ಲೂಸಿ ನಿಸರ್ಗದ ಕಂದ. ಹಳ್ಳಿಗಾಡಿನ ಮಳೆಬಿಸಿಲ ಕರುಣೆಯಲ್ಲಿ ಮಿಂದು ಹದವಾಗಿ ಅರಳಿದ್ದವಳು. ಕವಿ ಹೇಳುವಂತೆ ಅವಳಿಗೆ ಮೂರು ವರ್ಷವಿರುವಾಗ ಪ್ರಕೃತಿ ಈ ಸುಂದರ ಜೀವದ ಹೊಣೆ ಸಂಪೂರ್ಣವಾಗಿ ಹೊತ್ತುಕೊಳ್ಳಲು ಮುಂದೆ ಬಂತಂತೆ. ಬೆಟ್ಟ ನದಿ, ಗಿಡ ಮರ ಎಲ್ಲವೂ ತಮ್ಮ ಸತ್ವವನ್ನು ಅವಳಿಗೆ ಧಾರೆಯೆರೆದವಂತೆ. ಪ್ರಕೃತಿಯ ಅಂತಶ್ಚೇತನವೇ ಅವಳಲ್ಲಿ ಪೂರ್ತಿಯಾಗಿ ಮೈದಳೆಯಿತಂತೆ. ಇಷ್ಟೆಲ್ಲಾ ರೀತಿಯಲ್ಲಿ ನಳನಳಿಸಿದ ಲೂಸಿ ಬದುಕಿದ್ದು ಮಾತ್ರ ಕೆಲವೇ ವರ್ಷಗಳು. ಕೊನೆಯ ಐದನೆಯ ಪದ್ಯದಲ್ಲಿ ಕವಿ ಸಾವು ಮತ್ತು ಅಗಲಿಕೆಗಳು ತರುವ ವಿಷಾದದ ಆಳವನ್ನು ತೆರೆದಿಡುತ್ತಾನೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತೆಂಟನೆಯ ಬರಹ
ಕಳೆದ ಆರು ತಿಂಗಳಿಂದ ಅಕ್ಕ ಮಹಾದೇವಿಯನ್ನು ಭಾಷಾಂತರಿಸುವ ಭರದಲ್ಲಿ ಆಕೆಯ ವಚನಗಳನ್ನು ಹಾಸಿ ಹೊದ್ದು ಉಸಿರಾಡಿದ್ದೇನೆ. ಅದು ಮುಗಿಯುತ್ತಾ ಬರುತ್ತಿರುವ ಹೊತ್ತಿನಲ್ಲಿ ಮುಂದಿನ ಭಾಷಾಂತರದ ಲಂಕೇಶರ ನೀಲು ಕಾಡಲಾರಂಭಿಸಿದ್ದಾಳೆ.
ಲಂಕೇಶ್ ಪತ್ರಿಕೆ ಕನ್ನಡ ನೆಲದ ಒಂದು ಅದ್ಭುತ ವಿದ್ಯಮಾನ. ನನ್ನ ಸಾಹಿತ್ಯದ ಸ್ನಾತಕೋತ್ತರ ಮುಗಿದ ಎಂಬತ್ತರ ದಶಕದಲ್ಲಿ ಒಮ್ಮೆ ಥಾಮಸ್ ಹಾರ್ಡಿಯ ಟೆಸ್ ಕಾದಂಬರಿಯ ಬಗ್ಗೆ ಲಂಕೇಶರು ಬರೆದಿದ್ದ ವಿಶ್ಲೇಷಣೆ ಓದುತ್ತಾ, ಅರೆ! ವಿಶ್ವವಿದ್ಯಾಲಯದ ಪಾಠದಲ್ಲಿ ಈ ಅಪೂರ್ವ ಒಳನೋಟಗಳು ದಕ್ಕಿರಲಿಲ್ಲವೇ ಅಂತನ್ನಿಸಿ ವಿಸ್ಮಯ ಮೂಡಿತ್ತು. ಅಲ್ಲಿಯ ತಮ್ಮ ಅಧ್ಯಾಪಕ ಹುದ್ದೆಯನ್ನು ತೊರೆದು ಪತ್ರಿಕೆಯನ್ನು ಪ್ರಾರಂಭಿಸಿದ್ದ ಲಂಕೇಶರು ಕನ್ನಡ ನೆಲದ ಎಲ್ಲ ‘ಜಾಣಜಾಣೆಯರಿಗೆ’ ಮೇಷ್ಟರಾಗಿ ಹೊಮ್ಮಿದ್ದರು ಎನ್ನುವುದು ನನ್ನಂತವರ ಕೃತಜ್ಞತಾಪೂರ್ವಕ ನೆನಪು.
ನಾನು ಪತ್ರಿಕೆಯ ನೀಲು ಪದ್ಯಗಳನ್ನು ಮಾತ್ರ ಹತ್ತು ಬಾರಿಯಾದರೂ ಓದಿರುತ್ತಿದ್ದೆ. ಯಾವುದರ ಹಂಗೂ ಇಲ್ಲದೆ ಲಂಕೇಶರು ತಮ್ಮನ್ನು ತಾವು ಕೊಟ್ಟುಕೊಳ್ಳುತ್ತಿದ್ದದ್ದು ನೀಲು ಒಬ್ಬಳಿಗೆ ಮಾತ್ರ ಅಂತ ಹಲವಾರು ಬಾರಿ ಅನ್ನಿಸುತ್ತಿತ್ತು. ಹಾಯಿಕುಗಳ ಮಾದರಿಯಲ್ಲಿ ಕೆಲವೇ ಸಾಲುಗಳಲ್ಲಿ ಜೀವನದರ್ಶನವನ್ನೇ ಕಟ್ಟಿಕೊಡುತ್ತಿದ್ದ ರೀತಿ ನನ್ನನ್ನು ಮೂಕಳಾಗಿಸುತ್ತಿತ್ತು. ಅವರ ಏಕ್ ಮಾರ್ ದೋ ಟುಕಡಾ ಶೈಲಿಗೆ ಇದೊಂದು ಉದಾಹರಣೆ:
ಹುಟ್ಟು ಹಠವಾದಿಯೊಬ್ಬ
ಕವಿಯಾಗಲು ಪಣತೊಟ್ಟು
ನಿತ್ಯ ಪದಭೇದಿಯಲ್ಲಿ ಬಳಲಿ
ಹಲ್ಲು ಕಡಿಯುತ್ತಿದ್ದಾಗ
ವಸಂತದ ಮಾವಿನ ಮರ
ಕೋಗಿಲೆಯ ಕಂಠದಲ್ಲಿ ಹಾಡಿ
ತನಗೆ ಗೊತ್ತಿಲ್ಲದೆ
ಕವಿಯಾಯಿತು.
ಯಾಕೋ ಏನೋ, ನನಗೆ ಲಂಕೇಶರ ನೀಲು ಎಂದಾಗೆಲ್ಲ ವರ್ಡ್ಸ್ ವರ್ತನ ಲೂಸಿ ನೆನಪಾಗುತ್ತಾಳೆ.
ವಿಲಿಯಂ ವರ್ಡ್ಸ್ ವರ್ತ್ (William Wordsworth) ಇಂಗ್ಲಿಷಿನ ಸುಪ್ರಸಿದ್ಧ ಕವಿ. ಇಂಗ್ಲಿಷ್ ಸಾಹಿತ್ಯದ ಅಧ್ಯಯನ ಆತನಿಲ್ಲದೆ ಇರಲು ಸಾಧ್ಯವಿಲ್ಲ. ಆದರೂ ಸಹ ನನಗೆ ವರ್ಡ್ಸ್ ವರ್ತ್ ಎಂದರೆ ತಕ್ಷಣ ನೆನಪಿಗೆ ಬರುವುದು ಉಳಿದವಷ್ಟು ಪ್ರಸಿದ್ಧವಲ್ಲದ ಆತನ Lucy Poems.
Lucy Poems ಐದು ಪದ್ಯಗಳ ಒಂದು ಪುಟ್ಟ ಸಂಕಲನ. ವರ್ಡ್ಸ್ ವರ್ತ್ ಜರ್ಮನಿಯಲ್ಲಿ ೧೭೯೮ ರಿಂದ ೧೮೦೦ ರವರೆಗೆ ಇದ್ದ ಎರಡು ವರ್ಷಗಳಲ್ಲಿ ಬರೆದದ್ದು. ಅವನ್ನು ಪ್ರಕಟಿಸುವ ಇರಾದೆ ಕವಿಗೆ ಇದ್ದಂತೇನೂ ತೋರುವುದಿಲ್ಲ. ಯಾಕೆಂದರೆ ೧೮೫೦ ರಲ್ಲಿ ಕೆಲವು ವಿಮರ್ಶಕರು ಈ ಅಳಿದುಳಿದ ಐದು ಪದ್ಯಗಳನ್ನು ಒಟ್ಟಿಗೆ ಹಾಕಿ ಲೂಸಿ ಪದ್ಯಗಳು ಎಂದು ಕರೆದು ಪ್ರಕಟಿಸಿದ್ದು ಆತನ ಸಾವಿನ ನಂತರವೇ. ಈ ಲೂಸಿ ಯಾರು, ಏನು, ಎತ್ತ ಯಾರಿಗೂ ಗೊತ್ತಿಲ್ಲ. ಅದು ಮುಖ್ಯವೂ ಅಲ್ಲ. ಮನಸ್ಸನ್ನು ಸೂರೆಗೊಳ್ಳುವುದು ಅದರ ಗೀತಗುಣ ಮತ್ತು ಕಾಡುವ ವಿಷಾದ.
ಈ ಕಾವ್ಯದ ಹೃದಯಭಾಗವಿರುವುದು ಪ್ರೇಮ ಮತ್ತು ಸಾವು ಎಂಬ ದ್ವಯದ ಬಗ್ಗೆ ಕವಿ ನಡೆಸಿರಬಹುದಾದ ಚಿಂತನೆಯಲ್ಲಿ. ಲೂಸಿ ತುಂಬ ಬೇಗ ಸಾವಿಗೆ ಸಿಕ್ಕವಳು. ಈ ಪದ್ಯಗಳು ಅವಳ ಚರಮಗೀತೆಯೂ ಹೌದು. ಪ್ರೇಮದ ಪರವಶತೆ ಅಲ್ಲಿ ವಿಜೃಂಭಿಸುವಂತೆಯೇ ಸಾವು ತಂದ ಅಗಲಿಕೆಯ ವಿಷಾದ ಓದುಗಳ ಮನಸ್ಸನ್ನು ಹಿಡಿದು ಅಲ್ಲಾಡಿಸಿಬಿಡುತ್ತದೆ.
ನಮ್ಮ ಕುವೆಂಪುರನ್ನು ವರ್ಡ್ಸ್ ವರ್ತ್ ಕವಿಗೆ ಹೋಲಿಸಲಾಗುತ್ತದೆ. ಆತ High Priest of Nature ಎಂದು ಅಭಿನಂದಿಸಲ್ಪಟ್ಟಿದ್ದರೆ ನಮ್ಮ ಕುವೆಂಪು ರಸಋಷಿ ಎಂದು ಕರೆಯಲ್ಪಟ್ಟರು. ಪ್ರಕೃತಿಯ ಆರಾಧನೆ ಎಂಬ ಪದಪುಂಜ ಒಂದು ಮಹಾ ಕ್ಲೀಷೆಯಾಗಿಬಿಟ್ಟಿದೆ. ಈ ಇಬ್ಬರು ಮಹಾಕವಿಗಳು ತಮ್ಮ ಕಾವ್ಯದಲ್ಲಿ ಹಿಡಿಯಲು ಪ್ರಯತ್ನಿಸುವ ಪ್ರಕೃತಿಯ ಕಣಕಣದ ಜೀವಂತಿಕೆಯನ್ನು ಕೇವಲ ಆರಾಧಿಸಿ ಮರೆಯಬಾರದು. ತೀವ್ರವಾಗಿ ಅನುಭಾವಿಸಬೇಕು.

(ಪಿ. ಲಂಕೇಶ್)
ಕವಿಯ ಕುದುರೆಗೆ ಲೂಸಿ ಬದುಕಿರುವ ಸ್ಥಳ ಚೆನ್ನಾಗಿ ಗೊತ್ತು. ಒಡೆಯ ತನ್ನನ್ನು ನಿರ್ದಿಷ್ಟ ಹೊತ್ತಿನಲ್ಲಿ ನಿರ್ದಿಷ್ಟ ಭಾವಸ್ಥಿತಿಯಲ್ಲಿ ಏರಿ ಕುಳಿತನೆಂದರೆ ಕುದುರೆಗೆ ಇತ್ತ ಹೋಗು ಅತ್ತ ಬೇಡ ಎಂಬ ಸೂಚನೆಗಳ ಹಂಗೇ ಇಲ್ಲ. ಯಾಕೆಂದರೆ ಲೂಸಿ ವಾಸಿಸಿರುವುದು ಯಾವುದೋ ಒಂದು ಜನರಿಲ್ಲದ ಮೂಲೆಯಲ್ಲಿ. ಅವಳಿಗೆ ಲೋಕಾಂತದ ಕಿರಿಕಿರಿಯಿಲ್ಲ. ಮೊದಲನೆಯ ಪದ್ಯ ಹೀಗೆ ಸಾಗುತ್ತದೆ:
ಅನುರಾಗದ ಹುಚ್ಚಾಟಗಳಿಗೆ ನಾನು
ಅಪರಿಚಿತನಲ್ಲ, ನಡೆದುದನು
ನಲ್ಲೆಯ ಕಿವಿಯೊಳಗೆ ಹೇಳುವೆನೆ ಹೊರತು
ಬೇರೆಲ್ಲೂ ಬಡಬಡಿಸುವನಲ್ಲ.
ಪ್ರಕಟವಾದಾಗ ಇದರ ನಂತರದ ಚರಣ ಮಾತ್ರ ಮಾಯವಾಗಿತ್ತು! ಬಹುಶಃ ಅವಳ ಸಾವಿನ ಸೂಚನೆಯನ್ನು ಈಗಲೇ ಕೊಟ್ಟುಬಿಡುತ್ತದೆ ಎನ್ನುವ ಕಾರಣಕ್ಕಿರಬೇಕು. ಅದು ಹೀಗಿದೆ:
I told her this; her laughter light
Is ringing in my ears;
And when I think upon that night
My eyes are dim with tears.
ಮೇಲಿನ ಚರಣವಿಲ್ಲದೆ ಪದ್ಯ ಹೀಗೆ ಸಾಗುತ್ತದೆ:
ಅವಳೆನ್ನ ಪ್ರೇಮದಲಿ ಮೈಮರೆತ ಕಾಲದಲಿ
ದಿನದಿನವೂ ಅರಳಿ
ನಳನಳಿಸುವ ಗುಲಾಬಿಯಂತೆ.
ಮೇಲಲ್ಲಿ ಆಗಸದಿ ನಗುತಿರುವ ಚಂದಿರನು,
ಕೆಳಗಿದ್ದ ದಾರಿಯಲಿ ಹೊರಳಿ ಬಳುಕಿ
ಲೂಸಿಮನೆಯತ್ತ ಧಾವಿಸುವ ನಾನು!
ಚಂದಿರನ ನೋಡುತ್ತ, ಬಯಲನ್ನು ಅಳೆಯುತ್ತ
ಕಂಗಳಲ್ಲೆಲ್ಲೋ ನೆಟ್ಟಿರಲು
ಇಂಗಿತವ ಅರಿತಂತೆ ಬಿರುಸಾಗಿ ಧಾವಿಸುವ
ಈ ನನ್ನ ಕುದುರೆ!
ಗಮ್ಯವಷ್ಟೇ ಅಲ್ಲ, ಹಾದಿಯೂ ಸೊಗಸು.
ಎದೆ ತುಂಬ ಹಸನು, ಕಣ್ತುಂಬ ಕನಸು.
ಹಣ್ಣುತೋಟವ ದಾಟಿ, ಬೆಟ್ಟವನು ಏರಿದರೆ
ಮುಳುಗುವ ಚಂದಿರನಲ್ಲಿ ಲೂಸಿಮನೆಯ ಸನಿಹದಲಿ!
ಸಿಹಿಕನಸ ಭಾರದಲಿ ಕಣ್ಣೆಳೆದು
ಭೂತಾಯಿ ಮೈದಡವಿ ಹರಸೆ
ನೋಟವದು ನೆಟ್ಟಿತ್ತು ಮುಳುಗುತಿಹ ಚಂದಿರನಲ್ಲಿ.
ಕುದುರೆಯ ನಿಲ್ಲದ ಗೊರಸು ನನ್ನ ಕಿವಿಯಲ್ಲಿ.
ಲೂಸಿಮನೆ ತಾರಸಿಯ ಹಿಂಬದಿಯ ಚಂದಿರನು
ಥಟ್ಟನೆ ಮರೆಯಾದನೇಕೆ?
ಪ್ರೇಮಿಯ ಎದೆಯಲ್ಲಿ ಇಲ್ಲಸಲ್ಲದ ಭಯಗಳೇ!
ಲೂಸಿ ಸತ್ತಿರಬಹುದೇ?
Lucy Poems ಓದುವಾಗ ನೀಲು ನೆನಪಾಗುತ್ತಾಳೆ:
ಈ ನನ್ನ ಸಾಲುಗಳನ್ನು
ಕವನಗಳೆಂದು ಹೇಗೆ ಕರೆಯಲಿ?
ನೀನೆ ಬಲ್ಲಂತೆ ಇವೆಲ್ಲ
ವಿರಹದ, ಕಾತರದ, ನಿರಾಶೆಯ, ಚುಂಬನದ
ಆಲಿಂಗನದ ಗುರುತುಗಳು,
ಪ್ರಕೃತಿ ಸೂರ್ಯನನ್ನು ಸ್ವಾಗತಿಸುವಾಗ
ನಾನು ಕತ್ತಲೆಯ ಭಿತ್ತಿಯ ಮೇಲೆ
ಚಿತ್ರಿಸಿದ ನಿಟ್ಟುಸಿರುಗಳು.
*****
Lucy Poems ನ ಎರಡನೆಯ ಕವನ ಹೀಗೆ ಪ್ರಾರಂಭವಾಗುತ್ತದೆ:
ಮಂದಿ ಹಾಯದ ಹಾದಿಗಳ
ನಡುವೆಲ್ಲೋ ಬದುಕಿದ್ದಳವಳು.
ಹೊಗಳಿ ಹರಸುವರಿಲ್ಲ, ಪ್ರೀತಿ
ತೋರಿಸುವ ಮಂದಿ ಅಲ್ಲೋ ಇಲ್ಲೋ ಅಷ್ಟೇ.
ಎಲ್ಲೋ ಪಾಚಿಗಟ್ಟಿದ ಕಲ್ಲಿನ ನಡುವೆ
ಹೊಮ್ಮಿದ ನೇರಳೆಹೂ!
ಕಣ್ಣಿಗೆ ತೋರಿದ್ದು ಮಾತ್ರ
ಕೇವಲ ಅರೆಬರೆಯೇ!
ಒಂಟಿತಾರೆ ಮಿನುಗಿದರೆ
ಬೇರೆ ಯಾರಿಲ್ಲದ ಕಾರಣಕ್ಕೇ!
ಬದುಕಿದ್ದು ಎಲ್ಲೋ ಮೂಲೆಯಲ್ಲಿ,
ಲೂಸಿ ಕೊನೆಯುಸಿರೆಳೆದಾಗ
ತಿಳಿದಿದ್ದು ಕೆಲವರಿಗೆ ಮಾತ್ರ.
ಈಗೆಲ್ಲಿ ಲೂಸಿ? ಸಮಾಧಿಯಲ್ಲಿ!
ಅಂದು ಇಂದಿನ ನಡುವೆ
ಮಂದಿಗೇನೂ ತರತಮವಿಲ್ಲ,
ಇದ್ದರದು ನನಗೊಬ್ಬನಿಗೆ ಮಾತ್ರ!
Lucy Poems ಪ್ರೀತಿ-ಪ್ರೇಮ, ಸಾವು-ನೋವು, ಅಗಲಿಕೆ-ವಿಷಾದಗಳನ್ನು ಎದೆ ಕಲಕುವಷ್ಟು ಸರಳವಾಗಿ ಕಥನಿಸುತ್ತಾ ಹೋಗುತ್ತದೆ. ನೀಲುವಿನ ದನಿಯಲ್ಲಿ ಅದು ರೂಪಕ್ಕೆ ಮಾತ್ರ ಸೀಮಿತವಾದಂತೆ ತೋರುತ್ತದೆ.
ಸುರಸುಂದರಿಯ ರೂಪ
ಅರಳಿದ್ದು ನಶಿಸಿದ್ದು
ಇವೆರಡರ ನಡುವಿನ ಸೂಕ್ಷ್ಮ
ಕ್ಷಣಕ್ಕಾಗಿ ಅರಸಿ ನಿರಾಶನಾಗುವುದು
ಪ್ರೇಮಿಯ ಪರಂಪರಾಗತ ಗೋಳು.
ಆದರೆ ಲೂಸಿ ಸುರಸುಂದರಿಯೇನೂ ಅಲ್ಲ. ಅವಳ ಸ್ನಿಗ್ಧ ಚೆಲುವು ಕಂಡಿದ್ದು ಹೊಳೆದಿದ್ದು ಕವಿಯ ಕಣ್ಣಿಗೆ ಮಾತ್ರ. ಆದ್ದರಿಂದಲೇ ಅಗಲಿಕೆ-ಸಾವುಗಳ ಬಗ್ಗೆ ಅಲ್ಲಿ ದಟ್ಟವಾದ ವಿಷಾದವಿದೆ. ನೀಲುವಿನ ‘ತುಂಟಾಟ’ಕ್ಕೆ ಪ್ರೇಮಿಗಳನ್ನು ಎಚ್ಚರಿಸುವ ತವಕ:
ನೀನು ಮೆಚ್ಚುವ ಪ್ರೇಮಿಯ
ಪುಟ್ಟ ಗುಡಿಸಲು ಅರಮನೆಯೆಂದು
ಭ್ರಮಿಸಬೇಡ:
ಎಲ್ಲ ಪ್ರೇಮದ ಹಿಂದೆಯೂ
ಒಂದು ಸೆರೆಮನೆ ಇದೆ.
ಈ ನೀಲು ಕಟುವಾದ ಆತ್ಮವಿಮರ್ಶೆಗೆ ಸಹ ಹೆದರುವುದಿಲ್ಲ:
ಕಂಡದ್ದು ಕಂಡ ಹಾಗೆ
ಹೇಳುವವನ ವರಸೆಗೆ ಮರುಳಾಗಬೇಡಿ –
ಕಂಡ ಕಣ್ಣು, ಹೇಳುವ ನಾಲಗೆ
ಬೇರೆ ಬೇರೆ!
ಹಾಗೆಯೇ ಅವಳು ತಣ್ಣನೆಯ ವ್ಯಂಗ್ಯವನ್ನು ಹೊಳೆಸುವವಳೇ!
ಅಕ್ಷರ ಕಲಿಯದ ಚಕ್ರವರ್ತಿ
ಅಕ್ಬರನನ್ನು
ನೆನೆದಷ್ಟೂ
ಕಲಿತು ಗುಮಾಸ್ತರಾದವರು
ನಿಟ್ಟುಸಿರ ಬಿಡುವರು!

(ವಿಲ್ಲಿಯಮ್ ವರ್ಡ್ಸ್‌ವರ್ತ್)
ಲೂಸಿಕವಿಗೆ ಸಾವು ತರುವ ಅಗಲಿಕೆಯ ನೆನೆನೆನೆದು ವಿಷಾದ. ಲಂಕೇಶರ ನೀಲುಗೆ ಮಾತ್ರ ಬದುಕಿನಲ್ಲೆ ಅದು ಕಾಣಿಸುವ ವ್ಯಂಗ್ಯ!
ಪ್ರೇಮದ ಸಂಗಮ ಕೆಲವೊಮ್ಮೆ
ಹುಟ್ಟು ಮತ್ತು ಸಾವಿನ
ಬೆತ್ತಲೆ
ಭೇಟಿಯಂತೆ ತೋರುವುದು.
ಲೂಸಿ ಸ್ನಿಗ್ಧ ಮೌನದ ಹಳ್ಳಿಗಾಡಿನ ಚೆಲುವೆ. ಆದರೆ ನೀಲು ನಗರದ ಮಹಾ ಮಾತುಗಾತಿ. ಕನ್ನಡದ ಜಾಣೆಯರಲ್ಲಿ ಅವಳೂ ಒಬ್ಬಳು ತಾನೇ? ‘ನೀಲು ಯಾರು ಎಂದು ಕೇಳಿದಿರಾ?’ ಎಂಬ ಪ್ರಶ್ನೆಯನ್ನು ಅವಳೇ ಕೇಳಿ ತಾನೇ ಉತ್ತರಿಸುತ್ತಾಳೆ:
ಹುಣ್ಣಿಮೆಯ ಬೆಳದಿಂಗಳು ಕಾಮಿನಿಯಲ್ಲಿ
ಪ್ರೇಮ ಉಕ್ಕಿಸಿದ ವೇಳೆ
ಇನಿಯನಿಲ್ಲದ ಹಾಸಿಗೆಯಲ್ಲಿ
ಬಿಕ್ಕಳಿಸಿ ಅತ್ತು ಅವನಿಗಾಗಿ ಕಾದು
ಆತ ಹಿಂದಿರುಗುವ ಹೊತ್ತಿಗೆ ಅಮಾವಾಸೆ
ಕವಿದಿತ್ತು.
ಮತ್ತೆ ಬೆಳದಿಂಗಳ ಹುಣ್ಣಿಮೆಗೆ ಕಾಯುತ್ತಾ
ಅವಳು ಇಟ್ಟ ನಿಟ್ಟುಸಿರಲ್ಲಿ
ಹುಟ್ಟಿದವಳು ನೀಲು
*****
ಮೂರನೆಯ ಪದ್ಯದಲ್ಲಿ ಲೂಸಿ ಕವಿ ಇಂಗ್ಲೆಂಡಿನಿಂದ ದೂರ ಹೋದಾಗ ತಾಯ್ನೆಲದ ಬೆಲೆ ಅರಿವಾಗಿ ಮರಳಲು ಹಪಹಪಿಸುತ್ತಾನೆ. ಮತ್ತೊಮ್ಮೆ ಆ ನೆಲವನ್ನು ತೊರೆಯಲಾರೆ ಎಂದು ಶಪಥವನ್ನು ಸಹ ಮಾಡುತ್ತಾನೆ. ತಾಯ್ನೆಲದ ಅಗಾಧ ಪ್ರೀತಿ ಕೇವಲ ತಾನು ಹುಟ್ಟಿ ಬೆಳೆದ ಕಾರಣಕ್ಕೆ ಅಲ್ಲ.
ಲೂಸಿ ಬೆಳೆಯುತ್ತಾ ಆಡಿದ
ಮರಗಿಡ ಪೊದರುಗಳೆಲ್ಲ
ಆ ನೆಲದವೇ ತಾನೇ?
ಅಲ್ಲಿಯ ಬೆಳಗು ಹೊಳೆಸಿದವು
ಕತ್ತಲೆ ಮರೆಸಿದವು ತಾನೇ?
ಲೂಸಿಯ ಕಣ್ಣು ಕೊನೆಯ ಬಾರಿಗೆ ಅಳೆದ
ಹಸಿರಿನ ಗದ್ದೆ ಅಲ್ಲಿಯದೇ ತಾನೇ?
ಲೂಸಿ ನಿಸರ್ಗದ ಕಂದ. ಹಳ್ಳಿಗಾಡಿನ ಮಳೆಬಿಸಿಲ ಕರುಣೆಯಲ್ಲಿ ಮಿಂದು ಹದವಾಗಿ ಅರಳಿದ್ದವಳು. ಕವಿ ಹೇಳುವಂತೆ ಅವಳಿಗೆ ಮೂರು ವರ್ಷವಿರುವಾಗ ಪ್ರಕೃತಿ ಈ ಸುಂದರ ಜೀವದ ಹೊಣೆ ಸಂಪೂರ್ಣವಾಗಿ ಹೊತ್ತುಕೊಳ್ಳಲು ಮುಂದೆ ಬಂತಂತೆ (‘Myself will to my darling be both law and impulse’). ಬೆಟ್ಟ ನದಿ, ಗಿಡ ಮರ ಎಲ್ಲವೂ ತಮ್ಮ ಸತ್ವವನ್ನು ಅವಳಿಗೆ ಧಾರೆಯೆರೆದವಂತೆ. ಪ್ರಕೃತಿಯ ಅಂತಶ್ಚೇತನವೇ ಅವಳಲ್ಲಿ ಪೂರ್ತಿಯಾಗಿ ಮೈದಳೆಯಿತಂತೆ. ಇಷ್ಟೆಲ್ಲಾ ರೀತಿಯಲ್ಲಿ ನಳನಳಿಸಿದ ಲೂಸಿ ಬದುಕಿದ್ದು ಮಾತ್ರ ಕೆಲವೇ ವರ್ಷಗಳು. ಕೊನೆಯ ಐದನೆಯ ಪದ್ಯದಲ್ಲಿ ಕವಿ ಸಾವು ಮತ್ತು ಅಗಲಿಕೆಗಳು ತರುವ ವಿಷಾದದ ಆಳವನ್ನು ತೆರೆದಿಡುತ್ತಾನೆ.
ಅದೇನೋ ಜೊಂಪು ಎನ್ನಾತ್ಮವನೆ
ಆವರಿಸಿಕೊಂಡ ಆ ಗಳಿಗೆಯಲಿ
ಮನುಷ್ಯ ಬದುಕಿನ ಭಯಗಳೆಲ್ಲವೂ
ದೂರ ಸರಿದವಲ್ಲ!
ಈಗ ಈ ಭೂಮಿ ಮೇಲಿನ ಕಾಲ
ಅವಳನ್ನು ಮುಟ್ಟದಲ್ಲ!
ಶಕ್ತಿ ಇಲ್ಲ, ಚಲನೆಯೂ ಇಲ್ಲ,
ಮಾತು ಕೇಳಿಸದಲ್ಲ, ನೋಟ ಕಾಣಿಸದಲ್ಲ!
ಭೂಮಿ ಮೇಲಿನ ಜೀವವಿಲ್ಲದ
ಕಲ್ಲುಬಂಡೆಗಳ ಜೊತೆಗೆ
ಅವಳೂ ಸುತ್ತುತಿಹಳಲ್ಲ!
ಓದುತ್ತಾ ಕಣ್ಣಲ್ಲಿ ನೀರೂರಿಸುವ ಲೂಸಿಕವಿಯ ವಿಷಾದ ನನ್ನೆದೆಯನ್ನು ಕ್ಯಾರೆ ಎನ್ನದೆ ಕಲಕುವ ಮುನ್ನ ನೀಲುವಿನ ಎಚ್ಚರಿಕೆಯನ್ನು ನೆನಪಿಸಿಕೊಳ್ಳುತ್ತೇನೆ:
ಪ್ರೇಮದ ದೋಣಿಯಲ್ಲಿ
ಹುಚ್ಚೆದ್ದು ಪ್ರೇಮಿಸಬೇಡ,
ಅಮರ ಪ್ರೇಮದ ದೋಣಿಗೆ
ಮುಳುಗುವ ದುರಭ್ಯಾಸವಿದೆ!

ಲೂಸಿ ನೀಲು ಇಬ್ಬರೂ ನನಗೆ ಬದುಕಿನ ಪಾಠಗಳನ್ನು ಅವರವರದ್ದೇ ರೀತಿಯಲ್ಲಿ ಹೇಳಿಕೊಟ್ಟವರು. ಎಲ್ಲಿಯ ಲೂಸಿ ಎಲ್ಲಿಯ ನೀಲು ಎಂಬ ಪ್ರಶ್ನೆಯನ್ನೇ ಗೇಲಿ ಮಾಡಿ ನಕ್ಕವರು!

