Advertisement
ಜಯಲಕ್ಷ್ಮೀ ಪಾಟೀಲ್‌ ಆತ್ಮಕಥನ “ತಿಟ್ಹತ್ತಿ ತಿರುಗಿ”ಯ ಆಯ್ದ ಭಾಗ

ಜಯಲಕ್ಷ್ಮೀ ಪಾಟೀಲ್‌ ಆತ್ಮಕಥನ “ತಿಟ್ಹತ್ತಿ ತಿರುಗಿ”ಯ ಆಯ್ದ ಭಾಗ

ಒಂದೆರಡು ದಿನಗಳ ನಂತರ ಅಪ್ಪಾ ದಾಡಿ ಮಾಡಿಟ್ಟುಕೊಂಡ ಟೋಪಾಜ್ ಬ್ಲೇಡನ್ನು ತೆಗೆದುಕೊಂಡು, ಬಲಗಡೆಯ ಮುಂದೆಲೆಯಲ್ಲಿನ ಕಿರುಬೆರಳು ಗಾತ್ರದ ಕೂದಲನ್ನು ಕಣ್ಣೆದುರು ಎಳೆದು ತಂದು ಕರ್ರ್ ಕರ್ರ್ ಎಂದು ಕತ್ತರಿಸಿಕೊಂಡು, ಶಾಂತಾ ಹೇಳಿದಂತೆ, ಅದಕ್ಕೆ ನೀರು ಸೋಕಿಸಿ ಬೆರಳಲ್ಲಿ ಸುರಳಿ ಸುತ್ತಿಹಿಡಿದು ಬಿಟ್ಟೆ. ಅವಳಂತೆ ಗುಂಗುರಾಗದೆ ಕತ್ತರಿಸಿದ ಕೂದಲು ಹಾಗೆಲ್ಲ ಸುಲಭದಲ್ಲಿ ಮಣಿಯಲಾರೆವು ಎಂದು ಸೆಟೆದು ನಿಂತಿದ್ದವು. ಮತ್ತೆ ಮತ್ತೆ ಪ್ರಯತ್ನಿಸುವ ನನ್ನ ಸರ್ಕಸ್ ಅಪ್ಪಾರ ಕಣ್ಣಿಗೆ ಬಿತ್ತು. ಏನದು? ಅಂದರು. ಯಾವುದೇ ಅಳುಕಿಲ್ಲದೇ ನಾನು, ಶಾಂತಾ ಮಾಡಿಕೊಂಡಿದ್ದನ್ನು ನೋಡಿ ನನಗೂ ಆಸೆಯಾಗಿ ಹೀಗೆ ಮಾಡಿಕೊಂಡಿದ್ದೇನೆ ಎಂದೆ.
ಜಯಲಕ್ಷ್ಮೀ ಪಾಟೀಲ್‌ ಆತ್ಮಕಥನ “ತಿಟ್ಹತ್ತಿ ತಿರುಗಿ”ಯ ಆಯ್ದ ಭಾಗ ನಿಮ್ಮ ಓದಿಗೆ

ನಾನಾಗ ಆರನೇ ತರಗತಿಯಲ್ಲಿದ್ದು ವಾರ್ಷಿಕ ಪರೀಕ್ಷೆಗಳಿಗೆ ತಿಂಗಳೆರಡು ಬಾಕಿ ಇತ್ತು. ಅಂದು ಅವಧೂತ ಶುಕಮುನಿಯ ಜಾತ್ರೆ ಇತ್ತು. ಪ್ರತಿ ವರ್ಷ ಶಿವರಾತ್ರಿಗೆ ಶುಕಮುನಿಯ ತಾತನ ಜಾತ್ರೆ. ಅದಕ್ಕೂ ಒಂದು ವಾರ ಮೊದಲಿಂದ ಪಲ್ಲಕ್ಕಿ ಉತ್ಸವ ಶುರುವಾಗಿದ್ದು ಜಾತ್ರೆಯ ದಿನ ಅಂತ್ಯಗೊಳ್ಳುತ್ತದೆ. ಮೊದಲ ಬಾರಿ ಈ ಪಲ್ಲಕ್ಕಿ ಉತ್ಸವದ ಬಗ್ಗೆ ಕೇಳಿದ್ದೆನಾದ್ದರಿಂದ ನೋಡುವ ಉತ್ಸುಕತೆ ನನ್ನಲ್ಲಿ. ಅಪ್ಪ ಅವ್ವ ಪರವಾನಿಗಿ ಕೊಟ್ಟರು. ಪಕ್ಕದ ಮನೆಯಲ್ಲಿ ಹೆಣ್ಣುಮಕ್ಕಳಿದ್ದರು ಎಂದೆನಲ್ಲ, ಅವರಲ್ಲಿ ಚಿಕ್ಕವಳು ಶಾಂತಾ ನನಗಿಂತ ೩-೪ ವರ್ಷ ದೊಡ್ಡವಳು. ಅವಳಲ್ಲಿ ಹೋಗೋಣ್ವಾ ಎಂದು ಕೇಳಿದೆ. ಆಕೆ ಒಪ್ಪಿಕೊಂಡು ಸೀರೆ ಉಟ್ಕೊಳ್ಳೋಣ ಅಂದಳು. ನನಗೋ ಸೀರೆ ಉಡಲು ಬರದು. ಆಕೆಯೇ ಉಡಿಸುವುದಾಗಿ ತಿಳಿಸಿದಳು, ಒಪ್ಪಿದೆ. ನನ್ನ ಅವ್ವ ಉಡಲು ಅವಳಿಗೆ ತನ್ನ ಸೀರೆ ಕೊಟ್ಟರು. ಅವಳು ನನಗೆ ತನ್ನ ಸೀರೆಯೊಂದನ್ನು ಉಡಿಸಿದಳು. ಹೆಚ್ಚು ಎತ್ತರವಿಲ್ಲದಿದ್ದರೂ ಶಾಂತಾ ಹಾಲು ಬಣ್ಣದ ಚಲುವೆ. ಅವಳು ಮುಂದೆಲೆಯ ಸ್ವಲ್ಪ ಕೂದಲನ್ನು ಎರಡೂ ಬದಿಯಲ್ಲಿ ಕತ್ತರಿಸಿಕೊಂಡು ಮುಂಗುರುಳು ಮಾಡಿಕೊಂಡಿದ್ದಳು. ಅವಳ ಮುಖದ ಮೇಲೆ ಆಗಾಗ ಓಲಾಡುವ ಆ ಮುಂಗುರುಳು ನನ್ನನ್ನು ಆಕರ್ಷಿಸಿತ್ತು. ಆಸೆಯಿಂದ ಹೇಗೆ ಮಾಡಿಕೊಂಡೆ ಎಂದವಳನ್ನು ಕೇಳಿದೆ. ಬ್ಲೇಡ್ ತೆಗೆದುಕೊಂಡು ಕತ್ತರಿಸಿ, ಕತ್ತರಿಸಿದ ಕೂದಲಿಗೆ ನೀರು ಹಚ್ಚಿ, ಬೆರಳಲ್ಲಿ ಸುತ್ತಿ ಸುರಳಿ ಮಾಡಿ ಸ್ವಲ್ಪ ಹೊತ್ತು ಹಾಗೇ ಹಿಡಿದಿಟ್ಟು ಬಿಟ್ಟಲ್ಲಿ ತನ್ನಂತೆ ಮುಂಗುರುಳು ಆಗುತ್ತವೆ ಎಂದಳು. ನಾನೂ ಹಾಗೆ ಮಾಡಿಕೊಳ್ಳುವುದೇ ಸೈ ಎಂದು ನಿರ್ಧರಿಸಿ, ಬಲು ಖುಷಿಯಿಂದ ಅವಳೊಡನೆ ಹೊರಟು, ಗೋತಗಿಯವರ ಮನೆಯ ಎದುರಿನ ಮನೆಯ ಕಟ್ಟೆಯ ಮೇಲೆ, ಆ ದಾರಿಗುಂಟ ಹಾಯ್ದು ಹೋಗುವ ಪಲ್ಲಕ್ಕಿಗಾಗಿ ಕಾಯುತ್ತಾ ನಿಂತೆ. ರೇಣುಕಾ ಕೂಡ ನಮ್ಮ ಜೊತೆಗಿದ್ದಳು. ಎಲ್ಲರ ಮನೆಗಳ ಮುಂದೆಯೂ ದೊಡ್ಡ ದೊಡ್ಡ ರಂಗೋಲಿ ಹಾಕಲಾಗಿತ್ತು. ಮನೆಗಳ ಕಟ್ಟೆಯ ಮೇಲೆ ಕಂಬಳಿ ಹಾಸಿ, ತುಂಬಿದ ಕೊಡವೊಂದನ್ನು ಇಟ್ಟಿದ್ದರು. ಪಲ್ಲಕ್ಕಿ ಹತ್ತಿರ ಬರುತ್ತಿದ್ದಂತೆಯೇ, ಕೊಡದಲ್ಲಿನ ನೀರನ್ನು ಆ ದಾರಿಯಲ್ಲಿ ಸುರಿದು ಬರ ಮಾಡಿಕೊಳ್ಳುತ್ತಿದ್ದರು. ಪ್ರತಿಯೊಬ್ಬರಿಗೂ ತಮ್ಮ ಮನೆಗೆ ಪಲ್ಲಕ್ಕಿ ಬಂದು ಕೂರಬೇಕೆಂಬ ಹಂಬಲ. ಆದರೆ ಹಾಗಾಗುತ್ತಿರಲಿಲ್ಲ. ಇಂಥದ್ದೇ ಮನೆಗೆ ಪಲ್ಲಕ್ಕಿ ಬಂದು ಕೂರಲಿದೆ ಎಂಬ ಯಾವ ನಿಶ್ಚಯವೂ ಇರುತ್ತಿರಲಿಲ್ಲವಾಗಿ ಜನರಲ್ಲಿ ಅಪಾರ ಕುತೂಹಲ. ತಮ್ಮ ಮನೆಗೆ ಪಲ್ಲಕ್ಕಿ ಬಂದಿತೆಂದರೆ ಆ ಮನೆಯವರ ಸಂಭ್ರಮ ಹೇಳತೀರದು. ಧನ್ಯತೆ ಅವರೆಲ್ಲರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಪಲ್ಲಕ್ಕಿ ಬಂದು ಸಮಾಧಾನದಿಂದ ಕುಳಿತೋ ಇಲ್ಲವೆ ನಿಂತೇ ಪೂಜೆ ಮಾಡಿಸಿಕೊಂಡು ಹೋದರೆ ಶುಭ ಅಂತಲೂ, ಬಂದ ಪಲ್ಲಕ್ಕಿ ಮನೆಯ ಗೋಡೆಗೆ ಇಲ್ಲಾ ಬಾಗಿಲಿಗೆ ಗುದ್ದಿ ಹೋದರೆ ಅಶುಭ ಅಂತಲೂ, ಆ ವರ್ಷ ಆ ಮನೆಯಲ್ಲಿ ಸಾವೋ ನೋವೋ ನಿಶ್ಚಿತ ಎಂಬ ನಂಬಿಕೆ ಇದೆ ಅಲ್ಲಿ. ಹೀಗಾಗಿ ಪಲ್ಲಕ್ಕಿ ಬಂದು ಹೋಗುವವರೆಗೆ ಎಲ್ಲರ ಮನದಲ್ಲಿ ಆತಂಕವೂ ಇರುತ್ತಿತ್ತು. ಹಾಗೆ ಬಂದ ಪಲ್ಲಕ್ಕಿ ಗೋತಗಿಯವರ ಮನೆಯ ಕಟ್ಟೆಯ ಮೇಲೆ ಕುಳಿತಾಗ ರೇಣುಕಾ ಟಣ್ಣನೆ ಜಿಗಿದು ತಮ್ಮ ಮನೆಗೆ ಓಡಿದಳು. ಅವಳೊಡನೆ ಹೊರಟು ನಿಂತ ನನ್ನನ್ನು ಶಾಂತಾ ತಡೆದು ನಿಲ್ಲಿಸಿದಳು. ನನಗೋ ಪಲ್ಲಕ್ಕಿಯನ್ನು ಹತ್ತಿರದಿಂದ ನೋಡಬೇಕೆನ್ನುವ ಚಡಪಡಿಕೆ. ಶಾಂತಾ ಹೋಗಲು ಬಿಡುತ್ತಿಲ್ಲ. ಪಲ್ಲಕ್ಕಿ ಮುಂದೆ ನಡೆದ ನಂತರ ಅವರ ಮನೆಗೆ ಬಂದ ನನ್ನನ್ನು ಕಂಡು ರೇಣುಕಾರ ತಾಯಿ ಅಕ್ಕರೆಯಿಂದ,

(ಜಯಲಕ್ಷ್ಮಿ ಪಾಟೀಲ್‌)

“ಎದ್ರಿಗೇ ತಾತನ ಪಲ್ಲಕ್ಕಿತ್ತು. ಬಂದು ಸನಮಾಡಬಾರ್ದಿತ್ತಾ? ಅಕಿ ಜತಿಗೆ ಅಲ್ಲೇ ಯಾಕ ನಿಂತಿ?” ಸಣ್ಣಗೆ ಗದರಿದರು.

ನಾನೆಷ್ಟು ಕರೆದರೂ ಶಾಂತಾ ರೇಣುಕಾರ ಮನೆಯೊಳಗೆ ಬರದೆ ಹೊರಗೇ ನನಗಾಗಿ ಕಾಯುತ್ತಾ ನಿಂತಿದ್ದಳು. ಆ ಮನೆಯವರೂ ಆಕೆಯನ್ನು ಮನೆಯೊಳಗೆ ಕರೆಯಲಿಲ್ಲ. ರೇಣುಕಾರ ತಾಯಿಯ ವರ್ತನೆಯಿಂದ ಆಕೆ ಅವರ ಮನೆಯೊಳಗೆ ಬರುವುದು ಅವರಿಗಿಷ್ಟವಿಲ್ಲ ಎನ್ನುವುದು ಒಡೆದು ತೋರುತ್ತಿತ್ತು. ಹಾಗೆ ಮಾಡಬಾರದು, ಪಾಪ ಅದರಿಂದ ಶಾಂತಾಗೆ ನೋವಾಗುತ್ತದೆ ಅನ್ನುವುದು ದೊಡ್ಡವರಾದ ಅವರಿಗೆ ತಿಳಿಯುವುದಿಲ್ಲವೇ ಎಂದೆನಿಸಿತು ನನಗೆ. ಆದರೆ ಶಾಂತಾ ಅದನ್ನೆಲ್ಲ ಮನಸ್ಸಿಗೆ ಹಚ್ಚಿಕೊಳ್ಳದೆ ನಿರಾಳವಾಗಿದ್ದಳು. ಇಬ್ಬರೂ ಮನೆಗೆ ಮರಳಿದೆವು.

ಒಂದೆರಡು ದಿನಗಳ ನಂತರ ಅಪ್ಪಾ ದಾಡಿ ಮಾಡಿಟ್ಟುಕೊಂಡ ಟೋಪಾಜ್ ಬ್ಲೇಡನ್ನು ತೆಗೆದುಕೊಂಡು, ಬಲಗಡೆಯ ಮುಂದೆಲೆಯಲ್ಲಿನ ಕಿರುಬೆರಳು ಗಾತ್ರದ ಕೂದಲನ್ನು ಕಣ್ಣೆದುರು ಎಳೆದು ತಂದು ಕರ್ರ್ ಕರ್ರ್ ಎಂದು ಕತ್ತರಿಸಿಕೊಂಡು, ಶಾಂತಾ ಹೇಳಿದಂತೆ, ಅದಕ್ಕೆ ನೀರು ಸೋಕಿಸಿ ಬೆರಳಲ್ಲಿ ಸುರಳಿ ಸುತ್ತಿಹಿಡಿದು ಬಿಟ್ಟೆ. ಅವಳಂತೆ ಗುಂಗುರಾಗದೆ ಕತ್ತರಿಸಿದ ಕೂದಲು ಹಾಗೆಲ್ಲ ಸುಲಭದಲ್ಲಿ ಮಣಿಯಲಾರೆವು ಎಂದು ಸೆಟೆದು ನಿಂತಿದ್ದವು. ಮತ್ತೆ ಮತ್ತೆ ಪ್ರಯತ್ನಿಸುವ ನನ್ನ ಸರ್ಕಸ್ ಅಪ್ಪಾರ ಕಣ್ಣಿಗೆ ಬಿತ್ತು. ಏನದು? ಅಂದರು. ಯಾವುದೇ ಅಳುಕಿಲ್ಲದೇ ನಾನು, ಶಾಂತಾ ಮಾಡಿಕೊಂಡಿದ್ದನ್ನು ನೋಡಿ ನನಗೂ ಆಸೆಯಾಗಿ ಹೀಗೆ ಮಾಡಿಕೊಂಡಿದ್ದೇನೆ ಎಂದೆ. ನಡಿ ಒಳಗ ಅಂದ್ರು. ಮನೆ ಒಳಗೇ ಇದ್ದ ನನಗೆ ತಿಳಿಯದೇ ಅಪ್ಪರ ಮುಖ ನೋಡುತ್ತಾ ನಿಂತೆ. ಅಡುಗೆ ಮನೆಗೆ ಕೈ ಹಿಡಿದು ಕರೆ ತಂದವರೇ ಅಲ್ಲಿದ್ದ ಒಡಗಟ್ಟಿಗೆ ಒಂದನ್ನು ಹಿರಿದೆಳೆದು ಎರಡು ಬಿಟ್ಟರು ನನಗೆ. ಕಾರಣ ತಿಳಿಯದೇ ಕಂಗಾಲಾಗಿದ್ದೆ ನಾನು.

“ಚೋಟದಿ. ಫ್ಯಾಶನ್ ಮಾಡ್ತೀ ಫ್ಯಾಶನ್ನು? ಅದೂ ಆ ಶಾಂತಾನ್ನ ನೋಡಿ! ಮನಿ ಮರ್ಯಾದಿ ಮಣ್ಣಪಾಲು ಮಾಡಬೇಕಂತಿ ಮಾಡಿ ಏನು?” ಎನ್ನುತ್ತಾ, ಎರಡೂ ಕೈ ಮೇಲೆತ್ತಿ, ಒಂಟಿಗಾಲಲ್ಲಿ ನಿಲ್ಲಲು ಹೇಳಿದರು. ನನ್ನ ತಮ್ಮ ತಂಗಿಯರಿಗೆಲ್ಲ ನಾನು ಹಾಗೆ ಒಂಟಿಗಾಲಲ್ಲಿ ನಿಂತಿದ್ದು ಮೋಜು. ನಗುವನ್ನು ತಡೆಹಿಡಿದುಕೊಳ್ಳುವ ಪ್ರಯತ್ನದಲ್ಲಿ ಯಾರೋ ಕಿಸಕ್ ಅಂದಿದ್ದೂ ಕೇಳಿಸಿತು. ಸಿಟ್ಟಿನಲ್ಲಿದ್ದ ಅಪ್ಪಾ ಅವರನ್ನೂ ಗದರಿದರು. ಚಿಳ್ಳೆಗಳು ಬಾಲ ಮುದುರಿಕೊಂಡು ಸುಮ್ಮನಾದವು. ನಾನು ಒಳಗೊಳಗೇ ಉರಿಯುತ್ತಿದ್ದೆ.

ಅಪ್ಪಾ ಹಾಗೆ ಸಿಟ್ಟಿಗೇಳಲು ಕಾರಣವಿತ್ತು ಎನ್ನುವುದು ನಂತರ ಗೊತ್ತಾಯಿತು. ಅಂದು ನಾನು ಶಾಂತಾನ ಜೊತೆಯಲ್ಲಿ, ಅವಳ ಸೀರೆಯುಟ್ಟು ನಿಂತಿದ್ದನ್ನ ಕಂಡವರ್ಯಾರೋ ಅಪ್ಪಾರ ಬಳಿ ಶಾಂತಾಳ ಕುಲಕಸುಬನ್ನು ತಿಳಿಸಿದ್ದರು. ನಮ್ಮ ಪಕ್ಕದ ಮನೆಯವರಾದ ಆ ತಾಯಿ ಮತ್ತು ಮಕ್ಕಳು ಮೈ ಮಾರಿಕೊಳ್ಳುವ ವೃತ್ತಿಯಲ್ಲಿದ್ದರು! ಅದನ್ನು ಕೇಳಿದ ಅಪ್ಪಾ ನನ್ನ ಮುಂಗುರುಳ ಪ್ರಯೋಗವನ್ನು ಕಂಡು ಸಹಜವಾಗಿಯೇ ಹೆದರಿದ್ದರು.

ಶಾಂತಾ, ಆಕೆಯ ಒಬ್ಬ ಅಕ್ಕ, ಅಮ್ಮ ಇವರೆಲ್ಲ ಆ ವೃತ್ತಿಯನ್ನು ಖುಷಿಯಿಂದಲೇ ಒಪ್ಪಿಕೊಂಡಿದ್ದರಂತೆ. ಅವಳ ಇನ್ನೊಬ್ಬ ಅಕ್ಕನಿಗೆ ಇದು ಸುತಾರಾಂ ಇಷ್ಟವಿಲ್ಲದ ಕಾರಣ ಆ ಬಗ್ಗೆ ಅವರ ಮನೆಯಲ್ಲಿ ತಾಯಿ ಮಗಳಿಗೆ ಜಗಳಗಳಾಗಿ ಕೊನೆಗೆ ಆಕೆ ಸೋಲದೆ ಆಕೆಯ ತಾಯಿ ಒತ್ತಾಯಿಸುವುದನ್ನು ಬಿಟ್ಟಳೆಂದೂ ತಿಳಿಯಿತು. ಅವಳ ಬಗ್ಗೆ ಕೇಸೂರಿನ ಜನರಲ್ಲಿ ಗೌರವವಿತ್ತು. ಇದೆಲ್ಲವನ್ನು ನನಗೆ ಹೇಳಿದವಳು ರೇಣುಕಾ. ಅವರ ವೃತ್ತಿಯ ಬಗ್ಗೆ ನನಗೆ ಹೇಳಿದವಳೂ ಅವಳೇ. ಮೈ ಮಾರಿಕೊಳ್ಳುವುದು ಎಂದರೇನು ಎನ್ನುವುದು ನಮ್ಮಿಬ್ಬರಿಗೂ ಸ್ಪಷ್ಟವಿರಲಿಲ್ಲವಾದರೂ ಎಂಥದ್ದೋ ನಮಗೆಲ್ಲವೂ ಗೊತ್ತು ಅನ್ನುವಂಥ ಭ್ರಮೆ ಇತ್ತು! ಯಾಕೆ ಭ್ರಮೆ ಇತ್ತು ಅನ್ನುತ್ತಿರುವೆ ಎಂದರೆ ಮುಂದೆ ನಾನು ಎಂಟನೇತ್ತೆ ಓದುವಾಗ ಅಶೋಕ (ಬಾದರದಿನ್ನಿ) ಮಾಮಾ ಬಿಜಾಪುರದ ಕಲಾಮಾಧ್ಯಮ ತಂಡಕ್ಕೆ ಚಂಪಾ ಅವರ ಅಸಂಗತ ನಾಟಕಗಳಲ್ಲೊಂದಾದ ‘ಅಪ್ಪ’ ಮಾಡಿಸಿದ್ದ. ಇಳಕಲ್ಲಿನಲ್ಲಿ ಅದರ ಪ್ರದರ್ಶನವಿತ್ತು. ಚಂಚಲ ಸ್ವಭಾವದ ಹೆಣ್ಣೊಬ್ಬಳು ಆರ್ಷಿತರಾದವರೆಲ್ಲರೊಂದಿಗೆ ಬೆರೆಯುತ್ತಾ, ಒಂದು ಮಗುವಾಗಿ, ಆ ಹುಡುಗ ಬೆಳೆಯುತ್ತಾ ಜನರ ಕುಹಕಗಳನ್ನು ಮೊದಲಿಗೆ ಮುಗ್ಧವಾಗಿ ಅದು ಅವರೆಲ್ಲ ತನಗೆ ತೋರುವ ಪ್ರೀತಿ ಎಂದು ಭಾವಿಸುತ್ತಾ, ಬೆಳೆದಂತೆಲ್ಲ ನೋವಿನಿಂದ ನರಳುವ ಕಥಾ ಹಂದರವುಳ್ಳ ನಾಟಕವದು. ಸಣ್ಣವನಿದ್ದಾಗಿನ ಬಸು(ಮಗ) ಆಗಿ ಸಂಗಮೇಶ್ ಪಾಟೀಲ್ ಮತ್ತು ದೊಡ್ಡವನಾದ ಬಸು ಆಗಿ ಈರಣ್ಣ ಮಾಮಾ ಅಭಿನಯಿಸಿದ್ದರು. ಇಬ್ಬರೂ ಅದ್ಭುತ ನಟರಾದರೂ ನನಗೆ ನನ್ನ ವಯೋಮಾನಕ್ಕೆ ತಕ್ಕಂತೆ ಸಹಜವಾಗಿ ಸಣ್ಣ ಬಸೂನ ಪಾತ್ರ ಇಷ್ಟವಾಗಿ ನಾನೂ ನಾಟಕ ಮಾಡಲೇಬೇಕು ಎಂಬ ಅದಮ್ಯ ಬಯಕೆ ಹುಟ್ಟಿಕೊಂಡುಬಿಟ್ಟಿತು! ನಂತರ ಆ ಬಯಕೆ ಅಪ್ಪ ಅವ್ವನ ನಿರಾಕರಣೆಯೊಂದಿಗೆ ಮನಸಿನ ಭರಣಿಯಲ್ಲಿ ಬೆಚ್ಚಗೆ ಹುದುಗಿಕೊಂಡಿತು. ನಾನು ಹೇಳ್ತಾ ಇದ್ದ ವಿಷಯ ಇದಲ್ಲ. ಈ ನಾಟಕ ನೋಡಿದ ಮೇಲೂ ನಮ್ಮ ಪಕ್ಕದ ಮನೆಯವರ ಉದ್ಯೋಗ ಮತ್ತು ‘ಅಪ್ಪ’ ನಾಟಕದ ಅವ್ವನ ಉದ್ಯೋಗ ಎರಡೂ ಒಂದೇ ಅನ್ನುವುದು ಗೊತ್ತಾಗಿರಲಿಲ್ಲ! ನನಗೆ ಪಕ್ಕದ ಮನೆಯ ಶಾಂತಾಳ ಲವಲವಿಕೆಯ ಸ್ವಭಾವ ಮತ್ತು ‘ಅಪ್ಪ’ ನಾಟಕದಲ್ಲಿನ ಸಣ್ಣ ಬಸೂನ ಚುರುಕಾದ ನಟನೆ, ತಮಾಷೆ ಮಾತುಗಳು ಗಮನ ಸೆಳೆದಿದ್ದವೇ ವಿನಹ ನಾಟಕ ಮತ್ತು ಪಕ್ಕದ ಮನೆಯವರಲ್ಲಿನ ಸಾಮ್ಯತೆ ಅರ್ಥವೇ ಆಗಿರಲಿಲ್ಲ.

ಶಾಂತಾಳಿಗೆ ಇಳಕಲ್ಲಿಗೆ ಹೋಗಿ ಸಿನಿಮಾ ನೋಡುವ ಮತ್ತು ಅಲಂಕಾರ ಮಾಡಿಕೊಳ್ಳುವ ಆಸೆ ಇತ್ತು. ನನಗದು ಅಂದೂ ತಪ್ಪೆನಿಸಿರಲಿಲ್ಲ, ಇಂದೂ ತಪ್ಪೆನಿಸುವುದಿಲ್ಲ. ಸಹಜ ಬಯಕೆಗಳವು. ಆದರೆ ಮುಂದೆ ಶಾಂತಾ ಮತ್ತವಳ ಅಕ್ಕ, ಹೆಚ್ಚಿನ ಸಂಖ್ಯೆಯಲ್ಲಿ ಹರೆಯದ ಗಿರಾಕಿಗಳು ಸಿಗುತ್ತಾರೆ, ಕೈ ತುಂಬಾ ದುಡ್ಡು ಮಾಡಬಹುದು ಎಂದು ಇಳಕಲ್ಲಿಗೆ ಹೋಗಿ ಕಾಲೇಜೊಂದರ ಎದುರು ಮನೆ ಮಾಡಿದ್ದರೆಂದೂ, ಹೆಚ್ಚುಕಮ್ಮಿ ಈಗೊಂದು ದಶಕದ ಹಿಂದೆ ಏಡ್ಸ್ ಆಗಿ ಶಾಂತಾ ಅಲ್ಲಿಯೇ ತೀರಿಕೊಂಡಳೆಂದೂ ತಿಳಿಯಿತು.

(ಕೃತಿ: ತಿಟ್ಹತ್ತಿ ತಿರುಗಿ (ಆತ್ಮಕತೆ), ಲೇಖಕರು: ಜಯಲಕ್ಷ್ಮೀ ಪಾಟೀಲ್‌, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: 295/-)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. Jayalaxmi Patil

    ಧನ್ಯವಾದಗಳು ಕೆಂಡಸಂಪಿಗೆ🙏🏼

    Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ