Advertisement
ಶರೀಫ್ ಕಾಡುಮಠ ಬರೆದ ಈ ದಿನದ ಕವಿತೆ

ಶರೀಫ್ ಕಾಡುಮಠ ಬರೆದ ಈ ದಿನದ ಕವಿತೆ

ಕೊಡೆಯ ಚಿತ್ರಗಳು

ಸಾಲ ಕೊಟ್ಟವ
ಕಣ್ಣ ಮುಂದೆ
ಹಾದು ಹೋಗುವಾಗಲೂ
ಕಣ್ಣೆತ್ತಿ ನೋಡದ ಹಾಗೆ
ಕೊಡೆ ಮೆಲ್ಲನೆ ಬಾಗುತ್ತದೆ
ಮುಖ ಕಾಣಿಸದಂತೆ
ದುಡ್ಡಿದ್ದರೂ ಕೊಡೆನೆಂದು
ಒಳಗೊಳಗೇ ಕಣ್ತಪ್ಪಿಸಿಕೊಂಡ
ಕಳ್ಳಖುಷಿ

****

ಈಗಷ್ಟೇ ಮುನಿಸು
ಬೀದಿ ಬದಿಯ ಗೂಡಂಗಡಿಯಲ್ಲಿ
ಎರಡು ಕಪ್ ಚಹಾ ಜೊತೆಗೇ ಹೀರಿ
ಮಾತು ಎಲ್ಲೆ ಮೀರಿ
ಮೋಡ ಕವಿದ ವಾತಾವರಣ

ಧೋ ಎನ್ನುತ್ತ ಸುರಿದ ಮಳೆಯಲ್ಲಿ
ಕೊಡೆಯೊಳಗೆ ಅರ್ಧ ತುಂಬಿ
ಹೆಜ್ಜೆಯಿಡುತ್ತಾ ಸಾಗಿದ್ದಾಳೆ
ಭಾರವೆಲ್ಲ ನೀರಿನಂತೆ ತೊಯ್ದು
ಅವಳ ಕಾಲ ಸುತ್ತ
ಅವಳೋ ಚೆಲ್ಲುತ್ತ
ಕ್ಷಣಮಾತ್ರದೊಳಗೆಲ್ಲ
ಮುಗಿದು ಹೋಯಿತು
ಚಿತ್ರ ಎದೆ ಗೋಡೆಯ ಮೊಳೆಯ ಮೇಲೆ
ತಾನೇ ಹೋಗಿ ತೂಗಿತು

****

ಹಸಿಹಸಿರು ಚೇವಿನ ಎಲೆಯೂ
ಕೊಡೆಯಾಗಿತ್ತು ನಮಗೆ
ಅಮ್ಮನ ಸೀರೆಯ ಸೆರಗೂ
ತೊಟ್ಟಿಲಿಂದ ಶಾಲೆ ಮೆಟ್ಟಿಲವರೆಗೆ

ಮಳೆಯೂ ಕೊಡೆ ಹರಿಯದಂತೆ
ತಣ್ಣಗೆ ಸುರಿಯುತ್ತಿತ್ತು
ಬರಿಗಾಲ ಕಿರುಹೆಜ್ಜೆಗಳ
ಭಾವ ಅರಿತವರಂತೆ

****

ಜೋರು ಗಾಳಿಗೆ ತಿರುಗಿಬಿತ್ತು ಕೊಡೆ
ನಾ ಬಿಡೆ ಎಂದು ಬುಡ
ಹಿಡಿದು ನಿಂತವಳ ಮೈಯೆಲ್ಲ ಒದ್ದೆ
ಕಡ್ಡಿ ಮುರಿದ ಕೊಡೆಯ ಜೊತೆ
ಮಳೆಯ ಮಾತು ಕಡ್ಡಿ ಮುರಿದಂತೇ

ಕೊಡೆ ರಿಪೇರಿ ಅಂಗಡಿಯವನ
ಕಣ್ಣಲ್ಲಿ ಹಸಿವು
ಎದೆಯಲ್ಲಿ ಅನ್ನದ ಬುತ್ತಿ
ಮುಚ್ಚಳ ತೆರೆಯುತ್ತಿತ್ತು

***

ಒಂದೇ ಕೊಡೆ
ಕೈಯೆರಡು ಈಗ ಒಂದೇ
ಮಳೆ ಗಾಳಿ ಕೂಡಿ ಬೀಸಿ
ಮೈತುಂಬ ಮಿಂದಂತೆ
ಉಸಿರ ಬಿಸಿಯ ನಡುವೆ
ಕೊಡೆಯು ನೆಪಮಾತ್ರ

ನೋಟ ಬಲು ಸನಿಹ
ಹನಿಯು ಹಣೆಯಿಂದಿಳಿದು
ತುಟಿಗೆ ಮತ್ತೆಲ್ಲೆಲ್ಲೊ
ಮುತ್ತಿಗಾಗಿ ಕಾದ
ಒಂದು ಘಳಿಗೆ
ನಿಂತ ಜಾಗವೆ ವೃಂದಾವನ

About The Author

ಶರೀಫ್ ಕಾಡುಮಠ

ಶರೀಫ್ ಕಾಡುಮಠ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನವರು. ಪ್ರಸ್ತುತ ಸೌದಿ ಅರೇಬಿಯಾದ ರಿಯಾಧ್‌ನಲ್ಲಿದ್ದಾರೆ. ಇವರ ಅನೇಕ ಬರಹ, ಕವಿತೆಗಳು ಪತ್ರಿಕೆ, ವೆಬ್ ಸೈಟ್‌ಗಳಲ್ಲಿ ಪ್ರಕಟವಾಗಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ