“ಸಾಮಾನ್ಯವಾಗಿ ‘ಚಿಕನ್ ಪಾಕ್ಸ್’ ಒಮ್ಮೆ ಬಂದ್ರೆ ಮತ್ತೊಮ್ಮೆ ಬರಲ್ಲ ಕಾವ್ಯ. ಇದು ವೈರಲ್ ಜ್ವರ ಅಲ್ವಾ? ಮುಂಚೆ ನನಗೂ, ಅಕ್ಕನಿಗೂ, ಬಾವನಿಗೂ ನಮ್ಮ ನಮ್ಮ ಬಾಲ್ಯದಲ್ಲಿ ಈ ಚಿಕ್ಕ ‘ಅಮ್ಮ’ ಬಂದಿತ್ತು. ನಮ್ಮ ದೇಹಕ್ಕೆ, ನಮ್ಮ ರೋಗ ನಿರೋಧಕ ವ್ಯವಸ್ಥೆಗೆ ಈ ‘ವೈರಸ್’ನ ನೆನಪು ಖಂಡಿತವಾಗಿ ಇರತ್ತೆ. ಈ ವೈರಸ್ ಪುನಃ ಬಂದ್ರೆ, ಯಾವ ರೀತಿ ಅದನ್ನ ಹೊಡೆದು ಉರುಳಿಸಬೇಕು ಎಂಬ ಯುದ್ಧನೀತಿ ಗೊತ್ತಿರೋ ‘ಬಿ ಮತ್ತು ಟಿ ಮೆಮೊರಿ ಸೆಲ್ಸ್’ ಈಗಾಗ್ಲೇ ನಮ್ಮ ದೇಹದಲ್ಲಿ ಇರತ್ವೆ.”
ಕ್ಷಮಾ ವಿ. ಭಾನುಪ್ರಕಾಶ್ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ಯಲ್ಲಿ ಆರನೆಯ ಕತೆ
ಚಳಿಗಾಲದಿಂದ ಬೇಸಿಗೆಗೆ ಕಾಲವು ಕಾಲಿಟ್ಟದ್ದೇ ತಿಳಿಯಲಿಲ್ಲ; ತಿಳಿಗುಲಾಬಿ ತಬೇಬುಯಾ ಮತ್ತು ಚಿನ್ನದಂತಹ ಹಳದಿ ತಬೇಬುಯಾ ಹೂವುಗಳು ತಮ್ಮ ಕರಾಮತ್ತನ್ನು ಜಗತ್ತಿಗೆ ತೋರುತ್ತಾ, ತಿಳಿ ನೇರಳೆ ಜಕರಾಂಡಾ ಹೂವುಗಳ ಸರದಿ ಬಂದು, ಹಿಂದೆಯೇ ಹೊಂಗೆ, ಮಾವು, ಬೇವು ಚಿಗುರಿ ಯುಗಾದಿ ಬಂದು, ಜೊತೆಗೇ ಪರೀಕ್ಷೆಗಳ ತಾಪ, ಬೇಸಿಗೆ ರಜೆಯ ಆಸೆ – ಎಲ್ಲವೂ ಹಿಂಡು ಹಿಂಡಾಗಿ ಬಂದವು. ಇಂತಹದ್ದೇ ಪರ್ವಕಾಲದಲ್ಲಿ, ನಮ್ಮ ಕಾವ್ಯ, ಶಿವರಾಮ ಕಾರಂತರ ಪುಸ್ತಕಗಳ ಮರುಓದಿಗೆ ಮತ್ತೊಮ್ಮೆ ಮರುಳಾಗಿದ್ದಳು. ಅಂತಹದ್ದೇ ಒಂದು ಸುಡುಬೇಸಿಗೆಯ ತಂಪುಮುಂಜಾವಿನಲ್ಲಿ, ಪುಸ್ತಕ ಹಿಡಿದು ಕೂತಿದ್ದಾಗ, ತಂಗಿ ವಿಭಾಳ ಮೆಸೇಜ್ ಬಂತು. ಇನ್ನೆರಡು ದಿನಕ್ಕೆ ಪರೀಕ್ಷೆ ಮುಗಿದು, ಬೇಸಿಗೆ ರಜೆ ಬಂದೊಡನೆ ಕಾವ್ಯ ಅಕ್ಕನ ಮನೆಗೆ ಬರುವುದಾಗಿ ತಿಳಿಸಿದ್ದಳು. ಆಗ ಕಾವ್ಯ. “ಏ ಕಳ್ಳಿ, ಓದಕ್ಕೆ ಅಂತ ಇಷ್ಟು ಬೇಗ ಎದ್ದು ಕೂತಿದೀಯಾ, ಫೋನ್ ಹಿಡ್ಕೊಂಡು ಮೆಸೇಜ್ ಮಾಡ್ಕೊಂಡು ಏನು ಮಾಡ್ತಾ ಇದೀಯಾ? ಖಂಡಿತವಾಗಿ ರಜೆಗೆ ಬಾ, ಈಗ್ ಓದಿ, ಎಕ್ಸಾಂ ಚೆನ್ನಾಗ್ ಮಾಡೋ” ಎಂದು ಮೆಸೇಜ್ ಮಾಡಿದಳು. ಅದಕ್ಕೆ ವಿಭಾ, ಬಗೆ ಬಗೆಯ ಎಮೋಜಿಗಳನ್ನೂ, ‘ಜಿಫ್’ಗಳನ್ನೂ ಕಳಿಸಿ ತರಲೆ ಮಾಡಿ, ಅಕ್ಕನಿಗೆ ಬೈ ಹೇಳಿ, ಬೇಸಿಗೆ ರಜೆಗೆ ಕಾಯುತ್ತಾ, ಓದುತ್ತಾ ಕೂತಳು.
ಬೇಸಿಗೆ ರಜೆ ಎಂದರೆ ಎಲ್ಲರಿಗೂ ಅದೆಷ್ಟು ಆಸೆಯಲ್ಲವೇ? ಈಗಿನ ಸಮ್ಮರ್ ಕ್ಯಾಂಪಿನ ಬೇಸಿಗೆಗೆ ಹೋಲಿಸಿದರೆ ಮುಂಚಿನ ಬೇಸಿಗೆ ಬಹಳ ಆಪ್ತ ಎನಿಸುತ್ತದೆ. ಹಿಂದಿನ ದಶಕದವರೆಗೂ, ರಜೆ ಬಂದರೆ ಅಜ್ಜ-ಅಜ್ಜಿಯರ ಮನೆಗೆ ಹೋಗುವ ಯೋಜನೆ ಬಿಟ್ಟರೆ, ಮತ್ತೇನೂ ಇರುತ್ತಿರಲಿಲ್ಲ; ಅಥವಾ, ಅಜ್ಜ ಅಜ್ಜಿಯರೊಂದಿಗೇ ಕೂಡುಕುಟುಂಬದಲ್ಲಿ ಇದ್ದರೆ, ರಜೆಯಲ್ಲಿ ಮನೆಯಲ್ಲಿಯೇ ಅವರೊಂದಿಗೇ ಆಟ, ಗೆಳೆಯರೊಂದಿಗೆ ಓಟ, ಮರಕೋತಿಯಾಟ, ಮಾವಿನಕಾಯಿ ತಿನ್ನುವ ಮೋದ, ಕುಂಟೇಬಿಲ್ಲೇ, ಸೈಕಲ್ ತುಳಿಯುವುದು, ಓದುಬರಹದ ಚಿಂತೆಯಿಲ್ಲದೇ ಕುಣಿದಾಟ – ಅಷ್ಟೇ. ಇಂತಹ ಬಾಲ್ಯವನ್ನು ನೆನೆಯುತ್ತಾ ಕಾವ್ಯಳಿಗೆ ಅಂತಹದ್ದೇ ಬೇಸಿಗೆಯೊಂದರ ನೆನಪಾಯಿತು. ಆ ಬೇಸಿಗೆಯಲ್ಲಿ ಅವಳಿಗೆ ಜೋರು ಜ್ವರದ ‘ಅಮ್ಮ’ ಆಗಿತ್ತು. ‘ಅಮ್ಮ’ ಎಂದು ಆಡುಮಾತಿನಲ್ಲಿ ಕರೆಯುವ ‘ಚಿಕನ್ ಪಾಕ್ಸ್’ ಎಂಬ ವೈರಲ್ ಫೀವರ್, ಅವಳ ಬೇಸಿಗೆ ರಜೆಯನ್ನೂ, ಕೊನೆಕೊನೆಯ ಪರೀಕ್ಷೆಗಳನ್ನೂ ಹಾಳುಮಾಡಿಟ್ಟಿತ್ತು. ಶಾಲೆ, ಪರೀಕ್ಷೆ, ಓದು – ಇವೆಲ್ಲಾ ಪುಟ್ಟ ಕಾವ್ಯಳಿಗೆ ಬಹಳ ಮುಖ್ಯವಾದ ವಿಷಯಗಳಾಗಿದ್ದವು. ಆದರೆ, ಜ್ವರ ಶುರುವಾದ ತಕ್ಷಣವೇ ಕೊನೆಯ ಪರೀಕ್ಷೆ ಸರಿಯಾಗಿ ಮಾಡಲಾಗಲಿಲ್ಲವಲ್ಲ ಎಂದು ಬೇಸರಿಸಿಕೊಂಡ ಕಾವ್ಯಳಿಗೆ, ಮೈಮೇಲೆ ಮೂಡಿದ್ದ ಪುಟ್ಟ ಪುಟ್ಟ ಗುಲಾಬಿ-ಕೆಂಪು ಬಣ್ಣದ ಗುಳ್ಳೆಗಳು ಬೆಚ್ಚಿಬೀಳಿಸಿದವು. ಚಿಕನ್ ಪಾಕ್ಸ್ ಜ್ವರದ ಬಗ್ಗೆ ಗೊತ್ತೇ ಇರದ ಇವಳಿಗೆ, ಜ್ವರ ಬಂದು, ಮೈಮೇಲೆ ಗುಳ್ಳೆಯೆದ್ದು, ಡಾಕ್ಟರ್ ಅದಕ್ಕೆ ‘ಅಮ್ಮ’ ಎಂದು ನಾಮಕರಣ ಮಾಡಿದಾಗ, ತನ್ನ ಅಮ್ಮನನ್ನು ಡಾಕ್ಟರ್ ಬಳಿಯೇ ಬಿಟ್ಟು, ತಾನು ಗೊಳೋ ಎಂದು ಅಳುತ್ತಾ ಮನೆಗೆ ಓಡಿಬಂದಿದ್ದಳು.
ಆಗತಾನೆ ಕೆಲಸದಿಂದ ಮನೆಗೆ ಹಿಂದಿರುಗಿದ ಅಪ್ಪನ ಮುಂದೆ ಬಿಕ್ಕುತ್ತಾ, ‘ಅಮ್ಮ’, ‘ಅಮ್ಮ’ ಎಂದು ಅಳುತ್ತಾ ಹೆದರಿ ನಡುಗುತ್ತಿದ್ದಳು. ಇದನ್ನು ಕಂಡ ಅವಳ ತಂದೆಗೆ, ಇವಳ ಅಮ್ಮನಿಗೆ ಏನೋ ಆಗಿದೆ ಎಂದು ಭಯವಾಗಿ, “ಏನಾಯ್ತು, ಅಮ್ಮ ಎಲ್ಲಿ?” ಎಂದು ಕಳವಳದಿಂದ ಹುಡುಕಾಡಿದರು. ಆಗ ಮನೆಗೆ ಮರಳಿದ ಕಾವ್ಯಳ ಅಮ್ಮ, ಅವಳ ಅಪ್ಪನ ಕಡೆ ತಿರುಗಿ, “ಏನಿಲ್ಲಾ ರೀ, ಜ್ವರ ಬಂದಿತ್ತು, ಸ್ವಲ್ಪ ಗುಳ್ಳೆಗಳೆದ್ದಿದ್ದವಲ್ಲ, ಅದಕ್ಕೆ ಇಲ್ಲೇ ಪಕ್ಕದ ಮನೆಯ ಡಾಕ್ಟರ್ ಹತ್ತಿರ ಕರ್ಕೊಂಡು ಹೋಗಿದ್ದೆ, ಅವರು ಪರೀಕ್ಷೆ ಮಾಡಿ ‘ಅಮ್ಮ’ ಆಗಿದೆ ಎಂದರು; ಅದನ್ನು ಕೇಳಿ ಇದು ಭಯಪಟ್ಟುಕೊಂಡು ಓಡಿ ಬಂದಿದೆ” ಎಂದರು. ಅವರ ಮಾತನ್ನು ಕೇಳಿದ ಕಾವ್ಯ, “ಪ್ರಾಣ ಹೋಗುವಂತಹ ಜ್ವರ ಬಂದಿದೆ, ನೀವು ಇಷ್ಟು ಅರಾಮಾಗಿ ಹೇಳ್ತಿದೀರಲ್ಲಮ್ಮ?” ಎಂದು ಕೊಂಚ ಭಯದಿಂದ, ಕೊಂಚ ಬೇಸರದಿಂದ ಬಿಕ್ಕುತ್ತಾ ಚೀರಿದಳು. ಆಗ, ಅವಳ ಅಪ್ಪ “ಪ್ರಾಣ ಹೋಗುವಂತಹ ಜ್ವರಾನಾ? ಇಲ್ಲಪ್ಪ! ಇದು ಒಂದೆರಡು ವಾರದಲ್ಲಿ ವಾಸಿ ಆಗತ್ತೆ; ಕೊಂಚ ಕಿರಿಕಿರಿಯ ಜ್ವರವಷ್ಟೇ; ಮೈಯಲ್ಲಿ ಗುಳ್ಳೆಯಾದ ಕಲೆಗಳು ಉಳೀಬಹುದು, ತುರಿಕೆ ಇರಬಹುದು ಸ್ವಲ್ಪ. ಔಷಧಿ ಬೇರೇ ಇದ್ಯಲ್ಲ? ಅರಾಮಾಗ್ತೀಯ ಮಗಳೇ” ಎಂದು ಸಮಾಧಾನ ಮಾಡಿದರು. ಅದನ್ನು ಕೇಳಿ ಕಾವ್ಯಳಿಗೆ ಆಶ್ಚರ್ಯ! “ಅಲ್ಲಪ್ಪ, ಚಿಕ್ಕವಯಸಲ್ಲೇ ನಿಮ್ಮ ತಂಗಿಯೊಬ್ರು ‘ಅಮ್ಮ’ ಬಂದು ತೀರಿಹೋದ್ರು; ಆಗೆಲ್ಲಾ ಮನೆತುಂಬಾ ಮಕ್ಕಳು; ಅವರಲ್ಲಿ ‘ಅಮ್ಮ’ ಮತ್ತಿತರ ಭಯಂಕರ ರೋಗಗಳು ಬಂದು ಮನೆಗೆ ಉಳೀತಾ ಇದ್ದದ್ದೇ ಕೆಲವು ಮಕ್ಕಳು ಅಂತಾ ಹೇಳಿದ್ರಲ್ಲಾ? ನನಗೂ ಈಗ ‘ಅಮ್ಮ’ ಬಂದುಬಿಟ್ಟಿದೆ. ಏನು ಮಾಡೋದೂ…” ಅಂತ ಮತ್ತೆ ಗೊಳೋ ಎಂದು ಭಯದಿಂದ ಅಳಲು ಪ್ರಾರಂಭಿಸಿದಳು. ೮ ವರ್ಷದ ಪೋರಿಗೆ ಚಿಕ್ಕ ‘ಅಮ್ಮ’ ಮತ್ತು ದೊಡ್ಡ ‘ಅಮ್ಮ’ ಜ್ವರಗಳ ನಡುವಿನ ವ್ಯತ್ಯಾಸ ಗೊತ್ತಿರಲಿಲ್ಲ ಎಂದು ಆಗ ಅವಳ ಅಪ್ಪ ಅಮ್ಮನಿಗೆ ಅರಿವಾಗಿ, ಪಾಪ ಎನ್ನಿಸಿತು.
ಆಗ ಕಾವ್ಯಳ ಅಪ್ಪ “ಅಲ್ಲ ಮಗಳೇ, ಅದು ಬೇರೆ ಜ್ವರ ಕಣೋ. ನಿನಗೆ ಬಂದಿರೋದು ಚಿಕ್ಕ ‘ಅಮ್ಮ’ ಅಂದ್ರೆ ಚಿಕನ್ ಪಾಕ್ಸ್. ಇದು ಸುಲಭವಾಗಿ ವಾಸಿಯಾಗಬಲ್ಲ ಜ್ವರ. ನನ್ನ ತಂಗಿ ಕವಿತಾಗೆ ಬಂದದ್ದು ದೊಡ್ದ ‘ಅಮ್ಮ’ ಅಂದ್ರೆ ‘ಸ್ಮಾಲ್ ಪಾಕ್ಸ್’ ಅನ್ನೋ ಸಿಡುಬು. ಈಗ ಸ್ಮಾಲ್ ಪಾಕ್ಸ್ ನಮ್ಮ ದೇಶದಲ್ಲೇನು, ನಮ್ಮ ಜಗತ್ತಿನಿಂದಲೇ ಹೊರಟು ಹೋಗಿದೆ” ಎಂದು ಮಗಳಿಗೆ ಸಮಾಧಾನ ಮಾಡಿದರು.
ಆಗ ಮನೆಗೆ ಅನಿಲಣ್ಣನ ಆಗಮನವಾಯಿತು. ಇವರ ಕುಟುಂಬದ ‘ಮರಿ ಡಾಕ್ಟರ್’ ಅನಿಲ್, ಎಂ.ಬಿ.ಬಿ.ಎಸ್ ಓದುತ್ತಿದ್ದ ಕಾಲವದು; ಈಗ ದೊಡ್ಡ ಸರ್ಜನ್ ಆಗಿ, ನೂರಾರು ಮಕ್ಕಳ ಪ್ರಾಣ ಉಳಿಸಿದ ಶ್ರೇಯ ಇವರದ್ದು. ಆಗ ಇನ್ನೂ ಓದುತ್ತಿದ್ದ ಕಾಲವಾದ್ದರಿಂದ, ಇನ್ನೂ ಮನೆಯ ‘ಮರಿ ಡಾಕ್ಟರ್’. ಮನೆಗೆ ಬಂದ ತಕ್ಷಣ ಕಣ್ಣಲ್ಲಿ ನೀರು ತುಂಬಿಕೊಂಡು ಕೂತಿದ್ದ ಕಾವ್ಯಳನ್ನು ನೋಡಿ. “ಏನಾಯ್ತು ಕಾವ್ಯ? ಯಾಕೋ ಹೀಗಿದೀಯಾ?” ಎಂದು ಕೇಳಿದರು. ನಡೆದ ವೃತ್ತಾಂತವನ್ನೆಲ್ಲಾ ಕಾವ್ಯಳ ಅಮ್ಮ ತಿಳಿಸಿದರು. ಆಗ ಅನಿಲ್ “ಅಕ್ಕ, ಹಾಗಿದ್ರೆ, ಕಾವ್ಯ ಸೆಪರೇಟ್ ಆಗಿ ರೂಮಲ್ಲಿ ಮಲಗ್ಲಿ, ಹೊರಗೆ ಹೋಗೋದು, ಮನೆಗೆ ಯಾರೂ ಬರೋದೂ ಸಾಧ್ಯವಾದಷ್ಟೂ ಬೇಡ; ಚಿಕನ್ ಪಾಕ್ಸ್ ಹರಡತ್ತೆ ಅಲ್ವಾ? ನಮ್ಮಿಂದ ಮತ್ತೊಬ್ರಿಗೆ ಹರಡೋದು ಬೇಡ ಅಂತ ಹೇಳ್ದೆ ಅಷ್ಟೇ. ಚೆನ್ನಾಗಿ ನೀರು ಕುಡೀಲಿ, ಮೆತ್ತಗಿನ ಆಹಾರ ತಿನ್ಲಿ. ಇನ್ನೇನು ಇವತ್ತಿಂದ ರಜೆ ತಾನೆ? ಅರಾಮಾಗಿ ರೂಮಲ್ಲಿ ‘ಚಂದಮಾಮ’, ‘ಬಾಲ ಮಂಗಳ’ ಓದ್ಲಿ” ಎಂದರು ನಗುತ್ತಾ.

ಇದಕ್ಕೆಲ್ಲಾ ‘ಸರಿ’ ಎಂದು ತಲೆಯಾಡಿಸಿದ ಕಾವ್ಯ, “ಹಾಗಿದ್ರೆ, ಈಗ ಅಪ್ಪ ಅಮ್ಮನಿಗೆ ನಿಮಗೆಲ್ಲಾ ನನ್ನಿಂದ ಈ ಜ್ವರ ಬಂದುಬಿಟ್ರೆ?” ಎಂದಳು ಕಳವಳದಿಂದ. ಆಗ ಅನಿಲ್ “ಸಾಮಾನ್ಯವಾಗಿ ‘ಚಿಕನ್ ಪಾಕ್ಸ್’ ಒಮ್ಮೆ ಬಂದ್ರೆ ಮತ್ತೊಮ್ಮೆ ಬರಲ್ಲ ಕಾವ್ಯ. ಇದು ವೈರಲ್ ಜ್ವರ ಅಲ್ವಾ? ಮುಂಚೆ ನನಗೂ, ಅಕ್ಕನಿಗೂ, ಬಾವನಿಗೂ ನಮ್ಮ ನಮ್ಮ ಬಾಲ್ಯದಲ್ಲಿ ಈ ಚಿಕ್ಕ ‘ಅಮ್ಮ’ ಬಂದಿತ್ತು. ನಮ್ಮ ದೇಹಕ್ಕೆ, ನಮ್ಮ ರೋಗ ನಿರೋಧಕ ವ್ಯವಸ್ಥೆಗೆ ಈ ‘ವೈರಸ್’ನ ನೆನಪು ಖಂಡಿತವಾಗಿ ಇರತ್ತೆ. ಈ ವೈರಸ್ ಪುನಃ ಬಂದ್ರೆ, ಯಾವ ರೀತಿ ಅದನ್ನ ಹೊಡೆದು ಉರುಳಿಸಬೇಕು ಎಂಬ ಯುದ್ಧನೀತಿ ಗೊತ್ತಿರೋ ‘ಬಿ ಮತ್ತು ಟಿ ಮೆಮೊರಿ ಸೆಲ್ಸ್’ ಈಗಾಗ್ಲೇ ನಮ್ಮ ದೇಹದಲ್ಲಿ ಇರತ್ವೆ. ಅವು ತಮ್ಮ ಕೆಲಸ ತಾವು ಮಾಡುತ್ವೆ. ತೀರ, ನಮ್ಮ ರೋಗ ನಿರೋಧಕ ಶಕ್ತಿ ಸ್ಟ್ರಾಂಗ್ ಇಲ್ಲದಿದ್ರೆ, ಈ ಜ್ವರ ಮತ್ತೊಮ್ಮೆ ಅಟ್ಯಾಕ್ ಮಾಡ್ಬಹುದು. ಅದು ಬಹಳ ರೇರ್; ಸೇಫ್ಟಿಗೆ ಅಂತ ನಾನು ದೂರದಲ್ಲೇ ಕೂತಿರ್ತೀನಿ. ನೀನು ಬಳಸಿದ ಟವೆಲ್, ಕರ್ಚೀಫ್ ಬಳ್ಸಲ್ಲ. ಆಯ್ತಾ? ಇಲ್ಲಿಂದ ಹೊರಡೋಕೆ ಮುಂಚೆ ಸೋಪ್ ಹಾಕಿ ಕೈಕಾಲು ಮುಖ ತೊಳೆದುಕೊಂದು ಹೋಗ್ತೀನಿ. ಮನೆಗೆ ಹೋದಮೇಲೂ, ಸ್ನಾನ ಮಾಡಿ, ಬಟ್ಟೆ ಬದಲಾಯಿಸಿಯೇ ಎಲ್ಲರ ಜೊತೆ ಇರ್ತೀನಿ. ಆಗ ಯಾರಿಗೂ ಹರಡಲ್ಲ. ಜವಾಬ್ದಾರಿ ಇರೋ ನಾಗರಿಕರು ಮಾಡ್ಬೇಕಾಗಿರೋ ಕೆಲ್ಸ ಇದು. ಇದ್ರಲ್ಲಿ ಬೇಜಾರು ಮಾಡ್ಕೊಳ್ಳೋದು, ಭಯ ಪಡೋದು ಏನೂ ಇಲ್ಲ; ಪ್ರತಿಯೊಬ್ರೂ ಆರೋಗ್ಯದ ಬಗ್ಗೆ ತೆಗೆದುಕೋಬೇಕಾದ ಪ್ರಿಕಾಶನ್ಸ್ ಅಷ್ಟೇ; ನೀನು ಕೂಡ ಕೆಮ್ಮುವಾಗ, ಸೀನುವಾಗ ಕರ್ಚೀಫಿಂದ ಮೂಗು, ಬಾಯಿ ಕವರ್ ಮಾಡ್ಕೊಂಡಿದೀಯಾ ಅಲ್ವಾ? ಈ ವೈರಸ್ ಹರಡೋದು ಕೆಮ್ಮು, ಸೀನಲ್ಲಿರೋ ದ್ರವದಿಂದ ಅಥವಾ ಗುಳ್ಳೆಗಳು ಒಡೆದು ಹೊರಬರತ್ತಲ್ಲಾ ಆ ದ್ರವದಿಂದ” ಎಂದು ವಿವರಿಸಿದರು.
ಆಗ ಕಾವ್ಯಳ ಅಮ್ಮ “ನಿಜಾ ಅನಿಲ್; ಅದೇ ಸರಿ. ಹೌದೂ, ಈ ಚಿಕ್ಕ ‘ಅಮ್ಮ’ ಮತ್ತು ದೊಡ್ಡ ‘ಅಮ್ಮ’ ಜ್ವರ ಯಾವುದ್ರಿಂದ ಬರೋದು? ಸಿಡುಬು ಅಂದ್ರೆ ಮುಂಚೆ ಬರ್ತಿತ್ತಲ್ಲ ದೊಡ್ಡ ‘ಅಮ್ಮ’ ಅದೇ ತಾನೇ?” ಎಂದು ಕೇಳಿದರು. ಆಗ ಅನಿಲ್ “ಹೌದಕ್ಕಾ, ಸಿಡುಬು ಅಂದ್ರೆ ‘ಸ್ಮಾಲ್ ಪಾಕ್ಸ್’; ಮುಂಚಿನ ಕಾಲ್ದಲ್ಲಿ ಬರ್ತಿತ್ತಲ್ಲಾ? ಅದು. ಈಗ್ಲೂ ಈ ಚಿಕ್ಕ ‘ಅಮ್ಮ’ ಜ್ವರಕ್ಕೂ, ಕೆಲವು ಕಡೆ ತಪ್ಪುತಪ್ಪಾಗಿ ಸಿಡುಬು ಅಂತಾರೆ. ೧೯೮೦ರ ಈಚೆಗೆ ಸ್ಮಾಲ್ ಪಾಕ್ಸ್ ಇಲ್ವೇ ಇಲ್ಲ. ಕರೆಕ್ಟಾಗಿ ಹೇಳ್ಬೇಕಂದ್ರೆ, ೧೯೭೭ರ ನಂತರ, ಇಡೀ ಜಗತ್ತಿನಲ್ಲಿ ಒಂದೇ ಒಂದು ಕೇಸ್ ಕೂಡ ಇಲ್ಲದಿರೋದನ್ನ ಗಮನಿಸಿ, ವಿಶ್ವ ಆರೋಗ್ಯ ಸಂಸ್ಥೆ, ೧೯೮೦ರಲ್ಲಿ ‘ಈ ಜಗತ್ತಿನಿಂದ ಸಿಡುಬು ಅಂದ್ರೆ ‘ಸ್ಮಾಲ್ ಪಾಕ್ಸ್’ ಮಾಯವಾಗಿದೆ’ ಅಂತ ಘೋಷಣೆ ಮಾಡಿದ್ರು. ಅದೇನು ಸುಲಭಕ್ಕೆ ಸಾಧ್ಯವಾಗ್ಲಿಲ್ಲ ನೋಡು. ಎಚ್ಚರಿಕೆಯಿಂದ ಜಗತ್ತಿನಾದ್ಯಂತ ‘ವ್ಯಾಕ್ಸಿನೇಶನ್’ ಮಾಡಿ, ಸಿಡುಬನ್ನು ಓಡಿಸಿದ್ದು. ಈ ಸ್ಮಾಲ್ ಪಾಕ್ಸ್ ಮತ್ತು ಚಿಕನ್ ಪಾಕ್ಸ್ – ಎರಡೂ ವೈರಲ್ ಜ್ವರಗಳೇ. ‘ವೇರಿಯೋಲಾ’ ಅನ್ನೋ ವೈರಸ್ ಸಿಡುಬು ಅಂದ್ರೆ ದೊಡ್ಡ ‘ಅಮ್ಮ’ ಜ್ವರಕ್ಕೆ ಕಾರಣವಾದ್ರೆ, ‘ವೇರಿಸೆಲ್ಲಾ-ಝಾಸ್ಟರ್’ ವೈರಸ್ ‘ಚಿಕನ್ ಪಾಕ್ಸ್’ ಅಂದ್ರೆ ಚಿಕ್ಕ ‘ಅಮ್ಮ’ ಜ್ವರಕ್ಕೆ ಕಾರಣ” ಎಂದು ವಿವರಿಸಿದರು.
ಇದನ್ನು ಆಸಕ್ತಿಯಿಂದ ದೂರದಲ್ಲೇ ಕುಳಿತು ಕೇಳುತ್ತಿದ್ದ ಕಾವ್ಯಳನ್ನು ನೋಡಿ ಅನಿಲ್ “ಹೇ ಕಾವ್ಯ, ಒಂಚೂರು ನಗೋ ಪರ್ವಾಗಿಲ್ಲ! ‘ಚಿಕನ್ ಪಾಕ್ಸ್’ ಏನೂ ದೊಡ್ಡ ಜ್ವರವಲ್ಲ ಕಣೋ. ಒಂದೆರಡು ವಾರ ಅಷ್ಟೇ, ಅರಾಮಾಗ್ತಿಯಾ. ನಮ್ ದೇಹ ಏನ್ ಅದ್ಭುತ ಗೊತ್ತಾ? ನಮ್ ಒಳಗಿನ ರೋಗ ನಿರೋಧಕ ವ್ಯವಸ್ಥೆ, ಯಾವುದೇ ಹೊರಗಿನ ವೈರಸ್, ಬ್ಯಾಕ್ಟೀರಿಯಾದಂತಹ ಸೂಕ್ಷ್ಮಾಣು ಜೀವಿಗಳು ಬಂದ್ರೆ, ಅವನ್ನು ಕೊಂದು ನಿವಾರಿಸೋಣ ಅಂತ, ಅವುಗಳ ವಿರುದ್ಧ ಕತ್ತಿ ಮಸೀತಾ ಕೂತಿರತ್ತೆ. ಮೊದಲ ಸಲ ಈ ‘ವೇರಿಸೆಲ್ಲಾ-ಝಾಸ್ಟರ್’ ವೈರಸ್’ ನಿನ್ನೊಳಗೆ ಬಂದಿದೆಯಲ್ಲಾ? ಅದರ ವಿರುದ್ಧ ಸೂಕ್ತವಾದ ಆಯುಧ ಇಲ್ಲ ಅಂತ, ನಿನ್ನ ದೇಹ ತಯಾರಿ ಮಾಡಿಕೊಳ್ತಾ ಇದೆ; ಅಷ್ಟ್ರಲ್ಲಿ, ಈ ವೈರಸ್ ಒಂದಷ್ಟು ಆಟ ಆಡ್ತಾ ಇದೆ. ನಿನ್ನೊಳಗೇ ಒಂದರಿಂದ ಎರಡು, ಎರಡರಿಂದ ನಾಕು ಅಂತ ದ್ವಿಗುಣವಾಗ್ತಾ ಇರತ್ವೆ ಈ ‘ವೈರಸ್’ಗಳು. ಆಗ ನಿನ್ನಲ್ಲಿ ‘ನ್ಯಾಚುರಲ್ ಕಿಲ್ಲರ್’ ಸೆಲ್ಸ್ ಅಂತ ಇರತ್ವೆ. ಶಾರ್ಟಾಗಿ ನಾವು ‘NK ಸೆಲ್ಸ್’ ಅಂತೀವಿ. ಅವು ಇನ್ಫೆಕ್ಷನ್ ಆಗಿರೋ ಜೀವಕೋಶಗಳನ್ನ ನಾಶ ಮಾಡಿ, ‘ಇಂಟರ್ಫೆರಾನ್’ ಅಂತ ಒಂದು ರಾಸಾಯನಿಕ ಬಾಂಬ್ ಹಾಕತ್ತೆ ನೋಡು, ಆಗ ಈ ವೈರಸ್ಗಳಿಗೆ ನಡುಕ ಶುರು! ಆಮೇಲೆ ಟಿ ಸೆಲ್, ಬಿ ಸೆಲ್ ಅಂತ ಸ್ಪೆಶಲ್ ಜೀವಕೋಶಗಳಿರತ್ವೆ. ಅವು ಡಾ ರಾಜ್ ಕುಮಾರ್ ಅವ್ರ ಥರಾ ಫೈಟಿಂಗ್ ಮಾಡಿ, ‘ಬಿಸಿ ಬಿಸಿ ಕಜ್ಜಾಯ ಮಾಡಿಕೊಡಲೆ ನಾನು, ತೊಗೋ ತಿನ್ನು’ ಅಂತ ವೈರಸ್ ಗಳನ್ನ ಹೊಡೆದು ಓಡಿಸಿಬಿಡತ್ವೆ.” ಎಂದು ವಿವರಿಸಿದರು.

ಇದನ್ನು ಕೇಳಿದ ಪುಟ್ಟ ಕಾವ್ಯಳಿಗೆ ಆಗ ಹೇಗೆ ನಗು ಬಂದಿತ್ತೋ, ಅದನ್ನು ನೆನೆಸಿಕೊಂಡು ಈಗಲೂ ಹಾಗೇ ನಗೆಯುಕ್ಕಿತು. ಓದುತ್ತಾ ಕುಳಿತಿದ್ದ ಕಾವ್ಯ, ಹೊರಗೇನೋ ಸದ್ದಾಯಿತು ಎಂದು ಬಾಗಿಲ ಬಳಿ ಬಂದಾಗ, ತೋಟದ ಕೆಲಸದಾಕೆ ಗೌರಮ್ಮ ಬಂದಿದ್ದರು. ತನ್ನ ಮೊಮ್ಮಗನಿಗೆ ‘ಅಮ್ಮ’ ಬಂದಿದೆ, ಅದಕ್ಕೆ ಬೇವಿನಸೊಪ್ಪು ಬೇಕೆಂದೂ, ಕೆಲಸಕ್ಕೆ ಬರುವುದಿಲ್ಲವೆಂದೂ ಹೇಳಿದರು. ಗೌರಮ್ಮನೊಂದಿಗೆ ಮಾತಾಡುತ್ತಾ, ಇನ್ನೂ ಜನರ ನಡುವೆ ‘ಚಿಕನ್ ಪಾಕ್ಸ್’ನ ಬಗ್ಗೆ ಇರುವ ಅರಿವಿನ ಕೊರತೆ, ಇನ್ನೂ ಇರುವ ಮೂಡನಂಬಿಕೆಗಳ ಕುರಿತು ಕಾವ್ಯಳಿಗೆ ಕಳವಳವೆನ್ನಿಸಿತು. ಹಳ್ಳಿಯ ಶಾಲೆಗೆ ಹೋಗಿ ಅಲ್ಲಿನ ಮಕ್ಕಳಿಗೆ, ಅವರ ಪೋಷಕರಿಗೆ ಇದರ ಬಗ್ಗೆ ಅರಿವು ಮೂಡಿಸುವ ಯೋಜನೆಯನ್ನು ಮನಸಲ್ಲೇ ತಯಾರಿಸಿಕೊಂಡು, ಸಧ್ಯಕ್ಕೆ ಗೌರಮ್ಮನಿಗೆ ಒಂದಷ್ಟು ತಿಳಿಹೇಳುವ ಇರಾದೆಯಿಂದ ಅಂಗಳಕ್ಕೆ ಇಳಿದಳು ಕಾವ್ಯ.
(ಹಿಂದಿನ ಕಂತು: ಬರ ನೀಗುವ ಕೆರೆಗೇಕೆ ಬರೆ)
ಕ್ಷಮಾ ಸೂಕ್ಷ್ಮಾಣುಜೀವಿ ವಿಜ್ಞಾನದಲ್ಲಿ ಎಂ.ಎಸ್.ಸಿ ಪದವೀಧರೆ. ವಿಜ್ಞಾನ ಶಿಕ್ಷಕಿ. ವಿಜ್ಞಾನ ಲೇಖನಗಳ ಲೇಖಕಿ ಮತ್ತು ಅನುವಾದಕಿ. ರಿಸರ್ಚ್ ಮ್ಯಾಟರ್ಸ್ ನಲ್ಲಿ ವಿಜ್ಞಾನ ಲೇಖನಗಳ ಕನ್ನಡ ವಿಭಾಗದಲ್ಲಿ ಸಂಪಾದಕಿಯೂ ಆಗಿರುವ ಇವರು ಗಾಯಕಿಯೂ, ಕಂಠದಾನ ಕಲಾವಿದೆಯೂ ಹೌದು.

