ರಾಮಕೃಷ್ಣ ಚಿಕ್ಕಯ್ಯನ ಕುರಿತ ನನ್ನ ಇನ್ನೊಂದು ಚಿಕ್ಕಂದಿನ ನೆನಪೆಂದರೆ, ನನ್ನ “ಅಕ್ಷರ ಚೈತನ್ಯ” ಕವನಸಂಕಲನವನ್ನು ಓದಿ ಅವರು ಬರೆದ ಪತ್ರ. ಅದು ಈಗಲೂ ನನ್ನ ಬಳಿ ಭದ್ರವಾಗಿದೆ ಅದೊಂದು ಚಿಕ್ಕ-ಚೊಕ್ಕ ಪತ್ರ; ಆದರೆ, ಕವಿಗೆ ತನ್ನ ಕವಿತೆಗಳನ್ನು ಹೊಗಳುವವರಲ್ಲ; ಅರ್ಥ ಮಾಡಿಕೊಳ್ಳುವವರು ಪ್ರತಿಕ್ರಿಯೆ ವ್ಯಕ್ತಪಡಿಸಿದಾಗ ಆಗುವ ಸಂತೋಷ ನನಗಾಗಿತ್ತು- ಅದನ್ನೋದಿದಾಗ. ಮತ್ತೊಂದೆಂದರೆ, ಅಷ್ಟೊಂದು ಪ್ರಮುಖ ರಾಜಕಾರ್ಯದ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿರುವ ಒಂದು ವ್ಯಸ್ತ ಸುಸಂಸ್ಕೃತ ಮನಸ್ಸು, ಕವಿತೆಗಳ ಓದಿನ ಪ್ರತಿಯುಣಿಸಿಗೆ (feedback) ವ್ಯವಧಾನ ತೋರಿದ್ದು. ತುದಿಯಲ್ಲಿ ಒಂದು ಸವಿಯಾದ ಸಹಿ; “ಇಂತೀ, ನಿನ್ನ ಚಿಕ್ಕಯ್ಯ”.
ರಾಮಕೃಷ್ಣ ಹೆಗಡೆ ಅವರ ಜನ್ಮಶತಾಬ್ದಿಯ ನಿಮಿತ್ತ ಗೀತಾ ಹೆಗಡೆ ಬರಹ ನಿಮ್ಮ ಓದಿಗೆ
ಶತಕದ ಹಿಂದಿನ ಮಾತು. ಹೆಚ್ಚೂ ಕಡಿಮೆ ಒಂದೇ ವಾರಿಗೆಯ, ಏಳೆಂಟು ವಯಸ್ಸಿನ ಬಾಲಕರವರು. ತೋಟ, ಗದ್ದೆ, ಹುಲ್ಲಿನ ಬೇಣ, ಗುಡ್ಡ-ಬೆಟ್ಟಗಳನ್ನು ಸುತ್ತಿ- ಸುತ್ತಿ, ಅಲೆದು, ಆಟ, ಗೀಟ, ಹರಟೆ ಮುಗಿಸಿಕೊಂಡು, ಮುಸ್ಸಂಜೆಯ ಗೋಧೂಳಿಯ ಹೊಗರು ಹೊಮ್ಮುವಷ್ಟರಲ್ಲಿ ಮನೆ ಸೇರಲು ಮರಳುತ್ತಿದ್ದಾರೆ. ಹತ್ತಿನೂಲಿನ ಮಾಸಿದ ಸಾದಾ ಬನೀನು ಮತ್ತು ದೊಗಳೆ ಚಡ್ಡಿ, ಕೆದರಿದ ಕೂದಲು, ಹುಮ್ಮಸ್ಸಿನ ನಡಿಗೆ. ಇಬ್ಬರ ಬನೀನುಗಳೂ ಹೆಗಲನಾಧರಿಸಿದಂತೆಯೇ, ಎಂದಿನಂತೆ ಈ ಸಮಯದಲ್ಲಿ ಕೊರಳಿಗೆ ಜೋತುಬಿದ್ದ ಚಿಕ್ಕ ಜೋಳಿಗೆಗಳಾಗಿ ಸಲ್ಲುತ್ತಿವೆ, ಏಕೆಂದರೆ ಅಲ್ಲೀಗ ಇಷ್ಟು ಹೊತ್ತೂ ಅಲೆದು ಪಟ್ಟಾಂಗ ಕೊಚ್ಚುವಾಗ ಅವರು ಕೊಯ್ದ ನೇರಿಳೆ, ಪೇರಳೆ, ಪನ್ನೇರಳೆ, ಮಾವು, ಬಿಕ್ಕೆ, ಇತ್ಯಾದಿ ಬೆಟ್ಟದ/ ಬೇಣದ/ ತೋಟದ ದೋರಗಾಯಿ, ಮಿಡಿ, ಹಣ್ಣುಗಳೆಲ್ಲ ಅಲ್ಲೇ ಆಶ್ರಯ ಹೊಂದಿವೆ! ಒಬ್ಬನ ಹೆಸರು ಗಣೇಶ, ಇನ್ನೊಬ್ಬ ರಾಮಕೃಷ್ಣ…
ನೋಡು-ನೋಡುತ್ತಿದ್ದಂತೆ ವರುಷಗಳುರುಳಿದವು.. ಬಾಲಕರು ಯುವಕರಾದರು. ಬದುಕಿನ ತಿರುವು-ಹೊರಳುಗಳು, ಶಿಕ್ಷಣ, ಮುಂತಾಗಿ ಇಬ್ಬರ ಬದುಕಿನಲ್ಲೂ ಸಾಕಷ್ಟು ಬದಲಾವಣೆ, ಬೆಳವಣಿಗೆಗಳಾದವು; ಆದರೆ ಈ ಸ್ನೇಹದ ಆಳ-ನಿರಾಳ ಮಾತ್ರ ಬದಲಾಗಲಿಲ್ಲ. ಎಳೆವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡಿದ್ದ ಗಣೇಶ, ಎಳೆವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದ ರಾಮಕೃಷ್ಣ ಇವರ ಬದುಕಿನ ಹೊಂಬಿಸಿಲ ಕಿರಣಗಳಾಗಿದ್ದವೇನೋ- ಆ ಘಳಿಗೆಗಳು! ದಾಯಾದಿ ಸೋದರತ್ವ ಅಲ್ಲಿ ಹಿನ್ನೆಲೆಯ ಸಂಬಂಧವಷ್ಟೇ ಆಗಿತ್ತು. ಸಾಗರ ತಾಲೂಕಿನ ಮನೆಘಟ್ಟ ಗ್ರಾಮದಲ್ಲಿದ್ದ ಗಣೇಶನ ತಂಗಿಯ ಮನೆಗೆ, ಸಿದ್ದಾಪುರದಿಂದ ಇವರ ಸೈಕಲ್ ಪ್ರಯಾಣ! ಜೊತೆಗಿದ್ದ ಮತ್ತೊಬ್ಬ ನೆಂಟರೆಂದರೆ, ತಡಗಳಲೆ ವೆಂಕಟರಾಮು (ಅವರನ್ನು ನಾವು ಕರೆಯುತ್ತಿದ್ದುದು, ಪೇಪೀಭಾವ ಎಂದು- ಪೆಪ್ಪರಮಿಂಟ್ ಅಂಗಡಿಯ ಒಡೆಯನಾಗಿದ್ದರಿಂದ)
ಅಂದಿನ ಪದ್ಧತಿಯಂತೆ “ಹೆಣ್ಣು ನೋಡುವ ಶಾಸ್ತ್ರಕ್ಕೂ ಹಿರಿಯರೊಂದಿಗೆ, ಗೆಳೆಯ ಗಣೇಶನನ್ನು ಕರೆದುಕೊಂಡೇ ಹೋಗಿದ್ದಾಗಿತ್ತು. ಕೆಲ ವರ್ಷಗಳ ನಂತರ ಒಮ್ಮೆ ಯಾಣದ ಪ್ರವಾಸದಲ್ಲಿ (ಆಗೆಲ್ಲ- ಅಂದರೆ ಮೂವತ್ತರ ದಶಕದಲ್ಲಿ ಯಾಣದ ಹಾದಿ ಬಲು ದುಸ್ತರವಾಗಿತ್ತು. ಈಗಿನಂತೆ ಪ್ರವಾಸಿಗರಿಗೆ ಯಾವ ಸೌಕರ್ಯವೂ ಇದ್ದಿರಲಿಲ್ಲ), ಆ ದುರ್ಗಮ ಕಾಡು-ಕಣಿವೆಯನ್ನು ಏರಲಾರದೇ ಅವರ ಮಡದಿ ಶಕುಂತಲಾರನ್ನು ಹೇಗೆ ಮೇಲಕ್ಕೆ ಕರೆತರುವುದೆಂದು ತೋಚದೇ ಹೈರಾಣಾಗಿಬಿಟ್ಟಿದ್ದರಂತೆ. ಕಡೆಗೆ ಹಗ್ಗವನ್ನು ಅವರಿಗೆ ಸುತ್ತಿ-ಕಟ್ಟಿ ಮೇಲಕ್ಕೆಳೆಯಲಾಯಿತಂತೆ!
ಸೆಪ್ಟೆಂಬರ್ ಮೂರು, ೨೦೦೧ ರಂದು ಗಣೇಶರಿಗೆ ಲೋಧಿ ಎಸ್ಟೇಟ್, ನವದೆಹಲಿ ಕಾರ್ಯಾಲಯದಿಂದ ಸಂಸದ ರಾಮಕೃಷ್ಣರಿಂದ ಒಂದು ಭಾವಪೂರ್ಣ ಪತ್ರ ಬರುತ್ತದೆ. ಡಿಯರ್ ಶ್ರೀ ಗಣೇಶ, ಎಂದು ಪ್ರಾರಂಭವಾದ ಅದರ ಆಂಗ್ಲ ಭಾಷೆಯ ಒಕ್ಕಣೆಯ ಅನುವಾದ ಹೀಗಿರುತ್ತದೆ; “ಎಪ್ಪತ್ತೈದರ ವಯೋಮಾನದಲ್ಲಿ ಒಬ್ಬರ ಮನಃಸ್ಥಿತಿಯು ಸಮಂಜಸವಾಗಿ ವ್ಯಕ್ತಪಡಿಸಲಾರದಷ್ಟು ಸಮ್ಮಿಶ್ರವಾಗಿರುತ್ತದೆ. ಅದು ಬದುಕಿನಲ್ಲಿ ಒಂದು ದೀರ್ಘ ಗತಕಾಲ ಮತ್ತು ಹೃಸ್ವ ಭವಿಷ್ಯದ ಒಂದು ಘಟ್ಟ.
“ನನ್ನ ತೀವ್ರ ವಿರೋಧದ ಹೊರತಾಗಿಯೂ, ನನ್ನ ಮಿತ್ರರು ಮತ್ತು ಸಹೋದ್ಯೋಗಿಗಳು ಆಗಸ್ಟ್ ಇಪ್ಪತ್ತೊಂಬತ್ತು ೨೦೦೧ರಂದು ಏರ್ಪಡಿಸಿದ್ದ ಸಮಾರಂಭ ನನ್ನ ಜೀವನದ ಅತ್ಯಂತ ಸ್ಮರಣೀಯ ಸಂದರ್ಭವಾಯಿತು. ರಾಷ್ಟ್ರೀಯ ನಾಯಕರಾದ ಶ್ರೀ ಚಂದ್ರಶೇಖರ, ಢಾ. ಫಾರೂಕ್ ಅಬ್ದುಲ್ಲಾ, ಶ್ರೀ ಶರದ್ ಯಾದವ್, ಶ್ರೀ ಶರದ್ ಪವಾರ್, ಡಾ. ರಾಜಾರಾಮಣ್ಣ, ಕರ್ನಾಟಕ ಮುಖ್ಯಮಂತ್ರಿ ಶ್ರೀ ಎಸ್. ಎಮ್. ಕೃಷ್ಣ,, ಶ್ರೀಮತಿ ಮನೇಕಾ ಗಾಂಧಿ, ಶ್ರೀ ರಾಮ್ ಜೇಠ್ಮಲಾನಿ, ಡಾ. ಯು.ಆರ್. ಅನಂತಮೂರ್ತಿ, ಶ್ರೀ ಶತ್ರುಘ್ನ ಸಿನ್ಹಾ, ಶ್ರೀ ಎಮ್. ಜೆ. ಅಕಬರ್, ಶ್ರೀ ಅಂಬರೀಶ್, ಇವರೆಲ್ಲರ ಮತ್ತು ಉಪರಾಷ್ಟ್ರಪತಿ ಶ್ರೀ ಕೃಷ್ಣಕಾಂತ್, ಪ್ರಧಾನಮಂತ್ರಿ ಶ್ರೀ ವಾಜಪೇಯಿ, ಪಶ್ಚಿಮ ಬಂಗಾಳದ ಮಅಜಿ ಮುಖ್ಯಮಂತ್ರಿ ಶ್ರೀ ಜ್ಯೋತಿಬಸು ಹಾಗೂ ಅಸಂಖ್ಯಾತ ಗಣ್ಯರ ಮೃದುವಚನಗಳು ನನ್ನನ್ನು ಭಾವೋತ್ಕರ್ಷಕ್ಕೆ ಈಡುಮಾಡಿದವು. ಮೂವತ್ತು ಸಾವಿರಕ್ಕೂ ಹೆಚ್ಚಿನ ಜನಸಾಗರದ ಪ್ರೀತಿ, ವಿಶ್ವಾಸಗಳು ಮತ್ತೂ ಹೆಚ್ಚಿನ ಭಾವೋತ್ಕಟತೆ ಉಂಟುಮಾಡಿದವು.

ನಿನ್ನ ಶುಭಾಶಯಪತ್ರದ ಹಾರೈಕೆಗಳಿಗೆ ಮತ್ತು ನಿನ್ನ ನಿಃಸ್ಪೃಹ, ಬೆಚ್ಚನೆ ಭಾವನೆಗಳಿಗೆ ನಾನು ಋಣಿಯಾಗಿದ್ದೇನೆ.”
ಇವಿಷ್ಟು ಮುದ್ರಿತ ಆಂಗ್ಲ ಒಕ್ಕಣೆಯೊಂದಿಗೆ, ರಾಮಕೃಷ್ಣರ ಕೈಬರಹದಲ್ಲಿ ಒಂದು ನೀಲಿ ಶಾಯಿಯ ಒಂದು ಸಾಲು-“ನೀನು ಬಂದಿದ್ದರೆ ಚೆನಾಗಿತ್ತು” ಈ “ನಿಃಸ್ಪೃಹ” ಮತ್ತು “ಬೆಚ್ಚನೆ” – ಪದಗಳು ಈ ಬಾಲ್ಯಮಿತ್ರನನ್ನು ಬಣ್ಣಿಸಿದ ಪದಗಳಾಗಿದ್ದವು. ರಾಜ್ಯ ರಾಜಕಾರಣ ಮೀರಿ ರಾಷ್ಟ್ರ ರಾಜಕಾರಣದ ಭೂಮಿಕೆಯಲ್ಲಿ ಮಿಂಚುತ್ತಿರುವಾಗಲೂ, ತಾನಾಗೇ ಏನಾದರೂ ಅಥವಾ ಏನೇ ಬೇಕಾದರೂ- ಮಾಡಿಕೊಡುವ ನಿರಹಂಕಾರದ ಇಂಗಿತ ವ್ಯಕ್ತಪಡಿಸಿದಾಗಲೆಲ್ಲ, ನಯವಾಗಿ- ಆದರೆ ಖಚಿತವಾಗಿ, “ಅದೆಲ್ಲ ಏನೂ ಬೇಡ; ನೀನು ಹೀಗೇ ಇರು-ಸಾಕು!” ಎಂದು ಮಂದಸ್ಮಿತದೊಂದಿಗೆ ಹೇಳಿ ನಿರುಮ್ಮಳಗೊಳ್ಳುವ ಈ ಸರಳತೆಗೆ ಇನ್ನಾವ ಪದ ಒಪ್ಪೀತು!? ತಮ್ಮ ಸುತ್ತಮುತ್ತಲೆಲ್ಲ ಸದಾ ಸಮಯ ಕಾಯುತ್ತ, ಆಸ್ತಿ-ಪಾಸ್ತಿ, ಹಣ, ಕೆಲಸ, ಪದವಿ, ಪುರಸ್ಕಾರವೋ, ಮತ್ತೊಂದೋ ವಶೀಲೀಬಾಜಿಗೆ ದಾರಿ ಹುಡುಕುವ ಜನರನ್ನು ನೋಡಿನೋಡಿ, ತನ್ನ ಸಮಾಧಾನಕ್ಕಾಗಿ ತಾನಾಗಿ ಕೇಳಿದರೂ ಈತ ಹೀಗೆಂದು ತನ್ನ ನಿರುಪಾಯನನ್ನಾಗಿಸುವನಲ್ಲ –ಎಂದೆನಿಸಿರಲೂ ಸಾಕು! ಅದಕ್ಕೇ ಕೆಲವು ಸಲ ಹೇಳಿಯೂ ಬಿಡುತ್ತಿದ್ದರಂತೆ- “ನೀನು ನನಗೆ ಅರ್ಥವೇ ಆಗುತ್ತಿಲ್ಲ; ನಿನ್ನನ್ನು ಅರ್ಥ ಮಾಡಿಕೊಳ್ಳುವುದು ಹೇಗೆ ಮಾರಾಯ? ಎಂದು!” ರಾಜ್ಯದಲ್ಲಾಗಲೀ, ಕೇಂದ್ರದಲ್ಲಾಗಲೀ ಅತ್ಯುನ್ನತ ಹುದ್ದೆಯನ್ಣು ಅಲಂಕರಿಸಿ, ದೇಶ-ವಿದೇಶಗಳಲ್ಲಿ ಮನ್ನಣೆ ಗಳಿಸಿದರೂ, ರಾಜಕಾರಣವನ್ನು ಜನಸೇವೆಯ ಕಾರಣವಾಗಿಸಿದ ಹೆಗ್ಗಳಿಕೆ ಸಾಧಿಸಿದಾಗಲೂ, ಅವರ ನೆಲದ ಬೇರುಗಳನ್ನು ಮರೆಯದ ಮನುಜರಾಗಿದ್ದರು. ಅಪಾರ ಸಾಹಿತ್ಯದ ಓದುಗ. ಸ್ವತಃ ಬರಹಗಾರ. ಮದುವೆ-ಮುಂಜಿಗಳಲ್ಲಿ ಹಾಡುವ ಸಂಪ್ರದಾಯದ ಹಾಡುಗಳನ್ನು ಆಲಿಸುವುದು , ಊರಿಗೆ ಬಂದಾಗಲೆಲ್ಲ ಗೆಳೆಯ ಗಣೇಶರ ಮನೆಗೆ ಸಪರಿವಾರ ಭೇಟಿ ತಪ್ಪಿಸುತ್ತಲೇ ಇರಲಿಲ್ಲ. ಗಣೇಶರು ತಮ್ಮ ಮಗಳ ಮೊದಲ ಕವನಸಂಕಲನವನ್ನು ಗೆಳೆಯನ ಕೈಗಿತ್ತಿದ್ದರು, ತಮ್ಮ ಬಿಡುವಿಲ್ಲದ ರಾಜಕೀಯ ಹೊಣೆಗಾರಿಕೆ- ಕರ್ತವ್ಯಗಳ ನಡುವೆಯೂ ಅದನ್ನೋದಿ, ಅಕ್ಕರೆಯಿಂದ, ಅಭಿಮಾನದಿಂದ ಒಂದು ಪತ್ರ ಬರೆದಿದ್ದರವರು! ಅದು ಭದ್ರವಾಗಿದೆ; ಸಂಗ್ರಹದಲ್ಲಿ ಮತ್ತು ಮನದಲ್ಲಿ!
ಅವರ ಪದವಿಗಳು, ಹುದ್ದೆಗಳು, ರಾಜಕಾರಣದ ಸುಳಿವು-ಸಿಕ್ಕುಗಳು… ಅವೆಲ್ಲವನ್ನೂ ಮೀರಿ, ಜನಮಾನಸದಲ್ಲಿ ಒಂದು ಸ್ಥಿರವಾದ, ಭಾವನಾತ್ಮಕವಾದ ಅಭಿಮಾನವನ್ನು ಪಡೆದಿದ್ದಕ್ಕೆ ಕಾರಣವೆಂದರೆ, ಬೇರುಮಟ್ಟದಲ್ಲಿ, ಹುಟ್ಟಿದ ನಾಡಮಣ್ಣಿನ ಬೆಸುಗೆಯನ್ನು ಶಿಥಿಲವಾಗಗೊಡದಿದ್ದ ಬಾಂಧವ್ಯ. ವಿಧಾನಪರಿಷತ್ತಿನ ವಿರೋಧ ಪಕ್ಷ ನಾಯಕನಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಕೇಂದ್ರ-ಸಂಪುಟದಲ್ಲಿ ಉನ್ನತ ಹುದ್ದೆಯಲ್ಲಿದ್ದು.. ಏನೇ ಇದ್ದರೂ, ಅವೆಲ್ಲವನ್ನೂ ಮೀರಿದ, ಒಂದು ಪ್ರಭಾವೀ ವ್ಯಕ್ತಿತ್ವವದು.
ಅವೆಲ್ಲವನ್ನೂ ಬದಿಗಿಟ್ಟು ನೋಡಿದರೆ, ಈಗಲೂ ನನಗೆ ವಿಸ್ಮಯವೆನಿಸಿದ ಸಂಗತಿ ಎಂದರೆ, ಅವರ ೭೫ನೇ ವರ್ಧಂತಿಗೆ, ಘಟಾನುಘಟಿಗಳಾದ ಹಿರಿ-ಕಿರಿಯರು ಸೇರಿ ರಚಿಸಿದ ಗೌರವ-ಗ್ರಂಥದಲ್ಲಿ, ತಮ್ಮೀ ಗೆಳೆಯನ ಕುರಿತಾಗಿ ಒಂದು ಲೇಖನವನ್ನು ಒತ್ತಾಸೆಯಿಂದ ಬರೆಸಿಕೊಂಡಿದ್ದರು ಅದೇ ಒಂದು ವಿಶಿಷ್ಟ ಅನುಭವ ನನಗೆ.
ಹೆಗಡೆ ೭೫ – ಅಭಿನಂದನಾ ಸಮಿತಿಯ ಅಧ್ಯಕ್ಷರು ಡಾ. ರಾಜಾರಾಮಣ್ಣ! (ಲೋಕಸಭಾ ಸದಸ್ಯರು). ಗ್ರಂಥಸಂಪಾದನಾ ಸಮಿತಿಯ ಸದಸ್ಯರೆಂದರೆ, ಡಾ. ಚಂದ್ರಶೇಖರ ಕಂಬಾರ, ಡಾ. ಯು.ಆರ್. ಅನಂತಮೂರ್ತಿ, ಪಾಟೀಲ ಪುಟ್ಟಪ್ಪ, ನಿಸಾರ್ ಅಹಮದ್, ಡಾ. ಸಿದ್ಧಲಿಂಗಯ್ಯ, ಡಾ. ಜಯಪ್ರಕಾಶ ಮಾವಿನಕುಳಿ, ಮತ್ತು ಪ್ರಮೋದ ಹೆಗಡೆ. ಚಂದ್ರಶೇಖರ ಕಂಬಾರರ ಸಹಿಯಿದ್ದ ಶೀರ್ಷಪತ್ರದಲ್ಲಿ ಈ ಅಭಿನಂದನಾ ಗ್ರಂಥಕ್ಕಾಗಿ ಒಂದು ಲೇಖನ ಬರೆದುಕೊಡಬೇಕೆಂದು ಅದರ ಒಕ್ಕಣೆಯಿತ್ತು! ಮೊದಲನೇ ಪತ್ರ ಬಂದಾಗ ಏನೋ ಅಪ್ಪಿ-ತಪ್ಪಿ ನಮ್ಮ ವಿಳಾಸಕ್ಕೆ ಬಂದಿರಬಹುದೆಂದು ಸುಮ್ಮನಾಗಿಬಿಟ್ಟಿದ್ದೆ; ಆದರೆ ಎರಡಲ್ಲ, ಮೂರು ಸಲ ಮತ್ತೆ ಅದೇ ಒಕ್ಕಣೆ, ದಿನಾಂಕ, ವಿಸ್ತರಣೆ ಬೇರೆ-ಬೇರೆ ಬರತೊಡಗಿದಾಗ ಇನ್ನು ಸುಮ್ಮನೆ ಇರುವುದು ಸರಿಯಲ್ಲ ಎನಿಸಿತು. ಇಷ್ಟಕ್ಕೂ, ಮೊದಲು ನಾನೇಕೆ ಸಂಕೋಚದಿಂದ ಉತ್ತರಿಸಿರಲಿಲ್ಲ ಎಂದರೆ ಅವರು ವಿನಂತಿಸಿದ ಲೇಖನದ ಶೀರ್ಷಿಕೆ ಏನು ಗೊತ್ತೇ? ಅದು- : ನನ್ನ ಅಪ್ಪಯ್ಯ.! ನಮ್ಮ ತಂದೆಯವರೊಂದಿಗೆ ತನ್ನ ಆ ಬಾಲ್ಯಸ್ನೇಹದ ಸವಿಯನ್ನು, ಗಾಢತೆಯನ್ನು ಮತ್ತು ನಿರಪೇಕ್ಷ ಅನುಬಂಧವನ್ನು ಅಕ್ಷರರೂಪದಲ್ಲೂ ಉಳಿಸಿಕೊಳ್ಳುವ ಹಂಬಲದಲ್ಲಿ ರಾಮಕೃಷ್ಣ ಹೆಗಡೆಯವರೇ ಒಂದರ ಮೇಲೊಂದು ಪತ್ರ ನನಗೆ ತಲುಪಿಸಿ, ಅಂತೂ ನಾನು ಒಂದು ಪುಟ್ಟ ಲೇಖನ ಬರೆದು, ಕಳಿಸಿಕೊಟ್ಟೆ! ಅದನ್ನವರು ಹೆಗಡೆ-೭೫ ಗ್ರಂಥದಲ್ಲಿ ಪ್ರಕಟಿಸಿಯೂ ಆಯಿತು! ..
ರಾಮಕೃಷ್ಣ ಚಿಕ್ಕಯ್ಯನ ಕುರಿತ ನನ್ನ ಇನ್ನೊಂದು ಚಿಕ್ಕಂದಿನ ನೆನಪೆಂದರೆ, ನನ್ನ “ಅಕ್ಷರ ಚೈತನ್ಯ” ಕವನಸಂಕಲನವನ್ನು ಓದಿ ಅವರು ಬರೆದ ಪತ್ರ. ಅದು ಈಗಲೂ ನನ್ನ ಬಳಿ ಭದ್ರವಾಗಿದೆ ಅದೊಂದು ಚಿಕ್ಕ-ಚೊಕ್ಕ ಪತ್ರ; ಆದರೆ, ಕವಿಗೆ ತನ್ನ ಕವಿತೆಗಳನ್ನು ಹೊಗಳುವವರಲ್ಲ; ಅರ್ಥ ಮಾಡಿಕೊಳ್ಳುವವರು ಪ್ರತಿಕ್ರಿಯೆ ವ್ಯಕ್ತಪಡಿಸಿದಾಗ ಆಗುವ ಸಂತೋಷ ನನಗಾಗಿತ್ತು- ಅದನ್ನೋದಿದಾಗ. ಮತ್ತೊಂದೆಂದರೆ, ಅಷ್ಟೊಂದು ಪ್ರಮುಖ ರಾಜಕಾರ್ಯದ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿರುವ ಒಂದು ವ್ಯಸ್ತ ಸುಸಂಸ್ಕೃತ ಮನಸ್ಸು, ಕವಿತೆಗಳ ಓದಿನ ಪ್ರತಿಯುಣಿಸಿಗೆ (feedback) ವ್ಯವಧಾನ ತೋರಿದ್ದು. ತುದಿಯಲ್ಲಿ ಒಂದು ಸವಿಯಾದ ಸಹಿ; “ಇಂತೀ, ನಿನ್ನ ಚಿಕ್ಕಯ್ಯ”.

ಅವರ ತಾಯಿ ಶ್ರೀಮತಿ ಸರಸ್ವತಮ್ಮ ಅವರನ್ನು ಹತ್ತಿರದಿಂದ ಬಲ್ಲವರಿಗೆ, ಅವರದೇ ಸರಳತನ, ನಿಗರ್ವ ಇವರಿಗೆ ಬಂದಂತೆ ಭಾಸವಾಗಿದ್ದರೆ ಅಚ್ಚರಿಯಿರಲಿಲ್ಲ. ಕೊಕ್ಕರೆಯ ಗರಿಯಂಥ ಬಿಳುಪಿನ ಸೀರೆ-ರವಿಕೆಯ ಧರಿಸಿದ, ಅಷ್ಟೇ ಬೆಳ್ಳಗಿದ್ದ, ಚದುರಿದ ಬಿಳೀ ತಲೆಗೂದಲಿನ, ಬೊಚ್ಚುಬಾಯ ಮುಕ್ತನಗುವಿನ ಆಪ್ತತೆಯಲ್ಲಿ ನಮ್ಮನೆಲ್ಲ ತೋಯಿಸುವ ಬಾಂಧವ್ಯಮಯಿ ಆಗಿದ್ದವರವರು. ಹವ್ಯಕ ಸಮುದಾಯದ ಎಲ್ಲ ಹೆಂಗಳೆಯರಂತೆ, ತನ್ನ ಪಾಲಿನ ಊಟವನ್ನಾದರೂ ಕೊಟ್ಟು, ಮನೆಗೆ ಬಂದ ಅತಿಥಿಗಳಿಗೆ ಅನ್ನವಿಕ್ಕಿದವರು. ಮಗ ರಾಜ್ಯಕ್ಕೇ ಮುಖ್ಯಮಂತ್ರಿಯಾಗಿರಲಿ, ಅಥವಾ ರಾಷ್ಟ್ರಮಟ್ಟದಲ್ಲೇ ಪದವಿ ಗಳಿಸಿದವನಾಗಿರಲಿ, ಅವರ ನಿರಾಡಂಬರ ಜೀವನಶೈಲಿ ಮಾತ್ರ ಬದಲಾಗಿರಲಿಲ್ಲ. ರಾಮಕೃಷ್ಣ ಹೆಗಡೆಯವರ ಜನ್ಮಶತಾಬ್ದಿಯ ನಿಮಿತ್ತ ಇವೆಲ್ಲ ಮರುಕಳಿಸಿದವು.
ಅಂಥ ಒಡನಾಟ ಅಂದಂದಿನ ಯುಗದ್ದಾಗಿತ್ತು; ನೆನಪಾಗಿ ಉಳಿಯುವುದು ಅವರ ನವಿರು ಸ್ನೇಹ.

ಕವಯತ್ರಿ, ಲೇಖಕಿ ಗೀತಾ ಹೆಗಡೆಯವರಿಗೆ ಸಂಗೀತ ಮತ್ತು ಪ್ರಕೃತಿಯಲ್ಲಿ ಆಸಕ್ತಿ. ‘ಅಕ್ಷರ ಚೈತನ್ಯ’ ಇವರ ಪ್ರಕಟಿತ ಕೃತಿ.

