Advertisement
ಭಲೇ ಸ್ವಾಮೀಜಿ ಎಂದ ಮಾರ್ಕ್‌ ಟುಲಿ:‌ ಕೆ. ಸತ್ಯನಾರಾಯಣ ಕಥಾ ಸರಣಿ

ಭಲೇ ಸ್ವಾಮೀಜಿ ಎಂದ ಮಾರ್ಕ್‌ ಟುಲಿ:‌ ಕೆ. ಸತ್ಯನಾರಾಯಣ ಕಥಾ ಸರಣಿ

ಹೋಟೆಲಿಗೆ ಬಂದ ನಂತರ, ಟುಲಿ ಇದ್ದಕ್ಕಿದ್ದಂತೆ ಮೌನವಾಗಿಬಿಟ್ಟರು. ಒಂದೈದು ನಿಮಿಷ ಕಣ್ಣುಮುಚ್ಚಿ ‍ಧ್ಯಾನಿಸುತ್ತಿರುವಂತೆ ಕಂಡರು. ಏಸಿ ಆರಿಸಿ, ಕಿಟಕಿ ಬಾಗಿಲು ತೆರೆದರು. ಚಿಂತಾಕ್ರಾಂತರಾಗಿ ಆಕಡೆ, ಈ ಕಡೆ ಹೆಜ್ಜೆ ಹಾಕುತ್ತಾ, ಕಿಟಕಿಯ ಹೊರಗಡೆ ಕಾಣುವ ವಾಹನಗಳ ಓಡಾಟ, ಜನಗಳ ಗಡಿಬಿಡಿಯನ್ನೇ ಗಮನವಿಟ್ಟು ನೋಡುತ್ತಿದ್ದರು. ಕ್ಷಣ ಕ್ಷಣಕ್ಕೂ ಮುಖದಲ್ಲಿ ಗಾಂಭೀರ್ಯ ಹೆಚ್ಚುತ್ತಿತ್ತು. ಒಂದೆರಡು ಸಲ ಮುಖ ಕಿವುಚಿಕೊಂಡ ಹಾಗಾಯಿತು. ಟೀಪಾಯ್‌ ಬಳಿ ಬಂದು ಗ್ಲಾಸಿಗೆ ನೀರು ಬಗ್ಗಿಸಿಕೊಂಡು ಕುಡಿದರು. ಆದರೂ ಸಮಾಧಾನಗೊಂಡಂತೆ ಕಾಣಲಿಲ್ಲ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”  

೧೯೯೩ ರಲ್ಲಿ ಕಾಲ್ಪನಿಕವಾಗಿ ಪರಿಚಿತರಾಗಿದ್ದು, ನಂತರ ಆಪ್ತರಾಗಿ, ಮೊನ್ನೆ ಮೊನ್ನೆ ತೀರಿಕೊಂಡ ಮಾರ್ಕ್‌ ಟುಲಿಯವರದು ಸಮಕಾಲೀನ ಭಾರತದ ಬಗ್ಗೆ ಭಾರತೀಯರಿಗಿಂತಲೂ ವಿಪರೀತವೆನ್ನಿಸುವಷ್ಟು ಆಸಕ್ತಿ. ಎಲ್ಲ ವಿವರಗಳೂ ಬೇಕು. ಎಲ್ಲ ದೃಷ್ಟಿಕೋನಗಳೂ ಬೇಕು. ಭವಿಷ್ಯವಾಣಿಯೂ ಬೇಕು. ಇತಿಹಾಸವೂ ಬೇಕು. ಸರಿಯೇ ಸರಿ. ಇದಕ್ಕೆಲ್ಲ ಬೇಕಾದ ಮಾಹಿತಿ, ನೋಟಗಳನ್ನು ಸಂಗ್ರಹಿಸುವ ಕೆಲಸವನ್ನು ದೇಶಾದ್ಯಂತ ನೂರಾರು ಒಡನಾಡಿಗಳಿಗೆ ಹಂಚಿದ್ದರು. ಜನರನ್ನು ಭೇಟಿ ಮಾಡಿಸುವುದು, ಗಣ್ಯರ ಸಂದರ್ಶನಕ್ಕೆ ವ್ಯವಸ್ಥೆ ಮಾಡುವುದು, ಸಮ್ಮೇಳನಗಳಿಗೆ, ಅನಾಮಧೇಯ Tourist Spot ಗಳಿಗೆ ಕರೆದುಕೊಂಡು ಹೋಗುವುದು, ಇವೆಲ್ಲವೂ ಅವರೊಡನೆಯ ಒಡನಾಟದಲ್ಲಿ ಸೇರಿಕೊಂಡಿತ್ತು. ಈಗ ಅವರು ತೀರಿಕೊಂಡಾಗ ಎಲ್ಲ ನೆನಪುಗಳೂ ಉಕ್ಕಿ ಬರುತ್ತಿವೆ. ಅವರಿಂದಾಗಿ, ಅವರ ಮೂಲಕ ಭಾರತವನ್ನು, ಕರ್ನಾಟಕವನ್ನು ಎಷ್ಟೊಂದು ನೋಡಿದೆ ಎಂದು ಸಂತೋಷವೂ ಆಗಿ, ಕೃತಜ್ಞತೆಯ ಭಾವ ಮೂಡುತ್ತದೆ.

ನಾಲ್ಕು ವರ್ಷದ ಹಿಂದೆ ಬಂದಿದ್ದಾಗ ಮಂತ್ರ ಮಾಂಗಲ್ಯ ವಿವಾಹವೊಂದನ್ನು ತೋರಿಸು ಎಂದು ಗಂಟು ಬಿದ್ದರು. ಮಂತ್ರದ ಇಂಗ್ಲಿಷ್‌ ಅನುವಾದವನ್ನು ಓದಿಕೊಂಡಿದ್ದರು. ಕುವೆಂಪು ಬಗ್ಗೆ ಕೂಡ ಚೆನ್ನಾಗಿ ಗೊತ್ತಿತ್ತು. ಮಂತ್ರವನ್ನು ಹಿರಿಯ ಸಾಹಿತಿಗಳೊಬ್ಬರು ಹೇಳಿದರು. ಮದುಮಕ್ಕಳು ಪ್ರಮಾಣ ವಚನವನ್ನು ಓದಿದರು. ಇದೆಲ್ಲ ಒಂದು ಕ್ಲಬ್‌ನಲ್ಲಿ ನಡೆಯಿತು. ಸರಳ ವಿವಾಹದ ಆಶಯಕ್ಕನುಗುಣವಾಗಿ ಕೆಲವೇ ಕೆಲವು ಅತಿಥಿಗಳು. ಹಾರವಿಲ್ಲ, ತುರಾಯಿಯಿಲ್ಲ. ಉಡುಗೊರೆ ಇಲ್ಲ. ಮದುಮಕ್ಕಳಿಗಿಂತ ಎಲ್ಲರಿಗೂ ಟುಲಿಯವರ ಬಗ್ಗೆಯೇ ಆಕರ್ಷಣೆ.

ಆ ಸಂಜೆಯೇ ಈ ಜೋಡಿಯ ಕುಟುಂಬಗಳಿಂದ ಭರ್ಜರಿ ಆರತಕ್ಷತೆ. ಅರಮನೆಯಂತಹ ಛತ್ರ. ವಾಹನಗಳನ್ನು ನಿಲ್ಲಿಸುವುದಕ್ಕೆ ಎರಡು ಎಕರೆ ಜಾಗ. ದಕ್ಷಿಣ ಭಾರತ, ಉತ್ತರ ಭಾರತದ ತಿಂಡಿ ತಿನುಸುಗಳು, ಎರಡು ಸಂಗೀತ ಕಾರ್ಯಕ್ರಮ – ಒಂದು ಜನಪದ ಸಂಗೀತ, ಇನ್ನೊಂದು ಯಕ್ಷಗಾನದ್ದು. ಇನ್ನೊಂದು ಮಂಟಪದಲ್ಲಿ ವಸುಧಾ ರಂಗನಾಥ್‌ರವರ ಶಾಸ್ತ್ರೀಯ ಗಾಯನ. ಊಟ ಬಡಿಸುವವರ Executive Dress ಒಳ್ಳೆ ಬ್ಯಾಂಡ್‌ ಸೆಟ್‌ನವರ ವೇಷ ಭೂಷಣದಂತೆ ವರ್ಣರಂಜಿತವಾಗಿತ್ತು. ಇಬ್ಬರು ಸಚಿವರು, ಏಳೆಂಟು ಶಾಸಕರು ಬಂದಿದ್ದರೆಂದ ಮೇಲೆ, ಅಧಿಕಾರಿಗಳ ವಿವರವೇ ಬೇಡ!

ಸನ್ನಿವೇಶದ ವ್ಯಂಗ್ಯ ಟುಲಿಯವರಿಗೆ ಬಹುಬೇಗ ಗೊತ್ತಾಯಿತು. ಬಿದ್ದೂ ಬಿದ್ದೂ ನಕ್ಕರು. ಕುವೆಂಪು ಹೇಳಿದ್ದೇನು, ಅವರ ಹಿಂಬಾಲಕರು ಮಾಡುತ್ತಿರುವುದೇನು. ಇದರಲ್ಲೆಲ್ಲ ವಿರೋಧಾಭಾಸ ಇದೆ ಎಂದು ಕೂಡ ಗೊತ್ತಾಗೋಲ್ಲವೇ ಎಂದು ತಿವಿದು ತಿವಿದು ನನ್ನನ್ನು ಪ್ರಶ್ನಿಸಿದರು. ಇಲ್ಲ ಇಲ್ಲ ಈ concept ಈಗ ತುಂಬಾ ಜನಪ್ರಿಯವಾಗಿದೆ ಎಂದು ವಿವರಿಸಿದರೂ, ನೀವು ಬಿಡಿ, ಭಾರತೀಯರು ಎಂತಹ ದ್ವಂದ್ವಗಳನ್ನು, ವಿರೋಧಾಭಾಸಗಳನ್ನು, ವೈವಿಧ್ಯ, ಜೀರ್ಣಾಗ್ನಿ ಅದೂ ಇದೂ ಅಂತ ಸಮರ್ಥಿಸಿಕೊಂಡುಬಿಡುತ್ತೀರಿ ಎಂದು ವ್ಯಂಗ್ಯವಾಡಿದರು. ನನ್ನಿಂದಾಗಿ ಅವರನ್ನು ಮದುವೆಗೆ ಆಹ್ವಾನಿಸಿದ್ದ ಸ್ನೇಹಿತರಿಗೆ ಟುಲಿ ಮಂತ್ರ ಮಾಂಗಲ್ಯದ ಬಗ್ಗೆ ಇಂಗ್ಲಿಷಿನಲ್ಲಿ ದೊಡ್ಡ ಪತ್ರಿಕೆಗಳಲ್ಲಿ ಬರೆಯಬಹುದೆಂಬ ಆಸೆ, ಕುತೂಹಲ. ಸದ್ಯ, ಟುಲಿ ಏನೂ ಬರೆಯಲು ಹೋಗಲಿಲ್ಲ.

ಹೋದ ವರ್ಷ ನವೆಂಬರ್‌ನಲ್ಲಿ ಅವರು ಬಂದಿದ್ದುದು ಕುದುರೆಮುಖದ ಕಡೆ ಚಾರಣ ಪ್ರವಾಸ ಮಾಡಲು. ಆ ಸಮಯದಲ್ಲೇ ನನ್ನ ಜಾತಿ ಸಮ್ಮೇಳನವೂ ನಡೆಯುತ್ತಿತ್ತು. ಪತ್ರಿಕೆಗಳ ಮೂಲಕ ಅದು ಅವರಿಗೆ ಗೊತ್ತಾಯಿತು. ನಮ್ಮ ಜಾತಿಯ ನಾಲ್ಕಾರು ಮಠದ ಸ್ವಾಮಿಗಳು ಒಂದೇ ವೇದಿಕೆಯಿಂದ, ಒಂದೇ ಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ದಿವ್ಯ ಸಾನ್ನಿಧ್ಯವನ್ನು ವಹಿಸಿ ಉಪದೇಶ ನೀಡುತ್ತಿದ್ದರು. ಅವರನ್ನು ಪರಿಚಯ ಮಾಡಿಸು, ಸಂದರ್ಶನ ಕೊಡಿಸು ಎಂದು ಗಂಟುಬಿದ್ದರು.

ಜಾತಿ ಸಮ್ಮೇಳನಗಳಲ್ಲಿ ನನಗೆ ನಂಬಿಕೆಯಿಲ್ಲ, ಅಷ್ಟೊಂದು ಆಸಕ್ತಿಯಿಲ್ಲ, ಬಂಧು-ಬಳಗದವರೆಲ್ಲ ಒಟ್ಟಿಗೆ ಸಿಗುತ್ತಾರೆ ಎಂದು ಹೋಗಬೇಕಷ್ಟೇ ಎಂಬ ವ್ಯಾವಹಾರಿಕ ನಿಲುವು ನನ್ನದು. ಹಾಗೆಂದು ತಿಳಿಸಿದಾಗ ಟುಲಿ ಗೊಳ್‌ ಎಂದು ನಕ್ಕರು.

ನನ್ನ ಇಷ್ಟು ವರ್ಷದ ಭಾರತದ ಸರ್ವೀಸಿನಲ್ಲಿ ಒಂದು ಸಂಗತಿ ಖಚಿತವಾಗಿ ಗೊತ್ತಾಗಿದೆ. ಭಾರತೀಯರು ಯಾರೇ ಆಗಿರಲಿ, ಯಾವ ವರ್ಗಕ್ಕೇ ಸೇರಿರಲಿ, ಪಟ್ಟಣದಲ್ಲಿರಲಿ, ಗಿರಿಧಾಮದಲ್ಲಿರಲ್ಲಿ, ವಿದೇಶದಲ್ಲಿರಲಿ, ಎಲ್ಲರಿಗೂ ಜಾತಿ ಪ್ರಿಯವಾದದ್ದು. ಸಮರ್ಥಿಸುವುದಕ್ಕಾದರೂ ಸರಿ, ವಿರೋಧಿಸುವುದಕ್ಕಾದರೂ ಸರಿ, ಅವರಿಗೆ ಜಾತಿ ಬೇಕೇ ಬೇಕು. ಜಾತಿ ಪದ್ಧತಿಯನ್ನು ವಿರೋಧಿಸುವವರು ಕೂಡ ಬೇರೆ ಬೇರೆ ಕಾರಣಗಳಿಗಾಗಿ ಕೆಲವು ಜಾತಿಗಳ ಪರವಾಗಿರುತ್ತಾರೆ. ಧಾರ್ಮಿಕ ಭಾವನೆಗಳನ್ನು ತೊಡೆದು ಹಾಕಲು ಜಾತಿಗಳು ಬೇಕು ಜಾತಿ ಸಂಘಟನೆಗಳು ಬೇಕು ಅನ್ನುತ್ತಾರೆ.

ಸಾರ್ವಜನಿಕವಾಗಿ ನಾಲ್ಕು ಜನ ಸೇರಿದಾಗ, ಸರಿಯಾದ ನಿಲುವು ತಗೋಳೋದು ಬೇರೆ. ಒಬ್ಬರೇ ಇದ್ದಾಗ, ಕುಟುಂಬದ ಜೊತೆ ಇದ್ದಾಗ, ಜಾತಿಯವರ ಜೊತೆಯೇ ಇದ್ದಾಗ ತೆಗೆದುಕೊಳ್ಳುವ ನಿಲುವೇ ಬೇರೆ. ನೀವೆಲ್ಲರೂ ಜಾತಿವಾದಿಗಳು ಅಂತ ನಾನು ಹೇಳೋಲ್ಲ. You feel very homely with it. You get into a quick sense of affinity.

ಟುಲಿ ತುಂಬಾ ಜನರಲ್‌ ಆಗಿ ಮಾತನಾಡುತ್ತಿದ್ದಾರೆ. ಹೆಚ್ಚಾಗಿ ದೆಲ್ಲಿಯಲ್ಲಿ ಸುಶಿಕ್ಷಿತರು, ಸುಸಂಸ್ಕೃತರ ಜೊತೆ ವಾಸಿಸುವುದರಿಂದ ಮೂಡಿರಬಹುದಾದ ನಿಲುವು ಅವರದು ಎನಿಸಿತು. ವಸ್ತುಸ್ಥಿತಿ ಹಾಗಲ್ಲ ಎಂದ ವಿವರಿಸಬೇಕು ಎನಿಸಿತು.

ನೀವು ಹೇಳೋದು ಸಾಮಾನ್ಯವಾಗಿ ಮೇಲು ನೋಟಕ್ಕೆ ಸರಿಯಿರಬಹುದು. ಆದರೆ ಇಂತಹ ಸಮ್ಮೇಳನಗಳಿಂದ ಏನು ಲಾಭ? ಯಾರಿಗೆ ಪ್ರಯೋಜನ ಹೇಳಿ? ಈ ಜಾತಿಗೆ, ಆ ಉಪಜಾತಿಗೆ, ಇನ್ನೊಂದು ಧರ್ಮಕ್ಕೆ ಅಂತ ಭಿನ್ನವಾದ, ವಿಶಿಷ್ಟವಾದ ಪ್ರಗತಿಯ ಹಾದಿ ಇದೆಯೇ? ಒಟ್ಟು ದೇಶದ, ಸಮಾಜದ ಏಳಿಗೆಯೊಡನೆ, ಎಲ್ಲರ ಜೀವನಾನೂ ತಳುಕು ಹಾಕಿಕೊಂಡಿರುತ್ತದೆ. ನಿಮ್ಮ ದೇಶಗಳಲ್ಲೂ ಹೀಗೇ ತಾನೇ ಆದದ್ದು, ಆಗುತ್ತಿರುವುದೇನು? ಒಂದೇ ಧರ್ಮ ಇರುವ Middle East Countries ನೋಡಿ. ಆಳುವವರ, ಆಳಿಸಿಕೊಳ್ಳುವವರು ಎಲ್ಲರೂ ಒಂದೇ ಧರ್ಮದವರು. ಏನು ಮಹಾ ನೆಮ್ಮದಿಯಿಂದ ಇದ್ದಾರೆ ಅವರು?

ಇಷ್ಟು ಹೇಳುವಾಗ ಟುಲಿ ಅನ್ಯಮನಸ್ಕರಾಗಿದ್ದರು. ಅವರು ಯಾವಾಗಲೂ ಹೀಗೇ! ಮಾತು ಒಂದು ಹಂತಕ್ಕೆ ಬಂದಾಗ ಅನ್ಯಮನಸ್ಕರಾಗಿಬಿಡುವರು, ಇಲ್ಲ ಯಾವುದಾದರೂ ಗಜಲ್‌ ಸಾಲುಗಳನ್ನು ಹೇಳಿಕೊಳ್ಳುವುದು, ಸುಮ್ಮನೆ ನಗುವುದು!

ಪ್ರಚೋದಿಸಲೆಂದು, ಇದೆಲ್ಲ common sense ವಿಷಯವಲ್ಲವೇ? ಅಂದೆ. ನನ್ನ ತಂತ್ರ ಪ್ರತಿಫಲ ನೀಡಿತು. ಟುಲಿ ತಕ್ಷಣ ಉತ್ತರಿಸಿದರು.

ನೀನು ಹೇಳೋದೂ ಸರಿಯೇ. ಆದರೆ ಆಳವಾದ ಮಾತಲ್ಲ ಭಾವನೆಯಲ್ಲ ಅದು. ಪ್ರತಿಯೊಂದು ದೇಶಕ್ಕೂ ಒಂದು psychological trait ಅಂತ ಇರುತ್ತೆ. ಅದನ್ನು ನಾನು ಹೇಳ್ತಾ ಇರೋದು. ನಿನಗೆ ನನ್ನ ಮಾತು ಒಪ್ಪಿಗೆಯಾಗದಿದ್ದರೆ ಪರವಾಗಿಲ್ಲ. ಸ್ವಾಮಿಗಳನ್ನು ಭೇಟಿ ಮಾಡಿಸು. ಏನಾದರೂ ಒಳನೋಟ ಸಿಗಬಹುದು. ನಾವು ಯೋಚಿಸುವ ರೀತಿಯೇ ಬದಲಾಯಿಸಬಹುದು.

ನನ್ನನ್ನು ಚೆನ್ನಾಗಿ ಉಬ್ಬಿಸಿದರು.

ವ್ಯವಸ್ಥಾಪಕರನ್ನು ಸಂಪರ್ಕಿಸಿದೆ. ಟುಲಿಯವರ ಹೆಸರು ಹೇಳಿದ ತಕ್ಷಣ ತುಂಬಾ ಸಂತೋಷಪಟ್ಟರು. ಟುಲಿಯವರಿಗೆ ಸನ್ಮಾನ ನೀಡುವುದಾಗಿ ಕೂಡ ಹೇಳಿದರು. ಬೇಕಾದರೆ ಎಲ್ಲ ಸ್ವಾಮಿಗಳನ್ನೂ ಒಟ್ಟಾಗಿ ಭೇಟಿ ಮಾಡಲಿ. ಇನ್ನೂ ಬೇಕಾದರೆ, ಒಬ್ಬೊಬ್ಬರನ್ನೇ ಭೇಟಿ ಮಾಡಲಿ. ಎಲ್ಲ ಅನುಕೂಲ ಮಾಡಿಕೊಡುತ್ತೇವೆ ಎಂದು ಮತ್ತೆ ಮತ್ತೆ ಹೇಳಿದರು.

*****

ನಮ್ಮ ಟುಲಿ ಗರಿಗೆದರಿದರು. ಸಕಲ ಸಂಭ್ರಮದಿಂದ ರೆಡಿಯಾದರು. ಸ್ವಾಮಿಗಳಿಗೆ ಪ್ರಿಯವಾಗಬಹುದೆಂದು ಜುಬ್ಬಾ ಪೈಜಾಮಾ ಅಂಗವಸ್ತ್ರ ಧರಿಸಿದರು. ಇದುವರೆಗೆ ತಾವು ಭೇಟಿಯಾಗಿದ್ದ ಜಗದ್ಗುರುಗಳನ್ನೆಲ್ಲ ನೆನೆಸಿಕೊಂಡರು. ಅವರ ಉತ್ಸಾಹದಲ್ಲಿ ನನಗೆ ಯಾವ ವ್ಯಂಗ್ಯ, ಸಿನಿಕತೆಯೂ ಕಾಣಲಿಲ್ಲ. ಇಷ್ಟೊಂದು ವರ್ಷಗಳ ಸಾರ್ವಜನಿಕ ಜೀವನದಲ್ಲಿ ಎಂತೆಂತಹ ಗಣ್ಯರನ್ನು ಭೇಟಿ ಮಾಡಿದ್ದರೂ ಇನ್ನೂ ಉದಯೋನ್ಮುಖ ಪತ್ರಕರ್ತನಂತೆ ಗಡಿಬಿಡಿಯಿಂದ ತಯಾರಾಗುವ ಅವರ ಉತ್ಸುಕತೆ ನನಗೇ ಒಂದು ರೀತಿಯ ಉತ್ಸಾಹ ಮೂಡಿಸಿತು. ಸಮ್ಮೇಳನಕ್ಕೆ ಹೋಗುವ ದಾರಿಯಲ್ಲಿ ಸಿಕ್ಕ ಟ್ರಾಫಿಕ್‌ ಸಿಗ್ನಲ್‌ ಬಳಿ ಅಕ್ಕತಂಗಿಯರಿಬ್ಬರು ಬಿಳಿ ಬಣ್ಣದ ಪಮೇರಿಯನ್‌ ನಾಯಿಮರಿಯೊಂದನ್ನು ಎತ್ತಿ ಮುದ್ದಾಡುತ್ತಿರುವುದನ್ನು ಕಂಡ ಟುಲಿ ತುಂಬಾ ಉದ್ವೇಗಕ್ಕೊಳಗಾದರು. So lucky this puppy. Getting warmth from young women in this chilly season ಎಂದು ಹೊಗಳಿದರು.

ಸಭಾಂಗಣ ತಲುಪುತ್ತಿದ್ದಂತೆಯೇ ಗಂಭೀರರಾದರು. ಸ್ವಾಗತಕಾರರಿಗೆ, ಪದಾಧಿಕಾರಿಗಳಿಗೆ ಇವರನ್ನು ಕಂಡು ಒಂದು ಸಂಭ್ರಮವಾದರೆ, ಇವರೇ ಚಿಕ್ಕ ಮಕ್ಕಳಂತೆ ನಾನು ಮಾರ್ಕ್‌ ಟುಲಿ ಎಂದು ಪ್ರತಿಯೊಬ್ಬರ ಬಳಿ ಹೇಳಿಕೊಳ್ಳುತ್ತಾ ಮತ್ತೆ ಮತ್ತೆ ಕೈ ಕುಲುಕುತ್ತಾ ನಗುತ್ತಿದ್ದರು. ಪ್ರತಿಯೊಬ್ಬರ ಕುಟುಂಬದ ವಿವರ, ಮಕ್ಕಳ ಉದ್ಯೋಗ, ವಿದ್ಯಾಭ್ಯಾಸದ ಬಗ್ಗೆ ಏಕಾಗ್ರತೆಯಿಂದ ಪ್ರಶ್ನೆ ಕೇಳಿದರು. ಈವತ್ತಿನ ಭೇಟಿಗೂ ಈ ವಿವರಗಳಿಗೂ ಏನು ಸಂಬಂಧ? ನೂರಾರು ಪತ್ರಕರ್ತರನ್ನು, ಅವರ half clever ಧೋರಣೆಯನ್ನು ಕಂಡಿದ್ದ ನನಗೆ, ಟುಲಿಯವರ ವರ್ತನೆ ಕೊಂಚ ವಿಪರೀತವೆನಿಸಿತು.

ಮತ್ತೆ ಗಮನಿಸಿದೆ. ಟುಲಿಯವರ ಮುಖಭಾವದಲ್ಲಿ ಪ್ರಚಾರದ ಗೀಳು ಕಾಣಿಸಲಿಲ್ಲ.

ಟುಲಿಯವರಿಗೆಂದೇ ಭೇಟಿಯ ಸಮಯ ನಿಗದಿಪಡಿಸಿದ್ದರೂ, ಸ್ವಾಮಿಗಳ ಸುತ್ತ ಜನಸಂದಣಿ ಇದ್ದೇ ಇತ್ತು. ಟುಲಿಯವರು ಎಲ್ಲರಿಗೂ ಪರಿಚಯದ ನಗೆ ಬೀರಿದರು. Indian Philosophy, Indian Civilisation ಬಗ್ಗೆ ಇವರು ಕೇಳಿದ ಪ್ರಶ್ನೆಗಳಿಗೆ ಸ್ವಾಮೀಜಿಗಳ ಹತ್ತಿರ ಉತ್ತರ ಸಿದ್ಧವಿರಲಿಲ್ಲ. ಕೆಲವು ಸ್ವಾಮಿಗಳಿಗೆ ಮಾತ್ರ ಇವರ ಪ್ರಸಿದ್ಧಿ ಗೊತ್ತಿತ್ತು. ಹಾಗಾಗಿ ಸಂದರ್ಶನ, ಅಕ್ಷತೆ, ಮಂತ್ರಾಶೀರ್ವಾದ ನೀಡಿ, ಶಾಲು ಹೊದೆಸಿ, ಶ್ರೀಕೃಷ್ಣನ ಪ್ರತಿಮೆಯನ್ನು ನೀಡುವುದಕ್ಕೆ ಮಾತ್ರ ಸೀಮಿತವಾಯಿತು. ಟುಲಿಯವರೇನೋ ಯಾವ ಮುಲಾಜು, ಹಿಂಜರಿಕೆಯಿಲ್ಲದೆ ಎಲ್ಲ ಸ್ವಾಮಿಗಳಿಗೂ ಸಾಷ್ಟಾಂಗ ನಮಸ್ಕಾರ ಮಾಡಿದರು. ಕೆಲವು ಸ್ವಾಮಿಗಳಾದರೂ ಭೇಟಿಯಿಂದಾಗ ನಕ್ಕು ಉದ್ವೇಗ-ಸಂಭ್ರಮಕ್ಕೆ ಒಳಗಾಗಿದ್ದರು.

ಹಿರಿಯ ಸ್ವಾಮೀಜಿಗಳ ಒಬ್ಬ ತಮ್ಮ, ಬ್ಯಾಂಕಿನ ಜನರಲ್‌ ಮ್ಯಾನೇಜರ್‌ ಆಗಿ ನಿವೃತ್ತರಾಗಿದ್ದು, ಅವರನ್ನೇ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ನೇಮಿಸಿಕೊಂಡಿದ್ದರು.  ಗಣ್ಯ ಅತಿಥಿಗಳಿಗೆ ಅವರ ಸುಪರ್ದಿನಲ್ಲೇ ಭೋಜನದ ವ್ಯವಸ್ಥೆ ಪ್ರತ್ಯೇಕ ಕೋಣೆಯಲ್ಲಿತ್ತು. ನೆಲದ ಮೇಲೆ ಕುಳಿತುಕೊಂಡು ಬೇಕಾದರೂ ಊಟ ಮಾಡಬಹುದಿತ್ತು. ಟೇಬಲ್‌ ವ್ಯವಸ್ಥೆಯೂ ಇತ್ತು. ಟುಲಿ ನೆಲದ ಮೇಲೆ ಕುಳಿತುಕೊಂಡು ಊಟ ಮಾಡೋಣ ಎಂದು ಜುಬ್ಬದ ಎರಡೂ ತೋಳುಗಳನ್ನು ನವಿರಾಗಿ ಮಡಿಸಿದರು. ವಿಪರೀತ ಮಾತನಾಡುತ್ತಿದ್ದರು, ಮಾತಾಡಿಸುತ್ತಿದ್ದರು ಎನ್ನುವುದನ್ನು ಬಿಟ್ಟರೆ, ಟುಲಿ ಉಳಿದ ಭಕ್ತಾದಿಗಳಂತೆಯೇ ಕಂಡರು. ಹುಗ್ಗಿ ಪಾಯಸ ಅವರಿಗೆ ತುಂಬಾ ಇಷ್ಟವಾಯಿತು. ಎರಡೆರಡು ಸಲ ಕೇಳಿ ಬಡಿಸಿಕೊಂಡರು.

ಊಟವಾದ ಮೇಲೆ ಸ್ವಾಮಿಗಳಿಗೆ ವಿರಾಮವಿದ್ದರೆ ಮತ್ತೆ ಅವರನ್ನು ಭೇಟಿ ಮಾಡಬಹುದೇ ಎಂದು ಕೇಳಿದರು. ಕೆಲವು ಸ್ವಾಮಿಗಳು ಈಗಾಗಲೇ ಅವರ ಕುಟೀರಗಳಿಗೆ ಹೊರಟುಹೋಗಿದ್ದರು. ಕೆಲವು ತರುಣ ಸ್ವಾಮಿಗಳು ಭೇಟಿ ಮಾಡುವ ಉತ್ಸಾಹ ತೋರಿದರು. ಆದರೆ ಮಾತುಕತೆಗಳಲ್ಲಿ ವಿಶೇಷವೇನಿರಲಿಲ್ಲ. ಟುಲಿಯವರಿಗೆ ಕೊಟ್ಟ ಉಡುಗೊರೆ ಸಾಮಾನುಗಳನ್ನೆಲ್ಲ ಕಾರಿನ ತನಕ ತೆಗೆದುಕೊಂಡು ಹೋಗಿ ಕೊಡಬೇಕೆಂದು ಮತ್ತೆ ಮತ್ತೆ ಗಿಂಡಿ ಮಾಣಿಗಳಿಗೆ ನೆನಪಿಸಿದರು. ಲೋಕ ವ್ಯವಹಾರಗಳನ್ನು ಚೆನ್ನಾಗಿ ಬಲ್ಲ ಸ್ವಾಮೀಜಿಯೊಬ್ಬರು ನನ್ನ ವಿಳಾಸ, ದೂರವಾಣಿ ಸಂಖ್ಯೆಯ ವಿವರಗಳನ್ನು ಕೂಡ ಬರೆದುಕೊಳ್ಳುವಂತೆ ಸೂಚಿಸಿದರು. ಟುಲಿಯವರು ಈ ಭೇಟಿಯ ಬಗ್ಗೆ ಬರೆಯುವ ಲೇಖನದ ಪ್ರತಿಯನ್ನು ತಪ್ಪದೇ ತಲುಪಿಸಬೇಕೆಂದು ಸೂಚಿಸಿದರು. ಈಗ ಎಲ್ಲವೂ ಒಂದು ಹೊಕ್ಕು ಬಳಕೆಯ ವರಸೆಗೆ ಬಂದಿತ್ತು.

*****

          ಹೋಟೆಲಿಗೆ ಬಂದ ನಂತರ, ಟುಲಿ ಇದ್ದಕ್ಕಿದ್ದಂತೆ ಮೌನವಾಗಿಬಿಟ್ಟರು. ಒಂದೈದು ನಿಮಿಷ ಕಣ್ಣುಮುಚ್ಚಿ ‍ಧ್ಯಾನಿಸುತ್ತಿರುವಂತೆ ಕಂಡರು. ಏಸಿ ಆರಿಸಿ, ಕಿಟಕಿ ಬಾಗಿಲು ತೆರೆದರು. ಚಿಂತಾಕ್ರಾಂತರಾಗಿ ಆಕಡೆ, ಈ ಕಡೆ ಹೆಜ್ಜೆ ಹಾಕುತ್ತಾ, ಕಿಟಕಿಯ ಹೊರಗಡೆ ಕಾಣುವ ವಾಹನಗಳ ಓಡಾಟ, ಜನಗಳ ಗಡಿಬಿಡಿಯನ್ನೇ ಗಮನವಿಟ್ಟು ನೋಡುತ್ತಿದ್ದರು. ಕ್ಷಣ ಕ್ಷಣಕ್ಕೂ ಮುಖದಲ್ಲಿ ಗಾಂಭೀರ್ಯ ಹೆಚ್ಚುತ್ತಿತ್ತು. ಒಂದೆರಡು ಸಲ ಮುಖ ಕಿವುಚಿಕೊಂಡ ಹಾಗಾಯಿತು. ಟೀಪಾಯ್‌ ಬಳಿ ಬಂದು ಗ್ಲಾಸಿಗೆ ನೀರು ಬಗ್ಗಿಸಿಕೊಂಡು ಕುಡಿದರು. ಆದರೂ ಸಮಾಧಾನಗೊಂಡಂತೆ ಕಾಣಲಿಲ್ಲ.

ಯಾವಾಗಲೂ ಗಳಗಳ ಮಾತನಾಡುವ ಟುಲಿಯವರ ಈ ಮೌನ, ಬೇಸರ ನನಗೆ ಗಾಬರಿಯನ್ನುಂಟುಮಾಡಿತು.

ಸರ್‌, ಹುಷಾರಾಗಿದ್ದೀರಾ, ಊಟದಲ್ಲಿ ಏನಾದರೂ ತೊಂದರೆ ಆಯಿತಾ? ಗ್ಯಾಸ್‌ ತೊಂದರೆ ಏನಾದರೂ ಶುರುವಾಯಿತೇ? ಬಿಡಿಸಿ, ಬಿಡಿಸಿ ಕೇಳಿದೆ.

ಇಲ್ಲ ಹಾಗಲ್ಲ. ವಿಷಯ ಅದಲ್ಲ ಎಂದು ಟುಲಿ ಮಂಚವನ್ನೇರಿ ದಿಂಬುಗಳನ್ನು ಮುಂದಿಟ್ಟುಕೊಂಡ ವಜ್ರಾಸನದಲ್ಲಿ ಕುಳಿತರು.

ಸ್ವಾಮೀಜಿಗಳನ್ನು ನೋಡಲು ಬಂದಿದ್ದವರಲ್ಲಿ ಅನೇಕರು ನನಗೆ ಚಿರಪರಿಚಿತರು. ದೂರದಿಂದ, ಹತ್ತಿರದಿಂದ, ಸಾರ್ವಜನಿಕವಾಗಿ, Face Book ಮೂಲಕ. ದಿಲ್ಲಿಯಲ್ಲಿ ನಾನಾ ರೀತಿಯ ಸಮ್ಮೇಳನ, ಸಭೆಗಳಲ್ಲಿ ನೋಡಿದ್ದೇನೆ. ಆದರೂ ನಿಮ್ಮ ಸ್ವಾಮಿಗಳನ್ನು ಸಮ್ಮೇಳನವನ್ನು “ಭಲೇ” ಅನ್ನಬೇಕು ಎಂದು ತುಂಟ ನಗೆ ನಕ್ಕರು, ಕಣ್ಣು ಮಿಟುಕಿಸಿದರು.

ನಾನು ಸ್ವಾಮಿಗಳ ಬಗ್ಗೆ ಈ ರೀತಿಯ ಶಹಭಾಷ್‌ಗಿರಿಯನ್ನು ನಿರೀಕ್ಷಿಸಿರಲಿಲ್ಲ. ಕೊಂಚ ಗಲಿಬಿಲಿಯಾಯಿತು. ಟುಲಿಯವರ ಮುಖದಲ್ಲಿ ತುಂಟ ಕಳೆ ವಿಶಾಲವಾಗಿ ಹರಡಿತು.

ಇಲ್ಲಿಗೆ ಬಂದಿದ್ದವರಲ್ಲಿ ಕೆಲವರು ನಾಸ್ತಿಕರು, ಕೆಲವರು ವಿಜ್ಞಾನಿಗಳು, ಮತ್ತೆ ಕೆಲವರು ವ್ಯಾಪಾರಿಗಳು, National Institute ಗಳ ಪ್ರಾಧ್ಯಾಪಕರು, ವಕೀಲರು. ತುಂಬಾ ಎತ್ತರಕ್ಕೆ ಒಬ್ಬರು ಇದ್ದರಲ್ಲ, ವಿಗ್‌ ಹಾಕಿಕೊಂಡು ಬಂದಿದ್ದರಲ್ಲ, ಅವರು ಯಾರು ಗೊತ್ತಾ? ಕಾಫಿಫೋನಾದಡಿಯಲ್ಲಿ ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದವರು. ಸ್ವಾಮಿಯವರ ಭಕ್ತರೆಲ್ಲಾ ಇವರನ್ನು ಆದರದ ಭಾವದಿಂದ ನೋಡುತ್ತಿದ್ದರು, ಪರಿಚಯ ಮಾಡಿಕೊಳ್ಳಲು ಹವಣಿಸುತ್ತಿದ್ದರು. ಇನ್ನೊಬ್ಬಾಕೆ ಮೇಘನಾ Channel ಪ್ರವರ್ತಕಿ. ದಿಲ್ಲೀನಲ್ಲೇ ಇವರನ್ನೆಲ್ಲ ಒಂದು ಕಡೆ ನೋಡೊಕಾಗಲ್ಲ. ಆದರೆ ನಿಮ್ಮ ಸ್ವಾಮೀಜಿಗಳಿಗೆ, ಸಮ್ಮೇಳನಕ್ಕೆ ಇವರನ್ನೆಲ್ಲ ಒಟ್ಟಿಗೇ ಸೇರಿಸುವ ಶಕ್ತಿ ಇದೆ. ಇವರೆಲ್ಲರಿಗೂ ಸ್ವಾಮಿ ನಮ್ಮವರು, ಬಂದು ಕಾಣಬೇಕು, ಮರ್ಯಾದೆ ಕೊಡಬೇಕು ಎಂಬ ಭಾವನೆಯಿದೆ.

ನಮ್ಮ ವ್ಯಾಟಿಕನ್‌ನಲ್ಲಿ ಕೂಡ ಈ ರೀತಿ ಆಗೋಲ್ಲ. ಇಷ್ಟೊಂದು ಪ್ರಭಾವಶಾಲಿಗಳು ಒಟ್ಟಾಗಿ ಸೇರೋಲ್ಲ. ಅಬ್ಬಬ್ಬ ಅಂದರೆ, ಒಂದಿಷ್ಟು ರಾಜತಾಂತ್ರಿಕ ಗಣ್ಯರು, ಬೇರೆ ಬೇರೆ ದೇಶಗಳ ಚರ್ಚ್‌ಗಳ ಕಾರ್ಡಿನಲ್‌ಗಳು ಬರಬಹುದು ಅಷ್ಟೇ.

ಟುಲಿ ವಿವರಿಸುತ್ತಿದ್ದುದರಲ್ಲಿ ಎಲ್ಲರಿಗೂ ಗೊತ್ತಿರುವ obvious ಮಾತುಗಳೇ ಇವೆ ಅನಿಸಿತು. ಇದನ್ನೇ ಮಹಾ ಒಳನೋಟವೆಂಬಂತೆ ವಿವರಿಸುತ್ತಿದ್ದಾರೆ. ಈ ಇಂಗ್ಲಿಷ್‌ ಮಾಧ್ಯಮದವರ ಗೋಳೇ ಇಷ್ಟು. ಎಲ್ಲರಿಗೂ ಗೊತ್ತಿರುವ ಸಂಗತಿಯನ್ನು ತುಂಬಾ ಹೊಸದೆನ್ನುವಂತೆ ಆಕರ್ಷಕವಾದ ಇಂಗ್ಲಿಷ್‌ನಲ್ಲಿ ಹೇಳುವುದು.

ಟುಲಿಯವರಿಗೆ ಅಗೌರವ ಸೂಚಿಸದಂತೆ ನಾನು ಮೆಲು ದನಿಯಲ್ಲಿ ತುಂಬಾ ನಿಧಾನವಾಗಿ ಹೇಳಿದೆ:

“ಇದರಲ್ಲೆಲ್ಲ ವಿಶೇಷವೇನಿದೆ ಸಾರ್‌?”

ಈಗ ಮಾತ್ರ ಟುಲಿಯವರ ದೃಷ್ಟಿ ತೀಕ್ಷ್ಣವಾಯಿತು. ನಿಧಾನವಾಗಿ ಮುಖದಲ್ಲಿ ವ್ಯಗ್ರಭಾವ ಮೂಡಿತು. ರೂಮಿನಲ್ಲಿ ಸೆಖೆಯೇನೂ ಇಲ್ಲದಿದ್ದರೂ ಪ್ಯಾಂಟ್‌ ಜೇಬಿನಿಂದ ಕರವಸ್ತ್ರ ತೆಗೆದು ಮುಖವನ್ನು ಒಮ್ಮೆ ಒರೆಸಿಕೊಂಡರು. ಕರವಸ್ತ್ರವನ್ನು ನಿಧಾನವಾಗಿ ಮಡಿಸಿ ಜೋಬಿನಲ್ಲಿಟ್ಟುಕೊಂಡರು. ನನ್ನ ಕಡೆಯೇ ನೋಡುತ್ತಾ:

“ನಿಮಗೆ ಅರ್ಥವಾಗೋಲ್ಲ ಬಿಡಿ. ಇದರಲ್ಲೆಲ್ಲ ವಿಶೇಷವೇನಿದೆ ಅಂತ ಕೇಳುವುದೇ ಭಾರತೀಯರ ಸ್ವಭಾವ ಅಂತಾ ಕಾಣುತ್ತೆ?”

ಮುಂದೆ ಮಾತು ಬೆಳೆಯಲಿಲ್ಲ. ನಾನಿದ್ದಷ್ಟು ಹೊತ್ತು ಕಿಟಕಿಯ ಹೊರಗಡೆಯ ಬದುಕನ್ನೇ ಗಮನಿಸುತ್ತಿದ್ದರು.

*****

          ಬೆಂಗಳೂರಿಗೆ ಬಂದಾಗ, ವಾಪಸ್‌ ಆಗುವಾಗ ಸಾಮಾನ್ಯವಾಗಿ thanks ಸಂದೇಶ ಕಳಿಸುತ್ತಿದ್ದರು. ಸಂದೇಶ ಬರಲಿಲ್ಲ ಮಾತ್ರವಲ್ಲ, ನನ್ನನ್ನು ಸಂಪರ್ಕಿಸುವುದನ್ನೇ ಬಿಟ್ಟುಬಿಟ್ಟರು.

ಈಚೆಗೆ ಮೊನ್ನೆ ಅವರು ತೀರಿಕೊಂಡಾಗ ಮಾತ್ರ ಎಲ್ಲವೂ ನೆನಪಿಗೆ ಬಂತು. ವಿಶೇಷವಾಗಿ ಅವರು ಹೇಳಿದ್ದ ಕೊನೆಯ ಮಾತು.

“ನಿಮಗೆ ಅರ್ಥವಾಗೋಲ್ಲ ಬಿಡಿ. ಇದರಲ್ಲೆಲ್ಲ ವಿಶೇಷವೇನಿದೆ ಅಂತ ಕೇಳುವುದೇ ಭಾರತೀಯರ ಸ್ವಭಾವ ಅಂತಾ ಕಾಣುತ್ತೆ?”

ಸ್ವಾಮಿಗಳನ್ನು ಕುರಿತು, “ಭಲೇ ಸ್ವಾಮಿಗಳು ನಿಮ್ಮವರು” ಎಂದದ್ದು ಕೂಡ ನಂತರ ನೆನಪಿಗೆ ಬಂತು.

(ಹಿಂದಿನ ಕತೆ: ಊರ ಹೆಸರು “ಸೀತಾಪುರ”)

About The Author

ಕೆ. ಸತ್ಯನಾರಾಯಣ

ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್‌ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ