Advertisement
ಎರಡನೆಯದಕ್ಕೆ ನೆನಪು ನೂರೆಂಟು!: ಸುಕನ್ಯಾ ಕನಾರಳ್ಳಿ ಅಂಕಣ

ಎರಡನೆಯದಕ್ಕೆ ನೆನಪು ನೂರೆಂಟು!: ಸುಕನ್ಯಾ ಕನಾರಳ್ಳಿ ಅಂಕಣ

ಮೊದಲನೆಯದಕ್ಕೆ ಬಾಯಿರುಚಿ ಅಂತೇನೂ ಇರಲಿಲ್ಲ. ಎರಡನೆದು ಮಹಾ ದೋಸೆಪ್ರಿಯೆ. ಮನೆಪಾಠದ ಮೇಷ್ಟ್ರು ಅಟ್ಟದ ಮೇಲೆ ದೊಡ್ಡ ಕುಟುಂಬದ ಅಷ್ಟೂ ಮಕ್ಕಳಿಗೆ ಪಾಠ ಹೇಳುತ್ತಿದ್ದರೆ, ಎರಡನೆದು ಕೆಳಗಿನ ಅಡಿಗೆ ಮನೆಯಿಂದ ಚೋಂಯ್ ಶಬ್ದ ಕೇಳಿಸಿದ್ದೇ ಎಷ್ಟು ದೋಸೆಗಳು ಕಾವಲಿ ಮೇಲೆ ಬಿದ್ದವು ಅಂತ ಮನಸ್ಸಿನಲ್ಲೇ ಎಣಿಸಿಕೊಂಡಿತ್ತು. ಪಾಠವೆಲ್ಲ ಮುಗಿದು ಮೇಷ್ಟ್ರು ಹೋದ ಮೇಲೆ ಎರಡನೆದು ದಡಬಡ ಅಟ್ಟದ ಮೆಟ್ಟಿಲು ಇಳಿದು ಹೋದರೆ ಅಡಿಗೆಮನೆಯಲ್ಲಿ ದೋಸೆ ಕಾವಲಿ ಎಲ್ಲೋ ಮಿಣ್ಣಗೆ ಕೂತಿದ್ದು ಕಂಡು ಹೊ ಎಂದು ಅಳಹತ್ತಿತಲ್ಲ!
ಸುಕನ್ಯಾ
ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ನಲವತ್ನಾಲ್ಕನೆಯ ಬರಹ

ಮೊನ್ನೆ ಯೂಟ್ಯೂಬಿನಲ್ಲಿ ಮೊದಲ ಮತ್ತು ಎರಡನೆಯ ಮಕ್ಕಳ ನಡುವಿನ ವ್ಯತ್ಯಾಸಗಳನ್ನು ತೋರಿಸುವ  ವಿಡಿಯೋ ನೋಡಿ ನಗು ಬಂದಿತ್ತು. ಮೊದಲನೆದು ನೀರಿಗೆ ಇಳಿಯಲು ಹೆದರಿ ಪ್ರಾಣ ಹೋಗುವಂತೆ ಅರಚಿಕೊಂಡರೆ ಎರಡನೆದು ನೀರಿನೊಳಗೆ ಮೀನಿನಂತೆ ಹಾಯಾಗಿ ನಲಿಯುತ್ತಿತ್ತು. ಮೊದಲನೆದು ಬರಿಯ ತರಕಾರಿ ತಿಂದರೆ ಎರಡನೆದು ತಿನ್ನುವುದೆಲ್ಲವೂ ಚಿಕನ್ನೇ. ಮೊದಲನೆದು ಒಂದರ ಮೇಲೊಂದು ಮರದ ಬ್ಲಾಕುಗಳನ್ನಿರಿಸಿ ಮನೆ ಕಟ್ಟಿದ್ದರೆ ಎರಡನೆದು ಅರೆಕ್ಷಣದಲ್ಲಿ ಕಿರು ಬೆರಳಲ್ಲಿ ಎಲ್ಲವನ್ನೂ ಉರುಳಿಸಿ ಹಲ್ಲು ಕಿರಿಯುತ್ತಾ ನಿಂತಿತ್ತು.  ನಮ್ಮನೇಲಂತೂ ಚಂದ್ರಣ್ಣನಿಂದ ಹಿಡಿದು ಎಲ್ಲರಿಗೂ ತಲೆ ಕೆರೆದುಕೊಳ್ಳುವ ವಿಷಯವೇ ಅದು. ಮೊದಲನೆದು ಮುಂದೆ ಬಂದರೆ ಹಾಯದ, ಹಿಂದೆ ಬಂದರೆ ಒದೆಯದ ಪುಣ್ಯಕೋಟಿ. ಎರಡನೆದು ರೇಗಿದಾಗೆಲ್ಲ  ಕೊಂಬನ್ನು ಮುಂದೆ ಮಾಡಿಕೊಂಡು ಗುಮ್ಮಲು ಹೋಗುವ ಗೂಳಿ! ಇದು ಹೇಗೆ?

ಈಗ ಮಧ್ಯಮವರ್ಗದ ಗಂಡಹೆಂಡತಿಯರ ನಡುವೆ  ತಮ್ಮ ಮಗುವಿಗೆ ಹೆಸರಿಡುವುದರ ಬಗ್ಗೆಯೇ ಸಂಶೋಧನೆ, ಸಂಭಾಷಣೆ, ಚರ್ಚೆ, ಜಗಳ ಮುನಿಸು ಎಲ್ಲ ನಡೆಯುತ್ತವೆ ಎಂದು ಕೇಳ್ಪಟ್ಟೆ. ನಾನು ಹುಟ್ಟಿದ ಕಾಲದಲ್ಲಿ ಹೆರಿಗೆ ಮಾಡಿಸಿ, ಬಾಯಲ್ಲಿ ಬೆರಳು ಹಾಕಿ ಅಳಿಸಿದ ಸೂಲಗಿತ್ತಿಯೇ ತನಗೆ ಹೊಳೆದ ಹೆಸರನ್ನು ಮೂರು ಸಲ ಕಿವಿಯಲ್ಲಿ ಪಿಸುಗುಟ್ಟಿ  ಹೋಗಿದ್ದು ಉಂಟು. ನನ್ನ ಹೆಸರಿನ ಅರ್ಥ ‘ಒಳ್ಳೆಯ ಹುಡುಗಿ’ ಅಂತ ಮೇಷ್ಟರು ಹೇಳಿದ್ದನ್ನ ಮನೆಗೆ ಹೋದ ಮೇಲೆ ತಪ್ಪದೇ ತಲುಪಿಸಿದ್ದೆ. ವಿಶಾಲಮ್ಮ ಕರ್ಮ! ಎನ್ನುವಂತೆ ಹಣೆ ಚಚ್ಚಿಕೊಂಡಿದ್ದರು. ನೀವೇ ಹೆಸರಿಟ್ಟು ಮತ್ತೆ ಯಾಕೆ ಹೀಗೆ ಅಂತ ಕೇಳಿದ್ದಕ್ಕೆ ಹೆರಿಗೆ ಮಾಡಿಸಿದ ಫಿಲೋಮಿನಾ ನರ್ಸ್ ಕಾರಣ ಅಂತ ಗೊತ್ತಾಯ್ತು. ಆಗ ದಿನಗಟ್ಟಲೆ ಮಳೆ ಹಿಡಿದಿತ್ತಂತೆ. ಬಾಯಿಬಡಕಿ ಫಿಲೋಮಿನಾ ನರ್ಸ್ ಸದ್ಯ ಜಡಿಮಳೆ ಅಂತ ಹೆಸರಿಡಲಿಲ್ಲವಲ್ಲ ಅಂತ ಸಮಾಧಾನ ಮಾಡಿಕೊಂಡಿದ್ದೆ.

ಹೆಸರೇನೆ ಇದ್ದರೂ ಶಾಲೆಗೆ ಹೋಗುವ ತನಕ ಆ ಹೆಸರು ಚಾಲ್ತಿಯಲ್ಲಿ ಇರುತ್ತಿರಲಿಲ್ಲ. ಹೆಚ್ಚಿನಂಶ ಮೊದಲನೆದು, ಎರಡನೆದು, (ನಮ್ಮನೇಲಿ ಮಧ್ಯದವೆರಡು ಆಟಕ್ಕುಂಟು ಲೆಕ್ಕಕ್ಕಿಲ್ಲ) ಕೊನೆಗೆ ಸಣ್ಣದು. ಮೊದಲನೆದು ಅಳುಮುಂಜಿ, ಎಲ್ಲದಕ್ಕೂ ಮಹಾ ಹೆದರಿಕೆ. ಎರಡನೆದು ಎಲ್ಲದಕ್ಕೂ ತೋಳೇರಿಸಿಕೊಂಡು ಹೋಗುತ್ತಿತ್ತು. ಸಾಮಾನ್ಯವಾಗಿ ಅಪ್ಪಾಮ್ಮ ಮೊದಲದರ ಜೊತೆ ತಮ್ಮದೇ ಭಯಗಳ ಕಾರಣವಾಗಿ  ಬಿಗುವಿನಿಂದ ಇರುತ್ತಾರೋ ಏನೋ. ಎರಡನೆಯದರ ಹೊತ್ತಿಗೆ ಸ್ವಲ್ಪ ಅನುಭವದ ದೆಸೆಯಿಂದ ಸಡಿಲವಾಗಬಹುದು ಅಂತನ್ನಿಸುತ್ತೆ. ವಿಶಾಲಮ್ಮ ನನ್ನ ‘ಹುಟ್ಟು ಬಜಾರಿ’ ಅಂತ ಬೈದರೆ ಪಿಳಿಪಿಳಿ ನೋಡುತ್ತಿದ್ದೆ. ತಪ್ಪು ನನ್ನದೆ?

ಎರಡನೆದು ಇದು ಮಾಡ್ತಂತೆ; ಅದು ಮಾಡ್ತಂತೆ; ಚಿಣ್ಣಿ -ದಾಂಡು ಆಡ್ತಿರೋವಾಗ ಆ ಕೊಂಕಣಿ ಮನೆಯ ಮಗ ಮೋಸ ಮಾಡಿದ ಅಂತ ದಾಂಡನ್ನು ಬೀಸಿ ಅವನ ಮೂತಿ ಗುಮ್ಮಿ ಬಂತಂತೆ; ಪುಸ್ತಕ ತಂದಿಲ್ಲ ಅಂತ ಬೈಸಿಕೊಂಡು ಇಡೀ ಪಾಠವನ್ನ ಪುಸ್ತಕ ನೋಡದೆ ಒಪ್ಪಿಸಿ ಮೇಷ್ಟ್ರು ದಂಗಾಗಿ ಹೋದ್ರಂತೆ  (ಅದೇನೂ ಮಹಾ ಉದ್ದದ ಪಾಠವಾಗಿರಲಿಲ್ಲ!): ಮಿಲಿಟರಿ ಗೌರಕ್ಕಯ್ಯನ (ಆಕೆಯ ಗಂಡ ಮಿಲಿಟರಿಯಲ್ಲಿ ಸ್ವಲ್ಪವರ್ಷವಿದ್ದು ಯುದ್ಧದಲ್ಲಿ ಪ್ರಾಣ ಕಳೆದುಕೊಂಡಿದ್ದರು. ತಾವೊಬ್ಬರೇ ಮಗಳನ್ನು ಬೆಳೆಸುವ ದುರಾದೃಷ್ಟಕ್ಕೆ ಸಿಕ್ಕ ಮೇಲೆ ಆಕೆ ಸಹ ಸೈನಿಕ ಗತ್ತನ್ನು ಆವಾಹಿಸಿಕೊಂಡು ಮಗಳನ್ನು  ಧೈರ್ಯದಿಂದ ಬೆಳೆಸಿದ್ದರು. ಆಕೆ ಬೀದಿಯಲ್ಲಿ ನಡೆದು ಹೋಗುತ್ತಿದ್ದರೆ ಸಮವಸ್ತ್ರ ಒಂದು ಇಲ್ಲ ಅಷ್ಟೇ! ಮಗಳ ಹೆಸರು ಮಾತ್ರ ಬೇಬಿ ಅಂತಲೇ ಉಳಿದು ಹೋಯಿತು. ಆ ಪೇಟೆಯ ಮಂದಿ ಜೊತೆಗೆ ‘ಬಜಾರಿ’ ಸೇರಿಸಿದ್ದರು. ತಾಯಿ ಮಿಲ್ಟ್ರಿ ಗೌರಕ್ಕಯ್ಯ, ಮಗಳು ಬಜಾರಿ ಬೇಬಿ!)  ಜೊತೆ ಸೇರಿ ಬುಗುರಿ ಉರುಳಿಸಿ, ತಿರುಗುವ ಬುಗುರಿಯನ್ನ ಅಂಗೈ ಮೇಲೆ ಇಟ್ಟುಕೊಂಡು ನಲಿಯುತ್ತಿತ್ತಂತೆ; ಆ ಬೇಬಿ ಅನ್ನೊ ಬಜಾರಿ ಈ  ಪಾಪದ ವೆಂಕಟೇಶನಿಗೆ ‘ಚಿಣ್ಣಿನ ದಾಂಡಿನಿಂದ ಬೀಸಿ ಹೊಡೆಯೋದು ಬಿಟ್ಟು ಪಿಂಡ ಉರುಳಿಸ್ತಿಯಲ್ಲೊ! ಅವಳನ್ನ ನೋಡಿ ಕಲ್ತುಕೋ’ ಅಂತ ಬೈತಾ ಇದ್ರೆ ಈ ಎರಡನೆದು ಕಿಸಕ್ಕನೆ ನಕ್ಕ ಕಾರಣಕ್ಕೆ  ವೆಂಕಟೇಶ ಹೊ ಎಂದು ಅಳುತ್ತಾ ಮನೆ ಕಡೆ ಓಡಿದನಂತೆ… ಒಂದೇ ಎರಡೇ!

ಹೀಗೆ  ನಡುಬೀದಿಯಲ್ಲಿ ಆಟವಾಡುತ್ತಾ ನಲಿಯುವ ನನ್ನ ಮತ್ತು ಬಜಾರಿಬೇಬಿಯ ಒಳ್ಳೆಯ ದಿನಗಳಿಗೆ  ಎದುರು ಮನೆಯ  ಶ್ರೀನಿವಾಸ ಮೇಷ್ಟ್ರು ಹಠಾತ್ತಾಗಿ ತಡೆಯೊಡ್ಡುವಂತೆ ವಿಧಿ ಸಂಚು ನಡೆಸಿತ್ತು. ಆತ ಪುಸುಗಲ ವೆಂಕಟೇಶನ ಅಪ್ಪ. ಒಮ್ಮೆ ಮೆಟ್ಟಿಲು ಹತ್ತಿ ಹೋಗುವ ಸವಲತ್ತಿದ್ದ ತನ್ನ  ಬಾಡಿಗೆ ಮನೆಯ ಜಗಲಿಯ ಮೇಲೆ ನಿಂತು ಆತ ನೋಡುತ್ತಲೇ ಇದ್ದರು. ಮೇಷ್ಟ್ರೇ ನೋಡುತ್ತಿದ್ದಾರೆ ಅಂತ ನಾವು ಹುಮ್ಮಸ್ಸಿಂದ ಆಡಿದ್ದೇ ಆಡಿದ್ದು. ಮಾರನೆಯ ದಿನ ಕ್ಲಾಸಿನಲ್ಲಿ ಎಲ್ಲರೆದುರು ನಮ್ಮ ಆಟೋಟದ ಪ್ರತಿಭೆಯನ್ನು ಹೊಗಳುತ್ತಾರೇನೋ ಎಂದುಕೊಂಡಿದ್ದರೆ ‘ಗಂಡುಬೀರಿಯರನ್ನು’ ಎಲ್ಲರೆದುರು ನಿಲ್ಲಿಸಿ, ಎರಡೂ ಅಂಗೈಗಳನ್ನು  ಭೂಮಿ ನೋಡುವಂತೆ ಕೆಳಗೆ ತಿರುಗಿಸಿ, ಡಸ್ಟರಿನ ಮರದ ಭಾಗದಿಂದ ಕೈಬೆರಳಿನ ಗೆಣ್ಣುಗಳು ತತ್ತರಗುಡುವಂತೆ ಹೊಡೆದಿದ್ದರು. ಅದು  ಅಪ್ಪಾಮ್ಮ ಶಾಲೆಗೆ ಹೋಗಿ ದೂರುವ ಕಾಲವಾಗಿರಲಿಲ್ಲ. ನನಗೆ ನೆನಪಿರುವಂತೆ ಬದುಕಿನಲ್ಲಿ ಬಿದ್ದ ಗಂಡಾಳ್ವಿಕೆಯ ಮೊದಲ ಹೊಡೆತ ಅದು. ಮಗನಿಗೆ ಬೀದಿಯಲ್ಲಿ ಆದ ಅವಮಾನಕ್ಕೆ ಪ್ರತಿಯಾಗಿ ನಾಲ್ಕು ಗೋಡೆಗಳ ಒಳಗೆ ಇಬ್ಬರು ಧೈರ್ಯವಂತ ಹೆಣ್ಮಕ್ಕಳ ಮನೋಸ್ಥೈರ್ಯವನ್ನು ಹೊಡೆದು ಉರುಳಿಸಿ ಆತ ತಮ್ಮ  ಮಾಸ್ತರಿಕೆಯನ್ನು ಮೆರೆದಿದ್ದರು. ಅವಮಾನದ ಆಘಾತದಲ್ಲಿ ತತ್ತರಿಸಿದ ನನ್ನ ಎಳೆಯ ಮನಸ್ಸು ಮತ್ತೆಂದೂ  ಆಟವಾಡಲು ಹೋಗಲಿಲ್ಲ. ಒಳಗೊಳಗೇ  ‘ಇಷ್ಟೇ ತಾನೆ, ಹೋಗಲೇ!’ ಎಂದು ಸೆಟೆದು ನಿಂತಿದ್ದಂತೂ ನಿಜ.

ನನ್ನ ಕರ್ಮಕ್ಕೆ ಹತ್ತಿರವೇ ಇದ್ದ ಸಹಪಾಠಿ ಮಹಾ ‘ಒಳ್ಳೆಯ’ ಹುಡುಗಿ. ಸ್ಕೂಲಿಗೂ ಸಹ ಹಣೆಯ ಮೇಲೆ ಮೂರೆಳೆ ವಿಭೂತಿ ಧರಿಸಿ ಬರುತ್ತಿದ್ದ ಶರಣೆ. ಮನೆಯಿಂದ ಸ್ಕೂಲಿಗೆ, ಸ್ಕೂಲಿನಿಂದ ಮನೆಗೆ. ನಡುವೆ ಬಸವಣ್ಣನ ದೇವಸ್ಥಾನದ ಎದುರು ಮಾತ್ರ ನಿಂತು ಗಲ್ಲ ಬಡಿದುಕೊಳ್ಳುತ್ತಿತ್ತು.  ಏನು ಹೇಳಿದರೂ ಪಟ್ ಪಿಟ್ ಎನ್ನದ; ಹಾಗಲಕಾಯಿ ಪಲ್ಯವನ್ನೂ ಉಸಿರೆತ್ತದೆ ತಿಂದು ಮುಗಿಸುವ; ಹೇಳಿದ ಕೆಲಸಕ್ಕೆಲ್ಲ ತಲೆಯಾಡಿಸುವ ಈ ಸದ್ಗುಣಶೀಲೆ ನನ್ನ ಕರ್ಮಕ್ಕೆ ಒತ್ತಿಮನೆಯಲ್ಲೇ ವಕ್ಕರಿಸುವಂತೆ ಮಾಡಿ ವಿಧಿ ಹಲ್ಕಿರಿದಿತ್ತು. ‘ಆ ಪಕ್ಕದ್ದನ್ನ ನೋಡಿಯಾದ್ರೂ ಕಲಿ,’ ಅಂತ ಸದಾ ಮೂತಿ ತಿವಿಸಿಕೊಂಡು ಬೇಸತ್ತು ಹೋಗಿದ್ದೆ.  ಈ ಸದ್ಗುಣಶೀಲೆ ಮದುವೆಯಾಗಿ ಮಕ್ಕಳಾದ ಮೇಲೆ ನೇಣಿಗೆ ತಲೆ ಒಪ್ಪಿಸಿದ್ದಳು. ಒಳ್ಳೆಯತನಕ್ಕೆ ತೆತ್ತ ಪರಮ ಬೆಲೆಯೊ ಏನೊ! ಅಂದು ಮಾತ್ರ ಸಿಕ್ಕ ಅವಕಾಶವನ್ನು ಬಿಡದೆ, ‘ಇವತ್ತು ನಿಮ್ಮ ಮೂತಿ ತಿವಿಯಬಹುದೇ?’ ಎಂದು ನಾಟಕೀಯವಾಗಿ ವಿಶಾಲಮ್ಮನಿಗೆ ಕೇಳಿ ಇನ್ನೊಂದು ಸಲ ಬೈಸಿಕೊಂಡಿದ್ದೆ.

ಮೊದಲನೆದು ಕೊಟ್ಟಿದ್ದು ತಿಂದು ಎದ್ದು ಹೋಗುವ ಕೋಲೆಬಸವ. ಎರಡನೆದು ಸ್ವಲ್ಪ ಪಿರಿಪಿರಿ ಮಾಡುತ್ತಿದ್ದು ಹಾಗಲಕಾಯಿ ಪಲ್ಯ ಮಾಡಿದಾಗ ಮಾತ್ರ ಅದು ತಾರಕಕ್ಕೇರುತ್ತಿತ್ತು. ತಲೆ ತಗ್ಗಿಸಿ ತಟ್ಟೆಯನ್ನೇ ನೋಡುತ್ತಾ ಬೇಕಿದ್ರೆ ಗಂಟೆಗಟ್ಟಲೆ ಕೂರಲು ಸೈ, ಒಂದು ತುತ್ತೂ ಗಂಟಲೊಳಗೆ ಹೋಗುತ್ತಿರಲಿಲ್ಲ. ಕೊನೆಗೆ ಅಡಿಗೆ ಮಾಡಲು ಬರುತ್ತಿದ್ದ ಬಸಕ್ಯ ಕರುಣೆ ತೋರಿಸಿ ವಿಶಾಲಮ್ಮನ ಗುರ್ರೆನ್ನುವ ಕಣ್ಣನ್ನು ಲೆಕ್ಕಿಸದೆ ಎಬ್ಬಿಸಿ ಕೈ ತೊಳೆಸಲು ಕರೆದುಕೊಂಡು ಹೋಗುತ್ತಿದ್ದ ನೆನಪು. ಹಸಿವಿಂದ ಮಲಗಿದರೂ ಸರಿಯೇ, ಹಾಗಲಕಾಯಿ ಮಾತ್ರ ಊರಾಚೆಯೇ!

ಮೊದಲನೆಯದಕ್ಕೆ ಬಾಯಿರುಚಿ ಅಂತೇನೂ ಇರಲಿಲ್ಲ. ಎರಡನೆದು ಮಹಾ ದೋಸೆಪ್ರಿಯೆ. ಮನೆಪಾಠದ ಮೇಷ್ಟ್ರು ಅಟ್ಟದ ಮೇಲೆ ದೊಡ್ಡ ಕುಟುಂಬದ ಅಷ್ಟೂ ಮಕ್ಕಳಿಗೆ ಪಾಠ ಹೇಳುತ್ತಿದ್ದರೆ, ಎರಡನೆದು ಕೆಳಗಿನ ಅಡಿಗೆ ಮನೆಯಿಂದ ಚೋಂಯ್ ಶಬ್ದ ಕೇಳಿಸಿದ್ದೇ ಎಷ್ಟು ದೋಸೆಗಳು ಕಾವಲಿ ಮೇಲೆ ಬಿದ್ದವು ಅಂತ ಮನಸ್ಸಿನಲ್ಲೇ ಎಣಿಸಿಕೊಂಡಿತ್ತು. ಪಾಠವೆಲ್ಲ ಮುಗಿದು ಮೇಷ್ಟ್ರು ಹೋದ ಮೇಲೆ ಎರಡನೆದು ದಡಬಡ ಅಟ್ಟದ ಮೆಟ್ಟಿಲು ಇಳಿದು ಹೋದರೆ ಅಡಿಗೆಮನೆಯಲ್ಲಿ ದೋಸೆ ಕಾವಲಿ ಎಲ್ಲೋ ಮಿಣ್ಣಗೆ ಕೂತಿದ್ದು ಕಂಡು ಹೊ ಎಂದು ಅಳಹತ್ತಿತಲ್ಲ!

ದೋಸೆ ಹಾಕಿದ್ದ ಬಸಕ್ಯ ಪುಸಲಾಯಿಸುವ ಧ್ವನಿಯಲ್ಲಿ, ‘ಏ, ಚಂದ್ರಿಗೆ (ನಮ್ಮಪ್ಪ ಚಂದ್ರಣ್ಣ, ಆಕೆ ಎತ್ತಿ ಆಡಿಸಿದ್ದ ಮಗು) ಅಂತ ಇದ್ದ ಇಷ್ಟೇ ಹಿಟ್ಟಿಗೆ ಒಂದಿಷ್ಟು ಅಕ್ಕಿ ಹಸಿಟು ಹಾಕಿ ಕಲಸಿ ಎರಡೇ ದೋಸೆ ಹಾಕಿ ಕೊಟ್ಟೆ, ಅಷ್ಟೇ!’ ಅಂತ ಹೇಳಿದರೂ ಸಹ ಒಪ್ಪದೆ, ‘ನೀವು ಆರು ದೋಸೆ ಹಾಕಿದ್ದು ನನ್ನ ಕಿವಿಗೆ ಬಿತ್ತೂ …,’ ಅಂತ ಹಠ ಮುಂದುವರೆಸಿದಾಗ ಆಕೆ ದೋಸೆ ಮಗುಚುವ ಕರ್ಚಿಯನ್ನು ಕೈಯಲ್ಲಿ ಹಿಡಿದುಕೊಂಡು ಅಟ್ಟಿಸಿಕೊಂಡು ಬಂದಿದ್ದರು. ಎರಡನೆದು ಒಂದೇ ಉಸುರಿನಲ್ಲಿ ಓಡಿ ಹೋಗಿ ಹಾರಿ ಹಟ್ಟಿಯಲ್ಲಿ ನಿಂತು, ‘ನಿಜ ಹೇಳಿ ಬಸಕ್ಯ! ಆರು ತಾನೇ? ನೀವು ಗುಟ್ಟಾಗಿ ತಿನ್ನಕ್ಕೆ ಅಂತ ಎಲ್ಲೋ ಮಡಿಕ್ಕಂಡಿದೀರಾ?’ ಅಂತ ತೋರುಬೆರಳನ್ನು ಆಡಿಸುತ್ತಾ ಕೇಳಿದರೆ ಬಸಕ್ಯನ ಕೋಪ ನೆತ್ತಿಗೇರಿ, ‘ನಂಗೇ ಬೆರಳು ತೋರಿಸುತ್ತೆ ಈ ಚಟಾಕು! ಮನೆ ಒಳಗೆ ಬಾರೇ ಬಜಾರಿ,’ ಎಂದು ಬಾಗಿಲ ಮರೆಯಿಂದ ಕಣ್ಣು ಬಿಟ್ಟು ಹೆದರಿಸಿದ್ದರು. ಈ ಚಟಾಕು ಮಾತ್ರ  ಬಗ್ಗದೆ, ‘ಮನೆ ಒಳಗೆ ಬರಲ್ಲ, ಹೋಗಿ ಭಟ್ರ ಹೋಟೆಲ್ಲಲ್ಲಿ  ದೋಸೆ ಹಿಟ್ಟು ರುಬ್ಬೋ ಕೆಲಸಕ್ಕೆ ಸೇರ್ಕತೀನಿ. ಬೇಕಾದಾಗೆಲ್ಲ ದೋಸೆ ತಿಂತೀನಿ!’ ಅಂತ ಹೇಳಿದ್ದು ಕೇಳಿ ಬಸಕ್ಯನಿಗೆ ನಗು ತಡೆಯಲಾಗದೆ ಮುಖದ ಮೇಲಿನ ಸಹಸ್ರ ಸುಕ್ಕುಗಳು ಅರಳಿ ಹೂವಾಗಿ ಕಣ್ಣಿನ ಅಂಚಿನಿಂದ  ನೀರು ಜಿನುಗಿತ್ತು. ಅಷ್ಟೊತ್ತಿಗೆ ಮನೆಗೆ ಬಂದ ದಡಿಯ ಅಣ್ಣ ಹಟ್ಟಿಯಲ್ಲಿ ಮುಷ್ಕರ ಹೂಡಿದಂತೆ ನಿಂತಿದ್ದ ಎರಡನೆಯದರ ಹೆಡೆಮುರಿ ಕಟ್ಟಿ ಒಳಗೆತ್ತಿಕೊಂಡು ಬಂದಿದ್ದ!

ಬೆಳೆದ ಮೇಲೆ ಮೊದಲನೆದು ಅಡಿಗೆ ಮಾಡಿದರೆ ಯಾರಿಂದ ಏನು ಟೀಕೆ ಬರುತ್ತೊ ಅಂತ ಒದ್ದಾಡುತ್ತಿತ್ತು. ಎರಡನೆದು ಒಮ್ಮೆ ಅಡಿಗೆ ಮಾಡಿದಾಗ ಅನ್ನ ಮೆತ್ತಗಾಗಿದ್ದಷ್ಟೇ ಅಲ್ಲ, ಹುಣಿಸೇಹಣ್ಣನ್ನು ಕಿವುಚದೆ ಸಾರಿನಲ್ಲಿ ನೇರವಾಗಿ ಹಾಕಿಬಿಟ್ಟಿತ್ತು. ಅದು ಚಂದ್ರಣ್ಣರಿಗೇ ಸಿಕ್ಕಿದ್ದು ದುರಾದೃಷ್ಟ. ಅದನ್ನ ಕೈಯಲ್ಲಿ ಹಿಡಿದುಕೊಂಡು, ‘ಇದೇನೆ ಹುಡುಗಿ, ಇದು?’ ಅಂತ ಕಣ್ಣರಳಿಸಿ ಕೇಳಿದರೆ ಈ ಎರಡನೆದು ಕಣ್ಣೂ ಪಿಳುಕಿಸದೆ, ‘ಏನೀಗ? ನಾನು ಪೂರ್ತಿ ಅಡಿಗೇನೆ ಮಾಡಿದಿನಲ್ಲ? ಹಂಗೆ ತಟ್ಟೆಲಿ ಸ್ವಲ್ಪ ಕಿವಿಚಿ ಕಲಸಿಕೊಂಡು ಊಟ ಮುಗಿಸಿಬಿಡಿ, ಪರವಾಗಿಲ್ಲ ಅಂತ ಹೇಳುತ್ತಲ್ಲ!’ ಅಂತ ವಿಶಾಲಮ್ಮ ಅರೆಕೋಪ ಅರೆವಿಸ್ಮಯದಲ್ಲಿ  ತಮ್ಮ ಸ್ನೇಹಿತೆಯರಿಗೆ ನನ್ನೆದುರಿಗೇ ಹೇಳಿದ್ದರು. ಆ ಕಡ್ಲೇರ-ಮನೆ (ಕಡಲೆಕಾಳು ಸಗಟು ವ್ಯಾಪಾರಿ ಕುಟುಂಬ) ಚಿನ್ನಮ್ಮನೋರು ಮುಖದ ಸುಕ್ಕೆಲ್ಲಾ ಅರಳುವಂತೆ ನಕ್ಕು, ‘ವಾ, ವಿಶಾಲಕ್ಯ, ಹಂಗಾರೆ ಇಲ್ಲೊಂದು ಮದುವೆಗೆ ಬಂದಿರೋ ಹೆಣ್ಣಿದೆ ಅಂತ ಹೇಳಕ್ಕಾಗಲ್ಲ, ಅಲ್ದಾ?’ ಅಂತ ಕೇಳಿದ್ದರು. ಸದಾ ಅಡಿಗೆ ಕೆಟ್ಟದಾಗಿ ಮಾಡಿದ್ರೆ ಮದುವೆಯ ಕಾಟ ಇರಲ್ಲ ಅಂತ ಪೆದ್ದುಪೆದ್ದಾಗಿ ನಾನು ಸ್ವಲ್ಪ ಕಾಲ ನಂಬಿಯೂ ಇದ್ದೆ.

ನಿಜವಾದ ವ್ಯತ್ಯಾಸ ಇದು: ಎರಡನೆದಕ್ಕೆ ಬಾಲ್ಯದ ನೆನಪುಗಳು ನೂರೆಂಟು! ಮೊದಲನೆಯದಕ್ಕೆ ಪಾಪ ಖಾಲಿಯೋ ಖಾಲಿ!

About The Author

ಸುಕನ್ಯಾ ಕನಾರಳ್ಳಿ

ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕಿ, ಲೇಖಕಿ, ಮತ್ತು ಭಾಷಾಂತರಕಾರ್ತಿ. ವೈದೇಹಿ (An Afternoon with Shakuntala and Other Stories) ಮತ್ತು ಅಗ್ರಹಾರ ಕೃಷ್ಣಮೂರ್ತಿಯವರ ಕೃತಿಗಳು (Love and Water Flow Together) [(ಕುವೆಂಪು ಭಾಷಾಭಾರತಿ ಪ್ರಶಸ್ತಿ  (2023) ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಅನುವಾದಿತ ಪುಸ್ತಕ ಪ್ರಶಸ್ತಿ (2023)] ಇಂಗ್ಲೀಷಿಗೆ ಅನುವಾದಿಸಲ್ಪಟ್ಟ ಕೃತಿಗಳು.  ‘ಹೇಳುತೇನೆ ಕೇಳು: ಮಹಿಳೆಯರ ಆತ್ಮಕಥೆಗಳು’; ‘ಕಥೆ ಹೇಳುವೆ’; ‘ಬರ್ತಿಯಾ?… ಎಷ್ಟು?…: ಭಾರತೀಯ ಸೂಳೆಲೋಕದಕಥೆಗಳು’; ನಯನತಾರ ಸೆಹಗಲ್ ಅವರ ‘ಚಿಟ್ಟೆಗಳ ಪಾಡು’ ಇತ್ಯಾದಿ ಅವರ ಕನ್ನಡ ಭಾಷಾಂತರ ಕೃತಿಗಳು. ಮೌಲಾನಾ ಜಲಾಲುದ್ದೀನ್ ರೂಮಿಯ ಕಾವ್ಯದ ಭಾಷಾಂತರ ಕೃತಿ ‘ದಿವ್ಯದಲ್ಲಿ ಹಿಸ್ಸೆಯಿಲ್ಲ: ಕಡುಪ್ರೇಮಿಯ ಎದೆಯ ಹಾಡು ಇತ್ತೀಚೆಗೆ ಬಿಡುಗಡೆಯಾದ ಕೃತಿ. 'ಕನ್ನಡ-ಕಾಸರವಳ್ಳಿಯವರ ಸಿನಿಮಾಗಳಲ್ಲಿ ರಾಷ್ಟ್ರ ಮತ್ತು ಹೆಣ್ಣು' ಎರಡು ಪುಸ್ತಕಗಳಾಗಿ ಸದ್ಯದಲ್ಲೇ ಬೆಳಕು ಕಾಣಲಿದೆ. 

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ