ಗದ್ಯಗಂಧಿ ಕವಿತೆ; ಅಮ್ಮನ ಚಾಕು
ಅಮ್ಮನ ಚಾಕು ಕಾಡಿನಿಂದ ಹೊರಬರುವ ಮೃಗಗಳ ಸದ್ದು, ಅಮ್ಮನ ಚಾಕು ತುಂಬಿ ಕುದಿಯುತ್ತಿರುವ ಪಾತ್ರೆ, ಮಿಂಚಿನಿಂದ ಗುಡುಗು, ಅವಳ ಚಾಕು ಅವಳ ದೇಹದ ಕತ್ತಿ, ಅವಳ ಆಯ್ಕೆ ಸ್ಟೀಲು. ಸ್ಟೀಲಿನ ಚಾಕು. ಮುದಿತನ ಹೆಚ್ಚಾದಂತೆ ಚಾಕುವಿನ ಮರದ ಹಿಡಿತಕ್ಕೆ ಈರುಳ್ಳಿಯ ವಾಸನೆ. ಕೈ ಮತ್ತು ಬೆಂಕಿಯ ಕೈಚಳಕದಿಂದ ಹುಟ್ಟಿದ ಚಾಕು. ತುಂಬಾ ಹಿಂದೆ ಈಗ ಯಾರಿಗೂ ನೆನಪಿಗೂ ಹೊಳೆಯದಷ್ಟು ಹಿಂದೆ, ಹಳೆಯ ಕಬ್ಬಿಣದ ಸಾಮಾನು ಮಾರುವವನು ಈ ಚಾಕುವನ್ನು ತನಗೆ ಬೇಕಾದ ಹಾಗೆ ಹರಿತಗೊಳಿಸಿ ಮಿಂಚಿನಂತೆ ಮರೆಯಾದ. ಈಗ ಗುರುತೂ ಇಲ್ಲದಂತೆ ಕಾಣೆಯಾದ ಆ ಅಂಗಡಿಯ, ಮೂರ್ಖ ಮಾಲೀಕ, ತನ್ನ ಬಳಿಯಿದ್ದ ಒಂದೇ ಒಂದು ಒಳ್ಳೆಯ ಮಾಲನ್ನು, ಮಾರಿಬಿಟ್ಟು ಕಡೆಗೆ ಪಶ್ಚಾತಾಪ ಪಟ್ಟಿದ್ದ. ಅಡುಗೆ ಮಾಡಲು ದೇವತೆಯಂತೆ ಚೊಕ್ಕಾಗಿ ತಯಾರಾಗಿ ಸ್ಟೂಲಿನ ಮೇಲೆ ಕುಳಿತುಕೊಳ್ಳುತ್ತಿದ್ದ ಈ ಹೆಣ್ಣುಮಗಳಿಗೆ ಸ್ಟೀಲಿನ ಚಾಕುವೆ ಆಯುಧ. ಅವಳೊಂದು ಕೈಗೆ ಬೆರಳ ಕವಚ ತೊಡುತ್ತಾಳೆ. ಕತ್ತರಿಸುತ್ತಾಳೆ. ಅದು ಗೋಧಿಯನ್ನು ಮುತ್ತಿಗೆಯೊಳಗೆ ಹಿಡಿದಂತೆ, ಗಿಲೋಟಿನ್‌ನ ಕಸಿಯಂತೆ. ಕರಿಬೇವಿನೆಸಳುಗಳ ಘಮ ತುಂಬಿದ ಗಾಳಿಯನ್ನು ಸೀಳುತ್ತಾಳೆ. ಕಾಡುಬೆಕ್ಕುಗಳ ಆರೋಗ್ಯದ ಬಗ್ಗೆ, ಹಣ್ಣಿನ ತುಂಡಿನಿಂದ ನೆಟ್ಟ ಅನಾನಸ್ ಗಿಡದ ಬೆಳವಣಿಗೆಯ ಬಗ್ಗೆ, ಒದ್ದೆಗಾಳಿಯ ನಡುವೆಯೂ ಬಟ್ಟೆ ಒಣಗಿಸುವ ಬಗ್ಗೆ ಚಿಂತಿಸುತ್ತಾಳೆ. ಚಾಕುವಿನ ಅಂಚು ತರಕಾರಿಯ ಮೈ ಸ್ಪರ್ಶಿಸುತ್ತದೆ; ಕ್ಯಾರೆಟ್, ಸೂರೆಗಡ್ಡೆ, ಪಡವಲಕಾಯಿ, ಹಾಗಲಕಾಯಿ ಇತ್ಯಾದಿ. ಇತ್ಯಾದಿ. ಇತ್ಯಾದಿ… ಅಷ್ಟರಲ್ಲಿ ದಾರಿಯಲ್ಲಿ ಹೋಗುವ ದಾಸಯ್ಯ ಏನಮ್ಮಾ ಚಾಕುವಿನ ಹೊಟ್ಟೆ ಉಬ್ಬಿ ಮೊಂಡಾಗಿದೆಯಲ್ಲ ಎಂದು ಕೇಳುತ್ತಾನೆ.
ಇಡೀ ಜಗತ್ತಿನ ಹೊಟ್ಟೆಯೇ ಅದರೊಳಗೆ ಮುದ್ರೆಯೊತ್ತಿದ ಹಾಗೆ! ಜೀವದ ಗುರುತು. ಜೀವನದ ಗುರುತು. ಒಂದೊಂದೇ ಒದೆತ. ಒಂದೊಂದೇ ಬಾರಿ. ಆ ಒದೆತಗಳೆಲ್ಲವೂ ಚಾಕುವಿನೊಳಗೆ ತೂರಿ ಮನೆ ಮಾಡಿದ ಹಾಗೆ! ರಾತ್ರಿ ಊಟ ಮಾಡುವಾಗ ಕೈಗೆಲ್ಲಾ ಅನ್ನ ಸಾರಿನ ತುತ್ತಿನೆಂಜಲಂಟಿರುವಾಗ ಕಥೆ ಅವಳೊಳಗಿಂದ ಹೊಮ್ಮಿ ಬರುತ್ತದೆ. ಧಡೂತಿ ಹೆಂಗಸು. ಈ ಚಾಕು ಅವಳ ಹಳೆಯ ದೋಸ್ತಿ. ಇಡೀ ಜಗತ್ತಿನ ಉದರವೇ ಅದರೊಳಗೆ ಬೆಳೆಯುತ್ತಿರುವ ಬೆರಗು. ಈ ಚಾಕು. ಅಮ್ಮನ ಕೊನೆಯ ದಿನಗಳ ಹೊತ್ತಿಗೆ ಈ ಜಗತ್ತು ಮಾತ್ರ ಉಳಿದಿರುತ್ತದೆ. ಚಾಕು ಸವೆದಿರುತ್ತದೆ.
ಕವಿ ಪರಿಚಯ:
ಸಿಯನ್ ಮೆಲಾಂಗಲ್ ಡ್ಯಾಫಿಡ್ ಅವರು ಸಾಹಿತ್ಯ, ಹೋರಾಟ ಹಾಗೂ ಪರಿಸರಶಾಸ್ತ್ರವನ್ನು ಸಂಯೋಜಿಸುವ ಲೇಖಕಿ, ಕವಯತ್ರಿ, ಅನುವಾದಕಿ, ಯೋಗ ಶಿಕ್ಷಕಿ ಹಾಗೂ ನಿಸರ್ಗದ ಅಧ್ಯಯನಕಾರ್ತಿ. ಅವರ ಮೊದಲ ಕಾದಂಬರಿ Y Trydydd Peth (2009) National Eisteddfod ಸಾಹಿತ್ಯ ಪದಕವನ್ನು ಪಡೆದಿದೆ. ವೆಲ್ಷ್ ಮತ್ತು ಇಂಗ್ಲಿಷ್ ಎರಡರಲ್ಲೂ ಬರೆಯುವ ಅವರು, ಭಾಷೆ ಮತ್ತು ಸಂಸ್ಕೃತಿಗಳಾಚೆಗೆ ಬರಹಗಾರರು ಹಾಗೂ ಕಲಾವಿದರೊಂದಿಗೆ ಸಹಯೋಗ ನಡೆಸುತ್ತಾರೆ. ಅನಿತಾ ಥಂಪಿ ಅವರೊಂದಿಗೆ ಪ್ರಕಟಿಸಿದ Dŵr Arall / A Different Water (2018) ಅವರಿಗೆ ವಿಶೇಷ ಗುರುತನ್ನು ತಂದಿದೆ. ವೇಲ್ಸ್‌ನ ಎರಿರಿಯಲ್ಲಿ ವಾಸಿಸುವ ಅವರು, American University of Paris ನಲ್ಲಿ ಸೃಜನಾತ್ಮಕ ಬರವಣಿಗೆಯನ್ನು ಬೋಧಿಸುತ್ತಾರೆ. ವೇಲ್ಸ್‌ನ ಅಪವಾದಿತ ಮಾಟಗಾತಿಯರ ಕುರಿತ ಸಮುದಾಯಾಧಾರಿತ ಸಂಶೋಧನೆ ಹಾಗೂ ಪರಿಸರಾಧಾರಿತ ಕಾವ್ಯ ವಿಮರ್ಶೆ Modron ನ ಸಹ-ಸಂಪಾದಕತ್ವವೂ ಅವರ ಕೆಲಸದ ಭಾಗ.
[ಈ ಕವಿತೆಗಳನ್ನು ನಿರ್ದಿಗಂತದಲ್ಲಿ ನಡೆದ ಕಾವ್ಯ ಸಂಜೆ ಅಂತಾರಾಷ್ಟ್ರೀಯ ಕಾವ್ಯಾನುವಾದ ಕಾರ್ಯಾಗಾರದಲ್ಲಿ ಅನುವಾದಿಸಲಾಗಿದೆ. ಮೂಲಕವಿಗಳು ಸಹ ಕಾರ್ಯಾಗಾರದಲ್ಲಿ ಇದ್ದದ್ದು ಅನುವಾದದ ತೊಡಕುಗಳನ್ನು ಸೃಜನಶೀಲವಾಗಿ ಪರಿಹರಿಸಲು ಮತ್ತು ಸವಾಲುಗಳನ್ನು ಎದುರಿಸಲು ಮತ್ತು ಮೂಲ ಪಠ್ಯ ಹಾಗೂ ಕನ್ನಡ ನುಡಿಸಂಸ್ಕೃತಿ ಮುಖಾಮುಖಿಯಾಗುವ ಸಂತಸವನ್ನು, ಕಾವ್ಯಾನುವಾದದ ಸೂಕ್ಷ್ಮಗಳನ್ನು ಅರಿಯಲು ಸಹಾಯ ಮಾಡಿದೆ]

ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಇವರ ಆಸಕ್ತಿಯ ಕ್ಷೇತ್ರಗಳು. ಇವರ ಹಲವು ಕವಿತೆಗಳು, ಕಥೆಗಳು ನಾಡಿನ ಪ್ರಮುಖ ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಇಕ್ಬಾಲುನ್ನೀಸಾ ಹುಸೇನ್ ಅವರ ‘ಪರ್ದಾ & ಪಾಲಿಗಮಿ’ ಕಾದಂಬರಿಯನ್ನು ಕನ್ನಡಕ್ಕೆ ತಂದಿದ್ದಾರೆ. ಛoದ ಪುಸ್ತಕ ಪ್ರಕಾಶನ ಅದನ್ನು ಹೊರತಂದಿದೆ. Dmitrij Gawrisch ಅವರ ‘ಬ್ಯಾರೆನ್ ಲ್ಯಾಂಡ್’ ಎನ್ನುವ ಜರ್ಮನ್ ನಾಟಕವನ್ನು ಅನುವಾದ ಮಾಡಿದ್ದಾರೆ. ನೀಲಕುರಿಂಜಿ ಇವರ ಪ್ರಥಮ ಪ್ರಕಟಿತ ಕಥಾಸಂಕಲನ.
