ಇಂತಹ ವಿಚಾರ ಮನಸ್ಸಿಗೆ ಬಂದ ಮೇಲೆ ಕಾರಂತರು ಸುಮ್ಮನೆ ಕೂರುವ ಜಾಯಮಾನದವರಲ್ಲ. ಮಕ್ಕಳಿಗೆ ತಮ್ಮ ಜಿಲ್ಲೆಯಾದ ದಕ್ಷಿಣಕನ್ನಡದ ಪರಿಚಯವನ್ನು ಸ್ವಾರಸ್ಯಕರವಾಗಿ ಮತ್ತು ಚಿತ್ರಸಹಿತವಾಗಿ ಮಾಡಿಕೊಡುವ `ಚಿತ್ರಮಯ ದಕ್ಷಿಣಕನ್ನಡ’ ಕೃತಿಯನ್ನು ರಚಿಸಿಯೇಬಿಟ್ಟರು. ಇದಕ್ಕಾಗಿ ಜಿಲ್ಲೆಯ ತುಂಬ ಓಡಾಡಿ ಅನೇಕ ಛಾಯಾಚಿತ್ರಗಳನ್ನು ತೆಗೆದರು, ಚಿತ್ರಗಳನ್ನು ಸ್ವತಃ ಬರೆದರು! ಮುಂದೆ ಮಕ್ಕಳಿಗಾಗಿ ಮತ್ತು ಆಸಕ್ತ ದೊಡ್ಡವರಿಗಾಗಿ `ದಕ್ಷಿಣ ಹಿಂದೂಸ್ಥಾನ’ ಕೃತಿಯನ್ನು ಹಾಗೂ `ಬಾಲಪ್ರಪಂಚ’, `ವಿಜ್ಞಾನ ಪ್ರಪಂಚ’ ಎಂಬ ವಿಶ್ವಕೋಶಗಳನ್ನು ರಚಿಸಿದರು. ಈ ಕೊಡುಗೆಗಳ ಮಹತ್ವವನ್ನು ವಿದ್ವಾಂಸ ಡಾ.ವಿವೇಕ ರೈ ಅವರು ಹೀಗೆ ಗುರುತಿಸಿದ್ದಾರೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ನಲವತ್ತೈದನೆಯ ಬರಹ
ವಿಜ್ಞಾನ ಅಂದ ಕೂಡಲೆ ಅದು ಬಹು ಕಠಿಣ ವಿಷಯ ಎಂಬ ಭಾವನೆ ಅನೇಕ ಜನರ ಮನಸ್ಸಿನಲ್ಲಿ ಬರುತ್ತದೆ. ಭೌತಶಾಸ್ತ್ರದ ಕ್ಲಿಷ್ಟ ಸಿದ್ಧಾಂತಗಳು, ನೆನಪಿಟ್ಟುಕೊಳ್ಳಲು ಕಷ್ಟವೆನ್ನಿಸುವ ರಸಾಯನ ಶಾಸ್ತ್ರದ ಸಂಕೀರ್ಣ ಸಮೀಕರಣಗಳು, ತಲೆಗೆ ಹೋಗಲು ಸುತರಾಂ ನಿರಾಕರಿಸುವ ಗಣಿತದ ಉದ್ದುದ್ದ ಲೆಕ್ಕಗಳು – ಪ್ರಮೇಯಗಳು, ಎಷ್ಟು ಉರು ಹೊಡೆದರೂ ಮರೆಯುವ ಸಸ್ಯಶಾಸ್ತ್ರದ ಗಿಡಮರಗಳ ಜಟಿಲಾತಿಜಟಿಲ ಅಕ್ಷರಜೋಡಣೆಯ ಅಗಣಿತ ಹೆಸರುಗಳು, ಬರೆದು ಅಳಿಸಿ ಬರೆದು ಅಳಿಸಿ ಎಷ್ಟು ಒದ್ದಾಡಿದರೂ ಸರಿಯಾಗಿ ಬರದೆ ಅಧ್ಯಾಪಕರಿಂದ ಬಯ್ಗುಳ ತಿನ್ನುವಂತೆ ಮಾಡುವ ಪ್ರಾಣಿಶಾಸ್ತ್ರದ ಜಿರಳೆ, ಕಪ್ಪೆ ಚಿತ್ರಗಳು! ಪರಿಸ್ಥಿತಿ ಹೀಗಿರುವಾಗ `ಅಯ್ಯೋ … ಬೇಡಪ್ಪಾ ಬೇಡ ನಮಗೆ ಈ ವಿಜ್ಞಾನದ ಸಹವಾಸ!’ ಅಂದುಕೊಳ್ಳುವವರು ಅನೇಕರಿದ್ದಾರೆ. ಆದರೆ ವಿಜ್ಞಾನವನ್ನು ಸರಳವಾಗಿ ಅರ್ಥವಾಗುವಂತೆ ಮಕ್ಕಳಿಗೆ ಇಷ್ಟವಾಗುವಂತೆ ಕಲಿಸಬಹುದು, ಜನರಿಗೆ ಇಷ್ಟವಾಗುವಂತೆ ಅದನ್ನು ಸುಗಮವಾಗಿ ಬರೆಯಬಹುದು ಎಂದು ನಂಬುವ ಕೆಲವು ಧೀಮಂತರು ಸಹ ನಮ್ಮ ಕನ್ನಡದ ನುಡಿಲೋಕದಲ್ಲಿ ಇದ್ದರು ಹಾಗೂ ಇದ್ದಾರೆ. ಅಂಥವರಲ್ಲಿ ನೆನಪಾಗುವ ಮೊಟ್ಟ ಮೊದಲ ಹೆಸರೆಂದರೆ ಶಿವರಾಮ ಕಾರಂತರು.
ಹೌದು. ಕನ್ನಡ ನಾಡಿನ ಜನಮಾನಸದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ, ಯಕ್ಷಗಾನದ ಪುನರುದ್ಧಾರಕ, ಕಡಲ ತೀರದ ಭಾರ್ಗವ ಎಂದು ಹೆಸರಾಗಿರುವ ಶಿವರಾಮ ಕಾರಂತರು ಕನ್ನಡ ಭಾಷೆಯ ವಿಜ್ಞಾನ ಸಂವಹನಕ್ಕೂ ಗಮನೀಯ ಕೊಡುಗೆ ಕೊಟ್ಟಿದ್ದಾರೆ. ಈ ಕೊಡುಗೆಯನ್ನು ಗಮನಿಸುವುದು ಈ ಪ್ರಬಂಧದ ಉದ್ದೇಶವಾಗಿದೆ.
ಕನ್ನಡದಲ್ಲಿ ವಿಜ್ಞಾನ ಬರವಣಿಗೆಯನ್ನು ಮಾಡಿದ ಮೊದಲಿಗರಲ್ಲಿ ಕಾರಂತರು ಮುಖ್ಯರು. ಇದಕ್ಕೆ ಕಾರಣ ಕನ್ನಡ ನಾಡಿನಲ್ಲಿ ವಿಜ್ಞಾನ ವಿಷಯಗಳಲ್ಲಿ ಮಕ್ಕಳಿಗಾಗಿ ಉತ್ತಮ ಗ್ರಂಥಗಳಿಲ್ಲ ಎಂಬ ವಿಚಾರವು ಅವರ ಮನಸ್ಸಿನಲ್ಲಿ ಬಂದು ತಾವೇ ಈ ಕೊರತೆಯನ್ನು ಏಕೆ ತುಂಬಬಾರದು ಎಂದು ಅವರು ಆಲೋಚಿಸಿದ್ದು. ತಮ್ಮ ಆತ್ಮಕಥನವಾದ `ಹುಚ್ಚು ಮನಸ್ಸಿನ ಹತ್ತು ಮುಖಗಳು’ಕೃತಿಯ “ಶಿಕ್ಷಣ –ಅನ್ಯ ವಿಷಯಗಳಲ್ಲಿ” ಎಂಬ ಅಧ್ಯಾಯದಲ್ಲಿ ಈ ವಿಷಯವನ್ನು ಹೀಗೆ ವಿವರಿಸಿದ್ದಾರೆ. (ನೋಡಿ. `ಹುಚ್ಚು ಮನಸ್ಸಿನ ಹತ್ತು ಮುಖಗಳು’ – ಡಾ.ಕೆ.ಶಿವರಾಮ ಕಾರಂತ, ಪುಟ 194-206, ಸಪ್ನ ಬುಕ್ ಹೌಸ್ ಪ್ರಕಟಣೆ, ಹತ್ತೊಂಬತ್ತನೇ ಮುದ್ರಣ ಆಗಸ್ಟ್ 2016)
- “ನನ್ನ ಅಭಿರುಚಿ– ಕಲೆ, ವಿಜ್ಞಾನ, ರಾಜಕೀಯಗಳಲ್ಲಿತ್ತು….. ನನ್ನ ವ್ಯಾಸಂಗವು ಹೆಚ್ಚಾಗಿ ಇಂಗ್ಲಿಷ್ ಭಾಷೆಯ ಮೂಲಕವೇ ಸಾಗಿತು. ಆಂಗ್ಲ ಭಾಷೆಯಲ್ಲಿ ವಿವಿಧ ವಿಷಯಗಳನ್ನು ಕುರಿತು ಇರುವ ಬರವಣಿಗೆಗಳು ನನ್ನನ್ನು ವಿಶೇಷ ಮುಗ್ಧನನ್ನಾಗಿ ಮಾಡಿವೆ… ಸಾಕಷ್ಟು ಓದುತ್ತಲಿರುವ ನನಗೆ ಕನ್ನಡ ಭಾಷೆಯ ಜ್ಞಾನದಾರಿದ್ರ್ಯ ನೋವುಂಟು ಮಾಡದೆ ಇರಲಿಲ್ಲ…….. ಇನ್ನು ನಮ್ಮಲ್ಲಿರುವ ಪಠ್ಯಪುಸ್ತಕಗಳನ್ನಾಗಲೀ, ಮಕ್ಕಳ ಗ್ರಂಥಗಳನ್ನಾಗಲೀ ಕಂಡರೆ, ಇಲ್ಲಿ ನೀರಸವಾದ ಬರವಣಿಗೆಯೇ ಕಾಣಿಸುತ್ತದೆ. ಮಕ್ಕಳ ಆಸಕ್ತಿಯನ್ನು ಕೆರಳಿಸುವ ಪ್ರಯತ್ನವಾಗಲೀ, ಅವರ ಊಹೆಯನ್ನು ಬೆಳೆಯಿಸುವ ಪ್ರಯತ್ನವಾಗಲಿ, ಮನಃಶಾಸ್ತ್ರದ ಪರಿಚಯವಾಗಲೀ ಕಾಣುವುದಿಲ್ಲ. ಭೂಗೋಲದಂತಹ ರುಚಿಕರ ವಿಷಯವನ್ನೂ ನೀರಸವಾಗಿ ಬರೆಯುವ ವಿಧಾನ ಕಾಣಿಸುತ್ತದೆ. ಈ ಪರಿಸ್ಥಿತಿಯನ್ನು ತುಸುವಾದರೂ ಬದಲಾಯಿಸಬಾರದೇ– ಎನಿಸುತ್ತಿತ್ತು ನನಗೆ” (ನೋಡಿ. `ಹುಚ್ಚು ಮನಸ್ಸಿನ ಹತ್ತು ಮುಖಗಳು’ – ಡಾ.ಕೆ.ಶಿವರಾಮ ಕಾರಂತ, ಪುಟ 195-196, ಸಪ್ನ ಬುಕ್ ಹೌಸ್ ಪ್ರಕಟಣೆ, ಹತ್ತೊಂಬತ್ತನೇ ಮುದ್ರಣ ಆಗಸ್ಟ್ 2016).
ಇಂತಹ ವಿಚಾರ ಮನಸ್ಸಿಗೆ ಬಂದ ಮೇಲೆ ಕಾರಂತರು ಸುಮ್ಮನೆ ಕೂರುವ ಜಾಯಮಾನದವರಲ್ಲ. ಮಕ್ಕಳಿಗೆ ತಮ್ಮ ಜಿಲ್ಲೆಯಾದ ದಕ್ಷಿಣಕನ್ನಡದ ಪರಿಚಯವನ್ನು ಸ್ವಾರಸ್ಯಕರವಾಗಿ ಮತ್ತು ಚಿತ್ರಸಹಿತವಾಗಿ ಮಾಡಿಕೊಡುವ `ಚಿತ್ರಮಯ ದಕ್ಷಿಣಕನ್ನಡ’ ಕೃತಿಯನ್ನು ರಚಿಸಿಯೇಬಿಟ್ಟರು. ಇದಕ್ಕಾಗಿ ಜಿಲ್ಲೆಯ ತುಂಬ ಓಡಾಡಿ ಅನೇಕ ಛಾಯಾಚಿತ್ರಗಳನ್ನು ತೆಗೆದರು, ಚಿತ್ರಗಳನ್ನು ಸ್ವತಃ ಬರೆದರು! ಮುಂದೆ ಮಕ್ಕಳಿಗಾಗಿ ಮತ್ತು ಆಸಕ್ತ ದೊಡ್ಡವರಿಗಾಗಿ `ದಕ್ಷಿಣ ಹಿಂದೂಸ್ಥಾನ’ ಕೃತಿಯನ್ನು ಹಾಗೂ `ಬಾಲಪ್ರಪಂಚ’, `ವಿಜ್ಞಾನ ಪ್ರಪಂಚ’ ಎಂಬ ವಿಶ್ವಕೋಶಗಳನ್ನು ರಚಿಸಿದರು. ಈ ಕೊಡುಗೆಗಳ ಮಹತ್ವವನ್ನು ವಿದ್ವಾಂಸ ಡಾ.ವಿವೇಕ ರೈ ಅವರು ಹೀಗೆ ಗುರುತಿಸಿದ್ದಾರೆ –
- “ಕನ್ನಡದಲ್ಲಿ ವಿಜ್ಞಾನ ಬರಹಗಳೇ ಇಲ್ಲದಿದ್ದ ಕಾಲದಲ್ಲಿ ಮಕ್ಕಳಿಗೆ ಮತ್ತು ಮಕ್ಕಳಂತಹ ದೊಡ್ಡವರಿಗೆ ಕನ್ನಡದಲ್ಲಿ ವಿಜ್ಞಾನ ಸಂಬಂಧಿ ವಿಷಯಗಳನ್ನು ತಿಳಿಸುವ ಕೆಲಸವನ್ನು ಸ್ವಂತ ಪರಿಶ್ರಮದಿಂದ ಕಾರಂತರು ಮಾಡಿದರು. ಇಂತಹ ಕೆಲಸವನ್ನು ಆ ಕ್ಷೇತ್ರದಲ್ಲಿ ವಿಶೇಷ ತಜ್ಞರಾಗಿರುವವರು ಇನ್ನೂ ಸಮರ್ಪಕವಾಗಿ ಮಾಡಬೇಕೆಂಬುದು ಕಾರಂತರು ಉದ್ದಕ್ಕೂ ಪ್ರತಿಪಾದಿಸಿಕೊಂಡು ಬಂದ ಧೋರಣೆ” (ನೋಡಿ – ಕನ್ನಡ ಸಾಹಿತ್ಯ ಈ ಶತಮಾನದ ನೋಟ, ಶಿವರಾಮ ಕಾರಂತ, ಪುಟ -7, ಸಂಪಾದಕ–ಟಿ.ಪಿ.ಅಶೋಕ, ಪ್ರಕಟಣೆ – ಕನ್ನಡ ವಿಶ್ವವಿದ್ಯಾಲಯ, ಹಂಪಿ, 1993).
ಜ್ಞಾನ ವಿಜ್ಞಾನಗಳ ಬಗ್ಗೆ ತಮ್ಮಲ್ಲಿದ್ದ ಅಪಾರ ಆಸಕ್ತಿಯಿಂದಾಗಿ ಮಕ್ಕಳಿಗೆ, ಶಿಕ್ಷಕರಿಗೆ, ವಯಸ್ಕರಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿಸುವ ಅನೇಕ ಕೃತಿಗಳನ್ನು ಕಾರಂತರು ರಚಿಸಿದರು. `ಸ್ವಾತಂತ್ರ್ಯಪೂರ್ವ ಭಾರತವು ತನ್ನ ಅಜ್ಞಾನ, ಮೂಢನಂಬಿಕೆಗಳಿಂದ ಬಿಡುಗಡೆಗೊಳ್ಳಬೇಕಾದರೆ ಆಧುನಿಕ ವಿಜ್ಞಾನವು ಅತ್ಯಗತ್ಯ’ ಎಂಬುದು ಕಾರಂತರ ನಂಬುಗೆಯಾಗಿತ್ತು.

ಶ್ರೀಮತಿ ಮಾಲಿನಿ ಮಲ್ಯ ಅವರು ಸಂಕಲಿಸಿರುವ ಕಾರಂತರ ಬರವಣಿಗೆಯ ರಾಶಿಯಲ್ಲಿ ಇರುವ ವಿಜ್ಞಾನ ಸಾಹಿತ್ಯದ ಕೃತಿಗಳು ಅನೇಕ. ಉದಾಹರಣೆಗೆ
ವಿಚಿತ್ರ ಖಗೋಲ-1965
ನಮ್ಮ ಭೂಖಂಡಗಳು – 1967
ಹಿರಿಯ ಕಿರಿಯ ಹಕ್ಕಿಗಳು – 1971
ವಿಜ್ಞಾನ ಮತ್ತು ಅಂಧಶ್ರದ್ಧೆ– 1982
ಉಷ್ಣವಲಯದ ಆಗ್ನೇಸ್ಯ– 1983
ಪ್ರಾಣಿ ಪ್ರಪಂಚದ ವಿಸ್ಮಯಗಳು – 1984
ಮಂಗನ ಕಾಯಿಲೆ -1984
ವಿಶಾಲ ಸಾಗರಗಳು – 1984
ವಿಜ್ಞಾನ ಪ್ರಪಂಚ – ಭಾಗ 1, 2, 3, 4 – 1959 – 1964
ಪ್ರಾಣಿ ಪ್ರಪಂಚ– 1990
ಕಾರಂತರ ಕೆಲವು ವೈಜ್ಞಾನಿಕ ಲೇಖನಗಳು
ನಮ್ಮ ಸುತ್ತಲಿನ ಕಡಲು- 1956
ಪರಮಾಣು–ಇಂದು ನಾಳೆ – 1957
`ವಸಂತ’ ಪತ್ರಿಕೆಯಲ್ಲಿ ಅನೇಕ ವಿಜ್ಞಾನ ಲೇಖನಗಳು.
ಹೀಗೆ ಸಾಕಷ್ಟು ಪ್ರಮಾಣದಲ್ಲಿ ಕಾರಂತರು ಕನ್ನಡದಲ್ಲಿ ವಿಜ್ಞಾನ ಸಾಹಿತ್ಯವನ್ನು ರಚಿಸಿದ್ದಾರೆ.
*****
ಈಗ, ಕಾರಂತರ ವಿಜ್ಞಾನ ಬರವಣಿಗೆಯ ಒಂದು ಉದಾಹರಣೆಯನ್ನು ಗಮನಿಸೋಣ.
“ಪ್ರತಿಯೊಂದು ಜೀವಿಯ ಮನಸ್ಸಿನಲ್ಲೂ ತನ್ನ ಸುತ್ತಲಿನ ಪ್ರಪಂಚವನ್ನು ಕಂಡು ಬೆರಗು ಹುಟ್ಟುತ್ತಿರಬಹುದು. ತಾನಿರುವುದೆಲ್ಲಿ, ತನ್ನ ಸುತ್ತಲಿರುವುದೇನು ಎಂಬ ಪ್ರಶ್ನೆಗಳು ಅದರ ಮನಸ್ಸಿನಲ್ಲಿ ಹುಟ್ಟುತ್ತವೆ. ಹೀಗೆ ಪ್ರಶ್ನೆ ಕೇಳುವ ಜೀವಿಯ ಪಾಲಿಗೆ, ತಾನಿರುವ ನೆಲವೋ, ಜಲವೋ ತನ್ನ ಪ್ರಪಂಚದ ಒಂದು ಎಲ್ಲೆಯಾದರೆ, ಅದನ್ನು ನಾಲ್ಕು ಸುತ್ತು ಆವರಿಸಿರುವ ಆಕಾಶ, ಆ ಆಕಾಶದಲ್ಲಿ ಕಾಣಿಸುವ ತಾರೆಗಳು, ಸೂರ್ಯ, ಮತ್ತು ಚಂದ್ರ – ಇವುಗಳು ಇನ್ನೊಂದು ಎಲ್ಲೆ. ಕಾಣುತ್ತಿರುವ ಪ್ರಾಣಿಯ ಪಾಲಿಗೆ ಇದೊಂದು “ವಿಶ್ವ” ಎನಿಸಬಹುದು. ಮನುಷ್ಯನಿಗಿಂತಲೂ ಕಡಿಮೆ ವಿಚಾರಶಕ್ತಿಯುಳ್ಳ ಪ್ರಾಣಿಗಳಲ್ಲೂ ಇಂಥ ಬೆರಗು ಉಂಟಾಗಬಹುದು…… ಅವುಗಳ ಜೀವನಕ್ರಮವನ್ನು ನೋಡಿದರೆ, ಅವು ಸಹ ಹೊರಗಣ ಪ್ರಪಂಚದ ಬದಲಾವಣೆಗಳಿಗೆ ಜಡವಾಗಿಲ್ಲವೆಂದೇ ಕಾಣಿಸುತ್ತದೆ”
*****
`ಕನ್ನಡ ವಿಜ್ಞಾನ ಬರವಣಿಗೆಯಲ್ಲಿ ಮೊದಲು ನೆನಪಾಗುವ ಹೆಸರುಗಳಲ್ಲಿ ಶಿವರಾಮ ಕಾರಂತರದು ಒಂದು’ ಎಂದು ನಮ್ಮ ನಾಡಿನ ವಿಜ್ಞಾನಕ್ಷೇತ್ರದ ವಿದ್ವಾಂಸರೇ ಒಪ್ಪಿಕೊಳ್ಳುತ್ತಾರೆ. ಸ್ವತಃ ವಿಜ್ಞಾನಿಯಲ್ಲದಿದ್ದರೂ ತಮ್ಮ ಸ್ವಂತ ಆಸಕ್ತಿ, ಆಲೋಚನೆಗಳಿಂದ ವಿಜ್ಞಾನವನ್ನು ಓದಿ, ಅನುವಾದಿಸಿ ಬರೆದವರು ಕಾರಂತರು.
ವೈಜ್ಞಾನಿಕ ಸಂವಹನದ ಬಗ್ಗೆ ಕಾರಂತರಿಗಿದ್ದ ಕಾಳಜಿಯು 1929ರಲ್ಲಿ, ಶ್ರೀಯುತ ಟಿ.ಮಂಗೇಶರಾವ್ ಎಂಬವರು ರಚಿಸಿದ `ಪದಾರ್ಥ ವಿಜ್ಞಾನ’ ಎಂಬ ಪುಸ್ತಕಕ್ಕೆ ಅವರು ಬರೆದ ಮುನ್ನುಡಿಯೊಂದರಲ್ಲಿ ವ್ಯಕ್ತವಾಗುತ್ತದೆ–
- “ಗ್ರಂಥಕ್ಕೆ ಪದಾರ್ಥ ವಿಜ್ಞಾನವೆಂದು ಹೆಸರಿಟ್ಟಿರುವುದಾದರೂ ಭೌತಿಕ ವಿಜ್ಞಾನವೆಂದರೆ ಲೇಸಿತ್ತು. ಕನ್ನಡನುಡಿಯಲ್ಲಿ ವೈಜ್ಞಾನಿಕ ಗ್ರಂಥಗಳು ತೀರ ವಿರಳ. ಅದೂ ಭೌತಿಕ ವಿಜ್ಞಾನವನ್ನು ಕುರಿತು ಬರೆದ ಪುಸ್ತಕವಿರುವುದಿಲ್ಲ. ಇಂಥ ಶಾಸ್ತ್ರೀಯ ಪುಸ್ತಕಗಳನ್ನು ಬರೆಯುವಾಗ ಪಾರಿಭಾಷಿಕ ವೈಜ್ಞಾನಿಕ ಶಬ್ದಗಳಿಗೆ ಸರಿಯಾದ ವೈಜ್ಞಾನಿಕ ಶಬ್ದಗಳು ದೊರೆಯುವುದಿಲ್ಲ. ಅಂಥ ಪ್ರಸಂಗಗಳಲ್ಲಿ ಹೊಸ ಶಬ್ದಗಳ ಸೃಷ್ಟಿಯನ್ನು ಮಾಡಬೇಕಾಗುವುದು. ಈ ಶ್ರಮವನ್ನೆಲ್ಲ ಸಹಿಸಿಕೊಂಡು ಇಂಥ ಗ್ರಂಥವನ್ನು ಬರೆಯಲು ಲೇಖಕರು ಮುಂದಾದುದು ಸ್ತುತ್ಯವೇ ಸರಿ…… ಮುಖ್ಯವಾಗಿ ಕನ್ನಡದಲ್ಲಿ ಶಾಸ್ತ್ರೀಯ ವಿಷಯಗಳ ಶಿಕ್ಷಣವು ಸರಿಯಾಗಿ ನಡೆಯಲಾರದು ಎಂಬವರ ಅನುಮಾನಗಳಿಗೆ ಇದು ತಕ್ಕ ಪ್ರತ್ಯುತ್ತರವೆನ್ನಬಹುದು ……” (ನೋಡಿ – ಖಗೋಲ ವಿಜ್ಞಾನಕ್ಕೆ ಶಿವರಾಮ ಕಾರಂತರು ಬರೆದ ಪೀಠಿಕೆ. ಲೇಖನ – ಪುರಾತನರ ಕಲ್ಪನೆಯಲ್ಲಿ ವಿಶ್ವ, ಉಪಶೀರ್ಷಿಕೆ –ಕಂಡುದೇ ಪ್ರಪಂಚ. ವಿಜ್ಞಾನ ಪ್ರಪಂಚ–1959-64).
ಹೀಗೆ ಬರೆದ ಕಾರಂತರ ವಿಜ್ಞಾನ ಬರವಣಿಗೆಯ ಭಾಷೆಯನ್ನು ಕುರಿತು ಹೇಳುವುದಾದರೆ ಅದು ಸರಳವಾಗಿದೆ, ಸುಲಭವಾಗಿ ಅರ್ಥ ಮಾಡಿಕೊಳ್ಳುವಂತಿದೆ, ಹಾಗೂ ಸ್ವಾರಸ್ಯಕರವೂ ಆಗಿದೆ. ಅಗತ್ಯವಿರುವ ಕಡೆ ಕಾರಂತರು ಹೊಸ ಪದಗಳನ್ನು ಸಹ ನಿರ್ಮಿಸಿಕೊಳ್ಳುತ್ತಾರೆ ಮತ್ತು ಕನ್ನಡದ ಜಾಯಮಾನಕ್ಕೆ ಹೊಂದುವಂತೆ ಬರೆಯುತ್ತಾರೆ. ಓದುಗರೊಂದಿಗೆ ಆಪ್ತವಾಗಿ ಸಂಭಾಷಿಸುತ್ತಾ, ಅವರಿಗೆ ಭಾರವಾಗದಂತೆ ವಿಷಯಗಳನ್ನು ಮಂಡಿಸುತ್ತಾರೆ. ಇಂದಿನ ವಿಜ್ಞಾನ ಬರಹಗಾರರೂ ಕೂಡ ಅಳವಡಿಸಿಕೊಳ್ಳಬೇಕಾದ ಭಾಷಾರೂಪ ಕಾರಂತರದು. `ಸ್ಥಾವರ ಸಂತಾನ’, `ಕಂಟಕಚರ್ಮಿ’, `ಹಣತೆ ಚಿಪ್ಪು’, `ಗುಂಯಿಗುಡುಕʼ……. ಇಂತಹ ಅನೇಕ ಸರಳ, ನವೀನ ಕನ್ನಡ ಪದಗಳನ್ನು ಕಾರಂತರು ಬಳಸುವುದು ಅವರ ಸಂವಹನದ ಶೈಲಿಯನ್ನು ಆಕರ್ಷಕಗೊಳಿಸಿದೆ.
*****
ಕಾರಂತರ ಸಾಹಿತ್ಯಸೃಷ್ಟಿಯ ಹಿನ್ನೆಲೆಯಲ್ಲಿದ್ದದ್ದು ಒಂದು ಅಖಂಡ ಪ್ರಜ್ಞೆ. ಬದುಕಿನ ಬಗೆಗಿನ ಬೆರಗು, ತನ್ನ ಅನುಭವಕ್ಕೆ ಬಂದ ಬದುಕನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ, ತಾನು ಕಂಡದ್ದನ್ನು ತನ್ನ ಸಹಜೀವಿಗಳಿಗೆ ಮುಖ್ಯವಾಗಿ ಮಕ್ಕಳಿಗೆ ತಿಳಿಸಿಕೊಡಬೇಕೆಂಬ ಹಂಬಲ. ಇದಕ್ಕಾಗಿ ಅವರು ಮಾಡಿದ ವಿಶ್ವಕೋಶಗಳ ರಚನೆ, ಶಿಕ್ಷಣದಲ್ಲಿ ಮಾಡಿದ ಹೊಸಪ್ರಯೋಗಗಳು, ಇವೆಲ್ಲವೂ ಪ್ರತ್ಯೇಕ ಪ್ರತ್ಯೇಕ ಚಟುವಟಿಕೆಗಳಲ್ಲ, ಬದಲಾಗಿ ಒಂದೇ ಪ್ರಜ್ಞೆಯ ತಾರ್ಕಿಕ ಮುಂದುವರಿಕೆಗಳು. ಈ ಹಿನ್ನೆಲೆಯಲ್ಲಿ ನೋಡಿದಾಗ ಮೂಲತಃ ಕಾರಂತರ ಜೀವನದೃಷ್ಟಿಯಲ್ಲೇ ವೈಜ್ಞಾನಿಕದರ್ಶನವಿತ್ತು ಅನ್ನಿಸುವುದು ಸಹಜ. ಬೇರೆಯವರು ಹೇಳಿದ್ದನ್ನು ಕುರುಡಾಗಿ ನಂಬದೆ ಪ್ರಶ್ನಿಸುವ ಮನೋಭಾವವು ಅವರಲ್ಲಿ ಬದುಕಿನುದ್ದಕ್ಕೂ ಇತ್ತು. “ಜೀವಜಾಲದಲ್ಲಿರುವುದು ಮನಷ್ಯ ಜೀವಿಯೊಂದೇ ಅಲ್ಲ, ಉಳಿದ ಅನೇಕ ಜೀವಿಗಳಂತೆ ಅವನೂ ಒಬ್ಬ ಜೀವಿ ಅಷ್ಟೆ. ಉಳಿದ ಜೀವಿಗಳೊಂದಿಗೆ ಅವನು ಹೊಂದಿಕೊಂಡು ಹೋಗಬೇಕೇ ಹೊರತು ಅವಕ್ಕೆ ಹಾನಿ ಮಾಡಬಾರದು. ಈ ಅದ್ಭುತ ಪ್ರಕೃತಿಯ ವೈಶಿಷ್ಟ್ಯ, ಸೂಕ್ಷ್ಮತೆಗಳನ್ನು ಅವನು ಅರಿಯಲು ಯತ್ನಿಸಬೇಕು, ತನಗೂ ಇತರ ಜೀವಿಗಳಿಗೂ ಇರುವ ಯಾವತ್ತೂ ಸಂಬಂಧವನ್ನು ಅವನು ಮರೆಯಬಾರದು”– ಇದು ಕಾರಂತರು ಬದುಕಿನುದ್ದಕ್ಕೂ ನಂಬಿದ್ದ ಚಿಂತನೆಯಾಗಿತ್ತು. ಜೊತೆಗೆ ಕನ್ನಡ ನಾಡಿನ ಎಳೆಯರಿಗೆ ಈ ಆರೋಗ್ಯಕರ ಮತ್ತು ಸಕಲಜೀವಪರ ದೃಷ್ಟಿಕೋನವನ್ನು ತಿಳಿಸಿಕೊಡಬೇಕು ಎಂಬುದು ಅವರ ಉದ್ದೇಶವಾಗಿತ್ತು. ಗಮನೀಯ ವಿಷಯವೆಂದರೆ ತಾವು ಕೇವಲ ಆರಾಮಕುರ್ಚಿಯ ಚಿಂತಕರಲ್ಲದ ಕಾರಣ ಕಾರಂತರು ತಮ್ಮ ಈ ದೃಷ್ಟಿಕೋನವನ್ನು ಪ್ರಯೋಗಾತ್ಮಕಗೊಳಿಸಲು ಗರಿಷ್ಠ ಮಟ್ಟದಲ್ಲಿ ಕಾರ್ಯೋನ್ಮುಖರಾದರು. ಅದಕ್ಕಾಗಿಯೇ ಅವರು ನಮ್ಮ ಮಕ್ಕಳಲ್ಲಿ ಮತ್ತು ದೊಡ್ಡವರಲ್ಲಿ ಪ್ರಪಂಚವನ್ನು ಕುರಿತು ಈ ವಿನಯವಂತ, ವಿಶಾಲ, ವೈಜ್ಞಾನಿಕ ದೃಷ್ಟಿಕೋನವನ್ನು ಮೂಡಿಸಲು ಇನ್ನಿಲ್ಲದಂತೆ ಶ್ರಮಿಸಿದರು. ಚಿತ್ರಸಹಿತ ಸರಳಗನ್ನಡ ವಿಜ್ಞಾನ ಪುಸ್ತಕಗಳನ್ನು, ವಿಶ್ವಕೋಶಗಳನ್ನು ರಚಿಸಿದರು. ಶಿಕ್ಷಕರಿಗೆ ಅನುಕೂಲವಾಗಲೆಂದು ಪಠ್ಯಪುಸ್ತಕಗಳನ್ನು ರಚಿಸಿದರು. `ಬಾಲವನ’ವೆಂಬ ಶಾಂತಿನಿಕೇತನದಂತಹ ನಿಸರ್ಗನೆಲೆಯ ಶಾಲೆಯನ್ನು ತೆರೆದರು. `ತರಂಗ’ ವಾರಪತ್ರಿಕೆಯಲ್ಲಿ, ಮಕ್ಕಳ ಕುತೂಹಲ ತಣಿಸುವಂತಹ, `ಬಾಲವನದಲ್ಲಿ ಕಾರಂತಜ್ಜ’ ಪ್ರಶ್ನೋತ್ತರ ಅಂಕಣಕ್ಕೆ ಸಂಪನ್ಮೂಲ ವ್ಯಕ್ತಿಯಾದರು. ಪರಿಸರ ಚಳುವಳಿಗಳಲ್ಲಿ ನಿರಂತರವಾಗಿ ಮತ್ತು ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ತಮ್ಮ ಸೃಜನಸಾಹಿತ್ಯ ಕೃತಿಗಳಲ್ಲಿ ವೈಜ್ಞಾನಿಕ ಮನೋಧರ್ಮವುಳ್ಳ ಪ್ರಶ್ನೆಗಳನ್ನು ಎತ್ತಿದರು. ಧಾರ್ಮಿಕ ವಿಷಯಗಳನ್ನೂ ಸಹ ಹೇಗೆ ವೈಜ್ಞಾನಿಕ ರೀತಿಯಲ್ಲಿ ನೋಡಬಹುದೆಂಬುದನ್ನು ತೋರಿಸಿಕೊಟ್ಟರು. 96ರ ಇಳಿವಯಸ್ಸಿನಲ್ಲೂ ಸಾಯುವ ಕೆಲವೇ ತಿಂಗಳ ಮೊದಲು ಅವರು ಪಕ್ಷಿಗಳ ಅದ್ಭುತ ಲೋಕ ಎಂಬ ಕೃತಿಯನ್ನು ರಚಿಸುವುದಕ್ಕಾಗಿ ಟಿಪ್ಪಣಿ ಮಾಡಿದರು.
ಕಾರಂತರ ವೈಜ್ಞಾನಿಕ ಬರವಣಿಗೆಯು ಆ ಕ್ಷೇತ್ರದ ಅತ್ಯುತ್ತಮ ಬರವಣಿಗೆ ಅಲ್ಲದಿರಬಹುದು ಅಥವಾ ಇಂದಿನ ತಿಳುವಳಿಕೆಯ ಬೆಳಕಿನಲ್ಲಿ ನೋಡಿದಾಗ ಅದು ತುಂಬ ಮಹತ್ವದ್ದು ಅನ್ನಿಸದಿರಬಹುದು. ಆದರೆ ಈ ಬರವಣಿಗೆಗೆ ಒಂದು ಚಾರಿತ್ರಿಕ ಮಹತ್ವವಿದೆ. ಈ ತರಹದ ಬರವಣಿಗೆಗಳು ಇಲ್ಲದಿದ್ದ ಕಾಲದಲ್ಲಿ ಕಾರಂತರು ವಿಜ್ಞಾನವನ್ನು ಕನ್ನಡದಲ್ಲಿ ಹೀಗೆ ಸ್ವಾರಸ್ಯಕರವಾಗಿ, ಸರಳವಾಗಿ ಬರೆಯಬಹುದು ಎಂದು ತೋರಿಸಿಕೊಟ್ಟದ್ದು ಗಮನೀಯ ವಿಷಯ. ಈ ಕಾರಣಕ್ಕಾಗಿ ಕನ್ನಡ ವಿಜ್ಞಾನ ಸಂವಹನದ ಕ್ಷೇತ್ರದಲ್ಲಿ ಕಾರಂತರಿಗೆ ಒಂದು ಅನನ್ಯವಾದ ಹೆಸರಿದೆ, ಪ್ರಾಮುಖ್ಯವಿದೆ. ಅವರ ಕನ್ನಡ ವಿಜ್ಞಾನ ಸಂವನಹದ ಕ್ಷೇತ್ರದ ಕೆಲಸವು ಈ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಒಂದು ಮಾರ್ಗಪ್ರವರ್ತಕ ಕಾರ್ಯವಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಆಧುನಿಕ ಕನ್ನಡ ಸಾಹಿತ್ಯಚರಿತ್ರೆಯ ಸಂಪುಟಗಳ ಭಾಗವಾಗಿ ಪ್ರಕಟಗೊಂಡ “ವಿಜ್ಞಾನತಂತ್ರಜ್ಞಾನ” ಕೃತಿಯಲ್ಲಿ ಈ ಸಂಗತಿಯನ್ನು ಗುರುತಿಸಲಾಗಿದೆ.

“(ವಿಜ್ಞಾನ) ಬರೆಹ ಮತ್ತು ಪ್ರಕಟಣೆಯಲ್ಲಿ ತೊಡಗಿದ ಮೊದಲ ಸಾಲಿನ ವ್ಯಕ್ತಿಗಳಲ್ಲಿ ಕಾರಂತರು ಪ್ರಮುಖರು……. ಭಾಷೆಯು ಆದಷ್ಟೂ ಸುಲಭವಾಗುವಂತೆ ಕನ್ನಡದ ಬಳಕೆಯನ್ನು ಹೆಚ್ಚಿಸಿ ಪಾರಿಭಾಷಿಕ ಪದಗಳನ್ನು ತಿಳಿಯಾಗಿ ಪರಿವರ್ತಿಸಿ ಇಲ್ಲವೇ ಮೂಲದಂತೆ ಬಳಸಿ ಅವರು ವಿಷಯವನ್ನು ಪ್ರತಿಪಾದಿಸಿದರು. ಈ ಪ್ರಕ್ರಿಯೆಯಲ್ಲಿ ಸೃಜನಶೀಲ ಸಾಹಿತ್ಯ ಮತ್ತು ವಿಜ್ಞಾನ ಸಾಹಿತ್ಯಗಳ ನಡುವೆ ಇದ್ದಿರಬಹುದಾದ ಅಡ್ಡಗೋಡೆ ಮರೆಯಾಯಿತು!’’ `ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ–ಆರಂಭಿಕ ಹೆಜ್ಜೆಗಳು’ ಲೇಖನ. ಅಡ್ಯನಡ್ಕ ಕೃಷ್ಣಭಟ್, ವಿಜ್ಞಾನ ತಂತ್ರಜ್ಞಾನ ಕೃತಿ, ಪುಟ 11-12, ಆಧುನಿಕ ಸಾಹಿತ್ಯಚರಿತ್ರೆ, ಸಂಪಾದಕರು– ಟಿ. ಆರ್. ಅನಂತರಾಮು, ಕನ್ನಡ ಸಾಹಿತ್ಯ ಪರಿಷತ್ತು, ಪ್ರಕಟಣೆ– 2015.
ತೀರ್ಮಾನರೂಪವಾಗಿ ಹೇಳುವುದಾದರೆ ಕನ್ನಡದ ವಿಜ್ಞಾನ ಸಂವಹನದ ಕ್ಷೇತ್ರದ ಪ್ರಾತಃಸ್ಮರಣೀಯರಲ್ಲಿ ಡಾ.ಶಿವರಾಮ ಕಾರಂತರು ಮುಖ್ಯರು.

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.
