Advertisement
ಉದ್ದಕೊಕ್ಕಿನ ಸೂರಕ್ಕಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಉದ್ದಕೊಕ್ಕಿನ ಸೂರಕ್ಕಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಉದ್ದಕೊಕ್ಕಿನ ಸೂರಕ್ಕಿಗಳು ಉದುರೆಲೆ, ಕುರುಚಲು ಕಾಡು, ಎಸ್ಟೇಟು, ಮನೆಗಳ ಸುತ್ತಮುತ್ತಲು ಬೆಳೆದ ಹೂದೋಟಗಳಲ್ಲಿ ವಾಸ ಮಾಡುತ್ತವೆ. ಉದ್ದಕೊಕ್ಕಿನ ಸೂರಕ್ಕಿಗಳು ನೆಕ್ಟರಿನೈಡೆ ಕುಟುಂಬಕ್ಕೆ ಸೇರಿದ ಇತರ ಸೂರಕ್ಕಿಗಳಂತೆ ಮಕರಂದಪ್ರಿಯ ಹಕ್ಕಿಗಳು. ಕಾಡಿನಲ್ಲಾಗಲೀ, ಎಸ್ಟೇಟು-ಹೂದೋಟವೇ ಆಗಲೀ, ಮರಗಿಡಗಳಲ್ಲಿ ಹೂವರಳಿದರೆ ಸಾಕು, ಮಕರಂದಕ್ಕಾಗಿ ಎಲ್ಲಿದ್ದರೂ ಹಾಜರು! ಮಕರಂದವನ್ನು ಹೀರುವುದಕ್ಕಾಗಿಯೇ ಹೇಳಿಸಿ ಮಾಡಿಸಿದಂತಿರುವ, ಬಾಗಿದ ಉದ್ದವಾದ ಕೊಕ್ಕು ಮತ್ತು ಕೊಳವೆಯಂತಹ ನಾಲಿಗೆ. ಹೂಗಳ ಪರಾಗಸ್ಪರ್ಶ ಕ್ರಿಯೆಯಲ್ಲಿ ಬಹು ಉಪಕಾರಿ. ಮಕರಂದವನ್ನು ಹೀರುವಾಗ ಹೂವಿನ ಮೇಲೆ ಕೂರದೆ, ಗಾಳಿಯಲ್ಲಿಯೇ ತೂಗಾಡುತ್ತಾ ಹೀರುವುದನ್ನು ನೋಡಲು ಮನಮೋಹಕ!
ಡಾ.
ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಉದ್ದಕೊಕ್ಕಿನ ಸೂರಕ್ಕಿಗಳ ಕುರಿತ ಬರಹ ಇಲ್ಲಿದೆ

ನಾವು ಈವತ್ತು ತಿಳಿದುಕೊಳ್ಳಲು ಹೊರಟಿರುವುದು ಸೂರಕ್ಕಿ ಪ್ರಭೇದಗಳಲ್ಲಿ ಒಂದಾದ ಉದ್ದಕೊಕ್ಕಿನ ಸೂರಕ್ಕಿ ಎಂಬ ಹಕ್ಕಿಯ ವಿಚಾರ. ಉದ್ದಕೊಕ್ಕಿನ ಸೂರಕ್ಕಿಯನ್ನು ಇಂಗ್ಲೀಷಿನಲ್ಲಿ ಲೊಟೆನ್ಸ್ ಸನ್‌ಬರ್ಡ್ (loten’s sunbird) ಎಂದು ಕರೆಯುತ್ತಾರೆ ಮತ್ತು ವೈಜ್ಞಾನಿಕವಾಗಿ ಸಿನ್ನಿರಿಸ್ ಲೊಟೆನಿಯಸ್ (Cinnyris lotenius) ಎನ್ನುತ್ತಾರೆ. ಇವು ಇತರ ಸೂರಕ್ಕಿಗಳಿರುವ, ನೆಕ್ಟರಿನೈಡೆ (Nectariniidae) ಎಂಬ ಕುಟುಂಬಕ್ಕೆ ಸೇರಿವೆ. ಉದ್ದಕೊಕ್ಕಿನ ಸೂರಕ್ಕಿ ಕೇವಲ ಭಾರತ ಅದರಲ್ಲೂ ದಕ್ಷಿಣದ ರಾಜ್ಯಗಳು, ಪಶ್ಚಿಮಘಟ್ಟಗಳು ಮತ್ತು ಶ್ರೀಲಂಕಾ ದೇಶಗಳಿಗೆ ಸೀಮಿತವಾದ ಹಕ್ಕಿ.

ಉದ್ದಕೊಕ್ಕಿನ ಸೂರಕ್ಕಿಗೆ ಕೊಕ್ಕೂ ಸೇರಿ 13 ಸೆಂಟಿಮೀಟರ್ ಗಾತ್ರವಿರುತ್ತದೆ ಹಾಗೂ ಗುಬ್ಬಚ್ಚಿಗಿಂತ ಪುಟ್ಟ ಮುದ್ದಾದ ಪಕ್ಷಿ. ಹೆಸರಿಗೆ ತಕ್ಕಂತೆ ಸೂರಕ್ಕಿಗಳಲ್ಲಿಯೇ ಅತ್ಯಂತ ಉದ್ದವಾದ ಕೊಕ್ಕಿರುವ ಸುಂದರವಾದ ಹಕ್ಕಿ. ಗಂಡು-ಹೆಣ್ಣು ಹಕ್ಕಿಗಳು ನೋಡಲು ವಿಭಿನ್ನವಾಗಿರುತ್ತವೆ.

ಗಂಡು ಉದ್ದಕೊಕ್ಕಿನ ಸೂರಕ್ಕಿ ಅತ್ಯಂತ ಸುಂದರ! ಸೂರ್ಯನ ಕಿರಣಗಳಿಗೆ ಮಿಂಚಿ-ಮಿರುಗುವ ಕಡುಗಪ್ಪು ಬಣ್ಣದ ದೇಹದ ಮೇಲ್ಭಾಗ, ಗಂಟಲು ಮತ್ತು ಗಲ್ಲದಲ್ಲಿ ಲೋಹದ ಹೊಳಪಿನ ಕಡು ಹಸಿರು-ನೇರಳೆ. ನೇರಳೆ ಬಣ್ಣದ ಎದೆ; ಕಡುಗೆಂಪು ಎದೆಪಟ್ಟಿ; ಪಕ್ಕೆಗಳಲ್ಲಿ ಹಳದಿ ಬಣ್ಣದ ಶಿಖೆದಂತಿರುವ ಗರಿಗಳು; ಮಾಸಲುಗಪ್ಪು ಬಣ್ಣದ ರೆಕ್ಕೆ ಮತ್ತು ಬಾಲ; ಗಂಡುಹಕ್ಕಿಗೆ ಹೋಲಿಸಿದರೆ ಹೆಣ್ಣು ಹಕ್ಕಿ ನೀರಸವಾದ ಬಣ್ಣ! ಹಸಿರುಗಂದು ಮೇಲ್ಮೈಗೆ ಪೇಲವ ಹಳದಿ ಕೆಳಮೈ; ಮಾಸಲು ಗಲ್ಲ.

ಉದ್ದಕೊಕ್ಕಿನ ಸೂರಕ್ಕಿಗಳು ಉದುರೆಲೆ, ಕುರುಚಲು ಕಾಡು, ಎಸ್ಟೇಟು, ಮನೆಗಳ ಸುತ್ತಮುತ್ತಲು ಬೆಳೆದ ಹೂದೋಟಗಳಲ್ಲಿ ವಾಸ ಮಾಡುತ್ತವೆ. ಉದ್ದಕೊಕ್ಕಿನ ಸೂರಕ್ಕಿಗಳು ನೆಕ್ಟರಿನೈಡೆ ಕುಟುಂಬಕ್ಕೆ ಸೇರಿದ ಇತರ ಸೂರಕ್ಕಿಗಳಂತೆ ಮಕರಂದಪ್ರಿಯ ಹಕ್ಕಿಗಳು. ಕಾಡಿನಲ್ಲಾಗಲೀ, ಎಸ್ಟೇಟು-ಹೂದೋಟವೇ ಆಗಲೀ, ಮರಗಿಡಗಳಲ್ಲಿ ಹೂವರಳಿದರೆ ಸಾಕು, ಮಕರಂದಕ್ಕಾಗಿ ಎಲ್ಲಿದ್ದರೂ ಹಾಜರು! ಮಕರಂದವನ್ನು ಹೀರುವುದಕ್ಕಾಗಿಯೇ ಹೇಳಿಸಿ ಮಾಡಿಸಿದಂತಿರುವ, ಬಾಗಿದ ಉದ್ದವಾದ ಕೊಕ್ಕು ಮತ್ತು ಕೊಳವೆಯಂತಹ ನಾಲಿಗೆ. ಹೂಗಳ ಪರಾಗಸ್ಪರ್ಶ ಕ್ರಿಯೆಯಲ್ಲಿ ಬಹು ಉಪಕಾರಿ. ಮಕರಂದವನ್ನು ಹೀರುವಾಗ ಹೂವಿನ ಮೇಲೆ ಕೂರದೆ, ಗಾಳಿಯಲ್ಲಿಯೇ ತೂಗಾಡುತ್ತಾ ಹೀರುವುದನ್ನು ನೋಡಲು ಮನಮೋಹಕ! ಮಕರಂದದ ಜೊತೆಗೆ ಜೇಡ, ಹುಳಹುಪ್ಪಟೆಗಳೂ ಆಹಾರದ ಪಟ್ಟಿಯಲ್ಲಿವೆ.

ಉದ್ದಕೊಕ್ಕಿನ ಸೂರಕ್ಕಿಗಳಿಗೆ ಪ್ರಜನನ ಸಮಯ ನವೆಂಬರ್‌ನಿಂದ ಮಾರ್ಚ್‌ವರೆಗೆ. ಸಂತಾನಋತುವಿನಲ್ಲಿ ಗಂಡು, ಇನ್ನೂ ಹೆಚ್ಚು ಆಕರ್ಷಕ ಮೈಬಣ್ಣ ಧರಿಸುತ್ತವೆ ಮತ್ತು ಸಂಭ್ರಮದಿಂದ, ಉದ್ರೇಕದಿಂದ ಅತ್ತಿಂದಿತ್ತ ಹಾರುತ್ತಾ ಟಿಟ್ಯೂ.. ವಿಟ್ಯೂ..ಟ್ರ್… ಎಂದು ತೀಕ್ಷ್ಣ ಧ್ವನಿಯಲ್ಲಿ ಹಾಗೂ ಅವಿಶ್ರಾಂತವಾಗಿ ಹಾಡುತ್ತಾ ತಮ್ಮ ಕಿಲಿಕಿಲಿ ಸ್ವರದಿಂದ ಇಡೀ ಸುತ್ತುಮುತ್ತಲ ವಾತಾವರಣವನ್ನು ಆಹ್ಲಾದಕರಗೊಳಿಸುತ್ತವೆ.

ಇವುಗಳ ಗೂಡು ವಿಶಿಷ್ಟ. ಹೊರಚಾಚಿಕೊಂಡಿರುವ ಯಾವುದೇ ಗಿಡದ ಕೊಂಬೆ ಅಥವಾ ವಸ್ತುವಿನ ತುದಿಯಲ್ಲಿ ಜೇಡರ ಬಲೆ, ಒಣರೆಂಬೆ, ಕಸಕಡ್ಡಿ ಮುಂತಾದುವುಗಳನ್ನು ಸೇರಿಸಿ, ನೇತಾಡುತ್ತಿರುವಂತಹ ಗೂಡನ್ನು ನಿರ್ಮಿಸುತ್ತವೆ. ಹಳೆಯ ಗೂಡನ್ನು ನವೀಕರಿಸುವ ಕೆಲಸವೂ ಆಗಬಹುದು. ಈ ಗೂಡು ಹೊರಗಿನಿಂದ ಎಷ್ಟೇ ಒರಟಾಗಿ ಕಂಡರೂ, ಅದರೊಳಗೆ ಮುದ್ದಾದ, ಮೃದುವಾದ, ಹತ್ತಿಯ ಹಾಸಿಗೆ! ಅದರ ಬಾಗಿಲ ಮೇಲೊಂದು ಮೇಲ್ಚಾವಣಿ! ಗೂಡು ಕಟ್ಟುವ ಕೆಲಸ ಸಂಪೂರ್ಣವಾಗಿ ಹೆಣ್ಣು ಹಕ್ಕಿಯದ್ದು. ಒಂದು ಬಾರಿಗೆ ಹಸಿರು ಅಥವಾ ಬೂದು ಬಣ್ಣದ, ಕಂದು ಗೀರುಗಳಿರುವ ಎರಡು ಮೊಟ್ಟೆಗಳನ್ನಿಡುತ್ತದೆ. 14-17 ದಿನಗಳಲ್ಲಿ ಮೊಟ್ಟೆಯೊಡೆದು ಮರಿಹಕ್ಕಿಗಳು ಹೊರಬರುತ್ತವೆ. ಗಂಡುಹಕ್ಕಿ ಮೊಟ್ಟೆಗಳಿಗೆ ಕಾವುಕೊಡುವ ಮತ್ತು ಗುಟುಕು ಕೊಡುವ ಕಾರ್ಯದಲ್ಲಿ ಭಾಗಿಯಾಗುತ್ತದೆ. ಗಂಡು-ಹೆಣ್ಣು ಉದ್ದಕೊಕ್ಕಿನ ಸೂರಕ್ಕಿಗಳೊಂದಿಗೆ, ಗುಟುಕು ಕೊಡುವ ಪ್ರಕ್ರಿಯೆಯಲ್ಲಿ ಆ ಕುಟುಂಬದ ಹಿರಿಯ ಮರಿಹಕ್ಕಿಗಳೂ ಭಾಗವಹಿಸುವುದು ಒಂದು ವಿಶೇಷ.

ಬೆಕ್ಕು ಮತ್ತು ಇತರ ಬೇಟೆಹಕ್ಕಿಗಳು ಮುಂತಾದುವೇ ಈ ಸಂಸಾರದ ಶತ್ರುಗಳು.

(ಕಲಾಕೃತಿ: ಲೇಖಕರದ್ದು)

About The Author

ಡಾ. ಎಸ್‌. ವಿ. ನರಸಿಂಹನ್

ಡಾ. ಎಸ್‌.ವಿ. ನರಸಿಂಹನ್ ವೈದ್ಯರು. ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸಿದ್ದಾರೆ. ಆರೋಗ್ಯ ರಕ್ಷಣೆಯೊಂದಿಗೆ ಪರಿಸರ ರಕ್ಷಣೆಯ ಬಗೆಗೂ ಅಪಾರ ಕಾಳಜಿ ಹೊಂದಿದ್ದಾರೆ. ಕಳೆದ ನಲವತ್ತೊಂದು ವರ್ಷಗಳಿಂದ ಡಾ. ನರಸಿಂಹನ್‌ರವರು ಕೈಯಿಂದ ಕುಂಚಿಸಿದ ಸುಮಾರು ಎಂಭತ್ತೆರಡು  ಸಾವಿರ ‘ವನ್ಯಜೀವಿ ಸಂದೇಶ ಪತ್ರ’ಗಳು ಪ್ರಪಂಚದಾದ್ಯಂತ ತಲುಪಿವೆ. ಇದೊಂದು ಲಿಮ್ಕಾ ದಾಖಲೆ. ವಿಜ್ಞಾನ ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವ ಇವರು, ಕನ್ನಡ ಭಾಷೆ, ಸಂಗೀತ-ಸಾಹಿತ್ಯ, ಖಗೋಳ, ಪರಿಸರ ಮುಂತಾದ ವಿಷಯಗಳಲ್ಲಿ ಶಾಲಾ-ಕಾಲೇಜುಗಳಲ್ಲಿ, ರೇಡಿಯೋ, ಟಿವಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಿದ್ದಾರೆ. ಕೊಡಗಿನ ಸಂಪೂರ್ಣ ಪಕ್ಷಿಸಂಕುಲದ ನಿಖರ ಮಾಹಿತಿಯುಳ್ಳ ‘ಕೊಡಗಿನ ಖಗರತ್ನಗಳು’ ಪುಸ್ತಕದಲ್ಲಿ ತಾವೇ ಎಲ್ಲ ಹಕ್ಕಿಗಳ ಚಿತ್ರಗಳನ್ನೂ ಬರೆದದ್ದು ಮತ್ತೊಂದು ಲಿಮ್ಕಾ ದಾಖಲೆ.  ‘2013ರ ಕೊಡಗಿನ ವರ್ಷದ ವ್ಯಕ್ತಿ’ಪುರಸ್ಕೃತರು

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ