“ನಾವು ಒಂದೊಂದೇ ಮರದ ಜೊತೆ ಸಂಬಂಧ ಬೆಸೆಯೋದಿಲ್ಲ; ಅನೇಕ ಮರಗಳ ಜೊತೆಗೆ ಸಂಬಂಧ ಬೆಸೆಯುತ್ತಾ, ಮರಗಳನ್ನೂ ಹತ್ತಿರ ತರ್ತೇವೆ. ಈ ಜಾಲದ ಮೂಲಕ ನಾವೂ ಮತ್ತು ಮರಗಳೂ ಮಾತಾಡೋದು ಮಾತ್ರವಲ್ಲ, ಮರಗಳೂ ತಮ್ಮೊಳಗೇ ಮಾತಾಡಿಕೊಳ್ಳೋದೂ ಸಾಧ್ಯ. ನಮ್ಮ ಈ ಜಾಲದ ಸಹಾಯದಿಂದ, ತಾಯಿ ಮರಗಳೂ ತಮ್ಮ ಮಕ್ಕಳೊಂದಿಗೆ ಸದಾ ಬೆಸೆದುಕೊಂಡಿರಬಹುದು; ಒಂದು ಸಮುದಾಯದ ಎಲ್ಲಾ ಮರಗಳೂ ಒಂದಕ್ಕೊಂದು ಸದಾ ಸಂಪರ್ಕದಲ್ಲಿರಬಹುದು. ಅದಕ್ಕೆ ಬೇಕಾದ ಸಂದೇಶಗಳನ್ನು ನಾವು ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ರವಾನೆ ಮಾಡ್ತೇವೆ” ಎಂದು ಹೇಳಿದಳಂತೆ;
ಕ್ಷಮಾ ವಿ. ಭಾನುಪ್ರಕಾಶ್ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹನ್ನೊಂದನೆಯ ಕತೆ
ಸಂಜೆಯ ಸೂರ್ಯಾಸ್ತದೊಂದಿಗೆ, ಅಪ್ಪ ಮಾಡಿದ ಬಿಸಿ ಬಜ್ಜಿಯನ್ನು ವಿಭಾ ಚಿಕ್ಕಿಯ ಜೊತೆ ಸವಿಯುತ್ತಾ ಕೂತಿದ್ದ ಸಮುದ್ರ. ಕಾವ್ಯ ಒಂದು ಪುಸ್ತಕದ ‘ಪ್ರಾಜೆಕ್ಟ್’ನಲ್ಲಿ ಬ್ಯುಸಿ ಇದ್ದಳು. ಬೇಸಿಗೆ ರಜೆಗೆ ವಿಭಾ, ಕಾವ್ಯಕ್ಕನ ಮನೆಗೆ ಬಂದಾಗ, ಮಾತು-ಹರಟೆಗೆ ಕೊನೆಮೊದಲಿಲ್ಲದ ಸಂಭ್ರಮ. ಆದರೆ, ನೆನ್ನೆಯಿಂದ ಕಾವ್ಯಕ್ಕ ವಿಭಾಳ ಮಾತಿಗೆ ಸಿಗದಷ್ಟು ಕೆಲಸದಲ್ಲಿ ವ್ಯಸ್ತಳಾಗಿದ್ದಳು. ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ ಅಂದರೆ ‘ಕೃತಕ ಬುದ್ಧಿಮತ್ತೆ’ಯ ಬಗ್ಗೆ ಹಲವು ಲೇಖಕರು ಸೇರಿ ಬರೆಯುತ್ತಿದ್ದ ಪುಸ್ತಕದ ಭಾಗವಾಗಿ, ಕಾವ್ಯಳ ಲೇಖನವೂ ಅಚ್ಚಾಗುವುದಿತ್ತು. ಹಾಗಾಗಿ, ಅಡುಗೆ ಇತ್ಯಾದಿ ಪ್ರಕಾಶ್ ಬಾವ, ವಿಭಾ ಮತ್ತು ಸಮುದ್ರರ ಹೆಗಲೇರಿತ್ತು. ಕಾವ್ಯಳೇನೋ ಅಡುಗೆ ಮಾಡಿಟ್ಟು ಬರೆಯಲು ಕೂರಲು ಇನ್ನಿಲ್ಲದ ಪ್ರಯತ್ನ ಮಾಡಿದಳು. ಆದರೆ, ಇವರ ಮನೆಯಲ್ಲಿ ‘ಸಮಾನತೆ’ ಎಂಬುದು ಬರಿ ಬಾಯಿ ಮಾತಿನಲ್ಲಿ ಇಲ್ಲ. ಪ್ರತಿ ಮನುಷ್ಯರೂ ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಅಡುಗೆ ಮಾಡಲು ಕಲಿಯಬೇಕು, ಮನೆಯ ಪ್ರತಿ ಕೆಲಸವನ್ನೂ ಹಂಚಿಕೊಂಡು ಮಾಡಬೇಕು ಎಂಬ ನಿಲುವು ಗಂಡು-ಹೆಣ್ಣು ಎಂಬ ತಾರತಮ್ಯವಿಲ್ಲದೇ ಬದುಕಲು ಬುನಾದಿಯೇ ಸರಿ. ಬಿಸಿ ಬಜ್ಜಿ ಮಾಡಿಕೊಡುತ್ತಾ ಪ್ರಕಾಶ್, ವಿಭಾ ಮತ್ತು ಸಮುದ್ರರೊಂದಿಗೆ ದೇಶಗಳ ಹೆಸರುಗಳನ್ನು ಬಳಸಿ ಆಡುವ ‘ಅಟ್ಲಾಸ್’ ಆಟ ಆಡುತ್ತಿದ್ದರು. ನೀವು ಎಂದಾದರೂ ‘ಅಟ್ಲಾಸ್’ ಆಟ ಆಡಿದ್ದೀರಾ? ಇದು ಸರಳವಾದ ಆಟ; ನಮ್ಮ ಅಂತ್ಯಾಕ್ಷರಿಯ ಹಾಗೇ. ಒಂದು ಹಾಡಿನ ಕೊನೆಯ ಅಕ್ಷರದಿಂದ ಮುಂದಿನ ಹಾಡು ಶುರು ಮಾಡುತ್ತೇವಲ್ಲಾ? ಹಾಗೇ ಈ ಆಟದಲ್ಲಿ ಒಂದು ದೇಶದ/ರಾಜ್ಯದ/ಊರಿನ ಹೆಸರನ್ನು ಒಬ್ಬರು ಹೇಳಿದರೆ, ಅವರ ಮುಂದಿನವರು ಆ ಹೆಸರಿನ ಕೊನೆಯ ಅಕ್ಷರದಿಂದ ಶುರುವಾಗುವ ಸ್ಥಳನಾಮ ಹೇಳಬೇಕು. ಇದು ಮಕ್ಕಳಿಗೆ ಭೂಗೋಳದ ಬಗ್ಗೆ ಆಸಕ್ತಿ ಹುಟ್ಟಿಸೀತು.
ಬಜ್ಜಿ ತಿನ್ನುತ್ತಾ, ಬಂಗಾರದ ಸೂರ್ಯನನ್ನು ನೋಡುತ್ತಾ ಇದ್ದ ಈ ಗುಂಪನ್ನು ಸೇರಲು, ತನ್ನ ಕೆಲಸ ಮುಗಿಸಿ ಬಂದಳು ಕಾವ್ಯ. ಆಗ ಅವರ ಹೊಲದ ರೈತರು ಮನೆಗೆ ಮರಳುತ್ತಿದ್ದರು. ರೈತರ ಬಗ್ಗೆ ಮಾತಾಡುತ್ತಾ, ಕಾವ್ಯ ವಿಭಾಳ ಕಡೆಗೆ ತಿರುಗಿ “ವಿಭಾ ನಿನಗೆ ನಮ್ಮ ಭೂಮಿಯನ್ನು ಉಳುವ ರೈತರು ಗೊತ್ತು; ಆದ್ರೆ, ಭೂಮೀಲಿ ಇರುವ ರೈತರು ಮತ್ತು ಗಣಿಗಾರರು ಗೊತ್ತಾ?” ಎಂದಳು. ಆಗ ವಿಭಾ, “ಅದ್ಯಾರಕ್ಕಾ?” ಎಂದಳು. ಆಗ ಕಾವ್ಯ, “ಅದೇ ಕಣೋ, ನಮ್ಮ ಮರಗಿಡಗಳು ಮತ್ತು ಅವುಗಳ ಬೇರಿನೊಂದಿಗೆ ಬೆಸೆದುಕೊಂಡಿರೋ ‘ಫಂಗಸ್’ಗಳು” ಎಂದಳು ನಗುತ್ತಾ. ನೆನ್ನೆಯಿಂದಾ ಮಾತಿಗೆ ಸಿಗದ ಕಾವ್ಯಕ್ಕ, ಇಂದು ಲೇಖನ ಮುಗಿಸಿ ಬಂದು, ಮಾತಿನ ಹುಕಿಯಲ್ಲಿದ್ದಾಳೆ ಎಂದು ಎಲ್ಲರಿಗೂ ತಿಳಿದುಹೋಯ್ತು. ಆಗ ಪ್ರಕಾಶ್ “ನೀನು ಶುರು ಮಾಡು, ನಾನು ಇನ್ನೂ ಸ್ವಲ್ಪ ಬಜ್ಜಿ, ಜೊತೆಗೆ ಟೀ ತರ್ತೀನಿ” ಅಂತ ಹೇಳಿ ಒಳಹೊರಟನು. ಆಗ ಕಾವ್ಯ, “ಥ್ಯಾಂಕ್ಸ್ ಪ್ರಕಾಶ್, ನಿಜಕ್ಕೂ ಒಂದು ಕಪ್ ಒಳ್ಳೇ ಟೀ ಬೇಕು ಈಗ.” ಎನ್ನುತ್ತಾ ತಂಗಿ ವಿಭಾ, ಮಗ ಸಮುದ್ರನ ಕಡೆಗೆ ತಿರುಗಿ ಭೂಮಿಯ ‘ಫಾರ್ಮರ್ಸ್ ಮತ್ತು ಮೈನರ್ಸ್’ನ ಬಗ್ಗೆ ಮಾತಾಡೋಕೆ ಪ್ರಾರಂಭಿಸಿದಳು.
ಹಿಂದಿನ ಮಾತುಕತೆಯಲ್ಲಿ ವಿಭಾ ಮತ್ತು ಕಾವ್ಯ, ಮರಗಳು ಹೇಗೆ ಕೇಳಿಸಿಕೊಳ್ಳುತ್ತವೆ, ನೋಡುತ್ತವೆ, ವಾಸನೆ ಗ್ರಹಿಸುತ್ತವೆ ಮತ್ತು ರುಚಿ ನೋಡುತ್ತವೆ ಎಂಬುದನ್ನು ಚರ್ಚಿಸಿದ್ದರು. ಇಂದು ಮರಗಳ ಮಾತಿನ ಮಜಾ! “ಅವತ್ತೇ ನಾವು ಮಾತಾಡಿದ ಹಾಗೇ, ಫಂಗಸ್ ಅಥವಾ ಶಿಲೀಂಧ್ರಗಳು, ಒಂದೇ ಜೀವಕೋಶ ಹೊಂದಿರುವ ‘ಯೀಸ್ಟ್’ನಂತೆ ಇರಬಹುದು, ಅಥವಾ ಅನೇಕ ಜೀವಕೋಶಗಳನ್ನು ಒಳಗೊಂಡ ‘ಮಶ್ರೂಮ್’ನ ರೂಪದಲ್ಲೂ ಇರಬಹುದು. ಇಲ್ಲಿ ಮರಗಳ ಜೊತೆ ಬಾಂಧವ್ಯ ಬೆಳೆಸೋ ಫಂಗಸ್‌ಗಳು ಅನೇಕ ‘ಸೆಲ್ಸ್’ ಅಂದ್ರೆ ಜೀವಕೋಶ ಹೊಂದಿರತ್ವೆ. ಅವು, ನಮ್ಮ ಟ್ರೈನಿನ ಬೋಗಿಗಳು ಒಂದಕ್ಕೊಂದು ಥಳುಕು ಹಾಕೊಂಡಿರೋ ಹಾಗೆ, ಒಂದು ಜೀವಕೋಶಕ್ಕೆ ಮತ್ತೊಂದು ಅಂತ ಸೇರಿಕೊಳ್ಳುತ್ತಾ ಉದ್ದುದ್ದ ಎಳೆಗಳ ರೂಪ ಪಡೆಯತ್ವೆ. ಅವು ನಮ್ಮ ಮರಗಳ ಬೇರಿನ ಎಳೆಗಳ ಜೊತೆ ಸೇರಿಕೊಳ್ತಾ, ತಾವೂ ಉದ್ದಕ್ಕೆ ಮಣ್ಣಿನೊಳಗೆ ಬೆಳೆಯತ್ವೆ. ಹೀಗೆ ಬೆಳೆಯೋಕೆ, ಅವಕ್ಕೆ ಊಟ ಬೇಕಲ್ಲಾ? ಅದಕ್ಕೆ ಏನು ಮಾಡತ್ವೆ?” ಎಂದು ಪ್ರಶ್ನೆ ಎಸೆದಳು ಕಾವ್ಯ.
ಆಗ ಸಮುದ್ರಾ “ಅಮ್ಮ, ಈ ಫಂಗಸ್’ಗಳ ಹತ್ರ ‘ಕ್ಲೋರೋಫಿಲ್’ ಇರತ್ತಾ?” ಅಂತ ಕೇಳಿದ. ಅವನ ಯೋಚನಾ ಲಹರಿ ಎತ್ತ ಸಾಗುತ್ತಿದೆ ಎಂಬುದನ್ನು ಅರಿತ ಕಾವ್ಯ, ಅವನೇ ಯೋಚಿಸಲಿ ಎಂದು ಹೆಚ್ಚೇನೂ ಉತ್ತರ ಕೊಡದೆ, “ಇಲ್ಲಾ ಕಂದಾ, ಮರಗಿಡಗಳಲ್ಲಿ ಇರೋ ಪತ್ರಹರಿತ್ತು ಅಂದ್ರೆ ಕ್ಲೋರೋಫಿಲ್ ಇರಲ್ಲ ಈ ಫಂಗಸ್ ಹತ್ರ!” ಎಂದಷ್ಟೇ ಹೇಳಿ ಸುಮ್ಮನಾದಳು.
ಇದನ್ನು ಕೇಳಿದ ಸಮುದ್ರ, “ಅಯ್ಯೋ ನೇಚರ್ ಎಂಥಾ ವೇಸ್ಟ್ ಮಾಡಿಬಿಡ್ತು. ಪಾಪ ಆ ‘ಫಂಗಸ್’ಗಳಿಗೆ ಎಲ್ಲಾ ಇದೆ – ಮಣ್ಣು, ನೀರು, ಗಾಳಿ, ಬೇಕಾದ್ರೆ ಬಿಸಿಲೂ ಸಿಗತ್ತೇನೋ – ಅವೇ ಬೆಳಕಡುಗೆ ಅಂದ್ರೆ ಫೋಟೋಸಿಂಥೆಸಿಸ್ ಮಾಡ್ಬಹುದಿತ್ತು. ಆದ್ರೆ ಕ್ಲೋರೋಫಿಲ್ ಇಲ್ವಲ್ಲ!” ಎಂದ. ಇದಕ್ಕೆ ವಿಭಾ ನಗುತ್ತಾ, “ಹೇ ಸಮುದ್ರಾ, ನೇಚರ್ ಏನನ್ನೂ ವೇಸ್ಟ್ ಆಗಿ ಮಾಡಲ್ಲ ಕಣೋ. ಪ್ರತಿಯೊಂದು ಜೀವಿಗೂ, ಅದು ಇರುವ ರೀತಿಗೂ ಸರಿಯಾದ ಕಾರಣಗಳಿರ್ತವೆ. ಅಲ್ವಾ ಕಾವ್ಯಕ್ಕಾ?” ಎಂದಳು.
ಇದಕ್ಕೆ ಕಾವ್ಯ “ಖಂಡಿತವಾಗಿ ವಿಭಚ್ಚು! ನೀನು ಹೇಳಿದ್ದು ನೂರಕ್ಕೆ ನೂರು ಸತ್ಯ. ಮನುಷ್ಯರ ಹಾಗಲ್ಲ ಪ್ರಕೃತಿ. ದುಡ್ಡು, ಆಹಾರ – ಇವನ್ನೆಲ್ಲಾ ವೇಸ್ಟ್ ಮಾಡೋದು ಮನುಷ್ಯರ ದುರ್ಬುದ್ಧಿಯನ್ನ ತೋರಿಸತ್ತೆ ಅಷ್ಟೇ. ನಿಸರ್ಗದಲ್ಲಿ ‘ವೇಸ್ಟ್’ನ ಪರಿಕಲ್ಪನೆಯೇ ಇಲ್ಲ. ಕು.ವೆಂ.ಪು ಅವರು ಹೇಳಿದ ಹಾಗೆ ಪ್ರಕೃತಿಯಲ್ಲಿ ಯಾರೂ ಮುಖ್ಯರೂ ಅಲ್ಲ, ಅಮುಖ್ಯರೂ ಅಲ್ಲ. ಪ್ರತಿಯೊಂದು ಬಗೆಯ ಜೀವಿಯ ಅಸ್ತಿತ್ವ, ಆಹಾರ ಸರಪಳಿಯ ಭಾಗವಾಗಿ ಮಾತ್ರ ಅಲ್ಲ, ಇನ್ನೂ ಅನೇಕ ರೀತಿಯಲ್ಲಿ ಮುಖ್ಯವಾಗತ್ತೆ.” ಎಂದಳು.

ನಂತರ ಕಾವ್ಯ, ಸಮುದ್ರನ ಕಡೆಗೆ ತಿರುಗಿ, “ನೀನು ಹೇಳಿದ ಹಾಗೆ, ಫಂಗಸ್‌ಗಳ ಹತ್ತಿರ ‘ಬೆಳಕಡುಗೆ’ಗೆ ಬೇಕಾದ ಪಾತ್ರೆ ಇಲ್ವಲ್ಲ; ಅದಕ್ಕೆ ಅವು ಏನು ಮಾಡತ್ತೆ ಗೊತ್ತಾ ಸಮುದ್ರಾ? ಅವು ಮರಗಳ ಜೊತೆಗೆ ಒಂದು ಒಪ್ಪಂದಕ್ಕೆ ಬರತ್ವೆ. ಸಿನೆಮಾಗಳಲ್ಲಿ ನೋಡ್ತೀವಲ್ಲಾ, ಹಾಗೆ! ಇಮ್ಯಾಜಿನ್ ಮಾಡ್ಕೋ ಈ ದೃಶ್ಯವನ್ನ – ಒಂದು ದೊಡ್ಡ ಕಾಡು; ಅಲ್ಲೊಂದು ಮೀಟಿಂಗ್ ಇರತ್ತೆ; ಅಲ್ಲಿ ಮರಗಳೂ ಮತ್ತೂ ಶಿಲೀಂಧ್ರಗಳೂ ತಮ್ಮ ಬಣಗಳನ್ನ ಕರೆದುಕೊಂಡು ಬರತ್ವೆ; ಆಗ ಮರಗಳ ನೇತಾರ “ನೋಡಪ್ಪಾ ಶಿಲೀಂಧ್ರ, ನಾನು ನಿನಗೆ ಆಹಾರ ತಯಾರಿಸಿಕೊಡ್ತೀನಿ; ನಮ್ಮ ಹತ್ರ ಗಾಳಿ, ಸೂರ್ಯನ ಬೆಳಕು ಯಥೇಚ್ಚವಾಗಿ ಲಭ್ಯವಿದೆ. ಬೆಳಕಡುಗೆ ಮಾಡೋಕೆ ಕ್ಲೋರೋಫಿಲ್ ಅನ್ನೋ ಪಾತ್ರೆ ಇದೆ. ನೀನು ನನ್ನ ಬೇರಿಗೆ ಅಂಟಿಕೊಂಡು ಇರ್ಬೇಕಷ್ಟೇ. ನಿನಗೆ ಆಹಾರವನ್ನ ನೀನಿರುವಲ್ಲಿಗೇ ತಂದುಕೊಡ್ತೀನಿ. ಇದರ ಬದಲಿಗೆ ನನಗೇನು ಕೊಡ್ತೀಯಾ?” ಅಂತ ಕೇಳ್ತಂತೆ. ಎಂದು ಸಿನೆಮಾದ ದೃಶ್ಯವೆಂಬಂತೆ ವಿವರಿಸುವುದಕ್ಕೆ ಪ್ರಾರಂಭಿಸಿದಳು. ನೀವೂ ಕಲ್ಪನೆ ಮಾಡಿಕೊಳ್ಳಿ.
“ಮೀಟಿಂಗಿಗೆ ಬಂದಿದ್ದ ಶಿಲೀಂಧ್ರಗಳ ಮುಖಂಡ ಮುಂದೆ ಬಂದು, “ಧನ್ಯವಾದ ಮರಗಳ ನಾಯಕನೇ; ನೀವೆಲ್ಲಾ ನಮಗೆ ಆಹಾರ ಕೊಡುವ ರೈತರಾದರೆ, ನಾವೆಲ್ಲಾ ನಿಮಗಾಗಿ ಪೋಷಕಾಂಶಗಳನ್ನ ಭೂಮಿಯ ಆಳದಿಂದ ಬಗೆದು ಕೊಡುವ ಗಣಿಗಾರರಾಗ್ತೀವಿ. ನಿಮಗೆ ಈಗ ಸಿಗ್ತಾ ಇರೋ ನೀರಿಗಿಂತಾ ಹೆಚ್ಚು ನೀರು ತಂದುಕೊಡ್ತೀವಿ; ಜೊತೆಗೆ ‘ಫಾಸ್ಫರಸ್’ ಅಂದ್ರೆ ರಂಜಕ, ‘ನೈಟ್ರೋಜನ್’ ಅಂದ್ರೆ ಸಾರಜನಕ – ಇವೆಲ್ಲಾ ಖನಿಜಾಂಶಗಳನ್ನ ನೀವಿರುವಲ್ಲಿಗೆ ತಂದುಕೊಡ್ತೀವಿ.” ಅಂತ ಹೇಳಿದನಂತೆ. ಈ ಮಾತನ್ನು ಕೇಳಿ, ಇನ್ನೂ ಚಿಂತನೆಯಲ್ಲಿ ಮುಳುಗಿದ್ದನಂತೆ ಮರಗಳ ಮುಖಂಡ. ಆಗ ಶಿಲೀಂಧ್ರಗಳ ನಾಯಕಿ ಕೂಡ ಮುಂದೆ ಬಂದು, “ಮರಗಳ ನಾಯಕನೇ, ಇದರ ಜೊತೆಗೆ ನಾವು ಮತ್ತೊಂದು ‘ಆಫರ್’ ಕೊಡ್ತೀವಿ. ಕೇಳ್ತೀರಾ?” ಎಂದು ಮರು ಪ್ರಶ್ನೆ ಹಾಕಿದಳಂತೆ.” ಎಂದಳು ಕಾವ್ಯ.
ಆಗ ಸಮುದ್ರಾ, “ಏನಂತೆ ಅಮ್ಮಾ ‘ಆಫರ್ರೂ’?” ಎಂದು ಕೇಳಿದ. ಆಗ ಕಥೆಯನ್ನು ಮುಂದುವರೆಸಿದ ಕಾವ್ಯ, “ಹೂಂ, ಆಗ ಶಿಲೀಂಧ್ರಗಳ ನಾಯಕಿ “ನಾವು ಒಂದೊಂದೇ ಮರದ ಜೊತೆ ಸಂಬಂಧ ಬೆಸೆಯೋದಿಲ್ಲ; ಅನೇಕ ಮರಗಳ ಜೊತೆಗೆ ಸಂಬಂಧ ಬೆಸೆಯುತ್ತಾ, ಮರಗಳನ್ನೂ ಹತ್ತಿರ ತರ್ತೇವೆ. ಈ ಜಾಲದ ಮೂಲಕ ನಾವೂ ಮತ್ತು ಮರಗಳೂ ಮಾತಾಡೋದು ಮಾತ್ರವಲ್ಲ, ಮರಗಳೂ ತಮ್ಮೊಳಗೇ ಮಾತಾಡಿಕೊಳ್ಳೋದೂ ಸಾಧ್ಯ. ನಮ್ಮ ಈ ಜಾಲದ ಸಹಾಯದಿಂದ, ತಾಯಿ ಮರಗಳೂ ತಮ್ಮ ಮಕ್ಕಳೊಂದಿಗೆ ಸದಾ ಬೆಸೆದುಕೊಂಡಿರಬಹುದು; ಒಂದು ಸಮುದಾಯದ ಎಲ್ಲಾ ಮರಗಳೂ ಒಂದಕ್ಕೊಂದು ಸದಾ ಸಂಪರ್ಕದಲ್ಲಿರಬಹುದು. ಅದಕ್ಕೆ ಬೇಕಾದ ಸಂದೇಶಗಳನ್ನು ನಾವು ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ರವಾನೆ ಮಾಡ್ತೇವೆ” ಎಂದು ಹೇಳಿದಳಂತೆ; ಆಗ ಮರಗಳ ನಾಯಕ, “ಹೀಗೆ ನಾವೆಲ್ಲರೂ ಕೂಡಿ ಬಾಳೋಕೆ ಇದು ಸಹಾಯ ಮಾಡತ್ತೆ ಅಂದ್ರೆ, ಅದಕ್ಕಿಂತಲೂ ಸಂತೃಪ್ತಿಯ ವಿಷಯ ಮತ್ತೊಂದಿಲ್ಲ; ಒಗ್ಗಟ್ಟಿನಲ್ಲಿ ಬಲವಿದೆ ಅಲ್ವೇ? ಸರಿ ನಡೆಯಿರಿ, ನಾವೆಲ್ಲರೂ ಈ ಒಪ್ಪಂದಕ್ಕೆ ಸಹಿ ಹಾಕೋಣ” ಅಂತ ಅನೌನ್ಸ್ ಮಾಡಿದನಂತೆ. ಆಗ ಮರಗಳೂ, ಶಿಲೀಂಧ್ರಗಳೂ ಸಂತೋಷದಿಂದ ‘ಶೇಕ್ ಹ್ಯಾಂಡ್’ ಮಾಡೋ ಬದ್ಲು, ತಮ್ಮ ಬೇರುಗಳನ್ನ, ಶಿಲೀಂಧ್ರಗಳ ಎಳೆಗಳ ಜೊತೆಗೆ ಬೆಸೆದುಕೊಂಡು ‘ನೆಟ್ವರ್ಕ್’ ಅಂದ್ರೆ ಜಾಲ ತಯಾರಾಯ್ತಂತೆ” – ಎಂದು ಮಕ್ಕಳಿಗೆ ಮಜವಾದ ಸಿನಿಮೀಯ ಕಥೆ ಹೇಳಿದಳು ಕಾವ್ಯ.
ಈ ಕಥೆ ಕೇಳುತ್ತಾ ಮಕ್ಕಳೊಂದಿಗೆ ತಾನೂ ಎಂಜಾಯ್ ಮಾಡಿದ ಪ್ರಕಾಶ್, “ಚೆಂದದ ಕಲ್ಪನೆ ಇದು ಕಾವ್ಯ. ಇದನ್ನೊಂದು ಮಕ್ಕಳ ಕಥೆಯಾಗಿ ಬರಿ, ಆಯ್ತಾ?” ಎಂದ ಬಜ್ಜಿ ಮತ್ತು ಟೀ ನೀಡುತ್ತಾ. “ಥ್ಯಾಂಕ್ಸ್ ಪ್ರಕಾಶ್, ಹಾಗೇ ಮಾಡ್ತೀನಿ” ಎಂದಳು ಕಾವ್ಯ.
ಆಗ ವಿಭಾ, “ಅಕ್ಕಾ, ನಾವು ಇಂಟರ್ನೆಟ್ ಅಲ್ಲಿ www ಅಂತ ನೋಡ್ತೀವಲ್ಲ? World wide web – ಅದು ಇಡೀ ಜಗತ್ತಿನ ಇಂಟರ್ನೆಟ್ ಜಾಲ ಅಲ್ವಾ? ಹಾಗೇ ಇಲ್ಲೂ ನೋಡು, ಮರಗಳ ಮತ್ತು ‘ಫಂಗಸ್’ಗಳ ಜಗತ್ತಿನ ದೊಡ್ಡ ಜಾಲವೇ ಇದು” ಎಂದಳು; ತಂಗಿಯ ಬುದ್ಧಿವಂತಿಕೆಗೆ ತಲೆದೂಗುತ್ತಾ ಕಾವ್ಯ “ಹೌದೂ ಕಣೋ ವಿಭಾ; ನೀನು ಹೇಳಿದ ಹಾಗೇನೇ 1997ರಲ್ಲಿ ‘ನೇಚರ್’ ಅನ್ನೋ ಪತ್ರಿಕೆಯಲ್ಲಿ ಈ ಮರಗಳ ಮತ್ತು ಶಿಲೀಂಧ್ರಗಳ ಜಾಲಕ್ಕೆ, Wood wide web ಅಂತ ಹೆಸರಿಟ್ಟಿದ್ರು. ನೀನೂ ಅವರ ಹಾಗೆಯೇ ಯೋಚಿಸಿದೆ ನೋಡು!” ಎಂದು ಅಚ್ಚರಿ ಪಟ್ಟಳು.
ಆಗ ಸಮುದ್ರಾ, “ಅಮ್ಮ, ಇಲ್ಲಿ ಮರಗಳು ಆಹಾರ ಕೊಡತ್ವೆ, ‘ಫಂಗಸ್’ಗಳು ಮಿನರಲ್ಸ್ ಕೊಡತ್ವೆ. ಅದು ಅರ್ಥಾ ಆಯ್ತು. ಆದ್ರೆ ಇಲ್ಲಿ ಮರಗಳ ಮಾತು ಹೇಗೆ ನಡೆಯತ್ತೆ?” ಎಂದು ಕೇಳಿದ. ಆಗ ಪ್ರಕಾಶ್ “ಅದನ್ನ ನಾನು ಹೇಳ್ತೀನಿ. ಮರಗಳು ಎರಡು ಬಗೆಯಲ್ಲಿ ಮಾತಾಡತ್ವೆ – ಒಂದು ಗಾಳಿಯಲ್ಲಿ ಕೆಮಿಕಲ್ಸ್‌ನ ಹೊರಹಾಕೋ ಮೂಲಕ ಇತರ ಮರಗಳಿಗೆ, ಕೀಟ/ಪಕ್ಷಿ/ಪ್ರಾಣಿಗಳಿಗೆ ಸಂದೇಶ ಕಳಿಸೋದು ಒಂದು ರೀತಿ; ಎರಡನೆಯ ರೀತಿಯ ಮಾತುಕತೆಯೇ ಈ ಶಿಲೀಂಧ್ರಗಳ ಜೊತೆಗೆ ಬೆಸೆದುಕೊಂಡ ಜಾಲದ ಒಳಗೆ ರಾಸಾಯನಿಕಗಳನ್ನ ಕಳಿಸೋ ಮೂಲಕ. ಗಾಳಿಯಲ್ಲಿ ಕಳಿಸೋ ಸಂದೇಶ ಬಿಸಿಲು, ಗಾಳಿ, ಮಳೆಯಂಥಾ ಅನೇಕ ವಿಚಾರಗಳ ಮೇಲೆ ಅವಲಂಬಿತ ಅಲ್ವಾ? ಪ್ರತೀ ಸಂದೇಶಾನೂ ಸರಿಯಾಗಿ ಮತ್ತೊಂದು ಮರಕ್ಕೆ ತಲುಪಿತಾ ಅಂತ ಖಂಡಿತವಾಗಿ ಹೇಳೋಕೇ ಆಗಲ್ಲ; ಆದ್ರೆ, ಈ ಮರಗಳ ಬೇರು ಮತ್ತು ಶಿಲೀಂಧ್ರಗಳು ಸೇರಿ ಆಗಿರೋ ‘ಮೈಕೋರೈಝಾ’ ಅನ್ನೋ ಜಾಲ ಇದ್ಯಲ್ಲಾ? ಇದು ಪರ್ಫೆಕ್ಟಾಗಿ ಭೂಮಿಯ ಒಳಗೇ ಅಡಗಿಕೊಂಡು, ಸುಸೂತ್ರವಾಗಿ ಮೆಸೇಜ್ ತಲುಪಿಸತ್ವೆ” ಎಂದು ವಿವರಿಸಿದ.
ಕಾವ್ಯಳೂ ಇದಕ್ಕೆ ದನಿಗೂಡಿಸುತ್ತಾ, “ಹೌದೂ, ಈ ಸಂದೇಶಗಳು ಬರೀ ಕೆಮಿಕಲ್ಸ್ ಆಗಿಯೇ ಇರ್ಬೇಕು ಅಂತಲೂ ಇಲ್ಲ; ನಮ್ಮ ಮೆದುಳಿನ ಮತ್ತು ನರಗಳ ನಡುವೆ ಸಂದೇಶಗಳು ‘ವಿದ್ಯುತ್’ ರೂಪದಲ್ಲಿ ಹರಿಯತ್ತಲ್ವಾ? ಹಾಗೇ ಇಲ್ಲೂ ಕೆಮಿಕಲ್ ಸಂದೇಶದ ಜೊತೆ, ಎಲೆಕ್ಟ್ರಿಕ್ ಸಂದೇಶಗಳೂ ಹರಿದಾಡತ್ವೆ. ಈ ಸಂದೇಶಗಳ ಮೂಲಕ ಒಂದು ಮರವು ತನಗಿರುವ ಸಮಸ್ಯೆಯನ್ನು ಮತ್ತೊಂದು ಮರಕ್ಕೆ ತಿಳಿಸಬಹುದು, ಅಥವಾ ತಾನು ಹೂಬಿಡುವ ಕಾಲವನ್ನು ಉಳಿದ ತನ್ನಂತಹ ಮರಗಳ ಜೊತೆ ಹೊಂದಿಸಿಕೊಳ್ಳಬಹುದು; ಈ ಸಂದೇಶಗಳ ಮೂಲಕ ಒಂದು ಮರವು ತನ್ನ ಮರಿಯ ಜೊತೆ, ತನ್ನ ಕುಲಬಾಂಧವರ ಜೊತೆ ಸಂವಹನ ನಡೆಸುತ್ತಾ, ಬೆಳವಣಿಗೆಯ ಪರಿಯನ್ನು ಸರಿದೂಗಿಸಿಕೊಳ್ಳಬಹುದು. ಮರಗಳು, ಸಂದೇಶದ ಜೊತೆಜೊತೆಗೆ ತಮ್ಮ ಮಕ್ಕಳ ಜೊತೆ ಆಹಾರವನ್ನೂ ಹಂಚಿಕೊಳ್ಳುತ್ತವೆ; ಅದರ ಜೊತೆಗೆ, ಮಕ್ಕಳು ಬೆಳೆಯಲು ಬೇಕಾದ ಜ್ಞಾನವನ್ನೂ ಕೂಡ.” ಎಂದು ವಿವರಿಸಿದಳು.

ಇದಕ್ಕೆ ವಿಭಾ, “ಎಷ್ಟು ಚೆಂದ ಇದೆ ನೋಡಕ್ಕಾ ಇದೆಲ್ಲಾ? ಈ ಮರಗಳೂ, ಫಂಗಸ್‌ಗಳೂ ಎಲ್ಲವೂ ‘ಕೂಡಿ ಬಾಳಿದರೆ ಸ್ವರ್ಗಸುಖ’ ಅನ್ನೋದನ್ನ ಮತ್ತೆ ಮತ್ತೆ ಸಾಬೀತು ಮಾಡ್ತಾ ಇವೆ; ನಾವೆಲ್ರೂ ಅವರು ಬೇರೆ, ಇವರು ಬೇರೆ, ಅವರು ಅಂಥವರು, ಇವರು ಇಂಥವರು ಅನ್ನೋದು ಬಿಟ್ಟು ಎಲ್ಲರೂ ಕೈಜೋಡಿಸಿ ಒಂದು ಸಮುದಾಯವಾಗಿ ಒಬ್ಬರಿಗೊಬ್ಬರು ಸಹಾಯಕವಾಗಿ ಬದುಕಿದರೆ, ಈ ಭೂಮೀಲಿ ಯುದ್ಧ, ಮೋಸ, ವಂಚನೆ, ಭಯೋತ್ಪಾದನೆ – ಯಾವುದೂ ಇರಲ್ಲ” ಎಂದಳು. ಕಾವ್ಯ, ಸಮುದ್ರ, ಪ್ರಕಾಶ್ ಎಲ್ಲರೂ ವಿಭಾಳ ಮಾತಿಗೆ ಹೌದೆನ್ನುತ್ತಾ ತಲೆದೂಗಿದರು. ಇದಕ್ಕೆ ನೀವೇನಂತೀರಿ?
(ಹಿಂದಿನ ಕಂತು: ಪಿಸುಮಾತಿನ ಪಲ್ಲವಿಗೆ ಮರಗಿಡಗಳ ತನನ!)
ಕ್ಷಮಾ ಸೂಕ್ಷ್ಮಾಣುಜೀವಿ ವಿಜ್ಞಾನದಲ್ಲಿ ಎಂ.ಎಸ್.ಸಿ ಪದವೀಧರೆ. ವಿಜ್ಞಾನ ಶಿಕ್ಷಕಿ. ವಿಜ್ಞಾನ ಲೇಖನಗಳ ಲೇಖಕಿ ಮತ್ತು ಅನುವಾದಕಿ. ರಿಸರ್ಚ್ ಮ್ಯಾಟರ್ಸ್ ನಲ್ಲಿ ವಿಜ್ಞಾನ ಲೇಖನಗಳ ಕನ್ನಡ ವಿಭಾಗದಲ್ಲಿ ಸಂಪಾದಕಿಯೂ ಆಗಿರುವ ಇವರು ಗಾಯಕಿಯೂ, ಕಂಠದಾನ ಕಲಾವಿದೆಯೂ ಹೌದು.

