Advertisement
ದೊಡ್ಡ ದೇಶದ  ಸಂಗತಿಗಳು  ಚಿಕ್ಕ ಚಿಕ್ಕ  ಟಿಪ್ಪಣಿಗಳಲ್ಲಿ: ಶಶಿಧರ ಹಾಲಾಡಿಯವರ ಕೃತಿಯ ಕುರಿತು ನಾರಾಯಣ ಯಾಜಿ ಬರಹ

ದೊಡ್ಡ ದೇಶದ  ಸಂಗತಿಗಳು  ಚಿಕ್ಕ ಚಿಕ್ಕ  ಟಿಪ್ಪಣಿಗಳಲ್ಲಿ: ಶಶಿಧರ ಹಾಲಾಡಿಯವರ ಕೃತಿಯ ಕುರಿತು ನಾರಾಯಣ ಯಾಜಿ ಬರಹ

ಅಮೆರಿಕದಂತಹ ವಿಶಾಲ ದೇಶವನ್ನು ಸಾವಿರಾರು ಪ್ರವಾಸಿಗರು ನೋಡಿರಬಹುದು. ಆದರೆ ಎಲ್ಲರೂ ಅದನ್ನು ಓದುಗರ ಕಣ್ಮುಂದೆ ಜೀವಂತಗೊಳಿಸಲು ಸಾಧ್ಯವಿಲ್ಲ. ಒಂದು ಸ್ಥಳದ ಸೌಂದರ್ಯವನ್ನು ವರ್ಣಿಸುವುದು ಸುಲಭ; ಆದರೆ ಆ ಸ್ಥಳದ ಇತಿಹಾಸ, ಸಾಮಾಜಿಕ ಹಿನ್ನೆಲೆ, ವೈಜ್ಞಾನಿಕ ಅಂಶಗಳು, ಅಲ್ಲಿನ ಜನಜೀವನ ಮತ್ತು ಮಾನವ ನಾಗರಿಕತೆಯ ಪಯಣವನ್ನು ಒಂದೇ ಬರಹದಲ್ಲಿ ಬೆರೆಸಿ ಹೇಳುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಹಾಲಾಡಿಯವರು ಅದನ್ನು ಸಾಧಿಸಿದ್ದಾರೆ. ಈ ಕೃತಿಯ ಅತ್ಯಂತ ದೊಡ್ಡ ಶಕ್ತಿ ಅವರ ‘ಸೂಕ್ಷ್ಮ ಅವಲೋಕನ’. ಸಾಮಾನ್ಯ ಪ್ರವಾಸಿಗನ ಕಣ್ಣಿಗೆ ಕಾಣದ ಸಂಗತಿಗಳನ್ನೂ ಲೇಖಕರು ಹಿಡಿದುಕೊಡುತ್ತಾರೆ. 
ಶಶಿಧರ ಹಾಲಾಡಿ ಬರೆದ ಪ್ರವಾಸ ಕಥನ “ಇಲ್ಲಿ ಶಾಸ್ತ್ರ ಹೇಳಲಾಗುವುದು” ಕುರಿತು ನಾರಾಯಣ ಯಾಜಿ ಬರಹ ನಿಮ್ಮ ಓದಿಗೆ

ಶಶಿಧರ ಹಾಲಾಡಿಯವರ ಬರಹದ ವಿಶೇಷವೆಂದರೆ ಅವರಲ್ಲಿರುವ ಪ್ರಕೃತಿ ಪ್ರೀತಿ, ಜೊತೆಗೆ ಸರಳವಾಗಿ ತಾನು ಕಂಡ ಸಂಗತಿಗಳನ್ನು ಓದುಗನಿಗೆ ಮದಟ್ಟು ಮಾಡುವ ಅವರ ಸರಳಗನ್ನಡದ ಶೈಲಿ. ಇತ್ತೀಚೆಗೆ ಬಂದ ಸೋಲೋ ಟ್ರಿಪ್ ಆಗಲೀ ಈಗ ಬಂದ “ಇಲ್ಲಿ ಶಾಸ್ತ್ರ ಹೇಳಲಾಗುವುದು” ಕೃತಿಯಲ್ಲಾಗಲೀ ಈ ಗುಣವನ್ನು ಕಾಣಬಹುದು. ಆಗುಂಬೆ ಬೆಟ್ಟದಿಂದ ಹಾಲಾಡಿಯ ತನಕ ನಡೆದು ಬಂದಷ್ಟೇ ಸಲೀಸಾಗಿ ನಾರ್ಥ್ ವಿಲ್ಲೆಯ ಸ್ಟೇಟ್ ಪಾರ್ಕಿನಲ್ಲಿ ದಟ್ಟ ಅರಣ್ಯದಲ್ಲಿ ಏಕಾಂಗಿಯಾಗಿ ನಡೆದು ಬಂದ ಅಪರಿಚಿತ ಮಹಿಳೆಯೊಬ್ಬಳ ಕುರಿತು ಬರೆಯಬಲ್ಲರು. ‘ಸೊಲೋ ಟ್ರಿಪ್’ ನಲ್ಲಿ  ಲೇಖಕರ ಅನುಭವ “ಇಲ್ಲಿ ಶಾಸ್ತ್ರ ಹೇಳಲಾಗುವುದು” ಕೃತಿಯಲ್ಲಿ ಆ ಅಪರಿಚಿತ ಮಹಿಳೆಯನ್ನು ಕಂಡಾಗ ಮತ್ತೊಮ್ಮೆ ಮಾರ್ದನಿಸುತ್ತದೆ.  ಯಶಸ್ವಿ ಅಂಕಣಕಾರರಲ್ಲೊಬ್ಬರಲ್ಲಾದ ಹಾಲಾಡಿಯವರಿಗೆ ಶಬ್ದಗಳ ಮಿತಿಯಲ್ಲಿ ವಿಷಯದ ನಿರೂಪಣೆ ಹೇಳುವ ಕಲೆ ಸಲೀಸಾಗಿ ದಕ್ಕಿದೆ.  ಅಮೇರಿಕಾದಲ್ಲಿರುವ ತಮ್ಮ ಮಗಳ ಮನೆಗೆ ಹೋಗಿದ್ದಾಗ ಇದ್ದ ಮೂರು ತಿಂಗಳಲ್ಲಿ ತಿರುಗಿದ ಪ್ರದೇಶಗಳ ವಿಶೇಷಗಳನ್ನು ಆ ನೆನಪನ್ನು ಕಾಪಿಟ್ಟುಕೊಳ್ಳಲು ತೆಗೆದ ಫೋಟೋಗಳನ್ನು ಸಂಗ್ರಹಿಸಿ ಇಲ್ಲಿ ಶಾಸ್ತ್ರ ಹೇಳಲಾಗುವುದು” ಎಂಬ ಕೃತಿಯನ್ನು ಬರೆದಿದ್ದಾರೆ. ಈ ಕೃತಿಯಲ್ಲಿ  ಉದ್ದುದ್ದ ಬರಹಗಳಿಲ್ಲ. ಅಮೇರಿಕಾಕ್ಕೆ ಹೋಗುವುದೇ ದೊಡ್ಡ ಸಾಧನೆಯಂತೆ ತೋರಿಸಿಕೊಳ್ಳುವ ಯಾವ ಹಪಹಪಿಕೆಯೂ ಇಲ್ಲ. ಓದುಗನಿಗೆ ಸಚಿತ್ರಾತ್ಮಕವಾಗಿ ತಿಳಿಸುವ ಸ್ನೇಹಭಾವನೆಯಲ್ಲಿ ಬರೆದ ಪ್ರವಾಸ ಕಥನ ಇದು. ಇದಕ್ಕೆ ಅತ್ಯಂತ ಸೂಕ್ತವಾದ ಪದಗಳು Illustrated Travel Essays ಅಥವಾ Illustrated Travelogue ಎನ್ನಬಹುದು.

(ಶಶಿಧರ ಹಾಲಾಡಿ)

“Travel does not merely measure distance; it enlarges vision.”ಪ್ರವಾಸ ಮನುಷ್ಯನಿಗೆ ದೂರವನ್ನು ತೋರಿಸುವುದಿಲ್ಲ; ದೃಷ್ಟಿಯನ್ನು ವಿಸ್ತರಿಸುತ್ತದೆ.” ಪ್ರವಾಸ ಸಾಹಿತ್ಯದ ಉದ್ದೇಶ ಕೇವಲ ಒಂದು ಊರು, ನಗರ ಅಥವಾ ದೇಶವನ್ನು ಪರಿಚಯಿಸುವುದಲ್ಲ. ಓದುಗನು ಹೋಗದ ಸ್ಥಳಕ್ಕೆ ಅವನ ಮನಸ್ಸನ್ನು ಕರೆದೊಯ್ಯುವುದು, ನೋಡದ ಲೋಕವನ್ನು ಅವನ ಕಣ್ಣಿಗೆ ತೆರೆದು ತೋರಿಸುವುದು ಮತ್ತು ಕಂಡದ್ದರ ಹಿಂದೆ ಅಡಗಿರುವ ಇತಿಹಾಸ, ಸಂಸ್ಕೃತಿ, ವಿಜ್ಞಾನ ಹಾಗೂ ಮಾನವ ನಾಗರಿಕತೆಯ ಪಯಣವನ್ನು ಅರ್ಥಮಾಡಿಸುವುದು ಅದರ ನಿಜವಾದ ಧ್ಯೇಯ.

ಪ್ರವಾಸ ಕಥನ ಎನ್ನುವುದಕ್ಕೆ ಜಾಗತಿಕ ಸಾಹಿತ್ಯದಲ್ಲಿ ದೀರ್ಘ ಪರಂಪರೆಯಿದೆ. ಎಚ್. ವಿ. ಮಾರ್ಟಿನ್ ಅವರ In Search of America, ಬಿಲ್ ಬ್ರೈಸನ್ ಅವರ The Lost Continent, ಪಾಲ್ ಥೆರೂ ಅವರ ಪ್ರವಾಸ ಬರಹಗಳು, ಜಾನ್ ಮೋರಿಸ್ ಅವರ ನಗರ ನಿರೂಪಣೆಗಳು ಹಾಗೂ National Geographic ಮತ್ತು DK Eyewitness ಮಾದರಿಯ ಚಿತ್ರಸಹಿತ ಪ್ರವಾಸ ಗ್ರಂಥಗಳು ಓದುಗರಿಗೆ ಜ್ಞಾನ ಮತ್ತು ಪ್ರವಾಸದ ಆನಂದವನ್ನು ಏಕಕಾಲದಲ್ಲಿ ನೀಡಿವೆ. ಅವು ಪ್ರವಾಸ ಕಥನಗಳಾಗದೇ, ನಾಗರಿಕತೆಯ ವಿಕಾಸದ ದಾಖಲೆಗಳಾಗಿವೆ. ಕನ್ನಡದಲ್ಲಿ ಈ ಮಾದರಿಯ ಕೃತಿಗಳು ವಿರಳ. ಅದರಲ್ಲೂ ಚಿಕ್ಕ ಚಿಕ್ಕ ಟಿಪ್ಪಣಿಗಳಲ್ಲಿ ವಿಶಾಲ ದೇಶದ ಭೌಗೋಳಿಕ, ಐತಿಹಾಸಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಆಯಾಮಗಳನ್ನು ಫೋಟೋಗಳ ಸಹಿತ ಪರಿಚಯಿಸುವ ಪ್ರಯತ್ನಗಳು ಇನ್ನೂ ವಿರಳ. ಅಂತಹ ಅಪರೂಪದ ಪ್ರಯತ್ನವೇ ಇಲ್ಲಿ ಶಾಸ್ತ್ರ ಹೇಳಲಾಗುವುದು” ಕೃತಿ. ಈ ಪುಸ್ತಕವನ್ನು ಓದಿದ ನಂತರ ಅಮೆರಿಕ ನಮ್ಮಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿದ್ದರೂ, ಅದರ ಇತಿಹಾಸ, ವಿಜ್ಞಾನ, ಸಂಸ್ಕೃತಿ ಮತ್ತು ಮಾನವ ಸಾಧನೆಗಳು ನಮ್ಮ ಓದಿನ ಮೂಲಕ ಹತ್ತಿರವಾಗುತ್ತವೆ. ಅದೇ ಈ ಕೃತಿಯ ಯಶಸ್ಸು; ಅದೇ ಉತ್ತಮ ಪ್ರವಾಸ ಸಾಹಿತ್ಯದ ನಿಜವಾದ ಗುರುತು. ೭೫ ಪುಟ್ಟ ಪುಟ್ಟ ತಿಪ್ಪಣಿಗಳಲ್ಲಿ ದೊಡ್ಡ ದೇಶದ ದೊಡ್ಡ ವಿಷಯಗಳನ್ನು ಹಿಡಿದಿಟ್ಟಿದ್ದಾರೆ.

ಅಮೆರಿಕದಂತಹ ವಿಶಾಲ ದೇಶವನ್ನು ಸಾವಿರಾರು ಪ್ರವಾಸಿಗರು ನೋಡಿರಬಹುದು. ಆದರೆ ಎಲ್ಲರೂ ಅದನ್ನು ಓದುಗರ ಕಣ್ಮುಂದೆ ಜೀವಂತಗೊಳಿಸಲು ಸಾಧ್ಯವಿಲ್ಲ. ಒಂದು ಸ್ಥಳದ ಸೌಂದರ್ಯವನ್ನು ವರ್ಣಿಸುವುದು ಸುಲಭ; ಆದರೆ ಆ ಸ್ಥಳದ ಇತಿಹಾಸ, ಸಾಮಾಜಿಕ ಹಿನ್ನೆಲೆ, ವೈಜ್ಞಾನಿಕ ಅಂಶಗಳು, ಅಲ್ಲಿನ ಜನಜೀವನ ಮತ್ತು ಮಾನವ ನಾಗರಿಕತೆಯ ಪಯಣವನ್ನು ಒಂದೇ ಬರಹದಲ್ಲಿ ಬೆರೆಸಿ ಹೇಳುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಹಾಲಾಡಿಯವರು ಅದನ್ನು ಸಾಧಿಸಿದ್ದಾರೆ. ಈ ಕೃತಿಯ ಅತ್ಯಂತ ದೊಡ್ಡ ಶಕ್ತಿ ಅವರ ‘ಸೂಕ್ಷ್ಮ ಅವಲೋಕನ’. ಸಾಮಾನ್ಯ ಪ್ರವಾಸಿಗನ ಕಣ್ಣಿಗೆ ಕಾಣದ ಸಂಗತಿಗಳನ್ನೂ ಲೇಖಕರು ಹಿಡಿದುಕೊಡುತ್ತಾರೆ.  ಶಿಶಿರ ಹೆಗಡೆಯವರು ಕಟ್ಟಿಕೊಟ್ಟ ಬುತ್ತಿಯಲ್ಲಿ ಗ್ವಾಟೇಮಾಲಾದ ಹಲಸಿನ ಹಣ್ಣಿನ ರುಚಿಯನ್ನು ಹೇಳುವಾಗ ಇಲ್ಲಿನ ಹಣ್ಣಿನ ರುಚಿಗೆ ಹೋಲಿಸಿದ ವಿಷಯ ಜೊತೆಗೆ ಅಲ್ಲಿನ ಹಲಸಿನ ಹಣ್ಣು ರುಚಿಯಿರಬಹುದು. ಆದರೆ ಮಾವಿನ ಹಣ್ಣಿಗೆ ಭಾರತವೇ ಬೆಸ್ಟ್ ಎಂದು ನೆಲದ ನೆನಪು ಅವರಿಗಾಗುತ್ತದೆ.  ಅಮೇರಿಕಾದಲ್ಲಿ ಪಟೇಲ್ ಸ್ಟೋರಿನಲ್ಲಿ  ಖರೀದಿಸಿ  ತಂದು ತಿಂದ  ಅನುಭವ ಮತ್ತೊಮ್ಮೆ ನೆನಪಾಯಿತು.  ಓದುಗನು ಲೇಖಕರ ಜೊತೆಯಲ್ಲೇ ಅಮೆರಿಕದ ಸ್ಥಳಗಳ ಐತಿಹಾಸಿಕ ಸಂಗತಿಗಳ ಪರಿಚಯ ಮಾಡಿಕೊಳ್ಳುತ್ತಾನೆ. ರಸ್ತೆಗಳಲ್ಲಿ ಪ್ರಯಾಣಿಸುತ್ತಿರುವಾಗ ಇತಿಹಾಸ, ಭೂಗೋಳ, ವಿಜ್ಞಾನ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳು ಸಹಜವಾಗಿ ಬೆರೆಸಿ ಅಕ್ಷರದಲ್ಲಿ ಕಟ್ಟಿಕೊಟ್ಟಿದ್ದಾರೆ. ಒಂದರ್ಥದಲ್ಲಿ ಈ ಕೃತಿ ಪ್ರವಾಸ ಕಥನವನ್ನು ಮೀರಿ ಜ್ಞಾನಕೋಶದ ಸ್ವರೂಪವನ್ನು ಪಡೆಯುತ್ತದೆ.

ಪ್ರವಾಸ ಸಾಹಿತ್ಯವು ಓದುಗನಲ್ಲಿ ಎರಡು ಆಸೆಗಳನ್ನು ಹುಟ್ಟಿಸಬೇಕು; ಮೊದಲನೆಯದು, ಆ ಸ್ಥಳವನ್ನು ನೋಡಬೇಕೆಂಬ ಆಸೆ; ಮತ್ತೊಂದು, ಆ ಸಮಾಜದಿಂದ ಏನನ್ನಾದರೂ ಕಲಿಯಬೇಕೆಂಬ ಹಂಬಲ. “ಇಲ್ಲಿ ಶಾಸ್ತ್ರ ಹೇಳಲಾಗುವುದು” ಈ ಎರಡನ್ನೂ ಸಾಧಿಸುತ್ತದೆ. ಪುಸ್ತಕ ಮುಗಿದಾಗ ಅಮೆರಿಕದ ಕುರಿತು ನಮ್ಮ ಅರಿವು ವಿಸ್ತಾರಗೊಳ್ಳುತ್ತದೆ; ಜೊತೆಗೆ ಪ್ರವಾಸದ ಅರ್ಥವೂ ಹೊಸದಾಗಿ ಗೋಚರಿಸುತ್ತದೆ.

ಉದಾಹರಣೆಗೆ, ಜಗತ್ಪ್ರಸಿದ್ಧ ನಯಾಗಾರ ಜಲಪಾತದ ಪ್ರಾಕೃತಿಕ ಆರ್ಭಟ ಮತ್ತು ದೃಶ್ಯ ವೈಭವವನ್ನು ಆಸ್ವಾದಿಸುವ ಲೇಖಕರು, ಅದರ ತಟದಲ್ಲೇ ಸಿಗುವ ಭಾರತೀಯ ಹೋಟೆಲ್ ಮತ್ತು ಬಿಸಿಬಿಸಿ ದೋಸೆಯ ಪರಿಮಳವನ್ನು ಗುರುತಿಸುತ್ತಾರೆ. ಜಾಗತಿಕ ಪ್ರವಾಸಿ ತಾಣವೊಂದರಲ್ಲಿ ತಮ್ಮ ತಾಯ್ನಾಡಿನ ರುಚಿಯ ನೆನಪಾಗುವ ಈ ಸಣ್ಣ ವಿವರಣೆ, ಪ್ರವಾಸದಲ್ಲಿ ಸಂಸ್ಕೃತಿಗಳು ಹೇಗೆ ಮುಖಾಮುಖಿಯಾಗುತ್ತವೆ ಎಂಬುದನ್ನು ತೋರಿಸುತ್ತದೆ. ಹಾಗೆಯೇ, ಶಿಕಾಗೋ ನಗರದ ಬೋಟ್ ಪ್ರವಾಸದಲ್ಲಿ ಅಲ್ಲಿನ ಗಗನಚುಂಬಿ ಕಟ್ಟಡಗಳ ವಾಸ್ತುಶಿಲ್ಪವನ್ನು ವರ್ಣಿಸುವುದಷ್ಟೇ ಅಲ್ಲದೆ, ಎರಡನೇ ಮಹಾಯುದ್ಧದ ಸಮಯದಲ್ಲಿ ಶಿಕಾಗೋದಿಂದ ರಹಸ್ಯವಾಗಿ ನದಿಯ ಕಾಲುವೆಯ ಮೂಲಕ ೨೮ ಜಲಾಂತರ್ಗಾಮಿಗಳನ್ನು (Submarines) ಮೆಕ್ಸಿಕೋ ಸಮುದ್ರ ತೀರಕ್ಕೆ ಸಾಗಿಸಿದ ಐತಿಹಾಸಿಕ ರಹಸ್ಯದ ಎಳೆಯನ್ನು ಅನಾವರಣಗೊಳಿಸುತ್ತಾರೆ. ಕೇವಲ ಒಂದು ನದಿಯ ಸೌಂದರ್ಯವನ್ನು ನೋಡುವುದಕ್ಕಿಂತ, ಆ ನದಿಯ ಕಾಲುವೆ ಹೊತ್ತು ತಂದ ಯುದ್ಧದ ಇತಿಹಾಸವನ್ನು ತಿಳಿಸಿಕೊಡುವುದು ಪ್ರವಾಸ ಕಥನದ ನೈಜ ಮಹತ್ವವನ್ನು ಹೆಚ್ಚಿಸುತ್ತದೆ. ಇಡೀ ಪ್ರವಾಸದಲ್ಲಿ ಲೇಖಕರಿಗೆ ಶಿಕಾಗೋ ನಗರ ಹೆಚ್ಚು ಇಷ್ಟವಾಗಿದ್ದಂತೆ ತೋರುತ್ತದೆ. ಸಮುದ್ರವನ್ನು ನೆನಪಿಸುವ ಶಿಕಾಗೋದ ಪ್ರಸಿದ್ಧ ಸರೋವರ  ‘ಲೇಕ್ ಮಿಶಿಗನ್’, ವಿವೇಕಾನಂದರು ನಡೆದ ಜಾಗ, ಡೌನ್ ಟೌನ್ನಿನ ಗಗನ ಚಿಂಬಿ ಕಟ್ಟಡಗಳು ಇವೆಲ್ಲದರ ಜೊತೆ ಅಲ್ಲಿದ್ದರೂ, ಉತ್ತರಕನ್ನಡದ ಹವ್ಯಕರ ಅತಿಥ್ಯದ ಅನುಭವ ಶಿಶಿರ ಹೆಗಡೆಯವ ಮನೆ ಚನ್ನಾಗಿ ವರ್ಣಿತವಾಗಿದೆ.  ಅನೇಕ ಭಾರತೀಯರು, ಲಾನ್ಸಿಂಗ್ ನಗರದಲ್ಲಿ ನೋಡಿದ ಯಕ್ಷಗಾನ ಇವೆಲ್ಲವೂ ಈ ಕೃತಿಯನ್ನು ಲವಲವಿಕೆಯಿಂದ ಓದುವಂತೆ ಮಾಡಿವೆ.

ನ್ಯೂಯಾರ್ಕ್ ನಗರದ ವೈಶಿಷ್ಟ್ಯ ಅಮೇರಿಕಾದ ಇತರ ನಗರಗಳಿಗಿಂತ ಭಿನ್ನ.  ಪ್ರಪಂಚದ ಎತ್ತರದ ಕಟ್ಟಡಗಳು ಮೇಲೆ ಕಾಣಿಸಿದರೆ ಇಡೀ ನಗರವನ್ನು ದೇಹದೊಳಗಿನ ನರಮಂಡಲದಂತೆ ವ್ಯಾಪಿಸಿರುವ ಭೂಗತ ರೈಲುಗಳು ವಿಸ್ಮಯವಾಗಿ ಕಾಣಿಸುತ್ತವೆ. ಮೆಟ್ರೋದಲ್ಲಿ ಮೂಲೆಯಲ್ಲಿ ಹುದುಗಿ ಕುಳಿತ ಡ್ರಗ್ಸ್  ವ್ಯಸನಿ, ಅಲ್ಲಲ್ಲಿ ಸುಮ್ಮನೆ ಕುಳಿತು ಶೂನ್ಯದತ್ತ ಗಮನ ಹರಿಸುವ ಬೆಗ್ಗರ್ಸ್ ಇವರೆಲ್ಲರೂ ಇರುವ ಈ ನಗರವನ್ನು ಹಾಲಾಡಿಯವರು ಬಡವರಿಗಲ್ಲ ಈ ನಗರ ಎಂದು ಶರಾ ಬರೆಯುತ್ತಾರೆ.  ಇಷ್ಟೇ ಅಲ್ಲದೆ, ವಾಷಿಂಗ್ಟನ್‌ನ ಪ್ರಸಿದ್ಧ ಕಾಂಗ್ರೆಸ್ ಹೋಟೆಲ್‌ನಲ್ಲಿ ಕೇಳಿಬರುವ ‘ಭೂತದ’ ಕಥೆಗಳು ಹಾಗೂ ನಂಬಿಕೆಗಳನ್ನು ಲೇಖಕರು ಕಟ್ಟಿಕೊಡುವಾಗ, ಒಂದು ಪ್ರಸಿದ್ಧ ನಗರದ ಆಧುನಿಕತೆಯ ಹಿಂದೆ ಅಡಗಿರುವ ಸ್ಥಳೀಯ ಜನಪದೀಯ ಕೌತುಕಗಳು ಅನಾವರಣಗೊಳ್ಳುತ್ತವೆ. ನ್ಯೂಯಾರ್ಕ್‌ನ ಬ್ರೂಕ್ಲಿನ್ ಬ್ರಿಡ್ಜ್‌ನಲ್ಲಿ ಪ್ರೇಮಿಗಳು ಬೀಗ ಹಾಕಿ ಹೋಗುವ ಪದ್ಧತಿ, ‘ಚಾರ್ಜಿಂಗ್ ಬುಲ್’ ಪ್ರತಿಮೆಯ ಸ್ಪರ್ಶದ ಹಿಂದಿರುವ ಭರವಸೆ ಹಾಗೂ ‘ಬೋ ಮ್ಯಾನ್’ ಮತ್ತು ‘ಸ್ಪಿಯರ್ ಮ್ಯಾನ್’ ಶಿಲ್ಪಗಳ ಮೂಲಕ ನೇಟಿವ್ ಅಮೆರಿಕನ್ (ರೆಡ್ ಇಂಡಿಯನ್) ಸಮುದಾಯದ ಅಸಹಾಯಕತೆಯನ್ನು ಬಿಂಬಿಸಿದ ವೈಖರಿ, ಇವೆಲ್ಲವೂ ಪ್ರವಾಸ ಕಥನಕ್ಕೆ ಕೇವಲ ದೃಶ್ಯ ವೈಭವವನ್ನು ದಾಟಿ, ಮನುಷ್ಯನ ನಂಬಿಕೆ ಮತ್ತು ಮಾನವೀಯ ಸಂವೇದನೆಗಳನ್ನು ಸ್ಪರ್ಶಿಸುವ ಮಹತ್ವವನ್ನು ನೀಡುತ್ತವೆ.

ಇಂದು ಪ್ರವಾಸ ಸಾಹಿತ್ಯದ ಹೆಸರಿನಲ್ಲಿ ಛಾಯಾಚಿತ್ರಗಳ ಸಂಗ್ರಹ ಅಥವಾ ದಿನಚರಿಯ ಮಾದರಿಯ ಬರಹಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಹಾಲಾಡಿಯವರ ಈ ಕೃತಿ ಪ್ರವಾಸ ಸಾಹಿತ್ಯದ ನಿಜವಾದ ಧ್ಯೇಯವನ್ನು ನೆನಪಿಸುತ್ತದೆ. ನೋಡುವುದಕ್ಕಿಂತ ಅರ್ಥಮಾಡಿಕೊಳ್ಳುವುದು ಮುಖ್ಯ; ತಲುಪುವುದಕ್ಕಿಂತ ತಿಳಿದುಕೊಳ್ಳುವುದು ಮುಖ್ಯ; ಪ್ರವಾಸವೆಂದರೆ ಮನಸ್ಸಿನ ವಿಸ್ತಾರ ಎನ್ನುವುದನ್ನು ಈ ಕೃತಿ ಮನದಟ್ಟು ಮಾಡುತ್ತದೆ. “ಇಲ್ಲಿ ಶಾಸ್ತ್ರ ಹೇಳಲಾಗುವುದು” ಎಂಬ ಶೀರ್ಷಿಕೆ ಕೊನೆಗೆ ಓದುಗರಿಗೂ ಅನ್ವಯಿಸುತ್ತದೆ. ಪುಸ್ತಕದ ಪ್ರತಿಯೊಂದು ಪುಟವೂ ನಮಗೆ ಏನನ್ನೋ “ಹೇಳುತ್ತದೆ”. ಪ್ರವಾಸವನ್ನು ಅನುಭವವಾಗಿ, ಅನುಭವವನ್ನು ಜ್ಞಾನವಾಗಿ, ಜ್ಞಾನವನ್ನು ಸಾಹಿತ್ಯವಾಗಿ ರೂಪಿಸುವ ಶಕ್ತಿ ಈ ಕೃತಿಯಲ್ಲಿದೆ.

(ಕೃತಿ: ಇಲ್ಲಿ ಶಾಸ್ತ್ರ ಹೇಳಲಾಗುವುದು (ಪ್ರವಾಸ ಕಥನ), ಲೇಖಕರು: ಶಶಿಧರ ಹಾಲಾಡಿ, ಪ್ರಕಾಶಕರು: ಸ್ನೇಹ ಬುಕ್‌ ಹೌಸ್‌, ಬೆಲೆ: 395/-) 

About The Author

ನಾರಾಯಣ ಯಾಜಿ

ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ