1. ಸಮುದ್ರದ ನಿಶ್ಚಲತೆ
ಎಷ್ಟು ನಿಶ್ಚಲ, ಎಷ್ಟು ವಿಚಿತ್ರ ಇಂದಿನೀ-
ಸಮುದ್ರದ ಹರಿವ ನೀರಿನ ಪರಿಯು.
ಹೀಗೆ ನೀರು ನಿಂತು ನಿಶ್ಚಲವಾಗುವುದು
ಅದಕೆ ಸೂಕ್ತವಲ್ಲ ಅದರ ಈ ನಿಲುವು.
2. ಪಶ್ಚಾತ್ತಾಪವಿಲ್ಲ
ಪ್ರೀತಿಸಿದ್ದಕ್ಕಾಗಿ, ಪಶ್ಚಾತ್ತಾಪವಿಲ್ಲ-
ಕೊನೆವರೆಗೂ ಒಳಿತೆಲ್ಲ ವ್ಯರ್ಥವಾದರೇನಂತೆ.
ಪ್ರೀತಿಸಿದ್ದಕ್ಕಾಗಿ, ಪಶ್ಚಾತ್ತಾಪವಿಲ್ಲ-
ಮತ್ತೆಂದಿಗೂ ಪ್ರತಿಫಲ ದೊರೆಕದಿದ್ದರೇನಂತೆ.
3. ಹೋಲಿಕೆ
ಹೋಲಿಸುತ್ತೇನೆ ನಿನ್ನನ್ನು
ನಕ್ಷತ್ರಗಳಿಲ್ಲದ ರಾತ್ರಿಗೆ-
ಅವು ನಿನ್ನ ಕಣ್ಣುಗಳಲಿಲ್ಲದಿದ್ದರೆ!
ಹೋಲಿಸುತ್ತೇನೆ ನಿನ್ನನ್ನು
ಕನಸುಗಳಿಲ್ಲದ ನಿದ್ದೆಗೆ-
ಅವು ನಿನ್ನ ಹಾಡುಗಳಲಿಲ್ಲದಿದ್ದರೆ!
4. ನಡುರಾತ್ರಿಯ ಬಿಕ್ಕಳಿಕೆ
ಸತ್ತಿರಲಿಲ್ಲ ಯಾರೂ,
ಹೋಗಿರಲಿಲ್ಲ ಯಾರೂ ಎಲ್ಲೂ.
ಕಳೆದ ನಡುರಾತ್ರಿಯಲ್ಲಿ,
ಅಳುತ್ತ ಕೂತಿದ್ದೆ ಮನೆಯ ಮೆಟ್ಟಿಲ ಮೇಲೆ.
ಅತ್ತಿದ್ದೆ ನಾನು ಕಾರಣ;
ನೀನು ಒಡೆದು ಎರಡು ಹೋಳಾಗಿಸಿದ್ದೆ ನನ್ನ ಹೃದಯ
ನೋಡಿದ್ದೆ ನೀನು ನನ್ನೆಡೆಗೆ ಓರೆನೋಟದಲ್ಲಿ ತೀಕ್ಷ್ಣವಾಗಿ,
ಒಡೆದು ಹೋಳಾಗಿತ್ತು ನನ್ನ ಹೃದಯ ಎರಡಾಗಿ-
ಹಾಗಾಗಿ ಬಿಕ್ಕಳಿಸುತ್ತಿದ್ದೆ ನಾನು
ಅದಕ್ಕೆಲ್ಲಾ ಕಾರಣವೂ ನೀನಾಗಿದ್ದೆ!
ಲ್ಯಾಂಗ್ಸ್ಟನ್ ಹ್ಯೂಸ್ ಅಮೆರಿಕದ ಮಹತ್ವದ ಕವಿ ಮತ್ತು ಲೇಖಕ. ಅವರು ಹಾರ್ಲೆಂ ರಿನೈಸಾನ್ಸ್ ಚಳುವಳಿಯ ಪ್ರಮುಖ ಪ್ರತಿನಿಧಿ. ಅವರ ಕವಿತೆಗಳು ಆಫ್ರೋ-ಅಮೆರಿಕನ್ ಜನರ ಜೀವನ, ನೋವು, ಕನಸು ಮತ್ತು ಸ್ವಾಭಿಮಾನವನ್ನು ಸರಳ ಹಾಗು ಶಕ್ತಿಯುತ ಭಾಷೆಯಲ್ಲಿ ವ್ಯಕ್ತಪಡಿಸುತ್ತವೆ. ಜಾಜ್ ಮತ್ತು ಬ್ಲೂಸ್ ಸಂಗೀತದ ಲಯ ಅವರ ಬರಹಗಳ ವಿಶೇಷತೆ. ಅವರು ದಮನಿತರ ಧ್ವನಿಯಾಗಿದ್ದ ಸಮಾಜಮುಖಿ ಚಿಂತಕರಾಗಿದ್ದರು. ವಿಶಿಷ್ಟ ಕಾವ್ಯಶೈಲಿಯ ಮೂಲಕ ಇವರ ಕವಿತೆಗಳು ಜಗತ್ತಿನ ಗಮನ ಸೆಳೆದಿವೆ.
ವೈ. ಬಿ. ಹಾಲಬಾವಿ ಇವರು ಮೂಲತಃ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್ಲ ಗ್ರಾಮದವರು. ಪ್ರಸ್ತುತ ಬೆಂಗಳೂರಿನ ನಿವಾಸಿ. ವೃತ್ತಿಯಲ್ಲಿ ಮಾನವ ಸಂಪನ್ಮೂಲ ಹಿರಿಯ ಅಧಿಕಾರಿಯಾಗಿ ನಿವೃತ್ತರಾಗಿರುವ ಇವರಿಗೆ ಓದು, ಬರಹ ಕಾವ್ಯ ಅಚ್ಚುಮೆಚ್ಚು. ಅನುವಾದ ಇವರ ಆಸಕ್ತಿ ಕ್ಷೇತ್ರ.
ಸಂಚಯ ಪತ್ರಿಕೆಯ ‘ಬೇಂದ್ರೆ ಸ್ಮೃತಿ’ ಪುಸ್ತಕ ಬಹುಮಾನ, ಎರಡು ಬಾರಿ ಸಂಕ್ರಮಣ ಪತ್ರಿಕೆಯ ‘ಸಂಕ್ರಮಣ’ ಕಾವ್ಯ ಪ್ರಶಸ್ತಿ, ಕಲಬುರ್ಗಿಯ ‘ಚಂದ್ರಶೇಖರ ಅಜಾದ್’ ಕಾವ್ಯ ಪ್ರಶಸ್ತಿಗಳು ಸಂದಿವೆ.
ಖಲೀಲ್ ಗಿಬ್ರಾನ್, ಜಲಾಲುದ್ದೀನ್ ರೂಮಿ, ಲ್ಯಾಂಗ್ಸ್ಟನ್ ಹ್ಯೂಸ್, ನ್ಯಾನಾವೋ ಸಕಾಕಿಯ ಭಾವಾನುವಾದಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ, ಕವಿತೆ, ಗಜಲ್, ರುಬಾಯಿ, ಖಿತಾಗಳನ್ನೊಳಗೊಂಡ ಹಾಗೂ ಇಂಗ್ಲೀಷ ಕವಿತೆಗಳ ಭಾವಾನುವಾದ ಪುಸ್ತಕಗಳು ಪ್ರಕಟಣೆಗೆ ಸಿದ್ಧಗೊಂಡಿದೆ.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ


