Advertisement
ಅರಾ ಮಿತ್ರ ಸಿಕ್ಕರು!: ಎಚ್. ಗೋಪಾಲಕೃಷ್ಣ ಸರಣಿ

ಅರಾ ಮಿತ್ರ ಸಿಕ್ಕರು!: ಎಚ್. ಗೋಪಾಲಕೃಷ್ಣ ಸರಣಿ

ಇದಕ್ಕಿಂತ ಸುಲಭ ಉಪಾಯ ಒಂದು ನನ್ನ ತಲೆಯಲ್ಲಿದೆ. ಅದೇನಪ್ಪಾ ಅಂದರೆ ಯಾವುದೇ ರಸ್ತೆಯಲ್ಲಿ ಯಾವುದೇ ಗಂಡಸು ಯಾ ಹೆಂಗಸು ಹುಂಜನ ಹಾಗೇ ನಡೆಯುತ್ತಾ ಇದ್ದಾರೆ ಅಂದರೆ ಅವರು ನೂತಕ್ಕೆ ನೂತು ಬರೆಹಗಾರ ಅಂತ. ನೂತಕ್ಕೆ ನೂತು ಅನ್ನುವುದು ಕನ್ನಡ ಅಲ್ಲ, ತಮಿಳು ಇರಬಹುದು. ಆದರೆ ಈಚೆಗೆ ಬರಹದ ಎಫೆಕ್ಟ್ ಹೆಚ್ಚು ಎದ್ದು ಕಾಣಬೇಕು ಎನ್ನುವ ಏಕಮೇವ ಉದ್ದೇಶದಿಂದ ಬೇರೆ ಬೇರೆ ಭಾಷೆಗಳ ಇಂತಹ ಪದಪುಂಜಗಳು ನಮ್ಮಲ್ಲೂ ಹೆಚ್ಚಿವೆ. ಪುರಾವೆ ಬೇಕಾ? ನಮ್ಮ ಪತ್ರಿಕೆ ನೋಡಿ ಅಷ್ಟೇ.. ಕಥೆಗೆ ಕಾಲಿಲ್ಲವಂತೆ, ಅದಕ್ಕೆ ಬರೇ ರೆಕ್ಕೆ ಅಂತೆ!
ಎಚ್.
ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೮೭ನೇ ಬರಹ ನಿಮ್ಮ ಓದಿಗೆ

ಹಿಂದಿನ ಪ್ರಸಂಗದ ಅಂಚಿಗೆ ಹೀಗೆ ಬರೆದಿದ್ದೆ… ಅಯ್ಯೋ ಅದೇನೂ ಕಷ್ಟ ಇಲ್ಲ.. ನೋಡಿ ಇವರು ಇದ್ದ ಹಾಗೇ ಅವರೂ ಇರೋದು. ಇವರಿಗಿಂತ ಎತ್ತರ ಸ್ವಲ್ಪ ಕಡಿಮೆ, ಕೊಂಚ ಎರಡು ಸುತ್ತು ಕಲರ ಹೆಚ್ಚು.. ಇವರ ಹಾಗೆ ಗಂಟು ಮುಖ ಅಲ್ಲ ಸ್ಮೈಲಿಂಗ್ ಫೇಸು……” ಅಂತ ವಿವರಣೆ ಕೊಟ್ಟರು. ಹೇಳಿ ಕೇಳಿ ಕಾಲೇಜು ಮೇಷ್ಟ್ರು, ಬಾಯಿ ತೆರೆದರೆ ಒಂದು ಗಂಟೆ ಪಿರಿಯಡ್ ಪಾಠ ಮಾಡಿದ ಹಾಗೆ ಮಾತಾಡಬೇಕೇನೋ ಅನಿಸಿತು. ಇವರ ಹಾಗೆ ಅವರು ಇರೋದು ಅಂತ ಪಕ್ಕದವರನ್ನು ತೋರಿಸಿದ್ದರು ನೋಡಿ ಅವರನ್ನು ನೋಡಿದೆ…

ನನ್ನ ತಲೆಯಲ್ಲಿದ್ದ ಮಿತ್ರ ಅವರಿಗೂ ಎದುರು ಅವರ ಹಾಗೇ ಇದ್ದಾರೆ ಅಂತ ಹೇಳಿದ್ದ ವ್ಯಕ್ತಿಗೂ ಅಜಗಜಾಂತರ!
ಮಿತ್ರ ಅವರನ್ನು ಮೊದಲ ಬಾರಿ ಭೇಟಿಮಾಡಿದ ಕತೆಯನ್ನು ಚಿಕ್ಕದಾಗಿ ಚೊಕ್ಕದಾಗಿ ಕೆಲವೇ ಪುಟ್ಟ ಪುಟ್ಟ ವಾಕ್ಯದಲ್ಲಿ ಹೇಳಿ ಮುಗಿಸಿ ಮುಂದಕ್ಕೆ ಓಡಿಬಿಡೋಣ ಅಂತ ಪ್ಲಾನಿಸಿದ್ದೆ. ಆದರೆ ಪ್ಲಾನ್ ಪೂರಾ ಉಲ್ಟಾ ಹೊಡೆಯಿತು. ತಾನೊಂದು ಬಗೆದರೆ ದೈವ ಮತ್ತೊಂದು ಬಗೆದೊಡಮ್.. ಎಂದು ಕವಿ ರಾಘವಾಂಕ ಅವನ ಒಂದು ಮಹಾಕಾವ್ಯದಲ್ಲಿ ಹೇಳಿದ್ದಾನೆ ನೋಡಿ, ಹಾಗಾಯಿತು. ನಾವೇನೋ ಅಂದುಕೊಳ್ಳೋದು ಮೇಲಿರುವ ದೇವರು ಮತ್ತೇನೋ ಅಂದುಕೊಳ್ಳುವುದು. ಕೊನೆಗೆ ಆ ಜಗನ್ನಿ ಯಾಮಾಕ ನಡೆಸಿದ ಹಾಗೆ ನಡೆವುದು.. ಇದು ಹುಲು ಮಾನವರ ರೀತಿ ನೀತಿ ಅಂತೆ! ಅದರಿಂದ ಕತೆ ಮುಂದುವರೆಯುತ್ತೆ. ಮುಂದಿನ ಎಪಿಸೋಡ್ ನಲ್ಲಿ ಇದರ ಉಳಿದ ಕತೆಯನ್ನು ಬಿಸಿಬಿಸಿಯಾಗಿ ಹರವಲು ತಮ್ಮ ಅನುಮತಿ ಇರಲಿ..

ಇಷ್ಟು ಹೇಳಿ ಇನ್ನೂ ಇದೆ ಅಂದಿದ್ದೆ ತಾನೇ? ಈಗ ನಿಮ್ಮ ಅನುಮತಿಯಿಂದ ಮುಂದುವರೆಯಲೇ…
ನೋಡಿ ಇವರ ಹಾಗೇ ಇದ್ದಾರೆ ಅಂತ ಕನ್ನಡ ರೂಮಿನಲ್ಲಿ ಕೂತಿದ್ದವರು ಹೇಳಿದರು ಅಂದೆ. ಇವರ ಹಾಗೆ ಅವರು ಇರೋದು ಅಂತ ಪಕ್ಕದವರನ್ನು ತೋರಿಸಿದ್ದರು ನೋಡಿ ಅವರನ್ನು ನೋಡಿದ್ದೆ . ನನ್ನ ತಲೆಯಲ್ಲಿದ್ದ ಮಿತ್ರ ಅವರಿಗೂ ಎದುರು ಅವರ ಹಾಗೇ ಇದ್ದಾರೆ ಅಂತ ಹೇಳಿದ್ದ ವ್ಯಕ್ತಿಗೂ ಅಜಗಜಾಂತರ! ಅಜಾಗಜಾತರ ಹೇಗೆ ಅಂದರೆ ಎದುರು ಅವರು ತೋರಿಸಿದ ವ್ಯಕ್ತಿ ನೆತ್ತಿ ಮೇಲೆ ಔಷಧಕ್ಕೂ ಸಹ ಒಂದೇ ಒಂದು ಕೂದಲು ಇರಲಿಲ್ಲ ಮತ್ತು ತುಂಬಾ ಪೀಚಲು ದೇಹ. ನನ್ನ ತಲೆಯಲ್ಲಿ ಮೂಡಿಸಿಕೊಂಡಿದ್ದ ಮಿತ್ರ ಅವರ ಬೊಂಬೆಗೆ ತಲೆ ತುಂಬಾ ಗುಂಗುರು ಕೂದಲು ಮತ್ತು ಕೊಂಚ ದಷ್ಟ ಪುಷ್ಟ ದೇಹ. ತೋರಿಸಿದವರು ಹೇಗಿದ್ದರು ಅಂದರೆ ಈಚೆಗೆ ನಿಮ್ಮ ಮನೆ ಹತ್ತಿರದ ಬಟ್ಟೆ ಅಂಗಡಿಗೆ ಹೋಗಿದ್ದು ನೆನೆಸಿಕೊಳ್ಳಿ. ಅಲ್ಲಿ ಶೋ ಕೇಸ್ ನಲ್ಲಿ ಕೆಲವು ಬೊಂಬೆ ಇಡುತ್ತಾರೆ, ಗಮನಿಸಿದ್ದೀರಿ ತಾನೇ? ಪ್ಲಾಸ್ಟಿಕ್ ಬೊಂಬೆಗಳು, ಗಂಡಸಿನ ರೂಪ ಎಂದರೆ ಬೋಳು ತಲೆ ಮತ್ತು ಸಣ್ಣ ಹೊಟ್ಟೆ ಅದಕ್ಕೆ ಸರಿಹೊಂದುವ ಸಣ್ಣ ಸಣ್ಣ ತೆಳುವಿನ ಕೈ ಕಾಲು! ಹೆಣ್ಣು ಬೊಂಬೆಗೆ ಕೆಲವು ಸಲ ಬಾಬರಿಸಿದ ಕೂದಲು..! ಬಾಬರಿಸಿದ ಅಂದರೆ ಬಾಬ್ ಮಾಡಿರುವ ಎಂದು ಅರ್ಥ! ಆ ಬೊಂಬೆಗಳಿಗೂ ತೆಳು ಕೈ ಕಾಲು. ಇದು ಯಾಕೆ ಅಂದರೆ ನಾವು go slim ಯುಗ ಪ್ರವೇಶ ಮಾಡಿದ್ದೆವು.

ಇಂತಹ ಒಂದು ಬೊಂಬೆ ಮನಸಿನಲ್ಲಿ ಮೂಡಿತು. ಅದಕ್ಕೆ ನೀಲಿ ಬಣ್ಣದ ಪ್ಯಾಂಟ್, ಬಿಳಿಯ ಬಣ್ಣದ ಬುಷ್ ಶರ್ಟ್ ತೊಡಿಸಿದೆ. ರಸ್ತೆಯಲ್ಲಿ ಓಡಾಡುತ್ತಿರುವ ಜನರಲ್ಲಿ ನನ್ನ ಸ್ಪೆಷಫಿಕೇಷನ್ ಗೆ ಸೂಟಾಗುವ ಮನುಷ್ಯನನ್ನು ಕಣ್ಣು ಅರಸಲು ಶುರುವಾಯಿತು. ಈಗ ಹೋಮ್ ಸೈನ್ಸ್ ಕಾಲೇಜಿನಿಂದ ಆಚೆ ಬಂದಿದ್ದೆ. ಉದ್ದಕ್ಕೂ ನಡೆದರೆ ಒಂದು ವಿ ಇಂಗ್ಲಿಷ್ ವಿ ಆಕಾರದ ಕವಲೊಡೆಯುವ ರಸ್ತೆ ಬಲ ಪಕ್ಕದಲ್ಲಿ ರಸ್ತೆಯಲ್ಲಿ ಮೊದಲು ತಿರುಗಿದರೆ ಸೆಂಟ್ರಲ್ ಕಾಲೇಜು, ಅದರ ಎದುರು ಆಗಲೇ ಹೇಳಿದ ಹಾಗೆ GAS ಕಾಲೇಜು. ತಿರುಗದೆ ಮುಂದೆ ನಡೆದರೆ ಮೂಲೆಯಲ್ಲಿ UVCE ಅಂದರೆ ಯೂನಿವರ್ಸಿಟಿ ವಿಶ್ವೇಶ್ವರಯ ಕಾಲೇಜ್ ಒಫ್ ಎಂಜಿನಿಯರಿಂಗ್. ಎಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ಡಿಪಾರ್ಟ್ಮೆಂಟ್ ಇರಲಾರದು ಎನ್ನುವ ಪ್ರಬಲ ನಂಬಿಕೆಯ ಮೇಲೆ ಸೆಂಟ್ರಲ್ ಕಾಲೇಜಿನತ್ತ ಕಾಲು ಹಾಕಿದೆ!

ಹಾಗೇ ಎದುರು ಬರುವ ಮುಂದೆ ಹೋಗುವ ಜನರನ್ನೂ ಗಮನಿಸುತ್ತಾ ಹೆಜ್ಜೆ ಹಾಕಿದೆ. ನನ್ನ ತಲೆಯಲ್ಲಿ ಆಗಿನ ಖ್ಯಾತ ಇಂಗ್ಲಿಷ್ ನಟ ಯುಲ್ ಬ್ರೈನರ್ ಆಕಾರ ಮೂಡಿತ್ತು. ಯಾಕೆ ಅಂದರೇ ಮಿತ್ರಾ ಅವರ ರೂಪು ಬೇಕಿತ್ತಲ್ಲಾ ಅದಕ್ಕೆ. ಆದರೆ ಯುಲ್ ಬ್ರೈನರ್ ನ ಸಿಡುಕು ಮುಖ ಬೇಡ ಅನಿಸಿತಾ? ಇದಕ್ಕೆ ಕಾರಣ ಆಗಿನ ಬರಹಗಾರರು ಯಾರೂ ಸಿಡುಕರು ಅಲ್ಲದಿದ್ದುದು. ಅನಕೃ, ತರಾಸು ಬೀಚಿ ರಾಮಮೂರ್ತಿ.. ಹೀಗೆ ಯಾವುದೇ ಜನಪ್ರಿಯ ಲೇಖಕ ಆಗ ಸಿಡುಕ ಮೂರ್ತಿ ಆಗಿರಲಿಲ್ಲ. ಬದಲಿಗೆ ಹಸನ್ಮುಖಿಗಳು. ಈಗಾದರೆ ಒಂದೇ ಒಂದು ಚುಟಕ ಬರೆದ ಬರಹಗಾರ ಆದರೂ ತಲೆ ತುಂಬಾ ಗರ್ವ ತುಂಬುಕೊಂಡು ಮೈಯೆಲ್ಲಾ ಸಿಡುಕು ಹಬ್ಬಿಕೊಂಡು ಹುಂಜ ನಡೆದ ಹಾಗೆ ನಡೆದಾಡುತ್ತಾನೆ. ಯಾರಾದಾದರೂ ಉದಾಹರಣೆ ಬೇಕಾ? ನೂರುಬರಹಗಾರ ಹುಂಜಗಳ ನೆನಪು ನನಗೆ ನುಗ್ಗಿ ಬರುತ್ತೆ. ಪಾಪ ಅವರ ಹೆಸರುಗಳನ್ನು ಹೀಗೆ ಸಾರ್ವಜನಿಕವಾಗಿ ಹೇಳಿ ಪ್ರಚಾರ ಮಾಡಿ ಸದರಿ ಬರಹಗಾರರ ತೇಜೋವಧೆ ಮಾಡುವ ಅಲ್ಪ ಪ್ರಾಣಿ ನಾನಲ್ಲಾ ಸರ. ಅದರಿಂದ ಹೆಸರು ಹೇಳಲಾರೆ. ಹಾಗೇ ಇನ್ನೊಂದು ಗುಟ್ಟು ಇದು ತಮಗೆ ಹೇಳಬಹುದೊ ಇಲ್ಲವೋ ತಿಳಿಯದು. ಗುಟ್ಟು ಏನಪ್ಪಾ ಅಂದರೆ ಕೆಲವು ಏರಿಯಾ ಇರ್ತಾವಂತೆ. ಅದರಲ್ಲಿ ಈ ಬಡ್ಡಿಂಗ್ ಬರಹಗಾರರು ತುಂಬಿ ತುಳುಕುತ್ತಾರಂತೆ. ಅಲ್ಲಿಗೆ ಹೋಗಿ ಯಾರನ್ನೇ ನೋಡಿದರೂ ಹುಂಜ ಕಂಡ ಹಾಗೇ ಆಗುತ್ತಂತೆ! ಇದು ನನ್ನ ಆಪ್ತ ಹೇಳಿದ್ದು, ಸತ್ಯ ಇದ್ದರೂ ಇರಬಹುದು! ಇದಕ್ಕಿಂತ ಸುಲಭ ಉಪಾಯ ಒಂದು ನನ್ನ ತಲೆಯಲ್ಲಿದೆ. ಅದೇನಪ್ಪಾ ಅಂದರೆ ಯಾವುದೇ ರಸ್ತೆಯಲ್ಲಿ ಯಾವುದೇ ಗಂಡಸು ಯಾ ಹೆಂಗಸು ಹುಂಜನ ಹಾಗೇ ನಡೆಯುತ್ತಾ ಇದ್ದಾರೆ ಅಂದರೆ ಅವರು ನೂತಕ್ಕೆ ನೂತು ಬರೆಹಗಾರ ಅಂತ. ನೂತಕ್ಕೆ ನೂತು ಅನ್ನುವುದು ಕನ್ನಡ ಅಲ್ಲ, ತಮಿಳು ಇರಬಹುದು. ಆದರೆ ಈಚೆಗೆ ಬರಹದ ಎಫೆಕ್ಟ್ ಹೆಚ್ಚು ಎದ್ದು ಕಾಣಬೇಕು ಎನ್ನುವ ಏಕಮೇವ ಉದ್ದೇಶದಿಂದ ಬೇರೆ ಬೇರೆ ಭಾಷೆಗಳ ಇಂತಹ ಪದಪುಂಜಗಳು ನಮ್ಮಲ್ಲೂ ಹೆಚ್ಚಿವೆ. ಪುರಾವೆ ಬೇಕಾ? ನಮ್ಮ ಪತ್ರಿಕೆ ನೋಡಿ ಅಷ್ಟೇ.. ಕಥೆಗೆ ಕಾಲಿಲ್ಲವಂತೆ, ಅದಕ್ಕೆ ಬರೇ ರೆಕ್ಕೆ ಅಂತೆ! ಅದರಿಂದಲೇ ನೋಡಿ ಇದು ರೆಕ್ಕೆಹರಿದ ಉಹೂಂ ಬಾಲಂಗೋಚಿ ಕಿತ್ತ ಗಾಳಿಪಟದ ಹಾಗೆ ಎಲ್ಲೆಲ್ಲೋ ಓಡುತ್ತಿದೆ. ಇದನ್ನ ಮತ್ತೆ ಟ್ರ್ಯಾಕ್ ಮೇಲೆ ತಂದು ಮುಂದಕ್ಕೆ ಹೋಗಲೇ?
ಏನು ಹೇಳ್ತಾ ಇದ್ದೆ?

ತಲೆಯಲ್ಲಿ ಒಂದು ನಸುನಗುತ್ತಿರುವ ಬರಹಗಾರನ ಚಿತ್ರ ಮೂಡಿಸಿಕೊಳ್ಳುವ ಪ್ರಯತ್ನ ಮಾಡುತಿದ್ದೆ ತಾನೇ? ಕನ್ನಡದ ಕೆಲವು ಬರಹಗಾರರು ಬಂದಿದ್ದರು ತಾನೇ? ಸುಮಾರು ಆಗಿನ ಬರಹಗಾರರನ್ನು ಐದಡಿ ಹತ್ತಡಿ ಹತ್ತಿರದಿಂದ ನೋಡಿದ್ದೆ. ಅವರಲ್ಲಿ ಸೂಟೇಬಲ್ ಮುಖ ಮನಸಿನಲ್ಲಿ ಇನ್ನೂ ಮೂಡಿರಲಿಲ್ಲ! ಇದ್ದಕ್ಕಿದ್ದ ಹಾಗೆ ತಲೆಯಲ್ಲಿ ಮಿಂಚು ಹೊಡೆದ ಹಾಗೆ ಆಯಿತಾ? ತಲೇಲಿ ಮಿಂಚು ಹೇಗೆ ಹೊಡೆಯುತ್ತೆ ಅಂತ ನಿಮಗೆ ಪ್ರಶ್ನೆ ಹುಟ್ಟಿದೆ ತಾನೇ? ಈಗ ಅದಕ್ಕೇ ಬಂದೆ. ಏನೋ ಯೋಚಿಸುತ್ತಾ ಇರುತ್ತೀರಿ. ತಲೆಯಲ್ಲಿ ಯಾವುದೊ ಸಮಸ್ಯೆ ವಿಲ ವಿಲ ಒದ್ದಾಡ್ತಾ ಇರುತ್ತೆ. ಅದಕ್ಕೆ ನಿಮಗಿನ್ನೂ ಪರಿಹಾರ ಸಿಕ್ಕಿರಲ್ಲ. ತಲೆ ಕೆಟ್ಟು ಕೆರ ಆಗಿ ನಿಮಗೆ ನೀವೇ ನಾಲ್ಕು ತಪರಾಕಿ ಕೊಟ್ಕೋಬೇಕು ಅನ್ನುವ ಸ್ಟೇಜ್‌ಗೆ ಬಂದಿದ್ದೀರಿ. ಆಗ ನೀವು ಯೋಚಿಸುತ್ತಾ ಇದ್ದ ಸಮಸ್ಯೆಗೆ ದಿಡೀರ್ ಎಂದು ಸಲ್ಯೂಷನ್ ಸಿಗುತ್ತಾ…? ನೋಡಿ ಈ ಸಿಂಡ್ರೋಮ್ ಹೆಸರೇ ಮಿಂಚು ಹೊಡೆಯೋದು. ನನಗೂ ಅದೇ ಆಗಿದ್ದು!

ಸರಕ್ಕನೆ ತಲೆಯೊಳಗೆ ಒಂದು ಪ್ರತಿಬಿಂಬ ಮೂಡಬೇಕೇ? ಅದೂ ಇಂಗ್ಲಿಷ್ ಸಾಹಿತ್ಯದ ಅಪ್ರತಿಮ ಹಾಸ್ಯ ಬರಹಗಾರ ವುಡ್ ಹೌಸ್ ಬೊಂಬೆ ಹುಟ್ಟಬೇಕೆ? ವುಡ್ ಹೌಸ್ ನನ್ನ ಮೆಚ್ಚಿನ ಸಾಹಿತಿ. ಆವರೆಗೆ ಅವನು ಬರೆದಿದ್ದ ಸರಿ ಸುಮಾರು ಎಲ್ಲಾ ಕಾದಂಬರಿ ಓದಿದ್ದೆ, ಓದಿ ಖುಷಿ ಪಟ್ಟಿದ್ದೆ. ಅವನ ಪುಸ್ತಕ ಹುಡುಕಿ ಬೆಂಗಳೂರಿನ ಹಳೇ ಪುಸ್ತಕದ ಅಂಗಡಿಗಳನ್ನು ಅದೆಷ್ಟು ಸಾವಿರ ಸಲ ಸುತ್ತಿದ್ದೆನೋ ನೆನಪಿಲ್ಲ. ಹೊಸ ಪುಸ್ತಕದ ಬೆಲೆ ಹೆಚ್ಚು, ಅದರಿಂದ ಹಳೇ ಪುಸ್ತಕಗಳ ಅನ್ವೇಷಣೆ ನಡೆಯುತ್ತಿತ್ತು! ಪುಸ್ತಕದ ಬ್ಲರ್ಬ್‌ನಲ್ಲಿ ಇವನ ನಗುಮುಖದ ಫೋಟೋ ಇರುತ್ತಿತ್ತು. ಅದೇ ಒಂದು ದೊಡ್ಡ ಆಕರ್ಷಣೆ. ಅಂತಹ ದೊಡ್ಡ ಇಂಗ್ಲಿಷ್ ಸಾಹಿತಿ ನಮ್ಮ ಮಿತ್ರರ ಮುಖಕ್ಕೆ ಪರ್ಯಾಯವಾಗಿ ತಲೆಯಲ್ಲಿ ಹುಟ್ಟಿತು!
ಸರಿ ತಲೆಯಲ್ಲಿ ವುಡ್‌ ಹೌಸ್ ಹುಟ್ಟಿದನಾ? ರಸ್ತೆಯಲ್ಲಿ ಎದುರುಬದುರು ಹಾಯುವ ವುಡ್‌ ಹೌಸ್ ತರಹ ಕಾಣುವ ಎಲ್ಲರನ್ನೂ ಇವರು ಮಿತ್ರ ಇರಬಹುದಾ ಇವರು ಮಿತ್ರ ಇರಬಹುದಾ ಇವರು ಮಿತ್ರ ಇರಬಹುದಾ ಎಂದು ತಲೆಯಲ್ಲಿಯೇ ಲೆಕ್ಕ ಹಾಕುತ್ತಾ ಮುಂದೆ ಮುಂದೆ ನಡೆದೆ. ನಡೆಮುಂದೆ ನಡೆಮುಂದೆ ಹಿಗ್ಗದಯೆ ಜಗ್ಗದೆಯೇ ನಡೆ ಮುಂದೆ.. ಎನ್ನುವ ತರಾಸು ಸಿನೆಮಾದ ರಾಜಕುಮಾರ್ ಹಾಡು ತಲೆಯಲ್ಲಿ ಓಡುತ್ತಿತ್ತು. ಅಂದಹಾಗೆ ನಡೆಮುಂದೆ ನಡೆಮುಂದೆ ಹಿಗ್ಗದಯೆ ಜಗ್ಗದೆಯೇ ನಡೆ ಮುಂದೆ ಹಾಡು ಯಾವ ಸಿನಿಮಾ ದ್ದು ಗೊತ್ತಾ? ಮಾರ್ಗದರ್ಶಿ ಸಿನೆಮಾ ಹೆಸರು. ಹೇಗೆ ನನ್ನ ಮೆಮೊರಿ?
ನನ್ನ ಮೆಮೊರಿ ಹಂಗಿರಲಿ..

ತಲೆಯಲ್ಲಿ ಒಂದು ಚಿತ್ರ ಮೂಡಿತು ಅಂದೆ ತಾನೇ. ಎದುರು ಒಬ್ಬರು ನನ್ನ ತಲೆಯಲ್ಲಿನ ಬಿಂಬಕ್ಕೆ ಶೇ ಅರವತ್ತರಷ್ಟು ಹೊಂದುವವರು ಎದುರು ಬಂದರು. ಸಾರ್ ಎಂದು ಅವರನ್ನು ನಿಲ್ಲಿಸಿದೆ. ಗುರುತು ಪರಿಚಯ ಇಲ್ಲದ ಯಾರೋ ಒಬ್ಬ ದಡಿಯ ಗೊರಿಲ್ಲಾ ತರಹದವನು ರಸ್ತೆಯ ನಡು ಮಧ್ಯ ನಿಮ್ಮನ್ನು ನಿಲ್ಲಿಸಿದರೆ ನಿಮಗೆ ಹೇಗಾಗುತ್ತೆ? ಬಹುಶಃ ಅವರಿಗೂ ಅದೇ ಆಗಿರಬೇಕು.

ಜೇಬು ಮುಟ್ಟಿಕೊಳ್ಳುತ್ತಾ ಅವರು ನಿಂತರು. ಯಾರೋ ಗಿರಾಕಿ ಸಾರ್ ಟೆನ್ ರೂಪಿಸ್ ಕೇಳುತ್ತಾನೆ ಅಂತ ಅವರು ಅಂದುಕೊಂಡಿರಬಹುದು. ಅವರೆದುರು ನಿಂತು ಗಂಟಲು ಸರಿಮಾಡಿಕೊಳ್ಳಲು ಒಮ್ಮೆ ಕೆಮ್ಮಿದೆ. ಸಾರ್ ಅಂದೆ, ದ್ವನಿ ಸರಿಯಾಗಿ ಹೊರ ಬರುತ್ತಿದೆಯೇ ಎಂದು ಟೆಸ್ಟ್ ಮಾಡಿಕೊಂಡೆ. ಎದುರು ನಿಂತ ಡೂಪ್ಲಿಕೇಟ್ ವುಡ್ ಹೌಸ್ ನನ್ನ ನೋಡಿದರು. ಅವರ ಕಣ್ಣು ದಪ್ಪ ಕನ್ನಡಕದ ಹಿಂದೆ ಶ್ರಿಂಕ್ ಆಯಿತು ಅನಿಸಿತು.

“ನೋಡಿ ಇವರೇ, ನಾನು ಜೇಬಲ್ಲಿ ದುಡ್ಡು ಇಟ್ಟುಕೊಳ್ಳಲ್ಲ. ಬರೀ ಬಸ್ ಚಾರ್ಜ್ ಆಗೋ ಅಷ್ಟು ಮಾತ್ರ ಇರುತ್ತೆ…..” ಅಂದರು!


ನನ್ನನ್ನು ಅವರು ದುಡ್ಡು ಪೀಕುವ ಹೊಸ ರೀತಿಯ ಭಿಕ್ಷುಕ ಎಂದು ತಿಳಿದುಕೊಂಡರು ಅನಿಸಿಬಿಡ್ತು. ಸಾರ್ ನಾನು ಇಂತ ಕಡೆ ಕೆಲಸ, ತಿಂಗಳಿಗೆ ಆರನೂರ ಹನ್ನೆರೆಡು ಸಂಬಳ ಬರುತ್ತೆ. ನಿಮ್ಮನ್ನ ಭಿಕ್ಷೆ ಕೇಳಲು ನಿಲ್ಲಿಸಿಲ್ಲ ಅಂತ ಹೇಳಬೇಕು ಎಂದು ಮನಸಿನಲ್ಲಿ ಪದ ಜೋಡಿಸುತ್ತಾ ಇದ್ದೆನಾ….

(ಮುಂದುವರೆಯುವುದು…)

About The Author

ಎಚ್. ಗೋಪಾಲಕೃಷ್ಣ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ