಿಶೇಷವಾಗಿ ಆಕರ್ಷಿತರಾದಂತೆ ಕಿಂದರಿ ಜೋಗಿಯ ಹಿಂದೆ ಇಲಿಗಳು ಸಾಲಾಗಿ ಹೋಗುವಂತೆ ಅವನ ಹಿಂದೆ ಗುಸುಗುಸು ಮಾತನಾಡುತ್ತಾ ತುಸು ಭಯ ಮಿಶ್ರಿತವಾಗಿಯೇ ಹೆಜ್ಜೆ ಹಾಕುತ್ತಿದ್ದರು. ಅವನ ಹಿಂದೆಯೇ ಹೋಗುತ್ತಿದ್ದ ಹೈಕಳಲ್ಲಿ ಒಬ್ಬ ತುಸು ಹತ್ತಿರಕ್ಕೆ ಹೋದವನೇ “ಏ ಅವನ ಜೇಬಲ್ಲಿ ಏನೋ ಐತೆ” ಎಂದ. ಮತ್ತಷ್ಟು ಕುತೂಹಲಗೊಂಡ ಹೈಕಳು ಮುಂದೆ ಓಡಿ ಬಂದರು. ಏನೂ ಆಗಿಲ್ಲವೆಂಬಂತೆ ಮುಂದಕ್ಕೆ ಹೆಜ್ಜೆ ಹಾಕಿದ. ಹೈಕಳಿಗೆ ಈಗ ಅವನು ಏನೂ ಮಾಡುವುದಿಲ್ಲವೆಂಬ ಧೈರ್ಯ ಬಂದು ಒಂದು ಸಣ್ಣ ಕಲ್ಲನ್ನೆತ್ತಿ ಅವನ ಕಾಲಿನ ಬಳಿ ಎಸೆದರು. ಈಗಲೂ ಅವನು ಹೆಚ್ಚು ಪ್ರತಿರೋಧವನ್ನು ಒಡ್ಡದಿದ್ದುದ ಕಂಡ ಅದರಿಂದ ಮತ್ತಷ್ಟು ಪ್ರೇರೇಪಿತಗೊಂಡು ಅಲ್ಲಿದ್ದ ಹುಡುಗನಿಗೆ ರೇಗಿ ಒಂದು ಕಲ್ಲನ್ನೆತ್ತಿ ಸೀದಾ ಅವನ ತಲೆಯ ಹಿಂಭಾಗಕ್ಕೇ ಹೊಡೆದುಬಿಟ್ಟನು. ಜೋರಾಗಿ ಬಿದ್ದ ಕಲ್ಲೇಟಿನಿಂದ ಅವನಿಗೆ ಮುಗ್ಗರಿಸಿದಂತಾಗಿ ಆದರೂ ಕೆಳಕ್ಕೆ ಬೀಳದೆ ಹಾಗೇ ತನ್ನ ವೇಗವನ್ನು ವೃದ್ಧಿಸಿಕೊಂಡು ಜೋರಾಗಿ ಓಡತೊಡಗಿದನು. ಊರಿಗೆ ನುಗ್ಗಿದ ಹುಚ್ಚು ನಾಯಿಯನ್ನು ಅಟ್ಟಿಸಿಕೊಂಡು ಹೋಗುವಂತೆ ಎಲ್ಲಾ ಹೈಕಳು ಕಿರುಚುತ್ತಾ ಅವನ ಹಿಂದೆ ಓಡತೊಡಗಿದರು. ಹೀಗೆ ಹೈಕಳು ಒಟ್ಟಾಗಿ ಕಿರುಚಿದ ಶಬ್ದದಿಂದ ರೋಸಿಹೋದ ಮಸಿದಿಯ ಹಜರತ್‌ರವರು ಈಚೆ ಬಂದು ಹುಡುಗರನ್ನು ಗದರಿ ವಾಪಸ್ ಕಳುಹಿಸಿದರು. ಹುಡುಗರೆಲ್ಲಾ ಅತ್ತ ಹೋದುದರಿಂದ ಮಸೀದಿಯ ಪಕ್ಕದಲ್ಲಿದ್ದ ಬಸ್ ಕಾಯುವವರಿಗಾಗಿ ಕಟ್ಟಿಸಿದ್ದ; ಆದರೆ ಈಗ ಕತ್ತೆಗಳ ವಾಸಸ್ಥಾನವಾಗಿ ಪರಿವರ್ತಿತವಾಗಿದ್ದ ತಂಗುದಾಣದಲ್ಲಿ ಹೋಗಿ ಕುಳಿತ. ಇಷ್ಟೊಂದು ನಿರ್ಭಯವಾಗಿ ತಮ್ಮ ಆವಾಸಸ್ಥಾನಕ್ಕೆ ನುಗ್ಗಿದ ಆಗಂತುಕನನ್ನು ನೋಡಿದ ಕತ್ತೆಗಳು ಭಯಭೀತವಾಗಿ ಅವನಿಗೆ ದಾರಿ ಮಾಡಿಕೊಟ್ಟು ಈಚೆಗೆ ಓಡಿದವು. ರಕ್ತ ಸೋರುವುದು ಸುಮಾರಾಗಿ ನಿಂತಿತ್ತು. ಅತ್ತಿತ್ತ ನೋಡಿದ ಆತ ಕೊರಳಿಗೆ ಸುತ್ತಿಕೊಂಡಿದ್ದ ಬಿಳಿ ದಾರವನ್ನು ತೆಗೆದು ಸರಸರನೆ ಒಂದಾದ ಮೇಲೊಂದು ಗಂಟುಗಳನ್ನು ಹಾಕುತ್ತಾ ಮತ್ತೆ ಬಿಚ್ಚುತ್ತಾ ಹೋದ.

ಈ ದಿನ ಊರಹಬ್ಬ ಮಾಡುವ ಕಾರಣಕ್ಕಾಗಿಯೇ ಅಧಿಕೃತವಾಗಿ ಜಗಲಿಯ ಮೇಲೆ ಸಭೆ ಸೇರಿತ್ತು. ಸದನದಲ್ಲಿ ಯಾವುದಾದರೊಂದು ವಿಷಯ ಚರ್ಚೆಯಾಗದೆ ಹೋಗಬಹುದು ಆದರೆ ಈ ಜಗಲಿಯಲ್ಲಿ ಹಳ್ಳಿಯಿಂದ ದಿಲ್ಲಿಯವರೆಗಿನ ರಾಜಕೀಯ; ರಾಜಕುಮಾರನಿಂದ ಅಮಿತಾಬ್‌ವರೆಗಿನ ಸಿನಿಮಾ; ಮತ್ತೆ ತಮ್ಮ ಬಾಯಿಗೆ ಸದಾ ಉಪ್ಪಿನಕಾಯಿಯಂತೆ ರುಚಿಸುತ್ತಿದ್ದ ಊರಿನ ಪ್ರಣಯ ಪ್ರಸಂಗಗಳಾದಿಯಾಗಿ ಎಲ್ಲವೂ ಚರ್ಚೆಗೆ ಒಳಪಡುತ್ತಿತ್ತು. ಊರು ಬಿದ್ದುಹೋಗುವ ಯಾವುದೇ ಕೆಲಸಗಳಿರಲಿ ಸಾಯಂಕಾಲ ಒಂದ್ಹೊತ್ತು ಕೂತು ಮಾತನಾಡಿ ಹೋಗದಿದ್ದರೆ ಆ ಊರಿನವರಿಗೆ ರಾತ್ರಿಯ ಮುದ್ದೆ ಸರಾಗವಾಗಿ ಹೊಟ್ಟೆಗೆ ಇಳಿಯದೆ ನಿದ್ದೆ ಹತ್ತುತ್ತಿರಲಿಲ್ಲ. ಮತ್ತು ಅಲ್ಲಿ ಯಾವುದೇ ಜಾತಿಬೇಧವಾಗಲೀ ಮೇಲುಕೀಳೆಂಬುದಾಗಲಿ ಇರದೆ ಸರ್ವಸಮಾನವಾಗಿ ವಿಷಯಗಳು ಮಂಡಿತವಾಗುತಿದ್ದು; ಆ ಅರಳೀ ಜಗಲಿಯನ್ನು ಜಾತ್ಯಾತೀತ ಜಗಲಿ ಎಂದು ಕರೆದರೆ ತಪ್ಪಾಗುವುದಿಲ್ಲವೇನೋ? ಊರಬ್ಬದ ವಿಷಯವಾಗಿ ಗೌಡರುದ್ರಪ್ಪನ ಅಧ್ಯಕ್ಷತೆಯಲ್ಲಿ ಸಭೆ ನಡೆಯುತ್ತಿತ್ತು. ಯಾವಾಗಲೂ ನನ್ನ ಮಾತೇ ಮುಂದೆ ನಡೆಯಬೇಕೆಂಬ ಬಯಕೆ ಮತ್ತು ಎಲ್ಲರೂ ತನಗೆ ವಿದೇಯರಾಗಿರಬೇಕೆಂದು ಸದಾ ಅಂದುಕೊಳ್ಳುತ್ತಿದ್ದ ಗೌಡರಲ್ಲಿ ಕೊಂಚ ಒಳ್ಳೆಯತನವಿದ್ದು; ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದುದರಿಂದ ಯಾರೂ ಕೂಡ ಹೆಚ್ಚಾಗಿ ಗೌಡರ ವಿರುದ್ಧ ಮಾತನಾಡುತ್ತಿರಲಿಲ್ಲ. ಒಂದು ರೀತಿಯ ಅಸಮಧಾನ ಮಿಶ್ರಿತ ಗೌರವಭಾವನೆ ಗೌಡರ ಮೇಲಿದ್ದಿತು. ಇಂಥಾ ಗೌಡ ಏನೋ ಹೇಳಲು ಬಾಯಿ ತೆರೆಯುತ್ತಿದ್ದಂತೆಯೇ ಬಲತೋಳಿನ ಮೇಲೆ ಏನೋ ಪಚಕ್ಕನೆ ಬಿದ್ದಂತಾಗಿ ನೋಡಿದರೆ; ಕೆಳಗೆ ಕುಳಿತಿರುವವರು ಯಾರಾದರೇನಂತೆ ಮರದ ಮೇಲೆ ಕುಳಿತಿದ್ದ ಕಾಗೆ ಧೈರ್ಯದಿಂದ ತಾನು ಹೇತು ಬಿಟ್ಟಿತ್ತು. “ಥೂ ಅನಿಷ್ಟ ಮುಂಡೇದು ಬಲತೋಳಿಗೇ ಹಾಕಿಬಿಡ್ತು. ಅದೇನು ಗಾಚಾರ ಕಾದಿದೆಯೋ” ಗೌಡರು ಗೊಣಗಿಕೊಂಡು ತಮ್ಮ ಬಿಳೀವಲ್ಲಿಯಿಂದ ಒರೆಸತೊಡಗಿದರು. ಗೌಡರ ಮೇಲೆಯೇ ಹೇತಿರುವ ಕಾಗೆಗೆ ಇನ್ನು ನಾವು ಯಾವಲೆಕ್ಕ ಎಂದು ಕಾಗೆ ಧೈರ್ಯಕ್ಕೆ ಮೆಚ್ಚಿ ಮೇಲೆ ನೋಡಿದರೆ ಹತ್ತಾರು ಕಾಗೆಗಳು ಅತ್ತಿಂದಿತ್ತ ಹಾರತೊಡಗಿದ್ದು ಕಂಡು ಗೌಡರಿಗಾದ ಗತಿಯೇ ತಮಗೂ ಆಗಬಹುದೆಂದು ಎರಡೂ ಕೈಗಳನ್ನು ಮೇಲಕ್ಕೆತ್ತಿ, ಹೋ ಹೋ ಎಂದು ಓಡಿಸುವುದಕ್ಕೆ ಪ್ರಯತ್ನಿಸಿದರು. ಅವು ಕಾ ಕಾ ಎನ್ನುತ್ತಾ ಮತ್ತಷ್ಟು ಜೋರಾಗಿಯೇ ಹಾರತೊಡಗಿದವು. ಅಲ್ಲಾ… ಹೋ ಅಕ್ಬರ್ . . ಎಂದು ಜೋರಾಗಿ ಕಿವಿ ತೂತಾಗುವಂತೆ ಕೂಗಿದ ಮಸೀದಿಯ ಮೈಕಿನ ಶಬ್ದಕ್ಕೆ ಬೆಚ್ಚಿ ಪಟಪಟನೆ ರೆಕ್ಕೆ ಬಡಿಯುತ್ತಾ ಎಲ್ಲಾ ಕಾಗೆಗಳು ಎತ್ತಲೋ ಹಾರಿದವು. ಈಗ ಎಲ್ಲರಿಗೂ ನಿರಾಳವಾದಂತಾಗಿ ಲೋಕಾಭಿರಾಮವಾಗಿ ಮಾತಿಗಿಳಿದರು. “ಯಾರೋ ಹೊಸಬ ಭಿಕ್ಷುಕ ಬಂದಿದ್ದಾನಂತೆ. ಎಷ್ಟು ಜನ ಅಂತ ಭಿಕ್ಷುಕರನ್ನು ಬಸ್ಸು ಹತ್ತಿಸಿ ಮುಂದಿನ ಊರಿಗೆ ಕಳಿಸುವುದು. ಹೀಗೆ ಪದೇಪದೇ ಬಂದು ಸೇರಿಕೊಂಡು ಬಿಡುತ್ತಾರೆ. ಯಾಮಾರಿದರೆ ಕಳ್ಳತನ ಅದೂ ಇದೂ ಅಂತ ಮಾಡಿ ಊರಿನ ನೆಮ್ಮದಿ ಹಾಳು ಮಾಡ್ತಾರೆ. “ಲೇ ಹುಡುಗ್ರಾ ಮಾಮೂಲಿಯಂತೆ ವಿಚಾರಿಸಿ ಬಸ್ಸು ಹತ್ತಿಸಿ ಕಳುಹಿಸಿಬಿಡು” ಎನ್ನುತ್ತಾ ಗೌಡರು ಊರ ಹಬ್ಬದ ವಿಷಯವಾಗಿ ಚರ್ಚಿಸಲು ಶುರುಮಾಡಿದರು.

ಊರಿಗೆ ಬಂದ ತಿರುಪೆಯವರನ್ನು ಕಿಚಾಯಿಸಿ, ರೇಗಿಸಿ ಎಳೆದುಕೊಂಡು ಬಸ್ ಹತ್ತಿಸಿ ಕಳುಹಿಸುವುದು ಅವರಿಗೆ ಮೋಜಿನ ಸಂಗತಿಯೇ ಆಗಿತ್ತು. ಹುಡುಗರು ಅವನ ಬಳಿ ಬಂದು ಎಷ್ಟು ಮಾತನಾಡಿ ಏನೆಲ್ಲಾ ವಿಚಾರಿಸಿದರೂ ಒಂದೂ ಮಾತಾಡದೆ ಕುಂತದ್ದು; ಬೇಜಾರೆನಿಸಿ ಕೋಟಿನ ಜೇಬಿನಲ್ಲಿ ಡುಬ್ಬಗೆ ಕಾಣಿತ್ತಿದ್ದ ವಸ್ತುವನ್ನು ಏನು ತೆಗಿ. ಎಂದು ಹತ್ತಿರ ಹೋಗಿ ಕೈ ಹಾಕಿದಾಗ ದಡಕ್ಕನೆ ಮೇಲೆದ್ದು ಏನು ಅರ್ಥವಾಗದಂತೆ ಅರಚಿದ. ಹುಡುಗರಿಗೆಲ್ಲಾ ಇವನು ಪಕ್ಕಾ ಕಳ್ಳನಿರಬೇಕೆಂಬ ಅನುಮಾನ ಶುರುವಾಗಿ ಆತನನ್ನು ಮತ್ತಷ್ಟು ಹಿಡಿಯಲು ಹೋದರು. ಹಿಂದೆ ಹಿಂದೆ ಹೋದ ಅವನಿಗೆ ಗೋಡೆ ಅಡ್ಡ ಬಂದಿದ್ದರಿಂದ ಯಾವ ಕಡೆಗೆ ಹೋಗಲು ಜಾಗವಿಲ್ಲದೆ ಮೂಲೆಯಲ್ಲಿ ಕುಸಿದು ಕುಳಿತ. ಮೂರ್ನಾಲ್ಕು ಹುಡುಗರು ಕೈ ಹಿಡಿದುಕೊಂಡು ಕೋಟಿಗೆ ಕೈ ಹಾಕಿದಾಗ ಮಂಡಿ ಅಡ್ಡ ಮಾಡಿದ. ಕಟ್ಟಿದ್ದ ದೋತ್ರವನ್ನ ಕಿತ್ತೆಸೆಯಲು ಮುಂದಾದಾಗ ಪ್ರಬಲ ಪ್ರತಿರೋಧ ಒಡ್ಡತೊಡಗಿದ, ಇದೇ ಗಲಾಟೆಯಲ್ಲಿ ಸುಹೇಲನು ಅವನನ್ನು ಗಮನಿಸಿ ಅನುಮಾನಗೊಂಡು ಮತ್ತೊಮ್ಮೆ ನೋಡಿ ದೃಡೀಕರಣ ಮಾಡಿಕೊಂಡು ಮಸೀದಿಯ ಕಡೆ ಓಡಿದ. ಹುಡುಗನ ಕೈಕಚ್ಚಿ ಬಿಡಿಸಿಕೊಂಡ ಆತ ಮುದುಡಿ ಮತ್ತಷ್ಟು ಮೂಲೆಗೆ ತುರಕಿಕೊಂಡ. ಹುಡುಗರಿಗೆ ಸಾಕು ಸಾಕಾಗಿ ಆಮೇಲೆ ವಿಚಾರಿಸಿಕೊಳ್ಳುವ ಎಂದು ಎದುರುಗಡೆ ಅಂಗಡಿಯಲ್ಲಿದ್ದ ಲಾಂಡ್ರಿ ವೆಂಕಯ್ಯನಿಗೆ ಇವನ ಮೇಲೆ ಒಂದು ಕಣ್ಣಿಟ್ಟಿರಲು ಹೇಳಿ ಹೋದರು.

ಊರಗೌಡರ ಅಧ್ಯಕ್ಷತೆಯಲ್ಲಿ ವರ್ಷ ವರ್ಷ ನಡೆಯುವ ಜಾತ್ರೆಗೆ ಮಾರಮ್ಮನ ಗುಡಿ ಸಿಂಗಾರಗೊಳ್ಳುತಿತ್ತು. ಊರಿನ ಎಲ್ಲಾ ಕೋಮಿನ ಜನರೂ ತಮಗೆ ವಹಿಸಿದ ಊರ ಕೆಲಸಗಳನ್ನೆಲ್ಲಾ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿದ್ದರು. ಗೌಡರಿಗಿದ್ದ ಏಕೈಕ ಚಿಂತೆ ಎಂದರೆ ಮಠದಲ್ಲಿ ಸ್ವಾಮಿಗಳು ಇಲ್ಲದೆ ಪಕ್ಕದ ಊರಿನ ಮಠದ ಸ್ವಾಮಿಗಳನ್ನು ಅಡ್ಡ ಪಲ್ಲಕ್ಕಿ ಮೆರವಣಿಗೆ ಕರೆತರಬೇಕಾಗಿತ್ತು. ಪಕ್ಕದೂರಿನವರೋ ನಮ್ಮೂರ ಸ್ವಾಮಿಯನು ನಿಮ್ಮೂರಿಗೆ ಹೇಗೇ ಕಳಿಸೋಕೆ ಬರುತ್ತೆ ಎಂದು ಮೊನ್ನೆ ಗೂಳಿ ಬಿಡದ ಈ ಊರಿನವರ ಮೇಲೆ ಸೇಡು ತೀರಿಸಿಕೊಂಡಿದ್ದರು. ಖಾಯಿಲೆಯಿಂದಾಗಿ ಅಕಾಲಿಕ ಮರಣಕ್ಕೆ ತುತ್ತಾಗಿದ್ದ ಸ್ವಾಮಿಜಿಯ ನಂತರ ಮಠಕ್ಕೆ ಮರಿಯಾಗಿ ಯಾರನ್ನೂ ನೇಮಿಸಿಕೊಂಡಿರಲಿಲ್ಲ. ಮೇಲಿನ ಕೇರಿಯವರು ಸಂಭ್ರಮ ಸಡಗರದಿಂದ ಗುಡಿಯ ಮುಂದೆ ತೆಂಗಿನ ಗರಿ ಚಪ್ಪರ ಹಾಕಲು ಸಿದ್ಧತೆಯಲ್ಲಿ ತೊಡಗಿ; ಝಳ ಬಿಸಿಲನ್ನು ಲೆಕ್ಕಿಸದೇ ಕುಣಿ ತೆಗೆಯುವ ಕೆಲಸದಲ್ಲಿದ್ದರು. ದೂರದಲ್ಲಿ ಮಸೀದಿಯ ಕಡೆಯಿಂದ ಹೆಜ್ಜೆ ಹಾಕುತ್ತಾ ಬರುತ್ತಿದ್ದ ಆಕೃತಿ ಅಸ್ಪಷ್ಟವಾಗಿ ಕಂಡು, ಹತ್ತಿರತ್ತಿರ ಬರುತ್ತಿದ್ದಂತೆ ಸ್ಪಷ್ಟವಾಗಿ ಗೌಡರು “ಈ ಗಿಣಿ ಶಾಸ್ತ್ರದವರನ್ನು ಊರೂರು ಹುಡುಕಿ ಸಾಕಾಯ್ತು ನಮ್ ಪುಣ್ಯ ಈವತ್ತು ಇಲ್ಲೇ ಬಂದ್ಬುಟ್ಟವ್ನೇ ಈ ಸ್ವಾಮ್ಗೋಳು ಇಲ್ಲದ್ದಕ್ಕೇ ಏನು ಮಾಡಬಹುದು ಅಂತ ಇವರನ್ನೇ ಯಾಕೆ ಒಂದು ಶಾಸ್ತ್ರ ಕೇಳಬಾರದು” ಎಂದು ಅವನನ್ನು ಕರೆಸಿ ಕೂರಿಸಿ ನೂರು ರುಪಾಯಿಯ ಗರಿಗರಿ ನೋಟನಿಟ್ಟು ಶಾಸ್ತ್ರ ಕೇಳಿದಾಗ “ಬಡಗಲು ಸೀಮಿಂದ ನಿಮ್ಮೂರಿಗೆ ಒಬ್ಬ ದಾಸಪ್ಪ ಬರ್ತಾನೆ, ಮಾತೇ ಆಡದ ಮೂಕನಂತೆ ನಿಮ್ಮೂರಿಗೆ ಕಾಲಿಡ್ತಾನೆ, ಮೂರು ದಿನದ ಹಬ್ಬಕ್ಕೆ ಅವನ್ನೇ ಪೂಜೆಗೆ ಕೂರಿಸಿ” ಎಂದು ತನ್ ಗಿಣಿ ಬುಟ್ಟಿ ತೆಗೆದುಕೊಂಡು ಹೊರಡುತ್ತಾನೆ. ಬಡಗಲ ಸೀಮಿಂದ ಯಾರಪ್ಪ ಅಂತ ದಾಸಪ್ಪ ನಮ್ಮೂರಿಗೆ ಬರೋನು ಎಂದು ಗೌಡರು ತಲೆಮೇಲೆ ಕೈಹೊತ್ತು ಯೋಚಿಸಿ ಇರಲಿ ನೋಡುವ ಎಂದು ಚಪ್ಪರದ ಕೆಲಸ ವೀಕ್ಷಿಸಲು ಮುಂದಾಗುತ್ತಾರೆ. ಅಲ್ಲೇ ಪಕ್ಕದಲ್ಲೇ ಇದ್ದ ಅವನನ್ನು ಕಂಡು ‘ಈ ಹಾಳು ಹೈಕಳು ಇನ್ನೂ ಅವನನ್ನು ಕಳಿಸಿಲ್ಲವೆಂದು’ ಮನಸ್ಸಿನಲ್ಲೇ ಬೈದುಕೊಳ್ಳುತ್ತಾ ಇರಲು ಸೀದಾ ಹತ್ತಿರಕ್ಕೆ ಬಂದ ಆತ ಗೌಡರ ಮುಖವನ್ನು ಒಮ್ಮೆ ತಿಂದುಬಿಡುವವನಂತೆ ನೋಡತೊಡಗಿದ. ಕಣ್ಣ ಪಾಪೆ ಅಲುಗಾಡಿಸದೆ ತನ್ನನ್ನೇ ಗುರುಗುಟ್ಟಿ ನೋಡುವ ಆತನ ಕಣ್ಣನ್ನು ಎದುರಿಸಲಾಗದ ಗೌಡರಿಗೆ ಇರಿಸುಮುರಿಸುಂಟಾಗಿ ತಮ್ಮ ನೋಟವನ್ನು ಎತ್ತಲೋ ಕಿತ್ತಿಟ್ಟು ಯಾವೂರು ಯಜಮಾನರದ್ದು. ಎಂದು ಗತ್ತಿನಿಂದ ಕೇಳಿದರು. ಆತ ಮತ್ತೆ ಅದೇ ನೋಟ ನೋಡುತ್ತಾ ಸುಮ್ಮನೆ ನಿಂತ . “ಥೂ. . . ಕಳಿಸ್ರಲ್ಲಾ ಅತ್ಲಾಗೆ ಬಡ್ಡಿಮಗನ್ನʼ ಎಂದು ಗೌಡರೇ ಅತ್ತ ಸರಿದು ಹೋದರು. ತುಸು ಹೊತ್ತು ಅದೇ ಜಾಗದಲ್ಲಿ ನಿಂತಿದ್ದ ಆತ ನಂತರ ಅಲ್ಲೇ ಕುಳಿತು ತಾನೂ ಒಂದು ಎಳೆಗಡ್ಡಿ ತೆಗೆದುಕೊಂಡು ಗುಳಿ ತೆಗೆಯುವವನ ರೀತಿ ಮಣ್ಣನ್ನು ಕದಲಿಸಲು ಶುರುಮಾಡಿದ. ಹುಚ್ಚ ಮೈಗೆ ಬಿಸಿಲೇರಿದರೆ ಎದ್ದು ಹೋಗುತ್ತಾನೆಂದುಕೊಂಡು ತಮ್ಮ ಕೆಲಸದಲ್ಲಿ ಮಗ್ನವಾಗಿದ್ದ ಮೇಲಿನ ಕೇರಿಯವರಿಗೆ ಮಧ್ಯಾಹ್ನವಾದರೂ ಅದೇ ಜಾಗದಲ್ಲಿ ಕುಳಿತಿದ್ದುದು ನೋಡಿ ಇವನ್ಯಾವನೋ ವಿಚಿತ್ರ ಪಾರ್ಟಿ ಎಂದುಕೊಂಡು ಮಲ್ಲಣ್ಣನನ್ನು ಕುಣಿ ತೋಡಲು ಆ ಜಾಗಕ್ಕೆ ಕಳಿಸಿದರು, ಹತ್ತಿರ ಬಂದ ಮಲ್ಲಣ್ಣ ಆತನನ್ನು ಬಲವಂತದಿಂದ ಪಕ್ಕಕ್ಕೆ ಸರಿಸಿ ಹಾರೆಯಿಂದ ಅವನು ಜಾಗ ಮಾಡಿದ್ದ ಕಡೆಯೇ ಒಂದೇಟು ಹಾಕಿದ. ಈ ಸದ್ದು ಇಲ್ಲಿಯೇ ಬಂದಿದ್ದೋ ಅಥವಾ ಗುಡಿಯ ಗಂಟೆಯ ಸದ್ದೋ ಎಂದು ಗೊಂದಲಗೊಂಡು ಮತ್ತೆ ಜೋರಾಗಿ ಹಾರೆ ಹಾಕಿದ. ಠಣ್ ಎನ್ನುವ ಶಬ್ದ ಮತ್ತೆ ಬಂದಿತು. ಗೌಡರನ್ನು ಕೂಗಿ ಕರೆದು ಅವರ ಎದುರಿಗೆ ಸೋಜಿಗಗೊಂಡು ಕುಣಿ ತೆಗೆದಾಗ ಕಂಚಿನ ಬಸವನ ಕೊಂಬು. ಆಶ್ಚರ್ಯಗೊಂಡ ಗೌಡರು ಹೊರಕ್ಕೆ ತೆಗೆದು ನೋಡಿದಾಗ ಪೂರ್ತಿವಿಗ್ರಹ ಏನೂ ಮುಕ್ಕಾಗದೆ ಚಂದವಾಗೇ ಇತ್ತು. ತಕ್ಷಣಕ್ಕೆ ಯಾರು ಏನೇ ಮಾತನಾಡಲಾಗದೆ ಮೂಖವಿಸ್ಮಿತರಾಗಿರಲು ಗೌಡರೇ ಏನೋ ಯೋಚಿಸಿಕೊಂಡು “ಇದು ನಮ್ಮೂರಿನ ಪೂರ್ವಿಕರೇ ಅವಿತಿಟ್ಟಿದ್ದು; ಮತ್ತಷ್ಟು ಸಿಕ್ಕಬಹುದು” ಎಂದು ಅಲ್ಲೇ ತಮ್ಮ ಪಾಡಿಗೆ ಕುಳಿತ ಆತನ ಕಡೆ ಕೈ ತೋರಿಸಿ ಈತನಿಗೆ ಎಲ್ಲವೂ ಗೊತ್ತಿದೆ. ಅದಕ್ಕೆ ಆತ ಏನೂ ಮಾತಾಡುತ್ತಿಲ್ಲ. ನಿಜಕ್ಕೂ ಆತ ಮಹಾತ್ಮನೇ ಸರಿ. ಆ ಗಿಣಿ ಶಾಸ್ತ್ರದವನು ಕೂಡ ಅದನ್ನೇ ಹೇಳಿದ. ಇವ ಬಂದದ್ದು ಕೂಡ ಮರಿಯಪ್ಪನ ಹೋಟೆಲು ಕಡೆಯಿಂದ ಅಂದರೆ ಖಂಡಿತ ಇವನೇ. ಮೂರು ದಿನಗಳ ಹಬ್ಬ ಇವರ ಪೂಜೆ ಪುರಸ್ಕಾರದಲ್ಲೇ ಆಗಬೇಕು ಎಂದು ತಾವು ಎಲ್ಲಿಂದ ದಯಮಾಡಿಸಿದಿರಿ. ಎಂಬುದನ್ನು ಅರುಹಬೇಕು ಎಂದು ವಿನಯದಿಂದ ಕೈ ಕಟ್ಟಿದರು. ಆತ ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ಮಾಮೂಲಿಯಂತೆಯೇ ಮಿಕಮಿಕ ನೋಡತೊಡಗಿದ. ಆತ ಮಾತಾಡದ ಮೂಕ ಆಗಿದ್ದಂತೂ ಗೌಡರಿಗೆ ಯಾವ ಅನುಮಾನವೂ ಉಳಿದಿರಲಿಲ್ಲ, ಗಿಣಿ ಶಾಸ್ತ್ರದ ಮೇಲೆ. ಅಷ್ಟರಲ್ಲಿ ಗುಂಪಿನಲ್ಲಿದ್ದ ಯಾರೋ ಸ್ವಾಮಿಗಳದ್ದು ಮೌನವ್ರತ ಅಂತ ಕಾಣಿಸುತ್ತೆ ಅವರಿಗೆ ಯಾರೂ ತೊಂದರೆ ಕೊಡಬೇಡಿ ಮಠಕ್ಕೆ ಕರ್ಕೊಂಡು ಹೋಗಿ ಸ್ನಾನ ಮಡಿ ಮಾಡಿಸಿ ಎಂದರು. ಗೌಡರು ಅವನ ಯೋಗಕ್ಷೇಮಕ್ಕೆ ಖುದ್ದು ಮಠದ ಅಯ್ಯನವರನ್ನೇ ನೇಮಿಸಿ ವಿಗ್ರಹವನ್ನು ಮನೆಯತ್ತ ಸಾಗಿಸಿದರು.

ಊರಿಗೆ ಊರೇ ಈ ಸುದ್ದಿ ಹರಡಿ ಎಲ್ಲರೂ ದರ್ಶನಕ್ಕಾಗಿ ಮಠಕ್ಕೆ ಹಿಂಡುಹಿಂಡಾಗಿ ಧಾವಿಸತೊಡಗಿದರು. ಈ ಮೊದಲು ಅವನಿಗೆ ಕಲ್ಲುಹೊಡೆದ; ಬೈದ ತಮ್ಮ ಮಕ್ಕಳಿಗೆ ಏನಾದರೂ ಎಡವಟ್ಟು ಆಗುತ್ತದೆಂದು ಹೆದರಿ ತಂದೆತಾಯಂದಿರು ಹೂವು, ಹಣ್ಣು, ಕಾಯಿ ದಕ್ಷಿಣೆಯೊಂದಿಗೆ ಆತನ ಸೇವೆ ಮಾಡಲು ಬಂದರು. ಆತನನ್ನು ಬೈದು ಕೊಂಡವರೆಲ್ಲಾ ಮನಸ್ಸಿನಲ್ಲೇ “ತಪ್ಪಾಯಿತು ಈ ಬಡವನನ್ನು ಕ್ಷಮಿಸಪ್ಪಾ ಇದೊಂದು ಸಲ ಎಂದು ಕೈ ಮುಗಿಯುತ್ತಿದ್ದರು. ಆತ ಮಾತ್ರ ತನಗೂ ಇದಕ್ಕೂ ಯಾವ ಸಂಬಂಧವಿಲ್ಲವೆಂದು ಹಣ್ಣುಗಳನ್ನು ಒಂದೊಂದಾಗಿ ತಿನ್ನುತ್ತಾ ಎತ್ತೆತ್ತಲೋ ನೋಡತೊಡಗಿದನು. ಸುದ್ದಿ ಮಸೀದಿಯ ಹಜರತ್‌ರವರಿಗೂ ಕೂಡ ತಲುಪಿ ಇದು ಹೇಗೆ ಸಾಧ್ಯ ಎಂದು ಅಚ್ಚರಿಪಡುತ್ತಾ ಮಸೀದಿಯ ಅಂಗಳದಲ್ಲಿ ಶತಪಥ ತಿರುಗುತ್ತಿದ್ದರು.

ಊರಗೌಡರು ಇದೇ ಸಮಯದಲ್ಲಿ ತುರ್ತಾಗಿ ಮುಖಂಡರನ್ನು ಸಭೆ ಕರೆದು ಹೇಗಿದ್ದರೂ ಊರಬ್ಬ ಮಾಡುತ್ತಿದ್ದೇವೆ. ಮಠದಲ್ಲಿ ಸ್ವಾಮೀಜಿಗಳು ಬೇರೆ ಇಲ್ಲ! ಇವರನ್ನೇ ಮೂರು ದಿನದ ಮಟ್ಟಿಗೆ ಸ್ವಾಮೀಜಿ ಮಾಡಿ ಅವರ ಮಾರ್ಗದರ್ಶನದಲ್ಲೇ ಜಾತ್ರೆ ಮಾಡುವ ಎಂದಾಗ ಸರ್ವಾನುಮತದಿಂದ ಎಲ್ಲರೂ ಒಪ್ಪಿಗೆ ಸೂಚಿಸಿದರು. ಮಸೀದಿಯ ಹಜರತ್‌ರವರಿಗೆ ಯಾಕೋ ಇದು ಸರಿ ಬರಲಿಲ್ಲ, ತಮ್ಮ ಕಡೆಯ ನಾಲ್ಕೈದು ಹಿರಿಯರೊಂದಿಗೆ ಆತನನ್ನು ಕಾಣಲು ಮಠಕ್ಕೆ ಬಂದರು. ಹಜರತ್‌ರವರು ಆತನ ಬಳಿ ಬಂದು ಉರ್ದುವಿನಲ್ಲಿ ಏನೇನೋ ಕೇಳಿದರು. ಮತ್ತು ಒಂದು ಹಾಳೆಯಲ್ಲಿ ಏನೇನೋ ಬರೆದು ಅವನಿಗೆ ತೋರಿಸಿದಾಗ ಆತ ಅಚ್ಚರಿಯಿಂದ ಹಜರತ್‌ರವರನ್ನು ನೋಡತೊಡಗಿದನು. ಹಜರತ್‌ರವರು ತುರ್ತಾಗಿ ಗೌಡರನ್ನು ಕಾಣಲು ಹೋದರು.

ಹಜರತ್‌ರವರ ಮಾತನ್ನು ಸವಿಸ್ತಾರವಾಗಿ ಕೇಳಿದ ಗೌಡರಾಧಿಯಾಗಿ ಎಲ್ಲರಿಗೂ ಆತ ಮುಸ್ಲಿಂ ಜನಾಂಗಕ್ಕೆ ಸೇರಿದವನೆಂಬುದನ್ನು ನಂಬಲಾಗಲಿಲ್ಲ. ಮತ್ತು ಸಹಿಸಲೂ ಆಗಲಿಲ್ಲ. ಸಿಕ್ಕುವ `ನಿಧಿ’ಯಲ್ಲಿ ಪಾಲು ಕೇಳಲು ಮತ್ತು ಮತ್ತಷ್ಟು ನಿಧಿಯನ್ನು ಹುಡುಕಿಸಲು ಈ ಸಾಬರು ಅವನನ್ನು ತಮ್ಮ ಜಾತಿಯವನೆಂದು ವಾದಿಸುತ್ತಾರೆಂದು ಹಜರತ್‌ರವರ ಮೇಲೆ ಮೇಲಿನ ಕೇರಿಯವರಿಗೆ ಕೋಪ ಮತ್ತು ಬೇಸರ ಎರಡೂ ಆಯಿತು. ಹಜರತ್‌ರವರು `ಆತ ಮುಸ್ಲಿಂ ಆಗದಿದ್ದಲ್ಲಿ ಉರ್ದುವಿನಲ್ಲಿ ಬರೆದುದನ್ನು ಹೇಗೆ ಓದಿದʼ ಎಂದು ಪ್ರತಿವಾದಿಸಿದಾಗ “ಎಲ್ಲಾ ತಿಳಿದ ಆ ಮಹಾಸ್ವಾಮಿಗೆ ನಿಮ್ಮ ಉರ್ದು ತಿಳಿಯದಾ” ಎಂದು ಪಟೇಲರು ಮರು ಪ್ರಶ್ನೆ ಹಾಕಿದರು. ಎಷ್ಟು ಹೇಳಿದರೂ ಒಪ್ಪದ ಮೇಲಿನ ಕೇರಿಯವರ ಕಂಡು, ಹಜರತ್‌ರವರು ಗೌಡರನ್ನು ಪಕ್ಕಕ್ಕೆ ಕರೆದು ಅದರ ಕಿವಿಯಲ್ಲಿ ಏನನ್ನೋ ಉಸುರಿದರು. ಸರಿ ನೋಡೇ ಬಿಡುವಾ ಬನ್ನಿ ಆ ಸ್ವಾಮಿ ನಿಜವಾಗ್ಲೂ ಪವಾಡ ಪುರುಷನೇ ಆಗಿದ್ದಲ್ಲಿ ಇದ್ಯಾವ ಲೆಕ್ಕ? ಎಂದು ಗೌಡರು ಪರಿಕ್ಷೆಗೆ ಒಪ್ಪಿಕೊಂಡರು. ಅಲ್ಲಿ ಗುಂಪು ಕೂಡಿದ್ದ ಇತರರನ್ನೆಲ್ಲಾ “ಸ್ವಾಮಿಗಳಿಗೆ ವಿಶ್ರಾಂತಿ ಬೇಕು ಆಚೆ ನಡೆಯಿರಿ” ಎಂದು ಹೊರಕ್ಕೆ ಕಳುಹಿಸಿ ಕೆಲ ಹಿರಿಯರು ಮಾತ್ರ ಉಳಿದರು. ಸ್ವಾಮಿಗಳನ್ನು ಪರೀಕ್ಷೆ ಮಾಡುವುದು ಅಪರಾಧವೆಂದೂ ಇದಕ್ಕೆ ತಾವು ಒಪ್ಪುವುದಿಲ್ಲವೆಂದು ಹಿರಿಯರು ಹಠಹಿಡಿದಾಗ ವಿಧಿಯಿಲ್ಲದೆ ಗೌಡರೇ ಅವರನ್ನು ಸಮಾಧಾನಪಡಿಸಿ “ನೋಡೇ ಬಿಡುವಾ ತಡೀರಿ ಈ ಸಾಬರಿಗೆ ಮುಖಭಂಗವಾಗಲಿ” ಎಂದು ಒಪ್ಪಿಸಿದರು. ಮಂಡಿಯೂರಿ ಕುಳಿತಿದ್ದ ಆತನ ಬಳಿಗೆ ಹೋದ ಗೌಡರು ಎಲ್ಲಾ ಪರಿಸ್ಥಿತಿಯನ್ನು ವಿವರಿಸಿ ಹೇಳಿ “ಮಹಾತ್ಮರಾದ ತಾವುಗಳು ಇದಕ್ಕೆ ಅವಕಾಶ ಮಾಡಿಕೊಡಬೇಕೆಂದು ಬೇಡಿಕೊಂಡನು. ಆತ ಏನೊಂದು ಅರ್ಥವಾಗದವನಂತೆ ಪಿಳಿಪಿಳಿ ಕಣ್ಣುಬಿಟ್ಟು ನೋಡತೊಡಗಿದ. ಈಗ ಹಜರತ್‌ರವರೂ ಕೂಡ ಉರ್ದುವಿನಲ್ಲಿ ಏನೋ ಮಾತಾಡುತ್ತಾ ಬೇಡಿಕೊಂಡರು. ಎಷ್ಟು ಕೇಳಿಕೊಂಡರೂ ಆತ ತನ್ನ ಧೋತಿಯನ್ನು ಬಿಚ್ಚಲಿಲ್ಲ. ಕೊನೆಗೆ ಮಸೀದಿಯ ಹಜರತ್‌ರವರೇ ಹತ್ತಿರ ಹೋಗಿ ಬಲವಂತದಿಂದ ದೋತಿಗೆ ಕೈ ಹಚ್ಚಿದಾಗ ಮೇಲಿನ ಕೇರಿಯವರು “ಶಿವಾ. . .ಶಿವಾ. . ಎಂಥಾ ಮಹಾಪಾಪ” ಎಂದು ಕೆನ್ನೆ ತಟ್ಟಿಕೊಂಡರು. ಹಜರತ್‌ರವರನ್ನು ವಿರೋಧಿಸಿದ ಆತ ಸರಕ್ಕನೆ ಎದ್ದುನಿಂತು ಒಮ್ಮೆ ವಿಚಿತ್ರವಾಗಿ ಕಿರುಚಿ ಥೂ ಎಂದು ನೆಲಕ್ಕೆ ಉಗಿದು ಮಠದ ಜಗುಲಿಯಿಂದ ಕೆಳಕ್ಕೆ ನೆಗೆದು ಓಡತೊಡಗಿದ. ಮಸೀದಿಯ ಕಡೆ ಕೆಲವರು ಆತನನ್ನು ಹಿಡಿಯಲು ಪ್ರಯತ್ನಿಸಿದಾಗ ಮೇಲಿನ ಕೇರಿಯವರು ಸುಮ್ಮನಿರಲಾರದೆ ಅವರನ್ನು ತಡೆದರು. ಹೀಗೆ ಹಿಡಿಯುವ ಮತ್ತು ತಡೆಯುವ ಪ್ರಕ್ರಿಯೆಯಿಂದಾಗಿ ಪರಿಸ್ಥಿತಿ ಹೆಚ್ಚೂ ಕಡಿಮೆ ಕೈ ಕೈ ಮಿಲಾಯಿಸುವ ಮಟ್ಟಕ್ಕೆ ತಲುಪಿ ಹಜರತ್ ಮತ್ತು ಗೌಡರ ಮಧ್ಯಸ್ಥಿಕೆಯಿಂದ ಸಮಾಧಾನಗೊಂಡು ಅವರು ಮತ್ತೆ ಬರುತ್ತಾರೆಂದೂ ಬಂದ ಮೇಲೆ ವಿಚಾರಿಸುವುದೆಂದು ತಮ್ಮ ತಮ್ಮ ಗುಂಪುಗಳೊಡನೆ ತೆರಳಿದರು.

ಲಾಂಡ್ರಿ ವೆಂಕಯ್ಯನು ಹಗಲೆಲ್ಲಾ ಲಾಂಡ್ರಿ ಅಂಗಡಿಯಲ್ಲಿ ಗಿರಾಕಿಗಳಿಗೆ ಬಟ್ಟೆ ಕೊಡುವುದರೊಳಗೇ ಕಳೆದುಹೋಗಿ ಜಾತ್ರೆಗೆ ಪಂಜನ್ನು ತಯಾರಿ ಮಾಡಿಕೊಳ್ಳುವುದನ್ನು ಮರೆತು ಸಂಜೆ ಆತುರಾತುರವಾಗಿ ಪಂಜು ತಯಾರಿಸುತ್ತಿದ್ದನು. ಮೆರವಣಿಗೆಗೆ ಸಿದ್ಧತೆ ನಡೆದು ಮೇಲಿನ ಕೇರಿಯವರು ಸ್ವಾಮಿಗಳು ಮತ್ತೆ ವಾಪಸ್ ಬರದೆ ಇದ್ದುದಕ್ಕಾಗಿ ಮಸೀದಿಯವರನ್ನು ಶಪಿಸುತ್ತಾ ಪವಾಡಪುರುಷರು ಖಂಡಿತಾ ಬರುತ್ತಾರೆಂಬ ನಂಬಿಕೆಯಲ್ಲಿದ್ದರು. ಪಂಜು ಸರಿಪಡಿಸಿಕೊಂಡ ವೆಂಕಯ್ಯ ಬೆಂಕಿ ಹೊತ್ತಿಸಿಕೊಂಡು ಅದೇ ಬೆಳಕಲ್ಲಿ ಮಾರಮ್ಮನ ಗುಡಿಯ ಕಡೆ ಹೆಜ್ಜೆ ಹಾಕುತ್ತಿರುವಾಗ ಜೋರಾಗಿ ಬೀಸಿದ ಗಾಳಿ ಅವನ ಪಂಜನ್ನು ಆರಿಸಿತು. ಇದರ ಮನೆ ಹಾಳಾಗ ಎಂದು ಗಾಳಿಗೆ ಬೈದು ಕಡ್ಡಿಗೀರಿ ಪುನಃ ಹತ್ತಿಸಿಕೊಂಡು ಹೊರಟ. ಸ್ವಲ್ಪ ದೂರ ಹೆಜ್ಜೆ ಹಾಕುವುದರೊಳಗಾಗಿ ತನ್ನ ಹಿಂದೆ ಪಂಜಿಗಿಂತ ದೊಡ್ಡ ಬೆಳಕು ಬೆಳಗುವುದ ಕಂಡಂತಾಗಿ ಹಿಂದೆ ತಿರುಗಿದರೆ ಮಟ್ಟಾಳೆ ಗುಡಿಸಲು ಜೋರಾಗಿ ಹತ್ತಿಕೊಂಡು ಉರಿಯುವುದಕ್ಕೆ ಶುರುಮಾಡಿತು. ಕಡ್ಡಿಗೀರಿ ಅದನ್ನು ಆರಿಸದೇ ಹಾಗೇ ಎಸೆದು ಬಂದ ಅವನಿಗೆ ಮುಖದಲ್ಲಿ ಬೆವರು ಮೂಡತೊಡಗಿತು. ನೋಡ ನೋಡುತ್ತಿದ್ದಂತೆಯೇ ಅನೇಕ ಮಂದಿ ಹೊರಬಂದು ನೀರು ಎರಚತೊಡಗಿದರು. ಭಯಗೊಂಡ ವೆಂಕಯ್ಯ ಪಂಜು ಬಿಸಾಡಿ ದೂರ ಓಡಿದ. ಪಂಜು ಕಂಡ ಮಸೀದಿಯವರು ಇದು ಮೇಲಿನ ಕೇರಿಯವರದ್ದೇ ಕಿತಾಪತಿ ಎಂದು ತಾವೂ ನಾಲ್ಕಾರು ಕೊಳ್ಳಿ ತೆಗೆದುಕೊಂಡು ಮೇಲಿನ ಕೇರಿಯತ್ತ ಧಾವಿಸಿದರು. ಹಿಂದೂ ಮುಸ್ಲಿಂ ಕೋಮುಗಲಭೆ ಎಂದು ಪ್ರಚಾರಗೊಂಡ ಅದು ಟೀವಿ ಪೇಪರಿನಲ್ಲಿ ಸುದ್ದಿಯಾಯಿತು. ಯಾವ ಯುದ್ಧಕ್ಕೆ ತಾನೆ ಕೊನೆಯಿರುವುದಿಲ್ಲ? ಮತ್ತೆ ಯಾವ ಯುದ್ಧಕ್ಕೆ ತಾನೆ ನಿರ್ಧಿಷ್ಟವಾದ ಕಾರಣ ಬೇಕಿದೆ? ಕಾರಣವಿಲ್ಲದೆ ಎಷ್ಟೋ ಯುದ್ಧಗಳಾಗಿಲ್ಲವೇ? ಮತ್ತು ಅವು ಇದ್ದಕ್ಕಿದ್ದಂತೆ ನಿಂತೂ ಹೋಗಿಲ್ಲವೇ ? ಅದರಂತೆ ಈ ಊರಿನ ಗಲಾಟೆಗೂ ಒಂದು ಕೊನೆಯಿತ್ತು. ಆವತ್ತಿನಿಂದ ರೊಚ್ಚಿ ಪಾಲಾದಂತೆ ಊರು ಎರಡು ಭಾಗವಾಗಿತ್ತು. ಊರಿಗೇ ಛತ್ರಿ ಹಿಡಿದಂತೆ ಇರುವ ಅರಳೀಮರದ ಕಟ್ಟೆಗೆ ಯಾರೊಬ್ಬರೂ ಹರಟೆಗೆ ಬರದೆ ಬಿಕೋ ಎನ್ನುತ್ತಿತ್ತು.

ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಭೂಮಿ ನೆಂದು ಮಿತವಾಗಿತ್ತು. ಊರ ಕೊಳೆಯೆಲ್ಲಾ ಕೊಚ್ಚಿಹೋಗಿ ಬೀದಿಗಳು ಆಗ ತಾನೆ ಕಸಗುಡಿಸಿಕೊಂಡಂತೆ ಸ್ವಚ್ಚವಾಗಿದ್ದವು. ಅವನು ಹಿಮ್ಮಡಿಯನ್ನು ಭದ್ರವಾಗಿ ನೆಲದ ಮೇಲೆ ಊರಿ ಹೆಬ್ಬೆರಳನ್ನು ಮುಂದೆ ಮಾಡಿ ನೆಲಕ್ಕೆ ಒತ್ತಿ ಹಿಡಿದು ಭರ‍್ರನೆ ಒಂದು ರೌಂಡು ತಿರುಗಿದರೆ ಕೈವಾರದಲ್ಲಿ ಪೆನ್ಸಿಲ್ ಸಿಕ್ಕಿಸಿ ಬಿಳಿಹಾಳೆ ಮೇಲೆ ವೃತ್ತ ಮೂಡಿಸಿದಂತೆ ಮರಳಿನ ಮೇಲೆ ವೃತ್ತ ಮೂಡಿಸಿದ. ತೃಪ್ತಿಯಾಗುವವರೆಗೂ ಮತ್ತಷ್ಟು ಮೂಡಿಸುತ್ತಲೇ ಇದ್ದ.

About The Author

ಸ್ವಾಮಿ ಪೊನ್ನಾಚಿ

ಸ್ವಾಮಿ ಪೊನ್ನಾಚಿ (ಮಹದೇವಸ್ವಾಮಿ ಕೆ.ಎಸ್) ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪೊನ್ನಾಚಿಯವರು.  ಪ್ರಸ್ತುತ ಚಾಮರಾಜನಗರ ಜಿಲ್ಲೆ ಯಳಂದೂರು ಇಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.  "ಸಾವೊಂದನ್ನು ಬಿಟ್ಟು" (ಕವನ ಸಂಕಲನ), ಧೂಪದ ಮಕ್ಕಳು (ಕಥಾ ಸಂಕಲನ), ಕಾಡು ಹುಡುಗನ ಹಾಡುಪಾಡು (ಅನುಭವ ಕಥನ) ಇವರ ಪ್ರಕಟಿತ ಕೃತಿಗಳು. ಇವರಿಗೆ ಪಾಪು ಕಥಾ ಪುರಸ್ಕಾರ ಹಾಗೂ ಛಂದ ಪ್ರಕಾಶನ ಕೊಡಮಾಡುವ ಛಂದ ಪುಸ್ತಕ ಬಹುಮಾನ  ದೊರೆತಿದೆ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ