Advertisement
ಎರಡು ಮನೆಗಳ ನಡುವೆ…: ಎಚ್. ಗೋಪಾಲಕೃಷ್ಣ ಸರಣಿ

ಎರಡು ಮನೆಗಳ ನಡುವೆ…: ಎಚ್. ಗೋಪಾಲಕೃಷ್ಣ ಸರಣಿ

ಗೋಪಣ್ಣ ಮಾರನೇ ದಿವಸ ಫೋನಿನ ಮಾತುಕತೆ ಮುಂದುವರೆಸಲು ರೆಡಿ ಇರಲಿಲ್ಲ. ಅದರಿಂದ ಅವನು ನನ್ನ ಕಡೆ ಒಂದು ನೋಟ ಬಿಟ್ಟ ಅಂದರೆ ದೃಷ್ಟಿ ಹರಿಸಿದ. ಅದರಲ್ಲಿ ದೈನ್ಯತೆ ಇತ್ತು. ಅದರಲ್ಲಿ ಒಂದು ರೀತಿಯ ಕಮಾಂಡಿಂಗ್ ಸಹ ಇತ್ತು. ಎರಡೂ ಎರಡು ವಿಭಿನ್ನ ದೃಷ್ಟಿಯವು ಅದು ಹೇಗೆ ನಿಮಗೆ ಒಂದೇ ನೋಟದಲ್ಲಿ ಎರಡೂ ಕಂಡವು ಅಂತ ನೀವು ವಿಮರ್ಶಕರ ಹಾಗೆ ಕೇಳುತ್ತೀರಿ ಎಂದು ನನಗೆ ಗೊತ್ತು. ಸರ ಕೆಲವು ಹಿಡಿತಕ್ಕೆ ಸಿಗಲ್ಲರಿ, ಒಂದೇ ನೋಟದಲ್ಲಿ ದೈನ್ಯತೆ ಮತ್ತು ಕಮಾಂಡಿಂಗ್ ಕಾಣುವುದು ಮೃದು ಹೃದಯದವರಿಗೆ ಮಾತ್ರ ಸಾಧ್ಯ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೮೧ನೇ ಬರಹ ನಿಮ್ಮ ಓದಿಗೆ

ಹಿಂದಿನ ಎಪಿಸೋಡಿಗೆ ಅಂತ್ಯ ಹೀಗೆ ಮಾಡಿದ್ದೆ;
………” ಈಗ ಅವರು ಇನ್ನೊಂದು ಮನೆಗೆ ಹೋಗಿದ್ದಾರೆ…..” ಅಂದ. ಇನ್ನೊಂದು ಮನೆ ಅಂದರೇನು? ಅವರೋಕಡು ಬಡವರು, ಕಡು ಬಡವ ಸಾಹಿತಿಗಳು… ಎಷ್ಟು ಮನೆ ಇಟ್ಟುಕೊಳ್ಳಲು ಸಾಧ್ಯ……? ಈ ದಾಟಿಯಲ್ಲಿ ನನ್ನ ಮನಸ್ಸು ಓಡುತ್ತಿದೆ. ಗೋಪಣ್ಣ ವಿವರಿಸಲು ಬಾಯಿ ತೆರೆದ…
ಓದುಗ ಮಹಾಶಯಾ ಸಂಬಂಧವಿಲ್ಲದೆ ಯಾವ್ಯಾವುದೋ ಸಂದಿಯಲ್ಲಿ ಕತೆ ನಮ್ಮ ಕನ್ನಡ ಧಾರಾವಾಹಿ ಟಿವಿ ಸೀರಿಯlffಗಳ ಹಾಗೆ ಓಡುತ್ತಿದೆ ಅಂತ ನಿಮ್ಮ ತಲೆಯಲ್ಲಿ ಒಂದು ಅಪ್ಪಟ ನ್ಯೂ ಥಿಂಕಿಂಗ್ ಹುಟ್ಟಿದೆ ಅಂತ ಗೊತ್ತು.. ಕೊಂಚ ತಡೆದುಕೊಳ್ಳಿ. ಗೋಪಣ್ಣನ ಮೂಲಕ ನಿಮಗೆ ಒಂದು ದೊಡ್ಡ ಗುಟ್ಟು ಬಿಟ್ಟುಕೊಡುತ್ತೇನೆ. ತಲೆಯ ತುಂಬಾ ಈ ಗುಟ್ಟಿನ ಸಂಗತಿಗಳು ಸೇರಿಕೊಂಡು ಸಿಕ್ಕು ಸಿಕ್ಕು ಮತ್ತು ಗೋಜಲಾಗಿವೆ. ಸಿಕ್ಕು ಬಿಡಿಸಿ ಮುಂದಿನದನ್ನು ತಮ್ಮ ಹರವಲು ಕೊಂಚ ಸಮಯ ಕೊಡಿ ಮೇಡಂಮೋರೆ…. ತಲೆಯಲ್ಲಿನ ಗೋಜಲು ಗೋಜಲು ಕಡಿಮೆಯಾಗಿ ಬಗ್ಗಡ ತುಂಬಿದ ಕೆರೆ ತಿಳಿಯಾಗಿ ನಮ್ಮ ನಿಮ್ಮ ಮುಖ ಕಾಣುವ ಹಾಗಾಗಲು  ಕಾಯೋಣ..ಕಾಯೋದರಲ್ಲಿ ಇರೋ ಸುಖ ಅದೆಷ್ಟು ಚೆಂದ ಸರ…

ಮುಂದುವರೆಯುವುದು
ಈಗ ಮುಂದಕ್ಕೆ ಕುಂಟುತ್ತಾ ಹೋಗಲೇ ಓಡಿ ಹೋಗಲೇ.. ಗೋಪಣ್ಣ ಫೋನಾಯಿಸಿ ಫೋನಾಯಿಸಿ ಇರೋ ಕಾಯಿನ್ ಎಲ್ಲಾ ಉಡಾಯಿಸಿ ಬಿಟ್ಟ ತಾನೇ?, “ಹೋಗಲಿ ಬಿಡಿ, ನಾಳೆ ಇನ್ನಷ್ಟು ಕಾಯಿನ್ಸ್ ತರ್ತೀನಿ, ನಾಳೆ ಈ ಕಾಯಕ ಮುಂದುವರೆಸೋಣ. ವೀಕ್ಲಿ ಮ್ಯಾಗಜೀನ್‌ಗಳಲ್ಲಿ ಕತೆಯನ್ನು ಒಂದು ರೋಚಕ ಘಟ್ಟಕ್ಕೆ ತಂದು ಮುಂದಿನ ಸಂಚಿಕೆ ನೋಡಿ… ಅಂತ ಬರಿತಾರಲ್ಲ… ಹಾಗೆ ಮಾಡೋಣ…” ಅಂದೆ. ಬಹುಶಃ ಅವತ್ತು ನಾನು ಗೋಪಣ್ಣನಿಗೆ ಹೇಳಿದ ಈ ಮಾತು ಯಾರದ್ದೋ ಚಿಕ್ಕ ಹುಡುಗನ ಕಿವಿಗೆ ಬಿದ್ದಿರಬೇಕು. ಅವನು ನಂತರ ಬೆಳೆದು ದೊಡ್ಡವನಾಗಿ ಎಸ್ಸೆಲ್ಸಿ, ಪಿಯುಸಿ ಡಿಗ್ರೀ ಫೇಲ್ ಆಗಿ ಟಿವಿ ಸೀರಿಯಲ್ ಸೇರಿ ಡೈರೆಕ್ಟರ್ ಅಂತ ಆಗಿರಬೇಕು. ಇದು ಯಾಕೆ ಹೀಗೆ ಅನ್ನಿಸುತ್ತಾ ಇದೆ ಅಂದರೆ ಈಗ ಅದಕ್ಕೇ ಬಂದೆ. ಈಗಿನ ಟಿವಿ ಸೀರಿಯಲ್ ನೋಡಿ, ಅರ್ಧಗಂಟೆ ಎಪಿಸೋಡ್ ಮುಗಿತಿದ್ದ ಹಾಗೇ ಮುಂದಿನ ಸಂಚಿಕೆಯಲ್ಲಿ ಅಂತ ಒಂದೋ ಅರ್ಧ ನಿಮಿಷದ್ದೋ ಬಿಟ್ ತೋರಿಸ್ತಾರೆ ತಾನೇ? ಇದನ್ನು ಅಂದು ನಾನೇ ಹುಟ್ಟು ಹಾಕಿದ್ದು, ಅದರ ಪ್ರತಿಫಲವನ್ನು ಈ ಹುಡುಗರು ಅನುಭವಿಸುತ್ತಾ ಇದ್ದಾರೆ ಎನ್ನುವ ಖುಷಿ ನನ್ನದು. ಬೇಜಾರಿಲ್ಲವೇ ಅಂದರೆ ಇದೆ ಮತ್ತು ಇಲ್ಲ. ಇದೆ ಯಾಕೆ ಅಂದರೆ ನನಗೆ ಇದರ ಕ್ರೆಡಿಟ್ ಯಾರೂ ಕೊಡುತ್ತಿಲ್ಲವೇ ಅಂತ. ಇಲ್ಲ ಯಾಕೆ ಅಂದರೆ ನಾನು ಹುಟ್ಟುಹಾಕಿದ ಒಂದು ಪದ ಇಂದು ಜಗತ್ತನ್ನು ವ್ಯಾಪಿಸಿದೆ, ಅದರ ಸಂತೋಷದ ಮುಂದೆ ಮಿಕ್ಕಿದ್ದು ಧೂಳಿಗೆ ಸಮಾನ ಎನ್ನುವ ನನ್ನ ಸೈದ್ಧಾಂತಿಕ ನಿಲುವು!

ಗೋಪಣ್ಣ ಮಾರನೇ ದಿವಸ ಫೋನಿನ ಮಾತುಕತೆ ಮುಂದುವರೆಸಲು ರೆಡಿ ಇರಲಿಲ್ಲ. ಅದರಿಂದ ಅವನು ನನ್ನ ಕಡೆ ಒಂದು ನೋಟ ಬಿಟ್ಟ ಅಂದರೆ ದೃಷ್ಟಿ ಹರಿಸಿದ. ಅದರಲ್ಲಿ ದೈನ್ಯತೆ ಇತ್ತು. ಅದರಲ್ಲಿ ಒಂದು ರೀತಿಯ ಕಮಾಂಡಿಂಗ್ ಸಹ ಇತ್ತು. ಎರಡೂ ಎರಡು ವಿಭಿನ್ನ ದೃಷ್ಟಿಯವು ಅದು ಹೇಗೆ ನಿಮಗೆ ಒಂದೇ ನೋಟದಲ್ಲಿ ಎರಡೂ ಕಂಡವು ಅಂತ ನೀವು ವಿಮರ್ಶಕರ ಹಾಗೆ ಕೇಳುತ್ತೀರಿ ಎಂದು ನನಗೆ ಗೊತ್ತು. ಸರ ಕೆಲವು ಹಿಡಿತಕ್ಕೆ ಸಿಗಲ್ಲರಿ, ಒಂದೇ ನೋಟದಲ್ಲಿ ದೈನ್ಯತೆ ಮತ್ತು ಕಮಾಂಡಿಂಗ್ ಕಾಣುವುದು ಮೃದು ಹೃದಯದವರಿಗೆ ಮಾತ್ರ ಸಾಧ್ಯ. ಅಂದರೆ ನಾನು ಮೃದು ಹೃದಯದ ಆಳು ಮನುಸ, ನಿಮ್ಮ ಹಾಗೆಯೇ…! ದೈನ್ಯದಿಂದ ನನ್ನ ಕಡೆ ನೋಟ ಹರಿಸಿದ ಅಂದೆ.

“ಗೋಪಣ್ಣ ಪ್ಲೀಸ್ ಹಾಗೆ ನೋಡಬೇಡಿ ಕರುಳು ಕಿವುಚತ್ತ…” ಅಂದೆ. ಅಂವ ಕೊಂಚ ಗೆಲುವಾದ.

“ಟೆನ್ ರೂಪಿಸ್ ಚೇಂಜ್ ಕೊಡಿ” ಅಂದ. ಹತ್ತು ರೂಪಾಯಿಗೆ ಚಿಲ್ರೆ ಕೇಳ್ತಾ ಇದಾನೆ ಅಂದುಕೊಂಡೆ.

“ನೋ ಚೇಂಜ್…” ಅಂದೆ.

“ಟೆನ್ ರೂಪಿಸ್ ಕೊಡ್ರಿ…” ಅಂತ ಮುಖ ಸಿಂಡರಿಸಿದ. ಜೇಬಿನಿಂದ ಹತ್ತು ತೆಗೆದು ಕೊಟ್ಟೆ.

“ಒಂದು ನಿಮಿಷ ಬರ್ತೀನಿ….” ಅಂತ ಓಡಿದ. ಅವನು ಹಾಗೆ ಓಡಿದ ಕೂಡಲೇ ಅವನ ಕುರಿತ ಮತ್ತೊಂದು ನೆನಪು ಧುತ್ತೆಂದು ಬರಬೇಕೇ? ಈಗ ಅದನ್ನು ವಿವರಿಸಿಬಿಡುತ್ತೇನೆ.

ಹಿಂದೆ ಯಾವುದೋ ಭಾಷಣ ಮಾಡಲು ದುಂಬಾಲು ಬಿದ್ದಿದ್ದ. ಅವನನ್ನು ಭಾಷಣಕ್ಕೆ ಕರೆದಿದ್ದೆ. “ನನ್ನ ರೇಟು ಇನ್ನೂರು ರೂಪಾಯಿ. ಅಷ್ಟು ಕೊಡಬೇಕು….” ಅಂದಿದ್ದ. ಭಾಷಣದ ದಿವಸ ಅವನ ಕಣ್ಣು ನನ್ನ ಮೇಲೇ ಇತ್ತು. ಅವನ ಭಾಷಣ ಅಂದಕೂಡಲೇ ಟೂ ಹಂಡ್ರೆಡ್ ಅಂತ ಹಿಂದೆ ಬಿದ್ದ. ಇನ್ನೂರು ಕೊಟ್ಟಕೂಡಲೇ ಅಲ್ಲಿಂದ ಅಂತರ್ಧಾನ ಆಗಿಬಿಟ್ಟಿದ್ದ, ವಂದನಾರ್ಪಣೆಗೂ ಕಾಯದೇ! ಗಡಂಗಿಗೆ ಹೋಗಿರಬೇಕು ಅಂತ ಅವನ ಆಪ್ತರು ಆಗ ಹೇಳಿದ್ದರು. ಗಡಂಗಿಗೆ ಅಂದರೆ ಗಂಟಲು ತೇವ ಮಾಡಿಕೊಳ್ಳಲು ಪಡಖಾನೆಗೆ ಹೋಗುತ್ತಾರಲ್ಲಾ ಅದು. ಅಂದರೆ ಪಡಖಾನೆ ಯಾ ಗಡಂಗು ಅಂದರೆ ಹೆಂಡದ ಅಂಗಡಿ ಅಂತ ಅರ್ಥ. ಇವು ಆ ಕಾಲದ ಪದಗಳು ಸರ, ಈಗ ಈ ಪದಗಳನ್ನು ಯಾರೂ ಬಳಸುವುದನ್ನು ನಾನು ಈಚಿನ ಇಪ್ಪತ್ತು ಮೂವತ್ತು ವರ್ಷದಲ್ಲಿ ಕಂಡಿಲ್ಲ…! ಈಗಲೂ ಟೆನ್ ರೂಪಿಸ್ ತಗೊಂಡು ಅಂತರ್ಧಾನ ಆಗಿ ಬಿಡ್ತಾನೇನೋ ಎನ್ನುವ ಆತಂಕ ಕಾಡಿತಾ? ಹತ್ತೇ ನಿಮಿಷದಲ್ಲಿ ವಾಪಸ್ ಬಂದ. ಬೊಗಸೆಯಲ್ಲಿ ಐವತ್ತು ಪೈಸೆ ನಾಣ್ಯಗಳು!

ಮತ್ತೆ ಅವನ ಚೀಲ ತೆಗೆದ. ಪುಟ್ಟ ಪುಸ್ತಕದ ನಡುವೆ ಕೈಯಾಡಿಸಿ ಒಂದು ನಂಬರು ಹುಡುಕಿದ.

ಫೋನಿನ ಬೂತ್ ಮುಂದೆ ನಿಂತ. ಯಾವುದೋ ನಂಬರು ತಿರುಗಿಸಿದ. ಕಾಸೂ ಹಾಕಿದ. ಅದು ಅಂದರೆ ಫೋನಿನ ಪೆಟ್ಟಿಗೆ ಕಾಸು ನುಂಗಿತು. ಈ ಪ್ರಸಂಗ ಐದಾರು ಸಲ ನಡೆದ ನಂತರ ಇವನಿಗೆ ಬೇಕಾದ ಮನುಷ್ಯ ಸಿಕ್ಕಿದರು ಎಂದು ತೋರುತ್ತೆ. ಬಲಗೈ ಹೆಬ್ಬೆರಳು ಎತ್ತಿ ಹಿಡಿದ. ಅಲ್ಲಿ ಒಂದೆರೆಡು ನಿಮಿಷದ ಮಾತಿನ ನಂತರ ಹತ್ತಿರ ಬಂದ.
“ಅವರೂ ಮನೀಲಿಲ್ಲ..”. ಅಂದ!

“ಸರಿ ಬಿಡಿ.. ನಾಳೆ ನೋಡೋಣ…..” ಅಂದೆ .

“ಅವರು ಮನೇಲಿ ಇಲ್ಲವಲ್ಲ” ಅಂದೆ ನಾನು…
“ಸರಿ ಬಿಡು ನಾಳೆ ನೋಡೋಣ. ಹಾಗೆ ಮಾಡ್ಬೋದಲ್ಲ…” ಅಂತ ಸಮಾಧಾನಕ್ಕೆ ಮಾತಾಡ್ತಾ ಇದ್ದೆ.
ಆದ್ರೆ ಗೋಪಣ್ಣ ಒಪ್ಪೋ ಜಾತಿಯಲ್ಲ!

“ಇಲ್ಲ ಸಾರ್, ಈಗಲೇ ಮಾಡ್ಬೇಕು!” ಅಂತ ಹಠ,
ನಾನು — “ಅಯ್ಯೋ ಬಿಡಿ ಸಾರ್…” ಅಂತ ಹೋಗಲು ಹೆಜ್ಜೆ ಇಟ್ಟೆ.

“ಇರಿ ಸಾರ್… ಅವರು ಇನ್ನೊಂದು ಮನ್ಲಿರ್ತಾರೆ. ಅಲ್ಲಿಗೆ ಮಾಡ್ತೀನಿ!”
ನನ್ನ ತಲೆ ಗಿರಗುಟ್ತು —

“ಇನ್ನೊಂದು ಮನೆನಾ? ಏನ್ ಮಾರಾಯ! ನಿಮ್ಮ ಗುರುತು ಇ ರೋವ್ರಿಗೆಲ್ಲ ಒಬ್ಬೊಬ್ಬರಿಗೆ ಗೆಸ್ಟ್ ಮನೆ ಇರುತ್ತಾ? ಎಲ್ಲರು ಸಾವ್ಕಾರ್ರಾ?” ಅಂತ ಕೇಳ್ಬಿಟ್ಟೆ.

ಅವ್ನು ತುಟಿ ಅಂಚಿನಲ್ಲಿ ಕಿಸುಕಿಸು ನಗ್ತಾ… ನಡ್ಕೊಂಡು ಹೋಗ್ತಾ ಹೇಳ್ತಾನೆ —
“ಸಾರ್ ಇವರಿಬ್ಬರಿಗೂ ಇಬ್ಬರೆಂಡ್ತಿಯರು!”

ನಾನು — “ಏನ್?”

“ಹೌದು ಸಾರ್… ಮೊದಲ ಮನೇಲಿ ಅರ್ಧ ದಿನ,
ಎರಡನೇ ಮನೇಲಿ ಅರ್ಧ ದಿನ! ಹೀಗೆ ಅವರ ಟೈಮ್ ಮ್ಯಾನೇಜ್ಮೆಂಟ್….. ಅಂದ.
ಇವ್ರೂ ಅದೇ ಕೇಸು ಸಾರ್…
ಮೊದಲೆ ಮನೇಲಿ ಅರ್ಧ ದಿನ, ಎರಡನೇ ಮನೇಲಿ ಅರ್ಧ ದಿನ!”
ನಾನು ಇನ್ನೂ ಶಾಕ್‌ನಲ್ಲೇ ಇರುವಾಗ, ಅವ್ನು ಮುಂದುವರಿಸಿದ —
“ಇವರಿಗೆ ನಾನು ಫೋನ್ ಮಾಡ್ದ್ರೆ, ಸಾರ್, ಎರಡನೇ ಮನೆ ಮುಗಿಸ್ಕೊಂಡು ಮತ್ತೆ ಮೊದಲೆ ಮನೇಗೆ ಹೋಗ್ತಾ ಇದ್ದೀನಿ” ಅಂತ ರಿಪ್ಲೈ ಮಾಡಿದರು.

ನನಗೆ ತಲೆಕೆಳಗಾಗಿ ಹೋಯ್ತು —
“ಅಯ್ಯೋ ಏನಪ್ಪಾ ಇದು? ಕನ್ನಡ ಬರೆಯೋರು ತುಂಬಾ ಬಡವರು ಅಂತ ಕೇಳಿದ್ದೀವಿ…. ಇಲ್ಲೋ… ನೋಡ್ರಿ — ಎಲ್ಲರೂ ಡಬಲ್ ಲೈಫ್! ಸಾಹುಕಾರರ ಥರ!”

ಕೊನೆಯಲ್ಲಿ ಅವ್ನು ಹಲ್ಲು ಕಿಸಿದು ಕೊಂಡು ಒಂದು ಫಿಲಾಸಫಿ ಹೊಡೆದ —
“ಸಾರ್… ಮನುಷ್ಯ ಬೆಳಿತಾ ಬೆಳಿತಾ, ಎಲ್ಲವೂ ಡಬಲ್ ಡಬಲ್ ಆಗ್ತಾ ಹೋಗುತ್ತೆ… ಗೊತ್ತಾ?” ಇಷ್ಟು ಹೊತ್ತಿಗೆ ನನಗೆ ಒಂದು ಕ್ಲಿಯರ್ ಆಯ್ತು — ಏನೇ ಆಗ್ಲಿ, ಇವ್ನು ತನ್ನ ಪಟ್ಟು ಬಿಡೋವನೇ ಅಲ್ಲ!

ಹೇಗಾದ್ರೂ ಇವತ್ತು ರಾತ್ರಿ ನಾನು ಸಿಕ್ಕಿದ್ದೇನೆ — ಅವನಿಗೊಂದು ಬಕರಾ!  ಬಕರಾನ ಬಿಟ್ಟೇ ತಪ್ಪಿಸ್ಕೋತಾನೆ…
“ಇವತ್ತೇ ಎಲ್ಲ ಮುಗಿಸ್ಬೇಕು!” ಅಂತ ಫುಲ್ ಪ್ಲಾನ್ ಇಟ್ಟುಕೊಂಡಿದ್ದಾನೆ ಅನ್ನೋದು ನನಗೆ ಸ್ಪಷ್ಟ ಆಯ್ತು
ನಾನು ಒಳಗೆ ಒಳಗೆ —
“ಸರಹಾಗಿದ್ದರೆ, ನಾಳೆ ಬರೋದ್ ತಪ್ಪೋದಿಲ್ಲ. ಅದೇನಾದ್ರೂ ಇವತ್ತೇ ಒಂದು ಮುಗಿಸ್ಕೊಳ್ಲಿ!” ಅಂತ ನನ್ನದೇ ಪ್ಲಾನ್ ಮಾಡ್ಕೊಂಡೆ. ಅವನು ಹಣ ಹಾಕೋದು, ನೋಡೋದು ಮಾಡ್ತಾ ಇದ್ದ… ನಾನು ಅಲ್ಲಿ ನಿಂತು “ಸಾಕ್ಷಿ” ತರ ನೋಡ್ತಾ ಇದ್ದೆ. ಸಾಕ್ಷಿ ಅಂತ ಒಂದು ಸಾಹಿತ್ಯ ಪತ್ರಿಕೆ ಬರ್ತಿತ್ತು ನೆನಪಿದೆ ತಾನೇ? ಅಡಿಗರ ಸಂಪಾದನೆ ಅದು. ಸಾಕ್ಷಿ ಅನ್ನುವ ಹೆಸರು ಕೇಳಿದರೆ ಸಾಕು ನನಗೆ ಅಡಿಗರು, ಒಂದು ಜನಾಂಗದ ಕಣ್ಣು ತೆರೆಸಿದ ಕವಿ… ಮೊದಲಾದವೆಲ್ಲಾ ನೆನಪಿಗೆ ಬರುತ್ತದೆ.

ಅಷ್ಟರಲ್ಲಿ ಮೂರನೇ ಸೀನ್ ಶುರು ಆಯ್ತು —ಗೋಪಣ್ಣನಿಗೆ ಫೋನ್ ಕನೆಕ್ಷನ್ ಸಿಕ್ಕಿತ್ತು. ಅಲ್ಲಿ ಯಾರೋ ಹೆಂಗಸರು ಮಾತಾಡ್ತಾ ಇದ್ದರು… ನಾನು ಸ್ವಲ್ಪ ದೂರ ನಿಂತಿದ್ದರಿಂದ ಧ್ವನಿ ಅಡ್ಡಾಡುತ್ತಾ, ತುಂಡು ತುಂಡಾಗಿ ಕೇಳಿಸ್ತಾ ಇತ್ತು.

“ಅವರು ಇಲ್ಲ ಸರ್… ಈಗ ತಾನೆ ಹೋದ್ರಲ್ಲ… ಇವಾಗ ಅಲ್ಲಿಗೆ ಹೋಗಿದ್ದಾರೆ…” ಆ ಕಡೆ ಧ್ವನಿ
“ಅಲ್ಲಿಗೆ ಅಂದರೆ ಎಲ್ಲಿಗೆ?” ಇದು ಗೋಪಣ್ಣ
“ಇನ್ನೊಬ್ರು ಇದ್ದಾರಲ್ಲ… ಅವ್ರ ಮಿಸ್ಸಸ್…. ಅಲ್ಲಿಗೆ…”
ನನ್ನ ಕಿವಿ ಈಗ ಚುರುಕಾಯಿತು.

“ಇಲ್ಲ… ಅಲ್ಲೇ ಬೆಳಗ್ಗಿನಿಂದ ಇದ್ದರಲ್ಲ… ಇವ್ರು, ನಿಮ್ಮ ಮನೆಯಿಂದ ಎಲ್ಲಿಗೆ ಹೋದ್ರು ಮತ್ತೆ?”
“ಇವಾಗ ಅವ್ರಿಗೆ ರಾತ್ರಿ ಪಾರ್ಟಿ ಇದೆಯಂತೆ… ಪಾರ್ಟಿ ಅಂತ ಹೇಳೋಗಿದ್ದಾರೆ… ರಾತ್ರಿ ಮತ್ತೆ ಬರ್ತಾರೆ…”
ನಾನು — ಅಯ್ಯೋ ರಾಮಾ! ಅಂತ ಸ್ವಗತ ಮಾಡಿದೆ.
“ರಾತ್ರಿ ಯಾವಾಗ ಬರ್ತಾರೆ?” ಇದು ಗೋಪಣ್ಣ.
“ಗೊತ್ತಿಲ್ಲ ಸರ್… ಹನ್ನೆರಡು ಆಗ್ಬೋದು… ಒಂದು ಆಗ್ಬೋದು…” ಇದು ಆ ಕಡೆ ಸೌಂಡು!

ಆಮೇಲೆ ಅವ್ರು ಅಂದರೆ ಅತ್ತ ಕಡೆ ಸೌಂಡು ಕೇಳಿದ್ರು
“ಯಾರು ಮಾತಾಡ್ತಿರೋದು?”
“ನಾನಮ್ಮ… ಗೋಪಣ್ಣ…”
ಅಂತ ಮುಂದುವರಿದು —
“ಒಂದು ಕಾರ್ಯಕ್ರಮ ಮಾಡಿಸಬೇಕು ಅಂತ ಯೋಚನೆ ಇದೆ…” ಇದು ಗೋಪಣ್ಣ
“ನಾಳೆ ಸಾಯಂಕಾಲ ಬರ್ತೀರಾ? ಫೋನ್ ಮಾಡಿ ಬನ್ನಿ…”
ಕೊನೆಯಲ್ಲಿ ಕ್ಲೈಮ್ಯಾಕ್ಸ್:
“ಗೋಪಣ್ಣ ಸರ್… ನನಗೆ ಲೇಟಾಯಿತು… ಒಂಬತ್ತು ಆಗ್ತಾ ಇದೆ… ಮನೆಗೆ ಹೋಗ್ಬೇಕು…” ಇದು ನಾನು..

ಗೋಪಣ್ಣ “ಒಂದು ಕಾಫಿ ಕುಡಿದು ಹೋಗೋಣ…” ಅಂತ ಹೋಟೆಲಿಗೆ ಎಳೆದುಕೊಂಡು ಹೋದ! ಒಂದು ಬೈ ಟೂ ಬಿಸಿ ಬಿಸಿ ಕಾಫಿ ಆಯ್ತು, ಸಮಯ — ಒಂಬತ್ತು,  ಒಂಬತ್ತೂವರೆ. ಅಲ್ಲಿಂದ ಬಸ್ ಸ್ಟಾಪ್… ನಾನು ನಿಂತ್ಕೊಂಡೆ… ಬಸ್ ಬಂತು… ನಾನು ಹತ್ತಿದೆ… ಆದ್ರೆ ತಲೆಯೊಳಗೆ ಇನ್ನೂ ಅದೇ ರೀಲ್ ಓಡ್ತಾ ಇತ್ತು.

“ನಾಳೆ ಗೋಪಣ್ಣ ಜತೆಗೆ ಹೋಗ್ಬೇಕಾ? ಬೇಡವಾ?” ಯೋಚನೆ ಯೋಚನೆ ಮಾಡ್ತಾ ಮನೆಗೆ ಬಂದೆ… ಅದೊಂದು ದೊಡ್ಡ ಕತೆ ಆಯ್ತು!

ಹಿಂದಿನ ದಿವಸ ಗೋಪಣ್ಣನ ಜತೆ ನನ್ನ ಬಿಟ್ಟು ಹೋದ. ನನ್ನ  ಮಿತ್ರರಿಗೆ ಫೋನ್ ಮಾಡಿದೆ. ಹಿಂದಿನ ರಾತ್ರಿ  ನಡೆದದ್ದನ್ನೆಲ್ಲ ಎಳೆ ಎಳೆಯಾಗಿ ಬಿಚ್ಚಿಟ್ಟೆ… “ಇದಾಗಿದೆ… ಹೀಗಾಗಿದೆ…” ಅಂತ ಎಲ್ಲ ವಿವರಿಸಿದೆ. ಅವರು ಕೇಳ್ತಾ ಇದ್ದರು… ಆಮೇಲೆ ಒಮ್ಮೆಲೆ ಮೂಡ್ ಚೇಂಜ್! ಯೋಚನೆ ಮಾಡಿದರು… ಚಿಂತನೆ ನಡೆಸಿದರು…
ಮಂಥನ ನಡೆಸಿದರು… ಕೊನೆಗೆ  ಗಂಭೀರವಾಗಿ ಹೇಳಿದರು.

“ಆ ಮನುಷ್ಯ ಆಡ್ತಾ ಇರುವ ರೀತಿ ನೋಡಿದ್ರೆ, ನಮ್ಮ ತಲೆ ಮೇಲೆ ಎಲ್ಲ ಹೊರೆ. ನಾವೆಲ್ಲ ಫ್ಯಾಕ್ಟ್ರಿಯವರಲ್ಲ್ವಾ… ಸೊಂಪಾಗಿದ್ದಾರೆ ಅಂತ ಅಂದ್ಕೊಂಡಿರ್ತಾರೆ….”

“ಹಿಂದೆ ಇಂತಹವರ್ನ ತಲೆ ಮೇಲೆ ಹಾಕ್ಕೊಳ್ಳೋದು ಬೇಡ… ನೀನು ಐಸೋಲೇಟ್ ಆಗು… ಅವನಿಂದ ದೂರ ಇರು! ನಮ್ಮ ಜಾಗ್ರತಿಯಲ್ಲಿ ನಾವಿರೋದು ವಾಸಿ!…”

ಗೋಪಣ್ಣನ ಲಿಂಕ್ ಅವತ್ತು ಡಿಸ್‌ಕನೆಕ್ಟ್ ಆಯ್ತಾ? ಆಮೇಲೆ ಎಷ್ಟೋ ವರ್ಷ ಆದ ಮೇಲೆ ಮತ್ತೆ ಸಂಪರ್ಕ ಬೆಳೀತು. ಅದು ಬೇರೆ ಕತೆ. ಮುಂದೆ ಯಾವಾಗಲಾದರೂ ನೆನಪಾದರೆ ಹೇಳುತ್ತೇನೆ…. ಆದ್ರೆ ಕಥೆ ಗೋಪಣ್ಣನ ಕತೆ ಅಲ್ಲಿಗೆ ಮುಗಿಯಲಿಲ್ಲ.

ಅವನ “ವಾರದ ಸಾಹಿತ್ಯೋತ್ಸವ” ಸಾಹಿತ್ಯಲೋಕದ ಪ್ರವಾಸ ಹೇಗಿರತ್ತೆ ಅನ್ನೋ ಕುತೂಹಲ ದಿನೇ ದಿನೇ ಜಾಸ್ತಿ ಆಗ್ತಾ ಹೋಯ್ತು! ಒಂದು ದಿನ ಪೇಪರ್‌ನ ಒಂದು ಮೂಲೆಯಲ್ಲಿ ನೋಡಿದೆ — “ಸಾಹಿತಿ ಗೋಪಣ್ಣ ವಿಚಾರ ಸಂಕಿರಣ” ನಾವಿಬ್ಬರೂ ಯೋಚಿಸಿದಂತೆ ವಾರಪೂರ್ತಿ ಅಲ್ಲ… ಒಂದೇ ದಿನಕ್ಕೆ ಸೀಮಿತ! ಆದ್ರೆ ಅದ್ರಲ್ಲೇ ಪೂರ್ತಿ ಮೆರಗು — ಇಬ್ಬರು ಹಿರಿಯ ಸಾಹಿತಿಗಳು; ಒಬ್ಬರು ಉದ್ಘಾಟನೆಗೆ, ಇನ್ನೊಬ್ಬರು ಸಮಾರೋಪಕ್ಕೆ ಅಕಾಡೆಮಿ ಅಧ್ಯಕ್ಷರು, ಕೆಲ ಸಚಿವರು, ಎಂಎಲ್ಏಗಳು… ಇವರೆಲ್ಲಾ ವೇದಿಕೆ ಅಲಂಕರಿಸುವ ಗಣ್ಯರು, ಅಂದರೆ ಫುಲ್ ಫಂಕ್ಷನ್! ಊಟ-ತಿಂಡಿ ಎಲ್ಲವೂ ಸ್ಪಾನ್ಸರ್! ಒಟ್ಟಿನಲ್ಲಿ  ಐದು-ಆರು ಗಂಟೆ ಪ್ರೋಗ್ರಾಮ್! ನಾನು ಇದನ್ನೆಲ್ಲ ಕೇಳಿ ನೋಡಿದ ಮೇಲೆ… ನನ್ನೊಳಗೆ ಒಂದು ಲೈಟ್ ಹೊತ್ತಿತು.

ಮೊದಲು ಮೊದಲು ಅನಿಸ್ತಾ ಇತ್ತು — “ಐವತ್ತು ಆಯ್ತು, ಅರವತ್ತು ಆಯ್ತು ಅಂದ್ರೆ ದೊಡ್ಡ ದೊಡ್ಡ ಸಮಾರಂಭಗಳು… ಪುಸ್ತಕ ಬಿಡುಗಡೆ, ಸನ್ಮಾನ.. ಇವೆಲ್ಲಾ ಇರುತ್ತಿತ್ತು ಗೊತ್ತಾ. ಆದ್ರೆ ಈಗ ಗೊತ್ತಾಯ್ತು —ಮೊದಲು ಮೊದಲು ಇವನ್ನು ಅಭಿಮಾನಿಗಳು ಮಾಡ್ತಿದ್ದರು… ನಂತರ? ಅದೇ ಒಂದು ಪರಿಪಾಟಿ! ರೂಟೀನ್ ವರ್ಕ್! ಇನ್ನೂ ಸ್ವಲ್ಪ ಡೀಪ್ ಆಗಿ ನೋಡಿದ್ರೆ — “ಅಭಿಮಾನಿಗಳು” ಅಂದ್ರೆ… ಸಾಹಿತಿಗಳೇ ಹೇಳಿ ಮಾಡಿಸ್ಕೊಳ್ಳೋವರು! ಇದನ್ನೆಲ್ಲ ಅರಿತ್ಮೇಲೆ, ಯಾರಾದ್ರೂ —“ಐವತ್ತು ವರ್ಷ ಸಂಭ್ರಮ ಮಾಡ್ತೀವಿ…” ಅರವತ್ತು ವರ್ಷ ಸಂಭ್ರಮ ಮಾಡ್ತೀವಿ…” ಅಂದ್ರೆ ನನಗೆ ಒಳಗೆ ಒಳಗೆ ನಗೆ ಬರುತ್ತೆ.

“ಎಷ್ಟು ಇನ್ವೆಸ್ಟ್ಮೆಂಟ್ ಮಾಡ್ಕೊಂಡಿದ್ದೀರಪ್ಪಾ!” ಅನ್ನೋದು ನನ್ನ ಒಳ ಮನಸ್ಸು…..!

ಅವರು ಹೊರಗೆ — “ನಮ್ಮ ಅಭಿಮಾನಿಗಳು ಮಾಡ್ತಾರೆ…” ಅಂತ ನಗ್ತಾರೆ… ಆ ನಗುವಿನ ಒಳಗಿನ ಸತ್ಯ ನನಗೆ ಗೊತ್ತು! ಮುಖದ ಮೇಲೆ ಕಾಣೋ ಆ “ಸತ್ಯದ ಗೋಚರತೆ” ನನ್ನ ಕಣ್ಣಿಗೆ ಸ್ಪಷ್ಟ. ಯಾರಾದ್ರೂ “ಐವತ್ತು ಆಯ್ತು… ಅರವತ್ತು ಆಯ್ತು…” ಅಂತ ಹಬ್ಬ ಮಾಡೋಕೆ ಮುಂದಾದ್ರೆ… ನನಗೆ ಒಂದು ವಿಚಿತ್ರ ಹೇಸಿಗೆ! ಇದು ಒಂದು  ಕಡೆ ಇರಲಿ ಇವರೇ.  ಕಥೆಗೆ ಮತ್ತೆ ವಾಪಸ್ ಬರ್ತೀನಿ…

ಪುಸ್ತಕ ಬಿಡುಗಡೆ ಸಮಾರಂಭದ ವಿಷಯಕ್ಕೆ ಬಂದಾಗ ಇಷ್ಟು ದೊಡ್ಡ ಕಥೆ ನಿಮಗೆ ಹೇಳ್ದೆ ಅಲ್ವಾ? ಅದರೊಳಗೆ ಇನ್ನೂ ಹಲವಾರು ಬಿದ್ದುಬಿದ್ದು ನಗೋ ಪ್ರಸಂಗಗಳು ಇವೆ! ಆ ಸಾಲಿನಲ್ಲಿ ಇನ್ನೊಂದು ತಮಾಷೆ ಪ್ರಸಂಗ! ಈಗ ಅದಕ್ಕೆ ಬರಲೇ.

ನನ್ನ ಜೊತೆ ಸ್ವಾಮಿ ಅಂತ ಒಬ್ಬರು ಕೆಲಸ ಮಾಡ್ತಾ ಇದ್ದರು. ಅವರು ನಂಬರ್ ಒನ್ ಕನ್ನಡ ಓರಾಟಗಾರರು —ಯಾರಿಗಾದರೂ ಅರ್ಜಿ ಬರೆದು ಕೊಡುವುದು, ಕನ್ನಡಕ್ಕೆ ಭಾಷಾಂತರ ಬೇಕಾದ್ರೆ ನನ್ನ ಹತ್ರ ಬರುತ್ತಿದ್ದರು. ನಾನು ಕೂಡ ಖುಷಿಯಿಂದ ಮಾಡಿಕೊಡ್ತಾ ಇದ್ದೆ. “ಇದು ನಾನು ಮಾಡಿದ್ದು” ಅಂತ ಯಾರಿಗಾದರೂ ಹೇಳ್ತಿದ್ರಾ? ಅಥವಾ “ನಾನೇ ಮಾಡಿದ್ದು” ಅಂತ ಹೇಳ್ಕೊಳ್ತಿದ್ರಾ? ಈ ರೀತಿ ನನಗೆ ಅನುಮಾನ. ಯಾಕಂದ್ರೆ… ಪ್ರಿಂಟ್ ಆಗಿ ಬಂದ್ಮೇಲೆ ನೋಡಿದ್ರೆ — ಮಹಾಪ್ರಾಣ, ಅಲ್ಪಪ್ರಾಣ ಎಲ್ಲ ಗಜಿಬಿಜಿ! ನಾನು ಕೇಳ್ತಿದ್ದೆ —“ಇದು ಸರಿ ಮಾಡ್ಲಿಲ್ವಾ?”
ಅವರು ಸಿದ್ಧ ಉತ್ತರ: “ಸರ್, ನಾವು ನೋಡಿದ್ರಿ… ಪ್ರೆಸ್‌ನಲ್ಲಿ ಫ್ರೆಷ್ ಹುಡುಗ ಮಿಸ್ ಮಾಡಿಬಿಟ್ಟ!” ಇಂತಹ ಪ್ರಸಂಗ ಮತ್ತೆ ಮತ್ತೆ ರಿಪೀಟ್ ಆದಾಗ, “ಇವರಿಗೆ ಅಲ್ಪಪ್ರಾಣ, ಮಹಾಪ್ರಾಣ ಗೊತ್ತೇ ಇಲ್ಲ! ”ಎನ್ನುವ ಸತ್ಯ ಗೊತ್ತಾಯ್ತು!
ಅದೇ ನನ್ನ ಅಡ್ವಾಂಟೇಜ್ ಆಗ್ಬೇಕಿತ್ತು… ಆದ್ರೆ ನಿಧಾನಕ್ಕೆ ಅದು ನನ್ನ ವೀಕ್‌ನೆಸ್ ಆಗಿ ಬಂತು!

ಒಂದು ದಿನ ಬೆಳಿಗ್ಗೆ… ನಾನು ಆಫೀಸ್‌ಗೆ ಬರುತ್ತಾ ಇದ್ದೀನಿ. ಹಿಂದಿನಿಂದ ಓಡೋ ಶಬ್ದ —
“ಗೋಪಾಲ್! ಗೋಪಾಲ್!” ನಾನು ತಿರುಗಿ ನೋಡಿದೆ.
ಸ್ವಾಮಿ full speed ಬಂದ. ಬಂದು ನಮಸ್ಕಾರ, ಮೊದಲಾದ formalities ಎಲ್ಲ ಮುಗಿಸಿದ… ಜೇಬಿನಿಂದ ಒಂದು ಮಡಚಿದ ಕಾಗದ ತೆಗೆದರು… ಮಡಚಿದ ಹಾಗೆನೇ ನನ್ನ ಜೇಬಿಗೆ ತುರುಕಿದ.

“ಸರ್… ಇದ್ರದ್ದು ಟ್ರಾನ್ಸ್ಲೇಶನ್ ಬೇಕು… ಇಂಗ್ಲೀಷಿಂದ ಕನ್ನಡಕ್ಕೆ!”
ನಾನು ಕೇಳ್ದೆ —”ಯಾವ ಭಾಷೆಯಲ್ಲಿ ಇದೆ ಇದು?”
ಇಂಗ್ಲೀಷಲ್ಲೇ ಇದೆ ಸಾರ್!

“ಸರಿ, ಒಂದು ಗಂಟೆಗೆ ಬನ್ನಿ…” ಅಂತ ಕಳುಹಿಸಿದೆ.
ಸೆಕ್ಷನ್‌ಗೆ ಹೋದ್ಮೇಲೆ ನನಗೆ ಕುತೂಹಲ —
“ಏನ್ ಇಷ್ಟೊಂದು urgent translation?”
ಜೇಬಿನಿಂದ ಕಾಗದ ತೆಗೆದು… ಕುರ್ಚಿಯಲ್ಲಿ ಕೂತು…
ಮಡಚಿದ್ದು ಬಿಚ್ಚಿ ನೋಡ್ತೀನಿ…
ಅದು ನನ್ನ ಜೀವನದ ಮೊದಲನೇ ಶಾಕ್!
Gurusiddeshwara Rice Traders”
Best quality rice, dal, ghee…
home delivery… low price…”
ಅಂತ Englishನಲ್ಲಿ ತಪ್ಪು ತಪ್ಪು ಬರೆದಿದ್ದಾನೆ!
ಅದರ ಕನ್ನಡ version ಬೇಕಂತೆ!
ಮೇಲೆ ನನಗೆ instruction ಕೂಡ —!
ಒಂದು ಪೇಜ್… ಮುಂದೆ-ಹಿಂದೆ print ಮಾಡ್ತೀವಿ. ಅದಕ್ಕೆ ಸರಿಯಾಗಿ ಮಾಡಿ ಕನ್ನಡ ಒಂದುಕಡೆ ಇಂಗ್ಲಿಷ್ ಒಂದುಕಡೆ. ಆಗ ನನಗೆ ಏನಾಯ್ತು ಗೊತ್ತಾ? ಕೋಪ ಎಲ್ಲಿಂದ ಬಂದೋ ಗೊತ್ತಿಲ್ಲ…ನಿಜ ಹೇಳ್ತೀನಿ —ಆ ಕಾಗದ ಓದುತ್ತಾ ಇದ್ದಂತೆ ನನ್ನ ಕೋಪ “ನಕ್ಷತ್ರಕ್ಕಿಂತ ಮೇಲೆ” ಹಾರ್ತು! ನನ್ನನ್ನು ಹೇಗೆ ಇಂತಹವರು ಉಪಯೋಗಿಸುತ್ತಿದ್ದಾರೆ ಅಂತ ಮೊದಲ ಬಾರಿಗೆ ಅನಿಸಬೇಕೇ? ಒಂದು ಕ್ಷಣ… ಅದೇ ಪೇಪರ್‌ನ್ನ ಪರ ಪರ ಪರ ಅಂತ ಹರಿದೆ! ಸಾವಿರ ತುಂಡು ಮಾಡ್ಬಹುದಾದಷ್ಟು ತುಂಡು ಮಾಡಿದೆ! ಅದನ್ನೆಲ್ಲ ಕಸದ ಬುಟ್ಟಿಗೆ ಹಾಕಿ… ಶಾಂತವಾಗಿ ಕುಳಿತುಕೊಂಡೆ.

“ಒಂದು ಗಂಟೆಗೆ ಬರಲಿ ಸ್ವಾಮಿ… ಇವತ್ತು ಗ್ರಾಚಾರ ಬಿಡಿಸ್ಬೇಕು!” ಅಂತ ಕಾದೆ. ಆದ್ರೆ… ಒಂದು ದಿನ ಅಲ್ಲ…ಎರಡು ದಿನ ಅಲ್ಲ… ಮೂರು ದಿನ ಪತ್ತೇ ಇಲ್ಲ ಅವನು! ಈ ಎಲ್ಲಾ ಅನುಭವಗಳ ನಂತರ ಒಂದು ದೊಡ್ಡ ಪಾಠ ನನಗೆ ಕ್ಲಿಯರ್ ಆಯ್ತು. ಅದೇನಪ್ಪ ಅಂದ್ರೆ — ಗೊತ್ತಿರುವವರಿಗೆ ಪುಸ್ತಕ ಮಾರಬಾರದು! ಯಾಕಂದ್ರೆ ಅವರು ದುಡ್ಡು ಕೊಟ್ಟು ಪುಸ್ತಕಕೊಳ್ಳುತ್ತಾರೆ… ಆದ್ರೆ ಅದರ ಜೊತೆಗೇ ಅದರ ರಿಟರ್ನ್ಸ್ ಅಪೇಕ್ಷಿಸುತ್ತಾರೆ. ಒಬ್ಲಿಗೆಶನ್‌ಗೆ  ಮುಲಾಜಿಗೆ ನಾನು ಬೀಳಬೇಕಾಗುತ್ತೆ! ಆ ಮುಲಾಜು ಅಂದ್ರೆ ಏನು ಗೊತ್ತಾ?

“ಸಾರ್, ಒಂದು ಅರ್ಜಿ ಬರೆಯಿಸಿ…”
“ಸಾರ್, ಒಂದು ಟ್ರಾನ್ಸ್ಲೇಶನ್ ಮಾಡಿ…”
“ಸಾರ್, ಈ ಕೆಲಸ ನೋಡ್ಕೊಳ್ಳಿ…” ಅಂತ ಸಾಲು ಸಾಲು ಕೆಲಸ!

ಅವರಿಗೆ ಅನ್ನಿಸ್ತಾ ಇರುತ್ತೆ — “ನಾವು ದುಡ್ಡು ಕೊಟ್ಟಿದೀವಿ… ಪ್ರತಿಫಲ ಬೇಕಲ್ಲ!”

ನನಗೆ ಆಗ ಗೊತ್ತಾಯ್ತು — ಇದು ಪುಸ್ತಕ ಮಾರಾಟ ಅಲ್ಲ… ಇದು ಪ್ಯಾಕೇಜ್ ಡೀಲ್!
ಆಗಲೇ ನಾನು ಒಂದು ನಿರ್ಧಾರ ತೊಗೊಂಡೆ; ಇನ್ಮೇಲೆ ಪುಸ್ತಕ ಪ್ರಕಟ ಆದ್ಮೇಲೆ ಗೊತ್ತಿರುವವರಿಗೆ ಕೈಯಲ್ಲಿ ಹಿಡಿದು ಹೋಗಿ ಮಾರೋದೇ ಬೇಡಾ. ಇನ್ನೊಂದು ದೊಡ್ಡ ಅನುಭವ —ಲೈಬ್ರರಿಗೆ ಪುಸ್ತಕ ಮಾರುವುದು! ನಾಲ್ಕು ಪ್ರತಿ ಕೊಡು… ಮೂರು ಕೊಡು… ಎರಡು ಕೊಡು… ಅಂತ ಕೇಳೋದು ಒಂದೆಡೆ… ಮತ್ತೊಂದು ಕಡೆ —
“ಇಲ್ಲಿ ಲಂಚ ಕೊಡ್ಬೇಕು…” ಅನ್ನುವ ವ್ಯವಸ್ಥೆ. “ನನ್ನಂತ ಸಜ್ಜನರಿಗೆ, ಸಭ್ಯರಿಗೆ ಲಂಚ ಕೊಡೋದು, ತೆಗೆದುಕೊಳ್ಳೋದು ನನ್ನಂತವರಿಗೆ ಹೇಳಿದ  ಕೆಲಸ ಅಲ್ಲ!” ಅನ್ನಿಸ್ತು.

ಹೀಗೆ ಇಂತಹ ಒಗ್ಗದ ಕೆಮೆಯ ಕಡೆ ತಲೆ ಹಾಕಿದ್ರೆ, ನನ್ನ ಬೇರೆ ಕೆಲಸಗಳೇ ಕುಂಠಿತ ಆಗ್ಬಿಡುತ್ತವೆ… ಜಗತ್ತಿನ ಎಲ್ಲಾ ತೊಂದರೆ ನನ್ನ ತಲೆಯ ಮೇಲೆ ಬೀಳುತ್ತವೆ! ಅದರಿಂದ ಬರೆಯೋದು ಒಂದು ಇಟ್ಕೊಂಡ್ರೆ ಸಾಕು ಅನಿಸಿಬಿಡ್ತಾ…?
ಅದಕ್ಕೆ ಫೈನಲ್ ಡಿಸಿಷನ್: ಪುಸ್ತಕ ಪ್ರಕಟ ಮಾಡಿ ಮಾರಾಟ ಮಾಡೋದು — ರಿಸ್ಕ್! ಅಂತ ತೀರ್ಮಾನ ಮಾಡಿದೆನಾ… ನಾಲ್ಕು-ಐದು ಪುಸ್ತಕಗಳ ನಂತರ ಪ್ರಕಾಶನವೇ ನಿಲ್ಲಿಸಿಬಿಟ್ಟೆ! ಈಗ ಸ್ಥಿತಿ ಏನಪ್ಪ ಅಂದ್ರೆ —ಜನ ಕೇಳ್ತಾರೆ: “ಏನ್ ಸಾರ್, ಪುಸ್ತಕ ಬರೀತಾ ಇಲ್ಲವಾ?” “ಬರೀತಾ ಇದ್ದೀನಿ ಸ್ವಾಮಿ…” ಆದ್ರೆ… ಪುಸ್ತಕ ರೂಪದಲ್ಲಿ ಬರೋದಿಲ್ಲ! ಪೇಪರ್‌ನಲ್ಲಿ ಬರುತ್ತೆ… ಯಾರೋ ಪ್ರಕಟಿಸ್ತಾರೆ… ಅವರೇ ಮಾರ್ತಾರೆ…”

ನಾವು ಒಂದು ಉದ್ಯೋಗದಲ್ಲಿರ್ತೀವಿ… ನಿಯಮಿತ ಆದಾಯ ಇರುತ್ತೆ… ಪುಸ್ತಕ ಮಾರಾಟ ಮಾಡಿ ಬದುಕೋ ಸ್ಟೇಜ್‌ನಲ್ಲಿ ಇಲ್ಲ… ಆ ಹಂತ ಮೀರಿಬಿಟ್ಟಿರ್ತೀವಿ. ಅದರಿಂದ —ಬರೋದು ಬರಲಿ… ಸಾಕು!” ಅನ್ನೋ ಮನಸ್ಥಿತಿ.
ಆದ್ರೆ ಸತ್ಯ ಏನೆಂದರೆ — ಪುಸ್ತಕ ಮುದ್ರಣ ಸುಖ ಕೊಡುತ್ತೆ… ಆದ್ರೆ ಮಾರಾಟ — ಕಷ್ಟ! ಇದನ್ನೇ ವೃತ್ತಿ ಮಾಡಿಕೊಂಡವರಿಗೆ ಇದು ದೊಡ್ಡ ಸವಾಲು! ಅದರಲ್ಲೂ ನಿಯಮ, ಮಿತಿ, ವ್ಯವಸ್ಥೆ… ಇವೆಲ್ಲ ಪಾಲಿಸೋದು ಸುಲಭವಲ್ಲ. ನಮ್ಮಂತೋರಿಗೆ? ಅದು ಇನ್ನೂ ಕಷ್ಟ! ಇದು ನನ್ನ ಸ್ವಂತ ಅನುಭವ ಸ್ವಾಮಿ…ಇಷ್ಟೆ ನನ್ನ “ಪುಸ್ತಕ ಪುರಾಣ”!


ಸರ ಮೇಡಂಮೋರೆ, ಮುಂದೆ ಏನು ಹೇಳ್ಬೇಕು ಅನ್ನೋ  ಸಂಗತಿಗಳು ಒಂದರ ಮೇಲೆ ಮತ್ತೊಂದು ಬಂದು ಒಂದು ತರಹ ಸಿಲ್ಕ್ ಬೋರ್ಡ್ ರಶ್ ಹುಟ್ಟು ಹಾಕಿವೆ. ಅವನ್ನೆಲ್ಲ ಸೀಕ್ವೆನ್ಸ್ ಸೀಕ್ವೆನ್ಸಿ ಆಗಿ ಒಂದೊಂದಾಗಿ ಇಸ್ಪೀಟ್ ಎಲೆ ಹಾಗೆ ಜೋಡಿಸ್ತಾ ಇದ್ದೀನಿ… ಅಂದಹಾಗೆ ನನಗೆ ಇಸ್ಪೀಟ್ ಆಟ ಗೊತ್ತಿಲ್ಲ ಇವರೇ. ಮುಂದಿನ ಸಂಚಿಕೆಯಲ್ಲಿ ಜೋಡಿಸಿಕೊಂಡಿರುವ ಸಂಗತಿ ನಿವೇದಿಸಲು ತಮ್ಮ ಅಪ್ಪಣೆ ಉಂಟು ಎಂದು ಭಾವಿಸಿ ಈಗಿನ ಎಪಿಸೋಡಿಗೆ ಅಂತ್ಯ ಹಾಡಲೇ….
ಮುಂದಿನ ಸಲ ಅದ್ರ ಮಜಾ ಹೇಳ್ತೀನಿ! ಬರ್ತೀರಾ?

ಇನ್ನೂ ಇದೆ

About The Author

ಎಚ್. ಗೋಪಾಲಕೃಷ್ಣ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ