70 ರ ದಶಕದ ಯಾವ ಚಂದದ ಪ್ರೇಮಗೀತೆ ಕೇಳಿದರೂ ಅದು ಗುಲ್ಜಾರ್ ಬೆರಳ ತುದಿಯಿಂದಲೇ ಬಂದಿರುವುದೇನೋ ಅನ್ನುವಷ್ಟು ತೀವ್ರವಾಗಿ ಮನಸ್ಸಿಗೆ ಕೂರುವಂತೆ ಬರೆದವರು ಗುಲ್ಜಾರ್. ಅವರ ಸಿನಿಮಾಗೀತೆಗಳಷ್ಟೇ ಅವರ ಕವಿತೆಗಳೂ ಬಹಳ ಚಂದಿವೆ. ನನಗೆ ಉರ್ದು ಓದಲು ಬರುವುದಿಲ್ಲ. ನಾನು ಅವರ ಕವಿತೆಗಳ ಇಂಗ್ಲಿಷ್ ಅನುವಾದಗಳ ಓದಿ ಕಂಗಾಲಾಗಿ ಕೂರುತಿದ್ದ ದಿನಗಳಿದ್ದವು. ಅಲ್ಲದೆ ಈ ಅನುವಾದವೇ ಹೀಗೆ ಅಲುಗಾಡಿಸುವಂತಿದ್ದರೆ ಉರ್ದು ಕಲಿತು ಒರಿಜನಲ್ ಓದಿದರೆ ಎಂಬ ಆಶೆಯ ನಡುವೆಯೂ ನಾನು ಉರ್ದು ಕಲಿಯಲಿಲ್ಲ.
ಆಗಸ್ಟ್ ೧೮ರಂದು ಹುಟ್ಟುಹಬ್ಬವನ್ನಾಚರಿಸಿಕೊಂಡ ಕವಿ ಗುಲ್ಜಾರ್ ಕುರಿತು ಸಿಂಧುರಾವ್ ಟಿ ಬರಹ ನಿಮ್ಮ ಓದಿಗೆ
ಎಷ್ಟು ಚಂದ ಮಾತಾಡತೀ ನೀನು… ಅದೇ ಒಂಚೂರು ಒಳ್ಳೆ ಮನಸೂ ಇದ್ದಿದ್ದ್ರೆ ಇನ್ನೂ ಎಷ್ಟು ಚಂದಾಗತಿತ್ತೋ ಅಂತ ಜೀವ ತಲ್ಲಣಿಸುತ್ತದೆ ಅಂತ ಭೂಪಿಂದರ್ ಕೊರಳ ಉಲಿಗೆ ಹಾಡು ಬರೆದ ಗುಲ್ಜಾರ್ ಬಹುಶಃ ಆತನ ಮನಸಿನ ಮಾತನ್ನೇ ಬರೆದರೇನೋ. 70 ರ ದಶಕದ ಯಾವ ಚಂದದ ಪ್ರೇಮಗೀತೆ ಕೇಳಿದರೂ ಅದು ಗುಲ್ಜಾರ್ ಬೆರಳ ತುದಿಯಿಂದಲೇ ಬಂದಿರುವುದೇನೋ ಅನ್ನುವಷ್ಟು ತೀವ್ರವಾಗಿ ಮನಸ್ಸಿಗೆ ಕೂರುವಂತೆ ಬರೆದವರು ಗುಲ್ಜಾರ್. ಅವರ ಸಿನಿಮಾಗೀತೆಗಳಷ್ಟೇ ಅವರ ಕವಿತೆಗಳೂ ಬಹಳ ಚಂದಿವೆ. ನನಗೆ ಉರ್ದು ಓದಲು ಬರುವುದಿಲ್ಲ. ನಾನು ಅವರ ಕವಿತೆಗಳ ಇಂಗ್ಲಿಷ್ ಅನುವಾದಗಳ ಓದಿ ಕಂಗಾಲಾಗಿ ಕೂರುತಿದ್ದ ದಿನಗಳಿದ್ದವು. ಅಲ್ಲದೆ ಈ ಅನುವಾದವೇ ಹೀಗೆ ಅಲುಗಾಡಿಸುವಂತಿದ್ದರೆ ಉರ್ದು ಕಲಿತು ಒರಿಜನಲ್ ಓದಿದರೆ ಎಂಬ ಆಶೆಯ ನಡುವೆಯೂ ನಾನು ಉರ್ದು ಕಲಿಯಲಿಲ್ಲ. ಇಷ್ಟ ಪಟ್ಟ ಗಝಲ್‌ಗಳ ಅರ್ಥ ತಿಳಿದುಕೊಳ್ಳುವುದಕ್ಕಷ್ಟೇ ನನ್ನ ಉರ್ದು ಸೀಮಿತ.
ಗುಲ್ಜಾರ್ ಎಂದರೆ ತಕ್ಷಣ ನೆನಪಿಗೆ ಬರುವುದು ಇಝಾಜತ್ ಸಿನೆಮಾದ “ಹುಝೂರ್ ಇಸ್ ಕ ದರ್ ಭೀ ಇತಿರಾಹ್ ಕೆ ಚಲಿಯೆ…” ಹಾಡು. ಅದರ ಒನಪು ಒಯ್ಯಾರ, ಚೇಷ್ಟೆ… ಆಹಾ
ಈ ಎಲ್ಲ ಆಹಾಗಳ ಮಧ್ಯವೇ ಹುದುಗಿಸಿದ “ನೀನು ನಾನು ಅಂದುಕೊಂಡಷ್ಟು ಮಾತ್ರವೇ ಇರಬಾರದಿತ್ತೇ” ಎಂಬ ಗಂಡು ಹಂಬಲ… ಈ ಹಾಡು ನನಗೆ ಸದಾ ಖುಷಿ ಮತ್ತು ನಿಟ್ಟುಸಿರು ಒಟ್ಟಿಗೇ ತರುತ್ತವೆ. ನೀವು ನೋಡಿರದಿದ್ದರೆ ಈ ಸಿನೆಮಾ ಇಜಾಝತ್ ನೋಡಲೆ ಬೇಕು. ಎಲ್ಲ ಹಾಡೂ ಕೇಳಲೆ ಬೇಕು.
ಯಾವ ಹಿನ್ನೆಲೆಯೂ ಗೊತ್ತಿಲ್ಲದೆ ಗುಲ್ಜಾರರ ಹಾಡು ಕೇಳಿದರೆ ಅವು ಹೆಣ್ಣನ್ನು ಗಂಡಿನ ಆಶಯಗಳ ಮೂಲಕ ಮೆದುವಾಗಿ, ಮುದ್ದಿಸುವಿಕೆಯಿಂದ ರೂಪಿಸುತ್ತ ಹೋಗುತ್ತವೆ.
“ಪತ್ಥರ್ ಕಿ ಹವೇಲೀಸೆ ಶೀಷೇ ಕೆ ಘರೋಂದೋಮೇ” ಹೋಗುವ ದಾರಿಗಳ ರೇಷಿಮೆ ಎಳೆಗಳನ್ನು ನಾಜೂಕಾಗಿ ಸಿಕ್ಕಾಗದ ಹಾಗೆ ಚಿತ್ರಿಸುತ್ತಾ… ನೀನು ನಿನ್ನ ದಾರಿ ಹಿಡಿದಿದ್ದು ಒಳ್ಳೆಯದೆ, ನಿನಗೆ ಒಳ್ಳೆಯ ಪ್ರಗತಿಯಿದೆ ಎನ್ನುತ್ತಲೇ.. ಹೀಗೆ ಹೊರಟ ನೀನು ನನ್ನೆದೆಯ ದಾರಿಯಿಂದ ಮೆತ್ತಗಿಳಿದು ಹೋಗುವಾಗ ನಾನು ಬೇಕೆಂದೇ ಸುಮ್ಮನುಳಿಯಬೇಕಾಯಿತು… ನನಗೇನೂ ಅದಿಷ್ಟವಿಲ್ಲ ಆದರೂ ಒಪ್ಪಲೂ ಆರೆ ಎನ್ನುತ್ತ ಅವಳಿಗೆ, ಇವಳಿಗೆ, ನನಗೆ, ಮತ್ತು ಯಾರು ಯಾರೋ ಹೆಣ್ಮಕ್ಕಳಿಗೆ ಹೌದಲ್ಲ… ಇವನ ಮನಸು ಮುರಿದೆ.. ಎಂದು ಮನಸ್ಸನ್ನು ಭಿನ್ನಗಾಗಿಸುವ ವಿಶಿಷ್ಟ ಗುಣ ಹೊಂದಿದೆ.
ಗುಲ್ಜಾರ್ ರಂಪರಾದ್ಧಾಂತದ ಮನುಷ್ಯರಲ್ಲ. ಆದರೂ ಸಿಟ್ಬಂದರೆ ಹೆಂಡತಿಗೆ ಹೊಡೆಯಬಲ್ಲ ಸಾದಾಸೀದಾ ಗಂಡಸು. ಅದು ಓಕೆ. ಅವರವರ ಮಧ್ಯೆ ಎಂತಾದರೂ ಆಗಲಿ.
ಮಗಳು ತನಗಿಷ್ಟವಾದದ್ದನ್ನೇ ಮಾಡಲಿ ಎಂದು ಪ್ರೋತ್ಸಾಹಿಸುವ ಪ್ರೀತಿಯ ಅಪ್ಪ, ಹೆಂಡತಿ ತನಗಿಷ್ಟವಾದದ್ದನ್ನು ಮಾಡಲು ಒಪ್ಪಿಕೊಳ್ಳಲಾರದೆ ಹೋದ ವಿಪರ್ಯಾಸಕ್ಕೆ ಗುಲ್ಜಾರ್ ಒಂದು ಹರ್ಟಿಂಗ್ ಸಾಕ್ಷಿ. ಅದು ಅಭಿಮಾನದ ಅಥವಾ ದುರಭಿಮಾನದ ಅಸೂಯೆಯ ಗಂಡಸಲ್ಲ. ಪರಂಪರಾಗತ ಆಲೋಚನೆಗಳನ್ನ ವಾಸ್ತವದಲ್ಲಿ ಮೀರಲಾಗದೆ ಹೋದ ಮಿತಿ ಇರಬಹುದೇನೋ.

ಆದರೆ ಕವಿಯಾಗಿ ಮಾತ್ರ ಅವರ ಜಂಡರ್ ಮರೆತು ಓದಿದರೆ ಒಂದೊಂದು ಸಾಲಲ್ಲೂ ಜಲಪಾತ, ಒಂದೊಂದು ಸಾಲಲ್ಲೂ ಉಲ್ಕಾಪಾತ, ಒಂದೊಂದು ಸಾಲಲ್ಲೂ ಬೆಟ್ಟವನ್ನೆ ಹತ್ತಿಳಿದ ಉನ್ಮಾದ… ಮತ್ತು ಈ ಎಲ್ಲ ಮುಗಿಸಿ ಸುಮ್ಮನೆ ಕುಳಿತುಬಿಡಬೇಕಾದ, ವಿಷಾದವಲ್ಲದ ಅತ್ಯಂತಿಕ ಮೌನ.
ನಾನು ಇತ್ತೀಚೆಗೆ ಓದಿದ ಅವರ ಒಂದು ಕವಿತೆಯ ಭಾವಾಂಶವನ್ನ ಇಲ್ಲಿ ಕೊಡ್ತೀನಿ. ಇದರ ಉರ್ದು/ಹಿಂದಿ ವರ್ಷನ್ ಸಿಗಲಿಲ್ಲ ನನಗೆ. ಸಧ್ಯಕ್ಕೆ ಅರ್ಜೆಂಟಿಗೆ ಇದು.
ಸೋನಾ… ಸಾರಿ ಕಣೇ.
ಅದೇನೋ ಅಕಾಲ ಮಳೆಗಾಲ ಬಂದಿದೆ
ಈ ಮಳೆಯಲ್ಲಿ ನನ್ನ ಕವಿತೆಯ ಕಾಲುದಾರಿಯಲ್ಲಿ
ನಡೆಯುವುದು ನಿನಗೆ ಕಷ್ಟವಾಗುತ್ತಿದೆ.
ಅದು ಹೋಗಲಿ ನನ್ನ ಕಾವ್ಯದ ಗಲ್ಲಿರಸ್ತೆಗಳು
ಸದಾ ಒದ್ದೊದ್ದೆ
ಗುಂಡಿಗಳಲ್ಲಿ ನೀರು ನಿಂತಿರುತ್ತವೆ ಬೇರೆ
ಎಡವಿ ಬಿದ್ ಗಿದ್ದೀಯಾ… ಕಾಲು ಉಳುಕಿಯೇ ಹೋಗುತ್ತದೆ.
ಏನಾದರೂ ಆಗಲಿ… ನಿಜ್ಜ ಸಾರಿ ಕಣೇ
ಈ ಕವಿತೆಗಳಲ್ಲಿ ಅದೇಕೋ ಬೆಳಕು ಕುಂದಿದೆ.
ನಿನಗೆ ಕಷ್ಟವಾಗಿಬಿಟ್ಟಿತು.
ನಾನು ಬೀಳಿಸಿರುವ ಕಲ್ಲುಗಳ ದಾಟಿ
ನೀನು ನಡೆಯುವಾಗ ಸರಿಯಾಗಿ ಕಾಣುವುದಿಲ್ಲ.
ನೀನೇನು, ನಾನೇ ಎಷ್ಟೋ ಸಲ ಎಡವಿ ಉಗುರು ಕೆತ್ತಿಸಿಕೊಂಡಿದ್ದೇನೆ.
ನನ್ನ ಕುರುಡು ದೀಪವಂತಿರಲಿ,
ಬೀದಿಯ ದೀಪಗಳು ಆರಿಹೋಗಿ ಬಹಳ ಕಾಲವಾದವು.
ನಿನಗೆ ತುಂಬ ಕಷ್ಟವಾಗಿರಬೇಕು.
ಸೋ ಸಾರಿ ಕಣೇ… ಮನದುಂಬಿ ಹೇಳ್ತಿದೀನಿ. ನಿಜ್ಜ ಸಾರಿ….
ಇಷ್ಟು ಆರ್ದ್ರವಾಗಿ, ಓದಿದ ಕೂಡಲೆ ಒದ್ದೆಮುದ್ದೆಯಾಗಿ ತಬ್ಬಿಬ್ಬಾಗಿ ಕೂತುಬಿಡುವಂತೆ ಮಾಡುವ ಕವಿ ಗುಲ್ಜಾರರಿಗೆ ಜನ್ಮದಿನದ ಶುಭಾಶಯಗಳು.
ರೇಷಿಮೆ ಎಳೆಗಳು ನಾಜೂಕಾದಷ್ಟೂ ಸಿಕ್ಕು ಜಾಸ್ತಿ ಅಂತ ಗೊತ್ತಾಗೋಕೆ ಇವರೇ ಸಾಕ್ಷಿ.

ಹುಟ್ಟಿದ್ದು ಶಿವಮೊಗ್ಗದ ಸಾಗರದಲ್ಲಿ. ವೆಬ್ ಡಿಸೈನಿಂಗ್ ಡಿಪ್ಲೊಮಾ ಮತ್ತು ಇಂಗ್ಲಿಷ್ ಎಂ.ಎ ಮಾಡಿ, ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದರ, ತರಬೇತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ

