ನನ್ನ ಬೆಳವಣಿಗೆಯನ್ನು ಅವಳಿಗಿಂತ ಚೆನ್ನಾಗಿ ಗುರುತಿಸಬಲ್ಲ ಬೇರಾರೂ ಇರಲಿಲ್ಲ. ನಾನು ಕಲಾವಿದೆಯಾಗಬೇಕೆಂದೇ ಅವಳ ಒತ್ತಾಯವೂ ಇತ್ತು. ಒಬ್ಬರಿಗಿಂತ ಇಬ್ಬರು ಲೇಸೆಂಬ ಮಾತು ನನಗೆ ಹೊಂದಿದ್ದೇ ಈಗ! ‘ಐದು ವರ್ಷದ ಹಿಂದೆಯೇ ನೀನು ಪಾತ್ರದಲ್ಲಿ ಕಳೆದುಹೋಗುತ್ತಿದ್ದೆ. ಇನ್ನು ಇಷ್ಟೆಲ್ಲ ಕಷ್ಟಪಟ್ಟು, ನಾಟಕಗಳಲ್ಲಿ ಅಭಿನಯಿಸಿ ಅನುಭವ ಪಡ್ಕೊಂಡಿದ್ದೀಯಾ. ದೊಡ್ಡ ಮಟ್ಟಕ್ಕೆ ಬೆಳೀಬೇಕು ಕಣೆ’ ಎಂದು ಬೆಂಬಲವಾಗಿ ನಿಂತು, ‘ನೀನು ಮಾಂಡ್ರೆಯಂತಹ ದೊಡ್ಡ ಕವಿಗಳ ಜೊತೆಯಲ್ಲಿ ಪಳಗಬೇಕು. ಕಲಿಯೋಕೆ ಸಾಕಷ್ಟಿರುತ್ತೆ’ ಅಂತಲೂ ದಾರಿ ತೋರಿದಳು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹದಿನಾಲ್ಕನೆಯ ಕಂತು
ಜುಬೇದಾಬಾಯಿಯವರ ಒತ್ತಾಯಕ್ಕೆ ಮಣಿದು ಚಿತ್ತರಂಜಿನಿ ಪಾತ್ರ ಮಾಡಿದೆ. ನಿರೀಕ್ಷೆಗೂ ಮೀರಿ ನೋಡುಗರೆಲ್ಲ ಮೆಚ್ಚಿದರು. ಅಂತೂ ತುಮ್ಮನಕಟ್ಟೆ ಕ್ಯಾಂಪ್ ಯಶಸ್ವಿಯಾಗಿ ನಡೆಯಿತು. ಮುಂದೆ ಸಿರಿಗೆರೆಯ ಕ್ಯಾಂಪಿನಲ್ಲೂ ಇದು ಮುಂದುವರೆಯಿತು. ಕಂಪೆನಿಯ ವೇದಿಕೆಯನ್ನು ಪಾತ್ರವಾಗಿ ಏರಿದಾಗ ಮುಖ ಪ್ರೌಢವಾಗಿ ಕಾಣುತ್ತಿತ್ತು. ನಾಟಕ ಮುಗಿದ ಬಳಿಕ ಹಚ್ಚಿದ ಬಣ್ಣ ತೊಳೆದು, ಸ್ಕರ್ಟ್ ತೊಟ್ಟು ಸುಮ್ಮನೇ ಆಚೀಚೆ ಓಡಾಡುತ್ತಿದ್ದೆ. ಗುರುತು ಹಿಡಿದು ಮಾತಾಡಿಸಿದವರೊಬ್ಬರೂ ಇಲ್ಲ. ಹೋಗಲಿ, ನಾನೇ ಪಾತ್ರ ಮಾಡಿದವಳು ಎಂದರೆ ತಲೆ ಕೆಟ್ಟಿರಬೇಕೆಂದು ಆಸ್ಪತ್ರೆಯ ವಿಳಾಸ ನೀಡುತ್ತಿದ್ದರೋ ಏನೊ!
ಸಿರಿಗೆರೆಯಲ್ಲಿ ಹನುಮಂತ ದೇವರ ದೇವಸ್ಥಾನವಿದೆ. ಬಹಳ ಪ್ರಸಿದ್ಧವಾದದ್ದು. ಅಲ್ಲಿ ಜಾತ್ರೆ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ನಾನು ಮುಟ್ಟಾದೆ. ಆಗ ನನಗೆ ಹದಿಮೂರರ ವಯಸ್ಸು. ದೊಡ್ಡವಳಾದ ವಿಷಯ ತಿಳಿಯುತ್ತಿದ್ದಂತೆ ಸಿರಿಗೆರೆ ಊರಿನ ಮುಖ್ಯಸ್ಥ ನನ್ನನ್ನು ಮದುವೆಯಾಗುತ್ತೇನೆ ಎಂದು ದೊಡ್ಡ ರಾದ್ಧಾಂತವನ್ನೇ ಎಬ್ಬಿಸಿದ್ದ. ಒಂದು ಬಾರಿ ಕೇಳಿ, ಆಗುವುದಿಲ್ಲ ಎಂದು ಕಂಪೆನಿ ಮಾಲೀಕರು ಹೇಳಿದ್ದರೂ ನಿತ್ಯವೂ ನಾಟಕ ನೋಡಲು ಬರುವ. ಬಂದಾಗೆಲ್ಲ ಮತ್ತದೇ ಓಲಗ ಊದಿಯೇ ಹೋಗುತ್ತಿದ್ದ ಪುಣ್ಯಾತ್ಮ! ಇದನ್ನೆಲ್ಲ ನೋಡುತ್ತಿದ್ದ ಮಾಲೀಕರಿಗೆ ಸಹನೆಯ ಮೇರೆ ಮೀರಿತೋ ಏನೊ, ನನ್ನನ್ನು ಕರೆದು ಮಾತಾಡಿಸಿದರು.
ಅನಾಥಳೆಂದು ಕಂಪೆನಿ ಸೇರಿದ್ದೆ; ಅವರೂ ನಂಬಿದ್ದರೆಂದು ಭಾವಿಸಿದ್ದೆ. ಆದರೆ ತಂದೆ ತಾಯಿಯ ಜೊತೆಯಲ್ಲಿ ಆಡಿ ಬೆಳೆದ ಮಕ್ಕಳು ಹೇಗೆ ವರ್ತಿಸುತ್ತಾರೆಂದು ಅವರಿಗೆ ತಿಳಿಯದೇ ಇರುತ್ತದೆಯೆ? ನನ್ನ ವಯಸ್ಸಿಗೆ ಈ ಸತ್ಯ ತಿಳಿಯುತ್ತಿರಲಿಲ್ಲ ಬಿಡಿ. ನಂತರ, ನನ್ನ ತಂದೆ ತಾಯಿಯ ಬಗ್ಗೆ ಹೇಳಲೇಬೇಕೆಂದು ಪರಿಪರಿಯಾಗಿ ಕೇಳಿಕೊಂಡರು. ಸುಳ್ಳಿನ ಪರದೆ ಸರಿದ ಮೇಲೆ ಸತ್ಯ ಕಾಣಲೇಬೇಕಲ್ಲಾ! ಎಲ್ಲವನ್ನೂ ವಿವರವಾಗಿ ತಿಳಿಸಿದೆ. ನಾಟಕ ಮಾಡಬೇಕೆಂಬ ನನ್ನ ಹುಚ್ಚುತನ ಎಷ್ಟೆಲ್ಲವನ್ನು ಮಾಡಿಸಿತು ಎಂಬುದನ್ನೆಲ್ಲ ಅವರೆದುರು ಒಪ್ಪಿಸಿ, ಮೌನವಾಗಿ ನಿಂತೆ. ‘ನೀನೀಗ ದೊಡ್ಡವಳಾಗಿದ್ದೀಯ. ಇಲ್ಲೇ ಇದ್ದರೆ, ತೊಂದರೆಯನ್ನು ಮೈಮೇಲೆ ತಂದ್ಕೊಂಡ ಹಾಗೆ. ತಂದೆ ತಾಯಿ ಜೊತೆಗೆ ಇರೋದೆ ಒಳ್ಳೇದು. ಅವ ಊರಿನ ಗೌಡ ಬೇರೆ. ನಿನ್ನನ್ನು ಹಾರಿಸಿಕೊಂಡು ಹೋದರೂ ಆಶ್ಚರ್ಯ ಇಲ್ಲ. ನಿನ್ನ ಮುಂದಿನ ಜೀವ್ನ ಚೆನ್ನಾಗಿರ್ಬೇಕು ತಾಯಿ’ ಎಂದು ತಿಳಿಹೇಳಿದರು.
ಪರಿಣಾಮವಾಗಿ ಅವ್ವ ಅಪ್ಪರಿಬ್ಬರೂ ಬಂದರು. ‘ನಿಮ್ಮ ಮಗಳೀಗ ದೊಡ್ಡವಳಾಗಿದ್ದಾಳೆ. ಹಾಗಾಗಿ ನಿಮ್ಮ ಸುಪರ್ದಿಗೆ ವಹಿಸಿದ್ದೇವೆ’ ಎಂದು ಕಳುಹಿಕೊಟ್ಟೇ ಬಿಟ್ಟರು. ಅವ್ವ ಅಪ್ಪರಿಬ್ಬರೂ ತೋಟದ ಮನೆಯಲ್ಲಿ ಇದ್ದರಾಗ. ಮಗಳು ಮನೆಗೆ ಬಂದದ್ದೇ, ನಿರಾಳಗೊಂಡರು. ಹಾಗಾಗಿ ಯಾಕೆ ಮನೆ ಬಿಟ್ಟು ಹೋದೆ? ತಂದೆ ತಾಯಿಗಿಂತ ನಿನಗೆ ನಾಟಕ ಹೆಚ್ಚಾಯ್ತಾ? ಈ ರೀತಿಯ ಯಾವ ಪ್ರಶ್ನೆಗಳನ್ನು ಯಾರಿಂದಲೂ ಕೇಳಲಿಲ್ಲ. ಮನೆಗೆ ಹೋದರೆ ಸಮಸ್ಯೆ ಬಗೆಹರಿಯುತ್ತಿತ್ತೆಂದು ಮಾಲೀಕರು ಅದ್ಯಾವ ಧೈರ್ಯದಲ್ಲಿ ಹೇಳಿದರೋ ಕಾಣೆ. ದುರಂತವೆಂದರೆ, ಬದುಕು ದುರಂತದ ಸುಳಿಯೊಳಕ್ಕೆ ಸಿಕ್ಕಿ ಹಾಕಿಕೊಳ್ಳತೊಡಗಿದೆ ಅಂತನಿಸಿದ್ದೇ ಆಗ. ಪಾತ್ರ ಮಾಡಿದ ಗುಂಗು, ಏನೂ ಮಾಡಲಾಗುತ್ತಿಲ್ಲವಲ್ಲಾ ಎನ್ನುವ ಅಸಹಾಯಕತೆ, ರಂಗದ ಮೇಲೆ ಇನ್ನೆಂದೂ ಅಭಿನಯಿಸಲು ಸಾಧ್ಯವೇ ಇಲ್ಲವೆಂಬ ಆತಂಕ, ದಿನೇ ದಿನೇ ನನ್ನನ್ನು ಕುಗ್ಗಿಸುತ್ತಿತ್ತು.
ಭಾನಾಪುರದ ಲಕ್ಷ್ಮೀದೇವಿ ಅವರ ತೋಟದ ಮನೆಯಲ್ಲಿ ಇದ್ದದ್ದರಿಂದ ಊರಿನಲ್ಲಿ ಮತ್ತೆ ಸಿಕ್ಕಳು. ತೋಟದ ಮನೆಯಲ್ಲಿ ಬದನೆ, ಬೆಂಡೆ, ಕುಂಬಳಕಾಯಿ ತರಕಾರಿಗಳನ್ನೆಲ್ಲ ಬೆಳೆದುಕೊಂಡು ಅವರೆಲ್ಲ ಅಪ್ಪಟ ರೈತರಾಗಿದ್ದರು. ಕಲಾವಿದರೆಂಬ ಚಹರೆಗಳನ್ನೆಲ್ಲ ಮರೆಮಾಚಿ ವ್ಯವಸಾಯವನ್ನು ಉಸಿರಾಡುತ್ತಿದ್ದರು. ನನ್ನ ವಿಷಯವನ್ನೆಲ್ಲ ಆಕೆಗೂ ತಿಳಿಸಿದೆ. ‘ನಾ ಪಾತ್ರ ಮಾಡ್ಬೇಕು ಅಕ್ಕ. ಮತ್ತೆ ಹೋಗೋದಕ್ಕೆ ಭಯ ಆಗತ್ತೆ’ ಸಂಕಟವನ್ನೆಲ್ಲ ಅವಳೆದುರು ನಿವೇದಿಸಿಕೊಂಡೆ. ನನ್ನ ಬೆಳವಣಿಗೆಯನ್ನು ಅವಳಿಗಿಂತ ಚೆನ್ನಾಗಿ ಗುರುತಿಸಬಲ್ಲ ಬೇರಾರೂ ಇರಲಿಲ್ಲ. ನಾನು ಕಲಾವಿದೆಯಾಗಬೇಕೆಂದೇ ಅವಳ ಒತ್ತಾಯವೂ ಇತ್ತು. ಒಬ್ಬರಿಗಿಂತ ಇಬ್ಬರು ಲೇಸೆಂಬ ಮಾತು ನನಗೆ ಹೊಂದಿದ್ದೇ ಈಗ! ‘ಐದು ವರ್ಷದ ಹಿಂದೆಯೇ ನೀನು ಪಾತ್ರದಲ್ಲಿ ಕಳೆದುಹೋಗುತ್ತಿದ್ದೆ. ಇನ್ನು ಇಷ್ಟೆಲ್ಲ ಕಷ್ಟಪಟ್ಟು, ನಾಟಕಗಳಲ್ಲಿ ಅಭಿನಯಿಸಿ ಅನುಭವ ಪಡ್ಕೊಂಡಿದ್ದೀಯಾ. ದೊಡ್ಡ ಮಟ್ಟಕ್ಕೆ ಬೆಳೀಬೇಕು ಕಣೆ’ ಎಂದು ಬೆಂಬಲವಾಗಿ ನಿಂತು, ‘ನೀನು ಮಾಂಡ್ರೆಯಂತಹ ದೊಡ್ಡ ಕವಿಗಳ ಜೊತೆಯಲ್ಲಿ ಪಳಗಬೇಕು. ಕಲಿಯೋಕೆ ಸಾಕಷ್ಟಿರುತ್ತೆ’ ಅಂತಲೂ ದಾರಿ ತೋರಿದಳು. ಅವಳೊಂದು ಪತ್ರ ಬರೆದುಕೊಟ್ಟು, ರಾಮದುರ್ಗದ ಹತ್ತಿರವಿದ್ದ ಕೊಣ್ಣೂರು ಕ್ಯಾಂಪ್‌ಗೆ ತಕ್ಷಣವೇ ಹೊರಡಬೇಕೆಂದು ತಿಳಿಸಿದಳು. ಇನ್ನು ಸುಮ್ಮನಿರಲು ಸಾಧ್ಯವಿಲ್ಲವೆಂದು ಎನಿಸಿದ ಮೇಲೆ, ಅವ್ವ ಅಪ್ಪರಿಗೆ ತಿಳಿಸಿಯೇ ಹೊರಟೆ.
ಮಾಂಡ್ರೆ ಕವಿಗಳ ಮಾಲೀಕತ್ವದ ಕಂಪೆನಿಗೆ ಕೊನೆಗೂ ಸೇರಿದೆ. ಹೊಸ ಬಗೆಯ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಗಾಂಧಿ ಟೋಪಿ, ಚಿತ್ರಾಂಗದ, ಪುತ್ಥಳಿ, ಹಳ್ಳಿಯಿಂದ ದಿಲ್ಲಿವರೆಗೂ, ಪಂಚಾಯಿತಿ ರಾಜ್ಯ, ಗಂಡನ ಮನೆ, ಖಾದಿ ಸೀರೆ ನಾಟಕಗಳ ಮೂಲಕ ಜನಪ್ರೀತಿ ಗಳಿಸಿದೆ.
ಮಾಂಡ್ರೆ ಕವಿಗಳ ಮಗಳು ಭಾಗೀರಥಿಯ ಪರಿಚಯವಾಯಿತು. ಇಬ್ಬರೂ ಒಂದೇ ಕೋಣೆಯಲ್ಲಿ ಉಳಿದುಕೊಂಡಿದ್ದೆವು. ಸೇರಿದ್ದ ಹೊಸತರಲ್ಲಿ ಪ್ರಾಕ್ಟೀಸ್ ನಡೆಯುತ್ತಿತ್ತು. ಅಣ್ಣಿಗೇರಿ ಹುಸೇನ್ ಸಾಬ್, ಜಕ್ಲಿ ಈಶ್ವರ್, ನಾಲ್ಕೈದು ತಿಂಗಳ ಹಿಂದೆ ತೀರಿ ಹೋದ ದಾವಣಗೆರೆಯ ಮೆಹಬೂಬ್ ಅಲಿ, ಸಿರಟ್ಟಿ ರಾಮಣ್ಣ, ವಿಟ್ಟಪ್ಪಜ್ಜ, ದಾವಣಗೆರೆ ಲಕ್ಷ್ಮೀಬಾಯಿ, ಸ್ತ್ರೀ ಪಾತ್ರಧಾರಿಗಳಾಗಿದ್ದ ಉಪ್ಪಿನ ಬೆಟಗೇರಿಯ ಚಂದ್ರಯ್ಯ, ಅವರ ಸೊಸೆಯಂದಿರಾದ ಶಕುಂತಲಾ ಹಾಗೂ ಕಲಾವತಿ, ಚಂದ್ರಯ್ಯನವರ ಹೆಂಡತಿ ದಾಕ್ಷಾಯಣಿ, ನೃತ್ಯಗಾರರಾದ ತುರುಬಿನ ಬಸವರಾಜು ಮತ್ತು ಸಂಗಮೇಶ್, ತಮಾಷೆ ಮಾಡುವುದಕ್ಕೂ ಅವಕಾಶವಿರದಂತೆ ಹೆಣ್ಣು ಮಕ್ಕಳನ್ನು ಭಯಪಡಿಸಿಯೇ ನಿಯಂತ್ರಿಸುತ್ತಿದ್ದ ಇಟಗಿ ಚಿದಾನಂದಪ್ಪ, ಇಷ್ಟೆಲ್ಲ ಕಲಾವಿದರ ಗಣಗಳಲ್ಲಿ ಉಳಿದವರೆಂದರೆ ವರಲಕ್ಷ್ಮಿಯೊಬ್ಬಳೆ. ನನಗಿಂತ ಹತ್ತು ವರ್ಷ ಚಿಕ್ಕವಳಾಕೆ. ಈಗಲೂ ಬಳ್ಳಾರಿಯಲ್ಲಿದ್ದಾಳೆ. ಶಕುಂತಲಾ, ಅವಳನ್ನು ನಾನು ಶೇಕು ಅಂತಲೇ ಕರೆಯುತ್ತಿದ್ದೆ. ನಾನೂ ಅವಳು ಒಂದೇ ವಯಸ್ಸಿನವರಾಗಿದ್ದೆವು. ಅವಳೂ ತೀರಿಹೋದಳು.
(ಹಿಂದಿನ ಕಂತು: ಹಾರಿಹೋದ ಪ್ರಾಣಪಕ್ಷಿ!)

ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಂದೋಲನ ಪತ್ರಿಕೆಯ ಹಾಡುಪಾಡು ಪುಟದಲ್ಲಿ ಇವರ ಅನೇಕ ಲೇಖನಗಳು ಪ್ರಕಟಗೊಂಡಿವೆ.

