ಹೀಗೆ ಹೇಳಿಕೊಳ್ಳಲಾಗದ ಅನುಭವಿಸಲಾಗದ ದ್ವಂದ್ವವನ್ನು ಅನೇಕ ಸಂದರ್ಭಗಳಲ್ಲಿ ಹೆಣ್ಣು ಮಕ್ಕಳು ಅನುಭವಿಸುತ್ತಿರುತ್ತಾರೆ. ಇದೇ ಪರೋಕ್ಷ ಹೀಯಾಳಿಸುವಿಕೆ, ಮುಟ್ಟಿ ಮಾತನಾಡಿಸಿದ ಹಾಗೂ ಅಗಬೇಕು ಒಂದು ಜೋರಾದ ಪೆಟ್ಟನ್ನು ನೀಡಿದ ಹಾಗೂ ಅಗಬೇಕು ಎನ್ನುವ ಮನೋಭಾವ. ನೇರವಾಗಿ ಏನನ್ನೂ ಹೇಳುವುದಿಲ್ಲ ಪರೋಕ್ಷವಾಗಿ ಸೂಚ್ಯವಾಗಿ ಆಂಗಿಕ ಸಂಜ್ಞೆಯ ಮೂಲಕ ಹೇಳುವುದು. ಬೇಕಂತಲೆ ಸಿಟ್ಟುಬರುವಂತೆ ಮಾಡಿ ತಾವು ಸೌಮ್ಯವಾಗಿಬಿಡುವುದು. ಕಡ್ಡಿತೆಗೆದು ಗುಡ್ಡ ಮಾಡಿದ ಹಾಗೆ ಕೆಲಸದಲ್ಲಿ ಚಿಕ್ಕ ಚಿಕ್ಕ ತಪ್ಪುಗಳನ್ನು ದೊಡ್ಡದಾಗಿ ಬಿಂಬಿಸುವುದು. ಗುಂಪಿನಲ್ಲಿದ್ದಾಗ ಉದ್ದೇಶಪೂರ್ವಕವಾಗಿ ನಗಣ್ಯ ಮಾಡುವುದು….
ಸುಮಾವೀಣಾ ಬರೆಯುವ “ನುಡಿನಲಿವು” ಅಂಕಣದಲ್ಲಿ ಹೊಸ ಬರಹ
ಒಮ್ಮೆ ಸುಜಾತ ತಮ್ಮ ಗೆಳತಿಯರೊಂದಿಗೆ ಫೋಟೊಗಳನ್ನು ತೆಗೆಸಿಕೊಂಡು ಅವನ್ನೆ ಖುಷಿಯಿಂದ ನೋಡುತ್ತಿದ್ದರು. ಅವೇ ಫೋಟೊಗಳಲ್ಲಿ ಅವರ ಸಹೋದ್ಯೋಗಿಯೊಬ್ಬರು ಕೆಟ್ಟದಾಗಿ ಮುಖಮಾಡಿ ಮುಖ ತಿರುಗಿಸುತ್ತಿರುವುದನ್ನೂ ಗಮನಿಸಿ ಕೋಪ ಮತ್ತು ಬೇಸರವನ್ನು ಒಟ್ಟಿಗೆ ಅನುಭವಿಸಿದರು.
ಭವಾನಿ ಕಾಲೇಜೊಂದರ ಶಿಸ್ತಿನ ಉಪನ್ಯಾಸಕಿ. ಅವರ ಸಹೋದ್ಯೋಗಿ ಅವರ ಎದುರಲ್ಲಿ ವಿದ್ಯಾರ್ಥಿಗಳನ್ನು ಬೈದಂತೆ ನಟಿಸಿ ಭವಾನಿ ಇಲ್ಲದಾಗ ಅದೇ ವಿದ್ಯಾರ್ಥಿಗಳೊಂದಿಗೆ ಭವಾನಿಯನ್ನೆ ಗೇಲಿಮಾಡಿಕೊಂಡು ನಗುತ್ತಿದ್ದರು.

ಸವಿತ ಕೆಲಸದಲ್ಲಿ ಕಟ್ಟು ನಿಟ್ಟು ಅವರ ಪಾಡಿಗೆ ಅವರು ಕೆಲಸ ಮಾಡುತ್ತಿದ್ದಾಗ ಅವರ ಸಹೋದ್ಯೋಗಿಯೊಬ್ಬರು ಅವರ ಬೆನ್ನ ಹಿಂದೆ ಏನು ಮಾಡುತ್ತಾರೆ ಎಂದು ನಿಂತುನೋಡಿ ಇತರರಲ್ಲಿ ಗುಸು ಗುಸು ಮಾಡುತ್ತಿದ್ದರು.
ವೀಣಾಗೆ ಚಿನ್ನದ ಕಿವಿಯೋಲೆಗಳ ಕ್ರೇಜ್! ದಿನವು ಕಿವಿಯೋಲೆಗಳನ್ನು ಬದಲಿಸಿಕೊಂಡು ಬರುತ್ತಿದ್ದುದನ್ನು ಶೋಭ ಗಮನಿಸಿ ಕಿವಿಯೋಲೆಗಳು ತುಂಬಾ ಚೆನ್ನಾಗಿವೆ ಎಲ್ಲಾ ಚಿನ್ನದ್ದ? ಎಂದು ಪ್ರಶಂಸೆಯ ಸಂಗಡ ಅಪಹಾಸ್ಯ ಮಾಡುತ್ತಿದ್ದರು.
ಹೀಗೆ ಹೇಳಿಕೊಳ್ಳಲಾಗದ ಅನುಭವಿಸಲಾಗದ ದ್ವಂದ್ವವನ್ನು ಅನೇಕ ಸಂದರ್ಭಗಳಲ್ಲಿ ಹೆಣ್ಣು ಮಕ್ಕಳು ಅನುಭವಿಸುತ್ತಿರುತ್ತಾರೆ. ಇದೇ ಪರೋಕ್ಷ ಹೀಯಾಳಿಸುವಿಕೆ, ಮುಟ್ಟಿ ಮಾತನಾಡಿಸಿದ ಹಾಗೂ ಅಗಬೇಕು ಒಂದು ಜೋರಾದ ಪೆಟ್ಟನ್ನು ನೀಡಿದ ಹಾಗೂ ಅಗಬೇಕು ಎನ್ನುವ ಮನೋಭಾವ. ನೇರವಾಗಿ ಏನನ್ನೂ ಹೇಳುವುದಿಲ್ಲ ಪರೋಕ್ಷವಾಗಿ ಸೂಚ್ಯವಾಗಿ ಆಂಗಿಕ ಸಂಜ್ಞೆಯ ಮೂಲಕ ಹೇಳುವುದು. ಬೇಕಂತಲೆ ಸಿಟ್ಟುಬರುವಂತೆ ಮಾಡಿ ತಾವು ಸೌಮ್ಯವಾಗಿಬಿಡುವುದು. ಕಡ್ಡಿತೆಗೆದು ಗುಡ್ಡ ಮಾಡಿದ ಹಾಗೆ ಕೆಲಸದಲ್ಲಿ ಚಿಕ್ಕ ಚಿಕ್ಕ ತಪ್ಪುಗಳನ್ನು ದೊಡ್ಡದಾಗಿ ಬಿಂಬಿಸುವುದು. ಗುಂಪಿನಲ್ಲಿದ್ದಾಗ ಉದ್ದೇಶಪೂರ್ವಕವಾಗಿ ನಗಣ್ಯ ಮಾಡುವುದು…. ಅಧಿಕಾರಿಗಳಾದರೆ ಪ್ರಮುಖ ಕೆಲಸಗಳನ್ನು ಕುತ್ತಿಗೆಗೆ ಬರುವವರೆಗೂ ಹೇಳದೆ ಜಾಣ ಮರೆವು ತೋರಿಸುವುದು. ಪರಸ್ಪರ ಇಬ್ಬರು ಮಾತನಾಡುತ್ತಿದ್ದಾಗ ಬೇರೆ ವಿಚಾರಗಳು ಇತರರಿಗೆ ಕೇಳುವಂತೆ ಪ್ರಶಂಸೆಯನ್ನು ಯಾರಿಗು ಕೇಳಿಸದಂತೆ ಕುಹಕವನ್ನು ಆಡಿ ಮುಗಿಸುವುದು. ಬಳಿಕ ಏನೂ ಅರಿಯದವರಂತೆ ನಾಟಕವಾಡುವುದು ಇವೆಲ್ಲಾ ಪರೋಕ್ಷ ತೆಗಳುವವರು, ಬೆನ್ನ ಹಿಂದೆ ಮಾತನಾಡುವವರ ಲಕ್ಷಣಗಳು.

ಹಾಗಿದ್ದರೆ ಹೆಣ್ಣು ಮಕ್ಕಳು ಇಂಥ ವ್ಯಂಗ್ಯಗಳನ್ನು ಕೇಳಿಸಿಕೊಂಡು, ಆಡಿಸಿಕೊಂಡು ಸುಮ್ಮನಾಗಬೇಕೆ? ಇಲ್ಲ ಜಗಳವಾಡಬೇಕೆ? ಇಲ್ಲ ಸ್ಟೇಟಸ್ ವಾರ್ ಮಾಡಬೇಕೇ? ಇಲ್ಲ! ಖಂಡಿತಾ ಇಲ್ಲ! ಹಾಗಿದ್ದರೆ ಮಾಡಬಹುದಾದರೂ ಏನು ಎಂದರೆ ದುಷ್ಟರಿಂದ ದೂರ ಸರಿ ಅನ್ನುವ ಹಾಗೆ ಅಂಥವರಿಂದ ಅಂತರ ಕಾಯ್ದುಕೊಳ್ಳುವುದು. ಅವರು ತಾಳ್ಮೆಯನ್ನು ಪರೀಕ್ಷೆ ಮಾಡಲೆಂದೇ ಪ್ರಯತ್ನಿಸುತ್ತಿದ್ದಾರೆ ಎಂದು ಅರ್ಥವಾದಾಗ ನಾವು ನೇರವಾಗಿ ‘ನನಗೆ ಅರ್ಥವಾಗಲಿಲ್ಲ! ಕ್ಷಮಿಸಿ! ಇನ್ನೊಮ್ಮೆ ಹೇಳಿ ಎಂದು ಶಾಂತಿಯಿಂದ ಪ್ರತಿಕ್ರಿಯಿಸಿ ಅವರ ತಂತ್ರವನ್ನು ನಿಷ್ಕ್ರಿಯಗೊಳಿಸುವುದು. ಅವರ ಯಾವ ಹೊಗಳಿಕೆಗೂ ಹಿಗ್ಗದೆ ಅವರ ಪುಕ್ಕಟೆ ಅನುಕಂಪಕ್ಕೆ ಮಾರುಹೋಗದೆ ಯಾವ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳದೆ ಕೃತಕ ನಗುವಿನೊಂದಿಗೆ ಸುಮ್ಮನಾಗುವುದು ಸರಿಯಾದ ಕ್ರಮ. ಇನ್ನು ಅವರ ಉಪಟಳ ಹೆಚ್ಚಾದರೆ “ಮಾತು ಇಷ್ಟವಾಗಲಿಲ್ಲ” ಎಂದು ನೇರ ಹೇಳುವುದು. ನೇರಸಂವಹನಕ್ಕೆ ಬದಲಾಗಿ ಅವರು ಪರೋಕ್ಷವಾಗಿ ಮಾತಿಗಿಳಿದರೆ ನಾವು ನೇರ ಸಂವಾದಕ್ಕೆ ಬರುವುದು. ಒಟ್ಟಿನಲ್ಲಿ ಪರೋಕ್ಷ ಹೀಯಾಳಿಕೆಯನ್ನು ಉದಾಸೀನ ಮಾಡಿ ಗಂಭೀರವಾಗಿ ಪರಿಗಣಿಸದೆ ಸ್ಥಿರ ಮನಸ್ಥಿತಿ ಇರಿಸಿಕೊಂಡು ಸಂತೋಷದಿಂದಿರೋಣ! ಎಲ್ಲಾ ಸಂಚನೆಗಳನ್ನು ಬಿಡಿಸಿಕೊಳ್ಳಲು ಇದೆ ಪರಿಹಾರ ಮಾರ್ಗ!

ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’ ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.

