ತಕ್ಷಣ ನನಗೆ ಎಂತಹಾ ತಪ್ಪು ಮಾಡಿದೆ ಅನಿಸಿತು. “ತಣ್ಣೀರನ್ನೂ ಸಹ ತಣಿಸಿ ಕುಡಿಯಬೇಕಂತೆ” ಎಂಬ ಗಾದೆಮಾತಿನಂತೆ ತಾಳ್ಮೆಯಿಂದ ನಾನು ತಾಳಿಕೊಂಡು ತಕ್ಷಣ ಮರು ಉತ್ತರ ಕೊಡಲಿಲ್ಲ. ‘ಆತುರಗಾರನಿಗೆ ಬುದ್ಧಿ ಮಟ್ಟ” ಎಂಬ ಗಾದೆ ಮಾತು ನನಗೆ ನೆನಪಿಗೆ ಬಂದು ಆತುರದಲ್ಲಿ ನಾನು ಮಾಡಿದ ಈ ಅವಸರದ ತಪ್ಪು ನನ್ನ ಬಹಳ ಬಾಧಿಸಿತು. ನಾನು ಅವರಿಗೆ ಕರೆ ಮಾಡಿ ಹೇಳೋಣವೆಂದರೆ ಅವರು ಬೈದರೆ ಏನು ಗತಿ? ಎಂದು ಹೆದರಿ “ಸಾರಿ ಸಿಸ್ಟರ್ ಸಾರಿ… ನಾನು ಆ ಮೆಸೇಜನ್ನು ಸರಿಯಾಗಿ ಓದದೇ ನಿಮಗೆ ಕಳಿಸಿಬಿಟ್ಟೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಎಪ್ಪತ್ತನೆಯ ಕಂತು ನಿಮ್ಮ ಓದಿಗೆ
ಕೆಲವರು ವೇತನ ಗಳಿಸಲು ಶಕ್ತರಾದರೆ ಸಾಕು ತಮ್ಮ ಗಳಿಕೆಗಿಂತಲೂ ಹೆಚ್ಚಿನ ಮೌಲ್ಯದ ಮೊಬೈಲ್ ಖರೀದಿಸುತ್ತಾರೆ!! ಆರ್ಥಿಕವಾಗಿ ದುರ್ಬಲರಾದ ಪರಿಚಿತರೊಬ್ಬರ ಮಗಳ ಕೈಯಲ್ಲಿ ದುಬಾರಿ ಬೆಲೆಯ ಮೊಬೈಲನ್ನು ನೋಡಿ ಇದರ ಬಗ್ಗೆ ಅವರನ್ನು ಕೇಳಿದಾಗ, ಅವರು “ಸರ್, ನನ್ನ ಮಗಳು ಈ ಮೊಬೈಲ್ ಕೊಳ್ಳಲು ಹಠ ತೊಟ್ಟು ಓದಿನ ಜೊತೆ ಪಾರ್ಟ್ ಟೈಂ ಕೆಲಸಕ್ಕೆ ಹೋಗಿ ಸ್ವತಃ ದುಡಿದು ಆ ಹಣದಿಂದ ಖರೀದಿಸಿದ್ದಾಳೆ” ಎಂಬ ಉತ್ತರ ಕೇಳಿ ನನಗೆ ಆಶ್ಚರ್ಯವಾಯಿತು. ಆಗ ನಾನು “ಈ ಮೊಬೈಲ್ಗೆ ಹಾಕಿರುವ ಬಂಡವಾಳವನ್ನು ಅದೇ ಬೆಲೆಯ ಬಂಗಾರಕ್ಕೆ ಹಾಕಿದ್ದರೆ ಮುಂಬರುವ ದಿನಗಳಲ್ಲಿ ಇದರ ಬೆಲೆ ಹೆಚ್ಚಾದಾಗ ಲಾಭವಾಗುತ್ತಿತ್ತಲ್ಲವೇ?” ಎಂದೆ. ಆಗ ಅವರು ‘ಈಗಿನವರು ಇದನ್ನು ಕೇಳಬೇಕಲ್ಲಾ ಸರ್’ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.
ಮೊಬೈಲ್ಗೆ ಸಂಬಂಧಪಟ್ಟಂತೆ ಜಗತ್ತಿನ ಅತ್ಯಂತ ಯಶಸ್ವೀ ಹೂಡಿಕೆದಾರರಾಗಿದ್ದ ಆತ್ಯಂತ ಶ್ರೀಮಂತ ವಾರೆನ್ ಬಫೆಟ್ರವರು ತಾವು ಶತಕೋಟ್ಯಾಧಿಪತಿಯಾಗಿದ್ದರೂ ಸಹ ಹಲವು ವರ್ಷಗಳ ಕಾಲ ಅತ್ಯಂತ ಸರಳವಾದ ಮೊಬೈಲ್ ಫೋನನ್ನು ಮಾತನಾಡಲು ಮಾತ್ರ ಬಳಸುತ್ತಿದ್ದರಂತೆ!! ಮುಂದೆ ಗಿಫ್ಟ್ ಆಗಿ ದುಬಾರಿ ಬೆಲೆಯ ಮೊಬೈಲನ್ನು ಅವರಿಗೆ ಕೊಟ್ಟರೂ ಸಹ ಮಾತನಾಡಲು ಮಾತ್ರ ಇದನ್ನು ಬಳಸುತ್ತಿದ್ದರಂತೆ!
ಆದರೆ ಫೇಸ್ ಬುಕ್, ಇನ್ ಸ್ಟಾ ಗ್ರಾಂ, ರೀಲ್ಸ್ಗಳ ಲೋಕದಲ್ಲಿ ಇಂದಿನ ಬಹುತೇಕರು ವಯಸ್ಸಿನ ಹಂಗಿಲ್ಲದೇ ಮೊಬೈಲ್ ದಾಸರಾಗಿದ್ದಾರೆ. ಪುಸ್ತಕ ಹಿಡಿಯುವ ಕೈಗಳು ಮೊಬೈಲ್ಗಳು ಹಿಡಿಯುತ್ತಿವೆ.
ಈಗೀಗಲಂತೂ ಚಿಕ್ಕ ಚಿಕ್ಕ ಮಕ್ಕಳೂ ಸಹ ಮೊಬೈಲ್ ಆಪರೇಟ್ ಮಾಡೋದನ್ನು ಕಲಿತಿರುತ್ತಾರೆ, ಎಷ್ಟೋ ತಾಯಂದಿರು ತಮ್ಮ ಮಕ್ಕಳಿಗೆ ಮೊಬೈಲ್ ಕೊಡದಿದ್ದರೆ ಅವರು ಊಟವನ್ನೇ ಮಾಡುವುದಿಲ್ಲ! ಹಿಂದಿನ ಕಾಲದಲ್ಲಿ ತಾಯಂದಿರು ಮಕ್ಕಳು ಊಟ ಮಾಡದಿದ್ದರೆ ಆಕಾಶದ ಚಂದ್ರನನ್ನು ತೋರಿಸಿ “ಚಂದಮಾಮನನ್ನು ನೋಡು, ನೀ ಊಟ ಮಾಡದಿದ್ದರೆ ಅವನಿಗೆ ಕೊಡುತ್ತೇನೆ” ಎಂದೆಲ್ಲಾ ಬ್ಲ್ಯಾಕ್ ಮೇಲ್ ಮಾಡುತ್ತಾ ಮಕ್ಕಳು ಊಟ ಮಾಡುವಂತೆ ಮಾಡುತ್ತಿದ್ದರು. ಮಲಗುವಾಗಲೂ ಅಷ್ಟೇ ಹಾಡುಗಳನ್ನು ಅಥವಾ ಕಥೆಗಳನ್ನು ಹೇಳುತ್ತಾ ಮಲಗಿಸುವುದು ಮುಂತಾದ ಚಟುವಟಿಕೆಗಳನ್ನು ಮಾಡುತ್ತಿದ್ದರು. ಇದರಿಂದ ಮಕ್ಕಳ ಕಲ್ಪನಾಶಕ್ತಿ ಹೆಚ್ಚುತ್ತಿದ್ದಲ್ಲದೇ ಅವರಲ್ಲಿ ಸೃಜನಾತ್ಮಕತೆ, ಮಾತುಗಾರಿಕೆ, ಜ್ಞಾಪಕಶಕ್ತಿಯ ಬೆಳವಣಿಗೆಗೆ ಸಹಾಯಕವಾಗುತ್ತಿದ್ದವು.
ಆದರೀಗ ಕಾಲ ಬದಲಾಗಿದೆ. ತಾಯಂದಿರೂ ಸಹ ದುಡಿಯುವ ಅನಿವಾರ್ಯತೆಯಲ್ಲಿದ್ದಾರೆ. ಸಮಯವು ಓಡುತ್ತಿದೆ ಎಂಬ ಭಾವ ಎಲ್ಲರಲ್ಲೂ ಆವರಿಸಿದೆ. ಕೆಲ ತಾಯಂದಿರು ಮೇಲಿನಂತಹ ಚಟುವಟಿಕೆಗಳನ್ನು ಮಾಡುತ್ತಿರಬಹುದು. ಆದರೆ ಅವರ ಸಂಖ್ಯೆ ವಿರಳ. ಬಹುತೇಕರು ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಸುಮ್ಮನಾಗಿಸುತ್ತಿದ್ದಾರೆ. ಮಕ್ಕಳ ಜೊತೆಯಲ್ಲಿ ಅವರನ್ನೂ ಮೀರಿಸುವಂತೆ ಪೋಷಕರೂ ಸಹ ಮೊಬೈಲ್ನಲ್ಲಿ ಕಳೆದು ಹೋಗುತ್ತಿದ್ದಾರೆ.

ಪರಿಣಾಮ ಹಲವು ಮಕ್ಕಳು ಸಹ ಮೊಬೈಲ್ಗೆ ಅಡಿಕ್ಟ್ ಆಗಿದ್ದಾರೆ. ಕೆಲ ಮಹಾನಗರಗಳಲ್ಲಿ ‘ಮೊಬೈಲ್ ಡೀ ಅಡಿಕ್ಷನ್ ಸೆಂಟರ್’ ಗಳೂ ಸಹ ಪ್ರಾರಂಭವಾಗಿವೆಯಂತೆ!! ಬೆಳಿಗ್ಗೆ ಎದ್ದ ಕೂಡಲೇ ಕೈಯನ್ನು ನೋಡುತ್ತಾ ‘ಕರಾಗ್ರೇ ವಸತೇ ಲಕ್ಷ್ಮೀ…’ ಎಂದು ಮುಂದುವರೆಯುವ ಶ್ಲೋಕವನ್ನು ಹೇಳುವ ಬದಲು
”ಪ್ರಾತಃ ಸ್ಮರಾಮಿ ಮೊಬೈಲು ಫೋನಂ
ಅಂಗುಷ್ಠೆ ಸ್ಕ್ರೀನು ತೀಡನಂ
ನೋಟಿಫಿಕೇಶನ್ ವಿಹಾರಾರ್ತೇ
ಪ್ರಭಾತೇ ಮೊಬೈಲ್ ದರ್ಶನಂ”
ಎಂದು ಹೇಳುತ್ತಿದ್ದಾರೋ ಅನಿಸುತ್ತದೆ!! ಮೊಬೈಲ್ ಬಗ್ಗೆ ಇಷ್ಟುದ್ದ ಪೀಠಿಕೆ ಆರಂಭಿಸೋಕೆ ಕಾರಣ ನಾನು ಕೆಲಸಕ್ಕೆ ಸೇರುವವರೆಗೆ ಮೊಬೈಲ್ ಫೋನ್ ಖರೀದಿಸಿರಲಿಲ್ಲ. ಕೆಲಸ ಸಿಕ್ಕು ಒಂದು ವರ್ಷವಾದರೂ ನನ್ನ ಬಳಿ ಮೊಬೈಲ್ ಇರಲಿಲ್ಲ! ಆಗ ನನಗೆ ಇದರ ಅನಿವಾರ್ಯತೆಯೂ ಸಹ ಇರಲಿಲ್ಲ ಬಿಡಿ! ಈಗಿನ ಸ್ಥಿತಿ ಇದ್ದಿದ್ದರೆ ಮೊಬೈಲ್ ಇಲ್ಲದೇ ಹೋಗಿದ್ದರೆ ಕೆಲಸಕ್ಕೇ ಸೇರುವಂತೆ ಆಗುತ್ತಿರಲಿಲ್ಲವೇನೋ?!
ಮೊದಲ ಮೊಬೈಲ್ ಕೊಂಡಾಗ ನನಗೆ ಕರೆ ಬಂದರೆ ಸಾಕು ಹಿರಿ ಹಿರಿ ಹಿಗ್ಗಿ ಹೀರೇಕಾಯಿಯಂತಾಗಿ ಹೆಮ್ಮೆಯಿಂದ ಸ್ವೀಕರಿಸುತ್ತಿದ್ದೆ. ಆಗ ಇದ್ದದ್ದು ಬರೀ ಕೀ ಪ್ಯಾಡ್ ಸೆಟ್ಟು. ಕೆಲವರ ಬಳಿ ಕೀ ಪ್ಯಾಡ್ ಕಲರ್ ಸೆಟ್ ಇರುತ್ತಿದ್ದವು. ಮೆಡಿಕಲ್ ರೆಪ್ ಆಗಿದ್ದಾಗ ಅನಿವಾರ್ಯತೆಗೆ ಸಿಲುಕಿ ನಾನು ಮೊಬೈಲ್ ಕೊಂಡಾಗ ಅದರಲ್ಲಿ ಮಾತನಾಡುವುದೇ ಖುಷಿ ಎನಿಸುತ್ತಿತ್ತು. ನಾನು ಮೊದಲ ಫೋನ್ ಖರೀದಿಸುವಾಗ ನನಗೆ ಸಲಹೆಯಿತ್ತ ನನಗೆ ಮೆಡಿಕಲ್ ರೆಪ್ ಕೆಲಸ ಕೊಡಿಸಲು ನೆರವಾದ ‘ಆನಂದ’ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿಯ ಬಗ್ಗೆ ಹೇಳಲೇ ಬೇಕು.
ಅವನು ತುಂಬಾನೇ ಬುದ್ಧಿವಂತ ವಿದ್ಯಾರ್ಥಿ ಎಂದು ಅವನ ಅಂಕಪಟ್ಟಿಯನ್ನು ನೋಡಿದಾಗ ಅನಿಸುತ್ತಿತ್ತು. ಅವನು ಯಾರೊಂದಿಗೂ ಸೇರುತ್ತಿರಲಿಲ್ಲ. ಆದರೆ ಅದ್ಯಾಕೋ ಏನೋ ನನ್ನ ಸ್ನೇಹ ಸಂಪಾದಿಸಿದ. ನನ್ನಿಂದ ಅವನಿಗೆ ಎಷ್ಟು ಉಪಯೋಗ ಆಗಿತ್ತೋ ಇಲ್ವೋ ಗೊತ್ತಿಲ್ಲ, ಆದರೆ ಅವನಿಂದ ನನಗೆ ತುಂಬಾ ಸಹಾಯವಾಗಿತ್ತು. ನಿಗದಿತ ವಿದ್ಯಾರ್ಹತೆ ಇಲ್ಲದ ನನಗೆ ಆ ಸಮಯದಲ್ಲಿ ಪ್ರತಿಷ್ಠಿತ ಕಂಪೆನಿಯಲ್ಲಿ ಇವನ ಸಹಾಯದಿಂದ ಮೆಡಿಕಲ್ ರೆಪ್ ಕೆಲಸ ಸಿಕ್ಕಿತ್ತು. ಒಂದು ವರ್ಷದ ಒಡನಾಟ ಅವನೊಂದಿಗಿತ್ತು. ನನಗೆ ಅವನು ಯಾವತ್ತೂ ಮೋಸ ಮಾಡಿದವನಲ್ಲ. ಆದರೆ ಇಂಜಿನಿಯರಿಂಗ್ ಮುಗಿದ ದಿನ ಅವನು ವಾಪಸ್ ಊರಿಗೆ ಹೋಗುವ ಸಮಯದಲ್ಲಿ ನನ್ನ ಮೊಬೈಲ್ ಬೇಕು ಕೊಡಿ ಎಂದು ತೆಗೆದುಕೊಂಡಿದ್ದ. “ನಾಳೆ ಊರಿಗೆ ಹೋಗುತ್ತೇನೆ. ನಿಮ್ಮ ಮೊಬೈಲನ್ನು ಬೆಳಿಗ್ಗೆ ಕೊಡುತ್ತೇನೆ” ಎಂದು ಹೇಳಿದ್ದ. ಎಂದಿನಂತೆ ನಾನು ಬೆಳಿಗ್ಗೆ ಅವನ ರೂಮಿನ ಕಡೆ ಹೋದಾಗ ಅವನ ರೂಮಿನ ಬೀಗ ಹಾಕಿತ್ತು. ನನಗೆ ಆಗ ನೆರೆಹೊರೆಯವರಿಂದ ತಿಳಿದದ್ದು ಅವನು ರಾತ್ರಿಯೇ ರೂಮನ್ನು ಖಾಲಿ ಮಾಡಿದ್ದ! ನನಗೆ ಆಗ ಸಖೇದಾಶ್ಚರ್ಯವಾಯಿತು! ಕರೆ ಮಾಡಿ ಕೇಳಲೂ ಸಹ ನನ್ನ ಬಳಿ ಮೊಬೈಲ್ ಇರಲಿಲ್ಲ. ಬೇರೆ ಮೊಬೈಲ್ನಿಂದ ಎಷ್ಟೇ ಕರೆ ಮಾಡಿದರೂ ಅದು ಸ್ವಿಚ್ ಆಫ್ ಎಂದು ಬರುತ್ತಿತ್ತು. ಕೆಲವು ದಿನಗಳ ಬಳಿಕ ನಾನು ಬೇರೆ ಮೊಬೈಲ್ ಖರೀದಿಸಿ, ಆ ನಂಬರ್ನಿಂದ ನನ್ನ ಹಳೇ ನಂಬರ್ಗೆ ಕರೆ ಮಾಡಿದಾಗ ಅದು ರಿಂಗಾಯಿತು. ನಂತರ ಅವನಿಂದ ಕರೆ ಸ್ವೀಕಾರವಾಗಿ ನನ್ನ ಹೆಸರು ಹೇಳಿದ ಕೂಡಲೇ ಕರೆಯನ್ನು ಕಟ್ ಮಾಡಿದ. ಎಷ್ಟು ಬಾರಿ ಕರೆ ಮಾಡಿದರೂ ಕೂಡ ಇದೇ ಪರಿಸ್ಥಿತಿ ಮುಂದುವರೆದಾಗ ಅಂದಿನಿಂದ ನಾನು ಅವನಿಗೆ ಕರೆ ಮಾಡುವುದನ್ನೇ ನಿಲ್ಲಿಸಿದೆ! ಆದರೂ ನನಗಾದ ಒಂದು ಬೇಸರದ ಸಂಗತಿ ಏನೆಂದರೆ ಅವನು ನನಗೆ ಆ ಮೊಬೈಲ್ ಬೇಕು ಎಂದು ಕೇಳಿದ್ದರೆ ನಾನೇ ಖುಷಿಯಿಂದಲೇ ಕೊಡುತ್ತಿದ್ದೆ. ಆದರೆ ಈ ರೀತಿಯ ವಿಶ್ವಾಸದ್ರೋಹವನ್ನು ಖಂಡಿತಾ ಅವನಿಂದ ನಿರೀಕ್ಷೆ ಮಾಡಿರಲಿಲ್ಲ!
ನಾನು ಶಿಕ್ಷಕನಾಗಿ ನೇಮಕವಾಗಿದ್ದಾಗ ಮೊಬೈಲ್ನಿಂದ ನಾನು ಪೇಚಿಗೆ ಸಿಕ್ಕ ಒಂದು ಪ್ರಸಂಗವನ್ನು ಹೇಳಲೇಬೇಕು. ನಾನು ದೂರಶಿಕ್ಷಣದಲ್ಲಿ ಬಿ.ಎಸ್ಸಿ ಕೋರ್ಸ್ ಮಾಡುತ್ತಿದ್ದೆ. ಅದರ ಪರೀಕ್ಷೆ ಬರೆಯಲೆಂದು ಹರಿಹರಕ್ಕೆ ಬಂದಿದ್ದೆ. ಪರೀಕ್ಷೆ ಇನ್ನೇನು ಕೆಲವೇ ಕ್ಷಣಗಳಿರುವಾಗ ನನಗೆ ಒಂದು ಮೆಸೇಜ್ ಬಂತು. ಅದರಲ್ಲಿ “ಇನ್ಫೋಸಿಸ್ ಪ್ರಶ್ನೆ” ಎಂಬ ಹೆಡ್ಲೈನ್ ಇರುವ ಒಂದು ಪ್ರಶ್ನೆ ಇತ್ತು. ನಾನು ಅದನ್ನು ಕೂಲಂಕುಷವಾಗಿ ಓದಲಿಲ್ಲ. ಬದಲಾಗಿ ಇದನ್ನು ಬುದ್ದಿವಂತರು ಮಾತ್ರ ಬಿಡಿಸಬಹುದೇನೋ? ಹಾಗಾದರೆ ಇವರ ಬುದ್ಧಿಮತ್ತೆಯನ್ನು ಪರೀಕ್ಷಿಸಬೇಕೆಂದು ಇದನ್ನು ನಮ್ಮ ಶಾಲೆಯ ಒಬ್ಬ ಶಿಕ್ಷಕಿಯೊಬ್ಬರಿಗೆ ಕಳಿಸಿಬಿಟ್ಟೆ. ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿ ಪರೀಕ್ಷೆಗೆ ಹೋದೆ. ಪರೀಕ್ಷೆ ಮುಗಿಸಿ ಬಂದು ಮೊಬೈಲ್ ಆನ್ ಮಾಡಿದಾಗ ನನಗೆ ಅವರಿಂದ ಮೂರ್ನಾಲ್ಕು ಮೆಸೇಜ್ಗಳು ಬಂದಿದ್ದವು. ಆ ಮೆಸೇಜ್ಗಳನ್ನು ಓದಿದಾಗ ನನಗೆ ಬೆವರು ಕಿತ್ತು ಬಂತು. ಕಾರಣವಿಷ್ಟೇ! ನಾನು ‘ಇನ್ಸೋಸಿಸ್ ಕ್ವೆಶ್ಚನ್’ ಎಂದರೆ ಟ್ಯಾಲೆಂಟ್ ಪರೀಕ್ಷೆ ಮಾಡಲೆಂದು ಇರುವ ಪ್ರಶ್ನೆ ಎಂದುಕೊಂಡಿದ್ದ ನನ್ನ ಊಹೆ ತಪ್ಪಾಗಿತ್ತು! ಯಾರೋ ಕಿತಾಪತಿ ಮಾಡಲು ಈ ರೀತಿಯ ಹೆಡ್ ಲೈನ್ ಹಾಕಿ ಕಳಿಸಿದ್ದರು. ಕಾರಣ ಈ ಪ್ರಶ್ನೆಯನ್ನು ಬಿಡಿಸಿದಾಗ ಅದರ ಉತ್ತರ ‘ಐ ಲವ್ ಯು’ ಎಂದು ಬರುತ್ತಿತ್ತು. ಮೊದಲಿಗೆ ನಾನು ಇದರ ಉತ್ತರ ಹುಡುಕಿರಲಿಲ್ಲ. ಆದರೆ ಇದರ ಉತ್ತರ ಹೇಗೆ ನನಗೆ ತಿಳಿಯಿತು ಎಂದರೆ ಅವರು ನನಗೆ ಕೊಟ್ಟ ಖಾರವಾದ ರಿಪ್ಲೇ!!! ಆಗ ನಾನು ಮತ್ತೊಮ್ಮೆ ಈ ಮೆಸೇಜನ್ನು ಓದಿದಾಗ ಇದೇ ಉತ್ತರ ಬಂತು.
ತಕ್ಷಣ ನನಗೆ ಎಂತಹಾ ತಪ್ಪು ಮಾಡಿದೆ ಅನಿಸಿತು. “ತಣ್ಣೀರನ್ನೂ ಸಹ ತಣಿಸಿ ಕುಡಿಯಬೇಕಂತೆ” ಎಂಬ ಗಾದೆಮಾತಿನಂತೆ ತಾಳ್ಮೆಯಿಂದ ನಾನು ತಾಳಿಕೊಂಡು ತಕ್ಷಣ ಮರು ಉತ್ತರ ಕೊಡಲಿಲ್ಲ. ‘ಆತುರಗಾರನಿಗೆ ಬುದ್ಧಿ ಮಟ್ಟ” ಎಂಬ ಗಾದೆ ಮಾತು ನನಗೆ ನೆನಪಿಗೆ ಬಂದು ಆತುರದಲ್ಲಿ ನಾನು ಮಾಡಿದ ಈ ಅವಸರದ ತಪ್ಪು ನನ್ನ ಬಹಳ ಬಾಧಿಸಿತು. ನಾನು ಅವರಿಗೆ ಕರೆ ಮಾಡಿ ಹೇಳೋಣವೆಂದರೆ ಅವರು ಬೈದರೆ ಏನು ಗತಿ? ಎಂದು ಹೆದರಿ “ಸಾರಿ ಸಿಸ್ಟರ್ ಸಾರಿ… ನಾನು ಆ ಮೆಸೇಜನ್ನು ಸರಿಯಾಗಿ ಓದದೇ ನಿಮಗೆ ಕಳಿಸಿಬಿಟ್ಟೆ. ಐ ಆ್ಯಮ್ ವೆರಿ ವೆರಿ ಸಾರಿ ಸಿಸ್ಟರ್” ಎಂದು ರಿಪ್ಲೇ ಕೊಟ್ಟು ಸುಮ್ಮನಾದೆ! ಸಂಜೆಯವರೆಗೂ ಅವರು ರಿಪ್ಲೇ ಕೊಡಲಿಲ್ಲ. ಸಂಜೆ ‘ಇಟ್ಸ್ ಓಕೆ ಬ್ರದರ್’ ಎಂದು ಮೆಸೇಜ್ ಕಳಿಸಿದಾಗ ನನಗೆ ಸಮಾಧಾನವಾಯಿತು.

ಈ ರೀತಿಯಾಗಿ ಮೊಬೈಲ್ನಿಂದಾಗಿ ನನಗೆ ಒಂದು ಮುಜುಗರದ ಪರಿಸ್ಥಿತಿ ಎದುರಾಗಿತ್ತು. ಮೊಬೈಲ್ನಿಂದ ಮತ್ತೊಂದು ಇದೇ ರೀತಿಯ ಸನ್ನಿವೇಶವನ್ನು ನಾನು ಎದುರಿಸಿದ್ದೆ. ಅದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಸುತ್ತೇನೆ.

ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

