ನಮ್ಮ ಗುರುತು ನಮಗೇ ಸಿಗದಷ್ಟು ನಾವು ಬದಲಾವುಗುವುದರ ಮರ್ಮ ಏನು? ಅದೂ ಅಲ್ಲದೆ ಎಲ್ಲರೂ ಹೀಗಾಗುವುದಿಲ್ಲ. ಎಲ್ಲ ಸಿದ್ಧಾರ್ಥರೂ ಬುದ್ಧರಾಗುವುದಿಲ್ಲ, ಎಲ್ಲ ನವಕೋಟಿ ನಾರಾಯಣರೂ ಪುರಂದರದಾಸರಾಗುವುದಿಲ್ಲ, ಎಲ್ಲ ಅಂಗುಲಿಮಾಲರೂ ಬೌದ್ಧಭಿಕ್ಷುವಾಗುವುದಿಲ್ಲ. ಹೀಗೆ ತಮ್ಮನ್ನು ತಾವು ಗುರುತೇ ಸಿಗದಂತೆ ನವೀಕರಿಸಿಕೊಳ್ಳಲು ಎಲ್ಲರಲ್ಲೂ ಇಲ್ಲದ ಏನೋ ಒಂದು ಗುಣವಿಶೇಷ ಈ ವ್ಯಕ್ತಿಗಳಲ್ಲಿ ಇರಬೇಕು ಅಥವಾ ಹೀಗೆ ಬದಲಾವುಗುವುದಕ್ಕಾಗಿ ಏನೋ ಒಂದು ಬಲವಾದ ಕಾರಣವನ್ನು ಬದುಕು ನಿರ್ಮಿಸಿರಬೇಕು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ನಲವತ್ತಾರನೆಯ ಬರಹ
ಪಂಪನ ಆದಿಪುರಾಣದಲ್ಲಿ ವೃಷಭನಾಥ, ವೃಷಭದೇವ, ಅಥವಾ ಆದಿನಾಥ ಎಂಬವನು ಕಥಾನಾಯಕ. ಇವನು ಅನೇಕ ಜನ್ಮಗಳನ್ನು ಎತ್ತಿ ಭೋಗದಿಂದ ವೈರಾಗ್ಯದ ಕಡೆಗೆ ಚಲಿಸುವ ಕಥೆಯೇ ಆದಿಪುರಾಣದ ವಸ್ತು. ಜನ್ಮದಿಂದ ಜನ್ಮಕ್ಕೆ ಅವನಲ್ಲಿ ಆದ ಪರಿಷ್ಕಾರ, ಉತ್ತಮಿಕೆಗಳನ್ನು ಆದಿಪುರಾಣ ಕಾವ್ಯವು ಚಿತ್ರಿಸುತ್ತದೆ. ತನ್ನ ಪ್ರತಿ ಮುಂದಿನ ಜನ್ಮದಲ್ಲೂ ಹಿಂದಿನ ಜನ್ಮದಲ್ಲಿ ಅವನಲ್ಲಿದ್ದ ಆಸೆ, ಮೋಹಗಳ ಪ್ರಮಾಣ ಕಡಿಮೆಯಾಗಿ, ಕಡಿಮೆಯಾಗಿ, ನಿಧಾನಕ್ಕೆ ಮೋಕ್ಷದ ಕಡೆಗೆ ಪ್ರಯಾಣ ಮಾಡುವ ಮನುಷ್ಯನ ಕಥೆ ಅದು. ಜನ್ಮದ ಈ ಸರಣಿಯನ್ನು ಭವಾವಳಿ ಅನ್ನುತ್ತಾರೆ.
ಹಿಂದೂ, ಜೈನ ಮುಂತಾದ ಕೆಲವು ಧರ್ಮಗಳಲ್ಲಿ ಪುನರ್ಜನ್ಮದ ಕಲ್ಪನೆ ಇದೆಯಲ್ಲವೆ? `ಪಾಪ ಅಥವಾ ಕೆಟ್ಟ ಕೆಲಸ ಮಾಡಿದರೆ ಮತ್ತೆ ಮತ್ತೆ ಜನ್ಮ ಎತ್ತಿ ಭೂಮಿಯ ಮೇಲೆ ಕಷ್ಟ ಪಡಬೇಕಾಗುತ್ತದೆ, ಒಳ್ಳೆಯ ಕೆಲಸ ಅಥವಾ ಪುಣ್ಯ ಮಾಡಿದರೆ ಕರ್ಮಭೂಮಿಯಲ್ಲಿ ಮತ್ತೆ ಮತ್ತೆ ಜನ್ಮಿಸಿ ಕಷ್ಟ ಪಡುವುದರಿಂದ ವಿನಾಯಿತಿ ಸಿಕ್ಕಿ ಜೀವ ಅಥವಾ ಆತ್ಮವು ಪರಮಾತ್ಮನ ಸಾನ್ನಿಧ್ಯ ಹೊಂದುತ್ತದೆ’ ಎಂಬ ನಂಬಿಕೆ ಇಲ್ಲಿರುತ್ತದೆ. ಇಲ್ಲಿನ ಒಳಗುಟ್ಟು ಏನೆಂದರೆ, ಒಳ್ಳೆಯದು ಮಾಡಿದರೂ ಕಷ್ಟ ಏಕೆ ಬರುತ್ತದೆ?’, `ಮನುಷ್ಯರು ಕೆಟ್ಟ ಕೆಲಸ ಯಾಕೆ ಮಾಡಬಾರದು?, ಒಳ್ಳೆಯ ಕೆಲಸ ಮಾಡುವುದರಿಂದ ಮುಂದೆ ಒಳ್ಳೆಯದಾಗುತ್ತದೆಯೇ?’, `ಯಾಕೆ ನನಗೆ ಇಷ್ಟು ಕಷ್ಟ? ಬೇರೆಯವರಿಗೆ ಯಾಕೆ ಅಷ್ಟು ಸುಖ?’ – ಮನುಷ್ಯರ ಮನಸ್ಸಿನಲ್ಲಿ ಹುಟ್ಟುವ ಇಂತಹ ತಾರ್ಕಿಕ ಪ್ರಶ್ನೆಗಳಿಗೆ ಉತ್ತರ ಕೊಡಲು ಈ ಪುನರ್ಜನ್ಮ, ಕರ್ಮಸಿದ್ಧಾಂತಗಳ ಪರಿಕಲ್ಪನೆ ಬಂದಿರಬಹುದು. ಹಾಗೆಂದೇ, ವಿಚಾರವಾದಿಗಳು ಈ ಜನ್ಮಾಂತರದ ಪರಿಕಲ್ಪನೆಯು ಮನುಷ್ಯನ ಸೃಷ್ಟಿ ಎಂದು ವಾದಿಸುತ್ತಾರೆ. ವಿಜ್ಞಾನವಂತೂ ಕರ್ಮಸಿದ್ಧಾಂತವನ್ನು ಕಟ್ಟುಕತೆ ಎಂದು ಕರೆದು, `ಮನುಷ್ಯನು ಸತ್ತ ಮೇಲೆ ಮಣ್ಣಿನಲ್ಲಿ ಸೇರಿಹೋಗುವ ರಾಸಾಯನಿಕ ಪದಾರ್ಥಗಳ ಮೊತ್ತ ಅಷ್ಟೆ’ ಎಂದುಬಿಟ್ಟಿದೆ.
*****
ಅದೇನೇ ಇರಲಿ, ನಾನು ಇಲ್ಲಿ ಮಾತಾಡುತ್ತಿರುವುದು ಸತ್ತ ಮೇಲೆ ಮನುಷ್ಯನು ಎತ್ತುವ ಅಥವಾ ಎತ್ತದಿರುವ ಜನ್ಮಗಳ ಬಗ್ಗೆ ಅಲ್ಲ, ಬದುಕಿದ್ದಾಗಲೇ ಮನುಷ್ಯನು ಕಾರಣಾಂತರಗಳಿಂದ ಸಂಪೂರ್ಣ ಹೊಸದಾಗುವ ಬಗ್ಗೆ ಈ ಪ್ರಬಂಧದಲ್ಲಿ ವಿಚಾರ ಮಾಡಲು ಪ್ರಯತ್ನಿಸಿದ್ದೇನೆ. ಬದುಕಿದ್ದಾಗಲೇ ಹೊಸಜನ್ಮ ಎತ್ತುವುದು ನಿಜಕ್ಕೂ ಆಸಕ್ತಿದಾಯಕ ವಿಷಯ ಅನ್ನಿಸುತ್ತೆ. ಪಂಪನ ಭವಾವಳಿಯ ಹೊಸಕಾಲದ ವ್ಯಾಖ್ಯಾನವಿರಬಹುದೆ ಇದು? ಗಮನಿಸೋಣವೆ?
*****
ಹುಟ್ಟಿನಿಂದ ಸಾವಿನ ತನಕದ ನಾವು ಮನುಷ್ಯರು ಹೇಗೆ ಬದುಕುತ್ತೇವೆ ಎಂಬುದನ್ನು ಗಮನಿಸಿದರೆ, ಒಂದೇ ಜನ್ಮದಲ್ಲಿಯೇ ನಮ್ಮಲ್ಲಿ ಕೆಲವರು ತಮ್ಮದೇ ಆದ ವಿಭಿನ್ನ ಆವೃತ್ತಿಗಳನ್ನು ಹೊಂದುತ್ತಾರೇನೋ ಅನ್ನಿಸುತ್ತದೆ. ಬದುಕಿನ ಒಂದು ಹಂತದಲ್ಲಿ ವಿಪರೀತ ಕೋಪ ಮಾಡಿಕೊಳ್ಳುತ್ತಿದ್ದವರು ತಮ್ಮ ಮುಂದಿನ ಆವೃತ್ತಿಯಲ್ಲಿ ಶಾಂತಮೂರ್ತಿಯಾಗಿಬಿಡಬಹುದು. ಜನರನ್ನು ತುಂಬ ಹಚ್ಚಿಕೊಳ್ಳುತ್ತಿದ್ದವರು ತಮ್ಮ ಮುಂದಿನ ಆವೃತ್ತಿಯಲ್ಲಿ ಏಕಾಂಗಿಜೀವಿಯಾಗಬಹುದು. ಅಚ್ಚರಿಯ ವಿಷಯವೆಂದರೆ ತಮ್ಮ ಹಿಂದಿನ ಆವೃತ್ತಿಯು ಸ್ವತಃ ಅವರಿಗೇ ಅಪರಿಚಿತವಾಗಬಹುದು.
`ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೊ’ … ಬೇಂದ್ರೆ ಕವಿಯ ಪ್ರಸಿದ್ಧ ಕವನವಾದ `ಯುಗಾದಿ’ಯಲ್ಲಿ ಬರುವ ಸಾಲಿದು. ಪ್ರತಿ ದಿನ ಎದ್ದಾಗ ನಮಗೆ ಹೊಸ ಜನ್ಮ ಉಂಟಾಗುತ್ತದೋ ಇಲ್ಲವೊ, ಆದರೆ ಬದುಕಿನಲ್ಲಿ ಆಘಾತ, ತೀವ್ರ ನಂಬಿಕೆ ದ್ರೋಹ, ಪ್ರೇಮಭಂಗ, ಮಾರಣಾಂತಿಕ ಕಾಯಿಲೆ ಮುಂತಾದವು ಅನಿರೀಕ್ಷಿತವಾಗಿ ಉಂಟಾದಾಗ ಜೀವನದ ಬಗ್ಗೆ ಇದ್ದಂತಹ ಹಳೆಯ ತಿಳುವಳಿಕೆ ಅಲ್ಲಾಡಿ ಹೋಗಿ ನಮಗೆ ನಾವೇ ಗುರುತು ಸಿಗದಂತಹ ದೊಡ್ಡ ಬದಲಾವಣೆ ಉಂಟಾಗಬಹುದು. ಇದು ವಿಚಿತ್ರವಾದರೂ ಸತ್ಯ ಹಾಗೂ ಇದೊಂದು ವಿಪರ್ಯಾಸ.
`ಮನುಷ್ಯ ಬದಲಾಗುವುದು ಅತಿಯಾದ ನೋವಾದಾಗ ಅಥವಾ ತೀವ್ರ ತಿಳುವಳಿಕೆ ಬಂದಾಗ’ ಎಂಬ ಒಂದು ಮಾತಿದೆ. ರಾಜಕುಮಾರ ಸಿದ್ಧಾರ್ಥನು ಮನೆ ಬಿಟ್ಟು ಹೋಗಿ ಬುದ್ಧನಾದದ್ದು, ಜಿಪುಣಾಗ್ರೇಸರನಾಗಿದ್ದ ನವಕೋಟಿ ನಾರಾಯಣನು ಸಂಸಾರಸಂಬಂಧಿಯಾದ ಎಲ್ಲವನ್ನೂ ಬಿಟ್ಟು ಹರಿದಾಸನಾದದ್ದು(ಪುರಂದರ ದಾಸ), ಹೆಂಡತಿ ರತ್ನಾವಳಿಯ ಮೇಲೆ ಅತಿಯಾದ ಮೋಹವನ್ನಿಟ್ಟುಕೊಂಡಿದ್ದ ತುಳಸೀದಾಸನು ವಿರಾಗಿಯಾದದ್ದು, ಕ್ರೂರ ದರೋಡೆಕಾರನಾಗಿದ್ದ ಅಂಗುಲಿಮಾಲನು ಬುದ್ಧನಿಗೆ ಶರಣಾಗತನಾಗಿ ಅವನ ಶಿಷ್ಯನಾದದ್ದು, ಚಕ್ರವರ್ತಿ ಅಶೋಕನು ಕಳಿಂಗ ಯುದ್ಧದ ರಕ್ತಪಾತ-ವಿನಾಶಗಳನ್ನು ನೋಡಿ `ಇನ್ನು ಮುಂದೆ ಯುದ್ಧ ಮಾಡುವುದಿಲ್ಲ’ ಎಂಬ ಪ್ರತಿಜ್ಞೆ ಮಾಡಿದ್ದು ……… `ಹೊಸಜನ್ಮ’ದ ಇಂತಹ ಅನೇಕ ಉದಾಹರಣೆಗಳನ್ನು ನಾವು ಪುರಾಣ ಹಾಗೂ ಚರಿತ್ರೆಯಲ್ಲಿ ನೋಡಬಹುದು.

ವ್ಯಕ್ತಿತ್ವವನ್ನೇ ಸಂಪೂರ್ಣ ವಿರುದ್ಧ ದಿಕ್ಕಿಗೆ ಬದಲಾಯಿಸುವ ಮೇಲಿನಂತಹ ಬದಲಾವಣೆಗಳು ಕೇವಲ ವಯಸ್ಸಿಗೆ ಸಂಬಂಧಪಟ್ಟಂಥವಲ್ಲ. ಪ್ರತಿಯೊಬ್ಬರ ಜೀವನದಲ್ಲೂ ಹೀಗೆ ಆಗಿಯೇ ಆಗುತ್ತದೆ ಎಂಬ ಖಾತ್ರಿಯೂ ಇಲ್ಲ.
`ಬದುಕಿನಲ್ಲಿ ಎಂದೂ ಬದಲಾಗದ್ದು ಬದಲಾವಣೆಯೊಂದೇ’ ಎಂಬ ಮಾತಿದೆ. ಈ ಮಾತಿನಲ್ಲಿ ಇರುವ ವಿಪರ್ಯಾಸವನ್ನು ನೋಡಿ! `ಯಾವುದೂ ಇದ್ದಂಗಿರಲ್ಲ’ ಎಂದು ಸಿದ್ಧೇಶ್ವರ ಸ್ವಾಮಿಗಳು ಹೇಳುತ್ತಿದ್ದದ್ದು ಸಹ ನೆನಪಾಗುತ್ತದೆ.
ಇಂತಹ ಕೆಲವು ಹೊಸ ಜನ್ಮಗಳು ಆಹ್ಲಾದಕರವಾಗಿರುತ್ತವೆ. ನನ್ನ ವಿದ್ಯಾರ್ಥಿದೆಸೆಯಲ್ಲಿ ನನಗೆ ಪರಿಚಿತಳಾಗಿದ್ದ ವಿದ್ಯಾರ್ಥಿನಿಯೊಬ್ಬಳ ಕಥೆ ಹೇಳುತ್ತೇನೆ. ಕಡುಬಡತನದಲ್ಲಿ ಹುಟ್ಟಿದ ಆಕೆ, ಲೋಕದ ದೃಷ್ಟಿಯಲ್ಲಿ `ಕಪ್ಪಗೆ, ಸಣ್ಣಗೆ ಇದ್ದ ಕುರೂಪಿ’, ಆದರೆ ಓದಿನಲ್ಲಿ ಬಹಳ ಬುದ್ಧಿವಂತೆ. ದುರದೃಷ್ಟವಶಾತ್, ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿ ಬೇರೆಯವರಿಗೆ ತನ್ನ ಉತ್ತರ ಪತ್ರಿಕೆ ತೋರಿಸಿದ ತಪ್ಪಿಗಾಗಿ ತಪಾಸಣಾ ದಳ ಅಂದರೆ ಸ್ಕ್ವ್ಯಾಡ್ನಿಂದ ಶಿಕ್ಷೆಗೆ ಆದೇಶಿಸಲ್ಪಟ್ಟು ಕೆಲವು ಕಾಲ ಪರೀಕ್ಷೆ ತೆಗೆದುಕೊಳ್ಳುವುದರಿಂದ ಬಹಿಷ್ಕರಿಸಲ್ಪಟ್ಟಿದ್ದವಳು. ಆದರೆ ಅವಳ ಮನೋಬಲ, ಆತ್ಮಶಕ್ತಿ ಎಷ್ಟಿತ್ತೆಂದರೆ ಇದು ಯಾವುದಕ್ಕೂ ಬೆದರದೆ-ಬೆಚ್ಚದೆ, ಚೆನ್ನಾಗಿ ಓದಿ ಒಳ್ಳೆಯ ಅಂಕ ತೆಗೆದುಕೊಂಡು ಉತ್ತೀರ್ಣಳಾದಳು ಮತ್ತು ಎಲ್ಲ ಚರ್ಚಾಸ್ಪರ್ಧೆಗಳಲ್ಲೂ ಗೆದ್ದು ಒಳ್ಳೆಯ ವಾಗ್ಮಿ ಎಂದು ಪ್ರಸಿದ್ಧಿ ಪಡೆದಳು. ಮುಂದೆ ಒಬ್ಬ ಒಳ್ಳೆಯ ಲೇಖಕಿಯಾಗಿ ಬೆಳೆದಳು ಹಾಗೂ ವಿಶ್ವವಿದ್ಯಾಲಯವೊಂದರ ಅಧ್ಯಯನ ವಿಭಾಗವೊಂದರ ಮುಖ್ಯಸ್ಥಳಾದಳು. ಇದು ಒಂದು ಹರ್ಷದಾಯಕ ಹೊಸಜನ್ಮ ಅಲ್ಲವೆ?
ರಶ್ಮಿ ಬನ್ಸಾಲ್ ಅವರು ಬರೆದ `ಝೀರೊ ಟು ಹೀರೊ’ ಎಂಬ ಒಂದು ಪುಸ್ತಕ ಬಹು ಜನಪ್ರಿಯವಾಗಿದೆ, ಮಾರಾಟದಲ್ಲಿ ದಾಖಲೆಯನ್ನು ನಿರ್ಮಿಸಿದೆ ಹಾಗೂ ಅನೇಕ ಭಾಷೆಗಳಿಗೆ ಅನುವಾದಗೊಂಡಿದೆ. ಇದರಲ್ಲಿ ಬರುವ ಒಬ್ಬ ವ್ಯಕ್ತಿಯ ಕಥೆ ಬಹು ಸ್ಫೂರ್ತಿದಾಯಕವಾಗಿದೆ. ತಮಿಳುನಾಡಿನ ತೂತ್ತುಕುಡಿಯಲ್ಲಿ ಕಡುಬಡತನದ ಕುಟುಂಬದಲ್ಲಿ ಹುಟ್ಟಿ ಟೀ ಅಂಗಡಿಯೊಂದರಲ್ಲಿ ಲೋಟ ತೊಳೆಯಲು ಸೇರಿಕೊಂಡ ಈ ಪಾಪದ ಹುಡುಗ ಜೀವನದಲ್ಲಿ ಮೇಲೆ ಬರಬೇಕೆಂಬ ಛಲ ಹೊತ್ತು ನಿಧಾನವಾಗಿ ಕೆಲಸಗಳನ್ನು ಕಲಿತುಕೊಂಡು, ದೋಸೆ ಮಾಡುವುದರಲ್ಲಿ ಅತಿನಿಪುಣನಾಗಿ, ಮೊದಲು ತನ್ನದೇ ಆದ ಒಂದು ಚಿಕ್ಕ ದೋಸೆ ಹೋಟಲೊಂದನ್ನು ತೆರೆದು ನಂತರ ದೇಶವಿದೇಶಗಳಲ್ಲಿ ಅತ್ಯುತ್ತಮ ದೋಸೆಯನ್ನು ಮಾರುವ `ದೋಸಾ ಪ್ಲಾಝಾ’ ಎಂಬ ಯಶಸ್ವೀ ವ್ಯಾಪಾರ ಸರಪಣಿಯನ್ನು ನಿರ್ಮಿಸಿದ ಸಾಹಸಿ. ಈ ಕಥೆ ಸಹ ಮನಸ್ಸಿಗೆ ಬಹಳ ಖುಷಿ ಕೊಡುವಂತಹ ಹೊಸ ಜನ್ಮದ ಕಥೆ.
ಮೇಲೆ ನಾನು ಕೊಟ್ಟ ಎರಡು ಉದಾಹರಣೆಗಳು ಅಧೋಗತಿಯಿಂದ ಪ್ರಗತಿಯತ್ತ, ಕತ್ತಲಿಂದ ಬೆಳಕಿನತ್ತ ಚಲಿಸಿದ ಹೊಸ ಜನ್ಮದ ಕಥೆಗಳು. ಹುಡುಕಿದರೆ ಇಂತಹ ಸಾಕಷ್ಟು ಉದಾಹರಣೆಗಳು ನಮಗೆ ಸಿಗುತ್ತವೆ. ಹೀಗೆಂದ ಮಾತ್ರಕ್ಕೆ ಎಲ್ಲ ಬಡ ಹುಡುಗಿಯರೂ ವಿಶ್ವವಿದ್ಯಾಲಯದಲ್ಲಿ ದೊಡ್ಡ ಹುದ್ದೆ ಹಿಡಿಯುವುದಿಲ್ಲ, ಎಲ್ಲ ಎಂಜಲು ಲೋಟ ತೊಳೆಯುವವರೂ ದೊಡ್ಡ ಆಹಾರೋದ್ಯಮಿಯಾಗುವುದಿಲ್ಲ.
ನಮ್ಮ ಗುರುತು ನಮಗೇ ಸಿಗದಷ್ಟು ನಾವು ಬದಲಾವುಗುವುದರ ಮರ್ಮ ಏನು? ಅದೂ ಅಲ್ಲದೆ ಎಲ್ಲರೂ ಹೀಗಾಗುವುದಿಲ್ಲ. ಎಲ್ಲ ಸಿದ್ಧಾರ್ಥರೂ ಬುದ್ಧರಾಗುವುದಿಲ್ಲ, ಎಲ್ಲ ನವಕೋಟಿ ನಾರಾಯಣರೂ ಪುರಂದರದಾಸರಾಗುವುದಿಲ್ಲ, ಎಲ್ಲ ಅಂಗುಲಿಮಾಲರೂ ಬೌದ್ಧಭಿಕ್ಷುವಾಗುವುದಿಲ್ಲ.
ಹೀಗೆ ತಮ್ಮನ್ನು ತಾವು ಗುರುತೇ ಸಿಗದಂತೆ ನವೀಕರಿಸಿಕೊಳ್ಳಲು ಎಲ್ಲರಲ್ಲೂ ಇಲ್ಲದ ಏನೋ ಒಂದು ಗುಣವಿಶೇಷ ಈ ವ್ಯಕ್ತಿಗಳಲ್ಲಿ ಇರಬೇಕು ಅಥವಾ ಹೀಗೆ ಬದಲಾವುಗುವುದಕ್ಕಾಗಿ ಏನೋ ಒಂದು ಬಲವಾದ ಕಾರಣವನ್ನು ಬದುಕು ನಿರ್ಮಿಸಿರಬೇಕು.
*****
`ಸಮಯವನ್ನು ಗೌರವಿಸಿ, ಏಕೆಂದರೆ ಅದು ಬದುಕಿನ ಅತ್ಯಂತ ಪ್ರಬಲ ಶಕ್ತಿ’ ಎಂಬ ಮಾತಿದೆ. `ಈಗ ಹೀಗಿದ್ದೇವೆ, ಮುಂದೆ ಹೇಗಾಗುತ್ತೇವೆ’ ಎಂಬುದು ಸ್ವತಃ ನಮಗೇ ಗೊತ್ತಿರದಿದ್ದರೂ ಕಾಲಕ್ಕೆ ಅದು ಗೊತ್ತಿರುತ್ತದೆ ಎಂಬುದು ವಿಚಿತ್ರವಾದರೂ ಸತ್ಯ. `ಅಭಿನವ ಪಂಪ’ನೆಂದು ಹೆಸರಾದ ಚಂಪೂಕವಿ ನಾಗಚಂದ್ರನು, ತನ್ನ `ರಾಮಚಂದ್ರ ಚರಿತ ಪುರಾಣ(ಪಂಪ ರಾಮಾಯಣ)’ದಲ್ಲಿ ವ್ಯಕ್ತಿ ಮತ್ತು ಕಾಲದ ಬಗ್ಗೆ ಒಂದು ಮಾತನ್ನು ಹೇಳಿದ್ದಾನೆ – “ಅಬ್ಧಿಯುಂ ಒರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೆ”. ಪರಮಜ್ಞಾನಿಯಾದ, ಶ್ರೇಷ್ಟನಾದ, ಸ್ವರ್ಣಲಂಕೆಯ ಅಧಿಪತಿಯಾದ ರಾವಣನು ಪರಸ್ತ್ರಿಯಾದ ಸೀತೆಯನ್ನು ಮೋಹಿಸಿದಾಗ ಅವನು ಮಾಡಿದ ಉದ್ಗಾರ ಇದು. “ಸಮುದ್ರವೂ ಸಹ ಒಮ್ಮೊಮ್ಮೆ ಕಾಲದ ಪ್ರಭಾವದಿಂದಾಗಿ ತನ್ನ ಮರ್ಯಾದೆಯನ್ನು ದಾಟುವುದಿಲ್ಲವೆ!?”. ಪರಿಸ್ಥಿತಿಯ ಪ್ರಭಾವದಿಂದ ಕಾಡಿನಲ್ಲಿ ತನ್ನ ಹೆಂಡತಿಯನ್ನು ನಳ ಮಹಾರಾಜನು ಬಿಟ್ಟು ಹೋಗುವ ಸಂದರ್ಭ ಬಂದಾಗ ಕನಕದಾಸರು ಸಹ “ಕಾಲವಾವನ ಕೀಳು ಮಾಡದು!?” ಎಂದು ಉದ್ಗರಿಸಿದ್ದಾರೆ.
ಬಹಳ ವಿವೇಕಿಯಾಗಿದ್ದ, ಶಾಂತಚಿತ್ತಳಾಗಿದ್ದ ಮತ್ತು ಸ್ತ್ರೀವಾದವನ್ನು ದಶಕಗಟ್ಟಲೆ ಅರೆದು ಕುಡಿದಿದ್ದ ನನ್ನ ಪರಿಚಿತ ಮಹಿಳೆಯೊಬ್ಬರು ತಮ್ಮ ಮಧ್ಯವಯಸ್ಸಿನಲ್ಲಿ ಒಬ್ಬ ಸಾಮಾನ್ಯ ಸ್ತ್ರೀಯೂ ಸಹ ಮಾಡದಂತಹ ಅವಿವೇಕದ ಕೆಲಸವೊಂದನ್ನು ಮಾಡಿದ್ದನ್ನು ನಾನು ನೋಡಿದ್ದೇನೆ. ಮೇಲ್ನೋಟಕ್ಕೆ ಬಹಳ ಆಕರ್ಷಕ ಹಾಗೂ ಜ್ಞಾನದಾಹಿಯಾಗಿ ಭಾಸವಾಗುತ್ತಿದ್ದ ಆದರೆ, ನಿಜದಲ್ಲಿ ಅತಿರೇಕದಂಚಿನ ಮಾನಸಿಕ ಅಸ್ವಸ್ಥತೆಯ ಕಾಯಿಲೆಯಿದ್ದಂತಹ ಒಬ್ಬ ಗಂಡಸನ್ನು ಆಕೆ ಬಹಳವಾಗಿ ಮನಸ್ಸಿಗೆ ಹಚ್ಚಿಕೊಂಡರು. ಆ ಗಂಡಸಿಗೆ `ಬಾರ್ಡರ್ಲೈನ್ ಪರ್ಸನಾಲಿಟಿ ಡಿಸ್ಆರ್ಡರ್’ ಎಂಬ ಒಂದು ತೀವ್ರ ಮಾನಸಿಕ ಕಾಯಿಲೆ ಇತ್ತು. ಈ ಕಾಯಿಲೆ ಇರುವ ವ್ಯಕ್ತಿಗಳು ಬಹಳ ಅಸ್ಥಿರವಾದ ಮನಸ್ಸನ್ನು ಹೊಂದಿರುತ್ತಾರೆ. ಈ ಅಸ್ಥಿರ ಮನಸ್ಸಿನಿಂದಾಗಿ ಅವರು ಯಾವುದೇ ಸ್ನೇಹ ಅಥವಾ ಪ್ರೇಮವನ್ನು ಉಳಿಸಿಕೊಳ್ಳಲಾರರು. ಒಂದು ದಿನ ತಮ್ಮ ಆಪ್ತವ್ಯಕ್ತಿಯನ್ನು ವಿಪರೀತ ಅಟ್ಟಕ್ಕೇರಿಸಿ, ನೀನೇ ಇಂದ್ರ, ಚಂದ್ರ, ಮಹೇಂದ್ರ ಎಂದು ಹೊಗಳಿದರೆ ಮಾರನೆಯ ದಿನ ಆ ವ್ಯಕ್ತಿಯನ್ನು ತಮ್ಮ ಶತ್ರು ಎಂದು ಭಾವಿಸಿ ವಿಪರೀತ ದ್ವೇಷಿಸುತ್ತಾರೆ, ಮತ್ತು ಅವರೊಂದಿಗೆ ಸಂಪರ್ಕವನ್ನೇ ನಿಲ್ಲಿಸುತ್ತಾರೆ!! ಇವರ ಈ ಬಿಸಿ-ತಂಪು ವರ್ತನೆಗೆ ಪಕ್ಕಾದ ಬಡಪಾಯಿ ವ್ಯಕ್ತಿಯು ತಾನೇನು ತಪ್ಪು ಮಾಡಿದೆ ಎಂದು ತಿಳಿಯದೆ ಕಕ್ಕಾಬಿಕ್ಕಿಯಾಗುತ್ತಾನೆ. ನಂತರ ಈ ಆರೋಗ್ಯಕರ ವ್ಯಕ್ತಿಯು ಆ ರೋಗಗ್ರಸ್ತನನ್ನು ತನ್ನೊಡನೆ ಮಾತು ನಿಲ್ಲಿಸಬೇಡವೆಂದು ಬೇಡಿಕೊಳ್ಳುವುದು, ಅತ್ತು ಕರೆದು ಗೋಳಾಡುವುದು ಇವೆಲ್ಲ ನಡೆಯುತ್ತದೆ. ಕೆಲವು ದಿನಗಳ ನಂತರ ಮತ್ತೆ ಈ ರೋಗಿಯು ಪ್ರಸನ್ನನಾಗಿ ಇವರೊಂದಿಗೆ ಮಾತಾಡುತ್ತಾನೆ, ಏನೂ ಆಗಿಲ್ಲ ಎಂಬಂತೆ ಇರುತ್ತಾನೆ. ಇವರು ಮತ್ತೆ ಆ ಮೋಹದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಾರೆ. ತುಸು ಕಾಲ ಸರಿಯುತ್ತಿದ್ದಂತೆ ಮತ್ತೆ ಆ ರೋಗಿಯ ಮನಸ್ಸು ಇವರನ್ನು ದೂರತಳ್ಳುವ ಹಂತಕ್ಕೆ ಬಂದು ತಲುಪುತ್ತದೆ. ಆಕಾಶ-ಪಾತಾಳದ ಧುಮುಕಾಟಕ್ಕೆ ಪಕ್ಕಾದ ಈ ಆಪ್ತವ್ಯಕ್ತಿಯ ಅಳು, ಗೋಳಾಟ ಮತ್ತೆ ಶುರುವಾಗುತ್ತದೆ. ಅಗೊ, ಇನ್ನೊಮ್ಮೆ ಈ ವಿಷಚಕ್ರ ಮುಂದುವರಿಯುತ್ತದೆ!!
ಹೀಗೆ ಮನಸ್ಸು ತನಗೆ ಹಿಂಸೆ ಕೊಡುವವರಿಗೆ ಅಂಟಿಕೊಂಡು ಒದ್ದಾಡುವುದನ್ನು ಮನಃಶಾಸ್ತ್ರಜ್ಞರು ಯಾತನಾಬಂಧ ಅನ್ನುತ್ತಾರಂತೆ. ನಾನು ಪ್ರಸ್ತಾಪಿಸಿದ ಸ್ತ್ರೀವಾದಿ ಮಹಿಳೆಗೆ ಉಂಟಾಗಿದ್ದು ಇದೇ ಯಾತನಾಬಂಧ. ತುಂಬ ಓದಿದ್ದ, ಜೀವನದ ಬಗ್ಗೆ ಅಪಾರ ತಿಳುವಳಿಕೆಯುಳ್ಳಂತೆ ಭಾಸವಾಗುವ ಜನ ಕೂಡ ಹೀಗೆ ಇಂತಹ ನರಕಗಳಿಗೆ ತಮ್ಮನ್ನು ತಾವು ಬೀಳಿಸಿಕೊಳ್ಳುತ್ತಾರಲ್ಲ! ಇಲ್ಲಿನ ವಿಲಕ್ಷಣ ಸಂಗತಿ ಅಂದರೆ ತಾವು ಮಾಡುತ್ತಿರುವುದು ಅತ್ಯಂತ ಮೂರ್ಖ ಕೆಲಸ ಎಂದು ಅವರ ಬುದ್ಧಿಗೆ ಗೊತ್ತಿರುತ್ತದೆ, ಆದರೆ ಅವರ ಮನಸ್ಸು ಮಾತ್ರ ವಿನಾಶದ ಕಂದರಕ್ಕೆ ಮತ್ತೆ ಮತ್ತೆ ಹೋಗಿ ಜಿಗಿಯುತ್ತಿರುತ್ತದೆ. ಹೀಗೆ, ಒಬ್ಬ ವಿವಾಹಿತನಾಗಿದ್ದ ಆದರೆ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಗಂಡಸೊಬ್ಬನನ್ನು `ಆತ್ಮಸ್ನೇಹಿತ’ ಎಂದು ಮನಸ್ಸಿಗೆ ಹಚ್ಚಿಕೊಂಡು ಈ ಮಹಿಳೆಯು ವರ್ಷಾನುಗಟ್ಟಲೆ ಒದ್ದಾಡಿದ್ದನ್ನು ನಾನು ನೋಡಿದ್ದೇನೆ. ಅಚ್ಚರಿಯೆಂದರೆ ಯಾವುದೇ ಹೆಣ್ಣು ಯಾವ ಕಾರಣಕ್ಕೂ ವಿವಾಹಿತ ಗಂಡಸನ್ನು ಮನಸ್ಸಿಗೆ ಹಚ್ಚಿಕೊಳ್ಳಬಾರದು ಎಂದು ದೃಢವಾಗಿ ನಂಬಿದ್ದ ಮಹಿಳೆ ಅವರು! ಅವರ ಹೊಸಜನ್ಮ ಇದು ಅನ್ನಬೇಕೆ? ತಾವೇ ತಮಗಾಗಿ ನಿರ್ಮಿಸಿಕೊಂಡ ನರಕ ಇದು ಅನ್ನಬೇಕೆ?
*****
ತೀರ್ಮಾನ ರೂಪದಲ್ಲಿ ಹೀಗೆ ಹೇಳಬಹುದೇನೋ. ವ್ಯಕ್ತಿಯ ಒಳಗು ಹಾಗೂ ಬದುಕಿನ ಯಾವುದೋ ಒಂದು ತಿರುವು ಎರಡೂ ಒಂದು ಹದದಲ್ಲಿ ಬೆರೆತಾಗ ಇಂತಹ ಹೊಸಜನ್ಮದ ಘಟಿತ ಸಂಭವಿಸುತ್ತದೆ ಅನ್ನಿಸುತ್ತೆ. ಕೆಲವು ಸಲ ಬದುಕು ಎಂತಹ ತಪರಾಕಿ ಕೊಡುತ್ತದೆ ಎಂದರೆ ನಮ್ಮೆಲ್ಲ ಆವರೆಗಿನ ವಿಶ್ವಾಸ, ನಂಬಿಕೆ ಅಲ್ಲಾಡಿ ಹೋಗಿ ನಡುನೀರಿನಲ್ಲಿ ನಿಂತುಬಿಡುತ್ತೇವೆ. ಈಗ ಬದಲಾಗದಿದ್ದರೆ, ಅಪರಿಚಿತ ದಾರಿಯನ್ನು ತುಳಿಯದೆ ಇದ್ದರೆ, ಹೊಸದಾಗದಿದ್ದರೆ ಉಳಿಗಾಲವೇ ಇಲ್ಲ ಅನ್ನಿಸುತ್ತದೆ. ಆಗ ಮನುಷ್ಯ ಬದಲಾಗುತ್ತಾನೆ, ಎಷ್ಟು ಬದಲಾಗುತ್ತಾನೆ ಎಂದರೆ ತನ್ನ ಪರಿಚಿತರ ಮಾತು ಹಾಗಿರಲಿ, ತನಗೆ ತಾನೇ ಗುರುತು ಸಿಗದಷ್ಟು! ಇದನ್ನೇ ನಾವು ಬದುಕಿದ್ದಾಗಲೇ ಹೊಸ ಜನ್ಮ ಎತ್ತುವುದು ಅನ್ನಬಹುದೇನೊ.

ಈ ಬದುಕು ಯಾವಾಗಲೂ ನಮಗಿಂತ ಒಂದು ಹೆಚ್ಚಿನ ಮಟ್ಟದ ಪ್ರಬುದ್ಧತೆ ಹೊಂದಿರುತ್ತದಂತೆ. ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಆಸೆ ನಮಗಿದ್ದರೆ, ಸಮಸ್ಯೆಯು ನಮ್ಮ ಬದುಕಿಗೆ ಭೇಟಿ ಕೊಟ್ಟಾಗ ನಾವು ಯಾವ ಪ್ರಬುದ್ಧತೆ ಹೊಂದಿದ್ದೆವೊ, ಪರಿಹಾರ ಸಿಗಬೇಕು ಎಂದು ನಾವು ಆಸೆ ಪಟ್ಟರೆ ಅದಕ್ಕಿಂತ ಹೆಚ್ಚಿನ ಪ್ರಬುದ್ಧತೆಯನ್ನು ನಾವು ಹೊಂದಬೇಕಂತೆ.
ಈ ಪ್ರಬುದ್ಧತೆಯೇ ಹೊಸ ಜನ್ಮವೆ?

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

