ಮಹಾನಗರಿಯ ಏರಿಯಾಗಳುದ್ದಕ್ಕೂ ಈಗ ಹೂಬಿಟ್ಟ ಮರಗಳು. ಬೀದಿ ಬೀದಿಯಲ್ಲೂ ಉದುರಿ ಬಿದ್ದ ಲಕ್ಷಾಂತರ ಹೂವುಗಳು. ಕಾಯಿ, ಹಣ್ಣು, ಬೀಜವಾಗದೇ ಉದುರಿಹೋದ ಅವನ್ನು ನೀಲಿ ಅಂಗಿ ತೊಟ್ಟ ಬಿಬಿಎಂಪಿ ನೌಕರರು ರಾಶಿ ಮಾಡುವುದನ್ನು ನಿರ್ಭಾವುಕವಾಗಿ ನೋಡಿ ನಮ್ನಮ್ಮ ಕಂಪನಿಯ ಎಂಟ್ರಿ ಗೇಟನ್ನು ಹೊಗ್ಗುತ್ತೇವೆ. ಇಲ್ಲಿ ಹೊಕ್ಕಾಗಿಂದ ಪ್ರಕೃತಿಯ ಇಂಥಾ ಅದೆಷ್ಟೋ ವಸಂತಗಳಿಗೆ ನಮ್ಮೆದೆಯಲ್ಲಿ ಎಂಟ್ರಿ ಬಂದ್ ಮಾಡಿಕೊಂಡಿದ್ದೇವೆ. ಎಷ್ಟೋ ಚೈತ್ರ, ವೈಶಾಖ, ಕಾರ್ತೀಕ, ಮಾಗಿಗಳು ನಮ್ಮನ್ನು ಸೋಕದೆಯೇ ವಿಫಲ ಹೂವಾಗಿ ಉದುರಿಹೋಗಿವೆ. ಹಾಗಾಗಿಯೇ ಆಫೀಸು ಕದ ಮುಚ್ಚಿದ ಒಂದು ಶನಿವಾರ, ಒಂದು ಭಾನುವಾರವನ್ನು ಕಳೆಯಲಾರದೆ ನಿರುಪಾಯರಾಗಿದ್ದೀವೇನೋ ಅನ್ನಿಸಿತು.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ
“ಶನಿವಾರ ಭಾನುವಾರ ಎರಡು ದಿನ ಮನೇಲಿ ಕೂತು ಏನು ಮಾಡೋದ್ರಿ? ನಂಗಂತೂ ಕೈಕಾಲೇ ಆಡೋದಿಲ್ಲ. ಸಾಟರ್ಡೇನೂ ಆಫೀಗೆ ಬರ್ತೀನಿ. ಆಫೀಸಿದ್ರೆನೇ ಟೈಂ ಪಾಸ್ ಆಗೋದು”
ಅವರ ಮಾತನ್ನು ಒಪ್ಪಿಕೊಳ್ಳುವುದು ಅದೇಕೋ ಕಷ್ಟವೆನಿಸಿತು. ವಾರದಲ್ಲಿ ಎರಡು ದಿನವನ್ನೂ ಆಫೀಸಿನಾಚೆ ಕಳೆಯಲಾರದಷ್ಟು ಮನುಷ್ಯ ಅಭಿರುಚಿ ಹೀನನಾಗಬಾರದು ಅಂದುಕೊಂಡೆ. ಆಫೀಸಿನ ಕಡೆಗೆ ಡೆಡಿಕೇಷನ್ನು, ಕೆಲಸದ ಮೇಲಿನ ಶ್ರದ್ಧೆ, ಕಲಿಯುವ ಹಂಬಲ… ಇವೆಲ್ಲ ಮನುಷ್ಯನನ್ನು ಎತ್ತರಕ್ಕೆ ಒಯ್ಯುವ ಸ್ವಭಾವಗಳೆನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಆಫೀಸು ಬಾಗಿಲು ಹಾಕಿ ವೀಕೆಂಡು ಕವಿದ ಮರುಕ್ಷಣ ಬದುಕೇ ಬಂದ್ ಆದಂತೆ ಕಂಗೆಟ್ಟುಹೋಗುವುದು… ಅದೂ ಸರಿಯೇ? ಲಾಗಿನ್ ಲಾಗೌಟ್ ಗಳಾಚೆಗೆ ಎಷ್ಟೊಂದು ಸುಂದರವಾದ, ಅರ್ಥಪೂರ್ಣ ಪ್ರಪಂಚ ನಮಗಾಗಿ ಕಾಯುತ್ತಿರುವಾಗ ತೊಡೆಯ ಮೇಲಿನ ಲ್ಯಾಪ್ಟಾಪಿನಲ್ಲೇ ಹುದುಗಿ ಹೋದರೆ?
ನಮ್ಮ ಹೊರತಾಗಿಯೂ ಆಚೆಯ ಸುಂದರ ಪ್ರಪಂಚ ನಡೆಯುತ್ತದೆ. ಆದರೆ ಅದರ ಹೊರತಾಗಿ ನಮ್ಮ ಬದುಕು ಅರ್ಥಪೂರ್ಣವಾಗಲಾರದು. ಐಟಿ, ಕಾರ್ಪೋರೇಟ್ ಬದುಕಿನ ದೊಡ್ಡ ತಮಾಷೆಯೆಂದರೆ ಇಲ್ಲಿ ನಾವು ಕಳೆದುಕೊಂಡಿದ್ದೇನೆನ್ನುವುದು ಎಷ್ಟೋ ಸಲ ನಮಗೆ ಅರ್ಥವಾಗುವುದೇ ಇಲ್ಲ. ಲಕ್ಷ ಕುದುರೆಗಳು ಪಂದ್ಯಕ್ಕಿಳಿದಿರುವ ಕಣದಲ್ಲಿ ಓಡುತ್ತಿರುವ ಕಂಪನಿಯೊಂದಕ್ಕೆ ಅದರದ್ದೇ ಆದ ಅನಿವಾರ್ಯತೆಗಳಿರುತ್ತವೆ. ತನ್ನ ಕೈಕೆಳಗಿನ ಉದ್ಯೋಗಿಯೆಂಬ ನಿಂಬೆ ಹಣ್ಣನ್ನು ಎಷ್ಟು ಹಿಂಡಿ ರಸ ತೆಗೆದರೆ ಅದಕ್ಕೆ ಅಷ್ಟೇ ಲಾಭ. ಒಂದು ನಿಂಬೆ ಹಣ್ಣಿನಿಂದ ಎಷ್ಟು ಹೆಚ್ಚು ಲೋಟ ಪಾನಕ ಮಾಡಿದರೆ ಆ ಕಂಪನಿ ಅಷ್ಟರ ಮಟ್ಟಿಗೆ ಅದು ಗೆದ್ದಂತೆ. ಹಾಗೆ ಹಿಂಡುವುದನ್ನು ನಿಲ್ಲಿಸಿದ ಮರುಕ್ಷಣ ಅದರ ಶರಬತ್ ಅಂಗಡಿ ಬಂದ್ ಆಗುತ್ತದೆ.
ಹಾಗಂತ ಶರಬತ್ತಾಗುವುದನ್ನು ನಿಲ್ಲಿಸಿದ ಮರುಕ್ಷಣ ನಿಂಬೆಹಣ್ಣಿನ ಬದುಕೇ ನಿರರ್ಥಕವಾದರೆ?
ಜಗತ್ತಿನ ಎಲ್ಲ ಸಂಗತಿಗಳನ್ನೂ ಹಣವೆಂಬ ಏಕೈಕ ಮಾನೀಟರ್‌ಗೆ ತಂದು ಜೋಡಿಸಿದ ಬದುಕು ನಮ್ಮದಾಗಿದೆ. ರಸ್ತೆಯಲ್ಲಿ ನಡೆದು ಹೋಗುವಾಗ ಖಾಲಿ ಸೈಟೊಂದು ಕಂಡರೆ ಅದರಲ್ಲಿ ಅರಳಿನಿಂತ ಹೂವಿನ ಮೇಲೋ, ಕಟ್ಟಡಗಳ ಸಾಲಿನ ನಡುವೆ ತೆರೆದಾಕಾಶವನ್ನು ಸೃಷ್ಟಿಸಿದ ಅದರ ಮುಕ್ತ ವಾತಾವರಣದ ಮೇಲೋ ನಮ್ಮ ಗಮನ ಹೋಗುವುದೇ ಇಲ್ಲ. ಇದು ಯಾರ ಸೈಟು? ಇದರ ಬೆಲೆ ಎಷ್ಟಾದೀತು? ಇಲ್ಯಾಕಿನ್ನೂ ಕಟ್ಟಡ ಕಟ್ಟಿಲ್ಲ? ಕಟ್ಟಿದರೆ ಬಾಡಿಗೆ ಎಷ್ಟು ಬಂದೀತು? ಕಲ್ಪನೆಯಲ್ಲೂ ಗಾಳಿ-ಬೆಳಕು ಆಡುವ ತೆರೆದ ಸೈಟನ್ನು ಖಾಲಿಯಾಗಿಯೇ ಬಿಡದ ಅದೆಂಥಾ ಇಕ್ಕಟ್ಟಿನ ಮನಸ್ಥಿತಿಗೆ ತಲುಪಿದ್ದೇವೆ!
ನಾನು ಕೂರುವ ಏಳನೇ ಮಹಡಿಯ ಕ್ಯಾಬಿನ್ನಿಗೆ ಗೋಡೆಯಷ್ಟೇ ಅಗಲವಾದ ಗಾಜಿನ ಕಿಟಕಿಯಿದೆ. ಅದರಾಚೆಗೆ ಗಾಳಿಯ ಹಾಡಿಗೆ ತಲೆದೂಗುವ ಹಸಿರು ಮರಗಳು ಕಾಣುತ್ತಿರುತ್ತವೆ. ವಿಶಾಲ ಆಗಸದಲ್ಲಿ ಅಚ್ಚಬಿಳಿಯ ಮೋಡಗಳು ತೇಲುತ್ತ ನಮ್ಮ ಸ್ಥಾವರ ಬದುಕನ್ನು ಪ್ರಶ್ನಿಸುತ್ತವೆ. ಅಲ್ಲಿ ದೂರದಲ್ಲಿ, ಎದುರಿನ ಕಟ್ಟಡಗಳಾಚೆಗೆ, ಮರಗಳೆಡೆಯಲ್ಲಿ ಶಿವಾಜಿ ನಗರದ ಕ್ಯಾಂಟ್‌ನಿಂದ ಮೆಜಸ್ಟಿಕ್ಕಿಗೆ ರೈಲುಗಳು ಹೋಗುವುದು, ಬರುವುದು ಕಾಣಿಸುತ್ತದೆ. ಯಾವ ನಿಲ್ದಾಣಕ್ಕೂ ಸ್ವಂತವಾಗದೇ ಸದಾ ಚಲಿಸುತ್ತಲೇ ಇರುವ ರೈಲು. ಏನೆಲ್ಲ ಸರಕು, ಸರಂಜಾಮು, ಕನಸು, ಖುಷಿ, ದುಃಖಗಳ ಸಮೇತ ಎಲ್ಲಿಂದ ಎಲ್ಲಿಗೋ ಹೊರಟ ಪ್ರಯಾಣಿಕರಿರುವ ಏಳುನೂರು ಮೀಟರ್ ಉದ್ದದ ಒಂದಿಡೀ ಉದ್ದಾನುದ್ದ ರೈಲು ಅಲ್ಲಿ ಹಳಿಗಳ ಮೇಲೆ ಹಾದು ಹೋಗುತ್ತದೆ. ಅದು ಹಾಗೆ ಹೋಗುವುದನ್ನು ನೋಡಿದಾಗ ಏನೋ ಸಂಭ್ರಮ, ಸಮಾಧಾನ. ಅಲ್ಲಿಂದ ಕಣ್ಣು ಕಿತ್ತರೆ ಮತ್ತದೇ ಬ್ಯಾಲೆನ್ಸ್ ಶೀಟು, ಪ್ರಾಫಿಟ್ಟು ಲಾಸು ಸ್ಟೇಟ್ಮೆಂಟ್, ಅದೆಂಥದೋ ಟಾರ್ಗೆಟ್, ಉಸಿರುಗಟ್ಟಿಸುವ ಡೆಡ್ ಲೈನ್, ಕರಿಯರ್ ಗ್ರೋತ್, ಹೈಕು, ಪ್ರಮೋಷನ್ನು, ಅವುಗಳನ್ನು ಸಾಧಿಸಲು ಹಾಕಿಕೊಂಡ ನಿಯಮ, ಪ್ರೋಸೆಸ್, ಪ್ರಸೀಜರ್‌ಗಳು, ಸ್ವಾರ್ಥ, ಮೋಸ, ಮೇಲಾಟಗಳು… ಅರೆರೇ, ಅರೆ ಕ್ಷಣದಲ್ಲಿ ಹಾದು ಹೋಗುವ ಕಿಟಕಿಯಲ್ಲಿನ ಅಷ್ಟು ಚಿಕ್ಕ ರೈಲಿಗೆ ಕೊಡಲಿಕ್ಕೆ ನಮ್ಮಗಳ ಇಷ್ಟು ದೊಡ್ಡ ದೈನಿಕದಲ್ಲಿ ಜಾಗವೇ ಇಲ್ಲವಲ್ಲ?

ಮುಗಿಲೆತ್ತರದ ಕಟ್ಟಡಗಳ ನಡುವೆ ನಡೆಯುವಾಗ ಬೆಂಗಳೂರು ಆಕಾಶವನ್ನೇ ಮಾಡು ಮಾಡಿಕೊಂಡು ಕಟ್ಟಿದ ರಾಕ್ಷಸ ನಗರಿಯಂತೆ ಕಾಣುತ್ತಿತ್ತು. ಎರಡು ಫ್ಲೋರು ಹತ್ತಿ ಮನೆಯ ಟೆರಾಸನ್ನೇರಿದಾಗ ಕೊಂಚ ಸಮಾಧಾನವಾಯಿತು. ಎಂಟು, ಹತ್ತು, ಹದಿಮೂರು ಮಹಡಿಗಳ ಗಗನ ಚುಂಬಿಗಳನ್ನು ಹತ್ತಿದಾಗಂತೂ ಬೆಂಗಳೂರು ಇನ್ನಷ್ಟು ವಿಸ್ತಾರವೂ, ಅಪ್ಯಾಯಮಾನವೂ ಆಯಿತು. ಕೊನೆಗೆ ಅಷ್ಟೇ ಎತ್ತರದ ಟೆರಾಸೇ ಸುಂಯ್ಯನೆ ಓಡುವಂತೆ ಕಾಣುವ ಮೆಟ್ರೋ ಬಂತು ನೋಡಿ? ಸೂರ್ಯೋದಯ, ಸೂರ್ಯಾಸ್ತ, ಕೊಳಚೆ ನೀರು ಹರಿಯುವ ನಾಲೆ, ದಿಗಂತದ ತನಕ ಹಾಸಿದ ಕಟ್ಟಡಗಳ ಸಾಲು, ಅವುಗಳ ನೆತ್ತಿಗೆ ಕೆಂಬಣ್ಣ ಸುರಿಯುವ ತಂಪು ಸಂಜೆ, ಕೆಳಗಡೆ ರಸ್ತೆಯಲ್ಲಿ ಎಲ್ಲಿಂದ ಎಲ್ಲಿಗೋ ಹೋಗಿರುವ ರಸ್ತೆಗಳು, ಅವುಗಳ ಮೇಲೆ ಓಡುವ ವಾಹನಗಳು… ಎಲ್ಲವೂ ಎಲ್ಲದೂ ಯಾರೋ ಬರೆದಿಟ್ಟ ಸುಂದರ ಚಲಿಸುವ ಚಿತ್ರದಂತೆ ಕಾಣತೊಡಗಿತು. ಅದೇ ಶಹರ. ಅದೇ ಬೀದಿಗಳು. ಅವವೇ ದೃಶ್ಯಗಳು. ನಿಂತ ಜಾಗ ಹಾಗೂ ನೋಡುವ ನೋಟಗಳು ಬದಲಾಗಿದ್ದೇ ಎಷ್ಟೊಂದು ಸುಂದರವಾದವಲ್ಲ!
ಮೆಜಸ್ಟಿಕ್ ಬಸ್ ಸ್ಟ್ಯಾಂಡಿನ ಫ್ಲೈ ಓವರ್ ಮೇಲೆ ನಿಂತು ಕೆಳಗಿನ ನಿಲ್ದಾಣವನ್ನು ನೋಡಿದರೆ ಎಲ್ಲೆಲ್ಲಿಂದಲೋ ಬಂದ, ಎಲ್ಲೆಲ್ಲಿಗೋ ಹೊರಟ ನೂರಾರು ಬಸ್ಸುಗಳು. ದೂರದ ಹಳ್ಳಿಗಳಿಂದ ಬದುಕು ಹುಡುಕಿಕೊಂಡು ಬಂದು ಈಗಷ್ಟೇ ಈ ಕಾಯಕದ ನಗರಿಗೆ ಕಾಲೂರುತ್ತಿರುವ ನಮ್ಮದೇ ನೆನ್ನೆಯ ಪ್ರತಿರೂಪಗಳು. ಹೊಟ್ಟೆಯನ್ನು ಪ್ಯಾಂಟಿನೊಳಗೆ ಬಲವಂತವಾಗಿ ತುರುಕಿಕೊಂಡು ಬಸ್ಸು ಹತ್ತುತ್ತಿರುವ, ನಮ್ಮ ನಾಳೆಯಂತೆ ಕಾಣುವ ಪಯಣಿಗರು. ಇವರೆಲ್ಲ ಎಲ್ಲಿಂದ ಬಂದವರು? ಎಲ್ಲಿಗೆ ಹೊರಟಿದ್ದಾರೆ? ಎಂದೂ ನಿಲ್ಲದ ಈ ನಿರಂತರ ಮಾನವ ಪ್ರವಾಹವನ್ನು ಈ ಶಹರ ಹೇಗೆ ನಿಭಾಯಿಸುತ್ತಿದೆ? ಅಗೋ ಆ ಬಸ್ಸಿನ ಕಿಟಕಿಯ ಮೇಲೆ ಜಾರುತ್ತಿರುವ ಹನಿಗಳು. ಎಲ್ಲಿ ಸುರಿದ ಮಳೆಯೋ ಅದು? ಯಾವ ಊರಿನ ಮುಂಗಾರನ್ನು ಇಲ್ಲಿಗೆ ಸುದ್ದಿಯಾಗಿ ಹೊತ್ತು ತಂದಿದೆ ಆ ಬಸ್ಸು? ಅರೇರೇ, ನಾನಲ್ಲಿ ಕೋಣೆಯಲ್ಲಿ ಸುಮ್ಮನೆ ಕಾಲು ಚಾಚಿ ಮೊಬೈಲು ಒತ್ತುತ್ತಿರುವ ಹೊತ್ತಿಗೇ ಇಲ್ಲಿ ಎಂತೆಂಥಾ ಜೀವಂತ ಚಲನೆಗಳು ಸರಿದಾಡುತ್ತವಲ್ಲ? ಏಕಕಾಲಕ್ಕೆ ನಮ್ಮನ್ನು ಒಳಗೊಂಡಂತೆ ಹಾಗೂ ಹೊರಗಿಟ್ಟಂತೆ ಕಾಣುವ ಈ ಜಗತ್ತು… ಅದು ನನಗೆ ಏನನ್ನು ಹೇಳುತ್ತಿದೆ?
ಮಹಾನಗರಿಯ ಏರಿಯಾಗಳುದ್ದಕ್ಕೂ ಈಗ ಹೂಬಿಟ್ಟ ಮರಗಳು. ಬೀದಿ ಬೀದಿಯಲ್ಲೂ ಉದುರಿ ಬಿದ್ದ ಲಕ್ಷಾಂತರ ಹೂವುಗಳು. ಕಾಯಿ, ಹಣ್ಣು, ಬೀಜವಾಗದೇ ಉದುರಿಹೋದ ಅವನ್ನು ನೀಲಿ ಅಂಗಿ ತೊಟ್ಟ ಬಿಬಿಎಂಪಿ ನೌಕರರು ರಾಶಿ ಮಾಡುವುದನ್ನು ನಿರ್ಭಾವುಕವಾಗಿ ನೋಡಿ ನಮ್ನಮ್ಮ ಕಂಪನಿಯ ಎಂಟ್ರಿ ಗೇಟನ್ನು ಹೊಗ್ಗುತ್ತೇವೆ. ಇಲ್ಲಿ ಹೊಕ್ಕಾಗಿಂದ ಪ್ರಕೃತಿಯ ಇಂಥಾ ಅದೆಷ್ಟೋ ವಸಂತಗಳಿಗೆ ನಮ್ಮೆದೆಯಲ್ಲಿ ಎಂಟ್ರಿ ಬಂದ್ ಮಾಡಿಕೊಂಡಿದ್ದೇವೆ. ಎಷ್ಟೋ ಚೈತ್ರ, ವೈಶಾಖ, ಕಾರ್ತೀಕ, ಮಾಗಿಗಳು ನಮ್ಮನ್ನು ಸೋಕದೆಯೇ ವಿಫಲ ಹೂವಾಗಿ ಉದುರಿಹೋಗಿವೆ. ಹಾಗಾಗಿಯೇ ಆಫೀಸು ಕದ ಮುಚ್ಚಿದ ಒಂದು ಶನಿವಾರ, ಒಂದು ಭಾನುವಾರವನ್ನು ಕಳೆಯಲಾರದೆ ನಿರುಪಾಯರಾಗಿದ್ದೀವೇನೋ ಅನ್ನಿಸಿತು.
ಎಷ್ಟೆಲ್ಲ ಸಾಧ್ಯತೆಗಳಿರುವ, ಏನೆಲ್ಲ ಲವಲವಿಕೆಯನ್ನು ಮೈಗೂಡಿಸಿಕೊಂಡಿರುವ, ಎಂಥಾ ಮಂಕು ಕ್ಷಣದಲ್ಲೂ ಜೀವಂತಿಕೆಯ ಕಂದೀಲು ಬೆಳಗಿಸಿಬಿಡುವ ಹೊರಗಿನ ಪ್ರಪಂಚ. ಎರಡೇ ಎರಡು ಹೆಜ್ಜೆಯಿಟ್ಟರೆ ಸಿಕ್ಕಿ ಬಿಡುವ ಅದು ಒಳಬರದಂತೆ ಕಾಂಪೌಂಡು ಕಟ್ಟಿ, ಗೇಟು ಹೂತು, ಜೊತೆಗೊಬ್ಬ ಸೆಕ್ಯೂರಿಟಿಯನ್ನು ನಿಲ್ಲಿಸಿಬಿಟ್ಟಿದ್ದೇವೆ. ಅವನು ಒಳಬರಲೆಂದು ಕದ ತಟ್ಟಿದ ಬದುಕಿನ ಎಲ್ಲ ಸಂಭ್ರಮಗಳಿಗೂ ಐಡಿ ಪ್ರೂಫು, ಉದ್ದೇಶ, ಲಾಭದ ಲೆಕ್ಕ, ವಿಳಾಸಗಳನ್ನು ಕೇಳಿ ನಿರಾಕರಿಸಿ ಮರಳಿ ಕಳುಹಿಸುತ್ತಿದ್ದಾನೆ.

ನಾವಿಲ್ಲಿ ಕಿಟಕಿಯೂ ಇಲ್ಲದ, ಇದ್ದರೂ ಅದಕ್ಕೆ ಕರ್ಟನ್ ಮುಚ್ಚಿದ ಕೃತಕ ಬೆಳಕಿನ ಕೋಣೆಯೊಳಗೆ ಅವವೇ ನಷ್ಟ-ಲಾಭಗಳಿಗೆ ಸಂದುಹೋಗಿ ಸಾಟರ್ಡೇ-ಸಂಡೆ ಬೋರಿಂಗ್ ಎನ್ನುತ್ತಿದ್ದೇವೆ.

ವಿನಾಯಕ ಅರಳಸುರಳಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೋಕಿನ ಅರಳಸುರಳಿ ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ಸ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಸಣ್ಣ ಕಥೆ, ಲಲಿತ ಪ್ರಬಂಧ ಹಾಗೂ ಕವಿತೆಗಳನ್ನು ಬರೆದಿದ್ದು ‘ನವಿಲುಗರಿ ಮರಿ ಹಾಕಿದೆ’ ಹೆಸರಿನ ಲಲಿತ ಪ್ರಬಂಧ ಸಂಕಲನ ಹಾಗೂ ‘ಮರ ಹತ್ತದ ಮೀನು’ ಕಥಾ ಸಂಕಲನಗಳು ಪ್ರಕಟವಾಗಿವೆ.
