ಸ್ವಲ್ಪ ಹೊತ್ತು ಯೋಚಿಸಿದ ನಾಗಾರ್ಜುನ ಪಂಡಿತನ ಮುಖ ನೋಡಿ ಹೇಗಿಂದ. ಅಲ್ಲಿ ಬಿಂದಿಗೆ ಇದೆ ಎಂದು ನೀವು ಹೇಳುತ್ತಿದ್ದೀರಿ. ಆದರೆ ಈಗ ನಾನು `ಇಲ್ಲ’ ಎಂದೇ ಹೇಳುತ್ತೇನೆ. ಏಕೆಂದರೆ ಅಲ್ಲಿ ಇದೆಯೇ..? ಇಲ್ಲವೇ..? ಎಂದು ನೋಡಿಲ್ಲ. ಮೇಲಾಗಿ ನನ್ನ ಸ್ಪರ್ಶಕ್ಕೆ ಬಂದಿಲ್ಲ. ಎಲ್ಲಿಯವರೆಗೆ ಅದು ನನ್ನ ಸ್ಪರ್ಷ ಜ್ಞಾನಕ್ಕೆ ಬರುವುದಿಲ್ಲವೋ ಅಲ್ಲಿಯವರೆಗೆ ಅಲ್ಲಿ ಏನೂ ಇಲ್ಲ ಎಂದೇ ಹೇಳುತ್ತೇನೆ. ಅದೇ ರೀತಿ ದೇವರು ಎಂಬುದು ನನ್ನ ಸ್ಪರ್ಶ ಜ್ಞಾನಕ್ಕೆ ಎಲ್ಲಿಯವರೆಗೆ ಸಿಗುವುದಿಲ್ಲವೋ ಅಲ್ಲಿಯವರೆಗೆ ದೇವರು ಎಂಬುದು ಇಲ್ಲ ಎಂದೇ ಅರ್ಥ.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್ ಹೆತ್ತೂರು ಕೃತಿ “ಶಿವ ಮೇಡ್ ಬೈ ತೇಜಸ್ವಿ”ಯ ಆಯ್ದ ಭಾಗ
ಪ್ರಸಂಗ ೧
`ತನ್ನನ್ನು ತಾನು ನೋಡಿಕೊಳ್ಳದ ನೋಟ
ಮತ್ತಿನ್ನೇನನ್ನು ನೋಡೀತು..?’
ಇದು ನಾಗಾರ್ಜುನನ ತರ್ಕ. ಬುದ್ಧನ ತತ್ವಗಳನ್ನು ಸರಳ ಭಾಷೆಯಲ್ಲಿ ಜನತೆಗೆ ತಿಳಿಸಿದವನು ನಾಗಾರ್ಜುನ.
ಇಂತಹ ನಾಗಾರ್ಜುನ ಕರ್ನಾಟಕದವನು. ಈತನ ವಿಚಾರಗಳು ವಿಶ್ವ ಮಟ್ಟದಲ್ಲಿ ಚರ್ಚೆಯಾಗುತ್ತಿವೆ. ಬುದ್ಧನ ವಿಚಾರಧಾರೆಗಳನ್ನು ಸರಳವಾಗಿ ಹೇಳಿದ ಈತನ `ನಾಗರ್ಜುನನ ಮೂಲ ಮಾಧ್ಯಮಕ ಕಾರಿಕ’ ಕೃತಿಯನ್ನು ಈ ನಾಡಿನ ಬಹುದೊಡ್ಡ ಚಿಂತಕ ಎಸ್. ನಟರಾಜ್ ಬೂದಾಳು ಕನ್ನಡದಲ್ಲಿ ತಂದಿದ್ದು ಈಗಾಗಲೇ ದಾಖಲೆಯ ಎಂಟು ಮುದ್ರಣ ಕಂಡಿದೆ.
ಇಲ್ಲಿನ ಒಂದು ಪ್ರಸಂಗ ಹೀಗಿದೆ.
ತರ್ಕದಲ್ಲಿ ನಾಗಾರ್ಜುನನನ್ನು ಸೋಲಿಸುವ ಗಂಡೇ ಇರಲಿಲ್ಲ. ಇಂತಹ ನಾಗಾರ್ಜುನನ್ನು ಪುರೋಹಿತಶಾಹಿಗಳ ಕುತಂತ್ರದಿಂದ ಕಲ್ಲಲ್ಲಿ ಹೊಡೆದು ಕೊಂದದ್ದು ಈ ದೇಶದ ಮಹಾನ್ ದುರಂತಗಳಲ್ಲೊಂದು.
ಈತನ ತರ್ಕಕ್ಕೆ ಯಾರೂ ಸರಿಸಾಟಿ ಇಲ್ಲದ ಕಾಲದಲ್ಲಿ. ಪಂಡಿತನೊಬ್ಬ ಈತನನ್ನು ತರ್ಕದಲ್ಲಿ ಸೋಲಿಸಲೇಬೇಕೆಂದು ಬಂದ. `ಕತ್ತಲೆ ಕೋಣೆಯಲ್ಲಿ ಒಂದು ಬಿಂದಿಗೆ ಇಟ್ಟು ಬಂದ. ನಾಗರ್ಜುನನ್ನು ಕುರಿತು `ನೋಡು ಆ ಕತ್ತಲ ಕೋಣೆಯಲ್ಲಿ ಒಂದು ಬಿಂದಿಗೆ ಇದೆ. ಆದರೂ ಕಾಣಿಸುತ್ತಿಲ್ಲ. ಅದೇ ರೀತಿ ದೇವರು ಕೂಡ ಎಲ್ಲೆಡೆ ಇರುತ್ತಾನೆ ಆದರೆ ಕಣ್ಣಿಗೆ ಕಾಣುವುದಿಲ್ಲ’ ಎಂದು ದೇವರ ಇರುವಿಕೆಯನ್ನು ಮಂಡಿಸಿದ.
ಸ್ವಲ್ಪ ಹೊತ್ತು ಯೋಚಿಸಿದ ನಾಗಾರ್ಜುನ ಪಂಡಿತನ ಮುಖ ನೋಡಿ ಹೇಗಿಂದ. ಅಲ್ಲಿ ಬಿಂದಿಗೆ ಇದೆ ಎಂದು ನೀವು ಹೇಳುತ್ತಿದ್ದೀರಿ. ಆದರೆ ಈಗ ನಾನು `ಇಲ್ಲ’ ಎಂದೇ ಹೇಳುತ್ತೇನೆ. ಏಕೆಂದರೆ ಅಲ್ಲಿ ಇದೆಯೇ..? ಇಲ್ಲವೇ..? ಎಂದು ನೋಡಿಲ್ಲ. ಮೇಲಾಗಿ ನನ್ನ ಸ್ಪರ್ಶಕ್ಕೆ ಬಂದಿಲ್ಲ. ಎಲ್ಲಿಯವರೆಗೆ ಅದು ನನ್ನ ಸ್ಪರ್ಷ ಜ್ಞಾನಕ್ಕೆ ಬರುವುದಿಲ್ಲವೋ ಅಲ್ಲಿಯವರೆಗೆ ಅಲ್ಲಿ ಏನೂ ಇಲ್ಲ ಎಂದೇ ಹೇಳುತ್ತೇನೆ. ಅದೇ ರೀತಿ ದೇವರು ಎಂಬುದು ನನ್ನ ಸ್ಪರ್ಶ ಜ್ಞಾನಕ್ಕೆ ಎಲ್ಲಿಯವರೆಗೆ ಸಿಗುವುದಿಲ್ಲವೋ ಅಲ್ಲಿಯವರೆಗೆ ದೇವರು ಎಂಬುದು ಇಲ್ಲ ಎಂದೇ ಅರ್ಥ. ಯಾವುದೇ ವಸ್ತು ಇರಬೇಕು ಎಂದರೆ ಅದು ನಮ್ಮ ಸ್ಪರ್ಶಕ್ಕೆ ಬರಬೇಕು ಎಂಬುದು ನಾಗಾರ್ಜುನ ತರ್ಕವಾಗಿತ್ತು. ಇದಕ್ಕೆ ಪ್ರತ್ಯುತ್ತರ ನೀಡಲಾಗದೆ ಆ ಪಂಡಿತ ಅಲ್ಲಿಂದ ತೆರಳಿದ.
ಪ್ರಸಂಗ ೨: ಗಾಲಿಬ್ ಎಂಬ ಕವಿ ಗೊತ್ತಲ್ವೆನೋ ನಿನಗೆ..?…
ಗಾಲಿಬ್ ಎಂಬ ಕವಿ ಗೊತ್ತಲ್ವೆನೋ ನಿನಗೆ..? ಕೆ.ಟಿ. ದೃಷ್ಠಿಯಿಟ್ಟು ನೋಡುತ್ತಿದ್ದರು. ಕೇಳಿದ್ದೀನಿ ಸಾರ್ ಅಲ್ಲಲ್ಲಿ ಓದಿದ್ದೀನಿ. ದೊಡ್ಡ ಕವಿ. ಪ್ರಜಾವಾಣಿಯಲ್ಲಿ ಈಚೆಗೆ ಬಿಎಂ ಹನೀಫ್ ಒಂದು ಆರ್ಟಿಕಲ್ ಬರೆದಿದ್ದರು ಗಾಲಿಬ್ ಮನೆಗೆ ಹೋಗಿದ್ದರಂತೆ. ಗಾಲಿಬ್ ನ ಕುರಿತು ಸಾಕಷ್ಟು ಬರೆದಿದ್ದಾರೆ. ಅದಕ್ಕಿಂತ ಹೆಚ್ಚಿನದೇನು ಗೊತ್ತಿಲ್ಲ ಎಂದೆ. ಸರಿ ಕೇಳು ಹೇಳ್ತಿನಿ. ಅವನು ದೊಡ್ಡ ಕವಿ. ಒಂದು ತಲೆಮಾರನ್ನೇ ಆವರಿಸಿದವನು. ಇಲ್ಲಿ ಕೇಳು ಅವನ್ದು ಒಂದು ಪ್ರಸಂಗ ಹೇಳ್ತಿನಿ. ಗಾಲಿಬ್ ಒಬ್ಬ ಮಹಾನ್ ಕುಡುಕ ಅಂದ್ರೆ ಯಾವ ಮಟ್ಟಕ್ಕೆ ಅಂದ್ರೆ ಅವ್ನಿಗೆ ದಿನಾಲೂ ಬೇಕೇ ಬೇಕಿತ್ತು. ಹೀಗೆ ಒಂದು ರಂಜಾನ್ ಸಂದರ್ಭ ಕೈಯ್ಯಲ್ಲಿ ಹಣ ಬೇರೆ ಇರಲಿಲ್ಲ. ಏನು ಮಾಡುವುದು ಎಂದೇ ತೋಚದೆ ಸ್ನೇಹಿತನೊಬ್ಬನಿಗೆ `ಹಿಂಗಾಗಿದೆ ಏನಾದ್ರು ವ್ಯವಸ್ಥೆ ಮಾಡು’ ಎಂದು ಹೇಳಿದ. ಮಧ್ಯಾಹ್ನವಾದರೂ ಆ ಸ್ನೇಹಿತ ಬಾರದೆ ಚಿಂತಾಗ್ರನಾಗಿ ಗಾಲಿಬ್ ಕುಳಿತಿದ್ದ.
ರಂಜಾನ್ ಸಮಯ ಬೇರೆ ಭಕ್ತಿ ಭಾವದಿಂದ ಎಲ್ಲರೂ ಪ್ರಾರ್ಥನೆ ಮಾಡಲು ಮಧ್ಯಾಹ್ನ ಅಣಿಯಾಗುತ್ತಿದ್ದರು. ಈ ನಡುವೆ ಮಂಕಾಗಿ ಕುಳಿತಿದ್ದ ಗಾಲಿಬ್ ನನ್ನು ನೋಡಿದ ಆತನ ಮತ್ತೊಬ್ಬ ಸ್ನೇಹಿತ ಬಾರಪ್ಪಾ ಪ್ರಾರ್ಥನೆ ಮಾಡೋಣ ಎಂದು ಕರೆದ.
ಮೊದಲೆ ಹೆಂಡ ಸಿಕ್ಕಿಲಲ್ಲವಲ್ಲ ಎಂದು ಚಿಂತಿತನಾಗಿದ್ದ ಗಾಲಿಬ್ ಇರುಸುಮುರಿಸಿನಿಂದಲೇ ಹೋಗಲಿ ನಡಿ ಎಂದು
ಮಸೀದಿಗೆ ಹೊರಟ. ಪ್ರಾರ್ಥನೆ ಆರಂಭವಾಯಿತು. ಅರ್ಧ ಪ್ರಾರ್ಥನೆ ಆಗುತ್ತಿದ್ದಂತೆ ಗಾಲಿಬ್ ಮಧ್ಯಕ್ಕೆ ಬಿಟ್ಟು ಹೊರಡಲು ಅಣಿಯಾದ. ಇದನ್ನು ನೋಡಿದ ಸ್ನೇಹಿತ `ಯಾಕಪ್ಪಾ ಇನ್ನೂ ಪ್ರಾರ್ಥನೆ ಮುಗಿದಿಲ್ಲ ಇರು’ ಎಂದು ಹೇಳಲು ಯತ್ನಿಸಿದ.
ಆತನ ಬಳಿ ಹೋದ ಗಾಲಿಬ್ `ನೋಡು ಅರ್ಧ ಪ್ರಾರ್ಥನೆ ಮಾಡಿದ್ದಕ್ಕೇ ನನ್ನ ಬೇಡಿಕೆಯನ್ನು ದೇವರು ಈಡೇರಿಸಿದ್ದಾನೆ ಆ ಕಡೆ ನೋಡು’ ಎಂದು ಬಾಗಿಲ ಬಳಿ ತೋರಿಸಿದ. ಆ ಕಡೆಯಿದ್ದ ಗಾಲಿಬ್ನ ಸ್ನೇಹಿತ ಹೊಟ್ಟೆಯೊಳಗೆ ಅವಿಸಿಟ್ಟುಕೊಂಡಿದ್ದ ಹೆಂಡ ತೋರಿಸುತ್ತ ತಂದಿದ್ದೀನಿ ಬನ್ನಿ’ ಎಂದು ಕೈ ಬೀಸಿ ಕರೆಯುತ್ತಿದ್ದ. ನೋಡಪ್ಪಾ ದೇವ್ರು ಅರ್ಧ ಪ್ರಾರ್ಥನೆ ಮಾಡಿದ್ದಕ್ಕೇ ನನ್ನ ಬೇಡಿಕೆ ಈಡೇರಿಸಿದ್ದಾನೆ. ನಂಗೆ ಅಷ್ಟೇ ಸಾಕು ಇನ್ನು ಪೂರ್ತಿ ಪ್ರಾರ್ಥನೆ ಮಾಡಿದ್ರೆ..?
ಈ ಪ್ರಸಂಗವನ್ನು ಕೆ.ಟಿ. ನೆನಪಿಸಿಕೊಳ್ಳಲು ಕಾರಣವಿತ್ತು. ಈ ನಮ್ಮ ಜನ ಯಾಕೆ ಹೀಗಾಗುತ್ತಿದ್ದಾರೆ…? ಎಂಥೆಂತವಕ್ಕೆಲ್ಲ ಪೂಜೆ ಮಾಡ್ತಾರಲ್ಲೋ..? ನಾವು ಈ ದೇಶದಲ್ಲಿ ಯಾಕೆ ಹುಟಿದ್ವಿ ಅನ್ನೋದೇ ಒಂದು ದೊಡ್ಡ ದುರಂತ ಅಷ್ಟು ಕೆಟ್ಟು ಹೋಗಿದೆ ಈ ವ್ಯವಸ್ಥೆ. ಸೀ, ನಲವತ್ತು ವರ್ಷಗಳ ಹಿಂದೆ ನೂರು ಜನ ವಿಜ್ಞಾನಿಗಳಲ್ಲಿ ಶೇ. ಎಪ್ಪತ್ತು ಮಂದಿ ದೇವರನ್ನು ನಂಬುತಿದ್ರು.
ಈಗ ನೋಡು ನೂರಕ್ಕೆ ಜನಕ್ಕೆ ಎಂಬತ್ತು ಭಾಗ ವಿಜ್ಞಾನಿಗಳು ಯಾವ ದೇವರು ಎನ್ನುತ್ತಾರೆ. ಮುಂದೊಂದು ದಿನ ಎಲ್ಲರಿಗೂ ಗೊತ್ತಾಗುತ್ತೆ. ದೇವರು ಎಂತಾದ್ದೂ ಇಲ್ಲ ಅಂತಾ. ಸೀ ನಾವು ನಮ್ಮ ಮನೆ, ಹಣ, ಇದುನ್ನಷ್ಟೇ ಯೋಚನೆ ಮಾಡುತ್ತೇವೆ. ನಮ್ಮ ಅಕ್ಕಪಕ್ಕದ ಪರಿಸರ, ಭೂಮಿ, ನೀರು. ಆಕಾಶ, ಗ್ಯಾಲಾಕ್ಸಿ, ನಮಗೆ ಇದಕ್ಕೂ ಇರುವ ಸಂಬಂಧ ಇವುಗಳ ಬಗ್ಗೆಯೇ ಗೊತ್ತಿಲ್ವಲಯ್ಯ.

ಪ್ರಸಂಗ ೩: ನಾನಿವತ್ತು ಮರದೊಂದಿಗೆ ಮಾತನಾಡಿಕೊಂಡು ಬಂದೆ …
ಕೆಟಿ ಮರದ ಜತೆ ಮಾತನಾಡುವುದನ್ನು ಕಲಿತಿದ್ದಾರಂತೆ. ಅದು ಹೇಗೆ ಎಂಬುದನ್ನು ಅವರ ಬಾಯಿಂದಲೇ ಕೇಳಿದರೆ ಚೆನ್ನ.
ಈಗ್ಗೆ ೧೦ ವರ್ಷದ ಕೆಳಗೆ ವಿಚಾರವಾದಿ, ಈ ಬಾರಿಯ ನಾಟಕ ಅಕಾಡೆಮಿ ಪುರಸ್ಕೃತ ಅರಸೀಕೆರೆಯ ಎಚ್.ಆರ್. ಸ್ವಾಮಿ, ಮಕ್ಕಳಿಗೆ ಒಂದಿಷ್ಟು ವಿಚಾರ ಹೇಳಿ ಎಂದು ಮಕ್ಕಳ ಕಾರ್ಯಕ್ರಮಕ್ಕೆ ಕೆಟಿ ಅವರನ್ನು ಗೆಸ್ಟ್ ಆಗಿ ಕರೆದಿದ್ದರು. ಪಾಪ ರೈತ ಸಂಘ, ದಲಿತ ಸಂಘರ್ಷ ಸಮಿತಿಯ ಒಡನಾಟ, ಹೋರಾಟ ಎಂದೆಲ್ಲಾ ಜೀವನ ಕಳೆಯುತ್ತಿದ್ದ ಕೆಟಿ ಗೆ ಇದ್ಯಾವುದು ಈ ಮಕ್ಕಳ ಜತೆ ಸಂವಾದ, ಹೋಗಲಿ ಏನು ಹೇಳಬೇಕು ಎಂದು ತಲೆ ಕೆಡಿಸಿಕೊಂಡರಂತೆ.
ಕೊನೆಗೆ ಸ್ವಾಮಿಯ ಒತ್ತಡ ಹೆಚ್ಚಾದಾಗ ಕೆಟಿ ಅನಿವಾರ್ಯವಾಗಿ ಮಕ್ಕಳೊಂದಿಗೆ ಸಂವಾದಕ್ಕೆ ಅರಸೀಕೆರೆ ಕಡೆಗೆ ಪ್ರಯಾಣ ಆರಂಭಿಸಿದರು.
ಶಾಲೆ ಆವರಣ ಪ್ರವೇಶವಾಗುತ್ತಿದ್ದಂತೆ ಕೆಟಿ ಯನ್ನು ನೋಡಿದ ಮುಗ್ಧ ಮಕ್ಕಳು ನಮಸ್ಕಾರ ಸಾರ್ ಎಂದು ಕರೆದರು. ಮುಗ್ಧವಾಗಿ ನಕ್ಕ ಕೆಟಿ ಮಾತು ಆರಂಭಿಸಿದರು.
ನಾನಿವತ್ತು ಮರದೊಂದಿಗೆ ಮಾತನಾಡಿಕೊಂಡು ಬಂದೆ ಎಂದರು. ಮಕ್ಕಳಿಗೆ ಅಚ್ಚರಿ ಏನಿದು ಮರದೊಂದಿಗೆ ಮಾತನಾಡುವುದಾ..? ಒಬ್ಬರಿಗೊಬ್ಬರು ಮುಖ ನೋಡಿಕೊಂಡರು.
ಹೌದು… ಈವತ್ತು ಬರುವಾಗ ದಾರಿಯಲ್ಲಿ ದೊಡ್ಡ ಅಪಘಾತವಾಗಿತ್ತು. ಕಾರು ನಿಲ್ಲಿಸಿ ನೋಡಿದೆ ಅಲ್ಲಿದ್ದ ಮರ ನನ್ನನ್ನು ಕರೆದು `ಏ ಬಾರೋ ಇಲ್ಲಿ. ನಿಮಿಗೆ ಮಾನ ಮರ್ಯಾದೆ ಏನು ಇಲ್ವಾ ಥೂ ಕ್ರೂರಿಗಳಾ ಮುಷ್ಯರಾ ನೀವು ಎಂದು ಬೈಯ್ಯಲಾರಂಭಿಸಿತು. ನನಗೆ ತಡೆಯಲಾಗಲಿಲ್ಲ ಏನು ಏನಾಯಿತು..? ಎಂದು ಕೇಳಿದೆ.
ಮರ ಅಳುತ್ತಾ ಹೇಳಿತು. ನನ್ನ ಸ್ಥಿತಿ ನೋಡಿಯೂ ಏನು ಎಂದು ಕೇಳುತ್ತಿದ್ದೀಯಲ್ಲಾ..? ನೋಡಿಲ್ಲಿ ನನ್ನ ಕೈ ಕಾಲು ಮುರಿದಿದೆ. ಬೇರುಗಳು ಕಿತ್ತು ಬಂದಿವೆ. ಜೀವವೇ ಹೋಗುತ್ತಿದೆ. ನಿಮಗೇನಾದರೂ ಮಾನ ಮರ್ಯಾದೆ ಇದೆಯೇ..? ಹಿಂಗೆ ಬಂದು ನನಗೆ ಡಿಕ್ಕಿ ಹೊಡೆದಿದ್ದೀರಲ್ಲಾ ಥೂ. ನಾನೇನು ರಸ್ತೆ ಬದಿ ಮರ ನೆಡಿ ಎಂದು ಹೇಳಿದ್ದನಾ ಯಾಕೆ ಇಲ್ಲಿ ನೆಟ್ಟು ನನ್ನ ಪ್ರಾಣ ತೆಗೆಯುತ್ತಿದ್ದೀರೀ..? ಎಂದಿತು.
ನಾನು ನಾಚಿಕೆಯಿಂದ ತಲೆ ತಗ್ಗಿಸಿದೆ.
ಮಾತು ಮುಂದುವರೆಸಿದ ಮರ ಅಲ್ರಪ್ಪಾ ಕುಡಿದುಕೊಂಡು ಬಂದು ನನಗೆ ಗುದ್ದಿ ನನ್ನ ಜೀವವೇ ಹೋಗುವಂತೆ ಮಾಡಿದ್ದೀರಾ..? ಯಾರಾದರೂ ಒಬ್ಬರು ಬಂದು ಏನಾಗಿದೆ ಎಂದು ಕೇಳಿದ್ದೀರಾ..? ನನ್ನ ನೋವು ಕೇಳಿಸಿಕೊಂಡಿದ್ದೀರಾ..?
ವಾಚಾಮಗೋಚರವಾಗಿ ಬೈಗುಳ ನಡೆಯುತ್ತಿತ್ತು.
ಅಲ್ಲಿ ನಡೆದಿದ್ದ ಘಟನೆ ಇಷ್ಟು!
ಬೆಳ್ಳಂಬೆಳಗ್ಗೆ ಕುಡಿದು ಕಾರು ಚಲಾಯಿಸುತ್ತಿದ್ದ ವ್ಯಕ್ತಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದರು. ಡಿಕ್ಕಿ ಹೊಡೆದ ರಭಸಕ್ಕೆ ಮರದ ರೆಂಬೆ ಕೊಂಬೆಗಳು ಮುರಿದು ಬೇರುಗಳು ನೆಲ ಬಿಟ್ಟು ಎದ್ದು ನಿಂತಿದ್ದವು. ಮರ ಯಾವುದೇ ಕ್ಷಣದಲ್ಲಿ ಬೀಳುವಂತಾಗಿತ್ತು.
ಸ್ಥಳಕ್ಕೆ ಬಂದವರೆಲ್ಲಾ ಏನು ಎಷ್ಟು ಜನ ಸತ್ತರು ಎಂದು ಕೇಳುತ್ತಿದ್ದರೇ ಹೊರತು ಮರದ ಸ್ಥಿತಿ ಬಗ್ಗೆ ಯಾರಿಗೂ ಯೋಚನೆ ಇರಲಿಲ್ಲ. ಇದು ಮರಕ್ಕೆ ಬೇಸರ ತಂದಿತ್ತು. ಮರಗಳಿಗೂ ಜೀವ ಇದೆ ಎಂದು ಗೊತ್ತು. ಆದರೂ ಮರಗಳ ಬಗ್ಗೆ ಯಾಕೆ ಯಾರು ಯೋಚಿಸುವುದಿಲ್ಲ ಎಂಬುದು ಅದರ ಪ್ರಶ್ನೆಯಾಗಿತ್ತು.
ನಾನು ಮಾನವ ಮಾಡಿದ ತಪ್ಪುಗಳ ಸಮರ್ಥಿಸಿಕೊಳ್ಳಲಾಗದೆ ನಾಚಿ ಬಂದೆ.
ನೋಡಿ ನಾವು ಮನುಷ್ಯರು ಎಷ್ಟು ಸ್ವಾರ್ಥಿಗಳು ಮರಗಳ ಬಗ್ಗೆ ಯಾರೂ ಯೋಚಿಸುವುದಿಲ್ಲ ಎಂದರು.
ನನ್ನ ಈ ರೆಂಬೆಯನ್ನು ಕಡಿದುಕೊಂಡು ಹೋಗಿ ಸಾಲ ತೀರಿಸು…
ಪ್ರಸಂಗ ೪
ಹೀಗೆ ಒಮ್ಮೆ ಸಾಲ ಹೆಚ್ಚಾಗಿ ಮನೆಯಲ್ಲಿ ತಲೆಗೆ ಕೈ ಹೊತ್ತು ಕುಳಿತಿದ್ದೆ. ಮನೆಯ ಮುಂದೆ ಬೆಲೆಬಾಳುವ ತೇಗದ ಮರ ಇತ್ತು. ವಾರಗಟ್ಟಲೆ ನಾನು ಈ ಸ್ಥಿತಿ ಅನುಭವಿಸುತ್ತಿದ್ದನ್ನು ನೋಡಿದ ಮರಕ್ಕೆ ತಡೆಯಲು ಆಗದೆ `ಏನಪ್ಪಾ ನಿನ್ನ ಸಮಸ್ಯೆ’ ಎಂದು ಕೇಳಿತು. ಹೇಳಲೋ ಬೇಡವೋ ಎಂದರೂ ಬಿಡಲಿಲ್ಲ. ನಂತರ ನನಗೆ ಹಣಕಾಸಿನ ಸಮಸ್ಯೆ ಇರುವುದಾಗಿ ಹೇಳಿಕೊಂಡೆ. ಸ್ವಲ್ಪ ಕ್ಷಣ ಯೋಚಿಸಿದ ಮರ ಕೊನೆಗೆ ನಾನು ಒಂದು ಕೆಲಸ ಹೇಳ್ತಿನಿ ಮಾಡ್ತಿಯಾ..? ಎಂದಿತು.
ಸರಿ ಹೇಳು ಎಂದೆ.
ನೋಡು ನನ್ನ ಈ ರೆಂಬೆಯನ್ನು ಕಡಿದುಕೊಂಡು ಹೋಗು ಒಳ್ಳೆ ರೇಟ್ ಇದೆ. ಅದನ್ನು ಮಾರಿ ನಿನ್ನ ಸಮಸ್ಯೆ ಪರಿಹರಿಸಿಕೋ ಎಂದಿತು. ಆದರೆ ನನಗೆ ಮನಸ್ಸಾಗದೆ ಬೇಡ ನಿನಗೆ ಪೆಟ್ಟಾಗುತ್ತದೆ. ನಿನ್ನ ಕೈ ಕತ್ತರಿಸುವುದು ಒಳ್ಳೆಯದಲ್ಲ ಎಂದೆ. ಅದಕ್ಕೆ ಮರ ` ಲೋ ದಡ್ಡಾ ನೀನು ಶತಮೂರ್ಖ ಕಣೋ. ನೋಡು ನೀನು ಈವತ್ತು ಕತ್ತರಿಸಿಕೊಂಡು ಹೋಗಿ ನಿನ್ನ ಸಾಲ ತೀರಿಸಿಕೊಂಡರೆ ನಿನ್ನ ಜೀವನವಾದರೂ ಸರಿ ಹೋಗುತ್ತದೆ. ನಿಮ್ಮ ಮಾನವರು ಎಂತಹ ಕ್ರೂರಿಗಳಿದ್ದಾರೆ ಎಂದರೆ ನಾಳೆ ಕಳ್ಳಕಾಕರು ಬಂದು ನನ್ನ ಬುಡವನ್ನೇ ಕತ್ತರಿಸಿಕೊಂಡು ಹೋಗುತ್ತಾರೆ ಆಗ ಏನು ಮಾಡಲು ಸಾಧ್ಯ..? ಎಂದಿತು.
ಮನುಷ್ಯನ ಅತಿ ಆಸೆ, ಕ್ರೋರತನಕ್ಕೆ ಇದು ಉದಾಹರಣೆ ಎಂದ ಕೆಟಿ ಮರ ಮತ್ತು ಪರಿಸರದ ಬಗ್ಗೆ ಹೇಳಿ ಹೊರಬಂದರು.
ಅದಾಗಿ ಅರ್ದ ಗಂಟೆ ನಂತರ ಇವರ ಮಾತು ಕೇಳಿದ ವಿದ್ಯಾರ್ಥಿಯೊಬ್ಬ ಮುರಿದ ಗಿಡವನ್ನು ಮೇಲೆತ್ತು ದಾರ ಕಟ್ಟಿ ನಿಲ್ಲಿಸುತ್ತ ತನಗೆ ಅರಿವಿಲ್ಲದಂತ ಮರದೊಂದಿಗೆ ಸಂವಾದ ಮಾಡುತ್ತಿದ್ದ. ಕೆಟಿ ನೋಡಿ ಮೂಕವಿಸ್ಮಿತರಾದರು.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ


