ಒಮ್ಮೆ ವೈದ್ಯರ ಬಳಿ ನಮ್ಮ ಕಂಪೆನಿಯ ಬಗ್ಗೆ ಹೆಚ್ಚಿಗೆ ಹೇಳಲು ಹೋಗಿ ಅವರಿಂದ ಉಗಿಸಿಕೊಂಡಿದ್ದೆ. ಚಿಕ್ಕವನಿದ್ದಾಗಿಂದಲೂ ನಾನು ಮತ್ತೊಬ್ಬರಿಂದ ಹೇಳಿಸಿಕೊಳ್ಳುವುದಾಗಲಿ, ಬಯ್ಯಿಸಿಕೊಳ್ಳುವ ಕೆಲಸ ಮಾಡಿರಲಿಲ್ಲ. ಒಂದೊಮ್ಮೆ ಈ ಕೆಲಸದಲ್ಲಿ ಯಾರಾದ್ರೂ ಏನಾದ್ರೂ ಅಂದರೆ ಕೆಲಸವನ್ನು ಬಿಟ್ಟು ಹೋಗುವಷ್ಟು ಸಿಟ್ಟು ಬರುತ್ತಿತ್ತು. ಆದರೆ ನನಗೆ ಜೀವನದಲ್ಲಿ ಸೆಟ್ಲ್ ಆಗಬೇಕೆಂಬ ಮನೋಭಿಲಾಶೆ ಇದ್ದುದರಿಂದ ಎಷ್ಟೇ ಒತ್ತಡ ಬಂದರೂ ನಾನು ಸಹಿಸಿಕೊಳ್ಳುತ್ತಿದ್ದೆ. ಆದರೆ ಚಿಕ್ಕವನಿದ್ದಾಗ ನನಗೆ ಈ ಮನೋಸ್ಥಿತಿ ಇರಲಿಲ್ಲ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತನೆಯ ಕಂತು ನಿಮ್ಮ ಓದಿಗೆ
ಮೆಡಿಕಲ್ ರೆಪ್ ಕೆಲಸದಲ್ಲಿ ನಾವು ನೇರವಾಗಿ ಕಂಪೆನಿಯ ಔಷಧಿಗಳನ್ನು ಮಾರುವುದಿಲ್ಲ. ಬದಲಾಗಿ ಪರೋಕ್ಷವಾಗಿ ಮಾರುತ್ತೇವೆ. ವೈದ್ಯರ ಬಳಿ ಹೋಗಿ ನಮ್ಮ ಕಂಪೆನಿಯ ವಸ್ತುಗಳ ಬಗ್ಗೆ ತಿಳಿಸಿ ಅವರ ಮನವೊಲಿಸಿ ನಮ್ಮ ಕಂಪೆನಿಯ ಔಷಧಿಗಳನ್ನು ಬರೆಸುವುದು. ಅಷ್ಟೇ ಅಲ್ಲದೇ ಮೆಡಿಕಲ್ ಸ್ಟೋರ್‌ಗಳಲ್ಲಿ ಆ ಔಷಧಿಗಳು ಸಿಗುವಂತೆ ವ್ಯವಸ್ಥೆ ಮಾಡುವುದು. ಆ ಮೆಡಿಕಲ್ ಸ್ಟೋರ್‌ಗಳಿಗೆ ಆ ಔಷಧಿ ಯಾವ ಸ್ಟಾಕಿಸ್ಟ್ ಕಡೆ ಲಭ್ಯವಿದೆ ಎಂಬ ಮಾಹಿತಿ ಕೊಡುವುದು. ಈ ಕೆಲಸ ಮಾಡಲು ಮಾತುಗಾರಿಕೆ ಹಾಗೂ ತಾಳ್ಮೆ ಬೇಕು. ಯಾವ ಡಾಕ್ಟರ್ ಮನೋಸ್ಥಿತಿ ಯಾವ ರೀತಿ ಇದೆ ಎಂದು ತಿಳಿದುಕೊಳ್ಳಬೇಕು. ಇದರಿಂದ ನಮ್ಮ ಕೆಲಸ ಹಗುರವಾಗುತ್ತದೆ.
ಪ್ರಾರಂಭದಲ್ಲಿ ನಾನು ಈ ಕೆಲಸ ಮಾಡಲು ಒದ್ದಾಡಿದ್ದು ನಿಜ. ಯಾಕಾದ್ರೂ ಈ ಕೆಲಸಕ್ಕೆ ಸೇರಿದೆನೋ ಎಂಬ ಭಾವನೆ ಬರುತ್ತಿತ್ತು. ವೈದ್ಯರ ಬಳಿ ಹೋಗಿ ಅವರು ಕರೆಯೋವರೆಗೂ ಕಾಯುವುದು, ಒಂದೊಮ್ಮೆ ಅವರು ಕರೆದಾಗ ನಮ್ಮ ಕಂಪೆನಿಯ ಔಷಧಿಗಳ ಬಗ್ಗೆ ಹೆಚ್ಚಿಗೆ ಹೇಳಲು ಹೋಗಿ ಅವರಿಂದ ಬಯ್ಯಿಸಿಕೊಂಡಿದ್ದು ಇದೆ. ಬೇರೆ ಬೇರೆ ಊರುಗಳ ವೈದ್ಯರನ್ನು ಭೇಟಿ ಮಾಡುವುದು, ಭೇಟಿ ಮಾಡಿದ ವೈದ್ಯರುಗಳು, ಅವರಿಂದ ನಾವು ಬರೆಸಬಹುದಾದ ನಮ್ಮ ಕಂಪೆನಿಯ ಔಷಧಿಗಳು ಈ ಮಾಹಿತಿಯನ್ನು ಪ್ರತಿದಿನಕ್ಕೆ 10 ವೈದ್ಯರನ್ನು ಭೇಟಿ ಮಾಡಿ ನಾವು ವರದಿಯ ಡೈರಿಯನ್ನು ನಮ್ಮ ಕಂಪೆನಿಗೆ ಪೋಸ್ಟ್ ಮಾಡಬೇಕಿತ್ತು. ಮೊದಮೊದಲು ನಾನು ಬೆಳ್ಳಂಬೆಳಗ್ಗೆ 8 ಗಂಟೆಗೆ ಕೆಲಸ ಮಾಡಲು ಶುರು ಮಾಡಿದರೆ ರಾತ್ರಿ 10 ರವರೆಗೂ ಮಾಡುತ್ತಿದ್ದೆ. ಪ್ರತಿದಿನವೂ ನಾನು ಈ ಕೆಲಸವನ್ನು ತಪ್ಪದೇ ಡೈರಿಯನ್ನು ಪೋಸ್ಟ್ ಮಾಡುತ್ತಿದ್ದೆ.
ನಮಗೆ ತಿಂಗಳಿಗೊಮ್ಮೆ ಮೀಟಿಂಗ್ ಮಾಡುತ್ತಿದ್ದರು. ಇದರಲ್ಲಿ ನಾವು ಮಾಡಿದ ಕೆಲಸದ ಬಗ್ಗೆ ರಿವ್ಯೂ ಮಾಡುತ್ತಿದ್ದರು. ಚೆನ್ನಾಗಿ ಕೆಲಸ ಮಾಡಿದರೆ ಹೊಗಳುತ್ತಿದ್ದರು. ಇದು ನಮ್ಮ ಏರಿಯಾದಲ್ಲಿ ಖರೀದಿಯಾದ ನಮ್ಮ ಕಂಪೆನಿಯ ಔಷಧಿಗಳ ಮೇಲೆ ನಿರ್ಧಾರವಾಗುತ್ತಿತ್ತು. ಕೆಲ ವೈದ್ಯರುಗಳಂತೂ ನಾವು ಅವರನ್ನು ಭೇಟಿ ಮಾಡಿದಾಗ ಅವರು ನಮ್ಮಿಂದ ಗಿಫ್ಟ್‌ಗಳನ್ನು ಬಯಸುತ್ತಿದ್ದರು. ಏಕೆಂದರೆ ಕೆಲವರು ವೈದ್ಯರುಗಳಿಗೆ ಗಿಫ್ಟ್ ಕೊಟ್ಟು ತಮ್ಮ ಕಂಪೆನಿಯ ಔಷಧಿಗಳನ್ನು ಬರೆಸಿಕೊಂಡು ತಮ್ಮ ಟಾರ್ಗೆಟ್ ರೀಚ್ ಮಾಡುತ್ತಿದ್ದರು. ಇದರಿಂದ ಏನೂ ಗಿಫ್ಟ್ ಕೊಡದ ನಾನು ಸೇರಿದಂತಹ ಕಂಪೆನಿಗಳಲ್ಲಿ ಕೆಲಸ ಮಾಡುವವರಿಗೆ ಕಂಪೆನಿಯವರು ನೀಡಿದ ಟಾರ್ಗೆಟ್ ರೀಚ್ ಮಾಡಲು ತ್ರಾಸದಾಯಕವಾಗುತ್ತಿತ್ತು ಅಷ್ಟೇ ಅಲ್ಲದೇ ಚಾಲೆಂಜ್ ಎನಿಸುತ್ತಿತ್ತು.
ಇದರ ಮಧ್ಯೆ ಔಷಧಿಗಳಲ್ಲಿರುವ ಕಂಟೆಂಟ್ ನೋಡಿ ಗುಣಾತ್ಮಕ, ಪೇಷಂಟ್ ಫ್ರೆಂಡ್ಲಿ ಔಷಧಿಗಳನ್ನು ಬರೆಯುವ ವೈದ್ಯರೂ ಇದ್ದರು. ನಾನು ಕೆಲಸ ಮಾಡುವಾಗ ಈ ರೀತಿಯ ವೈದ್ಯರುಗಳು ಇದ್ದದ್ದು ನನ್ನ ಪುಣ್ಯ. ನಮಗೆ ತಿಂಗಳಿಗೊಮ್ಮೆ ಮೀಟಿಂಗ್ ಕರೆದಾಗ ನಾವು ವೈದ್ಯರ ಬಳಿ ಮಾತನಾಡುವುದು ಹೇಗೆ? ಅವರನ್ನು ಕನ್ವಿನ್ಸ್ ಮಾಡುವುದು ಹೇಗೆ? ಎಂಬಿತ್ಯಾದಿ ವಿಷಯಗಳ ಬಗ್ಗೆ ತರಬೇತಿ ಕೊಡುತ್ತಿದ್ದರು. ನಮಗೆ ಮಾತನಾಡುವ ಕಲೆಯು ಇದರಿಂದ ಬೆಳೆಯಿತು. ತಾಳ್ಮೆ ಬೆಳೆಸಿಕೊಳ್ಳಲು ನೆರವಾಯ್ತು.

ಒಮ್ಮೆ ಚಿತ್ರದುರ್ಗದಲ್ಲಿ ಒಬ್ಬ ವೈದ್ಯರನ್ನು ಭೇಟಿ ಮಾಡಲು ಹೋದಾಗ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೂ ಕಾಯುವಂತಹ ಪರಿಸ್ಥಿತಿ ಎದುರಿಸಿದೆ. ಒಮ್ಮೆ ವೈದ್ಯರ ಬಳಿ ನಮ್ಮ ಕಂಪೆನಿಯ ಬಗ್ಗೆ ಹೆಚ್ಚಿಗೆ ಹೇಳಲು ಹೋಗಿ ಅವರಿಂದ ಉಗಿಸಿಕೊಂಡಿದ್ದೆ. ಚಿಕ್ಕವನಿದ್ದಾಗಿಂದಲೂ ನಾನು ಮತ್ತೊಬ್ಬರಿಂದ ಹೇಳಿಸಿಕೊಳ್ಳುವುದಾಗಲಿ, ಬಯ್ಯಿಸಿಕೊಳ್ಳುವ ಕೆಲಸ ಮಾಡಿರಲಿಲ್ಲ. ಒಂದೊಮ್ಮೆ ಈ ಕೆಲಸದಲ್ಲಿ ಯಾರಾದ್ರೂ ಏನಾದ್ರೂ ಅಂದರೆ ಕೆಲಸವನ್ನು ಬಿಟ್ಟು ಹೋಗುವಷ್ಟು ಸಿಟ್ಟು ಬರುತ್ತಿತ್ತು. ಆದರೆ ನನಗೆ ಜೀವನದಲ್ಲಿ ಸೆಟ್ಲ್ ಆಗಬೇಕೆಂಬ ಮನೋಭಿಲಾಶೆ ಇದ್ದುದರಿಂದ ಎಷ್ಟೇ ಒತ್ತಡ ಬಂದರೂ ನಾನು ಸಹಿಸಿಕೊಳ್ಳುತ್ತಿದ್ದೆ. ಆದರೆ ಚಿಕ್ಕವನಿದ್ದಾಗ ನನಗೆ ಈ ಮನೋಸ್ಥಿತಿ ಇರಲಿಲ್ಲ. ಒಮ್ಮೆ ಕ್ರಿಕೆಟ್ ಆಡುವಾಗ ನಾನು ಮಿಸ್ ಫೀಲ್ಡ್ ಮಾಡಿದಾಗ ನನ್ನ ಸೀನಿಯರ್‌ಗಳು ಬಯ್ದಾಗ ನಾನು ಆ ಬಾಲನ್ನು ಬೌಂಡರಿ ದಾಟಿ ಹೋಗುವಂತೆ ಎಸೆದು ಅಂಪೈರ್ ಫೋರ್ ರನ್ ಕೊಡಿ ಎಂದು ಹೇಳಿ ಮನೆಗೆ ಹೋಗಿದ್ದೆ!! ಇದಕ್ಕೆ ಇಗೋ ( EGO) ಗುಣ ಎನ್ನುತ್ತಾರೆ. ಆದರೆ ದೊಡ್ಡವನಾದಂತೆ ಬೆಳೆದ ಹಾಸ್ಟೆಲ್ ವಾತಾವರಣ ಹಾಗೂ ಜೀವನದಲ್ಲಿ ದುತ್ತೆಂದು ಎರಗಿ ಬಂದ ಕಷ್ಟಗಳು ಈ ಗುಣವನ್ನು ಕಡಿಮೆ ಮಾಡಿಕೊಳ್ಳಲು ನೆರವಾದವು. ಜೀವನದಲ್ಲಿ ಬೆಳೆಯೋ ಮನಸ್ಸು ಇರುವವರಿಗೆ ಈಗೋ ಗುಣ ಇರಬಾರದು. ಇದನ್ನು Edging God Out ಅಥವಾ Eliminating Growing Opportunity ಎಂದು ವಿಸ್ತರಿಸಬಹುದು. ಬಾಗಿ ಬದುಬೇಕೇ ಹೊರತು ಬೀಗಿ ಬದುಕಬಾರದು. ಇದರ ಬಗ್ಗೆ ಸಂಸ್ಕೃತದ ಶ್ಲೋಕವೊಂದರಲ್ಲಿ
ನಮಂತಿ ಫಲಿನೋ ವೃಕ್ಷಾಃ ನಮಂತಿ
ಗುಣಿನೋ ಜನಾಃ|
ಶುಷ್ಕವೃಕ್ಷಶ್ಚ ಮೂರ್ಖಶ್ಚ ನ ನಮಂತಿ
ಕದಾಚನ|| ಎಂದಿದೆ. ಅರ್ಥ ಫಲ ತುಂಬಿದ ಮರಗಳು ಬಾಗಿರುತ್ತವೆ. ಗುಣವಂತರು ವಿನಯದಿಂದ ಬಾಗುತ್ತಾರೆ. ಆದರೆ ಒಣಗಿದ ಮರಗಳು ಮತ್ತು ಮೂರ್ಖರು ಎಂದಿಗೂ ವಿನಯದಿಂದ ಬಾಗುವುದಿಲ್ಲ ಎಂಬ ಅರ್ಥ ಕೊಡುತ್ತದೆ. ಜನರು ಆಡುಭಾಷೆಯಲ್ಲಿ ನೇರವಾದ ಮರವನ್ನೇ ಕಡಿಯುತ್ತಾರೆ ಅದಕ್ಕೆ ನಾವು ತಗ್ಗಿ ಬಗ್ಗಿ ನಡೆಯಬೇಕು ಎಂದು ಹೇಳುತ್ತಾರೆ. ಜನಪದದಲ್ಲಿ ಹಿರಿಯರಿಗೆ ಹಿರಿಯನ್ನು ಕಿರಿಯರಿಗೆ ಕಿರಿಯನ್ನು
ನೆರೆಗಡ್ಡದ ಮುದುಕರ| ಕಂಡಾರ
ತಲೆಬಾಗಿ ನಡೆಯೋ ನನ ಕಂದಾ|| ಎಂದು ಹೇಳಲಾಗಿದೆ. ಮಹಾಭಾರತ ಹಾಗೂ ರಾಮಾಯಣದಲ್ಲಿ ಈ ಅಹಂ ತುಂಬಿದ ವ್ಯಕ್ತಿಗಳು ತಮ್ಮ ಅವಸಾನವನ್ನು ಯಾವ ರೀತಿ ಕಂಡರು ಎಂಬುದನ್ನು ತಿಳಿಯಬಹುದು.
ಒಮ್ಮೆ ಒಬ್ಬ ವೈದ್ಯರಿಗೆ ಗಣಪತಿ ಮೂರ್ತಿ ಇಷ್ಟ ಎಂಬುದು ನನಗೆ ತಿಳಿಯಿತು. ಅವರು ಚಿಕಿತ್ಸೆ ಕೊಡುವ ಕೊಠಡಿಯಲ್ಲಿ ಇಟ್ಟ ವಿವಿಧ ಗಣಪತಿ ಮೂರ್ತಿಗಳಿಂದ ನಾನು ಈ ವಿಷಯವನ್ನು ಗಮನಿಸಿದೆ. ಆಗ ನಾನು ಮುಂದಿನ ಸಲ ಇವರನ್ನು ಭೇಟಿ ಮಾಡಲು ಬರುವಾಗ ಗಣಪತಿ ಮೂರ್ತಿಯನ್ನು ತರಲು ನಿರ್ಧರಿಸಿದೆ. ಬೆಂಗಳೂರಿಗೆ ಹೋದಾಗ ಮೆಜೆಸ್ಟಿಕ್ ನಲ್ಲಿ ಮಾರುತ್ತಿದ್ದ ಒಂದು ಸುಂದರವಾದ ಮೂರ್ತಿಯನ್ನು ಕೊಂಡುಕೊಂಡು ಆ ವೈದ್ಯರ ಆಸ್ಪತ್ರೆಗೆ ಹೋದೆ. ಅಲ್ಲಿನ ನರ್ಸ್ ನನ್ನನ್ನು ಒಳಗೆ ಬಿಡಲಿಲ್ಲ. ರೋಗಿಗಳು ಬಹಳ ಜನ ಇದ್ದಾರೆ. ಇವತ್ತು ನಿಮಗೆ ವೈದ್ಯರನ್ನು ಭೇಟಿ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಹೇಳಿದರು. ನಾನು ಅವರಿಗೆ ಒಂದೇ ನಿಮಿಷ ಅವಕಾಶ ಕೊಡಿ ಮೇಡಂ ಎಂಬ ಕೇಳಿಕೊಂಡೆ. ಅವರು ಇದಕ್ಕೆ ಸಮ್ಮತಿಸಿದರು. ಅವರ ಚೇಂಬರ್‌ಗೆ ಹೋದ ತಕ್ಷಣ ಅವರಿಗೆ ತೆಗೆದುಕೊಂಡು ಹೋಗಿದ್ದ ಗಣಪತಿಯ ಮೂರ್ತಿಯನ್ನು ಕೊಟ್ಟೆ. ಅವರು ತುಂಬಾ ಖುಷಿ ಪಟ್ಟರು. ಅಷ್ಟೇ ಅಲ್ಲದೇ ನನಗೆ ಒಂದು ಶರ್ಟ್ ಗಿಫ್ಟ್ ಕೊಟ್ಟು ಮುಂದಿನ ಸಲ ಬರುವಾಗ ಈ ಶರ್ಟ್ ಹಾಕಿಕೊಂಡು ಬನ್ನಿ ಎಂದರು. ನನಗೆ ತುಂಬಾ ಖುಷಿಯಾಯಿತು. ಮೇಡಂ ನಮ್ಮ ಕಂಪೆನಿಯ ಪ್ರಾಡಕ್ಟ್ಸ್ ಬರೆದುಕೊಡಿ ಮೇಡಂ ಎಂದೆ. ಅದಕ್ಕವರು ಆಗಲಿ ಎಂದರು. ನನ್ನನ್ನು ಒಳಗಡೆ ಬಿಡೋಲ್ಲ ಎಂದು ಹೇಳಿದ ನರ್ಸ್‌ಗೂ ಇದನ್ನು ನೋಡಿ ಆಶ್ಚರ್ಯವಾಯಿತು.
ನಾವು ಯಾವತ್ತೂ ನಮ್ಮ ಎದುರಿನವರ ಆಸೆ ಆಕಾಂಕ್ಷೆಗಳು ಏನು? ಮನೋಸ್ಥಿತಿ ಹೇಗಿದೆ ಎನ್ನುವುದರ ಆಧಾರದ ಮೇಲೆ ನಮ್ಮ ವರ್ತನೆ ಇರಬೇಕು. ಇದು ಅವರನ್ನು ಗೆಲ್ಲಲು ಸಹಾಯವಾಗುತ್ತದೆ. ಕೆಲವು ಸಲ ನಮಗೆ ತೊಂದರೆ ಎನಿಸಿದರೂ ಹೊಂದಾಣಿಕೆ ಆಗಬೇಕು. When you are in Rome, you should be Roman ಎಂಬ ಮಾತೂ ಇದನ್ನು ಧ್ವನಿಸುತ್ತದೆ.
ವೈದ್ಯರು ಕೊಟ್ಟ ಶರ್ಟನ್ನು ನಾನು ಹಾಕಿಕೊಂಡು ಅವರನ್ನು ಭೇಟಿ ಮಾಡಲು ಹೋದೆನೇ? ಅಥವಾ ಇಲ್ಲವೋ ಎಂಬುದನ್ನು ಸಂಚಿಕೆಯಲ್ಲಿ ತಿಳಿಯೋಣ.

‘ಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬದುಕಿನಲಿ’ ಎಂಬ ಕವಿ ಜಿ.ಎಸ್.ಎಸ್ ರವರ ಸಾಲಿನಂತೆ ಹೊಂದಿಕೆ ಇಲ್ಲಿ ಕಷ್ಟ. ಆದರೆ ಹೊಂದಿಕೊಳ್ಳದಿದ್ದರೆ ಬಾಳು ಇನ್ನೂ ಕಷ್ಟ.

ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
