ಬದುಕು ಎಂದರೆ ಎಲ್ಲರಿಗೂ ಒಂದೇ ರೀತಿಯ ಪಯಣವಲ್ಲ. ಕೆಲವರಿಗೆ ಅದು ಸಾಧನೆಯ ಮಾರ್ಗವಾಗಬಹುದು; ಕೆಲವರಿಗೆ ಅದು ಸಹನೆಯ ಪರೀಕ್ಷೆಯಾಗಬಹುದು. ‘ಗ್ಲಾನಿ’ಯ ಮಹಾಲಕ್ಷ್ಮಿ ಮತ್ತು ಅಂಬಾಬಾಯಿ ಈ ಸಹನೆಯ ಪ್ರತಿಮೆಗಳು. ಶಿವು ಆ ಸಹನೆಯ ಸಾಕ್ಷಿ. ಅವರ ಬದುಕಿನಲ್ಲಿ ಜಯವಿಲ್ಲದಿದ್ದರೂ, ಒಂದು ಗಂಭೀರವಾದ ಅರ್ಥವಿದೆ. ಆ ಅರ್ಥವೇ ಈ ಕಾದಂಬರಿಯ ಜೀವಾಳ.
ಅರುಣಕುಮಾರ ಹಬ್ಬು ಕಾದಂಬರಿ “ಗ್ಲಾನಿ” ಕುರಿತು ನಾರಾಯಣ ಯಾಜಿ ಬರಹ
ಹಿರಿಯ ಪತ್ರಕರ್ತರಾಗಿರುವ ಅರುಣಕುಮಾರ ಹಬ್ಬು ಅವರು ಸಾಹಿತ್ಯದಲ್ಲಿಯೂ ತಮ್ಮದೇ ಆದ ಶೈಲಿಯನ್ನು ರೂಢಿಸಿಕೊಂಡವರು. ನಿರಂತರವಾಗಿ ಸಮಾಜದ ಸಂವೇದನೆಗೆ ತನ್ನದೇ ಆದ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಂದಿಸುತ್ತಲೇ ಇರುತ್ತಾರೆ. ಅವರ ಆತ್ಮಕಥೆ “ಬೊಗಸೆ ನೀರು” ಸತ್ಯವಂತರಾಗಿ ಬದುಕಿದ ತಂದೆ ನಡುವಯಸ್ಸಿನಲ್ಲಿಯೇ ಮೃತರಾದಾಗ ಅನಾಥನಾಗಿ ತಾಯಿಯೂ ಇಲ್ಲದೆ ಜೀವಿಸಬೇಕಾದ ಅನಾಥ ಬಾಳನ್ನು ಆರ್ದ್ರವಾಗಿ ಚಿತ್ರಿಸಿದ್ದಾರೆ. ಹಾಗಂತ ಈ ಆತ್ಮಕಥೆಯಲ್ಲಿ ಅವರು ಅಂಥ ಅಸಹಾಯಕ ಬದುಕಿನೊಂದಿಗೆ ಸಾಗುತ್ತಲೇ ತಮ್ಮ ಬದುಕನ್ನು ಕಟ್ಟಿಕೊಂಡು ಬಂದ ಕಥೆಯನ್ನು ಚನ್ನಾಗಿ ನಿರೂಪಿಸಿದ್ದಾರೆ. ಸುಮಾರು ಅದೇ ಜಾಡಿನಲ್ಲಿ ಸಾಗುವ “ಗ್ಲಾನಿ” ಸಹ ಆತ್ಮಕಥೆಯಲ್ಲಿ ಮರೆಯಲ್ಲಿರಬಹುದಾದ ಆದರೆ ಹೇಳಲೇ ಬೇಕೆಂದು ಅನಿಸಿದ ಅವರ ಭಾವನೆಗಳನ್ನು ಇನ್ನೊಂದು ರೀತಿಯಲ್ಲಿ ಅಭಿವ್ಯಕ್ತಿಸಿದೆ ಎನ್ನಬಹುದು.
‘ಗ್ಲಾನಿ’ ಕಥೆಯ ಅನುಭವವನ್ನು ನೀಡುವುದಿಲ್ಲ; ಅದು ಓದುಗರ ಮನಸ್ಸಿನೊಳಗೆ ನಿಧಾನವಾಗಿ ನೆಲೆಸಿಕೊಳ್ಳುವ ಒಂದು ಜೀವನದ ವ್ಯಥೆಯನ್ನು ಉಂಟುಮಾಡುತ್ತದೆ. ಒಬ್ಬ ಸಂವೇದನಾಶೀಲ ಲೇಖಕ ಬದುಕಿನ ಅತಂತ್ರತೆಯನ್ನು ಹೇಗೆ ಕಲಾತ್ಮಕವಾಗಿ ಹಿಡಿದಿಡಬಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗುತ್ತದೆ. ಹಬ್ಬು, ತಮ್ಮ ಜೀವನಾನುಭವದ ಗಾಢತೆಯನ್ನು ಈ ಕೃತಿಯಲ್ಲಿ ಸಹಜವಾಗಿ ಹೊರಹಾಕಿದ್ದಾರೆ. ಹಬ್ಬು ಅವರು ತಮ್ಮ ಪತ್ರಿಕೋದ್ಯಮದ ವಸ್ತುನಿಷ್ಠ ದೃಷ್ಟಿಯನ್ನು ಸಾಹಿತ್ಯದ ಸಂವೇದನೆಯೊಂದಿಗೆ ಬೆರೆಸಿ ಕಟ್ಟಿಕೊಟ್ಟ ‘ಗ್ಲಾನಿ’, ಸಮಾಜದ ಕಣ್ಣಿಗೆ ಕಾಣದ, ಆದರೆ ಮೌನವಾಗಿ ರೋಧಿಸುತ್ತಿರಬಹುದಾದ ಅನೇಕ ಇಂಥ ಜೀವಿಗಳ ‘ನಿರೀಕ್ಷೆ’ ಮತ್ತು ‘ನಿಸ್ಸಹಾಯಕತೆ’ಯನ್ನು ಬಿಚ್ಚಿಡುತ್ತದೆ.

(ಅರುಣಕುಮಾರ ಹಬ್ಬು)
‘ಗ್ಲಾನಿ’ ಎಂದರೆ ಹತಾಶೆ ಅಥವಾ ಮನಸ್ಸಿನ ತೊಳಲಾಟ. ಈ ಕಾದಂಬರಿಯಲ್ಲಿ ಮೂರು ರೀತಿಯ ಗ್ಲಾನಿಗಳಿವೆ. ಮೊದಲನೆಯದು, ಸಂಸಾರದ ನೊಗವನ್ನು ಹೊರುವ ಬದಲು ಅಲೆಮಾರಿತನಕ್ಕೆ ಶರಣಾದ ಶಂಭುವಿನ ಅತಂತ್ರ ಸ್ಥಿತಿ. ಎರಡನೆಯದು, ಗಂಡನ ದಾರಿಯನ್ನೇ ಕಾಯುತ್ತಾ ಕಮರಿ ಹೋದ ಮಹಾಲಕ್ಷ್ಮಿಯರ ಮೌನ ರೋಧನ. ಮೂರನೆಯದು, ಎಲ್ಲವನ್ನೂ ಕಂಡುಂಡು ಎಲ್ಲದರಿಂದಲೂ ಬಿಡಿಸಿಕೊಳ್ಳಲು ಹೊರಟ ಶಿವು ಅನುಭವಿಸುವ ಅತೀಂದ್ರಿಯ ಗ್ಲಾನಿ. ಲೇಖಕರು ಈ ಮೂವರ ಬದುಕಿನ ರೀತಿಯನ್ನೂ ಅತ್ಯಂತ ನಾಜೂಕಾಗಿ ಹೆಣೆದಿದ್ದಾರೆ.
ಕಾದಂಬರಿಯ ಕಥಾನಾಯಕ ಶಿವು. ಅವನ ಜೀವನವೇ ಈ ಕಥೆಯ ಬೆನ್ನೆಲುಬು. ಗಮ್ಯವಿಲ್ಲದ ಪಯಣದಂತೆ ಆರಂಭವಾಗುವ ಅವನ ಬದುಕು, ಓದುಗರನ್ನು ನಿಧಾನವಾಗಿ ಒಂದು ಅಂತರಂಗದ ಹುಡುಕಾಟದತ್ತ ಕರೆದೊಯ್ಯುತ್ತದೆ. ತಂದೆಯ ನಿರ್ಲಕ್ಷ್ಯದಿಂದ ಮನೆ, ಆಸ್ತಿ ಮತ್ತು ತಾಯಿಯ ಆಶ್ರಯವನ್ನು ಕಳೆದುಕೊಂಡ ಶಿವು, ಅಕ್ಷರಶಃ ಅನಾಥನಾಗಿ ಅಲೆದಾಡುತ್ತಾನೆ. ಈ ಅಲೆಮಾರಿ ಜೀವನವೇ ಅವನನ್ನು ಅಂಬಾಬಾಯಿ ಎಂಬ ಮತ್ತೊಂದು ತಾಯಿಯ ಬಳಿ ಕರೆದೊಯ್ಯುತ್ತದೆ. ಇಲ್ಲಿ ಕಥೆಯ ಮುಖ್ಯ ತಂತ್ರವೇ ಸ್ಮರಣೆ. ಶಿವು ತನ್ನ ಭೂತಕಾಲವನ್ನು ನೆನೆದು ಹೇಳುವಾಗ, ಓದುಗನು ಎರಡು ಕಾಲಗಳ ನಡುವೆ ಸಂಚರಿಸುತ್ತಾನೆ. ಒಂದು ಕಳೆದ ಕಾಲ, ಮತ್ತೊಂದು ನಡೆಯುತ್ತಿರುವ ಕಾಲ. ಇನ್ನೊಂದು ಮಹತ್ವದ ಅಂಶ ಈ ಕಾದಂಬರಿಯಲ್ಲಿರುವುದು ಇರುವುದು ಗಂಡಸರ ಬೇಜವಾಬ್ದಾರಿತನ ಮತ್ತು ಅದನ್ನು ಸದ್ದಿಲ್ಲದೆ ಸಹಿಸುವ ಹೆಣ್ಣಿನ ತಾಳ್ಮೆಯಲ್ಲಿ. ಶಂಭು ಎಂಬ ಪಾತ್ರ ಮನುಷ್ಯನ ಮೂಲ ಪ್ರವೃತ್ತಿಯಾದ ‘ಅಲೆಮಾರಿತನ’ದ ಸಂಕೇತ. ನಾಗರಿಕ ಸಮಾಜ ಕಲಿಸಿದ ಮದುವೆ, ಸಂಸಾರ ಎಂಬ ಚೌಕಟ್ಟುಗಳು ಅವನಿಗೆ ಸೆರೆಮನೆಯಂತೆ ಕಾಣುತ್ತವೆ. ತಾನು ಹುಟ್ಟಿಸಿದ ಮಕ್ಕಳ ಬಗೆಗೂ ಮಮಕಾರವಿಲ್ಲದೆ ಹೊರನಡೆಯುವ ಅವನ ನಡವಳಿಕೆ ಜುಗುಪ್ಸೆ ಹುಟ್ಟಿಸಿದರೂ, “ಮನುಷ್ಯ ಮೂಲತಃ ಪ್ರಾಣಿ” ಎಂಬ ಸತ್ಯವನ್ನು ನಮಗೆ ರಾಚುವಂತೆ ಮಾಡುತ್ತದೆ. ಮಹಾಲಕ್ಷ್ಮಿ ಮತ್ತು ಅಂಬಾಬಾಯಿ – ಇವರಿಬ್ಬರೂ ಕಾದಂಬರಿಯ ಎರಡು ಕಣ್ಣುಗಳಿದ್ದಂತೆ. ಒಬ್ಬಳು ಗಂಡನಿಗಾಗಿ ಕಾಯುವ ಜೀವವಾದರೆ, ಇನ್ನೊಬ್ಬಳು ಕಳೆದುಹೋದ ಮಗನಿಗಾಗಿ ಹಂಬಲಿಸುವವಳು. ಅಂಬಾಬಾಯಿ ಅಪರಿಚಿತ ಶಿವುವನ್ನು ತನ್ನ ಮಗ ‘ಮನೋಜ್’ ಎಂದು ಸ್ವೀಕರಿಸುವಲ್ಲಿ ಇರುವ ತಾಯ್ತನದ ಹಸಿವು ಮತ್ತು ಲೋಕದ ರೂಢಿಯನ್ನು ಮೀರಿ ನಿಲ್ಲುವ ಅವಳ ಧೈರ್ಯ ಆಶ್ಚರ್ಯಕರವಾಗಿದೆ. ಮಹಾಲಕ್ಷ್ಮಿ ಮತ್ತು ಅಂಬಾಬಾಯಿ. ಈ ಇಬ್ಬರು ಸ್ತ್ರೀಯರು ಕೇವಲ ಪಾತ್ರಗಳಲ್ಲ; ಅವರು ಎರಡು ವಿಭಿನ್ನ ನೋವಿನ ರೂಪಗಳು. ಮಹಾಲಕ್ಷ್ಮಿಯ ಬದುಕು ಗಂಡನಿಗಾಗಿ ನಿರಂತರ ಕಾಯುವಿಕೆಯಾಗಿದೆ. ಶಂಭು ಎಂಬ ಅವಳ ಗಂಡನು ಜವಾಬ್ದಾರಿಯನ್ನು ಅರಿಯದ ಅಲೆಮಾರಿ. ಅವನು ಮನೆಯಲ್ಲಿದ್ದರೂ ಇಲ್ಲದಿದ್ದರೂ ಅವಳ ಬದುಕಿನಲ್ಲಿ ಸ್ಥಿರತೆ ಇಲ್ಲ. ಅವನ ಬರುವಿಕೆ ತಾತ್ಕಾಲಿಕ, ಅವನ ಹೊರಟುಹೋಗುವಿಕೆ ಶಾಶ್ವತ. ಆದರೂ ಮಹಾಲಕ್ಷ್ಮಿಯ ನಿರೀಕ್ಷೆ ಕಡಿಮೆಯಾಗುವುದಿಲ್ಲ. ಈ ನಿರೀಕ್ಷೆ ಅವಳಿಗೆ ಸಂತೋಷವನ್ನೂ ನೀಡುವುದಿಲ್ಲ; ಆದರೆ ಅದು ಅವಳ ಬದುಕನ್ನು ಮುಂದುವರಿಸುವ ಏಕೈಕ ಶಕ್ತಿ.
ಇನ್ನೊಂದೆಡೆ ಅಂಬಾಬಾಯಿ ತನ್ನ ಮಗನಿಗಾಗಿ ಕಾಯುತ್ತಾಳೆ. ತನ್ನಿಂದ ದೂರವಾದ ಮಗನ ನೆನಪನ್ನು ಹಿಡಿದುಕೊಂಡು ಬದುಕುವ ಅವಳು, ಶಿವುವಿನಲ್ಲಿ ತನ್ನ ಮಗನ ಪ್ರತಿಬಿಂಬವನ್ನು ಕಾಣುತ್ತಾಳೆ. ಈ ಸಂಬಂಧ ರಕ್ತಸಂಬಂಧವಲ್ಲ; ಅದು ಮಮತೆಯ ಸಂಬಂಧ. ಆದರೆ ಸಮಾಜ ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ. ಇಲ್ಲಿ ಕಾದಂಬರಿಕಾರರು ಒಂದು ಕಠಿಣ ಸತ್ಯವನ್ನು ತೋರಿಸುತ್ತಾರೆ—ಮಾನವೀಯ ಸಂಬಂಧಗಳ ಪವಿತ್ರತೆಯಿಗಿಂತ ಸಮಾಜದ ಸಂಶಯವೇ ಹೆಚ್ಚು ಬಲವಾಗಿದೆ.
ಶಿವುವಿನ ವರ್ತಮಾನದ ಪಯಣದ ಮೂಲಕ ಭೂತಕಾಲದ ಪುಟಗಳನ್ನು ಬಿಚ್ಚಿಡುವ ತಂತ್ರವು ಕಾದಂಬರಿಯ ಓಘವನ್ನು ಹೆಚ್ಚಿಸಿದೆ. ಹವ್ಯಕ ಭಾಷೆಯ ಸಂಭಾಷಣೆಗಳು ಉತ್ತರ ಕನ್ನಡದ ಹಳ್ಳಿಗಳ ಗದ್ದೆ, ತೋಟ, ಕಾಡುಪ್ರಾಣಿಗಳ ಕೂಗು ಮತ್ತು ಮಳೆಯ ವಾಸನೆಯನ್ನು ಓದುಗರಿಗೆ ತಲುಪಿಸುತ್ತವೆ. ಹಬ್ಬು ಅವರು ಬಳಸುವ ಭಾಷೆ ಪತ್ರಕರ್ತನ ನೇರ ನುಡಿಯಂತಿದ್ದರೂ, ಅದರೊಳಗೆ ಒಬ್ಬ ಕವಿಯ ಸಂವೇದನೆ ಅಡಗಿದೆ.
ಶಂಭು ಎಂಬ ಪಾತ್ರ ಈ ಕಾದಂಬರಿಯ ಮತ್ತೊಂದು ಪ್ರಮುಖ ಅಂಶ. ಅವನ ಅಲೆಮಾರಿ ಜೀವನವನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬ ಪ್ರಶ್ನೆ ಓದುಗರ ಮನಸ್ಸಿನಲ್ಲಿ ಮೂಡುತ್ತದೆ. ಅವನು ಸ್ವಾತಂತ್ರ್ಯವನ್ನು ಹುಡುಕುತ್ತಿದ್ದಾನೆಯೇ, ಅಥವಾ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾನೆಯೇ? ಈ ಪ್ರಶ್ನೆಗೆ ಲೇಖಕರು ನೇರ ಉತ್ತರ ನೀಡುವುದಿಲ್ಲ. ಆದರೆ ಅವನ ಜೀವನದ ಪರಿಣಾಮಗಳು ಸ್ಪಷ್ಟವಾಗುತ್ತವೆ. ಅವನ ನಿರ್ಲಕ್ಷ್ಯದಿಂದ ಮಹಾಲಕ್ಷ್ಮಿಯ ಬದುಕು ದುಃಖದ ಸಂಕೇತವಾಗುತ್ತದೆ, ಮಕ್ಕಳ ಭವಿಷ್ಯ ಅಸ್ಥಿರವಾಗುತ್ತದೆ. ಇಲ್ಲಿ ಒಂದು ಸೂಕ್ಷ್ಮವಾದ ತತ್ತ್ವ ಹೊರಹೊಮ್ಮುತ್ತದೆ, ಒಬ್ಬನ ಸ್ವಾತಂತ್ರ್ಯ ಮತ್ತೊಬ್ಬನ ಬಂಧನವಾಗಬಹುದು.
ಶಿವು ಈ ಕಾದಂಬರಿಯಲ್ಲಿ ಸೇತುವೆಯಂತೆ ಕೆಲಸ ಮಾಡುತ್ತಾನೆ. ಅವನ ಮೂಲಕ ಎರಡು ತಾಯಿ ಹೃದಯಗಳ ನೋವು ಒಂದಾಗುತ್ತದೆ. ಅವನು ಅನುಭವಿಸಿದ ಜೀವನದ ಕಠಿಣತೆ, ಅವನೊಳಗೆ ಒಂದು ವೈರಾಗ್ಯವನ್ನು ಉಂಟುಮಾಡುತ್ತದೆ. ಕೊನೆಯಲ್ಲಿ ಅವನು ಮತ್ತೆ ಹೊರಟುಹೋಗುತ್ತಾನೆ. ನದಿಯ ದೋಣಿಯಲ್ಲಿ ಅವನ ಪಯಣವು ಕೇವಲ ಸ್ಥಳಾಂತರವಲ್ಲ; ಅದು ಒಂದು ಆಧ್ಯಾತ್ಮಿಕ ಸಂಚಲನದ ಸಂಕೇತ. ಅವನು ಬಂಧನಗಳಿಂದ ಮುಕ್ತವಾಗಲು ಹೊರಟಿದ್ದಾನೆಯೇ, ಅಥವಾ ಮತ್ತೊಂದು ಅಲೆಮಾರಿ ಜೀವನದತ್ತ ಸಾಗುತ್ತಿದ್ದಾನೆಯೇ ಎಂಬ ಪ್ರಶ್ನೆಯನ್ನು ಲೇಖಕರು ಓದುಗರಿಗೆ ಬಿಟ್ಟುಕೊಡುತ್ತಾರೆ.
ಈ ಕಾದಂಬರಿಯಲ್ಲಿ ಸಮಾಜದ ಚಿತ್ರಣವೂ ಸ್ಪಷ್ಟವಾಗಿದೆ. ತಾಯಿ ಮತ್ತು ಮಗನ ನಡುವಿನ ಶುದ್ಧ ವಾತ್ಸಲ್ಯವನ್ನೂ ಸಂಶಯದ ಕಣ್ಣಿನಿಂದ ನೋಡುವ ಸಮಾಜ, ಮಾನವೀಯತೆಯ ಮೇಲೆ ತನ್ನದೇ ನಿಯಮಗಳನ್ನು ಹೇರುತ್ತದೆ. ಶಿವು ಮತ್ತು ಅಂಬಾಬಾಯಿಯ ಸಂಬಂಧದ ಮೇಲೆ ಬೀಳುವ ಕಳಂಕ, ಶಿವುವಿನ ಉದ್ಯೋಗ ಕಳೆದುಕೊಳ್ಳುವ ಸ್ಥಿತಿ ಇವೆಲ್ಲವೂ ವ್ಯಕ್ತಿಯ ಸತ್ಯಕ್ಕಿಂತ ಸಮಾಜದ ಊಹೆಗಳು ಹೆಚ್ಚು ಪ್ರಭಾವಶಾಲಿ ಎಂಬುದನ್ನು ತೋರಿಸುತ್ತವೆ. ತಾಯಿ ಮಗನ ನಿರ್ವ್ಯಾಜ ಪ್ರೇಮಕ್ಕೂ ಕಾಮದ ಬಣ್ಣ ಹಚ್ಚುವ ಸಮಾಜದ ಕುರೂಪತೆಯನ್ನು ಲೇಖಕರು ಕಟುವಾಗಿ ಚಿತ್ರಿಸಿದ್ದಾರೆ. ತನ್ನ ಅಸ್ತಿತ್ವಕ್ಕೇ ಧಕ್ಕೆ ಬಂದಾಗ, ಶಿವು ದೋಣಿ ಹತ್ತಿ ಹೊರಡುವುದು ಕೇವಲ ಊರು ಬಿಟ್ಟಿದ್ದಲ್ಲ; ಅದು ಈ ‘ಗ್ಲಾನಿ’ ತುಂಬಿದ ವ್ಯವಸ್ಥೆಯಿಂದ ಆಧ್ಯಾತ್ಮದ ಕಡೆಗೆ ಅಥವಾ ಶಾಶ್ವತ ಸತ್ಯದ ಶೋಧನೆಗೆ ಹೊರಟ ಪಯಣ.
ಭಾಷೆಯ ದೃಷ್ಟಿಯಿಂದಲೂ ‘ಗ್ಲಾನಿ’ ವಿಶೇಷವಾಗಿದೆ. ಉತ್ತರಕನ್ನಡದ ಹವ್ಯಕ ಭಾಷೆಯ ಬಳಕೆ ಕಾದಂಬರಿಗೆ ಒಂದು ನೈಜತೆ ಮತ್ತು ಆಪ್ತತೆಯನ್ನು ನೀಡುತ್ತದೆ. ಗ್ರಾಮೀಣ ಪರಿಸರದ ಚಿತ್ರಣ, ಕಾಡಿನ ಏಕಾಂತ, ಜೀವನದ ಕಠಿಣತೆ, ಇವೆಲ್ಲವೂ ಕಥೆಯೊಂದಿಗೆ ಸಹಜವಾಗಿ ಬೆರೆತು ಹೋಗಿವೆ. ಒಟ್ಟಾರೆ, ‘ಗ್ಲಾನಿ’ ಕಾದಂಬರಿ ಬದುಕಿನ ಸಂಕೀರ್ಣತೆಯನ್ನು ಸೂಕ್ಷ್ಮವಾಗಿ ಅನಾವರಣಗೊಳಿಸುವ ಕೃತಿ. ಇದು ಯಾವುದೇ ತಾತ್ವಿಕ ಘೋಷಣೆಗಳನ್ನು ಮಾಡುವುದಿಲ್ಲ; ಆದರೆ ಓದುಗರ ಮನಸ್ಸಿನಲ್ಲಿ ಮಾನವ ಜೀವನದ ಅರ್ಥ, ಸಂಬಂಧಗಳ ಸತ್ಯ, ನಿರೀಕ್ಷೆಯ ಪಾತ್ರ, ಇವೆಲ್ಲದರ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟಿಸುತ್ತದೆ.
ಬದುಕು ಎಂದರೆ ಎಲ್ಲರಿಗೂ ಒಂದೇ ರೀತಿಯ ಪಯಣವಲ್ಲ. ಕೆಲವರಿಗೆ ಅದು ಸಾಧನೆಯ ಮಾರ್ಗವಾಗಬಹುದು; ಕೆಲವರಿಗೆ ಅದು ಸಹನೆಯ ಪರೀಕ್ಷೆಯಾಗಬಹುದು. ‘ಗ್ಲಾನಿ’ಯ ಮಹಾಲಕ್ಷ್ಮಿ ಮತ್ತು ಅಂಬಾಬಾಯಿ ಈ ಸಹನೆಯ ಪ್ರತಿಮೆಗಳು. ಶಿವು ಆ ಸಹನೆಯ ಸಾಕ್ಷಿ. ಅವರ ಬದುಕಿನಲ್ಲಿ ಜಯವಿಲ್ಲದಿದ್ದರೂ, ಒಂದು ಗಂಭೀರವಾದ ಅರ್ಥವಿದೆ. ಆ ಅರ್ಥವೇ ಈ ಕಾದಂಬರಿಯ ಜೀವಾಳ.
ಈ ಕಾದಂಬರಿಯು ಗಂಡಸರ ಚಂಚಲತೆ ಮತ್ತು ಬೇಜವಾಬ್ದಾರಿತನ ಹೇಗೆ ಸ್ತ್ರೀ ಸಂಕುಲದ ಸಹನೆಯ ಪರಾಕಾಷ್ಠೆಯನ್ನು ಪರೀಕ್ಷಿಸುತ್ತದೆ ಎಂಬುದನ್ನು ಮನಮುಟ್ಟುವಂತೆ ಚಿತ್ರಿಸುತ್ತದೆ. ಸ್ತ್ರೀಯರು ತಮ್ಮಸಹಜಗುಣದಿಂದ ಬದುಕನ್ನು ಸರಿಪಡಿಸಲು ಹವಣಿಸಿದರೆ, ಪುರುಷರ ಅಲೆಮಾರಿ ಗುಣ ಅದನ್ನು ಮತ್ತೆ ಮತ್ತೆ ಕದಡುತ್ತಲೇ ಇರುತ್ತದೆ.

ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ.

