ಕೋಣೆ ಹಾಗೂ ಅದರ ಹಾಸಿಗೆಗಷ್ಟೇ ಸೀಮಿತವಾಗಿ ಹೋದ ಅಜ್ಜನಿಗೆ ಇಡೀ ಮನೆಯಲ್ಲಿ ಸ್ವಲ್ಪವಾದರೂ ಮನೋರಂಜನೆಗೆ ಒದಗುತ್ತಿದ್ದವನು ನಾನೊಬ್ಬನೇ. ಯಾವ್ಯಾವುದೋ ಸಿನಿಮಾ, ಭೂತ, ಪ್ರೇತದ ಕಥೆಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು ಅಂಗಳದಲ್ಲಿ ಡಿಶೂಂ ಡಿಶೂಂ ಎಂದು ಗಾಳಿಯೊಡನೆ ಗುದ್ದಾಡುತ್ತ ಸುಳಿದಾಡುತ್ತಿದ್ದ ನನ್ನನ್ನು ಗಣೇಶಾ ಎಂದು ಕರೆಯುತ್ತಿದ್ದ ಅಜ್ಜ ‘ಇಲ್ಲಿ ಜಗುಲೀಲಿ, ನನ್ನ ಎದುರೇ ಆಡು ಗಣೇಶಾ’ ಎಂದು ಗೋಗರೆಯುತ್ತಿದ್ದರು.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯಲ್ಲಿ ಹೊಸ ಬರಹ ನಿಮ್ಮ ಓದಿಗೆ
ಅಜ್ಜನನ್ನು ನಾನು ಕೋಣೆ ಅಜ್ಜ ಎಂದೇ ಕರೆಯುತ್ತಿದ್ದೆ. ನಾನು ಹುಟ್ಟಿ ಬುದ್ಧಿ ಬರುವ ಹೊತ್ತಿಗೆಲ್ಲ ಅಜ್ಜ ಕೋಣೆ ಸೇರಿಯಾಗಿತ್ತು. ನಮ್ಮನೆಯ ಜಗಲಿಯ ತುದಿಯಲ್ಲಿದ್ದ ಕೋಣೆಯನ್ನು ಅವರಿಗೆ ಬಿಟ್ಟುಕೊಡಲಾಗಿತ್ತು. ನಮ್ಮ ಇಡೀ ಮನೆಗಿದ್ದ ಏಕಮಾತ್ರ ಕೋಣೆ ಅದು. ಚೈತನ್ಯದ ಬಹುಪಾಲನ್ನಾಗಲೇ ವೃದ್ಧಾಪ್ಯ ಆವರಿಸಿ ಹಣ್ಣು ಹಣ್ಣು ಮುದುಕನಾಗಿದ್ದ ಅಜ್ಜ ಆ ಕೋಣೆಯಲ್ಲೇ ಇರುತ್ತಿದ್ದರು.
ನಾನು ಎರಡನೆಯ ಕ್ಲಾಸಿಗೆ ಹೋಗುವ ತನಕವೂ ಅಜ್ಜ ಗಟ್ಟಿಯಾಗಿ ಓಡಾಡಿಕೊಂಡೇ ಇದ್ದರು. ಅಕ್ಕನಿಗೆ ಅಜ್ಜನನ್ನು ಕಾಡುವುದೆಂದರೆ ಅದೇನೋ ವಿಕೃತ ಆನಂದ. ನನ್ನನ್ನು ಹಿಂದೆ ಕಟ್ಟಿಕೊಂಡ ಆಕೆ ಅಜ್ಜನ ಬೆಡ್ಲ್ಯಾಂಪನ್ನು ಎತ್ತಿಕೊಂಡು ಬರುತ್ತಿದ್ದಳು. ಆಗವರು ನನ್ನ ಬೆಡ್ಲ್ಯಾಂಪ್ ಕೊಡ್ರೋ ಎಂದು ಕೂಗಿದರೆ ಅವಳಿಗೇನೋ ಖುಷಿ. ಇನ್ನೂ ನಾಲ್ಕೈದು ವರ್ಷದವನಾಗಿದ್ದ ನಾನು ಅವಳನ್ನು ಸುಮ್ಮನೆ ಹಿಂಬಾಲಿಸುತ್ತಿದ್ದೆ. ಒಮ್ಮೆಯಂತೂ ಈ ಆಟದ ಗಲಾಟೆಯಲ್ಲಿ ಬೆಡ್ಲ್ಯಾಂಪ್ ಒಡೆದು ಹೋಗಿ ದೊಡ್ಡ ಗಲಾಟೆಯೇ ಆಯಿತು. ಎದ್ದು ಬರಲಾಗದ ಅಜ್ಜನ ಪರ ಬ್ಯಾಟು ಬೀಸಿದ ಅಪ್ಪ ನನ್ನ ಹಾಗೂ ಅಕ್ಕನಿಗೆ ಸರಿಯಾಗಿಯೇ ಗ್ರಾಚಾರ ಬಿಡಿಸಿದ. ಕೋಣೆಯ ನಸುಗತ್ತಲಿಗೆ ಸಂದು ಹೋಗಿದ್ದ ಅಜ್ಜನ ಬಾಕಿ ಬದುಕನ್ನು ಬೆಳಗುವ ಭಾದ್ಯತೆಯನ್ನು ಆ ಬೆಡ್ಲ್ಯಾಂಪು ಹೊತ್ತಿತ್ತು. ಊರುಗೋಲು ಹಾಗೂ ಬೆಡ್ಲ್ಯಾಂಪುಗಳನ್ನು ಸರ್ವಸ್ವದಂತೆ ಕಾಯುತ್ತ, ಅಂಗಳಕ್ಕೆ ಬರುವ ನಾಯಿಗಳನ್ನು ಬಾಯಲ್ಲೇ ಅಟ್ಟುತ್ತಾ, ಆಗಾಗ ಮಗುವೇ ಎಂದು ಅಮ್ಮನನ್ನು ಕರೆಯುತ್ತ ಅಜ್ಜ ಬದುಕಿದ್ದರು.
ಅಜ್ಜನಿಗೆ ನಾನೆಂದರೆ ತುಂಬ ಪ್ರೀತಿ. ನನ್ನ ಹೆಸರನ್ನವರು ಸರಿಯಾಗಿ ಕೂಗಿದ್ದು ನನಗೆ ನೆನಪೇ ಇಲ್ಲ. ವಿಘ್ನೇಶಾ, ಗಣಪತೀ ಎಂದೆಲ್ಲ ಕರೆಯುತ್ತಿದ್ದ ಅವರ ಬಾಯಲ್ಲಿ ನಾನು ಅತಿ ಹೆಚ್ಚು ಬಾರಿ ಕರೆಯಲ್ಪಟ್ಟಿದ್ದು ಗಣೇಶ ಎಂದು. ಯಾವ ಹೆಸರನ್ನೇ ಕೂಗಿದರೂ ಅವರ ಎಲ್ಲ ಕರೆಗಳೂ ಅದು ಹೇಗೋ ನನ್ನನ್ನು ತಲುಪುತ್ತಿದ್ದವು.
ಅಜ್ಜನ ಜೊತೆ ಓಡಾಡಿದ ಒಂದು ನೆನಪು ಇಂದಿಗೂ ನನ್ನೊಳಗೆ ಗಾಢವಾಗಿ ಉಳಿದುಹೋಗಿದೆ. ಆಗ ನಾನಿನ್ನೂ ಒಂದನೆಯದೋ, ಎರಡನೆಯದೋ ತರಗತಿಯಲ್ಲಿದ್ದೆ. ಒಂದು ದಿನ ಮಧ್ಯಾಹ್ನ ಅಕ್ಕನ ಜೊತೆ ಊಟಕ್ಕೆ ಮನೆಗೆ ಬಂದವನು ಮತ್ತೆ ಶಾಲೆಗೆ ಹೋಗುವುದಿಲ್ಲವೆಂದು ವರಾತ ತೆಗೆದೆ. ನನ್ನ ಇಂಥ ದೊಂಬರಾಟಗಳ ವಿರುದ್ಧ ಹೋರಾಡೀ ಹೋರಾಡೀ ಸುಸ್ತಾಗಿದ್ದ ಅಮ್ಮ ಏನಾದ್ರೂ ಹಡಿ ಬಡ್ಸ್ಕೋ ಎಂದು ಸುಮ್ಮನಾದಳು. ಅಕ್ಕ ನನಗಾಗಿ ಹತ್ತು ನಿಮಿಷ ಕಾದು ಹೊರಟುಹೋದಳು. ಅಜ್ಜ ಊಟ ಮಾಡಿ ಮಲಗಿದವರು ಮೂರಕ್ಕೋ, ಮೂರೂವರೆಗೋ ಎದ್ದು ಕಾಫಿ ಕುಡಿದರು. ಅಷ್ಟು ಹೊತ್ತಿಗೆ ಶಾಲೆಗೆ ಚಕ್ಕರ್ ಹಾಕಿದ ಕಾರಣಕ್ಕೆ ನನ್ನ ಹಾಗೂ ಅಮ್ಮನ ನಡುವೆ ಮಾರಾಮಾರಿ ನಡೆದು ಅಮ್ಮ ನನಗೆ ಅಟ್ಟಾಡಿಸಿಕೊಂಡು ಹೊಡೆಯುತ್ತಿದ್ದಳು. ಇದನ್ನು ನೋಡಿದ ಅಜ್ಜ ಅವಳ ಚುಳುಕೆಯಿಂದ ನನ್ನನ್ನು ಪಾರು ಮಾಡಿ ಅರಳಸುರಳಿಗೆ ಹೋಗೋಣ ಬಾ ಎಂದು ಕರೆದೊಯ್ದರು.
ಅರಳಸುರಳಿಯ ಸುಬ್ರಹ್ಮಣ್ಯ ಸರ್ಕಲ್ನಲ್ಲಿರುವ ದೊಡ್ಡ ಮರದ ಕೆಳಗೆ ಮೂರು ಚಪ್ಪಡಿಗಳನ್ನು ನಿಲ್ಲಿಸಿ ಬಸ್ಸಿಗೆ ಕಾಯುವವರು ಕೂರುವುದಕ್ಕೆ ಜಾಗ ಮಾಡಲಾಗಿದೆ. ನನಗೆ ಬುದ್ಧಿ ಬಂದಾಗಿನಿಂದ ಇವತ್ತಿನವರೆಗೂ ಅದು ಹಾಗೇ ಇದೆ. ನಮ್ಮೂರಿನ, ಎರಡು ಮೂರು ತಲೆಮಾರಿನ ಜನ ಅದರ ಮೇಲೆ ಕುಳಿತು ಹರಟುತ್ತ ತಮ್ಮ ಸಂಜೆಗಳನ್ನು ಕಳೆದಿದ್ದಾರೆ. ಏದುಸಿರು ಬಿಡುತ್ತ ಬರುವ ಬಸ್ಸುಗಳಿಗೆ ಕಾದಿದ್ದಾರೆ. ಕಷ್ಟ ಸುಖ ಮಾತಾಡಿಕೊಂಡಿದ್ದಾರೆ. ಮೋಟಾರು ರಿಪೇರಿಗೆ ಪೇಟೆಗೆ ಹೊರಟ ರೈತರನ್ನು, ಬೆಳಗ್ಗೆ ಶಾಲೆಗೆ ಬಂದಿಳಿಯುವ ಮೇಷ್ಟರನ್ನು, ಬೀದಿ ಅಲೆಯುವ ಕುಡುಕರನ್ನು ಇನ್ನೂ ಎಂತೆಂಥವರನ್ನೋ ಈ ಬೆಂಚು ನೋಡಿದೆ. ಪ್ರತೀ ಚಳಿಗಾಲದಲ್ಲಿ ಬರುವ ಶಷ್ಠಿ ಜಾತ್ರೆಗಳನ್ನು ಕಣ್ತುಂಬಿಕೊಂಡಿದೆ. ಪಾಕೇಟು ಸಾರಾಯಿ ಕುಡಿದು, ಅಮಲೇರಿ, ಮನೆಗೆ ಹೋಗಲಾಗದೇ ತನ್ನ ಬಳಿ ಬಂದವರನ್ನು ರಾತ್ರಿಯಿಡೀ ಮಲಗಿಸಿಕೊಂಡಿದೆ. ಇಡೀ ಊರು ಬಿಸಿಲಿನಲ್ಲಿ ಬೇಯುವ ಸುಡು ಸುಡು ಮಧ್ಯಾಹ್ನದಲ್ಲೂ ಆ ಕಲ್ಲು ಬೆಂಚಿನ ಮೇಲೆ ನೆರಳಿರುತ್ತದೆ. ಅಲ್ಲಿ ಕುಳಿತು ನೋಡಿದರೆ ಇಡೀ ಊರೇ ಯಾವುದೋ ಚಲನಚಿತ್ರದಂತೆ, ಹಳೆಯ ಕಥೆಯೊಂದರಲ್ಲಿ ಕಟ್ಟಿಕೊಟ್ಟ ಘಟನೆಯಂತೆ ಕಣ್ಣಿಗೆ ಬೀಳುತ್ತದೆ. ಅಜ್ಜ, ಅಪ್ಪ, ಮಗ, ಮೊಮ್ಮಗ.. ಹೀಗೆ ತಲೆತಲೆಮಾರುಗಳನ್ನೇ ತನ್ನ ಮೇಲೆ ಕೂರಿಸಿಕೊಂಡು ಬಸ್ಸು ಹತ್ತಿಸಿದೆ ಈ ಬೆಂಚು.
ಅಜ್ಜ ಅರಳಸುರಳಿಗೆ ಬಂದಾಗೆಲ್ಲ ಆ ಚಪ್ಪಡಿಯ ಬೆಂಚಿನ ಮೇಲೆ ರಸ್ತೆಯನ್ನು, ಓಡಾಡುವ ಜನ-ವಾಹನಗಳನ್ನು ಸುಮ್ಮನೆ ನೋಡುತ್ತ ಕೂರುತ್ತಿದ್ದರು. ವಯಸ್ಸಾಗಿ ಜೊತೆಗೆ ಮಾತನಾಡುವವರಿಲ್ಲದೆ ಮೂಲೆ ಕೂರುವ ವೃದ್ಧರ ಪಾಲಿಗೆ ಇಂಥಾ ಖಾಲಿ ನೋಟಗಳೇ ಎಲ್ಲವೂ ಆಗಿಬಿಡುತ್ತವೆ. ಹಾಗೆ ನೋಡುವುದೇ ಅವರ ಮಾತು, ಹರಟೆ, ನಗು, ಅಳು ಎಲ್ಲ ಎನ್ನುವುದು ನನಗೆ ಗೊತ್ತಾಗಲಿಕ್ಕೆ ಎಷ್ಟೋ ವರ್ಷಗಳು ಬೇಕಾದವು. ವಿಷಯ ಅದಲ್ಲ. ಆ ದಿನ ಕಲ್ಲು ಬೆಂಚಿನ ಮೇಲೆ ಬಿಳೀ ಪಂಚೆ, ಅಂಗಿ ತೊಟ್ಟು ಊರುಗೋಲನ್ನು ಪಕ್ಕ ಒರಗಿಸಿಟ್ಟುಕೊಂಡು ಕುಳಿತಿದ್ದ ಅಜ್ಜನ ಪಕ್ಕ ನಾನೂ ದೊಡ್ಡ ಜನದಂತೆ ಕುಳಿತುಕೊಂಡೆ. ಅವತ್ತು ಶಾಲೆಯಲ್ಲಿ ಪೋಲಿಯೋ ಜಾಗೃತಿ ಪರೇಡ್ ಇದ್ದುದರಿಂದ ಯೂನಿಫಾರ್ಮ್ ತೊಟ್ಟ ಮಕ್ಕಳೆಲ್ಲ ‘ಹಾಕಿಸೀ ಹಾಕಿಸೀ.. ಪಲ್ಸ್ ಪೋಲಿಯೋ ಹಾಕಿಸಿ’, ‘ಪಲ್ಸ್ ಪೋಲಿಯೋ ಹಾಕಿಸಿ, ಮಕ್ಕಳನ್ನು ರಕ್ಷಿಸಿ’ ಎಂದೆಲ್ಲ ಘೋಷಣೆ ಕೂಗುತ್ತ ನಮ್ಮೆದುರಿನ ದಾರಿಯಲ್ಲಿ ಹಾದುಬಂದರು. ನಮ್ಮದೇ ಶಾಲೆಯ, ನನ್ನದೇ ತರಗತಿಯ ಮಕ್ಕಳನ್ನು ಅಲ್ಲಿ ನೋಡಿದ ನಾನು ಅತ್ತ ಶಾಲೆಯವನೂ ಆಗದ, ಇತ್ತ ಹೊರಗಿನವನೂ ಆಗದ ವಿಚಿತ್ರ ತಳಮಳದಲ್ಲಿ ಅಜ್ಜನ ಪಕ್ಕ ಕುಳಿತಿದ್ದೆ. ಸಾಲಾಗಿ ಹಾದು ಹೋದ ಮಕ್ಕಳ ರೈಲನ್ನೇ ನೋಡಿದ ಅಜ್ಜ ಸ್ವಲ್ಪ ಸಮಯಕ್ಕೆ ನನ್ನನ್ನು ಕರೆದುಕೊಂಡು ಮನೆಗೆ ಬಂದರು.
ನಿಜ… ಇದೊಂದು ಸಾದಾ ಘಟನೆ. ಅದು ನಡೆದ ಕಾಲಮಾನದಿಂದ ನಾವು ಬಹಳ ಮುಂದೆ ಬಂದಿರುವುದರಿಂದ, ಆ ನೀಲಿ ಚಡ್ಡಿ-ಚೌಕುಳಿ ಅಂಗಿಗಳ ವಿದ್ಯಾರ್ಥಿ ಬದುಕಿಗೆ ಮರಳುವುದು ಇನ್ನೆಂದೂ ಸಾಧ್ಯವೇ ಇಲ್ಲವಾದ್ದರಿಂದ, ಅಂದು ಪಕ್ಕ ಕುಳಿತ ಅಜ್ಜ ಶಾಶ್ವತವಾಗಿ ಎದ್ದುಹೋಗಿರುವುದರಿಂದ ಆ ದಿನ, ಆ ಕ್ಷಣಗಳೆಲ್ಲ ಇಂದು ವಿಶೇಷವಾಗಿವೆ. ಯಕಶ್ಚಿತ್ ಮಡಿಕೆಯೊಂದು ಶತಮಾನಗಳ ಬಳಿಕ ಆ್ಯಂಟಿಕ್ ಪೀಸ್ ಆಗುವಂತೆ.

ನಾನು ಪದ ಪದ ಜೋಡಿಸಿ ಬರೆಯುವಂತಾದಾಗ ಒಮ್ಮೆ ಅಜ್ಜ ಅಡಿಕೆ ಮಂಡಿಯ ಡೈರಿಯೊಂದನ್ನು ಕೊಟ್ಟು, ಯಕ್ಷಗಾನದ ಪದವೊಂದನ್ನು ಹೇಳಿ ಬರೆದುಕೊಳ್ಳಲು ಹೇಳಿದರು.
ಶ್ರೀರಂಗನಾಯಕ ರಾಜೀವ ಲೋಚನ ರಮಣ ಬೆಳಗಾಯೀತೇಳೆನುತ
ಅಂಗನೆ ಲಕ್ಷ್ಮಿಯು ಪತಿಯನೆಬ್ಬಿಸುವಳು
ಶೃಂಗಾರದ ನಿದ್ರೆ ಸಾಕೆನುತ
ಪಕ್ಷೀರಾಜನು ಬಂದು ಬಾಗೀಲ ಕಾಯ್ವನು
ಅಕ್ಷೀ ತೋರಲು ನೀನು ಈಕ್ಷೀಸೆಂದು
ಪಕ್ಷೀರಾಶಿಗಳೆಲ್ಲ ಚಿಲಿಪಿಲಿ ಗುಟ್ಟುವವು..
ಮೂಲ ಹಾಡು ಏನಿದೆಯೋ ಗೊತ್ತಿಲ್ಲ, ನನ್ನ ನೆನಪಿನಲ್ಲಿ ಇಂದಿಗೂ ಉಳಿದುಹೋಗಿರವ ರೂಪ ಇದು. ಅಜ್ಜ ಯಕ್ಷಗಾನ ಕಲಾವಿದರಾಗಿದ್ದರೆನ್ನುವುದು ಗೊತ್ತಾಗಿದ್ದು ನನಗೆ ಮೊವ್ವತ್ತು ವರ್ಷವಾದಾಗ. ದೊಡ್ಡಪ್ಪನ ಮಗ ರಾಗಣ್ಣ ಹೇಳಿದಾಗ. ಈ ಹಾಡನ್ನು ರಾಗವಾಗಿ ಹಾಡುವಂತೆ ಅಜ್ಜ ಆಗಾಗ ನನಗೆ ಹೇಳುತ್ತಿದ್ದರು. ನಾನು ಪದ್ಯ ಓದುವಂತೆ ಓದುತ್ತಿದ್ದೆ.
ನೋಡನೋಡುತ್ತಲೇ ಅಜ್ಜನಿಗೆ ಮತ್ತೂ ವಯಸ್ಸಾಯಿತು. ಏರು ಹತ್ತಿ ಅರಳಸುರಳಿ ಪೇಟೆಗೆ ಹೋಗುವುದೂ ಅಸಾಧ್ಯವಾಗಿ ಅವರು ಕೋಣೆ-ಅಂಗಳ-ಬಚ್ಚಲುಮನೆಗಳಿಗಷ್ಟೇ ಸೀಮಿತವಾಗಿ ಹೋದರು. ಕೋಣೆಯಲ್ಲೇ ಸದಾ ಇರುತ್ತಿದ್ದ ಅವರು ಎದುರಿನ ಪುಟ್ಟ ಕಿಟಕಿಯನ್ನೇ ನೋಡುತ್ತ ಮಲಗಿರುತ್ತಿದ್ದರು. ತೀರ್ಥಹಳ್ಳಿಯ ನಾನಾ ಊರುಗಳನ್ನು ಸುತ್ತಾಡಿಕೊಂಡಿದ್ದ ಅವರ ಜಗತ್ತು ಮೊದಲು ಅರಳಸುರಳಿ ಪೇಟೆಗೆ ಸೀಮಿತವಾಗಿ, ನಂತರ ಮನೆಗಷ್ಟೇ ಆಗಿತ್ತು. ಈಗ ಇಡೀ ಲೋಕವನ್ನೇ ಈ ಕಿರು ಕಿಟಕಿಯ ಮೂಲಕ ನೋಡಬೇಕಾದ ಹಂತ ಬಂದಿತ್ತು. ಸುಮ್ಮನೆ ಮಲಗಿರುತ್ತಿದ್ದ ಅವರು ಆಗಾಗ ಮಗುವೇ ಎಂದು ನನ್ನಮ್ಮನನ್ನು ಕರೆಯುತ್ತ, ಅಂಗಳಕ್ಕೆ ಯಾವುದಾದರೂ ನಾಯಿ ಬಂದರೆ ಹಚೈ ಎಂದು ಕೂಗುತ್ತ ಇರುತ್ತಿದ್ದರು. ಎರಡ್ಮೂರು ದಿನಕ್ಕೊಮ್ಮೆಯಂತೆ ಅಪ್ಪ-ಅಮ್ಮ ಅವರಿಗೆ ಸ್ನಾನ ಮಾಡಿಸುತ್ತಿದ್ದರು.
ಒಂದು ಬಾರಿ ಅಪ್ಪ ಸಾಗರದ ಅಡಿಕೆ ಮಂಡಿಗೆ ಹೋದ ಒಂದು ಮಧ್ಯಾಹ್ನ ಇದ್ದಕ್ಕಿದ್ದಂತೆ ಅಜ್ಜ ತೆವಳುತ್ತ ಕೋಣೆ, ಜಗುಲಿ ದಾಟಿ ನಡುವಳವನ್ನೂ ಮೀರಿ ಬಂದುಬಿಟ್ಟರು. ಅದೇನೋ ಕೆಲಸ ಮಾಡುತ್ತಿದ್ದ ಅಮ್ಮ ಬಂದು ನೋಡಿದರೆ ದೇವರ ವಳದಲ್ಲಿ ಒರಕುತ್ತ ಬರುತ್ತಿರುವ ಮಾವ. “ಮೀಯದೇ ಎರಡು ದಿನ ಆಯ್ತಲ್ಲ, ಸ್ನಾನ ಮಾಡ್ಸು ಮಗುವೇ” ಎಂದು ಮತ್ತಷ್ಟು ಮುಂದಕ್ಕೆ ಒರಕುವ ಪ್ರಯತ್ನ ಮಾಡಿದರು. ಅಜ್ಜನದೋ ಆರಡಿಯ ಎತ್ತರದ ನಿಲುವುದು. ಅಮ್ಮ ನಾಲ್ಕೂವರೆ ಅಡಿಯ ಕುಳ್ಳಿ. ಆದರೂ ಹೇಗೋ ಅವರನ್ನು ನಡೆಸಿಕೊಂಡು ಹಿತ್ತಲಕಡೆಯ ಚಿಟ್ಟೆ(ಕಲ್ಲಿನ ಕಟ್ಟೆ)ಗೆ ಕರೆತಂದಳು. ಬಿಸಿಬಿಸಿ ನೀರೆರೆದು ಸ್ನಾನ ಮಾಡಿಸಿ ಎಬ್ಬಿಸಿದರೆ ಅಜ್ಜನಿಗೆ ಅಚಾನಕ್ಕಾಗಿ ಸುಸ್ತು! ಮೇಲೇಳಲೂ ಆಗದ ನಿಶ್ಯಕ್ತಿ. ಕೊನೆಗೆ ಬೆಲ್ಲದ ನೀರು ಕುಡಿಸಿ, ಹೇಗೋ ಎಬ್ಬಿಸಿ, ಒಂದು ಕೈಗೆ ಊರುಗೋಲು ಕೊಟ್ಟು, ಇನ್ನೊಂದು ಕಡೆ ತನ್ನ ಹೆಗಲು ಕೊಟ್ಟು, ಅಂತೂ ಇಂತೂ ನಡೆಸಿಕೊಂಡು ಬಂದು ಕೋಣೆಯಲ್ಲಿ ಮಲಗಿಸಿದಳು.
ಆ ಕಾಲಮಾನದ ಬಹುತೇಕ ಎಲ್ಲ ಊರು-ಶಹರಗಳ ಎಲ್ಲ ಮನೆಗಳಲ್ಲೂ ನಿತ್ಯ ನಡೆದು ನಿಶ್ಯಬ್ಧವಾಗಿ ಮುಗಿಯುತ್ತಿದ್ದ, ಈಗಲೂ ಬಹುಪಾಲು ಹಾಗೇ ಜರುಗುವ ಸಂಗತಿಯಿದು. ಎಷ್ಟೇ ಸಹಜ ಎಂದುಕೊಂಡರೂ ನನ್ನ ಈಗಿನ ಗೆಳೆಯರ, ಸಹೋದ್ಯೋಗಿಗಳ ಕೆಲ ದೃಷ್ಟಾಂತಗಳ ಹಿನ್ನೆಲೆಯಲ್ಲಿ ನೋಡುವಾಗ ಈ ಘಟನೆಗಳೆಲ್ಲ ಮನುಷ್ಯ ಸಬಂಧಗಳ ಎಂಥಾ ಅಮೂಲ್ಯ ಕ್ಷಣಗಳಲ್ಲವೇ ಅನಿಸುತ್ತದೆ. ಒಂದಿಡೀ ತುಂಬು ಬದುಕನ್ನು ಬದುಕಿ ಹೊರಟಿರುವ ವೃದ್ಧ ಜೀವಕ್ಕೆ ಅವರ ಮನೆಯವರು ಕೊಡಬಹುದಾದ ಅತ್ಯಾಪ್ತ ವಿದಾಯವೆಂದರೆ ಇದೇ ಅಲ್ಲವೇ?
ಈಗ ಬೆಂಗಳೂರಿನ ಬೀದಿಗಳಲ್ಲಿ ತಿರುಗಾಡುವಾಗ ಹೀಗೇ ರಸ್ತೆಯನ್ನು ನೋಡುತ್ತ ಕುಳಿತಿರುವ ಎಷ್ಟೋ ವೃದ್ಧರನ್ನು ಕಂಡಿದ್ದೇನೆ. ಮಾತಿಗೆ ಯಾರೂ ಇಲ್ಲದ, ಏನು ಮಾತನಾಡುವುದೆಂದೂ ತಿಳಿಯದ, ಆಡುವ ಮಾತೆಲ್ಲವೂ ಕೊರೆತ ಎನ್ನಿಸಿಕೊಳ್ಳುವ, ಹನ್ನೆರಡು ಸುದೀರ್ಘ ಗಂಟೆಗಳೇ ಎದುರಿರುವ ನಿರುಪಾಯದ ಹಗಲನ್ನು ಹೀಗೆ ಕೋಟಿ ನೆನಪುಗಳ ತುಳುಕುವ ಮೌನದಲ್ಲಿ ದೂಡುವ ಅವರನ್ನು ನೋಡುವಾಗೆಲ್ಲ ನನಗೆ ಅಜ್ಜ ನೆನಪಾಗುತ್ತಾರೆ. ಕೋಣೆ ಹಾಗೂ ಅದರ ಹಾಸಿಗೆಗಷ್ಟೇ ಸೀಮಿತವಾಗಿ ಹೋದ ಅಜ್ಜನಿಗೆ ಇಡೀ ಮನೆಯಲ್ಲಿ ಸ್ವಲ್ಪವಾದರೂ ಮನೋರಂಜನೆಗೆ ಒದಗುತ್ತಿದ್ದವನು ನಾನೊಬ್ಬನೇ. ಯಾವ್ಯಾವುದೋ ಸಿನಿಮಾ, ಭೂತ, ಪ್ರೇತದ ಕಥೆಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು ಅಂಗಳದಲ್ಲಿ ಡಿಶೂಂ ಡಿಶೂಂ ಎಂದು ಗಾಳಿಯೊಡನೆ ಗುದ್ದಾಡುತ್ತ ಸುಳಿದಾಡುತ್ತಿದ್ದ ನನ್ನನ್ನು ಗಣೇಶಾ ಎಂದು ಕರೆಯುತ್ತಿದ್ದ ಅಜ್ಜ ‘ಇಲ್ಲಿ ಜಗುಲೀಲಿ, ನನ್ನ ಎದುರೇ ಆಡು ಗಣೇಶಾ’ ಎಂದು ಗೋಗರೆಯುತ್ತಿದ್ದರು.
ಮೂರನೇ ತರಗತಿಯ ಬಾಲಕನಾಗಿದ್ದ, ಇಡೀ ಪ್ರಪಂಚದುದ್ದಕ್ಕೂ ಓಡಾಡುತ್ತ ಆಡಬೇಕೆಂಬ ಉತ್ಸಾಹವಿದ್ದ ಆ ದಿನಗಳಲ್ಲಿ ಅಜ್ಜನ ಈ ಕೋರಿಕೆ ನನಗೆ ಅರ್ಥವೇ ಆಗುತ್ತಿರಲಿಲ್ಲ. ಅಜ್ಜನ ಬಳಿ ಒಂದು ಹಸಿರು ಬಣ್ಣದ ಬುಗುರಿಯಿತ್ತು. ನನ್ನನ್ನು ಕರೆದ ಅವರು ‘ಇಕಾ, ಇದನ್ನ ತಗಂಡು ಇಲ್ಲೇ ಜಗುಲೀಲೇ ನನ್ನೆದುರೇ ಆಡು’ ಎನ್ನುತ್ತಿದ್ದರು. ಹತ್ತು ನಿಮಿಷ ಅಲ್ಲೇ ಆಡಿದ ನಾನು ಬೇಜಾರಾಗಿ ಹೊರಗೆ ಓಡುತ್ತಿದ್ದೆ. ಎಷ್ಟೇ ಕರೆದರೂ ಅಜ್ಜನಿಗೆ ಹಿಂದೆ ಓಡಿ ಬರಲಾಗುವುದಿಲ್ಲವೆನ್ನುವ ಧೈರ್ಯ ನನಗೆ.
ಅಜ್ಜ ಕರೆಯುತ್ತಿದ್ದರು. ನಾನು ಓಡುತ್ತಿದ್ದೆ. ಕರೆ.. ಓಡು.. ಕರೆ.. ಓಡು..
ನಾನು ಓಡುತ್ತಿದ್ದೆ. ಓಡುತ್ತಲೇ ಇದ್ದೆ. ಒಂದು ದಿನ ಆ ಕರೆ ನಿಲ್ಲುವ ತನಕ.
*****
ಅಜ್ಜನ ಆರೋಗ್ಯ ಬಿಗಡಾಯಿಸಿತು. ಅದು 2000ನೇ ಇಸವಿ ಜನವರಿ ತಿಂಗಳಿನ ಒಂದು ದಿನ. ನಾನು ಶಾಲೆ ಮುಗಿಸಿ ಸಂಜೆ ಮರಳಿದಾಗ ಮನೆಯ ತುಂಬ ಜನ ಸೇರಿದ್ದರು. ಅಮ್ಮ ಅಳುತ್ತಿದ್ದಳು. ಅಪ್ಪ ‘ಅಪ್ಪಯ್ಯಾ’ ಎಂದು ಬಿಕ್ಕುತ್ತಿದ್ದ. ಜೋರಾಗಿ ಬೈಯುವ, ಗಟ್ಟಿ ದನಿಯಲ್ಲಿ ಮಾತಾಡುವ ಅವನು ಅಳುತ್ತಿರುವ ಅಪರೂಪದ ದೃಶ್ಯವನ್ನು ನೋಡಿ ವಿಚಿತ್ರವೆನಿಸಿತು.
ಅಜ್ಜನನ್ನು ಅಂಗಳದಲ್ಲಿ ಮಲಗಿಸಿದ್ದರು. ಅವರು ಬಾಯಿ ಅರ್ಧ ತೆರೆದುಕೊಂಡು ಮಿಸುಕಾಡದೇ ಮಲಗಿದ್ದರು. ಹೈಸ್ಕೂಲಿಗೆ ಹೋಗಿದ್ದ ಅಕ್ಕ ಇನ್ನೂ ಬಂದಿರಲಿಲ್ಲ. ‘ಅಜ್ಜ ತೀರಿ ಹೋದ್ರು ಅಂತ ಹೇಳಿ ಅವಳನ್ನ ಬೇಗ ಕರ್ಕೊಂಡ್ಬಾ’ ಎಂದು ನನ್ನನ್ನು ಕಳಿಸಿದರು. ನನಗೋ ಮನೆ ತುಂಬ ಜನ ಬಂದಿದ್ದಾರೆ, ಏನೋ ವಿಶೇಷ ಜರುಗುತ್ತಿದೆಯೆನ್ನುವ ಹುರುಪು. ಬಸ್ಸು ಇಳಿದು ಬರುತ್ತಿದ್ದ ಅಕ್ಕನ ಬಳಿ ಓಡಿ ಖುಷಿಯಿಂದ ‘ಅಕ್ಕ, ಅಕ್ಕ ಮನೆ ತುಂಬಾ ಜನ! ಅಜ್ಜ ಸತ್ತೋದ್ರು!’ ಎಂದು ಖುಷಿಯಲ್ಲೇ ಹೇಳಿದೆ. ಅದನ್ನು ಕೇಳಿದ್ದೇ ಅಕ್ಕ ಬಿಕ್ಕುತ್ತ ಅಯ್ಯೋ ಹೌದಾ, ಅದ್ನ ನಗ್ತಾ ಹೇಳ್ತಿದೀಯಲೋ ಎಂದು ಅಳುತ್ತ ಓಡಿದಳು.
ಚಟ್ಟ ಕಟ್ಟಿದರು. ನಿಶ್ಚಲವಾಗಿ ಮಲಗಿದ್ದ ಅಜ್ಜನನ್ನು ಅದರ ಮೇಲೆ ಮಲಗಿಸಿ ಎತ್ತಿ ಒಯ್ದರು. ಮನೆಯ ಕೆಳಗಿನ ಧರೆಗುಂಡಿಯಲ್ಲಿ ಕೂಡಿದ ಚಿತೆಯಲ್ಲಿ ಅವರನ್ನು ಸುಡಲಾಯಿತು. ಅಪ್ಪ, ದೊಡ್ಡಪ್ಪ, ಚಿಕ್ಕಪ್ಪರಿಗೆಲ್ಲ ತಲೆ ಬೋಳಿಸಲಾಯಿತು. ವೈಕುಂಠ ಸಮಾರಾಧನೆ ಎಲ್ಲ ಮುಗಿದವು. ಎಲ್ಲರೂ ಹೋದರು. ಮನೆ ಮೊದಲಿನಂತೆ ಖಾಲಿಯಾಯಿತು. ನಾನು ಎಂದಿನಂತೆ ಆಟಕ್ಕೆಂದು ಅಂಗಳಕ್ಕಿಳಿದೆ.
ಈಗ ನನ್ನನ್ನು ಯಾರೂ ಕರೆಯುವವರಿರಲಿಲ್ಲ. ಜಗುಲಿಯಲ್ಲೇ ಆಡೆಂದು ಒತ್ತಾಯಿಸುವವರಿರಲಿಲ್ಲ. ನಾನೀಗ ಸ್ವಚ್ಛಂದ ಹಕ್ಕಿ. ಎಲ್ಲಿ ಬೇಕಾದರೂ ಆಡಬಹುದು. ಆದರೂ, ಅಚಾನಕ್ಕಾಗಿ ಏನೋ ಖಾಲಿತನ. ಮನೆಯೀಗೇಕೋ ಹಿಂದೆಂದಿಗಿಂತ ಖಾಲಿ ಖಾಲಿ. ಅಪರಿಮಿತ ಅವಕಾಶಗಳಿದ್ದರೂ ಅಂಗಳದಲ್ಲಿ ಆಡಲಾಗಲೇ ಇಲ್ಲ. ಮೆಲ್ಲನೆ ಜಗುಲಿಗೆ ಬಂದೆ. ಕೋಣೆಯ ಬಾಗಿಲು ಎಳೆದು ಚಿಲಕ ಹಾಕಿದ್ದರು. ಅಲ್ಲೀಗ ಅಜ್ಜ ಇರಲಿಲ್ಲ.
ರಾತ್ರಿಯಾಯಿತು. ಊಟಕ್ಕೆ ಕರೆದರು. ಉಣ್ಣುವಾಗ ಕೈಯಲ್ಲಿ ಬಾಲಮಂಗಳ ಹಿಡಿದು ಓದುವುದು ನನ್ನ ಅಭ್ಯಾಸ. ಇಂದು ಮಾತ್ರ ಅಜ್ಜ ಹೇಳಿದ, ನಾನು ಬರೆದುಕೊಂಡ ಹಾಡಿರುವ ಡೈರಿ ಹಿಡಿದುಕೊಂಡೆ. ಪುಟ ತೆರೆದು ಓದಿದೆ.
ರಂಗನಾಯಕ ರಾಜೀವ ಲೋಚನ ರಮಣ ಬೆಳಗಾಯೀತೇಳೆನುತ
ಅಂಗನೆ ಲಕ್ಷ್ಮಿಯು ಪತಿಯನೆಬ್ಬಿಸುವಳು
ಶೃಂಗಾರದ ನಿದ್ರೆ ಸಾಕೆನುತ..
ಅಜ್ಜ.. ಗಣೇಶಾ ಎಂದು ಕರೆಯುತ್ತಿದ್ದ ಅಜ್ಜ.. ಹೊಡೆಯುವ ಅಮ್ಮನಿಂದ ಬಿಡಿಸಿ ಕರೆದೊಯ್ದಿದ್ದ ಅಜ್ಜ.. ‘ನನ್ನ ಎದುರೇ ಆಡು’ ಎಂದು ಬುಗುರಿ ಕೊಟ್ಟು ಅಂಗಲಾಚಿದ್ದ ಅಜ್ಜ.. ಅಂಗಳದಲ್ಲಿ ಅರ್ಧ ಬಾಯಿ ತೆರೆದು ನಿಶ್ಚಲವಾಗಿ ಮಲಗಿದ ಅಜ್ಜ..
ಅವನಿನ್ನು ಯಾವತ್ತೂ ಮರಳಿ ಬರುವುದಿಲ್ಲ.
ಅಂದು ಅಜ್ಜ ಹೇಳಿ ಬರೆಸಿದ್ದ ಹಾಡಿರುವ ಡೈರಿಯೊಂದೇ ಉಳಿದು ಹೋಗಿತ್ತು. ಅವರು ಆಡಿದ ಮಾತುಗಳೆಲ್ಲ ಕಿವಿಯಂಚಿನಲ್ಲೇ ಇದ್ದವು. ಕೋಣೆಯ ಖಾಲಿತನದ ಉದ್ದಕ್ಕೂ ಅವರದೇ ಸುಳಿವಿತ್ತು. ಮನೆಯ ಇಂಚು ಇಂಚಿನಲ್ಲೂ ಅವರದೇ ಇರುವಿತ್ತು.
ಅಜ್ಜ ಮಾತ್ರ ಎಂದೂ ಬಾರದ ಲೋಕಕ್ಕೆ ಹೊರಟು ಹೋಗಿದ್ದರು.
ಅತ್ತೆ.. ಅಜ್ಜನ ಹಾಡಿರುವ ಡೈರಿಯನ್ನು ಹಿಡಿದು ‘ನಂಗೆ ಅಜ್ಜ ಬೇಕು’ ಎಂದು ಬಿಕ್ಕಿ ಬಿಕ್ಕಿ ಅತ್ತೆ. ಮನೆಯವರೆಲ್ಲ ನನ್ನನ್ನು ಅರ್ಧ ಕನಿಕರದಿಂದ, ಇನ್ನರ್ಧ ತಮಾಷೆಯಿಂದ ನೋಡಿದರು. ಅಲ್ಲೇ ಇದ್ದ ಅತ್ತೆ ‘ಪಾಪ, ಅವನಿಗೆ ಈಗ ಅರ್ಥವಾಗಿದೆ ಅಜ್ಜ ಸತ್ತೋದ್ರು ಅಂತ’ ಎಂದರು.

ಅಜ್ಜ ಎಂದೂ ಬಾರದ ಲೋಕಕ್ಕೆ ಹೋಗಿದ್ದಾರೆನ್ನುವುದು ನನಗೆ ಅರ್ಥವಾಗಿದ್ದು ಅವರು ತೀರಿಹೋದ ತಿಂಗಳ ನಂತರವೇ. ಅಜ್ಜನ ಕರೆಯನ್ನು ಕಡೆಗಣಿಸಬಾರದಿತ್ತು, ಅವರು ಕೇಳಿದಂತೆ ಅವರ ಎದುರೇ ಆಡಬೇಕಿತ್ತು, ಅವರಿಗೆ ಸಮೀಪವಾಗಿ ಇನ್ನಷ್ಟು ಸಮಯ ಕಳೆಯಬೇಕಿತ್ತು ಅಂತ ಈಗಲೂ ಬಹಳ ಅನ್ನಿಸುತ್ತದೆ. ಆದರೇನು ಮಾಡುವುದು? ಒಂದು ಸಂಬಂಧವನ್ನು ಕಳೆದುಕೊಳ್ಳುವ ತನಕ ಅದರ ಬೆಲೇಯೇ ಅರ್ಥವಾಗದ ವಿಚಿತ್ರ ಪಶ್ಚಾತ್ತಾಪದ ಲೋಕವಲ್ಲವೇ ನಮ್ಮದು? ಅದೆಷ್ಟು ಮುಗಿಯದ ಪಶ್ಚಾತ್ತಾಪಗಳ ಸುಪ್ತ ಜ್ವಾಲಾಮುಖಿಯೋ ಈ ಬದುಕು?

ವಿನಾಯಕ ಅರಳಸುರಳಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೋಕಿನ ಅರಳಸುರಳಿ ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ಸ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಸಣ್ಣ ಕಥೆ, ಲಲಿತ ಪ್ರಬಂಧ ಹಾಗೂ ಕವಿತೆಗಳನ್ನು ಬರೆದಿದ್ದು ‘ನವಿಲುಗರಿ ಮರಿ ಹಾಕಿದೆ’ ಹೆಸರಿನ ಲಲಿತ ಪ್ರಬಂಧ ಸಂಕಲನ ಹಾಗೂ ‘ಮರ ಹತ್ತದ ಮೀನು’ ಕಥಾ ಸಂಕಲನಗಳು ಪ್ರಕಟವಾಗಿವೆ.

